“ಯಾರ ಅರಿವಿಗೂ ಬಾರದೆ ನಡೆದುಹೋಗುತ್ತಿದ್ದ ಜಗನ್ನಿಯಾಮಕನ ಆಟದಂತಹ ಒಂದು ಪ್ರಸಂಗದಂತಿತ್ತು ಅದು. ನನಗೆ ಯಾಕೋ ಇದೀಗ ಎದುರುಗಡೆ ಕುಳಿತಿದ್ದ ಪ್ರೇಕ್ಷಕರ ಕಣ್ಣೀರು ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಬರುತ್ತಿರುವ ಮೊಂಡು ಮಗುವಿನಂತಹ ಕವಿತೆಯ ಕುರಿತ ಈ ಮಾತುಗಳು. ಆ ಹೊತ್ತಲ್ಲಿ, ನನ್ನ ಪುಟ್ಟ ಪಾದಗಳಿಗೆ ಚುಚ್ಚಿದ್ದ ಗಾಜಿನ ಚೂರುಗಳು ಇಷ್ಟು ಕಾಲ ಅಲ್ಲೇ ಮೂಳೆಯ ಮಜ್ಜೆಯೊಳಗೆ ಸುಮ್ಮನೆ ಕುಳಿತು ಇದೀಗ ನನ್ನನ್ನು ನೋಯಿಸುತ್ತಿದೆ ಅನಿಸುತ್ತಿದೆ. ಕವಿತೆಯೂ ಸೇರಿದಂತೆ ಈ ಎಲ್ಲವೂ ಯಾರು ಆಡಿಸುತ್ತಿರುವ ಆಟವಿರಬಹುದು?”
ನಕ್ಷತ್ರ
ಎಂಬ ಹೆಸರಿನಲ್ಲಿ ಕವಿತೆ ಬರೆಯುತ್ತಿದ್ದ ನಾಗಶ್ರೀ ಶ್ರೀರಕ್ಷ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳಾದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಕನ್ನಡದ ಈ ಅನನ್ಯ ಕವಯತ್ರಿ ತನ್ನ ಏಕೈಕ ಕವಿತಾ ಸಂಕಲನಕ್ಕೆ ಬರೆದ ಪ್ರಸ್ತಾವನೆಯ ಸಾಲುಗಳು ನಮ್ಮ ಮರು ಓದಿಗೂ ಅರ್ಹವಾಗಿವೆ. ಮತ್ತು ಆಕೆಯ ಬರಹಗಳಿಗಿದ್ದ ಅಪಾರ ಸಾಧ್ಯತೆಗಳಿಗೆ ಕುರುಹಾಗಿ ಉಳಿದಿದೆ.

 

ತೊಟ್ಟಿರುವ  ಈ ಉಡುಪನ್ನು ನಾನು ಮತ್ತೆ ತೊಡುತ್ತೇನೋ  ಇಲ್ಲವೋ? ನಿಮ್ಮ ಕೈಯಲ್ಲಿರುವ ಈ ಕವಿತೆಗಳನ್ನು  ನಾನು ಮತ್ತೆ ಬರೆಯುತ್ತೇನೋ ಇಲ್ಲವೋ?   ಯಾವುದೋ ಬೃಂದಾವನದ ಮೆತ್ತನೆಯ ತಲ್ಪದಲ್ಲಿ ವಿರಹಿಣಿಯಂತೆ ಸೊಕ್ಕಿ  ಮಲಗಿದ್ದವಳನ್ನು ಕಾರ್ಕೋಟವೊಂದು ತಣ್ಣಗೆ ತಿನ್ನುತ್ತಿರುವಂತೆ ಅನಿಸುತ್ತಿದೆ. ಈ ಲೋಕ ನನ್ನನ್ನು ಯಾವ ಈಡಿಗೆ ಒಡ್ಡುತ್ತಿದೆ? ಏನೂ ಆಗಿಲ್ಲವೆಂದು ನಂಬಿಸಿ, ಮತ್ತೆ ನಂಬಿದ್ದೂ ಭ್ರಮೆಯೆಂದು ಕಂಗಾಲು ಮಾಡುತ್ತಿರುವಂತಿದೆಯಲ್ಲಾ! ಯಾರೋ ಕಾಣದವರು ನನ್ನ ಗಲ್ಲಹಿಡಿದು ಈ ನಿಜಗಳನ್ನೆಲ್ಲಾ ಅರಹುತ್ತಿದ್ದಾರೆ. ಬದುಕಲು ಬೇಕಾಗಿರುವ ಭ್ರಮೆಗಳೆಲ್ಲಾ ನನ್ನನ್ನು ಸೋಲಿಸಿ ಒಣಗಿಸುತ್ತಿವೆ. ನನ್ನನ್ನು ಕೇಳದೆಯೇ ಒಂದು ದಿನ ಇಲ್ಲಿಂದ ಮೆತ್ತಗೆ ಕಳುಹಿಸುವ ಹುನ್ನಾರದಲ್ಲಿಯೂ ಇರುವಂತಿದೆ.

ನನ್ನ ಎದೆಯಲ್ಲಿ ಎಂದಿನಂತೆಯೇ ಪರಮಾತ್ಮನಂತಹವನು  ಚಂದದ ಚೇಳಂತೆ ಪವಡಿಸಿದ್ದಾನೆ. ನಾನೂ ಹೀಗೆಯೇ ಇನ್ನೂ ಏನೇನೋ ಪದ್ಯಗಳನ್ನು ಬೆಳ್ಳನೆಯ ಮೋಡಗಳ ನಡುವೆ ಗುಣಗುಣಿಸುತ್ತಾ ಕುಳಿತಿದ್ದೇನೆ. ಇದುವರೆಗೆ ಬರೆದದ್ದೆಲ್ಲವೂ ಬಿಳಿಯ ಹಾಳೆಯಲ್ಲಿ ಎಂದೋ ಉಗುಳಿದ ಪಿಚಕಾರಿಯಂತೆ ಕಾಣಿಸುತ್ತಿದೆಯಲ್ಲಾ! ಯಾವುದು ನಿಜ? ಎಲ್ಲೋ ಬಿದ್ದಿರುವ ನನ್ನ ಮಗಳ ಮುದ್ದು ಗೊಂಬೆಯನ್ನು ಅವಳು ಆಚೆ ಹೋದಾಗ ತಲೆ ಸವರಿ ಪುನಃ ನೆಟ್ಟಗೆ ಹಾಗೇ ಇರಿಸಿ ಅವಳು ಬಂದಾಗ ನಕ್ಕಂತೆ ಇರುವ  ನನಗೆ ಯಾವುದು ನಿಜ? ಯಾವುದು ಸುಳ್ಳು?

ಯಾರೋ ಗಡುವು ನೀಡುತ್ತಿರುವವರಂತೆ ಎತ್ತರದಲ್ಲಿ ಕುಳಿತಿದ್ದಾರೆ. ನಾನು ತಳದಲ್ಲಿ ನನ್ನಷ್ಟಕ್ಕೆ ಸುಮ್ಮನೆ ವಿಸ್ತರಿಸಿಕೊಳ್ಳುತ್ತಿದ್ದೇನೆ. ಒಂದು ಕಾಲದಲ್ಲಿ ಅಂತಹದ್ದೇನೂ ಬರೆಯದಿದ್ದರೂ ಬರೆದದ್ದು  ಸಾಕು ಅನ್ನಿಸುತ್ತಿತ್ತು. ನಾನು ಬರೆಯಲು ಕಲಿಯುವ ಮೊದಲೇ  ಇನ್ನೂ  ಬರೆಯದ ಕವಿತೆಗಳು ಆಕಾಶದ ವಿಸ್ತಾರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಯಾರೂ ಹೇಳಿಕೊಡದ,  ಇರುವುದನ್ನು ಇರುವ ಹಾಗೆ ನನಗೆ ಹೇಳಿಕೊಳ್ಳಲೂ ಆಗದ, ಆದರೆ ಈಗಲೂ ನನ್ನೊಳಗೆ  ವಿಸ್ತರಿಸುತ್ತಲೇ ಇರುವ  ಈ ಬಣ್ಣದ ರಂಗುಗಳಿಗೆ ಈಗ ಯಾರೋ ಗಡುವು ನೀಡುತ್ತಿದ್ದಾರೆ.

