ನಾಡಿದ್ದು ಬುಧವಾರ, ಜುಲೈ ೨೨ರ ಮುಂಜಾನೆ ಸವಿ ನಿದ್ದೆ ಸರಿದು ದಿನದ ಮಾಮೂಲಿ ಚಟುವಟಿಕೆಗಳಿಗೆ ನಾಂದಿ ಹಾಡುವ ಹೊತ್ತಿಗೆ ನಿಸರ್ಗದ ಬೆರಗಿನ ವಿದ್ಯಮಾನವೊಂದು ಸಂಭವಿಸಲಿದೆ. ಅದುವೇ ಸೂರ್ಯಗ್ರಹಣ.

ಉತ್ತರ ಭಾರತದ ಸೂರತ್, ವದೋರಾ, ಇಂದೋರ್, ಭೂಪಾಲ್, ವಾರಣಾಸಿ, ಪಾಟ್ನಾ, ಡಾರ್ಜಿಲಿಂಗ್, ಭೂತಾನ್, ದಿಬ್ರೂಗರಿನ ಜನರಿಗೆ ಪೂರ್ಣ (ಖಗ್ರಾಸ) ಸೂರ್ಯಗ್ರಹಣ ವೀಕ್ಷಿಸುವ ಅದೃಷ್ಟವಿದ್ದರೆ, ನಮಗೆ ಮಾತ್ರ ಪಾರ್ಶ್ವ (ಖಂಡ) ಗ್ರಹಣದ ಭಾಗ್ಯ – ಅದೂ ಪ್ರಕೃತಿ ಒಲಿದರೆ ಮಾತ್ರ.

ಕರಾವಳಿ ಪ್ರದೇಶದ ನಮ್ಮಲ್ಲಿ ಅಂತೂ ಇಂತೂ ಜಡಿಗುಟ್ಟುವ ಮಳೆಗಾಲ ಆರಂಭವಾಗಿದೆ. ಮೋಡ ಕವಿದ ಆಗಸ ತುಂಬಿದೆ. ಹಾಗಾಗಿ ನಮ್ಮಲ್ಲಿ ಸೂರ್ಯಗ್ರಹಣ ಗೋಚರಿಸುವ ಸಾಧ್ಯತೆ ಕಡಿಮೆ. ಮುಂಜಾನೆ ೬.೨೦ರ ಹೊತ್ತಿಗೆ ಮೋಡ ಬಿರಿದರೆ,  ಚಂದ್ರನ ನೆರಳಿನಲ್ಲಿ ಅಂಶಿಕವಾಗಿ ಮರೆಯಾದ, ಅರ್ಧ ಚಂದ್ರಾಕೃತಿಯಲ್ಲಿ ಹೊಳೆವ ಸೂರ್ಯ ಕಾಣಿಸಬಹುದು. ಸಿಕ್ಕಿದ್ದು ಭಾಗ್ಯ.

ಗ್ರಹಣದ ಗುಟ್ಟು

ನಿಮಗೆ ಗೊತ್ತು, ಬೆಳಕು ಪಾರದರ್ಶಕ ಗಾಜಿನ ಮೂಲಕ ಹಾದು ಹೋದರೆ ನೆರಳು ಉಂಟಾಗದು. ಆದರೆ ಅಪಾರದರ್ಶಕ ವಸ್ತುವಿನ ಮೇಲೆ ಪಾತವಾದಾರೆ? ವಸ್ತು ಬೆಳಕನ್ನು ತಡೆಯುತ್ತದೆ – ಇನ್ನೊಂದು ಬದಿಯಲ್ಲಿ ನೆರಳು ಉಂಟಾಗುತ್ತದೆ. ಸೂರ್ಯನ ಬಿಸಿಲಿನಲ್ಲಿ ಗಿಡ ಮರಗಳ ನೆರಳು ಉಂಟಾಗುವುದು ಹೀಗೆಯೇ. ಇವು ಭೂಮಿಯಲ್ಲಿ ಬೆಳಕಿನ ನೆರಳಿನಾಟ. ಇಂಥದೇ ನೆರಳಿನಾಟ ಬಾನಂಗಳದಲ್ಲಿ ಸಂಭವಿಸಿದಾಗ ಚಂದ್ರಗ್ರಹಣ ಅಥವಾ ಸೂರ್ಯಗ್ರಹಣ ಘಟಿಸುತ್ತದೆ.

ಕತ್ತಲೆ ಕೋಣೆಯಲ್ಲಿ ಮೇಣದ ಬತ್ತಿ ಇದೆ ಎಂದು ಊಹಿಸಿಕೊಳ್ಳಿ. ಅದರೆದುರು ಒಂದು ಅಪಾರದರ್ಶಕ ಚೆಂಡನ್ನು  ಹಿಡಿದಿದ್ದೀರಿ. ಚೆಂಡಿನ ನೆರಳು ಬೀಳುತ್ತಿದೆ ಗೋಡೆಯ ಮೇಲೆ. ಮೇಣದ ಬತ್ತಿ ಮತ್ತು ಚೆಂಡನ್ನು ಜೋಡಿಸುವ ರೇಖೆಯ ಭಾಗದಲ್ಲಿ ನೆರಳು ಅತ್ಯಂತ ಗಾಢವಾಗಿದ್ದರೆ, ಉಳಿದ ಭಾಗದಲ್ಲಿ ಅರೆ ನೆರಳು ಮುಸುಕಿರುತ್ತದೆ. ವಿಜ್ಞಾನದ ಭಾಷೆಯಲ್ಲಿ ಗಾಢ ನೆರಳಿನ ಭಾಗವನ್ನು ಅಂಬ್ರ ಎಂದೂ, ಅರೆ ನೆರಳಿನ ಭಾಗವನ್ನು ಪಿನಂಬ ಎಂದೂ ಕರೆಯುತ್ತೇವೆ. ಅಂಬ್ರದ ಭಾಗದಿಂದ ನಿಮಗೆ ಮೇಣದ ಬತ್ತಿ ಗೋಚರಿಸದು. ಏಕೆಂದರೆ ಮೇಣದ ಬತ್ತಿಯನ್ನು ಚೆಂಡು ಸಂಪೂರ್ಣ ಮರೆಮಾಡಿರುತ್ತದೆ.

ಇದಕ್ಕೆ ಸಂವಾದಿಯಾದದ್ದು ಬಾನಿನಲ್ಲಿ ಉಂಟಾದಾಗ ಗ್ರಹಣಗಳು ಸಂಭವಿಸುತ್ತವೆ. ಮೇಣದ ಬತ್ತಿಯ ಸ್ಥಾನವನ್ನು ಹೊಳೆವ ಸೂರ್ಯ ಅಲಂಕರಿಸಿದೆ. ಚೆಂಡು ಇರುವಲ್ಲಿ ಚಂದ್ರ. ಗೋಡೆಯ ಸ್ಥಾನದಲ್ಲಿ ಭೂಮಿಯನ್ನು ಕಲ್ಪಿಸಿಕೊಳ್ಳಿ. ಸೂರ್ಯನ ಬೆಳಕು ಚಂದ್ರನ ಮೇಲೆ ಪಾತವಾಗುತ್ತಿದೆ ಮತ್ತು ಅದರ ವಿರುದ್ಧ ದಿಶೆಯಲ್ಲಿ ಚಂದ್ರನ ನೆರಳು ಬೀಳುತ್ತಿದೆ. ಈ ನೆರಳಿರುವ ಭಾಗಕ್ಕೆ ಭೂಮಿ ಬಂದಾಗ ಸೂರ್ಯ ಮರೆಯಾಗುತ್ತಾನೆ – ಪೂರ್ಣವಾಗಿ ಅಥವಾ ಅಂಶಿಕವಾಗಿ. ಇದುವೇ ಸೂರ್ಯಗ್ರಹಣ.

ಚಂದ್ರನ ಕಡು ನೆರಳಿನ ಭಾಗ ಭೂಮಿಯ ಯಾವ ಭಾಗದ ಮೇಲೆ ಬೀಳುತ್ತದೋ, ಆ ಭಾಗದ ಜನರಿಗೆ ಹಗಲಿನಲ್ಲಿಯೇ ಸೂರ್ಯ ಮರೆಯಾಗುತ್ತಾನೆ. ತುಸು ಹೊತ್ತು – ಹೆಚ್ಚೆಂದರೆ ಒಂದೆರಡು ನಿಮಿಷಗಳ ಕಾಲ – ಕಗ್ಗತ್ತಲು ಆವರಿಸುತ್ತದೆ. ಇದು ಪೂರ್ಣ ಸೂರ್ಯಗ್ರಹಣ. ಚಂದ್ರನ ಅರೆ ನೆರಳು ಆವರಿಸಿರುವ ಭಾಗದ ಮಂದಿಗೆ ಸೂರ್ಯನ ಒಂದು ಪಾರ್ಶ್ವವಷ್ಟೇ ಮರೆಯಾಗುತ್ತದೆ. ಮಬ್ಬು ಕತ್ತಲು. ಇದು ಪಾರ್ಶ್ವ ಅಥವಾ ಖಂಡ ಸೂರ್ಯಗ್ರಹಣ. ಜುಲೈ ೨೨ರಂದು ಕರ್ನಾಟಕದಾದ್ಯಂತ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.

ಸೂರ್ಯನ ಬೆಳಕು ಚಂದ್ರನ ಮೇಲೆ ಪಾತವಾಗಿ, ಆ ಬೆಳಕು ಅಲ್ಲಿಂದ ಪ್ರತಿಫಲನಗೊಂಡು ನಮಗೆ ಚಂದ್ರ ಕಾಣಿಸುತ್ತಾನೆ. ಸೂರ್ಯ ಪ್ರಕಾಶದಿಂದ ಚಂದ್ರನ ಅರ್ಧಗೋಳ ಬೆಳಗಿ ನಮಗೆ ಆ ಭಾಗ ಪೂರ್ತಿಯಾಗಿ ಗೋಚರಿಸಿದರೆ ಅದು ಹುಣ್ಣಿಮೆ. ಹೀಗಾಗಬೇಕಾದರೆ ಸೂರ್ಯ, ಭೂಮಿ ಮತ್ತು ಚಂದ್ರ ಸರಿ ಸುಮಾರು ಒಂದೇ ರೇಖೆಯಲ್ಲಿರಬೇಕು. ಅಂದರೆ ಹುಣ್ಣಿಮೆಯ ದಿನದಂದು ಭೂಮಿಯ ನೆರಳು ಚಂದ್ರನಿರುವ ಬದಿಗೆ ಚಾಚಿರುತ್ತದೆ. ಒಂದು ವೇಳೆ ಸೂರ್ಯ ಭೂಮಿ ಮತ್ತು ಚಂದ್ರ ಕರಾರುವಾಕ್ಕಾಗಿ ಒಂದೇ ರೇಖೆಯಲ್ಲಿ ಬಂದರೆ ಏನಾಗಬಹುದು?

ಭೂಮಿಯ ನೆರಳು ಚಂದ್ರನ ಬಿಂಬವನ್ನು ಆವರಿಸುತ್ತದೆ ಮತ್ತು ಚಂದ್ರ ಗೋಚರಿಸದು. ಇದು ಚಂದ್ರಗ್ರಹಣ. ಆದರೆ ಎಲ್ಲ ಹುಣ್ಣಿಮೆಗಳಲ್ಲಿ ಚಂದ್ರ ಗ್ರಹಣ ಘಟಿಸದು. ಏಕೆಂದರೆ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರನ ಕಕ್ಷೆಯ ತಲ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಭೂಮಿಯ ಕಕ್ಷಾ ತಲ ಪರಸ್ಪರ ಒಂದಷ್ಟು (೫ ಡಿಗ್ರಿ) ವಾಲಿಕೊಂಡಿರುವುದರಿಂದ ಭೂಮಿಯ ನೆರಳು ಎಲ್ಲ ಹುಣ್ಣಿಮೆಯ ದಿನಗಳಲ್ಲಿ ಚಂದ್ರನನ್ನು ಆವರಿಸದು; ಗ್ರಹಣ ಸಂಭವಿಸದು.

ಸೂರ್ಯ – ಚಂದ್ರ ಮತ್ತು ಭೂಮಿ ಸರಿಸುಮಾರು ಒಂದೇ ರೇಖೆಯಲ್ಲಿದ್ದಾಗ ಚಂದ್ರನ ಹೊಳೆವ ಭಾಗ ಕಾಣಿಸದು. ಇದು ಅಮಾವಾಸ್ಯೆ. ಒಂದು ವೇಳೆ ಸೂರ್ಯ- ಚಂದ್ರ ಮತ್ತು ಭೂಮಿ ಏಕ ರೇಖಸ್ಥವಾದರೆ, ಆಗ ಚಂದ್ರನ ನೆರಳು ಭೂಮಿ ಮೇಲೆ ಪಾತವಾಗುತ್ತದೆ. ಸೂರ್ಯ ಗ್ರಹಣ ಸಂಭವಿಸುತ್ತದೆ. ಹೇಗೆ ಎಲ್ಲ ಹುಣ್ಣಿಮೆಗಳಲ್ಲಿ ಚಂದ್ರ ಗ್ರಹಣವಾಗುವುದಿಲ್ಲವೂ, ಅದೇ ರೀತಿ ಎಲ್ಲ ಅಮವಾಸ್ಯೆಯ ದಿನಗಳಲ್ಲಿ ಸೂರ್ಯಗ್ರಹಣ ಸಂಭವಿಸದು. ಎಂದೇ ಸೂರ್ಯಗ್ರಹಣ ಅಪರೂಪದ ವಿದ್ಯಮಾನ.

ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನ ಬಿಂಬದ ನೆರಳು ನಿಧಾನವಾಗಿ ಸೂರ್ಯನ ಬಿಂಬವನ್ನು ಆವರಿಸುತ್ತ ಹೋಗುತ್ತದೆ. ಸೂರ್ಯ ಬಿಂಬ ಸಂಪೂರ್ಣವಾಗಿ ಮರೆಯಾಗುವ ಹತ್ತು ಹದಿನೈದು ನಿಮಿಷಗಳ ಮುನ್ನ ಕತ್ತಲಾಗುತ್ತದೆ. ವಾತಾವರಣದ ಉಷ್ಣತೆ ಕಡಿಮೆಯಾಗುತ್ತದೆ. ಬಾನ ಚತ್ತುವಿನಲ್ಲಿ ನಕ್ಷತ್ರಗಳೂ ಮಿಟುಕುತ್ತವೆ. ಪ್ರಾಣಿ, ಪಕ್ಷಿಗಳಿಗೂ ಆಗ ಗೊಂದಲ. ಪಾರ್ಶ್ವ ಸೂರ್ಯಗ್ರಹಣದಲ್ಲಿ ಇಷ್ಟೆಲ್ಲ ಆಗದೇ ಹೋದರೂ ನಿಸರ್ಗದ ಚೋದ್ಯದ ವೀಕ್ಷಣೆಯ ರೋಚಕ ಸಂತಸ ನಮ್ಮದಾಗುತ್ತದೆ.

ಸೂರ್ಯಗ್ರಹಣ ವೀಕ್ಷಣೆಸೂರ್ಯಗ್ರಹಣದ ವೀಕ್ಷಣೆಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಎಚ್ಚರಿಕೆಗಳುಂಟು. ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ಹೊರತು ಪಡಿಸಿ ಉಳಿದ ಸಂದರ್ಭದಲ್ಲಿ ಸೂರ್ಯಪಾನ ಮಾಡಲು ಸಾಧ್ಯವಾಗದು. ಏಕೆಂದರೆ ಸೂರ್ಯ ಅಷ್ಟೊಂದು ಪ್ರಖರವಾಗಿ ಹೊಳೆಯುತ್ತದೆ. ಆದರೆ ಗ್ರಹಣ ಕಾಲದಲ್ಲಿ ನೆರಳಿನೊಳಗೆ ಅಡಗಿರುವ ಸೂರ್ಯನ ಬಿಂಬವನ್ನು ನೋಡಲು ಸಾಧ್ಯ. ಆದರೆ ನೇರ ನೋಡುವ ಈ ಕ್ರಮ ದುಸ್ಸಹಾಸದ್ದು. ಏಕೆಂದರೆ ಆ ಹೊತ್ತು ಸುತ್ತಲಿನ ಪರಿಸರದಲ್ಲಿ ಬೆಳಕು ಕಡಿಮೆಯಾಗಿರುತ್ತದೆ. ಸೂರ್ಯನ ಬಿಂಬವನ್ನು ನೋಡುತ್ತ ಇಹವನ್ನು ಮರೆತಿರುತ್ತೇವೆ; ಕಣ್ಣಿನ ಪಾಪೆ ಅಗಲವಾಗಿ ತೆರೆದಿರುತ್ತದೆ. ಹಟಾತ್ತನೆ ಗ್ರಹಣ ಮೋಕ್ಷ ವಾಗಿ ಸೂರ್ಯನ ಪ್ರಕಾಶ ಬಿಡುಗಣ್ಣ ವೀಕ್ಷಕನ ಕಣ್ಣಿನಾಳಕ್ಕೆ ರಾಚಿದರೆ ದೃಷ್ಟಿಗೆ ತೊಂದರೆಯಾಗಬಹುದು.

ಒಂದೆರಡು ಎಕ್ಸ್-ರೇ ಫಿಲ್ಮನ್ನು ಒತ್ತೊತ್ತಾಗಿ ಜೋಡಿಸಿ ಅವುಗಳ ಮೂಲಕ ಸೂರ್ಯಗ್ರಹಣವನ್ನು ನೋಡಬಹುದು. ಪಾತ್ರೆಯಲ್ಲಿ ಸೆಗಣಿಯ ನೀರು ಅಥವಾ ಅರಸಿನದ ನೀರು ಹಾಕಿ, ಅದರಲ್ಲಿ ಕಾಣಿಸುವ ಮಂದ ಪ್ರಕಾಶದ ಸೂರ್ಯಬಿಂಬದಲ್ಲಿ ಗ್ರಹಣದ ವೀಕ್ಷಣೆ ಹೆಚ್ಚು ಸುರಕ್ಷಿತವಾದದ್ದು. ದುರ್ಬೀನು ಅಥವಾ ದೂರದರ್ಶಕದಿಂದ ನೇರ ವೀಕ್ಷಣೆ ಸರ್ವಥಾ ಕೂಡದು. ಅವುಗಳಿಂದ ಸೂರ್ಯನ ಬಿಂಬವನ್ನು ಗೋಡೆಯ ಮೇಲೆ ಅಥವಾ ಬಿಳಿಯ ಹಾಳೆಯ ಮೇಲೆ ಬೀಳಿಸುವ ಮೂಲಕ ಗ್ರಹಣದ ವೀಕ್ಷಣೆ ಮಾಡಬಹುದು.

ಸಿದ್ಧಾಂತಕ್ಕೊಂದು ಪುರಾವೆ 

ಸೂರ್ಯಗ್ರಹಣ ಬಂದಾಗಲೆಲ್ಲ ೧೯೧೯ರಲ್ಲಿ ನಡೆಸಿದ ಐತಿಹಾಸಿಕ ಪ್ರಯೋಗವೊಂದು ನೆನಪಾಗುತ್ತದೆ. ಆಲ್ಬರ್ಟ್ ಐನ್‌ಸ್ಟೈನ್ (೧೮೭೯-೧೯೫೫) ವಿಜ್ಞಾನ ಇತಿಹಾಸ ಕಂಡ ಅಪ್ರತಿಮ ಭೌತ ವಿಜ್ಞಾನಿ. ೧೯೦೫ರಲ್ಲಿ ‘Annelin der Physik’ ಪತ್ರಿಕೆಯಲ್ಲಿ ನಾಲ್ಕು ಸಂಶೋಧನ ಲೇಖನಗಳನ್ನು ಒಂದರ ಹಿಂದೆ ಇನ್ನೊಂದರಂತೆ ಪ್ರಕಟಿಸಿದಾಗ ಇಪ್ಪತ್ತೈದರ ತರುಣ ಆಲ್ಬರ್ಟ್ ಐನ್‌ಸ್ಟೈನ್ ಸ್ವಿಝರ್ಲೆಂಡಿನ ಪೆಟೆಂಟ್ ಆಫೀಸಿನಲ್ಲಿ ವೈಜ್ಞಾನಿಕ ಉಪಕರಣಗಳನ್ನು ಪರಿಶೀಲಿಸಿ ಅವುಗಳಿಗೆ ಪೇಟೆಂಟ್ ಒದಗಿಸಿವ “ಪೇಟೆಂಟ್ ಆಫೀಸಿನಲ್ಲಿ” ಗುಮಾಸ್ತ; ಅಜ್ಞಾತ ಪ್ರತಿಭೆ.

ಬೆಳಕು ಅಂದರೆ ಫೋಟಾನುಗಳ ಸಂತತ ಧಾರೆ ಎನ್ನುವ ಪ್ಲಾಂಕ್ ಸಿದ್ಧಾಂತವನ್ನು ಬಳಸಿಕೊಂಡು ಬೆಳಕಿಗೊಡ್ಡಿದ ಕೆಲವು ಲೋಹಗಳಿಂದ ಎಲೆಕ್ಟ್ರಾನುಗಳು ಯಾತಕ್ಕೆ ಮತ್ತು ಹೇಗೆ ಉತ್ಸರ್ಜನೆಗೊಳ್ಳುತ್ತವೆಂದು ತಮ್ಮ ಒಂದು ಸಂಶೋಧನ ಲೇಖನದಲ್ಲಿ ವಿವರಿಸಿದರೆ (ದ್ಯುತಿ ವಿದ್ಯುತ್ ಪರಿಣಾಮ, Photp Electric Effect) , ಇನ್ನೊಂದರಲ್ಲಿ ದ್ರವ ಮಾಧ್ಯಮದಲ್ಲಿ ತೇಲುವ ಧೂಳು ಅಥವಾ ಪರಾಗರೇಣುಗಳ ಯದ್ವಾತದ್ವ ಬ್ರೌನಿಯನ್ ಚಲನೆಯನ್ನು (ಇದನ್ನು ಸ್ಕಾಟ್ಲೆಂಡಿನ ಜೀವ ವಿಜ್ಞಾನಿ ರಾಬರ್ಟ್ ಬ್ರೌನ್ ಮೊದಲು ಗಮನಿಸಿದ) ವಿವರಿಸುವ ಸಿದ್ಧಾಂತವನ್ನು ಐನ್‌ಸ್ಟೈನ್ ಮಂಡಿಸಿದರು.

ಆಲ್ಬರ್ಟ್ ಐನ್‌ಸ್ಟೈನ್ ಪ್ರಕಟಿಸಿದ ಮೂರನೇಯ ಲೇಖನ “ವಿಶೇಷ ಸಾಪೇಕ್ಷತಾ ಸಿದ್ಧಾಂತ” (Special Theory of Relativity)  – ಭೌತ ವಿಜ್ಞಾನದ ಹರಿವಿಗೆ ಹೊಸ ದಿಶೆಯನ್ನೇ ಕಲ್ಪಿಸಿತು. ಚಲನೆ, ಕಾಲ, ದ್ರವ್ಯರಾಶಿಗಳ ನಿರಪೇಕ್ಷತ್ವವನ್ನೇ ಇಲ್ಲಿ ಐನ್‌ಸ್ಟೈನ್ ಪ್ರಶ್ನಿಸಿದರು; ಇವೆಲ್ಲವೂ ಸಾಪೇಕ್ಷವೆಂದು ನಿರೂಪಿಸಿದರು. ಇದರ ಮುಂದಿನ ಭಾಗವಾಗಿ ಪ್ರಕಟಿಸಿದ ಒಂದೂವರೆ ಪುಟಗಳ ಕಿರು ಟಿಪ್ಪಣಿಯಲ್ಲಿ ಶಕ್ತಿ ಮತ್ತು ದ್ರವ್ಯರಾಶಿ ಬೇರೆ ಬೇರೆಯಲ್ಲ, ಶಕ್ತಿಯನ್ನು ದ್ರವ್ಯವನ್ನಾಗಿಯೂ, ದ್ರವ್ಯವನ್ನು ಶಕ್ತಿಯನ್ನಾಗಿಯೂ ಪರಿವರ್ತಿಸಬಹುದೆಂದು E = Mc2   ಎಂಬ ಸರಳ ಸುಂದರ ಗಣಿತೋಕ್ತಿಯ ಮೂಲಕ ಹೇಳಿದರು. ಪತ್ರಕರ್ತರೊಬ್ಬರು ಐನ್‌ಸ್ಟೈನರಲ್ಲಿ ಕೇಳಿದರಂತೆ “ಏಕೆ. ಈ ಗಣಿತೋಕ್ತಿ ಇಷ್ಟೊಂದು ಸರಳ ಮತ್ತು ಸುಂದರ?”  ಐನ್‌ಸ್ಟೈನ್ ಉತ್ತರಿಸಿದರು “ಗಹನವಾಗಿರುವದ್ದು ಸರಳ ಮತ್ತು ಸುಂದರವಾಗಿರುತ್ತವೆ!”

ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತದ ಮುಂದಿನ ಹಂತವಾಗಿ ಕಾಲ (Time), ಆಕಾಶ (space)ಮತ್ತು ಗುರುತ್ವಗಳ (gravity) ಸಂಬಂಧದ ಬಗ್ಗೆ ಐನ್‌ಸ್ಟೈನ್ ಚಿಂತನೆಗೆ ತೊಡಗಿದರು. ಪೇಟೆಂಟ್ ಆಫೀಸಿನ ಗುಮಾಸ್ತನಿಗೆ ಇದೀಗ ಬರ್ಲಿನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕತ್ವ ಲಭಿಸಿತ್ತು. ದಶಕಗಳ ಚಿಂತನೆಯ ಫಲವಾಗಿ ರೂಪುಗೊಂಡದ್ದೇ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ (General Theory of Relativity).

ಕಥೆ ಹೇಳುತ್ತದೆ – ನ್ಯೂಟನ್ (೧೬೪೨ -೧೭೨೭) ಮಹಾಶಯ ತೊಟ್ಟಿನಿಂದ ಕಳಚಿಕೊಂಡ ಸೇಬಿನ ಹಣ್ಣು ಭೂಮಿಗೆ ಬೀಳುವುದನ್ನು ಕಂಡನಂತೆ – ಗುರುತ್ವಾಕರ್ಷಣ ಬಲದ ಅಸ್ತಿತ್ವವನ್ನು ಆವಿಷ್ಕರಿಸಿದನಂತೆ. ಅದು ಹೇಗೆಯೇ ಇರಲಿ, ಎಸೆದ ಕಲ್ಲು ಭೂಮಿಗೆ ಮತ್ತೆ ಮರಳಲು, ಭೂಮಿ ಸುತ್ತ ಚಂದ್ರ ಪರಿಭ್ರಮಿಸಲು, ಭೂಮಿ ಸೇರಿದಂತೆ ಎಲ್ಲ ಗ್ರಹ, ಉಪಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸಲು ಗುರುತ್ವ ಬಲ ಕಾರಣ. ಒಂದು ಬಗೆಯಲ್ಲಿ ಇದು ವಿಶ್ವನಿಯಂತ್ರಕ, ನಿಯಾಮಕ ಬಲ – ತೋರ್ಕೆಗೆ ಪ್ರಬಲವಾಗಿರುವ ಅತ್ಯಂತ ದುರ್ಬಲ ಬಲ. ಪ್ರಬಲರು ಆಂತರ್ಯದಲ್ಲಿ ದುರ್ಬಲರೇ!

ಗುರುತ್ವ ಬಲ ಸಂಜನಿಸುವುದು ಹೇಗೆ? ಅದೇತಕ್ಕೆ ಆಕರ್ಷಣೀಯ ಬಲ? ಬೆಳಕೂ ಸೇರಿದ ಹಾಗೆ ವಿದ್ಯುತ್ಕಾಂತ ವಿಕಿರಣದ ಮೇಲೆ ಇದರ ಪರಿಣಾಮ ಎಂಥದ್ದು? – ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಸಾಗಿದವರು ಐನ್‌ಸ್ಟೈನ್. ಮೂರು ಆಯಾಮಗಳುಳ್ಳ (ಉದ್ದ, ಅಗಲ ಮತ್ತು ಆಳ) ಆಕಾಶದಲ್ಲಿ ದ್ರವ್ಯ ಹರಡಿ ಹೋಗಿದೆ. ಎಲ್ಲಿ ದ್ರವ್ಯ ಇರುತ್ತದೋ ಅಲ್ಲಿ ಆಕಾಶ ತಿರುಚಿಕೊಳ್ಳುತ್ತದೆ, ವಕ್ರವಾಗುತ್ತದೆ – ದ್ರವ್ಯದ ರಾಶಿಯನ್ನು ಅವಲಂಬಿಸಿ. ರಬ್ಬರ್ ಹಾಳೆಯ ಮೇಲೆ ಭಾರದ ಗುಂಡನ್ನು ಇರಿಸಿದಾಗ ಗುಂಡು ಇರುವಲ್ಲಿ ಹಾಳೆ ತಗ್ಗುವಂತೆ.

ಆಕಾಶದ ಆಯಾಮದಲ್ಲಿ ಆಗಬಹುದಾದ ಇಂಥ ವ್ಯತ್ಯಾಸಗಳೇ ಗುರುತ್ವದ ಪರಿಣಾಮವೆಂದು ತಮ್ಮ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದಲ್ಲಿ ವಿವರಿಸಿದ ಐನ್‌ಸ್ಟೈನ್, ಅತೀ ಹೆಚ್ಚಿನ ದ್ರವ್ಯರಾಶಿ ಇರುವ ಅಥವಾ ಅತ್ಯಂತ ಹೆಚ್ಚಿನ ಗುರುತ್ವ ಬಲ ಇರುವ ವಸ್ತುವಿನ ಸನಿಹದಲ್ಲಿ ಬೆಳಕಿನ ಕಿರಣ ಬಾಗುತ್ತದೆಂದು (bending) ಹೇಳಿದರು.

ಅದು ತನಕ ಬೆಳಕು ಗುರುತ್ವ ಕ್ಷೇತ್ರದಲ್ಲಿ ಬಾಗದೇ ಸರಾಗವಾಗಿ ಒಂದೇ ದಿಶೆಯಲ್ಲಿ ಸಾಗುತ್ತದೆಂದೇ ನಂಬಲಾಗಿತ್ತು. ಇದೀಗ ಐನ್‌ಸ್ಟೈನ್ ಬೇರೆಯೇ ಪರಿಕಲ್ಪನೆ ನೀಡಿದರು. ಇದು ನಿಜವೇ? ನಕ್ಷತ್ರದ ಸನಿಹದಲ್ಲಿ ಬೆಳಕಿನ ಕಿರಣ ಬಾಗುತ್ತದೆಯೇ? ವಾಸ್ತವವಾಗಿ ಪ್ರಬಲ ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಗ್ಗುವ ಸಾಧ್ಯತೆ ಇದೆ ಎನ್ನುವ ಸೂಚನೆಯನ್ನು ಮ್ಯಾಕ್ಸ್‌ಪ್ಲಾಂಕ್ ಈ ಹಿಂದೆಯೇ ನೀಡಿದ್ದರು (೧೯೦೫). ಆದರೆ ವಿಜ್ಞಾನ ಪ್ರಪಂಚ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ – ಸ್ವಯಂ ಪ್ಲಾಂಕ್ ಕೂಡ!

ಭಾರತದಲ್ಲಿ ಸೂರ್ಯಗ್ರಹಣದ ಮಾರ್ಗಸರಳ ರೇಖೆಯಲ್ಲಿ ಸಾಗುವ ಬೆಳಕು ಪ್ರಬಲ ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಬಾಗುತ್ತದೆಂದು ಸಿದ್ಧಾಂತ ಹೇಳುತ್ತದೇನೋ ನಿಜ. ಪರೀಕ್ಷಿಸುವ ಬಗೆ ಹೇಗೆ? ಪ್ರಾಯೋಗಿಕ ವಿಧಾನಗಳು ಯಾವುವು? ಸಿದ್ಧಾಂತದ ಗಣಿತ ಗಣನೆಗಳು ಹೇಳುವಂತೆ, ಸೂರ್ಯ ಅಥವಾ ಅದೇ ಬಗೆಯ ನಕ್ಷತ್ರ ಬೆಳಕನ್ನು ಬಗ್ಗಿಸುವ ಪ್ರಮಾಣ ಕೇವಲ ೧.೭೫ ಕೋನ ಸೆಕುಂಡುಗಳು (ಕೋನದ ಅಳತೆಗೋಲಾದ ಒಂದು ಡಿಗ್ರಿಯ ೩೬೦೦ ಒಂದಂಶವೇ ಕೋನ ಸೆಕೆಂಡ್).

ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದ ಕರ್ತಾರನೇ ದಾರಿ ತೋರಿದರು. ಸಂಪೂರ್ಣ ಸೂರ್ಯಗ್ರಹಣ ಘಟಿಸಿದಾಗ ಸೂರ್ಯನನ್ನು ಸೇರಿಸಿಕೊಂಡಂತೆ ಆಸು ಪಾಸಿನಲ್ಲಿರುವ ನಕ್ಷತ್ರಗಳ ಛಾಯಾ ಚಿತ್ರ (ಫೊಟೊ) ತೆಗೆಯಬೇಕು. ನಕ್ಷತ್ರದಿಂದ ಬರುವ ಬೆಳಕು ಸೂರ್ಯನ ಸನಿಹ ಬಾಗುವುದರಿಂದ ಅದು ನಿಜ ಸ್ಥಾನದಿಂದ ವಿಚಲಿತವಾಗಿ ಗೋಚರಿಸುತ್ತದೆ. ನಕ್ಷತ್ರದ ನಿಜ ಸ್ಥಾನ ಮತ್ತು ವಿಚಲಿತ ಸ್ಥಾನವನ್ನು ಪರಿಶೀಲಿಸಿ ಬೆಳಕಿನ ಬಾಗುವಿಕೆಯನ್ನು ಅಳೆಯಬಹುದೆಂದು ಐನ್‌ಸ್ಟೈನ್ ಸೂಚಿಸಿದರು.

ಇಂಗ್ಲೆಂಡಿನ ಖಭೌತ ವಿಜ್ಞಾನಿ ಅರ್ಥರ್ ಎಡಿಂಗ್ಟನ್ (೧೮೮೨-೧೯೪೪) ಸಿದ್ಧಾಂತ ಮತ್ತು ಪ್ರಯೋಗಗಳಲ್ಲಿ ನಿಪುಣ; ರಾಯಲ್ ಸೊಸೈಟಿಯ ಕಾರ್ಯದರ್ಶಿ. ಸಾಪೇಕ್ಷತಾ ಸಿದ್ಧಾಂತಗಳನ್ನು ಪೂರ್ಣ ಅರಗಿಸಿಕೊಂಡು ಅವುಗಳ ಅಧಿಕೃತ ವಕ್ತಾರ ಎಂದೇ ಪರಿಗಣಿಸಲ್ಪಟ್ಟವರು. ೧೯೧೯. ಮೇ ೨೯ರಂದು ಪೂರ್ಣ ಸೂರ್ಯಗ್ರಹಣ ಸಂಭವಿಸಲಿತ್ತು.

ಸೂರ್ಯಗ್ರಹಣದ ವೀಕ್ಷಣೆಗೆ ಎರಡು ಪ್ರಶಸ್ತ ಸ್ಥಳಗಳನ್ನು ಗುರುತಿಸಲಾಯಿತು. ಒಂದು ಬ್ರೆಝಿಲ್ , ಮತ್ತೊಂದು ಪಶ್ಚಿಮಾಫ್ರಿಕಾದ ಗಿನಿ ಕಡಲ್ಗಾಲುವೆಯಲ್ಲಿರುವ ಪ್ರಿನಿಸಿಪೀ ನಡುಗುಡ್ಡೆ. ಪ್ರಿನ್ಸಿಪೀ ತಂಡದ ನೇತೃತ್ವವನ್ನು ಸ್ವಯಂ ಎಡಿಂಗ್ಟನ್ ವಹಿಸಿದ್ದರು. ಎಡಿಂಗ್ಟನ್ ಮತ್ತು ಅವರ ಸಹೋದ್ಯೋಗಿ ಕಟಿಂಗ್‌ಹ್ಯಾಮ್ ಪ್ರಿನ್ಸಿಪೀ ನಡುಗುಡ್ದೆಗೆ ಒಂದು ತಿಂಗಳು ಮುಂಚಿತವಾಗಿಯೇ ತೆರಳಿ ಠಿಕಾಣಿ ಹೂಡಿತು.

ತಂಡ ತೆರಳುವ ಮುನ್ನ ಕಟಿಂಗ್‌ಹ್ಯಾಮ್ ಅಂದಿನ ರಾಯಲ್ ಸೊಸೈಟಿ ಅಧ್ಯಕ್ಷರಾಗಿದ್ದ ಫ್ರಾಂಕ್ ಡೈಸನ್ ಬಳಿ ತಮ್ಮ ಕಳವಳ ವ್ಯಕ್ತ ಪಡಿಸಿದರಂತೆ ” ಒಂದು ವೇಳೆ ನಮ್ಮ ಪ್ರಯೋಗ ಸಿದ್ಧಾಂತ ಸೂಚಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಅಥವಾ ಶೂನ್ಯ ಫಲಿತಾಂಶ ನೀಡಿದರೆ? ” ಡೈಸನ್ ತಮಾಷೆಯಾಗಿ ಹೇಳಿದರು “ಎಡಿಂಗ್ಟನ್ ಮತಿಭ್ರಮಣೆಗೊಂಡು ನಡುಗಡ್ಡೆಯಿಂದ ಮನೆಗೆ ನೀನೊಬ್ಬನೇ ಬರುವಂತಾಗುತ್ತದೆ.”

ಮೇ೨೯ ಆಗಮಿಸಿತು. ಅಪರಾಹ್ನ ೧,೩೯ ಘಂಟೆಗೆ ಗ್ರಹಣ ಪ್ರಾರಂಭ. ಬೆಳಗ್ಗಿನಿಂದಲೇ ಮಳೆ ಜಿನುಗುತ್ತಿತ್ತು. ಎಡಿಂಗ್ಟನ್ ಹತಾಶರಾದರು. ಆದರೆ ಗ್ರಹಣ ಆರಂಭವಾಗುವ ತುಸು ಮೊದಲು ಮೋಡ ಚದರಿತು. ಗ್ರಹಣ ಆರಂಭವಾಗುತ್ತಲೇ ಎಡಿಂಗ್ಟನ್ ಕ್ಯಾಮೆರಾ ತನ್ನ ಕೆಲಸ ಆರಂಭಿಸಿತು. ಆಗ ಇಂದಿನಂಥ ಸುಸಜ್ಜಿತ ಕ್ಯಾಮೆರಾ ಇರಲಿಲ್ಲ. ಒಂದು ಚಿತ್ರ ತೆಗೆದೊಡನೆ ಹೊಸ ಛಾಯಾಗ್ರಾಹಕ ಫಲಕ ಜೋಡಿಸಬೇಕಾಗಿತ್ತು. ಅಂತೂ ಗ್ರಹಣ ಆರಂಭದಿಂದ ಮೋಕ್ಷದ ತನಕ ಒಟ್ಟು ಹದಿನಾರು ಚಿತ್ರಗಳನ್ನು ಎಡಿಂಗ್ಟನ್ ತೆಗೆದರು.

ಎಂಡಿಗ್ಟನ್ತಮ್ಮ ಡೈರಿಯಲ್ಲಿ ಎಡಿಂಗ್ಟನ್ ಬರೆಯುತ್ತಾರೆ “ನಾನು ಗ್ರಹಣವನ್ನು ವೀಕ್ಷಿಸಲಿಲ್ಲ. ಛಾಯಾಗ್ರಾಹಕ ಫಲಕವನ್ನು ಬದಲಾಯಿಸುವುದರಲ್ಲೇ ಮಗ್ನನಾದೆ. ಒಮ್ಮೆ ಗ್ರಹಣ ಆರಂಭವಾದ ಮೇಲೆ ಒಂದಾದ ಮೇಲೊಂದರಂತೆ ಗ್ರಹಣ ಹಿಡಿದ ಸೂರ್ಯನ ಛಾಯಾಚಿತ್ರ ತೆಗೆಯುತ್ತ ಹೋದೆ.”

ಪ್ರಿನ್ಸಿಪೀ ಮತ್ತು ಬ್ರೆಝಿಲ್ ತಂಡಗಳು ಇಂಗ್ಲೆಂಡಿಗೆ ಮರಳಿದವು. ಸಂಸ್ಕರಿಸಿದ ಛಾಯಾ ಚಿತ್ರಗಳಲ್ಲಿ ಸೂರ್ಯನ ಹಿನ್ನೆಲೆಯ ನಕ್ಷತ್ರಗಳು ಪಡಿಮೂಡಿದ್ದುವು – ಆದರೆ ಅವು ತಮ್ಮ ಎಂದಿನ ಸ್ಥಾನದಲ್ಲಿರಲಿಲ್ಲ – ತುಸು ವಿಚಲಿತವಾಗಿದ್ದುವು. ಐನ್‌ಸ್ಟೈನರ ಸಿದ್ಧಾಂತ ಸೂಚಿಸಿದಂತೆ ಆ ನಕ್ಷತ್ರಗಳಿಂದ ಸಾಗಿ ಬಂದ ಬೆಳಕಿನ ಕಿರಣ ಸೂರ್ಯನ ಸನಿಹದಲ್ಲಿ ಬಾಗಿ ಭೂಮಿಯಲ್ಲಿರುವ ವೀಕ್ಷಕನಿಗೆ ತಲುಪುವುದರಿಂದ ನಕ್ಷತ್ರಗಳು ತಮ್ಮ ನಿಜ ಸ್ಥಾನದಿಂದ ತೋರ್ಕೆಗೆ ಪಲ್ಲಟಗೊಂಡಿದ್ದುವು.

ಸಿದ್ಧಾಂತ ಹೇಳುವಂತೆ ಸೂರ್ಯನ ಸನಿಹದಲ್ಲಿ ಬೆಳಕಿನ ಕಿರಣದ ಬಾಗುವಿಕೆ ೧.೭೫ ಕೋನ ಸೆಕೆಂಡುಗಳು. ಪ್ರಯೋಗದಲ್ಲಿ ದೊರೆತ ಫಲಿತಾಂಶ ೧.೬೫ ಕೋನ ಸೆಕುಂಡುಗಳು. ಪ್ರಯೋಗ ಮಿತಿಯೊಳಗೆ ಈ ವ್ಯತ್ಯಾಸ ಸಜವಾದದ್ದೇ. ನಂತರದ ದಿನಗಳಲ್ಲಿ ನಡೆಸಿದ ಇದೇ ಬಗೆಯ ಪ್ರಯೋಗಗಳು ಪ್ರಬಲ ಗುರುತ್ವ ಕ್ಷೇತ್ರದಲ್ಲಿ ಬೆಳಕಿನ ಬಾಗುವಿಕೆಯನ್ನು ಸ್ಥಿರೀಕರಿಸಿದವು.

ಅದು ಮಹಾಯುದ್ಧದ ಕಾಲ. ವೈರಿ ರಾಷ್ಟ್ರವಾದ ಜರ್ಮನಿಯ ವಿಜ್ಞಾನಿ ಐನ್‌ಸ್ಟೈನರ ವೈಜ್ಞಾನಿಕ ಸಿದ್ಧಾಂತವನ್ನು ಬಹಿಷ್ಕರಿಸಬೇಕೆನ್ನುವ ಕರೆ ಇತ್ತು. ಆದರೆ ಎಡಿಂಗ್ಟನ್ ಮನ್ನಿಸಲಿಲ್ಲ. ಅವರು ಹೇಳಿದರು “ವೈರಿಯ ಸಿದ್ಧಾಂತವನ್ನು ಪರೀಕ್ಷಿಸುವುದರಲ್ಲಿ ಮತ್ತು ಅಂತಿಮವಾಗಿ ಅದನ್ನು ರುಜುವಾತಿಸುವ ಮೂಲಕ ನಮ್ಮ ದೇಶದ ಖಗೋಳಾಲಯ ವಿಜ್ಞಾನದ ಸತ್ ಪರಂಪರೆಯನ್ನು ಎತ್ತಿ ಹಿಡಿದಿದೆ ಮತ್ತು ಇಂಥ ಪಾಠ ಇಂದು ಜಗತ್ತಿಗೆ ಅವಶ್ಯವೆಂದು ತೋರಿಸಿದೆ”

ಹಾಲೆಂಡಿನ ಭೌತ ವಿಜ್ಞಾನಿ ಹೆನ್ರಿಕ್ ಲೊರೆಂಟ್ಜ್ (೧೮೫೩ – ೧೯೨೮) ಐನ್‌ಸ್ಟೈನರಿಗೆ ತಂತಿ ರವಾನಿಸಿದರು ” ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಾಗುವುದನ್ನು ಎಡಿಂಗ್ಟನ್ ಪ್ರಾಯೋಗಿಕವಾಗಿ ಸಮರ್ಥಿಸಿದ್ದಾರೆ. ಅಭಿನಂದನೆಗಳು”  ಪತ್ರಿಕೆಗಳಲ್ಲಿ ಅಭೂತಪೂರ್ವ ಪ್ರಚಾರ ದೊರೆಯಿತು – ಬೆಳಕು ಬಗ್ಗಿತು, ನ್ಯೂಟನ್ ಸಿದ್ಧಾಂತದ ಅವರೋಹಣ – ನೂತನ ಸಿದ್ಧಾಂತದ ಆರೋಹಣ ಇತ್ಯಾದಿ. ಆದರೆ ಐನ್‌ಸ್ಟೈನ್ ಈ ಎಲ್ಲ ದಾಂದಲೆಗಳಿಂದ ದೂರವಾಗಿದ್ದರು. ಗ್ರಹಣ ಕಾಲದಲ್ಲಿ ತೆಗೆದ ಛಾಯಾ ಚಿತ್ರಗಳನ್ನು ಐನ್‌ಸ್ಟೈನರಿಗೆ ತೋರಿಸಿದಾಗ ಅವರು ಅತ್ಯಂತ ಮುಗ್ದರಾಗಿ ಉದ್ಗರಿಸಿದರಂತೆ “ಓಹ್, ಎಷ್ಟೊಂದು ಸುಂದರ!”

ಐನ್‌ಸ್ಟೈನರ ಶಿಷ್ಯೆ ರೊಸೆಂಥಾಲ್‌ಶ್ಚ್ವೆಂಡರ್ ಐನ್‌ಸ್ಟೈನರನ್ನು ಈ ಬಗ್ಗೆ ಅಭಿನಂದಿಸಿದಾಗ ಅವರಂದರಂತೆ ‘ಸಿದ್ಧಾಂತ ಸರಿ ಎಂದು ನನಗೆ ಮೊದಲೇ ಅರಿವಿತ್ತು.’ ಶಿಷ್ಯೆ ಬಿಡಲಿಲ್ಲ, ಕೆಣಕಿದಳು ‘ಒಂದು ವೇಳೆ ಸಿದ್ಧಾಂತ ತಪ್ಪೆಂದು ಸಾಬೀತಾಗಿದ್ದರೆ?’ ಐನ್‌ಸ್ಟೈನ್ ತಣ್ಣಗೆ ಉತ್ತರಿಸಿದರು ‘ನಾನು ಆ ದೇವರ ಬಗ್ಗೆ ವ್ಯಥೆ ಪಡುತ್ತಿದ್ದೆ. ಪುಣ್ಯ, ಸಿದ್ಧಾಂತ ಸರಿಯಾಯಿತಲ್ಲ!’

ಸುದ್ದಿಗೆ ಗ್ರಾಸ 

ಜುಲೈ ೨೨ರಂದು ಗೋಚರಿಸಲಿರುವ ಪೂರ್ಣ ಸೂರ್ಯಗ್ರಹಣ ಈ ಶತಮಾನದ ದೀರ್ಘಕಾಲದ್ದೆನ್ನುವ ಹೆಗ್ಗಳಿಕೆ ಇದೆ. ಉತ್ತರ ಭಾರತದಲ್ಲಿ ಮಳೆ, ಮೋಡ ತುಂಬಿದ ಆಗಸ ಪ್ರಾಯಶ: ಗ್ರಹಣ ವೀಕ್ಷಣೆಗೆ ತೊಡಕಾಗಬಹುದು. ಮಳೆಯ ದಿನಗಳು ಅಲ್ಲದ ಜಪಾನ್, ಚೀನಾದಲ್ಲಿ ಪೂರ್ಣ ಸೂರ್ಯಗ್ರಹಣ ತನ್ನೆಲ್ಲ ವೈಭವದಿಂದ ಗೋಚರಿಸುವ ನಿರೀಕ್ಷೆ ಎಲ್ಲ ಖಗೋಳಪ್ರಿಯರಿಗೆ. ಈ ಭಾಗಗಳಲ್ಲಿ ಬರೋಬ್ಬರಿ ಆರೂವರೆ ನಿಮಿಷಗಳ ಕಾಲ ಪೂರ್ಣ ಗ್ರಹಣ ಗೋಚರಿಸಲಿದೆ. ಇಷ್ಟು ದೀರ್ಘ ಸೂರ್ಯಗ್ರಹಣ ಭವಿಷ್ಯದಲ್ಲಿ ಜೂನ್೧೩, ೨೧೩೨ ರಂದು ಸಂಭವಿಸಲಿದೆಯಂತೆ. ಪೂರ್ಣ ಸೂರ್ಯಗ್ರಹಣ ವೀಕ್ಷಣೆಗಾಗಿ ಚೀನಾ, ಬರ್ಮಾಗಳಲ್ಲಿ ವಿಜ್ಞಾನಿಗಳ ತಂಡ, ಪ್ರವಾಸಿಗಳ ದಂಡು ಈಗಾಗಲೇ ಬೀಡುಬಿಟ್ಟಿವೆ.

ಸೂರ್ಯಗ್ರಹಣಇಂದು ಗ್ರಹಣದ ಬಗ್ಗೆ ಸ್ಪಷ್ಟ ವಿವರಗಳು ನಮಗೆ ತಿಳಿದಿವೆ. ಸಾಂಪ್ರದಾಯಿಕವಾಗಿ ಬಂದಂಥ ಯಾವ ಭ್ರಾಮಕ ಬಂಬಿಕೆಗಳು ಖಂಡಿತ ಬೇಕಾಗಿಲ್ಲ. ಗ್ರಹಣಗಳು ಬರಿದೇ ಬೆಳಕು ಮತ್ತು ನೆರಳಿನ ಆಟ. ವೀಕ್ಷಿಸಿ ಖುಷಿ ಪಡುವ ಹೊತ್ತು. ವೀಕ್ಷಣೆಯಿಂದ ಸ್ಪೂರ್ತಿ ಪಡೆದು ನಿತ್ಯ ಕಾಯಕದಲ್ಲಿ ಇನ್ನಷ್ಟು ಉತ್ಸಾಹ ತೋರಬಹುದಾದ ಕಾಲ.

ಇದ್ದದ್ದು ಹಟಾತ್ತನೆ ಮಾಯವಾದಾಗ ಸಹಜವಾಗಿಯೇ ಬೆರಗು, ಕುತೂಹಲ. ಹಾಗಾಗಿಯೇ ಗ್ರಹಣಗಳು ಜನ ಮಾನಸದಲ್ಲಿ ಕುತೂಹಲ ಹುಟ್ಟಿಸುತ್ತವೆ. ಒಂದು ಕಾಲವಿತ್ತು. ದಾನವರಾದ ರಾಹು ಅಥವಾ ಕೇತು ಸೂರ್ಯನನ್ನು ಹಿಡಿದು ನುಂಗುತ್ತಾರೆ. ಆಗ ಸಾಮ್ರಾಜ್ಯಗಳು ಉರುಳುತ್ತವೆ, ಬಿರುಗಾಳಿ ಏಳುತ್ತದೆ, ಮಾರಕ ರೋಗಗಳು ಹಬ್ಬುತ್ತವೆ, ಆಹಾರ ಸೇವಿಸಿದರೆ ಅಜೀರ್ಣ ಖಂಡಿತ, ಗ್ರಹಣ ನಿಟ್ಟಿಸಿದ ವ್ಯಕ್ತಿಯ ಜೀವನವೇ ಗ್ರಹಣಗ್ರಸ್ಥ … ಹೀಗೆ ಜನಸಮುದಾಯವನ್ನು ಪ್ರಾಜ್ಞರೆಂಬವರು ನಂಬಿಸಿದರು; ವಿಪತ್ತುಗಳ ಜವಾಬ್ದಾರಿಯನ್ನು ಗ್ರಹಣಕ್ಕೆ ತಳಕು ಹಾಕಿದರು. ಅಂದಿಗೆ ಅದು ಬಲು ಚಂದ. ಆದರೆ ಇಂದಿಗೆ ಅಲ್ಲ!

ಸೂರ್ಯಗ್ರಹಣ ಬಂದಾಗ ಸಹಜವಾಗಿಯೇ ನಮ್ಮ ದೃಶ್ಯ ಮಾಧ್ಯಮವಾದ ಟಿವಿ ಚ್ಯಾನೆಲ್ಲುಗಳಿಗೆ ಸುದ್ದಿಯ ಸುಗ್ಗಿ. ವಾಸ್ತವವಾಗಿ ಅವು ಗ್ರಹಣದ ವೈಜ್ಞಾನಿಕ ಹಿನ್ನಲೆಯನ್ನು ಬಿತ್ತರಿಸಬಹುದು, ಐನ್‌ಸ್ಟೈನರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತಕ್ಕೆ ಸೂರ್ಯಗ್ರಹಣ ಹೇಗೆ ಸಮರ್ಥನೆ ಒದಗಿಸಿತೆಂದು ಹೇಳಬಹುದು, ಗ್ರಹಣ ಸಂದರ್ಭದಲ್ಲಿ ವಿಜ್ಞಾನಿಗಳು ಸೌರ ಮಂಡಲದಲ್ಲಿ ಹೀಲಿಯಮ್ ಅನಿಲವನ್ನು ಆವಿಷ್ಕರಿಸಿದ ಬಗೆಯನ್ನು  ನಿರೂಪಿಸಬಹುದು,  ಸೂರ್ಯನ ಮೇಲ್ಮೈಯ ಕಪ್ಪು ಕಲೆಗಳ ಬಗ್ಗೆ ಹೇಳಬಹುದು, ಸೌರ ಮಾರುತದ ಬಗ್ಗೆ ವಿವರಣೆ ಕೊಡಬಹುದು, ಸೂರ್ಯನ ಹೊರ ಆವರಣದ ರೋಚಕತೆಯನ್ನು ವಿಶದೀಕರಿಸಬಹುದು, ಇಂದು ವಿಜ್ಞಾನಿಗಳ ತಂಡ ಹಮ್ಮಿಕೊಂಡಿರುವ ಪ್ರಯೋಗಗಳು ಮತ್ತು ಅವು ಸೂರ್ಯನ ಬಗ್ಗೆ ನೀಡಬಹುದಾದ ಹೊಸ ಹೊಳವುಗಳ ಕುರಿತಾಗಿ ವಿವರಿಸಬಹುದು. ಒಟ್ಟಾರೆಯಾಗಿ ಜನಮಾನಸದಲ್ಲಿ ತೀರ ಅಗತ್ಯವಾದ ವೈಜ್ಞಾನಿಕ ಮನೋಭಾವವನ್ನು ಪ್ರೇರಿಸಲು ನಿಸರ್ಗ ಒದಗಿಸಿದ ಅತ್ಯುತ್ತಮ ಅವಕಾಶವನ್ನು ಇನ್ನಿಲ್ಲದಂತೆ ಬಳಸಿಕೊಳ್ಳಬಹುದು.

ಆದರೆ ಪ್ರಶ್ನೆ ಇರುವುದು – ನಮ್ಮ ದೃಶ್ಯ ಮಾಧ್ಯಮಗಳು ಈ ಕೆಲಸ ಮಾಡುತ್ತಿವೆಯೇ? ಈ ಹಿಂದೆ ಗ್ರಹಣ ಕಾಲದಲ್ಲಿ ಫೋನ್-ಇನ್ ಕಾರ್ಯಕ್ರಮ ಏರ್ಪಡಿಸಿ ಜ್ಯೋತಿಷಿಗಳ ಮೂಲಕ ಗ್ರಹಣಗಳು ಹೇಗೆ ವ್ಯಕ್ತಿ, ಸರಕಾರ ಮತ್ತು ರಾಷ್ಟ್ರದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆಂದು ಗಂಟಲು ಹರಿಯುವಂತೆ ಟಿವಿ ಚ್ಯಾನೆಲ್ ಬೊಬ್ಬಿಡುವುದನ್ನು ಕಂಡದ್ದು ನೆನಪಾಗುತ್ತಿದೆ. ಮನ ಭಾರವಾಗುತ್ತದೆ.

ಈ ಬಾರಿಯ ಗ್ರಹಣ ಕಾಲದಲ್ಲಾದರೂ ನಮ್ಮ ವೈಚಾರಿಕ ಪ್ರಜ್ಞೆಗೆ ಗ್ರಹಣ ಬಡಿಯದಿರಲಿ. ಆದರೆ ಒಂದು ವರ್ಷದೊಳಗೆ ಎಷ್ಟು ನಾವು ಬದಲಾಗಬಹುದು?

[ಚಿತ್ರಗಳು-ಸಂಗ್ರಹದಿಂದ]