ನನಗೆ ಬಂಗಾಳದ ಬಾವುಲ್ ಗಾಯಕರನ್ನು ನೋಡಬೇಕೆಂಬ ಇರಾದೆಯಿತ್ತು. ಇದಕ್ಕೆ ಕಾರಣ, ಈ ಬಾವುಲರು ಮಹಾ ಹಾಡುಗಾರರು. ದುಂಬಿಗಳಂತೆ ಮಧುರವಾಗಿ ಹಾಡುವ ಜನಪದ ಅನುಭಾವಿಗಳು. ಸೂಫಿಗಳ ಸೋದರ ಸಂಬಂಧಿಗಳು. ಸೂಫಿ ಸಂಗೀತಸಭೆಗಳಲ್ಲಿ (ಮೆಹಫಿಲ್-ಎ-ಸಮಾ) ಭಾಗವಹಿಸಿರುವ ನನಗೆ ಬಾವುಲರ ಸಂಗೀತಗೋಷ್ಠಿಗಳಲ್ಲಿ ಕುಳಿತುಕೊಳ್ಳುವ ಆಸೆಯಿತ್ತು. ಅದು ವಿಚಿತ್ರ ರೀತಿಯಲ್ಲಿ ಈಡೇರಿತು.

ಬೀರಭೂಮ್ ಜಿಲ್ಲೆ ಬಾವುಲರ ನೆಲೆಮನೆ. ಇದು ರವೀಂದ್ರನಾಥ ಟಾಗೂರರು ಕಟ್ಟಿದ ಶಾಂತಿನಿಕೇತನ ಇರುವ ಜಿಲ್ಲೆ ಕೂಡ. ಶಾಂತಿನಿಕೇತನ ಟಾಗೂರರ ಕನಸಿನ ಕೂಸು. ಪಶ್ಚಿಮದ ವಿದ್ಯಾಭ್ಯಾಸ ಪಡೆದ ಠಾಗೂರರು ಬ್ರಿಟಿಶರ ಶಿಕ್ಷಣ ಪದ್ಧತಿಗೆ ಪರ್ಯಾಯವಾದ ಕಲಿಕಾ ವ್ಯವಸ್ಥೆ ಕಟ್ಟಲು ಇಲ್ಲಿ ಯತ್ನಿಸಿದರು. ದೇಶೀಯತೆ ಕಲ್ಪನೆಯಲ್ಲೇ ಮೈತಳೆದಿರುವ  ಕನ್ನಡ ವಿಶ್ವವಿದ್ಯಾಲಯದೊಳಗೆ ಇರುವ ನನಗೆ ಶಾಂತಿನಿಕೇತನ ಕುರಿತು ಕುತೂಹಲವಿತ್ತು. ಒಂದು ಬೆಳಿಗ್ಗೆ ಹೌರಾದಿಂದ ನಸುಕಿನಲ್ಲಿಯೇ ಹೊರಡುವ ಗಣದೇವತಾ (ಬಂಗಾಳಿಗಳ ಪ್ರಕಾರ `ಗೊಣೊದೇವೊತಾ’) ಎಕ್ಸ್ಪ್ರೆಸ್ ರೈಲಿನಲ್ಲಿ ನಾನು ಮತ್ತು ಬಾನು ಬೋಲ್ಪುರಕ್ಕೆ ಹೊರಟೆವು. ಬೋಲ್ಪುರದ ಹೊರವಲಯದಲ್ಲಿ ಶಾಂತಿನಿಕೇತನವಿದೆ. ಬೋಲ್ಪುರದಲ್ಲಿ ಇಳಿದು, ಸೈಕಲ್ ರಿಕ್ಷಾಹತ್ತಿ ಶಾಂತಿನಿಕೇತನಕ್ಕೆ ಹೋದೆವು. ಮಿತ್ರರಾದ ಬೆಂಗಳೂರಿನ ಕಲಾವಿದ ಜಿ.ಜಯಕುಮಾರ್, ಶಾಂತಿನಿಕೇತನದಲ್ಲಿರುವ ತಮ್ಮ ಗೆಣೆಕಾರರಾದ ರತಿ ಮತ್ತು ಪ್ರಫುಲ್ಲದತ್ತ ನಾರೊ ಎಂಬುವರಿಗೆ ಪತ್ರ ಬರೆದು, ಬಾವುಲರನ್ನು ನೋಡಲು ನಮಗೆ ನೆರವಾಗಬೇಕೆಂದು ಸೂಚಿಸಿದ್ದರು. ಶಾಂತಿನಿಕೇತನದಲ್ಲಿ `ಅಡವಿ ಮರದಡಿಯಲ್ಲಿ’ ಮಕ್ಕಳು ಕೂತು ಕಲಿಯುವ ಪದ್ಧತಿ ನೋಡಲು ಖುಷಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ತಾಳೆಮರಗಳ ನಡುವೆ ಥಳುಕು ಬಳುಕಿಲ್ಲದೆ ಸರಳವಾಗಿ ಶಾಂತಿನಿಕೇತನವಿದೆ. ಆದರೂ ರವೀಂದ್ರರ ಆರಾಧನೆ ಇಲ್ಲಿ ಯಾಂತ್ರಿಕವಾಗಿದೆಯೆಂದೂ, ಅವರ ಆದರ್ಶದ ಚಿತ್ರಗಳೆಲ್ಲ ಬಣ್ಣಗೆಟ್ಟು ಸಪ್ಪಗಾಗಿವೆ ಎಂದೂ ಅನಿಸುತ್ತಿತ್ತು. ಎಲ್ಲ ಕನಸಿನ ಸಂಸ್ಥೆಗಳು ತಮ್ಮ ಹಳೆಯ ಆದರ್ಶವನ್ನು ಸಾಂಕೇತಿಕವಾಗಿ ಇಟ್ಟುಕೊಂಡು, ಗತಕಾಲದ ನೆನಪುಗಳಲ್ಲಿ ಬದುಕುತ್ತ ಒಳಗೇ ಬದಲಾಗುತ್ತಿರುತ್ತವೆಯಷ್ಟೆ.

