ಅಪ್ಪನ ಹೆಗಲ ಮೇಲೆ ಸವಾರಿ

 ನಮ್ಮದು ಸಣ್ಣಕುಟುಂಬ. ಅಪ್ಪ, ಅವ್ವ, ಅಕ್ಕ ಮತ್ತು ನಾನು. ಒಂದು ಬೆಕ್ಕು, ಎರಡು ನಾಯಿ, ಏಳೆಂಟು ದನಗಳು, ನಾಲ್ಕಾರು ಕೋಳಿಗಳು. ಯಾವತ್ತೊ ಒಮ್ಮೊಮ್ಮೆ ಸಾಕುತ್ತಿದ್ದ ಒಂದೆರಡು ಹಂದಿಗಳು. ನಮ್ಮ ಮನೆ ಇದ್ದುದು ವೀರಾಜಪೇಟೆಯ ಕಾಟಿಬೆಟ್ಟ ಎಂಬಲ್ಲಿ. ಕಾಟಿ ಎಂದರೆ ಕಾಡುಕೋಣ. ಕಾಟಿಗಳು ಮೇಯುತ್ತಿದ್ದ ಅರಣ್ಯದ ನಡುವೆ ನಮ್ಮದೊಂದು ಮನೆ! ಉಳಿದ ಕುಟುಂಬಗಳು ಇಲ್ಲವೆಂದಲ್ಲ, ಇದ್ದವು. ದೂರದಲ್ಲಿ-ನಾಯಿ ಬೊಗಳಿದರೆ, ಕೋಳಿ ಕೂಗಿದರೆ ಓ! ಅಲ್ಲೆಲ್ಲೊ ಮನೆಗಳಿವೆ ಎನ್ನುವಷ್ಟು ದೂರದಲ್ಲಿ! ಮನೆಗೆ ಯಾರಾದರೂ ಬಂದರಂತೂ ಬೆಲ್ಲದ ‘ಕರಿ ಕಾಫಿ’ಯ ಸತ್ಕಾರ. ಎಲೆ ಅಡಿಕೆಯ ಆತಿಥ್ಯ. ಕಾಡಿನ ಮನೆಗೆ ಬರುತ್ತಿದ್ದವರೇ ವಿರಳ. ಬಂದು ಹೊರಡುವಾಗ ಆತ್ಮೀಯ ಬೀಳ್ಕೊಡುಗೆ. ‘ಮತ್ತೆಯಾವಾಗ’ ಎನ್ನುವ ಪ್ರಶ್ನೆಯೊಂದಿಗೆ. ಕೋಟೆಯಂತೆ ಸುತ್ತುವರಿದ ಮುಳ್ಳು ಬಿದಿರ ಮೆಳೆ. ಆ ಮೆಳೆಯಿಂದ ಹೊರಡುವ ನೂರೆಂಟು ಬಗೆಯ ನಾದ! ಕ್ಷಣ ಕ್ಷಣಕ್ಕೂ ನಾದದ ಬದಲಾವಣೆ-ಬೀಸುವ ಗಾಳಿಗೆ ತಕ್ಕಂತೆ! ಕಾಡು ಪ್ರಾಣಿಗಳ ಕೂಗು ಮೈನವಿರೇಳಿಸುತ್ತಿತ್ತು.

ಮೈನವಿರೇಳಿಸುತ್ತಿತ್ತು ಎಂದರೆ ಅಂದಿನ ಕಾಲಕ್ಕೆ ಸರಿಯಲ್ಲ. ಅವು ನಮ್ಮನ್ನು ಜಾಗ್ರತಾವಸ್ಥೆಯಲ್ಲಿಟ್ಟಿದ್ದವು ಎನ್ನುವುದೇ ಸರಿ. ಯಾಕೆಂದರೆ ಅಂದಿನ ಬದುಕು ಹಾಗಿತ್ತು. ಹೊಟ್ಟೆ ತುಂಬಿದವರಿಗೆ ಆ ಕೂಗು ರೋಮಾಂಚಕಾರಿ. ಆದರೆ ಹಸಿದವನಿಗೆ? ಅರೆ! ಕ್ರೂರ ಪ್ರಾಣಿಗಳ ಆ ಕಾಡಿನಲ್ಲಿ ಮನೆ ಮಾಡಿದ್ದಾದರೂ ಯಾಕೆ? ಇಷ್ಟಗಲದ ನೆಲ ಇದ್ದುದೇ ಅಲ್ಲಿ. ನಮ್ಮ ಅಪ್ಪ ಶೂರ! ಅವ್ವ ಅಪ್ಪನಿಗಿಂತಲೂ ಒಂದು ಕೈ ಮೇಲು! ಅತ್ತ ತಿತಿಮತಿ ಎಂಬ ಪಟ್ಟಣಕ್ಕೆ ಆರೇಳು ಮೈಲಿ ದೂರ. ಇತ್ತ ಬಾಳೆಲೆ ಎಂಬ ಪಟ್ಟಣಕ್ಕೆ ಅಷ್ಟೇ ದೂರ. ಅಂದು ‘ಕಾಡಿನ ದ್ವೀಪ’ದಲ್ಲಿ ಬದುಕಿದ ಆ ದಿನಗಳು ಇಂದು ಕಾಡುತ್ತವೆ. ಕಾಡಿನ ರೋಚಕ ಅನುಭವ ಅಲೆಯಂತೆ ಬಂದು ಮುಟ್ಟುತ್ತವೆ. ನೆನಪಿನ ಕೆನ್ನೆಗೆ ಮುತ್ತಿಕ್ಕುತ್ತವೆ.

ಅಪ್ಪ ಶೂರ ಅಂದೆನಲ್ಲ? ಹೌದು ಶೂರತನ ಇದ್ದುದಕ್ಕೆ ಅಲ್ಲವೆ ಮುಳ್ಳು ಪೊದೆ ಕಡಿದು, ಮುಳ್ಳು ಬಿದಿರ ಸವರಿ ಬಯಲು ಮಾಡಿ ಕಾಡಿನ ಕೋಟೆಯೊಳಗೆ ಮನೆ ಮಾಡಿದ್ದು. ಕತ್ತಿ, ಕೊಡಲಿ, ಗುದ್ದಲಿ, ಹಾರೆ ಆಯಿತು. ಇದ್ದುದು ಅಷ್ಟೆ ಸಾಧನಗಳು. ಕೋವಿಯಲ್ಲ! ಆನೆ ಬಂದರೆ? ಕೂಗು ಹಾಕಿ ಆರ್ಭಟಿಸುವುದು. ಕಾಡಾನೆಗಳಿಗೆ ಈ ಆರ್ಭಟ ಯಾವ ಲೆಕ್ಕ? ಅದಕ್ಕೆ ಅಪ್ಪ ಮಾಡಿದ ಉಪಾಯ ಬಿದಿರು ಪಟ್ಟೆಯ ಬಿಲ್ಲು ಕಲ್ಲಿನ ಹೊಡೆತ. ಆನೆಗಳಿಗೆ ಕಣ್ಣಿನ ಬಗ್ಗೆ ಜಾಗೃತೆಯಂತೆ. ಎಲ್ಲಾದರೂ ಬಿಲ್ಲುಕಲ್ಲು ಕಣ್ಣಿಗೆ ಬಡಿದುಗಿಡಿದರೆ ಎಂದು ಭಯಗೊಂಡು ಹಿಂದಿರುಗುತ್ತವೆ. ರಾತ್ರಿ ಆನೆಗಳು ಬಂದರೆ ಇನ್ನೊಂದು ಉಪಾಯವಿದೆ. ಒಂದೋ ಬಿದಿರಿನ ಸೂಟೆಯನ್ನು ಉರಿಸಿ ಮೇಲೆ ಎತ್ತಿ ಹಿಡಿದು ಬೊಬ್ಬೆ ಹಾಕುವುದು. ಬಿದಿರಿನ ಸೋಟೆ ಅಂದರೆ ಒಣ ಬಿದಿರನ್ನು ಸಿಗಿದು ಒಬ್ಬ ಎತ್ತಿ ಹಿಡಿಯುವಷ್ಟು ದಪ್ಪದ ಹೊರೆ ಕಟ್ಟುವುದು. ಆನೆಗಳು ಬರುತ್ತಿರುವ ಸೂಚನೆ ಗೊತ್ತಾದೊಡನೆ ಈ ಸೂಟೆಗೆ ಬೆಂಕಿ ಹಿಡಿಸುವುದು. ಆನೆ ಬರುವ ದಿಕ್ಕಿನ ಕಡೆಗೆ ಅಷ್ಟೆತ್ತರದಲ್ಲಿ ಕಾಣುವಂತೆ ಎತ್ತಿ ಹಿಡಿಯುವುದು. ಬೆಂಕಿ ಕಂಡೊಡನೆ ಆನೆಗಳು ಓಡುತ್ತವೆ. ಒಂದು ವೇಳೆ ಸೂಟೆ ಅಂದು ಇಲ್ಲದೇ ಇದ್ದರೆ ಬೆಂಕಿಕೊಳ್ಳಿಯನ್ನು ಆನೆಯತ್ತ ಎಸೆಯುವುದು. ಆನೆ ಒಂದು ಹೆಜ್ಜೆಯನ್ನು ಇತ್ತ ಇಡುವುದಿಲ್ಲ ಎನ್ನುವ ಉಪಾಯ ಅಪ್ಪನಿಗೆ ಗೊತ್ತಿತ್ತು.

