ತೇಜಸ್ವಿ ರಚಿಸಿದ ಒಂದು ವರ್ಣ ಚಿತ್ರ

ಆಧುನಿಕ ಕನ್ನಡ ಸಾಹಿತ್ಯದ ಎರಡನೆಯ ಮಜಲು ಎಂದರೆ ಪ್ರಗತಿಶೀಲ ಸಾಹಿತ್ಯ ಆಂದೋಳನ. ಪ್ರಗತಿಶೀಲ ಸಾಹಿತ್ಯದ ಗಲಾಟೆ ಶುರುವಾಗುವ ವೇಳೆಗೆ ನಾವು ಆಗಲೇ ಹೈಸ್ಕೂಲಿಗೆ ಬಂದಿದ್ದೆವು. ನಾವೇ ಬರಹಗಾರರಾಗುತ್ತೇವೆಂಬ ಕಲ್ಪನೆ ನಮಗೇನೂ ಇರದಿದ್ದರೂ ನಾವು ಪುಸ್ತಕಗಳನ್ನೋದುತ್ತ ಸಾಕಷ್ಟು ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಂಡಿದ್ದೆವು. ಪ್ರಗತಿಶೀಲರ ಆಗಿನ ಅದ್ಭುತ ಸಾಧನೆ ಎಂದರೆ ಕಾದಂಬರಿ ಕ್ಷೇತ್ರದಲ್ಲಿ ಜನ ಪುಸ್ತಕಗಳನ್ನು ದುಡ್ಡುಕೊಟ್ಟು ಕೊಂಡು ಓದಲು ಶುರುಮಾಡಿದರು. ಜನ ಸಾಮಾನ್ಯರು ಸುಲಲಿತವಾಗಿ ಓದಿ ಆನಂದಿಸುವಂಥ ಗದ್ಯ ರೂಪಿಸಿದ ಶ್ರೇಯಸ್ಸು ಈ ಕಾಲದ ಪ್ರಮುಖ ಕಾದಂಬರಿಕಾರರಾದ ಅನಕೃ, ತಾರಾಸು, ಕಟ್ಟೀಮನಿ ಈ ಮೂರು ಜನರಿಗೂ ಸಲ್ಲಬೇಕು. ಅನಕೃರವರ ಸಾಹಿತ್ಯ ರತ್ನ, ನಗ್ನ ಸತ್ಯ, ತಾರಾಸುರವರ ರಕ್ತತರ್ಪಣ, ತಿರುಗುಬಾಣ, ಮಸಣದ ಹೂವು, ಕಟ್ಟೀಮನಿಯವರ ಜರತಾರಿಯ ಜಗದ್ಗುರು, ಖಾನಾವಳಿಯ ನೀಲ, ಜ್ವಾಲಾಮುಖಿಯ ಮೇಲೆ ಈ ಪುಸ್ತಕಗಳನ್ನೆಲ್ಲಾ ಹುಡುಗರು ಸ್ಕೂಲಿಗೆ ತಂದು ಕ್ಲಾಸಿನಲ್ಲಿ ಸಹ ಓದಿ ಮೇಷ್ಟರಿಂದ ಬಯ್ಯಿಸಿಕೊಳ್ಳುತ್ತಿದ್ದರು. ಈ ಕಾದಂಬರಿಗಳಾವುವನ್ನೂ ಮಹಾನ್ ಕಾದಂಬರಿಗಳೆಂದು ಈಗ ಹೇಳಲಾರೆ. ಆದರೆ ಪುಸ್ತಕ ಬರೆದು ಬರಹದಿಂದಲೇ ಜೀವಿಸುತ್ತೇವೆಂದು ಹೊರಟ ಪ್ರಗತಿಶೀಲ ಲೇಖಕರ ಆತ್ಮವಿಶ್ವಾಸ ಮತ್ತು ಸಾಹಸಪ್ರಿಯತೆಯನ್ನು ನಾನಂತೂ ಮೆಚ್ಚಿಕೊಳ್ಳುತ್ತೇನೆ.

ಪುಸ್ತಕ ಬರೆದೇ ಜೀವನ ಸಾಗಿಸಲು ಹೊರಟ ಈ ಕಾದಂಬರಿಕಾರರಿಗೆ ಜೀವನಕ್ಕಾಗಿ ಪುಸ್ತಕ ಬರೆಯಲೇಬೇಕಾದ ಅನಿವಾರ್ಯತೆಯೂ ಉಂಟಾಯ್ತು. ಮಾರ್ಕ್ಸ್‌ವಾದದ ದಟ್ಟ ಪ್ರಭಾವ ಇದ್ದ ಆಗಿನ ಸಾಹಿತ್ಯದಲ್ಲಿ ಪ್ರಮುಖ ವಿಷಯಗಳೆಂದರೆ ಸ್ವಾತಂತ್ರ್ಯ ಹೋರಾಟ, ಸ್ತ್ರೀ ಶೋಷಣೆ, ಧರ್ಮ ಮತ್ತು ಧಾರ್ಮಿಕ ನಾಯಕರ ಅನಾಚಾರ, ಕರ್ನಾಟಕದ ಐತಿಹಾಸಿಕ ಪುರುಷರ ಜೀವನ ಮುಂತಾದವು. ತಾರಾಸುರವರ ಐತಿಹಾಸಿಕ ಕಾದಂಬರಿಗಳನ್ನು ಇವತ್ತಿಗೂ ಕನ್ನಡದ ಅತ್ಯುತ್ತಮ ಐತಿಹಾಸಿಕ ಬರವಣಿಗೆಗಳೆಂದೇ ಹೇಳಬಹುದು.

