ಆಗಸ್ಟ್ ಹದಿನೈದು, ಸ್ವಾತಂತ್ರ್ಯ ದಿನಾಚರಣೆಯೆಂದರೆ ನನಗೆ ಏನು?

ಬಹುಶಃ ಈ ಪ್ರಶ್ನೆಯನ್ನು ೧೪೯೮ರಲ್ಲಿ ಕಲ್ಲಿಕೋಟೆಯ ಬಳಿಯ ಕಪ್ಪಕಡವು ಬಂದರಿಗೆ ಬಂದಿಳಿದ ಪೋರ್ಚುಗಲ್ ನಾವಿಕ ವಾಸ್ಕೋ ಡ ಗಾಮನನ್ನು ಬರ ಮಾಡಿಕೊಂಡ ಸಾಮೂದರಿ ರಾಜನೂ, ಪೋರ್ಚುಗೀಸರ ವ್ಯಾಪಾರವನ್ನು ವಿರೋಧಿಸಿದ ಸ್ಥಳೀಯ ಅರಬ್ ವ್ಯಾಪಾರಿಗಳೂ ಕೇಳಿಕೊಂಡಿರಲಾರರು.

ಪ್ಲಾಸಿ ಕದನದಲ್ಲಿ ಸೋತು ರಾಬರ್ಟ್ ಕ್ಲೈವ್ ನ ಕೈವಶವಾದ ಬಂಗಾಳದ ಅಧಿಕಾರವನ್ನು ನೆನೆಯುತ್ತ ಪ್ರಾಣ ಬಿಟ್ಟ ಬಂಗಾಳದ ನವಾಬನು, ಬಕ್ಸರ್ ಕದನದಲ್ಲಿ ಬಿಹಾರ, ಒರಿಸ್ಸಾಗಳನ್ನು ಕಳೆದುಕೊಂಡ ಸ್ಥಳೀಯ ಆಡಳಿತಗಾರರು, ಮಹಾರಾಜ ರಣಜಿತ್ ಸಿಂಗನ ಸಾವಿನ ನಂತರ ಪಂಜಾಬವನ್ನು ಉಳಿಸಿಕೊಳ್ಳಲು ಎರಡು ಭೀಕರ ಕಾಳಗಗಳಲ್ಲಿ ಕಾದಾಡಿದ ವೀರ ಯೋಧರು ಕೇಳಿಕೊಂಡಿರಲಾರರು.

ಇಂಗ್ಲೆಂಡು ದೊರೆಗಳ, ಧರೆಗೆ ಶ್ರೇಷ್ಠರಾದವರ ಕೈಲಿರುವ ಚಾವಟಿಯಿಂದ ಛಡಿ ಏಟುಗಳ ತಿಂದು ಅವರ ಕುದುರೆಗಳಿಗೆ ದಾರಿ ಬಿಟ್ಟು ಕೊಡುತ್ತ, ಅವರ ಚರ್ಮದ ಬೂಟುಗಳು ಮಿರಮಿರನೆ ಹೊಳೆಯುವಂತೆ ಪಾಲೀಶು ತಿಕ್ಕುತ್ತಾ, ತಮಗೆ ಕೊಟ್ಟ ಬಂದೂಕಿನಲ್ಲಿ ಹಾಕಿದ ಹಸು ಹಾಗೂ ಹಂದಿಯ ಕೊಬ್ಬಿನ ಕೀಲೆಣ್ಣೆಯ ದೆಸೆಯಿಂದ ಅಸಹನೆಯಲ್ಲಿ ಕುದಿದು ಸ್ಫೋಟಗೊಂಡ ಬಂಡಾಯದಲ್ಲಿ ಭಾಗವಹಿಸಿದ ಸಿಪಾಯಿಗಳು ಕೇಳಿಕೊಂಡಿರಲಾರರು.