ಅಪ್ಪನಿಗೆ ಕೋಪ ಹೆಚ್ಚು. ಒಂದೇ ಸಾರಿ ಹೇಳುವುದು. ಕೇಳಿಸಿಕೊಳ್ಳಬೇಕು. ಕೇಳಿಸಿಕೊಳ್ಳದೆಯೋ ಅಥವಾ ಸರಿಯಾಗಿ ಅರ್ಥವಾಗದೆಯೋ ಮತ್ತೊಮ್ಮೆ ಕೇಳಿದರಂತೂ ‘ಏನು ನಿನ್ ಕಿವಿ ಕಿವುಡಾಗಿದೆಯಾ’ ಎಂದೋ ಅಥವಾ ಇನ್ನೇನೋ ಬಯ್ಗಳ ತಪ್ಪಿದ್ದಲ್ಲ. ನಾವಂತೂ ಹೆದರಿ ಹೆದರಿ ಹೇಳುವ ಉತ್ತರವೋ ನಮಗೇ ಕೇಳುತ್ತಿರಲಿಲ್ಲ. ಇನ್ನು ಅಪ್ಪನಿಗೆ ಹೇಗೆ ಕೇಳಬೇಕು? ಆಗಂತೂ ‘ನಿಮ್ಮ ನಾಲಗೆಗೆ ಏನಾಗಿದೆ’ ಎಂದು ದಪ್ಪ ಧ್ವನಿ ಮಾಡಿದರಂತೂ ನಮ್ಮ ಬಾಯಿಂದ ಸುತಾರಾಂ ಮಾತೇ ಹೊರಡದಂತೆ ಮಾಡಿಬಿಡುತ್ತಿತ್ತು. ಹೆದರಿದ ನಾವು ಅಳುತ್ತಾ ಉತ್ತರ ಒಪ್ಪಿಸುತ್ತಿದ್ದೆವು. ಅಪ್ಪ ಎಲ್ಲಾದರೂ ಹೊರ ಹೋಗಿ ಬರುವಾಗ ಕೈಯಲ್ಲಿರುವ ಚೀಲವನ್ನೋ ಮತ್ತೊಂದನ್ನೋ ಕೂಡಲೆ ಕೇಳಿ ತಕ್ಕೊಂಡರೆ ಸರಿ, ಒಂದು ವೇಳೆ ತೆಗೆದುಕೊಳ್ಳದಿದ್ದರೆ…. ಕಾಡಿನ ಕೋಟೆ ಮನೆಯಲ್ಲಿ ಲಟಾಪಟಿ. ಒಂದು ವೇಳೆ ಅಪ್ಪ ಮನೆಗೆ ಬಂದುದು ನಮಗೆ ಗೊತ್ತಾಗಲಿಲ್ಲವೆಂದಿಟ್ಟುಕೊಳ್ಳಿ, ಒಮ್ಮೆ ಕ್ಯಾಕರಿಸಿ ಉಗುಳಿ, ಕೈಯಲ್ಲಿದ್ದ ದೊಣ್ಣೆಯನ್ನು ಜಗಲಿ ಮೇಲೆ ಉರುಳಿಸುತ್ತಿದ್ದ. ದೊಣ್ಣೆ ಉರುಳುವ ಸದ್ದು ನಮಗೆ ಎಚ್ಚರಿಕೆ ಮತ್ತು ಅವ್ವನಿಗೆ ಬಯ್ಗಳದ ಸುರಿಮಳೆಯ ಸಂಕೇತ.

ಅಪ್ಪನ ಬದುಕಿನಲ್ಲಿ ಅವ್ವ ಹೇಗೆ ಹೆಗಲಿಗೆ ಹೆಗಲು ಕೊಟ್ಟಳೊ? ಅಂಥಾ ಕಡುಕೋಪದ ಅಪ್ಪನ ಹೆಗಲ ಮೇಲೆ ಕೂರುವುದುಂಟೆ? ನಾನು ಕೂತಿದ್ದೇನೆ. ನಾನು ಕೂತಿದ್ದೇನೆ ಎನ್ನುವುದಕ್ಕಿಂತ ಅಪ್ಪ ನನ್ನನ್ನು ಅದೆಷ್ಟೋ ಬಾರಿ ಪ್ರೀತಿಯಿಂದ ಹೆಗಲ ಮೇಲೆ ಕೂರಿಸಿಕೊಂಡು ತಿತಿಮತಿ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾನು ಅಪ್ಪನ ಹೆಗಲೇರಿ ಎದೆಯ ಮೇಲೆ ಕಾಲನ್ನು ಇಳಿಬಿಟ್ಟು ಹಣೆಯನ್ನೂ ಮರವನ್ನು ತಬ್ಬಿದಂತೆ ತಬ್ಬಿ ಕುಳಿತಿದ್ದೇನೆ. ಅಪ್ಪನ ಹೆಗಲೇರಿದ ಮೇಲೆ ಅಪ್ಪನಿಗಿಂತಲೂ ಮೊದಲು ಕಂಡು ‘ನೋಡಲ್ಲಿ ಹಂದಿ, ನೋಡಲ್ಲಿ ಕೋಳಿ’ ಎಂದು ತೋರಿಸುತ್ತಿದ್ದೆ. ‘ನಿನಗಿಂತಲೂ ಮೊದಲು ನಾನೇ ಕಂಡೆ’ ಎಂದು ಹೆಮ್ಮೆ ಪಡುತ್ತಿದ್ದೆ. ಕಾಡಿನ ದಾರಿಯಲ್ಲಿ ಹೀಗೆ ಅಪ್ಪ ನನ್ನನ್ನು ಹೊತ್ತುಕೊಂಡರೂ ಸುಸ್ತಾಯಿತೆಂದು ದಾರಿಯಲ್ಲಿ ಇಳಿಸಿದ್ದಿಲ್ಲ. ಆದರೆ ನನಗೇ ಆಯಾಸವಾದಂತಾಗುತ್ತಿತ್ತು. ಮರ ತಬ್ಬಿದಂತೆ ಅಪ್ಪನ ಹಣೆಯನ್ನು ತಬ್ಬಿದ್ದರಿಂದ ಅಪ್ಪನ ಹಣೆ ಬೆವರುತ್ತಿತ್ತು. ಹಾಗಾಗಿ ನನ್ನ ಕೈ ಜಾರುತ್ತಿತ್ತು. ಜಾರಿ ಅಪ್ಪನ ಕಣ್ಣಿಗೆ ನನ್ನ ಕೈ ಅಡ್ಡವಾಗುತ್ತಿತ್ತು. ದಾರಿ ಕಾಣಾದಾದಾಗ ‘ಕೈ ಸ್ವಲ್ಪ ಮೇಲೆ ಮಾಡು’ ಎನ್ನುತ್ತಿತ್ತೆ ಹೊರತು ಬಯ್ಯುತ್ತಿರಲಿಲ್ಲ. ಆದರೆ ಕೆಲವೊಮ್ಮೆ ಅಪ್ಪನ ಹೆಗಲಿಂದ ಇಳಿದು ಓಡಿಬಿಡಬೇಕೆಂದು ಅನಿಸಿದ್ದು ಉಂಟು. ಮಗ್ಗಿ ಹೇಳು ಎಂದಾಗಲೋ, ಲೆಕ್ಕ ಹೇಳುವಾಗಲೋ ನಾನಂತೂ ಚಡಪಡಿಸಿ ಕಂಗಾಲಾಗುತ್ತಿದ್ದೆ.

ನನ್ನ ‘ಸವಾರಿ’, ಅಪ್ಪನ ನಡಿಗೆ, ಕಾಡು ದಾರಿಯಲ್ಲಿ ಸಾಗುತ್ತಿತ್ತು. ಮುಂದೆ ಮುಂದೆ ಹೋದಂತೆ ತೇಗದ ತೋಪು ಸಿಗುತ್ತಿತ್ತು. ಅಲ್ಲಿ ಅರಣ್ಯ ಇಲಾಖೆಯವರು ಸಾಲಾಗಿ ನೆಟ್ಟು ಬೆಳೆಸಿದ ತೇಗದ ಮರಗಳನ್ನು ಕಂಡೊಡನೆ ಅಪ್ಪನ ಲೆಕ್ಕ ಶುರುವಾಗುತ್ತಿತ್ತು. ಒಂದು ಸಾಲಿನಲ್ಲಿ ಇಷ್ಟು ಮರಗಳಿಗೆ ಅಂತ ಸಾಲುಗಳು ಇಷ್ಟಿವೆ. ಹಾಗಾದರೆ ಒಟ್ಟು ಮರಗಳೆಷ್ಟು? ಈ ಲೆಕ್ಕ ನನ್ನ ತಲೆಗಿಂತ ಮೇಲೆ ಹಾರಿಹೋಗುತ್ತಿದ್ದವು. ನಾನು ಏನೋ ಗುನುಗುತ್ತಿದ್ದೆ. ನನ್ನ ಬಾಯಿಗಿಂತಲೂ ಕೆಳಗಿದ್ದ ಅಪ್ಪನ ಕಿವಿಗೆ ಏನೆಂದು ಕೇಳುತಿತ್ತೊ… ಹೀಗೆ ಹಲವಾರು ಬಾರಿ ಅಪ್ಪನ ಹೆಗಲೇರಿದ ನಾನು ಕೆಳಗಿಳಿದ ಕೂಡಲೆ ನಡೆಯಲಾಗುತ್ತಿರಲಿಲ್ಲ. ಕಾಲು ಇಳಿಬಿಟ್ಟು ಕುಳಿತುದರಿಂದ ನನ್ನ ಎರಡೂ ಕಾಲುಗಳಿಗೆ ಸರಿಯಾಗಿ ರಕ್ತ ಸಂಚಾರವಾಗದೆ ಜುಂಗುಟ್ಟುತ್ತಿತ್ತು. ತಿತಿಮತಿಯಲ್ಲಿ ನನ್ನನ್ನು ಇಳಿಸಿದ ನಂತರ ನಮ್ಮ ಹೆಜ್ಜೆ ಹೋಟೆಲ್‌ನತ್ತ ಸಾಗುತ್ತಿತ್ತು. ತಿಂದುಂಡು ಮಜಾ ಮಾಡಲಲ್ಲ. ನೀರು ಕುಡಿದು ಸುಧಾರಿಸಿಕೊಳ್ಳಲು! ಅಪ್ಪ ಕುದುರೆ, ನಾನು ಸವಾರ. ಬಾಯಾರಿಕೆ ಆದುದು ಕುದುರೆಗೆ!

