ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ. ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ  ಅನುಪಮಾ ಎಚ್. ಎಸ್ ಬರೆದ ಕವಿತೆಗಳಿವೆ.

ಹೌದು…
ಏನಾಗಿದೆ ನಿನಗೆ ಎಂದು
ಕೇಳುತ್ತಿದ್ದಾರೆ ಎಲ್ಲರೂ
ಏನಾಗಿದೆ ಎಂದು
ತಿಳಿದಿಲ್ಲ ನನಗೂ…

ನನ್ನ ಪುಟ್ಟ ದೇಹದ
ಹೃದಯವೋ ಮಿದುಳೋ
ಮತ್ಯಾವ ಮೂಲೆಯಲ್ಲೋ
ಇರುವ ಮನಸು…
ಅಲ್ಲೆಲ್ಲೊ ಅಡಗಿ ನಗುವ ನೀನು…

ನಾನರಿಯದ ನನ್ನೊಳಗೆ
ಹೊಕ್ಕು ನೋಡಿ ಬಂದಿರುವೆ
ಸದ್ದಿರದ ಕಾಯಿಲೆಗೆ
ಮದ್ದೇನು ನೀ ಬಲ್ಲೆ

ಈ ಧಾವಂತದಲ್ಲೂ ಮುಖದಲ್ಲಿ
ಕಿರುನಗೆಯೊಂದು ಸುಳಿದರೆ
ಅದರೊಡೆಯ ನೀನೇ
ಗೊತ್ತು ಅದು ನಿನಗೆ

ನಿನ್ನ ತತ್ವಮಸಿ ನಿನ್ನಲ್ಲೇ ಇರಲಿ
ತಾಪತಾಮಸಗಳು ನನ್ನ ಬಳಿ ಬರಲಿ
ಕಾಡುಹಕ್ಕಿಯ ಹಾಡು ಇಂಪಾಗಿ ಸುಳಿದು
ಕಿಚ್ಚಬೇಗೆಗೆ ಇಷ್ಟೇ ತಂಪಾಗಲಿ

ನಿನ್ನೆದೆಯ ಗುಡಿಯೊಳಗೆ
ಅಕೋ ಅಲ್ಲಿದೆ ಪುಟ್ಟಗೂಡು
ಒಣಮರಗಳ ನಡುವೆಯೂ
ನೆಲೆಯೊಂದು ಸಿಕ್ಕಿತು ಸಾಕು

ಈ ಖುಷಿಯಲ್ಲೇ ಒಂದು
ಗುಟ್ಟು ಹೇಳುವೆ ಕೇಳು
ನಾಲ್ಕುಕೋಣೆಯ ಒಳಗೂ
ಇರುವವನೊಬ್ಬನೇ ನೀನು…

 

 

 

 

೨.

ದೋಣಿಯಿಲ್ಲದೆ
ಏಳು ಹೊಳೆ ದಾಟಿ
ರೆಕ್ಕೆಯಿಲ್ಲದೆ
ಬೆಟ್ಟ ಕಣಿವೆಯ ಸುತ್ತಿ
ದಣಿಯದೆ ಬೆವರದೆ
ತಂಗದೆ ಹೆದರದೆ
ಬಿಸಿಲೆನ್ನದೆ ಮಳೆಯೆನ್ನದೆ
ನಿನ್ನ ತಲುಪಿದ್ದೇನೆ..,

ನಾನು ಮಾತ್ರ ಇಲ್ಲಿ
ಒಂಟಿ ರಾತ್ರಿಗಳ ಮೌನರಾಣಿಯಾಗಿ
ಕುಳಿತಲ್ಲಿಯೇ ಇದ್ದೇನೆ…

ಓ ಮನಸೇ… ವಂದನೆಗಳು.

*******

ಕವಿತೆ ಬರೆಯಬೇಕಿದ್ದ
ನನ್ನ ಹುಡುಗನೇ..
ನೀನು ಶೋಕಗೀತೆ ಹಾಡುವಂತಾದದ್ದು
ಪ್ರೇಮದ ಸೋಲಿರಬಹುದು
ಆದರೂ…
ರಾತ್ರಿ ಹಗಲುಗಳ ಮಧ್ಯೆ
ಅದೆಷ್ಟು ಭಿನ್ನ ನೀನು!?

