ಕಲ್ಕಾ! ಹರಿಯಾಣ ಪಂಜಾಬುಗಳ ವಿಶಾಲ ನದಿಬಯಲುಗಳ ಸೀಮೆ ಮುಗಿದು, ತಟ್ಟನೆ ಹಿಮಾಲಯದ ಸೆರಗು ಶುರುವಾಗುವ ತಪ್ಪಲಲ್ಲಿ ಅಡಗಿಕೊಂಡಿರುವ ಊರು. ೧೯೯೭ನೇ ಸಾಲಿನ ಒಂದು ದಿನ, ನಾನು ಮತ್ತು ಬಾನು, ಅಪರಿಚಿತವಾದ ಈ ಸಣ್ಣ ಊರಿನ ರಸ್ತೆಯಲ್ಲಿ, ಬಾಕಿಯುಳಿದ ನಿದ್ದೆಯನ್ನು ಇಟ್ಟುಕೊಂಡು ನಡೆಯುತ್ತಿದ್ದೆವು. ಬೆಳಕಿನ್ನೂ ಚುಮುಚುಮು ಹರಿಯುತ್ತಿತ್ತು. ಗದಗುಡುವ ಚಳಿ. ಮಂಜಿನ ಮುಸುಕು ಹೊದ್ದುಕೊಂಡು ಚಲಿಸುವ ನೆರಳುಗಳಂತೆ ಜನ ಚೊಂಬು ಹಿಡಿದು ಓಡಾಡುತ್ತಿದ್ದರು. ಮೂಡಣಕ್ಕೂ ಬಡಗಿಗೂ ಕತ್ತೆತ್ತಿ ನೋಡಿದರೆ ಗಗನದ ಕೊನೆಯಲ್ಲಿ ತೇಲುವ ಮೋಡಗಳಂತೆ ತೋರುವ ಹಿಮಾಲಯದ ಪರ್ವತಗಳು. ಅವು ಅರೆಗತ್ತಲಿಂದ ನಿಧಾನವಾಗಿ ಬೆಳಕಿಗೆ ಬರುತ್ತಿದ್ದವು. ಮೈಮೇಲೆ ಹಿಮವೂ ಇಲ್ಲ; ಗಿಡಮರಗಳೂ ಸರಿಯಾಗಿಲ್ಲ. ನೆಲವೆಲ್ಲ ಕಾಣುತ್ತ ನೀರಬಿಟ್ಟು ದಂಡೆಗೆ ಮಲಗಿದ ಮೊಸಳೆಗಳಂತೆ ಹುರುಪೆ ಮೈಯೊಡ್ಡಿಕೊಂಡು ನಿಂತಿದ್ದವು. ದೆಹಲಿಯಿಂದ ಧಾವಿಸಿ ಅಪರಾತ್ರಿಯಲ್ಲಿ ಕಣ್ಣಿಗೆ ಕಂಡ ಹೋಟೆಲಿನಲ್ಲಿ ನುಸುಳಿಕೊಂಡಿದ್ದರಿಂದ, ರಾತ್ರಿ ಅವನ್ನು ನೋಡಲಾಗಿರಲಿಲ್ಲ. ಎಳೆಯ ನಸುಕೆಂಪಾದ ಬಿಸಿಲು ಬೀಳಲಾರಂಭಿಸಿದ ಬಳಿಕ ಈಗ ಅವು ನಿಧಾನವಾಗಿ ಮೈದೋರತೊಡಗಿದ್ದವು.