ನನಗಿನ್ನೂ ನೆನಪಿದೆ. ಬಹುಶಃ ಆಗ ನಾನು ತುಂಬಾ ಎಳೆಯ ಹುಡುಗಿ.  ಅಮ್ಮ ಆಗ ತಾನೇ ದೀಪವಿಟ್ಟು ಹೋದ ತುಳಸಿಕಟ್ಟೆಯ ಬಳಿ‌ ಕುಳಿತಿದ್ದೆ. ಕತ್ತಲಾಗುತ್ತಿತ್ತು. ತಲೆಕೆಟ್ಟ ಹಾಗೆ ಮೋಡಗಳು ಓಡಾಡುತ್ತ ಆಕಾಶ ಚೆಲ್ಲಾಪಿಲ್ಲಿಯಾಗುತ್ತಿತ್ತು. ಹೊಟ್ಟೆ ಉಮ್ಮಳಿಸಿದಂತಾಗಿ ಪಕ್ಕದಲ್ಲಿ ಕೂತಿದ್ದ ನಾಯಿಮರಿಯ ದೈನ್ಯದ ಕಣ್ಣುಗಳನ್ನು ನೋಡುತ್ತಾ ಅದರ ಮೈದಡವುತ್ತಿದ್ದೆ. ಅದನ್ನು‌ ನೋಡಿ ಉಮ್ಮಳ ಇನ್ನೂ ಹೆಚ್ಚುತ್ತಿತ್ತು. “ಮಳೆ ಬರುತ್ತದೆ ಬಾ” ಎಂದು ಅಮ್ಮ ಒಳಗೆ ಕರೆಯುತ್ತಿದ್ದಳು.‌ ಒಳ ಓಡಿ‌ ಹಾಸಿಗೆ‌ಯ ಮೇಲೆ ಬೀಳುವಾಗ ನನ್ನೊಳಗೆ ಥೇಟು ಆಕಾಶದಂತೆಯೇ ತಳಮಳವಾಗುತ್ತಿತ್ತು. ಮನೆಯ ಒಳಗೆಲ್ಲಾ ಕತ್ತಲು. ತುಳಸಿಯ ದೀಪ ಆಗಲೇ ಆರಿ ಹೋಗಿರಬೇಕು. ಒಳಗೆ ದೇವರ ಮುಂದೆ ಮಾತ್ರ ಒಂದು ದೀಪ. ದೀಪದ ಮುಂದೆ ಭಜನೆ ಮಾಡುತ್ತಿದ್ದ ಅಮ್ಮ ಮತ್ತು ಬಳಿಯಲ್ಲಿ ನಾನು. ದೀಪದ ಬೆಳಕಲ್ಲಿ ಕಾಣುತ್ತಿದ್ದ ದೇವಿಯ ಮುಖ. ಆ ಕತ್ತಲಲ್ಲಿ ನಿರ್ಮಲ ಆಕಾಶವೊಂದು ನನಗೆ ಕಾಣಿಸಿ ಅದರ ಬೆಳಗಲ್ಲಿ ಬೃಹದಾಕಾರದ ದೈವವೊಂದು ನಗುತ್ತಿತ್ತು. ಎಲ್ಲವೂ ತಿಳಿಯಾಗುತ್ತಿತ್ತು. ‘ಒಂದು ದಿನ ಈ ದೇವರೆಂಬವನು ಯಾವುದೋ ರೂಪದಲ್ಲಿ ಬರುತ್ತಾನೆ ಆದರೆ ನಿನಗೆ ಅದು ದೇವರೆಂದು ಗೊತ್ತಾಗುವುದಿಲ್ಲ’, ಎಂದು ಅಮ್ಮ ಹೇಳುತ್ತಿದ್ದಳು. ಯಾವುದೋ ರೂಪದಲ್ಲಿ ಅವನು ಬರುವನೆಂದು ನಂಬಿ ನಾನು ಎಷ್ಟೋ ಕಾಲಗಳ ಕಾಲ ಕಾಯುತ್ತಿದ್ದೆ. ಈಗಲೂ ಕಾಯುತ್ತಲೇ ಇರುವೆ ಅನಿಸುತ್ತಿದೆ. ನನಗೆಂದೇ ಇದ್ದ ನನ್ನದೇ ಲೋಕವದು. ಒಳಗಿನ ಮಗುವಿನ ಎಳೆಯ ಎದೆಯೊಳಗೆ ಎಷ್ಟೆಲ್ಲಾ ಲೋಕಗಳು!  ಕೆಳಗಿನ ಏಳು ಪಾತಾಳಗಳು, ಮೇಲಿನ ಏಳು ಆಕಾಶಗಳು, ನಡುವಿನ ಮೋಡ ತುಂಬಿರುವ ಮುಗಿಲಿನಲ್ಲಿ ನೋಯುವ ಎದೆಯನ್ನು ಮರೆತು ಬರೆಯುವ ಖುಷಿಯನ್ನು ಅನುಭವಿಸುತ್ತಿರುವೆ. ಯಾಕೋ ಆ ಪುಟ್ಟ ಬಾಲಕಿಯಂತೆ ಮನಸ್ಸು ಮತ್ತೆ ಈಗ ಕುಣಿಯತೊಡಗಿದೆ.

ಅಪ್ಪನ ನೆನಪಾಗುತ್ತಿದೆ. ಪುಟ್ಟ ಹುಡುಗಿಗೆ ಯಕ್ಷಗಾನ ಕುಣಿತ ಕಲಿಸುತ್ತಾ ನನ್ನ ಮಾತುಗಳನ್ನು ತಿದ್ದುತ್ತಾ, ದಿನಕ್ಕೆ ನೂರು ಕಥೆ ಹೇಳಿ ನನ್ನನ್ನು ವಿಸ್ಮಯ ಲೋಕದಲ್ಲಿ ಅದ್ದಿ ಮುಳುಗಿಸುತ್ತಿದ್ದ ಅಪ್ಪನೊಟ್ಟಿಗೆ ಆ ಪುಟ್ಟ ವಯಸಿನಲ್ಲಿ ರಂಗಸ್ಥಳವನ್ನೂ ಹತ್ತಿದ್ದೆ. ಆಗ ನನಗೆ ಎಂಟೋ ಹತ್ತೋ ವಯಸ್ಸಿರಬೇಕು. ತುಳುನಾಡ ಸಿರಿ ಎಂಬ ಒಂದು ತುಳು ಯಕ್ಷಗಾನ ಪ್ರಸಂಗ. ನನ್ನ ಅಪ್ಪನದು ಸಿರಿಯ ಪಾತ್ರ. ನನ್ನದು ಸಿರಿಯ ಮಗ ಕುಮಾರನ ಪಾತ್ರ. ಸಣ್ಣ ಮಗುವಿಗೆ ಕಥೆಯನ್ನು ವಿವರಿಸಿ ಕುಮಾರನ ಬಾಯಲ್ಲಿ ಬರಲೇಬೇಕಾದ ಒಂದು ಉದ್ದದ ದೊಡ್ಡ ಮಾತನ್ನು ಅಪ್ಪ ಉರುಹೊಡೆಸಿದ್ದರು.

ಅಂದು ಎಲ್ಲೂರಿನಲ್ಲಿ ತುಳುನಾಡ ಸಿರಿ ಆಟ. ಸಂಜೆಯ ಹೊತ್ತು ಉಡುಪಿಯಿಂದ ಎಲ್ಲೂರಿಗೆ ಹೋಗುವ  ಬಸ್ಸಲ್ಲಿ ನಾವಿಬ್ಬರೂ ಕೂತಿದ್ದೆವು. ಅಪ್ಪ ಹೇಳಿಕೊಟ್ಟಿದ್ದ ಅದೇ ಉದ್ದದ  ಮಾತನ್ನು ಎಲ್ಲೂರು ತಲುಪುವ ತನಕ ನಾನು ಹೇಳುತ್ತಲೇ ಇದ್ದೆ. ಆ ಮುಸ್ಸಂಜೆಯ ಹೊತ್ತು ಆ ಚಂದದ ಹಳೆಯ ಬಸ್ಸು, ಬಸ್ಸಲ್ಲಿ ಕೂತು ನನ್ನನ್ನು ನೋಡುತ್ತಿದ್ದ ಜನರು, ಎಲ್ಲವೂ ಸರಿ ಇದೆ ಎಂದು ತಲೆ ಆಡಿಸುತ್ತಿದ್ದ ಅಪ್ಪ…. ಅಷ್ಟರಲ್ಲಿ ಎಲ್ಲೂರು ಬಂದಿತ್ತು. ಬಸ್ಸು ಇಳಿಯುತ್ತಿದ್ದಂತೆ ಅಪ್ಪ ನನಗೊಂದು ಬ್ಯಾನರು ತೋರಿಸಿದರು. “ಕುಮಾರಿ ನಾಗಶ್ರೀಯವರಿಂದ ಕುಮಾರನ ಪಾತ್ರವನ್ನು ನೋಡಲು ಮರೆಯದಿರಿ” ಎಂದು ದೊಡ್ಡದಾಗಿ ಬರೆದಿತ್ತು. ಎಂತಹ ಪುಳಕವದು!