ಸುರಿಯುತ್ತಿರುವ ಈ ಬೆಳದಿಂಗಳು
ನಿನ್ನ ನೆನಪಿಸುತ್ತ
ನನ್ನೊಳಗೆ ಇಳಿಯುತ್ತ
ನಶೆಯಾಗಿ ಕಣ್ಣ ತುಂಬುತ್ತಿದೆ…
ತಿಂಗಳ ಬೆಳಕ ಮಬ್ಬಿನಲ್ಲಿ
ಯಾವುದೂ ನಿಚ್ಚಳವಿರದೆ
ಹತ್ತಿರವಿರುವುದೂ
ದೂರವಾಗೇ ಕಾಣುತ್ತಿದೆ…

ಗುಡುಗು ಸಿಡಿಲಿಗು ಹೆದರದೆ
ತೋಯುತ್ತ ಬೆಳಗುತ್ತ
ನನ್ನ ಬೊಗಸೆಯೊಳಗೆ ಬಂದಿಳಿದ
ಈ ಪುಟ್ಟ ಮಿಣುಕುಹುಳು
ನಿನಗೆ ಸ್ಫೂರ್ತಿ ನೀಡಲಿ ಗೆಳೆಯಾ…

**********

 

 

 

 

 

 

೩.

ನನಗೆ ಪ್ರೇಮದ ಮರುಳೆಂದು
ಎಲ್ಲ ನಗೆಯಾಡುತ್ತಾರೆ
ದಿನವೂ ನಿಧಾನ..ರಾತ್ರಿಯೂ ನಿಧಾನ..
ಗಾಳಿಯೂ ನಿಧಾನವಾಗಿ ಬೀಸುತ್ತಿರುವಾಗ
ನಿನ್ನ ಪ್ರೇಮವಲ್ಲದೇ
ಮತ್ತೇನನ್ನು ಉಸಿರಾಡಲಿ?

ನನ್ನೊಳಗಿನ ಪಿಸುಪಿಸು
ನಿನ್ನಲ್ಲಿ ಪ್ರತಿಧ್ವನಿಸಿ,
ನನ್ನ ಕಣ್ಣ ತುರಿಕೆ
ನಿನ್ನ ಎಚ್ಚರದಲ್ಲಿರಿಸಿ,
ಮನದ ಮಾತನ್ನು ಮೌನ ಹಡಗು
ಹೊತ್ತೊಯ್ಯುತ್ತಿರುವಾಗ
ಅಪೂರ್ಣ ಹಾಡುಗಳ ನಾಯಕನೇ
ನಿನ್ನ ನಾನೇನೆಂದು ಕರೆಯಲಿ?

ನಗಲು ಕಲಿಸಿದವ ನೀನೇ..
ಆಳ ಅಳೆಯಲು ಕಲಿಸಿದವ ನೀನೇ..
ವಿಶಾಲ ಆಗಸದಲ್ಲಿ ಗಾಳಿಯಾಗಿ
ನನ್ನ ಸ್ವಚ್ಛಂದ ತೇಲಿಸಿದವನೂ ನೀನೇ..
ಬಯಲದಾರಿಯಲಿ ಸಿಕ್ಕ
ಮಿಂಚು ನೀನಾಗಿರಲು
ಪ್ರೀತಿ ಉಮ್ಮಳಿಸಿ ಬರುತ್ತಿದೆ
ನಿನಗೇನೆಂದು ಹೆಸರಿಡಲಿ?

ನಿನ್ನ ಬಳಿ ಉತ್ತರವಿಲ್ಲವೆಂದಾದರೆ
ನನ್ನ ಬಳಿ ಪ್ರಶ್ನೆಗಳೇ ಇಲ್ಲ
ಪ್ರೇಮಮುಖಿ ನಾನು…
ಓಡುವ ಈ ಜೀವನದಿಯ
ತಳದ ಗಟ್ಟಿನೆಲ ನೀನು
ಈ ಜಗಕೆ ಸಾವಿಲ್ಲವೆಂದೇ
ಎನಿಸುತ್ತಿದೆ…

ನಾನು ಕಾಲಜ್ಞಾನಿಯಲ್ಲ
ನಿನ್ನೆಗಳ ಮೇಲೆ ಅಂಕೆಯಿರಲಿಲ್ಲ
ನಾಳೆಗಳ ಸರತಿ ಕಣ್ಣಳತೆಯಲ್ಲಿಲ್ಲ
ಬೊಗಸೆಯಲ್ಲಿರುವ ಈ ಇಂದು..
ನಂಬಿರುವೆ ಇದೊಂದೇ ನಿಜವೆಂದು
ಸಾಕ್ಷಿ.. ನನ್ನೊಳಗಿರುವ ನೀನು…

(ಮುಖಪುಟ ಚಿತ್ರ: ದ ಕಿಸ್, ಕಲಾವಿದ: ಗುಸ್ತವ್ ಕ್ಲಿಮ್ಟ್, ದೇಶ/ಊರು: ಆಸ್ಟ್ರಿಯಾದ ವಿಯೆನ್ನಾ)
0
0