ಪ್ರಪಂಚದ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ತಮ್ಮನ್ನು ತಾವು ಅರ್ಪಿಸಿಕೊಂಡವರು. ಹಾಗೇ ಅರ್ಪಿಸಿಕೊಂಡು ಪ್ರಶಸ್ತಿಗೆ ಭಾಜನರಾದವರ ದೊಡ್ಡ ಪಟ್ಟಿಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾ ದೇಶದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾದ ಮಹಮ್ಮದ್ ಯೂನಸ್ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಮೂಲಕ ಅಂತಹ ಮಹಾನುಭಾವರ ಸಾಲಿಗೆ ಸೇರಿಹೋದರು.

ಯೂನಸ್ ಯುದ್ಧ ಗೆದ್ದವರಲ್ಲ; ಯುದ್ಧಕ್ಕಿಂತಲೂ ಭೀಕರವಾದ ಬಡತನವನ್ನು ಗೆದ್ದವರು. ಬಡತನದ ವಿರುದ್ಧ ಹೋರಾಡಿದವರು. ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಕ್ರಾಂತಿಗೆ ಕಾರಣರಾದವರು. ಆ ಕಾರಣಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ.

1940ರಲ್ಲಿ ಬಡ ಅಕ್ಕಸಾಲಿಗರ ಮಗನಾಗಿ ಹುಟ್ಟಿದ ಯೂನಸ್, ಬದುಕಿನುದ್ದಕ್ಕೂ ಬಡತನದ ಬವಣೆಯಲ್ಲಿ ನೊಂದು ಬೆಂದವರು. ಆ ಕಾರಣಕ್ಕಾಗಿಯೋ ಏನೋ ಯೂನಸ್ ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಗಲೂ ಬಡವರ ಬದುಕನ್ನು ಮತ್ತೆ ಮತ್ತೆ ಕಣ್ಣಾರೆ ಕಾಣಲು ಪ್ರತೀವಾರ ಹಳ್ಳಿಗಳಿಗೆ ಹೋಗುತ್ತಿದ್ದರು.

ಹೀಗೆ ಹೋಗಿಬರುವ ಸಮಯ, ಅಂದರೆ 1976ರ ಆಸುಪಾಸಿನಲ್ಲಿ ಬಾಂಗ್ಲಾ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಹಳ್ಳಿಗಳಿಗೆ ಸ್ಮಶಾನಮೌನ ಮುತ್ತಿಕೊಂಡಿತ್ತು. ಹಳ್ಳಿಯ ಬಡವರು ಶ್ರೀಮಂತರಿಂದ ಸಾಲ ಪಡೆದು, ಹೆಚ್ಚಿನ ಬಡ್ಡಿ ತೆತ್ತು ಪಡಬಾರದ ಯಾತನೆ ಪಡುತ್ತಿದ್ದರು. ಯೂನಸ್ ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ಮನ ಮರುಗಿತು. ಕಲಿತಿದ್ದ ಅರ್ಥಶಾಸ್ತ್ರ ಬ್ಯಾಂಕಿಗೆ ಕರೆದುಕೊಂಡುಹೋಯಿತು. 

ಆದರೆ, ಬ್ಯಾಂಕಿಗೆ ಬೇಕಾಗಿರುವುದು ಅನುಕೂಲಸ್ಥರು, ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರೇ ಹೊರತು ಬಡವರಲ್ಲ. ಬಡವರ ಬಳಿ ಆಸ್ತಿ, ಪಾಸ್ತಿ ಇಲ್ಲ. ಅವರು ಸಾಲ ತೀರಿಸುತ್ತಾರೆಂಬುದಕ್ಕೆ ಗ್ಯಾರಂಟಿಯೂ ಇಲ್ಲ. ಹಾಗಾಗಿ ಅವರು ಬಡವರಿಗೆ ಸಾಲ ಕೊಡಲಿಲ್ಲ. ಯೂನಸ್ ರ ಅರ್ಥಶಾಸ್ತ್ರ ಬಡವರ ಬವಣೆ ನೀಗಲು ನೆರವಾಗಲಿಲ್ಲ. ಆದರೆ, ಯೂನಸ್ ಹಿಂಜರಿಯಲಿಲ್ಲ. ತಾವೇ ಜಾಮೀನು ನೀಡಿ ಹಳ್ಳಿಯ ನಾಲ್ಕು ಹೆಂಗಸರಿಗೆ ಏಳು ಸಾವಿರ ಸಾಲ ಕೊಡಿಸಿದರು.

