ಬೇಸಿಗೆಯ ಬಿಸಿಗಾಳಿ ಅಂಗಳದಲ್ಲಿ ಸುತ್ತಾಡುತ್ತಿತ್ತು. ಮಾದೇವ ಮೈಸೂರಿಂದ ತನ್ನೂರಿಗೆ ಬಂದಿದ್ದ. ಅಂಗಳದಲ್ಲಿ ಹೈಕಳು ಅಜ್ಜಿಯ ಜೊತೆ ಮಲಗಿದ್ದರು. ಮಾದೇವ ಅದೇ ಅಂಗಳದಲ್ಲಿ ಅದೇ ಅಜ್ಜಿಯ ಬಾಯಿಂದ ಕತೆ ಕೇಳಿಯೇ ಬೆಳೆದಿದ್ದವನು. ಅಪರೂಪಕ್ಕೆ ಮೊಮ್ಮಗ ಬಂದಿದ್ದಾನೆಂದು ಅಜ್ಜಿ ಸಂತಸದಲ್ಲಿದ್ದಳು. `ಅಣ್ಣಾ ಅಣ್ಣಾ ಬಾರಣ್ಣಾ, ನೀನು ತುಂಬಾ ತುಂಬ ಓದಿದ್ದೀಯಂತಲ್ಲಾ ನಮಗೂ ಒಂದು ಕತೆ ಹೇಳ್ಕೊಡಣ್ಣಾ’ ಎಂದು ಮಕ್ಕಳು ಮಾದೇವನನ್ನು ಸುತ್ತಿಕೊಂಡು ಪೀಡಿಸಿದರು. ಅಜ್ಜಿಗೂ ಮೊಮ್ಮಗನ ಪೇಟೆ ಪಟ್ಟಣಗಳ ಮಾಯಾಲೋಕದ ಅನುಭವಗಳ ಕೇಳುವ ಕುತೂಹಲವಿತ್ತು. ಅದಕ್ಕೆ ಅವಕಾಶಕೊಡದ ಮಕ್ಕಳು ಮಾದೇವನನ್ನು ಎಳೆದಾಡಿದರು. ಅಂಗಳದಲ್ಲಿ ತಾರೆಗಳ ಬೆಳಕು ಅಸ್ಪಷ್ಟವಾಗಿ ಪಸರಿಸಿತು. `ಬಿಡ್ರೊ ನಾಳೆ ನಾನೇ ನಿಮಗೆ ಕತೆ ಹೇಳ್ತಿನಿ, ದೂರದಿಂದ ಮಹಾ ಬಂದವನೆ. ಕಣ್ ತುಂಬ ನಿದ್ದೆ ಮಾಡಲಿ’ ಎಂದು ಅಜ್ಜಿ ಮಾದೇವನ ಪರವಾಗಿ ಹೇಳಿದರೂ ಮಕ್ಕಳು ಬಿಡಲಿಲ್ಲ. ಕತೆ ಹೇಳಲೇಬೇಕಾಯಿತು. ಇವರಿಗೆ ಯಾವ ಕತೆ ಹೇಳುವುದು ಎಂದು ಹುಡುಕಾಡಿ ತಾನು ಎಲ್ಲೋ ಕೇಳಿದ್ದ ಅಥವಾ ಓದಿದ್ದ ಕತೆಯನ್ನು ಅದು ಯಾವ ಕತೆ ಅದರ ಆರಂಭ ಹೇಗೆ ಎಂದು ಮತ್ತೆ ನೆನಪು ಮಾಡಿಕೊಂಡು ಆ ಮಕ್ಕಳಿಗೆ ಆ ಕತೆಯನ್ನು ಹೇಳತೊಡಗಿದ.

ಹೀಗೇ ಒಂದು ದೂರದ ಹೊಳೆ ದಂಡೆಯ ಕಣ್ಣಾಡು ಕಾನು ಮನೆ. ಅಲ್ಲೊಂದು ಒಂಟಿ ಸಂಸಾರ. ಮನೆ ತುಂಬ ಮಕ್ಕಳು ಏಳು ಜನ ಮಕ್ಕಳಲ್ಲಿ ಹಿರಿಯವಳೇ ತನ್ನ ಆರೂ ಮಂದಿ ತಂಗಿಯರನ್ನು ಆಟವಾಡಿಸಿಕೊಂಡು ಸುಖವಾಗಿದ್ದಳು. ಅವರ ತಾಯಿ ಬಹಳಾ ಕಷ್ಟ ಪಟ್ಟು ಅಷ್ಟೂ ಮಕ್ಕಳನ್ನು ಸಾಕುತ್ತಿದ್ದಳು. ಕಾಡಿಗೆ ಹೋಗಿ ಗೆಡ್ಡೆ-ಗೆಣಸು, ಹಣ್ಣು-ಹಂಪಲು, ನಾರು-ಬೇರು ತಂದು ಹೇಗೊ ಮಾಡಿ ಅವರ ಹೊಟ್ಟೆ ತುಂಬಿಸುತ್ತಿದ್ದಳು. ಅವಳ ಗಂಡ ಇದ್ರೆ ಇವತ್ತು ಈ ಊರಲಿ, ಇಲ್ಲದೆ ಇದ್ರೆ ನಾಳೆ ಮುಂದಲೂರಲಿ ಇರುತ್ತಿದ್ದ. ಅವನಿಗೆ ಮಡದಿ ಮಕ್ಕಳು ಎಂದರೆ ಅಷ್ಟಕ್ಕಷ್ಟೇ. ಅವನ ಹೆಂಡತಿ, `ಯಾಕೆ ಹೀಗೆ ನಮ್ಮನ್ನು ಈ ಒಂಟಿ ಕಾಡಲ್ಲಿ ಒಂಟಿಯಾಗಿ ಬಿಟ್ಟು ಎಲ್ಲೆಲ್ಲೊ ಮರೆಯಾಗಿ ಹೋಗುವೆ. ನಮಗೆ ಏನಾದರೂ ಆದರೆ ಗತಿ ಏನು’ ಎಂದು ಆಗ್ರಹಿಸಿ ಕೇಳಿದ್ದಳು. ಅವನು ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ತನಗೇನೂ ತಿಳಿಯದು ಎಂಬಂತೆ ಯಾವುದೋ ಹೂವಿನ ವಾಸನೆ ಹಿಡಿದು ಮರೆಯಾಗಿ ಬಿಡುತ್ತಿದ್ದ. ಮಕ್ಕಳು ತಾಯಿ ಕಿಬ್ಬೊಟ್ಟೆಗೆ ಆತುಕೊಂಡು ದೂರದ ನಕ್ಷತ್ರಗಳ ಕಣ್ಣಿಗೆ ತುಂಬಿಕೊಂಡು ನಿದ್ದೆಗೆ ಹೋಗುತ್ತಿದ್ದವು. ಹಿರಿಮಗಳು ತಾಯ ಕರುಳ ಸಂಕಟನ ಹೇಗೊ ಅರಿತು, `ಅಳಬ್ಯಾಡ ಸುಮ್ಮನಿರವ್ವಾ; ನೆತ್ತಿ ಮೇಲೆ ಸೂರ್ಯ ಚಂದ್ರರು ಇದ್ದಾರಲ್ಲವ್ವಾ. ನಾವೇಕೆ ದುಃಖ ಪಡಬೇಕು. ನಾವೇಕೆ ಒಂಟಿ ಅಂತಾ ಭಯ ಪಡಬೇಕು. ಅಪ್ಪ ಬರ್ತನೆ ಬಿಡವ್ವಾ’ ಎಂದು ಹೆತ್ತ ಕರುಳನ್ನೇ ಸಂತೈಸಿ ತಾಯ ಬಿಸಿ ಕಣ್ಣೀರ ತನ್ನ ಪುಟ್ಟ ಕೈಗಳಿಂದ ಒರೆಸುತ್ತಿದ್ದಳು.

ಹೀಗೇ ಇರಬೇಕಾದರೆ; ಒಂದು ದಿನ ಯಮರಾಯ ಬಂದು ನೋಡಿದ. ಅವಳ ಗಂಡ ಗೊರಕೆ ಹೊಡೆಯುತ್ತ ಮಲಗಿದ್ದ. ಮಕ್ಕಳು ತಂದೆ ತಾಯ ಅಕ್ಕ ಪಕ್ಕವೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಮರಾಯ ಅವರಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಲೇಬೇಕಿತ್ತು. ಲೆಕ್ಕ ಅವನಿಗೆ ಚಿನ್ನಾಗಿ ಗೊತ್ತಿತ್ತು. ಅವರವರ ವಿದಿಗೆ ನಾನೇನೂ ಮಾಡಲಾರೆ ಎಂದುಕೊಂಡು; `ನಡೆಯವ್ವಾ ತಾಯೀ ಇವತ್ತು ನಿನ್ನದಿನ. ನಾಳೆಯೊ ನಾಳಿದ್ದೋ ಯಾವತ್ತೋ ಅವರ ದಿನ. ನೀನಂತೂ ಈ ಮಕ್ಕಳ ಬಿಟ್ಟು ಎದ್ದು ನಡೆಯವ್ವಾ’ ಎಂದು ಕರೆದುಕೊಂಡು ಹೊರಟೇಹೋದ. ಮರುದಿನ ಮಕ್ಕಳು ಅರಣ್ಯರೋದನದಲ್ಲಿ ಮುಳುಗಿದವು. ಅವರ ತಂದೆ ಹೆಂಡತಿಯ ಮಣ್ಣು ಮಾಡಿ ಬಂದು; `ಅಳಬ್ಯಾಡಿ ಮಕ್ಕಳೇ. ಹುಟ್ಟಿದವರೆಲ್ಲ ಸಾಯಲೇಬೇಕು. ನಾಳೆ ದಿನ ನಾನೂ ಸಾಯೋನೆ. ನೀವೂ ಸಾಯೋರೆ. ಅದಕ್ಕೆಲ್ಲ ದುಃಖಿಸಬಾರದು. ನಿಮಗೆ ಇನ್ನೊಬ್ಬಳು ಚಿಕ್ಕವ್ವನನ್ನು ಕರೆತರುವೆ ಸುಮ್ಮನಿರಿ’ ಎಂದು ಕಾಡಿನ ಹಣ್ಣುಗಳ ತಿನ್ನಿಸಿ ದುಃಖ ಮರೆಸಿದ. ಹಿರಿಮಗಳು ತಂಗಿಯರಿಗೆ ಬುದ್ಧಿ ಹೇಳಿ ವಿಶ್ವಾಸ ತುಂಬಿದಳು. ಅಪ್ಪ ನಮ್ಮನ್ನು ಕೈ ಬಿಡುವುದಿಲ್ಲ ಎಂದು ಮಕ್ಕಳು ಮುಗ್ಧವಾಗಿ ನಂಬಿಕೊಂಡವು.

