ನಾರಿ ಬಂದಳು ನೀರಿಗೆ ಬೆಂಕಿ ಹತ್ತಿತು ದಾರಿಗೆ..

ಧಾರವಾಡದಲ್ಲಿ ನಮ್ಮ ಮನೆ ಇದ್ದದ್ದು ಗೌಳಿದೊಡ್ಡಿಯಲ್ಲಿ. ಗೌಳಿ  ಗುಡಿಸಲುಗಳ ತುದಿಗೆ ರೇಲ್ವೆ ಹಳಿಗಳ ಪಕ್ಕದ ದಿನ್ನೆಯ ಮೇಲೆ. ಹಳಿ ದಾಟಿ ಆಚೆಗೆ ಹೋದರೆ ಅತ್ತಿಕೊಳ್ಳ. ಬೇಂದ್ರೆ ‘ಬೆಳಗು’ ಪದ್ಯ ಬರೆದದ್ದು ಅತ್ತಿಕೊಳ್ಳದ ಸುಂದರ ಮುಂಜಾವಿನ ಬಗ್ಗೆ. ರೇಲ್ವೆ ಗೇಟು ದಾಟಿಕೊಂಡು ಗುಡ್ಡ ಇಳಿದು ಕಾಲುದಾರಿಯಲ್ಲಿ ಹೋದರೆ ಅವರ ‘ಸಣ್ಣ ಸೋಮವಾರ’ ದ ಸೋಮೇಶ್ವರ ಗುಡಿ. ನಮ್ಮ ಪಡ್ಡೆ ದಿನಗಳಲ್ಲಿ ಅಂದರೆ ಸುಮಾರು ಮೂವತ್ತೈದು ವರ್ಷದ ಹಿಂದೆ ಸೋಮೇಶ್ವರ ಗುಡಿಯ ಪರಿಸರ ‘ಸಣ್ಣ ಸೋಮವಾರ’ ದಲ್ಲಿಯ ವರ್ಣನೆಯ ಹಾಗೆಯ ಇತ್ತು.

ಆ ದಿನಗಳಲಿ ನಮಗೆ ಬೇಂದ್ರೆಯವರ ಬಗ್ಗೆ ತಿಳುವಳಿಕೆಗಿಂತ ಅಸಡ್ಡೆಯೆ ಜಾಸ್ತಿ. ಏಕೆಂದರೆ ಅರವಿಂದರು, ಸಾಯಿಬಾಬಾ ಇವರ ಭಜನೆ ಮಾಡುತ್ತಾ ಹುಸಿ ಅಧ್ಯಾತ್ಮದ ಪೋಜು ಕೊಡುತ್ತಿದ್ದ ಶಿಷ್ಯರ  ಗುಂಪು ಬೇಂದ್ರೆಯವರನ್ನು ಕಬಳಿಸಿಕೊಂಡು ಬಿಟ್ಟಿತ್ತು. ನಿಜ ಹೇಳಬೇಕೆಂದರೆ ಆ ದಿನಗಳಲ್ಲಿ ನಮಗೆ ಬೇಂದ್ರೆ ಶೇಕ್ಸಪಿಯರ್ ಯಾರು ಬೇಕಿರಲಿಲ್ಲ. ಧಾರವಾಡದ ಎಲ್ಲಾ ಗಲ್ಲಿಗಳಲ್ಲಿ ಪೋಲಿ ಅಲೆಯುವುದು ಮತ್ತು ನಾವು ಪ್ರೀತಿಸುತ್ತಿದ್ದ ಹುಡುಗಿಯರಿಗೆ ಹಾಗೆಂದು ಹೇಳಲಾಗದೆ ಮುಕೇಶನ ‘ದರ್ದಭರೀ’ ಹಾಡುಗಳನ್ನು ಕರ್ಕಶವಾಗಿ ಗುಣಗುಣಿಸುವುದನ್ನು ಬಿಟ್ಟರೆ ಯಾವುದೂ ಬೇಕಿರಲಿಲ್ಲ. ಮನೆಯ ಹತ್ತಿರದಲ್ಲಿದ್ದ ಹುಡುಗಿಯರು ಅಪ್ಪಟ ಕೃಷ್ಣನ ರಾಧೆಯರು. ನಮ್ಮ ಪಡ್ಡೆ ಕನಸುಗಳನ್ನು ಬೆಚ್ಚಗಿರಿಸುತ್ತಿದ್ದರು.

ಒಂದು ದಿನ ಬೆಳಿಗ್ಗೆ ನಾವು ಗೌಳಿದೊಡ್ಡಿಯ ಕಾಲುದಾರಿ ಹಿಡಿದು ಆಮೇಲೆ ದೇಸಾಯಿ ಕಂಪೌಂಡ್ ಏರಿ ಹತ್ತಿ ಬಲಕ್ಕೆ ಹೊರಳಿ ಸಾರಸ್ವತಪುರದ ದಿನ್ನೆಗಳನ್ನು ಏರಿ ‘ವಾಕ್ ಮಾಡುತ್ತಿದ್ದೆವು’, ‘ವಾಕ್’ ಎಂದು ಮನೆಯಲ್ಲಿ ಹೇಳಿದ್ದರೂ ಮುಖ್ಯ ಉದ್ದೇಶವೆಂದರೆ ತೀಸ್ ನಂಬರ್ ಬೀಡಿ ಸೇದುವುದೇ ಆಗಿತ್ತು. ಮತ್ತು ಬೀಡಿ ಸೇದುತ್ತ ಪಂಟು ಹೊಡೆಯುವುದಾಗಿತ್ತು.

ಅಷ್ಟರಲ್ಲಿ ನಮ್ಮ ಟೋಳಿ ಗಿರೀಶ ಕಾರ್ನಾಡರ ಮನೆಯ ಹತ್ತಿರ ಬಂದಿತ್ತು. ಗಕ್ಕನೆ ನಿಂತವನೆ ಅಪ್ಪಿ ಶುರುಮಾಡಿದ: ‘ಇನ್ ಮ್ಯಾಲಿಂದ್ ದಿನಾ ಇಲ್ಲೇ ವಾಕ್ ಮಾಡೊಣ ಪಾ’ ‘ಅದ್ಯಾಕ? ಈ ಸಾರಸ್ವತಪುರದ ದಿನ್ನಿ ಹತ್ತೂದರಾಗ ದಮ್ಮ ಹತ್ತತೈತಿ. ಆಮ್ಯಾಲೆ ಬೀಡಿ ಎಳಿಯಾಕ ದಮ್ಮ ಇರೂದಿಲ್ಲ’ ಜಾಡರ ಗೊಣಗಿದ. ‘ಮಗನ, ಪೇಪರ್ನ್ಯಾಗ ಓದಿಲ್ಲೇನು? ಅಕಿ ಕನಸಿನ ಕನ್ಯಾ ಅದಾಳಲ್ಲಾ ಹೇಮಾಮಾಲಿನಿ ಅಕಿ ಧಾರ್ವಾಡದ ಸೊಸಿ ಆಕ್ತಾಳಂತ. ಈ ಮನೀ ಸೊಸಿ ಆಗಿ ಬರ್ತಾಳಂತ. ಇದೆಲ್ಲಾ ಓದೂದು ಬಿಟ್ಟು ನೀ ಇಂದ್ರಾ ಗಾಂಧಿ ಬಗೇಗ ಓದತೀ ಏನೋ ಮುಲ್ಲಾ’ ಎಂದು ಅಪ್ಪಿ, ಛೇಡಿಸಿದ.‘ಇವನಾಪನ, ಹೌದಲ್ಲೋ ಗಿರೀಶ ಕಾರ್ನಾಡರು ಹೇಮಾ ಮಾಲಿನೀನ ಲಗ್ನಾ ಆಗ್ತಾರಂತ ಪೇಪರನಾಗ ಭಾಳ ಸುದ್ದೀ ಬರಾಕತ್ಹಾವು.  ಲಗ್ನ ಆತೂ ಅನಕೋ. ಅಕೀ ಸಿನೀಮಾ ಮಾಡೋದು ಬಿಟ್ಟು ಇಲ್ಯಾಕ ಬರತಾಳಲೇ.  ಇನ್ನೂ ಇವರ ಬಾಂಬೆಗೆ ಹೋಗ್ತಾರೇನೋ!’‘ಹಂಗಲ್ಲ, ಈ ಮನೀ ಸೊಸಿ ಆದಮ್ಯಾಲ ಯಾವಾಗಲೂ ಇಲ್ಲದಿದ್ದರೂ ದೀಪಾವಳಿ ಗಣೇಶ ಚವತಿ ಹಬ್ಬಕ್ಕರ ಬರಬೋದು.’‘ಬಂದಳು ಅನಕೋ. ನಾವು ರಾತ್ರಿ ಪಾಳೇ ಪೋಲೀಸ್ರಂಗ ಈ ಮನೀ ಮುಂದ ವಾಕ್ ಮಾಡ್ತೀವಿ ಅನಕೋ.ಆದರ ಕನಸಿನ ಕನ್ಯಾ ನಮಗ ಕಾಣತಾಳ ಅಂತ ಏನ ಗ್ಯಾರಂಟೀ?’ ಎಂದು ಜಾಡರ ಹತಾಶೆಯಲ್ಲಿ ನಿಟ್ಟುಸಿರಿಟ್ಟ.

‘ಮಗನ, ಸ್ವಲ್ಪ ತಲೀ ಓಡಿಸಲೇ. ಅಕೀ ಹೇಳಿ ಕೇಳಿ ಬ್ರಾಂಬ್ರ ಹೆಣಮಗಳು. ಹಿಂದೀ ಸಿನೇಮಾದಾಗ ಮಾಡಿದರೇನಂತ, ಹುಟ್ಟಿನಿಂದ ಪಕ್ಕಾ ತಮಿಳು ಬ್ರಾಂಬ್ರ ಹುಡುಗಿ. ಅವರ ಮನ್ಯಾಗ ಪದ್ದತೀ. ಹೇಳಿಕೊಟ್ಟಿರತಾರ. ಬೆಳಿಗ್ಗೆದ್ದು ಅಂಗಳಾ ಗುಡಿಸಿ ನೀರ್ ಹಾಕಿ ರಂಗೋಲಿ ಇಡೋದನ್ ಹೇಳಿಕೊಟ್ಟಿರತಾರ. ನಾವಿಲ್ಲಿ ವಾಕ್ ಮಾಡಕೊಂಡು ಬರ್ತೀವಿ ಅನಕೋ.  ನಮ್ ನಸೀಬು ಖೊಟ್ಟಿ ಇಲ್ದಿದ್ದರ ಯಾವತ್ತಾರ ಒಂದಿನಾ ಕನಸಿನ ಕನ್ಯಾ ಕೈಯಾಗ ಕಸಬರಗಿ ಹಿಡಕೊಂಡು ಅಂಗಳಾ ಗುಡಿಸೋವಾಗ ನಮ್ಮ ಕಣ್ಣಿಗ ಬೀಳೂದಿಲ್ಲ ಅಂತೀಯನ?’ಕನಸಿನ ಕನ್ಯೆ ಅಂಗಳ ಗುಡಿಸುವಾಗ ದೊಡ್ಡ ಕಂಪೌಡಿನ ಆ ಮನೆಯ ಗೇಟುಗಳ ಕಂಬಿಗಳ ಮಧ್ಯದಿಂದ ನಮ್ಮ ಕಣ್ಣಿಗೆ ಬೀಳಬಹುದೆಂಬ ಆಸೆಯಿಂದ ನಮ್ಮ ಪಡ್ಡೆ ಹೃದಯಗಳು ಬಡಿದುಕೊಂಡವು. ‘ನಾರಿ ಬಂದಳು ನೀರಿಗೆ ಬೆಂಕಿ ಹತ್ತಿತು ದಾರಿಗೆ’ ಎಂದು ಕನಸು ಕಾಣುತ್ತಾ ಎಲ್ಲಾ ಚಲನಚಿತ್ರ ಪತ್ರಿಕೆಗಳನ್ನು ಶ್ರದ್ಧೆಯಿಂದ ಓದುತ್ತಾ, ವಾಕ್ ಮಾಡುತ್ತಲೇ ಇದ್ದೆವು. ಕೆಲವು ದಿನಗಳ ನಂತರ ಕನಸಿನ ಕನ್ಯೆ ಹೇಮಾಮಾಲಿನಿ ಧಾರ್ವಾಡದ ಸೊಸೆಯಾಗುವುದಿಲ್ಲ ಎಂದು ಖಾತ್ರಿಯಾಯಿತು. ನಮ್ಮ ಪಡ್ಡೆ ಹೃದಯಗಳು ಒಡೆದು ಚೂರಾಗಿ ಅತ್ತಿಕೊಳ್ಳ, ಗೌಳಿದೊಡ್ಡಿ ಮತ್ತು ಸಾರಸ್ವತಿ ಮರದ ದಿನ್ನೆಯ ಮೇಲೆ ಬಿದ್ದವು.

