ನಾನೇನಾದರೂ ಕಡಿಮೆ ಹಣ ತೆಗೆದುಕೊಂಡಿದ್ದೇನೆಂದು ಅವರಿಗೆ ಅನಿಸಿದರೆ, `ಇಷ್ಟೇನಾ?’ ಎಂದು ಮತ್ತೆ ಮತ್ತೆ ಕೇಳಿ ಖಚಿತಗೊಳಿಸಿಕೊಳ್ಳುತ್ತಾರೆ. `ನಿಮ್ಗೂ ಔಸ್ತಿ ಏನು ಪುಕ್ಕಟೆ ಬರುತ್ತಾ? ಅದು ಬೆಳೆಯೂದಲ್ಲ, ನೀವೂ ದುಡ್ಕೊಟ್ಟು ತರ್ಬೇಕಲ್ಲಾ?’ ಎಂದು ನನ್ನ ಪರ ತಾವೇ ವಕಾಲತ್ತು ವಹಿಸುತ್ತಾರೆ. ಯಾವ ಕಾರಣಕ್ಕೂ ಕರುಣೆಯ ಹಂಗಿನಲ್ಲಿ ಸಿಲುಕಲು ಇಷ್ಟವಿಲ್ಲದ ಅವರಿಗೆ ಹಣಕಾಸಿನ ರಿಯಾಯಿತಿ, ಸಹಾಯ ಅತ್ಯಂತ ಮುಜುಗರದ್ದೆಂಬ ಕಾರಣಕ್ಕೆ ಹಾಗೆ ವರ್ತಿಸುತ್ತಾರೆ.
ಕವಯಿತ್ರಿ ಡಾ.ಎಚ್.ಎಸ್. ಅನುಪಮಾ ಉತ್ತರ ಕನ್ನಡದ ಕವಲಕ್ಕಿಯಲ್ಲಿ ಬಡವರ ಡಾಕ್ಟರ್. ಅವರ ದಿನಚರಿಯ ಕೆಲವು ಪುಟಗಳು ಇಲ್ಲಿವೆ.

(ಫೋಟೋ ಕೃಪೆ: ರಾಮನಾಥ್ ಭಟ್)

 

