“ಯಾವುದಾದ್ರೂ ಮದುವೆ-ಮುಂಜಿಗೆ ಹೋಗೋದು ಅಂದ್ರೆ ಎಲ್ಲಿಲ್ಲದ ತಲೆನೋವು. ಅಲ್ಲಿಗೊದ್ರೆ ಎಲ್ಲರೂ ನನ್ನನ್ನೇ ನೋಡ್ತಾರೆ. ಆಡಿಕೊಳ್ಳುತ್ತಾರೆ ಅಂತ ತೀವ್ರ ಮುಜುಗರ. ನಾನು ನನ್ನ ಎತ್ತರ ಅಥವಾ ಎತ್ತರಕ್ಕೆ ಸರಿಹೊಂದುವಂತವರ ಜೊತೆ ಹೋಗಲು ಇಷ್ಟಪಡುತಿದ್ದೆ. ನಮ್ಮಮ್ಮ ಕುಳ್ಳಿ ಅನ್ನೋ ಕಾರಣಕ್ಕೆ ಅವರು ಎಲ್ಲಿಗೆ ಕರೆದರು ಹೋಗುತ್ತಿರಲಿಲ್ಲ. ತುಂಬಾ ಉದ್ದ ಕಾಣಬಾರದು ಅಂತ ತಲೆಬಗ್ಗಿಸಿ  ಗೂನು ಬೆನ್ನು ಮಾಡಿ ನಡೆಯುತ್ತಿದ್ದೆ. ನಾನು ಇದ್ದ ಕಡ್ಡಿ ಸಣ್ಣಕ್ಕೂ ಆ ಗೂನ್ ಬೆನ್ನು ಮಾಡಿ ನಡೆಯುವ ಶೈಲಿಗೂ ಒಳ್ಳೆ ಪ್ರಶ್ನಾರ್ಥಕ ಚಿಹ್ನೆ ತರ ಕಾಣ್ತಿದ್ದೆ.” ಹೊಸ ತಲೆಮಾರಿನ ಲೇಖಕಿ ಸುಷ್ಮಾ ಕಟ್ಟಾಯ ಮೊದಲ ಲೇಖನ

ಮೊದಲಿಗೆ ನಾನು  ತುಂಬಾ ಉದ್ದವಾಗಿ ಬೆಳೆದಿರೋದನ್ನ ನೋಡಿ ಖುಷಿಪಟ್ಟವರಿಗಿ೦ತ, ಹೊಟ್ಟೆಉರಿ ಪಟ್ಟವರೇ ಹೆಚ್ಚು. ಎಲ್ಲಿಗೋದ್ರೂ ಎಲ್ಲರೂ ನನ್ನನ್ನು ವಿಚಿತ್ರವಾಗಿ  ನೋಡೊದನ್ನ ನೋಡಿ, ಎಲ್ಲರು ನನ್ನನ್ನ ಆಡಿಕೊಂಡು ನಗುತ್ತಾರೆ ಅನ್ನೋ ಕೀಳರಿಮೆ ನನ್ನ ಮನಸಲ್ಲಿ ಹುಟ್ಟಿತ್ತು. ಇಷ್ಟು ಉದ್ದ ಇದ್ದಾಳೆ, ಇವಳಿಗೆ ಗಂಡು ಎಲ್ಲಿ ಹುಡುಕುತ್ತಾರಪ್ಪ ಅಂತ ಯಾರಾದ್ರು ತಮಾಷೆ ಮಾಡಿದ್ರೂ ಸಹ ಅವರ ಮನೆಗೆ ಇನ್ನೊಂದು ಸಲ ಹೋಗುತ್ತಿರಲಿಲ್ಲ. ತೆಂಗಿನ ಮರ, ಅಡಿಕೆ ಮರ, ಒಂಟೆ, ಜಿರಾಫೆ, ಗೂನಿ ಇನ್ನು ಏನೇನೋ ನನಗಿದ್ದ ಅಡ್ಡ ಹೆಸರುಗಳು. ನಿಮ್ಮ ಮಗಳು ಇಷ್ಟು ಉದ್ದ ಇದ್ದಾಳೆ, ನಿಮಗೆ ಏಣಿನೇ ಬೇಕಾಗಿಲ್ಲ  ಅನ್ನೋದನ್ನ  ಕೇಳಿ ಕೇಳಿ ಸಾಕಾಗಿತ್ತು. ಏನ್ ಊಟ ಹಾಕ್ತಿರಾ, ನಿಮ್ಮ ಮಗಳು ಇಷ್ಟು ಗಣೆ ಬೆಳೆದ ಹಾಗೆ ಬೆಳೆದಿದ್ದಾಳೆ ಅನ್ನೋರು. ನಮ್ಮಮ್ಮನಿಗೆ ಏನೋ ಭಯ. ಎಲ್ಲಿ ನನ್ನ ಮಗಳು ಇನ್ನೂ ಎತ್ತರ ಬೆಳೆದು ಬಿಡುತ್ತಾಳೋ ಅಂತ. ಇನ್ನು ಉದ್ದ ಬೆಳೆದು ಬಿಡ್ತೀನಿ ಅಂತ ನಾನು  ಕಲಿಯಲು ಇಚ್ಚಿಸಿದ್ದ ನನ್ನನ್ನು ಈಜುವುದಕ್ಕೂ  ಕಳುಹಿಸುತ್ತಿರಲಿಲ್ಲ. (ಅದೇ ಕಾರಣವಿರಬಹುದು, ಈಗಲೂ ನಾನು ಈಜಲು ಕಲಿತಿಲ್ಲ. ನೀರು ಅಂದರೆ ಭಯ) ನನ್ನ ಸಹೋದರಿಯರು ಈಜು ಕಲಿಯಲು ಹೋದರೆ ನಾನು ಪೂಲ್ ಹೊರಗೆ ಕುಳಿತಿರುತ್ತಿದ್ದೆ..

