ಎಷ್ಟೋ ಜನ ಹೇಳ್ತಾರೆ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಅಂತಿದ್ದಂತೆ ಒಂಥರ ರೋಮಾಂಚನ ಆಗುತ್ತಂತೆ. ಏನೋ ಒಂತರ ಪುಳಕವಂತೆ. ಧರ್ಮಸ್ಥಳ, ಹೊರನಾಡು, ಶೃಂಗೇರಿಗೆ ಹೋಗುವ ಬಸ್ಸಲ್ಲಿ ಪ್ರಯಾಣಿಸುವಾಗ ‘ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಬಂತು; ಇಳುಕೊಳ್ಳುವವರೆಲ್ಲಾ ಬನ್ನಿ’ ಅಂತ ಕಂಡಕ್ಟರ್ ಕೂಗು ಹಾಕುತ್ತಿದ್ದಂತೆ ಒಂದಷ್ಟು ಪ್ರಯಾಣಿಕರು ಕಿಟಕಿಯಾಚಿ ಮುಖಮಾಡುತ್ತಾರಂತೆ. ಯಾರಯಾರನ್ನೋ ನೋಡುವ ಆಸೆ. ಪ್ಯಾರನೋ, ಮಾರನೋ, ಮಂದಣ್ಣ ಅಥವಾ ಡಾ.ಕರ್ವಾಲೊ ಅಥವಾ ಕೋಬ್ರಾ ಕಾಳಪ್ಪನೇ ಕಾಣಸಿಗಬಹುದೆಂದು. ತೇಜಸ್ವಿ ಇಲ್ಲೇಲ್ಲಾದರೂ ಹೋಗ್ತಾ ಇರಬಹುದೇನೋ, ಆಕಸ್ಮಾತ್ ಕಂಡು ಇವರೂ ಅವರೂ ಗಲಿಬಿಲಿ ಆದ ಸಂದರ್ಭಗಳು ಉಂಟು.

(ಮಗನ ಕಾಫಿ ಹೂವಿನ ಸಂಭ್ರಮದಲ್ಲಿ ಕುವೆಂಪು ದಂಪತಿ. ಫೋಟೋ:ತೇಜಸ್ವಿ)

ತೇಜಸ್ವಿ ಹತ್ತಿರಕ್ಕೆ ಬಂದು ಪರಿಚಯ ಮಾಡಿಕೊಂಡೆವೆಂಬ ಸಂತೃಪ್ತಿ. ಈ ಕಡೆಯಿಂದ ಅಂದರೆ ಮೂಡಿಗೆರೆಯಿಂದ ಹೋಗುವವರಿಗೆ ಹೀಗೆ. ಇನ್ನು ಆ ಕಡೆಯಿಂದ ಚಾರ್ಮಾಡಿ ಘಾಟಿನಲ್ಲಿ ಹದಿನಾಲ್ಕು ಹೇರ್ ಪಿನ್ ತಿರುವುಗಳಲ್ಲಿ ಸುತ್ತಿ ಬಳಸಿ ಹೊಟ್ಟೆ ತೊಳಸಿ ಹ್ಯಾಂಡ್‌ಪೋಸ್ಟ್ ಬಸ್ಸು ನಿಲ್ಲಿಸಕ್ಕೂ ಮುಂಚೆನೇ ಕಿಟಕಿಯಾಚೆ ಮುಖ ಹಾಕಿದ್ದಾಗ ತಲೆ ಕಲಾಯಿ ಮಾಡಿಸಿಕೊಂಡಿದ್ದ ಭಕ್ತ ಆಕಸ್ಮಾತ್ ಆ ಕಡೆ ಪಾಸ್ ಆದರೆ ಆ ಕತೆನೇ ಬೇರೆ.

ನಾನು ಇಲ್ಲಿ ಹುಟ್ಟಿ ಬೆಳೆದವಳಲ್ಲ. ತೇಜಸ್ವಿಯೂ ಅಷ್ಟೆ. ನಾವು ಇಲ್ಲಿಗೆ ಪರಕೀಯರೇ. ನಾನಂತೂ ನಮ್ಮ ಸೂರಿನ ಮೇಲಿನ ಆಕಾಶ ಮಾತ್ರ ನೋಡಿಕೊಂಡು ಬದುಕುವವಳು. ಆದರೆ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಅಂದರೆ ತೇಜಸ್ವಿ ಎಲ್ಲರ ಮನದಲ್ಲಿ. ಮೂಡಿಗೆರೆ ಒಂದು ಶ್ರೀಮಂತ ತಾಲೂಕು. ಇತ್ತೀಚೆಗೆ ಮೂಡಿಗೆರೆ ನೋಡಲು ಅನೇಕರಿಗೆ ಒಂದು ಕುಶಾಲು ಬಂದಿದೆ. ಇಲ್ಲಿಗೆ ಕೃಷಿವಿಜ್ಞಾನಿಗಳು ಬರ್ತಾರೆ ರೈತರ ಉದ್ಧಾರಕ್ಕಾಗಿ. ಹಾಗಾಗಿ ಕೃಷಿ ವಿಶ್ವವಿದ್ಯಾಲಯದ ರೀಜನಲ್ ರಿಸರ್ಚ್ ಸ್ಟೇಷನ್ ಇದೆ. ಇದಕ್ಕೆ ದೇಶದಲ್ಲೇ ಒಳ್ಳೆಯ ಹೆಸರು ಇದೆಯಂತೆ, ಉತ್ತಮವಾಗಿ ನಡೆಯುತ್ತಿದೆಯೆಂದು. (ಇದೇ ಹೀಗಿದ್ರೆ ಇನ್ನು ಬೇರೆ ಕೃಷಿ ಕೇಂದ್ರಗಳ ಪರಿಸ್ಥಿತಿ ಹೇಗೆ ಇರಬಹುದೆಂಬ ಅಸಮಾಧಾನ ಬೇರೆಯದೇ ಮಾತು) ತೋಟಗಾರಿಕೆ ಕಾಲೇಜೂ ಇದೆ. ದೇಶದ ನಾನಾ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇದ್ದಾರಂತೆ. ಒಳ್ಳೆಯ ಲೈಬ್ರರಿಯೂ ಇದೆ. ಆದರೆ ಮೇಷ್ಟ್ರುಗಳು ಮಾತ್ರ ದೊಡ್ಡದೊಡ್ಡ ನಗರಗಳಲ್ಲಿರುವ ಕಾಲೇಜುಗಳಲ್ಲೇ ಪಾಠ ಹೇಳಲು ಪ್ರಿಫರ್ ಮಾಡ್ತಾರಂತೆ. ಪರಿಸರವಾದಿಗಳು ದಿಢೀರ್ ಪ್ರತ್ಯಕ್ಷ ಕಾಡು ಉಳಿಸಲು.