ದೇಶದ ದಶದಿಕ್ಕುಗಳಿಂದ ಸರ್ಪಗಳಂತೆ ಧಾವಿಸಿ ಬರುವ ದೊಡ್ಡರೈಲುಗಳಿಗೆಲ್ಲ ಕಲ್ಕಾ ಕೊನೆಯ ನಿಲ್ದಾಣ. ದೊಡ್ಡ ದನ ನುಸುಳಲಾಗದ ದಣಪೆಯಲ್ಲಿ ಕರುಗಳು ನುಸುಳಿ ಹೋಗುವಂತೆ, ಇಲ್ಲಿಂದ ನ್ಯಾರೋಗೇಜಿನಲ್ಲಿ ಒಂದು ಪುಟ್ಟರೈಲು ಹಿಮಾಲಯ ಪರ್ವತಗಳನ್ನು ಹತ್ತಿ ಶಿಮ್ಲಾಕ್ಕೆ ಹೋಗುತ್ತದೆ. ಹಿಮಾಲಯಕ್ಕೆ ಹೋದರೆ ಈ ರೈಲಿನಲ್ಲಿ ಹೋಗಲೇಬೇಕೆಂದು ಓಎಲ್‌ಎನ್ ಮೇಷ್ಟ್ರು ತಾಕೀತು ಮಾಡಿದ್ದರು. ಬಹುಕಾಲ ಹಿಮಾಲಯದಲ್ಲಿದ್ದ ಕನ್ನಡಿಗರಲ್ಲಿ ಒಬ್ಬರಾದ ಅವರ ಮಾತನ್ನು ನಡೆಸಿಕೊಡಬೇಕಿತ್ತು. ಜತೆಗೆ ಹಿಮಾಲಯವು ಬಯಲಿನಿಂದ ಶುರುವಾಗಿ ಹೇಗೆ ಬೆಳೆಯುತ್ತ ಹೋಗುತ್ತದೆ ಎಂಬುದನ್ನು ತಿಳಿಯಬೇಕಿತ್ತು. ಹೀಗಾಗಿ ದೆಹಲಿ-ಶಿಮ್ಲಾ ಬಸ್ಸು ಬಿಟ್ಟು, ಈ ರೈಲನ್ನು ಹಿಡಿಯಲು ಕಷ್ಟಪಟ್ಟು ಬಂದಿದ್ದೆವು.

ಊರಿಗೆ ತಕ್ಕಂತೆ ಸಣ್ಣ ನಿಲ್ದಾಣ-ಚಾಪೆತುಂಡೊಂದು ಗಾಳಿಗೆ ಹಾರಿ ಬಂದು ಬಯಲಲ್ಲಿ ಕೂತಂತೆ. ಬೆಂಕಿಪೊಟ್ಟಣಗಳಂತಹ ನಾಲ್ಕು ಡಬ್ಬಿಗಳನ್ನು ತಗುಲಿಸಿಕೊಂಡು, ‘ಪರ್ವತ ಹತ್ತಬೇಕಲ್ಲ’ ಎಂದು ನಿಟ್ಟುಸಿರು ಬಿಡುವಂತೆ ಹೊಗೆ ಚೆಲ್ಲುತ್ತ, ರೈಲು ಅಸಹಾಯಕವಾಗಿ ನಿಂತಿತ್ತು. ಈ ಅಂಗುಲಹುಳು ಈ ಮಹಾಕಾಯಗಳನ್ನು ಹತ್ತಿ ಹೋಗುವುದುಂಟೇ ಎಂದು ಅನುಮಾನ ಬರುತಿತ್ತು. ಆದರೆ ಇದು ಒಂದು ಶತಮಾನದಿಂದಲೂ ಪರ್ವತಾರೋಹಣದ ಕೆಲಸ ಮಾಡುತ್ತಿದೆ. ಸುಳ್ಳಲ್ಲ. ಕೆಂಪು ಚೌಕಟ್ಟಿನ ಕಿಟಕಿ, ಹಳದಿ ಹತ್ತುಕಂಬಿ, ನೀಲಿಡಬ್ಬಿಗಳ ಅದು ಮಕ್ಕಳ ಪಾರ್ಕಿನ ರೈಲಿನಂತಿತ್ತು. ಡಬ್ಬಿಗಳು ದೇವದಾರು ಮರದ ಚೌಬೀನೆಯಲ್ಲಿ ಮಾಡಿದ ದೊಡ್ಡ ಪೆಟ್ಟಿಗೆಯಂತಿದ್ದವು. ನೂರು ಕಿ.ಮೀ.ಗೆ ಆರು ಗಂಟೆ ತೆಗೆದುಕೊಳ್ಳುವ ಈ ಬಸವನಹುಳುವಿಗೆ ಅವಸರದ ಅರ್ಥವೇ ಗೊತ್ತಿದ್ದಂತೆ ಕಾಣಲಿಲ್ಲ. ನಮಗೂ ಸಮಯದ ಕೊರತೆಯಿರಲಿಲ್ಲ.