ಪರದೇಶದ ಶೋಷಕರನ್ನು ಕಿತ್ತೊಗೆಯುವ ಏಕ ಮನಸ್ಸಿನಿಂದ ಪ್ರಾಣವನ್ನೇ ಪಣವೊಡ್ಡಿ ಅತಿ ಅಪಾಯಕಾರಿ ಜೂಜನ್ನು ಆಡಿದ ಯುವಕರು, ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಟ್ಟು ಆ ಕನಸಿನ ಸಾಕಾರಕ್ಕಾಗಿ ರಕ್ತವನ್ನು ಬೇಡಿದ ನೇತಾಜಿಯ ಕರೆಗೆ ಓಗೊಟ್ಟು ಓಡಿದ ವೀರರು, ಗಾಂಧೀಜಿಯ ಅಹಿಂಸೆಯ, ಅಸಹಕಾರದ ಪ್ರತಿಭಟನೆಯಲ್ಲಿ ನಂಬಿಕೆಯಿಟ್ಟು ಬೆನ್ನ ಮೇಲೆ ಬಿದ್ದ ನೂರು ಬಾಸುಂಡೆಗಳಿಗೆ, ಮುರಿದ ಬೆರಳು, ಸುಲಿದ ಚರ್ಮಕ್ಕೆ ಪ್ರತಿಯಾಗಿ ಅಹಿಂಸೆಯನ್ನೇ ಕೊಟ್ಟ ಅಸಂಖ್ಯ ಯುವಕ, ಯುವತಿಯರು, ಮುದುಕರು, ಮಕ್ಕಳು, ಹೆಂಗಸರು, ಗಂಡಸರು, ರೈತರು, ವಕೀಲರು, ಕಾಲೇಜು ತೊರೆದು, ನೌಕರಿ ತೊರೆದು, ವ್ಯಾಪಾರ ತೊರೆದು, ತೊಟ್ಟಿಲಲ್ಲಿ ಮಲಗಿದ ಹಸುಗೂಸನ್ನು ತೊರೆದು ಬೀದಿಗೆ ಇಳಿಯುವಾಗ ಯಾರೆಂದರೆ ಯಾರೂ ಸಹ ಈ ಪ್ರಶ್ನೆಯನ್ನು ಕೇಳಿಕೊಂಡಿರಲಾರರು.

ನಾನೀಗ ಕೇಳಿಕೊಳ್ಳಬೇಕು. ಆಗಸ್ಟ್ ತಿಂಗಳ ಹದಿನೈದನೆಯ ತಾರೀಖು ನನಗೆ ಏನು?

ನಾನೊಬ್ಬನೇ ಅಲ್ಲ, ನನ್ನ ಹಾಗೆ ಹುಟ್ಟಿನಿಂದಲೇ ಸ್ವಾತಂತ್ರ್ಯವನ್ನೂ ಸಹ ಬೆಳಗಿನ ಹಬೆಯಾಡುವ ಕಾಫಿ, ಗರಿಗರಿಯಾದ ನ್ಯೂಸ್ ಪೇಪರು, ಗಿಜಿ ಗುಡುವ ಶಾಲೆ, ಓದುವುದಕ್ಕೆ ಪುಸ್ತಕ, ದುಡಿಯುವುದಕ್ಕೆ ಅವಕಾಶ ಪಡೆದು ಬೆಳೆದ ಎಲ್ಲರೂ ಕೇಳಿಕೊಳ್ಳಬೇಕು.