ಅಪ್ಪನಿಗೆ ಆಸೆ ಇತ್ತು. ಆದರೆ ಕೈಗೆಟುಕುತ್ತಿರಲಿಲ್ಲ. ರೋಷ ಇತ್ತು. ಅದರೊಳಗೆ ಪ್ರೀತಿ ಅಡಗಿತ್ತು. ಹೋಟೆಲ್ ಎಂದೆನಲ್ಲ -ನೀರು ಕುಡಿದ ದಿನವೂ ಇತ್ತು. ಬೊಳ್ಳ ಚಾಯ ಕುಡಿದ ದಿನವೂ ಇತ್ತು. ಬೊಳ್ಳ ಎಂದರೆ ನೀರು. ಚಾಯ ಎಂದರೆ ಚಹ ಎಂದರ್ಥ. ಅಂದರೆ ‘ನೀರಿಗೆ ಹಾಲು’ ಹಾಕಿ ಸಕ್ಕರೆ ಬೆರೆಸಿದ ಬಿಳಿ ಬಣ್ಣದ ಬಿಸಿ ಪಾನೀಯ ! ಒಂದು ಚಿಟಿಕೆಯಷ್ಟು ಚಹ ಪುಡಿ ಹಾಕಿರುವುದಿಲ್ಲ. ಆದರೂ ಬಿಳಿ ನೀರಿಗೆ ಚಹ ಎಂಬ ನಾಮಕರಣ! ಅಪ್ಪ ಕುಡಿಯುತ್ತಿದ್ದುದೂ ಅದನ್ನೆ, ನನಗೆ ಕುಡಿಸುತ್ತಿದ್ದುದೂ ಅದನ್ನೇ. ಅದರ ಬೆಲೆ ಅಂದು ಹತ್ತು ಪೈಸೆ! ಹೀಗೆ ಅಪ್ಪ ಮಗನ ಸವಾರಿ ಗೋಣಿಕೊಪ್ಪದ ಸಂತೆಗೂ ಹೋಗಿದೆ.

ಅಪ್ಪನ ಜಾಣತನ ನನಗೆ ಗೊತ್ತಾದುದು ಸಂತೆಯಲ್ಲಿ! ಹೇಗಂತಿರಾ? ಅರ್ಧ ಕೆ.ಜಿ. ಬೆಲ್ಲ ಬೇಕಾದರೆ ಐದಾರು ಅಂಗಡಿಗೆ ಹೋಗಿ ಅದರ ಬೆಲೆ ಕೇಳುವುದು. ಐದು ಪೈಸೆ ಕಡಿಮೆ ಬೆಲೆ ಹೇಳಿದ ಅಂಗಡಿಯಿಂದ ಬೆಲ್ಲ ತೆಗೆದುಕೊಳ್ಳುವುದು. ಒಣ ಮೀನಿನ ವ್ಯಾಪಾರದಲ್ಲಿ ಹಾಗೆ. ನಾಲ್ಕಾರು ಅಂಗಡಿ ಸುತ್ತಿ ಕಡಿಮೆ ಎಲ್ಲಿದೆ ಅಲ್ಲಿ ಮೀನು ತೆಗೆದುಕೊಳ್ಳುವುದು. ಹೊಗೆಸೊಪ್ಪು, ನಶ್ಯ ಹೀಗೆ… ಯಾವುದನ್ನೇ ತೆಗೆದುಕೊಳ್ಳಬೇಕಾದರೂ ಒಂದೇ ಅಂಗಡಿಯಲ್ಲಿ ಒಂದೇ ಮಾತಿಗೆ ವ್ಯಾಪಾರ ಮಾಡುತ್ತಲೇ ಇರಲಿಲ್ಲ. ಕಡಿಮೆ ಬೆಲೆಗೆ ಎಲ್ಲಿ ವಸ್ತು ಸಿಗುತ್ತದೋ ಅಲ್ಲಿ ಕೊಂಡುಕೊಳ್ಳುವುದು. ಹೀಗಾಗಿ ಹತ್ತೋ ಇಪ್ಪತ್ತೋ ಪೈಸೆ ಉಳಿಯುತ್ತಿತ್ತು. ಹೀಗೆ ಉಳಿಸಿದ ಹತ್ತಿಪ್ಪತ್ತು ಪೈಸೆ ಜೇಬಿನಲ್ಲಿರುತ್ತಿತ್ತು. ಇನ್ನೊಮ್ಮೆಗೆ ಆ ದುಡ್ಡು, ಬಳಕೆಯಾಗುತ್ತಿತ್ತು. ಅಂದು ಪೈಸೆಗೂ ಬೆಲೆ ಇದ್ದ ಕಾಲ. ನಲವತ್ತು ವರ್ಷಗಳ ಹಿಂದಿನ ಮಾತು!

ನಂತರ ನಮ್ಮ ಸವಾರಿ ಗೋಣಿಕೊಪ್ಪದ ‘ಚಡಖಾನ್’ ಬಟ್ಟೆ ಅಂಗಡಿಯತ್ತ… ನಾನಂತೂ ಕುಣಿದಾಡಿದೆ. ಹೊಸಾ ಬಟ್ಟೆ! ಅಪ್ಪ ಅಂಗಡಿಗೆ ನುಗ್ಗಿದೊಡನೆ ಅತ್ಯಂತ ಹೆಚ್ಚು ಬೆಲೆಯ ಬಟ್ಟೆಯನ್ನು ಎಳೆದು ನೋಡಿ ನನಗೆ ತೋರಿಸುತ್ತಿತ್ತು. ನಂತರ ಮತ್ತೊಂದು ಬೆಲೆಯ ಬಟ್ಟೆ. ಹೀಗೆ ಹಲವಾರು ಬಗೆಯ ಬಟ್ಟೆಯನ್ನೆಲ್ಲಾ ನೋಡಿ ನೋಡಿ ನನಗೆ ಇದರಲ್ಲಿ ಯಾವುದು ಎಂದು ಆಯ್ಕೆ ಮಾಡುವಲ್ಲಿ ವಿಫಲನಾಗುತ್ತಿದ್ದೆ. ಆದರೆ ಕೊನೆಗೆ? ಅತ್ಯಂತ ಕಡಿಮೆ ಬೆಲೆಯ ಖೋರಾ (ಕೋರಾ) ಬಟ್ಟೆ ನನಗೆ ದಕ್ಕುತ್ತಿತ್ತು. ಹೀಗೇಕೆ ಮಾಡಿದೆ ಎಂದು ಅಪ್ಪನನ್ನು ಕೇಳುವ, ಅದು ನನಗೆ ಬೇಡ ಎಂದು ತಿರಸ್ಕರಿಸುವ ಧೈರ್ಯ ನನಗೆಲ್ಲಿಂದ ಬರಬೇಕು? ಇನ್ನು ನಮ್ಮ ಸವಾರಿ ಮಿಠಾಯಿ ಅಂಗಡಿಯತ್ತ. ಬಾಂಬೆ ಮಿಠಾಯಿ ಅಂಗಡಿ ಅಂದು ಬಹು ಹೆಸರುವಾಸಿ. ಅಂಗಡಿ ಮುಂದೆ ನಿಂತರೆ ಪರಿಮಳವೋ ಪರಿಮಳ. ಬಾಯಿ ನೀರು ಕುಡಿದುಕೊಂಡೆ. ಆ ಸಿಹಿ ತಿಂಡಿಗೆ ಜೇನು ನೊಣಗಳು ಮುಗಿಬೀಳುತ್ತಿದ್ದವು. ಅವುಗಳೇ ಎಷ್ಟೋ ವಾಸಿ. ಜಿಲೇಬಿ, ಜಹಂಗೀರು, ಬೂಂದಿ….. ಯಾವುದೆಂದರೆ ಯಾವು ಯಾವುವೋ… ಜೇನುನೊಣಗಳಿಗೆ ಸ್ವಾತಂತ್ರ್ಯ! ಅಪ್ಪ ಆ ತಿಂಡಿಗಳ ಬೆಲೆ ಕೇಳಿ ನಂತರ ‘ಅದೆಲ್ಲಾ ನಾವು ತಿನ್ನುವಂಥದ್ದಲ್ಲಾ ಮಗನೆ’ ಎನ್ನುತ್ತಾ ಬೇರೊಂದು ಅಂಗಡಿಯಲ್ಲಿ ಗೋಲಿ ಮಿಠಾಯಿ ಕೊಡಿಸಿ ನನ್ನ ದುಃಖದ ನನ್ನ ಆಸೆಯ ಮನಸ್ಸಿಗೆ ಸಮಾಧಾನ ಹೇಳಿದ ಅಪ್ಪನ ಮನದ ನೋವು ಅಂದು ನನಗಂತೂ ಅರ್ಥವಾಗಿರಲಿಲ್ಲ.