ತಂಪುಳ್ಳ ಎಲ್ಲ ಜಾಗಗಳಲ್ಲಿ ತಲೆಮಾಸಿದ ಬಿಳಿಯರು ಊರು ಕಟ್ಟಿದರು. ಅವುಗಳಲ್ಲಿ ಶಿಮ್ಲಾ ಕೂಡ ಒಂದು. ಮಾತ್ರವಲ್ಲ ಆ ಊರುಗಳಿಗೆ ಹೋಗಲು ರೈಲುಹಾದಿಯನ್ನೂ ಹಾಸಿದರು. ನೀಲಗಿರಿ ಬೆಟ್ಟಗಳಲ್ಲಿರುವ ಊಟಿಗೆ, ಹಿಮಾಲಯದ ಡಾರ್ಜಿಲಿಂಗಿಗೆ ರೈಲುಹಳಿ ಬಿದ್ದಿದ್ದು ಹೀಗೆ. ಕಡಲ್ಗಾಲುವೆಯೊ ರೈಲೊ ಬಿಳಿಯರು ಮಾಡಿದ ಬಹುತೇಕ ‘ಇಂಜಿನಿಯರಿಂಗ್ ಸಾಹಸ’ಗಳಿಗೆ ಸಾವಿರಾರು ಸ್ಥಳೀಕ ಜನ ಜೀವತೆತ್ತಿದ್ದಾರೆ. ಆದರೆ ಆ ಚರಿತ್ರೆ ಕಾಲಗರ್ಭದಲ್ಲಿ ಹೂತುಹೋಗಿದೆ.

ನಾವು ಹೋದದಿನ ಬೆಳಗಿನ ಮೊದಲ ರೈಲಿಗೆ ಪ್ರಯಾಣಿಕರೇ ಇರಲಿಲ್ಲ. ಟಿಕೇಟು ಕೊಂಡವರು ನಾವಿಬ್ಬರು; ನಮ್ಮ ಜತೆ ಮತ್ತೊಂದೆಂಟು ಜನ. ಆದರೂ ಪ್ಲಾಟ್‌ಫಾರಂ ತುಂಬ ಸಾಧುಸಂತರು ವಿವಿಧ ವೇಷದಲ್ಲಿ ಬೀಡು ಬಿಟ್ಟಿದ್ದರು. ಪ್ಲಾಟ್‌ಫಾರಂ ಸ್ಟೇಶನ್ನಿನ ಕಟ್ಟಕಡೆಗಿದ್ದು, ಪಕ್ಕಕ್ಕೆ ತೆರೆದ ಬಯಲಿತ್ತು. ಅಲ್ಲಿ ಅವರು ಹಲ್ಲುಜ್ಜುವುದು, ಮುಖ ತೊಳೆವುದು, ಚಿಲುಮೆಗೆ ಭಂಗಿಸೊಪ್ಪನ್ನು ತುಂಬುವುದು, ಟೀಕುಡಿಯುವುದು, ರೇಡಿಯೊ ಕೇಳುವುದು, ಪಾತ್ರೆ ತೊಳೆಯುವುದು, ಕಂಬಳಿ ಮಡಚುವುದು, ಅಲಂಕಾರ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳನ್ನು ಆರಾಮಾಗಿ ಮಾಡಿಕೊಳ್ಳುತ್ತಿದ್ದರು. ಒಬ್ಬ ಸನ್ಯಾಸಿಗೆ, ಅವನ ಜೋಗಿಣಿಯಂತಿದ್ದ ಹೆಂಗಸೊಬ್ಬಳು ಏರುಗಂಟಲಿನಿಂದ ಬೈಯುತ್ತ ಗಲಾಟೆ ಎಬ್ಬಿಸಿದ್ದಳು. ಈ ಗಲಾಟೆ ಸ್ಟೇಶನ್ನಿಗೆ ಪರಿಚಿತ ಎಂಬಂತೆ, ಯಾರೂ ಅದರ ಬಗ್ಗೆ ತಲೆಕೊಟ್ಟಿರಲಿಲ್ಲ. ಪಕ್ಕದ ಪ್ಲಾಟ್‌ಫಾರಂನಲ್ಲಿ ನಿಂತಿದ್ದ ಇನ್ನೊಂದು ಪುಟ್ಟ ವಿಲಾಸಿರೈಲು ಯಾರಿಗೊ ಕಾಯುತ್ತಿತ್ತು. ಅದರ ಗಾಜಿನ ಕಿಟಕಿಗಳಿಗೆ ಕೆನೆಬಣ್ಣದ ಪರದೆಗಳಿದ್ದವು. ಒಳಗೆ ಬಿಳಿಹೊದಿಕೆ ತೊಡಿಸಿದ ಮೆತ್ತನೆ ಸೀಟುಗಳಿದ್ದವು. ಸೇವಕರು ಉಪಚಾರಕ್ಕೆ ಬೇಕಾದ ಪದಾರ್ಥಗಳನ್ನೆಲ್ಲ ತಂದು ಜೋಡಿಸಿಕೊಳ್ಳುತ್ತಿದ್ದರು. ವಿಚಾರಿಸಲು, ಅದು ದಿಲ್ಲಿಯಿಂದ ಬರುವ ಪ್ರಥಮದರ್ಜೆ ಪ್ರವಾಸಿಗರಿಗಾಗಿ ಇರುವ ಶಿಮ್ಲಾ ರೈಲೆಂದು ಗೊತ್ತಾಯಿತು. ಅದರಲ್ಲಿ ಆಗಲೇ ಕುಳಿತಿದ್ದ ಕೆಲವರು ತಮಾಶೆಯಿಂದ ನಮ್ಮ ರೈಲನ್ನೂ ಅಲ್ಲಿ ನೆರೆದ ಸಾಧುಗಳ ನೆರವಿಯನ್ನೂ, ಕಂಬಿಯಿಲ್ಲದ ಕಿಟಕಿಗಳಲ್ಲಿ ತಲೆ ಹೆಟ್ಟಿಕೊಂಡು ಕೈದಿಗಳಂತೆ ಕುಳಿತಿದ್ದ ನಮ್ಮನ್ನೂ ನೋಡುತ್ತಿದ್ದರು. ನಮ್ಮದು ಹಿಮಾಲಯದ ಹಳ್ಳಿಗಾಡಿನ ಸಾಮಾನ್ಯರಿಗೆ ಬಿಟ್ಟಿದ್ದ ಜನತಾರೈಲು. ಹಾಸಲು ಬಹಳ ಕಮ್ಮಿ. ಕೈಮಾಡಿದ ಕಡೆಯೆಲ್ಲ ನಿಂತುಕೊಂಡು, ಜನಹತ್ತಿಸಿಕೊಂಡು ಹೋಗುವಂತಹುದು. ಇದನ್ನು ಮುದ್ದಾಮಾಗಿ ನಾವು ಆರಿಸಿಕೊಂಡಿದ್ದೆವು. ಭಾರತದಲ್ಲಿ ಇನ್ನೂ ಇಂತಹ ರೈಲುಗಳಿವೆ. ಅವುಗಳಲ್ಲಿ ಒಂದು-ಡಾರ್ಜಿಲಿಂಗಿನದು. ಮತ್ತೊಂದು- ನಮ್ಮ ನೀಲಗಿರಿ ಬೆಟ್ಟಗಳಲ್ಲಿ ಕೂನೂರಿನದು. ಅವುಗಳ ಕರೆ ಯಾವಾಗಲೋ? ಆದರೆ ತೆಂಕಣ ಘಟ್ಟದ ಕಾಡು ಬೆಟ್ಟ ಕಣಿವೆಗಳನ್ನು ನೋಡಬೇಕೆನ್ನುವ ನಮಗೆ ಕೊಂಕಣ ರೈಲುಹಾದಿ ನಿರಾಶೆಯನ್ನುಂಟು ಮಾಡಿತ್ತು. ಎಲ್ಲೆಲ್ಲೂ ಕಾಡುಸವರಿ, ಕೊಂಕಣದವರು ಆಪೂಸು ಮರಗಳ ತೋಪು ಮಾಡಿದ್ದರು.