ಹೋಳಿಯ ಬಣ್ಣಗಳ ಹುಚ್ಚುಹೊಳೆ

`ಏಳರಿ ಸರ$…ಹೋಳಿ ಹಬ್ಬದ ದಿನ ಇನ್ನೂ ಮಲಕೊಂಡಿದ್ದರ ಹ್ಯಾಂಗ’ ಎಂದು ಅಪ್ಪಿ ನನ್ನನ್ನು ಎಬ್ಬಿಸಿದ. ಸೆಖೆಯ ದಿನಗಳಾದ್ದರಿಂದ ಮನೆಯ ಮುಂದೆ ಹೊರಗೆ ಇಟ್ಟಿದ್ದ ಹೊರಸಿನ ಮೇಲೆ ಮಲಗಿದ್ದೆ. ಬೆಳಗಿನ ಜಾವ ಇಬ್ಬನಿ ಬೀಳತೊಡಗಿದಾಗ ಯಾವಾಗಲೋ ಅವ್ವ ಕೌದಿ ಹೊದಿಸಿ ಹೋಗಿದ್ದಳು. ಅದರೊಳಗೆ ಬೆಚ್ಚಗೆ ಮಲಗಿದ್ದವನು ಕಷ್ಟಪಟ್ಟು ಕಣ್ಣುಬಿಟ್ಟು ನೋಡಿದರೆ ಆಗಲೇ ಅಪ್ಪಿಯ ಮುಖದ ಮೇಲೆ ಅಂಡಬಂಡ ಬಣ್ಣಗಳ ಸಂತೆಯೇ ನೆರೆದಿತ್ತು. ಹೋಳಿ ಶುರುವಾಗಿಬಿಟ್ಟಿದೆ ಎಂದು ಖುಷಿಯಿಂದ ಎದ್ದೆ.

ತಡವಾಗಿ ಎದ್ದಿದ್ದು ಯಾಕೆ ಅಂದ್ರೆ ಹಿಂದಿನ ಎರಡು-ಮೂರು ರಾತ್ರಿಗಳು ಕುಳ್ಳು ಕದಿಯುವುದರಲ್ಲಿ ಕಳೆದಿದ್ದೆವು. ಹೋಳಿ ಹುಣ್ಣಿಮೆಯಂದು ಸುಡಲು ಕಾಮನನ್ನು ನಿಲ್ಲಿಸಲು ಹತ್ತಿರದ ಎಲ್ಲಾ ಮನೆಗಳಿಂದ `ಕುಳ್ಳು’ (ಸೆಗಣಿಯಿಂದ ತಟ್ಟಿದ ಬೆರಣಿ) ಕದಿಯುವುದು ಸಂಪ್ರದಾಯ. ರಾತ್ರಿಯಾದ ಮೇಲೆ ಹಲವಾರು ಟೋಳಿಗಳು ಹೊಂಚು ಹಾಕುತ್ತಾ ಮನೆಗಳ ಕಾಂಪೌಂಡ್ ಮತ್ತು ಹಿತ್ತಲುಗಳ ಸುತ್ತ ಗಸ್ತು ಹೊಡೆಯುತ್ತಿದ್ದೆವು. ಟೋಳಿಗಳನ್ನು ಓಡಿಸಲೆಂದು ದೊಡ್ಡ ಕೋಲುಗಳನ್ನು ಇಟ್ಟುಕೊಂಡು ಕಾವಲು ಕಾಯುತ್ತಿದ್ದವರನ್ನು, ಅವರ ನಾಯಿಗಳನ್ನು ಎದುರಿಸಿ ಕುಳ್ಳು ಕದಿಯುವುದು ನಮಗೆ ರೋಮಾಂಚಕ ಸಾಹಸವಾಗಿತ್ತು.

ಕುಳ್ಳು ಎಂದರೆ ಸೆಗಣಿಯಿಂದ ತಟ್ಟಿದ ಕುಳ್ಳು ಮಾತ್ರವಲ್ಲ. ಶೇಖರಿಸಿಟ್ಟಿದ್ದ ಸೌದೆ, ಕಾಂಪೌಂಡ್‌ಗಳಿಗೆ ಬಳಸಿದ್ದ ಕಟ್ಟಿಗೆ ಕೋಲುಗಳು, ಹಳೆಯ ಬಾಗಿಲುಗಳು ಎಂದು ಭಾಷಾಂತರಿಸಿಕೊಂಡಿದ್ದ ನಾವು ನಮ್ಮ ಓಣಿಯ ಕಾಮಣ್ಣನಿಗಾಗಿ ಎಲ್ಲ ಮನೆಗಳಿಂದ ನಿರ್ದಯವಾಗಿ ಲೂಟಿ ಮಾಡುತ್ತಿದ್ದೆವು. ಮನೆಯವರು ಅಟ್ಟಿಸಿಕೊಂಡು ಬರುತ್ತಿದ್ದಾಗ ಒಂದಿಬ್ಬರು ಕಾಂಪೌಂಡ್ ಹಾರಿ ಕೈಗೆ ಸಿಕ್ಕಿದ್ದನ್ನೆಲ್ಲಾ ಸೆಳೆದುಕೊಂಡು ಓಡುತ್ತಿದ್ದರು. ಕದ್ದಿದ್ದನ್ನು ರಿಲೇ ರೇಸ್‌ನಂತೆ ಕೈಯಿಂದ ಕೈಗೆ ದಾಟಿಸಿಕೊಂಡು ಕಾಮಣ್ಣನಿಗೆ ಜೋಡಿಸುತ್ತಿದ್ದೆವು. ಅದರಲ್ಲೂ ಮಾಳಮಟ್ಟಿಯ ತಗ್ಗುದಿನ್ನೆಗಳ, ಹಳೆಯ ಕಾಲದ ದೊಡ್ಡ ಕಾಂಪೌಂಡ್‌ಗಳಿದ್ದ ಮನೆಗಳ ಪ್ರದೇಶ ನಮಗೆ ಹೇಳಿ ಮಾಡಿಸಿದಂತಿತ್ತು. ಅಲ್ಲದೇ ಅಲ್ಲಿಯ ಮನೆಗಳಲ್ಲಿಯ ಕುಟುಂಬಗಳ ಸಮಸ್ತ ವ್ಯವಹಾರಗಳು, ಹಗರಣಗಳು ನಮಗೆ ಗೊತ್ತಿದ್ದರಿಂದ ಅದನ್ನುಆಧರಿಸಿದ ಟಿಪ್ಪಣಿಗಳನ್ನು ರಾತ್ರಿಯ ನಿಶ್ಯಬ್ಧದಲ್ಲಿ ಎಲ್ಲರೂ ಕೇಳುವಂತೆ ಗಟ್ಟಿಯಾದ ದನಿಯಲ್ಲಿ ಕೂಗಿ ಹೇಳುತ್ತಿದ್ದೆವು.

ರಾಯರ ಮಠದ ಮೂಲಕ ಅರ್ಚಕರೊಬ್ಬರಿಗೆ ಆಗ ತಾನೆ ಮದುವೆಯಾಗಿತ್ತು. ಆದ್ದರಿಂದ ಅಂದು ಸರೋರಾತ್ರಿಯ ಹೊತ್ತು ಅವರ ಮನೆಯ ಹಿತ್ತಲಿನ ಕಡೆಯಿಂದ ಗಿಡಗಳ ಸಂದಿಯಿಂದ ನಮ್ಮ `ಅಶರೀರವಾಣಿಗಳು’ ರಾತ್ರಿಯ ಮೌನದಲ್ಲಿ ಮೊಳಗಿದ್ದವು. “ಭಟ್ಟರ$..ಹಗುರ, ಸಾವಕಾಶ, ಅಗದೀ ಸಾವಕಾಶ ಆಗಲಿ” ” ಭಟ್ಟರ$..ಏನ್ ಬೇಕಾದ್ದು ಆಗಲಿ, ಚೊಂಡಕಿ ಮಾತ್ರ ನೆಟ್ಟಗಿರಲಿ” ಎಂದು ಕೂಗಿ ಬಾಗಿಲು ತೆರೆಯುವುದರೊಳಗೆ ಪರಾರಿಯಾಗಿದ್ದೆವು.

ಹಲವಾರು ಮನೆಗಳಲ್ಲಿ ನಮ್ಮಂಥ ಕಳ್ಳಕ್ಯಾತರ ಸಹವಾಸವೇ ಬೇಡವೆಂದು ಅವರೇ ಕಾದಿದ್ದು ಐದು ಕುಳ್ಳುಗಳನ್ನು ಕೊಟ್ಟು ಕಳುಹಿಸುತ್ತಿದ್ದರು. ಆದ್ದರಿಂದ ಕದಿಯುವ ರೋಮಾಂಚನ ಇಲ್ಲವಾಗಿ ಬಹಳ ಬೇಸರದಿಂದ ಕುಳ್ಳುಗಳನ್ನು ಸ್ವೀಕರಿಸುತ್ತಿದ್ದೆವು. ಈ ಪ್ರಕಾರವಾಗಿ ರಾತ್ರಿಗಳೆಲ್ಲಾ ಕುಳ್ಳು ಕದ್ದು ದೊಡ್ಡ ಕಾಮಣ್ಣನನ್ನು ನಿಲ್ಲಿಸಿದ್ದೆವು. ನಿರಂತರವಾಗಿ ಲಬೋ ಲಬೋ ಎಂದು `ಹೊಯ್ಕೊಂಡಿದ್ದ’ ನಮ್ಮ ಬಾಯಿಗಳು ಸುಸ್ತಾಗಿದ್ದವು. ಆದರೆ, ಹೋಳಿ ಹಬ್ಬದ ಬೆಳಗೆಂದು ಹೊಳೆದ ಕೂಡಲೇ ನಿದ್ದೆ, ಸುಸ್ತು ಎಲ್ಲವೂ ಹೊರಟುಹೋದವು. ಬೇಗಬೇಗನೇ ಸಿದ್ಧರಾದೆವು. ಸಿದ್ಧವಾಗುವುದೆಂದರೆ ಅವ್ವ ಗಂಟು ಕಟ್ಟಿ ಇಟ್ಟಿದ್ದ ಹಳೆಯ ಬಟ್ಟೆಗಳಲ್ಲಿ ಬಣ್ಣ ಆಡಲು ಸೂಕ್ತವಾದ ಬಟ್ಟೆ ಆಯ್ದುಕೊಳ್ಳುವುದು ನಾನು ಹಳೆಯ `ಮಾಲಂಗಿ’ ಪ್ಯಾಂಟ್ ಹಾಗೂ ದೇವಾನಂದ ಕಾಲರ್ ಅಂದರೆ ಅಗಲವಾದ, ವಿಶಾಲವಾದ ಕಾಲರ್ ಇದ್ದ ಹಳೆಯ ಶರ್ಟನ್ನು ಹಾಕಿಕೊಂಡೆ. ಹೆಗಲಿನವರೆಗೆ ಬೆಳೆಸಿದ್ದ `ಹಿಪ್ಪಿ’ ಸ್ಟೈಲ್‌ನ ಕೂದಲನ್ನು ಬಾಚಿಕೊಂಡು ವಿಕಾರವಾಗಿದ್ದ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡೆ. ಏಕೆಂದರೆ, ಧಾರ‍ವಾಡದ ಹೋಳೀ ಹಬ್ಬದ ವಿಶೇಷವೆಂದರೆ ಆದಷ್ಟು ವಿಚಿತ್ರವಾಗಿ ಸಾಧ್ಯವಿದ್ದರೆ ವಿಕಾರವಾಗಿ ಕಾಣುವುದು ಮುಖ್ಯವಾಗಿತ್ತು. ಇಷ್ಟು ರಂಗಸಿದ್ಧತೆ ಮಾಡಿಕೊಂಡು ಹೊರಬಂದರೆ ಶುರುವಾಯಿತು ಬಣ್ಣ. ನಿಮಿಷಗಳಲ್ಲಿ ಟೋಳಿಯವರೆಲ್ಲಾ ಸೇರಿಕೊಂಡೆವು.

