೧೯೭೩ರ ಜ್ಞಾನಪೀಠ ಪ್ರಶಸ್ತಿ ಕನ್ನಡದ ವರಕವಿ ಬೇಂದ್ರೆಯವರಿಗೂ ಒರಿಸ್ಸಾದ ಪ್ರಖ್ಯಾತ ಕಾದಂಬರಿಕಾರ ಗೋಪೀನಾಥ ಮೊಹಂತಿ ಅವರಿಗೂ ದೊರೆತ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನವೆಂಬರ್ ೮, ೧೯೭೪ ರ೦ದು ನಡೆಯಿತು. ಅದರ ಮಾರನೆಯ ದಿವಸವೇ ಬೆಳಿಗ್ಗೆ ದೆಹಲಿ ಕರ್ನಾಟಕ ಸಂಘ ಈ ಇಬ್ಬರು ಸಾಹಿತಿಗಳಿಗೂ ವಿಶೇಷ ಸತ್ಕಾರ ಏರ್ಪಡಿಸಿತ್ತು.

ನನ್ನ ಹಿರಿಯಣ್ಣ ಶ್ರೀ ಎಚ್.ವೈ. ಶಾರದಾಪ್ರಸಾದರೂ ನಾನೂ ಆ ವೇಳೆಗೆ ದೆಹಲಿಯಲ್ಲಿ ನೆಲಸಿ ಹಲವು ವರ್ಷಗಳೇ ಅಗಿದ್ದವು. ಅಣ್ಣ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ವಾರ್ತಾ ಸಲಹೆಗಾರರಾಗಿದ್ದರು. ನಾನು ದೆಹಲಿ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕನಾಗಿದ್ದೆ. ನಾನು ನಮ್ಮ ಅಣ್ಣನಿಗಿಂತ ಆರೂವರೆ ವರ್ಷ ಚಿಕ್ಕವನಾದರೂ ನಾವಿಬ್ಬರೂ ಆ ಹೊತ್ತಿಗೆ ಆರ್ಕಾಟ್ ರಾಮಸ್ವಾಮಿ ಮತ್ತು ಲಕ್ಷ್ಮಣಸ್ವಾಮಿ ಮೊದಲಿಯಾರ್ ಸಹೋದರರಷ್ಟು ಅಲ್ಲದಿದ್ದರೂ – ಬಹುಮಟ್ಟಿಗೆ ಒಂದೇ ತರಹ ಕಾಣುತ್ತಿದ್ದೆವು. ನಮ್ಮ ಹತ್ತಿರದ ಪರಿಚಯದವರಿಗೂ ಒಂದೊಂದು ಸಲ ಅಣ್ಣ-ತಮ್ಮಂದಿರನ್ನು ಗುರುತಿಸುವುದು ಕಷ್ಟವಾಗುತ್ತಿತ್ತು.

ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭಕ್ಕೆ ನಾನು ಹೋಗಲಾಗಲಿಲ್ಲ. ನಮ್ಮ ಅಣ್ಣ ಅದರಲ್ಲಿ ಭಾಗವಹಿಸಿ ತಮ್ಮ ಅಭಿವಂದನೆಗಳನ್ನು ಬೇಂದ್ರೆಯವರಿಗೆ ಅರ್ಪಿಸಿದರು. ಅಣ್ಣ ಶಾರದಾಪ್ರಸಾದರ ಬಗ್ಗೆ ಬೇಂದ್ರೆಯವರಿಗೆ ತುಂಬ ಪ್ರೀತಿ, ಅಭಿಮಾನ.

ಅದೇ ದಿನ ಸಂಜೆ ದೆಹಲಿ ವಿಶ್ವವಿದ್ಯಾಲಯದ  ಆಧುನಿಕ ಭಾರತೀಯ ಭಾಷೆಗಳ ವಿಭಾಗದ ಶಿಕ್ಷಕ ವರ್ಗ ಇಬ್ಬರು ಬಹುಮಾನಿತರನ್ನೂ ಆಹ್ವಾನಿಸಿ ಒಂದು ಸಭೆ ಏರ್ಪಡಿಸಿತ್ತು. ನಮ್ಮ ಅಣ್ಣನಿಗೆ ವಿಪರೀತ ಕೆಲಸವಿದ್ದುದರಿಂದ ಆ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ. ಆದರೆ ನಾನು ಅದಕ್ಕೆ ಹೋಗಲೇಬೇಕೆಂದು ತೀರ್ಮಾನಿಸಿದ್ದೆ. ನಾನು ಸುಮಾರು ೧೨-೧೩ ವರ್ಷದ ಬಾಲಕನಿದ್ದಾಗ ಮೈಸೂರು ಮಹಾರಾಜ ಕಾಲೇಜಿನ ಪ್ರಾಂಗಣದಲ್ಲಿ ಬೇಂದ್ರೆಯವರು ತಮ್ಮ ಕಂಚಿನ ಕಂಠದಲ್ಲಿ ಹಾಡಿದ್ದ ಗಂಗಾವತರಣ ಗೀತೆಯನ್ನು ಕೇಳಿ ಚಕಿತನಾಗಿದ್ದೆ. ಆ ಅನುಭವ ಎಂದಿಗೂ ಮರೆಯುವಂತಿಲ್ಲ. ಸಭೆ ಪ್ರಾರಂಭವಾಗುವ ಮುನ್ನ ಉಪಾಹಾರದ ಸಮಯದಲ್ಲಿ ಬೇಂದ್ರೆಯವರನ್ನು ಸಂದರ್ಶಿಸಿ ನನ್ನ ಪರಿಚಯ ಹೇಳಿಕೊಂಡೆ:  ನಾನು ಶಾರದಾಪ್ರಸಾದರ ತಮ್ಮ ಮೋಹನರಾಂ. ನಾನು ಇದೇ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡಿಗರಿಗೆ ನೀವು ಅಪಾರವಾದ ಹೆಮ್ಮೆ ಗೌರವಗಳನ್ನು ತಂದಿದ್ದೀರಿ… ಅದಾದಮೇಲೆ ನೀವು ಚಹ ತೆಗೆದುಕೊಳ್ಳುತ್ತೀರಾ? ಸಕ್ಕರೆ ಹಾಕಬಹುದೆ? ಎಷ್ಟು ಚಮಚ ಹಾಕಲಿ? ಎಂದೆ.  ಬೇಂದ್ರೆಯವರು ಕೊಟ್ಟ ಉತ್ತರ ನನ್ನನ್ನು ಆಶ್ಚರ್ಯಗೊಳಿಸಿತು:  ನೋಡಿ, ನಾನು ಹಳೇ ಕಾಲದವನು, ನನಗೆ ಯಾವ ತರಹೆಯ ಕಾಯಿಲೆ ಕಸಾಲೆ ಇಲ್ಲ. ಆರು ಚಮಚ ಹಾಕಿ… ಲೋಟದಲ್ಲಿ ಚಮಚ ನಿಂತಿರಬೇಕು. ನಾನೇ ಅದನ್ನು ಕರಗಿಸಿ, ಕುಡಿದು ಅರಗಿಸಿಕೊಂಡೇನು. ಚಹ ಮಾತ್ರ ಬಿಸಿಯಾಗಿರಲಿ. ಅವರು ಕೋರಿದಂಥ ಚಹ ಒದಗಿಸಿ, ಮತ್ತೇನೋ ಕೆಲಸವಿದ್ದುದರಿಂದ ಸ್ವಲ್ಪ ಅವರಿಂದ ಬೇರ್ಪಟ್ಟು ಕೆಲವೇ ನಿಮಿಷಗಳ ನಂತರ ಅವರನ್ನು ಮತ್ತೆ ಕಂಡೆ. ಆಗ ಅವರು, ಶಾರದಾಪ್ರಸಾದ್, ನೀವು ಬೆಳಿಗ್ಗೆ ಕರ್ನಾಟಕ ಸಂಘದ ಸಭೆಗೆ ಬಂದಿದ್ದೀರಿ. ನಿಮಗೆ ಭಾರೀ ಕೆಲಸಗಳು ಇದ್ದಾವು, ಮತ್ತೆ ಇಲ್ಲಿಗೆ ದಯಮಾಡಿಸಿದರಲ್ಲ! ಅದಿರಲಿ, ಈಗ ತಾನೆ ನಿಮ್ಮ ತಮ್ಮನ ಭೇಟಿಯಾಯಿತು. ಅವರು ದಿಲ್ಲಿ ಯೂನಿವರ್ಸಿಟಿಯಲ್ಲಿ ಪ್ರೊಫ಼ೆಸರ್ ಅಗಿದ್ದಾರೆಂದು ತಿಳಿದು ಸಂತೋಷಪಟ್ಟೆ.  ಸರಿ, ನಾನು ಮತ್ತೆ ನನ್ನ ಪರಿಚಯ ಹೇಳಿಕೊಂಡೆ. ಅವರು ಅವಾಕ್ಕಾಗಿ ಹೋದರು.  ನಾವು ಅವಳಿ ಸಹೋದರರು ಅಂದುಕೊಂಡರೋ ಏನೋ!

ಡಾ. ಎಚ್.ವೈ. ಮೋಹನರಾಂ

ಅಂದು ಏರ್ಪಡಿಸಿದ್ದ ಸಮಾರಂಭದಲ್ಲಿ ನಮ್ಮ ವಿಶ್ವವಿದ್ಯಾಲಯದ ಕನ್ನಡ ಉಪಾಧ್ಯಾಯರಾಗಿದ್ದ ಶ್ರೀ ಕ.ವೆಂ. ರಾಘವಾಚಾರ್ಯರು ಬೇಂದ್ರೆ ಕವನಗಳ ಬಗ್ಗೆ ಭಾಷಣ ಮಾಡಿ ಅವರ ಗುಣಗಾನ ಮಾಡಿದರು. ಬೇಂದ್ರೆಯವರಿಗೆ ಚೆಂಡುಮಲ್ಲಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದರು. ಸಭೆ ಮುಕ್ತಾಯವಾದಮೇಲೆ ಬೇಂದ್ರೆಯವರು ನನ್ನನ್ನು ಕರೆದು, ನಮ್ಮ ಕಡೆ ಚೆಂಡುಮಲ್ಲಿಗೆ ಹಾರ ಬಲಿಗೆ ಸಿದ್ಧವಾಗಿರುವ ಆಡಿಗೋ ಕೋಣನಿಗೋ ಹಾಕುವ ಪದ್ಧತಿ. ಮಾರಮ್ಮನಿಗೆ ಈ ಹೂವು ಇಷ್ಟ. ನನಗೆ ಅರ್ಧಜ್ಞಾನಪೀಠ ಪ್ರಶಸ್ತಿ ತಾನೆ ಬಂದಿರುವುದು, ಆದ್ದರಿಂದ ಮಲ್ಲಿಗೆ ಹೂವಿನ ಹಾರಕ್ಕೆ ನಾನು ಯೋಗ್ಯನಲ್ಲ ಎಂದುಕೊಂಡರೋ! ಎಂದರು.  ನಾವಿಬ್ಬರೂ ಜೋರಾಗಿ ನಕ್ಕೆವು. ಕಾರಣ ತಿಳಿಯದ ಅಕ್ಕಪಕ್ಕದವರೂ ನಕ್ಕು ನಮ್ಮ ಸಂತೋಷದಲ್ಲಿ ಪಾಲುಗೊಂಡರು. ಸಸ್ಯಶಾಸ್ತ್ರ ಪಾಠಹೇಳುತ್ತ ದೆಹಲಿಯಲ್ಲಿ ೨೧ ವರ್ಷ ಕಳೆದಿದ್ದ ನಾನು ಬೇಂದ್ರೆಯವರಿಗೆ ಹೇಳಿದೆ: ಇಲ್ಲಿ ಮಲ್ಲಿಗೆ ಅಪರೂಪ. ಮೇ ತಿಂಗಳಿಂದ ಆಗಸ್ಟ್ ಕೊನೆಯವರೆಗೆ ಹಲವೇ ಮನೆಗಳ ತೋಟಗಳಲ್ಲಿ ದೊರೆಯಲು ಸಾಧ್ಯ. ನವೆಂಬರ್ ತಿಂಗಳಲ್ಲಿ ಹೇರಳವಾಗಿ ಸಿಕ್ಕುವ ಹೂವು ಈ ಚೆಂಡುಮಲ್ಲಿಗೆ.  ಇದು ಮೂಲತಃ ನಮ್ಮ ದೇಶದ ಹೂವಲ್ಲ. ಮೆಕ್ಸಿಕೋ ದೇಶದಿಂದ ೧೬ನೆಯ ಶತಮಾನದಲ್ಲಿ ಪೋರ್ಚುಗೀಸರ ಮೂಲಕ ಬಂದದ್ದು. ಬಣ್ಣ ಅಂದವಾಗಿರುತ್ತೆ, ಅದರೆ ಗಂಧ ಅಷ್ಟಕ್ಕಷ್ಟೆ… ಎರಡು ಮೂರು ದಿನಗಳಾದರೂ ಬಾಡದೆ ಇರುವ ಹೂವು ಇದು. ಪೂಜೆಗೆ, ಸತ್ಕಾರಕ್ಕೆ, ಸಿಂಗಾರಕ್ಕೆ ಇದನ್ನು ಇಲ್ಲಿ ಹೆಚ್ಚಾಗಿ ಬಳಸುತ್ತಾರೆ. ಒಂದು ಕಿಲೋ ಹೂವಿಗೆ ಎರಡೇ ರೂಪಾಯಿ. ಚಾಂದನಿ ಚೌಕದ ಮಂಡಿಗಳಲ್ಲಿ ದಿನಕ್ಕೆ ೨೫-೩೦ ಲಕ್ಷ ರೂಪಾಯಿಗಳಷ್ಟು ಹೂವಿನ ಮಾರಾಟ ಅಗುತ್ತೆ.  ಬೇಂದ್ರೆಯವರು, ನನಗೆ ಈ ವಿಚಾರಗಳು ಗೊತ್ತಿರಲಿಲ್ಲ, ನೀವು ಹೇಳಿದಮೇಲೆ ಚೆಂಡುಮಲ್ಲಿಗೆ ಹೂವಿನ ಮಹತ್ವ ತಿಳಿಯಿತು ಎಂದರು.

ನಾನು ಬೇಂದ್ರೆಯವರೊಡನೆ ಕಳೆದದ್ದು ಹಲವು ನಿಮಿಷಗಳು ಮಾತ್ರ. ಆದರೆ ಅವು ರಸನಿಮಿಷಗಳು. ಅವರಲ್ಲಿ ಕಂಡ ಸೂಕ್ಷ್ಮತೆ, ಅತ್ಮೀಯತೆ, ಸರಳತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ ವಿನೋದಪ್ರಿಯತೆ ನನ್ನ ಚಿರಂತನ ಅನುಭವಗಳಾಗಿ ಉಳಿದಿವೆ.

(ಲೇಖನ ಕೃಪೆ: ಎಚ್.ವೈ. ರಾಜಗೋಪಾಲ್)