ಎಂಬತ್ತೈದು ವರ್ಷ ವಯಸ್ಸಿನ ಹವರ್ಡ್ ಝಿನ್ ತನ್ನನ್ನು ಅನಾರ್ಕಿಸ್ಟ್ ಎಂದು ಕರೆದುಕೊಳ್ಳುವವ. ಅವನು ಗಾಂಧಿಯಲ್ಲಿ ಅನಾರ್ಕಿಸ್ಟ್ ಗುಣ ಕಾಣುತ್ತಾನೆ. ನಾನು ಯೋಚಿಸುತ್ತೇನೆ.

ಅನಾರ್ಕಿಸಂ ಎಂದೊಡನೆ ಹಿಂಸೆ ಮತ್ತು ಗೊಂದಲ ಎಲ್ಲರ ತಲೆಯಲ್ಲಿ ಏಳುವ ಮೊದಲ ಯೋಚನೆಗಳು. ತನ್ನ ಆಸೆಯ ಪೂರೈಕೆಗೆ ಹಿಂಸೆಯಾದರೂ ಸರಿಯೆ. ಇಂದಿನ ರಾಜಕೀಯ ಹಾಗು ಸಾಮಾಜಿಕ ನಾಯಕರನ್ನು ಕೊಂದು ಹೊಸ ನೆಲೆಗೆ ಲೋಕವನ್ನು ಒಯ್ಯುವುದು ಎಂಬ ಹುಂಬತನದ ಪ್ರತಿರೂಪ ಎಂಬುದು ಮೊದಲ ದೃಷ್ಟಿ. ಎರಡನೆಯದು ಯಾವುದೇ ಸರ್ಕಾರ, ಕಾನೂನು ನಿಯಮಗಳಿಲ್ಲದ ಗೊಂದಲದ ಪರಿಸ್ಥಿತಿಯನ್ನು ಸಮಾಜದಲ್ಲಿ ಹುಟ್ಟು ಹಾಕುವುದು. ಗೊಂದಲದಲ್ಲೇ ಸುಖ ಕಾಣುವುದು. ಬಹುಜನರಿಗೆ ಅನಾರ್ಕಿಸಂ ಮನಸ್ಸಲ್ಲಿ ಹುಟ್ಟಿಸುವ ವಿಚಾರಗಳು ಇವೆರಡು.

ಎರಡನೇ ಮಹಾಯುದ್ಧದಲ್ಲಿ ಹೋರಾಡಿದ ಹವರ್ಡ್ ಝಿನ್ ಯುದ್ಧದ ನಂತರ ಮನಗಂಡದ್ದು ನ್ಯಾಯುತವಾದ ಯುದ್ಧ ಎಂಬುದಿಲ್ಲ ಎಂದು. ಅಮೇರಿಕಾದ ಅರವತ್ತರ ದಶಕದ ಚಳವಳಿಗಳಲ್ಲಿ, ಮುಖ್ಯವಾಗಿ ವಿಯೆಟ್ನಾಂ ಯುದ್ಧದ ವಿರುದ್ಧದ ಚಳವಳಿಯಲ್ಲಿ ತೊಡಗಿಸಿಕೊಂಡವನು. “ಎ ಪೀಪಲ್ಸ್ ಹಿಸ್ಟರಿ ಆಫ್ ದಿ ಯನೈಟೆಡ್ ಸ್ಟೇಟ್ಸ್” ಎಂಬ ಜನಪ್ರಿಯ ಪುಸ್ತಕ ಬರೆದವನು. ತನ್ನನ್ನು ತಾನು ಅನಾರ್ಕಿಸ್ಟ್ ಎಂದು ಕರೆದುಕೊಳ್ಳುವ ಇವನು ಅನಾರ್ಕಿಸಂನ ತೊಡಕುಗಳು, ಸವಾಲುಗಳು ಮತ್ತು ಆಶಯಗಳನ್ನು ಸಮಾಧಾನದಿಂದ ಹೇಳಬಲ್ಲವ. ಅನಾರ್ಕಿಸಂಗೆ ಇರುವ ಚಾರಿತ್ರಿಕ ಹಿನ್ನೆಲೆ ಮತ್ತು ಚಿಂತನೆಗಳನ್ನು ವಿವರಿಸಬಲ್ಲವ. ಅನಾರ್ಕಿಸಂಗೆ ಬೇಕಾದ ಅಗಾಧವಾದ ಸಂಘಟನೆ, ಬಿಡುವಿಲ್ಲದ ಕೆಲಸ ಮತ್ತು ಆಳದ ಆಶಯದ ಬಗೆ ಗಂಭೀರವಾಗಿ ಯೋಚಿಸುವವ.