ಇನ್ನೊಮ್ಮೆ ಸೋಡಾ ಫ್ಯಾಕ್ಟರಿಗೆ ಹೋದೆವು. ಬಣ್ಣ ಬಣ್ಣದ ಸೋಡಾ ಅಲ್ಲಿ ತಯಾರಾಗುತ್ತಿತ್ತು. ನಾನು ಪಿಳಿ ಪಿಳಿ ನೋಡುತ್ತಾ ನಿಂತೆ. ಕಿತ್ತಲೆ ಬಣ್ಣದ ಸೋಡಾ ನನ್ನ ಮನಸ್ಸನ್ನು ಸೆಳೆಯಿತು. ಸ್ವಲ್ಪ ಹೊತ್ತಿನ ಬಳಿಕ ಅಪ್ಪ ಆ ಬಾಟಲಿಗಳಲ್ಲಿರುವ ಸೋಡಾದ ಬಗ್ಗೆ ವಿವರ ನೀಡಿತು. ಅವರಿವರು ಬಂದು ಸೋಡಾ ಕುಡಿದು ಹೋಗುತ್ತಿದ್ದರು. ನನಗೆ ಆ ಬಾಟಲಿಯ ಅಂದ ಚೆಂದ ಸಂತಸ ನೀಡಿತು. ಟಶ್ಶೂ… ಟಶ್ಶೂ… ಸೋಡಾ ಬಾಟಲಿಯನ್ನು ತೆರೆಯುವಾಗಿನ ಸದ್ದು. ಆಗ ಬಾಟಲಿಯೊಳಗಿನ ಗೋಲಿ ಸೋಡಾದ ಒಳಗೆ ಮುಳುಗಿ ಮೇಲೆದ್ದು ಬಾಟಲಿಯ ಕುತ್ತಿಗೆಗೆ ಬರುತ್ತಿತ್ತು. ಆಹಾ! ನನಗೆ ಆ ಗೋಲಿ ಬೇಕಿತ್ತು! ಸಿಗುವುದೆಂತು? ಅದಿರಲಿ, ಅಪ್ಪ ‘ಖಾಲಿ ಸೋಡಾ’ ಬಾಟಲಿ ಕೊಡುವಂತೆ ಹೇಳಿತು. ಅಂಗಡಿ ಹುಡುಗ ಬಾಟಲಿ ಮೇಲೆ ಮರದ ಸಾಧನವೊಂದನ್ನು ಇಟ್ಟು ಬಲವಾಗಿ ಅದುಮಿದ. ಟಶ್ಶೂ… ಗೋಲಿ ನೊರೆಯೊಳಗೆ ಕೆಳಗಿಳಿಯಿತು. ಹೊಗೆ ಹೊರಗೆ ದಾಟಿತು. ‘ಕುಡೀಮನೆ(ಮಗನೆ)’ ಅಂತ ಹೇಳಿ ಬಾಟಲಿ ನನ್ನ ಕೈಗಿಟ್ಟಿತು. ನಾನು ಬಾಟಲಿಯನ್ನು ಬಾಯಿಗಿಟ್ಟೆ. ಸೋಡಾ ಬಾಯಿಗೆ ಇಳಿಯಲಿಲ್ಲ! ಅರೆ! ಇದೇಕೆ ಹೀಗೆ? ಓ! ಬಾಟಲಿಯನ್ನು ತಿರುಗಿಸಿ ಬಾಯಗಿಡಬೇಕು ಆಗ ಗೋಲಿ ಸೋಡಾಕೆ ದಾರಿ ಮಾಡುತ್ತದೆ. ಸರಿ, ಹಾಗೆ ಮಾಡಿ ಬಾಯಿಗಿಟ್ಟೆ. ಸೋಡಾ… ಅಯ್ಯಯ್ಯೋ ಸಪ್ಪೇ ಬರೀ ಸಪ್ಪೆ, ಗ್ಯಾಸ್ ಬೇರೆ… ಉಗುಳಲೆ? ಊಹುಂ ಉಗುಳಿದರೆ ಅಪ್ಪನ ಕೆಂಪುಕಣ್ಣು ನನ್ನನ್ನು ಹೆದರಿಸಿತು.

ಡಾಗ್ ಎಂಬ ನಾಯಿ ಮತ್ತು ಹಕ್ಕಿ ಹಾಡಿನ ದೆವ್ವ

ಅಪ್ಪ ಓದಿದ್ದು ಒಂದನೆಯೋ ಎರಡನೆಯೋ… ಲೆಕ್ಕ, ಮಗ್ಗಿ ಗೊತ್ತು. ಇಂಗ್ಲೀಷ್ ಓದಲು ಬರೆಯಲು ಗೊತ್ತಿಲ್ಲ. ಆದರೆ ಸಹಿ ಮಾಡುತ್ತಿದ್ದುದು ಇಂಗ್ಲೀಷ್‌ನಲ್ಲೆ ! ಇಂಗ್ಲೀಷ್ ಅಭಿಮಾನದಿಂದ ಅಪ್ಪ ನಮ್ಮ ನಾಯಿಗೆ ಡಾಗ್ ಎಂದು ನಾಮಕರಣ ಮಾಡಿತ್ತು. `ಡಾಗ್ ನಾಯಿ ಡಾಗ್ ನಾಯಿ ಬಾ` ಅಂತ ನಾಯಿಯನ್ನು ಕರೆದಾಗ ನಮಗಂತೂ ನಗುವೋ ನಗು. ಮತ್ತೆ ನಾವೂ ಕೂಡ ಹಾಗೇ ಕರೆಯುತ್ತಿದ್ದೆವು. ಮನೆಗೆ ಯಾರಾದರೂ ಬಂದರಂತೂ ಡಾಗ್ ನಾಯಿಯನ್ನು ಕಟ್ಟಲೇ ಬೇಕು. ಬಂದವರೂ ಕೂಡ ‘ಡಾಗ್ ನಾಯೀನ ಕಟ್ಟೀದೀರಿ ತಾನೆ’ ಎಂದೇ ಕೇಳುತ್ತಿದ್ದರು.

ನಮ್ಮ ಅವ್ವ ಅನಕ್ಷರಸ್ಥೆ. ಕೂಡಲು ಕಳೆಯಲು ಗೊತ್ತು. ಬಾಯಿ ಲೆಕ್ಕದ ಪ್ರವೀಣೆ. ಸಾಧು ಸ್ವಭಾವದ ಅವ್ವ ಧೈರ್ಯವಂತೆ. ರಾತ್ರಿ ಹಗಲು ಎರಡೂ ಒಂದೇ. ಕೈಯಲ್ಲೊಂದು ದೊಣ್ಣೆ ಇದ್ದರೆ ಸಾಕು ಸಮಯದ ಪರಿವೇ ಇಲ್ಲದೆ ನಡುಕಾಡಿನಲ್ಲೂ ನಡೆದಾಡಬಲ್ಲ ಧೀರೆ. ‘ಅವ್ವಾ ನಿಂಗೆ ಹೆದ್ರಿಕೆ ಆಗಲ್ವಾ?’ ಅಂತ ಕೇಳಿದ್ರೆ ‘ಕೈಯಲ್ಲಿ ದೊಣ್ಣೆ ಇದ್ರೆ ಯಾಕೆ ಹೆದ್ರಬೇಕು? ಪೊದೆಗೆ ಒಂದೆರಡು ಸತಿ ಬಡಿದರೆ ಆ ಸದ್ದಿಗೆ ಪ್ರಾಣಿಗಳು ಹೆದ್ರಿ ಓಡ್ತವೆ’ ಅಂತ ಹೇಳ್ತಾ ಇದ್ದಳು. ದೆವ್ವ ಗಿವ್ವಾ ಅಂತ ಒಮ್ಮೆಯೂ ಹೆದರಿಕೊಂಡವಳಲ್ಲ. ದೆವ್ವದ ಹತ್ತಾರು ಕಥೆ ಗೊತ್ತು. ಆದರೆ ಅದೆಲ್ಲಾ ಸುಳ್ಳು ಅಂತ ಹೇಳಿ ನಮಗೆ ಧೈರ್ಯ ತುಂಬಿದಾಕೆ.

ನಮ್ಮ ಅಪ್ಪ ಅಮ್ಮ ಊರಿಂದೂರಿಗೆ ವಲಸೆ ಹೋಗಿ ನೆಲೆ ನಿಂತಿದ್ದು ಕಾಟಿಬೆಟ್ಟದ ಕಾಡಿನಲ್ಲಿ ಅಂತ ಹಿಂದೆ ಹೇಳಿದ್ದೆ. ಹೀಗೆ ಅಲೆದಾಟದ ಬದುಕಿನಲ್ಲಿ ಹುಟ್ಟಿದ ಮಗು ನನ್ನ ಅಕ್ಕ. ಅದೋ ಏಳು ತಿಂಗಳಲ್ಲೇ ಭೂಮಿಗಿಳಿದ ಪುಣ್ಯಾತಗಿತ್ತಿ. ಅವ್ವ ಆ ಎಳೆ ಮಗುವಿನ ಜೀವ ಹೇಗೆ ಉಳಿಸಿದಳೊ! ಇಂದಿನಂತೆ ಅಂದು ಇನ್ಕ್ಯುಬೇಟರ್ ಇರಲಿಲ್ಲ. ಇದ್ದರೂ ಅಂದಿನ ಆ ಬಡತನದಲ್ಲಿ ಆಗುತ್ತಿತ್ತೇ? ಎರಡು ಗಾಜಿನ ಸೀಸೆಗೆ ಬಿಸಿ ನೀರು ತುಂಬಿ ಆಚೆ ಈಚೆ ಸೀಸೆ ಮಡಗಿ ಮಧ್ಯದಲ್ಲಿ ಮಗುವನ್ನು ಮಲಗಿಸುತ್ತಿದ್ದಳಂತೆ! ಅಂತೂ ಇಂತೂ ಅಕ್ಕ ಉಳಿಯಿತು. ಅವ್ವ ಸದಾ ಆಶಾವಾದಿ. ಒಮ್ಮೆಯೂ ಕೂಡ ಮುಂದೆ ಬದುಕು ಹೇಗಪ್ಪಾ ಎಂದವಳಲ್ಲ. ಎಷ್ಟೇ ಕಷ್ಟವಾದರೂ ಶಾಲೆಗೆ ಹೋಗಬೇಡಿ ಎಂದವಳಲ್ಲ.