ಹೀಗೇ ಕಾಲ ಬಂದು ಹೋಗಿ ವಸಂತ ಋತು ಎಲ್ಲೆಲ್ಲೂ ಘಮಘಮಿಸಿ ಹೂ ಮಕರಂದವ ಸೂಸಿ ಚೆಲ್ಲಾಡಿ ನರ್ತಿಸುತ್ತಿರಲು ಆ ಮಕ್ಕಳ ತಂದೆಗೆ ಹೂಗಳ ಸುವಾಸನೆ ಬಲವಾಗಿ ಆಕಿರ್ಷಿಸಿತು. ಮೊದಲೇ ಅವನು ದೂರದ ಮರೆಯ ಹೂಗಳ ವಾಸನೆಯನ್ನೇ ಹಿಡಿದು ಓಡಿಹೋಗುತ್ತಿದ್ದವನಲ್ಲವೇ. ಅವನ ಹಳೆಯ ಚಾಳಿ ಅವನನ್ನು ಬಾಬಾ ಎಂದು ಕೂಗಿಕರೆಯಿತು. ಹೇಳದೆ ಕೇಳದೆ ಆ ಕತ್ತಲಲ್ಲಿ ಹಾರಿ ಹೋದ ಅವನು ಬೆಳಗಾಗುವುದರಲ್ಲಿ ಹೊಸ ಹೆಣ್ಣಿನೊಂದಿಗೆ ಬಂದು; `ಮಕ್ಕಳೇ ಬನ್ನಿ ಬನ್ನೀ, ಯಾರು ಬಂದಿದ್ದಾರೆಂದು ನೋಡಿ. ಇವಳೇ ನೋಡಿ ನಿಮ್ಮ ಚಿಕ್ಕವ್ವಾ. ಇನ್ನು ಮುಂದೆ ಇವಳೇ ನಿಮ್ಮ ತಾಯಿ. ಇವಳೇ ನನ್ನ ಹೆಂಡತಿ’ ಎಂದು ಮದುಮಗನಂತೆ ಅಂಗಳದ ತುಂಬ ನಗಾಡಿದ. ಹಿರಿಮಗಳು ಚಿಕ್ಕವ್ವಾ ಎಂದು ಕೂಗಿದ ಕೂಡಲೆ, ಉಳಿದ ಅವಳ ತಂಗಿಯರೂ ಚಿಕ್ಕವ್ವಾ ಎಂದು ಆರ್ದವಾಗಿ ಕರೆದವು. ಕಟ್ಟಿಕೊಂಡವನ ಜೊತೆ ಕಣ್ಣಿಗೆ ಬಟ್ಟೆಕಟ್ಟಿಕೊಂಡಂತೆ ಬಂದಿದ್ದವಳು ಮಕ್ಕಳನ್ನು ಕಂಡು ಬೆಚ್ಚಿದಳು. `ನನ್ನ ಸವತಿ ಎತ್ತಿದ ಮಕ್ಕಳ ಜೊತೆ ನಾನು ಬಾಳಲಾರೆ. ನೀನು ನನಗೆ ಮೋಸ ಮಾಡಿದೆ’ ಎಂದು ಚಿಕ್ಕವ್ವ ರಂಪ ಮಾಡಿದಳು. ಎಲ್ಲವನ್ನೂ ಬಿಟ್ಟು ಬಂದಿದ್ದ ಆಕೆ ವಾಪಸ್ಸು ಎಲ್ಲೂ ಒಬ್ಬಳೇ ಹೋಗುವಂತಿರಲಿಲ್ಲ. ನಿತ್ಯ ಅದೇ ರಗಳೆ ಬೆಳೆಯುತ್ತ ಸಾಗಿತು. ಮಕ್ಕಳು ಅವುಗಳ ಪಾಡಿಗೆ ಅವು ಆಟವಾಡಿಕೊಂಡೇ ಇದ್ದವು. `ಈ ಮಕ್ಕಳ ನಡುವೆ ನನಗೆ ಮಕ್ಕಳಾಗುವುದು ಯಾವಾಗ; ನಾನು ನನ್ನದೇ ಮಕ್ಕಳ ಎತ್ತಿ ಆಡಿಸಿ ಬೆಳೆಸುವುದು ಯಾವಾಗ’ ಎಂಬ ಚಿಂತೆ ಚಿಕ್ಕವ್ವನಿಗೆ ಬಾದಿಸಿತು. ಗಂಡ ಸಾಕಷ್ಟು ರಮಿಸಿ ಸಂತೈಸಿ ಅವಳು ಹೇಳಿದ್ದಕ್ಕೆಲ್ಲ ತಕ್ಕಂತೆ ಕುಣಿಯತೊಡಗಿದ. ಮಕ್ಕಳೆಲ್ಲ ಗಾಢವಾಗಿ ನಿದ್ರಿಸುತ್ತಿದ್ದ ಒಂದು ರಾತ್ರಿ ಗಂಡನಿಗೆ ಅವಳು ನಿರ್ಣಾಯಕವಾಗಿ ಹೇಳತೊಡಗಿದಳು; `ನೋಡ್ರೀ; ನನಗಂತು ಈ ಒಂಟಿ ಕಾಡು ಮನೆ ಸಾಕಾಗಿ ಹೋಗಿದೆ. ಈ ಹಿಂಡು ಮಕ್ಕಳ ನಡುವೆ ನಾನು ನೆಮ್ಮದಿಯಿಂದ ಬಾಳಲಾರೆ. ನನಗೆ ನನ್ನದೇ ಕುಡಿಬೇಕು. ನನಗೆ ನನ್ನದೇ ಸಂಸಾರ ಬೇಕು. ನನಗೆ ನನ್ನದೇ ಗಂಡ ಅಂತ ಸ್ವತಂತ್ರವಾಗಿರಬೇಕು. ನಾನಂತು ಇನ್ನು ಇಲ್ಲಿ ಈ ಮಕ್ಕಳ ಜೊತೆ ಇರಲಾರೆ. ಎಲ್ಲಿಯಾದರೂ ದೂರ ಹೊರಟು ಹೋಗೋಣ ನಡೆಯಿರಿ’ ಎಂದು ಒತ್ತಾಯಿಸಿದಳು. `ಈ ಮಕ್ಕಳನ್ನು ಏನು ಮಾಡೋದು. ಹೀಗೆ ಇವರನ್ನು ಒಂಟಿಯಾಗಿ ಹೇಗೆ ಬಿಟ್ಟುಹೋಗೋದು’ ಎಂದು ಗಂಡ ಅವಳಿಂದಲೇ ಉಪಾಯ ಕೇಳಿದ. `ನೀನೇ ಏನಾದರು ಮಾಡು. ನೀನೇ ತಾನೆ ಅವುಗಳನ್ನು ಹುಟ್ಟಿಸಿರೋದು’ ಎಂದು ಆಕೆ ಕಠಿಣವಾಗಿ ನುಡಿದಳು. `ನನಗೆ ಒಂದೆರಡು ದಿನ ಸಮಯ ಕೊಡು; ಒಂದು ನಿರ್ಧಾರಕ್ಕೆ ಬರುವೆ’ ಎಂದು ಅವಕಾಶ ತೆಗೆದುಕೊಂಡ.

ಈ ಮಕ್ಕಳನ್ನು ಕಾಡಿನ ಬಾಯಿಗೆ ಎಸೆದು ಬಿಡಲೇ… ಬೆಟ್ಟದ ಎತ್ತರಕ್ಕೆ ಕರೆದ್ದೊಯ್ದು ಪ್ರಪಾತಕ್ಕೆ ನೂಕಿಬಿಡಲೇ… ಅಥವಾ ಆ ಹೊಳೆಯ ಸುಳಿಗೆ ತಳ್ಳಿಬಿಡಲೇ ಎಂದು ಆತ ಬಹಳ ಹೊತ್ತಿನ ತನಕ ಹತ್ಯೆಯ ವಿಚಾರ ಮಾಡಿದ. `ಯಾವ ನಿರ್ಧಾರಕ್ಕೆ ಬಂದಿರಿ ಹೇಳಿ’ ಎಂದು ಚಿಕ್ಕವ್ವ ಅಖೈರು ಮಾತಿಗಾಗಿ ತಿವಿದಂತೆ ಕೇಳುತ್ತಲೆ ಇದ್ದಳು. `ನಾಳೆಗೆ ಎಲ್ಲ ಮುಗೀತದೆ ತಾಳಿಕೊ’ ಎಂದು ಆತ ಮಾರ್ಮಿಕವಾಗಿ ನುಡಿದ. `ಅಪ್ಪಾ ಏನು ಯೋಚಿಸ್ತಾ ಇದ್ದೀಯಪ್ಪಾ’ ಎಂದು ಯಾವತ್ತಿನ ಆ ಹಿರಿಮಗಳು ಅಲುಗಾಡಿಸಿ ತಂದೆಯ ಮೇಲೆ ಅಪಾರ ವಿಶ್ವಾಸವನ್ನು ಕಣ್ಣಿಂದ ಸೂಸುತ್ತ ತಂಗಿಯರನ್ನು ಕಟ್ಟಿಕೊಂಡು ವಿನಯವಾಗಿ ಕೇಳಿದಳು. ಆತ ಬೆಚ್ಚುತ್ತಾ `ಹೋಗಿ ಹೋಗಿ ಅಲ್ಲೆಲ್ಲಾದರೂ ಕಣ್ಣಾಮುಚ್ಚಾಲೆ ಆಟ ಆಡಿಕೊ ಹೋಗಿ’ ಎಂದು ಮಕ್ಕಳನ್ನು ಕಳಿಸಿಬಿಟ್ಟ. ಅವನ ಮನಸ್ಸಿನಲ್ಲಿ ಮೊದಲ ಹೆಂಡತಿ ಅಡ್ಡವಾಗಿ ಬಂದು ನಿಂತಿದ್ದಳು. `ನೀನೇನಾದರೂ ಆ ಮಕ್ಕಳ ಕುತ್ತಿಗೆ ಹಿಚುಕಿದೆಯೊ ನಾನಂತು ನಿನ್ನನ್ನು ಏಳೇಳು ಜನ್ಮಗಳಿಗೂ ಬಿಡುವುದಿಲ್ಲ’ ಎಂದು ಕನಸಿಗೆ ಹೋಗಿ ಎಚ್ಚರಿಸಿದ್ದಳು. ಅಂತೂ ಒಂದು ತೀರ್ಮಾನಕ್ಕೆ ಬಂದಾಗಿತ್ತು. ಮರುದಿನ ಮಕ್ಕಳನ್ನೆಲ್ಲ ಬಹಳ ಅಕ್ಕರೆಯಿಂದ ಆತ ಕರೆದ. ಪ್ರೀತಿಯಿಲ್ಲದೆ ಬಳಲಿದ್ದ ಮಕ್ಕಳು ತಂದೆಯ ಒಂದೇ ಮಾತಿಗೆ ಹಕ್ಕಿಯಂತೆ ಹಾರಿಹೋಗಿ ಅವನ ಮುಂದೆ `ಹೇಳು ತಂದೆಯೇ ಏನೆಂದು ಬೇಗ ಹೇಳು’ ಎಂದು ಕುತೂಹಲದಿಂದ ಕೂತುಕೊಂಡವು.

