ನೇಪಾಳದಲ್ಲಿರುವಂತೆ ಇಲ್ಲಿ ಕಝೀನೋಗಳಿಲ್ಲ.  ಥೀಮ್ ಪಾರ್ಕ್ ಗಳಿಲ್ಲ. ಥೈಲ್ಯಾಂಡಿನಲ್ಲಿರುವಂತೆ  ಪಂಜರಗಳಲ್ಲಿ ಪ್ರದರ್ಶಿತಗೊಳ್ಳುವ ಬಾಲವೇಶ್ಯೆಯರಿಲ್ಲ. ಕ್ಯಾಲ್ಕುಲೇಟರ್ ಗಳನ್ನು ಮುಖಕ್ಕೆ ಹಿಡಿದೇ  ಸರಕುಗಳ ಬೆಲೆ ಬಗ್ಗೆ ಚೌಕಾಸಿ ಮಾಡುವ ಚಾಲಾಕಿ ಹುಡುಗಿಯರಿಲ್ಲ. ಸಿಂಗಪುರದಲ್ಲಿರುವಂತೆ ಆಸ್ಪತ್ರೆಯಂತ ಸ್ವಚ್ಚತೆಯ ನಡುವೆಯೂ ಮಿಂಚುವ  ಮ್ಯಾಕ್ಡೊನಾಲ್ಡ್ಸ್, ಪೀಝಾ ಹಟ್ಗಳ ನಿಯಾನ್ ಸೈನುಗಳಿಲ್ಲ.  ಸಿಕ್ಕಿ೦ ನಲ್ಲಿರುವಂತೆ ಮಗ್ಗಗಳಲ್ಲಿ ಬಣ್ಣಬಣ್ಣದ  ಶಾಲುಗಳನ್ನ್ನು ನೇಯುತ್ತಾ ದಶಕಗಳಿಂದ ಮನೆಗೆ ಮರಳಲು ಕಾಯುತ್ತಿರುವ ನಿರಿಗೆ ಮುಖದ ಟಿಬೆಟನ್  ಮುದುಕಿಯರಿಲ್ಲ. ಲದಾಖ್‌ನಲ್ಲಿರುವಂತೆ ಮಾರುತಿ  ಜಿಪ್ಸಿಗಳಲ್ಲಿ ಕಡಿದಾದ ಪರ್ವತದ ತಿರುವುಗಳನ್ನು ಸುತ್ತಿ ಸುತ್ತಿ ಹತ್ತುತ್ತಿರುವಾಗ  ಪ್ರತಿ ಮೈಲುಗಲ್ಲುಗಳ ಮೇಲೂ ದೇಶಕ್ಕಾಗಿ ಕಾದಾಡಿ ಹತರಾದ ಯುವ  ಯೋಧರ  ಹೆಸರುಗಳಿಲ್ಲ. ಇದು ಭೂತಾನ.

ಭೂತಾನ ಭಾರತ, ನೇಪಾಳ, ಚೈನಾ, ಯಾವ ನೆರೆಹೊರೆಯ ದೇಶದಂತೆಯೂ ಅಲ್ಲ. ಎಲ್ಲೆಲ್ಲೂ ಆಕಾಶ ಮುಟ್ಟಲು ಹವಣಿಸುತ್ತಿರುವ ಬೃಹತ್ ಹಿಮ ಪರ್ವತಗಳು, ದಟ್ಟ  ಪೈನ್ ಗಿಡಗಳ  ತೋಪುಗಳು. ಇದುವರೆಗೂ ಪ್ರಪಂಚದ ಏಕೈಕ ಬೌದ್ಧ ಸಾಮ್ರಾಜ್ಯವಾಗಿದ್ದು ಇದೇ ಪ್ರಜಾ ಪ್ರಭುತ್ವಕ್ಕೆ ಕಾಲಿಟ್ಟಿರುವ ಸುಂದರ ದೇಶ. ಸಾವಿರಾರು ವರ್ಷದ  ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಿದ ಬಣ್ಣದ ಚಿತ್ತಾರದ ಮರದ ಚಾವಣಿ ಹೊದ್ದ  ಕಟ್ಟಡಗಳು, ಬೃಹತ್ ಝಾಂಗ್‌ಗಳು, ಅದರಲ್ಲಿ ಸರಸರನೆ ಓಡಾಡುತ್ತಿರುವ ಎಣ್ಣೆಗೆಂಪು ಬಣ್ಣದ ಉಡುಪಿನ ಸನ್ಯಾಸಿಗಳು. ಅವರ ಸಾಂಪ್ರದಾಯಿಕ ಉಡುಪು ಘೊ, ಕಿರಾ ಧರಿಸಿ ನಗುನಗುತ್ತಾ ಓಡಾಡುವ ಜನ. ಎಲ್ಲದರ ಮೇಲೆ ನವಿರಾದ ಮಂಜಿನ ಮುಸುಕು. ಎತ್ತರದಲ್ಲಿ ಗಾಳಿಯಲ್ಲಿ  ಪಟಪಟನೆ ಹಾರುತ್ತಾ ಶಾಂತಿಮಂತ್ರಗಳನ್ನು ಪರ್ವತಗಳಾಚೆಗೆ ಪಸರಿಸುತ್ತಲೇ ಇರುವ  ಪ್ರಾರ್ಥನಾ ಧ್ವಜಗಳು.  ಈ ನೆಲದ ತುಂಬಾ ಭಕ್ತಿ ಇದೆ. ಪ್ರೀತಿ ಇದೆ. ಪ್ರಕೃತಿಗೆ ಗೌರವವಿದೆ.  ಮೂಲೆ ಮೂಲೆಗಳಿಂದ ಬುದ್ದನ ನುಡಿಗಳು ಮಾರ್ನುಡಿಯುತ್ತಿವೆ. ಪ್ರತಿಯೊಬ್ಬರ ಎದೆಯಲ್ಲಿ ದಂತಕಥೆಗಳು ಪಿಸುಗುಟ್ಟುತ್ತಿವೆ. ಇಲ್ಲಿನ  ರಾಜ ಮತ್ತು ಅವನ ನಾಲ್ಕು ರಾಣಿಯರ ಕಂಡರೆ ಅಗಾಧ ಪ್ರೇಮವಿದೆ.  ಇಲ್ಲಿ ಬಡತನವಿದೆ, ಭಿಕ್ಷುಕರಿಲ್ಲ. ಕೊಲೆ, ಕಳ್ಳತನಗಳಿಲ್ಲ.  ಬೇರೆಬೇರೆ ದೇಶಗಳಿಂದ ಬರುವ ಯಾತ್ರಿಗಳ ಬಗ್ಗೆ ಅಚ್ಚರಿಯಿದೆ, ಕುತೂಹಲವಿದೆ. ದ್ವೇಷ ಅಸೂಯೆಗಳಿಲ್ಲ. ಅವರನ್ನೇ ಬಂಡವಾಳ ಮಾಡಿಕೊಳ್ಳುವ ದುರಾಸೆಯಿಲ್ಲ. ಪೋಲೀಸರು ಕಂಡುಬರುವುದೇ ಇಲ್ಲ.