ಇಲ್ಲಿ ಅವರು ನಂಬಿದ್ದು ನಂಬಿಕೆಯನ್ನು, ಹಳ್ಳಿಯ ಹೆಂಗಸರ ಆತ್ಮವಿಶ್ವಾಸವನ್ನು. ಯೂನಸ್ ರ ನಂಬಿಕೆಗೆ ದ್ರೋಹ ಬಗೆಯಲು ಇಚ್ಚಿಸದ ಸಾಲ ಪಡೆದ ಹಳ್ಳಿಯ ಹೆಂಗಸರು ಬಿದಿರು ಖರೀದಿಸಿ, ಬುಟ್ಟಿ ತಯಾರಿಸಿ, ಮಾರಿ ಹಣ ಸಂಪಾದಿಸಿದರು. ಸಾಲ ತೀರಿಸಿದರು. ಯೂನಸ್ ಸ್ಫೂರ್ತಿಗೊಂಡು ಇನ್ನಷ್ಟು ಹೆಂಗಸರಿಗೆ ಸಾಲ ಕೊಡಿಸಿದರು. ಇದು ಹೀಗೆಯೇ ಮುಂದುವರೆಯುತ್ತಿದ್ದಾಗ, ಇದು ಇಷ್ಟಕ್ಕೇ ಸೀಮಿತವಾಗಿ ಮಹತ್ತರವಾದದ್ದು ಏನೂ ಸಾಧಿಸಲಾಗದು ಎಂದರಿತಾಗ ಮತ್ತೆ ತಮ್ಮೊಳಗಿನ ಅರ್ಥಶಾಸ್ತ್ರಜ್ಞ ಎಚ್ಚರವಾದ. ಆ ಎಚ್ಚರದ ಫಲವೇ ಗ್ರಾಮೀಣ ಬ್ಯಾಂಕ್ ಸ್ಥಾಪನೆ. 1983ರಲ್ಲಿ ಬಡವರಿಂದ ಜಾಮೀನು ಕೇಳದೆ ಸಾಲ ನೀಡುವುದಕ್ಕಾಗಿಯೇ ಹುಟ್ಟಿಕೊಂಡದ್ದು ಈ ಗ್ರಾಮೀಣ ಬ್ಯಾಂಕ್. ಇಲ್ಲಿ ನಂಬಿಕೆ, ವಿಶ್ವಾಸ, ಜವಾಬ್ದಾರಿಗಳೇ ಅಡಿಪಾಯ. ಅದಕ್ಕಿಂತಲೂ ಹೆಚ್ಚಾಗಿ ಹಳ್ಳಿಯ ಹೆಂಗಸರೆ ಈ ಬ್ಯಾಂಕಿನ ಉಸ್ತುವಾರಿ ಹೊತ್ತ ಒಡೆಯರು. ಯಾಕೆಂದರೆ, ಗಂಡಸರಿಗಿಂತ ಹೆಂಗಸರು ಹೆಚ್ಚು ನಂಬಿಕಸ್ಥರು ಮತ್ತು ಜವಾಬ್ದಾರಿಯುಳ್ಳವರು ಎಂಬುದು ಯೂನಸ್ ರ ಅನುಭವವಾಗಿತ್ತು. ಮತ್ತು ಹೆಂಗಸರ ಕೈಗೆ ಹಣ ಸಿಕ್ಕರೆ ಅವರು ಸಬಲರಾಗಿ, ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ತಾವು ಬದುಕುವುದಷ್ಟೇ ಅಲ್ಲ, ತಮ್ಮ ಕುಟುಂಬವನ್ನು, ಆ ಮೂಲಕ ತಮ್ಮ ಹಳ್ಳಿಯನ್ನು ಬದುಕಿಸುತ್ತಾರೆ ಎಂಬುದು ಯೂನಸ್ ರ ನಂಬಿಕೆಯಾಗಿತ್ತು.