ಥರಥರಾವರಿ ಬಣ್ಣಗಳನ್ನು ಕೆನ್ನೆ, ಹಣೆ, ಮೂಗು ಒಟ್ಟಾರೆ ಕೈಗೆ ಸಿಕ್ಕುವ ದೇಹದ ಎಲ್ಲಾ ಭಾಗಗಳಿಗೆ ಹಚ್ಚುವುದು. ನೀರಿನಲ್ಲಿ ಬೆರೆಸಿದ ಬಣ್ಣಗಳನ್ನು ಓಕುಳಿ ಆಡುವುದು. ಪ್ಲಾಸ್ಟಿಕ್ ಪಿಚಕಾರಿಗಳಿಂದ ಜೊಯ್ಯೆಂದು ಎರಚುವುದು. ಅಟ್ಟಿಸಿಕೊಂಡು ಹೋಗಿ ಬಣ್ಣ ಹಚ್ಚುವುದು. ಜೊತೆಗೆ ಲಬೋಲಬೋ ಎಂದು ಹೊಯ್ಕೊಳ್ಳುವುದು. ಹೋಳಿ ಎಂದರೆ ಅವ್ವನಿಗೂ ಹುರುಪು. ಮನೆ ಹೊರಗೆ ಬಕೆಟ್‌ಗಳಲ್ಲಿ ನೀರು ತುಂಬಿಸಿ ಇಡುತ್ತಿದ್ದರು. ಅದಕ್ಕೆ ಬಣ್ಣ ಬೆರೆಸಿ ನೆರೆಹೊರೆಯವರನ್ನೆಲ್ಲಾ ಕರೆದು ಬಕೆಟ್‌ಗಳಿಂದ ತಲೆ ಮೇಲಿಂದಲೇ ಸುರಿಯುತ್ತಿದ್ದೆವು. ನಮ್ಮ ಚಾಳಿನಲ್ಲಿ ಒಂದು ಬ್ರಾಹ್ಮಣ ಕುಟುಂಬ, ಒಂದು ಪಂಜಾಬಿಗಳದು, ಇನ್ನೊಂದು ಸಿಂಧಿಗಳದು. ಹೋಳಿ ಹಬ್ಬದ ದಿನ ಅಪ್ಪಿಯ ಕುಟುಂಬದವರನ್ನು, ಗಂಡಸರು ಮತ್ತು ಹೆಂಗಸರನ್ನು ಕರೆತಂದು ಬಣ್ಣದ ಸ್ನಾನ ಮಾಡಿಸುವುದರಲ್ಲಿ  ಅವ್ವನದೂ ಮುಖ್ಯ ಪಾತ್ರ.

ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮುಸ್ಲಿಂ ಕುಟುಂಬದಲ್ಲಿ ಏಳು ಜನ ಹುಡುಗಿಯರು. ಅವರು ಮಾತ್ರ ತಂದೆಯ ಹೆದರಿಕೆಯಿಂದ, ದೂರದಿಂದ ಆಸೆಯಿಂದ ನೋಡುತ್ತಾ ನಿಲ್ಲುತ್ತಿದ್ದರು. ಕೊನೆಗೆ ತಾಳಲಿಕ್ಕಾಗದೇ ನಮ್ಮ ಮನೆ ಒಳಗೆ ಬಂದು ಅವ್ವನ ಕೈಯಲ್ಲಿ ಕೆನ್ನೆಗೆ ಬಣ್ಣ ಹಚ್ಚಿಸಿಕೊಂಡು ಸ್ವಲ್ಪ ಹೊತ್ತಿನ ಮೇಲೆ ತೊಳೆದುಕೊಂಡು ಹೋಗುತ್ತಿದ್ದರು.

ಹೀಗೆ ಮನೆಯಲ್ಲಿ ಬಣ್ಣ ಒರೆಸಿಕೊಂಡು, ಗಬಗಬನೆ ತಿಂದು ತಿಂಡಿ ಮುಕ್ಕಿ ಊರಿನ ಕಡೆಗೆ ಹೊರಟೆವು. ಅಂದು ಎಲ್ಲಾ ಕಡೆ ಪಡ್ಡೆ ಟೋಳಿಗಳದ್ದೇ ಕಾರುಬಾರು. ಓಣಿಗಳಲ್ಲಿ ಯಾರು ಕಂಡರೂ ಅಟ್ಟಿಸಿಕೊಂಡು ಬಣ್ಣ ಹಚ್ಚುವುದು, ಇನ್ನೊಂದು ಟೋಳಿ ಬಂದರೆ ಜಿದ್ದಾಜಿದ್ದಿಯಲ್ಲಿ ಬಣ್ಣ ಹಾಕುವುದು ಮತ್ತು ಎದುರು-ಬದುರಾಗಿ ನಿಂತು ಪಂದ್ಯ ಕಟ್ಟಿದಂತೆ `ಕೀ ಹೋ’ ಎಂದು ಕೂಗಿ ಹೊಯ್ಕೊಳ್ಳುವುದು ನಿರಂತರವಾಗಿ ನಡೆದಿದ್ದವು.

ಆ ಹೊತ್ತಿಗಾಗಲೇ ಧಾರವಾಡದಲ್ಲಿ ನಾಗರಿಕ ಬಣ್ಣಗಳ ಜಮಾನಾ ಮುಗಿಯುತ್ತಾ ಬಂದಿತ್ತು. ಬದಲಾಗಿ ಬಿಳಿ `ಸುನೇರಿ’ ಬಂಗಾರ ಬಣ್ಣದ ಸುನೇರಿ ಮಾತ್ರವಲ್ಲ ಎತ್ತಿನ ಚಕ್ಕಡಿಗಳ ಗಾಲಿಗೆ ಹಾಕುತ್ತಿದ್ದ ಎರಿ ಇವುಗಳ ಬಳಕೆ ಶುರುವಾಗಿತ್ತು. ಹುಟ್ಟಿಸಿದ ತಂದೆ-ತಾಯಿಗಳೂ ಗುರುತು ಹಿಡಿಯದಂತೆ ವಿಕಾರವಾಗಿ ಮುಖಗಳಿಗೆ ಬಣ್ಣ ಹಚ್ಚುತ್ತಿದ್ದೆವು. ಮುಖ್ಯವಾಗಿ ಅತ್ಯಂತ ನಾಟಕೀಯವಾಗಿ ವಿಕ್ಷಿಪ್ತವಾಗಿ ನಡೆದುಕೊಳ್ಳುತ್ತಿದ್ದರೆ ಹೋಳಿ ಹಬ್ಬಕ್ಕೆ ಖದರು ಬರುತ್ತಿರಲಿಲ್ಲ.

ಮಾಳಮಡ್ದಿಯಿಂದ ಇಳಿದು ಸ್ಟೇಷನ್ ರೋಡಿಗೆ ಬರುವಷ್ಟರಲ್ಲಿ ರಸ್ತೆಗಳೆಲ್ಲಾ ಕಾಮನಬಿಲ್ಲಿನ ಬಣ್ಣಗಳಲ್ಲಿ ತೊಯ್ದು ಹೋಗಿದ್ದವು. ನನ್ನ ಹಿಪ್ಪಿ ಗೆಟಪ್ಪಿನಿಂದಾಗಿ ಹಲವಾರು ಟೋಳಿಗಳು ಎದುರಾದಾಗ ನನ್ನ ಜೊತೆ ಡೈಲಾಗ್‌ನಲ್ಲಿ ತೊಡಗುತ್ತಿದ್ದವು. ಒಂದು ಟೋಳಿಯವನು “ಹೆಂಗಿದೀರಿ ಬ್ರದರ್” ಎಂದು ತಬ್ಬಿಕೊಂಡನು. ನಾನು ” ಬ್ರದರ್, ನನ್ನ ಎದುರುಗೊಳ್ಳಾಕ ಒಬ್ಬನ$ ಯಾಕ ಬಂದಿ? ವೈನಿ ಬಂದಿಲ್ಲ ಏನು?” ಎಂದೆ. ಅವನು ಅಳುಮುಖ ಮಾಡಿಕೊಂಡು, ಮತ್ತೆ ತಬ್ಬಿಕೊಂಡು ” ಏನ$ ಹೇಳಲಿ ಬ್ರದರ್, ನಿನ್ನಿ ರಾತ್ರಿ ಪಕ್ಕದ ಮನೀಯವನ ಜೊತಿಗಿ ಓಡಿಹೋದಳು” ಎಂದನು. ” ಹೋಗಲಿ ಬ್ರದರ್, ಎದೀ ಒಡದುಕೋಬ್ಯಾಡ. ಓಡಿ ಹೋದರ ಹೋಗಲಿ, ನೀನು ಆಜೂಬಾಜೂದಾಗ ಇನ್ನಾರಾದರೂ ವೈನೀನ್ನ ಹುಡುಕ್ಕೋ” ಎಂದು ಸಂತೈಸಿದೆ.

ಹೀಗೆ ನಿಂತಲ್ಲಿ ಆಶು ನಾಟಕಗಳು ಅಸಂಗತ ಶೈಲಿಯಲ್ಲಿ ನಡೆದವು. ಇನ್ನೊಂದು ಟೋಳಿಯ ಲೀಡರ್ ನನ್ನನ್ನು ನೋಡಿ ಗರ ಹೊಡೆದವನಂತೆ ನಟಿಸಿ “ಅಲೇಲಲೇಲಲೇ, ಮೊನ್ನಿ ನೋಡಿದ್ದ ಫಿಲ್ಮನ್ಯಾಗ ಹೀರೋ ನೀವೇ ಅಲ್ಲೇನ್ರಿ ?” ಎಂದ. ನಾನು “ಹೌದು ಮತ್ತ$, ಇವತ್ತು ಹೋಳಿ ಹಬ್ಬದ ಪ್ರಯುಕ್ತ ಪ್ರತ್ಯಕ್ಷ ಬಂದೀನಿ ತಮ್ಮಾ, ದುಡ್ಡು ಕೊಟ್ಟು ಲಗೂನ ಟಿಕೆಟ್ ತಗೊಂಡು ನೋಡು” ಎಂದೆ. ಹೀಗೆ ಸವಾಲ್-ಜವಾಬ್ ಮುಗಿದ ಕೂಡಲೇ ಎರಡೂ ಟೋಳಿಯವರು “ಕೀ ಹೋ’ ಎಂದು ಕುಣಿಯುತ್ತಿದ್ದರು.

ಹೀಗೆ ಸ್ಟೇಷನ್ ರೋಡಿನಿಂದ ಕೋರ್ಟ್ ಸರ್ಕಲ್‌ಗೆ ಬಂದು ಅಲ್ಲಿಂದ ಲೈನ್ ಬಜಾರಿಗೆ ತಿರುಗಿ, ಅಲ್ಲಿಂದ ಸುಭಾಷ್ ರಸ್ತೆಗೆ ಬಂದೆವು. ಅಲ್ಲಿ ಮನೋಹರ ಗ್ರಂಥಮಾಲದ ಎದುರಿಗೆ ರಸ್ತೆಯಲ್ಲಿ ಬಣ್ಣದ ನೀರಿನ ದೊಡ್ಡ ಡ್ರಮ್‌ಗಳನ್ನು ಜೋಡಿಸಿಟ್ಟಿದ್ದರು. ಬಂದವರನ್ನು ಅನಾಮತ್ತಾಗಿ ಎತ್ತಿ ಅವುಗಳಲ್ಲಿ ಅದ್ದಿ ತೆಗೆಯುತ್ತಿದ್ದರು. ನಾನು ಮತ್ತು ಅಪ್ಪಿ ಆ ಡ್ರಮ್‌ಗಳಲ್ಲಿ ಮುಳಗಿ ಎದ್ದೆವು. ಅಷ್ಟರಲ್ಲಿ ಡಿಸಿಸಿ ಬ್ಯಾಂಕ್ ಕಟ್ಟಡದ ಕಡೆಗಿನ ಮ್ಯಾದಾರ ಓಣಿ ಕಡೆಯಿಂದ ಹಲವು ಹಿರಿಯರು ಬಂದರು.  ಅದರಲ್ಲಿ ಪಾಯಿಜಾಮಾ ಜುಬ್ಬಾ ಹಾಕಿದ ಒಬ್ಬರು, ಧೋತರ ಹಾಕಿದ ಇನ್ನೊಬ್ಬರು ಆಗಲೇ ತಲೆಯಿಂದ ಕಾಲಿನವರೆಗೆ ಬಣ್ಣ ಹಚ್ಚಿಸಿಕೊಂಡಿದ್ದ ೬೦-೬೫ರ ಆಸುಪಾಸಿನವರು ರಸ್ತೆ ಮಧ್ಯಕ್ಕೆ ಬಂದು ನಿಂತರು.  ಎದುರುಬದುರಾಗಿ ನಿಂತು, ಮುಖದ ಮೇಲೆ ಯಾವ ಭಾವನೆಯನ್ನು ತೋರದೇ ಗಟ್ಟಿದನಿಯಲ್ಲಿ ಹೋಳಿ ಪದಗಳನ್ನು ಹೇಳತೊಡಗಿದರು. ಒಬ್ಬರಿಗೊಬ್ಬರು ಸೆಡ್ಡು ಹೊಡೆದು ಹಾಡುತ್ತ ಹೋದರು. ಅವನ್ನು ಕೇಳಿದ ನಾನು, ಅಪ್ಪಿ ತೆರೆದ ಬಾಯಿ ತೆರೆದಂತೆ ಗರಬಡೆದು ನಿಂತುಕೊಂಡೆವು. ೬೫ ವಯಸ್ಸಿನ ಇಬ್ಬರು ಹಿರಿಯರು ಸುಭಾಷ್ ರಸ್ತೆಯ ಮಧ್ಯದಲ್ಲಿ ಹಾಡುತ್ತಿದ್ದ ಹೋಳೀ ಪದಗಳು ಹೇಗಿದ್ದವೆಂದರೆ ನಮ್ಮಂಥ ನಿರ್ಲಜ್ಜ ಪಡ್ಡೆಗಳು ನಾಚಿಕೆಯಿಂದ ಮುದುಡಿಕೊಂಡೆವು. ಅಷ್ಟರಲ್ಲಿ ಸುತ್ತಲೂ ಸೇರಿದ ಒಂದೊಂದು ಸಾಲಿಗೆ `ಕೀ ಹೋ’ ಎಂದು ಕುಣಿಯುತ್ತಿದ್ದು, ನನಗಂತೂ ಕನ್ನಡ ಭಾಷೆಯಲ್ಲಿ ಇಷ್ಟೊಂದು ಅಶ್ಲೀಲ ಪದಗಳಿವೆಯೆಂದು ಆಶ್ಚರ್ಯವಾಯಿತು. ಹಾಡು ಮುಗಿದ ಕೂಡಲೇ ಅಪ್ಪಿ “ಸರ$..ಇನ್ನೊಂದು ವಾರ ಕಿವೀ ತೊಳಕೊಂಡರೂ ಸ್ವಚ್ಛ ಆಗುದಿಲ್ಲರೀ” ಎಂದ. ಅಪ್ಪಿ ಹೇಳಿದ್ದೇ ಸರಿ ಗುಂಪಿನವರು ನಮ್ಮಿಬ್ಬರನ್ನು ಮತ್ತೆ ಡ್ರಮ್ಮಿನಲ್ಲಿ ಅದ್ದಿ ಬಣ್ಣದ ನೀರಿನಲ್ಲಿ ಕಿವಿ ತೊಳೆದರು.