ಸಂಜೆ, ಎಲ್ಲೂರು ದೇವಸ್ಥಾನದ ವಿಶ್ವನಾಥನಿಗೆ ಅರ್ಧ ಸುತ್ತು ಹೊಡೆದು ತಿರುಗಿ ಪೂರ್ಣಗೊಳಿಸುವ ಮೊದಲು ತೆಂಗಿನಕಾಯಿ ಎಳನೀರು ಬಿದ್ದ ನೀರಲ್ಲಿ ಜಾರಿ ನಾನು ಏಟು ಮಾಡಿಕೊಂಡಿದ್ದೆ. ‘ದೇವರಿಗೊಂದು ಉದ್ದಂಡ ನಮಸ್ಕಾರವಾಯಿತು ಬಿಡು’, ಎಂದು ನಕ್ಕ ಅಪ್ಪ ಕುಮಾರನ ವೇಷ ಹಾಕಲು ಕರೆದುಕೊಂಡು ಹೋದರು. ನೀಲಿ ಬಣ್ಣದ ಜರಿಯಂಚಿನ ಕಚ್ಚೆ ಉಟ್ಟು ನಾಮ ಹಾಕಿಕೊಂಡ ನನಗೆ, ತುಳುನಾಡಿನ ದೈವ ಸಿರಿಯ ಮಗ ಕುಮಾರನೇ ಮೈಹೊಕ್ಕ ಹಾಗೆ ಅನ್ನಿಸುತ್ತಿತ್ತು. ಅಪ್ಪ ಆಗಲೇ ಸಿರಿಯ ವೇಷ ಧರಿಸಿ  “ಮುದ್ದೂ, ಜಾಗೃತೆ, ನಾನು ಹೋಗುತ್ತೇನೆ” ಎಂದು ರಂಗಸ್ಥಳಕ್ಕೆ ಹೊರಟು ಹೋಗಿದ್ದು ಕನಸಿನಲ್ಲಿ ನಡೆದುಹೋದಂತೆ ಕಾಣಿಸಿತ್ತು. ನನ್ನ ಎದೆ ಡವಗುಟ್ಟುತ್ತಿತ್ತು. ಗೆಜ್ಜೆಕಟ್ಟಿಕೊಂಡು ರಂಗಸ್ಥಳದತ್ತ ನಡೆದವಳು ಇನ್ನೊಂದು ಸಲ ಎಡವಿ ಬಿದ್ದೆ. ವೇಷಕಟ್ಟಿದ್ದವರು, “ಏಳಿ ಮಗಾ, ದೇವರಿಗೆ ಇನ್ನೊಂದು ನಮಸ್ಕಾರ ಆಯಿತು, ಹೋಗಿ ಬನ್ನಿ” ಎಂದು ಜೋರಾಗಿ ನಕ್ಕು ಮೈತಡವಿ ನನ್ನನ್ನು ಕಳುಹಿಸಿದ್ದರು. ನಾನು ರಂಗಸ್ಥಳವನ್ನು ಹತ್ತುವ ಹೊತ್ತಲ್ಲಿ ರಂಗದ  ಎಡ ಭಾಗದಲ್ಲಿ ಗಾಜಿನ ಚೂರುಗಳು ಬಿದ್ದಿರುವುದನ್ನು ತನ್ನ ಕಡೆಗಣ್ಣಿಂದ ನೋಡುತ್ತಿದ್ದ ಅಪ್ಪ   ಎಲ್ಲಿ ಮಗಳ  ಕಾಲಿಗೆ ಗಾಜಿನ ಚೂರುಗಳು ಚುಚ್ಚುವುದೋ ಎಂದು ಅತ್ತ ಕುಣಿಯಲೂ ಆಗದೆ ಇತ್ತ ನಿಲ್ಲಿಸಲೂ ಆಗದೆ  ಚಡಪಡಿಸುತ್ತಿದ್ದರಂತೆ. ಇದು ಅಪ್ಪ ನನಗೆ ಆಮೇಲೆ ಹೇಳಿದ್ದು, ಎಷ್ಟೋ ವರ್ಷಗಳ ನಂತರ. ನಾನು ಕವಿತೆಗಳನ್ನ ಬರೆಯಲು ಶುರುಮಾಡಿದ ಮೇಲೆ.

(ಉಡುಪಿ ಪಾಡಿಗಾರಿನ ಮನೆ)

ನನಗೆ ಈಗ ನೆನಪಾಗುತ್ತಿರುವುದು ಸಿರಿಯ ಪಾತ್ರದಲ್ಲಿ ಕುಣಿಯುತ್ತಿದ್ದ ಅಪ್ಪನ ನೃತ್ಯದ ಕಾಲುಗಳು, ಮಗಳು ರಂಗಸ್ಥಳವ ಏರುವುದನ್ನು ತಾಯಿಯಂತೆ ನಿರುಕಿಸುತ್ತಿದ್ದ ಬಣ್ಣ ಹಚ್ಚಿದ್ದ ಅವರ ಕಣ್ಣುಗಳು, ಹೊರಗಿನ ಕತ್ತಲು ಮತ್ತು ರಂಗಸ್ಥಳದ ಬೆಳಕಲ್ಲಿ ಕುಮಾರನಾಗುತ್ತಾ ಹೆಜ್ಜೆ ಇಕ್ಕುತ್ತಿದ್ದ ನನ್ನ ಪುಟ್ಟಪಾದಗಳು. ಅಪ್ಪ ಉರುಹೊಡೆಸಿದ್ದ ಆ ಉದ್ದದ ದೊಡ್ಡ ಮಾತು ಮುಗಿದಾದ ಮೇಲೆ  ಸಿರಿ ತನ್ನ ಮಗು ಕುಮಾರನನ್ನು ಬಿಟ್ಟು ಹೋಗುವ ಸಂದರ್ಭ. ಅಲ್ಲಿ ಸಿರಿಯ ಸೇವಕಿ ದಾರುವೂ ಇರುತ್ತಾಳೆ. ಮೂವರೂ ಬಿಟ್ಟುಹೋಗಿ ದೈವಗಳಾಗುವ ಸನ್ನಿವೇಷ. ಎಲ್ಲರೂ ಜೋರಾಗಿ ಅಳಬೇಕು. ಅಪ್ಪ ಮೊದಲೇ “ಅಲ್ಲಿ ನಿಜವಾಗಿ ಅಳಬೇಕು ಸುಮ್ಮನೆ ಅತ್ತ ಹಾಗೆ ಮಾಡಬಾರದು”, ಎಂದು ಸಾರಿ ಹೇಳಿದ್ದು ನೆನಪಾಗಿ ಮತ್ತೆ ಮತ್ತೆ ವಿನಾಕಾರಣ ಬಿಕ್ಕಿ ಅಳುತ್ತಿದ್ದೆ. ನನ್ನ ಕಾಲಿಗೆ ಗಾಜಿನ ಚೂರು ತಾಗಿರುವುದನ್ನು ಊಹಿಸಿಕೊಂಡು ಅಪ್ಪ ಇನ್ನೂ  ಸಿಕ್ಕಾಪಟ್ಟೆ ಅಳುತ್ತಿದ್ದರಂತೆ. ಅವರು ಸಿರಿಯಾಗಿ ಕುಮಾರನಿಗಾಗಿ ಅಳುತ್ತಿರುವರೆಂದು ಊಹಿಸಿ ಹೆದರಿಕೆಯಲ್ಲಿ ನಾನು ಮತ್ತೂ ಅಳುತ್ತಿದ್ದೆ. ಈ ನಡುವೆ ನಮ್ಮಿಬ್ಬರ ಅಳುವಿಗೆ ಸರಿಸಾಟಿಯಾಗುವಂತೆ ಅಳುತ್ತಿದ್ದ ಸೇವಕಿ ದಾರು!! ಎಂತಹ ಸಂದರ್ಭವದು. ನಿಜ ಯಾವುದು? ಸುಳ್ಳು ಯಾವುದು? ಯಾರು ಅಳುತ್ತಿದ್ದುದ್ದು ಯಾಕಾಗಿ ಎಂದು ಯಾರ ಅರಿವಿಗೂ ಬಾರದೆ ನಡೆದುಹೋಗುತ್ತಿದ್ದ ಜಗನ್ನಿಯಾಮಕನ ಆಟದಂತಹ ಒಂದು ಪ್ರಸಂಗದಂತಿತ್ತು. ನನಗೆ ಯಾಕೋ ಇದೀಗ ಎದುರುಗಡೆ ಕುಳಿತಿದ್ದ ಪ್ರೇಕ್ಷಕರ ಕಣ್ಣೀರು ಕಾಣಿಸಿಕೊಳ್ಳುತ್ತಿದೆ. ಈ  ನಡುವೆ ಬರುತ್ತಿರುವ ಮೊಂಡು ಮಗುವಿನ ಕವಿತೆಯ ಕುರಿತ ಈ ಮಾತುಗಳು. ಆ ಹೊತ್ತಲ್ಲಿ, ನನ್ನ ಪುಟ್ಟ ಪಾದಗಳಿಗೆ ಚುಚ್ಚಿದ್ದ ಗಾಜಿನ ಚೂರುಗಳು ಇಷ್ಟು ಕಾಲ ಅಲ್ಲೇ ಮೂಳೆಯ ಮಜ್ಜೆಯೊಳಗೆ ಸುಮ್ಮನೆ ಕುಳಿತು ಇದೀಗ ನನ್ನನ್ನು ನೋಯಿಸುತ್ತಿದೆಯಲ್ಲಾ ಅನಿಸುತ್ತಿದೆ. ಕವಿತೆಯೂ ಸೇರಿದಂತೆ ಈ ಎಲ್ಲವೂ ಯಾರು ಆಡಿಸುತ್ತಿರುವ ಆಟವಿರಬಹುದು?