ಯೂನಸ್ ರ ಅಂದಿನ ಆ ಯೋಚನೆ ಗ್ರಾಮೀಣ ಬ್ಯಾಂಕ್ ಗಳ ಮೂಲಕ ಇಂದು ಫಲ ನೀಡಿದೆ. ಇಂದು ಬಾಂಗ್ಲಾದ ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಬಡತನದ ಬಿಗಿಮುಷ್ಟಿಯಿಂದ ಹೊರಬಂದು ದೇಶದ ರಾಜಕೀಯದತ್ತ ಗಮನ ಹರಿಸುತ್ತಿದ್ದಾರೆ. ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಹೆಂಗಸರ ಮತ ಚಲಾವಣೆ ಗಂಡಸರಿಗಿಂತ ಹೆಚ್ಚಾಗುತ್ತಿದೆ. ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಸುಖೀ ಕುಟುಂಬ, ಹೆಂಗಸರಿಗೆ ಸ್ಥಾನಮಾನ ತಂದುಕೊಡುತ್ತಿದೆ.

ನಾಲ್ಕು ಹೆಂಗಸರಿಗೆ ಸಾಲ ಕೊಡಿಸುವ ಮೂಲಕ ಶುರುವಾದ ಸಾಲ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಯೂನಸ್ ರ ಗ್ರಾಮೀಣ ಬ್ಯಾಂಕ್ ದೇಶದಾದ್ಯಂತ 2,226 ಶಾಖೆಗಳನ್ನು ಹೊಂದಿ, 6 ಮಿಲಿಯನ್ ಸಾಲಗಾರರಿಗೆ 5.7 ಬಿಲಿಯನ್ ಡಾಲರ್ ಸಾಲ ಕೊಟ್ಟು, 71,371 ಹಳ್ಳಿಗಳಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. ಇದು ಇತರ ದೇಶಗಳಿಗೂ ಮಾದರಿಯಾಗುತ್ತಿದೆ. ಇದನ್ನರಿತ ಬಾಂಗ್ಲಾ ಸರ್ಕಾರ ಈ ಗ್ರಾಮೀಣ ಬ್ಯಾಂಕ್ ಗಳಿಗೆ ಸಹಾಯಹಸ್ತ ನೀಡಿದೆ. ಆದರೆ ಬ್ಯಾಂಕಿನ ಒಡೆತನದಲ್ಲಿ ಸಾಲಗಾರರಾದ ಹಳ್ಳಿಯ ಶೇರುದಾರರದೇ ಸಿಂಹಪಾಲು. ಸರ್ಕಾರದ್ದು ಕೇವಲ ಶೇಕಡ 6ರಷ್ಟು ಒಡೆತನ ಮಾತ್ರ.

ಇದೆಲ್ಲ ಇವತ್ತು ಪವಾಡದಂತೆ ಕಾಣುತ್ತಿರಬಹುದು. ಒಳ್ಳೆಯದನ್ನು ಒಪ್ಪಿಕೊಳ್ಳುವ ಮನಸ್ಸುಗಳಿಗೆ ಕ್ರಾಂತಿಯಂತೆ ಕಾಣುತ್ತಿರಬಹುದು. ಆದರೆ, ಯೂನಸ್ ರ ಹಳ್ಳಿ ಬದುಕು, ಬಡತನ ಚಿತ್ತಗಾಂಗ್ ವಿಶ್ವವಿದ್ಯಾಲಯ ಕಲಿಸಿದ ಅರ್ಥಶಾಸ್ತ್ರಕ್ಕಿಂತ ಹೆಚ್ಚಿನದನ್ನು ಕಲಿಸಿದೆ. ಬರೀ ಪಾಠ, ಪ್ರವಚನ, ಪೇಪರು, ಸೆಮಿನಾರು, ಚಿಂತನೆ ಮತ್ತು ಬುದ್ಧಿಜೀವಿಗಳ ವಲಯಗಳಲ್ಲಷ್ಟೇ ಕಳೆದುಹೋಗಲಿದ್ದ ಯೂನಸ್ ರನ್ನು ಇಂದು ಬಾಂಗ್ಲಾದ ಕ್ರಾಂತಿಪುರುಷನನ್ನಾಗಿಸಿದೆ. ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಈ ಗಳಿಗೆಯಲ್ಲಿ, ನಮ್ಮ ನಡುವೆ ನಡೆದಾಡುವ ದೇವರು ಎಂದೇ ಖ್ಯಾತರಾದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಇಂಥದ್ದೇ ಕಾರಣಗಳಿಗಾಗಿ ಜೀವ ಸವೆಸುತ್ತಿರುವುದು ನಮ್ಮ ಗಮನವನ್ನೇಕೆ ಸೆಳೆಯುತ್ತಿಲ್ಲ?