ಅವರು ಊರಿಗೇ ದೊಡ್ಡವರು. ನಾಲ್ಕಾರು ಜನ ಸೇರಿದಲ್ಲಿ ಅವರ ಮಾತೇ ಅಂತಿಮ. ರಾಜಕೀಯ ಸಭೆಗಳಿರಲಿ, ಧಾರ್ಮಿಕ ಸಮಾರಂಭಗಳಿರಲಿ, ಕೌಟುಂಬಿಕ ಕಾರ್ಯಕ್ರಮಗಳಿರಲಿ, ಎಲ್ಲ ಕಡೆ ಅವರಿರುತ್ತಾರೆ. ಇಂಥ ಸರ್ವಾಂತರ್ಯಾಮಿಗಳಿಗೆ ಹೊತ್ತಲ್ಲದ ಹೊತ್ತಲ್ಲಿ ಒಮ್ಮೊಮ್ಮೆ ಘನ ಕಾಯಿಲೆಗಳು ಬಂದುಬಿಡುತ್ತದೆ. ಆಗೆಲ್ಲ ಅವರ ಅಂತಸ್ತಿಗೆ ತಕ್ಕ ಪಂಚತಾರಾ ಆಸ್ಪತ್ರೆಗಳನ್ನು ಹುಡುಕಿಕೊಂಡು ಓಡಲು ಸಾಧ್ಯವೆ? ಆಗೆಲ್ಲ ಅವರ ಪಾದಸೇವೆಗಾಗಿ ಯಕಃಶ್ಚಿತ್ ವೈದ್ಯರೇ ಅವರ ಬಳಿ ಹೋಗಬೇಕೆಂಬುದು ಅವರ ಗುಪ್ತ ಅಪೇಕ್ಷೆ. ಅವರ ಸಹಾಯಕರು ಇದ್ದ ಕಾಯಿಲೆಯನ್ನು ಹತ್ತರಷ್ಟು ಹಿಗ್ಗಿಸಿ ನನ್ನ ಬಳಿ ಹೇಳುವಾಗಲೇ ಕಾಯಿಲೆಯ ಸ್ವರೂಪ ತಿಳಿಯುತ್ತದೆ. ಆದರೆ ಕೈತುಂಬ ಇರುವ ಜಂಜಾಟಗಳು ಹಲವು ಸಬೂಬುಗಳ ಅಸ್ತ್ರ ಒದಗಿಸಿದಾಗ, ಅವರು ಬೇರೆ ದಾರಿಯಿಲ್ಲದೇ `ಬಡವನ ಮನೆಗೆ ಭಾಗ್ಯಲಕ್ಷ್ಮಿ’ ಬಂದಂತೆ ನಮ್ಮ ಪುಟ್ಟ ಆಸ್ಪತ್ರೆಗೆ ಬರುತ್ತಾರೆ. ಬಂದವರಿಗೆ ಬಾಧಿಸುತ್ತಿರುವ ಶೀತನೆಗಡಿ, ಸೊಂಟನೋವು, ಉಳುಕು, ಹೊಟ್ಟೆಯಲ್ಲಿ ಗ್ಯಾಸಿನಂತಹ ಘೋರ ಕಾಯಿಲೆಗಳನ್ನು ಪತ್ತೆಹಚ್ಚಿ ಅಂತೂ ಮದ್ದು ಕೊಟ್ಟು `ಬೆಳಗಾಗುವ ತನಕ ತೊಂದರೆಯಾಗದ ಹಾಗೆ’ ಮಾಡಿಕೊಡುತ್ತೇನೆ. ಅವರೋ, ಅವರ ಪಾದ ಬೆಳೆಸಿದ್ದಕ್ಕೇ ನಮ್ಮ ಆಸ್ಪತ್ರೆ ಕೃತಾರ್ಥವಾಯಿತೆಂದರಿತು, ನನಗೆ ಧನ್ಯತಾ ಭಾವವನ್ನು ಉದ್ದೀಪಿಸಲೋ ಎಂಬಂತೆ ಎಷ್ಟು ಫೀಸು ಎಂದು ಮಾತಿಗಾದರೂ ಕೇಳದೇ ನಡೆದುಬಿಡುತ್ತಾರೆ. ಊರಿಗೇ ದೊಡ್ಡವರು ಅವರು..

ಲಕ್ಕು ಒಳಬಂದವಳೇ ಆಚೀಚೆ ನೋಡಿ ತನ್ನ ಕಂಬಳಿಕೊಪ್ಪೆಯನ್ನೊಂದು ಕಡೆ, ಕತ್ತಿಯನ್ನೊಂದು ಕಡೆ ಹಾಕಿ ಕೆಳಗೆ ನೆಲದ ಮೇಲೆ ಕುಳಿತಳು. `ಅಮೋ’ ಎಂಬೊಂದು ಶಬ್ದದಿಂದ ನನ್ನನ್ನು ಸಂಬೋಧಿಸಿ ಕರೆದು, ಯಾವುದೋ ಅತ್ಯಾನಂದದ ಕ್ಷಣಗಳಿಗಾಗಿ ಸಿದ್ಧಳಾಗುತ್ತಿರುವವಳಂತೆ ನೆಲದ ಮೇಲೇ ಪೀಠಸ್ಥಳ ಹಾಗೆ ಕುಳಿತಳು. ಕವಳದ ಚೀಲ ತೆಗೆಯುತ್ತಾ, ಸಾವಕಾಶದಲ್ಲಿ ಒಂದು ಕವಳ ಹಾಕಿಕೊಂಡು, ಒಂದು ಹಂತದ ರಸಾನುಭವ ದಕ್ಕಿದ್ದೇ ಎದ್ದುನಿಂತಳು. ಮೇಲೆತ್ತಿ ಕಟ್ಟಿದ್ದ ಸೀರೆಯ ಗಂಟನ್ನು ಚೂರೇ ಸಡಿಲಿಸಿ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಸುತ್ತಿದ್ದನ್ನೇನನ್ನೋ ಹೊರತೆಗೆದಳು.

