ಫ್ರಾಂನ್ಝ್ ಕಾಫ್ಕಾ

ಏನಾದರೂ ಬೇಕೆನಿಸಿದರೆ ಅದನ್ನವರು ಸುಮ್ಮನೇ ಎತ್ತಿಕೊಳ್ಳುತ್ತಾರೆ. ಜಬರಿಸಿ ಹೆದರಿಸಿ ತೆಗೆದುಕೊಳ್ಳುತ್ತಾರೆ ಅಂತ ಕೂಡಾ ಹೇಳಲಾಗದು. ತಮಗೆ ಬೇಕೆನಿಸಿದ್ದಕ್ಕೆ ಅವರು ಕೈ ಹಾಕಿದಾಗ ನೀವು ಸುಮ್ಮನೇ ಪಕ್ಕಕ್ಕೆ ಸರಿದು ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡುತ್ತೀರಿ. ನನ್ನ ಅಂಗಡಿಯಿಂದ ಕೂಡಾ ಅನೇಕ ಒಳ್ಳೊಳ್ಳೆ ವಸ್ತುಗಳನ್ನವರು ಎತ್ತಿಕೊಂಡು ಹೋಗಿದ್ದಾರೆ. ಆದರೆ ಪಕ್ಕದ ಬೀದಿಯ ಮಾಂಸದಂಗಡಿಯವನ ಗೋಳಿಗೆ ಹೋಲಿಸಿದರೆ ನನ್ನದ್ಯಾವ ಲೆಕ್ಕ. ಅವನು ಅಂಗಡಿಗೆ ಮಾಂಸ ತರುವದಕ್ಕಿಲ್ಲ, ಈ ಅಲೆಮಾರಿಗಳು ಎಲ್ಲವನ್ನೂ ಅವನಿಂದ ಕಿತ್ತುಕೊಂಡು ಕಬಳಿಸಿಬಿಡುತ್ತಾರೆ. ಶ್ರೀಕಾಂತ ಪ್ರಭು ಅನುವಾದಿಸಿದ ಕಾಫ್ಕಾನ ಕಥೆ.

ದೇಶದ ಭದ್ರತಾ ವ್ಯವಸ್ಥೆಯನ್ನು ನಾವು ಬಹಳ ನಿರ್ಲಕ್ಷಿಸಿದ್ದೇವೆ ಅನಿಸುತ್ತದೆ. ಇಲ್ಲಿಯವರೆಗೆ ಅದರ ಬಗ್ಗೆ ಗಮನವನ್ನೇ ಹರಿಸದೇ ನಮ್ಮಷ್ಟಕ್ಕೆ ನಾವು ನಮ್ಮ ನಿತ್ಯಕರ್ಮಗಳಲ್ಲಿ ತೊಡಗಿಕೊಂಡಿದ್ದೆವು. ಆದರೆ ಇತ್ತೀಚಿನ ಕೆಲವು ಘಟನೆಗಳು ನಮ್ಮಲ್ಲಿ ಕಳವಳ ಉಂಟುಮಾಡುತ್ತಿವೆ.

ಮಹಾರಾಜರ ಅರಮನೆಯ ಎದುರಿನ ಚೌಕದಲ್ಲಿ ನನ್ನದೊಂದು ಚಪ್ಪಲಿಹೊಲಿಯುವ ಅಂಗಡಿ ಇದೆ. ಬೆಳ್ಳಂಬೆಳಗು ನಾನು ಅಂಗಡಿ ಬಾಗಿಲು ಇನ್ನೇನು ತೆರೆಯಬೇಕು ಅನ್ನುವಷ್ಟರಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಚೌಕವನ್ನು ಬಂದು ಸೇರುವ ಎಲ್ಲ ಬೀದಿಗಳ ಮೊದಲಲ್ಲಿ ನೇಮಿಸಲಾದ ಈ ಸಶಸ್ತ್ರ ಯೋಧರು. ಆದರೆ ಈ ಸೈನಿಕರು ನಮ್ಮವರಲ್ಲ, ಉತ್ತರದ ಕಡೆಯಿಂದ ಬಂದ ಅಲೆಮಾರಿಗಳು ಎಂದು ಮೇಲು ನೋಟಕ್ಕೇ ಗೊತ್ತಾಗುತ್ತಿತ್ತು. ಗಡಿಯಿಂದ ಬಹಳ ದೂರವಿರುವ ರಾಜಧಾನಿಯ ಒಳಗೆ ನುಗ್ಗಿ ಅದು ಹೇಗೆ ಇವರು ಇಷ್ಟುದೂರ ಬಂದರು ಎಂಬುದೇ ನನಗೆ ಅರ್ಥವಾಗಲಿಲ್ಲ. ಹೇಗಾದರೂ ಸರಿ, ಒಟ್ಟಾರೆ ಈಗವರು ಇಲ್ಲಿ ಇದ್ದಾರೆ. ಪ್ರತಿದಿನ ಬೆಳಿಗ್ಗೆ ಅವರ ಸಂಖ್ಯೆ ಹೆಚ್ಚುತ್ತಲೇ ಇದೆ ಅನ್ನಿಸುತ್ತದೆ.