ಈ ಸಾಹಿತ್ಯಾಂದೋಲನಕ್ಕೆ ಸಂವಾದಿಯಾಗಿ ಸುಸಂಬದ್ದ ಸಾಹಿತ್ಯ ವಿಮರ್ಶೆ ಒಂದು ಪ್ರಾಕಾರವಾಗಿ ಬೆಳೆಯಲೇ ಇಲ್ಲ. ಬರಹದಲ್ಲಿ ಸಾಹಿತ್ಯ ವಿಮರ್ಶೆ ಬರುವುದಿರಲಿ ಈ ಲೇಖಕರೆಲ್ಲ ವೈಯಕ್ತಿಕವಾಗಿಯಾದರೂ ತಮ್ಮ ಮತ್ತು ಇತರರ ಬರವಣಿಗೆಗಳ ಬಗ್ಗೆ ಯಾವರೀತಿ ವಿಶ್ಲೇಷಣೆ ಮಾಡುತ್ತಿದ್ದರು. ಹೇಗೆ ಮೌಲ್ಯ ವಿವೇಚನೆ ಮಾಡುತ್ತಿದ್ದರು ಎನ್ನುವುದು ಸಹ ನನಗೆ ನೆನಪಿಗೆ ಬರುತ್ತಿರಲಿಲ್ಲ. ಕಟ್ಟೀಮನಿಯವರೂ ತಾರಾಸುರವರೂ ಅನೇಕಬಾರಿ ನಮ್ಮ ತಂದೆಯವರೊಡನೆ ಮಾತಾಡಲು ನಮ್ಮ ಮನೆಗೆ ಬರುತ್ತಿದ್ದರು. ನನಗಂತೂ ಇವರ ಮೇಲೆ ಆಗ ತುಂಬಾ ಅಭಿಮಾನ ಇತ್ತು. ಆದರೆ ಇವರೊಡನೆ ಮಾತಾಡಿದ್ದನ್ನೆಲ್ಲಾ ಈಗ ನೆನೆಸಿಕೊಂಡರೆ ಇವರ್ಯಾರಿಗೂ ನಿಶ್ಚಿತ ಸಾಹಿತ್ಯ ಸಿದ್ಧಾಂತಗಳಿತ್ತೆ ಎಂದು ಅನುಮಾನವಾಗುತ್ತದೆ. ಮಾರ್ಕ್ಸ್‌ವಾದದ ಪ್ರಭಾವದಿಂದ ಇವರಿಗೆ ಅನೇಕ ಸಾಮಾಜಿಕ ಸಿದ್ಧಾಂತಗಳಿದ್ದವು ಎನ್ನುವುದು ನಿಜ. ಆದರೆ ಅವನ್ನು ಸಾಹಿತ್ಯದ ಸಿದ್ಧಾಂತಗಳೆಂದು ಕರೆಯುವುದು ಕಷ್ಟ. ಎಂದರೆ ಈ ಸಾಮಾಜಿಕ ಸಿದ್ಧಾಂತಗಳ ಕಲಾತ್ಮಕ ಅಭಿವ್ಯಕ್ತಿಯ ವಿಶಿಷ್ಟತೆಗಳೇನು ಎನ್ನುವುದನ್ನು ಅವರು ಯೋಚಿಸುವುದಕ್ಕಾಗಲೀ ವಿಶ್ಲೇಷಿಸುವುದಕ್ಕಾಗಲೀ ಹೋಗಲಿಲ್ಲೆಂದು ಅನ್ನಿಸುತ್ತದೆ. ಎಂದರೆ ತಮ್ಮ ಕಲಾಭಿವ್ಯಕ್ತಿ ಹೇಗೆ ಹಿಂದಿನ ನವೋದಯದ ಕಲಾಕೃತಿಗಳಿಗಿಂತ ಭಿನ್ನ ಮತ್ತು ಈ ಭಿನ್ನತೆಯ ತಾಂತ್ರಿಕ ಆವಿಷ್ಕಾರಗಳು ಕಲಾಭಿವ್ಯಕ್ತಿಯಲ್ಲಿ ಹೇಗೆ ಒಡಮೂಡಿದೆ ಎಂದು ಅವರು ಇತರರಿಗೆ ತೋರಿಸಿಕೊಡಲು ಅಥವಾ ತಾವೇ ತಿಳಿದುಕೊಳ್ಳಲೂ ಹೋಗಲಿಲ್ಲ. ತಾವೊಂದು ವಿಶಿಷ್ಟ ಸಾಹಿತ್ಯ ಸಂಪ್ರದಾಯ ಎಂದು ಕರೆದುಕೊಳ್ಳುವ ಎಲ್ಲರ ಜವಾಬ್ದಾರಿ ಇದೆಂದು ನನಗೆ ಅನ್ನಿಸುತ್ತದೆ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಪ್ರಗತಿಶೀಲರು ಮಾಡಿದ ಈ ತಪ್ಪನ್ನೇ ಬಂಡಾಯದವರು ಮಾಡುತ್ತಿದ್ದಾರೆಂದು ನನಗೆ ಭಾವನೆ ಇರುವುದರಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಸಾಹಿತ್ಯವು ಅಭಿಪ್ರಾಯಗಳು, ಆಂದೋಳನಗಳ ವಾಹಕವಾಗಿರುವಂತೆಯೆ ಅದೊಂದು ಸೂಕ್ಷ್ಮವಾದ ಲಲಿತಕಲೆ ಎನ್ನುವುದನ್ನೂ ನಾವು ಮರೆಯಬಾರದು. ಬದಲಾದ ಸಂವೇದನೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮದಲ್ಲಿ ಹೇಗೆ ವಿಶಿಷ್ಟವಾಗಿ ಸಾಕ್ಷಾತ್ಕರಿಸುತ್ತವೆ ಎನ್ನುವ ವಿವೇಚನೆ ಇಲ್ಲದೆ ಹೋದರೆ ಬದಲಾದ ಸಂವೇದನೆಗಳು ಕೇವಲ ಸಾಹಿತ್ಯದ ಸ್ಲೋಗನ್‌ಗಳಾಗಿ ಮಾತ್ರ ಮಾರ್ಪಡುತ್ತವೆ.

ಪ್ರಗತಿಶೀಲರ ಕಾದಂಬರಿಗಳು ಕಥೆಗಳು ನನ್ನ ಸಾಹಿತ್ಯರಚನೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲವಾದರೂ ನನಗೆ ಮತ್ತು ನನ್ನಂತೆ ಅನೇಕರಿಗೆ ಸಾಹಿತ್ಯಾಸಕ್ತಿ ಹುಟ್ಟಲು ಬಹಳ ಪ್ರಭಾವ ಬೀರಿದವು. ಪ್ರಗತಿಶೀಲರಲ್ಲಿ ನಮ್ಮ ಮೇಲೆ ಬಹಳ ಪ್ರಭಾವ ಬೀರಿದವರೆಂದರೆ ಬಸವರಾಜ ಕಟ್ಟೀಮನಿ. ಕಟ್ಟೀಮನಿಯವರ ಗದ್ಯ ತಾರಾಸುರವರದಷ್ಟು ಉಜ್ವಲವಾಗಿಲ್ಲವಾದರೂ ಅವರು ಮತಾಂಧತೆಯ ವಿರುದ್ಧ, ಜಗದ್ಗುರುಗಳ ವಿರುದ್ಧ, ಮಠಪೀಠಗಳ ವಿರುದ್ಧ ಸಾರಿದ ಸಮರ ಆಗಿನ ತರುಣ ಪೀಳಿಗೆಯ ಮೆಚ್ಚುಗೆ ಗಳಿಸಿತು. ಆದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮತ ಮೌಢ್ಯದ ವಿರುದ್ಧ ಲೇಖನಿ ಝಳಪಿಸಿದವರಲ್ಲಿ ಕುವೆಂಪುರವರೇ ಮೊದಲಿಗರಾದ್ದರಿಂದ ಕಟ್ಟೀಮನಿಯವರಿಗೆ ಕುವೆಂಪುರವರ ಬಗ್ಗೆ ಮೊದಲಿನಿಂದಲೂ ತುಂಬಾ ಭಕ್ತಿ ಗೌರವಗಳಿದ್ದವು. ಕುವೆಂಪುರವರು ಸಹ ಈ ಕಾರಣಕ್ಕಾಗಿಯೇ ಕಟ್ಟೀಮನಿಯವರ ಬಗ್ಗೆ ಪ್ರೀತಿವಿಶ್ವಾಸಗಳನ್ನಿಟ್ಟುಕೊಂಡಿದ್ದರು. ಪ್ರತಿಭಾವಂತ ವಿಮರ್ಶಕರಾಗಲಿ ವಿಮರ್ಶೆಯಾಗಲೀ ಇಲ್ಲದುದರಿಂದಲೋ ಏನೋ ಪ್ರಗತಿಶೀಲರ ಸುಧಾರಣ ದೃಷ್ಟಿ ಕ್ರಾಂತಿಕಾರಿ ಮನೋಭಾವ ರಾಜಕೀಯ ಮತ್ತು ಸಮಾಜ ಸುಧಾರಕರ ಆಲೋಚನೆಗಳಿಗಿಂತಲೂ ಆಳಕ್ಕೆ ಹೆಗಲಿಲ್ಲ. ಅನ್ಯಾಯಗಳಾಗಲೀ ಅದಕ್ಕೆ ಅವರು ಸೂಚಿಸುವ ಪರಿಹಾರಗಳಾಗಲೀ ಸರಳವಾಗಿಯೂ ಸ್ಪಷ್ಟವಾಗಿಯೂ ಇರುತ್ತಿದ್ದವು. ಮನುಷ್ಯನ ಇಹದ ಸ್ಥಿತಿಯನ್ನು ನ್ಯಾಯಾನ್ಯಾಯಗಳ ಸರಿತಪ್ಪುಗಳ ಪರಿಧಿಯ ಆಚೆಗೂ ತೆಗೆದುಕೊಂಡು ಹೋಗಿ ವಿಶ್ಲೇಷಿಸಲು ಶಕ್ತರಾಗಲಿಲ್ಲ. ಹಾಗಾಗಿ ಒಂದು ಚಾರಿತ್ರಿಕ ಸಂದರ್ಭ ಬದಲಾಗುತ್ತಿದ್ದಂತೆಯೇ ಪ್ರಗತಿಶೀಲರ ಅಭಿವ್ಯಕ್ತಿಯ ಮೊನಚು ಕಡಿಮೆಯಾಗತೊಡಗಿತು.

ನಾವೆಲ್ಲ ಇಂಟರ್‌ಮೀಡಿಯಟ್ ಓದಲು ಕಾಲೇಜು ಹತ್ತುವ ವೇಳೆಗೆ ಪ್ರಗತಿಶೀಲರ ಉಚ್ಛಾಯ ಸ್ಥಿತಿ ಮುಗಿಯುತ್ತ ಬಂದಿತ್ತು. ನಾನಂತೂ ಲೇಖಕನಾಗಿ ಸಾಹಿತ್ಯದ ರಂಗಸ್ಥಳಕ್ಕೆ ಧುಮುಕುತ್ತೇನೆಂದು ಆಗ ಯೋಚಿಸಿಯೂ ಇರಲಿಲ್ಲ. ಏನಿದ್ದರೂ ನಾವು ದೂರದ ಪ್ರೇಕ್ಷಕರಷ್ಟೆ. ನಾನು ಇಂಟರ್ ಓದಲು ಶಿವಮೊಗ್ಗಕ್ಕೆ ಹೋದೆ. ಶಿವಮೊಗ್ಗಕ್ಕೆ ಹೋಗದಿದ್ದರೆ ನಾನು ಸಾಹಿತ್ಯದ ಸಹವಾಸಕ್ಕೇ ಹೋಗುತ್ತಿರಲಿಲ್ಲವೇನೋ. ಶಿವಮೊಗ್ಗದ ನೆಲ, ಗಾಳಿ, ನೀರಿನಲ್ಲಿ ಸಾಹಿತ್ಯ ಹಾಸುಹೊಕ್ಕಾಗಿದೆ ಎಂದೆನ್ನಿಸುತ್ತದೆ.

ಶಿವಮೊಗ್ಗದಲ್ಲಿ ಶ್ರೀ ಅನಂತಮೂರ್ತಿಯವರು ನಮಗೆ ಮೇಷ್ಟರಾಗಿ ಸಿಕ್ಕರು. ಆಗಲೇ ಅವರು ಒಳ್ಳೇಕತೆಗಾರರೆಂದು ವಿದ್ಯಾರ್ಥಿಗಳು ಗುಸುಗುಸು ಮಾತಾಡುತ್ತಿದ್ದರು. ಆದರೆ ಮೈಸೂರಿನಲ್ಲಿ ನನಗೆ ಅನೇಕ ಸಾಹಿತಿಗಳ ಪರಿಚಯ ಇದ್ದುದರಿಂದ ಅನಂತಮೂರ್ತಿಯವರು ಸಾಹಿತಿಗಳೆಂದು ತಿಳಿದಾಗ ನನಗೇನೂ ಅಂಥ ಗಡಿಬಿಡಿ ಗಾಬರಿ ಆಗಲಿಲ್ಲ. ಆದರೆ ಅನಂತಮೂರ್ತಿಯವರ ಸಾಹಿತ್ಯದ ಬಗೆಗಿನ ಗಂಭೀರ ಕಾಳಜಿಗಳು ನಮಗೆ ತುಂಬ ಆಕರ್ಷಕವಾಗಿ ಕಂಡಿತ್ತು. ಅನಂತಮೂರ್ತಿಯವರ ಮಾತುಕತೆಗಳು ಅವರ ಸಾಹಿತ್ಯ ವಿಮರ್ಶೆ ಇತ್ಯಾದಿಗಳಿಂದ ನಿಧಾನವಾಗಿ ಸಾಹಿತ್ಯ ನನಗೆ ಅತ್ಯಂತ ಆಪ್ತವಾದ ಏನೋ ಒಂದು ಎಂದು ಮನವರಿಕೆಯಾಯ್ತು. ಅನಂತಮೂರ್ತಿಯವರು ಹೆಚ್ಚು ದಿನ ನಮಗೆ ಅಧ್ಯಾಪಕರಾಗಿರಲಿಲ್ಲ. ಆದರೆ ಅವರು ಅವರ ಶಿಷ್ಯ ಒಬ್ಬರನ್ನು ನಮಗೆ ಪರಿಚಯ ಮಾಡಿಕೊಟ್ಟು ಈತ ಒಬ್ಬ ಅಸಾಧಾರಣ ಮನುಷ್ಯ ಎಂದು ಹೊಗಳಿದರು. ಅವರೇ ಶ್ರೀ ಕೋಣಂದೂರು ಲಿಂಗಪ್ಪ. ಈ ಶಿಷ್ಯ ನಮಗೆ ಅನಂತಮೂರ್ತಿಯವರಿಗಿಂತ ಹೆಚ್ಚು ಪರಾಕ್ರಮಶಾಲಿಯ ಹಾಗೆ ಕಂಡ. ಆಗಲೇ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪೋಲೀಸರನ್ನು ಎದುರಿಸಿ ಜೈಲಿಗೂ ಹೋಗಿ ವಿದ್ಯಾರ್ಥಿ ಸಮುದಾಯದಲ್ಲಿ ಲಿಂಗಪ್ಪ ಗೌರವಾನ್ವಿತ ಸ್ಥಾನದಲ್ಲಿದ್ದರು. ನಾನು, ಶಾಮಣ್ಣ, ರಂಗಪ್ಪ, ಸಿಪಿಕೆ ಲಿಂಗಪ್ಪನವರಿಂದ ಮಾರ್ಗದರ್ಶನ ನಿರೀಕ್ಷಿಸಿದೆವು. ಲಿಂಗಪ್ಪ ಶಿವಮೊಗ್ಗಕ್ಕೆ ಬರುವ ಮೊದಲು ಎಲ್ಲೋ ಸ್ಕೂಲಿನಲ್ಲಿ ಮೇಷ್ಟರಾಗಿ ಅನೇಕ ವರ್ಷ ಕೆಲಸ ಮಾಡಿದ್ದರಿಂದ ನಮ್ಮ ಕಾಲೇಜಿನಲ್ಲಿದ್ದ ಓರಗೆಯ ವಿದ್ಯಾರ್ಥಿಗಳನೇಕರು ಅವರಿಗೆ ನಮಸ್ಕಾರ ಸಾರ್ ಎನ್ನುತ್ತಿದ್ದರು. ಕೋಣಂದೂರು ಲಿಂಗಪ್ಪನವರಿಗೆ ನಮ್ಮನ್ನೆಲ್ಲಾ ಚೇಲಾಗಳನ್ನಾಗಿ ಮಾಡಿಕೊಂಡು ತಮ್ಮ ಚಟುವಟಿಕೆ ಆರಂಭಿಸಲು ಹೆಚ್ಚಿಗೆ ಸಮಯ ಏನೂ ಹಿಡಿಯಲಿಲ್ಲ. ಲಿಂಗಪ್ಪ ತಾವು ಶ್ರೀಯುತ ಗೋಪಾಲಗೌಡರ ಶಿಷ್ಯರೆಂದೂ, ಅವರು ಶ್ರೀಯುತ ರಾಮಮನೋಹರ ಲೋಹಿಯಾ ಎಂಬ ಇನ್ನೂ ಒಬ್ಬರ ಶಿಷ್ಯರೆಂದೂ ಹೇಳಿದರು. ಲೋಹಿಯಾ ಬಗ್ಗೆಯ ತಮ್ಮ ಅನುಭವಗಳನ್ನೆಲ್ಲಾ ಹೇಳಿ ಲೋಹಿಯಾ ಗಾಂಧೀಜಿಯವರ ನಿಕಟವರ್ತಿಗಳೆಂದು ತಿಳಿಸಿದರು. ನಾವೆಲ್ಲಾ ಇದನ್ನು ಕೇಳಿದ ನಂತರ ಕೋಣಂದೂರು ಲಿಂಗಪ್ಪನವರ ಚೇಲಾ ಆಗಿದ್ದು ಸಾರ್ಥಕವಾಯ್ತೆಂದು ಹಿಗ್ಗಿದೆವು.

ಈ ನಡುವೆ ಅನಂತಮೂರ್ತಿಯವರು ಅಧ್ಯಾಪಕ ಹುದ್ದೆ ತ್ಯಜಿಸಿ ಎಂ.ಎ. ಮಾಡಲೋ ಅಥವಾ ಪಿ.ಹೆಚ್.ಡಿ. ಮಾಡಲೋ ಮೈಸೂರಿಗೆ ಹೋದರು. ಅವರು ಕಾಲೇಜಿನಲ್ಲಿ ವಾರವಾರವೂ ನಡೆಸುತ್ತಿದ್ದ ವಿಚಾರಗೋಷ್ಠಿ ನಿಂತು ಹೋಯ್ತು. ಅವರಿಗೆ  ಸೆಂಡ್ ಆಫ್ ಕೊಟ್ಟು ನಾವೆಲ್ಲ ವಿದಾಯ ಹೇಳಿದೆವು. ಅನಂತಮೂರ್ತಿಯವರ ನಿರ್ಗಮನದ ಅನಂತರ ಶ್ರೀ ಕೋಣಂದೂರು ಲಿಂಗಪ್ಪನವರೇ ನಮ್ಮ ಸಾಂಸ್ಕೃತಿಕ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಹೊತ್ತರು.