ಅಪ್ಪ “ದೇವೀಮಹಾತ್ಮೆ” ಪ್ರಸಂಗದಲ್ಲಿ  ಶ್ರೀದೇವಿಯ ವೇಷ ಹಾಕುತ್ತಿದ್ದರು. ರಂಗಸ್ಥಳಕ್ಕೆ ಹೋಗುವ ಮೊದಲು ಸಭಿಕರ ನಡುವೆ ಆಟ ನೊಡುತ್ತಿದ್ದ ನನ್ನ ಬಳಿ ಬಂದು ತಲೆ ನೇವರಿಸಿ “ಆಟ ನೋಡು ಮುದ್ದೂ, ನಿದ್ದೆ ಮಾಡಬೇಡ”, ಎಂದು ಹೇಳುತ್ತಿದ್ದರು. ಹಾಗೆ ಹೇಳಿ ಹೋಗಿದ್ದು ನನ್ನ ಅಪ್ಪನಾ ಅಥವಾ ನಿಜವಾದ ದೇವಿಯಾ ಎಂದು  ನನಗೆ ಗಾಬರಿಯಿಂದ ಸಂಕೋಚವಾಗುತ್ತಿತ್ತು.

ರಂಗಸ್ಥಳದ ಬಳಿ ಉಯ್ಯಾಲೆಯಲ್ಲಿ ತೂಗುತ್ತಾ ಕುಳಿತುಕೊಳ್ಳುವ ದೇವಿ, ಅವಳ ಹಣೆಯಲ್ಲಿ ಕೆಂಪು ಬಣ್ಣದ ಅರ್ಧಚಂದ್ರ ತಿಲಕ, ಆ ತಿಲಕ ನಾನೇ ಆದ ಹಾಗೆ, ಆ ರಾತ್ರಿಯಲ್ಲಿ ಚಕ್ರತಾಳ, ಚೆಂಡೆಯ ಪೆಟ್ಟು, ಜಾಗಟೆ, ಏರು ಪದ್ಯ ಈಗಲೂ ನನ್ನ ಸಾಯುತ್ತಿರುವ ಕೋಶಗಳಿಗೆ ಜೀವ ಭರಿಸುತ್ತವೆ. ನನ್ನ ದೇಹವೆಲ್ಲಾ ಸೆಟೆದು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಒಳಗೆ ಕುಟುಕುವ ಸಾವಿನಂತಹ ಚೇಳುಗಳನ್ನು ಸುಮ್ಮನಿರಿಸುತ್ತದೆ, ಈ ಕಲ್ಲಾಗುತ್ತಿರುವ ಜೀವವನ್ನು ಮೃದುಗೊಳಿಸುತ್ತದೆ. ನಾನೇ ಮರೆತು ಹೋಗಿದ್ದ ಗಾಜಿನ ಚೂರುಗಳನ್ನು ನೀನು ಕವಿತೆಗಳ ಮೂಲಕ ಮತ್ತೆ ನೆನಪಿಸುತ್ತಿರುವೆಯಲ್ಲಾ ಯಾಕೆ ಮುದ್ದೂ ಎಂದು ಅಪ್ಪ ಕೇಳುತ್ತಿರುವ ಹಾಗೆ ಈಗ ಅನ್ನಿಸಿ ನಾನು ಮಗುವಾಗುತ್ತಿರುವೆ. ಯಾವುದೋ ಕಾಲದ ಮರೆತಿದ್ದ ಸುಖ ಇನ್ಯಾವುದೋ ಯುಗದಲ್ಲಿ ನೋವಾಗಿ ಕಾಡುವುದಲ್ಲಾ! ಮನೆಯಲ್ಲಿ ಅಪ್ಪನಾಗಿರುವ ನನ್ನ ಅಪ್ಪ ದೇವಿಯಾಗಿ ಉಯ್ಯಾಲೆಯಲ್ಲಿ ತೂಗುತ್ತಿರುವುದು, ನಾನು ಅಕಾರಣವಾಗಿ ಬರೆಯಲು ಶುರುಹಚ್ಚಿದ್ದ ನಕ್ಷತ್ರ ಕವಿತೆಗಳನ್ನು ನೆನೆಯುವ ಹೊತ್ತಲ್ಲಿ ಕಾಲದ ಈ ಆಟಗಳು ನೆನಪಾಗುತ್ತಿರುವುದು. ಯಾವ ಲೋಕದಲ್ಲಿ ಯಾವ ಪಾತ್ರಗಳಾಗಿ ನಾವೆಲ್ಲ ಬದುಕುತ್ತಿದ್ದೇವೆ? ಯಾವುದಿರುವುದು ಅದು  ನನ್ನನ್ನು ವಿನಾಕಾರಣ ಈ ಕಾಲವಲ್ಲದ ಕಾಲದಲ್ಲಿ ಅಳಿಸುತ್ತಿರುವುದು?

ಊರ ಕಡೆ ಹೋದಾಗಲೆಲ್ಲ ನಾನು  ಊರಿನ ಹಳೆಯ ಆಕಾಶಕ್ಕಾಗಿ ಹುಡುಕುತ್ತಿದ್ದೆ. ಎಲ್ಲ ಅರಿವನ್ನು ನನಗೆ ನೀಡುತ್ತಿದ್ದ, ಬೇಕೆಂದಾಗ ಅಪ್ಪಿಕೊಳ್ಳುತ್ತಿದ್ದ ನನ್ನ  ಎಂದಿನ  ಅದೇ ಆಕಾಶ. ಒಂದು ಬೆಳ್ಳಂಬೆಳಗ್ಗೆ ನಮ್ಮ ಮನೆಗೆ ನೆಂಟನಂತೆ  ಒಂದು ಬಿಳಿಯ ಪಾರಿವಾಳ  ಬಂದು ಕೂತಿತ್ತು. ನಾನೂ ಅಪ್ಪ ಇಬ್ಬರೂ ಸೇರಿ ಅದನ್ನು ಹೇಗಾದರೂ ಮಾಡಿ ಹಿಡಿದು ಸಾಕೋಣವೆಂದು ಅಂದುಕೊಂಡಿದ್ದೆವು. ಅದರ ಮುಂದೆ ಹೆಸರುಕಾಳು, ಗೋದಿಕಾಳು ಇಟ್ಟು ಅದರ ಭಯವನ್ನು ಸ್ವಲ್ಪಸ್ವಲ್ಪವೇ ನಿವಾರಿಸಿ  ಮನೆಯ ಎದುರಿನ ದಳಿಯಲ್ಲಿ ಕೂರುವಂತೆ ಮಾಡಿದ್ದೆವು. ಮೊದಲ ದಿನ ನಮ್ಮನ್ನು ಕಂಡು ಹಾರಿಹೋಗಿದ್ದ  ಪಾರಿವಾಳ ಮರುದಿನ ಕಾಳುಗಳನ್ನು ತಿಂದು ಹೋಗಿತ್ತು. ಅದಕ್ಕೆಂದೇ ಒಂದು ಗೂಡು ಮಾಡಿಸಿ ಬಾವಿಕಟ್ಟೆಯ ಜಂತಿಯಲ್ಲಿ ಗೂಡನ್ನು ನೇತಾಡಿಸಿ ಬಾಗಿಲು ತೆರೆದು ಅದರ ಒಳಗೆ ಕಾಳುಗಳನ್ನಿರಿಸಿ ಅದು ಬಂದು ಕೂರಬಹುದೋ ಎಂದು ಕಾಯುತ್ತಿದ್ದೆವು. ಒಂದು ಸಂಜೆ ಅದು ನಿಜಕ್ಕೂ ಅದರೊಳಗೆ ಬಂದು ಕೂತಿತ್ತು. ನಾನು ಹಟ ಮಾಡಿ ಬಿಡದೆ ಗೂಡಿನ ಬಾಗಿಲು ಹಾಕಿಸಿದ್ದೆ. ಆದರೆ ನಾಳೆ ಬೆಳಗ್ಗೆ ಅದನ್ನು ಮತ್ತೆ ಹೊರಗೆ ಬಿಡಬೇಕು ಎಂದು ಅಪ್ಪ ಹೇಳಿದ್ದರು. ಅಚ್ಚರಿಯೆಂಬಂತೆ ಅದು ಹೊರಬಿಟ್ಟ ಮೇಲೂ ರಾತ್ರಿ ಅದೇ ಗೂಡಿನ ಮೇಲೆ ಕೂತಿತ್ತು. ಅದನ್ನು ನಾನು ‘ಬೆಳ್ಳೀ’ ಎಂದು ಕರೆಯುತ್ತಿದ್ದೆ.