ಸುಭಾಷ್ ರೋಡಿನ ಕೊನೆ ತಲುಪಿ ಅಲ್ಲಿ ಅಂಬಾಭವಾನಿ ಗುಡಿಯಿಂದ ಎಡಗಡೆಗೆ ಹೋದ ಎಲ್ಲಾಪುರ ರಸ್ತೆಯ ಮೂಲಕ ನಮ್ಮ ಚಿಗವ್ವನ ಕಾಮನಕಟ್ಟಿಯ ಮನೆಗೆ ಬಂದವು. ಚಿಗವ್ವನಿಗೆ ಹೋಳೀ ಹಬ್ಬವೆಂದರೆ ಬಹಳ ಹುರುಪು. ಪ್ರತಿ ವರ್ಷ ನಾವು ಬರುವವರೆಗೆ ಕಾದು ನಮ್ಮಿಂದ ಬಣ್ಣ ಹಚ್ಚಿಸಿಕೊಂಡು, ಅರ್ಧ ಗಂಟೆ ನಾವು `ಹೊಯ್ಕೊಳ್ಳುವಂತೆ’ ಮಾಡಿ ಆಮೇಲೆ ` ಹೊಯ್ಕೊಂಡ ಬಾಯಿಗೆ ಹೋಳಿಗಿ’ ಎಂದು ತಿಂಡಿ ಕೊಡುತ್ತಿದ್ದರು.  ಕಡಲಿ ಬ್ಯಾಳಿ ಹೂರಣದ ಹೋಳಿಗಿ, ಜೋಳದ ವಡಿ ಇತ್ಯಾದಿಗಳನ್ನು ತಿಂದು ಪೂರೈಸಿದೆವು.

ಕಾಮನಕಟ್ಟಿಯಿಂದ ಮತ್ತೆ ಸುಭಾಷ್ ರಸ್ತೆಗೆ ಬಂದು ಅಲ್ಲಿಂದ ಗವಳಿದೊಡ್ಡಿಗೆ ಹೇಗೆ ನಡೆಯುವುದು ಎಂದುಕೊಳ್ಳುತ್ತಿದ್ದಾಗ ಎಮ್ಮೆಕೇರಿ ಕಡೆಗೆ ಹೋಗುವ ಮತ್ತೊಂದು ಬಸ್ಸು ಬರುತ್ತಿತ್ತು.  ಹಳ್ಳಿಗನ ಧನಿಯಲ್ಲಿ, ‘ ಹೋss,  ಗಾಡಿ ತರಬೋ ನಮ್ಮಪ್ಪ. ನಿನ್ನ ಮಗಳು ಗಂಡ ನಡೀಲಿ, ಅಮೇಲೆ ಬೇಕಾದ್ರೆ ಲಗ್ನನೂ ಆಗ್ಲೀ’ ಎಂದು ಕೂಗಿ ಬಸ್ಸು ನಿಲ್ಲಿಸಿದ. ಅಂತೂ ಎಮ್ಮೆಕೇರಿ ಸ್ಟಾಪ್ ಇಳಿದು ತಲುಪಿದವು.

ಅಲ್ಲಿ ನಮ್ಮ ಅವತಾರ, ನಮಗೆ ಅಂಟಿದ್ದ ಬಣ್ಣಗಳನ್ನು ನೋಡಿದ ಅವ್ವ, ‘ಮನೀ ಒಳಗ ಬರಬೇಡ್ರಿ ಬುತ್ತಿ ಕಟ್ಟಿಕೊಡ್ತೀನಿ, ನುಗ್ಗಿಕೇರಿಗೆ ಹೋಗಿ ಜಳಕ ಮಾಡಿ ಬರ್ರೀ’ ಎಂದಳು. ರೊಟ್ಟಿ, ಚಪಾತಿ, ಚೋಳಕದ ವಡಿ ಎಲ್ಲಾ ಕಟ್ಟಿಕೊಂಡು ಸಾರಸ್ವತಪುರದ ದಿಣ್ಣೆ ಏರಿ, ಅಲ್ಲಿ ಗಿರೀಶ್‌ಕಾರ್ನಡ್‌ರ ಮನೆ ದಾಟಿಕೊಂಡು, ಆ ಮನೆಗೆ ಬಂದ ಕನಸಿನ ಕನ್ಯೆ ಹೇಮಮಾಲಿನಿಯ ನೆನಪಿನಲ್ಲಿ ದುಃಖ ಉಮ್ಮಳಿಸಿ ಗವಳಿದೊಡ್ಡಿಯ ತುದಿಗೆ ಬಂದಾಗ ಅಲ್ಲಿ ಒಂದು ಕಂಟ್ರಿ ಸಾರಾಯಿ ಅಂಗಡಿ ಇತ್ತು. ಅಂಗಡಿ ಎಂದರೆ ಒಂದು ಗುಡಿಸಲು. ಅದಕ್ಕೆ ಸಿನಿಮಾ ಟಿಕೇಟ್ ಕೌಂಟರ್‌ನಂಥ ಒಂದೇ ಕಿಟಕಿ. ಅದರ ಹಿಂದೆ ಮೆಕ್ಸಿಕೊ ದೇಶದವರಂಥ ಕಟೆದು ಮಾಡಿದಂತಹ ಮುಖದ ಗಿರಿಜಾ ಮೀಸೆಯ ಒಬ್ಬನು ಕುಳಿತಿದ್ದ. ಅವನು ಮಾತೇ ಆಡುತ್ತಿರಲಿಲ್ಲ. ಮುಖದ ಮೇಲೆ ಯಾವ ಭಾವವೂ ಇರಲಿಲ್ಲ. ಬೆರಳಿನಲ್ಲೇ ಇಷ್ಟು ರೂಪಾಯಿ ಎಂದು ತೋರಿಸುತ್ತಿದ್ದ. ಅಷ್ಟು ರೂಪಾಯಿ ಕಿಟಕಿಯಲ್ಲಿ ತೂರಿದರೆ ಆ ಕಡೆಯಿಂದ ಒಂದು ಗ್ಲಾಸ್ ನಲ್ಲಿ ಬಿಳಿ ಬಣ್ಣದ ದ್ರವವನ್ನು ಸುರಿದುಕೊಡುತ್ತಿದ್ದ. ಷೇಕ್ಸಪೀಯರ್ ಹೆಸರಿನಲ್ಲಿ ಅದನ್ನು ಗುಟುಕರಿಸಿದೆವು. ಹೀಗಾಗಿ ಹುಬ್ಬಳ್ಳಿ ರಸ್ತೆ ಗುಡ್ಡ ನಡೆದು ನುಗ್ಗಿಕೇರಿ ತಲುಪುವುದರೊಳಗೆ ಆಕಾಶದ ಮೇಲೆ ಹೆಜ್ಜೆ ಇಟ್ಟು ಭೂಮಿಯ ಮೇಲೆ ನಡೆದಂತೆ ಅನ್ನಿಸುತಿತ್ತು. ನುಗ್ಗಿಕೇರಿ ಕಂಡಕೂಡಲೆ ನೀರಿಗೆ ಇಳಿದು ಎಮ್ಮೆಕೇರಿಯ ಎಮ್ಮೆಗಳಂತೆ ಬಿದ್ದುಕೊಂಡವು.

ಎ ನೋಡು ಮಂಗ್ಯಾ… ಮತ್ತೊಂದು ಹೆಣ ಬಿತ್ತು!

ನಾ  ಇಲೆಕ್ಸನ್ನಿಗೆ ನಿಲ್ತೀನಿ ಎಂದು ಯಾವುದೇ ಮುನ್ನುಡಿ ಇಲ್ಲದೇ ಜಾಡರ ಘೋಷಣೆ ಮಾಡಿದಾಗ ನಾವು ಹೆಮ್ಮಾಡಿ ಕ್ಯಾಂಟೀನಲ್ಲಿ ಮಧ್ಯಾಹ್ನದ ಹೊತ್ತು ಕುಳಿತು ಭರ್ಜರಿ ಟಿಫಿನ್ ಮಾಡುತ್ತಿದ್ದೆವು. ವಾರದ ಕಾರ್ಯಕ್ರಮದಲ್ಲಿ  ಇದು ನಮಗೆ ಬಹು ಮುಖ್ಯವಾಗಿತ್ತು. ಎನ್‌ಸಿಸಿಯಲ್ಲಿ ಸೀನಿಯರ್ ಆಂಡರ್ ಅಫೀಸರ್ ಆಗಿದ್ದ ಜಾಡರ ಎನ್‌ಸಿಸಿ ತರಗತಿ ಪರೇಡ್‌ಗಳು ಮುಗಿದ ಕೂಡಲೇ ಕೆಡೆಟ್‌ಗಳಿಗೆ ‘ಹೂಂ ನೋಡ್ರಲೇ, ಎಲ್ಲಾರಿಗೂ ಆಟೆಂಡೆಂ‌ಸ್ ಕೊಟ್ಟೇನಿ. ಕಮ್ ಕಿಮ್ ಅನ್ನದ ಮನೀಗಿ ಹೋಗರಿ. ಇರ್ದಿದ್ದರ ಕ್ರಾಲಿಂಗ್ ಪನಿಶ್‌ಮೆಂಟ್ ಕೊಟ್ಟು ಪೀಕಸ್ತೀನಿ’  ಎಂದು ಖಡಕ್ ಆಫೀಸರನ ಗತ್ತಿನಲ್ಲಿ ಗುಡುಗುತ್ತಿದ್ದ. ಬಹಳ ಜನ ಅಳ್ಳೆದೆಯ ಕೆಡೆಟ್‌ಗಳು ತಮ್ಮ ಟಿಫನ್ ಕೂಪನ್ನುಗಳನ್ನು ಆವನಿಗೆ ವಾಪಸ್ಸು ಕೊಟ್ಟು ಹೋಗುತ್ತಿದ್ದರು. ನಮಗೆ ಎಷ್ಟು ಪಣೂತಿ ಕಾಲ ಬಂದರೂ ಎರಡು ದಿನಗಳ ಮೇಜವಾನಿ ತಪ್ಪುತ್ತಿರಲಿಲ್ಲ. ಅದೂ ಅಗದೀ ಪುಷ್ಕಳ ಉಪಹಾರ ಮಾಡುತ್ತಿದ್ದೆವು. ಈ ಮಧ್ಯೆ ಯಾವಾಗಲಾದರೂ ಕೆಡೆಟ್‌ಗಳಿಗೆ ಕೇಕುಗಳನ್ನು ತರಿಸಿದ್ದಾಗ ನಾನು ಮತಾಂತರ ಮಾಡಲು ಬಂದ ಪಾದ್ರಿಗಳಿಗಿಂತ ಬಿರುಸಾಗಿ ಆ ಕೇಕುಗಳಲ್ಲಿ ಹಂದಿ ಮಾಂಸ, ಮೊಟ್ಟೆಗಳು ಧಾರಾಳವಾಗಿ ಇರುತ್ತವೆಂದು, ಆ ಹಂದಿಯನ್ನು ಇತ್ತೀಚೆಗೆ ಗವಳೀದೊಡ್ಡಿಯಲ್ಲಿ ನೋಡಿದ್ದೇನೆಂದು ಪ್ರಚಾರ ಮಾಡುತ್ತಿದ್ದೆ. ಬ್ರಾಹ್ಮಣ ಹುಡುಗರೆಲ್ಲ ಕೇಕ್‌ಗಳನ್ನು ನನಗೆ ಕೊಟ್ಟು ನಮ್ಮ ಮೇಜವಾನಿಯ ಖದರ್ ಆನ್ನು ಹೆಚ್ಚಿಸುತ್ತಿದ್ದರು.