ಸುರುಳಿ ಸುರುಳಿ ಪಿಂಡಿ ಸುತ್ತಿದ್ದ ಹತ್ತತ್ತರ ನೋಟುಗಳು…. ಒಂದೊಂದನ್ನೂ ಸುರುಳಿಯಿಂದ ಹೊರತೆಗೆದು ಮಣಮಣ ತನ್ನಲ್ಲೇ ಲೆಕ್ಕ ಹಾಕಿಕೊಳ್ಳುತ್ತಾ ಕೆಳಗೆ ನೆಲದ ಮೇಲೆ ರಾಶಿ ಹಾಕಿದಳು. ಒಟ್ಟೂ ನಲವತ್ತೊಂದು ಆಗುವ ತನಕ ಧ್ಯಾನಸ್ಥಳ ಹಾಗೆ ನೆಲದ ಮೇಲೆ ನೋಟು ಸುರಿಯುತ್ತಿರುವ ಅನಕ್ಷರಸ್ಥೆ ಲಕ್ಕು! ಉಳಿದ ನಾಲ್ಕಾರು ನೋಟುಗಳನ್ನು ಹಿಂದೇ ಕೊಟ್ಟೆಯೊಳಗೆ ಹಾಕಿ, ಸೊಂಟದ ಗಂಟಿಗೆ ಸೇರಿಸಿ ಸುರುಳಿ ಸುತ್ತಿಕೊಂಡಿದ್ದ ನೋಟುಗಳನ್ನೆಲ್ಲ ಬಾಚಿ ನನ್ನ ಮುಂದೆ ಟೇಬಲ್ಲಿನ ಮೇಲೆ ಹರಡಿ ಹೊರಗೆ ಹೋಗಿ ತಂಬಾಕು ರಸ ಉಗಿದು ಬಂದಳು.

ಅವಳನ್ನು ಇತ್ತೀಚೆಗೆ ಕಾಣದೇ ಬಹಳ ದಿನಗಳಾಗಿದ್ದವು. ಆರಾಮಿದ್ದಿರಬೇಕು, ಅದಕ್ಕೇ ಆಸ್ಪತ್ರೆಗೆ ಬಂದಿರಲಿಕ್ಕಿಲ್ಲ ಎಂದುಕೊಂಡಿದ್ದೆ. ಹೇಳತೊಡಗಿದಳು; `ನಮ್ಮಡುಗಿ ಹೆತ್ತಾಗ ನಾ ನಿಮ್ಗೆ ನಾನೂರಾ ಹತ್ರುಪಾಯಿ ಉದ್ರಿ ಮಾಡೋಗಿದ್ನಲ ಅಮ್ಮೋರೇ, ಕೊಡ್ಲಿಕ್ಕೆ ಆಗೇ ಇರ್ನಿಲ್ಲ. ದುಡ್ಡಿಲ್ದ ನಿಮ್ಗೆ ಮಕ ತೋರ್ಸುಕೆ ಮರ್ವಾದಿ ಆಗಿ ಇಷ್ಟ್ ದಿನ ನಾನ್ ಬರ್ನಿಲ್ಲ. ಕೊಟ್ರೆ ಅಷ್ಟ್ನೂ ಒಂದಪ ಕೊಡ್ಬೇಕು ಅಂತ ಒಟ್ಟ್ ಮಾಡ್ತಾ ಇದ್ದೆ. ದುಡಿಯುದ್ ಹೌದು, ದುಡುದ್ ದುಡ್ಡು ಮಾತ್ರ ಅದೆಲ್ಲಿ ಹೋಗ್ತದೋ ಏನೋ?! ಉಳುದೇ ಇಲ್ಲ. ಅಂತೂ ಇಷ್ಟ್ ದಿವ್ಸಕೆ ಒಟ್ಟಾಯ್ತು. ನಂಗೆ ಇಂದು ಬೇಕೇ ಬೇಕು ಅಂತ ಒಡೆದೀರ ಮನೇಲಿ ಹೇಳಿಟ್ಟಿದ್ದೆ, ತಗಳಿ, ಈಗ ನಂಗೂ ಬಗೇಲಿ ಪರೀಕ್ಷೆ ಮಾಡಿ ನೋಡಿ..’ ಎನ್ನುತ್ತ ಮೇಜು ಹತ್ತಿದಳು.

