ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ದಿನದ ಕವಿತೆ.

ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡು
ನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾ
ನಾನು ನಿಂತುಬಿಡುವೆ

ಮರಳಿಸು ನನಗೆ ಮತ್ತೆ ನಿನ್ನ ಕಲ್ಲು ದೇಹವನ್ನು
ನಿನ್ನ ಗಡಸು ಕೈಯ್ಯ ಗೆರೆಗಳು, ಅಡ್ಡಾದಿಡ್ಡಿ ಕತ್ತರಿಸಿದ
ಸಣ್ಣ ಉಗುರುಗಳಿಗೆ ನಾನು ಹಾತೊರೆದು
ಮುತ್ತುಗಳು ತುಂಬಿದ ನಿನ್ನ ತುಟಿಗಳು, ಎಂದೋ
ನಕ್ಕ ನಗು ನಿನಗೆ ಮಾತ್ರ ಕೇಳುವ ನನ್ನ ದನಿ
ನಿನ್ನ ಆತ್ಮದ ಒಸರುವಿಕೆಯಿಂದ
ಪಡೆದ ಜೀವ ನನ್ನದು

ಹೋಗದಿರು ಒಂದಿರುಳೂ
ಅಲುಗಾಡದ ಮೌನದ ಹಾಗೆ ನಿಂತುಬಿಡು

ನೀನು ಅಲ್ಲಿ ಇರುವುದಿಲ್ಲ ನಿನ್ನ ದನಿ ನನಗೆ ಕೇಳುವುದಿಲ್ಲ
ಇದೆಲ್ಲಾ ಇಲ್ಲದಿದ್ದರೂ
ಮಹಾಪ್ರಸಾದದ ಹಾಗೆ ನಿನ್ನ ಕಣ್ಣಿಗೆ ಒತ್ತಿಕೊಳ್ಳುವುದು
ಇಷ್ಟೇ ಸಾಕು ನನಗೆ

ನಾನು ಪ್ರೇಮಿಸುವುದನ್ನು ಮರೆತಿರುವೆ

ಪ್ರೇಮಿಸಲು ದಿನಗಳು ಬರುವುದಿಲ್ಲ
ನಾವು ಇರುವೆವು ಎಂದರೆ ಚಿಟ್ಟೆಗಳ ಕನಸು
ಒಂದಿರುಳೂ ಬಿಡದೆ ಜೊತೆಗಿರುವುದು ಇತ್ಯಾದಿ
ನಾನು ಕೂಗಿ ಕರೆಯಲು ನಿನಗೊಂದು ಹೆಸರೇ ಇಲ್ಲಾ
ನಾನು ಕರೆದಾಗ ನಿನಗೆ ಬರಲು
ದಾರಿಯೂ ಇಲ್ಲ
ಇನ್ನೂ ಬೇಕಾದಷ್ಟು ಇದೆ ಹೇಳಲು
ಬರುತ್ತಿಲ್ಲ ನನಗೆ