`ಮಕ್ಕಳೇ ಇದೊಂದು ಸೌಭಾಗ್ಯದ ದಿನ. ನೀವು ಬಯಸಿದ್ದನ್ನೆಲ್ಲ ತಂದುಕೊಡುವ ಕಾಲಕೂಡಿ ಬಂದಿದೆ. ನಾಳೆಯೇ ನಾನು ನಿಮ್ಮ ಚಿಕ್ಕವ್ವನೂ ಬಂಡಿಹೂಡಿ ಎಲ್ಲವೂ ಕೈಗೆಟುಕುವ ಪಟ್ಟಣಕ್ಕೆ ಹೋಗುವುದಿದೆ. ಅಲ್ಲಿ ಎಲ್ಲವನ್ನೂ ಸಂಪಾದಿಸಿ ತರಲು ಹೋಗುತ್ತಿದ್ದೇವೆ. ನಿಮಗೆ ಏನೇನು ಬೇಕೋ ಅದನ್ನೆಲ್ಲ ಕೇಳಿ; ತಂದು ಕೊಡುವೆ’ ಎಂದು ತಂದೆಯು ಮಕ್ಕಳ ಮುಗ್ಧ ಮನಸ್ಸಿನಲ್ಲಿ ಅಪಾರವಾದ ಆಸೆಯನ್ನೆ ಹುಟ್ಟಿಸಿದ. ತಾಮುಂದು ಎಂದು ಒಂದೊಂದು ಮಕ್ಕಳು ತಮ್ಮ ಬಯಕೆಯನ್ನು ತಂದೆಯ ಜೊತೆ ಹೇಳಿಕೊಳ್ಳಲು ಗದ್ದಲವೆಬ್ಬಿಸಿದವು. ಚಿಕ್ಕವ್ವ ಎಲ್ಲ ಗಂಟು ಮೂಟೆ ಕಟ್ಟುತ್ತಿದ್ದಳು. `ಒಬ್ಬೊಬ್ಬರಾಗಿ ಹೇಳಿ ನೀವು ಎಷ್ಟೇ ಕಷ್ಟದ್ದನ್ನೇ ಕೇಳಿದರೂ ತಂದುಕೊಡುವೆ’ ಎಂದು ತಂದೆ ಅವರನ್ನೇ ದಿಟ್ಟಿಸಿದ. `ಮೊದಲು ನಾನು ಕೇಳುವೆ ಎಲ್ಲರೂ ತಾಳಿ’ ಎಂದು ಕಿರಿಯವಳು ಕೋರಿದಳು. ಒಂದು ಕ್ಷಣ ಎಲ್ಲರೂ ನಿಶ್ಯಬ್ದರಾದರು.

`ಅಪ್ಪಾ ಅಪ್ಪಾ ಅಲ್ಲಿ; ಆ ದೂರದ ಆಕಾಶದಲ್ಲಿ ನಕ್ಷತ್ರಗಳು ಇದ್ದಾವಲ್ಲಪ್ಪಾ, ಆ ನಕ್ಷತ್ರಗಳಲ್ಲಿ ನನಗೆ ಒಂದೆರಡಾದರೂ ನಕ್ಷತ್ರಗಳ ತಂದುಕೊಡಪ್ಪಾ’…

ಆ ತಂದೆ ನಗಾಡುತ್ತಾ `ಅಷ್ಟೇನಾ’ ಎನ್ನುತ್ತ ಮುಂದಿನವಳ ಮುಖ ನೋಡಿದ. ಆಕೆ ಒಂದರಗಳಿಗೆ ಯೋಚಿಸಿ; `ಅಲ್ಲಿ ಆ ಏಳು ಸಮುದ್ರಗಳ ಆಚೆ ಏಳು ಬೆಟ್ಟಗಳ ದಾಟಿ ಹೋದರೆ ಅಲ್ಲಿ ಆ ಪಾತಾಳದ ಗವಿಯಲ್ಲಿ ಪ್ರಾಣಪಕ್ಷಿಯು ಯಾವಾಗಲು ಅನಾಥರಿಗಾಗಿ ಹಾಡ್ತಾನೇ ಇರ್ತದೆ ಅಂತಾ ಅವ್ವ ಹೇಳ್ತಾ ಇದ್ಲಲ್ಲ ಅಪ್ಪಾ; ಅಂತಾ ಆ ಪ್ರಾಣಪಕ್ಷಿಯ ಹಿಡಿದು ತಂದು ನಮಗೆ ಕೊಡಪ್ಪಾ’ ಎಂದಳು.

ಎಲಾ ಇವರಾ ಎಂದು ಒಳಗೇ ಉದ್ಗಾರ ಎಳೆದುಕೊಂಡ ಆತ ಇನ್ನೊಬ್ಬ ಮಗಳ ಮುಖ ನೋಡಿ `ನಿನಗೇನು ಬೇಕವ್ವಾ’ ಎಂದು ಕೇಳಿದ. ಆಕೆ ತನ್ನ ಸರದಿಗಾಗಿ ಕಾಯುತ್ತಿದ್ದಂತೆ ತಡ ಮಾಡದೆ ನಿಶ್ಚಯದ ದನಿಯಲ್ಲಿ ತಣ್ಣಗೆ ಕೇಳಿದಳು; `ಅಪ್ಪಾ ಆ ಆಕಾಶದ ಅಗಲಕ್ಕೂ ಮಿಂಚಿ ಮರೆಯಾಗುವ ಆ ಮಿಂಚಿನ ಬಳ್ಳಿಯನ್ನು ತಂದುಕೊಡಪ್ಪಾ ನಮ್ಮ ಮನೆ ಮುಂದೆಯೇ ನೆಡೋಣ.’

ಮಕ್ಕಳ ಆ ಬೇಡಿಕೆಯನ್ನು ಆಲಿಸುತ್ತಿದ್ದ ಚಿಕ್ಕವ್ವ ಒಳಗೊಳಗೇ ನಗಾಡುತ್ತಿದ್ದಳು. ನಾಲ್ಕನೆಯ ಮಗಳತ್ತ ತಂದೆ ಓಡಿದ. `ನನಗೆ ಅಷ್ಟೆಲ್ಲ ಆಸೆ ಇಲ್ಲಪ್ಪಾ; ಸುಮ್ಮನೆ ಆ ಕಾಮನಬಿಲ್ಲನ್ನು ತಂದುಬಿಡಪ್ಪಾ’ ಎನ್ನುತ ಆಕಾಶದ ಕಡೆಗೇ ದಿಟ್ಟಿಸಿದಳು. ಐದನೆಯವಳು ಸ್ವಲ್ಪ ಅತೃಪ್ತಿಯಿಂದ; ಆಗಲೇ ಅವರು ಒಳ್ಳೆಯದನ್ನೆಲ್ಲ ಕೇಳಿಕೊಂಡರಲ್ಲಾ; ತಾನೀಗ ಏನೆಂದು ಕೇಳುವುದೊ ಎಂದು ತಡವರಿಸುತ್ತ; `ಈ ಆಕಾಶದಲ್ಲಿ ಏನೇನಿದೆಯೊ ಅದನ್ನೆಲ್ಲ ಕಲಿಸುವ ಮಂತ್ರದಂಡವ ತಂದುಕೊಡಪ್ಪ’ ಎಂದು ಆಸೆಯಿಂದ ಅಪ್ಪನನ್ನೆ ಅಗಲವಾದ ಕಣ್ಣಿಂದ ತುಂಬಿಕೊಂಡು ಆ ಆಕಾಶದ ಅಗಾಧತೆಯನ್ನೆ ಕಣ್ಣಲ್ಲಿ ಪ್ರತಿಫಲಿಸುತ್ತ ತನ್ನ ಅಕ್ಕನತ್ತ ನೋಡಿದಳು. ತನ್ನ ತಂಗಿಯರ ಬಯಕೆ ಎಲ್ಲವೂ ಈಡೇರಲಿ ಎಂದು ಪಾರ್ಥಿಸುವ ನಿಲುವಿನಲ್ಲಿ ಆಕೆ ತಂದೆಯ ಮುಂದೆ ನಿಂತೇ ಇದ್ದಳು. `ಇನ್ನು ನಿನ್ನದೇನೊ’ ಎಂದು ತಂದೆ ಆರನೆಯವಳನ್ನು ಕೇಳಿದ.

`ಅಪ್ಪಾ; ನಾನು ನನ್ನ ತಾಯಿಯೇ ಆಗಿ ಚಿಕ್ಕವ್ವನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿಬರುವಂತೆ ಮಾಡಪ್ಪಾ’ ಎಂದು ವಿಚಿತ್ರ ಬಯಕೆಯನ್ನು ಮುಂದಿಟ್ಟಳು. `ಆ ನನ್ನ ಸವತಿಯಾಗಿ ನನ್ನ ಹೊಟ್ಟೇಲಿ ನೀನ್ಯಾಕೆ ಹುಟ್ಟಿಬರುವೆ’ ಎಂದು ಚಿಕ್ಕವ್ವ ಆಕ್ಷೇಪಿಸಿದಳು. `ಹೋಗಲಿ ಬಿಡೇ ಎಲ್ಲರೂ ಸ್ವರ್ಗದ ಬಯಕೆಯನ್ನೆ ಕೇಳಿದ್ದಾರೆ’ ಎಂದು ಆತ ಕೊನೆಯ ಸರದಿಯಾಗಿ `ಓಹೋ ಮರೆತಿದ್ದೇ; ನಿನ್ನ ಆಸೆ ಏನು ಹೇಳವ್ವಾ’ ಎಂದು ಹಿರಿ ಮಗಳನ್ನು ಆತ ಕೇಳಿದ. ಆಕೆ ಸುಮ್ಮನೆ ತಂಗಿಯರನ್ನೆ ಯಾವುದೊ ಸಂಕಟದ ಭಾವದಲ್ಲಿ ನೋಡುತ್ತ ಕಂಬನಿ ತುಂಬಿಕೊಂಡಿದ್ದಳು. `ಅದೇನ್ ಹೇಳೇ ನಿನ್ನಾಸೇನೂ ತಿಳಕಂತೀನಿ’ ಎಂದು ಚಿಕ್ಕವ್ವ ಒತ್ತಾಯಿಸಿದಳು.

`ಏನಿಲ್ಲಾ ಚಿಕ್ಕವ್ವಾ, ನೀನೂ ಅಪ್ಪನೂ ಸುಖವಾಗಿ ಹಿಂತಿರುಗಿ ಬರ್ಲಿ ಅನ್ನೋದೆ ನನ್ನಾಸೆ. ನೀವು ಬರೋದ್ನೆ ಕಾಯ್ತಾ ತಂಗಿಯರ ಕಾಯ್ತಾ ಇಲ್ಲೇ ಕಾಯ್ತಾ ಇರ್ತೀನಿ ಚಿಕ್ಕವ್ವಾ’ ಎಂದು `ಹೌದು ಅಪ್ಪಾ ನಾನು ಯಾವತ್ತೂ ಕಾಯ್ತಾ ಇರುತ್ತೇನೆ’ ಎಂಬ ಭಾವವ ತಂದೆಯತ್ತ ತೇಲಿಸಿ ತಂಗಿಯರನ್ನು ಹತ್ತಿರಕ್ಕೆ ಕರೆದುಕೊಂಡಳು. ಆ ಮಕ್ಕಳು ತಂದೆಯ ಆಶ್ವಾಸನೆಯನ್ನು ಸೂರ್ಯಚಂದ್ರರಷ್ಟೇ ನಿಜವಾಗಿ ತಮ್ಮ ನೆತ್ತಿಯಲ್ಲಿ ತುಂಬಿಕೊಂಡವು.