ಅದಿರಲಿ, ಶಾಂತಿನಿಕೇತನದಲ್ಲಿ ಬೀರಭೂಮ್ ಪ್ರದೇಶದ ಬಾವುಲ್ ಗಾಯಕರು ಬಂದು ಹಾಡುವ ಒಂದು ಮೇಳ ನಡೆಯುತ್ತದೆ. ಇಲ್ಲಿಗೆ ಸಮೀಪವಿರುವ ಕೆಂಧೂಲ್ ಎಂಬಲ್ಲಿ ಕೂಡ ಮಧ್ಯಕಾಲದ `ಗೀತಗೋವಿಂದ’ ರಚಿಸಿದ ಜಯದೇವ ಕವಿಯ ಹೆಸರಲ್ಲಿ ಬಾವುಲ್ ಮೇಳ ನಡೆಯುತ್ತದೆ. ನಾವು ಹೋಗುವ ಹೊತ್ತಿಗೆ ಈ ಮೇಳಗಳು ಆಗಷ್ಟೇ ಮುಗಿದಿದ್ದವು. ಟಾಗೂರರ ಕಾವ್ಯ ಮತ್ತು ಸಂಗೀತಗಳ ಮೇಲೆ ಬಾವುಲರ ಗಾಢವಾದ ಪ್ರಭಾವವಿದೆ. ತಮ್ಮ ಮನುಷ್ಯಕೇಂದ್ರಿತ ದರ್ಶನವನ್ನು ಅವರು ರೂಪಿಸಿಕೊಂಡಿದ್ದೇ ಬಾವುಲರ ಹಾಡುಗಳಿಂದ. ಅದರಲ್ಲೂ ಬಂಗಾಳದ ಹಳ್ಳಿಗಳಲ್ಲಿ ವಾಸ ಮಾಡಿದ್ದರಿಂದ. ಇದನ್ನು ಟಾಗೂರರು ಬರೆದುಕೊಂಡೂ ಇದ್ದಾರೆ. ಬಂಗಾಳಿ ಸಾಹಿತ್ಯ ತತ್ವಶಾಸ್ತ್ರ ಸಂಗೀತ ಅನುಭಾವ ಯಾವುದನ್ನೂ ಬಾವುಲರನ್ನು ಬಿಟ್ಟು ಚರ್ಚೆ ಮಾಡುವುದು ಕಷ್ಟ.

ರತಿ ಮತ್ತು ನಾರೊ ನಾವು ಹೋದಾಗ ಮರದಡಿಯಲ್ಲಿ ಹಾಸಿರುವ ಕಲ್ಲುಕಟ್ಟೆಗಳಲ್ಲಿ ಕುಳಿತು ಚಿತ್ರಕಲೆಯ ಪಾಠ ಹೇಳುತ್ತಿದ್ದರು. ನಮ್ಮನ್ನು ಬರಮಾಡಿಕೊಂಡು, ಕ್ಯಾಂಟೀನಿನಲ್ಲಿ ಕೇರಳದ ಕಟ್ಟಂಚಾಯ್ ತರಿಸಿ ಕುಡಿಸಿದರು. ಬಾವುಲರಿರುವ ಹಳ್ಳಿಗಳ ಹೆಸರನ್ನು ಹೇಳಿದರು. ಕೊನೆಗೆ “ಅವರ ಜತೆ ಬೆರೆಯುವಾಗ ಹುಶಾರಾಗಿರಿ. ಅವರಲ್ಲಿ ಕೆಲವರು ಕ್ರಿಮಿನಲ್ಸ್ ಇರುವುದುಂಟು. ಭಂಗಿ ಸೇವಿಸಿದಾಗ ವಿಚಿತ್ರವಾಗಿ ವ್ಯವಹರಿಸುತ್ತಾರೆ” ಎಂದು ಎಚ್ಚರಿಸಿದರು. ಸೆಳೆತಕ್ಕೆ ಆತಂಕದ ಒಂದು ಅಂಚು ಜೋಡಣೆಯಾಯಿತು. ಆದರೆ ನಾಥರ ಫಕೀರರ ಬಳಕೆ ನನಗೆ ಇದ್ದುದರಿಂದ ಆತಂಕವಾಗಲಿಲ್ಲ.