ಕೊಲ್ಕೊತ್ತಾದಿಂದ ನಮ್ಮನ್ನು ಕರೆ ತಂದ  ಡ್ರುಕ್ ಏರ್ ವಿಮಾನದಲ್ಲಿ ಕುಳಿತು  ದಾರಿ ಉದ್ದಕ್ಕೂ ಹೊಂಬೆಳಕಿನಲ್ಲಿ  ಎವರೆಸ್ಟ್, ಕಾಂಚನಗಂಗಾ ಮುಂತಾದ ಶಿಖರಗಳನ್ನು ಕಣ್ಣು, ಮನ ತುಂಬಿಕೊಳ್ಳುತ್ತಲೇ ಇಳಿದಿದ್ದು ಪಾರೋದಲ್ಲಿ.  ಪ್ರಯಾಣಿಕರಲ್ಲಿ ಹೆಚ್ಚು  ಜನ  ಶಾಪಿಂಗಿಗಾಗಿ ಬ್ಯಾಂಕಾಕ್‌ಗೆ ಹೋಗಿ  ಮರಳುತ್ತಿರುವ ಭೂತಾನೀಯರು.  ಮಿಕ್ಕ ಪ್ರವಾಸಿಗಳು ಪಾಶ್ಚಾತ್ಯ ದೇಶದವರು. ಭಾರತದಿಂದ ಬಂದವರು  ನಮ್ಮ ಗುಂಪಿನ ನಾಲ್ಕು ಜನ ಅಷ್ಟೇ.  ನಾವು ನೋಡಿದ್ದ ಯಾವ ದೇಶದಲ್ಲೂ ಅಷ್ಟೊಂದು ಆದರದಿಂದ ಬರಮಾಡಿಕೊಂಡ ಏರ್ಪೋರ್ಟ್ ಸ್ಟಾಫ್‌ಗಳ ನ್ನು ಕಂಡಿರಲಿಲ್ಲ.  ಮೊದಲ ದಿನ ನಾವು ಆಯ್ಕೆ ಮಾಡಿಕೊಂಡಿದ್ದು ದೋರ್ಚು ಲಾ ಮತ್ತು ಪುನಾಖ ನೋಡಿ ಬರಲು.  ನಮ್ಮನ್ನು ಅಲ್ಲಿಗೆ ಕರೆದೊಯ್ಯುವ  ಟೊಯೊಟಾ ಗಾಡಿ ಬೆಳಗಾಗೆದ್ದು ಹೋಟೆಲ್ ಎದುರು ನಿಂತಿತ್ತು. ಅಂದು  ನಮ್ಮ ಜೊತೆ ಬರಲಿದ್ದ ನೀಮ ತನ್ನ ಪರಿಚಯ ಮಾಡಿಕೊಂಡಳು. ತೆಳ್ಳಗೆ, ಬೆಳ್ಳಗಿದ್ದ  ನೀಮಾ  ಕಂದು ರೇಶಿಮೆ ಕೂದಲಿನ ಚೆಲುವೆ. ತೊಟ್ಟಿದ್ದು ತಿಳಿ ಹಸಿರು ಕೀರ. ಮ್ಯಾಟ್ರಿಕ್ ವರೆಗೂ ಓದಿದ್ದೀನಿ.  ಸ್ವಲ್ಪ ಇಂಗ್ಲಿಶ್, ಹಿಂದೀನೂ ಬರುತ್ತೆ ಎಂದಳು. ಮನೇಲಿ ಯಾರು ಯಾರಿದೀರಾ ಎಂದು ಕೇಳಿದ್ದಕ್ಕೆ ನಾನು ನನ್ನ ೩ ವರ್ಷದ ಮಗ, ನನ್ನಅಮ್ಮ ಎಂದು ಕುಲುಕುಲು ನಕ್ಕಳು. ಗಂಡ ಏನು ಮಾಡ್ತಾನೆ ಎಂದದ್ದಕ್ಕೆ, ನಾನು ಡಿವೋರ್ಸಿ  ಎಂದು ಮುಖ ಚಿಕ್ಕದು ಮಾಡಿಕೊಂಡು ನಾನೇಕೆ ಆ ಪ್ರಶ್ನೆ ಕೇಳಿದೆನೋ ಅನ್ನಿಸುವಂತೆ ಮಾಡಿದಳು. ವ್ಯಾನ್ ಹೊರಟಂತೆ ಬ್ರಯಾನ್ ಅಡಾಮ್ಸ್ನ್ ‘ಸಮರ್ ಒಫ್ ಸಿಕ್ಸ್ಟೀ ನೈನ್’   ಶುರುವಾಗಿದ್ದು ನಮಗೆ ಅಲ್ಲಿ  ನಂಬಲು ಕಷ್ಟವಾದ ವಿಷಯ. ಆದರೆ ಅದರಲ್ಲಿ ಬರುತ್ತಿದ್ದ ಹಾಡು ಮಾತ್ರ ಭೂತನೀಸ್ ಭಾಷೆಯದಾಗಿತ್ತು. ಹೀಗೆ ಅವರು ನಮ್ಮ ಹಿಂದಿ ಸಿನೆಮಾ  ಹಾಡುಗಳನ್ನೂ  ತಮ್ಮದಾಗಿಸಿಕೊಂಡಿದ್ದರು.

ನೀಮ  ದಾರಿಯುದ್ದಕ್ಕೂ ಸ್ವಾರಸ್ಯವಾಗಿ ಮಾತಾಡುತ್ತಿದ್ದಳು. ಮೊದಲು ನಮಗೆ ಟೀವೀಲಿ ಬರೀ ಭೂತನೀಸ್ ಪ್ರೋಗ್ರಾಮ್ ಬರೋದು. ಈಗ ಕೇಬಲ್ ಬಂತಲ್ಲಾ, ಹಿಂದೀದೂ ಬರುತ್ತೆ. ನಮಗೆ ಕುಸುಮ್, ಸಾಸ್ ಭಿ ಕಭಿ …, ಕೊಇ ಹೈ… ಎಲ್ಲಾ ತುಂಬಾ ಇಷ್ಟ ಎಂದು ನಮ್ಮ ಪ್ರತಿಕ್ರಿಯೆಗಾಗಿ ಕಾದಳು. ನಾವು ಅವನ್ನು ನೋಡುವುದಿಲ್ಲ ಎಂದು  ಹೇಳಿದಾಗ ನಿರಾಶಳಾದಳು. ಸುಮಾರು ೧೦,೦೦೦ ಅಡಿ ಎತ್ತರದಲ್ಲಿರುವ ದೊರ್ಚು ಲಾ ಕಣಿವೆ ತಲುಪಲು ದಟ್ಟಡವಿಗಳ ನಡುವೆ ಹಳ್ಳ ತಿಟ್ಟಿನ ಹಲವಾರು ತಿರುವುಗಳ ರಸ್ತೆಯ ಮೇಲೆ ಪ್ರಯಾಣ. ದಾರಿ ಉದ್ದಕ್ಕೂ  ಮತ್ತೆ ಮತ್ತೆ ಎದುರಾಗುವ ಪವಿತ್ರ ಗೋಂಪಾಗಳು. ಬೌಧ್ಧ ಸನ್ಯಾಸಿಗಳ ಅಸ್ಥಿಗಳನ್ನು ಹುಗಿದಿಟ್ಟ ಪುಟ್ಟ ಪುಟ್ಟ ಗೋಪುರಗಳು, ಭರ್ರನೆ ಬೀಸುವ ಗಾಳಿಯಲ್ಲಿ ಪಟಪಟನೆ ಹಾರುತ್ತಿರುವ ಪ್ರಾರ್ಥನಾ ಧ್ವಜಗಳು, ಇವುಗಳ ಮೇಲೆ ಬರೆದಿರುವ ಶಾಂತಿ ಮಂತ್ರಗಳು ಗಾಳಿಯಲ್ಲಿ ಪರ್ವತದಾಚೆ ತೇಲಿ ಕೊಳ್ಳುತ್ತಾ  ಪ್ರಪಂಚದ ಉದ್ದಕ್ಕೂ  ಚಲಿಸಿ ಶಾಂತಿಯ ಸಂದೇಶಗಳನ್ನು ಹರಡುತ್ತಲೇ ಇರುವವಂತೆ.  ಜೊತೆಗೆ ರಾಶಿ ರಾಶಿ ಮೋಡದ ಮುಸುಕು ಹಾಕಿ ತೆರೆಯುವ ಪ್ರಕೃತಿಯಾಟ. ೧೦೮ ಪವಿತ್ರ ಗೊಂಪಾಗಳಿರುವ ಪವಿತ್ರ ಸ್ಥಳ ದೋರ್ಚುಲಾ. ಗಾಡಿಯಿಂದ ಇಳಿದು ನಡಗುತ್ತ ನಿಂತರೆ ಒಂದು ಕ್ಶಣ ಬಿಳಿಯ ಮಂಜಿನ ತೆರೆ.  ಮರು ಕ್ಶಣದಲ್ಲಿ ಸ್ಪಷ್ಟವಾಗಿ ತೆರೆದು ಕೊಳ್ಳುವ  ಸಾಲು ಸಾಲು ಗೊಂಪಾಗಳು. ಗಗನಕ್ಕೇ  ಏರುವ ಪ್ರಾರ್ಥನಾ ಧ್ವಜಗಳು. ಎತ್ತರದಲ್ಲಿ ಟಿನ್ ಚಾವಣಿಯ ಒಂದು ಟೀ ಶಾಪ್. ಅದರ ಎದುರು ಹತ್ತಾರು ಕಪ್ಪು ಜೂಲು ನಾಯಿಗಳು.  ಟೀ ಶಾಪನ್ನು ನಡೆಸುತ್ತಿದ್ದವರೂ ಇಬ್ಬರು ಹುಡುಗಿಯರೇ.  ಒಳಗಡೆ ಗೋಡೆಗಳಿಗೆ ದಟ್ಟ ಹಸಿರು ಬಣ್ಣ.  ಗಾಜಿನ ವೇಸ್‌ಗಳಲ್ಲಿ ಕೆಂಪು ಪ್ಲ್ಯಾಸ್ಟಿಕ್ ಹೂವುಗಳು.. ಒಂದ್ ಸ್ತೋವ್, ಫ್ಲಾಸ್ಕ್ಗಳು, ಬಾಯ್ಲರ್. ಅದರ ಮೇಲೆ ಹತ್ತಿರವೇ ಹರಿಯುವ ಝರಿಗಳ ಬದಿ ಯಿಂದ ತಂದ ಗುಂಡು ಕಲ್ಲುಗಳು. ಆ ಕಲ್ಲುಗಳು  ಒಳಗಡೆ  ಬಿಸಿ ಹೆಚ್ಚು ಹೊತ್ತು  ಇರಲು ಸಹಾಯಕರವಂತೆ.  ಆ ಕೊರೆತದಲ್ಲೂ   ದಿನಾ  ಅವರು ಹತ್ತಿರದ ಹಳ್ಳಿಯಿಂದ ಬಂದು ೩-೪ ಗಂಟೆಗೆ ವಾಪಸ್ಸು ಹೋಗುತ್ತಾರಂತೆ.