ಪ್ರಕೃತಿ ಪ್ರಿಯರ ಮೆಚ್ಚುಗೆ ತಾಣ. ಬೆಟ್ಟ ಗುಡ್ಡದಿಂದ ಕೂಡಿರುವ ನಾಡಿದು. ಚಾರಣಿಗರಿಗೆ ಚಾರ್ಮಾಡಿ ಘಾಟು ಕಾಶಿಯೇ ಸೈ. ವನ್ಯಜೀವಿ ಚಿತ್ರಗ್ರಾಹಕರಿಗೆ ಸ್ಟಾರ್ ಅಟ್ರ್ಯಾಕ್ಷನ್. ದೈವ ಭಕ್ತರಿಗೆ ಧರ್ಮಸ್ಥಳದ ಅಣ್ಣಪ್ಪ ಮತ್ತು ಮಂಜುನಾಥನ ಆಶೀರ್ವಾದ ಇದ್ದೇ ಇದೆ. ಹೀಗೆ ಹತ್ತಾರು ವಿಶೇಷತೆಯಿಂದಿರುವ ತಾಲೂಕು ಊರು ಮೂಡಿಗೆರೆ. ಇನ್ನು ಈ ಮಲೆನಾಡಿನ ಕಡೆಯ ಅಡುಗೆ ಊಟದ ರುಚಿಯಂತೂ ನೆನೆ ನೆನೆದು ಬರಬೇಕು ಹೋಂ ಸ್ಟೇಗೆ. ಕೋಳಿ ಸಾರು, ಕಡುಬಿನ ಊಟ ಉಂಡವರೇ ಬಲ್ಲರು ಅದರ ಸವಿರುಚಿ. ಒಬ್ಬರು ಜ್ಞಾನಿಗಳ ಅನಿಸಿಕೆ ಏನಪ್ಪಾಂದರೆ ಶ್ರುತಿ, ಸ್ವರ, ತಾಳ ಸರಿಯಿದ್ದ ಸಂಗೀತದ ಸವಿ, ಮೀನು ಸಾರು ಮತ್ತು ಅಕ್ಕಿರೊಟ್ಟಿ ತಿಂದಂತೆ (ಹೀಗೆಂದು ಸಂಗೀತ ಕಾಲೇಜಿನ ಪಠ್ಯಪುಸ್ತಕದಲ್ಲೇ ಓದ್ದಿದ್ದೀನಿ ನಾನು). ಇದು ಇಲ್ಲಿನ ವಾಡಿಕೆಯ ಬೆಳಗಿನ ತಿಂಡಿ ಅನೇಕರ ಮನೆಗಳಲ್ಲಿ.

ನನ್ನ ಮೈಸೂರಿನ ಗೆಳತಿ ಪದ್ಮಾಶ್ರೀರಾಂರು ನಮ್ಮ ಮನೆ ಹೊಕ್ಕ ಕೂಡಲೆ ಕಾಫಿ ಬೇಕಾ ಎಂದು ಕೇಳಿದರೆ ಸಾಕು ಕಾಫಿ ಕುಡಿಯಲೇಬೇಕೆನ್ನಿಸುತ್ತೆ ಎನ್ನುವರು. ಮೊನ್ನೆ ಒಬ್ಬರು ತೀರಾ ವ್ಯಾವಹಾರಿಕವಾದ ಕೆಲಸಕ್ಕಾಗಿ ಬೆಂಗಳೂರಿನಿಂದ ಬಂದವರು ‘ಕಾಫಿನೇ ಕೊಡಿಮ್ಮಾ ಹೋದ ಸಲ ಬಂದಾಗ ನಿಮ್ಮಲ್ಲಿನ ಕಾಫಿ ಕುಡಿದು ಹೋಗಿದ್ದು ಬೆಂಗಳೂರಿನ ಬಸ್‌ಸ್ಟ್ಯಾಂಡಿನಲ್ಲಿ ಇಳಿದಾಗಲೂ ನಾಲಗೆ ಮೇಲೆ ಅದರ ರುಚಿ ಹರಿದಾಡುತ್ತಿತ್ತು’ ಎಂದರು. ಹಿಂದೊಮ್ಮೆ ಕನ್ನೇಶ್ವರ ರಾಮ ಸಿನಿಮಾದ ಸ್ಕ್ರಿಪ್ಟ್ ತಯಾರಿಸಲು ‘ಗರಂ ಹವಾ’ ಖ್ಯಾತಿಯ ಶ್ರೀ ಎಂ.ಎಸ್.ಸತ್ಯುರವರು ಬೊಂಬಾಯಿಂದ ಬಂದವರು ನಮ್ಮಲ್ಲಿನ ಕಾಫಿ ಕುಡಿಯುತ್ತ ‘ದಿಸ್ ಈಸ್ ರಿಯಲ್ ಕಾಫಿ, ಐ ಸೇ!’ ಎಂದುಕೊಂಡೇ ಹೀರುತ್ತಿದ್ದರು.

ಇಷ್ಟೊಂದು ರುಚಿ ಕಾಫಿಯನ್ನು ಬೆಳಿಗ್ಗೆ ಎದ್ದಿದ್ದೆ ಕುಡಿದರೆ ದಿನವೆಲ್ಲಾ ಉತ್ಸಾಹದಿಂದಿರ್ತೀವಿ. ಇದನ್ನು ತಯಾರಿಸೋದು ಬಹಳ ಸುಲಭ. ಕಾಫಿ ಪರ್ಕ್ಯುಲೇಟರಿನಲ್ಲಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ಸಕ್ಕರೆ ಅಮೂಲ್ಯ ಹಾಲಿನ ಪುಡಿ ಒಂದು ಮಗ್‌ನಲ್ಲಿ ಹಾಕಿ ಡಿಕಾಕ್ಷನ್ ಹಾಕಿ ಎತ್ತೆತ್ತಿ ಸುರಿದರೆ ರುಚಿರುಚಿ ಕಾಫಿ ಸಿದ್ಧ. ಇಂತಹ ಕಾಫಿ ಬೇಕೇ ನಮ್ಮ ನಾಡಿನ ಕಾಫಿ ತೋಟ ನೋಡ ಬನ್ನಿ. ದೊಡ್ಡ ಅತಿ ದೊಡ್ಡ ಅಂದರೆ ನೂರಿನ್ನೂರು ಎಕರೆ. ಚಿಕ್ಕದೆಂದರೆ ಹತ್ತಿಪ್ಪತ್ತು. ಎಕರೆ ತೋಟ ಇರುತ್ತೆ. ಒಂದು ಕಾಲದಲ್ಲಿ ತರುಣರಿಗೆ ಕಾಫಿ ತೋಟದವರ ಅಳಿಯನಾಗುವುದೇ ಹೆಬ್ಬಯಕೆ. ಅಥವಾ ಇವರ ಮನೆಯಂಗಳದಲ್ಲಿ ಬೆಳೆದ ಮಗಳನ್ನು ಸೊಸೆ ಮಾಡಿಕೊಳ್ಳುವುದೆಂದರೆ ಬಯಲು ಸೀಮೆ ಕಡೆಯವರಿಗೆ ಹಿರಿಹಿರಿ ಹಿಗ್ಗು. ಈಗ ಸ್ವಲ್ಪ ಪರಿಸ್ಥಿತಿ ಬದಲಾಯಿಸಿದೆ. ಎಲ್ಲರ ಆರ್ಥಿಕ ಸ್ಥಿತಿ ಬದಲಿಸಿದಂತೆ.

ಮುಳ್ಳಯ್ಯನ ಗಿರಿ ಚಂದ್ರದ್ರೋಣ ಪರ್ವತದ ತಪ್ಪಲಿನ (ಬಾಬಾ ಬುಡನ್‌ಗಿರಿ) ಕಡೆಯಿಂದಲೂ ಬೇಲೂರಿನ ಕಡೆಯಿಂದಲೂ ಮೂಡಿಗೆರೆಗೆ ಬಂದು ಹ್ಯಾಂಡ್‌ಪೋಸ್ಟ್‌ನಲ್ಲಿ ಹಾಯ್ದು ಕುದುರೆಮುಖ ತಲುಪುವವರೆಗೂ ಉದ್ದಕ್ಕೂ ಕಾಣಸಿಗುವುದು ಕಾಫಿತೋಟವೇ. ಸಾಮಾನ್ಯವಾಗಿ ಏಪ್ರಿಲ್, ಮೇನಲ್ಲಿ ಹೂವಿನ ಮಳೆ ಆಗುತ್ತೆ. ಈ ಮಳೆ ತೋಟದ ಮಾಲೀಕನನ್ನು ಆಡಿಸುತ್ತೆ ಕುಣಿಸುತ್ತೆ. ಒಳ್ಳೆ ಮಳೆ ಅಂದರೆ ಅಂದಾಜು ಒಂದು ಇಂಚು ಮಳೆಯಾದರೆ ಹೂ ಚೆನ್ನಾಗಿ ಅರಳುವ ನಿರೀಕ್ಷೆ ಇದ್ದರೂ ಸಾಕು, ಬ್ಯಾಂಕಿನ ಮುಂದೆ ಕ್ಯೂ ದೊಡ್ಡದಂತೆ, ಹೊಸ ಮಾಡಲ್‌ ಕಾರು ಕೊಳ್ಳಲೋ ಬದಲಿಸಲೋ ಹವಣಿಕೆಯಲ್ಲಿರುತ್ತಾರೆ. ಎಲ್ಲರಿಗೂ ಗೊತ್ತಿರುವ ವಿಷಯ ಮದುವೆ ಮಾರ್ಕೆಟ್ಟೂ ಕುದುರುತ್ತೆಂದು. ರಸ್ತೆಯಲ್ಲಿ ಸಿಕ್ಕಿದವರೆಲ್ಲಾ ನಿಮಗೆಷ್ಟಾತು ಮಳೆಯೆಂದು ವಿಚಾರ ವಿನಿಮಯ ಮಾಡಿಕೊಳ್ಳುವವರೆ.