ಹೊತ್ತು ಹೊತ್ತಿಗೆ ಎಂತದೋ ಒಂದು ಇರುತ್ತಿತ್ತು. ಬೇಯಿಸಿದ ಕುಂಬಳ ಕಾಯಿಯೋ, ಕಾಡು ಗೆಣಸೋ, ಪಪ್ಪಾಯಿಯೋ….. ಹೀಗೆ ಏನಾದರೂ ನಮ್ಮ ಹೊಟ್ಟೆ ಸೇರುತ್ತಿತ್ತು. ಅಂದು ಇದ್ದುದು ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೂ ಒಂದೇ ಬಗೆಯ ಸಾಬೂನು. ಸಾಬೂನು ತರುತ್ತಿದ್ದುದು ಆಗ ಗೀಟು ಲೆಕ್ಕದಲ್ಲಿ. ಎರಡು ಗೀಟು ಸಾಬೂನು ಇಡೀ ತಿಂಗಳಿಗಾಗುತ್ತಿತ್ತು! ಅದಕ್ಕೆ ಅವ್ವನ ಉಪಾಯ ಗೊತ್ತಾ? ನೀರಿಗೆ ಬೂದಿಯನ್ನು ಸುರಿದು ತಿರುಗಿಸಿ ಅದಕ್ಕೆ ಬಟ್ಟೆಯನ್ನು ಅದ್ದಿಡುವುದು. ನಂತರ ಕಾರೆ ಕಾಯಿಯನ್ನು ಸಾಬೂನು ಬದಲಿಗೆ ಬಳಸುವುದು.

ರಾತ್ರಿ ಮಲಗುವಾಗ ಒಂದು ಕಡೆ ನಾನು, ಇನ್ನೊಂದು ಕಡೆ ಅಕ್ಕ ಅವ್ವನನ್ನು ನಡುವೆ ಮಲಗಿಸಿಕೊಂಡು ತಬ್ಬಿಕೊಳ್ಳುತ್ತಿದ್ದೆವು. ಅವ್ವಾ ಕತೆ ಹೇಳವ್ವಾ ನಮ್ಮ ರಾಗ ಸುರುವಾಗುತ್ತಿತ್ತು. ಕಾಡಿನ ಏಕಾಂತ ಮನೆಯಲ್ಲಿ ಕಥೆಯ ಸಂಭ್ರಮ…. ಏಳು ಸಮುದ್ರ ದಾಟಿದ ರಾಜಕುಮಾರನ ಕಥೆ, ರಾಜಕುಮಾರಿ ಮತ್ತು ಗಿಣಿ, ರಕ್ಕಸಿ ಮತ್ತು ಹುಡುಗ, ಕಪಿ ಮತ್ತು ಹೆಂಗಸು, ಒಂದು ರಾತ್ರಿಗೆ ಒಂದು ಕಥೆ. ಕಥೆ ಮುಗಿಯಿತೋ…. ಅವ್ವಾ ಪದ ಹೇಳವ್ವಾ ಅಂತ ಪೀಡಿಸುತ್ತಿದ್ದೆವು. ಆಗ ಸೋಬಾನೆ ಪದ ಹೇಳುತ್ತಿದ್ದಳು.

ಒಂದೇ ಕಥೆಯನ್ನು ಅದೆಷ್ಟೋ ಬಾರಿ ಹೇಳಿಸಿಕೊಂಡಿದ್ದೇವೆ. ಸೋಬಾನೆಯನ್ನು ಕೂಡ ! ಕೆಲವೊಮ್ಮೆ ಕಥೆ ಅಥವಾ ಹಾಡು ಅರ್ಧಕ್ಕೆ ನಿಂತು ಹೋಗಿದ್ದೂ ಉಂಟು! ಬೇಸಿಗೆ ರಾತ್ರಿ ಭಯಾನಕ ಆದದ್ದಿದೆ. ಕಾಡುಪ್ರಾಣಿಗಳು ಒಣ ಎಲೆ, ಒಣ ಕಾಡನ್ನು ತುಳಿಯುವ ಸದ್ದು ಬಲು ದೂರಕ್ಕೆ ಕೇಳುತ್ತದೆ. ಆ ಥರಾ.. ದರಾ.. ಬರಾ.. ಪಟಾ ಪಟಾ.. ಸದ್ದಿಗೆ ನಾಯಿಗಳು ರಾತ್ರಿಯಿಡೀ ಬೊಗಳುತ್ತಾ ಎಚ್ಚರದಿಂದ ನಮ್ಮನ್ನು ಕಾಪಾಡಿವೆ. ಆನೆಯೋ, ಕಾಟಿಯೋ, ಕಡವೆಯೋ…. ನಾವಂತೂ ಅವ್ವಾ ಕತೆ ಬೇಡವ್ವಾ ಎನ್ನುತ್ತಾ ಅವ್ವನನ್ನು ಇನ್ನು ಬಿಗಿಯಾಗಿ ತಬ್ಬಿದ ರಾತ್ರಿಗಳು ಅದೆಷ್ಟೋ.

ಒಮ್ಮೊಮ್ಮೆ ಸಂಜೆ ಹೊತ್ತಿನಲ್ಲಿ ಅಥವಾ ರಾತ್ರಿ ಕಾಡಿನೆಡೆಯಿಂದ ಕರ್ಕಶವಾದ ಕೂಗು ಕೇಳುತಿತ್ತು. ಒಮ್ಮೆ ಅಲ್ಲಿ ಆ ಕೂಗು ಕೇಳಿದರೆ ಮತ್ತೊಮ್ಮೆ ಇಲ್ಲಿ ಕೇಳುತಿತ್ತು. ನಾವಂತೂ ಹೆದರಿ ಅವ್ವನನ್ನು ಒತ್ತಿ ಕೂರುತ್ತಾ, ಅದೆಂತವ್ವಾ….! ನಡಗುವ ಧ್ವನಿಯೊಡನೆ ಕೇಳುತ್ತಿದ್ದೆವು.
ಆ ಕೂಗು ಮರದ ಮೇಲಿನದು ಏನಿರಬಹುದು?
ಅದೊಂದು ಹಕ್ಕಿ !
ಅಯ್ಯಯ್ಯೋ ಹಕ್ಕಿಯ ಕೂಗಿಗೆ ಹೆದರುವುದೇ?
ಹೌದು,
ಮೌನ ರಾತ್ರಿಯಲ್ಲಿ ಕ್ಕೂ…. ವಾ…. ಕ್ಕೂ…. ವಾ ಹೆದರದೆ ಮತ್ತೇನು?
ಅದು ಜೇನು ಕುರುಬರ ದೆವ್ವಾ ಅಂತ ಅವ್ವ ಹೇಳಿದಳು.
ನಾವು ಗುಬ್ಬಚ್ಚಿಗಳೇ ಸೈ. ದೆವ್ವಾ ಅಂದ ಮೇಲೆ ಭಯವೇ. ಆದರೂ ಕಥೆ ಕೇಳುವಾಸೆ.
ಅವ್ವಾ ಕುರುಬರ ದೆವ್ವ ಕತೆ ಹೇಳವ್ವಾ….

ಅವ್ವಾ ಹೇಳತೊಡಗಿದಳು…
ಅವರು ಜೇನು ಕುರುಬರು. ಅಣ್ಣ ತಮ್ಮ ಇಬ್ಬರು ಜೇನು ಬೇಟೆಗೆಂದು ಹೋಗಿದ್ದಾಗ ಹೆಮ್ಮರದಲ್ಲಿ ಜೇನು ಕಾಣಿಸಿತಂತೆ. ಸಂಜೆ ಜೇನು ಕುಯ್ಯೋಣ. ಈ ಉರಿಬಿಸಿಲಿಗೆ ಬೇಡ ಎನ್ನುತ್ತಾ ಹಾಡಿಗೆ ಬಂದರಂತೆ. ಸಂಜೆ ಇಬ್ಬರು ಆ ಹೆಜ್ಜೇನು ಕುಯ್ಯಲು ಹೋದರು. ಅದು ದೊಡ್ಡ ಮರ ಬೇರೆ. ಹಾಗಾಗಿ ಮರಕ್ಕೆ ಕಾಡು ಬಳ್ಳಿಯನ್ನು ಸುತ್ತಿ ಏಣಿಕಟ್ಟಿ ಹತ್ತುವ ಏರ್ಪಾಡು ಮಾಡಿದರು. ಅಣ್ಣ ಮರ ಹತ್ತಿದ. ಜೇನು ಕುಯ್ದು ಇಳಿಸಿದ. ಯಾವಾಗ ಜೇನು ಕೆಳಗಿಳಿದು ತಮ್ಮನು ಕೈಸೇರಿತೋ ತಮ್ಮನಿಗೆ ದುರಾಸೆ ಆಯಿತು. ಜೇನನ್ನು ಪಕ್ಕಕ್ಕಿಟ್ಟು ಮರಕ್ಕೆ ಕಟ್ಟಿದ ಹಗ್ಗವನ್ನು ಕತ್ತರಿಸಿ ಏಣಿಯನ್ನು ತೆಗೆದುಬಿಟ್ಟ! ಯಾಕೆ ಹೀಗೆ ಮಾಡಿದೆ ಎಂದು ಅಣ್ಣ ಕೇಳುವ ಮೊದಲೇ ತಮ್ಮ ಜೇನಿನೊಡನೆ ಜಾಗ ಖಾಲಿ ಮಾಡಿದ!