ಆ ದಿನವೂ ಬಂತು ಒಂದು ದಿನ ಬಂಡಿ ಹೂಡಿ ಆ ಗಂಡ ಹೆಂಡಿರಿಬ್ಬರೂ ಬಹಳ ದೂರದ ಪಯಣಕ್ಕೆ ಹೊರಟರು. ಬೆಟ್ಟದ ಮರೆಯ ತಿರುವಿನ ದಾರಿ ತನಕ ಬಂಡಿಯ ಹಿಂದೆ ಹಿಂದೆಯೇ ಹಿಂಬಾಲಿಸುತ್ತ ಬಂದು ಬೀಳ್ಕೊಟ್ಟ ಮಕ್ಕಳು ತಾವು ಕೇಳಿದ್ದನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಂಡು ಬೇಗ ಬಂದು ಬಿಡು ಅಪ್ಪಾ ಎಂದು ಕಣಿವೆಯೆ ಪ್ರತಿಧ್ವನಿಸುವಂತೆ ಕೂಗಿ ಕೈ ಬೀಸಿ, ಸೂರ್ಯ ಮುಳುಗಿ ಮನೆಗೆ ಹಿಂತಿರುಗಿದ್ದವು. ಹಿರಿ ಮಗಳು ತಂಗಿಯರನ್ನು ಕಟ್ಟಿಕೊಂಡು ಆ ಒಂಟಿ ಕಾಡಿನ ಮನೆಯ ಒಳಗೆ ಹಗಲು ರಾತ್ರಿಗಳನ್ನು ಎಣಿಸ ತೊಡಗಿದಳು. ಹೋದವರು ಹೊರಟೇ ಹೋಗಿದ್ದರು. ಹಿಂತಿರುಗಿ ಬರುವ ಗುರಿಯೇ ಅವರಿಗೆ ಇರಲಿಲ್ಲ. ಹೆಂಡತಿಯ ಸುಖವೇ ಅವನಿಗೆ ತನ್ನ ಸುಖವಾಗಿತ್ತು. ದೂರ ದೂರ ನಡೆದಂತೆ ಅವನ ಮನಸ್ಸಿನಲ್ಲಿ ಮಕ್ಕಳ ಚಿತ್ರ ಅಳಿಸಿಹೋಗಿತ್ತು. ಅಪ್ಪ ಇನ್ನೂ ಯಾಕೆ ಬಂದಿಲ್ಲವೊ ಎಂದು ಅಕ್ಕನನ್ನು ತಂಗಿಯರು ಕೇಳುತ್ತಲೆ ಇದ್ದರು.

`ಅಕ್ಕಾ ಚಿಕ್ಕವ್ವನೂ ಅಪ್ಪನೂ ಯಾವಾಗ ಬರುವರು ಅಕ್ಕಾ
ಅಪ್ಪನ ದನಿ ಕೇಳಿ ಬಹಳ ಕಾಲವೇ ಆಯಿತಲ್ಲಾ ಅಕ್ಕಾ
ಅಪ್ಪ ಹಿಂತಿರುಗುವುದು ದಿಟವೇನು ಅಕ್ಕಾ
ದೂರದಾರಿಯ ದಾಟಿ ಕೇಳಿದ್ದೆಲ್ಲ ತರಲು ಅಪ್ಪನಿಗೆ ಸಾಧ್ಯವೇ ಅಕ್ಕಾ
ಯಾವ ಕೇಡೂ ಅವರನ್ನು ತಡೆದಿಲ್ಲ ಅಲ್ಲವೇನಕ್ಕಾ
ಇನ್ನೇನೊ ನಾಳೆಯೋ ನಾಡಿದ್ದೊ ಇಲ್ಲವೇ ಮುಂಜಾವಿಗೊ ಅವರು
ಬಂದೇ ಬರುವವಲ್ಲವೇನಕ್ಕಾ’

ಎಂದು ಅಷ್ಟೂ ತಂಗಿಯರು ಅಕ್ಕನ ಮುಂದೆ ಕೂತು ಅದದೇ ಮಾತುಗಳ ಆಡಿ ಆಡಿ ದಣಿದು ತಣಿದು ಕನಸಿನ ಅಲೆ ಅಲೆಯ ಮೇಲೆ ತೇಲಿ ತೇಲಿ `ಬಂದೇಬಿಟ್ಟನು ಅಪ್ಪ, ಬೇಕು ಬೇಕಾದ್ದೆಲ್ಲವನ್ನು ಹೊತ್ತುಕೊಂಡು ಬಂದೇಬಿಟ್ಟನು ಅಪ್ಪ’ ಎಂದು ಅದೇ ಅಂಗಳದಲ್ಲಿ ಹಾಡುತ್ತ ನಲಿಯುತ್ತ ಅಕ್ಕನ ಅಕ್ಕರೆಯಲ್ಲಿ ಅರಳುತ್ತ ಕಾಯುತ್ತಲೆ ಇದ್ದರು.

ಅದೇ ಸೂರ್ಯ ಹಗಲು ರಾತ್ರಿಗಳ ಕಣ್ಣಾಮುಚ್ಚಾಲೆಯಲ್ಲಿ ಆಕಾಶದ ತುಂಬ ಆಡಿಕೊಳ್ಳುತ್ತಲೇ ಇದ್ದ. ಹಳೆ ಬೇರು ಹೊಸ ಚಿಗುರು ಲೋಕದ ಸಿರಿಯ ಹಸಿರಾಗಿಸುತ್ತಲೆ ಇತ್ತು. ಎಷ್ಟೋ ದಿನಗಳು ಕಳೆದವು. ಮಕ್ಕಳು ಮಾತ್ರ ಒಂದು ರಾಗಿ ಕಾಳಿನಷ್ಟೂ ವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ಅವರ ಅನಂತ ಬಯಕೆಯ ದಾಹ ತಣಿದಿರಲಿಲ್ಲ. ತಣ್ಣಗೆ ಚಿಲುಮೆಯಂತೆ ಅವರ ಮನದಲ್ಲಿ ತಂದೆಯ ಆಗಮನದ ನಿರೀಕ್ಷೆ ಚಿಮ್ಮುತ್ತಲೇ ಇತ್ತು. ಆಕಾಶದ ತಾರೆ ನಿಹಾರಿಕೆ ಉಲ್ಕೆಗಳು ಕಾಲದ ಚಲನೆಯಲ್ಲಿ ಚಾಚೂತಪ್ಪದೆ ಸಾಗುತ್ತಲೆ ಇದ್ದಂತೆ ಆ ಮಕ್ಕಳೂ ಕೂಡ ಬಂದೇ ಬರುವ ಅಪ್ಪನ ಆಕಾಂಕ್ಷೆಯಲ್ಲಿ ಆ ಒಂಟಿಕಾಡು ಮನೆಯ ನಿರ್ಜನ ಪ್ರದೇಶದ ನಿಗೂಢ ಮರೆಯಲ್ಲಿ ಸತತವಾಗಿ ಉಸಿರಾಟದಂತೆ ಪ್ರತಿಕ್ಷಣವೂ ಕಾಯುತ್ತಲೆ ಇದ್ದರು.

ಅವರ ಹಿರಿ ಅಕ್ಕ, `ಅಪ್ಪನೂ ಚಿಕ್ಕವ್ವನೂ ನಿಮಗೆ ತರಬೇಕಾದ್ದೆಲ್ಲವನ್ನು ತರಲು ಎಷ್ಟು ಕಷ್ಟ ಪಡುತ್ತಿದ್ದಾರೆ ಗೊತ್ತೇನು ನಿಮಗೆ. ಅಂತಂತಹ ಅಸಾಧ್ಯವಾದದ್ದನ್ನೆಲ್ಲ ಬಡಪಾಯಿ ಅಪ್ಪನಿಗೆ ಕೇಳಿಬಿಟ್ಟಿರಲ್ಲಾ ಅದಕ್ಕೇ ಬರಲು ತಡವಾಗುತ್ತಿರುವುದು.  ಇನ್ನು ಸ್ವಲ್ಪ ಕಾಲ ಕಳೆದ ಮೇಲೆ ಅಪ್ಪ ಬಂದೇ ಬರುವನು ಇನ್ನಷ್ಟು ಕಾಯಿರಿ’ ಎಂದು ತಂಗಿಯರಿಗೆ ಧೈರ್ಯ ತುಂಬಿದ್ದಳು. `ಅಯ್ಯೋ, ಅಪ್ಪ ನಮ್ಮಿಂದ ಎಷ್ಟು ಕಷ್ಟ ಅನುಭವಿಸುತ್ತಾನೊ ಏನೊ. ಅಂತಹ ಕನಸಿನ ಲೋಕವನ್ನೆಲ್ಲ ನಾವು ಕೇಳಿ ತಪ್ಪು ಮಾಡಿಬಿಟ್ಟೆವಲ್ಲಾ’ ಎಂದು ಮಕ್ಕಳು ನೊಂದುಕೊಂಡವು.

ದಿನ ಕಳೆದಂತೆಲ್ಲ ಮಕ್ಕಳ ನಿರೀಕ್ಷೆಯ ಕಣ್ಣುಗಳು ಬಳಲತೊಡಗಿದವು. ಪ್ರತಿರಾತ್ರಿಯೂ ವಿಶ್ವಾಸದ ಕತೆ ಹೇಳಿ ಹೇಳಿ ಹಿರಿಮಗಳು ನವೆಯುತ್ತಿದ್ದಳು. ಅಂತಹ ಪುಟ್ಟ ಮಕ್ಕಳ ಇಚ್ಫಾಶಕ್ತಿಯು ಅವರೊಳಗೆ `ಇರಲಿರಲಿ ಈ ಜೀವ ನಾಳೆ ನಾಳೆಯ ನಾಳಿನಾಚೆಯ ತನಕ ಬದುಕಿರಲಿ’ ಎಂದು ದೀಪದಂತೆ ಉರಿಯುತ್ತಲೆ ಇತ್ತು. ಆಗೊಮ್ಮೆ ಹಸಿದ ಹೆಬ್ಬುಲಿಯೊಂದು ಕಾಡಿನ ಒಂಟಿ ಮನೆಯ ಬಾಗಿಲು ಮುಚ್ಚಿ ಎಷ್ಟೊಂದು ಕಾಲವಾಯಿತಲ್ಲಾ. ಇಲ್ಲೇನಾದರೂ ಮಿಕವಾದರೂ ತನ್ನ ಬಾಯಿಗೆ ಸಿಗಬಹುದೇ ಎಂದು ನುಸುಳಿ ಬಂದು ಇಣುಕಿ ನೋಡಿತು. ಹಜಾರದಲ್ಲಿ ತಣ್ಣಗೆ ಉರಿಯುತ್ತಿದ್ದ ದೀಪದ ಎದಿರು ಹಿರಿಮಗಳು ತಂಗಿಯರನ್ನು ಸುತ್ತ ಮಲಗಿಸಿಕೊಂಡು ಅವರ ಜೀವ ಕಾಯುವಂತೆ ಕೂತೇ ಇದ್ದಳು. ಅಹಾ ಒಂದೊಂದು ದಿನಕ್ಕೆ ಒಬ್ಬೊಬ್ಬರಂತೆ ಏಳೂ ಜನರನ್ನು ಏಳೂರಾತ್ರಿ ತಿಂದು ಮುಗಿಸಬಹುದಲ್ಲವೇ ಎಂದು ಬಾಯಿ ನೀರು ಸುರಿಸಿಕೊಂಡು ಉರಿವ ಕೆಂಗಣ್ಣಿಂದ ಅವರನ್ನೇ ಇರಿಯುವಂತೆ ಹುಲಿ ಲೆಕ್ಕಿಸುತ್ತಿತ್ತು.