ಈ ಹೂಮಳೆ ಬಂದು ಎಂಟು ಹತ್ತು ದಿನಗಳ ನಂತರ ಕಾಫಿ ಹೂ ಅರಳುತ್ತೆ. ಈಗ ನೋಡಿ ತೋಟದ ಗತ್ತೇ ಬೇರೆ. ಇದರ ಸೊಬಗು ಬಲು ಚೆಂದ. ಇಡೀ ನಾಡೇ ಸೊಬಗನ್ನು ಸೂಸುತ್ತಿರುತ್ತೆ. ಇದರ ಸುವಾಸನೆ ಹಿನ್ನೆಲೆ ತಂಬೂರಿ ಶ್ರುತಿಯಂತೆ ಎಲ್ಲೆಲ್ಲೂ ವಾತಾವರಣವೇ ಅದಾಗುತ್ತೆ. ಪಚೇಂದ್ರಿಯಕ್ಕೆ ಸಂತೋಷ ಕೊಡುತ್ತೆ. ಇದು ರಮಣೀಯ ದೃಶ್ಯ. ಕುವೆಂಪು ಅವರು ಹೇಳಿದಂತೆ ‘ಅದ್ಭುತ! ಹೂವಿನ ಚೆಲುವನ್ನು ಕಣ್ಣು ನೋಡಿ ಪೂರೈಸಲಾಗುವುದಿಲ್ಲ. ಹೂವಿನ ಕಡಲಿನ ಮಧ್ಯೆ ತೇಲಾಡಿ ಆ ಸೌಂದರ್ಯದಲ್ಲಿ ಓಲಾಡಿ ಆ ವೈಭವವನ್ನು ಅನುಭವಿಸಿಯೇ ಸವಿಯಬೇಕು!’ ಕಾಫಿ ಹೂ ಅರಳಿದಾಗ ಮುಂಜಾನೆಯಲ್ಲಿ ಮಧು ಹೀರಲು ಬರುವ ಜೇನಿನ ಜೇಂಕಾರಕ್ಕೆ ಓಂಕಾರವಾಗಿ ಬೇರೊಂದು ಲೋಕವೇ ತೆರೆದುಕೊಳ್ಳುತ್ತೆ. ಜೇನು ಮುತ್ತುವುದು ಪರಾಗ ಸ್ಪರ್ಶಕ್ಕೆ ಅತಿಮುಖ್ಯವಾದದ್ದು.

ಈ ಸಮಯದಲ್ಲೇನಾದರೂ ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ ಆವರಿಸುವುದೇ ಸೈ. ಆ ವರ್ಷದ ಇಳುವರಿ ಕಡಿಮೆಯಾಗುತ್ತೆನ್ನುವುದು ನಮ್ಮ ಅನುಭವವೇ ಆಗಿದೆ. ಈ ಹೂವಿನ ಜೇನು ತೆಳ್ಳಗೆ ನೀರಿನಂತೆ ಇರುತ್ತೆ. ಹೂವಿನ ಗಾಢ ಪರಿಮಳವೂ ಇರುತ್ತೆ. ತಿನ್ನಲು ನೆಕ್ಕಲು ಬಲು ರುಚಿ. ಬನ್ನಿ ಒಮ್ಮೆಯಾದರೂ ಅನುಭವಿಸಿ ಆನಂದಿಸಿರಿ ಈ ಅದ್ಭುತವನ್ನು.

ಹಂಗೂ ಹಿಂಗೂ ತೇಜಸ್ವಿ ಇಂಗು ತಂದದ್ದು

(ಫೋಟೋ:ತೇಜಸ್ವಿ)

ಕೆಲವೇ ಗಜಗಳ ಅಂತರದಲ್ಲಿ ಮೋಡದಿಂದುದುರುವ ಹೂವಿನ ಹನಿಗಳು ಏನೇನೇನೋ ವ್ಯತ್ಯಾಸಗಳನ್ನು ತರುತ್ತದೆ. ಒಬ್ಬರಿಗೆ ಒಳ್ಳೆಯ ಮಳೆಯಾದರೆ, ಪಕ್ಕದಲ್ಲೇ ಬೇಲಿಯಾಚೆಯವರು ಆಕಾಶದತ್ತಲೆ ಕಣ್ಣು ನೆಟ್ಟಿರುತ್ತಾರೆ. ಮೋಡ ಇಲ್ಲವಾ ನಿಟ್ಟುಸಿರೇ ಗತಿ. ಎಷ್ಟೋ ಬಾರಿ ಕರ್ರನೆ ಮೋಡ ಬಿರ್ರನೆ ಬಂದು, ಬಂತು ಮಳೆ ಅಂತ ಮನೆ ಪಕ್ಕದ ಕಟ್ಟೆ ಮೇಲೆ ನಿಂತು ನೋಡೋಣವೆಂದು ಓಡಿ ಬರುತ್ತಿದ್ದಂತೆ ಮೋಡವೂ ಓಡಿ ಹೊರಟೇ ಹೋಗುತ್ತೆ. ವಾರ ಹದಿನೈದುದಿನ ತಿಂಗಳು ಕಳೆದರೂ ಮೋಡ ಪತ್ತೆನೇ ಇರೋಲ್ಲ. ಆಗಿನ ನಿರಾಶೆ ಕೊಡಲಿ ಪೆಟ್ಟಿನಂತೆ. ಇದು ತಾಳ್ಮೆ ಕಲಿಸುತ್ತೆ. ಮತ್ತೆ ಹೂವಿನ ಮಳೆ ಬಂದು ಸಮಾಧಾನ ತರುತ್ತೆ. ಆದರೆ ಫಸಲಿನಲ್ಲಿ ವ್ಯತ್ಯಾಸವಾಗುತ್ತೆ.