ಸ್ವಾತಂತ್ರ್ಯ ದಿನವೆಂದರೆ ನನಗೆ ಹಬ್ಬ. ಹೊಸ ಬಟ್ಟೆಯಿಲ್ಲ, ಮುಂಜಾನೆಯ ಚಳಿಯಲ್ಲಿ ಎಣ್ಣೆ ನೀರು ಸ್ನಾನವಿಲ್ಲ ಎನ್ನುವುದು ಹೊರತು ಪಡಿಸಿದರೆ ಆ ದಿನ ಹಬ್ಬದ ದಿನವೇ. ಬೆಳಕು ಹರಿಯುವ ಮೊದಲೇ ಏಳುವುದು, ಹಿಂದಿನ ದಿನವೇ ನೀಲಿ ಹಾಕಿ ಒಗೆದಿರಿಸಿದ ಬಿಳಿಯ ಯೂನಿಫಾರ್ಮ್, ಬಿಳಿಯ ಸಾಕ್ಸ್, ಬಿಳಿಯ ಕ್ಯಾನ್ವಾಸ್ ಶೂ ತೊಟ್ಟುಕೊಂಡು, ಬಿಳಿಯ ಅಂಗಿಯ ಜೇಬಿಗೆ ತ್ರಿವರ್ಣದ ಕಾಗದದ ಧ್ವಜವನ್ನು ಕೇಸರಿ ಮೇಲಕ್ಕೆ ಹಸಿರು ಕೆಳಕ್ಕೆ ಬರುವ ಹಾಗೆ ಸರಿಯಾಗಿ ನೋಡಿ ಸಿಕ್ಕಿಸಿಕೊಂಡು, ಕೈಯಲ್ಲಿ ಪ್ಲಾಸ್ಟಿಕ್ ಬಾವುಟವನ್ನು ಹಿಡಿದುಕೊಂಡು, ಶೆಟ್ಟಿ ಅಂಗಡಿಯಿಂದ ತಂದ ಮೋತೀಸ್ ಬನ್ನನ್ನು ಹಾಲಿನಲ್ಲಿ ಅದ್ದಿಕೊಂಡು ತಿಂದು ರಸ್ತೆಗೆ ಬೀಳುವುದು. ಘಟ್ಟದ ಕಾಡಿನಲ್ಲಿ ಸಣ್ಣದಾಗಿ ಹರೆಯುವ ತೊರೆಯ ಹಾಗೆ ರಸ್ತೆಯಲ್ಲಿ ಆಗಲೇ ಸಾಗಿದ್ದ ಬಿಳಿ ಯೋಧರ ಸಾಲಿನಲ್ಲಿ ಸೇರಿಕೊಂಡು ಸ್ಕೂಲು ತಲುಪುವುದು. ಪಿ.ಟಿ ಮಾಷ್ಟ್ರ ಸೀಟಿಯ ಆಜ್ಞಾನುಸಾರ ಕೈಚಾಚಿ ಅಳತೆ ಹಿಡಿದು ಸಾಲು ಮಾಡಿ  ನಿಲ್ಲುವುದು. ಪ್ರತಿ ದಿನದ ಪ್ರಾರ್ಥನೆಯ ಬೇಸರ ಕಳೆಯುವ ಹೊಸ ಪ್ರಾರ್ಥನೆಗಳನ್ನು ಎತ್ತರದ ಧ್ವನಿಯಲ್ಲಿ ಹಾಡುವುದು. ಹಾಡಿನಲ್ಲಿ ತಿಳಿಯದ, ನೆನಪಾಗದ ಸಾಲುಗಳು ಬಂದಾಗ ಗಳ ಗಳನೆ ಧ್ವನಿಯ ಅಬ್ಬರದಲ್ಲಿ ಅದನ್ನು ತೇಲಿಸಿ ನೆನಪಿರುವ ಸಾಲು ಬರುವವರೆಗೆ ಕಾಯುವುದು. ಹೆಡ್ ಮಾಸ್ಟರ್ ಶಾಲೆಯ ಧ್ವಜ ಸ್ತಂಭದ ಬಳಿಗೆ ಬಂದು ಆ ದಿನದ ವಿಶೇಷ ಅತಿಥಿಯ ಕೈಲಿ ಕಂಬಕ್ಕೆ ಕಟ್ಟಿದ ಹಗ್ಗವನ್ನೆಳೆಸಿದ ತಕ್ಷಣ ಕಂಬದ ತುದಿಯಲ್ಲಿ ಮುದುರಿ ಕುಳಿತಿದ್ದ ಬಾವುಟ ರೆಕ್ಕೆ ಬಿಚ್ಚಿಕೊಳ್ಳುವುದು, ಅದರೊಳಗೆ ಇಟ್ಟಿದ್ದ ಗುಲಾಬಿ, ದಾಸವಾಳ, ಸೇವಂತಿಗೆ ಹೂಗಳ ಪಕಳೆಗಳ ವೃಷ್ಟಿಯಾಗುವುದು, ಕೇಸರಿ ಬಿಳಿ ಹಸಿರು ಬಣ್ಣದ ಧ್ವಜವು ಗಾಳಿಗೆ ಪಟಪಟಿಸುವುದನ್ನು ಕಂಡು ಕಿವುಡಾಗುವಂತೆ ಚಪ್ಪಾಳೆ ತಟ್ಟುವುದು. ಬಲಗೈ ಸೆಟೆಸಿ ಸೆಲ್ಯೂಟ್ ಹೊಡೆಯುತ್ತ ಧ್ವಜದಲ್ಲಿ ಸೃಷ್ಟಿ ನೆಟ್ಟು ‘ಸಾರೇ ಜಹಾ ಸೇ ಅಚ್ಛಾ…’ ಹಾಡುವುದು.

ತಮ್ಮ ತಲೆಗೂದಲಲ್ಲಿ ಸಿಲುಕಿಕೊಂಡ ಧ್ವಜದಿಂದ ಚಿಮ್ಮಿದ ಹೂ ಪಕಳೆಗಳನ್ನು ಹೊರತೆಗೆದು ವಿಶೇಷ ಅತಿಥಿಗಳು, ಹೆಡ್ಮಾಸ್ಟರು ಭಾಷಣಕ್ಕೆ ತಯಾರಾಗುವುದು, ಪಿಟಿ ಮೇಷ್ಟ್ರು ದೊಡ್ಡ ದೊಡ್ಡ ಪೆಪ್ಪರಮೆಂಟಿನ ಚೀಲಗಳ ಬಾಯಿ ಒಡೆಯುತ್ತಾ ಹರಿವಾಣದಲ್ಲಿ ಅವನ್ನು ಗುಡ್ಡೆ ಹಾಕುವುದನ್ನು ನೋಡುತ್ತಾ ನಿಂತಲ್ಲಿಯೇ ಜಾಗ ಮಾಡಿಕೊಂಡು ಬಿಳಿಯ ಚಡ್ಡಿ ಕೊಳೆಯಾಗದಂತೆ ಕರವಸ್ತ್ರ ಹಾಕಿಕೊಂಡು ಕುಳಿತುಕೊಳ್ಳುವುದು. ಪ್ರತಿ ವರ್ಷದ ಭಾಷಣಗಳಲ್ಲಿ ಕೇಳಿ ಬರುತ್ತಿದ್ದ ಗಾಂಧೀಜಿ, ನೆಹರೂ, ಸುಭಾಷ್ ಚಂದ್ರಬೋಸ್ ರ ಕತೆಗಳನ್ನು ನೆನೆಯುತ್ತಾ ಕೈಗೆ ಸಿಕ್ಕ ಚಿಕ್ಕ ಎಲೆಗಳನ್ನು, ಪೇಪರ್ ತುಂಡುಗಳನ್ನು ಹರಿದೆಸೆಯುತ್ತಾ, ಸಣ್ಣ ಕಲ್ಲುಗಳನ್ನು ಮುಂದೆ ಕೂತಿರುವ ಹುಡುಗನ ಗಮನಕ್ಕೆ ಬರದಂತೆ ಆತನ ಚಡ್ಡಿಯೊಳಕ್ಕೆ ಹಾಕುತ್ತ ಸ್ಟೇಡಿಯಂಗೆ ಹೋಗುವ ಕ್ಷಣದ ಗಣನೆ ಮಾಡುತ್ತ, ದೂರದಲ್ಲಿ ನಿಲ್ಲಿಸಿದ್ದ ಟ್ಯಾಬ್ಲೋದ ಸೌಂದರ್ಯವನ್ನು ಆಸ್ವಾದಿಸುವುದು. ಭಾಷಣಗಳು ಮುಗಿದ ನಂತರ ಸಿಕ್ಕುತ್ತಿದ್ದ ಎರಡು ಮೂರು ಪೆಪ್ಪರಮೆಂಟುಗಳಲ್ಲಿ ಒಂದನ್ನು ಬಾಯಿಗೆ ಹಾಕಿಕೊಂಡು ಇನ್ನೆರಡನ್ನು ಕಬಳಿಸುವ ಮುಹೂರ್ತವನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡು ಶಾಲೆಯಿಂದ ಸ್ಟೇಡಿಯಂಗೆ ಹೊರಟ ಸಾಲಿನಲ್ಲಿ ಹೆಜ್ಜೆ ಹಾಕುವುದು.