ಅವತ್ತು ಮಧ್ಯಾಹ್ನ ನಾವು ಆಗಲೇ ಹೊಟ್ಟೆಗೆ ಇಳಿಸಿದ್ದ ಶಿರಾ-ಉಪ್ಪಿಟ್ಟು, ಮಿರ್ಚಿ-ಭಜಿ ಹಾಗೂ ದೋಸೆಗಳು ವಿಷವಾಗಿ ಹೊಟ್ಟೆ ತೊಳೆಸುವಂಥ ಭೀಕರ ಘೋಷಣೆಯನ್ನು ಜಾಡರ ಮಾಡಿಬಿಟ್ಟ. ‘ಲೇ ನಿನಾಪ್ನ, ಬರೂವಾಗ ತಲೀ ಅಡಾ ಇಟ್ಟು ಬಂದೀ ಏನಲೇ’ ಎಂದು ಬಾಯಿಗೆ ಬಂದ  ಉದ್ಗಾರವನ್ನು ನುಂಗಿಕೊಂಡೆವು. ಏಕೆಂದರೆ, ಕೂಪನ್ನುಗಳು ಎನ್‌ಸಿಸಿಯವಾದರೂ ಅನ್ನದಾತ ಜಾಡರನೇ ಆಗಿದ್ದರಿಂದ ನಮಕ್ ಹರಾಮಿ ಮಾಡಲು ಮನಸ್ಸಾಗಲಿಲ್ಲ. ಆದರೆ, ರಾತ್ರಿ ಕಂಡ ಬಾವಿಗೆ ಹಗಲ ಬಿದ್ದಂತ ಕೆಲಸ ಅವನು ಮಾಡುತ್ತಿದ್ದಾನೆಂದು, ಹಾದ್ಯಾಗ ಹೋಗೂ ದೆವ್ವಾ ಮನೀಗಿ ಕರೀತಿದ್ದಾನೆಂದು ನಮಗೆ ಗ್ಯಾರಂಟಿ ಆಗಿತ್ತು.

ಕಾರಣ ಇಷ್ಟೆ. ಕರ್ನಾಟಕ ಕಾಲೇಜಿನ ಇಲೆಕ್ಷನ್ ಆಂದರೆ ಇಂಡಿಯಾದ ಯಾವುದೇ ಇಲೆಕ್ಷನ್ ಅಪ್ಪನ ಹಾಗೆ ಜಾತಿ, ಹಣ, ಪ್ರಭಾವ ಇವೆಲ್ಲವುಗಳ ಚಕ್ರವ್ಯೂಹವಾಗಿತ್ತು. ಅವೆಲ್ಲ ಇರುವ  ಆಸಾಮಿಗಳೇ ಇಲೆಕ್ಷ್‌ನಲ್ಲಿ ಚಿತ್ ಆಗುತ್ತಿದ್ದರು. ಅಂಥವರಲ್ಲಿ ಜಾಡರ ಗೆಲ್ಲುವುದು ಸಾಧ್ಯವಿರಲಿಲ್ಲ. ಹಾಗಂತ ಹೇಳದಿದ್ದರೂ ಇಲೆಕ್ಷನ್ ಉಸಾಬರಿ ಬೇಡ ಎನ್ನುವುದನ್ನು ಹೇಳಿದೆವು. ಆದರೆ, ಜಾಡರನ ತಲ್ಯಾಗ ಗುಂಗೀ ಹುಳ ಹೊಕ್ಕದ್ದರಿಂದ ಆವನು ನಮ್ಮ ಮಾತು ಕೇಳಲೇ ಇಲ್ಲ.  ಇಲೆಕ್ಷನ್‌ಗೆ ನಿಂತೇ ಬಿಟ್ಟ.

ಕರ್ನಾಟಕ ಕಾಲೇಜಿನ ಸಮಸ್ತ ಚಟುವಟಿಕೆಗಳಂತೆ ಇಲೆಕ್ಷನ್ ಕೂಡ ಅದರ ಖರೇ ಖರೇ ಹದಯವಾದ  ಸೈಕಲ್ಸ್ಟ್ಯಾಂಡಿನ ಮೇಲೆ ಕೇಂದ್ರೀಕೃತವಾಗಿತ್ತು. ಸೈಕಲ್ ಸ್ಟ್ಯಾಂಡ್ ಆಂದರೆ ಸೈಕಲ್ ನಿಲ್ಲಿಸುವುದನ್ನು ಬಿಟ್ಟು ಇನ್ನೆಲ್ಲಾ ಕೆಲಸಗಳ ತಾಣವಾಗಿತ್ತು. ಆದು ಹೇಗೆಂದರೆ, ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಉದ್ದನಾಗಿ ಕಟ್ಟಿಗೆಯಿಂದ ಮಾಡಿದ ಸೈಕಲ್ ಸ್ಟ್ಯಾಂಡ್  ಒಂದು ಕಟಾಂಜನದಂತೆ ನಿಂತಿತ್ತು. ಕೈಗೆಟುಕುವಷ್ಟು ಎತ್ತರದ ಅದರ ಛಾವಣಿಯ ಮೇಲೆ ಕಾಲೇಜಿನ ಮಂಗ್ಯಾ, ಮುತ್ಯಾ ಮತ್ತು ಇತರ  ಎಲ್ಲಾ ಗಂಡು ಪ್ರಾಣಿಗಳು ಟೋಳಿ ಕಟ್ಟಿಕೊಂಡು ಈ  ಸ್ಟ್ಯಾಂಡಿನಲ್ಲಿ ನಿಂತುಕೊಳ್ಳುತ್ತಿದ್ದರು. ಯಾಕೆಂದರೆ, ಸರಿಯಾಗಿ ಅದರ ಎದುರಿಗೆ ಕಟ್ಟಡದ ಮೊದಲ ಮಹಡಿಯಲ್ಲಿ ಲೇಡಿಸ್ ರೂಂ ಇದ್ದು, ಆದು ವಿಶಾಲವಾದ ಬಾಲ್ಕನಿಗೆ, ಅಂದರೆ ಸೈಕಲ್ ಸ್ಟ್ಯಾಂಡಿಗೆ ಎದುರು ತೆರೆದುಕೊಳ್ಳುತ್ತದೆ. ಹೀಗಾಗಿ ಎಲ್ಲಾ ಪಡ್ಡೆ ರೋಮಿಯೋಗಳು ಸೈಕಲ್ ಸ್ಟ್ಯಾಂಡಿನಲ್ಲಿ ಕೆಳಗೆ ಮತ್ತು ಜ್ಯೂಲಿಯಟ್‌ಗಳು ಬಾಲ್ಕನಿಯ ಮೇಲೆ ನಿಂತು ಶೇಕ್ಸಪಿಯರನೂ ಅಸೂಯೆ ಪಡುವಂತಾಗುತ್ತಿತ್ತು.  ಇಲೆಕ್ಷನ್ ಪ್ರಚಾರ ಕಾಲೇಜಿನ  ಈ ಭೌಗೋಳಿಕ ಅನುಕೂಲವನ್ನು ಸಂಪೂರ್ಣ ಬಳಸಿಕೊಳ್ಳುತ್ತಿತ್ತು. ಮುಖ್ಯ ಕಟ್ಟಡದ ಸುತ್ತ ಒಂದು ದಾರಿ ಸೈಕಲ್ ಸ್ಟ್ಯಾಂಡ್ ಪಕ್ಕದಿಂದ ಹೆಮ್ಮಾಡಿ ಕ್ಯಾಂಟೀನ್‌ಗೆ ಹೋಗಿ ಆಲ್ಲಿಯ ಕಟ್ಟಡದ ಮುಂಭಾಗಕ್ಕೆ ಬಂದು ಒಂದು ಸುತ್ತು ಹೊಡೆದು ಮತ್ತೆ ಸೈಕಲ್ ಸ್ಟ್ಯಾಂಡಿಗೆ ಬಂದು ಸೇರುತ್ತಿತ್ತು.

ಇಲೆಕ್ಷನ್ ಪ್ರಚಾರವೆಂದರೆ ಆಭ್ಯರ್ಥಿ ಹಾಗೂ ಅವನ ಪಡೆಯವರು ಕೈಯಲ್ಲಿ ರಟ್ಟಿನ ಅಥವಾ ಬಟ್ಟೆಯ ಪೋಸ್ಟರ್‌ಗಳನ್ನು ಹಿಡಿದುಕೊಂಡು ಥರಾವರಿ ದನಿಗಳಲ್ಲಿ ವೋಟ್ ಫಾರ್ ಎಂದು ಕೂಗುತ್ತ ಪ್ರದಕ್ಷಿಣೆ ಹಾಕುತ್ತಿದ್ದರು. ನಾನಾ ವೇಷಗಳಲ್ಲಿ ನಾನಾ ಬಗೆಯ ವಾಹನಗಳಲ್ಲಿ ಪ್ರಚಾರದ ಟೋಳಿಗಳು ಫೇರಿ ಹೊಡೆಯುತ್ತಿದ್ದವು. ಕಾಲ್ದಳಗಳಲ್ಲದೆ, ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್ ಗಳ ಮೇಲೆ, ಜೀಪ್‌ಗಳ ಮೇಲೆ ಪ್ರಚಾರ ತಂಡಗಳು ಬರುತ್ತಿದ್ದವು. ರಂಗುರಂಗಾದ ಡೊಳ್ಳಿನ ಕುಣಿತ, ಇತರ ಜಾನಪದ ಕುಣಿತ ವೇಷಧಾರಿಗಳು ತಂಡಗಳಲ್ಲಿ  ಇರುತ್ತಿದ್ದರು. ಈ  ಎಲ್ಲಾ ತಂಡಗಳು ಬಾಲ್ಕನಿಯ ಕೆಳಗೆ ಬಂದ ಕೂಡಲೇ ಮೈಯ್ಯಾಗ ದೆವ್ವ ಹೊಕ್ಕಂಗ  ಅಥವಾ ಮೈಮ್ಯಾಲೆ ದೇವರ ಬಂದ್ಹಂಗ ಎರ್ರಾಬಿರ್ರಿಯಾಗಿ ಕುಣಿಯುತ್ತಿದ್ದವು. ಟೋಳಿಗಳು ಎದುರು-ಬದುರು ನಿಂತು ವೋಟ್ ಫಾರ್ ಬಾಣಗಳನ್ನು ಎಸೆಯುತ್ತಿದ್ದವು.  ಅಭ್ಯರ್ಥಿಗಳು ಸ್ಟ್ಯಾಂಡಿನ ಮೇಲೆ ನಿಂತಿದ್ದವರ ಕಾಲುಗಳನ್ನು ಸಾಮೂಹಿಕ ನಮಸ್ಕರಿಸುತ್ತ ಮತ ಕೇಳುತ್ತಿದ್ದರು. ಕುಣಿದು ಸುಸ್ತಾದ ಟೋಳಿಗಳು ಹೆಮ್ಮಾಡಿ ಕ್ಯಾಂಟೀನ್ ಕಡೆಗೆ ಹೋಗಿ ಸುಧಾರಿಸಿಕೊಂಡು ಮರಳಿ ಬರುತ್ತಿದ್ದವು. ಹಲವಾರು ಅಭ್ಯರ್ಥಿಗಳು ದಣಿವು, ಒತ್ತಡದಿಂದಾಗಿ ಪ್ರಚಾರ ಮಾಡುತ್ತಲೇ ತಲೆ ಸುತ್ತಿ  ಬೀಳುತ್ತಿದ್ದರು. ಆಗ ಆವರ ನಾಲ್ಕು ಜನ ಅನುಯಾಯಿಗಳು ಆವರನ್ನು ಅನಾಮತ್ತಾಗಿ ಎತ್ತಿಕೊಂಡು ಬಾಲ್ಕನಿಯವರಿಗೆ ಕಾಣುವ ಹಾಗೆ ಎರಡು ಮೂರು ಸಾರಿ ಸುತ್ತಿ ಅಭ್ಯರ್ಥಿಗಳ ಬಗ್ಗೆ ಕರುಣಾರಸ ಉಕ್ಕಿದೆಯೆನ್ನುವುದನ್ನು ಖಾತ್ರಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಬಾಲ್ಕನಿಯ ಮೇಲಿಂದ ಹುಡುಗಿಯರ ದನಿಗಳು  ‘ಎ ನೋಡು ಮಂಗ್ಯಾ! ಮತ್ತೊಂದು ಹೆಣ ಬಿತ್ತು ಎಂದು’ ಕಿಲಕಿಲ ನಗುತ್ತಾ ತಮ್ಮ ಸಹಜ ಕ್ರೌರ್ಯವನ್ನು ತೋರುತ್ತಿದ್ದರು. ಕೆಲವು ಅಭ್ಯರ್ಥಿಗಳು ಹೀಗೆ ಎರಡು ಮೂರು ಸಾರಿ ಬಿದ್ದಾಗ ವಿರೋಧ ಪಕ್ಷದವರು ‘ಇಂವಗ ಯಾರೂ ವೋಟು ಹಾಕಬ್ಯಾಡರಿ, ಅಂವಗ ಮೂರ್ಛಾ ರೋಗ ಐತಿ’ ಎಂದು ಕೂಗುತ್ತಿದ್ದರು. ಬಾಲ್ಕನಿಯ ಲಲನೆಯರು ‘ಭಾಳ ಓವರ್ ಆತು, ಇಂವಗ ಯಾರರ ಒನ್ಸ್ ಮೋರ್ ಅಂದಾರೇನು’ ಅಂತ ಬಾಣ ಬಿಡುತ್ತಿದ್ದರು. ಮುಖ್ಯವಾಗಿ ನಮ್ಮಂಥ ಪಡ್ಡೆಗಳಿಗೆ ಹುಡುಗಿಯರನ್ನು ಮಾತನಾಡಿಸಲು ಇದೊಂದು ಸಾರ್ವಜನಿಕ ಅವಕಾಶವಾಗಿತ್ತು.

ಆ ವರ್ಷ ಅಭ್ಯರ್ಥಿಗಳು ಹೊಸ ಪ್ರಚಾರ ತಂತ್ರವನ್ನು ಕಂಡುಹಿಡಿದರು. ಮುಖ್ಯ ಕಟ್ಟಡದ ಮುಂದಿನಿಂದ ಮೊದಲ ಮಹಡಿಗೆ ಹೋಗಲು ಕಬ್ಬಿಣದಿಂದ ಮಾಡಿದ ವಿಶಾಲವಾದ ಮೆಟ್ಟಿಲುಗಳಿದ್ದವು. ಇವು ಕರ್ನಾಟಕ ಕಾಲೇಜು ಬ್ರಿಟಿಷರ ಕಾಲದ ರೇಲ್ವೆ ಆಫೀಸ್ ಆಗಿದ್ದಾಗಿನ ಕುರುಹುಗಳು ಕೂಡ. ಆ ವರ್ಷ ಅಭ್ಯರ್ಥಿಗಳು ಈ ಪಾವಟಿಗೆಗಳ ಮಧ್ಯ ಒಬ್ಬರ ಹಿಂದೆ ಒಬ್ಬರು ಕುಳಿತು ಎರಡು ಕಡೆಗೆ ಮೆಟ್ಟಿಲು ಹತ್ತುವ ಹುಡುಗಿಯರಿಗೆ ಕಾಲು ಮುಟ್ಟಿ ಮತ ಕೇಳತೊಡಗಿದರು. ಹುಡುಗಿಯರು ಗುಂಪಾಗಿ ಬಂದು ಧಡಧಡನೆ ಮೆಟ್ಟಿಲು ಓಡಿಕೊಂಡೇ ಹತ್ತುತ್ತಿದ್ದರು. ಆದರೂ ಅಷ್ಟರಲ್ಲಿಯೇ ಅಭ್ಯರ್ಥಿಗಳು ಕಾಲು ಮುಟ್ಟುತ್ತಿದ್ದರು. ಇದರಿಂದ ರೋಮಾಂಚನಗೊಂಡ ಅಪ್ಪಿ ಸೈಕಲ್ ಸ್ಟ್ಯಾಂಡಿನಲ್ಲಿ ಕುಳಿತಿದ್ದ ನನಗೆ ಬಂದು ಹೇಳಿದ. ‘ಅಲ್ಲರೀ ಸರ, ಈ ಜಲ್ಮದಾಗ ಎನಾಗುತ್ತೋ, ನಮ್ಮ ಹಣ್ಯಾಗ ಏನ್ ಬರದದೋ ಯಾಂಬಲ್ಲ? ಕಾಲ ಆದರೂ ಮುಟ್ಟೋಣ ಬರ್ರಿ’ ಅಂದ. ನಾನು ಆಗಲಿ ಎಂದು ಟಣ್ಣನೆ ಸ್ಟ್ಯಾಂಡಿನಿಂದ ಹಾರಿದೆ. ನಮ್ಮ ಮಾತು ಕೇಳುತ್ತಿದ್ದ ಅನು ತನ್ನ ಕೆಂಡಸಂಪಿಗೆಯಂಥ ಮೂಗನ್ನು ಕೆಂಪಗೆ ಮಾಡಿಕೊಂಡು ವಾಟ್ ಡು ಯು ಥಿಂಕ್ ಯು ಆರ್ ಪ್ಲ್ಯಾನಿಂಗ್  ಟು ಡು ಜಂಟಲ್ಮೆನ್?’ ಎಂದು ಸುಂದರವಾದ ಇಂಗ್ಲಿಷಿನಲ್ಲಿ ನಮ್ಮಿಬ್ಬರನ್ನು ಹೀನಾಮಾನವಾಗಿ ಬೈದ. ನಾವು ವಿಲೇಜ್ ಈಡಿಯಟ್ಸ ಎಂದು ಹೇಳಿದ. ಹೀಗಾಗಿ ನಮ್ಮ ಪಡ್ಡೆ ಕೈಗಳು ಪವಿತ್ರವಾಗಿಯೇ ಉಳಿದವು.

ಅಷ್ಟರಲ್ಲಿ ಆ ಕಡೆಯಿಂದ ಹೋ ಎಂದು ಕೂಗೆದ್ದಿತು. ಏನು ಎಂದು ನೋಡಿದರೆ ಇಲೆಕ್ಷನ್ನಿನ ಹಳಕಟ್ಟಿ ಎನ್ನುವ ಅಭ್ಯರ್ಥಿಯೊಬ್ಬ ಪ್ರಚಾರಕ್ಕಾಗಿ ಮುರುಘಾಮಠದ ಆನೆಯನ್ನೇ ತಂದಿದ್ದಾನೆ. ಕುಳ್ಳಗೆ ಮಟ್ಟಸವಾಗಿದ್ದು ಅಗಲವಾದ ಕಿವಿಗಳಿದ್ದ ಅವನು ಆನೆಯ ಮೇಲೆ ಕುಳಿತು ಎಲ್ಲರಿಗೂ ಕೈ ಮುಗಿಯುತ್ತಾ ಬರುತ್ತಿದ್ದ. ಥೇಟು ಆನೆಯ ಮೇಲೆ ಒಂದು ಮರಿ ಆನೆ ಕುಳಿತಂತೆ ನಿಧಾನವಾಗಿ ದಾಪುಗಾಲಿಡುತ್ತಾ ಬರುತ್ತಿದ್ದ ಆನೆ ಹುಡುಗಿಯರ ಬಾಲ್ಕನಿಯ ಕೆಳಗೆ ಬಂದ ಕೂಡಲೇ ಮಾವುತನ ಸೂಚನೆಯಂತೆ ಸೊಂಡಿಲು ಮೇಲಕ್ಕೆತ್ತಿ ಸಲಾಮು ಹೊಡೆಯಿತು. ‘ಕೀ ಹೋ’ ಎಂದು ಹಳಕಡ್ಡಿಯ ಹಿಂಬಾಲಕರು ಮೈಯಲ್ಲಿ ಗಾಳಿ ಹೊಕ್ಕಂತೆ ಕುಣಿಯತೊಡಗಿದರು. ಇತರ ಅಭ್ಯರ್ಥಿಗಳು ತಂದ ಲೇಜೀಮ್ ತಂಡಗಳು, ಹಲಗೆ ತಂಡಗಳು, ಟ್ರಾಕ್ಟರ್ ತಂಡಗಳು ಹೊಸ ಆವೇಶದಿಂದ ಕೀಸರು-ಬಾಸರು ಹಿಡಿಸಿದವು.

ಇವೆಲ್ಲವುಗಳ ಮಧ್ಯೆ ಜಾಡರ ಕೆಲವು ಪಿಯುಸಿ ವಿದ್ಯಾರ್ಥಿಗಳನ್ನು ಕಾಡಿ ಬೇಡಿ ಕರೆದುಕೊಂಡು ಬಂದು ಪ್ರಚಾರದಲ್ಲಿ ತೊಡಗಿದ. ಅಪ್ಪಿ ನಿಷ್ಠೆಯಿಂದ ‘ವೋಟ್ ಫಾರ್’ ಎಂದು ಕೂಗುತ್ತಾ ಅವನ ಜೊತೆಗೆ ಸೇರಿಕೊಂಡ. ನಾನು ಮತ್ತು ಅ-ನೆಪಕ್ಕೆ ಮಾತ್ರ ಸ್ವಲ್ಪ ಹೊತ್ತು ಜೊತೆಗಿದ್ದು ನಮ್ಮ ತರಗತಿಯ ಹುಡುಗಿಯರು ಇಲ್ಲವೆಂದು ಖಾತ್ರಿ ಮಾಡಿಕೊಂಡು ಒಂದಿಷ್ಟು ‘ವೋಟ್ ಫಾರ್’ ಗಳನ್ನು ಕೂಗಿ ಮೆಲ್ಲಗೆ ಜಾರಿಕೊಂಡು ಬಿಟ್ಟೆವು. ಇಡೀ ಕಾಲೇಜು ರಂಗು ರಂಗಿನ ಇಲೆಕ್ಷನ್ ಪ್ಯಾಂಫ್ಲೆಟ್‌ಗಳಿಂದ ತುಂಬಿ ಹೋಗಿತ್ತು. ಕವಿ ಮತ್ತು ಡಿಬೇಟರ್ ಎಂದು ಪರಿಚಿತವಾಗಿದ್ದ ನಾನು ಕೇಳಿದ ಎಲ್ಲಾ ಅಭ್ಯರ್ಥಿಗಳಿಗೂ ಪ್ರತಿಸ್ಪರ್ಧಿಯಾಗಿದ್ದ ಅಭ್ಯರ್ಥಿಗಳಿಗೂ – ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಪ್ಯಾಂಫ್ಲೆಟ್‌ಗಳನ್ನು, ಅದಕ್ಕಾಗಿ ಚಿಕ್ಕ ಪದ್ಯಗಳನ್ನು ಬರೆದುಕೊಟ್ಟಿದ್ದೆ.

ಸಾಯಂಕಾಲವಾದ ಕೂಡಲೇ ಮನೆಗಳಿಗೆ, ಹಾಸ್ಟೇಲುಗಳಿಗೆ ಹೋಗಿ ಪ್ರಚಾರ ಮಾಡುವ ಭರಾಟೆ ಶುರು ಆಯಿತು. ನನ್ನ ಅಣ್ಣನ ಮುಸ್ಲಿಂ ಗೆಳೆಯನೊಬ್ಬ ಕೂಡ ಸ್ಪರ್ಧಿಯಾಗಿದ್ದ. ನಮ್ಮ ಲೆಕ್ಕಾಚಾರದ ಪ್ರಕಾರ ಅವನಿಗೆ ಒಂದಿಷ್ಟು ಲಿಂಗಾಯತರ ವೋಟುಗಳು ಬಂದರೆ ಗೆಲ್ಲಬಹುದಾಗಿತ್ತು. ಅವನ ಅಡ್ಡ ಹೆಸರು (ಸರ್‌ನೇಮ್) ಜವಳಿಯಾಗಿತ್ತು. ಧಾರವಾಡ ಪ್ರಾಂತ್ಯದ ಅನುಕೂಲವೆಂದರೆ ಅನೇಕ ಅಡ್ಡಹೆಸರುಗಳಂತೆ ಇದು ಲಿಂಗಾಯತರಲ್ಲಿ ಸಾಮಾನ್ಯವಾದ ಅಡ್ಡ ಹೆಸರಾಗಿತ್ತು. ಆದ್ದರಿಂದ ಲಿಂಗಾಯತ ಮಠದ ಹಾಸ್ಟೇಲುಗಳಲ್ಲಿ ಅವನು ಲಿಂಗಾಯತ ಎಂದು ಪ್ರಚಾರ ಮಾಡುವುದಾಗಿ ನಿರ್ಧರಿಸಿದ್ದೆವು. ಸಾಯಂಕಾಲ ಮಠದ ಹಾಸ್ಟೆಲ್ ಹುಡುಗಿಯರು ಪ್ರಾರ್ಥನೆಗಾಗಿ ಸೇರುವ ಹೊತ್ತಿಗೆ ಅಲ್ಲಿಗೆ ಹೋದೆವು. ಮನೆಯಿಂದ ತಂದಿದ್ದ, ‘ಈಬತ್ತಿ ಉಂಡಿಯಿಂದ’ ಹಣಿಗೆ ಎಲ್ಲರೂ ನಾಮ ಬಡೆದುಕೊಂದು ಪ್ರಾರ್ಥನೆಗೆ ಸೇರಿಕೊಂಡೆವು. ಹುಟ್ಟಾ ನಾಸ್ತಿಕರಾದ ನಮಗೆ ದೈವ ಭಕ್ತಿಯ ಭಾವನೆ ಹೇಗೆ ತೋರಿಸುವುದು ಎಂದು ಸರಿಯಾಗಿ ಹೊಳೆಯಲಿಲ್ಲ. ಆದಷ್ಟು ಪೆದ್ದು ಪೆದ್ದಾದ ಕಳೆಯನ್ನು ಮುಖದ ಮೇಲೆ ತಂದುಕೊಂಡು ಮಣಮಣವೆಂದು ಪ್ರಾರ್ಥನೆಯಲ್ಲಿ ಸೇರಿಕೊಂಡೆವು. ಆನಂತರ ಐದು ನಿಮಿಷದ ಪ್ರಚಾರ ಭಾಷಣದಲ್ಲಿ ಜವಳಿ ‘ನಮ್ಮವರು’ ಎನ್ನುವ ಮೆಸೇಜ್ ಕೊಟ್ಟೆವು.

ಇಂಥಾ ನೂರು ಭಾನಗಡಿಗಳನ್ನು ಮಾಡಿ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದರು. ಇಡೀ ಕಾಲೇಜು ಇಲೆಕ್ಷನ್ ಎನ್ನುವ ಸಮೂಹ ಸನ್ನಿಯಲ್ಲಿ ಮತ್ತು ಏರಿದಂತೆ ವಾಲಾಡುತ್ತಿತ್ತು. ತಾನು ಗೆಲ್ಲುವುದಿಲ್ಲವೆಂದು ಅರ್ಥ ಮಾಡಿಕೊಂಡ ಜಾಡರ ಅದಕ್ಕೆ ನಮ್ಮ ಟೋಳಿ ಮಾಡಿದ ವಿಶ್ವಾಸಘಾತ ಕಾರಣವೆಂದು ಹೇಳತೊಡಗಿದ. ಹೀಗಾಗಿ ಪ್ರಚಾರದ ಕೊನೆಯ ದಿನಗಳಂದು ನಾನು ಮತ್ತು ಅ- ಭರದಿಂದ ಪ್ರಾಮಾಣಿಕವಾಗಿ ಪ್ರಚಾರದಲ್ಲಿ ಧುಮುಕಿದೆವು. ಮುಖ್ಯವಾಗಿ ಎಲ್ಲಾ ‘ಸಿಸ್ಟರ್’ಗಳಲ್ಲಿ ಅವನ ಪರವಾಗಿ ಮತ ಯಾಚಿಸಿದೆವು. ಮತದಾನದ ದಿನವಂತೂ ನಮ್ಮ ಪರವಾಗಿದ್ದ ಗ್ಯಾರಂಟೀ ಮತದಾರರು ಒಬ್ಬೊಬ್ಬರು ಬಂದರೂ ಖುಷಿಪಡುತ್ತ, ಉಳಿದವರನ್ನು ಕಾರುಗಳಲ್ಲಿ ಮನೆಗಳಿಂದ ಕರೆತರುತ್ತ ದಿನ ಕಳೆದೇ ಹೋಯಿತು. ಮತಗಳ ಎಣಿಕೆ ಮುಗಿದಾಗ ರಾತ್ರಿಯಾಗುತ್ತ ಬಂದಿತ್ತು. ಜಾಡರನನ್ನು ಸಂತೈಸಲು ಬಾರಿನ ಕಡೆಗೆ ನಡೆದವು.

ಮನ ಸೂರೆ ಹೋಯಿತೋ ಪೋಲಿಮನ

`ಮರೀಬ್ಯಾಡರಿ ಮತ್ತ, ಇವತ್ತ ರಾತ್ರಿ ಮನಸೂರ ಅವರ ಹಾಡಿನ ಪ್ರೋಗ್ರಾಮ್ ಐತಿ. ಹಿಂಗಾಗಿ ಶೆರೆ-ಗಿರೆ ಕುಡಿಯೋ ಐಡಿಯಾನೂ ತಲ್ಯಾಗ ಹಾಕ್ಕೋಬ್ಯಾಡರಿ` ಎಂದು ಜಾಡರ ತಾಕೀತು ಮಾಡಿದ. ನಾನು ಮತ್ತು ಅಪ್ಪಿ ‘ಛೆ ಛೆ’ ಎಂದು ತಲೆ ಅಲ್ಲಾಡಿಸಿದೆವು. ಹಾಗೆಯೇ ಇವನೆಂಥ ಡಫರ್ ನನ್ ಮಗ ಎಂದು ಮೂಕ ವಿಷಾದದಿಂದ ಅವನ ಕಡೆಗೆ ನೋಡಿದೆವು. ನಮ್ಮ ಉಸ್ತಾದ ಮಲ್ಲಿಕಾರ್ಜುನ ಮನಸೂರರು ಹಾಡುವುದೆಂದರೇನು? ನಾವು ಹಾಡು ಕೇಳಲು ಶೆರೆ ಕುಡಿದುಕೊಂಡು ಹೋಗುವುದೆಂದರೇನು?

ಮನಸೂರರ ಖಾಯಂ ಭಕ್ತರಾದ ನಾವು ಅವರ ಸಂಗೀತವನ್ನು ಎಂದೂ ತಪ್ಪಿಸಿಕೊಳ್ಳುತ್ತಿದ್ದಿಲ್ಲ. ಅದರಲ್ಲೂ ಅವರ ಗುರುಗಳ ಹೆಸರಿನಲ್ಲಿ ಅವರು ಇಡೀ ರಾತ್ರಿ ನಡೆಸುತ್ತಿದ್ದ ಸಂಗೀತ ಗೋಷ್ಠಿಯನ್ನು ತಪ್ಪಿಸಿಕೊಂಡಿದ್ದೇ ಇಲ್ಲ. ಅಲ್ಲಿಯವರೆಗೂ ಆಕಾಶವಾಣಿ ಕಚೇರಿಯಿಂದ ಆಚೆಗಿದ್ದ ಅವರ ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಆ ಕಾರ್ಯಕ್ರಮ ನಡೆಯುತ್ತಿತ್ತು. ಅಷ್ಟೇನೂ ದೊಡ್ಡಮನೆ ಅಲ್ಲದ್ದರಿಂದ ನಾವು ಕಿಟಕಿಯ ಹೊರಗೆ ನಿಂತು ಕೇಳುತ್ತಿದ್ದೆವು. ಸಭ್ಯತನದ ಕಿಂಚಿತ್ತೂ ಲಕ್ಷಣಗಳು ನಮ್ಮಲ್ಲಿ ಕಾಣುತ್ತಿರಲಿಲ್ಲವಾದ್ದರಿಂದ ನಾವು ಸಂಗೀತ ಕೇಳಲು ಬಂದಿದ್ದೇವೆಂದು ಅವರ ಮಗ ರಾಜಶೇಖರ ಮನಸೂರರು ನಂಬುತ್ತಿರಲಿಲ್ಲ. ಆದರೂ ಅವರಿಂದ ಬೈಸಿಕೊಂಡರೂ ನಮ್ಮ ಉಸ್ತಾದರ ಹಾಡಿಗಾಗಿ ನಿಂತೇ ಕೇಳುತ್ತಿದ್ದೆವು. ಕ್ರಮೇಣ ಆ ಕಾರ್ಯಕ್ರಮ ದೊಡ್ಡದಾಗುತ್ತ ಬಂದಿದ್ದರಿಂದ ಆ ವರ್ಷ ನಮ್ಮ ಕಾಲೇಜಿನ ದಿನ್ನೆಯ ಕೆಳಗಿನ ಪುರುಷೋತ್ತಮ ಭವನಕ್ಕೆ ವರ್ಗಾವಣೆ ಆಗಿತ್ತು. ಮನಸೂರರು, ಬೇಂದ್ರೆಯವರು ಎಲ್ಲಿದ್ದರೂ ಅವರ ಸುತ್ತ ಒಂದು ಪುಟ್ಟ ಧಾರವಾಡ ಹುಟ್ಟಿಕೊಳ್ಳುತ್ತಿತ್ತು. ಅವರ ಗೆಳೆಯರು, ಶಿಷ್ಯರು ಹಾಗೂ ಅಭಿಮಾನಿಗಳು ಮತ್ತು ಕೊನೆಯದಾಗಿ ನಮ್ಮಂಥ ಏಕಲವ್ಯರು ಇದ್ದೇ ಇರುತ್ತಿದ್ದೆವು. ಆ ಕಾರ್ಯಕ್ರಮದಲ್ಲಿ ಮನಸೂರರು ಹಾಡುತ್ತಿದ್ದುದು ಕೊನೆಗೆ. ಅಲ್ಲಿಯವರೆಗೆ ಬೇರೆಯವರು ಕೆಲವೊಮ್ಮೆ ನಾವು ಪತ್ರಿಕೆಗಳಲ್ಲಿ ಮಾತ್ರ ಕೇಳಿದ್ದ ಖ್ಯಾತನಾಮರು ಬಂದು ಮನಸೂರರ ಗುರುಗಳಿಗೆ ತಮ್ಮ ಕಾಣಿಕೆಯೆನ್ನುವ ಭಾವನೆಯಲ್ಲಿ ಹಾಡುತ್ತಿದ್ದರು.

`ಸರ, ನೋಡರಿ, ಇವತ್ತ ಕಾನನ್ ದಂಪತಿಗಳು ಬಂದಾರ` ಎಂದು ಮೆಲ್ಲಗೆ ಉಸುರಿದ. ಮಾಲವಿಕಾ ಕಾನನ್ ಮತ್ತು ಎ.ಕೆ.ಕಾನನ್ ವೇದಿಕೆಯ ಹತ್ತಿರ ಬಂದು ಮನಸೂರರ ಕಾಲಿಗೆರಗಿ ನಮಸ್ಕಾರ ಮಾಡಿ ಆಮೇಲೆ ಸಂಗೀತ ಶುರು ಮಾಡಿದರು. ಧಾರವಾಡದ ಆಚೆಗೆ ಜಗತ್ತೇ ಇಲ್ಲವೆಂದುಕೊಂಡಿದ್ದ ನಮಗೆ ಈ ಖ್ಯಾತ ದಂಪತಿಗಳು ನಮ್ಮ ಉಸ್ತಾದರ ಕಾಲಿಗೆರಗಿದ್ದು ನಮ್ಮೂರಿನ ದಿಗ್ವಿಜಯವಾಗಿ ಕಂಡಿತ್ತು.

ಪುರುಷೋತ್ತಮ ಭವನದಲ್ಲಿಯಾದರೂ ಕಾರ್ಯಕ್ರಮ ‘ಸಾರ್ವಜನಿಕ’ವಾಗಿರಲಿಲ್ಲ. ಹಾಲ್‌ನ ಒಂದು ಕಡೆ ಮಧ್ಯದಲ್ಲಿ ಸಂಗೀತಗಾರರಿಗೆ ಅಷ್ಟೇನೂ ಎತ್ತರವಲ್ಲದ ವೇದಿಕೆಯಿತ್ತು. ಅದರ ಸುತ್ತಲೂ ಮೊದಲ ಸಾಲುಗಳಲ್ಲಿ ಸಂಗೀತವನ್ನು ಆತ್ಮೀಯವಾಗಿ ಬಲ್ಲವರ ಒಂದು ಗುಂಪಿರುತ್ತಿತ್ತು. ಮನಸೂರರು ಸೇರಿದಂತೆ ಎಲ್ಲರೂ ಅವರಿಗಾಗಿ ಹಾಡಿದಂತೆ ಅನ್ನಿಸುತ್ತಿತ್ತು. ಕೇಳುತ್ತಿರುವವರ ಶರೀರಗಳು ಸಂಗೀತದ ಲಯದ ಏರಿಳಿತದಂತೆ ಓಲಾಡುತ್ತ, ತೂಗುತ್ತ, ನಿರೀಕ್ಷಿಸುತ್ತ, ಒಪ್ಪುತ್ತ, ಮೆಚ್ಚುತ್ತ ಮೆಲ್ಲನೆ ‘ವಾಹ್’ ಎನ್ನುತ್ತ ಮಿಡಿಯುತ್ತಿದ್ದವು. ಹಾಡುವವರ ಮತ್ತು ಹತ್ತಿರದ ಆ ಕೇಳುಗರ ಮಾತಿಲ್ಲದ ಬಾಂಧವ್ಯದಲ್ಲಿ ರಾಗಗಳು ಹುಟ್ಟಿ, ತೇಲಿ, ವಿಸ್ತಾರಗೊಂಡು ಹಬ್ಬುತ್ತಿದ್ದವು. ಒಂದೇ ಒಂದು ರಾಗದ ಹೆಸರೂ ಗೊತ್ತಿರದ ನಮ್ಮನ್ನು ಕೂಡ ತನ್ನ ದೊಡ್ಡ ಅಂತಃಕರಣದಿಂದ ತೆಕ್ಕೆಯಲ್ಲಿ ತೆಗೆದುಕೊಂಡು ಸಂಗೀತ ಆವರಿಸಿಕೊಳ್ಳುತ್ತಿತ್ತು. ಅಂಚಿನಲ್ಲಿ ಕುಳಿತ ನಮಗೆ ಸಂಗೀತ ಒಬ್ಬ ವ್ಯಕ್ತಿಯಿಂದ ಎನ್ನುವ ಹುಚ್ಚು ಕಲ್ಪನೆಗಳು ಕರಗಿ ಹೋಗುತ್ತಿದ್ದವು.

ಧಾರವಾಡದ ಹಿರಿತಲೆಗಳು ಅಲ್ಲಿ ನೆರೆದಿದ್ದವು. ನಾವು ಕುಳಿತಲ್ಲಿಯೇ ನಮಗೆ ಗೊತ್ತಿದ್ದ ಪುರಾಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಇವತ್ತು ಉಸ್ತಾದರಿಗೆ ಸಾಥಿ ಯಾರು ಕೊಡ್ತಾರ ನೋಡಬೇಕು. ತಬಲಾ ಮ್ಯಾಲಂತೂ ಬಾಬುರಾವ್ ಬೆಂಡಿಗೇರಿನ ಕಾಯಂ ಅಂತ ಕಾಣ್ತೈತಿ ಎಂದು ಜಾಡರ ಹೇಳಿದ. ನಮ್ಮ ಕಲ್ಪನೆಯಲ್ಲಿ ಮನಸೂರರಿಗೆ ಸಾಥ್ ಕೊಡುವ ಛಾತಿ ಬಹಳ ಜನರಿಗೆ ಇರಲಿಲ್ಲ. ಅತ್ಯಂತ ಪ್ರಯೋಗಶೀಲರೂ ಮತ್ತು ಅಷ್ಟೇ ಮುಂಗೋಪಿಗಳೂ ಆಗಿದ್ದ ಮನಸೂರರಿಗೆ ಅವರಷ್ಟೇ ಆಗಿರದ ‘ಸಾಥ್’ ಸಿಗದಿದ್ದರೆ ತಾಳ್ಮೆ ಹೋದಂತೆ ಕಾಣುತ್ತಿತ್ತು. ಒಂದು ಸಾರಿ ತಾಳ್ಮೆಗೆಟ್ಟು ‘ಸಾಥ್’ ಕೊಡುತ್ತಿದ್ದವರ ಕೆನ್ನೆಗೆ ಹೊಡೆದಿದ್ದರೆಂಬ ದಂತಕತೆ ಬೇರೆ ಪ್ರಚಲಿತವಿತ್ತು. ಕೆಲವೊಮ್ಮೆ ‘ಪೇಟಿ’ ಹಿಡಿದುಕೊಂಡು ಬಸವರಾಜ ಮನಸೂರರು ಜೊತೆಗೊಡುತ್ತಿದ್ದರು. ಮನಸೂರರ ಹಠಯೋಗಿಯ ಚರ್ಯೆಗಳಿಗೆ ವಿರುದ್ಧವಾದ ಸುಂದರ ಮಂದವಾದ ನಗು ಬಸವರಾಜರ ಮುಖದಲ್ಲಿ. ಹೆಚ್ಚಾಗಿ ಶಿಷ್ಯರಾದ ಪಂಚಾಕ್ಷರಿ ಮತ್ತೀಘಟ್ಟಿಯವರೇ ಮನಸೂರರ ‘ಸಾಥ್’ ಕೊಡುತ್ತಿದ್ದರು.

ಹೊರಗೆ ಹೊರಟಾಗ ಹಾಕುತ್ತಿದ್ದ ಕಪ್ಪು ಕೋಟನ್ನು ತೆಗೆದಿಟ್ಟು ಮನಸೂರರು ಬಿಳಿ ಜುಬ್ಬವನ್ನು ಹಾಕಿದ್ದರು. ಕರಿ ಟೊಪ್ಪಿಗೆ ತೆಗೆದಿಟ್ಟಿದ್ದರಿಂದ ಮಧ್ಯ ಬೊಕ್ಕವಾದ ಉದ್ದವಾದ ಅವರ ತಲೆ ಹಾಲ್‌ನ ದೀಪಗಳ ಬೆಳಕಲ್ಲಿ ಹೊಳೆಯುತ್ತಿತ್ತು. ಹಾಡಲು ತೊಡಗಿದರೆಂದರೆ ಅವರ ಅಗಲವಾದ ದವಡೆಗಳು ಚಲಿಸುತ್ತಿದ್ದವು; ಮುಖ ಎತ್ತಿ ಹಾಡುತ್ತಿದ್ದರಿಂದ ಮೂಗಿನ ಹೊರಳೆಗಳು ಅಗಲವಾಗಿ ಬಿರಿದುಕೊಂಡಂತೆ ಅನ್ನಿಸುತ್ತಿತ್ತು. ಆದರೆ ಅವರ ನೂಲಿನಂತಹ ತೆಳುವಾದ ದನಿ ಸ್ವರಗಳನ್ನು ಹುಟ್ಟಿಸಿ, ಹಿಂಬಾಲಿಸಿ ಹಿಂಜಿ ಬಂಗಾರದ ಸೂಕ್ಷ್ಮ ಎಳೆಗಳಂತೆ ಎಳೆದು ಬಗ್ಗಿಸುವಾಗ ಇದೆಲ್ಲಾ ಮರೆತು ಹೋಗುತ್ತಿತ್ತು. ಅವರಿಗೇ ವಿಶಿಷ್ಟವಾದ ಆಲಾಪದಲ್ಲಿ ಸ್ವರಗಳು ಹತ್ತಾರು ಅವತಾರಗಳನ್ನು ತೋರಿಸುತ್ತಾ, ತುಂಬಾ ತೆಳುವಾಗಿ ಗಾಳಿಯಲ್ಲಿ ಲಯವಾದವೆಂದು ಆಶ್ಚರ್ಯದಿಂದ ನಾವು ಕಾಯುತ್ತಿದ್ದಾಗ ಈ ಗಾರುಡಿಗ ಅವುಗಳ ಇನ್ನೊಂದು ಅನೂಹ್ಯವಾದ ಎಳೆಯನ್ನು ಹಿಡಿದು ಮತ್ತೆ ಈ ಲೋಕಕ್ಕೆ ಕರೆತರುತ್ತಿದ್ದರು. ಆಗ ನಮಗೆ ಗೊತ್ತಿಲ್ಲದೇ ನಮ್ಮ ಶರೀರಗಳು ಲಯವಾಗಿ ಮತ್ತೆ ಶರೀರ ಪಡೆದ ಸ್ವರಗಳೊಂದಿಗೆ ಮಿಡಿಯುತ್ತಿದ್ದವು. ನಮ್ಮ ಪಡ್ಡೆ ಅನುಭವಗಳ ಮಿತಿಗಳೊಳಗೆ ಬರಲು ಸಾಧ್ಯವೇ ಇಲ್ಲದ ಭಾವಲೋಕಗಳು ಯಾವುದೋ ಜನ್ಮದ ಸಂಸ್ಕಾರಗಳಂತೆ ನಮ್ಮಲ್ಲಿ ಎಚ್ಚರಗೊಳ್ಳುತ್ತಿದ್ದವು.

ಹುಟ್ಟಿನಿಂದ ಲಿಂಗಾಯತನಾಗಿದ್ದರಿಂದ ವಚನಗಳೆಂದರೆ ನನಗೆ ನಿಷಿದ್ಧವೆಂದು ಅವುಗಳನ್ನು ಓದಿದರೆ, ಕೇಳಿದರೆ ನನ್ನ bohemian ವ್ಯಕ್ತಿತ್ವ ನಾಶವಾಗುವುದು ಎಂದು ನಾನು ನಂಬಿದ್ದೆ. ಆದರೆ ಅಂದು ಕುಳಿತವರಲ್ಲಿ ಒಬ್ಬರು ಹೇಳಿದ್ದರಿಂದ ಮನಸೂರರು ಅಕ್ಕನ ವಚನ ‘ಅಕ್ಕಾ ಕೇಳವ್ವ ನಾನೊಂದು ಕನಸ ಕಂಡೆ’ ಹೇಳತೊಡಗಿದರು. ‘ಅಕ್ಕಿ, ಅಡಿಕೆ ತೆಂಗಿನಕಾಯಿ’ ‘ಸುಲಿಪಲ್ಲ ಗೊರವ’ ಎಲ್ಲವೂ ಮನಸೂರರ ದನಿಯಲ್ಲಿ ಮೂರ್ತಗೊಂಡು ಅಕ್ಕನ ಜೊತೆಗೆ ನಾನೂ ಪ್ರೀತಿಯೆಂಬ ಕದಳಿವನವನ್ನು ಹೊಕ್ಕುಬಿಟ್ಟೆ. ಅಕ್ಕ ಕಂಡ ಕನಸು ನಮ್ಮ ಎಚ್ಚರ, ಮರೆವಿನ ಎಲ್ಲಾ ಸ್ತರಗಳನ್ನು ಆವರಿಸಿಕೊಂಡಿತ್ತು. ತಮ್ಮ ಹಾಡುಗಾರಿಕೆಯನ್ನು ಮುಗಿಸುವ ಮೊದಲು ಉತ್ತರ ಭಾರತದಿಂದ ಬಂದ ಅತಿಥಿಗಳ ‘ಫರ್‌ಮಾಯಿಶ್’ಗೆ ಒಪ್ಪಿ ಮನಸೂರರು ನಮ್ಮೆಲ್ಲರ ಇನ್ನೊಬ್ಬ ಅಕ್ಕ ಮೀರಾಬಾಯಿಯ ‘ಮತ್ ಜಾ ಜೋಗಿ ಮತ್ ಜಾ’ ಹೇಳತೊಡಗಿದರು. ಆ ಮಾಂತ್ರಿಕ ಜೋಗಿಯನ್ನು ಆವಾಹಿಸುತ್ತ, ಕಾಡುತ್ತ, ಬೇಡುತ್ತ, ಲಲ್ಲೆಗರೆಯುತ್ತ ಬೊಕ್ಕತಲೆಯ ನಮ್ಮ ಉಸ್ತಾದರು ದಿವ್ಯಪ್ರೀತಿಯ ಅಭಿಸಾರಿಕೆಯಾಗಿಬಿಟ್ಟರು. ಜಗದ ಹಂಗು ತೊರೆದ ‘ದಿವಾನಿ’ಯಾಗಿಬಿಟ್ಟರು. ನಾವು ಎಲ್ಲಿದ್ದೆವು ಏಕೆ ಎನ್ನುವುದರ ಪರಿವೆ ಯಾವಾಗಲೋ ಹೊರಟೇ ಹೋಗಿತ್ತು. ಸದ್ಯ ನಮ್ಮ ಹಾಗೆಯೇ ಹಾಲ್‌ನಲ್ಲಿದ್ದ ಮೊಕಾಶಿ ಪುಣೇಕರ್, ಗಿರೀಶ ಕಾರ್ನಾಡರೂ ಅಭಿಸಾರಿಕೆಯಂತೆ ಕುಳಿತದ್ದನ್ನು ನೋಡಿ ನಮಗೆ ಮುಜುಗರವಾಗಲಿಲ್ಲ. ಅಷ್ಟರಲ್ಲಿ ಮನಸೂರರು ‘ಪಂಪಾನಗರಿ ನಿವಾಸಿ’ ಹೇಳುತ್ತ ಕಾರ್ಯಕ್ರಮಕ್ಕೆ ಮಂಗಳ ಹಾಡಿದ್ದರು.