ಹೂವರಳಿ ಒಂದು ವಾರ ಹದಿನೈದು ದಿನ ಕಳೆಯುವುದರಲ್ಲಿ ಈ ಕಾಫಿ ಪ್ಲಾಂಟರುಗಳು ಬಹಳ ಬಿಸ್ಸಿ ಆಗಿಬಿಡುತ್ತಾರೆ-ಬೇಡದೆ ಇರುವ ಎಂಗೇಜ್‍ಮೆಂಟುಗಳು, ಮದುವೆಮನೆ, ಬೀಗರೂಟ, ತಿಥಿ ಊಟ ಇತ್ಯಾದಿಗಳ ಸಂಭ್ರಮದಲ್ಲಿ. ಎಲ್ಲ ರೀತಿಯ ಶ್ರೀಮಂತಿಕೆಯ ಪ್ರದರ್ಶನ. ಅಂತಸ್ತು, ಐಶ್ವರ್ಯ ಗರ್ವಗಳ ಮೆರೆದಾಟ ಯಾವ ಎಗ್ಗೂ ಇಲ್ಲದೆ ನಡೆಯುತ್ತೆ. ಈ ಮೂಡಿಗೆರೆ ಒಂದು ವಿಚಿತ್ರ ‘ಊರು ಮಾರಾಯರ್ರೆ’. ಇಂಥ ಮಾತಿನ ಶೈಲಿ ಗಮನಿಸಿ ಏನೋ ಆತ್ಮೀಯತೆ ಅನ್ನಿಸೊಲ್ವೆ. ಈ ಊರಿನ ಪೇಟೆ ಅಂಗಡಿಯವರ ರೀತಿನೇ ಹಾಗೆ. ಕಳೆದ ವರ್ಷ ನಮ್ಮ ತೋಟದಲ್ಲಿ ಭರ್ಜರಿ ಮಾವಿನಕಾಯಿ ದೊಡ್ಡ ಸೈಜಿನವು ಹಿಡಿದಿತ್ತು. ಹೇಗೂ ಮಳೆಗಾಲಕ್ಕೂ ಬೇಕು. ಆಪ್ತರಿಗೂ ಕೊಡಲಿಕ್ಕಾಗುತ್ತೆಂದು ಹೆಚ್ಚಿಗೆನೇ ಉಪ್ಪಿನಕಾಯಿ ಹಾಕಿದ್ದೆ. ಆಂಧ್ರ ಬಗೆಯಂತೆ. ಒಗ್ಗರಣೆ ಬೇಕೆಂದು ನನ್ನವರಿಗೆ ಹೇಳಿ ಇಂಗು ತರಿಸಿಕೊಂಡೆ. ಯಾಕೋ ಚೆನ್ನಾಗಿಲ್ಲ ಅನಿಸಿತ್ತು.

ಒಳ್ಳೇದು ಕೊಡಿ ಮಾರಾಯ್ರೆ ಎಂದು ನಮ್ಮ ಮಾಮೂಲಿ ಮಾರ್ವಾಡಿ ದಿನಸಿ ಅಂಗಡಿಯಲ್ಲಿ ವಿಚಾರಿಸಿದ್ದಾರೆ ಇವರು. ಮುಂದಿನ ತಿರುವಿನಲ್ಲಿದ್ದ ಭಟ್ಟರ ಅಂಗಡಿಯಲ್ಲಿ ಇದೆಯೇ ಎಂದು ಕೇಳಿದ್ದಾರೆ. ಸ್ಟಾಕು ಖಾಲಿ ನಾಲ್ಕು ದಿನದಲ್ಲಿ ಕೋಡೋಣ ಅಂದರಂತೆ. ತುಸು ದೂರದಲ್ಲಿದ್ದ ಚೈತನ್ಯ ಭವನ ಹೋಟೆಲಿನವರನ್ನು ಕೇಳಿದಾಗ ಬೊಂಬಾಯಿಂದ ತರಿಸಿ ಕೊಡ್ತೇವೆಂದರು. ಇವರಿಗೆ ಖಾಲಿ ಕೈಯಲ್ಲಿ ಬಂದೆನಲ್ಲ ಎಂದು ಬೇಸರ. ನಾನು ಉಪ್ಪಿನಕಾಯಿಗೆ ಒಗ್ಗರಣೆ ಹಾಕುವುದೇ ಮರೆತೆ.

ಮಂದಿನವಾರ ಅರ್ಜೆಂಟ್‌ನಲ್ಲಿ ಪೋಸ್ಟಾಫೀಸು ಕೆಲಸ ಪೂರೈಸಲೆಂದು ಪೇಟೆ ಬೀದಿಗೆ ಸ್ಕೂಟರ್ ತಿರುಗಿಸಿದಾಗ ಕೈ ಚಪ್ಪಾಳೆ ತಟ್ಟಿದಂತಾಯಿತು. ವಿಚಾರಿಸಲಾಗಿ ಮಾರ್ವಾಡಿ ಅಂಗಡಿಯವರು ಒಳ್ಳೆ ಇಂಗು ಬಂದಿದೆ ಸಾರ್ ಅಂದರಂತೆ. ಅರ್ಜೆಂಟ್ ಕೆಲಸ ಪೂರೈಸಿ ಬರುತ್ತೇನೆಂದು ಹೇಳಿ ಇನ್ನೊಂದು ಸಣ್ಣ ತಿರುವು ತಗೊಳ್ಳುತ್ತಿದ್ದಂತೆ ‘ಸಾರ್’ ಎಂದು ಯಾರೋ ಕೂಗಿದಂತಾಯಿತು. ಇವನಿಗೆ ಹಿಂದಿನ ಉತ್ತರವೇ, ಚೈತನ್ಯ ಭವನದ ಮುಂದೆ ಹೋಗಬೇಕು. ಅವರು ಒಂದು ಜನ ನೇಮಿಸಿ ನಿಮಗೆ ಒಳ್ಳೆ ಇಂಗು ಬೊಂಬಾಯಿಂದ ಬಂದಿದೆ ಸಾರ್ ಎಂದರಂತೆ. ಇವನಿಗೆ ಉತ್ತರ ಹೇಳುವಷ್ಟರಲ್ಲಿ ಒಂದು ಪುಟ್ಟ ಹುಡುಗ ಓಡೋಡಿ ಬಂದು ಏದುಸಿರು ಬಿಡುತ್ತ ಸ್ಕೂಟರಿಗೆ ಅಡ್ಡಲಾಗಿ ನಿಂತು ನಮ್ಮಂಗಡಿಗೆ ಬರಬೇಕಂತೆ ಸಾರ್ ಒಳ್ಳೆ ಇಂಗು ಬಂದಿದೆ ಎಂದ. ಇವರು ನಕ್ಕು ಆಗಲಿ ಎಂದು ತಮ್ಮ ಕೆಲಸದತ್ತ ಹೊರಟರು. ಮನೆಗೆ ಇಂಗಿನ ಸರಕು ಬಂದು ಬಿತ್ತು. ಇಂಗು ತಿಂದ ಮುಖ ಮಾಡಬೇಕಾದವಳು ನಾನೋ ಅವರೋ ಗೊತ್ತಾಗಲಿಲ್ಲ. ಇಲ್ಲಿನ ಅಂಗಡಿಯವರೇ ಹೀಗೆ. ಅದಕ್ಕೇ ನಮಗೆ ಮೂಡಿಗೆರೆ ಅಂಗಡಿ ಬೀದಿ ಎಂದರೆ ಬಲು ಇಷ್ಟ.