ಸ್ವಭಾವಕ್ಕಣುಗುಣವಾಗಿ ಅವರು ತೆರೆದ ಆಕಾಶದ ಕೆಳಗೆ ಬಯಲಲ್ಲೇ ತಮ್ಮ ಠಿಕಾಣಿ ಹೂಡಿದ್ದಾರೆ. ವಾಸದ ಮನೆಗಳೆಂದರೇ ಅವರಿಗೆ ಅಸಹ್ಯ. ಖಡ್ಗಗಳಿಗೆ ಸಾಣೆಹಿಡಿಯುತ್ತ, ಬಾಣಗಳನ್ನು ಚಿಮ್ಮಿಸಿ ಅಭ್ಯಾಸ ಮಾಡುತ್ತ ಅಥವಾ ಕುದುರೆ ಸವಾರಿ ಕಲಿಯುತ್ತಲೋ ಅವರು ತಮ್ಮ ಸಮಯ ಕಳೆಯುತ್ತಾರೆ. ಒಂದುಕಾಲಕ್ಕೆ ಲಕಲಕಿಸುವಂತೆ ಸ್ವಚ್ಚವಾಗಿ ಇರಿಸಿ ತುಂಬಾ ಕಾಳಜಿಪೂರ್ವಕ ನೋಡಿಕೊಂಡ ಶಾಂತಿಯುತ ಚೌಕವನ್ನು ಅವರು ಅಕ್ಷರಶಹ ಕುದುರೆಲಾಯವಾಗಿ ಪರಿವರ್ತಿಸಿದ್ದಾರೆ. ಅಗಾಗ ನಮ್ಮ ಅಂಗಡಿಗಳಿಂದ ಹೊರಗೋಡಿ ಬಂದ ನಾವು ತುಂಬಾ ಕೊಳಕಾದ ಗಲೀಜನ್ನು ಸ್ವಲ್ಪವಾದರೂ ತೆಗೆಯಲು ಪ್ರಯತ್ನಿಸುತ್ತಿರುತ್ತೇವೆ. ಅದೂಕೂಡ ಈಗೀಗ ಕಡಿಮೆಯಾಗುತ್ತಿದೆ; ಯಾಕೆಂದರೆ ನಮ್ಮ ವ್ರಥಾಶ್ರಮದಿಂದ ಯಾವುದೇ ಪ್ರಯೊಜನವಿಲ್ಲ. ಅದೂ ಅಲ್ಲದೇ ದೌಡಾಯಿಸುವ ಆ ಹುಚ್ಚುಕುದುರೆಗಳ ಕಾಲ್ಕೆಳಗೆ ಸಿಕ್ಕೋ ಅಥವಾ ಸವಾರರ ಚಾಟಿ ಏಟುಗಳನ್ನು ತಿಂದೋ ಕೈಕಾಲು ಊನ ಮಾಡಿಸಿಕೊಳ್ಳುವ ಅಪಾಯಕ್ಕೆ ನಾವು ಸಿಕ್ಕಿಕೊಳ್ಳಬೇಕಾಗುತ್ತದೆ.