ನಿದ್ದೆಯಲ್ಲೂ ಆ ಮಕ್ಕಳು ತಮ್ಮ ಬಯಕೆಯ ತಂದೆಯ ಬಳ್ಳಿ ಕೋರುತ್ತಾ `ಹೌದ್ಹೌದು ಅಪ್ಪ ಬರ್ತಿದ್ದಾರೆ. ಆಹಾ ಅಪ್ಪನ ಕೈಯಲ್ಲಿ ನನ್ನ ಪ್ರಾಣಪಕ್ಷಿಯಿದೆ. ಅಗೋ ಅಲ್ಲಿ ನೋಡು, ಅಪ್ಪನ ಹೆಗಲ ಮೇಲೆ ಕಾಮನಬಿಲ್ಲು ಕೂತಿದೆ. ದೇವರೇ ಆ ನಕ್ಷತ್ರಗಳು ತಂದೆಯ ತಲೆ ಮೇಲೆ ಹೇಗೆ ಹೊಳೆಯುತ್ತಿವೆಯಲ್ಲಾ… ನಿಜ ನಿಜಾ ಆ ಮಂತ್ರವಿದ್ಯೆಯ ಮಂತ್ರದಂಡವು ಅಪ್ಪನ ಬೆರಳ ನಡುವೆಯೇ ಇದೆ… ದೇವರೇ ದೇವರೇ ನೀನು ಎಷ್ಟೊಂದು ಕರುಣಾಮಯಿ’ ಎಂದು ಕನವರಿಸುತ್ತಿದ್ದರು. ಹೆಬ್ಬುಲಿ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ ತಪ್ಪು ಮಾಡಲಿಲ್ಲ. `ಅಹಾ! ಶಿವಶಿವಾ! ಇಂತಹ ಮಕ್ಕಳ ನಾನು ತಿನ್ನಬಹುದೇ, ಇಷ್ಟೊಂದು ಕನಸನ್ನು ನಾನು ನಾಶ ಪಡಿಸಬಹುದೇ? ಬೇಡ ಬೇಡ ನನ್ನ ಹಸಿವು ನನ್ನನ್ನೇ ತಿಂದು ಬಿಡಲಿ’ ಎಂದು ನಿರ್ಧಾರವನ್ನು ಬದಲಿಸಿ ಹುಲಿ ಕಾಡಿಗೆ ಹಿಂದಿರುಗಿತು. ಅಪಾಯಗಳ ವಾಸನೆ ಹಿಡಿದ ಹಿರಿಮಗಳು ಇನ್ನು ಮನೆಯ ಹೊರಗೆ ಬರಲೇಬಾರದು. ಅಪ್ಪ ಬರುವ ತನಕ ಮನೆಯ ನೆಲ ಮಾಳಿಗೆಯಲ್ಲೆ ಬೇರೂರಿದಂತೆ ಅವಿತುಕೊಳ್ಳಬೇಕು ಎಂದು ನಿಶ್ಚಯಿಸಿ ಎಲ್ಲ ಬಾಗಿಲು ಭದ್ರಪಡಿಸಿ ತಂಗಿಯರನ್ನು ನೆಲಮಾಳಿಗೆಗೆ ಕರೆದೊಯ್ದು ತಪಸ್ಸಿಗೆ ಕೂತಂತೆ ನೆಲೆಯೂರಿದಳು. ಅಕ್ಕನ ಅಂತರಂಗವ ಅರಿತ ತಂಗಿಯರು ಅವಳ ಅಕ್ಕಪಕ್ಕದಲ್ಲೆ ಒರಗಿದರು. ದಿನಗಳು ಕಳೆದಂತೆಲ್ಲ ಅಲ್ಲಿಗೆ ಯಾರೊಬ್ಬರೂ ಬರಲಿಲ್ಲ. ಹಾದಿಹೋಕರು ಅಪರೂಪಕ್ಕೆ; `ಬಾಯಾರಿದೆ ಗುಟುಕು ನೀರಿದ್ದರೆ ಕೊಡಿರವ್ವಾ’ ಎಂಬುದೂ ನಿಂತುಹೋಯಿತು. ಮನೆಯ ಸುತ್ತಮುತ್ತ ಗಿಡಗಂಟೆ ಬೆಳೆದು ಮನೆಯೇ ಮುಚ್ಚಿಹೋಯಿತು.

ಹಾಗೆ ಮಕ್ಕಳನ್ನು ಮರೆತು ದೂರದ ಪಟ್ಟಣಕ್ಕೆ ಬಂದು ನೆಲೆಸಿದ್ದ ಆ ಗಂಡ ಹೆಂಡಿರಿಬ್ಬರು ಸುಖವಾಗೇನೂ ಇರಲಿಲ್ಲ. ಸ್ವರ್ಗ ಸಿಗುವುದೆಂದು ರಾತ್ರೋರಾತ್ರಿ ಓಡಿ ಬಂದಿದ್ದ ಅವರಿಗೆ ನರಕದ ದರ್ಶನವಾಗಿತ್ತು. ನೋಡಲು ಪಟ್ಟಣವೇನೊ ಚೆಂದವಾಗಿಯೆ ಇತ್ತು. ಆದರೆ ಪಟ್ಟಣವು ಡಕಾಯಿತರ ಕೊಲೆಗಡುಕರ ಸುಲಿಗೆಕೋರರ ದಬ್ಬಾಳಿಕೆಯವರ ತವರುಮನೆಯಾಗಿತ್ತು. ಅಮಾಯಕರಾಗಿ ಕಂಡವರನ್ನು ಹಿಡಿದು ದೂರದ ಯಾರಿಗೊ ಮಾರಿ ಜೀತಕ್ಕೆ ಅಟ್ಟಿ ಬಿಡುತ್ತಿದ್ದರು. ಅದೇ ಅಲ್ಲದೆ ನೆರೆಯ ಪಾಳೆಯಗಾರರು ಆಗಾಗ ದಂಡೆತ್ತಿ ಬಂದು ದಾಳಿ ಮಾಡಿ ಹೋಗುವುದು ಮಾಮೂಲಾಗಿತ್ತು. ಕೊಲೆಸುಲಿಗೆ ಹಲ್ಲೆಗಳು ನಿತ್ಯದ ಕಾಯಕವಾಗಿದ್ದವು. ಅಂತಹ ಬರ್ಬರ ಪಟ್ಟಣದ ಬಲೆಯ ಒಳಗೆ ಅವರು ಸಿಕ್ಕಿಹಾಕಿಕೊಂಡು ನರಳಾಡಿದರು. `ನಿನ್ನ ನಂಬಿ ನೆಚ್ಚಿ ಬಂದ ನನಗೆ ಎಂತಾಗತಿ ಬಂತಲ್ಲಾ; ನೀನು ನನ್ನನ್ನು ಯಾರಿಗಾದರೂ ಮಾರಿ ಇನ್ನೊಂದೂರಿನ ದಾರಿ ಹಿಡಿದು ಮತ್ತೊಬ್ಬಳ ಸೆರಗ ಹಿಡಿಯೋನೇ’ ಎಂದು ಹತಾಶೆಯಲಿ ಕಂಬನಿಗರೆದಳು. `ಲೂಟಿಕೋರರ ಜೊತೆ ಸೇರಿ ಬೆಳ್ಳಿಬಂಗಾರವ ತಂದು ನಿನ್ನ ಮೈತುಂಬ ಹೊರಿಸುವೆ’ ಎಂದು ಆತ ಅದಕ್ಕೂ ಮುಂದಾದ. ಹೆಂಡತಿ ಅವನ ಬಲೆಯಿಂದ ತಪ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಅಂತೆಯೇ ತಾನೇ ಒಂಟಿಯಾಗಿ ಎಲ್ಲಿಯೂ ಹೋಗುವಂತೆಯೂ ಇರಲಿಲ್ಲ. ಅವನ ಆ ಬಲೆಯಲ್ಲೇ ತಾತ್ಕಾಲಿಕ ರಕ್ಷಣೆಯನ್ನು ಪಡೆಯಬೇಕಿತ್ತು. ದೋಚುವುದು ಬಹಳ ಸಲೀಸು ಎಂದುಕೊಂಡಿದ್ದ ಅವನಿಗೆ ಅದು ಕೂಡ ಸಾಧ್ಯವಾಗದೆ ಮತ್ತೆ ಬಂದು ಹೆಂಡತಿಯ ಸೆರಗಲ್ಲಿ ಬಚ್ಚಿಟ್ಟುಕೊಳ್ಳಲು ನೋಡಿದ. ಹೆಂಡತಿಗೆ ರೋಸಿಹೋಗಿತ್ತು. `ಈ ಊರು ಬೇಡ; ಮುಂದಿನ ಊರಿಗಾದರೂ ಹೋಗುವ ನಡೆಯೆ. ಅಲ್ಲಿಯಾದರೂ ನನ್ನ ವಿದಿಯನ್ನು ಪರೀಕ್ಷಿಸಿಕೊಳ್ಳುವ’ ಎಂದು ಗಂಡ ರಾಗ ಎಳೆದ. `ಎಲ್ಲಿಗೆ ಹೋದರೂ ಅದೇ ಗತಿ ಅದೇ ಮತಿ ನಿನ್ನ ಹಿಂದೆ ಬಂದು ದಾರಿತಪ್ಪಿದೆ’ ಎಂದು ಆಕೆ ಗೋಳಾಡಿದಳು. ರಮಿಸಿದ ಆತ ಕೊನೆಗೊಂದು ಅವಕಾಶ ಕೊಡು ಇನ್ನಾದರು ನ್ಯಾಯಯುತವಾಗಿ ಬದುಕುವೆ ಎಂದು ಪಾಪಿಯಂತೆ ಕೋರಿದ. ಅವಳಿಗೆ ಅವನನ್ನು ಕ್ಷಮಿಸದೆ ವಿದಿ ಇರಲಿಲ್ಲ. `ಆಯ್ತು ನಡೇ; ಅದನ್ನೂ ನೋಡಿ ಬಿಡುವೆ’ ಎಂದು ಆಕೆ ಬುತ್ತಿ ಕಟ್ಟಿದಳು ಎಂದಿನಂತೆಯೆ ಅವರು ಕತ್ತಲ ದಾರಿಯಲ್ಲಿ ನಾಳಿನ ಬೆಳಕನ್ನು ಹುಡುಕುತ್ತ ನಡೆದರು.