ತಮ್ಮ ತನ್ನ ಪಾಡಿಗೆ ಹಾಡಿಯತ್ತ ನಡೆದ. ಅಣ್ಣ ಮರದಲ್ಲೇ ಉಳಿದ ರಾತ್ರಿಯಿಡೀ ಮರದಲ್ಲೇ ಕಾಲ ಕಳೆದ. ಹಾಡಿಯಲ್ಲಿ ಹೆಂಡತಿ ಗಂಡನಿಗಾಗಿ ಕಾದಳು. ಮೈದುನನಿಂದ ಸರಿಯಾದ ಉತ್ತರ ಸಿಗಲಿಲ್ಲ. ಅವನಲ್ಲಿ ಮತ್ತೇನು ದುರಾಸೆ ಇತ್ತೋ?
ಗಂಡನಿಗಾಗಿ ಚಡಪಡಿಸಿದ ಈಕೆ ಬೆಳಗಾಗುವುದನ್ನೇ ಕಾದಳು, ಬೆಳಗಾಯಿತು. ಮೈದುನ ಹರಶಿವಾ ಅಂತ ಬಾಯಿಬಿಡುತ್ತಿಲ್ಲ. ನಿನ್ನೆ ಯಾವ ಕಡೆಗೆ ಹೋದುದೆಂದೂ ಹೇಳಲಿಲ್ಲ. ಕಾಡಿನಲ್ಲಿ ಜೇನಿಗಾಗಿ ನಡೆದ ದಾರಿ ಯಾವುದು? ಹೆಂಡತಿ ಕಾಡನೆಲ್ಲಾ ಸುತ್ತಿದಳು. ಬಾಯಿಗೆ ಕೈ ಮಡಗಿ ಜೋರಾಗಿ ಕೂಗಿದಳು. ಹೀಗೆ ಕೂಗುತ್ತಾ ಕೂಗುತ್ತಾ ನಡೆದಳು.

ಅಲ್ಲೆಲ್ಲೋ ದೂರದಲ್ಲಿ ಜೇನ್ನೊಣಗಳ ಗುಂಯ್ ಸದ್ದು ಕೇಳುತಿತ್ತು. ಆ ಸದ್ದನ್ನು ಆಲಿಸುತ್ತಾ ಆಲಿಸುತ್ತಾ ಹೋದಳು. ಅಲ್ಲಿಂದ ಮತ್ತೊಂದು ಸದ್ದು….
ಅಯ್ಯೋ ಅಯ್ಯೋ ಎಂಬ ನರಳಾಟ. ಅತ್ತ ಓಡಿದಳು ಹೌದು, ತನ್ನ ಗಂಡನ ನರಳುವ ಸದ್ದಿಗೆ ಈಕೆ ಜೋರಾಗಿ ಕೂಗಿದಳು. ಹೆಮ್ಮರದಲ್ಲಿ ಆತ ಜೇನ್ನೊಣಗಳ ಕಡಿತಕ್ಕೆ ಸಿಕ್ಕಿ ಚಡಪಡಿಸುವುದನ್ನು ನೋಡಲಾಗುವುದಿಲ್ಲ.
ಇಳಿದು ಬನ್ನೀ….
ಗಂಡನ ರೋದನ ಯಾಕೆ ಹೀಗೆ?
ಎಂತೆಂಥಾ ಮರ ಏರಿ ಇಳಿದ ತನ್ನ ಗಂಡ ಇಂದೇಕೆ ಹೀಗೆ?
ಓ! ಹಗ್ಗ ಹರಿದಿದೆ, ಏಣಿ ಕಳಚಿದೆ ಇನ್ನು ಇಳಿಯುವುದೆಂತು?
ನೀಚ ಮೈದುನ ಹೀಗೆ ಮಾಡಿದನೆ?
ನಾನೇನು ಮಾಡಲಿ?

ಚೆನ್ನೀ…. ಹಾಡಿಗೆ ಹೋಗು ಬೇಗ ಹೋಗು. ಒಂದು ಮೊರ, ಸೋರೆ ಬುರುಡೆ, ಮಸಿ ತಕ್ಕೊಂಡು ಬಾ….. ಗಂಡ ಅಷ್ಟು ಹೇಳಿದ್ದೇ ತಡ ಈಕೆ ಹಾಡಿಗೆ ಓಡಿದಳು. ಈ ಎಲ್ಲಾ ವಸ್ತುಗಳನ್ನು ತಂದಳು. ಹೊತ್ತು ನೆತ್ತಿಗೇರಿದೆ. ಹೆಜ್ಜೇನು ನೊಣಗಳು ರೋಷಗೊಂಡಿವೆ. ಬಂದೇ ತಂದೇ ಎನ್ನುತ್ತ ಮರದಡಿಗೆ ನಡೆದಳು.
ಚೆನ್ನೀ…. ಅದೆಲ್ಲವನ್ನು ಮರದ ಬುಡದಲ್ಲೇ ಇಟ್ಟು ತಿರುಗಿ ನೋಡದೆ ಹೋಗು ಎಂದು ಗಂಡ ನುಡಿದ ಚೆನ್ನಿ ಮೊರ, ಸೋರೆ ಬುರುಡೆ, ಮಸಿ ಎಲ್ಲವನ್ನು ಜೋಡಿಸಿ ಮರದ ಕೆಳಗಿಟ್ಟು ಹೊರಟಳು. ತಿರುಗಿ ನೋಡಬೇಡ ಎಂದು ಆತ ಮತ್ತೊಮ್ಮೆ ಹೇಳಿದ. ಚೆನ್ನಿ ಅಷ್ಟು ದೂರ ನಡೆದಳು.
ಆಗ ಹೆಮ್ಮರ ಬಾಗಿತು, ಮತ್ತೂ ಬಾಗಿತು. ಚೆನ್ನಿ ಆಸೆಯ ಕಣ್ಣುಗಳಿಂದ ಹಿಂತಿರುಗಿ ನೋಡಿಯೇ ಬಿಟ್ಟಳು.
ಬಾಗಿದ ಮರ, ಇನ್ನೇನು ತನ್ನ ಗಂಡ ನೆಲಕ್ಕಿಳಿಯಬೇಕೆನ್ನುವಷ್ಟರಲ್ಲಿ ಮರ ಮತ್ತೆ ಮೇಲೇರಿತು!
ಅಯ್ಯೋ ಚೆನ್ನೀ – ನೀ ಮುಂಡೆಯಾದೆಯಲ್ಲೇ ಗಂಡನ ದುಗುಡ ತುಂಬಿದ ಮಾತು. ಚೆನ್ನಿಯ ಎದೆ ಒಡೆದಂತಾಯಿತು.
ಮರ ಮತ್ತೆ ಬಾಗಿ ಬರುವುದಿಲ್ಲ ಗಂಡ ತನ್ನ ಪಾಲಿಗಿಲ್ಲ.
ಹಾ! ವಿಧಿಯೆ?
ಆತ ಮರದಲ್ಲೇ ಉಳಿದ. ಊಟವಿಲ್ಲ, ನಿದ್ದೆಯಿಲ್ಲ, ಸಂಸಾರವಿಲ್ಲ, ನೀರಿಲ್ಲದೆ ಕೃಶವಾದ. ಹಾಗೇ ಮರದಲ್ಲೇ ಉಳಿದು ಕ್ರಮೇಣ ಆತ ಹಕ್ಕಿಯಾಗಿ ಕುರುಬರ ದೆವ್ವವಾಗಿ ಹಾರಿದ…. ಈಗ ಕ್ಕೂ…. ವಾ, ಕ್ಕೂ…. ವಾ ಎಂದು ಕೂಗು ಹಾಕುತ್ತ ಕಾಡಿನ ಹಾಡಿಯತ್ತ ಹಾರಿ ಬರುತ್ತಿದ್ದಾನೆ. ಆಗ ಹಾಡಿಯ ಮುಂದೆ ಕೆಂಡ ಮತ್ತು ಒಂದು ಬೀಡಿ ಇಡುತ್ತಾರಂತೆ….

ಕಥೆ ಕೇಳಿದ ನಾವು ಸಾಕವ್ವಾ ಕತೆ ಎಂದು ಪಿಸುಗುಟ್ಟಿದ್ದೆವು.