ಈ ಅಲೆಮಾರಿಗಳ ಜೊತೆ ಮಾತುಕತೆಯಂತೂ ಸಾಧ್ಯವೇಇಲ್ಲ. ಅವರಿಗೆ ನಮ್ಮ ಭಾಷೆಯ ಪರಿಚಯವೇಇಲ್ಲ. ಅಷ್ಟೇಕೆ ಅವರಿಗೆ ತಮ್ಮದೇ ಆದ ಒಂದು ಸರಿಯಾದ ಭಾಷೆ ಕೂಡಾ ಇಲ್ಲ. ಕಾಗೆಗಳು ಸಂಭಾಷಿಸುವಂತೆ ಅವರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾರೆ. ಕಾಗೆಗಳ ಕರ್ಕಶ ಕೀಚಲು ಮಾತ್ರ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಿರುತ್ತದೆ. ನಮ್ಮ ಬದುಕಿನ ರೀತಿ ನಮ್ಮ ಸಂಘಸಂಸ್ಥೆಗಳು ಯಾವುದೂ ಅವರಿಗೆ ಅರ್ಥವಾಗುವದೂ ಇಲ್ಲ. ಮತ್ತು ಆ ನಿಟ್ಟಿನಲ್ಲಿ ಅವರು ಪ್ರಯತ್ನ ಕೂಡಾ ಮಾಡುವದಿಲ್ಲ. ಹಾಗಾಗಿ ನಮ್ಮ ಕೈಸನ್ನೆ, ಸಂಕೇತದ ಭಾಷೆಯನ್ನು ಕೂಡಾ ಅರ್ಥಮಾಡಿಕೊಳ್ಳುವ ಗೋಜಿಗೇ ಅವರು ಹೋಗುವದಿಲ್ಲ. ನಿಮ್ಮ ಬಾಯಿ ಬಿದ್ದುಹೋಗುವವರೆಗೆ, ಇಲ್ಲ ಮಣಿಕಟ್ಟು ಉಳುಕಿಹೋಗುವಷ್ಟು ಕೈ ಸನ್ನೆಮಾಡಿ ಮಾತನಾಡಿಸಿದರೂ ಅವರಿಗದು ಅರ್ಥವಾಗುವದಿಲ್ಲ. ಆಗುವ ಸಾಧ್ಯತೆಯೂಇಲ್ಲ. ಅಗಾಗ ಅವರು ಮುಖ ಕಿವಿಚುತ್ತಿರುತ್ತಾರೆ. ಆಗ ಅವರ ಕಣ್ಣುಗಳು ಮೇಲಕ್ಕೆ ಸೇದಿ ಬಿಳಿಗುಡ್ಡೆಗಳು ಕಾಣಿಸಿ ತುಟಿಗಳ ಮೇಲೆ ನೊರೆ ಮಡುಗಟ್ಟುತ್ತದೆ. ಅದಕ್ಕೆ ಯಾವುದೇ ವಿಷೇಶವಾದ ಅರ್ಥವಿಲ್ಲ. ಹೆದರಿಸಬೇಕು ಅಂತಕೂಡ ಅದನ್ನವರು ಮಾಡುವದಿಲ್ಲ. ಅದು ಅವರ ಪ್ರಕೃತಿಯಲ್ಲೇ ಬಂದಿದೆ; ಹಾಗಾಗಿ ಅವರು ಆ ರೀತಿ ಮುಖ ಕಿವುಚುತ್ತಿರುತ್ತಾರೆ.

ಏನಾದರೂ ಬೇಕೆನಿಸಿದರೆ ಅದನ್ನವರು ಸುಮ್ಮನೇ ಎತ್ತಿಕೊಳ್ಳುತ್ತಾರೆ. ಜಬರಿಸಿ ಹೆದರಿಸಿ ತೆಗೆದುಕೊಳ್ಳುತ್ತಾರೆ ಅಂತ ಕೂಡಾ ಹೇಳಲಾಗದು. ತಮಗೆ ಬೇಕೆನಿಸಿದ್ದಕ್ಕೆ ಅವರು ಕೈ ಹಾಕಿದಾಗ ನೀವು ಸುಮ್ಮನೇ ಪಕ್ಕಕ್ಕೆ ಸರಿದು ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡುತ್ತೀರಿ. ನನ್ನ ಅಂಗಡಿಯಿಂದ ಕೂಡಾ ಅನೇಕ ಒಳ್ಳೊಳ್ಳೆ ವಸ್ತುಗಳನ್ನವರು ಎತ್ತಿಕೊಂಡು ಹೋಗಿದ್ದಾರೆ. ಆದರೆ ಪಕ್ಕದ ಬೀದಿಯ ಮಾಂಸದಂಗಡಿಯವನ ಗೋಳಿಗೆ ಹೋಲಿಸಿದರೆ ನನ್ನದ್ಯಾವ ಲೆಕ್ಕ. ಅವನು ಅಂಗಡಿಗೆ ಮಾಂಸ ತರುವದಕ್ಕಿಲ್ಲ, ಈ ಅಲೆಮಾರಿಗಳು ಎಲ್ಲವನ್ನೂ ಅವನಿಂದ ಕಿತ್ತುಕೊಂಡು ಕಬಳಿಸಿಬಿಡುತ್ತಾರೆ. ಅವರ ಕುದುರೆಗಳು ಕೂಡಾ ಮಾಂಸ ಗದಕುತ್ತವೆ. ಬಹಳಷ್ಟು ಸಾರಿ ಕುದುರೆ ಮತ್ತು ಅದರ ಒಡೆಯ ಪಕ್ಕಪಕ್ಕದಲ್ಲೇ ಬಿದ್ದುಕೊಂಡು ಒಟ್ಟೊಟ್ಟಿಗೇ ಒಂದೇ ಮಾಂಸದ ತುಂಡಿನ ಎರಡು ತುದಿಗೆ ಬಾಯಿ ಹಾಕಿರುತ್ತಾರೆ. ಮಾಂಸದಂಗಡಿಯವನಿಗೆ ಎಷ್ಟು ಭಯವೆಂದರೆ ಆತ ತಾನು ತರಿಸುವ ಮಾಂಸದ ಸರಬರಾಜನ್ನು ಕೂಡಾ ನಿಲ್ಲಿಸಲಾರ. ನಮಗೆ ಅದು ಅರ್ಥವಾಗುತ್ತದೆ. ಹಾಗಾಗಿ ನಾವೆಲ್ಲರೂ ಹಣ ಚಂದಾಎತ್ತಿ ಆತ ತನ್ನ ಕೆಲಸವನ್ನು ನಿಲ್ಲಿಸದೇ ಮುಂದುವರೆಸುವಂತೆ ಸಹಾಯ ಮಾಡುತ್ತೇವೆ. ಅಕಸ್ಮಾತ್ ಮಾಂಸವೇನಾದರೂ ಸಿಕ್ಕದಿದ್ದಲ್ಲಿ ಈ ಅಲೆಮಾರಿಗಳು ಏನು ಮಾಡಿಬಿಡುತ್ತಾರೋ ಯಾರಿಗೆ ಗೊತ್ತು. ದಿನಂಪ್ರತಿ ಮಾಂಸ ಸಿಗುವಾಗ ಕೂಡಾ ಅವರ ತಲೆಗೆ ಇನ್ನೂ ಏನೇನು ಹೊಳೆಯುತ್ತೋ.

ಇತ್ತೀಚೆಗೆ ನಡೆದ್ದು ಹೀಗೆ. ಕೊನೇಪಕ್ಷ ಮಾಂಸವನ್ನು ಕಡಿದುತಂದು ಒಪ್ಪಿಸುವ ಶ್ರಮವನ್ನಾದರೂ ತಪ್ಪಿಸಿಕೊಳ್ಳಬಹುದೇನೋ ಎಂದುಕೊಂಡ ಕಟುಕರವನು ಅಂದು ಒಂದು ಜೀವಂತ ಎತ್ತನ್ನೇ ತೆಗೆದುಕೊಂಡುಬಂದ. ಅಂಥ ತಪ್ಪನ್ನು ಮತ್ತೆ ಮಾಡುವ ಧೈರ್ಯವನ್ನು ಆತ ಇನ್ನೆಂದೂ ಮಾಡಲಾರ. ಆ ಎತ್ತಿನ ಆರ್ತನಾದ ಕೇಳುವದನ್ನು ತಪ್ಪಿಸಿಕೊಳ್ಳಲು ನಾನು ನನ್ನ ಅಂಗಡಿಯ ಹಿಂಭಾಗಕ್ಕೆ ಓಡಿ ನನ್ನಲ್ಲಿ ಏನೆಲ್ಲ ದಿಂಬು, ಹೊದಿಕೆ, ಕಂಬಳಿ ಬಟ್ಟೆಬರೆ ಇದೆಯೋ ಅದನ್ನೆಲ್ಲ ತಲೆಗೆ ಹೊದ್ದು ಕಿವಿಮುಚ್ಚಿಕೊಂಡು ನೆಲದ ಮೇಲೆ ಪೂರ್ತಿ ಒಂದು ಘಂಟೆ ಬೋರಲಾಗಿ ಬಿದ್ದುಕೊಂಡಿದ್ದೆ. ಎತ್ತಿನಮೇಲೆ ಎಲ್ಲಕಡೆಯಿಂದ ಜಿಗಿದು ದಾಳಿಮಾಡಿದ ಅಲೆಮಾರಿಗಳು ತಮ್ಮ ಹಲ್ಲುಗಳಿಂದ ಮಾಂಸದ ತುಣುಕುಗಳನ್ನು ಅದು ಬದುಕಿರುವಂತೆಯೇ ಕಿತ್ತು ತಿನ್ನುತ್ತಿದ್ದರು. ನಾನು ಈಚೆ ಬರುವ ಧೈರ್ಯಮಾಡಿದ್ದು ಬಹಳ ಹೊತ್ತಿನ ನಿಶ್ಶಬ್ದ ಕವಿದ ಮೇಲೆಯೇ. ತಿಂದುತಿಂದು ಸುಸ್ತಾದ ಅವರೆಲ್ಲ ಅಳಿದುಳಿದ ಅಸ್ತಿಪಂಜರದ ಸುತ್ತ ಹೆಂಡದ ಪೀಪಾಯಿಯ ಸುತ್ತ ಬಿದ್ದುಕೊಂಡ ಕುಡುಕರಂತೆ ಒರಗಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ನನಗೆ ಅರಮನೆಯ ಕಿಟಕಿಯ ಬಳಿ ಖುದ್ದು ಮಹರಾಜರನ್ನೇ ನೋಡಿದಂತೆ ಭಾಸವಾಯಿತು. ಸಾಮಾನ್ಯವಾಗಿ ಅವರು ಈ ಹೊರಗಿನ ಕೊಠಡಿಗಳನ್ನು ಪ್ರವೇಶಿಸುವುದೇ ಇಲ್ಲ. ಅವರು ಏನಿದ್ದರೂ ಅರಮನೆಯ ಪೂರ್ತಿ ಒಳಭಾಗದಲ್ಲಿರುವ ತೋಟದಲ್ಲಿಯೇ ತಮ್ಮ ಸಮಯ ಕಳೆಯುವದು. ಆದರೂ ಈ ಸಂದರ್ಭದಲ್ಲಿ ಮಾತ್ರ ಅವರು ಅರಮನೆಯ ಕಿಟಕಿಯ ಬಳಿ ತಲೆತಗ್ಗಿಸಿ ನಿಂತು ತನ್ನ ಮನೆಯ ಮುಂದೆ ನಡೆಯುತ್ತಿರುವ ಘಟಣಾವಳಿಗಳನ್ನು ನೋಡುತ್ತಿದ್ದರು. ಕೊನೇಪಕ್ಷ ನನಗಂತೂ ಹಾಗೆ ಅನ್ನಿಸಿತು.