ನಿಜ ಹೇಳಬೇಕೆಂದರೆ ಲಕ್ಕುವಿನ ಮಗಳು ಸವಿತ ಹೆರಿಗೆಯಾದಾಗ ಕೊಡಬೇಕಿತ್ತೆಂದು ಅವಳು ಹೇಳಿದ ಮೊತ್ತದ ಬಾಕಿಯನ್ನು ನಾನು ಮರೆತೇಬಿಟ್ಟಿದ್ದೆ. ಅವಳಾದರೋ ಆ ಋಣಭಾರದ ನೆನಪಲ್ಲಿ ಮೂರುವರ್ಷದಿಂದ ನನಗೆ ಮುಖತೋರಿಸದೇ ಇದ್ದಾಳೆ! ದಿನಾ ಎರಡು ಹೊರೆ- ಅದೂ ಹೆಣ್ಣು ಹೊರೆ- ಸೊಪ್ಪು ಅಥವಾ ದರಕು ಹೊತ್ತು ಬಂದ ದುಡ್ಡಿನಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆಯ ಅವಳು ಇಷ್ಟು ದುಡ್ಡು ಒಟ್ಟುಮಾಡಲು ಕಷ್ಟಪಟ್ಟಿರಬೇಕು. ಈ ಅವಧಿಯಲ್ಲಿ ಮತ್ತೆಲ್ಲೂ ಆಸ್ಪತ್ರೆಗೂ ಹೋಗಲಿಲ್ಲವಂತೆ. ಹೊಟ್ಟೆನೋವು ಶುರುವಾದರೂ ಜಂತುಮದ್ದು ಕೂಡ ತೆಗೆದುಕೊಳ್ಳಲಿಲ್ಲವಂತೆ. `ಈಗ ನಂಗೆ ಜಂತುಗೆ, ಶಕ್ತಿಗೆ ಎಲ್ಲ ಮದ್ದು ಕೊಡಿ’ ಎನ್ನುತ್ತ, ಎಲ್ಲ ನೆನಪಿಸಿಕೊಂಡು ಒಂದೇ ಬಾರಿ ಮದ್ದು ಕೇಳುವವಳಂತೆ ಮಲಗಿದಳು.

`ನೀನು ದುಡ್ಡು ಕೊಟ್ಟ ಹೊರ್ತು ಆಸ್ಪತ್ರೆಗೆ ಬರಬೇಡ ಅಂತ ನಾನು ಹೇಳಿದ್ನಾ ಲಕ್ಕು?’ ಅಂದೆ. `ಅಯ್ಯೋ ನೀವೆಲ್ಲಿ ಹಂಗೇಳ್ತೀರ ಅಮಾ. ತಾಯಿದ್ದಂಗೆ ಇದೀರ ನೀವು, ಆದ್ರೆ ನಂಗೇ ಮರ್ವಾದಿ. ನೀವು ನಂ ಕೈಬಾಯಿ ನೋಡ್ದೇ ಕಷ್ಟದಾಗೆ ನಿಂತಿರ್ತಿರಿ. ನಿಂ ದುಡ್ಡು ಇಟ್ಕಂಡ್ರೆ ತಿಂದ ಅನ್ನ ಮೈಗೆ ಹತ್ತಾತಾ?’ ಎನ್ನುತ್ತಾ ಸೀರೆಯನ್ನೆಲ್ಲ ಸರಿಮಾಡಿಕೊಂಡು ಮಲಗಿದಳು. ಅವಳಿಗೆ ಎಂಥದ್ದೂ ಕಾಯಿಲೆ ಇಲ್ಲ. ಸಣ್ಣಪುಟ್ಟ ತೊಂದರೆಗಳಷ್ಟೇ. ಹಾಗೆ ಹೇಳಿದ್ದೇ ಖುಷಿಗೊಂಡು ಎದ್ದು ಬಂದಳು.