೪ ಗಂಟೆಯ ನಂತರ ಡ್ರೈವ್ ಮಾಡಲೇಬಾರದು. ಮಂಜು ಎಷ್ಟು ಗಾಢವಾಗುತ್ತದೆಯೆಂದರೆ ೨ ಅಡಿ ದೂರ ಕೂಡಾ  ಕಾಣುವುದಿಲ್ಲ, ತುಂಬಾ  ಅಪಾಯ ಎಂದು ನಮಗೂ ಎಚ್ಚರಿಸಿದರು  ಅಪರೂಪಕ್ಕೆ ಎದುರಾದ ಅತಿಥಿಗಳನ್ನು ಕಂಡು ಖುಷಿಯಾದರು.  “ಏನು ತಗೋತೀರ? ನೆಸ್ಕಾಫಿ, ಬ್ಯಾಗ್ ಟೀ… ಬಟರ್ ಟೀ.. ಜೊತೆಗೆ ಬಿಸ್ಕಟ್ ಇದೆ…” ಎಂದು ಆದರದಿಂದ ಕೇಳಿದರು.  ಬಟರ್ ಟೀ  ಎಂದರೆ ಯಾಕ್ ಹಾಲಿನಿಂದ ತಯಾರಿಸಿದ್ದು ಎಂದು ತಿಳಿದಿದ್ದ ನಾವು ಮೂವರು  ನೆಸ್ಕಾಫಿ ಎಂದೆವು. ಹೊರಗಡೆ ಬಂದಾಗ ಅಡ್ವೆನ್ಚರಸ್ ಆಗಿರಬೇಕು ಎಂದು ಭಾಷಣ ಬಿಗಿದ ಒಬ್ಬರು ಬಟರ್ ಟೀ ಹೇಳಿದರು.  ನಂತರ ಬಾಯಿಗೆ ಒರೆದುಕೊಂಡ ಅದರ ರುಚಿ ತೆಗೆಯಲು ಅವರಿಗೆ  ನಾವು ತಂದಿದ್ದ ಎಲ್ಲಾ ಏಲಕ್ಕಿ, ಲವಂಗ ಬೇಕಾಯಿತು! ಪುನಾಖಾ ದಾರಿಯಲ್ಲೇ ಲೊಬೆಸಾ ಎಂಬ ಹಳ್ಳಿಯ ಹತ್ತಿರ  ಟಿಬೆಟ್ಟಿನ ಅವಧೂತನೊಬ್ಬನ  ಸ್ಮರಣೆಯಲ್ಲಿ ಕಟ್ಟಿದ ಒಂದು ವಿಹಾರವಿದೆ.  ೧೩ ನೇ ಶತಮಾನದಲ್ಲಿ ಅವನು “ದೈವಿಕ ಹುಚ್ಚ” ನೆಂದು ಪ್ರಖ್ಯಾತನಾಗಿದ್ದ. ಅವನು ದುಷ್ತಶಕ್ತಿಗಳನ್ನು ನಿರ್ನಾಮ ಮಾಡುತ್ತಿದ್ದನಂತೆ.  ಆದರೆ ಅವನು ಅದಕ್ಕಾಗಿ ಎಲ್ಲರಂತೆ ಬಿಲ್ಲು, ಬಾಣಗಳನ್ನು ಬಳಸದೆ ಅವನ ದೇಹದಷ್ಟೇ   ದೊಡ್ಡದಾಗಿದ್ದ ಅವನ ಶಿಷ್ನವನ್ನು ಬಳಸುತ್ತಿದ್ದನಂತೆ. ಹಾಗಾಗಿ ಇವತ್ತೂ ಅವನನ್ನು ನಂಬಿ ಗೌರವಿಸುವವರು ದುಷ್ಟ ಶಕ್ತಿಗಳನ್ನು ದೂರವಿಡಲು ಮನೆಯ ಹೊರ ಬಾಗಿಲ ಎರಡೂ ಕಡೆ ದೊಡ್ಡ ಶಿಷ್ನಗಳ ಚಿತ್ರವನ್ನು ಬರೆಸಿರುತ್ತಾರೆ.

ಪುನಾಖಾ ಊರಿನ ತುಂಬಾ ಮನೆಗಳು, ಅಂಗಡಿಗಳು, ಮಾರುಕಟ್ಟೆ ಗಳ ಮೇಲೆ ಈ ಚಿತ್ರಗಳನ್ನು ಕಾಣಬಹುದು. ಜೊತೆಗೆ ಆ ವಿಹಾರದಲ್ಲಿ ಇರುವ ಮರದ ಮಾಂತ್ರಿಕ ಶಿಷ್ನ ಒಂದರಿಂದ  ಅಶೀರ್ವಾದ ಪಡೆದರೆ, ಮಕ್ಕಳಾಗದ ದಂಪತಿಗಳಿಗೆ  ಸರಿಯಾಗಿ ೯ ತಿಂಗಳಲ್ಲಿ ಮಕ್ಕಳಾಗುವುದೆಂಬ ಪ್ರತೀತಿಯೂ ಉಂಟು. ಭೂತಾನದ ರಾಷ್ಟ್ರ ಮೃಗವೆಂದು ಗುರುತಿಸಲ್ಪಟ್ಟಿರುವ “ತಾಕಿನ್” ಎಂಬ ವಿಚಿತ್ರ ಪ್ರಾಣಿಯನ್ನೂ ಇದೇ ‘ದೈವಿಕ ಹುಚ್ಚ’ ಸೃಷ್ಟಿಸಿದನೆಂಬ  ನಂಬಿಕೆ ಇದೆ. ಇದು ಆಡಿನ ತಲೆ, ಹಸುವಿನ ಮೈಯ್ಯನ್ನು ಹೊಂದಿದೆ. ಅಲ್ಲಿನ ಮೃಗಾಲಯದಲ್ಲಿ ಇದು ಕಾಣಸಿಗುತ್ತದೆ.  ಅಲ್ಲಿಂದ ನಮ್ಮ ದಾರಿ ೧೭ನೇ ಶತಮಾನದಲ್ಲಿ ನಿರ್ಮಾಣವಾದ ಪುನಾಖ ಝಾಂಗ್ ಕಡೆಗಿತ್ತು. ಈ ಝಾಂಗ್‌ಗಳು ಭದ್ರ ಕೋಟೆಗಳಾಗಿದ್ದುವು. ಅದರಲ್ಲಿ ಬುದ್ಧ ದೇವಾಲಯಗಳು, ಪವಿತ್ರ ಗ್ರಂಥಗಳು, ಬೌದ್ಧ ಸನ್ಯಾಸಿಗಳ ವಸತಿಗಳು, ಎಲ್ಲಾ ಇರುತ್ತಿದ್ದುವು. ಅಡಳಿತ ಕಚೇರಿಗಳು. ಫೊ ಚು  (ಗಂಡು) ಮತ್ತು ಮೊ ಚು(ಹೆಣ್ಣು) ಎಂಬ ಎರಡು ನದಿಗಳ ಕೂಡುವ ಸ್ಥಳ ದಲ್ಲಿ ಈ ಝಾಂಗ್ ಇದೆ.  ಅದನ್ನು ಮಾರನೆಯ ದಿನ ನೋಡುವುದಾಗಿ ನೀಮಾಗೆ ಹೇಳಿ ನಮ್ಮ ಟೊಯೊಟಾ ವ್ಯಾನ್ ಹತ್ತಿದೆವು. “ಪ್ಲೀಸ್ ಫರ್ಗಿವ್ ಮಿ…” ಎಂದು ಬ್ರಯಾನ್ ಆಡಮ್ಸ್ ಹಾಡಲು ಶುರು ಮಾಡಿದ.

ಭದ್ರಕೋಟೆಗಳು ಮತ್ತು ಬಾಲಸನ್ಯಾಸಿಗಳು

ಸಿಡಿಲಿನ ನಾಡೆಂದು  ಹೆಸರು  ಹೊತ್ತಿರುವ ಭೂತಾನದ ಪ್ರತಿ ಊರಿನಲ್ಲಿ ಕಣ್ಣಿಗೆ ಬೀಳುವುದು ನೂರಾರು ವರ್ಷಗಳ ಇತಿಹಾಸವುಳ್ಳ ಝಾಂಗ್‌ಗಳು. ಪಾರೊ ಝಾಂಗ್, ಪುನಾಖಾ ಝಾಂಗ್, ಥಿಂಪು ಝಾಂಗ್…. ಇವುಗಳೆಲ್ಲಾ ಜಗತ್ಪ್ರಸಿದ್ಧವಾದವುಗಳು. ಈ ಝಾಂಗ್‌ಗಳು ಬಹಳ ಗಟ್ಟಿಯಾದ ಭದ್ರ  ಕೋಟೆಗಳಷ್ಟೇ. ಇವುಗಳು ಅಲ್ಲಿ ಹರಿಯುವ ನೀಲಿ ನದಿಗಳ ನಡುಗಡ್ಡೆಗಳ ಮೇಲೆ ನಿರ್ಮಿತವಾದವು. ಅಲ್ಲಿ  ಒಡೆಯಲು ಅಸಾಧ್ಯವಾದ ದಪ್ಪ ಗೋಡೆಗಳ ಒಳಗೆ ಹಲವಾರು ಮಜಲುಗಳ ಕಟ್ಟಡಗಳಿರುತ್ತವೆ. ಈ ಕಟ್ಟಡಗಳ ಚಾವಣಿ ಮತ್ತು ಮರಗೆಲಸಕ್ಕೆ ಒಂದು ಮೊಳೆಯನ್ನೂ ಹೊಡೆಯದೆ ಸಾಂಪ್ರದಾಯಿಕ ಶೈಲಿಯಲ್ಲಿ, ಕಟ್ಟಿ,.ಬಣ್ಣ ಬಣ್ಣದ ಚಿತ್ತಾರ  ಮಾಡಿರುತ್ತಾರೆ..

ಮಹಾದ್ವಾರದಿಂದ ಒಳಗೆ ಹೋಗುತ್ತಲೇ ವಿಶಾಲವಾದ ಪ್ರಾಂಗಣ. ಮಧ್ಯದಲ್ಲಿ ಒಂದು ಬೋಧಿವೃಕ್ಷ.  ಸುತ್ತಲೂ ಕೊಠಡಿಗಳು. ಅಲ್ಲಿ  ಸನ್ಯಾಸಿಗಳು ಹಾಗೂ ವಿದ್ಯಾರ್ಥಿಗಳ ವಸತಿ ಗೃಹಗಳು. ಗುರುಕುಲ.  ಜೊತೆಗೆ ಸರ್ಕಾರದ ಮುಖ್ಯ ಅಡಳಿತ ಕಚೇರಿಗಳು.. ಥಿಂಪುವಿನಲ್ಲಂತೂ ರಾಜನ  ಸಿಂಹಾಸನಕ್ಕಾಗಿಯೂ ಒಂದು ಕೋಣೆ! ಮಧ್ಯದಲ್ಲಿ ಹಲವು ಅಂತಸ್ತುಗಳ ಪಗೋಡಾ ಶೈಲಿಯ ಕಟ್ಟಡ.  ಹತ್ತಿ ಹೋಗಲು ಕಡಿದಾದ ಮೆಟ್ಟಿಲುಗಳ ಮರದ ಏಣಿಗಳು. ಆಕ್ರಮಣ ಎದುರಾದಾಗ ಅವುಗಳನ್ನು ಮಡಚಿ  ಸರಕ್ಕನೆ ಮೇಲಕ್ಕೆ ಎಳೆದುಕೊಳ್ಳುವಂಥಾ ಏರ್ಪಾಟು. ಆಗ ಶತ್ರುಗಳು ಮೇಲೆ ಹತ್ತುವ ಸಾಧ್ಯತೆಯೇ ಇರಲಿಲ್ಲ… ಹಿಂದೆ ಟಿಬೆಟನ್ನರ ಆಕ್ರಮಣ ಮತ್ತೆ ಮತ್ತೆ ಆಗುತಿತ್ತಂತೆ.. ಅಲ್ಲಿದ್ದ, ಪುರಾತನ ಬುದ್ದ ವಿಗ್ರಹಗಳು, ಪವಿತ್ರ ಗ್ರಂಥಗಳು, ಟಂಖಾಗಳು(ಬೌಧ್ಧ ಪೇಂಟಿಂಗ್‌ಗಳು), ಮುಂತಾದುವನ್ನು  ಅವರಿಂದ ಕಾಪಾಡಲು ಈ ತಂತ್ರ.

ಅತಿ ಎತ್ತರದ ಅಂತಸ್ತಿನಲ್ಲಿ ಗುರು ಪದ್ಮಸಂಭವನನ್ನು ಧ್ಯಾನಿಸುವ ಪವಿತ್ರ ಸ್ಥಳ. ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪದ್ಮಂಭವನ ಅಸ್ತ್ರವೂ ಸಿಡಿಲೇ. ಒಳಗೆ ೨೪ ಗಂಟೆಗಯೂ ಉರಿಯುವ ಬೆಣ್ಣೆ ದೀಪಗಳ ಮಿಣುಕು, ಅರೆಗತ್ತಲೆಯಲ್ಲಿ ಉರಿಯುವ ಊದುಕಡ್ಡಿಯ ಪರಿಮಳ.  ಮೌನವಾಗಿ ಪವಿತ್ರ ಗ್ರಂಥವನ್ನು  ಓದುತ್ತಾ ಕುಳಿತ ಹಿರಿಯ ಲಾಮಾ. ದೂರದಲ್ಲಿ  ಸುತ್ತಲೂ ಹಿಮಾಲಯದ ಸಾಲು ಸಾಲು. ಶಾಂತಿ ಮಂತ್ರಗಳನ್ನು ವಿಶ್ವದಾದ್ಯಂತ ತೇಲಿ ಬಿಡುತ್ತಾ ಬೀಸುವ ತಂಗಾಳಿ. ಈ ನಿಶ್ಯಬ್ದ ಪ್ರಾಂಗಣದಲ್ಲಿ  ಕೂತರೆ ಎಲ್ಲೆಲ್ಲೂ, ಮೌನ, ಶಾಂತಿ. ಸದ್ದಿಲ್ಲದೆ ಓಡಾಡುತ್ತಿರುವ  ಬೋಳು ತಲೆಯ, ಎಣ್ಣೆಗೆಂಪಿನ ವಸ್ತ್ರದ  ಲಾಮಾಗಳು, ಪುಟು ಪುಟು ಓಡುತ್ತಿರುವ ಕೆಂಪು ತುಟಿಯ ಬಾಲ ಸನ್ಯಾಸಿಗಳು. ಎಲ್ಲಿಂದಲೋ ಬರುತ್ತಿರುವ ಗಂಟೆಗಳ ನಾದ. ಜನ್ಮ  ಜನ್ಮಗಳ ಕರ್ಮ ತೊಳೆಯುತ್ತಾ ಪ್ರಾರ್ಥನಾ ಚಕ್ರ ಹಿಡಿದು ಕೂತಿರುವ ಮಣಿಸರದ ಮುದುಕಿಯರು.

ಅಂದು ಝಾಂಗ್‌ಗಳ ತಿರುಗಾಟದಲ್ಲಿ  ನಮ್ಮ ಜೊತೆ ಇದ್ದವರು ಗೈಡ್ ಶೆರಿಂಗ್ ಮತ್ತು ವ್ಯಾನ್ ಡ್ರೈವರ್ ನ್ಯಾಮ್ಗೇ. ಹದಿ ಹರೆಯದವರಂತೆ ಕಾಣುತ್ತಿದ್ದ  ಅವರು ಗಂಡ ಹೆಂಡತಿ. ಅವನಿಗೆ ೨೩, ಅವಳಿಗೆ ೧೯! “ನಿಮ್ಮದು  ಲವ್ ಮ್ಯಾರೇಜಾ” ಎಂದದ್ದಕ್ಕೆ ಹೌದೆಂದರು. “ನಮ್ಮಲ್ಲಿ ಲವ್ ಮ್ಯಾರೇಜ್‌ಗಳೂ ತುಂಬಾ ಕಾಮನ್.  ಹುಡುಗ  ಹುಡುಗಿ, ಮದುವೆ  ಆಗದೆಯೂ ಒಟ್ಟಾಗಿ ಇರಬಹುದು. ಅವರಿಗೆ ಅಗುವ ಮಗುವಿಗೂ ಸಮಾಜ ಅಕ್ಸೆಪ್ಟ್ ಮಾಡ್ಕೊಳ್ಳತ್ತೆ” ಅಂತ ಶೇರಿಂಗ್ ವಿವರಣೆ ಕೊಟ್ಟಳು.  ನ್ಯಾಮ್ಗೆಯ ವಿದ್ಯಾಬ್ಯಾಸದ ಬಗ್ಗೆ  ಕೇಳಿದಾಗ,  “ಹತ್ತನೇ ಸ್ಟಾಂಡರ್ಡ್ ಪರೀಕ್ಷೆ  ಪಾಸ್ ಮಾಡಿದ ಮೇಲೆ,  ಬರೀ ೫೬% ಮಾರ್ಕ್ಸ್ ಬಂತು, ಅದಕ್ಕೇ ಕಾಲೇಜಲ್ಲಿ ಮೆರಿಟ್ ಸೀಟ್ ಸಿಗಲಿಲ್ಲ. ನನಗೆ ಇಂಡಿಯಾಗೆ ಹೋಗಬೇಕು, ಬೆಂಗಳೂರಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಮಾಡಬೇಕು ಅಂತ ತುಂಬಾ ಆಸೆ ಇತ್ತು…” ಎಂದು ಬೇಜಾರು ಮಾಡಿಕೊಂಡ.

ಅದಕ್ಕೆ ಶೆರಿಂಗ್ “ಇವನಿಗೆ ತುಂಬಾ ಚೆನ್ನಾಗಿದ್ದೀನಿ ಅಂತ ಜಂಭ, ಫಿಲ್ಮ್ ಸ್ಟಾರ್ ಅಗಬೇಕಂತೆ, ಅದಕ್ಕೆ, ಹೈಟ್ ಬೇಡ್ವಾ…  ಹಿ ಈಸ್ ಎ ಶಾರ್ಟಿ” ಅಂತ ರೇಗಿಸಿದಳು.  ಆಗವನು ನಾಚಿ ಮುಖ ಚಿಕ್ಕದು ಮಾಡಿಕೊಂಡ.  ಅದಕ್ಕೆ ನಾನು “ಯಾಕಾಗಬಾರದು, ನಮ್ಮ ಆಮೀರ್ ಖಾನ್ ಕೂಡಾ ಕುಳ್ಳ ತಾನೇ..” ಎಂದಾಗ ಅವನ ಮುಖ ಅರಳಿತು! ಇಬ್ಬರೂ  ಕೈ ಹಿಡಿದು ಕೊಂಡು ನಕ್ಕರು. ಊಟದ ಟೈಮಲ್ಲೂ ಸಲ್ಲಾಪ ಮಾಡುತ್ತಾ ತಂದಿದ್ದ ಡಬ್ಬದಿಂದ ಊಟಮಾಡಿಕೊಂಡರು. 

ಆದರೆ ಈ ತಂಬಾಕು  ಜಗಿಯುವ ಅಭ್ಯಾಸ ಎಲ್ಲರಲ್ಲೂ  ಇದ್ದಿದನ್ನು ನೋಡಿ  ನಮಗೆ ಕಸಿವಿಸಿಯಾಯಿತು.  ಯುವಕರು, ಮಕ್ಕಳು, ಹೆಂಗಸರು, ವೃದ್ಧರು, ಸನ್ಯಾಸಿಗಳು, ಕ್ರೀಡಾಪಟುಗಳು, ರಾಜ ಮನೆತನದವರು, ವ್ಯಾಪಾರಿಗಳು.. ಎಲ್ಲರ  ತುಟಿಗಳೂ ಪು. ಸಿಗರೇಟು ಸೇದುವುದನ್ನು, ತಂಬಾಕು ಮಾರುವುದನ್ನು  ನಿಷೇಧಿಸಿರುವ  ಜಗತ್ತಿನ ಮೊದಲ ನಾಡಾದ ಭೂತಾನದಲ್ಲಿ.. ಹೀಗೇಕೆ?  ಶೇರಿಂಗ್ ವಿವರಣೆ ಕೊಟ್ಟಳು.  ಅದು ತಂಬಾಕು ಅಲ್ಲ. ದೋಮಾ ಮತ್ತು ಖಾಂತೋ. ಅಂದರೆ ನಮ್ಮ ಎಲೆ, ಅಡಿಕೆ, ಸುಣ್ಣ!  ಹಾಗಾಗಿ ಎಲ್ಲರಿಗೂ ಕೆಂಪು ಜೊಲ್ಲು ಸುರಿಯುವ ಬಾಯಿ!

ಸ್ವಲ್ಪ ಹೊತ್ತು ಮಾತಿಲ್ಲದೆ ಕೂತಿದ್ದ ಶೇರಿಂಗ್, “ನನ್ನ ತಮ್ಮನೂ ಒಬ್ಬ ಬಾಲ ಸನ್ಯಾಸಿ. ಹೀಗೆಯೇ ತರಬೇತಿ ಪಡೆಯುತ್ತಿದ್ದಾನೆ. ಅವನೇ ೯ ವರ್ಷದವನಾಗಿದ್ದಾಗ ಆಸೆ ಪಟ್ಟು ಹೋದ. ಅದು ಇಲ್ಲಿ ತುಂಬಾ  ಹೆಮ್ಮೆಯ, ಕುಟುಂಬ ಗೌರವದ ವಿಷಯ. ಆದರೆ ನಮಗೆ, ಹೆಚ್ಚಾಗಿ ಅಮ್ಮನಿಗೆ ತುಂಬಾ ಸಂಕಟವಾಯ್ತು. ಆದರೆ ಅವನ ಮನಸ್ಸಿಗೇ ಬಂದಾಗ ಬೇಡ ಅನ್ನುವುದು ತಪ್ಪಂತ ನಮ್ಮ ನಂಬಿಕೆ…. ಕಳಿಸಿದೆವು.”  ಎಂದಾಗ ಅವಳ ಕಣ್ಣಂಚಿನಲ್ಲಿ ಹನಿಯಿತ್ತು.

“ವಾರಕ್ಕೆ ಒಮ್ಮೆ ಮನೆಗೆ ಬರುತ್ತಾನೆ. ಅಮ್ಮ ನಮ್ಮೆ ಲ್ಲರಿಗಿಂತ ಅವನಿಗೆ ತುಂಬಾ ಮುದ್ದು ಮಾಡುತ್ತಾಳೆ… ರಾಶಿ ರಾಶಿ ಅವನಿಗೆ ಇಷ್ಟವಾದ ತಿಂಡಿ  ಮಾಡುತ್ತಾಳೆ” ಊರವರೆಲ್ಲಾ ಅವನನ್ನು ನೋಡಲು, ಮಾತಾಡಿಸಲು ಬರುತ್ತಾರೆ. ಹಿ ಫೀಲ್ಸ್ ಗುಡ್….” ಎಂದಳು. “ಇಲ್ಲಿ ತುಂಬಾ ಶಿಸ್ತಿನ ಜೀವನ ಇದೆ. ಅವನಿಗೂ ಇಷ್ಟವೇ… ಆದರೆ,  ಈ ಮನಾಸ್ಟ್ರಿಗಳಲ್ಲಿ ನಮಗೆ ಕಾಣದ ಕೆಟ್ಟ  ಗುಣಗಳೂ ಇವೆ… ತುಂಬಾ ಕ್ರೂರ ಶಿಕ್ಷಕರಿದ್ದಾರೆ. ಬುದ್ದನ ಎದುರಲ್ಲೂ ಹೊಡೆತ, ಸಾದಾ ಶಾಲೆಗಳಲ್ಲಿರುವಂತೆ  ಹಿರಿಯ ವಿದ್ಯಾರ್ಥಿಗಳಿಂದ  ರಾಗಿಂಗ್….. ಎಲ್ಲಾ ಇದೆ…”  ಎನ್ನುತ್ತಾ ಎದ್ದಳು. ಏನೋ ನೆನಪಾದವಳಂತೆ,  “ಈಗ ನಿಮಗೆ ಕೀರಾ (ಭೂತಾನದ ಹೆಂಗಸರ ಉಡುಪು) ಕೊಳ್ಳೋಣ. ಹೇಗೆ ಉಡೋದು ಅಂತ ಹೇಳಿ ಕೊಡುತ್ತೇನೆ…” ಎಂದು ಉತ್ಸಾಹದಿಂದ  ಹೆಜ್ಜೆ ಹಾಕಿದಳು.

ಮೌನ ರಾಜಧಾನಿ ಥಿಂಪು

ಭೂತಾನ ನಮ್ಮೆದುರಿಗಿಡುವ ಅನೇಕ ಅಚ್ಚರಿಗಳಲ್ಲಿ ಇದೂ ಒಂದು.  ಒಂದು ದೇಶದ ರಾಜಧಾನಿ ಎಂದರೆ ಜನ ಜಂಗುಳಿ, ಗಗನ ಚುಂಬಿ ಕಟ್ಟಡಗಳು, ಕಣ್ಣು ಕೋರೈಸುವ ನಿಯಾನ್ ಸೈನುಗಳು, ಕಿವಿಗಡಚಿಕ್ಕುವ ಹಾರ್ನ್‌ಗಳು, ಜಗತ್ತಿನೆಲ್ಲೆಡೆಯ ಸರಕನ್ನು ಮಾರಾಟ ಮಾಡುವ ಬೃಹತ್ ಮಾಲ್‌ಗಳು…. ಇದೇ ಚಿತ್ರ ಕಣ್ಣಿಗೆ ಕಟ್ಟುವಾಗ, ಈ ಪುಟ್ಟ ದೇಶದ ಮೌನ ರಾಜಧಾನಿ ಥಿಂಪು ಒಂದು ಅಪೂರ್ವ ಸ್ವರ್ಗ.

ಹಾಗೆಂದು ಭೂತಾನ್ ಹಿಂದುಳಿದ ದೇಶವೆಂದಲ್ಲ. ಮನುಷ್ಯನ ನೆಮ್ಮದಿಯ  ಬದುಕಿಗೆ ಏನು ಅತ್ಯವಶ್ಯಕ ಎಂದು ತಿಳಿದ ದೇಶ.  ಪ್ರಪಂಚದಲ್ಲಿ ಎಲ್ಲಾ ಚಿಕ್ಕ-ದೊಡ್ಡ ರಾಷ್ಟ್ರಗಳು ತಮ್ಮ ಅಭಿವೃದ್ಧಿಯನ್ನು ತಮ್ಮ “ಗ್ರಾಸ್ ನ್ಯಾಶನಲ್ ಇನ್‌ಕಮ್ “ನಿಂದ ಅಳೆಯುತ್ತಿದ್ದಾಗ, ಅದನ್ನು “ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್” ನ ಅಳತೆ ಗೋಲಿನಿಂದ ಅಳೆಯಬೇಕೆನ್ನುವುದು ತಮ್ಮ ಗುರಿ ಎಂದು ೧೯೭೨ ರಲ್ಲೇ ಸಾರಿದ ರಾಜ ವಾಂಗ್ಚುಕ್‌ನ ದೇಶ.  ತಮ್ಮ ಅಮೂಲ್ಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತಲೇ, ಮಹಾತ್ಮ ಬುದ್ಧನ  ಆಧ್ಯಾತ್ಮಿಕ ಮೌಲ್ಯಗಳನ್ನು ಪಾಲಿಸುತ್ತಲೇ, ತಮಗೆ ವರದಾನವಾಗಿ ಬಂದಿರುವ ಅದ್ಭುತ ಪರಿಸರದ ಜೊತೆಜೊತೆಗೆ ಸಮನ್ವಯದಿಂದ ಬಾಳುತ್ತಾ ಬಂದವರು. ಜನರ ಆರೋಗ್ಯ, ನೆಮ್ಮದಿ, ಜೀವನೋಪಾಯಕ್ಕಾಗಿ ಮಾಡುವ ಕೆಲಸದಲ್ಲಿ ತೃಪ್ತಿ, ಸಾಮಾಜಿಕ  ಹಾಗೂ ರಾಜಕೀಯ ಸಾಮರಸ್ಯ, ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ  ಸ್ಥಿರವಾದ ಹೆಜ್ಜೆಗಳನ್ನಿಡುತ್ತಿರುವ  ದೇಶ.

ಭೂತಾನದಲ್ಲಿ ಕಾಲಿಡುತ್ತಿರುವಾಗಲೇ ನಮಗೆ ಅಚ್ಚರಿ ಪಡಿಸುವುದು ಪ್ರತಿಯೊಬ್ಬರ ನಡವಳಿಕೆಯಲ್ಲಿರುವ ಸಹಜತೆ. ಅವರು ತೊಡುವ ಬಣ್ಣ ಬಣ್ಣದ ಘೋ, ಖೀರಾಗಳಲ್ಲಿ, ಅವರ ಕಟ್ಟಡಗಳಲ್ಲಿ  ಅಳವಡಿಸಿಕೊಂಡಿರುವ ಶಿಲ್ಪ ಶಾಸ್ತ್ರದ ಪುರಾತನ ಶೈಲಿಯಲ್ಲಿ,  ಬೆಳಿಗ್ಗೆ ಎದ್ದು ಸ್ವಚ್ಚವಾಗಿರುವ  ರಸ್ತೆಗಳನ್ನೇ ಮತ್ತೆ ಮತ್ತೆ ಉಜ್ಜಿ ಸ್ವಚ್ಚ ಮಾಡುವ ಕೆಲಸಗಾರರ ಶ್ರದ್ದೆಯಲ್ಲಿ, ಅಲ್ಲಿನ ಯುವಕ ಯುವತಿಯರ ಹಗುರ ನಡಿಗೆಯಲ್ಲಿ, ತಿಳಿ ನಗೆಯಲ್ಲಿ, ಗುರು ಪದ್ಮ ಸಂಭವನಿಗೆ ತೋರುವ ಅಪಾರ ಭಕ್ತಿಯಲ್ಲಿ, ತಮ್ಮ ರಾಜನ ಕಂಡರೆ ತೋರುವ  ಪ್ರೀತಿ, ಮೆಚ್ಚುಗೆಯಲ್ಲಿ… ಸಹಜತೆ ತಾನೇ ತಾನಾಗಿ ಬಿಂಬಿಸುತ್ತದೆ. ಅಲ್ಲಿ ತೋರಿಕೆ ಎಳ್ಳಂಶವೂ ಕಾಣಬರುವುದಿಲ್ಲ. ಅದು ಅತ್ಯಂತ ಆರೋಗ್ಯವಂತ ಮನಸ್ಸುಗಳಿರುವಲ್ಲಿ ಮಾತ್ರ ಸಾಧ್ಯ.

ಇಂತಹ ಚಿಕ್ಕ ದೇಶ ಪಕ್ಕದ ಭಾರತಕ್ಕೆ ಜಲ ವಿದ್ಯುತ್ ರಫ್ತು ಮಾಡುತ್ತದೆ! ಆದರೆ ಭಾರತದಿಂದ ತರಿಸಿ ಕೊಳ್ಳುವ ಸಾಮಗ್ರಿಗಳೂ ಹೇರಳ.  ಪೆಟ್ರೋಲಿಯಮ್ ಉತ್ಪಾದನೆಗಳಲ್ಲದೆ, ಹಣ್ಣು,ತರಕಾರಿ, ಮೀನು, ಮಾಂಸ, ಇತ್ಯಾದಿ. ಹೌದು.. ಇಲ್ಲಿ  ವಿರೋಧಾಬಾಸಗಳಿಗೇನೂ ಕಡಿಮೆ ಇಲ್ಲ. ಇಲ್ಲಿ ಎಲ್ಲರೂ ಬೌದ್ಧ ಧರ್ಮದಲ್ಲಿ ನಂಬಿಕೆ ಇಟ್ಟವರಾದ್ದರಿಂದ ಪ್ರಾಣಿಗಳನ್ನು ಕೊಲ್ಲುವುದು ನಿಷಿದ್ಧ. ಆದರೆ  ಅಲ್ಲಿ ಎಲ್ಲರೂ ಶಾಕಾಹಾರಿಗಳೇನಲ್ಲ.  ಅವರೇ ಹೇಳುವಂತೆ, “ವಿ ಗೆತ್ ಮೀತ್ ಫ್ರಮ್ ಇಂದಿಯಾ!”