‘ಹೊರಡಲಪ್ಪಣೆಯೇ?’ ಎಂದು ಸನ್ಯಾಸಿಗಳ ಅನುಮತಿ ಕೇಳುವಂತೆ ರೈಲು ಮೆಲ್ಲಗೆ ನಮ್ರತೆಯಿಂದ ಸಿಳ್ಳುಹಾಕಿತು. ಪ್ರಾತರ್ವಿಧಿಗಳನ್ನು ಪೂರೈಸುತ್ತಿದ್ದ ಅವರು ‘ಹೋಹೋ’ ಎಂದು ಸದ್ದುಮಾಡುತ್ತ, ಚಿಮುಟ, ಕಮಂಡಲ, ತ್ರಿಶೂಲ ನಾಗಬೆತ್ತ ಇತ್ಯಾದಿಗಳನ್ನು ಧಾರಣ ಮಾಡಿ, ತಟ್ಟೆ-ಲೋಟಗಳನ್ನು ಜೋಳಿಗೆಗೆ ತುಂಬಿಕೊಂಡು, ರೈಲನ್ನೇರಿದರು. ಈ ಅಲೌಕಿಕರಿಗೆ ಟಿಕೇಟು ಕೊಳ್ಳುವ ಹವ್ಯಾಸವೇ ಇದ್ದಂತೆ ಕಾಣಲಿಲ್ಲ. ಮೊದಲೇ ಹತ್ತಿಕುಳಿತಿದ್ದ ಕೆಲವರು ಚಿಲುಮೆ ಎಳೆಯುತ್ತ ರೈಲನ್ನು ಹೊಗೆಬಂಡಿ ಮಾಡಿದ್ದರು. ನಾವು ಖಾಲಿ ಹೊಡೆಯುತ್ತಿದ್ದ ಒಂದು ಬೋಗಿ ಆರಿಸಿಕೊಂಡು ಕುಳಿತಿದ್ದೆವು. ಹಿಂದಿನ ಕಪಾಟಿನಲ್ಲಿ ಒಬ್ಬ ಭಿಕ್ಷುಕ ಪೇಪರು ಓದುತ್ತಿದ್ದ. ಗಾರ್ಡ್ ಸ್ಟೇಷನ್ನಿನಲ್ಲಿ ಕುಳಿತಿದ್ದ ಒಬ್ಬ ಹಿರಿಯ ಸಾಧುವಿಗೆ ನಮಸ್ಕರಿಸಿ ಬಂದು ಬಾವುಟ ಬೀಸಿದ. ಇನ್ನೇನು ರೈಲು ಹೊರಡಬೇಕು-ನೀಳಗಡ್ಡ ಬಿಟ್ಟು, ಆಲದ ಬಿಳಿಲುಗಳಂತಿರುವ ಉದ್ದನೆಯ ಜಟೆಯನ್ನು ಪಟಗದಂತೆ ತಲೆಗೆ ಸುತ್ತಿಕೊಂಡು, ಹಣೆಗೆ ದೊಡ್ಡ ಕುಂಕುಮ ಧರಿಸಿ, ಢಮರುಗ ಕಟ್ಟಿದ ತ್ರಿಶೂಲ ಹಿಡಿದು ಕಟ್ಟುಮಸ್ತಾಗಿದ್ದ ಒಬ್ಬ ಸಾಧು ‘ಜೈ ಭೋಲೆನಾಥ್’ ಎಂದು ಘೋಷಿಸಿ ನಮ್ಮ ಡಬ್ಬಿಗೆ ಹತ್ತಿಕೊಂಡನು. ನಿದ್ದೆಯಿಲ್ಲದ್ದಕ್ಕೊ ಭಂಗಿಸೇದಿದ್ದಕ್ಕೊ ಕಣ್ಣು ಕೆಂಪು ಕಾರುತ್ತಿದ್ದವು. ಹೊಳೆವ ಹಿತ್ತಾಳೆಯ ತ್ರಿಶೂಲದ ಅಲಗನ್ನೂ ಉರಿವ ಕಣ್ಣುಗಳನ್ನೂ ಕಂಡು ಮೈ ಜುಮ್ಮೆಂದಿತು. ಡಬ್ಬಿ ಬದಲಿಸಿದರೆ ಒಳ್ಳೇದೇನೊ ಎಂದು ಬಾನು ಹೇಳಿದಳು. ಆದರೆ ರೈಲು ಹೊರಟುಬಿಟ್ಟಿತ್ತು. ಆದರೆ ಆ ಪುಣ್ಯಾತ್ಮ ಶಿಮ್ಲಾ ಬರುವ ತನಕ ಯಾರಿಗೂ ತೊಂದರೆ ಮಾಡದೆ ಗಡದ್ದಾಗಿ ನಿದ್ದೆ ತೆಗೆದ.