ಹೀಗೆ ಬಂದ ಪಾರಿವಾಳ ನನ್ನದೇ ಹಕ್ಕಿಯಂತೇ ತನ್ನ ಮುದ್ದು ಗುಲಾಬಿ ಕೊಕ್ಕಲ್ಲಿ ನನ್ನ ಕೈ ಕುಕ್ಕುತ್ತಾ, ನನ್ನ ಭುಜದ ಮೇಲೆ ಕೂತುಕೊಳ್ಳುತ್ತಿತ್ತು. ಮನೆಯ ಒಳಗೆಲ್ಲಾ ಓಡಾಡುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಿಗೋ ಹೋಗುತ್ತಿತ್ತು. ಮತ್ತೆ ಮರಳಿ ಮನೆಗೆ ಬರುತ್ತಿತ್ತು. ಮನೆಯ ಮಾಡಿನ ತುದಿಯಲ್ಲಿ ಬಿಳಿಯ ದೇವತೆಯಂತೆ ಮಳೆಗೆ  ಗರಿಗಳನ್ನು ಅರಳಿಸಿ ಒಂದು ಒದ್ದೆ ಹೂವಂತೆ ಕೂರುತ್ತಿತ್ತು. ಮೇಲೆ ಯಾರಿಗೂ ಸಿಗದ ನನ್ನ ಹಕ್ಕಿ, ಮತ್ತು ಕೆಳಗೆ ಅಂಗಳದಲ್ಲಿ ಅದನ್ನು ನೋಡುತ್ತಾ ಕುಳಿತಿದ್ದ ನಾನು. ಸಂಜೆಯ ಹೊತ್ತು ಆ ದೊಡ್ಡ ಮನೆಯಲ್ಲಿ ನಾವಿಬ್ಬರೇ ಹಾಗಿರುತ್ತಿದ್ದೆವು. ಅದು ಅಲ್ಲಿಂದಲೇ ತನ್ನದೇ ಭಾಷೆಯಲ್ಲಿ ಏನೋ ಮಾತಾಡುತ್ತಿತ್ತು. ಅದು ಎಲ್ಲಿ ಹೋಗುತ್ತದೆ ಏನು ಮಾಡುತ್ತದೆ? ಅದರದು ಎಂತಹ ಗುಟ್ಟಿನ ಲೋಕ? ಎಂದು ನಾನು ಅಚ್ಚರಿಗೊಳ್ಳುತ್ತಿದ್ದೆ. ಒಂದು ಕ್ಷಣ ಅದು ನನ್ನದು ಎಂದು ಕೈಮೇಲೆ ಕೂರಿಸಿಕೊಂಡು ಅದರ ದುಂಡು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಂತೆ ,ಇನ್ನೊಂದು ಘಳಿಗೆ ಅದು ನನ್ನದಲ್ಲ ಅನ್ನಿಸುತ್ತಿತ್ತು. ಬೇಡವೆಂದರೂ ಅದು ನನ್ನ ಪ್ರಾಣದಲ್ಲಿ ಸೇರಿಹೋಗಿತ್ತು. ಬೇಕೆಂದಾಗ ಸಿಗದ ಹಕ್ಕಿ, ನಾನು ನನ್ನದೇ ಗುಂಗಲ್ಲಿ ಇದ್ದ ಯಾವುದೋ ಘಳಿಗೆ ತಾನೇ ತಾನಾಗಿ ನನ್ನ ಬಳಿ ಬಂದು ಕೂರುತ್ತಿತ್ತು. ‘ಹೋ ಬಂದೆಯಾ’, ಎಂದು  ಅದರ ಬೆಚ್ಚಗಿನ ಕೊಕ್ಕಲ್ಲಿ ಹಿತವಾಗಿ ಕಚ್ಚಿಸಿಕೊಳ್ಳುತ್ತಾ ‘ಇಲ್ಲೇ ಇರು ಹೋಗಬೇಡಾ’ ಎಂದರೆ ರಪ್ಪನೆ ಹಾರಿ ಹೋಗುತ್ತಿತ್ತು. ಎಂದಾದರೂ ಇದು ಸತ್ತು ಹೋದರೆ ಏನು ಮಾಡುವುದು ಎಂದು ಗಾಬರಿಯಾಗಿ ಅದನ್ನು ಕೈಯಿಂದ ಹಾರಿಸಿ ‘ಹೋಗು, ಬರಬೇಡ’ ಎನ್ನುತ್ತಿದ್ದೆ.

ಒಂದು ದಿನ ಹೀಗೆ ಹೋದ ಹಕ್ಕಿ ಮರಳಿ ಬರಲಿಲ್ಲ. ನಾನು ಅಳುತ್ತಿದ್ದೆ, ಕುಸಿಯುತ್ತಿದ್ದೆ. ಕೊನೆಗೆ ಒಂದು ದಿನ, ಪರವಾಗಿಲ್ಲ ಅದು ನನ್ನ ಕಣ್ಣಮುಂದೆ ಸಾಯಲಿಲ್ಲವಲ್ಲಾ ಎಂದು ಸುಮ್ಮನಾಗಿದ್ದೆ. ಆದರೂ ಆ ಬಿಳಿಯ ಪಾರಿವಾಳ ಹಕ್ಕಿ  ಕಾಣದೇ  ಹಾರಿಹೋದಾಗ ನನ್ನ  ಪ್ರಾಣಪಕ್ಷಿಯಂತಹದು ಹೊರಟು ಹೋದ ಹಾಗೆ ಅನ್ನಿಸುತ್ತಿತ್ತು. ನಾನು ಎಷ್ಟೋ ಸಂಜೆಗಳನ್ನು ಅಂಗಳದ ಜಗುಲಿಯ ಮೇಲೆ  ಅದಕ್ಕಾಗಿ ತಾಸುಗಟ್ಟಲೆ ಕಾಯುತ್ತಾ ಒಬ್ಬಳೇ ಕಳೆಯುತ್ತಿದ್ದೆ. ನುಣುಪು ಕೆಂಪು ನೆಲದ ನಡುವೆ ಅರಳಿದ ಕಮಲದ ಚಿತ್ರವಿದ್ದ ಜಗುಲಿಯ ಮೇಲಿನ ನನ್ನ ಏಕಾಂತವದು.

ನನ್ನ ಎಡಕ್ಕೆ ಕಾಣುತ್ತಿದ್ದ ತೆಂಗಿನ ತೋಟ, ಬಲಕ್ಕೆ ಕಣ್ಣು ಹೊರಳಿಸಿದರೆ ಬಾವಿಕಟ್ಟೆಯ ರಾಟೆಯ ನಡುವಿಂದ ದೂರದಲ್ಲಿ ಕಾಣುತ್ತಿದ್ದ ಪಂಜುರ್ಲಿ ದೈವದ ಕಲ್ಲು. ಹಾಗೆಯೇ ಮುಂದಕ್ಕೆ ನೋಡಿದರೆ ಸ್ವಲ್ಪ ದೂರದ ದೇವರ ಕಾಡಿನ ತಂಪಲ್ಲಿ ಕಾಣುತ್ತಿದ್ದ ನಾಗಬನ, ಮೇಲೆ ಬದಲಾಗುವ ಅದೇ ಆಕಾಶ, ಅದರ ಕೆಳಗೆ ಆಗಾಗ ಓಡಾಡುತ್ತಿದ್ದ ಊರಿನ ಪರಿಚಿತ ಮುಖಗಳು. ಯಾರಾದರೂ ಮಾತಾಡಿಸಿದರೆ ಎರಡು ಮಾತು ಇಲ್ಲವೇ ಸುಮ್ಮನೆ ಒಂದು ನಗುವಷ್ಟೇ. ಹಾಗೆಯೇ ಕೂತಿರುವುದು ಎಷ್ಟು ಹೊತ್ತೋ. ಅಪ್ಪನೋ ಅಮ್ಮನೋ ಕರೆದಾಗ ಓಹ್ ಕತ್ತಲಾಗಿದೆಯಲ್ಲಾ ಅನ್ನಿಸಿ ಒಳಗೆ ಹೋಗುತ್ತಿದ್ದೆ. ನಾನು ಒಳಗೆ ಬಂದ ಮೇಲೆ ಆ ಹಕ್ಕಿ ಅಲ್ಲಿ ಬಂದು ಕುಳಿತಂತೆ ಅನಿಸುತ್ತಿತ್ತು. ಮೊನ್ನೆಯೊಂದು ದಿನ ಆ ಬಿಳಿಯ ಪಾರಿವಾಳದ ಗೂಡು ಮನೆಯ ಅಟ್ಟದ ಮೇಲೆ ಸಿಕ್ಕಿತ್ತು. ನನ್ನ ಹಳೆಯ ಪುಸ್ತಕಗಳು, ಆಟಿಕೆಗಳೆಲ್ಲಾ ಅಲ್ಲೇ ಇದ್ದವು. ನನ್ನ ಹಳೆಯ ನೀಲಿ ಬಣ್ಣದ ಸೈಕಲಿನ ಮೇಲೆ ಮಗಳು ಕುಳಿತಿದ್ದಳು. ಈ ಮನೆಯಿಂದ ಹೋದ ಮೇಲೆ ಇಲ್ಲಿನ ಎಲ್ಲವನ್ನೂ ಬೆನ್ನ ಮೇಲೆ ಹೊತ್ತು ನನ್ನ ಪ್ರಯಾಣದ ನಡುವೆ ಇಳಿಸಿಕೊಳ್ಳುತ್ತಾ, ಮತ್ತೆ ಹತ್ತಿಸಿಕೊಳ್ಳುತ್ತಾ, ಇನ್ನೂ ಬಂಗಾರದ ಹಾಗೆ ಹೊಳೆಯುತ್ತಲೇ ಇರುವ ಇವನ್ನೆಲ್ಲಾ ಯಾರಿಗೆ ಹೇಳಿಕೊಳ್ಳಲಿ? ನನ್ನದಲ್ಲದ ನನ್ನ ಹಕ್ಕಿಯೊಂದು ಈಗಲೂ ನನ್ನನ್ನೂ ಹೀಗೆಯೇ ಕಾಡುವ ಈ ಪರಿಗೆ ಏನೆನ್ನಲಿ?