ಭೂತಾನದ ಅನೇಕ ವಿಶಿಷ್ಠತೆಗಳಲ್ಲಿ ಇವರ ದೇಶದ ಸ್ಟಾಂಪುಗಳೂ ಒಂದು. ಭೂತಾನದ ಸ್ಟಾಂಪ್‌ಗಳು ಜಗತ್ತಿನಾದ್ಯಂತ ಹೆಸರು ಗಳಿಸಿವೆ. ಇಲ್ಲೂ ತಮಾಷೆಯೆಂದರೆ ಇವರು ಆರಿಸುವ ಚಿತ್ರಗಳು. ಮೂನಿಕ್ ಒಲಿಂಪಿಕ್ಸ್ ಇರಬಹುದು, ಬೇರೆ ಬೇರೆ ದೇಶಗಳ ಅಪರೂಪದ ಪ್ರಾಣಿಗಳಿರಬಹುದು, ಯುರೋಪಿಯನ್ ಪೇಂಟಿಂಗ್‌ಗಳಿರಬಹುದು, ನೊಬೆಲ್ ಪ್ರಶಸ್ತಿ ವಿಜೇತರಿರಬಹುದು, ಭೂತಾನದ  ದಂತಕತೆಗಳಿರಬಹುದು ಅಥವಾ ವಾಲ್ಟ್ ಡಿಸ್ನಿ ಸೃಷ್ಟಿಸಿದ ಮಿಕ್ಕಿಮೌಸ್ ರೀತಿಯ ಪಾತ್ರಗಳಿರಬಹುದು… ಎಲ್ಲಾ ಇವರ ಸ್ಟಾಂಪ್‌ಗಳಲ್ಲಿ ಬರುತ್ತವೆ!  ಒಂದು ಸ್ವಾರಸ್ಯಕರವಾದ ಸ್ಟಾಂಪ್ ಮೂಝಿಯಂ ಕೂಡ ಇದೆ.

ಥಿಂಪುವಿನಲ್ಲಿರುವುದು ಒಂದೇ ಒಂದು ಸಿನೆಮಾ ಹಾಲ್. ನೀಮ ಹೇಳಿದಂತೆ “ಅಲ್ಲಿ ಯಾವಾಗಲೂ ಬೂಟನೀಸ್ ಫಿಲ್ಮ್ಸ್ ಬರುತ್ತೆ… ಇಲ್ಲಿ  ಸಿನೆಮಾ ಮಾಡುವುದೇ ಕಡಿಮೆ. ಶಾರ್ಟೇಜ್ ಆದಾಗ ಹಿಂದಿ ಪಿಲ್ಮ್ ಬರುತ್ತೆ…! ನಮಗೆಲ್ಲಾ ನಿಮ್ಮ ಸಿನೆಮಾ ತುಂಬಾ ಇಷ್ಟ!”

ಇಲ್ಲಿ ನಾವು ತಿರುಗಾಡಲು ಹೋದದ್ದು ಅವರ ರಜಾ ದಿನವಾಗಿತ್ತು. ಇಡೀ ಊರು ಪಿಕ್ನಿಕ್‌ನಂತಿತ್ತು. ಬಿಸಿಲು ಕಾಯಿಸುತ್ತಲೇ, “ತಾಶಿ ದೆಲೆಕ್” ಎಂದು ವಂದಿಸುವ ಬೊಚ್ಚು ಬಾಯಿಯ ಮುದುಕಿಯರು. ಗಿಟಾರ್ ಬಾರಿಸುವ ಹದಿ ಹರೆಯದ ಹುಡುಗರು.  ಫುಟ್ಪಾತುಗಳ ಮೇಲೆ ಕೇರ್್ ಆಡುವ  ಬಾಲ ಸನ್ಯಾಸಿಗಳು. ಆಟ ಆಡುವ ಜೂಲು ನಾಯಿಗಳು. ಬೀದಿಯುದ್ದಕ್ಕೂ ಹ್ಯಾಂಡಿಕ್ರಾಫ್ಟ್ ಮಾರುವ ಅಂಗಡಿಗಳು. ಅದರಲ್ಲಿ ಸುಂದರ ಕೈಮಗ್ಗದ ಬಟ್ಟೆಗಳು, ನೀಲ ಮಣಿ, ಹವಳ, ಮುತ್ತಿನ ಬೆಳ್ಳಿ ಒಡವೆಗಳು. ಊರ ಹೊರಗೆ ಮೈದಾನಗಳಲ್ಲಿ ಅವರಿಗೆ ಶತಮಾನ ಗಳಿಂದ ಬಳುವಳಿಯಾಗಿ ಬಂದ ಬಿಲ್ಲು ವಿದ್ಯೆ ಅಭ್ಯಸಿಸುವ ಜನ. ಎಲ್ಲರು ಟ್ರಿಮ್ಮೋ ಟ್ರಿಮ್ಮ್! ಒಬ್ಬರಿಗೂ ಬೊಜ್ಜಿಲ್ಲ!

ವಾಪಸ್ ಹೋಗುವಾಗ ಬಜಾರಿನಲ್ಲಿ   ಕೂಗು ಹಾಕುವ ಟಿಬೆಟನ್ ಹೆಗಸು. ಮಧ್ಯ ವಯಸ್ಕಳು, ಕಪ್ಪು ತಿರುಗುತ್ತಿರುವ ಪಂಕ್ತಿಯ ನಡುವೆ ಒಂದು ಚಿನ್ನದ ಹಲ್ಲು. ಅಂಗಡಿ ತುಂಬಾ ಸುಂದರ ಬೆಳ್ಳಿ ಆಭರಣಗಳು, ಬುದ್ಧನ ಮೂರ್ತಿಗಳು.  ಅವಳ ಅಂಗಡಿಗೆ ಎರಡು ಬಾಗಿಲು.  ನಾವು ಅದನ್ನು ಗಮವಿಸಿದ್ದು ನೋಡಿ ” ಬನ್ನಿ, …ನನ್ನ ಅಂಗಡಿಗೆ ಎರಡು ಬಾಗಿಲು ಯಾಕೆ ಗೊತ್ತಾ? ನನಗೆ ಎರಡು ಗಂಡಂದಿರು! ಒಬ್ಬ ಒಳಗೆ ದಾಗ ಇನ್ನೊಬ್ಬ ಹೊರಗೆ  ಹೋಗೋಕೆ…”  ಎಂದು ಸ್ವಾಗತಿಸಿದಳು. ಅದನ್ನು ಕಂಡು ಅಲ್ಲಿ ಇದ್ದ ಭೂತಾನೀ ಹುಡುಗಿಯರು ಮುಜುಗುರ ಪಟ್ಟುಕೊಂಡರು!

ನಾಲಕ್ಕನೇ ಚಿತ್ರ

ಒಂದು ಪಕ್ಕದಲ್ಲಿ ಇಂದಿಗೂ ಹೆಣ್ಣು ಮಕ್ಕಳು ಕಣ್ಣು ಬಿಡುವ ಮೊದಲೇ ಹೊಸಕಿ ಹಾಕುವ ನಮ್ಮ ದೇಶ. ಇನ್ನೊಂದು ಕಡೆ ಜಗತ್ತಿಗೇ ಬಾಲವೇಶ್ಯೆಯರ ಮಾರುಕಟ್ಟೆಯಾಗಿರುವ ನೇಪಾಳ. ನಡುವೆ ಅಡಗಿ ಕೂತಿರುವ ಭೂತಾನದಲ್ಲಿ, ಹೆಣ್ಣುಮಕ್ಕಳು ನೂರಾರು ವರ್ಷಗಳಿಂದ ಪುರುಷರೊಂದಿಗೆ ಸಮಸಮನಾಗಿ, ಯಾವ ಲಿಂಗಾಧಾರಿತ ತಾರತಮ್ಯಕ್ಕೂ ಒಳಗಾಗದೆ , ತಮಗೆ ಬೇಕೆಂದಂತೆ ತಮ್ಮ ಬದುಕನ್ನು ರೂಪಿಸಿಕೊಂಡು ಮುಕ್ತವಾಗಿ ಬದುಕುತ್ತಿರುವುದು ಅಚ್ಚರಿಯ ವಿಷಯವೇ.

ಇವರು ಯಾರೂ ಸ್ತ್ರೀವಾದೀ ಘೋಷಣೆಗಳನ್ನು ಬೀದಿ ಬೀದಿಯಲ್ಲಿ ಕೂಗಿದವರಲ್ಲ. ಬ್ರಾ ಸುಟ್ಟವರಲ್ಲ. ಅಥವಾ ಗ್ರಿಯರ್, ಗ್ಲೋರಿಯಾ, ಸಿಮೊನ್ ದಿ ಬುವಾ ಲೇಖನಗಳನ್ನು ಮನದಟ್ಟು ಮಾಡಿಕೊಂಡು ಅದರಿಂದ ಪ್ರಭಾವಿತರಾದವರಲ್ಲ. ಈ ಸಹಜ ಮುಕ್ತ ಚೇತನಗಳ ಬದುಕು, ನಂಬಿಕೆಗಳು ರೂಪಗೊಂಡಿರುವುದು ಗಂಡು, ಹೆಣ್ಣು ಸಮಾನರು ಎಂದು ಸಾರುವ  ಅಪೂರ್ವ ಸಂಸ್ಕೃತಿಯ ಮೂಲಕ. ಅವರಲ್ಲಿ ಗಟ್ಟಿಯಾಗಿ  ನೆಲೆಗೊಂಡಿರುವ ಆಧ್ಯಾತ್ಮಿಕ ಮೌಲ್ಯಗಳ ಮೂಲಕ. ಹಾಗಾಗಿ ಭೂತಾನ ದಕ್ಷಿಣ ಏಷ್ಯಾದ ಒಂದು ಭಾಗವಾಗಿದ್ದರೂ ಇಲ್ಲಿನ ಜನರ ನಿಲುವುಗಳು ಮಾತ್ರ ಬೇರೆ ದೇಶಗಳಿಗಿಂತ ತುಂಬಾ ಭಿನ್ನವಾದುದು.