ದಾರಿದಾರಿಗೂ ಎದುರಾದ ತೊಡಕುಗಳ ನಿವಾರಿಸಿಕೊಂಡು ದೂರದ ಇನ್ನೊಂದು ನೆಲೆಗೆ ಬರುವಷ್ಟರಲ್ಲಿ ಅವರಿಬ್ಬರೂ ವಿಶ್ವಾಸ ಕಳೆದುಕೊಂಡು ಮಾರ್ಗ ಮಧ್ಯದ ಒಂದು ಪಾಳು ಮಂಟಪದಲ್ಲಿ ದಣಿದು ಬಿದ್ದಿದ್ದರು. ಕುದುರೆ ಸವಾರರಿಬ್ಬರು ಬಂದು ಅವರನ್ನು ಕಂಡರು. ಇವರಾರೊ ಶತ್ರು ಪಟ್ಟಣದ ವೇಷದಾರಿ ಖದೀಮರೇ ಇರಬೇಕೆಂದು ಎಬ್ಬಿಸಿಕೊಂಡು ತಮ್ಮ ಪಟ್ಟಣಕ್ಕೆ ನಡೆದರು. ವಿಚಾರಿಸಲಾಗಿ ಇಬ್ಬರೂ ಅಮಾಯಕರೆಂದು ತಿಳಿದು ಆಗತಾನೆ ಕಟ್ಟುತ್ತಿದ್ದ ಅರಮನೆಯ ಕೆಲಸಕ್ಕೆ ಇವರು ತಕ್ಕುದಾದವರೆಂದು ಅಲ್ಲಿಗೆ ಅಟ್ಟಿದರು. ಆ ಸೀಮೆಯ ಪಾಳೆಯಗಾರ ಬೆಟ್ಟದ ತುದಿಯಲ್ಲಿ ಬಹು ಎತ್ತರದ ಒಂದು ಕೋಟೆ ಅರಮನೆಯನ್ನು ಕಟ್ಟಿಸುತ್ತಿದ್ದ. ಆ ಕಟ್ಟಡ ಆಗಲೆ ಕೊನೆ ಹಂತಕ್ಕೆ ಬಂದಿದ್ದು ಅಂತಿಮ ಸುತ್ತಿನ ಕೆಲಸಗಳು ತರಾತುರಿಯಲ್ಲಿ ಜರುಗಿದ್ದವು. ಶತ್ರು ರಾಜರ ಕಡೆಯವರು ಯಾವ ಗಳಿಗೆಯಲ್ಲಾದರೂ ದಾಳಿ ಮಾಡುವ ಸಂಭವವಿತ್ತು. ಅಷ್ಟರ ಒಳಗೆ ಅರಮನೆಯನ್ನು ಸಿಂಗರಿಸಿ ಸಡಗರವನ್ನು ಆಚರಿಸಬೇಕಾಗಿತ್ತು. ಪಾಳೆಯಗಾರ ತುದಿಗಾಲಲ್ಲಿ ನಿಂತು ನೂರಾರು ಕೆಲಸಗಾರರ ಮೇಲೆ ಘರ್ಜಿಸುತ್ತಿದ್ದ. ಹಗಲು ರಾತ್ರಿ ಕೆಲಸ ಒಂದೇಸಮನೆ ಸಾಗಿತ್ತು. ಇನ್ನೇನೊ ಕೆಲಸ ಮುಗಿಯುತ್ತಿದೆ ಎಂದು ಆ ಕೆಲಸದವರೆಲ್ಲ ಆ ರಾತ್ರಿ ಬಹಳ ಹೊತ್ತಿನ ತನಕ ದುಡಿದು ಆಗ ತಾನೆ ಮಲಗಲು ಮುಂದಾಗುತ್ತಿದ್ದರು.

ಆ ಗಂಡ ಹೆಂಡಿರಿಬ್ಬರು ದುಡಿದು ಸಾಕಾಗಿ ಕಟ್ಟಡದ ತಳದ ಮೂಲೆಯೊಂದರಲ್ಲಿ ಮಲಗಿದ್ದರು. ಆರಲೊ ಉರಿಯಲೊ ಎಂಬಂತೆ ದೀಪದ ಬೆಳಕು ಉಸಿರುಕಟ್ಟಿದಂತೆ ತೊಯ್ದಾಡುತ್ತಿತ್ತು. ಅವಳ ಗಂಡ ಯಾವುದೊ ಗಹನ ಚಿಂತೆಯಲ್ಲಿ ಮುಳುಗಿದ್ದ. ಹೆಂಡತಿ ಕುತೂಹಲದಿಂದ ಗಂಡನನ್ನು ಕೇಳಿದಳು;

`ಅದೇನು ಅಂಗೇ ಯೋಚಿಸ್ತಾ ಇದ್ದೀಯಲ್ಲಾ’
`ಮಕ್ಕಳು ನೆನಪಾದೊ’
`ಹಾ! ಇಸ್ಟು ದಿನಾ ಆದ್ಮೇಲೆ’
`ಎಷ್ಟೇ ಆಗ್ಲಿ ಅವು ನನ್ನವೇ ತಾನೆ’
`ಅಂಗಾದ್ರೆ ಅವು ಕೇಳಿದ್ನೆಲ್ಲ ತಕಂದೋದಿಯಾ’
`ಅದ್ನೇ ಯೋಚಿಸ್ತಿದ್ದೀನಿ…’
`ಅವು ಬದುಕಿರ್ತಾವೇನು…. ಇಲ್ಲೀಗಂಟ’
`ಬದುಕಿರ್ತವೊ ಏನೊ; ಒಟ್ನಲ್ಲಿ ಅವುಗಳ ಮುಖಾ ನೋಡಬೇಕು’
`ನೋಡ್ದಾ; ನಿನಗೆ ನಿನ್ನ ಮಕ್ಕಳೇ ಹೆಚ್ಚಾದುವಲ್ಲಾ; ಎಷ್ಟೇ ಆಗ್ಲಿ ನಾನು ನಿನ್ನಿಂದೆ ಬಂದೋಳಲ್ಲವೇ. ನನಗೆ ಇಂತಾ ಕೆಟ್ಟ ಪಟ್ಟಣದಲಿ ಏನಾದ್ರು ಆದ್ರೆ ಯಾರ್ ಗತಿ’
`ಸುಸ್ತಾಗಿವ್ನಿ; ಸುಮ್ಮನಿರು; ಇವತ್ತಾದ್ರು ನೆಮ್ಮದೀಲಿ ಕಣ್ಣು ತುಂಬ ನಿದ್ದೆ ಮಾಡ್ತೀನಿ’

ಅಷ್ಟು ಹೇಳಿ ಆತ ಗಾಢವಾದ ನಿದ್ದೆಗೆ ಜಾರಿದ. ಅವಳೂ ಸಾಕಾಗಿ ತಲೆಗೆ ದಿಂಬು ಕೊಟ್ಟುಕೊಂಡು ಹಾಗೇ ಮುದುರಿಕೊಂಡಂತೆ ಮಲಗಿದಳು. ರಾತ್ರಿಯ ಪಹರೆಯವರು ಗಸ್ತು ತಿರುಗುತ್ತ ಆಗಾಗ ಕೊಂಬು ಕಹಳೆ ಜಾಗಟೆಯ ಸದ್ದು ಮಾಡುತ್ತ ಅಡ್ಡಾಡುತ್ತಿರುವುದು ನಿದ್ದೆಯ ಅಮಲಲ್ಲಿ ಎಲ್ಲಿಂದಲೊ ತೇಲಿ ಬಂದಂತೆ ಕೇಳಿಸುತ್ತಿತ್ತು. ನಟ್ಟ ನಡುರಾತ್ರಿ ಹಗಲಿನ ಭಯವಿಲ್ಲದೆ ಸ್ವೇಚ್ಫೆಯಾಗಿತ್ತು. ಇದ್ದಕ್ಕಿದ್ದಂತೆ ಏನೊ ಬೆಟ್ಟದ ತುದಿಯಿಂದ ಕುಸಿದು ಬಿದ್ದಂತೆ ಬಾರೀ ಸದ್ದಾಗಿ ಪಹರೆಯವರೆಲ್ಲ ಚೆಲ್ಲಾಪಿಲ್ಲಿಯಾಗಿ ಬೆದರಿ ಓಡಿಹೋದರು. ಹಾಹಾಕಾರದ ಆಕ್ರಂದನ ಕಗ್ಗತ್ತಲ ಇರಿವಂತೆ ಅರಮನೆಯ ಕಡೆಯಿಂದ ನುಗ್ಗಿ ಬಂತು. ಇದೇನೆಂದು ಪಹರೆಯವರು ಹಿಂತಿರುಗಿ ನೋಡಿದರೆ ಕಟ್ಟುತ್ತಿದ್ದ ಆ ಅರಮನೆಯ ಕುಸಿದು ಬಿದ್ದಿತ್ತು. ಒಳಗೆ ಸಿಲುಕಿದವರು ಕತ್ತಲಲ್ಲಿ ಪ್ರಾಣ ಉಳಿಸಿಕೊಳ್ಳಲು ಕೂಗಾಡುತ್ತಿದ್ದರು. ಗಂಡನ ಸಮೀಪವೇ ಮಲಗಿದ್ದ ಆಕೆ ಆಗ ತಾನೆ ಮಗ್ಗಲು ಬದಲಿಸಿ ಹೊರಳಿಕೊಂಡು ಪಕ್ಕ ಸರಿದಿದ್ದಳು. ಅರಮನೆಯ ತೊಲೆ ಅವರ ನಡುವೆ ಬಿದ್ದು ಗೊಡೆ ಗಂಡನಿಗೆ ಅಡ್ಡವಾಗಿ ಒರಗಿ ಅವನ ಎರಡೂ ಕಾಲುಗಳನ್ನು ಕಚ್ಚಿ ಹಿಡಿದುಕೊಂಡಿತ್ತು. ಹೆಂಡತಿ ಕ್ಷಣ ಮಾತ್ರದಲ್ಲಿ ಸಾವಿನ ಬಾಯಿಂದ ಪಾರಾಗಿದ್ದಳು. ಗಂಡನನ್ನು ಉಳಿಸಿಕೊಳ್ಳಲು ಮುಂದಾದಳು. ಬಲವಾದ ಗೋಡೆ ಅಡ್ಡವಾಗಿತ್ತು ಪ್ರಾಣ ಹಾರಿಹೋಗುತ್ತಿದೆ ಎಂದು ಆತ ಆಕ್ರಂದನದಲ್ಲಿ ಸಹಾಯಕ್ಕಾಗಿ ಕೂಗುತ್ತಿದ್ದ. ಏನು ಮಾಡಿದರೂ ಆಕೆ ಗೋಡೆಯನ್ನು ಸರಿಸುವುದು ಸಾಧ್ಯವಿರಲಿಲ್ಲ. ಮೂಲೆಯಲ್ಲಿ ಮುದುರಿಕೊಂಡು ಬಿದ್ದಿದ್ದ ಅವಳು ಕತ್ತಲೆಯಲ್ಲಿ ದೇವರಿಗಾಗಿ ಒಣಗಿದ ಗಂಟಲಲ್ಲಿ ಕೂಗಿದಳು. ಧೂಳು ತುಂಬಿದ ಕತ್ತಲಲ್ಲಿ ಅವಳ ಜೀವ ತತ್ತರಿಸುತ್ತಿತ್ತು. ಹೆಂಡತಿ ಬದುಕಿದ್ದಾಳೆ ಎಂಬ ಒಂದೇ ಒಂದು ಸಣ್ಣ ವಿಶ್ವಾಸದಲ್ಲಿ `ನೀರೂ ನೀರೂ’ ಎಂದು ದಾಹದಲ್ಲಿ ಆತ ಕರೆದ. ಕಾಲುಗಳು ಜಜ್ಜಿ ರಕ್ತ ಹರಿಯುತ್ತಿತ್ತು. ಹೇಗಾದರೂ ಮಾಡಿ ಜೀವ ಉಳಿಸು ಎಂದು ಒಂದೇಸಮನೆ ಆತ ಅತ್ತು ಕರೆದು ಯಾಚಿಸಿದ. ಅವನ ಹೆಂಡತಿ ಅಸಹಾಯಕವಾಗಿದ್ದಳು. ಕತ್ತಲು ರುದ್ರ ನರ್ತನದಲ್ಲಿ ಕುಣಿಯುತ್ತಿತ್ತು. ಪಾಳೆಯಗಾರ ದಂಗಾಗಿ ಇದು ಯಾವ ಕೇಡೊ ಯಾವ ಶತ್ರುಕಾರ್ಯದ ಆಪತ್ತೊ ಎಂದು ಕೂತುಬಿಟ್ಟಿದ್ದ. ಆಗಲೇ ಜನ ದೊಂಬಿ ನೆರೆದು ಈ ಇರುಳಲ್ಲಿ ಏನು ತಾನೆ ಮಾಡಲು ಸಾಧ್ಯ ಎಂದು ಮುಂಜಾವಿಗಾಗಿ ಕಾಯುತ್ತಿದ್ದರು.