ಶಾಲೆಯಲ್ಲಿ ಯಾವಾಗ್ಲೂ ಕಡೇ ಬೆಂಚು, ಪ್ರಾರ್ಥನೆ ಸಾಲಲ್ಲಿ ಕಟ್ಟ ಕಡೆ ನಾನು. ಅದೇ ಅಭ್ಯಾಸವಾಗಿ, ಅಪ್ಪಿ ತಪ್ಪಿ ಲಾಸ್ಟ್ ಬೆಂಚಲ್ಲಿ ಜಾಗ ಸಿಗಲಿಲ್ಲ ಅಂದ್ರೆ ಏನೋ ಕಳೆದುಕೊಂಡಂಗಾಗ್ತಿತ್ತು. ನಾನು  ಒಂಬತ್ತನೇ ತರಗತಿಯಲ್ಲಿ ಅತೀ ಶೀಘ್ರಗತಿಯಲ್ಲಿ ಬೆಳೆದಿದ್ದರಿಂದ, ಹೋದವರುಷ ನೋಡಿದವರು ಈ ವರ್ಷ ನನ್ನನ್ನ ಗುರುತು ಹಿಡಿಯುತ್ತಿರಲಿಲ್ಲ. ನನ್ನ ಶಾಲಾ ಸಹಪಾಠಿಗಳು ಸಹ…

ನನಗೆ ಸರಿ ಹೊಂದುವಂತ ರೆಡಿಮೇಡ್ ಡ್ರೆಸ್ ಸಿಗುತ್ತಿರಲಿಲ್ಲ. ಚಪ್ಪಲಿ ಹುಡುಕುವುದು ಅತ್ಯಂತ ತಲೆ ನೋವಿನ ಕೆಲಸ. ಸೈಜ್ ೧೦; ಅದೋ ಒಳ್ಳೆ ವಿನ್ಯಾಸ, ಹೀಲ್ಡ್ಸ್ ಇಲ್ಲದಿರುವ ಹುಡುಗಿಯರು ಹಾಕುವಂತಹ, ಮಾಡ್ರನ್ ಚಪ್ಪಲಿಗಳು ಸಿಗದೆ ಅಳತೆ ಕೊಟ್ಟು ಹೊಲಿಸಬೇಕಾಯ್ತು. ನಮ್ಮ ನೆಂಟರು ಒಬ್ಬರು ನನ್ನ ಚಪ್ಪಲಿ ಸೈಜ್ ಬಗ್ಗೆ ತಮಾಷೆ ಮಾಡಿದ್ದು ಇನ್ನೂ ನೆನಪಿದೆ. `ಕಳ್ಳರು ಯಾರ ಚಪ್ಪಲಿ ಬೇಕಾದರೂ ಕದ್ದುಕೊಂಡು  ಹೋಗ್ತಾರೆ, ಆದರೆ ಸುಷ್ಮನ ಲಾರ್ಜ್ ಸೈಜ್ ಚಪ್ಪಲಿ ಮಾತ್ರ ಅಲ್ಲೇ ಇರುತ್ತೆ. ಅಷ್ಟುದ್ದ ಚಪ್ಪಲಿನ ಯಾರು ಕದ್ದುಕೊಂಡು ಹೋಗ್ತಾರೆ?’ ಅಂದ್ರು. ನಾನು ಅತ್ತಿದ್ದು ಗಾಢವಾಗಿ ನೆನಪಿದೆ.