ಭೂತಾನದ  ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಉತ್ಸಾಹದಿಂದ ತೊಡಗಿರುವುದನ್ನು ಕಾಣುತ್ತೇವೆ.  ಜನವಸತಿಯಿಂದ ದೂರವಾದ ಮೋಡ ಮುಸುಕಿದ ಪರ್ವತಗಳ  ನಡುವೆ ಪ್ರವಾಸಿಗಳಿಗಾಗಿ ಟೀ ಶಾಪುಗಳನ್ನು ನಡೆಸುವ ಯುವತಿಯರಾಗಿ. ಉತ್ಸಾಹದಿಂದ ಬೆಟ್ಟಗಳನ್ನು ಹತ್ತುತ್ತಾ , ಇಳಿಯುತ್ತಾ, ಜೊತೆಗೇ ನಡೆಯುತ್ತಾ ತಮ್ಮ ದೇಶದ ವಿಶಿಷ್ಟತೆಗಳನ್ನು ಹೆಮ್ಮೆಯಿಂದ ವಿವರಿಸುವ ಗೈಡುಗಳಾಗಿ.  ಬಿಲ್ಲು ವಿದ್ಯೆ ಪ್ರವೀಣರ ಚೆಂದದ ಪ್ರೇಯಸಿಯರಾಗಿ. ಮುದ್ದು ಮಕ್ಕಳ ಒಂಟಿ ತಾಯಿಯರಾಗಿ, ಭೂತಾನದ ಪ್ರಸಿದ್ಧ ಸ್ಟಾಂಪುಗಳ ಮೇನ ಸುಖೀ ಕುಟುಂಬದ ಚಿತ್ರದ ಪ್ರತೀಕಗಳಾಗಿ. ಹಳದಿ ಹೆಲ್ಮೆಟ್ಟುಗಳಲ್ಲಿ ಏಣಿ ಹತ್ತುತ್ತಾ ಕಟ್ಟಡ ನಿರ್ಮಾಣದಲ್ಲಿ ನೆರವಾಗುವ ಕಾರ್ಮಿಕರಾಗಿ. ಕೈ ಮಗ್ಗ ಗಳ ಮೇಲೆ ಬಣ್ಣ ಬಣ್ಣದ ಚಿತ್ತಾರದ ಶಾಲುಗಳ  ಸೃಷ್ಟಿಸುವ ಕಲಾವಿದೆಯರಾಗಿ. ಬುದ್ಧನ ನಾಡಿನ ನಿಶ್ಯಬ್ದ ವಿಹಾರಗಳಲ್ಲಿ  ಜಪಮಾಲೆ ಹಿಡಿದು ಕೂತ ನಗೆ ಮಾಸದ ವೃದ್ಧ ಸನ್ಯಾಸಿನಿಯರಾಗಿ.

ಸುಮಾರು ೭,೦೦,೦೦೦ ಜನರಿರುವ ಈ ದೇಶದಲ್ಲಿ ಶೇಕಡಾ ೭೫% ಜನ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಶೇಕಡಾ ೬೦% ಹೆಣ್ಣು ಮಕ್ಕಳು ಆಸ್ತಿಯ ಒಡೆತನ ಹೊ೦ದಿದ್ದಾರೆ.  ಒಂದು ಕುಟುಂಬದಲ್ಲಿ ಮುಖ್ಯ ನಿರ್ಧಾರಗಳನ್ನು ಮನೆ ಒಡತಿಯೇ ತೆಗೆದು ಕೊಳ್ಳುತ್ತಾಳೆ. ವಯಸ್ಸಾದ ತಂದೆ, ತಾಯಿಯರನ್ನು ಮಗಳೇ ನೋಡಿ ಕೊಳ್ಳುತ್ತಾಳೆ. ಇಲ್ಲಿ ಮದುವೆಯಾದ ಕೂಡಲೇ ಹುಡುಗ ಹುಡುಗಿಯ ಮನೆಯಲ್ಲಿ ವಾಸಿಸಲು ಶುರು ಮಾಡುತ್ತಾನೆ.  ಇಲ್ಲಿ ಲವ್ ಮ್ಯಾರೇಜ್, ಅರೇಂಜ್ಡ್ ಮ್ಯಾರೇಜ್ ಎರಡೂ ಆಗುತ್ತವೆ. ಎರಡಕ್ಕೂ ಸಮಾಜದ ಸಮ್ಮತಿಯಿದೆ. ಮದುವೆ ಆಗದೆಯೇ ಗಂಡು, ಹೆಣ್ಣು ಜೊತೆಗೆ ಬಾಳುತ್ತಾ ಮಕ್ಕಳನ್ನು ಪಡೆದರೂ ಸಮಾಜ ಯಾವ ಆಕ್ಷೇಪಣೆಯನ್ನೂ ಎತ್ತುವುದಿಲ್ಲ. ಅ ಮಕ್ಕಳಿಗೂ ಯಾವ ಹಣೆಪಟ್ಟಿ ಹಚ್ಚದೆ ಪ್ರೀತಿಯಿಂದ ಸ್ವೀಕರಿಸುತ್ತಾರೆ. ವಿವಾಹ ವಿಚ್ಚೇದನದ ಹಕ್ಕೂ ಗಂಡು, ಹೆಣ್ಣು ಇಬ್ಬರಿಗೂ ಸಮಸಮನಾಗಿದೆ.

ಹೆಣ್ಣು ಮಕ್ಕಳಿಗೆ ಸಾಮಾಜಿಕವಾಗಿ, ರಾಜಕೀಯವಾಗಿ, ಕೌಟುಂಬಿಕವಾಗಿ, ಆರ್ಥಿಕವಾಗಿ ಸಾಕಷ್ಟು ಸ್ವಾತಂತ್ರ್ಯ ಭೂತಾನದಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ದುಡಿಯುವ ಹೆಂಗಸರು ಈಗೀಗ ಕಟ್ಟಡ ಕಟ್ಟುವಂಥ ಕಷ್ಟದ ಕೆಲಸಗಳಿಗೂ ಇಷ್ಟಪಟ್ಟು ಹೋಗುತ್ತಿದ್ದಾರೆ.  ಬಣ್ಣಬಣ್ಣದ ಖೀರಾ ತೊಟ್ಟು ನಾಜೂಕಾಗಿ ಓಡಾಡುವ ಇಲ್ಲಿನ ಹೂವಿನಂಥಾ  ಹುಡುಗಿಯರು, ನೀಲಿ ಜೀನ್ಸ್, ಹೆಲ್ಮೆಟ್ ತೊಟ್ಟು ಗಂಡಸರಷ್ಟೇ ಕಷ್ಟ ಪಟ್ಟು ದುಡಿಯುತ್ತಾರೆ. ಇಲ್ಲಿ ತಮಗೆ ಹೆಣ್ಣು ಮಕ್ಕಳಾಗಲೆಂದು ಹೆಚ್ಚು ಜನ ಇಷ್ಟ ಪಡುತ್ತಾರೆ!

ಭೂತಾನದಲ್ಲಿ ಕೂಡು ಕುಟುಂಬಗಳು ಇನ್ನೂ ಇರುವುದರಿಂದ ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದರೆ ಮನೆಯಲ್ಲಿ ಮಿಕ್ಕವರು ಮಗುವನ್ನು ನೋಡಿಕೊಳ್ಳುತ್ತಾರೆ. ಗಂಡ, ಹೆಂಡತಿ, ಮಗು ಇರುವ ಕುಟುಂಬಗಳಲ್ಲಿಯೂ ಕೂಡಾ  ಹೆಂಡತಿ ಕೆಲಸಕ್ಕೆ ಹೋದಾಗ ಗಂಡ ಮಧ್ಯಾಹ್ನ ಮಗುವಿಗೆ ಊಟ ಮಾಡಿಸಿ ಮಲಗಿಸಿ, ಮನೆ ಕೆಲಸ ಮುಗಿಸಿ, ಹೊರಗಡೆ  ಬಿಸಿಲು ಕಾಸುತ್ತಾ ಗೆಳೆಯರೊಂದಿಗೆ ಕೇರಂ ಆಡುತ್ತಿದ್ದರೆ  ಅದರಲ್ಲಿ ಅಚ್ಚರಿಯೇನೂ ಇಲ್ಲ!