ಈ ಪ್ಲಾಂಟರುಗಳ ಹಮ್ಮುಬಿಮ್ಮಿನ ಬಣ್ಣ ಮತ್ತು ತಾಲೂಕಿನ ಹಣ ಬೆಂಗಳೂರಿಗೆ ಹರಿದಷ್ಟೂ ಢಾಳಾಗಿ ಕಾಣುತ್ತೆ. ಇರಲಿ. ಇವರು ತಮ್ಮ ವ್ಯವಹಾರಕ್ಕೆ ಬ್ಯಾಂಕಿಗೆ, ತಾಲೂಕು ಆಫೀಸಿಗೆ ವಗೈರೆಗೆ ಮೂಡಿಗೆರೆ ಪೇಟೆಗೆ ಬರಬೇಕು. ಇಲ್ಲಿ ಸರ್ಕಾರಿ ನೌಕರರೆಲ್ಲ ಹೆಚ್ಚಾಗಿ ಹೊರ ಊರಿನವರೇ. ವರ್ಗವಾಗೋ ಅಥವಾ ಇನ್ನೇನಿಕ್ಕೊ ಒಂದಲ್ಲ ಒಂದಿನ ಊರು ಖಾಲಿ ಮಾಡುವವರೇ. ಆದರೂ ಒಂತರ ಗೌರವ ಅವರ ಬಗ್ಗೆ ಎಲ್ಲರಿಗೂ. ಜೂನ್ ಶುರುವಿಗೆ ಮುಂಚೆ ಜೀರ್ ಜೀರ್ ಎಂದು ಜೀರುಂಡೆ ಸದ್ದು ಮಾಡುತ್ತಲೇ ಇದ್ದು ಮಳೆ ಕರೆಯುತ್ತಿರುತ್ತವೆ. ‘ಮಳೆ ಬಿಲ್ಲು ಹಕ್ಕಿಗಳು’ ಕೂಗುತ್ತಾ ಹಾರುತ್ತಾ ಮಳೆ ಬರುವ ಮುನ್ಸೂಚನೆ ಕೊಡ್ತವೆ. ಆದರೂ ಈಗ ಬರುವ ಆರ್ದ್ರಾ ಮಳೆ ಆದ್ರೆ ಆಯ್ತು ಹೋದ್ರೆ ಹೋಯ್ತು. ಗುಡುಗು ಮಿಂಚು, ಸಿಡಿಲಬ್ಬರದಿಂದಾಗಿ ಎಷ್ಟೋ ಟಿವಿ, ಫ್ರಿಜ್ ಮಲಗಿ ಹೋಗಿರುತ್ತಂತೆ. ಸೋನೆ ಜಿಬಿರಿನ ಜಿಟಿಜಿಟಿ ಮಳೆಯ ನಿರೀಕ್ಷೆ ಎಲ್ಲರಲ್ಲಿ. ವಾರ ಕಳೆಯುವಷ್ಟರಲ್ಲಿ ಮಳೆ ಬಂದೇ ಬಿಡ್ತು ಅನ್ನಿ. ಅದಕ್ಕೆ ಹೊಂದಿಕೊಳ್ಳಲು ಒಂದೆರಡು ದಿನಬೇಕು.

(ಮಳೆಗಾಗಿ ಹಂಬಲಿಸಿದ್ದವರು ಹೆದರಿ ನಡುಗುವ ತರ ಅಂತೂ ಮಳೆಗಾಲ ಉಜ್ಜುವ ಗರಗಸದಂತೆ ಎಡೆಬಿಡದೆ ಹಿಡಿದೇ ಬಿಟ್ಟಿತು.ವ್ಯಕ್ತಿಗಳೆಲ್ಲ ತಮ್ಮ ಹೆಸರು ಕುಲಗೋತ್ರಗಳನ್ನು ಕಳದುಕೊಂಡು ಕೊಡೆಗಳಾಗಿ ಹೋದರು-ತೇಜಸ್ವಿ)

ಏನೋ ಕಿರಿಕಿರಿ ಏನೊ ಅಸಹನೆ ಅದರ ಬಗ್ಗೆ. ಮಳೆ ಬರಲಿಲ್ಲವ ತಿರಗೋ ಚಟ ಮುಂದುವರಿಯುತ್ತೆ. ಅಷ್ಟರಲ್ಲಿ ಮೂಡಿಗೆರೆಯ ಮೇಲೊಂದು ಕಾಳಮೇಘ ಹೆಪ್ಪುಗಟ್ಟಿ ಮಳೆ ಸುರಿಸಲಿಕ್ಕೆ ಸಿದ್ಧ. ಪರಿಸರದಲ್ಲಿನ ಆಗುಹೋಗುಗಳ ರೂಪುರೇಶೆಯನ್ನು ತನ್ನ ಒಡಲೊಳಗೆ ಇಟ್ಟುಕೊಂಡು ತನ್ನ ಆರ್ಭಟ ತೋರಿಸುತ್ತೆ. ಜುಲೈ ಆಗಸ್ಟ್‌ದಲ್ಲಿನ ಈ ಪುರ್ನವಸು ಮಳೆ ‘ಹೆಣನ ಹೊರಗಿಡಲೂ ಬಿಡಲೊಲ್ಲ’ದಂತೆ. ಒಂದು ನಿಮಿಷವೂ ಪುರುಸೊತ್ತಿಲ್ಲದೆ ಹೊಯ್ಯುತ್ತೆ. ಇನ್ನು ರಿಪೇರಿ ಮಾಡಲು ಸಾಧ್ಯವೆ ಇಲ್ಲವೆಂಬಂತೆ, ಆಕಾಶ ತೂತು ಬಿತ್ತೋ ಏನೋ ಎಂಬಂತೆ. ಇದು ವರ್ಷದಲ್ಲಿನ ಅತ್ಯಧಿಕ ಮಳೆಯ ದಿನಗಳೆಂದು ಹೇಳಬಹುದು.

ಈಗ ನಮ್ಮ ಬದುಕಿನ ಚಿತ್ರಪಟದಲ್ಲಿ ದಿಢೀರ್ ಬದಲಾವಣೆ ಕಾಣುತ್ತೇವೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಸುರಿವ ಮಳೆ, ಸೂರ್ಯ ಕಾಣಸಿಗುವುದೇ ಇಲ್ಲ. ಜೊತೆಗೆ ಆಷಾಢದ ಗಾಳಿಯ ಬೀಸಿನ ಮಸಲತ್ತು ಹೇಳುವಂತಿಲ್ಲ. ರೊಯ್ಯೋ ಅಂತ ಸುರಿವ ಮಳೆ ಒಂದೈದು ನಿಮಿಷ ತೆಳ್ಳಗಾಗುತ್ತಿದ್ದಂತೆ ಇನ್ನೂ ಜೋರಾಗಿ ಮಳೆ ಹುಚ್ಚೇಳುತ್ತೆ. ಒಂದೇ ದಿನದಲ್ಲಿ ಹದಿನೆಂಟು ಇಂಚು ಮಳೆ ಬಂದಿರೋದನ್ನೂ ನಾನು ನೋಡಿರುವೆನು. ಐದಾರು ಇಂಚು ಬರುವುದು ಸರ್ವೇ ಸಾಮಾನ್ಯ. ಇಂತಹ ದೊಡ್ಡ ಮಳೆಗಳು ಇಲ್ಲಿ ಬಂದರಷ್ಟೇ ಅಲ್ಲಿ ನಮ್ಮ ದೊಡ್ಡ ದೊಡ್ಡ ಜಲಾಶಯಗಳು ತುಂಬುವುದು. ಈ ತರ ಭಾರೀ ಮಳೆಯಿಂದಾಗಿ ಇಲ್ಲೆಲ್ಲ ಹೆಂಚಿನ ಮನೆಗಳೇ. ಮಾಳಿಗೆ ಇಳಿಜಾರಾಗಿದ್ದು ಮಳೆ ನೀರು ಸುಲಭದಲ್ಲಿ ಹರಿದು ಹೋಗುತ್ತೆ. ಹಾಗಾಗಿ ನಗರದ ಸಮಸ್ಯೆ ನಮಗಿಲ್ಲ.