ಯಾವುದಾದ್ರೂ ಮದುವೆ-ಮುಂಜಿಗೆ ಹೋಗೋದು ಅಂದ್ರೆ ಎಲ್ಲಿಲ್ಲದ ತಲೆನೋವು. ಅಲ್ಲಿಗೋದ್ರೆ ಎಲ್ಲರೂ ನನ್ನನ್ನೇ ನೋಡ್ತಾರೆ. ಆಡಿಕೊಳ್ಳುತ್ತಾರೆ ಅಂತ ತೀವ್ರ ಮುಜುಗರ. ನಾನು ನನ್ನ ಎತ್ತರ ಅಥವಾ ಎತ್ತರಕ್ಕೆ ಸರಿಹೊಂದುವಂತವರ ಜೊತೆ ಹೋಗಲು ಇಷ್ಟಪಡುತಿದ್ದೆ. ನಮ್ಮಮ್ಮ ಕುಳ್ಳಿ ಅನ್ನೋ ಕಾರಣಕ್ಕೆ ಅವರು ಎಲ್ಲಿಗೆ ಕರೆದರು ಹೋಗುತ್ತಿರಲಿಲ್ಲ. ತುಂಬಾ ಉದ್ದ ಕಾಣಬಾರದು ಅಂತ ತಲೆಬಗ್ಗಿಸಿ  ಗೂನು ಬೆನ್ನು ಮಾಡಿ ನಡೆಯುತ್ತಿದ್ದೆ. ನಾನು ಇದ್ದ ಕಡ್ಡಿ ಸಣ್ಣಕ್ಕೂ ಆ ಗೂನ್ ಬೆನ್ನು ಮಾಡಿ ನಡೆಯುವ ಶೈಲಿಗೂ ಒಳ್ಳೆ ಪ್ರಶ್ನಾರ್ಥಕ ಚಿಹ್ನೆ ತರ ಕಾಣ್ತಿದ್ದೆ.

ನಮ್ಮಮ್ಮನ ವಾಕಿಂಗ್ ಫ್ರೆಂಡ್ ಒಬ್ಬರ ಸಲಹೆಯ ಮೇಲೆ ನಾನು ಇನ್ನು ಎತ್ತರ ಬೆಳೆಯದಂತೆ ಹಾರ್ಮೋನ್ ಕೊಡಿಸೋಕೆ ಡಾಕ್ಟರ್ ಸಲಹೆ ಕೇಳಲು ಅಮ್ಮ ಕರೆದುಕೊಂಡು ಹೋದ್ರು. ಅದು ನನ್ನ ಜೀವನದ ಮಹತ್ವದ ತಿರುವುಗಳಲ್ಲಿ ಒಂದು. ಆ ಡಾಕ್ಟರ್ ನನಗೆ ಆತ್ಮವಿಶ್ವಾಸ ತುಂಬಲಿಲ್ಲ ಅಂದಿದ್ರೆ, ನಾನು ಇಂದಿಗೂ ಅದೇ ಕೀಳಿರಿಮೆಯಲ್ಲೇ ಇರುತಿದ್ದೆನೋ ಏನೋ.

ಆ ಲೇಡಿ ಡಾಕ್ಟರ್, ನನ್ನನ್ನು ಹಾರ್ಮೋನ್ ಕೊಡಿಸಲು ಕರೆದುಕೊಂಡು ಹೋದ ನಮ್ಮಮ್ಮನಿಗೆ ಚೆನ್ನಾಗಿ ತಿಳಿಹೇಳಿದ್ರು. ನಿನ್ನ ಹೈಟ್ ಬಗ್ಗೆ ಮಾತಾಡೋರಿಗೆ ನಿನ್ನ ನೋಡಿ ಹೊಟ್ಟೆ ಉರಿ. ನಿನ್ನಷ್ಟು ಎತ್ತರಕ್ಕೆ ಬರಲು  ಬೇರೆಯವರು ಹೀಲ್ಡ್ಸ್ ಹಾಕೊಂಡು ಕಷ್ಟ ಪಡ್ತಾರೆ. ದೇವರು ಎಲ್ಲರಿಗೂ ಒಂದೊಂದು ವಿಶೇಷತೆ ಕೊಟ್ಟಿರುತ್ತಾನೆ. ನಿನಗೆ ಈ  ಒಳ್ಳೆ ಹೈಟ್ ಕೊಟ್ಟಿದ್ದಾನೆ. ಯಾವತ್ತಿಗೂ ಈ ಕೀಳರಿಮೆಯನ್ನು ಬೆಳೆಸಿಕೊಳ್ಳಬೇಡ, ಅಂತ ಚೆನ್ನಾಗಿ ತಿಳಿ ಹೇಳಿದ್ರು. ನಿನ್ನಷ್ಟು ಹೈಟ್ ನನಗಿದ್ದಿದ್ದರೆ ಸ್ಪೋರ್ಟ್ಸ್ ಅಥವಾ ಮಾಡ್ಲಿಂಗ್ ಮಾಡ್ತಿದ್ದೆ ಅಂತ ಹುರಿದುಂಬಿಸಿ ಕಳುಹಿಸಿದ್ರು.