ಹವರ್ಡ್ ಝಿನ್ ಅನಾರ್ಕಿಸಂನ ಅಗತ್ಯವನ್ನು ಹೇಳುತ್ತಾ ನಾವೆಷ್ಟೇ ಪ್ರಗತಿಶೀಲರಾದರೂ ಎಲ್ಲ ರಾಜಕೀಯ ಸ್ಥಾವರಗಳೂ ನಮ್ಮನ್ನು ಭ್ರಷ್ಟರನ್ನಾಗಿಸುತ್ತದೆ ಎನ್ನುತ್ತಾನೆ. ಅಧಿಕಾರ ಒಂದೆಡೆ ಕೇಂದ್ರಿತವಾಗುವುದರಿಂದ ಮೂಡುವ ತೊಡಕದು. ಅನಾರ್ಕಿಸಂನ ಆಶಯ ಜನರೇ ಅಂತಹ ಅಧಿಕಾರ ಕೇಂದ್ರಿತ ಸ್ಥಾವರಗಳನ್ನು ಮೀರಬೇಕು. ತಮ್ಮ ಪುಟ್ಟ ಪುಟ್ಟ ಸಂಘಟನೆಗಳ ಮೂಲಕ ನಿಯಂತ್ರಣವನ್ನು ತಮ್ಮ ಕೈಗೆ ಮತ್ತೆ ತೆಕ್ಕೊಳ್ಳಬೇಕು. ಹಾಗಂತ ಎಷ್ಟೋ ವಿಷಯಗಳನ್ನು ಅನಾರ್ಕಿಸಂ ಈಗಲೇ ಪರಿಹರಿಸಿಕೊಂಡಿಲ್ಲ, ಸದ್ಯಕ್ಕೆ ಪರಿಹರಿಸುವುದೂ ಇಲ್ಲ. ಯಾಕೆಂದರೆ ಏಲ್ಲೂ ಎಂದೂ ಪರಿಹಾರವೆನ್ನುವುದು ಕಟ್ಟಿಟ್ಟ ಬುತ್ತಿಯಲ್ಲ. ಅನಾರ್ಕಿಸಂನ ದಾರಿಯಲ್ಲೂ ಪರಿಹಾರಗಳನ್ನು ನಾವು ಹೆಜ್ಜೆಹೆಜ್ಜೆಗೂ ಕಂಡುಕೊಳ್ಳಬೇಕು, ರೂಪಿಸಿಕೊಳ್ಳಬೇಕು. ಯಾರೋ ಅದನ್ನು ನಿರ್ದೇಶಿಸುತ್ತಾರೆ ಎಂಬ ಹವಣಿಕೆಯನ್ನು ತೊರೆಯಬೇಕು ಎನ್ನುತ್ತಾ ಸಣ್ಣಪುಟ್ಟ ಸಮುದಾಯಗಳಿರುವ ರಾಷ್ಟ್ರೋತ್ತರ ಜಗತ್ತಿನ ತನ್ನ ಕನಸನ್ನು ವಿಶದಪಡಿಸುತ್ತಾನೆ.