ಹಸುಗಳ ಪುರಾಣ…

ಬತ್ತದ ಒಕ್ಕಲು ಕೆಲಸದ ಕೊನೆಯ ದಿನ ಎತ್ತುಗಳ ಕೋಡುಗಳು ಉದ್ದವಾಗುತ್ತಿದ್ದವು. ಅರೆ! ಇದೇನು? ತುಂಡು ಕೋಡಿನ ಎತ್ತುಗಳಿಗೂ ಉದ್ದಕೋಡಿನ ಭಾಗ್ಯ! ಅದೇ ವಿಶೇಷ. ಕೆಲಸ ಮುಗಿದುದರ ಸಂಕೇತವಾಗಿ ಬತ್ತದ ಹುಲ್ಲು ತುಳಿದ ಎತ್ತುಗಳಿಗೆ ಹುಲ್ಲಿನ ಕೋಡನ್ನು ಮಾಡಿ ಕಟ್ಟುತ್ತಾರೆ. ಹಾಗೆ ಕಟ್ಟಿದ ಬಳಿಕ ದನಗಳನ್ನು ಸ್ವತಂತ್ರವಾಗಿ ಮೇಯಲು ಗದ್ದೆ ಬಯಲಿನತ್ತ ಅಟ್ಟುತ್ತಾರೆ. ಆರೇಳು ತಿಂಗಳು ಗದ್ದೆಯತ್ತ ಸುಳಿಯಲೂ ಬಿಡದ ಆ ಎಲ್ಲಾ ದನಗಳನ್ನು ಒಕ್ಕಲು ಕೆಲಸ ಮುಗಿದೊಡನೆ ಬಿಡುವುದು ವಾಡಿಕೆ. ಆಗ ಅವರಿವರ ದನಗಳು ಗದ್ದೆ ಬಯಲಲ್ಲಿ ಒಂದಾಗುತ್ತವೆ. ಅಲ್ಲೇ ಇರುವುದು ಮಜ ಅಲ್ಲಿಂದ ಇಲ್ಲಿಂದೆಲ್ಲಾ ಗುಟುರೇ ಗುಟುರು. ಆಹಾ! ಪೌರುಷದ ಪ್ರದರ್ಶನ. ಈ ಕಡೆ ಆ ಕಡೆಯಿಂದ ಗುಟುರು ಹಾಕುತ್ತ, ಬುಸುಗುಟ್ಟುತ್ತ, ಉಚ್ಚೆ ಹೊಯ್ದುಕೊಳ್ಳುತ್ತಾ ಮುಂಗಾಲಿಂದ ಮಣ್ಣನ್ನು ಕೆರೆಯುತ್ತಾ ಹೊಟ್ಟೆಗೆ ಗುದ್ದಿಕೊಳ್ಳುತ್ತಾ ಗದ್ದೆ ಏರಿಯನ್ನು ತಿವಿಯುತ್ತಾ ಹತ್ತಿರ ಹತ್ತಿರ ಬಂದು ಪರಸ್ಪರವಾಗಿ ಓರೆಗಣ್ಣಿನಿಂದ ನೋಡಿಕೊಳ್ಳುತ್ತಾ ಅಡ್ಡಡ್ಡವಾಗಿ ನಿಲ್ಲುತ್ತದೆ. ಗುದ್ದಾಟ ಇನ್ನು ಆರಂಭವಾಗಿಲ್ಲವೋ; ಒಂದರ ಬೆನ್ನಿಗೆ ಹೊಡೆದರಾಯಿತು. ಹಣಾಹಣಿ ಆರಂಭ. ಒಂದೈದು ಹತ್ತು ನಿಮಿಷಗಳ ಮಜವೋ ಮಜ. ನಮಗಾಗದವರ ಎತ್ತು ಸೋತು ಓಡಿದರಂತೂ ನಾವೇ ಗುದ್ದಾಡಿ ಓಡಿಸಿದಷ್ಟು ಖುಷಿ. ಈ ಗುದ್ದಾಟದಿಂದ ಕೆಲವು ಎತ್ತುಗಳು ಕೋಡು ಮುರಿದುಕೊಂಡದ್ದು ಉಂಟು. ಹೊಟ್ಟೆ ಸೀಳಿ ಕರುಳು ಹೊರಬಂದು ಸತ್ತ ಪ್ರಸಂಗವೂ ನಡೆದಿದೆ.

ಯಾರದೋ ಒಂದು ಗೂಳಿ ನಮ್ಮ ಕಾಟಿಬೆಟ್ಟದ ಕಾಡಿನಲ್ಲಿ ರಾಜನಂತೆ ಮೆರೆಯುತ್ತಿತ್ತು. ಯಾವ ಹುಲಿ ಚಿರತೆಗೂ ‘ಜುಂ’ ಅನ್ನದ ತುಡುಗು ಗೂಳಿಯಾಗಿತ್ತು. ಅದಕ್ಕೆ ಖಾಯಂ ಕೊಟ್ಟಿಗೆ ಎಂದೇನೂ ಇಲ್ಲ. ಒಂದು ದಿನ ಇವರ ಕೊಟ್ಟಿಗೆಯಲ್ಲಿ ತಂಗಿದರೆ ಮತ್ತೊಂದು ದಿನ ಇನ್ನೊಂದು ಕೊಟ್ಟಿಗೆಯಲ್ಲಿ ವಾಸ. ಅದು ಮಳೆಗಾಲದಲ್ಲಿ ಮಾತ್ರ. ಆದರೆ ಬೇಸಿಗೆಯಲ್ಲಿ ಅದಕ್ಕೆ ಕೊಟ್ಟಿಗೆ ಬೇಕಿಲ್ಲ. ಎಲ್ಲೋ ಆಯಾಸಗೊಂಡಲ್ಲಿ ನಿದ್ದೆ. ಕೊಬ್ಬಿ ಬೆಳೆದ ಆ ಗೂಳಿ ಯಾರ ಹಿಡಿತಕ್ಕೂ ಸಿಗುತ್ತಿರಲಿಲ್ಲ ಯಾವ ಕೆಲಸಕ್ಕೂ ಬರುತ್ತಿರಲಿಲ್ಲ. ಹಗಲು ಹೊತ್ತಿನಲ್ಲಿ ಯಾರ ಕಣ್ಣಿಗೂ ಬೀಳದೆ ರಾತ್ರಿಯಾದೊಡನೆ ಗುಟುರು ಹಾಕುತ್ತ ಬೇಲಿ ಮುರಿದು ಗದ್ದೆಗೆ ನುಗ್ಗಿ ಬೆಳೆ ನಾಶಮಾಡುತ್ತಿತ್ತು.

ಹಸು ಹದ್ರಿಗೆ ಬಂದಾಗ (ಜೋಡಿಯಾಗಲು ಬಂದಾಗ) ಒಂದೆಡೆ ನಿಲ್ಲುವುದಿಲ್ಲ. ಸದಾ ಓಟದಲ್ಲೇ ಇರುತ್ತದೆ. ಆಗ ಆ ಹಸುವಿನ ಹಿಂದೆ ನಾಲ್ಕಾರು ಗೂಳಿಗಳು, ಎತ್ತುಗಳು ಓಡುತ್ತಿರುತ್ತವೆ. ಹೀಗೆ ಓಡುತ್ತಾ ಓಡುತ್ತಾ ಆಯಾಸಗೊಂಡು ಹಿಂದುಳಿಯುತ್ತವೆ. ಸಾಮರ್ಥ್ಯ ಇರುವ ಗೂಳಿ ಹಸುವಿನ ಜೊತೆಯಾಗುತ್ತದೆ. ಹೀಗೆ ಜೋಡಿಯಾಗುವ ಕಾಲದಲ್ಲಿ ನಾನಾ ಬಣ್ಣದ ನಾನಾ ಗಾತ್ರದ ಗೂಳಿಗಳು ಎಲ್ಲೆಲ್ಲಿಂದಲೋ ಓಡಿ ಬರುತ್ತವೆ. ಆ ದಿನವಿಡೀ ಮೇವೂ ಇಲ್ಲ, ನೀರೂ ಇಲ್ಲ. ಓಟ ಓಟ… ಹಾಗೆ ಓಟದಲ್ಲಿ ಹಸುವಿನೊಡನೆ ಇರುತ್ತಿದ್ದುದು ಆ ಕಾಡಿನ ರಾಜನಾಗಿ ಮೆರೆಯುತ್ತಿದ್ದ ಗೂಳಿ.

ಕ್ರಮೇಣವಾಗಿ ಆ ಗೂಳಿಯ ಗುಟುರು ಕೇಳದಂತಾಯಿತು. ಬೇಟೆಗಾರನ ಗುಂಡಿಗೆ ಬಲಿಯಾಯಿತೊ ಅಥವಾ ಹುಲಿರಾಯನ ಹೊಟ್ಟೆ ಸೇರಿತೋ ತಿಳಿಯದಾಯಿತು. ದನಗಳ್ಳರು ಆ ಕಾಡಿನಲ್ಲೂ ಇದ್ದರು ಎಂಬ ವದಂತಿಯೂ ಇತ್ತು. ಆದರೆ ಆ ಗೂಳಿ ಕಳ್ಳರ ಕೈಗೆ ಸಿಕ್ಕಿರಲಾರದು. ಸ್ವಲ್ಪ ಸಾಧುವಾಗಿದ್ದ ಹಸು ಅಥವಾ ಎತ್ತುಗಳನ್ನೂ ಕಳ್ಳರು ಹಿಡಿದು ಅವುಗಳ ಕೋಡುಗಳನ್ನು ಕೀಸಿ ಸಪೂರಮಾಡಿ ನೋಡಿದರೆ ಪಕ್ಕನೆ ಗುರುತು ಹಚ್ಚದಂತೆ ಮಾಡುತ್ತಿದ್ದರಂತೆ ಹಾಗೆ ಮಾಡಿದ ಬಳಿಕ ಗೋಣಿಕೊಪ್ಪದ ದನದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು ಎಂದು ಕೇಳಿದ್ದೆ.

ನಮ್ಮ ಕಾಳಿ ಹಸು ಹೆಸರಿಗೆ ತಕ್ಕಂತೆ ಕಪ್ಪಾಗಿತ್ತು. ಶರೀರದ ಯಾವ ಭಾಗದಲ್ಲೂ ಬೇರೆ ಬಣ್ಣ ಇಲ್ಲವೇ ಇಲ್ಲ, ಅದರ ಗೊರಸು, ಬಾಲ ಎಲ್ಲವೂ ಕಪ್ಪು ಕಪ್ಪು, ಈ ರೀತಿಯ ಮೈ ಬಣ್ಣದ ಹಸು ಇರುವುದೇ ವಿರಳ. ಇಂತಹ ಹಸುವಿನ ಹಾಲು ಬಲು ವಿಶೇಷ. ಔಷಧಿಗೆ ಬಲು ಪ್ರಾಮುಖ್ಯತೆ. ಕೆಚ್ಚಲು ಸಹ ಕಪ್ಪಾಗಿರುವ ಈ ಹಸುವಿನ ವಿಶೇಷತೆ ಎಲ್ಲಿಂದೆಲ್ಲಿಗೋ ಹರಡಿರಬೇಕು…

ನಡುರಾತ್ರಿ ಮೀರಿರಬಹುದು. ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಹುಲಿಗಿಲಿ ಬಂತೇನೋ ಎಂದು ‘ಚೂಕೂಡಿ’ ಮಲಗಿದೆವು. ನಾಯಿಗಳು ಮತ್ತೆ ಬೊಗಳತೊಡಗಿದವು. ಈಗ ನಮ್ಮ ಕೊಟ್ಟಿಗೆ ಮನೆಯಿಂದ ಸ್ವಲ್ಪ ದೂರದಲ್ಲಿತ್ತು. ಕೊಟ್ಟಿಗೆಯಲ್ಲಿ ದಡಬಡ ಸದ್ದಾಯಿತು. ಕೂಡಲೆ ಕೊಟ್ಟಿಗೆಗೆ ಹೋಗೋಣವೆಂದರೆ ಕೈದೀಪ ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಆ ದೀಪ ದಾರಿಯಲ್ಲೇ ಕೆಟ್ಟು ಹೋಗುತ್ತಿತ್ತು. ಮತ್ತೆ ದೀಪ ಉರಿಸಿ ದೀಪಕ್ಕೆ ಕೈ ಅಡ್ಡ ಮಾಡಿಕೊಂಡು ಕೊಟ್ಟಿಗೆಗೆ ಹೋದೆವು. ದೀಪ ಸಣ್ಣಗಾಳಿಗೆ ಕೆಟ್ಟು ಹೋಯಿತು. ಬ್ಯಾಟರಿ ಇಲ್ಲ, ದೊಂದಿ ಮಾಡಿಕೊಂಡಿಲ್ಲ.