ನಮ್ಮೂರಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ  ಭಾಗವಹಿಸುವಷ್ಟು ನನಗೆ ಆತ್ಮವಿಶ್ವಾಸ  ಮೂಡಿತ್ತು. ಅಷ್ಟೇ ಅಲ್ಲ ನಂತರ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿದೆ. ಅದು ನನಗೆ ಭಾರಿ ಹೆಮ್ಮೆಯ ವಿಷಯವಾಗಿತ್ತು. ಈಗಲೂ ಸಹ. ಬಹಳ  ಹುಡುಕಿದ ಮೇಲೆ ನನ್ನ ಹೈಟ್‌ಗೆ ಸರಿಹೊದುವಂತಹ ಹುಡುಗನನ್ನ ಮದುವೆಯಾಗಿದ್ದೀನಿ ಈಗ. ನನ್ನವರಿಗೆ ನನ್ನ ಹೈಟ್ ತುಂಬಾ ಇಷ್ಟ. ನಾನು  ಇಲ್ಲಿ ನ್ಯೂರ್ಯಕ್‌ಗೆ ಬಂದ ಹೊಸದರಲ್ಲಿ ನನಗಿಂತ ಎತ್ತರದ ಹುಡುಗಿಯರನ್ನು ನೋಡೋದೆ ಒಂದು ಸಂತಸದ ವಿಷಯವಾಗಿತ್ತು. ನನ್ನ ಉದ್ದ ಪಾದಕ್ಕೆ  ಚಪ್ಪಲಿ -ಶೂಗಳನ್ನ ಮುಂಚಿನ ತರ ಹುಡುಕ ಬೇಕಾಗಿಲ್ಲ. ಅದೂ ಸೈಜ್ ೧೦. ನನ್ನಲ್ಲಿ ಮುಂಚೆ ಇದ್ದ ಕೀಳರಿಮೆ ಯಾರಲ್ಲಾದ್ರೂ ಕಂಡ್ರೆ, ನಾನು ಕುಳ್ಳಿ, ಡುಮ್ಮಿ, ನಾನು ಚೆನ್ನಾಗಿಲ್ಲಾ. ಬಣ್ಣ ಕಪ್ಪು. ಹೀಗೆ ಅಂದುಕೊಂಡು ಮನಸಿನಲ್ಲಿ ಅಳುಕು ಇರಿಸಿಕೊಂಡಿರೋರಿಗೆ ನನ್ನ ಅನುಭವದ ಮಾತುಗಳನ್ನು ಹೇಳಿ, ಆತ್ಮವಿಶ್ವಾಸ ತುಂಬೋ ಪ್ರಯತ್ನ ಮಾಡ್ತೀನಿ.

ಅಂದ ಹಾಗೆ ಹೇಳಲು ಮರೆತಿದ್ದೆ. ನನ್ನ ಹೈಟ್ ೫ ಅಡಿ ೧೦ ಅಂಗುಲ. ಸಾಮಾನ್ಯ ಹುಡುಗಿಯರ ಹೈಟ್‌ಗಿಂತ ಅರ್ಧ ಅಡಿ ಜಾಸ್ತಿ. ಈಗ ನನ್ನ ಹೈಟ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಮ್ಮ ನೆಂಟರಿಷ್ಟರಲ್ಲಿ ನನ್ನಷ್ಟು ಎತ್ತರ ಇರುವ ಹುಡುಗಿ ಯಾರೂ ಇಲ್ಲ ಅಂತ ಬೀಗುತ್ತಿರುತ್ತೀನಿ. ಹುಡುಗರಲ್ಲಿ ನನ್ನ ತಮ್ಮ ರೆಕಾರ್ಡ್  ಮಾಡಿದ್ದಾನೆ. ೬ ಅಡಿ ೩ ಅಂಗುಲ. ನೋಡೋಣ ನನ್ನ ಮಗಳು ನನ್ನ ರೆಕಾರ್ಡ್ ಬ್ರೇಕ್ ಮಾಡ್ತೋಳೋ ಹೇಗೆ ಅಂತ.

 

(ಮುಖಪುಟ ಚಿತ್ರ: ರೂಪಶ್ರೀ ಕಲ್ಲಿಗನೂರ್)