(ಫೋಟೋ : ರಾಮನಾಥ್ ಭಟ್)

ಅವಳು ಪಿಂಡಿಯಿಂದ ಎಳೆದೆಳೆದು ಹೊರಹಾಕಿದ್ದರೂ ಮತ್ತೆ ಸುಂಯ್ಞನೇ ಮರುಸುರುಳಿ ಸುತ್ತಿಕೊಂಡು ಒಡತಿಯನ್ನು ಬಿಡಲಾರೆವೆಂಬಂತೆ ಮುನಿಸಿಕೊಂಡ ಹಾಗೆ ಕುಳಿತಿದ್ದವು ಹತ್ತರ ನೋಟುಗಳು. ಹೊರಹೋದ ಲಕ್ಕು ಎಂಟ್ಹತ್ತು ಬಿಳಿಸುರುಳಿ ಹೂವುಗಳನ್ನು ಹೆಣೆದ ದಂಡೆಯನ್ನು ತಂದು ನನ್ನೆದುರಿಗೆ ಇಟ್ಟಳು. ಘಮಘಮಿಸುವ ಆ ಬಿಳಿಯ ಹೂಗಳನ್ನು ನೋಡಿದರೆ ಅವು ಲಕ್ಕುವಿನ ಮನಸ್ಸನ್ನೇ ಹೊರತೆಗೆದು ಇಟ್ಟಂತೆ ಶೋಭಿಸುತ್ತಿದ್ದವು.

`ಲಕ್ಕು, ನಾನು ನಿನ್ನ ಬಾಕಿ ಹಣ ಇಷ್ಟಂತ ಎಲ್ಲೂ ಬರ್ದೇ ಇಟ್ಟಿಲ್ಲ ಮಾರಾಯ್ತಿ. ಇಕಾ, ನಂಗೆ ಇಷ್ಟೆಲ್ಲ ದುಡ್ಡು ಬೇಡ. ಇನ್ನೂರು ರೂಪಾಯಿ ಸಾಕು, ಇದರಲ್ಲಿ ನಿನ್ ಮಗಳಿಗೆ ಒಂದ್ ಸೀರೆ ಉಡಿಸು’ ಎಂದು ಉಳಿದ ನೋಟುಗಳನ್ನು ಜೋಡಿಸಿ ಅವಳಿಗೆ ಕೊಡಲು ಹೋದೆ.

`ಅಯ್ಯೋ ಬ್ಯಾಡ್ರೋ ಅಮಾ, ಅವ್ಳಿಗೆ ಸೀರೆ ಎಲ್ಲ ತಂದಾಯ್ತು. ಅವಳೀಗ ಮತ್ತೆ ಏಳು ತಿಂಗಳ ಬಸುರಿ. ಮೊನ್ನೆ ಸೀಊಟ ಹಾಕಿ ಕಳಿಸ್ದೆ. ಈ ಸಲನಾದ್ರೂ ಒಂದ್ ಗಂಡಾದ್ರೆ ಸಾಕು. ಅಂತೂ ನೀವು ಹೋದ್ಸಲದ ಹಾಗೇ ಈ ಸಲನೂ ಒಂದ್ ಜೀವ ಎರಡು ಆಗುಹಂಗೆ ಪಾರು ಮಾಡಿಕೊಡಿ. ಈಗ ನನ್ನತ್ರ ದುಡ್ಡಿದೆ, ಕೊಟ್ಟಿದೀನಿ. ಮುಂದೆ ಅಂತಾ ಕಾಲ ಬಂದಾಗ ಉದ್ರಿ ನಿಲ್ಬೇಕಾತದೋ ಏನೋ’ ಎನ್ನುತ್ತಾ ಹೊರಹೋದವಳೇ ಕಂಬಳಿಕೊಪ್ಪೆ ಮಗುಚಿಕೊಂಡು ನಡೆದೇಬಿಟ್ಟಳು.