“ಮುಂದೇನಾಗಬಹುದು”? ಎಂದು ನಮ್ಮನ್ನು ನಾವೇ ಕೇಳಿಕೊಳ್ಳುತ್ತೇವೆ.

“ಇನ್ನೆಷ್ಟು ದಿನ ಈ ಕಿರುಕುಳ ಮತ್ತು ಹಿಂಸೆಯನ್ನು ಸಹಿಸಬೇಕು”?
ಮಹಾರಾಜರ ಅರಮನೆ ಈ ಅಲೆಮಾರಿಗಳನ್ನು ಇಲ್ಲಿಗೆ ತರಿಸಿದೆ. ಆದರೆ ಅವರನ್ನು ಮತ್ತೆ ಇಲ್ಲಿಂದ ಓಡಿಸುವದು ಹೇಗೆ ಎಂದು ಅವರಿಗೆ ಗೊತ್ತಿಲ್ಲ. ಅರಮನೆಯ ಮಹಾದ್ವಾರ ಮುಚ್ಚಿಕೊಂಡಿದೆ. ಮೊದಲೆಲ್ಲ ಸಡಗರದಿಂದ ಹಿಂದೆಮುಂದೆ ಓಡಿಯಾಡಿಕೊಂಡು ಗಸ್ತು ಹೊಡೆಯುತ್ತಿದ್ದ ಅರಮನೆಯ ಕಾವಲು ಭಟರು ಈಗ ಒಳಗೆ ಭದ್ರಕಿಟಕಿಗಳ ಹಿಂದೆ ಸೇರಿಕೊಡಿದ್ದಾರೆ.
ದೇಶವನ್ನು ಉಳಿಸುವ ಕೆಲಸ ಈಗ ನಾವು ಕುಶಲಕರ್ಮಿಗಳು ಮತ್ತು ವ್ಯಾಪಾರಸ್ಥರ ಪಾಲಿಗೆ ಬಂದಿದೆ. ಆದರೆ ಇಂಥ ಕೆಲಸಕ್ಕೆ ನಾವು ಲಾಯಕ್ಕಾದವರಲ್ಲ. ಇದು ನಮ್ಮ ಕೈಲಾಗುತ್ತೆ ಅಂತ ಕೂಡ ನಾವು ಯಾವತ್ತೂ ಹೇಳಿಕೊಂಡಿಲ್ಲ. ಇದು ಒಂದು ಬಗೆಯ ತಪ್ಪು ತಿಳುವಳಿಕೆ. ಇದು ನಮ್ಮನ್ನು ನಾಶಮಾಡಿಬಿಡುತ್ತದೆ.

(ಮುಖಪುಟ ಕಲೆ: ರೂಪಶ್ರೀ ಕಲ್ಲಿಗನೂರ್)