ನಮ್ಮ ಮನೆಯ ಸನಿಹದಲ್ಲೇ ನೂರಿನ್ನೂರು ವರ್ಷದಷ್ಟು ದೊಡ್ಡದೊಡ್ಡ ಮರಗಳಿವೆ. ಅವಕ್ಕೆ ತಾಗಿದಂತೆಯೇ ಹತ್ತಿಪ್ಪತ್ತು ವರ್ಷದ ಚಿಕ್ಕ ಮರಗಳಿವೆ. ಆಷಾಢ ಗಾಳಿ ಬೀಸುವ ಹೊಡೆತಕ್ಕೆ ಸಣ್ಣ ಮರಗಳು ಒಂದಕ್ಕೊಂದು ತಿಕ್ಕಿದಂತೆ ಯಾರೋ ರೋದನ ಮಾಡಿದಂತಿರುತ್ತೆ. ಯಾರಿಗೆ ಏನು ಸಂಕಷ್ಟ ಬಂದಿದೆಯೋ ಎಂದು ಗಾಬರಿಗೊಳಿಸುವ ಸದ್ದು. ಕಾಫಿ ಗಿಡಗಳಿಗೆ ನೆರಳಿಗಾಗಿ ಸಿಲ್ವರ್ ಗಿಡಗಳನ್ನು ಬೆಳೆಸಿರುತ್ತೇವೆ. ಇವು ಎತ್ತರೆತ್ತರಕ್ಕೆ ಬೆಳೆದಿರುತ್ತವೆ. ಇವು ಜೋರುಗಾಳಿಗೆ ನೆಲಮಟ್ಟಕ್ಕೆ ಬಿದ್ದು ಏಳುವ ದೃಶ್ಯ ಭೀಕರ ಮತ್ತು ಈ ರುದ್ರ ರಮಣೀಯ. ಆ ದೃಶ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತೆ. ರೆಂಬೆ ಕೊಂಬೆಗಳು ತಿರುಚಿ ತಿರುಚಿ ಬೀಳುತ್ತಿರುತ್ತೆ. ಮಳೆಯ ಭೋರ್ಗರೆತ ಹೆಚ್ಚುತ್ತಲೇ ಇರುತ್ತೆ. ಇದೇ ಮಲೆನಾಡಿನ ಮುಂಗಾರು. ಸಿನೆಮಾ ಮುಂಗಾರು ಮಳೆಯಂತಲ್ಲ. ಇಂತಹ ಗಾಳಿ ಮಳೆಯಿಂದಾಗಿ ಎಲ್ಲೆಲ್ಲೋ, ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಮರಗಳು ಬೀಳುತ್ತಿರುತ್ತವೆ. ಆಗ ಕೆ.ಇ.ಬಿ. ಇಲಾಖೆಯವರಿಗೆ ಭರ್ತಿ ಕೆಲಸ ಮತ್ತು ಎಲ್ಲರ ಬೈಗಳಕ್ಕೆ ತುತ್ತಾಗುವ ಮೊದಲ ಇಲಾಖೆ. ಎಂಟ್ಹತ್ತು ದಿನವಾದರೂ ಇಂಟೀರಿಯರ್ ಗ್ರಾಮಗಳಲ್ಲಿ ಕರೆಂಟು ಇರೊಲ್ಲ. ಟೆಲಿಫೋನ್ ಸಂಪರ್ಕವೂ ಕಟ್. ಇಲ್ಲಿಗೆ ನಮ್ಮ ನಮ್ಮ ಸಂಪರ್ಕವೂ ಕಟ್.

ಮೂಡಿಗೆರೆಯ ಕಾರ್ಗಾಲದ ಮೋಡಿ

ಜುಲೈ ತಿಂಗಳ ಮಧ್ಯ ಭಾಗ, ಧೋ ಎಂದು ಒಂದೇ ಸಮ ಸುರಿಯುವ ಮಳೆ. ಬರ್ರೋ ಎಂದು ಬೀಸುವ ಗಾಳಿ. ಯಾಕಾದರೂ ಈ ಗಾಳಿ ಮಳೆ ಹೀಗೆ ಎಂದೆನಿಸುತ್ತೆ. ಕಣ್ಣಿಗೆ ನಿದ್ರೆ ಹತ್ತೊಲ್ಲ. ನಾಳೆ ಬೆಳಿಗ್ಗೆ ಏನೇನು ಕಷ್ಟಕಾರ್ಪಣ್ಯಗಳು ಕಾದಿವೆಯೋ ಎಂಬ ಕಾತುರತೆ. ಮನೆ ಹಿಂದೆ ಇರುವ ಕೆರೆ ತುಂಬಿ ಕಟ್ಟೆ ಏನಾದರು ಒಡೆದುಹೋದರೆ ದೇವರೇ ಗತಿ. ತೋಟಕ್ಕೆ ನೀರು ನುಗ್ಗಿ ಮುಂದಿನ ಫಸಲೂ ಕೈಕೊಡುತ್ತಲ್ಲ.. ಹೀಗೆ ಏನೇನೋ ಭಯ ಮಿಶ್ರಿತ ಗಾಬರಿ. ನಮ್ಮ ರೈಟ್ರು ಶಿವನ್ನಾದರೂ ಕರೆಯೋಣೆಂದರೆ ಗಾಳಿಮಳೆಗೆ ಎಷ್ಟು ಕೂಗು ಹಾಕಿದರೂ ಕೇಳಿಸೋಲ್ಲ. ಕೈ ಮೈಯೆಲ್ಲ ಮೆತ್ತಿಕೊಂಡ ಮಸಿಯಂತೆ ಕಗ್ಗತ್ತಲು ಬೇರೆ.

ಈಗ ಕೈ ಕಟ್ಟಿ ಕೂರುವ ಸಮಯವಲ್ಲೆಂದು ಮನಗಂಡು ಗಟ್ಟಿ ಗುಂಡಿಗೆಯ ತೇಜಸ್ವಿ ಎದ್ದು ಟಾರ್ಚು ತಗೊಂಡು ಹೊರಟೇ ಬಿಟ್ಟರು ಮಳೆಯಲ್ಲಿ. ಕೆರೆ ಸುತ್ತಾ ಬರ್ತಾರಂತೆ, ಕೆರೆ ತುಂಬಿದೆ. ಇನ್ನು ಹೀಗೇ ಮಳೆ ಸುರಿದು ಕೆರೆ ದಂಡೆ ಮೇಲೆ ನೀರು ಹೋದರೆ, ಕೆರೆ ತುಂಬುವುದಕ್ಕೂ ಮುಂಚೆ ನೀರು ಹರಿದು ಹೋಗಲಿಕ್ಕೆ ತೂಬಿನ ಕಡೆ ಬಂದು ಕಸಕಡ್ಡಿ ಹುಲ್ಲು ಬೆಳೆದಿರುವುದನ್ನು ಬಿಡಿಸಿ ಸರಿಪಡಿಸುವ ಹೊತ್ತಿಗೆ ಶಿವನೂ ಹಾರೆ ತಂದು ಕೈಹಾಕಿದ. ನೀರು ಸರಾಗ ಹರಿಯಲಿಕ್ಕಾಯಿತು.

(ತೇಜಸ್ವಿ ಕ್ಯಾಮರಾದಲ್ಲಿ ಕಾರ್ಗಾಲದ ಮೂಡಿಗೆರೆ)

ಇನ್ನೊಂದು ಬೆಳಗಿನ ಜಾವ ನಿದ್ದೆ ಒತ್ತರಿಸಿ ಬರುತ್ತಿದೆ. ಬೆಚ್ಚಿ ಬಿದ್ದು ಎದ್ದೆ. ಏನೋ ಸದ್ದು, ಏನೋ ಬೀಳುತ್ತಲೇ ಇರುವ ಸದ್ದು. ಏನೋ ಅಪಾಯ ಇದೆ ಎಂಬ ಹೆದರಿಕೆ. ಎದ್ದು ಹೋಗಿ ನೊಡೋಣೆಂದು ಬಾಗಿಲು ತೆಗೆದು ಮುಖ ಹೊರಗೆ ಹಾಕುತ್ತಿದ್ದಂತೆ ರೊಯ್ಯೋ ಅಂತ ಬೀಸಿದ ಗಾಳಿ ಮುಖವನ್ನೇ ದಬ್ಬಿತು. ರಪ್ಪಂತ ಬಡಿಯಿತು ಬಾಗಿಲು. ಎತ್ತರದಿಂದ ನೀರು ಬೀಳುವ ಸದ್ದು ಮನೆ ಪಕ್ಕದಲ್ಲೇ. ಮಳೆ ಚೂರು ಕಡಿಮೆಯಾಗಲೆಂದು ಕಾದೆ. ಮೆಲ್ಲನೆ ಬಾಗಿಲು ತೆಗೆದೆ. ವೆರಾಂಡ ಪೂರ್ತಿ ಗಾಳಿಗೆ ಬಂದು ಬಿದ್ದ ಎಲೆ ಕಸ ಮರದ ಗೆಲ್ಲುಗಳಿಂದ ತುಂಬಿತ್ತು. ಬೀಳುವ ನೀರಿನ ಸದ್ದು ತೀರ ಹತ್ತಿರದಲ್ಲೇ ಸ್ಪಷ್ಟವಾಗಿ.