ಜಗತ್ತಿನ ಹಲವು ಭಾಗಗಳಲ್ಲಿ ಆತಂಕವಾದಿ ಗುಂಪುಗಳು ಸರ್ಕಾರಗಳಂತೆ ರಾರಾಜಿಸುತ್ತಿವೆ. ಎಷ್ಟೋ ಸರ್ಕಾರಗಳು ಆತಂಕವಾದಿಗಳಿಗಿಂತ ಹೇಯವಾಗಿ ವರ್ತಿಸುತ್ತಿವೆ. ಇವು ಇಪ್ಪತ್ತೊಂದನೇ ಶತಮಾನದ ಕಟು ವಾಸ್ತವ. ಇಂತಹ ಹೊತ್ತಲ್ಲಿ ಅನಾರ್ಕಿಸಂನ ಕನಸನ್ನು ಸೂಕ್ಷ್ಮವಾಗಿ ನೋಡುವ ಗಳಿಗೆ ಬಂದಿದೆ ಅನಿಸದೇ ಇರಲಾರದು. ಹೀಗೆಲ್ಲಾ ಯೋಚಿಸುವುದೇ ಇಂದಿನ ರಾಜಕೀಯ ನಾಯಕರ ಎದೆ ನಡುಗಿಸುತ್ತದೆ. ಉದಾರವಾದಿಗಳನ್ನು, ಸುಧಾರಕರನ್ನು ಹೇಗೋ ಸಹಿಸುವ ಅಧಿಕಾರಕೇಂದ್ರಿತ ಸ್ಥಾವರಗಳು ಇಂತಹ ಯೋಚನೆಗಳಿಗೆ ಅಸಹನೆಯಿಂದ ಧುಮುಧುಮಿಸುವುದು ಯಾಕೆಂದು ಬೇರೆ ಹೇಳಬೇಕಾಗಿಲ್ಲ.

ಬ್ರಟೀಷರ ಎದುರು ಚಳವಳಿ ಕಟ್ಟಿದ ಗಾಂಧಿಯಲ್ಲಿ ಇವನು ಅನಾರ್ಕಿಸ್ಟ್ ಗುಣ ಕಾಣುವುದು ಆಶ್ಚರ್ಯವೇನಲ್ಲ. ಆದರೂ, ಉದ್ಯಮಿಗಳು ಇಂಡಿಯಾದವರೇ ಆದಲ್ಲಿ ಕಾರ್ಮಿಕರು ಅನ್ಯಾಯವನ್ನು ಸಹಿಸಿಕೊಳ್ಳಬೇಕೆನ್ನುವಂತ ನಿಲುವು ತಳೆದ ಗಾಂಧಿ. ಉಳಿದವರಿಂದ ಸನಾತನಿ ಅನಿಸಿಕೊಂಡ ಗಾಂಧಿ. ಹಲವು ಬಗೆಯ ಸಂಕೀರ್ಣ ನಿಲುವುಗಳ ಗಾಂಧಿ ಅನಾರ್ಕಿಸ್ಟ್ ಆಗಬಲ್ಲರೆ? ಅವರಲ್ಲಿ ಆ ಗುಣವಿತ್ತೆ? ಹೀಗೆ ಯೋಚಿಸುವಾಗ ಏಳುವ ಪ್ರಶ್ನೆಗಳು- ಇಂಡಿಯಾದ ಅನಾರ್ಕಿಸ್ಟ್ ಚಳವಳಿಗಳು ಯಾವುವು? ಹಾಗೊಂದು ಚಾರಿತ್ರಿಕ ಸಂಗತಿ, ಚಳವಳಿ, ಚಿಂತನೆ ನಮ್ಮಲ್ಲಿದೆಯೆ? ಅವು ತಮ್ಮನ್ನು ಅನಾರ್ಕಿಸಂ ಎಂದು ಕರೆದುಕೊಳ್ಳದಿರಬಹುದು. ಒಂದು ಬಗೆಯಲ್ಲಿ ಎಲ್ಲ ದಬ್ಬಾಳಿಕೆಯ ವಿರುದ್ಧದ ಚಳವಳಿಗೂ ಅನಾರ್ಕಿಸ್ಟ್ ಗುಣ ಇದ್ದೇ ಇರುತ್ತದೆ. ಅದನ್ನು ಮೀರಿ, ಅನಾರ್ಕಿಸಂನಂಥ ಅಮೂಲ್ಯವಾದ ತತ್ವ ಮತ್ತು ಅದನ್ನು ಮೂರ್ತಗೊಳಿಸುವುದನ್ನೇ ಗುರಿಯಾಗಿಟ್ಟುಕೊಂಡ ಚಳವಳಿ? ಇದರ ಬಗ್ಗೆ ಹುಡುಕಬೇಕು ಅಂದುಕೊಳ್ಳುತ್ತೇನೆ.

ಹವರ್ಡ್ ಝಿನ್ ಇತ್ತೀಚಿನ ತನ್ನ ಸಂದರ್ಶನವೊಂದರಲ್ಲಿ: ಯಾವುದೇ ಚಳವಳಿಯ ಗುರಿ ಅಹಿಂಸೆ, ಸಮಾನತೆಯಾಗಿದ್ದರೆ ಅದರ ನಡೆಯನ್ನೂ ಕೂಡ ಅಹಿಂಸೆ ಮತ್ತು ಸಮಾನತೆ ರೂಪಿಸಬೇಕಾಗುತ್ತದೆ ಎನ್ನುತ್ತಾನೆ. ಅನಾರ್ಕಿಸಂ ಕೂಡ ನಮ್ಮ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಹೊಂದುವಂತ ಮಾನವ ಸಂಬಂಧಗಳ ಮೇಲೆ ನಿರ್ಮಿತವಾದ ನಡೆಯನ್ನು ರೂಪಿಸಕೊಳ್ಳಬೇಕು ಎನ್ನುತ್ತಾನೆ. ಅವನ ಇನ್ನೊಂದು ಮುಖ್ಯವಾದ ಮಾತು: ಸ್ವಾತಂತ್ಯ್ರ ಎಂಬುದು ಮಾನವ ಕಲ್ಪಿಸಿಕೊಂಡು ಒಂದು ತತ್ವವಲ್ಲ. ಅದು ನಮ್ಮ ಮೂಲಭೂತ ಆಶಯ. ಮನುಕುಲದ ತೀರ ಸಹಜವಾದ ಆಶಯ ಕೂಡ. ಇದಕ್ಕೆ ಆಧಾರವಾಗಿ ಮಾನವನ ಚರಿತ್ರೆಯುದ್ದಕ್ಕೂ ಹಲವಾರು ಉದಾಹರಣೆಗಳನ್ನು ನೋಡಬಹುದು ಎನ್ನುತ್ತಾನೆ.

ಹವರ್ಡ್ ಝಿನ್ ಗಾಂಧಿಯಲ್ಲಿ ಅನಾರ್ಕಿಸ್ಟ್ ಗುಣ ಕಾಣುತ್ತಾನೆ. ಹಾಗೆಯೇ ಅಮೇರಿಕದ ಚಿಂತಕ ಹೆನ್ರಿ ಡೇವಿಡ್ ತೋರೂ ಅನಾರ್ಕಿಸಂಗೆ ತುಂಬಾ ಹತ್ತಿರವಾದ ವಿಚಾರ ಹೇಳಿದ್ದಾನೆ ಎನ್ನುತ್ತಾನೆ. ಗಾಂಧಿ ತೋರೂನ ಬರವಣಿಗೆಯಿಂದ ಪ್ರಭಾವಿತರಾಗಿದ್ದರು ಎಂದು ಕೇಳಿದ್ದೇವೆ. ಹೀಗೆಲ್ಲಾ ಕೊಂಡಿಗಳು ಸಿಗುವಾಗ ತಲೆಬುಡವಿಲ್ಲದ ನನ್ನದೊಂದು ಆಶಯ ಅರಳುತ್ತದೆ: ಅನಾರ್ಕಿಸಂ ನಿಜಕ್ಕೂ ನಮಗೆ ಅಷ್ಟು ದೂರವಲ್ಲವೇನೋ… ನಾವು ಎಷ್ಟೇ ಸಂಪ್ರದಾಯವಾದಿಗಳಾಗಿದ್ದರೂ ಕೂಡ. ಗಾಂಧಿ ಹುಟ್ಟಿದ ನಾಡು ತಾನೆ ನಮ್ಮದು?
http://www.identitytheory.com/idgraphics/howardzinn.jpg