ಯೂನಸ್ ಬಾಂಗ್ಲಾದಲ್ಲಿ ಬಡತನದ ವಿರುದ್ಧ ಯುದ್ಧ ಸಾರಿ ಗೆದ್ದಿದ್ದಾರೆ. ಅದೇ ರೀತಿ ಇಲ್ಲಿ ಸಿದ್ಧಗಂಗಾ ಶ್ರೀಗಳು ತಮಗಾಗಿರುವ ನೂರ ಮೂರು ವರ್ಷ ವಯಸ್ಸನ್ನೂ ಬದಿಗಿಟ್ಟು, ದೇಹ ಹಣ್ಣಾಗಿದ್ದರೂ ಮರೆತು ಇಂದೂ ಕೂಡ ಜನರ ಒಳಿತಿಗಾಗಿ ಜೀವ ಸವೆಸುತ್ತಿದ್ದಾರೆ.

ಹಳ್ಳಿಯ ಅತಿ ಬಡ ಕುಟುಂಬದಲ್ಲಿ 1907ರ ಏಪ್ರಿಲ್ 1ರಂದು ಹುಟ್ಟಿದ ಶಿವಣ್ಣ, ತನ್ನ 23ನೇ ವಯಸ್ಸಿನಲ್ಲಿ, 1930ರಲ್ಲಿ ಹಿರಿಯ ಶ್ರೀಗಳಿಂದ ದೀಕ್ಷೆ ಪಡೆದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬಂದು ಶಿವಕುಮಾರ ಸ್ವಾಮಿಗಳಾದವರು. ಇವರು ಮಠಕ್ಕೆ ಬಂದ ಕಾಲಕ್ಕೆ, ಬಲ್ಲವರು ಹೇಳುವ ಪ್ರಕಾರ ಬೆಟ್ಟ ಗುಡ್ಡಗಳೇ ಆಸ್ತಿ, ಪೂಜೆ ಪುನಸ್ಕಾರವೇ ಕಾಯಕ. ಆದರೆ ಶ್ರೀಗಳು ಬಸವಣ್ಣನವರ ಕಾಯಕವೇ ಕೈಲಾಸದಲ್ಲಿ ನಂಬಿಕೆಯಿಟ್ಟವರು. ಅದನ್ನು ಕಾರ್ಯರೂಪಕ್ಕೆ ತಂದವರು. ಅವರ ನಿರಂತರ ದುಡಿಮೆಗೆ ದಿನದ 24 ಗಂಟೆಗಳೆ ನಾಚುವಂತೆ ಕಾಯಕದಲ್ಲಿ ಮುಳುಗಿಹೋದ ಮಹಾನುಭಾವರಿವರು.

ಈ ಎಂಬತ್ತು ವರ್ಷಗಳ ನಿರಂತರ ಸ್ವಾರ್ಥರಹಿತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಫಲವಾಗಿ ಇಂದು ಸಿದ್ಧಗಂಗಾ ಮಠ ಬೃಹತ್ ಮಠವಾಗಿ ಬೆಟ್ಟದಂತೆ ಬೆಳೆದು ನಿಂತಿದೆ. ಅದೊಂದು ಜಾತಿ ಮಠವಾಗದೆ, ಎಲ್ಲರ ಸದ್ಭಾವನಾ ಮಠವಾಗಿ ಮಾರ್ಪಟ್ಟಿದೆ. ಇಂದು ಮಠದ ಒಡೆತನದಲ್ಲಿ ಹಲವಾರು ಶೈಕ್ಷಣಿಕ ಸಂಸ್ಥೆಗಳು, ಪ್ರಕಾಶನ ಸಂಸ್ಥೆಗಳು, 140ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಮಂದಿಗೆ ಕೆಲಸ ಕೊಡುವ ಮೂಲಕ ಮಠ ಆರ್ಥಿಕವಾಗಿ ಸುಭದ್ರವಾಗಿದೆ. ಇನ್ನು ಮಠದ ಗುರುಕುಲ- ಜಾತಿ ಮತ ಭೇದವಿಲ್ಲದ, ಮೇಲು-ಕೀಳುಗಳ ಹಂಗಿಲ್ಲದ ಸುಮಾರು ಎಂಟು ಸಾವಿರ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಅನ್ನ ದಾಸೋಹ, ಜ್ಞಾನ ದಾಸೋಹ, ವಸತಿ ನೀಡಲಾಗುತ್ತಿದೆ. ಇಲ್ಲಿಂದ ಕಲಿತ ಸಾವಿರಾರು ಸುಸಂಸ್ಕೃತ ಯುವಕರು ದೇಶಕ್ಕೆ ಮಠ ನೀಡುತ್ತಿರುವ ಕೊಡುಗೆಯಂತೆ ಕಾಣುತ್ತಿದ್ದಾರೆ.