ರೈಲು ಮಳೆಬಿದ್ದ ತಂಪುನೆಲದಲ್ಲಿ ಹೊರಬಂದು ಹರಿದಾಡುವ ಎರೆಹುಳುವಿನಂತೆ ಚಲಿಸಲಾರಂಭಿಸಿತು. ಎಷ್ಟೋ ಸ್ಟೇಶನ್ನುಗಳಲ್ಲಿ ಹತ್ತಲಿಳಿಯಲು ಜನರೆ ಇರಲಿಲ್ಲ. ಒಂದು ಸ್ಟೇಶನಿನ ಹೆಸರು ಕನ್ನಡದ್ದು ಎಂಬಂತ್ತಿತ್ತು-‘ಕುಮಾರಹಟ್ಟಿ’. ರೈಲು ಹಳ್ಳಿಗಳ ಅಂಚಿನಲ್ಲಿ, ಹೊಲಗದ್ದೆಗಳ ನಡುವೆ, ತಿಪ್ಪೆಗಳ ಪಕ್ಕದಲ್ಲಿ ಕೂಡ ಹೋಗುತ್ತಿತ್ತು. ಜನ ಎತ್ತಿನ ಬಂಡಿಯೆಂಬಂತೆ ಅದನ್ನು ಸಹಜವಾಗಿ ನೋಡುತ್ತಿದ್ದರು. ಪರ್ವತಗಳ ಮೇಲಿಂದ ಕೆಳಗಿನವರೆಗೆ ಮಡಿಕೆ ಮೆಟ್ಟಿಲು ಗದ್ದೆಗಳು. ಬೆಳೆದು ನಿಂತ ಹಣ್ಣಾದ ಗೋಧಿಪೈರು. ಹಳದಿ ಹೂಬಿಟ್ಟು ತೊನೆವ ಸಾಸಿವೆ. ಆಲೂಗೆಡ್ಡೆ ಗಿಡಗಳ ನಡುವೆ ನೆಲ ಅಗೆಯುವ ಹೆಂಗಸರು. ಗಿಡಗಳಲ್ಲಿ ಮೇಕೆ ಕಾಯುತ್ತ ನಿಂತ ಹುಡುಗರು.

ರೈಲು ಪರ್ವತಗಳ ಹೊಟ್ಟೆ ಕೆರೆದು ಮಾಡಿದ ಹಾದಿಯಲ್ಲಿ ನುಸುಳಿಕೊಂಡು ಹೋಯಿತು. ನೂರಾರು ಸೇತುವೆಗಳನ್ನು ದಾಟಿತು. ಶಿಖರಗಳು ಬಂದಾಗ ಉಬ್ಬಸ ಪಡುತ್ತ, ಇಳಿಜಾರು ಬಂದಾಗ ಜಾರಿಬೀಳುವಂತೆ ಮಾಡುತ್ತಿತ್ತು. ಕುದುರೆನಾಳ ತಿರುವು ಬಂದಾಗ ಸೊಂಟ ಮುರಿದು ಹೋಗಬಹುದೇನೊ ಎಂಬಂತೆ ಬಾಗುತ್ತಿತ್ತು. ಮೈಲಿಯುದ್ದದ ಸುರಂಗಗಳನ್ನು ಹೊಕ್ಕಾಗ ಪಾತಾಳದ ಬಿಲದೊಳಕ್ಕೆ ನುಗ್ಗಿದಂತೆ ಕಗ್ಗತ್ತಲೆಯಲ್ಲಿ ಹೂತು ಹೋಗುತ್ತಿತ್ತು. ಇದರ ಜತೆಗೆ ಸಾವಿರ ಬಿರುಗಾಳಿ ಒಟ್ಟಿಗೆ ಬೀಸಿದಂತೆ ಗಡಚಿಕ್ಕುವ ಶಬ್ದವನ್ನೂ ರೈಲು ಹುಟ್ಟಿಸುತ್ತಿತ್ತು-ತನ್ನ ಭಯವನ್ನು ತಾನೇ ಮೀರಲು ದೊಡ್ಡ ಗಂಟಲಲ್ಲಿ ಕೂಗಿಕೊಂಡು ಹೋಗುವ ದಾರಿಹೋಕನಂತೆ. ಅಡಿಗರ ‘ಹಿಮಗಿರಿಯ ಕಂದರ’ ಕವನದ ರೈಲು ಮರಳಿ ಬಾರದ ಪಯಣದಂತೆ ಭೀತಿ ಕವಿಸುತ್ತದೆ. ಆದರೆ ಈ ರೈಲು ಕತ್ತಲೆಯ ಗರ್ಭದೊಳಗಿಂದ ಮತ್ತೆ ಬೆಳಕಿಂಡಿಯೊಂದರ ಮೂಲಕ ಹೊರಬಂದು ನಿರಾಳತೆ ಕೊಡುತ್ತಿತ್ತು.