ಜೀವ ವಿಮಾನದಂತಹ ಹಾರುವ ಹಕ್ಕಿಯ ಹೊಟ್ಟೆಯೊಳಗೆ ನನ್ನದೇ ಪ್ರಾಣಭಯದಲ್ಲಿ ಕುಳಿತಿರುವೆ. ಬರೆಯುವುದೊಂದೇ ನಿನಗಿರುವ ಬದುಕುವ ದಾರಿ,  ಬರಿಬರಿ ಎಂದು ಇದನ್ನೆಲ್ಲ ಬರೆಸುತ್ತಿರುವ ಮುಖ್ಯಪ್ರಾಣನಂತಹವನ ನಿಸ್ತೇಜಗೊಂಡಿರಬಹುದಾದ ಕಣ್ಣುಗಳನ್ನು ಯೋಚಿಸಿಕೊಂಡು ನಿತ್ರಾಣಗೊಳ್ಳುತ್ತಿರುವೆ. ನಡು ಹಗಲಿನ ನೀಲ ಆಕಾಶದಲ್ಲಿ ವೈನು ಸುರಿಯುತ್ತಿರುವ ಗಗನ ಸಖಿ ಯಾಕೋ ನನ್ನನ್ನು ನಿಟ್ಟಿಸುತ್ತಿರುವಂತೆ ಅನಿಸಿ ಮತ್ತಷ್ಟು ವಿಹ್ವಲಗೊಳ್ಳುತ್ತಿರುವೆ. ನೇರಳೆ ಬಟ್ಟೆ ಧರಿಸಿರುವ ಅವಳು ಮತ್ತು ಬಿಳಿಯ ಪಾರಿವಾಳ, ನಾನು ಮತ್ತು ಕೈಗೆಟುಕಿ ಹಾರಿ ಹೋಗುತ್ತಿರುವ ಅದೇ ಬಿಳಿ ಪಾರಿವಾಳದಂತಹ ಕವಿತೆಗಳು. ಮತ್ತೆಲ್ಲಿ ಇವುಗಳನ್ನು ನಾನು ಹಿಂದಿನಂತೆ ನೇವರಿಸುವುದು?

(ಚಿತ್ರಗಳು:ಅಪಾರ)

ನಾನೊಂದು ತರಹದ  ಬೇಡುವವಳು, ದೀನಳು ಮತ್ತು ಪ್ರೇಮಿಸುವವಳು. ಈ ಜಗತ್ತು ಎಂತಹ ಪ್ರಾಣಶಕ್ತಿ, ಸಣ್ಣ ಕಲ್ಲ ಕಣದೊಳಗೂ,  ಬದಲಾಗುವ ತುಂಡು ಮೋಡದ ಒಳಗೂ, ಎಂತಹ ಪ್ರಾಣ! ಎಲ್ಲೆಲ್ಲೂ ಆವರಿಸಿರುವ ಮುಖ್ಯಪ್ರಾಣ, ಅವನ ಚೈತನ್ಯ, ಅವನ ಮುಂದೆ ನಮ್ರಳು ನಾನು. ಭಿಕ್ಷುಕಿಯಂತೆ ವಿನೀತಳು. ಈಗಲೂ ಅವನೇ  ನನ್ನ ಉಸಿರ ಆವೇಗವನ್ನು ಇಳಿಸುವವನು ಮತ್ತು ಏರಿಸುವವನು; ಅವನು ನೀಡಿದರೆ ಇರುವ ಈ ಪ್ರಾಣ! ಒಂದು ದಿನ ಕಡಲ ಬಳಿ ಕದ್ದೊಯ್ದು, ಮಧ್ಯಾಹ್ಯ್ನದ ಬಿಸಿ ಮರಳ ಮೇಲೆ ಮೋಹಿಸಿದವನು. ಯಾರದೋ ಬೆಟ್ಟ, ಇನ್ಯಾರದೋ ಇರುಳು, ಇನ್ನೊಂದು ದಿನ ಕೃಷ್ಣನ ರಥಬೀದಿಯ ಮೇಲೆ ಎತ್ತರಕ್ಕೆ ಹೊತ್ತೊಯ್ದು ನಕ್ಷತ್ರ ತೋರಿಸಿದವನು. ಮಗದೊಂದು ದಿನ, ನನ್ನ ಬಾಲ್ಯದಂತಹದೇ ಒಂದು ಗದ್ದೆ. ಮರದ ಕೆಳಗೆ ಅಂತಹದೇ ಒಂದು ಕಾಟು ದೈವ, ಮಳೆ ಹನಿಯುತ್ತಿತ್ತು. ನಾವಿರುವ ಲೋಕ ಪಾವನವಾಗುತ್ತಿತ್ತು; ದೈವಿಕವಾಗುತ್ತಿತ್ತು. ವಿಶಾಲವಾಗಿ ಕಣ್ಣು ತುಂಬುವಷ್ಟು ಗದ್ದೆ. ಒಂದೇ ಒಂದು ಹಸಿರಲ್ಲೇ ಎಷ್ಟೊಂದು ಹಸಿರು  ಬಣ್ಣಗಳು. ನಾನು ಪುಟ್ಟ ಕನ್ನಡಿಯ ಮುಂದೆ ಬಣ್ಣಗಳನ್ನು ಕಲಸುತ್ತಾ ಕಾಡಿಗೆ ತೀಡಿ ದೈವವಾಗುತ್ತಿದ್ದ ಹಾಗೆ. ದೂರದಲ್ಲಿ ಹಿತವಾದ ಚೆಂಡೆಯ ಸದ್ದು ಕೇಳಿದ ಹಾಗೆ. ರಂಗಸ್ಥಳ ಸಜ್ಜಾಗುತ್ತಿದ್ದ ಹಾಗೆ:  ತಾಯಂದಿರ ಹಾಗಿರುವ ನಾಟಿ ಕೆಲಸದ  ಹೆಂಗಸರ ಬಣ್ಣದ ಬಟ್ಟೆಗಳು, ತಲೆಯಲ್ಲಿ ಸಿಕ್ಕಿಸಿಕೊಂಡ ಮಾಸಿರುವ ಮಳೆಯ ಗೊರಬು. ಮೇಲೆ ಒಂದು ಲಯದಲ್ಲಿ ಹಕ್ಕಿಗಳು ಹಾರುತ್ತಿದ್ದರೆ ಗದ್ದೆಯ ಹುಣಿಯಲ್ಲಿ ಇವರು ಹಕ್ಕಿಗಳಂತೆ ನಡೆಯುತ್ತಿದ್ದರು. ಪಾದಕ್ಕೆ ಮೆತ್ತಿಕೊಳ್ಳುತ್ತಿರುವ  ಕರಗಿದ ಪ್ರೇಮದಂತಹ ಗದ್ದೆಯ ಕೆಸರು. ನನ್ನ ಬಳಿ, ಅವರ ಬಳಿ, ಆ ಗದ್ದೆ, ಮಳೆ, ಬಣ್ಣಗಳಲ್ಲಿ ಎಲ್ಲೆಂದರಲ್ಲಿ ತುಂಬಿದ ತುಂಟನೂ ಗಂಭೀರನೂ ಆದ ಮುಖ್ಯಪ್ರಾಣ. ಈ ಎಲ್ಲದರ ಮುಂದೆಯೇ ಕೆರಳುವ ಉನ್ಮಾದ, ಮಳೆಗೆ ಕಲಸಿ ಒಂದಾಗಿ ಹೋಗುತ್ತಿರುವ  ಉನ್ಮಾದ ಪ್ರೇಮದ ಬಣ್ಣಗಳು, ಈ ಸೃಷ್ಟಿ ಎಂಬುದು ಆಗಿರುವುದೇ ಈ ಘಳಿಗೆಗಲ್ಲವೇ ಮತ್ತೆ!! ಆ ದೈವ, ಹಕ್ಕಿಗಳು, ತಾಯಂದಿರು, ಆ ಮಳೆ ಇವೆಲ್ಲವೂ ಇರದಿದ್ದರೆ ಎಲ್ಲಿಯ ನಾವು? ಎಲ್ಲಿಯ ಆ ಅಮೃತ ಘಳಿಗೆ!!