ಶಾಲೆಯ ವಿಶಾಲ ಬಯಲಿನಲ್ಲಿ ಕಂಡ ಬಿಳಿ ಯೂನಿಫಾರ್ಮಿನ ಹುಡುಗ ಹುಡುಗಿಯರ ಸಾಗರವನ್ನೇ ಮರೆಸುವಷ್ಟು ವಿಶಾಲವಾಗಿ ಚಾಚಿಕೊಂಡ ಸ್ಟೇಡಿಯಮ್ಮಿನ ಉದ್ದಗಲಗಳನ್ನು ಲೆಕ್ಕ ಹಾಕುತ್ತಾ ಕ್ಲಾಸ್ ಲೀಡರು ತೋರಿದ ಜಾಗದಲ್ಲಿ ಕೂರುವುದು. ಅಲ್ಲಿ ಇಲ್ಲಿ ಅಲೆಯುವ ಐಸ್ ಕ್ಯಾಂಡಿ, ಸೀಬೆ ಕಾಯಿ, ಹುರಿಗಡಲೆ, ಬಟಾಣಿ ಮಾರುವವರ ಮೇಲೆ ಕಣ್ಣಿಟ್ಟು ಪಥ ಸಂಚಲನದಲ್ಲಿ ತೊಡಗಿದ ಹೋಂ ಗಾರ್ಡುಗಳು, ಪೊಲೀಸರು, ಎನ್.ಸಿ.ಸಿ, ಸ್ಕೌಟ್,ಗೈಡ್‌ಗಳ ಹುಡುಗ ಹುಡುಗಿಯರು, ನಮ್ಮದೇ ಶಾಲೆಯ ವಿದ್ಯಾರ್ಥಿಗಳನ್ನು ಕುತೂಹಲದಿಂದ ನೋಡುವುದು. ಸುತ್ತಮುತ್ತಲಿನ ಗದ್ದಲ, ಗಲಿಬಿಲಿಯಲ್ಲಿಯೇ ಟ್ಯಾಬ್ಲೋಗಳ ಮೇಲೆ ಬರೆದ ಸಂದೇಶಗಳನ್ನು ಓದುವುದು, ಪಾತ್ರಧಾರಿಗಳ ವೇಷ ಭೂಷಣ,ಹಾವ ಭಾವವನ್ನು ಗ್ರಹಿಸುತ್ತಾ ಅವರ ಪಾತ್ರವನ್ನು ಅಂದಾಜಿಸುವುದು. ಸ್ಪೀಕರಿನಿಂದ ಅಸ್ಪಷ್ಟವಾಗಿ ಹೊರಡುವ ಕಾರ್ಯಕ್ರಮ ನಿರೂಪಕರ ಧ್ವನಿಯೆಡೆಗೆ ನಿರ್ಲಕ್ಷ್ಯ ತಾಳಿ ಅತ್ತಿಂದಿತ್ತ ಚಟುವಟಿಕೆಯಿಂದ ಓಡಾಡುವ ಕ್ಯಾಮರ, ಮೈಕ್ ಹಿಡಿದ ವ್ಯಕ್ತಿಗಳನ್ನು ಗಮನಿಸುವುದು. ಏರಿದ ಬಿಸಿಲನ್ನು ಮರೆ ಮಾಡುವ ಶಾಮಿಯಾನಾದಡಿಯಲ್ಲಿ ಕುಳಿದ ಗಣ್ಯರನ್ನು ಗುರುತಿಸುವ ಹಿಂದಿನ ಸಾಲಿನ ದೊಡ್ಡ ತರಗತಿಯ ವಿದ್ಯಾರ್ಥಿಗಳನ್ನು ಬೆರಗಿನಿಂದ ನೋಡುತ್ತಲೇ ವಿವಿಧ ಬಗೆಯ ನೃತ್ಯ, ದೈಹಿಕ ಕಸರತ್ತಿನ ಮನರಂಜನಾ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವುದು.