ಋಣಮುಕ್ತವಾದ ಹಗುರ ಹೆಜ್ಜೆಗಳಲ್ಲಿ ಹೊರಗೆ ಆತು ನಿಲ್ಲಿಸಿದ್ದ ಸೊಪ್ಪಿನಹೊರೆಯನ್ನು ಹೊತ್ತು ಓಡಿದವಳನ್ನು ನೋಡುತ್ತಾ ನನ್ನ ಕಣ್ಣು ಮಂಜು…

ಅವರ ಬಳಿ ದಂಡಿಯಾಗೇನೂ ಇರುವುದಿಲ್ಲ. ಆದರೆ ಚಿಲ್ಲರೆ ಉಳಿದ ಹಣ ಕೊಡಹೋದರೆ `ಇರ್ಲಿ ಇಟ್ಕಳಿ’ ಎನ್ನುತ್ತ ಪರಮಾಯಿಶಿಗಾಗಿ ಉಳಿದ ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅಂತಹ ಕೆಲವು ಚಹರೆಗಳು ನನ್ನ ಮನಃಪಟಲದ ಮೇಲೆ ದಾಖಲಾಗಿರುತ್ತವೆ. ಅಂತವರಿಗೆ ಹೇಳುವಾಗಲೇ ಸ್ವಲ್ಪ ಕಡಿಮೆ ಹೇಳುತ್ತೇನೆ. ನಾನೇನಾದರೂ ಕಡಿಮೆ ಹಣ ತೆಗೆದುಕೊಂಡಿದ್ದೇನೆಂದು ಅವರಿಗೆ ಅನಿಸಿದರೆ, `ಇಷ್ಟೇನಾ?’ ಎಂದು ಮತ್ತೆ ಮತ್ತೆ ಕೇಳಿ ಖಚಿತಗೊಳಿಸಿಕೊಳ್ಳುತ್ತಾರೆ. `ನಿಮ್ಗೂ ಔಸ್ತಿ ಏನು ಪುಕ್ಕಟೆ ಬರುತ್ತಾ? ಅದು ಬೆಳೆಯೂದಲ್ಲ, ನೀವೂ ದುಡ್ಕೊಟ್ಟು ತರ್ಬೇಕಲ್ಲಾ?’ ಎಂದು ನನ್ನ ಪರ ತಾವೇ ವಕಾಲತ್ತು ವಹಿಸುತ್ತಾರೆ. ಯಾವ ಕಾರಣಕ್ಕೂ ಕರುಣೆಯ ಹಂಗಿನಲ್ಲಿ ಸಿಲುಕಲು ಇಷ್ಟವಿಲ್ಲದ ಅವರಿಗೆ ಹಣಕಾಸಿನ ರಿಯಾಯಿತಿ, ಸಹಾಯ ಅತ್ಯಂತ ಮುಜುಗರದ್ದೆಂಬ ಹಾಗೆ ವರ್ತಿಸುತ್ತಾರೆ.

ಖರ್ಚಿನ ವಿಷಯದಲ್ಲಿ `ಲೋಕೋ ಭಿನ್ನರುಚಿಃ.’  ಕೆಲವರು ದುಡ್ಡಿಲ್ಲದಿದ್ದರೆ ಸಾಲಮಾಡಿಯಾದರೂ ಸರಿ, ಅತ್ಯುತ್ತಮ ಸೇವೆ ದೊರಕಿಸಿಕೊಳ್ಳಲು ನೋಡಿದರೆ, ಮತ್ತೆ ಕೆಲವರು ಹೀಗೆ ಬಂದು ಹಾಗೆ ತಾನೇ ಹೋಗಬಹುದಾದ ಕಾಯಿಲೆಗೆ ಹಣ ಖರ್ಚು ಮಾಡುವುದೆಂದರೆ ಜೀವ ಹುಳ್ಳಗೆ ಮಾಡಿಕೊಳ್ಳುತ್ತಾರೆ. ಯಾವ್ಯಾವುದಕ್ಕೋ ಕೂಡಿಸಿಕೊಂಡಿರುತ್ತಾರೆ- ಮನೆಗೆ ಮಾಡು ಹೊದಿಸಲು, ಮಗಳಿಗೆ ಚಿನ್ನದ ಕಿವಿ ಬಟ್ಟು ಮಾಡಿಸಲು, ಈ ಸಲ ತಿರುಪತಿ ಯಾತ್ರೆ ಮಾಡಲು, ಹೊಸಬಟ್ಟೆ ಕೊಳ್ಳಲು, ಸಾಲ ಮರುಪಾವತಿ ಮಾಡಲು.. -ಹೀಗೇ. ಎಷ್ಟೋ ಕಾಲದಿಂದ ಸಂಗ್ರಹಿಸಿಟ್ಟ ಹಣದ ಮೇಲೆ ಕೋಳಿಪಿಳ್ಳೆಯ ಮೇಲೆ ಹದ್ದು ಎರಗುವ ಹಾಗೆ ಕಾಯಿಲೆ ಬಂದೆರಗುತ್ತದೆ. ಜೀವ ಒಂದುಳಿದು ಕಾಯಿಲೆ ಗುಣವಾದರೆ ಸಾಕು, ಉಳಿದದ್ದನ್ನೆಲ್ಲ ಕೊನೆಗೆ ಹೇಗೂ ಜೋಡಿಸಿಕೊಳ್ಳಬಹುದು ಎಂದು ಬಹಳಷ್ಟು ಜನ ಯೋಚಿಸಿದರೆ, ಕೆಲವರು ಎಲ್ಲೆಲ್ಲಿ ರಿಯಾಯ್ತಿ ಇದೆ, ಎಲ್ಲಿ ಉಚಿತ ಸೇವೆಯಿದೆ ಎಂದು ಹುಡುಕಿ ಹೊರಡುತ್ತಾರೆ. ವಿಪರ್ಯಾಸವೆಂದರೆ ಹಣವಂತರೇ ಉಚಿತ ಸೇವೆ ದೊರಕಬಹುದೆಂದು ನಿರೀಕ್ಷೆಯಲ್ಲಿರುತ್ತಾರೆ.

ಅಷ್ಟಕ್ಕೂ `ಹಣವಂತ’ ಎಂಬುದೊಂದು ಸಾಪೇಕ್ಷ ಸ್ಥಿತಿ. ಹಣವಿದೆಯೋ ಇಲ್ಲವೋ ಎಂದು ಪರ್ಸ್ ನೋಡಿ ಬರದ ಕಾಯಿಲೆಗಳು ಮನುಷ್ಯನ ಮನಸ್ಸಿನ ಬೇರೆಬೇರೆ ಮಜಲುಗಳನ್ನು ನಗ್ನಗೊಳಿಸುತ್ತವೆ. ಕಾಯಿಲೆ ಎಂದ ಕೂಡಲೇ ಕೆಲವರಿಗೆ ಪ್ರಾಣಭಯ, ಕೆಲವರಿಗೆ ನೋವಿನಭಯ, ಹಲವರಿಗೆ ಹಣದಭಯ. ಮೊದಲೆರಡು ಭಯಗಳ ನಿವಾರಣೆ ತಮ್ಮ ಕೈಯಲ್ಲಿಲ್ಲವಾಗಿ, ಬಹುಪಾಲು ರೋಗಿಗಳು ಹಣದ ಬಗ್ಗೆಯೇ ಚಿಂತಿಸುತ್ತಾರೆ.

ಯಾರಿಗೆ ಕೊಡಲು ಇಷ್ಟವಿದೆಯೋ, ಇಲ್ಲವೋ, ಅಂತೂ ಬೇರೆ ಬೇರೆ ವಾಸನೆ ಹೊತ್ತ ನೋಟುಗಳು ನನ್ನ ಪರ್ಸ್ ನಲ್ಲಿ ಸೇರಿರುತ್ತವೆ. ಬೇರೆಯವರ ಕಷ್ಟ ನೋವುಗಳೇ ಆದಾಯಮೂಲವಾದ ವೈದ್ಯವೃತ್ತಿ ಮಿಶ್ರ ಭಾವನೆಗಳನ್ನು ಹುಟ್ಟುಹಾಕುತ್ತದೆ. ನಮ್ಮ ಅಹಂಕಾರ ಪೋಷಣೆಗೋ, ಮತ್ತೊಂದಕ್ಕೋ ಅಂತೂ ವಿನಿಯೋಗದ ಹಲವು ಮಾರ್ಗಗಳು ಹೊಳೆಯುತ್ತವೆ..

ಈ ಕೆಳಕಾಣಿಸಿದ ಸಾಲುಗಳನ್ನು ನೀವು ಬಹುತೇಕ ಆಸ್ಪತ್ರೆಗಳಲ್ಲಿ ನೋಡಿರಬಹುದು. ಅದು ಹಿಪ್ಪೋಕ್ರೆಟಿಕ್ ಪ್ರತಿಜ್ಞೆಯ ಭಾವಸಾರವನ್ನೊಳಗೊಂಡಿದೆ. ಆ ಸಾಲುಗಳು ನಿಮ್ಮ ಅವಗಾಹನೆಗಾಗಿ;

(ಫೋಟೋಗಳು: ರಾಮನಾಥ್ ಭಟ್)

ಪ್ರಾರ್ಥನೆ
ದೇವರೇ,
ವಾಸ್ತವವಾಗಿ ಹೇಳಬೇಕೆಂದರೆ ನನ್ನ ಜೀವನವೇ
ರೋಗಿಗಳ ಮೇಲೆ ಅವಲಂಬನೆಯಾಗಿರುವಂತಹ
ಪರಿಸ್ಥಿತಿಯು ಒಂದು ಅನಿವಾರ್ಯತೆ ಆಗಿದೆ.
ಆದರೆ ಅವರ ರೋಗಗಳನ್ನು ನಿವಾರಿಸಲು ನನಗೆ
ಉತ್ತಮ ಅವಕಾಶ ನೀಡಿರುವುದು ನನ್ನ ಅದೃಷ್ಟವೇ ಆಗಿದೆ.
ಈ ಜವಾಬ್ದಾರಿಯನ್ನು ಪೂರ್ಣಗೊಳಿಸುವ ಅರ್ಹತೆಯನ್ನು
ಕೂಡಾ ನೀನು ನನಗೆ ನೀಡಿರುವೆ.
ದೇವರೇ..
ಇಂತಹ ಒಂದು ಉದ್ದೇಶವನ್ನು ಸಂಪೂರ್ಣ ನಿಷ್ಠೆಯಿಂದ
ಪೂರ್ಣಗೊಳಿಸಬಹುದಾದ ಶಕ್ತಿಯನ್ನು ದಯವಿಟ್ಟು ನನಗೆ ಕರುಣಿಸು.
ವಾಸ್ತವವಾಗಿ ನೀನೇ ಕಷ್ಟಗಳನ್ನು ನಿವಾರಿಸುವೆ,
ಮತ್ತು ಎಲ್ಲರೂ ಸುಖವಾಗಿರುವಂತೆ ಕರುಣಿಸುವೆ.
ನಾನು ಕೇವಲ ಒಂದು ಮಾಧ್ಯಮವಷ್ಟೇ.
ದೇವರೇ,
ನನ್ನ ರೋಗಿಗಳ ಮೇಲೆ ನಿನ್ನ ಕೃಪೆಯಿರಲಿ..