ಲಿಂಗಪ್ಪ ನಮಗೆಲ್ಲ ಘೋಷಣೆಗಳನ್ನು ಕೂಗುತ್ತ ಬೀದಿಗೆ ಇಳಿದು ಚಳವಳಿ ಮಾಡುವುದನ್ನು ಹೇಳಿಕೊಟ್ಟರು. ಕಾಲೇಜು ಯೂನಿಯನ್‌ನಲ್ಲಿ ಆದ ಅನ್ಯಾಯವನ್ನು ಪ್ರತಿಭಟಿಸುವುದರಿಂದ ಹಿಡಿದು ಬೀದಿಯ ಇಂಗ್ಲಿಷ್ ಬೋರ್ಡುಗಳಿಗೆ ಟಾರ್ ಬಳಿದು ಅಂಗ್ರೇಜಿ ಹಠಾವ್ ಎನ್ನುವುದರವರೆಗೆ ನಾವು ಮುಂದುವರಿದೆವು.

ಕನ್ನಡ ಸಾಹಿತ್ಯ ವಿಮರ್ಶೆಯ ಕತೆ ಹೇಳ ಹೆರಟು ಈ ಪುರಾಣ ಯಾಕೆ ತೆಗೆದ ಎಂದು ಯೋಚಿಸಬಹುದು. ಇದೇಥರ ನಾನು ಶಿವಮೊಗ್ಗದಲ್ಲೇ ಯೋಚಿಸಿದ್ದೆ. ನನಗೆ ರಾಜಕಾರಣಿಗಳ ಬಗ್ಗೆಯೂ ರಾಜಕೀಯದ ಬಗ್ಗೆಯೂ ತುಂಬಾ ಜಿಗುಪ್ಸೆ ಇತ್ತು. ಈ ಮನೋಭಾವ ಅನುಷಂಗಿಕವಾಗಿ ನನಗೆ ನಮ್ಮ ತಂದೆಯವರಿಂದ ಬಂದುದಿರಬೇಕು. ಅವರು ರಾಜಕೀಯದಿಂದಲೂ ರಾಜಕಾರಣದಿಂದಲೂ ತುಂಬ ದೂರವೇ ಇದ್ದವರು. ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಷ್ಟು ಮಾತ್ರ ಅವರಿಗೆ ರಾಜಕೀಯದ ಪರಿಚಯ. ಕೋಣಂದೂರು ಲಿಂಗಪ್ಪನವರ ಚೇಲಾ ಆಗಿ ಪ್ಲೆಕಾರ್ಡುಗಳನ್ನು ಹಿಡಿದುಕೊಂಡು ಬೀದಿಗೆ ಇಳಿದನಂತರ ಹಿಡಿದುಕೊಂಡು ಬೀದಿಗೆ ಇಳಿದನಂತರ ನನಗೆ ಒಳಗೊಳಗೇ ಒಂದು ರೀತಿ ಜಾತಿಕೆಟ್ಟವನಂತೆ ಎನ್ನಿಸಿತು. ಸಾಹಿತಿ ಎಂದು ಅನಂತಮೂರ್ತಿಯವರ ಬಳಿಗೆ ಹೋದರೆ ಅವರು ನಮ್ಮನ್ನು ಈ ಕೋಣಂದೂರು ಲಿಂಗಪ್ಪನವರಂಥ ರಾಜಕಾರಣಿ ಹತ್ತಿರ ಸಿಕ್ಕಿಹಾಕಿಸಿದರಲ್ಲ? ಕಥೆ ಕಾದಂಬರಿಗಳ ಸಾಹಿತ್ಯ ಎಲ್ಲಿ? ಘೋಷಣೆ, ಚಳವಳಿಗಳ ರಾಜಕೀಯ ಎಲ್ಲಿ? ಎಲ್ಲೋ ಎಡವಟ್ಟಾಗಿದೆ ಎನ್ನಿಸಿತು.