ಹಿಮಾಲಯದ ಸೆರಗಿನ ಬೆಟ್ಟಗಳು ಸಾಮಾನ್ಯವಾಗಿ ನಮ್ಮ ಕುರುಚಲು ಕಾಡಿನ ಗುಡ್ಡಗಳಂತೆಯೇ ಇದ್ದವು. ದೊಡ್ಡ ಪಟ್ಟಣಗಳ ಸಹವಾಸದಲ್ಲಿದ್ದರೂ ಹರಿದ್ವಾರ ಹೃಷಿಕೇಶಗಳಲ್ಲಿ ಮಾತ್ರ ಬಯಲು-ಪರ್ವತ ಸೇರುವ ಸೆರಗು ದಟ್ಟಕಾಡಿನಿಂದ ಕೂಡಿದೆ. ಕಲ್ಕಾ-ಶಿಮ್ಲಾ ದಾರಿಯಲ್ಲಿ ಬಿದಿರ ಹಿಂಡಿಲುಗಳಿದ್ದವು. ಹಳಿಗಳ ಅಕ್ಕಪಕ್ಕ, ಕಾಡಿಲ್ಲದ ಕಡೆ ಕಾಡುದಾಳಿಂಬೆಯ ಗಿಡಗಳು ರಕ್ತಕಾರುವ ಕೆಂಪನೆಯ ಹೂಬಿಟ್ಟು ನಿಂತಿದ್ದವು. ಇವನ್ನು ಯಮುನೋತ್ರಿಯ ರಸ್ತೆಯಲ್ಲೂ ಕಾಣಬಹುದು. ನಮ್ಮ ಮಲೆನಾಡಿನಲ್ಲಿ ಶ್ರೀಗಂಧದ ಮರಗಳು ದಟ್ಟ ಮಲೆನಾಡಿನ ಕಾಡು ನಾಶವಾದ ಕಡೆ ಕಾಣಿಸುತ್ತವಂತೆ; ಇಲ್ಲಿ ಆ ಸೂಚನೆಯನ್ನು ದಾಳಿಂಬೆ ಗಿಡಗಳು ಕೊಡುತ್ತಿದ್ದವು.

ಐದು ಗಂಟೆ ಪಯಣದ ಬಳಿಕ, ಎಷ್ಟೋ ಸಾವಿರ ಅಡಿ ಹತ್ತಿದ ಬಳಿಕ ವಾತಾವರಣ ನಾಟಕೀಯವಾಗಿ ಬದಲಾಯಿತು. ನಿಧನಿಧಾನವಾಗಿ ಥಂಡಿಗಾಳಿ ತೀಡತೊಡಗಿತು. ದುರ್ಗಮವಾದ ಹಸಿರು ಕಕ್ಕುವ ದೇವದಾರು ಕಾಡನ್ನು ರೈಲು ಹೊಕ್ಕಿತು. ಮುಗಿಲುಗಳಿಗೆ ಮುಟ್ಟುವಂತೆ ಬೆಳೆದು ಕೆಳಗೆ ಕತ್ತಲೆ ಕವಿಸಿದ್ದ ದೇವದಾರು ಕೊಂಬೆಗಳು ನವಿಲ ಸೋಗೆಯಂತೆ ಚಾಚಿ ರೈಲನ್ನು ಮುಟ್ಟಲೆಳಸುತ್ತಿದ್ದವು. ಈ ಕಾಡಲ್ಲಿ ರೈಲು ದಾರಿ ಕಳಕೊಂಡು ಅಲೆವ ಕರುವಿನಂತೆ ಕಾಣುತ್ತಿತ್ತು.