ಕ್ಷೀಣ ದನಿಯಲ್ಲಿ ಆತ ಹೆಂಡತಿಯ ಕರೆದ. ದೈತ್ಯಗೋಡೆಯ ಆಚೆ ಮರೆಯಲ್ಲಿದ್ದ ಅವಳು; `ತಾಳಿಕೋ ಬೆಳಗಾದ ಮೇಲೆ ಯಾರಾದರೂ ಬಂದು ಕಾಪಾಡುವರು’ ಎಂದು ಧೈರ್ಯದ ಮಾತನ್ನು ಅವಿಶ್ವಾಸದಲ್ಲಿ ನಿತ್ರಾಣದ ಗಂಟಲಿಂದ ಹೊರಡಿಸಿದಳು. `ಆ ಮಕ್ಕಳು ಬದುಕಿರ್ತಾವೆ ಅಲ್ಲವೇನೇ… ನನ್ನ ಮಕ್ಕಳು ಸಪುನಕ್ಕೆ ಬಂದಿದ್ದೋ ಕಣೇ. ಅಪ್ಪಾ ಅಪ್ಪಾ ಈಗ ಬಂದೇನಪ್ಪಾ ಅಂತಾ ಅಷ್ಟೂ ಜನ ಬಂದು ಸುತ್ಯಂದಂಗೆ ಕನಸು ಕಾಣ್ತಿದ್ದೆ ಕಣೇ. ಅದೇನಾಯ್ತೋ ಏನೋ ಈಗ ನೋಡಿದ್ರೆ ಎಲ್ಲ ಇಂಗಾಗೋಯ್ತಲ್ಲೇ’ ಎಂದು ಆತ ತಣ್ಣಗಾಗುತ್ತಿದ್ದ ಜೀವವನ್ನೇ ಬಸಿದು ಅಷ್ಟು ಮಾತ್ರದ ಮಾತುಗಳ ಹೊರಡಿಸಿದ. ಅದೇ ನರಳಾಟ, ದಾಹದ ದನಿ ಒಂದೇಸಮನೆ ಹರಿಯುತ್ತಲೇ ಇತ್ತು. ಬೆಳಗಾಯಿತೊ ಏನೊ ಎಂಬುದೇ ತಿಳಿಯಲಿಲ್ಲ. ಎಲ್ಲವೂ ಮುಚ್ಚಿ ಹೋಗಿತ್ತು. ಗಂಡನ ಯಾತನೆಯ ಸ್ವರ ಎಲ್ಲವನ್ನೂ ಅರಿತಂತೆ ತೆಪ್ಪಗಾಗಿತ್ತು. ಹೆಂಡತಿ ಆಗಾಗ ಗಂಡನನ್ನು ಕೂಗಿ ಜೀವಂತ ಇದ್ದಾನೊ ಇಲ್ಲವೊ ಎಂಬುದನ್ನು ದೃಢಪಡಿಸಿಕೊಳ್ಳುತ್ತಿದ್ದಳು. ಅವನ ಹೆಂಡತಿ ಅಲ್ಲೇ ಗೋಡೆ ಬದಿಯ ಮರೆಯಲ್ಲೇ ಕತ್ತಲಲ್ಲೇ ಕಾದುಕೂತಿದ್ದಾಳೆಂದು ಸಾವು ಅವಳ ಗಂಡನನ್ನು ಕರೆದುಕೊಳ್ಳಲು ಹಿಂದು ಮುಂದು ನೋಡುತ್ತಿತ್ತು. ಅವಳಿಗೆ ಹಗಲು ರಾತ್ರಿಯ ಪರಿವೆಯೆ ಇರಲಿಲ್ಲ. ಇಲ್ಲೇ ಸಾಯುವುದೆಂದು ಕ್ಷಣಗಳ ಎಣಿಸುತ್ತಿದ್ದಳು. ಕಾಲ ಹರಿದುಹೋಗಿತ್ತು. ಇದ್ದಕ್ಕಿದ್ದಂತೆ ಏನೊ ಒಂದು ಬೆಳಕಿನ ಕಂಡಿ ಕಂಡಿತು. ಸೈನಿಕರು ಅರಮನೆಯ ಅಡಿಯಲ್ಲಿ ಸಿಲುಕಿದವರನ್ನು ಪಾರು ಮಾಡಲು ಮುಂದಾಗಿದ್ದರು. ಗಂಡನನ್ನು ಪಿಸುಗುಟ್ಟಿದಂತೆ ಆದರೆ ಅದೇ ತನ್ನ ದೊಡ್ಡದನಿ ಎಂಬಂತೆ ಹೆಂಡತಿ ಕೂಗಿದಳು. ಗವ್ವೆನ್ನುವ ನಿಶ್ಯಬ್ದ ಕತ್ತಲ ಹೊರತು ಮತ್ಯಾವ ಸದ್ದೂ ಹೊರಡಲಿಲ್ಲ. ಸೈನಿಕರು ಅವಳನ್ನು ರಕ್ಷಿಸಿದ್ದರು. ಗಂಡ ಜೀವ ಕಳೆದುಕೊಂಡಿದ್ದ. ಏಳೇಳು ರಾತ್ರಿಗಳೂ ಅತ್ತು ಕರೆದು ತ್ರಾಣ ತಂದುಕೊಂಡ ಅವಳು ಆ ಏಳೂ ಹೆಣ್ಣುಮಕ್ಕಳನ್ನು ನೆನೆದುಕೊಂಡಳು. ಸಾಯುವ ಕೊನೆಗಳಿಗೆಯಲ್ಲಿ ಗಂಡನ ಕನಸಿಗೆ ಬಂದಿದ್ದ ಆ ಮಕ್ಕಳು ಅವಳ ಹೊಕ್ಕುಳ ಬಳ್ಳಿಯನ್ನು ಜಗ್ಗಿದಂತಾಗಿ ನಾಳೆಯೇ ತಾನು ಆ ಕಾಡಿನ ಮರೆಯ ಮನೆಗೆ ಹೋಗಬೇಕೆಂದು ನಿರ್ಧರಿಸಿದಳು.

ದಾರಿ ಉದ್ದಕ್ಕೂ ಬಾಳಿನ ಎಲ್ಲ ಹಳೆಯ ತಪ್ಪು ಹೆಜ್ಜೆಗಳನ್ನು ಅಳಿಸಿಕೊಳ್ಳುವಂತೆ ಆಕೆ ಹಿಂತಿರುಗಿದಳು. ಅದೇ ಬೆಟ್ಟಗುಡ್ಡ ಕಾಡು ಚಲಿಸದೆಯೂ ಎಂದೆಂದೂ ಬೆಳೆಯುತ್ತಲೇ ಇದ್ದೇವೆ ಎಂಬಂತೆ ಋತುಚಕ್ರಗಳಲ್ಲಿ ಹಸಿರಾಗಿದ್ದವು. ಅಂತೂ ಆ ಕಾನು ಮರೆಯ ಮನೆಯ ಬಳಿ ಬರುವಷ್ಟರಲ್ಲಿ ದಿಗಂತವು ಕೆಂಪಾಗುತ್ತಿತ್ತು. ಅವರು ಹಾಗೆ ಒಂದು ರಾತ್ರಿ ಆ ಮಕ್ಕಳನ್ನು ಬಿಟ್ಟು ಹೋಗಿ ಎಷ್ಟೋ ಕಾಲವಾದರೂ ಎಲ್ಲವೂ ಅಲ್ಲಿ ಹಾಗೇ ಇತ್ತು. ಇನ್ನಷ್ಟು ಗಿಡ ಮರಗಳು ಬೆಳೆದು ಆ ಒಂಟಿ ಮನೆಯನ್ನು ಮರೆಮಾಡಿದ್ದವು. ಹೊಳೆ ದಂಡೆಯ ಆ ನಡುಗಡ್ಡೆಯ ಕಾನು ಮನೆ ಬಳ್ಳಿಗಳಿಂದ ಮುಚ್ಚಿಹೋಗಿತ್ತು. ಹುಚ್ಚು ಹೊಳೆ ಬಂದು ಮನೆಯೇ ಕೊಚ್ಚಿ ಹೋಗುವಂತೆ ಹರಿದಿದ್ದರೂ ಆ ಮನೆ ಮಕ್ಕಳ ಅಸ್ತಿತ್ವವನ್ನು ಆಕಾಶಕ್ಕೆ ಸಾರುವಂತೆ ಆ ತಾರೆ ನಿಹಾರಿಕೆಗಳಿಗೆ ತೋರುವಂತೆ ಭೂಮಿಗೆ ಬೇರುಬಿಟ್ಟಂತೆ ನಿಂತೇ ಇತ್ತು. ಇದೇನಿದು ಅಚ್ಚರಿ, ಇಲ್ಲಿ ಎಲ್ಲವೂ ಹಾಗೇ ಇದೆಯಲ್ಲಾ ಎಂದುಕೊಳ್ಳುತ್ತ ಆ ಮನೆಯ ಬಳಿಯೆ ಆಕೆ ಬಂದಳು. ತರಾವರಿ ಕಾಡು ಬಳ್ಳಿಗಳ ಗಂಧ ಅಲ್ಲೆಲ್ಲ ಪಸರಿಸಿತ್ತು. ಬಣ್ಣ ಬಣ್ಣದ ಹೂಗಳು ಮನೆಯ ಮಾಡನ್ನು ಸಿಂಗರಿಸಿದ್ದವು. ಜುಳು ಜುಳು ಹೊಳೆ ತಣ್ಣಗೆ ಹರಿಯುತ್ತಲೆ ಇತ್ತು. ಜೀವದ ಅಲೆಯಂತೆ ತಂಗಾಳಿ ಸುಳಿದಾಡುತ್ತಿತ್ತು.