ನಮ್ಮ ತಂದೆಯವರ ಬಳಿ ಸುಳಿದಾಡುತ್ತಿದ್ದ ಮೈಸೂರಿನ ಸಾಹಿತಿಗಳನ್ನು ನೋಡಿದ್ದೆ. ಅವರೆಲ್ಲ ಶುಭ್ರವಸನಧಾರಿಗಳಾಗಿ ಆಶ್ರಮ ಜೀವಿಗಳಂತೆ ಗಂಭೀರ ಮೋರೆ ಹಾಕಿಕೊಂಡು ಆಕಾಶ ನೋಡುತ್ತಾ ಭಾವ ಸಮಾದಿಯಲ್ಲಿ ಓಡಾಡುತ್ತಿದ್ದರು. ಶಿವಮೊಗ್ಗದಲ್ಲಾದರೋ ಪರಿಸ್ಥಿತಿ ಸಂಪೂರ್ಣ ತದ್ವಿರುದ್ದ! ರಾಜಕೀಯ ಭಾಷಣ ಎಂದು ಹೋದರೆ ಗೋಪಾಲಗೌಡರು ಸಾಹಿತ್ಯದ ಬಗ್ಗೆ ಭಾಷಣ ಬಿಗಿಯುತ್ತಾರೆ! ಸಾಹಿತಿಗಳು ಎಂದು ಅನಂತಮೂರ್ತಿ ಲಿಂಗಪ್ಪನವರ ಬಳಿ ಹೋದರೆ ರಾಜಕೀಯ ಮಾತಾಡುತ್ತಾರೆ! ನಾನು ಮಾಡುತ್ತಿರುವುದು ಸರಿಯೋ ತಪ್ಪೋ ಎನ್ನುವ ಚಿಂತೆ ಪ್ರಾರಂಭವಾಯ್ತು. ಆಗ ಶುರುವಾದ ಈ ವಿರೋಧಾಭಾಸಗಳ ಗೊಂದಲಗಳು ಮುಂದೆ ಸುಮಾರು ಇಪ್ಪತ್ತು ವರ್ಷಗಳವರೆಗೆ ಕಾಡುತ್ತವೆ ಎಂಬುದು ನನಗೆ ಗೊತ್ತಿರಲಿಲ್ಲ.

ಕೋಣಂದೂರು ಲಿಂಗಪ್ಪ ಅಸಾಧಾರಣ ವ್ಯಕ್ತಿತ್ವದ ರಾಜಕಾರಣಿ ಎಂದಾಗಲೀ, ಸಾಹಿತಿ ಎಂದಾಗಲೀ ಆವತ್ತು ನನಗೆ ಅನ್ನಿಸಿರಲಿಲ್ಲ. ಆದರೆ ಟಿಪಿಕಲ್ ಲೋಹಿಯಾವಾದಿಗಳ ಲೋಪದೋಷಗಳ ಸಂಕ್ಷಿಪ್ತ ಉದಾಹರಣೆಯಾಗಿತ್ತು ಲಿಂಗಪ್ಪನವರ ವ್ಯಕ್ತಿತ್ವ. ಆಗಿನ ಲೋಹಿಯಾವಾದಿಗಳಲ್ಲಿ ಬಹುಪಾಲು ಈಗ ಲಂಪಟರೂ ಭ್ರಷ್ಟರೂ ಆಗಿ ಹಾಳಾಗಿರಬಹುದು. ಆದರೆ ಇವತ್ತಿನ ಅವರ ಮೇಲಿನ ಪೂರ್ವಗ್ರಹಗಳನ್ನೆಲ್ಲ ಮರೆತು ಆವತ್ತಿನ ಅಂದಿನ ದೃಷ್ಟಿ ಕೋನದಿಂದ ಮಾತ್ರ ನಾನು ಬರೆಯುತ್ತಿದ್ದೇನೆ. ಸ್ವಾತಂತ್ರ್ಯಾನಂತರ ಸ್ವಾತಂತ್ರ್ಯಪೂರ್ವ ರಾಜಕಾರಣದ ಅಂತಃಸ್ವತ್ವ ಇನ್ನೂ ಉಳಿದಿದ್ದು ಈ ಲೋಹಿಯಾವಾದಿಗಳಲ್ಲೇ. ನನಗೆ ರಾಜಕೀಯ ಕೊಂಚವೂ ಇಷ್ಟವಿಲ್ಲದಿದ್ದರೆ ಲಿಂಗಪ್ಪನವರ ಚಟುವಟಿಕೆಗಳಿಂದ ದೂರಾಗುವುದು ತುಂಬಾ ಕಷ್ಟ ಇತ್ತು. ಲಿಂಗಪ್ಪನವರ ಗೋಪಾಲಗೌಡರ ಒಟ್ಟಿನಲ್ಲಿ ಈ ಲೋಹಿಯಾವಾದಿಗಳ ರಾಜಕೀಯ ನನಗೆ ಸೂಕ್ಷ್ಮವಾಗಿ ಸಾಹಿತ್ಯದ ವಿಸ್ತರಣೆಯಂತೆಯೇ ಕಾಣುತ್ತಿತ್ತು. ಲಿಂಗಪ್ಪ ಸಾಹಿತ್ಯದ ಅದರಲ್ಲೂ ಕುವೆಂಪು ಸಾಹಿತ್ಯದ ಕಟ್ಟಾ ಅಭಿಮಾನಿಯಾಗಿದ್ದರು. ಅಡಿಗರ ‘ಕಟ್ಟುವೆವು ನಾವು’ ಕುವೆಂಪುರವರ ‘ನೂರು ದೇವರನೆಲ್ಲ ನೂಕಾಚೆ ದೂರ’, ‘ಕನ್ನಡ ಎನೆ ಕುಣಿದಾಡುವುದೆನ್ನೆದೆ’ ಮುಂತಾದ ಕವನಗಳೇ ಇವರ ಚಟುವಟಿಕೆಗಳ ಸ್ಫೂರ್ತಿಯ ಸೆಲೆಯಾಗಿದ್ದವು.  