ಇದರ ಕಾರಣ ಕಣ್ಣ ಮುಂದೆ ಬಂತು. ಪ್ರಕೃತಿಯದೇ ಒಂದು ನಿಯಮವಿರುತ್ತೆ. ಮನುಷ್ಯ ಅದಕ್ಕೆ ಹೊಂದಿಕೊಂಡು ಸರಿ ತೂಗಿಸಿಕೊಂಡು ಕೆಲಸ ಮಾಡಿದರೆ ಎಲ್ಲವೂ ಸುಸೂತ್ರ. ಇಲ್ಲದಿದ್ದಲ್ಲಿ ಅನಾಹುತ ಇದ್ದಿದ್ದೇ. ನಮ್ಮ ಬೇಲಿಗಂಟಿಕೊಂಡೇ ತೋಟಗಾರಿಕೆ ಕಾಲೇಜು ಇದೆ. ನಮ್ಮ ಬೇಲಿಯ ಪಕ್ಕ ಚರಂಡಿ ಹೊಡೆದಿರುತ್ತೇವೆ, ಮಳೆ ನೀರು ಹರಿದು ಹೋಗಲು. ಈ ಕಾಲೇಜಿನವರು ಆ ಗುಡ್ಡದ ಭಾಗದಲ್ಲಿ ಬುಲ್ಡೋಜರ್ ಹೊಡೆಸಿದ್ದರು. ನೆಲ ಸಮತಟ್ಟು ಮಾಡಿ ಗಿಡ ನೆಡಲು. ನಮ್ಮ ಚರಂಡಿ ಮುಚ್ಚಿ ಹೋಗಿ ಮಳೆನೀರು ಎರ್ರಾಬಿರ್ರಿ ನುಗ್ಗಿ  ಆ ಇಳಿಜಾರಿನಲ್ಲಿ ಒಂದು ಜಲಪಾತವೇ ಸೃಷ್ಟಿಯಾಯಿತು. ಗುಡ್ಡದ ಇಳಿಜಾರಿನಲ್ಲಿ ಕಾಫಿ ತೋಟ, ಗುಡ್ಡದ ಕಣಿವೆ ಸಾಲುಗಳಲ್ಲಿ ಏಲಕ್ಕಿ ತೋಟ ಮಾಡಿರುತ್ತೇವೆ. ಜಲಪಾತದಿಂದಾಗಿ ಮಣ್ಣು ಕುಸಿದು, ಕಾಫಿ ಗಿಡಗಳು ಮಣ್ಣಾದವು. ಏಲಕ್ಕಿ ಗಿಡ ನೆಟ್ಟಿದ್ದ ಕುರುಹೂ ಇಲ್ಲವಾಗಿತ್ತು. ನಮ್ಮ ಕೆಲಸಗಾರರನ್ನೇ ಕರೆದುಕೊಂಡು ಹೋಗಿ ಆ ಚರಂಡಿಯನ್ನು ಸರಿಪಡಿಸಿಕೊಳ್ಳಬೇಕಾಯಿತು.

ಇನ್ನೊಂದು ಮಳೆಗಾಲ. ಮಳೆ ಕಡಿಮೆಯಾಗುತ್ತಲೇ ಇಲ್ಲ.  ಎಷ್ಟೆಲ್ಲಾ ಅನಾಹುತವಾಗುತ್ತಿದೆ, ಏನು ಕತೆ? ತೋಟದ ಒಳಗೆ ಅಲ್ಲಲ್ಲಿ ದಾರಿ ಮಾಡಿರುತ್ತಾರೆ. ಕೆಲಸ ಮಾಡಲು ಅನುಕೂಲವಾಗುವ ದೃಷ್ಟಿಯಿಂದಲೂ ಮತ್ತು ಮಳೆ ನೀರು ಹರಿದು ಹೋಗಲು ಚರಂಡಿ ಮಾಡಬೇಕಾಗುತ್ತೆ. ಜೋರಾದ ಆಷಾಡ ಗಾಳಿಗೆ ಸಿಲ್ವರ್ ಮರಗಳು ಅಲ್ಲಾಡಿ ಮಣ್ಣು ಜಾಲಾಡಿ ಜರಡಿಯಂತಾಗಿರುತ್ತೇನೋ, ಬುಡದಲ್ಲಿ ಅಲ್ಲಲ್ಲಿ. ಜೋರು ಮಳೆಗೆ ನೀರು ನುಗ್ಗಿದ ಹೊಡೆತಕ್ಕೆ ಅಲ್ಲೊಂದು ಸಣ್ಣಕ್ಕೆ ಆದರೆ ಆಳವಾಗಿ ಕೊರಕಲು ಬಿದ್ದಿದೆ. ಅಲ್ಲಿ ಭೂಮಿಯ ತಳದ ಒಡಲಲ್ಲಿ ನೀರು ಹರಿಯುತ್ತಿದೆ. ಇದನ್ನು ಸರಿಪಡಿಸಲು ದೊಡ್ಡ ಮೊತ್ತದ ಖರ್ಚು, ಸರಿಪಡಿಸದಿದ್ದರೆ ಇನ್ನೂ ಅನಾಹುತ. ಮಳೆ ಬಿಡುವು ಕೊಡುವುದನ್ನೇ ಕಾದು ಆ ಕೊರಕಲು ತುಂಬಿಸಿದ್ದಾಯ್ತು. ಮೂರು ಟ್ರಾಕ್ಟರ್ ಲೋಡು ಗ್ರಾವೆಲ್ಲು ಮಣ್ಣೂ ಸಾಲದಾಯಿತು.

ಮಲೆನಾಡಿನ ಮುಂಗಾರೇ ಹೀಗೆ. ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಮಳೆ ಇಷ್ಟಾದರೂ ತೋಟದ ಕೆಲಸ ನಡೆದೇ ನಡೆಯುತ್ತೆ. ಇಂತಹ ಮಳೆಯಲ್ಲೂ ಕೆಲಸಾನ? ಹೇಗಾದರೂ ಕೆಲಸ ಮಾಡುವರೆಂದು ಮೂಗು ಮುರಿಯುವಿರಾ? ಹ್ಹು. ಮಾಡದೆಯಿದ್ದರೆ ತೋಟ ಹಾಳು ಬೀಳುವ ಲೆಕ್ಕಾಚಾರ. ಮಳೆಗಾಲದಲ್ಲಿ ತೋಟದ ಕಾರ್ಮಿಕರ ಉಡುಪು ವಿಶಿಷ್ಟ. ಕಂಬಳಿಯನ್ನು ತಲೆಯ ಮೇಲಿಂದ ಇಳಿಬಿಟ್ಟು ಅದರ ಮತ್ತೊಂದು ತುದಿಯಿಂದ ಮೈ ಮುಚ್ಚುವಂತೆ ಕೊಪ್ಪೆಯ ಹಾಗೆ ಹೊದ್ದಿರುತ್ತಿದ್ದರು. ಹೆಂಗಸರು ಸೀರೆಯನ್ನು ಮಂಡಿ ಮೇಲಕ್ಕೆತ್ತಿ ಕಟ್ಟಿರುತ್ತಿದ್ದರು. ಮಳೆಗೆ ಒದ್ದೆಯಾಗದಂತೆ. ಹಾಗೆಯೇ ಕಳೆದ ವರ್ಷದ ಕಂಬಳಿ ಸೊಂಟಕ್ಕೆ ಮಿಡಿಯಂತೆ ಸುತ್ತಿರುತ್ತಿದ್ದರು. ಗಂಡಸರ ಉಡುಪು ಚಡ್ಡಿ ಅಥವ ಪಂಚೆ. ಅದೇ ರೀತಿ ಕಂಬಳಿ ಕೊಪ್ಪೆ. ಈ ಕಂಬಳಿಯನ್ನು ತೋಟದ ಸಾಹುಕಾರ್ರೇ ಮಳೆ ಶುರುವಾಗುತ್ತಿದ್ದಂತೆಯೇ ಕೊಡಬೇಕಾಗಿತ್ತು. ಇದಕ್ಕಾಗೇ ಬಂಡ್ಲುಗಟ್ಟಲೆ ಒರಟು ಕಂಬಳಿ ಮೂಡಿಗೆರೆ ಸೊಸೈಟಿಗೆ ಬಂದು ಬೀಳುತ್ತಿತ್ತು. ಈಗ ಪ್ಲಾಸ್ಟಿಕ್ಕು ಆವರಿಸಿದೆ.