ನಕ್ಷತ್ರ ತೋರಿಸಿದವನಿಗೆ ಸಾವಿರಾರು ನಕ್ಷತ್ರಗಳು, ನಾನಾದರೂ ಒಮ್ಮೊಮ್ಮೆ ಈ ಇಹದ ಸೊಕ್ಕು ಮುರಿವ ಚಕ್ರದಂತೆ ಎಲ್ಲವನ್ನು ಕತ್ತರಿಸುತ್ತಾ ನಾನೊಬ್ಬಳೇ ಬೇಕಾಗುವಷ್ಟು ಸಾಕು ನಿನಗೊಬ್ಬನಿಗೇ, ಎಂದು ರಕ್ಕಸಿಯ ಹಾಗೆ ಪ್ರೇಮಿಸುವವಳು. ಆದರೆ  ಅವನು ಪೊರೆಯಬೇಕಾಗಿರುವನು, ಈ ಜಗದ ಪ್ರಾಣವನ್ನು ಉಳಿಸಬೇಕಾಗಿರುವನು. ಎಳಸು ಹಟಮಾರಿ ನಕ್ಷತ್ರವನ್ನು ಕಂಡು ನಕ್ಕು ನಿನಗಿನ್ನೂ ಎಲ್ಲಾ ಅರ್ಥವಾಗಬೇಕಾಗಿದೆ ಮಗುವೇ ಎಂದು ಮುದ್ದುಗಯ್ಯುವನು. ಈ ನಕ್ಷತ್ರ ಜೋರು ಹುಡುಗಿಯಾಗಿದ್ದಿರಬಹುದು ಆದರೆ ಎಂದೂ ಜಾಣೆಯಾಗಿರಲಿಲ್ಲ.

ಕನಸಲ್ಲೇ ಇರುತ್ತಿದ್ದವಳು; ಎಂದೋ ಆಗುವ ಎಚ್ಚರದಲ್ಲಿ ಓಹ್ ಈ ಲೋಕ ಹೀಗೆಲ್ಲಾ ಇರುವುದಲ್ಲಾ ಅನ್ನಿಸಿ ಏನೂ ಆಗದವಳಂತೆ ಮತ್ತೆ ಅದೇ ಕನಸಲ್ಲಿ ಓಡಾಡುತ್ತಿದ್ದಳು. ಪ್ರೇಮದ ಉತ್ಕಟತೆ, ಅಸೂಯೆ, ತಿರಸ್ಕಾರ, ಹಠ, ಮತ್ತದೆಲ್ಲವನ್ನೂ ಮರೆತು ಭಕ್ತಿಯ ದೀನತೆಯೊಳಗೆ ಅಡಗಿ ಕೂತಿದ್ದವಳು. ಪ್ರಾಣವಿರುವುದೇ ಒಂದು ದಿನ ಹಾರಿಹೋಗುವುದಕ್ಕಲ್ಲಾ ಎಂದು ಮತ್ತೆ ಮತ್ತೆ ದೀರ್ಘ ಉಸಿರಾಡುತ್ತಾ ಪ್ರಾಣನ ಭಿಕ್ಷುಕಿಯಂತಿರುತ್ತಿದ್ದವಳು. ಯಾಕೆ ಇಷ್ಟೆಲ್ಲಾ ಪ್ರೀತಿ? ಈ ಲೋಕದ ಮೇಲೆ, ಪ್ರೇಮದ ಮೇಲಿನ ಪ್ರೇಮವೇಕೆ ಮತ್ತೆ? ಎಂತಹ ತೀಕ್ಷ್ಣ ಬದುಕದು! ಪ್ರೀತಿಯದು! ರಕ್ತ ಮಾಂಸ, ತೊಗಲು, ಎಂಜಲು ಕೈಗೆ ಸಿಗುವಂತದ್ದು ಕಾಣುವಂತದ್ದು ಕೇಳುವಂತದ್ದು ಎಲ್ಲವನ್ನೂ ಇರಿದು ಮುರಿದು ಎಲ್ಲೋ ಲೀನಗೊಂಡಂತೆ, ಪುಡಿಯಾದಂತೆ, ಏನೂ ಇಲ್ಲದಂತೆ. ಓಹ್ ದೇವರೇ ಇದೆಲ್ಲಾ ಹೀಗೇ ಇರುವಾಗಲೇ ಎಲ್ಲಿಯದೋ ದುಷ್ಟತನವೊಂದು ಹೊಕ್ಕಿ ಕುಳಿತಿದೆಯಲ್ಲಾ! ಬರಿದಾಗಿರುವುದನ್ನು ಮತ್ತೆ ತುಂಬಿಸುತ್ತಿದೆ, ಮತ್ತೆ ಅದು ನನ್ನನ್ನೇ ಕಬಳಿಸಲು ಹೊರಟಿದೆ!

(ಯಕ್ಷಗಾನ ವೇಷದಲ್ಲಿ ಬಾಲಕಿ ನಾಗಶ್ರೀ)

ನಿಮ್ಮ ಕೈಯಲ್ಲಿರುವ ಈ ನಕ್ಷತ್ರ ಕವಿತೆಗಳು ಹೀಗೊಂದು ಋತದಂತೆ ಇದ್ದವು. ನಾನು ಬದಲಾದರೂ, ಯಾರು ಬದಲಾದರೂ ಇವು ಇರುವಂತೆಯೇ ಇರುವವು. ಸಾಹಿತ್ಯಕ್ಕೆ ಲೆಕ್ಕಾಚಾರಗಳಿದ್ದರೂ, ಕವಿತೆಗಳಾಗುವುದಕ್ಕೆ ಗುಣಗಳೇನಾದರು ಇದ್ದರೂ ಇರದಿದ್ದರೂ  ಈ ಕವಿತೆಗಳು ಇನ್ನು ಮುಂದೆಯೂ ಹೀಗೆಯೇ ಇರುವವು. ಇವುಗಳೆಲ್ಲಾ ಅಂದು ಹೇಗಿತ್ತೋ ಹಾಗೆಯೇ ಇದೆಯಲ್ಲಾ, ಆದರೆ ಎಲ್ಲೋ ನಾನೀಗ  ಹಾಗಿಲ್ಲವಲ್ಲಾ ಎಂದೆನಿಸುತ್ತದೆ. ಒಮ್ಮೊಮ್ಮೆ ಆಲಸ್ಯದಿಂದ ಒಮ್ಮೊಮ್ಮೆ ಅಚ್ಚರಿಯಿಂದ  ಒಂದು ವೇಳೆ ಇವೆಲ್ಲಾ  ಶುದ್ಧ ಹುಚ್ಚುಗಳಾಗಿತ್ತಾ ಎಂದುಕೊಳ್ಳುತ್ತೇನೆ. ಬಹುಶಃ ಇವುಗಳು ಪರಿಶುದ್ದ ಪ್ರೇಮಿಯೊಬ್ಬಳ ಅಷ್ಟೇನೂ ಪರಿಶುದ್ಧವಲ್ಲದ ವ್ಯಾಮೋಹಗಳಾಗಿತ್ತು, ಮತ್ತು ಇವನ್ನು ಇನ್ನೂ  ಬರೆಯಬಹುದಿತ್ತು ಎಂದು ಹುಚ್ಚುಹುಚ್ಚಾಗಿ ಅಂದುಕೊಳ್ಳುತ್ತೇನೆ.  ಯಾವುದೋ ಮುಖ್ಯಪ್ರಾಣನ ಹುಚ್ಚು. ಎಲ್ಲಾ ಕ್ಷುದ್ರ ಕಣದೊಳಗೆ ಚುಕ್ಕಿಯಂತೆ ಇಡುತ್ತಿದ್ದ ನನ್ನ ಎಲ್ಲಿಯೂ ನಿಲ್ಲದ ಪ್ರೀತಿಯ ಹುಚ್ಚು. ನೋಡಿದ್ದು ಕಂಡಿದ್ದು, ಮುಟ್ಟಿದ್ದು, ಮೂಸಿದ್ದು, ಎಲ್ಲವೂ ನೈವೇದ್ಯದ ಸೀಕರಣೆಯಂತೆ, ವಿರಹದ ಹುಡುಗಿಯ ವೈರಾಗ್ಯದಂತೆ, ಅಂತರಾಳದ ಸಿಡಿಯುವ ವಡಬಾಗ್ನಿಯಂತೆ, ಆ ಜೋರಿನ ಹುಡುಗಿಯ ತುಂಟಾಟಗಳು ಈಗ ಎಲ್ಲಿ ಮರೆಯಾಯಿತು? ಕತ್ತಿ ಝಳಪಿನಂತಹ ಕಿಡಿಗಳು ಈಗ ಎಲ್ಲಿ ಆರಿಹೋಯಿತು? ಬೇಕೆಂದಾಗ ಧುಮುಕುವ ಅಳುವೂ ಈಗ ಇಲ್ಲವಲ್ಲ. ಹಳೆಯ ಆಕಾಶ, ಹಳೆಯ ಮರಗಳು ಹಗಲು-ಇರುಳು, ಎಲ್ಲವೂ ಹಾಗೇ ಇದ್ದರೂ ಏನೋ ಒಂದು ಕಳೆದುಹೋಗಿದೆಯಲ್ಲಾ. ಇದೆಲ್ಲಾ ಹೀಗಾಗುವುದಕ್ಕೆ ಯಾರೂ ಕಾರಣರಲ್ಲವಲ್ಲಾ ಎನ್ನುವುದೂ ಈ ಕವಿತೆಗಳ ತಬ್ಬಲಿಯ ಹಾಗಿರುವ ಅಸಹಾಯಕತೆ. ಇಲ್ಲಿರುವ ಈ ನನ್ನ ಕವಿತೆಗಳು ಬೇಡುವವು  ದೀನವಾಗಿರುವುವು  ಮತ್ತು ಪ್ರೇಮಿಸುತ್ತಿರುವವು.  ಏನೇ ಆಗಲಿ ಇವೆಲ್ಲಾ ಈಗ ಒಂದು ನಿರಂತರ ಸಂಗೀತದಂತೆ ಕೇಳಿಸುತ್ತಿದೆ. ಅಂತ್ಯವೊಂದನ್ನು ತೋರಿಸಿದಂತೆ ದೂರದ ಶಿಖರದ ಆರಂಭವನ್ನೂ ಕಾಣಿಸುತ್ತಿದೆ. ನನಗೆ ಏನೆಲ್ಲಾ ಆಗುತ್ತಿರುವುದು ಈ ಕವಿತೆಗಳ ಖುಷಿಯಲ್ಲಿ ಮರೆತೇ   ಹೋಗುತ್ತಿರುವಾಗ ಮೆತ್ತಗಿನ ಚಾಟಿ ಏಟೊಂದು ಮತ್ತೆ ಬೆಚ್ಚಿ ಬೀಳಿಸುತ್ತದೆ.