ಅವಳಲ್ಲಿ ಏನೋ ಚೈತನ್ಯ ಹರಿದಂತಾಯಿತು. ಅಹಾ! ಇಂತಹ ಸ್ವರ್ಗಕ್ಕೆ ಅಂತೂ ಹಿಂತಿರುಗಿ ಜೀವಂತವಾಗಿ ಬಂದೆನಲ್ಲಾ ಎನಿಸಿ ಆ ಏಳೂ ಹೆಣ್ಣುಮಕ್ಕಳು ಚಿಕ್ಕವ್ವಾ ಎಂದು ಪ್ರೀತಿಯಲ್ಲಿ ಕರೆದಂತಾಯಿತು. ಶಿವಶಿವಾ ಇದೇನಿದು ಮಾಯೆ ಎಂದು ಆಕೆ ಆ ಮನೆಯ ಬಾಗಿಲ ಬಳಿಯೆ ನಿಂದಳು. ಅಲ್ಲಿ ಆಗತಾನೆ ಯಾರೊ ಸಂಜೆ ಮಲ್ಲಿಗೆಯ ಹೂ ಬಿಡಿಸಿ ಒಳಗೆ ಹೋದಂತಿತ್ತು. ಮುಚ್ಚಿದ್ದ ಮುಂಬಾಗಿಲ ಮೆಲ್ಲಗೆ ಸರಿಸಿದಳು. ದಿವ್ಯವಾದ ಗಂಧ ಅಲ್ಲೆಲ್ಲ ಹಬ್ಬಿತ್ತು. ಹಜಾರಕ್ಕೆ ಬಂದು ನೋಡಿದಳು. ಅವತ್ತು ಅವರಿಬ್ಬರೂ ಮನೆ ಬಿಟ್ಟು ಹೊರಡುವಾಗ ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಹೇಗೇಗೆ ಇದ್ದವೊ ಹಾಗೆಯೇ ಒಪ್ಪ ಓರಣವಾಗಿ ಹಾಗೇ ಜೋಡಿಸಿದ್ದವು. ಮಕ್ಕಳೇ ಎಂದು ಕೂಗಲು ಅವಳಿಗೆ ಅಳುಕಾಯಿತು. ಅಲ್ಲೆಲ್ಲ ಮಂದವಾದ ಹಣತೆಯ ಬೆಳಕು ವ್ಯಾಪಿಸಿತ್ತು. ಎಲ್ಲ ಕೊಠಡಿಗಳಲ್ಲೂ ಯಾರೂ ಇರಲಿಲ್ಲ. ಆದರೂ ಇಲ್ಲಿ ಜೀವದ ದಿವ್ಯತೆ ಎಷ್ಟೊಂದು ಗಾಢವಾಗಿದೆಯಲ್ಲಾ ಎನಿಸಿ ಆ ಮನೆಯ ನೆಲಮಾಳಿಗೆಯತ್ತ ಮೆಲ್ಲನೆ ಹೆಜ್ಜೆಯಿಟ್ಟು ಬಂದು ನೋಡಿದಳು.

ನಿಬ್ಬೆರಗಾಗಿ ಒಂದು ಕ್ಷಣ ಆಕೆ ಅಲ್ಲೇ ನಿಂತುಬಿಟ್ಟಳು. ಅಲ್ಲಿ ಆ ನೆಲಮಾಳಿಗೆಯ ತಳದಲ್ಲಿ ಆ ಏಳೂ ಹೆಣ್ಣುಮಕ್ಕಳೂ ಆ ಅಪ್ಪನೂ ಚಿಕ್ಕವ್ವನೂ ಇನ್ನೇನು ಬಂದು ಬಿಡುವರು ಎಂಬ ದಿವ್ಯ ಸುಖದ ನಿರೀಕ್ಷೆಯಲ್ಲಿ ಹಾಡುತ್ತ ಕಾಯುತ್ತ ವಿಶ್ವಾಸದ ಉಯ್ಯಾಲೆಯಲ್ಲಿ ಮಿಡಿಯುತ್ತಾ ಅನಂತ ಕಾಲವೂ ತಾವು ಹೀಗೇ ಆಟವಾಡಿಕೊಂಡೇ ಇದ್ದು ಬಿಡುತ್ತೇವೆ ಎಂಬಂತೆ ಕಾಲಾತೀತತೆಯಲ್ಲಿ ತೇಲುತ್ತಿದ್ದರು. ನಂಬಲಾಗದೆ ಆಕೆ ಮತ್ತೆ ಮತ್ತೆ ದೃಢಪಡಿಸಿಕೊಂಡಳು. ಆ ಏಳೂ ಮಕ್ಕಳ ಮುಖದಲ್ಲಿ ನಿರೀಕ್ಷೆಯ ತೇಜಸ್ಸು ಹೊಳೆಯುತ್ತಿತ್ತು. ಅದೇ ಅವರ ಜೀವವಾಗಿ ಇಡೀ ನೆಲ ಮಾಳಿಗೆಯ ತುಂಬ ಯಾವುದೊ ಚೈತನ್ಯ ಸುಳಿದಾಡುತ್ತಿತ್ತು.

`ಮಕ್ಕಳೇ ನಾನು ಬಂದಿವ್ನಿ.. ಬನ್ನಿ ಬಾ ಮಕ್ಕಳೇ’ ಎಂದು ಉತ್ಕಟವಾಗಿ ಆಕೆ ಇನ್ನೇನೊ ಕೂಗುವುದರಲ್ಲಿದ್ದಳು. ಯಾವುದೊ ಎಚ್ಚರಿಕೆ ಅವಳನ್ನು ತಡೆಯಿತು. ಅವರ ಆ ವಿಶ್ವಾಸವನ್ನು ನಿನ್ನ ಆ ಕರೆ ಕೊಂದುಬಿಡಬಹುದು. ಹುಸಿಗಿಂತ ಭೀಕರವಾದದ್ದು ಬೇರೊಂದಿಲ್ಲ. ಸುಮ್ಮನೆ ಆ ಮಕ್ಕಳ ವಿಶ್ವಾಸದ ತೊಟ್ಟಿಲನ್ನು ತೂಗುತ್ತ ಸುಮ್ಮನಿದ್ದುಬಿಡು ಎಂದು ಅವಳ ಪ್ರಜ್ಞೆಯಲ್ಲಿ ಯಾರೊ ಪಿಸುಗುಟ್ಟಿದಂತಾಯಿತು. ಗಂಡನ ಕೊನೆ ಆಸೆಯ ನೆನಪಾಗಿ; `ಈ ಏಳೂ ಹೆಣ್ಣುಮಕ್ಕಳೂ ನನ್ನ ಹೊಕ್ಕುಳೇ’ ಎಂದು ತಂಗಾಳಿಯಲ್ಲಿ ತೇಲುತ್ತಿದ್ದ ಮಕ್ಕಳ ವಿಶ್ವಾಸವನ್ನು ದೀರ್ಘವಾಗಿ ತನ್ನ ಉಸಿರಿಗೆ ಎಳೆದುಕೊಂಡಳು. ಅನಂತವಾದ ಜೀವದ ತೊಟ್ಟಿಲಂತೆ ನೆಲಮಾಳಿಗೆಯು ಕಾಲದ ತೂಗುಯ್ಯಾಲೆಯಂತೆ ಆಡುತ್ತಿತ್ತು. ಮಕ್ಕಳ ಇಂತಹ ವಿಶ್ವಾಸಕ್ಕೆ ಭಂಗವಾಗದಂತೆ ಇಲ್ಲೇ ಯಾವತ್ತೂ ಕಾಯುತ್ತಿರುವುದೇ ಲೇಸೆಂದು ಆಕೆ ಆ ಒಂಟಿ ಮನೆಯ ಸುತ್ತ ಕಾವಲು ಕಾಯುತ್ತ ಆಕಾಶದ ತಾರೆ ನಿಹಾರಿಕೆಗಳ ನಡುವಿನ ಆ ಏಳೂ ನಕ್ಷತ್ರಗಳನ್ನು ವಿಶೇಷವಾಗಿ ದಿಟ್ಟಿಸುತ್ತಿದ್ದಳು.

ಅಂಗಳದಲ್ಲಿ ಬಿದ್ದುಕೊಂಡು ಮಾದೇವನ ಕಥೆಗೆ ಮನಸು ಕೊಟ್ಟು ಅದರಲ್ಲೇ ಮುಳುಗಿ ಹೋಗಿದ್ದ ಹೈಕಳು ಮೂಕವಾಗಿ ಮಿಡಿಯುತ್ತ ಆಕಾಶವನ್ನು ನೋಡುತ್ತಿದ್ದರು. ತನಗೆ ತಾನೇ ಮತ್ತೊಮ್ಮೆ ಆ ಕಥೆಯನ್ನು ಮಾದೇವ ಹೇಳಿಕೊಳ್ಳುವಂತೆ ಭಾವದ ಸರೋವರದಲ್ಲಿಳಿದು ನಾಳಿನ ಪಾಡನ್ನು ನೆನ್ನೆ ನೆನ್ನೆಯ ಅಂತಂತದೇ ನೆನಪುಗಳಿಂದ ಧ್ಯಾನಿಸುತಿದ್ದ. ಅಷ್ಟೂ ಹೊತ್ತು ಮೊಮ್ಮಗ ಮಾದೇವನ ಕಥೆಗೆ ಮರುಗಿದ್ದ ಅಜ್ಜಿಯು ಆ ತಬ್ಬಲಿ ಹೈಕಳನ್ನೆಲ್ಲ ತನ್ನ ಮಡಿಲಿಗೆ ತುಂಬಿಕೊಳ್ಳುವಂತೆ ಹತ್ತಿರಕ್ಕೆ ಬಂದು ತನ್ನ ಹಳೆ ಸೀರೆಯ ಅವರಿಗೆ ಹೊದಿಸಿ ಕಾಯುವಂತೆ ಎದ್ದು ಕೂತಳು. ಹೈಕಳು ಗಾಢವಾದ ನಿದ್ದೆಗೆ ಜಾರಿ ಆಕಾಶದ ಆ ಅನತಿ ದೂರಕ್ಕೆ ಹಾರಿ ಹೋಗಿ ನಕ್ಷತ್ರಗಳ ಬನದಲ್ಲಿ ಆಟವಾಡಿದಂತೆ ಕನಸು ಕಾಣುತ್ತಿದ್ದರು. ಆ ದೂರದ ಕಗ್ಗಾಡು ಹೊಳೆ ದಂಡೆಯ ಒಂಟಿ ಮನೆ ಇದೇ ಎಂಬಂತೆ ಅಜ್ಜಿಯು ಭಾವಿಸುತ್ತ ಲೋಕಾಂತರಗಳನ್ನೆಲ್ಲ ಎಲೆ ಅಡಿಕೆಯ ಜತೆ ಜಗಿಯುತ್ತ ಮೊಮ್ಮಕ್ಕಳ ನಾಳೆಯನ್ನು ನಿರೀಕ್ಷಿಸುತ್ತಿದ್ದಳು. ಕಾಲದ ಅಲೆ ಅವರನ್ನೆಲ್ಲ ಎಲ್ಲಿಗೊ ಹೊತ್ತುಕೊಂಡು ಸಾಗುತ್ತಿತ್ತು.

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)