ಈ ಕವನಗಳ ನುಡಿಕಟ್ಟುಗಳೆಲ್ಲ ಸಂದರ್ಭದ ಪ್ರಭಾವದಲ್ಲಿ ಸಜೀವ ಮಂತ್ರಗಳಾಗಿ ಕಾಣುತ್ತಿದ್ದುವು. ಕೇವಲ ಕವನ ಓದಿ ರಸಾಸ್ವಾದನೆ ಮಾಡುವವರಿಗಿಂತ ಈ ಲೋಹಿಯಾವಾದಿ ರಾಜಕಾರಣಿ- ಕಂ- ಸಾಹಿತಿಗಳು ಮೇಲಾದವರೆಂದು ನನಗೆ ಸ್ಪಷ್ಟವಾಗಿ ಅನ್ನಿಸುತ್ತಿತ್ತು. ಹಾಗಾದರೆ ರಾಜಕೀಯ ಯಾವುದು? ಸಾಹಿತ್ಯ ಯಾವುದು? ಸಾಹಿತ್ಯ ವಿಮರ್ಶೆ ಯಾವುದು? ಇವೆಲ್ಲ ನಾವು ನಮ್ಮ ಮಾತಿನ ಅನುಕೂಲಕ್ಕಾಗಿ ಮಾಡಿಕೊಂಡಿರುವ  ವಿಭಜನೆಗಳೆ? ಕವಿಗೋಷ್ಠಿ ವಿಚಾರಗೋಷ್ಠಿಗಳ ಸಾಹಿತ್ಯಕ್ಕೂ, ಈ ನಡುಬೀದಿ ಚಳವಳಿಯ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸವೇನೋ ಕಾಣುತ್ತದೆ. ಆದರೆ ಸತ್ವತಃ ಸಂಬಂಧ ಇರುವಂತಿದೆಯಲ್ಲಾ ಎನ್ನುವ ಗುಮಾನಿ ನನಗೆ ಶುರುವಾಯ್ತು. ನನಗೆ ರಾಜಕೀಯ ಎಷ್ಟೇ ಇಷ್ಟವಿಲ್ಲದಿದ್ದರೂ ಈ ಶಿವಮೊಗ್ಗದ ಲೋಹಿಯಾವಾದಿಗಳ ವಿಚಿತ್ರ ರೀತಿಯ ಸಾಹಿತ್ಯೋಪಾಸನೆ ಹೆಚ್ಚು ರೋಮಾಂಚಕ ಎನ್ನಿಸಿತು.

ಮುಂದೆ ಕನ್ನಡ ಸಾಹಿತ್ಯದ ಮೇಲೆ ವ್ಯಾಪಕವಾಗಿ ಪ್ರಭಾವ ಬೀರಿದ, ನಮ್ಮನ್ನೆಲ್ಲ ಆಳವಾಗಿ ಕಲಕಿದ ವಿಚಾರಧಾರೆಯೊಂದು ನನ್ನ ಮನಸ್ಸಿಗೆ ಕಾಲಿಟ್ಟಿದ್ದು ಸಿದ್ಧಾಂತಗಳ ಮುಖಾಂತರವೂ ಅಲ್ಲ ತರ್ಕಗಳ ಮುಖಾಂತರವೂ ಅಲ್ಲ. ಕಲಾಕೃತಿಗಳ ಮುಖಾಂತರವೂ ಅಲ್ಲ. ಅಲ್ಲಿದ್ದ ಲೋಹಿಯಾ ಶಿಷ್ಯರ ವಿಚಿತ್ರ ನಡವಳಿಕೆಗಳಿಂದ, ತರ್ಕ ಸಿದ್ಧಾಂತಗಳ ಬಗ್ಗೆ ಅಲ್ಲಿದ್ದ ಎಲ್ಲರೂ ಆಗ ನನ್ನಷ್ಟೇ ಅಜ್ಞಾನಿಗಳಿದ್ದರೆಂದು ಈಗ ನನಗೆ ಖಚಿತವಾಗಿ ಅನ್ನಿಸಿದೆ.

[ಪೂರ್ಣಚಂದ್ರ ತೇಜಸ್ವಿಯವರು ೧೯೯೧ ರಲ್ಲಿ ಲಂಕೇಶ್ ಪತ್ರಿಕೆಗೆ ಬರೆದ `ವಿಮರ್ಶೆಯ ವಿಮರ್ಶೆ` ಸರಣಿ ಲೇಖನಗಳಲ್ಲಿ ಒಂದಾದ ಈ ಬರಹದ ಒರಿಜಿನಲ್ ಹೆಸರು ‘ವಿರೋಧಾಭಾಸಗಳ ಗೊಂದಲ’. ತೇಜಸ್ವಿಯವರ ಈ ವಿಮರ್ಶಾ ಲೇಖನಗಳು ಸದ್ಯದಲ್ಲೇ ಪುಸ್ತಕ ರೂಪದಲ್ಲಿ ಹೊರಬರಲಿವೆ.]

[ಲೇಖನ ಕೃಪೆ – ಶ್ರೀಮತಿ ರಾಜೇಶ್ವರಿ ತೇಜಸ್ವಿ]