ಕಾರ್ಯಕ್ರಮಗಳು ಒಂದೊಂದೇ ಮುಗಿಯುತ್ತಿದ್ದಂತೆಯೇ ಏರುತ್ತಿದ್ದ ಬಿಸಿಲಿನ ಝಳದ ದೆಸೆಯಿಂದಲೋ, ಕ್ಲಾಸ್ ಟೀಚರು, ಪಿಟಿ ಮಾಷ್ಟ್ರ ಕಣ್ಮರೆ ಒದಗಿಸಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನೆಪದಿಂದಲೋ ಅಲ್ಲಿಂದ ತಪ್ಪಿಸಿಕೊಂಡು ಸೀದಾ ಮನೆಯೆಡೆಗೆ ಓಡುವುದು.

ಬೆಳಗಿನ ಬ್ರೆಡ್ಡು ಹಾಲಿನ ಉಪವಾಸವನ್ನು ನೆನೆಯುತ್ತ ಟಿವಿಯಲ್ಲಿ ಪ್ರಸಾರವಾಗುವ ಪರೇಡ್, ಪ್ರಧಾನ ಮಂತ್ರಿಯವರ ಕೆಂಪು ಕೋಟೆಯ ಭಾಷಣವನ್ನು ನೋಡುತ್ತಾ ಊಟ ಮಾಡಿ ಮಲಗುವುದು. ಎಚ್ಚರವಾದಾಗ ಹೊರಗೆ ಅಲೆದಾಡಿ ಕ್ರಿಕೆಟ್, ಗೋಲಿ, ಐಸ್ ಪೈಸು ಆಟದ ಕಾರ್ಯಕ್ರಮವು ಎಲ್ಲಾದರೂ ಶುರುವಾಗಿದೆಯೇ ಎಂದು ಗಮನಿಸುವುದು. ಭಾಗವಹಿಸುವ ಅವಕಾಶವಿದ್ದರೆ ಪ್ರತಿಭಾ ಪ್ರದರ್ಶನಗೈದು ಮನೆಗೆ ಹಿಂದಿರುವುದು. ಹಿಂದಿನ ದಿನವೇ ಹೋಂ ವರ್ಕು ಮುಗಿದಿದ್ದರೆ ಸಂಜೆಯೆಲ್ಲಾ ಟಿವಿ ಸಖ್ಯ ಸಾಧ್ಯವಾಗುತ್ತಿತ್ತು. ಟಿವಿಯಲ್ಲಿ ಮೂರನೆಯ ಬಾರಿಗೋ ನಾಲ್ಕನೆಯ ಬಾರಿಗೋ ಬಾರ್ಡರ್ ಸಿನೆಮಾ ನೋಡಿ ದಿನ ಆಯಾಸಕ್ಕೆ ಗೌರವ ಕೊಟ್ಟು ನಿದ್ರೆಗೆ ಶರಣಾಗುವುದು.

ಈಗ ನಾನು ಸ್ಕೂಲು ಹುಡುಗನಲ್ಲ. ಹುಡುಗಾಟಿಕೆಗೆ ಮಾಫಿ ಸಿಗುವ ಕಾಲ ಎಂದೋ ಕಳೆಯಿತು. ಈಗ ನನಗೆ ಸ್ವಾತಂತ್ರ್ಯ ದಿನವೆಂದರೇನು?

ಈಗಲೂ ಅದು ಹಬ್ಬವೇ!

ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರದ ಐತಿಹಾಸಿಕ ಗಳಿಗೆಮೊಬೈಲಿನ ಇನ್ ಬಾಕ್ಸಿನಲ್ಲಿ ಶೇಖರಗೊಳ್ಳುವ ಶುಭಾಶಯಗಳ, ಇನ್ ಬಾಕ್ಸಿಗೆ ಬಂದು ಬೀಳುವ ಭಾರತೀಯನಾಗುವುದಕ್ಕೆ ಹೆಮ್ಮೆ ಏಕೆ ಪಡಬೇಕೆಂದು ಪುಟಗಟ್ಟಲೆ ವಾದ ಮಂಡಿಸುವ ಇ-ಮೇಲುಗಳ, ಸ್ವಾತಂತ್ರ್ಯ ಹೋರಾಟವನ್ನು , ಹೋರಾಟಗಾರರನ್ನು ನೆನೆಯುವ ಟಿವಿ ಚಾನಲ್ಲುಗಳ ಕಾರ್ಯಕ್ರಮ, ಪತ್ರಿಕೆಗಳ ವಿಶೇಷ ಪುರವಣಿಗಳು, ದೇಶ ಭಕ್ತಿ ಉಕ್ಕುಕ್ಕಿ ಹರಿಯುವ ಬ್ಲಾಗುಗಳು ಇವುಗಳ ನಡುವೆ ಮುಳುಗಿ ಏಳುತ್ತಾ, “ಈ ಹಬ್ಬಗಳು ನಮಗೆ ಏಕೆ ಅವಶ್ಯಕವೆಂದರೆ” ಎಂದು ಪ್ರತಿ ಹಬ್ಬಗಳನ್ನು ಸ್ವಾಗತಿಸುವಂತೆ ಆಗಸ್ಟ್ ಹದಿನೈದನ್ನೂ ಕಳೆಯುವುದು.

ಈಗ ಪರೇಡು ನಡೆಯವ ಕ್ರೀಡಾಂಗಣಕ್ಕೆ ಹೋಗಲೇಬೇಕೆಂಬ ಕಟ್ಟಳೆಯಿಲ್ಲ. ಬಿಳಿಯ ಬಟ್ಟೆ , ಬಿಳಿ ಸಾಕ್ಸು, ಬಿಳಿ ಕ್ಯಾನ್ವಾಸ್ ಶೂಗಳಿರಬೇಕೆಂಬ ನಿಯಮವಿಲ್ಲ. ಬೆಳಗಿನ ಹಾಲು ಬ್ರೆಡ್ಡಿನ ಉಪವಾಸವಿಲ್ಲ. ಸಾಲಾಗಿ ನಿಂತು ಪ್ರಾರ್ಥನೆ ಹಾಡಬೇಕೆಂಬ, ಕಾರ್ಯಕ್ರಮವಿಡೀ ಮೌನವಾಗಿರಬೇಕೆಂಬ, ಬಿಸಿಲಲ್ಲಿ ಕಾದು ಭಾಷಣ ಕೇಳಬೇಕೆಂಬ ಕಾಯಿದೆಯಿಲ್ಲ. ಮೂರು ತುಂಡು ಪೆಪ್ಪರಮೆಂಟಿಗಾಗಿ ಗಂಟೆಗಳ ಕಾಲ ಕಾಯಬೇಕಿಲ್ಲ. ಸಿಕ್ಕ ಮೂರು ಪೆಪ್ಪರಮೆಂಟನ್ನು ತೀರಾ ಮುತುವರ್ಜಿಯಿಂದ ಖರ್ಚು ಮಾಡಬೇಕಾದ ಅನಿವಾರ್ಯತೆಯಿಲ್ಲ.

ಈಗ ಬೆಳೆದವನು ನಾನು. ನಿಜ, ನಾನೀಗ ಸ್ವತಂತ್ರನು. ಆದರೂ ಬಿಳಿ ಯೂನಿಫಾರ್ಮ್ ತೊಟ್ಟು ಗೆಳೆಯರ ಸಾಲಿನಲ್ಲಿ ಶಿಸ್ತಾಗಿ ಕೂತು, ಕಾಯಲು ನಿಂತ ಮೇಷ್ಟ್ರ ಕಣ್ಣಿಗೆ ಬೀಳದಂತೆ ಕೂಗಳತೆಯ ದೂರದಲ್ಲಿರುವ ತಳ್ಳುಗಾಡಿಗಳ ಮೇಲೆ ಆಸೆಯ ದೃಷ್ಟಿ ಬೀರುತ್ತಾ ಕೂರುವುದು ಅದ್ಯಾಕೆ ಸುಖವೆನ್ನಿಸುತ್ತದೆಯೋ ಕಾಣೆ!

[ಚಿತ್ರಗಳು-ಸಂಗ್ರಹದಿಂದ]