ಹೆಚ್ಚಿಗೆ ಮಾತನಾಡದ ಮಾತಿಗಿಂತ ಕೃತಿಯಲ್ಲಿ ನಂಬಿಕೆ ಇಟ್ಟಿರುವ, ಇವತ್ತಿಗೂ ಮೂರ್ನಾಲ್ಕು ಗಂಟೆಗಳ ಕಾಲ ಅಧ್ಯಯನದಲ್ಲಿ, ಹದಿನೆಂಟು ಗಂಟೆಗಳ ಕಾಲ ಕೆಲಸ, ಧ್ಯಾನ, ಜಪ-ತಪ, ಪೂಜೆ, ಪ್ರಾರ್ಥನೆಯಲ್ಲಿ ಮುಳುಗುವ ಶ್ರೀಗಳು ವಿಶ್ರಾಂತಿ ಅಂತ ಪಡೆಯುವುದು ಕೇವಲ ಮೂರು ಗಂಟೆಗಳು ಮಾತ್ರ. ಇವರ ಸ್ವಾರ್ಥರಹಿತ ಸೇವೆ, ಬಡವರ ಬಗೆಗಿನ ಪ್ರೀತಿ, ಆದರ್ಶಮಯ ಬದುಕು- ಸ್ವಾಮೀಜಿ ಎನ್ನಿಸಿಕೊಂಡವರಿಗೆ ಮಾದರಿಯಾಗುವಂಥದು.

ಈ ಸರಳ ಬದುಕೆ ಶ್ರೀಗಳ ಮಹತ್ ಸಾಧನೆ. ಇಂತಹ ಶ್ರೀಗಳನ್ನು ಶ್ರೇಷ್ಠ ಮಾನವತಾವಾದಿಯಾಗಿ ನೋಡುವಲ್ಲಿ; ಅವರ ನಿಸ್ವಾರ್ಥ ಸೇವೆಗೆ ಸಲ್ಲಲೇಬೇಕಾದ ಅತ್ಯುನ್ನತ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆನಿಸುವುದಿಲ್ಲವೇ?

`ನಾವು ಉತ್ಪಾದಿಸಿದ್ದನ್ನು ನಾವಷ್ಟೇ ಶೇಖರಿಸಿ ಇನ್ನೊಬ್ಬರು ಹಸಿದ ಹೊಟ್ಟೆಯಲ್ಲಿ ಮಲಗಿದ್ದನ್ನು ಕಂಡು ನಮಗೆ ನಾಚಿಕೆ ಏಕೆ ಆಗುತ್ತಿಲ್ಲ’ ಎಂದು ಕೇಳುವ ಶ್ರೀಗಳು ಯಾವ ಕ್ರಾಂತಿಪುರುಷನಿಗಿಂತ ಕಡಿಮೆ?

ಈ ಹಣ್ಣಾದ ವಯಸ್ಸಿನಲ್ಲೂ ದಿನಕ್ಕೆ 18 ರಿಂದ 20 ಗಂಟೆಗಳ ಕೆಲಸ ಮಾಡುವ, 8 ಸಾವಿರ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುತ್ತಿರುವ, ಕಾಯಕವೇ ದೇವರು ಎಂದು ನಂಬಿರುವ, ಗಾಂಧಿಯ ಕನಸಿನ ಭಾರತವನ್ನು ನನಸು ಮಾಡಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳ ಹೆಸರನ್ನು ನಾವೇಕೆ ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಬಾರದು?