ಅದೆಲ್ಲ ಚಿಟಿಕೆ ಬಾರಿಸುವುದರೊಳಗೆ ಆಗಿಹೋಯಿತು. ತರಕಾರಿ ಪೇಟೆಯಿಂದ ಮರಳುವಾಗ ದಾರಿಯಲ್ಲಿ ಹಠಾತ್ತನೆ ಜಡಿಯತೊಡಗಿದ ಮಳೆಗೆ ತತ್ತರಿಸಿದ ಭವಾನಿ ಪಕ್ಕದ ಅಂಗಡಿ ಮಾಡಿನ ಮರೆಗೆ ಚಿಮ್ಮಿ ತೂರಿಕೊಂಡಳು. ಅದಾಗಲೇ ಅಲ್ಲಿ ಇನ್ನಷ್ಟು ಜನ ನಿಂತು ಇಕ್ಕಟ್ಟಾಗಿತ್ತು. ಅಂಗಡಿಯ ಒಸ್ನಗಾರ ಕಿಟ್ಟ “ಬರ್ರಿ, ಒಳಗೆ ಬಂದು ಕೂತ್ಕೊಳ್ರಿ” ಎಂದು ಕರೆದದ್ದೆ ನುಸುಳಿ ಮಟ್ಟಲೇರಿ ಕಟ್ಟಿಗೆಯ ಬೆಂಚಿನ ಮೇಲೆ ಒದ್ದೆ ಸೀರೆಯಲ್ಲಿ ಕೂತಾಗಲೇ ಝಗ್ಗನೆ ಹೊಳೆದು ಹೋಯಿತು ಭವಾನಿಗೆ- “ಅರೆರೆ ಇದು ಸೊನಗಾರನ ಅಂಗಡಿ” -ಎಂದು. ಒಂದು ಬಗೆಯ ರೋಮಾಂಚನದಲ್ಲಿ ಚಳಿಗೆ ಸಣ್ಣಗೆ ನಡುಗಿದಳು.

ಈ ಊರಿಗೆ ಸೊಸೆಯಾಗಿ ಬಂದ ಕಳೆದ ಹತ್ತಾರು ವರ್ಷಗಳಲ್ಲಿ ಭವಾನಿ ಸಾವಿರಾರು ಸಲವಾದರೂ ಈ ರಸ್ತೆಯಲ್ಲಿ ನಡೆದಿದ್ದಾಳೆ. ಪ್ರತಿಸಲ ನಡೆವಾಗಲೂ ಕಡೆಗಣ್ಣಿಂದ,ಈ ಸೊನಗಾರನ ಅಂಗಡಿಯ ಕಪಾಟುಗಳಲ್ಲಿ ಮಿರುಗುವ ಬೆಳ್ಳಿ ಬಂಗಾರದ ಪ್ರಭೆಯನ್ನು ಗಮನಿಸಿದ್ದಾಳೆ. ಇದೇ ಬೆಂಚಿನಲ್ಲಿ ಕೂತು ಸೊನಗಾರನೊಂದಿಗೆ ಚೌಕಾಶಿ ನಡೆಸುವ ಹೆಂಗಸರ ಭಾಗ್ಯಕ್ಕೆ ಕರುಬಿದ್ದಾಳೆ. ತಾನೂ ಒಂದು ದಿನ ಈ ಅಂಗಡಿಯಲ್ಲಿ ಕೂತು ಚಿನ್ನದ ಚೌಕಾಶಿ ನಡೆಸಿಯೇನು ಎಂಬ ಕನಸನ್ನು ಕೆಲದಿನ ಕಂಡವಳು ನಂತರ ಕ್ರಮೇಣ ಅದನ್ನೂ ಬಿಟ್ಟುಕೊಟ್ಟು, ಕೇರಿಯ ಯಾವುದಾದರೂ ಪರಿಚಿತ ಹೆಂಗಸು ಬಳೆಗಿಳೆ ಮಾಡಿಸಿಕೊಳ್ಳುವುದಿದ್ದರೆ ಅವಳ ಜೊತೆಗಾದರೂ ಹೋಗಿ ನೋಡಬೇಕು ಎಂಬ ಆಸೆ ಹೊಂದಿ, ಅದೂ ಕೈಗೂಡಿರಲಿಲ್ಲ. ಈ ಅಂಗಡಿಯಲ್ಲಿ ಕಂಡುಬರುವುದೇ ಒಂದು ಮಹಾಯೋಗ ಊರ ಹೆಂಗಸರಿಗೆ, ಅವರಿಗಾಗ ಎಲ್ಲಿಲ್ಲದ ಠೀವಿ. ಸಾದಾ ಮಾತುಗಳಿಗೂ ಬೇರೆಯದೇ ಗತ್ತು. ಕಿರಾಣಿ ಅಂಗಡಿಗೆ ಆತುಕೊಂಡು ಎದುರಿನ ಬುಟ್ಟಿಯಿಂದ ಅಕ್ಕಿ, ಗೋಧಿ, ಕಾಳುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಹಾರಿಸಿ ಹಾರಿಸಿ ಪರಿಕಿಸುವುದಕ್ಕೂ, ಇಲ್ಲಿ ಗುಲಾಬಿ ಬಣ್ಣದ ಕಾಗದದಲ್ಲಿಟ್ಟ ಬಳೆ, ಬೆಂಡೋಲೆ, ಹರಳುಗಳನ್ನು ನಿಟ್ಟಿಸುವ ಶೈಲಿಗೂ ಅಜಗಜಾಂತರವಿದೆ. ಸೊನಗಾರನ ಅಂಗಡಿಯಲ್ಲಿಯ ತಮ್ಮ ಉಪಸ್ಥಿತಿಯನ್ನು ನೋಡಲು ರಸ್ತೆಯಲ್ಲಿ ಯಾರೂ ಇರದಿದ್ದರೆ ಹೆಂಗಸರಿಗೆ ಎಲ್ಲಾ ವ್ಯರ್ಥ ಅನಿಸಿಬಿಟ್ಟು “ಗಡಿಬಿಡಿಯಲ್ಲಿ ಕಿಟ್ಟಿ ಆರಾಮವಾಗಿ ಆಗ್ಲಿ” -ಎಂದು ಸೊನಗಾರನಿಗೆ ಏನೇನೂ ಅವಸರ ಮಾಡದೆ ರಸ್ತೆಯ ಗಮನ ಸೆಳೆಯುತ್ತಾ ಕಾಲಹರಣ ಮಾಡುತ್ತಿದ್ದರು. ಹೀಗೊಂದು ವಿಚಿತ್ರ ಶಕ್ತಿ ಸ್ಥಳವಾಗಿ ಬಿಟ್ಟಿರುವ ಈ ಸೊನಗಾರನ ಅಂಗಡಿಯಲ್ಲಿ ಯಾವ ಪೂರ್ವಕಲ್ಪನೆಯೂ ಇರದೆ ಈಗ ಕೂತು ಬಿಟ್ಟಿರುವ ಭವಾನಿಗೆ ಎನೇನೋ ಆಗಿಹೋಯಿತು. ಕಣ್ತೆರೆದು ಕಪಾಟಿನ ಒಡವೆ, ಬೆಳ್ಳಿಲೋಟ, ಉಂಗುರಗಳನ್ನೆಲ್ಲ ನೋಡಲೂ ವಿಚಿತ್ರ ಹಿಂಜರಿಕೆಯಾಗಿ, ಒಮ್ಮೆ ರಸ್ತೆಕಡೆ, ಒಮ್ಮೆ ಸೊನಗಾರನ ಪುಟ್ಟ ಆಟಿಕೆಯಂಥ ತಕ್ಕಡಿಯ ಕಡೆ ನೋಡುತ್ತ ತಳಮಳಪಟ್ಟಳು.

ಆದರೂ ಒಳಗೆಲ್ಲ ಸಣ್ಣ ಖುಷಿ. ಸೊನಗಾರನ ಅಂಗಡಿಯಲ್ಲಿ ತಾನೂ ಕಂಡುಬಂದೆ ಅಂತ. ಮಳೆ ಸ್ವಲ್ಪ ಹೊಳವಾದದ್ದೆ ಕಿಟ್ಟನತ್ತ ಕೃತಜ್ಞತೆಯಿಂದ ತಲೆ ಅಲ್ಲಾಡಿಸಿ ರಸ್ತೆಗಿಳಿದುಬಿಟ್ಟಳು. ಈವತ್ತು ಎರಡೆರಡು ಮನೆಯಲ್ಲಿ ಸಂತರ್ಪಣೆಯ ಅಡಿಗೆಗೆ ಹೋಗಲಿಕ್ಕಿತ್ತು. ಅವಸರದಿಂದ ಮನೆ ತಲುಪಿದವಳೇ ಬಾಗಿಲಲ್ಲಿ ತೆಂಗಿನ ಮಡಲು ಹೆಣೆಯುತ್ತ ಕೂತಿದ್ದ ಮುದಿ ಅತ್ತೆಗೆ ದೇವಸ್ಥಾನಕ್ಕೆ ಹೋಗುತ್ತೇನೆ ಅಂತ ಹೇಳಿ ಮೂಲೆ ಮನೆಯ ಅಡಿಗೆಗೆ ಹೊರಟುಬಿಟ್ಟಳು. ನಾಲ್ಕಾರು ತೆಂಗಿನ ಮರಗಳ ಸಣ್ಣ ಹಿತ್ತಲಿನ ಮನೆಯಲ್ಲಿ ಅತ್ತೆ ಸೊಸೆ ಇಬ್ಬರೇ ಇರುತ್ತಿದ್ದರು. ಮುಪ್ಪಿನಿಂದ ಕಣ್ಣು ಮಂಕಾಗಿರುವ ಅತ್ತೆ ಇಡೀ ದಿನ ತೆಂಗಿನಗರಿ ಹೆಣೆಯುತ್ತ ಕೂತಿರುತ್ತಿದ್ದಳು. ಗಂಡ ಲೀಲಾಧರ ಘಟ್ಟದ ಮೇಲೆ ಸಿರ್ಸಿಯ ಸಮೀಪದ ಹಳ್ಳಿಯ ಹೆಲ್ತ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ. ಅದೆಷ್ಟೋ ವರ್ಷಗಳಿಂದ ಅವನು ಅಲ್ಲೇ ಇದ್ದ ಊರ ಕಡೆಗೆ ವರ್ಗಾ ಮಾಡಿಸಿಕೊಂಡು ಬರುವ ಆಸೆಯೇ ಅವನಿಗಿದ್ದಂತಿರಲಿಲ್ಲ. ಬಂದಾಗಲೆಲ್ಲಾ ಭವಾನಿ ದುಂಬಾಲು ಬೀಳುತ್ತಿದ್ದಳು- “ಇಲ್ಲಿಗೇ ಸಮೀಪ ಎಲ್ಲಾದರೂ ವರ್ಗ ಮಾಡಿಸಿಕೊಂಡು ಬನ್ನಿ” -ಅಂತ. ಅವನಿಗದರ ಪರಿವೆಯೇ ಇರಲಿಲ್ಲ. ಈ ಮನೆಯ ಮೇಲೆ ಕಣ್ಣಿಟ್ಟುಕೊಂಡಿರುವ ದಾಯಾದಿಯೊಬ್ಬನ ಭಯ ಇದ್ದಂತಿತ್ತು ಅವನಿಗೆ.

ಬರೇ ಹೆಂಗಸರೇ ಇದ್ದರೆ ಯಾರೂ ಏನೂ ಮಾಡುವುದಿಲ್ಲ. ತಾನು ಬಂದುಬಿಟ್ಟರೆ ಸಾಕು. ಮಾತು ಚರ್ಚೆ ಜಗಳ ಕೋರ್ಟು ಎಲ್ಲಾ ಶುರುವಾಗಬಹುದು ಎಂದು ಕಳ್ಳನಂತೆ ಬಂದು ಹುಳ್ಳಗೆ ಎರಡು ದಿನ ಇದ್ದು ಮತ್ತೆ ನಸುಕಿನ ಬಸ್ಸಿಗೇ ಘಟ್ಟ ಏರಿಬಿಡುತ್ತಿದ. ತನ್ನದೂ ಒಂದು ಮನೆ, ಸಂಸಾರ ಎಂಬೆಲ್ಲ ಕನಸುಗಳೊಂದಿಗೆ ಸಮುದ್ರದ ಈ ಊರಿಗೆ ಸೊಸೆಯಾಗಿ ಬಂದಿದ್ದ ಭವಾನಿಯ ಬಾಳು ಸಂತರ್ಪಣೆಯ ಅಡಿಗೆ, ಕೇರಿಯ ಬಾಳಕ ಸಂಡಿಗೆ, ಇರುವ ಎರಡು ಹಸುಗಳ ಕೊಟ್ಟಿಗೆಗಳ ದಿನಚರಿಯಲ್ಲಿ ಒಂದು ಹಪ್ಪಳದ ಮಣೆಯಂತೆ ಗೋಲವಾಗಿ ಸಪಾಟಾಗಿ ಆಗಿಹೋಯಿತು. ಮಂದಕಣ್ಣಿನ ಮುದಿ ವಿಧವೆ ಅತ್ತೆಯ ಜೊತೆ ಜಗಳ ಕಾಯಲೂ ಪ್ರಲೋಭನೆಗಳಿರಲಿಲ್ಲ. ಸಾರಿಗೆ ಉಪ್ಪು ಜಾಸ್ತಿ ಆಯಿತು, ತೆಂಗಿಗೆ ನೀರು ಹಾಕಲು ಸ್ವಲ್ಪ ತಡವಾಯಿತು. ಇಂಥ ಕಾರಣಗಳಲ್ಲಿ ದಮ್ಮೇ ಇರಲಿಲ್ಲ. ಹೀಗಾಗಿ ಅತ್ತೆಯ ಕಣ್ಣು ತಪ್ಪಿಸಿ ಸಂತರ್ಪಣೆಯ ಅಡಿಗೆಗೆ ಹೋಗುವುದರಲ್ಲಿ ಅವಳಿಗೊಂದು ಹುರುಪು ಬರತೊಡಗಿತು. ಅಲ್ಲಿ ಸಿಕ್ಕ ದಕ್ಷಿಣೆ, ಪದಾರ್ಥಗಳನ್ನು ಕದ್ದು ಮುಚ್ಚಿ ಕೂಡಿಡತೊಡಗಿದಳು. ನಡುರಾತ್ರಿ ಯಾವುದಾದರೂ ಮನೆಗೆ ಟೂರಿಸ್ಟು ಬಸ್ಸು ಬಂದುಬಿಟ್ಟರೆ ಬೇರೆ ಬೇರೆ ಮನೆಗಳಿಂದ ಸೈಕಲ್ ಬಿಟ್ಟುಕೊಂಡು ಮಾಣಿಗಳು “ಭವಾನಕ್ಕಾ… ಅಡಿಗೆಗೆ ಬರಬೇಕು” -ಎಂದು ಬಾಗಿಲು ತಟ್ಟಿ ಕೂಗಿ ಹೋಗುತ್ತಿದ್ದರು. ತೆಪ್ಪಗೆ ಹೋಗಿ ಆ ಮನೆಯ ಹೆಂಗಸರ ಜತೆಗೂಡಿ ದೊಡ್ಡ ಬಾಣೆಲೆಗಳಲ್ಲಿ ಅಡಿಗೆಗಿಡಿಗೆ ಮುಗಿಸಿ- ಮತ್ತೊಮ್ಮೆ ಉಂಡು-ಒಂದಿಷ್ಟು ಪದಾರ್ಥ, ಲಾಡು ಕಟ್ಟಿಸಿಕೊಂಡು ಸದ್ದಾಗದಂತೆ ಬಂದು ಮಲಗಿಬಿಡುತ್ತಿದ್ದಳು. ತಾನು ಕೂಡಿಟ್ಟ ಪುಡಿಗಾಸುಗಳನ್ನೆಲ್ಲ ಸೇರಿಸಿ ಒಂದು ದಿನ ಖಂಡಿತ ಬಳೆ ಮಾಡಿಸಿಕೊಳ್ಳಬೇಕು ಎಂದು ಹಂಬಲಿಸಿದಳು- “ಚಿನ್ನ ಹಾಕಿಕೊಂಡ್ರೆ ನನಗೆ ಮೈಯೆಲ್ಲಾ ನವೆ ಆಗ್ತದೆ. ಅದೇನೋ ಸ್ಪರ್ಶಪಿತ್ಥವಂತೆ” -ಎಂದು ಆಡಿಕೊಂಡು, ಎಲ್ಲರ ಕಣ್ಣು ತಪ್ಪಿಸಿಕೊಂಡು ಇರುತ್ತಿದ್ದಳು. ಲೀಲಾಧರ ಮನಸ್ಸು ಬಂದರೆ ಮಾತ್ರ ಹಣ ಕಳಿಸುತ್ತಿದ್ದ. ಹೀಗಾಗಿ ಹಾಲು ಮಾರಿ ಬಂದ ಪುಡಿಗಾಸಿನಲ್ಲಿ ಎಲ್ಲ ನಿಭಾಯಿಸುವಲ್ಲಿ ಸುಸ್ತಾಗಿ ಹೋಗುತ್ತಿತ್ತು. ಮಕ್ಕಳೂ ಆಗಿಬಿಟ್ಟಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೊ ಎಂದು ಆ ಕೊರಗನ್ನೂ ಹೊಟ್ಟೆಯಲ್ಲಿ ಹಾಕಿಕೊಂಡುಬಿಟ್ಟಿದ್ದಳು.

ಈವತ್ತು ಅಚಾನಕವಾಗಿ ನಡೆದುಹೋದ ಸೊನಗಾರನ ಅಂಗಡಿಯ ಪ್ರವೇಶ ಭವಾನಿಯ ಮೈಮನಗಳಿಂದ ಬೇಗ ಅಳಿಸಿಹೋಗುವಂತಿರಲಿಲ್ಲ. ಎಷ್ಟು ಸರಾಗವಾಗಿ ಆ ಪುಟ್ಟ ಬೆಂಚಿನಲ್ಲಿ ತಾನು ಕೂತು ಬಂದುಬಿಟ್ಟೆ ತನ್ನನ್ನು ಯಾರ್‍ಯಾರು ನೋಡಿಬಿಟ್ಟಿರಬಹುದು. ಅಡಿಗೆಗೆ ಹೋದಲ್ಲಿ ಯಾರಾದರೂ ಕೇಳಿಯಾರೆ ಎಂದು ಆಸೆ ಪಟ್ಟಳು. ದೂರದಲ್ಲಿ ಹೆಂಗಸರು ಕಿಸಿಪಿಸಿ ಅಂತರಂಗ ಮಾಡಿಕೊಂಡರೆ ತನ್ನ ಬಗ್ಗೆಯೇ ಇರಬಹುದು ಎಂದು ಜಾಗರೂಕಳಾದಳು. ಊರ ಹೆಂಗಸರ ಕಣ್ಣಲ್ಲಿ ಹೇಗೋ, ಆದರೆ ತನ್ನ ಅಂತಸ್ತು ಏರಿದವಳಂತೆ ಸಲೂಪ ಭಾರವಾಗಿ ನಡೆದಳು.

ಇದಾದ ಕೆಲವೇ ದಿನಗಳ ನಂತರ ಒಮ್ಮೆ ಮೂಲೆಮನೆಯಲ್ಲಿ ಬೂಂದಿಲಾಡು ಕಟ್ಟಲು ಕೂತಿದ್ದಳು. ಯಾರೋ “ಲೀಲಾಧರಾ”-ಎಂದಂತಾಯಿತು. ಆ ಕಡೆ ನೋಡಿದರೆ ಬಾವಿಕಟ್ಟೆಯ ಬದಿಯ ಹಿಂಬಾಗಿಲಿನಲ್ಲಿ ಬೆನ್ನಿಗೆ ಬಿಸಿಲುಕಟ್ಟಿಕೊಂಡು ಲೀಲಾಧರ ನಿಂತಿದ್ದಾನೆ. ಅರೆ, ಚೂರೂ ಪೂರ್ವಸೂಚನೆಯೇ ಇಲ್ಲದೆ ಊರಿಗೆ ಬಂದು, ನೇರವಾಗಿ ಈ ಯಾರದೋ ಅಡಿಗೆಮನೆಯ ಹಿಂಬಾಗಿಲಿನಲ್ಲಿ ನುಗ್ಗಿ ಬಂದುಬಿಟ್ಟಿದ್ದಾನೆ. ಹಿನ್ನಲೆಯ ಝಳದಿಂದಾಗಿ ಆತನ ಮುಖವೇ ಅಸ್ಪಷ್ಟವಾಗಿದೆ. ಭವಾನಿ ಏಳಬೇಕೋ, ನಗಬೇಕೋ, ಬಾಯ್ಬಿಡಬೇಕೋ ಎಂಬ ತಬ್ಬಿಬ್ಬಿನಲ್ಲಿದ್ದಾಗಲೇ, ತಪ್ಪು ನಾಟಕದಲ್ಲಿ ಪ್ರವೇಶಗೈದ ಪಾತ್ರಧಾರಿಯಂತೆ ಸೀದ ಅವಳೆಡೆಗೆ ನುಗ್ಗಿ ಬಂದ. ಏನಾಗುತ್ತಿದೆಯೆಂದು ತಿಳಿಯುವುದರ ಮೊದಲೇ ಅವಳ ಕೈಲಿದ್ದ ಬೂಂದಿ ಲಾಡುವೊಂದನ್ನು, ಕಸಿದುಕೊಂಡು ಧಪ್ ಎಂದು ಅವಳ ತಲೆಗೆ ಹೊಡೆದ. “ನಡೆ  ಮನೆಗೆ” ಎಂದು ಒದರಿದ. ಲೀಲಾಧರನ ಈ ರೂಪವನ್ನು, ಅದೂ ಸಾರ್ವಜನಿಕವಾಗಿ, ಎಂದೂ ಕಂಡರಿಯದ ಭವಾನಿ ಅತ್ತಿತ್ತ ಹೆಂಗಸರತ್ತ ಬೆಪ್ಪುನಗೆಯಲ್ಲಿ ನೋಡುತ್ತ ಎದ್ದು ನಿಂತಳು. ಎರಡೇ ಸೆಕೆಂಡಿನ ಹಿಂದೆ ಬೈತಲೆಯ ಮೇಲೆ ನುಚ್ಚುನೂರಾದ ಬೂಂದಿಲಾಡುವಿನ ಸದ್ದು ಕನಸಿನಂತೆ ಮತ್ತೊಮ್ಮೆ ಮನದಲ್ಲಿ ಮರುಕಳಿಸಿ ಮಾಯವಾಯಿತು. ಈ ಎರಡೇ ಮಾನಸಿಕ ಲಾಡೂಪ್ರಹಾರಕ್ಕೆ ತತ್ತರಿದವಳಂತೆ, ಅದೇನಾಯಿತೋ ಧೊಪ್ಪೆಂದು ಅವನ ಪದತಲದಲ್ಲಿ ಉರುಳಿಬಿದ್ದು ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು “ನನ್ನ ಇಲ್ಲಿ ಬಿಡಬೇಡ್ರೋ, ನಿಮ್ ಜತೆಗೇ ಸಿರ್ಸಿಗೆ ಕರ್ಕೊಂಡ್ ಹೋಗ್ರೋ…. ಒಪ್ಪೊತ್ತು ಊಟ ಮಾಡ್ತೆ… ಇಲ್ಲಿ ನನ್ನ ಬೇವರ್ಸಿಯಾಗಿ ಬಿಡ್ ಬೇಡ್ರೋ…” -ಎಂದು ಕೂಗತೊಡಗಿದಳು. ಲೀಲಾಧರನ ಎರಡೂ ಕಾಲುಗಳನ್ನು ಹಿಡಿದು ಅವಳು ಅಲಿಗಿಸುತ್ತಿದ್ದುದರಿಂದ ಅವನ ಮುಂದಿನ ಚಲನವಲನಗಳು ಸಂಪೂರ್ಣವಾಗಿ ಅನಿಯೋಜಿತವಾಗಿಬಿಟ್ಟು, ಎರಡು ಕ್ಷಣ ಬಿರುಗಾಳಿಗೆ ಸಿಕ್ಕ ತೆಂಗಿನ ಮರದಂತೆ ಓಲಾಡಿ ನಂತರ ಅವನೂ ಅವಳ ತಲೆಯ ಮೇಲಿಂದ ಆಚೆಕಡೆಗೆ ಬಿದ್ದುಬಿಟ್ಟನು. ಒಂದರ ಬೆನ್ನಿಗೊಂದರಂತೆ ಜರುಗಿದ ಈ ಪಾತ್ರಗಳ ಸದ್ದಿಗೆ ಬೆಚ್ಚಿದವರು ನಗಬೇಕೋ ಬೇಡವೋ ಎಂಬ ಫಜೀತಿಯಲ್ಲೆ ಧಾವಿಸಿ ಬಂದು ಸನಿಹದ ಲಾಡೂ ಬುಟ್ಟಿಗಳನ್ನು ಸುರಕ್ಷಿತ ಜಾಗಗಳಿಗೆ ಒಯ್ದರು. ಅಷ್ಟರಲ್ಲಿ ಆ ಮನೆಯ ಹಿರಿಯ ದತ್ತಣ್ಣ ಬಂದು ಇಬ್ಬರನ್ನೂ ಎಬ್ಬಿಸಿ, ಇಬ್ಬರಿಗೂ ಅಕ್ಕಪಕ್ಕ ಬಾಳೇ ಬಡಿಸಿ ನವದಂಪತಿಗಳಿಗೆ ಉಪಚರಿಸುವಂತೆ ಎದುರು ಕೂತು ಉಣಬಡಿಸಿ, ಲಾಡೂಗೀಡೂ ತಿನ್ನಿಸಿ ಮನೆಗೆ ಅಂತ ಪೊಟ್ಟಣದಲ್ಲೂ ಕಟ್ಟಿಸಿ ಕೈಗಿತ್ತು ಕಳಿಸಿಕೊಟ್ಟನು. ಖಾಸಗೀ ಗಂಟೊಂದು ಧಡಲ್ ಎಂದು ಸಾರ್ವಜನಿಕವಾಗಿ ಬಿಚ್ಚಿಕೊಂಡ ನಂತರದ ವಿಚಿತ್ರ ಮೌನವೊಂದು ಈಗಾಗಲೇ ಇಬ್ಬರಲ್ಲಿ ಸೇರಿಕೊಂಡಿತ್ತು. ಆ ಕುರಿತು ಚಕಾರವನ್ನೂ ಎತ್ತಲಾರದಷ್ಟು ಬಿಗಿಯಾಗಿ ಅದು ಆವರಿಸಿಕೊಂಡಿತ್ತು.

ರಾತ್ರೆ ತಮ್ಮ ತಮ್ಮ ಚಾಪೆಗಳಲ್ಲಿ ಬಿದ್ದುಕೊಂಡಲ್ಲೆ ಇಬ್ಬರೂ ಕಣ್ಣುಬಿಟ್ಟುಕೊಂಡು ಕತ್ತಲನ್ನು ನೋಡಿದರು. ಆಘಾತ ಮತ್ತು ಎಚ್ಚರಗಳ ನಡುವಿನ ಅರ್ಥವಾಗದ ತಳಮಳದ ವಲಯದಲ್ಲಿದ್ದರು. ಲಾಡೂ ಪ್ರಹಾರ ಪ್ರಸಂಗ, ಅಂಗಿಯನ್ನು ಒಳಹೊರ ಉಪರಾಟಿ ಮಾಡಿ ಕುಡುಗಿದಂತೆ, ಇಬ್ಬರನ್ನೂ ಕುಡುಗಿ ಸುಳ್ಳು ಹೂರಣಗಳೆನ್ನೆಲ್ಲ ಬಯಲಾಗಿಸಿ ಝಳಝಳ ಮಾಡಿದಂತಿತ್ತು. “ಚಿನ್ನ ಮಾಡಿಸಿಕೊಳ್ಳಲು ಹೋಗಿದ್ದೀಯೇನೇ ರಂಡೆ” ಎಂದು ಲೀಲಾಧರ ಕೂಗಿದ್ದರೆ ಅಪಮಾನಕ್ಕೊಂದು ಅರ್ಥ ಒದಗಿದಂತಾಗುತ್ತಿತ್ತು. ಕನಿಷ್ಟಪಕ್ಷ “ಕದ್ದು ಅಡಿಗೆಗೆ ಹೋಗಿ ಹಣ ಮಾಡುತ್ತಿದ್ದಿಯೇನೆ? ಎಷ್ಟು ಅಡಗಿಸಿಟ್ಟೆ ಹೇಳು?” -ಎಂದಾದರೂ ಎಲ್ಲರೆದುರು ಆತ ಅರಚಬೇಕಿತ್ತು -ಎಂದು ಭವಾನಿಗೆ ಅನಿಸಿತು. ಪ್ರಸಂಗ ನಡೆದಾಗ ತಮ್ಮ ತಮ್ಮ ಬಾಳೆಲೆಯಲ್ಲಿ ತಂತಮ್ಮ ಲಾಡು ತಿನ್ನುತ್ತ ನಿರಾತಂಕವಾಗಿ ಮುನ್ನಡೆದ ಊರ ಜನತೆಯ ಮುದ್ರೆಯಲ್ಲಿ ಸಮಾಜವೆಂಬ ಪೆಡಂಭೂತದ ಪೊಳ್ಳುತನವೆಲ್ಲ ಬಯಲಾದ ಭಾಸವೂ ಆಯಿತು. ಲೀಲಾಧರನಿಗೆ ಅದೇ ಹೊಳೆಯಿತೋ ಎಂಬಂತೆ ಮಲಗಿದಲ್ಲೆ ದೊಡ್ಡಕ್ಕೆ ನಕ್ಕುಬಿಟ್ಟ. ಭವಾನಿಗೆ ತಡೆಯಲಾಗಲಿಲ್ಲ. ಚಾಪೆಯಲ್ಲಿ ಅವನತ್ತ ಸರಿದು “ಮದುವೆಯಾದ ಹದಿನೈದು ವರ್ಷಗಳಲ್ಲಿ ಮಕ್ಕಳು ಮರಿ ಹೋಗಲಿ, ಒಂದು ಬಳೆಯೂ ನನ್ನ ಕೈಲಾಗಲಿಲ್ಲ” -ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಲೀಲಾಧರ ಕತ್ತಲನ್ನೆ ಸ್ಪರ್ಶಿಸುವಂತೆ ರವಿಕೆಯಿಲ್ಲದ ಅವಳ ಬೆನ್ನ ಮೇಲೆ ಮೂಡಿದ್ದ ಚಾಪೆ ಹೆಣಿಗೆಯ ಚಿತ್ತಾರಗಳನ್ನು ಬೆರಳುಗಳಿಂದ ಸೋಕಿದ. ಕತ್ತಲು, ಸ್ಪರ್ಶ ಎರಡಕ್ಕೂ ಅಸಹನೀಯ ಮೌನವಿತ್ತು. ಮಾನಸಿಕತೆ ಮತ್ತು ದೈಹಿಕತೆ ಎರಡಕ್ಕೂ ಎರವಾದ ಅಭದ್ರ ಸ್ಥಿತಿಯನ್ನು ಈ ಮೌನ ಇನ್ನೂ ವಿರೂಪಗೊಳಿಸುತ್ತಿತ್ತು.

ಈ ಸಲ ಹೋದ ಲೀಲಾಧರ ಮತ್ತೆ ಊರ ಕಡೆ ಸುಳಿಯಲಿಲ್ಲ. ಸಿರ್ಸಿಯ ಹಳ್ಳಿಗಳಲ್ಲಿ ಓಡಾಡಬೇಕಿದ್ದವನು ಹಠಾತ್ತನೆ ದಿಶೆ ಬದಲಿಸಿದ ನದಿಯಂತೆ ಯಲ್ಲಾಪುರದ ಮಲೆಸೀಮೆಯ ಅಡವಿಗಳಲ್ಲಿ ಅಲೆಯತೊಡಗಿದ. ಅತ್ತ ಸಿರ್ಸಿ ಹೆಲ್ತ್ ಸೆಂಟರಿನವರು ಊರಿಗೆ ಪತ್ರ ತಂತಿ ಕಳಿಸಿದರು. ಅವನು ಎರಡು ತಿಂಗಳಿಂದ ಸಂಬಳವನ್ನೂ ತೆಗೆದುಕೊಂಡಿರಲಿಲ್ಲ. ಯಲ್ಲಾಪುರದ ಅರಣ್ಯ ಇಲಾಖೆಯ ನಾಟಿನ ಡಿಪೋದಲ್ಲಿ ಕೂತುಕೊಂಡು ಶಿಕ್ಷಣ ಇಲಾಖೆಯ, ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ದಿನಪತ್ರಿಕೆಗಳ ವಾಚಕರವಾಣಿಗೆ ಪತ್ರಗಳನ್ನು ಬರೆದು ಅಂಚೆಗೆ ಹಾಕತೊಡಗಿದ. ಅಲ್ಲದೆ ಹೆಲ್ತ್ ಸೆಂಟರಿನಿಂದ ತಂದಿದ್ದ ವಿಟಾಮಿನ್ ಟಾನಿಕ್, ಗುಳಿಗೆಗಳನ್ನು ಸಿದ್ದಿ ಆದಿವಾಸಿಗಳ ತಾಂಡಗಳಲ್ಲಿ ಹಂಚತೊಡಗಿದ. ಆಫೀಸ್ ಡ್ಯೂಟಿಯ ಮೇಲಿದ್ದವನಂತೆ ಗಂಭೀರವಾಗಿ ಕಾಗದದ ಮೇಲೆ ಏನೇನೋ ಬರೆದು ಅವರ ಸಹಿ, ಹೆಬ್ಬೆಟ್ಟು ಎಲ್ಲ ತೆಗೆದುಕೊಂಡು ನಂತರ ಆ ಕಾಗದಗಳನ್ನು ಅಡವಿಯಲ್ಲಿ ಹರಿದುಹಾಕುತ್ತಿದ್ದ. ಮಾತೇ ಆಡುತ್ತಿರಲಿಲ್ಲವಾದ್ದರಿಂದ ಜನಕ್ಕೆ ಅವನ ಚಿತ್ತಭ್ರಮಣೆಯ ಅಂದಾಜೇ ಹತ್ತುತ್ತಿರಲಿಲ್ಲ. ಅವನು ಕೊಟ್ಟ ಗುಳಿಗೆಗಳನ್ನು ತಾಂಡಾದವರಷ್ಟೇ ಭಯಭಕ್ತಿಯಿಂದ ತೆಗೆದುಕೊಳ್ಳುತ್ತಾರೆ ಎಂಬುದು ಅವನಿಗೆ ಸರಿಯಾಗೇ ಗೊತ್ತಿತ್ತು. ಪೇಟೆ, ನಾಟಿನ ಡಿಪೋಗಳಲ್ಲಿ ಎಲ್ಲರೂ ಅವನನ್ನು ವಲಸೆಹುಚ್ಚನಂತೆ ನೋಡತೊಡಗಿದರು. ಬೇರೆ ಬೇರೆ ರೀತಿಯಿಂದ ಸುದ್ಧಿಗಳು ತಲುಪಿದಾಗ ಭವಾನಿಯ ಕೈಕಾಲೇ ಬಿದ್ದು ಹೋಯಿತು. ಅತ್ತೆಗೆ ಹೇಳಲೂ ಹೆದರಿಕೆಯಾಯಿತು. ಯಲ್ಲಾಪುರ ಬಸ್‌ಸ್ಟಾಂಡಿನಲ್ಲಿ ಲೀಲಾಧರ ಹಗಲಿಡೀ ಮಲಗಿರುತ್ತ್ತಾನೆ ಎಂದು ಕಾಮತರ ಟ್ರಕ್ಕಿನ ಡ್ರೈವರನಿಂದ ಅಧಿಕೃತ ಮಾಹಿತಿ ಸಿಕ್ಕ ಮೇಲಂತೂ ಅವಳಿಂದ ಏನೇನೂ ತಡೆಯಲಾಗಲಿಲ್ಲ. “ಇವರಿಗೆ ಹುಷಾರಿಲ್ಲವಂತೆ. ಹೋಗಿ ಒಂದೆರೆಡು ವಾರ ಇದ್ದು ಬರ್ತೇನೆ. ಸ್ವಲ್ಪ ಗೆಲುವಾದರೆ ಊರಿಗೇ ಕರ್ಕೊಂಡು ಬರ್ತೇನೆ” -ಎಂದು ಅತ್ತೆಗೆ ಮೃದುವಾಗಿ ಹೇಳಿ, ಪಕ್ಕದ ಮನೆಯ ಚಚ್ಚಕ್ಕನ ಹತ್ರ “ಸ್ವಲ್ಪ ಲಕ್ಷ್ಯ ಕೊಡು” -ಅಂತ ವಿನಂತಿಸಿ ಇದ್ದ ಎರಡು ಸೀರೆ, ಒಂದಿಷ್ಟು ಕಾಸು ಕಟ್ಟಿಕೊಂಡು ಮಧ್ಯಾಹ್ನದ ಬಸ್ಸು ಹತ್ತಿದಳು.

ಸಂಜೆ ಯಲ್ಲಾಪುರ ಬಸ್‌ಸ್ಟಾಂಡಿನಲ್ಲಿಳಿದಾಗ ಅವಳ ಎದೆ ಹೊಡೆದುಕೊಳ್ಳುತ್ತಿತ್ತು. ಯಾರನ್ನು ಏನು-ಅಂತ ಕೇಳುವುದು. ಲೀಲಾಧರ ಅಂದರೆ ಯಾರಿಗೆ ಗೊತ್ತಾದೀತು? ಹೆದರುತ್ತ ಬಸ್‌ಸ್ಟಾಂಡಿನೊಳಗಿನ ಸಿಮೆಂಟಿನ ಬೆಂಚುಗಳನ್ನು ನೋಡಿದಳು. ಎಲ್ಲ ಬೆಂಚುಗಳಲ್ಲೂ ಜನ ಕೂತಿದ್ದರು. ಯಾವುದೂ ಖಾಲಿ ಇರಲಿಲ್ಲ. ಎಲ್ಲೂ ಯಾವ ಮನುಷ್ಯಾಕೃತಿಯೂ ಮಲಗಿರಲಿಲ್ಲ. ಇವಳ ಬಳಿ ಓಡಿ ಪೇಪರಿನ ಹುಡುಗ “ಎಲ್ಲಿ ಹೋಗ್ಬೇಕು, ಯಾರು ಬೇಕು?” -ಎಂದು ನೆರವಿನ ದನಿಯಲ್ಲಿ ಕೇಳಿದ. ಭವಾನಿ ಧೈರ್ಯ ವಹಿಸಿ “ಇಲ್ಲಿ ಹಗಲಿಡೀ ಮಲಗುತ್ತಾರಂತಲ್ಲ. ಹೆಲ್ತ್ ಸೆಂಟರ್…” ಎಂದು ತೊದಲಿದ್ದೇ ಎಲ್ಲ ತಿಳಿದವನಂತೆ ಅವನು ಮಾತಾಡಿ, ನಾಟಿನ ಡಿಪೋದ ದಾರಿ ತೋರಿಸಿದ. ಭವಾನಿ ಅಪರಿಚಿತ ದಾರಿಯಲ್ಲಿ ಸಟ ಸಟ ನಡೆದಳು. ಹತಾಶತೆಯಲ್ಲೇ ಹುಟ್ಟುವ ಧೈರ್ಯವೊಂದು ಅವಳ ನಡಿಗೆಯಲ್ಲಿತ್ತು. “ಅವನಾ? ಅವನು ಹಗಲೆಲ್ಲಾ ಮಲಿಕ್ಕಂಡೇ ಇರ್ತಾನೆ. ಬೆಂಚು ಖಾಲಿ ಇದ್ರೆ ಇಲ್ಲಿ, ಇಲ್ದಿದ್ರೆ ನಾಟಿನ ಡಿಪೋದಲ್ಲಿ… ರಾತ್ರಿ ಆದದ್ದೇ ಸುತ್ತುತ್ತಾನೆ. ಇಡೀ ರಾತ್ರಿ ಮುಚ್ಚಿದ ಪೇಟೇ, ಖಾಲೀ ಓಣಿ ಕೇರೀಲಿ ಸುತ್ತುತಿರ್ತಾನೆ” ಎಂದ ಸಣ್ಣ ನಗುವಿನ ಲೇಪದ ಹುಡುಗನ ವಾಕ್ಯ ಅವಳ ಕರುಳನ್ನೆಲ್ಲ ಜಾಲಾಡಿಬಿಟ್ಟಿತ್ತು. ಅವಳ ಮನಸ್ಸಿನಲ್ಲೂ ಬಹುವಚನದಲ್ಲೇ ಬರುತ್ತಿದ್ದ ಲೀಲಾಧರ ಈ ಪರದೇಶಿ ಹುಡುಗನ ಬಾಯಲ್ಲಿ ಏಕವಚನಕ್ಕಿಳಿದ ರೀತಿಗೆ ಅವಳು ಒಂದು ಕಡೆ ನಿಲ್ಲುವಂತೆಯೇ ಇರಲಿಲ್ಲ. ನಾಟಿನ ಡಿಪೋದಲ್ಲಿದ್ದ ಸಣ್ಣ ಚಾ ಅಂಗಡಿಗೆ ತಗುಲಿಕೊಂಡಿದ್ದ ಹಲಗೆಯ ಕೋಣೆಯನ್ನು ಅವಳು ತಲುಪಿದಳು. ಅಲ್ಲಿದ್ದವರು ಬೆರಳಿಟ್ಟು ತೋರಿಸಿದರು. ಕತ್ತರಿಸಿದ ನಾಟಿನ ಹಸಿ ಹಲಗೆಯ ರಾಶಿಯ ಮೇಲೆ ವಾರಸುದಾರರಿಲ್ಲದ ಪರದೇಶಿ ಹೆಣದಂತೆ ಲೀಲಾಧರ ಮಲಗಿದ್ದ. ನೊಣ, ಗಡ್ಡ, ಕೊಳೆಯಾದ ಪೈರಾಣ, ಊದಿಕೊಂಡಂತಿದ್ದ ಹಳದಿಗಟ್ಟಿದ ಮೊಣಗಂಟುಗಳು. ಸಡಿಲು ದೇಹ ನಿದ್ದೆಯಲ್ಲಿ ಆಗಾಗ ಅದುರುತ್ತಿತ್ತು. ಯುದ್ದೋಪಾದಿಯಲ್ಲಿ ಭವಾನಿ ಚಿಕ್ಕ ಖೋಲಿಯನ್ನು ಬಾಡಿಗೆಗೆ ಹಿಡಿದು, ನಾಟಿನ ಮಧ್ಯದಿಂದ ಲೀಲಾಧರನನ್ನೆಬ್ಬಿಸಿ ಕೈಹಿಡಿದು ನಡೆಸಿಕೊಂಡು ಬಂದಳು.

ಸ್ವಪ್ನದಲೆ ಕಂಡವನಂತೆ ಲೀಲಾಧರ ಕೈಹಿಡಿದು ಬಂದ. ಸ್ವಪ್ನವನ್ನು ನೋಡುವಂತೆ ಅವಳನ್ನು ನೋಡಿದ. “ನಾನು ಬಂದಿದ್ದೇನಲ್ಲ, ಇನ್ನೆಲ್ಲ ಸರಿಹೋಗುತ್ತದೆ” -ಎಂದು ಸಂತೈಸುವ ದನಿಯಲ್ಲೆ “ನಮ್ಮನ್ನೆಲ್ಲ ಮರ್‍ತು ಬಿಟ್ರಾ?” ಎಂದು ಕೇಳಿದಳು. ಅವನ ಕಣ್ಣುಗಳು ಏನೂ ಹೇಳುತ್ತಿರಲಿಲ್ಲ. ಅವು ಬರೇ ನೋಡುತ್ತಿದ್ದವು. ನಾಲ್ಕು ಬಕೀಟು ಬಿಸಿ ಬಿಸಿ ನೀರಿನಲ್ಲಿ ಅವನಿಗೆ ಸ್ನಾನ ಮಾಡಿಸಿದಳು. ಹೊಸ ಸೀಮೆ ಎಣ್ಣೆ  ಫಳಫಳ ಸ್ಟೋವು, ಅದರ ವಾಸನೆ ಸದ್ದು, ಹೊಸ ಬಕೀಟು, ಹೊಸ ನೀರು, ಹೊಸ ಬೆವರಿನಲ್ಲಿ ಹಗುರಾಗಿ ಅವನು ಕುಕ್ಕುರು ಕೂತಲ್ಲೆ, ದೇವರಿಗೆ ಹಣ್ಣುಗಾಯಿ ನೀಡುವವನಂತೆ ಬಾಗಿ ಎರಡೂ ಕೈ ಮುಂದುಮಾಡಿ ಅವಳ ಕೈಗಳನ್ನು ಬೇಡಿದ. ನಂತರ ಆ ಕೈಗಳನ್ನು ತಾನೆ ತನ್ನ ಕತ್ತು ಕೆನ್ನೆಗಳ ತುಂಬ ರಭಸದಿಂದ ಸವರಿ ಕಣ್ಣಿಗೊತ್ತಿಕೊಂಡು ಕೂತ. ಆ ಹಿಡಿತದಲ್ಲಿ ಹಿತದ ಗುಟ್ಟೊಂದಿರುವಂತಿತ್ತು. ಹೋಟಲಿನಿಂದ ತಂದ ಚಪಾತಿ ಪಲ್ಯ ತಿನ್ನಿಸಿ ಅವನನ್ನು ಅಡ್ಡಾಗಿಸಿದಳು. ಆದರೆ ಅವನು ನಿದ್ರೆಯ ಸಮೀಪ ಬರಲಿಲ್ಲ. ತನ್ನ ನಿತ್ಯದ ನಿಶಾಸಂಚಾರಕ್ಕೆಂದು ಎದ್ದುನಿಂತ. ಅವನೆದುರು ಅಳುಕುತ್ತಲೇ ವಿನಂತಿಸಿದಳು. “ನಾನು ಬಂದಿದ್ದೇನೆ ಈಗ. ನಿಮ್ಮ ಸಂತಿಗೇ ಇರ್ತೇನೆ” -ಎಂದೆಲ್ಲ ಅವಳು ಬಳಸಿದ ಮಾತುಗಳು ಅವನನ್ನು ತಲುಪುವಂತೆ ತೋರಲಿಲ್ಲ. ಜೋರಾಗಿ ಗದರಿಸಿದಳು. ಯಾವುದಕ್ಕೂ ನಿಲುಕದೆ ಲೀಲಾಧರ ಬಾಗಿಲು ದಾಟಿ ರಾತ್ರಿಯೊಳಗೆ ನಡೆದುಬಿಟ್ಟ. ರಾತ್ರಿ ಪಾಳಿಯ ಕಾರ್ಮಿಕನ ಹೆಂಡತಿಯಂತೆ ಭವಾನಿ ಹತ್ತು ಚದರಡಿಯ ಈ ಬಾಡಿಗೆ ಖೋಲಿಯನ್ನು ತುಂಬಾ ತಿಕ್ಕಿ ತಿಕ್ಕಿ ತೊಳೆದಳು. ಅಪವೇಳೆಯಲ್ಲಿ ಮನೆತೊಳೆದ ನೀರು ಧಾರೆಧಾರೆಯಾಗಿ ಹೊರಗೆ ಕತ್ತಲಲ್ಲಿ ಹರಿದುಹೋಯಿತು. ಚಿಮಣಿ ಎಣ್ಣೆ, ಬಲ್ಬು, ಕಸಬರಿಗೆ ಎಂದು ನೆರವಾದ ಪಕ್ಕದ ಖೋಲಿಯ ಹೆಂಗಸು ಈಗ ತನ್ನ ದೀಪ ಆರಿಸಿಕೊಂಡು ಕದ್ದು ಮುಚ್ಚಿ ಈ ಕಡೆಗೇ ಕಣ್ಣಿಟ್ಟು ಕೂತಿದ್ದಳು. ಎಂದಿನಂತೆ ಯಲ್ಲಾಪುರದ ರಾತ್ರಿಯ ಬಿಕೋ ಬೀದಿಗಳಲ್ಲಿ ತನ್ನಷ್ಟಕ್ಕೆ ಪಿಸುಗುಡುತ್ತ ನಡೆದ ಲೀಲಾಧರ ಎಷ್ಟೋ ಹೊತ್ತು ಅಲೆದು ನಸುಕಿನ ಮೊದಲೇ ಬಸ್‌ಸ್ಟಾಂಡಿನ ಕೆಂಪು ಸಿಮೆಂಟಿನ ಬೆಂಚಿನ ಮೇಲೆ ಒರಗಿದ. ನಸುಕಿನಲ್ಲಿ ಭವಾನಿ ವ್ರತ ಕೈಗೊಂಡವಳಂತೆ ಬಂದು ಲೀಲಾಧರನನ್ನು ಎಬ್ಬಿಸಿ ಖೋಲಿಗೆ ಕರೆದು ತಂದಳು.

ತನ್ನ ಜಗತ್ತೇ ಕುಸಿದು ಬೀಳಬಹುದೆಂಬ ಭಯದಲ್ಲೇ ಯಲ್ಲಾಪುರಕ್ಕೆ ಬಂದಿದ್ದ ಭವಾನಿಯಲ್ಲಿ ಹೊಸತೊಂದು ನಿರ್ಗುಣ ಆವೇಶ ಮೈಗೂಡ ತೊಡಗಿತು. ಲೀಲಾಧರ ಕವುಚಿಕೊಂಡು ನಿದ್ರೆಯಲ್ಲಿ ಲೀನನಾಗಿದ್ದನು. ಅವನ ನಿದ್ರೆಯೇ ಬೇರೆಯಾಗಿತ್ತು. ಇದ್ದುದರಲ್ಲಿಯೇ ಸಂಭಾಳಿಸಿ ಅಡಿಗೆ ಗಿಡಿಗೆ ಚಾ ಉಪ್ಪಿಟ್ಟು ಮಾಡಲಾರಂಭಿಸಿದಳು. ತುತ್ತು ನುಂಗುವಾಗಿನ ಅವನ ಕಣ್ಣುಗಳ ತೇವವೂ ವಿಚಿತ್ರವಾಗಿತ್ತು. ಮಿಕಿ ಮಿಕಿ ನೋಡುತ್ತ ಊಟ ಮಾಡುತ್ತಿದ್ದನು. ಅವನ ಹಳೆಯ ತಲೆ ಎತ್ತಿ ಗಟ ಗಟ ನೀರು ಕುಡಿವ ರೀತಿಯೂ ಬದಲಾಗಿತ್ತು. ಕಚ್ಚಿಕೊಂಡು, ಮೈಮೇಲೆ ಚೆಲ್ಲುವಂತೆ ನೀರು ಕುಡಿಯುತ್ತಿದ್ದನು. ಬಾಗಿಲಲ್ಲಿ ಕೂತು ಯೂ ಶಟಪ್, ಐ ನೋ ಇಂಗ್ಲಿಷ್ ಎಂದು ರಸ್ತೆಯತ್ತ ನೋಡಿಕೊಂಡು ಮಂಪರಿನಲ್ಲಿ ನುಡಿಯುತ್ತಿದ್ದನು. ನಂತರ ಬೃಹತ್ ಹೊರೆಯೊಂದನ್ನು ತಲೆಯಿಂದಿಳಿಸುವಂತೆ ಹುಶ್ ಎಂದು ಬೆವರೊರೆಸಿ ಕೊಳ್ಳುತ್ತ ದಣಿದವನಂತೆ ಮಲಗಿಬಿಡುತ್ತಿದ್ದನು. ಅವಳೆದುರಾಗಿ ಒಂದೂ ಮಾತಾಡದೆ, ಪ್ರಶ್ನೆ ಸಹ ಕೇಳದೆ -ಗಡ್ಡ ಮಾಡಿಕೋ ಎಂದರೆ ಗಡ್ಡ ಮಾಡಿಕೊಂಡು, ಮುಖ ತೊಳೆದುಕೋ ಎಂದರೆ ತೊಳೆದುಕೊಂಡು, ಅಕ್ಕಿ ಆರಿಸಿಕೊಡು ಎಂದರೆ ಆರಿಸಿಕೊಡುತ್ತ ಊರು, ಮನೆ, ತಾಯು, ಪತ್ನಿ ಯಾವುದರ ಸುಳಿವೂ ಇರದ ಮುಕ್ತಗೊಂಬೆಯಂತಿದ್ದನು.

ಒಂದು ಮಧ್ಯಾಹ್ನ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿದವನು ಮಗುವೊಂದು ಅಚ್ಚರಿಯಿಂದ ಅರಸುವಂತೆ ಅವಳ ರವಿಕೆಯನ್ನು ಸವರುತ್ತ ಹೊಸಬನಂತೆ ಮುಗಿಬಿದ್ದನು. ಅರೆ ಇವನ್ಯಾರು ಎನ್ನುವುದರೊಳಗೇ ಬತ್ತಲಾಗಿ ನಿಂತುಬಿಟ್ಟನು. ಭವಾನಿ ಬೆಚ್ಚಿಬಿದ್ದಳು. ಮೊಟ್ಟಮೊದಲ ಬಾರಿಗೆ ಹೀಗೆ ಝಳಝಳ ಹಗಲಲ್ಲೆ ಎದುರು ನಿಂತ ಬತ್ತಲದೇಹದ ಅದ್ಭುತ ಅಪರಿಚಿತತೆಯೆ ಅವಳನ್ನು ಸೆಳೆದುಕೊಳ್ಳತೊಡಗಿತು. ಸಲುಗೆ, ಬಯಕೆಗಳಲ್ಲಿ ಮುಚ್ಚಿಹೋದಂತಿದ್ದ ಕಾಮನೆಗಳೆಲ್ಲ ಈ ಒಂದು ಅಪರಿಚಿತತೆಯ ಸ್ಪರ್ಶಕ್ಕೆ ಧಿಗ್ಗೆಂದು ಚಿಗುರಿಬಿಟ್ಟವು. ಅವನ ಬಿಸಿ ಬೆರಳುಗಳು ಸೋಕಿದಲ್ಲೆಲ್ಲ ಮೊಂಬತ್ತಿಯಂತೆ ಕರಗಿದಳು. ಅವನ ಕಣ್ಣು, ಹಿಡಿತ, ಜೀಕು, ಲಲ್ಲೆ, ಉಸಿರು ಎಲ್ಲ ಹೊಸದಾಗಿದ್ದವು. ತನ್ನ ದೇಹದ ಎಲ್ಲ ವಾಸನೆಗಳೂ ಬದಲಾದಂತಾಗಿ, ಹೊಸ ಮಣ್ಣಲ್ಲಿ ಹರಿವ ಹೊಳೆಯಂತೆ, ಮಾನಸಿಕತೆಯ ಸೋಂಕೇ ಇಲ್ಲದ ಶುದ್ಧ ದೈಹಿಕ ಸಂಗದ ಪಲುಕುಗಳಲ್ಲಿ ಹೊಸಬಳಾದಳು. ನಂತರ ಹಾಡುಗಳು ಮುಗಿದ ರೇಡಿಯೋದಂತೆ ಅವನು ತೆಪ್ಪಗಿದ್ದರೂ, ಇವಳಲ್ಲಿ ಮಾತ್ರ ಹೊಸ ಹಾಡು ಹೂವನ್ನರಸಿಕೊಂಡು ಟೊಂಗೆ ಟಿಸಿಲುಗಳಲ್ಲಿ ಪಲ್ಲವಿಸತೊಡಗಿತು.

ನೀರಸವಾಗಿದ್ದ ವಾಡಿಕೆಯಾಗಿದ್ದ ಬಾಳಿಗೊಂದು ಜೀವ ಬಂದಂತೆ ಭವಾನಿ ಹತ್ತು ವರ್ಷ ಸಣ್ಣವಳಾಗಿಬಿಟ್ಟಳು. ಹೊಸ ಬತ್ತಿ ಸ್ಟೋವು, ಲೋಟ ತಾಟು, ತುರುಬಿಗೆ ಹಾಕಲು ಬಣ್ಣದ ಹೇರ್‌ಬ್ಯಾಂಡುಗಳು, ಚಪ್ಪಲಿ -ಎಲ್ಲಾ ಕೊಂಡಳು. ಸೋವಿಯೆಂಬ ಒಂದೇ ಕಾರಣಕ್ಕೆ ಸದಾ ಆಯುರ್ವೇದದ ನೆಪ ಹೇಳಿಕೊಳ್ಳುತ್ತಿದ್ದ ಹಳೇ ಸ್ನಾನದ ಸಾಬೂನಿನ ವಾಸನೆಯೂ ಅವಳಿಗೆ ವಾಕರಿಕೆ ತರತೊಡಗಿತು. ಹೊಸಾ ಪರಿಮಳದ ಸಾಬೂನು ಕೊಂಡಳು. ಆ ಸಾಬೂನಿನ ಕಾಗದದ ಖೊಟ್ಟೆಯನ್ನು ಸೀರೆಗಳ ನಡುವೆ ಇಟ್ಟಳು. ಪ್ರೇಮ ಉಕ್ಕಿದಂತೆ ಅವನನ್ನು ಏಕವಚನದಲ್ಲೇ ಕರೆದಳು. ಯಲ್ಲಾಪುರ ಪೇಟೆಯ ಜನ ಈ ತಲೆತಿರುಕನ ಹೆಂಡತಿಯನ್ನು ಕೌತುಕದಿಂದ ನೋಡಿದರು. ಈ ನಡುವೆ ಅಲ್ಲಿಂದಲೇ ನೇರ ಸಿರ್ಸಿಗೆ ಹೋಗಿ ಹೆಲ್ತ್ ಸೆಂಟರಿನಲ್ಲಿ ಕಾಡಿ, ಬೇಡಿ, ಹೇಳಿಸಿ, ಸಂಬಳದ ಬಾಕಿಯನ್ನು ಹಿಡಿದುಕೊಂಡು ಬಂದಳು. ಲೀಲಾಧರ ಚಾಚೂ ತಪ್ಪದೆ ನಾಟಿನ ಡಿಪೋಕ್ಕೆ ಹೋಗಿ ಎಂದಿನಂತೆ ಮರದ ದಿಮ್ಮಿಗಳ ನಡುವೆ ಕೂತು ಇಂಗ್ಲೀಷು ಮಿಶ್ರಿತ ಬಡಬಡಿಕೆ ನಡೆಸುತ್ತಿದ್ದ. ಅಡವಿಯಿಂದ ಸೊಪ್ಪು ಸೌದೆ ತರುವ ಹೆಂಗಸರು ಶಾಲೆಯ ಮಕ್ಕಳು ಬೇಲಿಯಾಚಿನಿಂದ ನೋಡಿ ಮುಸಿ ಮುಸಿ ನಗುತ್ತ “ನಾಟುಗಳಿಗೆ ಪಾಠ ನಡೀತಿದೆ” -ಎನ್ನುತ್ತ ಹೋಗ್ಗುತ್ತಿದ್ದರು. ಇವನನ್ನು ಅರಸಿಕೊಂಡು ಭವಾನಿ ಬಂದರೆ ಡಿಪೋದ ಆಳುಕಾಳುಗಳೆಲ್ಲಾ ಕಟ್ಟಿಗೆ ಸಂದಿಯನ್ನು ತೋರಿಸುತ್ತಾ “ಸರ್….. ನಿಮ್ಮ ಲೇಡೀಸ್ ಬಂದಾರ್ರಿ” -ಎಂದು ಕೂಗಿ ಹೇಳುತ್ತಿದ್ದರು. ಕಿಂಚಿತ್ತೂ ಅವಮಾನಿತಳಾಗದೆ ಭವಾನಿ, ಅವರೆಲ್ಲರ ನಗುವಿನ ಭಾಗದಂತೆ ಕೂತಿರುತ್ತಿದ್ದ ಅವನನ್ನೆಬ್ಬಿಸಿ, ಶಾಲೆಯಿಂದ ಮಗುವನ್ನು ಬೇಗ ಬಿಡಿಸಿಕೊಂಡು ಬರುವ ತಾಯಿಯಂತೆ ಎಳೆದುಕೊಂಡು ಹೋಗುತ್ತಿದ್ದಳು. ಅವನಿಗಾಗಿ ಹೊಲಿಸಿದ ಹೊಸ ಶರ್ಟು, ಪೈಜಾಮದಲ್ಲಂತೂ ಲೀಲಾಧರ ಅವಳ ಕಣ್ಣಿಗೆ ಹೈಸ್ಕೂಲ್ ಮಾಸ್ತರನಂತೆ ಕಂಡ. ಅವನಲ್ಲಿ ಕಿಂಚಿತ್ತೂ ಹಳೆಯ ಸುಳಿವುಗಳಿಲ್ಲದಿರುವುದರಲ್ಲೇ ಅವಳ ಹೊಸ ಸ್ಪೂರ್ತಿಯಿದ್ದಂತಿತ್ತು. ಕಂಪನಿ ನಾಟಕದಲ್ಲಿ ದುರಂತದ ಬರಸಿಡಿಲು ಬಡಿಯುವ ಮುನ್ನ ತೋರಿಸಲಾಗುವ ಚೊಕ್ಕ ಖುಷಿಯ ಸಂಸಾರದ ಲಕ್ಷಣಗಳೆಲ್ಲವನ್ನೂ ಶರವೇಗದಲ್ಲಿ ಅಳವಡಿಸಿಕೊಳ್ಳಲು ಭವಾನಿ ಮುಂದಾದಳು. ಒಂದು ದಿನ ಧೈರ್ಯ ವಹಿಸಿ ಯಲ್ಲಾಪುರದ ಟೂರಿಂಗ್ ಟಾಕೀಸಿನ ಚಿತ್ರಕ್ಕೂ ಅವನನ್ನು ಕರೆದುಕೊಂಡು ಹೋಗಿಬಂದಳು.

ಈ ಹೊಸ ಪುರುಷನ ತಾಟಸ್ಥದಲ್ಲಿ ಭವಾನಿಯ ಸ್ವಾತಂತ್ರ್ಯ ಸಗ್ಗವಿತ್ತು. ಆಯಾಚಿತವಾಗಿ ತನ್ನ ಬಾಳಿನಲ್ಲಿ ಬಂದಿರಿವ ಈ ಹೊಸಬನಿಗೆ ತಾನೇನಾಗಬೇಕು ಎಂದು ಭವಾನಿಗೆ ಆಗಾಗ ಯೋಚನೆಯಾಗತೊಡಗಿತು. ಯಾಕೋ ಈ ವಿಷಯ ಸ್ಪಷ್ಟವಾಗುವತನಕ ತನ್ನ ಈಗಿನ ಸಮಾಧಾನವೆಲ್ಲ ಅಪೂರ್ಣವೆನಿಸಿತು. ಬಡಿಸುವಾಗ ಎರೆಯುವಾಗ “ಹೇಳು. ನಾನು ಯಾರು? ನಾನ್ಯಾರು ಅಂತ ಹೇಳಿದ್ರೆ … ಏನೋ ವಿಶೇಷ ಸಿಹಿ ಉಂಟು” -ಎಂದು ವಿಚಿತ್ರ ರೀತಿಯಲ್ಲಿ ಅವನನ್ನು ಚುಡಾಯಿಸತೊಡಗಿದಳು. ಅವಳ ಏಕವಚನಕ್ಕೇ ವಿಚಲಿತನಾಗದವನಿಗೆ ಈ ಎಲ್ಲ ಕೊಕ್ಕೆ ಪ್ರಶ್ನೆಗಳೇನು ಮಹಾ. ಮಿಕಿಮಿಕಿ ನೋಡುತ್ತಿದ್ದ. ತನ್ನ ಅವಶ್ಯಕತೆ ಖಂಡಿತ ಇದೆ. ಇಲ್ಲವಾದರೆ ಇಷ್ಟು ವಿಧೇಯನಾಗಿ, ಸುಭಗನಾಗಿ ಯಾಕೆ ಆಡಿಕೊಂಡಿರುತ್ತಿದ್ದ-ಎಂದು ಸಮಾಧಾನ ಮಾಡಿಕೊಂಡಳು. ಈ ಉಸಾಬರಿಯೇ ಬೇಡ ಅಂತ ಸುಮ್ಮನಾದರೂ ಅತೀವ ಕ್ಷೋಭೆಯಾದಾಗ “ಲೀಲಾಧರಾ … ಹೇಳು ನಾನು ಯಾರು?” ಎಂದು ಗಲ ಗಲ ಹಿಡಿದು ಅಲ್ಲಾಡಿಸಿದಳು. ಮರುಕ್ಷಣ ‘ಲೀಲಾಧರಾ’  ಎಂಬ ಹೆಸರೇ ಇಲ್ಲಿ ವಿಚಿತ್ರವೆನಿಸಿ ಮೂಕಳಾದಳು. ಮಾನಸಿಕತೆಯೆ ಇಲ್ಲದ ಈ ನಂಟಿಗೆ ಅವಳಿಗೆಂಥದೋ ಹೆದರಿಕೆ ಬರತೊಡಗಿತು. ಇಂಗ್ಲೀಷು ಸ್ವಗತದಲ್ಲಿದ್ದ ಅವನ ಲಹರಿಯನ್ನು ಮುರಿದು ಸಂಗಕ್ಕೆ ಉದ್ದೀಪಿಸಿದಳು. ಹೊಸ ತೆಂಗಿನಮರ ಹತ್ತುವವನಂತೆ ತನ್ನನ್ನು ಅವಚಿಕೊಂಡು ದೆವ್ವ ಹಿಡಿದವನಂತೆ ತನ್ನೆಲ್ಲ ಕಾಲ, ದೇಶ, ಸಂಗ ಮರೆತು ಅನಾಮಿಕ ಏಕಾಕಿಯಾಗಿ ಏಕುತ್ತಿರುವ ಇವನು ಹುಸ್ಸೆಂದು ತನ್ನ ಹಳೇ ಭಾರದಿಂದಲೇ ಎದೆಯ ಮೇಲೆ ಬಿದ್ದಾಗ-ಕಸಿವಿಸಿಗೊಂಡಳು. ಎಲ್ಲಾ ಪ್ರಚೋದನೆಯನ್ನು ಪಡೀತ ಕಣ್ಣೆದುರೇ ತನ್ನದೇ ವೀರ್ಯಸ್ವರ್ಗ ಪಡೆಯುತ್ತಿರುವ ಈ ತೇಲುನೋಟದ ತೇಲುಮನುಷ್ಯನಿಗೆ ಈ ಕ್ಷಣದಲ್ಲೂ ಬಟ್ಟೆ ತೊಳೆಯುವ, ಅಡಿಗೆ ಬೇಯಿಸುವ ಚಾಕರಿಗಿಂತ ಮಿಗಿಲಾದದ್ದೇನೂ ತನ್ನಿಂದ ಸಿಗುತ್ತಿಲ್ಲವಲ್ಲ ಅನಿಸಿ ತೀವ್ರ ಅಲವರಿಕೆಯಾಯಿತು.

ಮರುದಿನ ಬೆಳಗೆದ್ದು ತಾನು ಕೊಂಡ ಹೊಸ ಪಾತ್ರೆ, ಲೋಟ, ತಾಟುಗಳಿಗೆಲ್ಲ ಸ್ಟೀಲಿನಂಗಡಿಯಲ್ಲಿ ಕಿರ್‌ರ್ ಯಂತ್ರದಿಂದ ‘ಶ್ರೀಮತಿ ಭವಾನಿ’ ಎಂದು ಹೆಸರು ಹಾಕಿಸಿಕೊಂಡು ಬಂದಳು. ಎಲ್ಲಾ ಪಾತ್ರೆಗಳನ್ನು ಹುಣಸೆಹಣ್ಣು ಹಾಕಿ ಉಜ್ಜಿ ಫಳಫಳ ಹೊಳೆಸಿಟ್ಟಳು. ಪಕ್ಕದ ಮನೆಯ ಹೆಂಗಸು “ಯಾವ ಜನ್ಮದ ಪುಣ್ಯವೋ ಅವರದ್ದು. ನಿಮ್ಮಂಥ ಹೆಂಡ್ತಿ ಸಿಕ್ಕಳು” -ಎಂದಾಗ ಅವಳಿಗೆ ಹೇಗೋ ಆಯಿತು. ತಲೆ ಮಿಂದು ಸಿಡಿಲು ಒದ್ದೆ ಕೂದಲಿಗೆ ಟವೆಲ್ಲು ಸುತ್ತಿಕೊಂಡು ಬಿಡಾರದ ಮೆಟ್ಟಲಲ್ಲಿ, ಸಣ್ಣ ತಾಟಿನಲ್ಲಿ ಪುಟ್ಟ ಅಕ್ಕಿಯ ಗುಡ್ಡೆಯನ್ನಿಟ್ಟುಕೊಂಡು ತಾಸುಗಟ್ಟಲೆ ಆರಿಸುತ್ತ ಕೂತಳು. ಆದರೆಲ್ಲೋ ಒಳಗೆ ಪರಪುರುಷರೊಡನೆ ಕದ್ದು ಚೆಲ್ಲಾಟ ನಡೆಸಿದಂತೆ, ಅಥವಾ ಎರಡನೆಯ ಹೆಂಡತಿಯಾಗಿ ಬೇರೆ ಬಿಡಾರ ಹೂಡಿದಂತೆ ಒಂದು ಬಗೆಯ ಅನಧಿಕೃತತೆ ಅವಳನ್ನು ಕಿತ್ತುತಿನ್ನತೊಡಗಿತು. ನಾಟಿನ ಡಿಪೋದಿಂದ ಅವನನ್ನು ಕರೆತರಲು ಹೊರಟಾಗ ರಸ್ತೆಯಲ್ಲಿ ಪಾಸಾದ ಊರಿನ ಕೆಂಪು ಬಸ್ಸು ನೋಡಿದ ಮೇಲಂತೂ, ಊರು ಮನೆ, ಸಂತರ್ಪಣೆಯ ಅಡಿಗೆ, ಏಕಾಕಿ ಅತ್ತೆ, ಹಸು, ದಾಸಾಳ, ತುಳಸೀಕಟ್ಟೆ ಎಲ್ಲ ಉಮ್ಮಳಿಸಿ ಬಂದವು. ಅಲ್ಲಿಯ ಗಿಳಿಗೂಟಕ್ಕೆ ತೂಗಿದ್ದ ಹಳೆ ಪಂಚೆಯ ತುಣುಕಿನಲ್ಲಿರುವ ಪುಡಿಗಾಸಿನ ಗುಪ್ತನಿಧಿ ಮತ್ತೆ ಮತ್ತೆ ಕಣ್ಣೆದುರು ಸುಳಿಯಲಾರಂಭಿಸಿತು. ಇಪ್ಪತ್ನಾಲ್ಕು ಗಂಟೆಯ ನೇರ ಖುದ್ದು ಒಡನಾಟದ ನಂಟಿನಲ್ಲೂ ಶಕ್ಯವಾಗದೇ ಹೋದ ಕೌಟುಂಬಿಕತೆ ತುಂಬ ನಿಚ್ಚಳವಾಗಿ ಅವಳನ್ನು ಕುಕ್ಕತೊಡಗಿತು. ಅವನ ಸಹವಾಸವಿಲ್ಲದೆ ಊರಲ್ಲಿ ಆರಾರು ತಿಂಗಳು ಅರೆಹೊಟ್ಟೆ ಕಷ್ಟಕಾರ್ಪಣ್ಯಗಳಲ್ಲೂ ಇದರ ಅಭಾವ ಕಾದಿರಲಿಲ್ಲ. ಏನನಿಸಿತೋ ಪಕ್ಕದ ಮನೆಯ ಹೆಂಗಸನ್ನು ಹರಟೆಗೆ ಕರೆದು ತನ್ನ ಮದುವೆಯ ವಿಧಿ ವಿಧಾನ, ಗಂಡನ ಮನೆಯ ಅಡುಗೆ ಪದ್ಧತಿ, ಅತ್ತೆಗೆ ಕಣ್ಣಿನ ಮೋತಿ ಬಂದು ಆಪರೇಷನ್ ಆಗಬೇಕು ಎಂದೆಲ್ಲ ತುಂಬಾ ಮಾತಾಡಿದಳು. “ನಾಳೆ ಗಂಡನನ್ನು ಕರೆದುಕೊಂಡು ಊರಿಗೆ ಹೋಗುತ್ತಿದ್ದೇನೆ. ಪಾತ್ರೆ ಪಡಗ ಚಾದರದಲ್ಲಿ ಕಟ್ಟಿ ನಿಮ್ಮನೆಯಲ್ಲಿಡುತ್ತೇನೆ” -ಎಂದು ಹೇಳಿ ಅವನನ್ನು ಅರಸಿಕೊಂಡು ಹೋದಳು. ನಾಟಿನ ಡಿಪೋದಲ್ಲೂ ಸಿಗದೆ ಅವನು ಬಂಕಾಪುರದ ರಸ್ತೆಯ ಅಂಚಿನಲ್ಲಿರುವ ಸಿದ್ದಿತಾಂಡಾದಲ್ಲಿ ಸಿಕ್ಕಿದ. ಹತ್ತಾರು ಹೆಂಗಸರು ಮಕ್ಕಳ ಜತೆ ಇಂಗ್ಲೀಷು ಬಳಸಿ ಏನೇನೋ ಮಾತಾಡುತ್ತ ಕೂತಿದ್ದ. ಅವರು ನಕ್ಕಾಗ ಅವನೂ ನಗುತ್ತಿದ್ದ. ಇವಳನ್ನು ನೋಡಿದ್ದ್ದೇ ಪಿಸಿ ಪಿಸಿ ಏನೋ ತೊದಲಿ ತಲೆ ತಗ್ಗಿಸಿದ. ಹೆಂಗಸರು, ಅಜ್ಜಿಯರು, ಮಕ್ಕಳು ತುಂಬಾ ಗಮ್ಮತ್ತಿನಿಂದ ನಕ್ಕರು. ಇವಳು ಸಮೀಪ ಹೋದದ್ದೆ ಅಜ್ಜಿಯೊಬ್ಬಳ ಬೆನ್ನ ಹಿಂದೆ ಅವಚಿ ಅಡಗಿ ಕೂತ. ಮತ್ತೆಲ್ಲರೂ ನಕ್ಕರು. ತಲೆ ರೋಸಿಹೋಗಿ ಇವಳು ಹೊರಟು ಬಂದುಬಿಟ್ಟಳು. ಹಿಂತಿರುಗಿ ನೋಡಿದರೆ ಪುಂಡ ಹುಡುಗನಂತೆ ಹಿಂಬಾಲಿಸಿ ಇವಳು ನಿಂತಾಗ ತಾನೂ ನಿಲ್ಲುತ್ತ ಬತುತ್ತಿದ್ದ.

ರಾತ್ರಿಯೇ ಮರುದಿನ ಹೊರಡುವ ತಯಾರಿ ಮುಗಿಸಿದಳು. ಈ ಕುರಿತು ಏನೇನೂ ಮುನ್ಸೂಚನೆ ಕೊಡದೆ ಬೆಳೆಗ್ಗೆ ಒಂಬತ್ತರ ಬಸ್ಸಿಗೆಂದು ಬೇಗ ಬಸ್‌ಸ್ಟಾಂಡಿಗೆ ಅವನ ಅಜ್ತೆ ಬಂದಳು. ಬಸ್‌ಸ್ಟಾಂಡಿನ ಕ್ಯಾಂಟೀನಿನಲ್ಲಿ ದೋಸೆ ಆರ್ಡರ್ ಮಾಡಿ ಆಯ್ ವಾಂಟ್ ಸಡನ್‌ಲೀ ಎಂದು ಕೂಗಿದ. ಹುಬ್ಬಳ್ಳಿಯಿಂದ ಬರಬೇಕಿದ್ದ ಬಸ್ಸಿಗೆ ತುಂಬಾ ತಡವಾಯಿತು. ಸಿಮೆಂಟು ಬೆಂಚಿನ ಮೇಲೆ ಇಬ್ಬರೂ ಕೂತರು. ಕೂತಲ್ಲೆ ನಿದ್ದೆ ಹತ್ತಿ ಜೋಲಿ ಹೊಡೆಯಲಾರಂಭಿಸಿದ. ಅವನನ್ನು ಬೀಳದಂತೆ ಒಂದು ಕೈಲಿ ಹಿಡಿದಳು. ಪೂರ್ತಿ ಗಾಢ ನಿದ್ದೆಯಲ್ಲಿದ್ದವನನ್ನು ತನ್ನ ತೊಡೆಯ ಮೇಲೆ ವಾಲಿಸಿಕೊಂಡಳು. ಅವನೀಗ ಜಾರದಂತೆ ಎರಡೂ ಕೈಗಳಿಂದ ಅವಳ ಸೊಂಟವನ್ನು ಬಳಸಿಕೊಂಡು ಅಸ್ಪಷ್ಟವಾಗಿ ಗೊರಕೆ ಹೊಡೆಯಹತ್ತಿದ. ಅಪರಿಚಿತ ಪ್ರಯಾಣಿಕರ ಮಧ್ಯೆ ಜಾರದಂತೆ ಅವಚಿಕೊಂಡು ತೊಡೆಯ ಮೇಲೆ ನಿದ್ದೆ ಹೋಗಿರುವ ಈ ಪರಾವಲಂಬಿ ಜೀವದ ಮೇಲೆ ಅವಳಿಗೆ ಎದೆ ತುಂಬಿ ಬಂತು. ಹಠಾತ್ತನೆ ಮಡಿಲಲ್ಲಾತ ಮಗುವಾದಂತೆ ಅನಿಸಿತು. ಉಕ್ಕಿ ಬಾಗಿ ಅವನ ತಲೆಯನ್ನು ಮುದ್ದಿಸಿದಳು. ತೆಂಗಿನೆಣ್ಣೆಯ ಜತೆಗೆ ಅವನದೇ ಆದ ಹಸಿನಾಟಿನ ಸೊಗಡಿತ್ತು. ಅವನನ್ನು ಬೀಳದಂತೆ ಹಿಡಿಯುವ ನೆವದಲ್ಲಿ ಎಳೆದುಕೊಂಡಳು. ಈ ಒಂದು ಬೆಚ್ಚನೆ ಭಂಗಿಯಲ್ಲೆ ತಣಿವು ಮನಗಂಡವಳಂತೆ ಕಣ್ಮುಚ್ಚಿಕೊಂಡಳು.

ಬಸ್ಸು ಬಂದಿದ್ದೇ ಗಡಬಡಿಸಿ ಎದ್ದು ಜನ ಹಿಂದೆ ಮುಂದೆ ಓಡತೊಡಗಿದರು. ಅರ್ಧ ನಿದ್ದೆಯಲ್ಲಿದ್ದವ ವಿಚಿತ್ರವಾಗಿ ಚೀರಾಡಿದ. ಅವನನ್ನೆಳೆದುಕೊಂಡು ಬಸ್ಸಿನ ಬಳಿ ಓಡಿದಳು. ಬಸ್ಸನ್ನು ನೋಡಿ ಹಿಂಜರಿದವನನ್ನು ಹೇಗೋ ತಳ್ಳಿ ಒಳಗೆ ಹತ್ತಿ ಸೀಟು ಹಿಡಿದು ಪುಸಲಾಯಿಸಿ ಕೂರಿಸಿದಳು. “ಯೂ ಶಟಪ್. ಹೂ ಆರ್ ಯೂ?”ಎಂದು ಕೂಗತೊಡಗಿದ. “ನಿನಗ್ಯಾರು ಅಧಿಕಾರ ಕೊಟ್ಟರು. ಯಾರು ನೀನು?” ಎಂದು ಅವಳೆಂದೂ ಕೇಳಿರದಷ್ಟು ದೊಡ್ಡ ದನಿಯಲ್ಲಿ ಚೀರಿ, ನೇವರಿಸಿ ಹಿಡಿಯಲು ಬಂದ ಅವಳ ಕೈಗಳನ್ನು ಛೀ ಎಂದು ಕೊಸರಿಕೊಂಡು ತಳ್ಳಿದ. ಇಡೀ ಬಸ್ಸು ತಿರುಗಿ ನೋಡುವಂತೆ “ಯಾರು ನೀನು?” ಎಂದು ಕೂಗಿದ. ಕೂತವರೆಲ್ಲ ಎದ್ದು ನಿಂತು ಫಾಜೀಲು ಕುತೂಹಲದಿಂದ ನೋಡತೊಡಗಿದರು. ಇವಳಿಗೆ ಸಾಕಾಗಿ ಹೋಯಿತು.

(ಕಥೆಗಾರ ಜಯಂತ್)

ಸಕಲ ಶಕ್ತಿ ಹಾಕಿ ಗಂಟಲು ನರ ಹರಿಯುವಂತೆ “ಟೆಲ್ ಮೀ… ಹೂ ಆರ್ ಯೂ?ನನ್ನನ್ ಎಳಕೊಂಡ್ ಹೋಗ್ಲಿಕ್ಕೆ ಯಾರ್ ನೀನು?” -ಎಂದು ಬಸ್ಸೇ ತತ್ತರಿಸುವಂತೆ ಅಬ್ಬರಿಸಿದ. ಮತ್ತೆಂಥ ಪ್ರಕೋಪವಾದೀತೋ ಎಂಬ ಭಯದಲ್ಲಿ ಬಣ್ಣಗೆಟ್ಟ ಅವಳ ಬಾಯಿ ಕಟ್ಟಿಹೋಯಿತು. ಇಡೀ ಬಸ್ಸು ಸ್ತಬ್ಧವಾಗಿ ತುದಿಗಾಲಲ್ಲಿ ನಿಂತು ನೋಡುತ್ತಿತ್ತು. ಈ ಮೌನದಿಂದಲೇ ಪ್ರೋತ್ಸಾಹಿತನಾದವನಂತೆ “ಇಟ್ಟುಕೊಂಡವಳ ಜಬರು…. ಕಟ್ಟಿಕೊಂಡವಳಿಗಿಂತ ಜಾಸ್ತಿ…. ಹುಂ” ಎಂದು ಗೊಣಗುತ್ತ ಬಸ್ಸಿನಿಂದ ಇಳಿದು ಮಾಮಲೇದಾರನ ಗತ್ತಿನಲ್ಲಿ ನಡೆದೇ ಬಿಟ್ಟ. ಮಾತೇ ಹೋದವಳಂತೆ ನಿಂತಿದ್ದವಳು, ಒಂದು ಕ್ಷಣದಲ್ಲಿ ಸಾವರಿಸಿಕೊಂಡು ಬಗ್ಗಿ ಬಸ್ಸಿನ  ಕಿಟಕಿಯಲ್ಲಿ ತಲೆ ತೂರಿಸಿ “ಏ” ಎಂದು ತೊದಲಿದಳು. ಏನೂ ಕೇಳಿಸಿಕೊಳ್ಳದಂತೆ ಅವನು ದೂರ ದೂರವಾಗುತ್ತಿದ್ದ. “ಈ ಸಲ ಬಳೆ ಮಾಡಿಸ್ಕಳ್ಳದೇ ಹೋದ್ರೆ ನಾನು ಭವಾನೀನೇ ಅಲ್ಲಾ” ಎಂದು ತನ್ನಷ್ಟಕ್ಕೆ ವಿಚಿತ್ರ ದನಿಯಲ್ಲಿ ಚೀರಿಕೊಂಡಳು.