ಕೆಂಡಸಂಪಿಗೆಯಲ್ಲಿ ಈ ಕವಿತೆಗಳೆಲ್ಲಾ ಪ್ರಕಟವಾಗುತ್ತಿದ್ದ ಕಾಲ ತುಂಬ ಮಜವಾಗಿತ್ತು, ಅನಾಮಿಕವಾದ ತುಂಟ ತೊರೆಯೊಂದರಂತೆ ಇದ್ಯಾವುದೂ ನನದಲ್ಲವೇ ಅಲ್ಲ ಎಂಬಂತೆ ಬೆಚ್ಚಗೆ ಹೊದ್ದು, ಮಲಗಿ ನನಗೆ ನಾನೇ ಕಣ್ಣು ಮಿಟುಕಿಸುತ್ತಾ ನನ್ನನ್ನು ಬೈಯುತ್ತಿದ್ದವರಿಗೂ ಆನಂದಿಸುತ್ತಿದ್ದವರಿಗೂ ಅವರ ಕಮೆಂಟು ಕೀಟಲೆಗಳನ್ನು ಕಳ್ಳ ನಗೆ ನಕ್ಕು ಅನುಭವಿಸುತ್ತಿದ್ದೆ. ಎಂತಹ ಗಮ್ಮತ್ತಿನ ದಿನಗಳವು! ಈ ಲೋಕಕ್ಕಿರಲಿ, ಕೊನೆಗೆ ನನಗೆ ನಾನೇ ಯಾರೂ ಆಗಿರದ ದಿನಗಳವು! ಈ ಹಗುರ ಲೋಕದಲ್ಲಿ ನಾನು ಗಾಳಿಯ ಹಾಗಿದ್ದ ಕಾಲವದು. ನಕ್ಷತ್ರದ ದೆಸೆಯಿಂದ ಹುಟ್ಟಿದ್ದ ನಕ್ಷತ್ರದಾಸ, ನಕ್ಷತ್ರಿಕ, ಮತ್ತೊಂದು ನಕ್ಷತ್ರ, ಇನ್ನೊಂದು ನಕ್ಷತ್ರ, ಎಲ್ಲಾ ನಕ್ಷತ್ರಗಳಿಗೂ, ನಕ್ಷತ್ರವನ್ನು ಪ್ರೀತಿಸಿದ ಎಲ್ಲಾ ಕನ್ನಡದ ಕುಮಾರರಿಗೂ, ಪ್ರೀತಿಯಿಂದ ಉರಿಯುತ್ತಿದ್ದ ಎಲ್ಲಾ ಲಜ್ಜಾಸಿರಿ ಸ್ತ್ರೀಯರಿಗೂ, ಕೆಟ್ಟಕವಿತೆಯೆಂದೂ, ಇದು ಕವಿತೆಯೇ ಅಲ್ಲವೆಂದು ಕುಟುಕುತ್ತಿದ್ದ ಹಿರಿಯ ಕಿರಿಯ ಕಾವ್ಯ ಪರಿಣತ ಮತಿಗಳಿಗೂ ನನ್ನಪ್ರೀತಿಯ ಅಪ್ಪುಗೆ. ಇಲ್ಲಿರುವ ಈ ಕವಿತೆಗಳು ಕೇವಲ ಮಾತ್ರಳಾದ ಹೆಣ್ಣೊಬ್ಬಳು ಬರೆಯತಕ್ಕಂತಹವಲ್ಲವೆಂದು, ಇವನ್ನೆಲ್ಲಾ ಕನ್ನಡದ ದೊಡ್ಡ ಪುರುಷನೊಬ್ಬರು ಬರೆದದ್ದೆಂದು ದಿಕ್ಕು ತಪ್ಪಿಸಿ ಆನಂದಿಸುತ್ತಿದ್ದ ಕನ್ನಡದ ಸನ್ಮನಸುಗಳಿಗೂ ಈ ಮೂಲಕ ನನ್ನ ಸಮಾಧಾನಗಳು.  ನನ್ನೊಳಗೆ ಯಾವುದೋ ವ್ಯಾಧನಂತೆ ಅಡಗಿಕೊಂಡಿದ್ದ ಇವುಗಳೆಲ್ಲಾ ಕ್ಷೀಣಿಸುತ್ತಿರುವ ನನ್ನ ಬೆರಳ ಸಂಧಿಗಳಲ್ಲಿ ಜಾರಿ ಹೋಗುತ್ತಿರುವ ನನ್ನ ಬದುಕಂತೆ  ಒಂದು ವ್ಯಾಧಿಯಂತೆ  ನನ್ನ ಅಪ್ಪಣೆಗೂ ಕಾಯದೆಯೆ ಹೊರಗೆ ಹರಿಯುತಿದೆ.

ಆಕಾಶವೆಂಬ ಹಗಲು ವೇಷಗಾರನ ಹೊಟ್ಟೆಯೊಳಗೆ ಮಿಸುಕಾಡುತ್ತಿರುವ ಬಾನ ಹಕ್ಕಿ ಅದರ ಒಡಲೊಳಗೆ ತಳಮಳಿಸುತ್ತಿರುವ ನಾನು. ಮನುಷ್ಯರೂ ಅಲ್ಲದ ದೇವರೂ ಅಲ್ಲದ, ಕಾಮವೂ ಅಲ್ಲದ ಪ್ರೇಮವೂ ಅಲ್ಲದ ಆಕಾಶವೂ ಅಲ್ಲದ ಭೂಮಿಯೂ ಅಲ್ಲದ, ಆರಂಭವೂ ಇಲ್ಲದ ಅಂತ್ಯವೂ ಇಲ್ಲದ, ಹಾದಿಯಿಲ್ಲದ ಹಾದಿಯಲ್ಲಿ ಏನೂ ಗೊತ್ತಿಲ್ಲದೆ ಬರೆಯುತ್ತಾ ಬಿಳಿಯ ಮುಗಿಲಿನ ಒಳಗೆ ಹಾದು ಹೋಗುತ್ತಿದ್ದೇನೆ. ನಿಮಗೆಲ್ಲರಿಗೂ ನಮಸ್ಕಾರ.

(ಪ್ರಕೃತಿ ಪ್ರಕಾಶನ ಹೊರತಂದಿರುವ ‘ನಕ್ಷತ್ರ ಕವಿತೆಗಳು’ ಕವಿತಾ ಸಂಕಲನಕ್ಕೆ ಕವಯಿತ್ರಿ ಬರೆದಿರುವ ಪ್ರಸ್ತಾವನೆಯ ಸಾಲುಗಳು ಇವು. ಕವನ ಸಂಕಲನವನ್ನು ಆನ್ ಲೈನ್ ನಲ್ಲಿ ಕೊಳ್ಳಬಯಸುವವರು ಈ ಕೊಂಡಿಯನ್ನು ಕ್ಲಿಕ್ಕಿಸಿ ವಿವರಗಳನ್ನು ತಿಳಿದುಕೊಳ್ಳಬಹುದು.)