ಸಂಜೆ ಹೊತ್ತಿಗೆ ಸೈಕಲ್ ರಿಕ್ಷಾದಲ್ಲಿ ಶಾಂತಿನಿಕೇತನದ ಬಗಲಲ್ಲೇ ಇರುವ ಶಾಂಭಾಟಿ ಎಂಬ ಜಾಗಕ್ಕೆ ಹೊರಟೆವು. ಅದು ಪ್ರಸಿದ್ಧ ಗಾಯಕ ಬಸುದೇವದಾಸ್ ಬಾವುಲ್ ಎಂಬುವರ ಮನೆಯಿರುವ ಜಾಗ. ನಾವು ಹೋದಾಗ ಸಂಜೆಯಾಗುತ್ತಿತ್ತು. ಅದೊಂದು ಊರಕೊನೆ. ತಗ್ಗುಪ್ರದೇಶದಲ್ಲಿ ಇರುವ ಗುಡಿಸಲು. ಬಂಗಾಳಿ ಮತ್ತು ಇಂಗ್ಲಿಷಿನಲ್ಲಿ “ಬಸುದೇವದಾಸ್ ಬಾವುಲ್, ಶ್ಯಾಮಭಾಟಿ, ಸುಭಾಶ್ ಪಲ್ಲಿ, ಶಾಂತಿನಿಕೇತನ ಅಂಚೆ, ಬೀರ್ಭೂಂ ಜಿಲ್ಲೆ” ಎಂದು ಬರೆದ ಬೋರ್ಡು ಕಾಣಿಸಿತು. ವಾಸದ ಗುಡಿಸಲ ಪಕ್ಕದಲ್ಲೆ  ಹಾಡಿಕೆಗೊ ಯೋಗಸಾಧನೆಗೊ ಗುಪ್ತಾಚರಣೆಗಳಿಗೊ ಕಟ್ಟಿದ ಇನ್ನೊಂದು ವೃತ್ತಾಕಾರದ ಕುಟೀರವಿತ್ತು.  ನುಣುಪಾಗಿ ಸಾರಿಸಿದ ಅಂಗಳ ತೊಳೆದ ತಟ್ಟೆಯಂತಿತ್ತು. ನಾವು ತಿರುಗಾಡಿದ ಬಂಗಾಳದ ಬಹುತೇಕ ಹಳ್ಳಿಗಳಲ್ಲಿ ಹೀಗೆಯೇ ಚಂದದ ಅಂಗಳಗಳಿದ್ದವು. ನಮ್ಮ ಹಸಲರ ಮತ್ತು ಹಾಲಕ್ಕಿಗಳ ಮನೆಯಂಗಳಗಳೂ ಹೀಗೇ ಇರುತ್ತವೆ. ಬಹುಶಃ ಬುಡಕಟ್ಟು ಜನರು ಮನೆಯ ಹೆಚ್ಚು ಹೊತ್ತನ್ನು ಅಂಗಳಗಳಲ್ಲಿ ಕಳೆಯುವುದಕ್ಕೂ ಈ ಸಾರಣೆಯ ಚಂದಕ್ಕೂ ಸಂಬಂಧವಿರಬೇಕು.

ನಾವು ಬಿದಿರ ಗೇಟು ತೆಗೆದು ಆವರಣದೊಳಗೆ ಪ್ರವೇಶಿಸಿದಾಗ ಒಬ್ಬ ಮಹಿಳೆ ಹೊರಬಂದರು. ಆಕೆ ಬಸುದೇವರ ಮಡದಿ. ಕುಟೀರದಲ್ಲಿ ಜಮಖಾನೆ ಹಾಸಿ `ಬಶೂನ್ಬಶೂನ್’ ಎಂದು ಕೂರಿಸಿ “ಅವರು ಈಗ ಒಂದು ಕಾರ್ಯಕ್ರಮಕ್ಕೆ ಹೋಗಲು ರಡಿಯಾಗುತ್ತಿದ್ದಾರೆ. ನಿಮ್ಮ ಜತೆ ಮಾತಾಡಲು ಸಮಯವಿದೆಯೊ ಇಲ್ಲವೊ” ಎಂದು ಹೇಳಿದರು. ಬಂಗಾಳಿ ಮಿಶ್ರಿತ ಹಿಂದಿಯಲ್ಲಿ ಮಾತಾಡುತ್ತಿದ್ದರು. ನಡುನಡುವೆ ಇಂಗ್ಲೀಷ್ ಶಬ್ದಗಳು ನುಸುಳುತ್ತಿದ್ದವು. ಇದಕ್ಕೆ ಶಾಂತಿನಿಕೇತನದಲ್ಲಿ ಇಂಗ್ಲಿಷ್ ಮಾತಾಡುವ ಭಾರತದ ಬೇರೆಬೇರೆ ಪ್ರಾಂತ್ಯದ ಜನ ನೆಲೆಸಿರುವುದೊ, ಈಕೆ ನಗರ ಪ್ರದೇಶಗಳಿಗೂ ಹೋಗಿ ಕಾರ್ಯಕ್ರಮ ಕೊಟ್ಟಿರುವುದೊ ಕಾರಣವಿರಬೇಕು. ಒಟ್ಟಿನಲ್ಲಿ ಅಪಾರ ಜೀವನೋತ್ಸಾಹ ತುಂಬಿದ ಮಹಿಳೆ.

ಕುಟೀರದೊಳಗೆ ಕಾಳಿಯ ಹಾಗೂ ರಾಧಾಕೃಷ್ಣರ ಮೂರ್ತಿಗಳು. ಅವುಗಳ ಮುಂದೆ ನಿಶ್ಚಲ ಬೆಳಗುತ್ತಿರುವ ನೀಲಾಂಜನ. ಗೋಡೆಯ ಮೇಲೆ ತೂಗಿಬಿಟ್ಟ ಏಕತಾರ. ಅವಧೂತನೊಬ್ಬನ ದೊಡ್ಡಪಟ. ತ್ರಿಶೂಲ ಹಿಡಿದು ಕುಳಿತ ಸಾಧುವಿನ ಇನ್ನೊಂದುಪಟ. ನಡುವೆ ಶಿವಲಿಂಗ. ಅದರ ಬದಿ ನೆಟ್ಟ ತ್ರಿಶೂಲ. ಗೋಡೆಗೆ ನೇತುಹಾಕಿರುವ ಬಗೆಬಗೆಯ ಬಾವುಲ್ ವಾದ್ಯಗಳು. ಬಸುದೇವ್ ಹಾಡುತ್ತಿರುವ ಫೋಟೊ. ಒಟ್ಟಿನಲ್ಲಿ ಕುಟೀರವು ಯಾವುದೊ ತಾಂತ್ರಿಕ ಸಾಧಕನ ಕೋಣೆಯಂತಿದ್ದು ಭಯಭಕ್ತಿ ಹುಟ್ಟಿಸುವಂತಿತ್ತು.

ಅಷ್ಟರಲ್ಲಿ ಕಾವಿ ನಿಲುವಂಗಿಯನ್ನುಟ್ಟು ಉದ್ದನೆಯ ಕೂದಲು ಬಿಟ್ಟ ಕುಳ್ಳನೆಯ ಬಸುದೇವ್ ಬಂದರು. ನಾನು ಕರ್ನಾಟಕದವನೆಂದೂ ಬಾವುಲ್ ಗಾಯಕರನ್ನು ನೋಡಲು ಬಂದಿರುವೆನೆಂದೂ ಹೇಳಿ ನಮಸ್ಕರಿಸಿದೆ. ಬಸುದೇವ್  “ಭಾಲುಭಾಲು” ಎಂದು ಹೇಳಿದರು. ಬಾವುಲರ ಬಗ್ಗೆ ನನಗೆ ತಿಳಿಸಿಕೊಡಬೇಕು ಎಂದು ಕೇಳಿದೆ: “ನೋಡಿ. ನಾವು ಗುಡಿ ಮಸೀದಿಗಳಿಗೆ ಹೋಗುವವರಲ್ಲ. ನಾವು ವಿಗ್ರಹಾರಾಧನೆ ಮಾಡುವವರಲ್ಲ. ಜಾತಿಪದ್ಧತಿ ಒಪ್ಪುವವರಲ್ಲ. ಎಲ್ಲ ಮನುಷ್ಯರೂ ಒಂದೇ. ನಾವು ಮಾನುಷ್ ಆರಾಧಕರು. ಎಲ್ಲರ ಠಾಕೂರ್ ಎಂದರೆ ನಮ್ಮ ಅಂತರಾತ್ಮ” ಎಂದು ತಿಳಿಸಿದರು. ನಿಮ್ಮ ಗುರು ಯಾರು ಎಂದಾಗ “ಏಕ್ ಗುರು ದೀಕಾ ಚಾರ್ ಗುರು ಗೀಖಾ” (ದೀಕ್ಷಾಗುರು ಒಬ್ಬ. ಪದ ಕಲಿಸಿದ ಗುರುಗಳು ನಾಲ್ವರು)” ಎಂದರು. ನಡುನಡುವೆ ಬಾಸುದೇವರ ಮಡದಿ ಬಾಯಿಹಾಕಿ ವಿವರಣೆ ಕೊಡುತ್ತಿದ್ದರು. ನನ್ನಲ್ಲೊ ಪ್ರಶ್ನೆಗಳ ಒಂದು ಗಂಟೇ ಇತ್ತು. ಇದರ ಸುಳಿವನ್ನರಿತ ಬಸುದೇವ್  “ಕ್ಷಮಿಸಿ. ನಾನೊಂದು ಕಾರ್ಯಕ್ರಮಕ್ಕೆ ಹೋಗಬೇಕಿದೆ. ನೀವು ನಾಳೆ ಬೆಳಿಗ್ಗೆ ಬನ್ನಿ. ಮಾತಾಡೋಣ” ಎಂದರು.

ನಾನಿದ್ದವನು “ನಿಮ್ಮ ಕಾರ್ಯಕ್ರಮಕ್ಕೆ ನಾವು ಬರಬಹುದೇ?” ಎಂದೆ. ಅದಕ್ಕೆ ಬಸುದೇವ್  “ಬೇಡಬೇಡ. ಬಹಳ ದೂರವಿದೆ. ಅದೂ ಸಾರ್ವಜನಿಕ ಕಾರ್ಯಕ್ರಮವಲ್ಲ. ಒಬ್ಬ ಠಾಕೂರರ ಮನೆಯಲ್ಲಿ ಏರ್ಪಾಟಾಗಿರುವ ಖಾಸಾಗೋಷ್ಠಿ. ಅವರು ಹೊರಗಿನವರಿಗೆ ಅನುಮತಿ ಕೊಡಲಿಕ್ಕಿಲ್ಲ. ನಾಳೆ ಬನ್ನಿ. ನಿಮಗಾಗಿ ಎಷ್ಟಾದರೂ ಹಾಡುತ್ತೇನೆ” ಎಂದರು ತಪ್ಪಿಸಿದರು. ನಾನು ಗೋಗರೆಯುವ ದನಿಯಲ್ಲಿ “ಬಹಳ ದೂರದಿಂದ ಬಂದಿದ್ದೇವೆ. ಜೀವನದಲ್ಲಿ ಬಾವುಲ್ ಗಾಯನ ಕೇಳಿಯೇ ಇಲ್ಲ. ಠಾಕೂರರು ಅನುಮತಿ ಕೊಟ್ಟರೆ ಒಳ ಬರುತ್ತೇವೆ. ಇಲ್ಲದಿದ್ದರೆ ಚಿಂತೆಯಿಲ್ಲ. ವಾಪಾಸಾಗುತ್ತೇವೆ.” ಎನ್ನಲು, ಬಸುದೇವ್ ಕೊಂಚಹೊತ್ತು ಆಲೋಚಿಸಿ, ಬಾನು ಕಡೆ ನೋಡುತ್ತ “ದಾದಾ, ನೀನು ಬೇಕಾದರೆ ಬಾ. ಆದರೆ ಬಹೆನ್ ಬೇಡ” ಎಂದರು. ಜೋಗಿಗೆ ಜೋಗಿಣಿಯಂತೆ ಬೆನ್ನುಬಿದ್ದಿರುವ ಬಾನು, ಅದ್ಯಾಕೆ ನಾನೂ ಬರುತ್ತೇನೆ ಎಂದಳು. ಬಸುದೇವರ ಮಡದಿ “ಮಹಿಳೆಯರೂ ಹೋಗಬಹುದು. ಗೋಷ್ಠಿಗಳಲ್ಲಿ ನಾವು ಹೋಗಿ ಹಾಡುತ್ತೇವಲ್ಲ. ಪಾಪ, ಅಕ್ಕ ಅಷ್ಟೊಂದು ಹೇಳುತ್ತಿದ್ದಾರೆ. ಕರೆದುಕೊಂಡು ಹೋಗು” ಎಂದು ವಕೀಲಿ ಮಾಡಿದರು. ಬಸುದೇವ್ ಅವಳತ್ತ ಒಮ್ಮೆ ದುರುಗುಟ್ಟಿದ ಬಳಿಕ ಆಕೆ ಚಹ ತರಲು ಒಳಗೆ ಹೋದರು.  ಈ ಗೋಜಲಿನಿಂದ ತಲೆಕೆಟ್ಟ ಬಸುದೇವ್ ನಿಷ್ಠುರವಾಗಿ “ದಾದಾ, ಬರುವುದಾದರೆ ನೀನು ಬಾ. ತಂಗಿಬೇಡ. ಗಾಯನ ನಡುರಾತ್ರಿಯವರೆಗೆ ಇರುತ್ತದೆ. ಅಲ್ಲಿ ಭಂಗಿಸೇವನೆ ಇರಬಹುದು. ಮೇಲಾಗಿ ನಮ್ಮ ತಬಲಾ ಸಾಥಿಯದೊಂದು ಬೈಕ್ ಇದೆ. ಅದರಲ್ಲಿ ಮೂರು ಜನ ಮಾತ್ರ ಹೋಗಬಹುದು” ಎಂದರು. ಬಾನುವನ್ನು ಶಾಂತಿನಿಕೇತನದ ಗೆಸ್ಟ್ ಹೌಸಿಗೆ ಹೋಗಲು ಒಪ್ಪಿಸಿದೆ. ಅವಳು ನಿರಾಶಳಾಗಿ ನೋಡುತ್ತಿರುವಂತೆ, ಬಸುದೇವ್ ಮತ್ತು ನಾನು ಊರೊಳಗೆ ಹೊರಟೆವು.

ಒಂದು ಕಿಮಿ ನಡೆದ ಬಳಿಕ ಬಸುದೇವ್ ಶಿಷ್ಯನ ಮನೆಬಂತು. ಅವನು ಅಪರಿಚಿತನಾದ ನನ್ನನ್ನು ನೋಡಿ ಯಾರೆಂದು ಬಂಗಾಳಿಯಲ್ಲಿ ವಿಚಾರಣೆ ಮಾಡಿದನು. ಬಸುದೇವ್ ಏನು ಹೇಳಿದರೊ ಏನೊ, ಮುಖ ಗಂಟಿಕ್ಕಿಕೊಂಡು “ಈತ ಬಂದರೆ ತಬಲಗಳನ್ನು ಇಟ್ಟುಕೊಂಡು ನಾನು ಗಾಡಿ ಬಿಡುವುದು ಹೇಗೆ?” ಎಂದನು. ನಾನು ತವಕದಿಂದ `ತಬಲ ನಾನು ಹಿಡಿದುಕೊಂಡು ಕೂರುವೆ’ ಎಂದೆ. ಇದೊಂದು ಜಿಗಣೆ ಎಂದು ಅವನಿಗೂ ಮನದಟ್ಟಾಯಿತು. ಕಡೆಗೆ ತಬಲಾಗಳಿರುವ ದೊಡ್ಡ ಬ್ಯಾಗನ್ನು ನಡುವೆ ಹೇಗೊ ಬೈಕಿನ ಮುಂದೆ ಇಡಲಾಯಿತು. ಎರಡು ತಬಲಗಳನ್ನೂ ಮೂವರು ಮನುಷ್ಯರನ್ನೂ ಹೊತ್ತ ಬೈಕು ಹೊರಟಿತು. ಬೈಕಿನ ಹಿಂದೆ ಅಂಗೈ ಅಗಲದ ಜಾಗದಲ್ಲಿ ಕೂತಿದ್ದ ನಾನು ಯಾವಾಗಲಾದರೂ ಬೀಳಬಹುದಿತ್ತು. ಇಟ್ಟುಕೊಳ್ಳಲು ಆಧಾರವಿಲ್ಲದೆ ಕಾಲುಗಳು ಗಾಳಿಯಲ್ಲಿ ಜೋಲುತ್ತಿದ್ದವು. ಹೇಗಾದರೂ ಇರಲಿ ಎಂದು ಬಸುದೇವ್ ಸೊಂಟವನ್ನು ತಬ್ಬಿಕೊಂಡು ಕೂತಿದ್ದೆ.

ಎಷ್ಟೋ ದೂರ ಹೋದ ಬಳಿಕ, ಒಂದು ದೊಡ್ಡ ಬಂಗಲೆ ಬಂದಿತು. ಬಂಗಲೆ ಚಿಕ್ಕದು. ಅದರ ಸುತ್ತಲಿನ ತೋಟ ಹುಲ್ಲುಹಾಸು ದೊಡ್ಡದು. ಮನೆಯ ಹಿಂದಿದ್ದ ಖಾಲಿಜಾಗದಲ್ಲಿ ದೊಡ್ಡದೊಡ್ಡ ಒಲೆ ಹೂಡಿ ಅಡುಗೆ ಮಾಡಲಾಗುತ್ತಿತ್ತು. ಬಹುಶಃ ಮಾಂಸದಡಿಗೆ ಇರಬೇಕು, ಮಸಾಲೆ ಹುರಿಯುವ ಘಮಘಮ ರಸ್ತೆವರೆಗೆ ಹಾದಿತ್ತು. ಮನೆಯ ಯಜಮಾನರು ದೊಡ್ಡ ಜಮೀನ್ದಾರರು. ಕಲ್ಕತೆಯಲ್ಲಿ ಬಿಸಿನೆಸ್ ಇದೆ. ಬೇಸರವಾದಾಗ ಬಂದು ತಮ್ಮ ಹಿರೀಕರ ಮನೆಯಲ್ಲಿದ್ದು ಗೋಷ್ಠಿಗಳನ್ನು ನಡೆಯಿಸಿ ವಿಶ್ರಾಂತಿ ತೆಗೆದುಕೊಂಡು ಹೋಗುತ್ತಾರೆಂದು ತಿಳಿಯಿತು. ಯಜಮಾನರು ತಮ್ಮ ಮಡದಿ ಮತ್ತು ಗೆಳೆಯರ ಜತೆ ಹುಲ್ಲುಹಾಸಿನಲ್ಲಿ ಕುರ್ಚಿ ಹಾಕಿಕೊಂಡು ಹರಟೆ ಹೊಡೆಯುತಿದ್ದರು. ನಾನು ಗೇಟಿನ ಹೊರಗೇ ನಿಂತಿದ್ದೆ. ಬಸುದೇವ್ ಅವರ ಬಳಿ ಹೋಗಿ ನನ್ನತ್ತ ತೋರಿಸುತ್ತ ಏನನ್ನೋ ಹೇಳಿದರು. ಯಜಮಾನರು ತಟ್ಟನೆ ಎದ್ದು ಬಂದು “ನೊಮೊಶ್ಕಾರ್ ಪ್ರೊಫೆಸರ್, ಸಂಕೋಚವಿಲ್ಲದೆ ಬರಬಹುದು. ನೀವು ಬಂದಿದ್ದು ಸಂತೋಷ” ಎಂದು ಕೈಹಿಡಿದು ಒಳಗೆ ಕರೆದುಕೊಂಡು ಹೋದರು. ಜಗಲಿಯ ಮೇಲೆ ನಾಲ್ಕು ಕುರ್ಚಿ ಹಾಕಲಾಗಿತ್ತು. ಅದರ ಎದುರು ಗೋಡೆಗಾನಿಸಿ ಗಾಯಕರಿಗೆ ವೇದಿಕೆ ಸಿದ್ಧವಾಗಿತ್ತು. ಕೆಳಗೆ ವರಾಂಡದಲ್ಲಿ ಮನೆಯ ಕೆಲಸಗಾರರು ಆಳುಕಾಳುಗಳು ನೆಲದ ಮೇಲೆ ಹಾಸಿದ ಜಮಖಾನೆಯ ಮೇಲೆ ಕೂತಿದ್ದರು. ನಾನು ಜಮಖಾನೆಯ ಮೇಲೆ ಕೂರಲು ಹೋದೆ. ಅದನ್ನು ಕಂಡ ಯಜಮಾನರು “ಛೇಛೇ ಮೇಲೆ ಬನ್ನಿ. ನೀವು ಅಷ್ಟು ದೂರದಿಂದ ಬಂಗಾಳಕ್ಕೆ ಬಂದಿದ್ದೀರಿ. ನೀವು ಇವತ್ತಿನ ಚೀಫ್ ಗೆಸ್ಟ್’ ಎಂದು ಘೋಷಿಸಿ ತಮ್ಮ ಪಕ್ಕದ ಕುರ್ಚಿಯಲ್ಲಿ ಕೂರಿಸಿಕೊಂಡರು. ನನಗೆ ಸಿಗುತ್ತಿರುವ ಮರ್ಯಾದೆಗೆ ಬಸುದೇವ್ ಮೊಗದಲ್ಲಿ ಸಮಾಧಾನವಿತ್ತು. ಬಾನು ಕರೆದುಕೊಂಡು ಬಂದಿದ್ದರೆ ಏನೂ ಆಗುತ್ತಿರಲಿಲ್ಲ ಅನಿಸಿತು. ಠಾಕೂರರು “ನೀವು ನಾಥರ ಬಗ್ಗೆ ಸೂಫಿಗಳ ಬಗ್ಗೆ ಕೆಲಸ ಮಾಡಿದ್ದೀರಿ ಎಂದು ಬಸುದೇವ್ ಹೇಳಿದ. ಸೂಫಿಗಳಿಗೂ ನಾಥರಿಗೂ ಯಾವ ತರಹದ ಸಂಬಂಧ?” ಎಂದು ಕೇಳಿದರು. ನಾನು ವಿವರಣೆಯನ್ನು ನನ್ನ ಅರ್ಧಮರ್ಧ ಇಂಗ್ಲಿಷಿನಲ್ಲಿ ಕೊಟ್ಟೆ. ಅವರಿಗೆಷ್ಟು ಮುಟ್ಟಿತೊ ಇಲ್ಲವೊ, “ನಿಜ ನಿಜ. ನೋಡಿ, ಈ ಜಾತಿಧರ್ಮ ಎಲ್ಲ ನಾವು ಮಾಡಿಕೊಂಡಿದ್ದು. ನಾವೆಲ್ಲ ಮಾನೂಷ್ ಅಷ್ಟೆ. ಈ ಬಾವುಲರ ಮುಖ್ಯ ತತ್ವವೇ ಮಾನವತಾವಾದ. ಪ್ರೇಮವಾದ” ಎಂದರು.