(ಫೋಟೋ:ತೇಜಸ್ವಿ)

ಇಂತಹ ಕಂಬಳಿ ನೇಯುವ ಉದ್ದಿಮೆಯೇ ಈಗ ಇಲ್ಲ. ನೇಯುತ್ತಿದ್ದವರು ಈಗ ಸಿಕ್ಕಿದ ಕೆಲಸಕ್ಕೆ ಹೋಗುವಂತಾಗಿದೆ. ತೋಟದ ಮಾಲೀಕನನ್ನು ಸಾಹುಕಾರ್ರೆ ಎಂದೇ ಆಳುಗಳು ಕರೆಯುತ್ತಿದ್ದರು. ಈ ಮಾಲೀಕ ಎಷ್ಟೇ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದ್ದರೂ ಸಂಬಳ ಕೊಡಲು ಕಷ್ಟದಲ್ಲಿದ್ದರೂ ಸಾಹುಕಾರನೇ ಆಗಿರುತ್ತಿದ್ದ ಇವರ ಬಾಯಲ್ಲಿ. ಹಳೆಯ ತಲೆಮಾರಿಗಾಯಿತು ಈ ಪದ ಬಳಕೆ. ಈಗ ಎಲ್ಲರೂ ಸಾರ್ ಎಂದೇ ಕರೆಯುತ್ತಾರೆ. ಅಕ್ಷರಾಭ್ಯಾಸದ ತಿಳುವಳಿಕೆಯ ಪರಿಣಾಮ. ಕಂಬಳಿಗೆ ಬದಲಿಗೆ ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಕೊಡುತ್ತಾರೆ. ಅದನ್ನೇ ಕೊಪ್ಪೆಯ ಹಾಗೇ ಹಾಕಿಕೊಂಡು ತೋಟದಲ್ಲಿ ಕೆಲಸ ಮಾಡುತ್ತಾರೆ. ಒಂದು ಕತ್ತಿ, ಉದ್ದ ತಗಡು ಪ್ರತಿ ಆಳಿಗೂ ಕೊಡುತ್ತಾರೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ತೋಟದಲ್ಲಿ ಬೆಳೆದ ಹಳು ತೆಗೆಯುವ ಕೆಲಸವಿರುತ್ತೆ. ಗಾಳಿ ಜೋರಿದ್ದಾಗ ಮರದ ಕೊಂಬೆ, ಗೆಲ್ಲುಗಳೂ ತುಂಡಾಗಿ ಬೀಳುವುದುಂಟು. ಆಗ ಅಪಾಯವೂ ಉಂಟು. ಅಂತಹ ದಿನಗಳಲ್ಲಿ ಒಂದೆರಡು ದಿನ ಮನೆಯಲ್ಲೇ ಕೂರುತ್ತಾರೆ. ಉಳಿದಂತೆ ಕೆಲಸಕ್ಕೆ ಬರಬೇಡಿರೆಂದರೂ ಬರುತ್ತಾರೆ. ಕೂತರೆ ಅವರ ಅನ್ನಕ್ಕೆ ಅವರೇ ಕಲ್ಲು ಹಾಕಿಕೊಂಡಂತೆ.

ಈ ಗಾಳಿ ಮಳೆ ಕಾಟ ಒಂದೆರಡಲ್ಲ. ಕಳ್ಳರೂ ಬೀಳುವುದುಂಟು. ಗಾಳಿ ಮಳೆ ಕತ್ತಲೆ ಒಳ್ಳೆಯ ಕಾಲ ಅವರಿಗೆ. ಗಾಳಿಯ ಅಬ್ಬರವಿದ್ದಾಗ ಇನ್ನೇನು ಜೊಂಪು ಹತ್ತಿದೆ. ಇನ್ನೂ ಜೋರಾಯಿತು ಮಳೆ ಗಾಳಿ, ನಮ್ಮ ಎರಡು ನಾಯಿಗಳು ಯಾರನ್ನೋ (ಗಾಳಿಯನ್ನೇ) ಅಟ್ಟಿಸಿಕೊಂಡು ಹೋಗುವಂತೆ ಬೊಗಳಿ ಓಡಿದ ಸದ್ದು. ಬರೀ ಮಳೆ ಗಾಳಿ. ಬೆಳಿಗ್ಗೆ ನೋಡಿದರೆ ಬಾಗಿಲಲ್ಲಿ ಇಟ್ಟಿದ್ದ ಎರಡು ಛತ್ರಿ ಇಲ್ಲ. ಒಂದೆರಡು ಸ್ಪ್ರಿಂಕ್ಲರ್ ಪೈಪೂ ಇಲ್ಲ. ಮಾರನೆ ದಿನ ಗೊತ್ತಾಯ್ತು ಆ ಕಡೆ ಪಕ್ಕದಲ್ಲೇ ತೋಟದಲ್ಲೇ ಕಳ್ಳರು ಜಾಂಡಾ ಹೂಡಿದ್ದಾರೆ. ನಾಲ್ಕು ಕಡೆ ಗೋಲು ಮಾಡಿಕೊಂಡು, ಬಾಳೆ ಮರ ತುಂಡಾಗಿ ಏಲಕ್ಕಿ ಗಿಡಗಳಿಗೆ ಕತ್ತಿ ಪ್ರಯೋಗ ಮಾಡಿದ ಒಂದು ಅಡಗು ತಾಣವಿದೆ. ಗಾಳಿ ಮಳೆಯಿಂದ ರಕ್ಷಣೆ ರಾತ್ರಿಗೆ.

ಇಂತದೇ ಮತ್ತೊಂದು ಕಗ್ಗತ್ತಲು ರಾತ್ರೆ. ಇನ್ನೂ ನಿದ್ದೆ ಬಂದಿಲ್ಲ. ಕಿಟಕಿಗೆ ಯಾರೋ ಟಾರ್ಚು ಬಿಡುತ್ತಿದ್ದಾರೆ. ಹೆದರಿ ನೀರಾದೆ. ಆ ಬೆಳಕು ಪಕ್ಕದ ಕಿಟಕಿಗೂ ಹೋಯ್ತು. ಇನ್ನೂ ಹೆದರಿಕೆ ಹೆಚ್ಚಾಯ್ತು. ಎದೆ ಡವಡವ ಗುಟ್ಟಿತು. ಎಲ್ಲಾ ಎದುರಿಸಬೇಕಲ್ಲಾ. ಗಟ್ಟಿ ಮನಸ್ಸು ಮಾಡಿ ಎದ್ದು ಕೂತೆ. ಟಾರ್ಚು ಬೆಳಕು ದೂರ ಸರಿಯಿತು. ಮೆಲ್ಲಕೆ ಎದ್ದು ನಿಂತೆ. ಇನ್ನೂ ದೂರ ದೂರ ಹೋಯಿತು ಬೆಳಕು. ಸುಸ್ತು ನಾನು. ಅಷ್ಟರಲ್ಲಿ ಜಗ್ ಜಗ್ ಬೆಳಕು ಹತ್ತಾರು ಆಯಿತು. ಅಯ್ಯೋ ಮಿಣುಕು ಹುಳವೇ!!

 

(ಮುಂದುವರಿಯುವುದು)
0
1