ಕೊಟ್ಟಿಗೆಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ದನಗಳು ತಲೆ ಕೊಡವಿಕೊಳ್ಳುತ್ತಿವೆ ಎಂದು ಕಿವಿ ಹೊಡೆದುಕೊಳ್ಳುವ ಸದ್ದಿನಿಂದ ಗೊತ್ತಾಯಿತು. ಬುಸುಗುಟ್ಟುವ ಸದ್ದು ಕೇಳುತ್ತಿತ್ತು. ದನಗಳು ಗಾಬರಿ ಆಗಿವೆ ಎಂದು ತಿಳಿಯಿತು. ನಾಯಿಗಳು ಹೆದರಿ ಹೆದರಿ ಬೊಗಳುತ್ತಿವೆ. ಹುಲಿ ಇಲ್ಲೆಲ್ಲೋ ಇರಬಹುದು. ಕತ್ತಲೆ ಸಾಮ್ರಾಜ್ಯದಲ್ಲಿ ಹುಲಿಯೇ ಒಡೆಯ! ಮತ್ತೆ ದೀಪ ಉರಿಸಿ, ಕೈ ಅಡ್ಡ ಹಿಡಿದು ದೀಪದ ಜೀವ ಉಳಿಸಿದೆವು. ಆ ಬೆಳಕಲ್ಲಿ ದನಗಳೆಲ್ಲಾ ಎದ್ದು ನಿಂತು ಕಾಡಿನ ದಾರಿಯತ್ತ ನೋಡುತ್ತಿದ್ದವು. ಕಾಳಿ ಹಸು ಇರಲಿಲ್ಲ! ಕೊಟ್ಟಿಗೆಯ ಬಾಗಿಲು ತೆರೆದಿತ್ತು. ಹಸುವನ್ನು ಕಟ್ಟಿದ್ದ ಹಗ್ಗ ಕತ್ತರಿಸಲ್ಪಟ್ಟಿತ್ತು. ಕಳ್ಳರ ಕೈ ಸೇರಿದ ಕಾಳಿ ಹಸು ಹೀಗೆ ಕಣ್ಮರೆ ಆಯಿತು.

ಗುರುವಕ್ಕ ಹಸುವಿನದು ಇನ್ನೊಂದು ಕಥೆ. ಅಂದು ಸಂಜೆ ಎಂದಿನಂತೆ ಕೊಟ್ಟಿಗೆಗೆ ಬರಲಿಲ್ಲ, ಹುಲಿ ಹಿಡಿಯಿತೆ? ಇಲ್ಲ, ಇರಲಾರದು. ಯಾಕೆಂದರೆ ಕಾಡಿನ ಕಡೆಯಿಂದ ಹಿಂತಿರುಗಿದ ದನಗಳು ಗಾಬರಿ ಆದಂತೆ ಇರಲಿಲ್ಲ. ಅಕ್ಕ, ಅವ್ವ ಮತ್ತು ನಾನು ಹುಡುಕುತ್ತಾ ಹೊರಟೆವು. ಗುರುವಕ್ಕ ಈ ಬಾ ಹೀಗೆ ಅವ್ವ ಹಸುವನ್ನು ಕರೆದಳು. ಹೀಗೆ ಹಲವಾರು ಬಾರಿ ಕರೆದರೂ ಹಸುವಿನಿಂದ ಮಾರುತ್ತರ ಬರಲಿಲ್ಲ. ಹುಡುಕುತ್ತಾ ತೋಡು, ಗದ್ದೆ ಇಲ್ಲೆಲ್ಲಾ ಹುಡುಕಿ ನಂತರ ಕೆಸರು ಇರುವ ಕಡೆ ನೋಡೋಣವೆಂದು ಆ ಕಡೆ ಹೋದೆವು ನಿಜ, ಗುರುವಕ್ಕ ಆ ಕೆಸರಲ್ಲಿ ಸಿಕ್ಕಿಕೊಂಡಿತ್ತು.

ತಲೆ, ಬೆನ್ನು ಬಾಲ ಮೇಲೆ ಕಾಣುತಿತ್ತು. ಮುಳುಗಿ ಎಷ್ಟು ಹೊತ್ತಾಗಿತ್ತೋ? ಬೇಕೋ ಬೇಡವೋ ಎನ್ನುವಂತೆ ಕಿವಿ ಅಲುಗಿಸಿತು, ಕಣ್ಣು ಮಿಟುಕಿಸಿತು. ನಮ್ಮ ಮೂವರಿಂದ ಹಸುವನ್ನು ಕೆಸರಿಂದ ಎಳೆಯುವುದು ಆಗದ ಕೆಲಸ. ಮತ್ತಿಬ್ಬರು ನಮ್ಮೊಡನೆ ಸೇರಿಕೊಂಡರು. ನಾವು ಕೆಸರಿನಲ್ಲಿ ಇಳಿದೆವೋ ನಾವೂ ಹೂತು ಹೋಗುವುದು ಗ್ಯಾರಂಟಿ. ಮರದ ಗಳುವನ್ನು ಕೆಸರಿನ ಮೇಲೆ ಹಾಕಿ ಅದರ ಮೇಲೆ ನಿಂತು ಹಸುವನ್ನು ಎಳೆಯ ತೊಡಗಿದೆವು. ಊಹುಂ! ಎಳೆಯಲಾಗುತ್ತಿಲ್ಲ! ಹೊಟ್ಟೆ ಕೆಳಗಡೆಯಿಂದ ಗಳುವನ್ನು ತೂರಿ ಎತ್ತತೊಡಗಿದೆವು. ಹಸು ಕೊಂಚ ಮೇಲೆ ಬಂದಂತಾಯಿತು. ಕೋಡನ್ನು ಹಿಡಿದು ಸತ್ತದನವನ್ನು ಎಳೆಯುವಂತೆ ಎಳೆದೆವು. ಅಬ್ಬ! ಹಸು ದಡಕ್ಕೆ ಬಂತೇನೋ ನಿಜ. ಅದರ ಕಾಲುಗಳು ಮರಗಟ್ಟಿ ಹೋಗಿದ್ದರಿಂದ ನಿಲ್ಲುವ ಶಕ್ತಿ ಇರಲಿಲ್ಲ.

ನಾವು ಮತ್ತೆ ಗಳುವನ್ನು ಹೊಟ್ಟೆ ಕೆಳಗೆ ತೂರಿ ಗಳುವಿನ ಮೇಲೆ ಹಸು ಬಿದ್ದುಕೊಳ್ಳುವಂತೆ ಎತ್ತಿ ಹಿಡಿದೆವು. ನಮಗೆ ಹಿಡಿದುಕೊಳ್ಳಲಾಗುತ್ತಿಲ್ಲ, ಹಸುವಿಗೆ ನಿಂತುಕೊಳ್ಳಲು ಆಗುತ್ತಿಲ್ಲ, ಬಿಟ್ಟರೆ ಬಿದ್ದುಹೋಗುತ್ತದೆ. ಬಿಡದಿದ್ದರೆ ನಮ್ಮ ಮೇಲೆ ಹಸು ಒರಗುತ್ತದೆ. ಕೊನೆಗೆ ಹಸು ನೆಲದ ಮೇಲಿರಿಸಿದ ಕಾಲು ಕಂಬ ಕೊಟ್ಟು ನಿಲ್ಲಿಸಿದಂತೆ ನಿಂತುಕೊಳ್ಳುವಂತಾಯಿತು. ನಡೆಯಲು ಸಾಧ್ಯವೇ ಇಲ್ಲ ಏನು ಮಾಡಬೇಕು? ಕತ್ತಲಾವರಿಸುತ್ತಿದೆ. ಹಿಡಿದುಕೊಂಡವರು ಹಿಡಿದೇ ನಿಂತರು. ನಾವು ಮನೆಗೆ ಓಡಿದೆವು. ಸಧ್ಯ ಮನೆಯಲ್ಲಿ ಬಿಸಿನೀರಿತ್ತು, ತಂದೆವು, ಹಸುವನ್ನು ಬಿಸಿನೀರಿಂದ ತೊಳೆದೆವು. ಸೊಂಟಕ್ಕೆ ಬಿಸಿನೀರು ಯಾವಾಗ ಬಿತ್ತೋ ಒಂದೆರಡು ಹೆಜ್ಜೆ ನಡೆಯಿತು! ನಿಂತು ಮತ್ತೆ ಹೆಜ್ಜೆ ಹಾಕಿತು. ಸಧ್ಯ ಗುರುವಕ್ಕ ಬದುಕಿದಳು.

(ಮುಂದುವರಿಯುವುದು)
(ಚಿತ್ರಗಳು: ಚರಿತಾ. ಫೋಟೋಗಳು: ರಶೀದ್)
0
0