ಠಾಕೂರರು ಹೇಳಿದ್ದು ನಿಜ. ಬಾವುಲರು ಎಂಬುದು ಒಂದು ಜಾತಿಯಲ್ಲ. ಅದೊಂದು ಅನುಭಾವಿ ಪಂಥ. ಅದು ಸೂಫಿಪಂಥ, ವೈಷ್ಣವ ಭಕ್ತಿಪಂಥ ಹಾಗೂ ಬೌದ್ಧಸಹಜೀಯ ಪಂಥಗಳ ಸಮ್ಮಿಲನದಿಂದ ಹುಟ್ಟಿದ್ದು. ಲಾಲನ್ ಫಕೀರ್ ಇವರ ಗುರು. ಚೈತನ್ಯಪ್ರಭು ಇವರ ಪ್ರೇರಣೆ. ಲೋಕ ವ್ಯವಹಾರದಲ್ಲಿ ನಿರಾಸಕ್ತರಾದ ಬಾವುಲರು ದೈವಿಕ ಆನಂದದಲ್ಲಿ ಮೈಮರೆಯುವವರು. ಪ್ರೇಮದ ಉತ್ಕಟತೆಯಲ್ಲಿ ಸಾಮಾಜಿಕ ನಿಯಮಗಳ ಉಲ್ಲಂಘನೆ  ಮಾಡುವವರು. ಅವರ ದೇಹವೇ ದೇಗುಲ ಎಂಬ ನಂಬಿದವರು. ದೇಹದ ಮೂಲಕವೇ ಎಲ್ಲ ಬಗೆಯ ಅನುಭವ ಮತ್ತು ಸಾಧನೆ ಮಾಡಬೇಕಾಗಿರುವುದರಿಂದ, ಅದು ಬಹಳ ಪವಿತ್ರ ಎಂದು ಭಾವಿಸಿದವರು. ದೇಹದೊಳಗೆ ಹೃದಯವಂತ ಮಾನವರ ಚೈತನ್ಯವಿದ್ದು ಅದನ್ನು ಹುಡುಕಬೇಕು ಎಂದು ನಂಬಿದವರು. ಅಂತರಂಗದೊಳಗಿನ ಮನುಷ್ಯ ಹುಡುಕಾಟವನ್ನು ಮನೇರ್ ಮಾನಿಷ್ ಎಂದು ಕರೆಯುತ್ತಾರೆ. ಬಂಗಾಳದ ಜಾನಪದದಲ್ಲಿ ಆಳವಾಗಿ ಬೇರು ತಳೆದಿರುವ ಬಾವುಲರ ವಿಶೇಷತೆಯೆಂದರೆ, ಸಂಗೀತವನ್ನು ಆತ್ಮಸಾಕ್ಷಾತ್ಕಾರದ ಸಾಧನವಾಗಿಸಿಕೊಂಡಿದ್ದು.

ಬಾವುಲರ ಪ್ರಮುಖ ಸಂಗೀತವಾದ್ಯ ನಮ್ಮ ದಾಸರ ಗೋಪಾಳಬುಟ್ಟಿಯಂತೆ ಕಾಣುತ್ತದೆ. ಚರ್ಮಬಿಗಿದ ಬುರುಡೆಯನ್ನು ಸೀಳುಬಿದಿರಿನೊಳಗೆ ಇಕ್ಕಡಿಸಿ ಅದನ್ನು ಮಾಡಿರುತ್ತಾರೆ. ಇದರ ಜತೆಗೆ ಕೊಳಲು, ತಾಳ, ಡುಗ್ಗಿ, ತಬಲ, ಏಕತಾರ, ಆನಂದಲಹರಿ, ಚಿಮುಟ, ಖೊಮೊಕ್, ಗೆಜ್ಜೆ ಹೀಗೆ ಅನೇಕ ವಾದ್ಯಗಳನ್ನು ಬಳಸುತ್ತಾರೆ. ಡುಗ್ಗಿ ಎಂದರೆ ಮಡಕೆಗೆ ಚರ್ಮ ಬಿಗದು ಮಾಡಿದ ವಾದ್ಯ. ಆನಂದಲಹರಿ ಎಂದರೆ ಎರಡು ತಂತಿಯ ದೋತಾರಾ. ಖೊಮೊಕ್ ಎಂದರೆ ಚೌಡಿಕೆಯಂತಹ ವಾದ್ಯ. ದೆಹಲಿ ಸಂಗೀತ ನಾಟಕ ಅಕಾಡೆಮಿಯ ಮ್ಯೂಸಿಯಮ್ಮಿನಲ್ಲಿ ಇವನ್ನೆಲ್ಲ ನಾನು ನೋಡಿದ್ದೆ. ಅವು ಸಂಗೀತಗಾರರ ಕೈಯಲ್ಲಿ ನುಡಿಗೊಡುವುದನ್ನು ಕೇಳಿರಲಿಲ್ಲ. ಬಾವುಲರು ಏಕಕಾಲಕ್ಕೆ ಕಾಲಿಗೆ ಕಟ್ಟಿದ ಗೆಜ್ಜೆಯಿಂದ ನಾದಹೊರಡಿಸುತ್ತ, ಸೊಂಟದಲ್ಲಿ ಕಟ್ಟಿದ ಡಗ್ಗವನ್ನು ಒಂದು ಕೈಲಿ ಬಾರಿಸುತ್ತ, ಇನ್ನೊಂದು ಕೈಲಿ ಏಕತಾರಾ ನುಡಿಸುತ್ತ ಹಾಡುತ್ತಾರೆ. ಅವರದು ಅತ್ಯಂತ ಸರಳವಾದ ಆದರೆ ವಿವಶಗೊಳಿಸುವ ಸಂಗೀತಗೋಷ್ಠಿ.

ರಾತ್ರಿ ಹತ್ತುಗಂಟೆಯ ಹೊತ್ತಿಗೆ ಕಾರ್ಯಕ್ರಮ ಆರಂಭವಾಯಿತು. ಅದೊಂದು ಅಪೂರ್ವ ರಾತ್ರಿಯಾಗಿತ್ತು.