ಚಳಿಗಾಲದಲ್ಲಿ ಈ ದಾರಿಯಲ್ಲಿ ರೈಲು ಚಲಿಸುವುದಕ್ಕೆ ಆಗದಷ್ಟು ಹಿಮ ಸುರಿಯುತ್ತದಂತೆ; ಮಕ್ಕಳು ರಸ್ತೆಮೇಲಿನ ನೀರನ್ನು ಕಾಲಲ್ಲಿ ಹಾರಿಸುತ್ತ ಶಾಲೆಗೆ ಹೋಗುವಂತೆ, ಹಳಿಗಳ ಮೇಲೆ ಬಿದ್ದ ಹಿಮವನ್ನು ನೂಕಿಕೊಂಡು ರೈಲು ಹೋಗುತ್ತದೆಯಂತೆ. ಬೇಸಿಗೆಯಲ್ಲಿ ಹೋದ ನಮಗೆ ಹಿಮದರ್ಶನ ಈ ಹಾದಿಯಲ್ಲಾಗಲಿಲ್ಲ. ಹಿಮವಿಲ್ಲದ ಎಂಥ ಹಿಮಾಲಯ? ನಿರಾಸೆಯಾಗುತ್ತಿತ್ತು.

ಚಳಿಗಾಳಿಗೆ ಎದ್ದ ಸಾಧು ‘ಶಿಮ್ಲಾ ಆಯಾ’ ಎಂದನು. ಈ ಕಾಡನ್ನು ಕಳೆದು ತಟ್ಟನೆ ಎದುರಾದ ದೊಡ್ಡ ಕಣಿವೆಯೊಂದರ ದಡದಲ್ಲಿ ರೈಲು ಚಲಿಸತೊಡಗಿತು. ಕಡೆಗೆ ಇನ್ನು ಮುಂದೆ ದಾರಿಯಿಲ್ಲವೆಂದು ದೊಡ್ಡ ಪೆಂಡಾಲಿನಂತಹ ಸ್ಟೇಶನ್ನಿನೊಳಗೆ ನುಗ್ಗಿ ದಣಿದುಸಿರು ಬಿಡುತ್ತ ನಿಂತಿತು. ರೈಲು ನಿಲ್ದಾಣವು ದಿಬ್ಬದ ಮೇಲೆ ಕಟ್ಟಿದ ಅಟ್ಟಣಿಗೆಯಂತಿತ್ತು. ಕೆಳಗೆ ಕಣ್ಣು ಹಾಯಿಸಿದರೆ ಆಳವಾದ ಕಣಿವೆಯ ಒಳಗೂ ದಂಡೆಯ ಮೇಲೂ ಮಧ್ಯಾಹ್ನದ ಬೆಳಕಿನಲ್ಲಿ ಹೊಳೆಯುತ್ತ ಶಿಮ್ಲಾ ನಗರ ನೆಲೆಸಿತ್ತು.

ಅಲ್ಲೇ ಕಂಬಿಗೊರಗಿ ಬಾಂಡಲಿಯಂತಹ ತಗ್ಗಿನಲ್ಲಿರುವ ಮನೆಗಳನ್ನೂ ಪೂರ್ವಕ್ಕೆ ಗೋಡೆ ಕಟ್ಟಿದಂತೆ ನಿಂತ ಪರ್ವತಗಳ ಮೇಲಿನ ದಟ್ಟವಾದ ಕಾಡನ್ನೂ ನೋಡುತ್ತ ನಿಂತೆವು. ಅಷ್ಟರಲ್ಲಿ ರೈಲು ಇಂಜಿನನ್ನು ತಿರುಗಿಸಿಕೊಂಡು ಕಲ್ಕಾ ಕಡೆ ಇಳಿಪಯಣಕ್ಕೆ ಸಿದ್ಧವಾಗಿ ನಿಂತಿತು. ನಾನು ಬಾನು ಹೋಟೆಲು ಹುಡುಕುತ್ತ ಶಿಮ್ಲಾದ ಏಣಿಯಂತಹ ದಾರಿಗಳಲ್ಲಿ ನಡೆಯತೊಡಗಿದೆವು.