ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ editor@kendasampige.com360degree.com ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಕನ್ನಡದ ಹೆಸರಾಂತ ಕವಿ  ಎಚ್.ಎಸ್.ವೆಂಕಟೇಶಮೂರ್ತಿ ಬರೆದ ಕವಿತೆ  ‘ಮಹಾನಿರ್ಣಯ’.

 

 

 

 

 

 

 

ಮಹಾನಿರ್ಣಯ


ಅನಿವಾರ್ಯವಾಗಿತ್ತು ಯುದ್ಧ. ಒಪ್ಪಿಕೊಂಡರದನ್ನ ಎರಡೂ
ಪಕ್ಷದ ಹಿರಿಯರು; ಮುತ್ಸದ್ದಿಗಳು; ವೀರಾಧಿವೀರರು.
ಆದರೆ ಹೇಗಿರಬೇಕು ಆ ಯುದ್ಧ ನಡೆಯಬೇಕಾದ ರೀತಿ?
ಅದನ್ನ ನಿರ್ಣಯಿಸಲು ವ್ಯಾಸಾಧ್ಯಕ್ಷತೆಯಲ್ಲೊಂದು ಸಮಿತಿ

ನೇಮಕವಾಯ್ತು: ಪಾಂಡವರ ಕಡೆಯಿಂದ ದ್ರುಪದ, ಕೃಷ್ಣ;
ಕೌರವ ಪಕ್ಷದಿಂದ ದ್ರೋಣ, ಭೀಷ್ಮ, ದುರ್ಯೋಧನ.
ಇರುಳಿಡೀ ನಡೆಯಿತು ಚರ್ಚೆ. ಪ್ರಭುತ್ವದ ನಿರ್ಣಯ ಆಗಬೇಕು.
ನಿಜ. ಆಗಲೇಬೇಕು. ಆದರದು ನಿಜಕ್ಕೂ ಆಗಬೇಕಾದದ್ದು

ಭುವನದಾಹವದಕ್ಷ ಅಸ್ತ್ರಬಲದಿಂದಲೋ? ತತ್ವಾಧಾರಿತ
ವಾಗ್ಮಥನದಿಂದಲೋ? ಯಾರಾಗಬೇಕು ಅರಸರು ಎಂಬುದ
ನಿರ್ಣಯಿಸಬೇಕಾದದ್ದು ಆಳುವ ಅರಸರೋ? ರೈತ ಕಾರ್ಮಿಕ
ಕಾಯಕರ್ಮದವರೋ? ಮನೆವಾರ್ತೆ ಮಹಿಳೆಯರಿಗಿಲ್ಲ

ವೋ ಆಯ್ಕೆಯಲಿ ಪಾತ್ರ? ಮುಡಿ ಉಡಿ ಹಿಡಿದೆಳೆಸಿಕೊಂಡವರಿಗೆ?
ತೊಟ್ಟುಟ್ಟ ಸಮಸ್ತವನ್ನೂ ಸುಲಿಸಿಕೊಂಡ ಗತಿಗೆಟ್ಟಮಂದಿಗೆ?
ಸೂತ ಸೂತ ಎಂದು ಹಂಗಿಸಿಕೊಂಡ ಭಂಗಿತರಿಗೆ? ಶಾಲೆಯಿಂದ
ಹೊರಗೆ ದಬ್ಬಿಸಿಕೊಂಡ ಕಾಡಾಡಿ ಮಕ್ಕಳಿಗೆ? ಆಳ್ವಮಂದಿಯ

ನೇಗಿಲ ಕುಳಕ್ಕೆ ಸಿಕ್ಕು ದರದರ ಎಳೆಸಿಕೊಂಡು ದಿಕ್ಕೆಟ್ಟ ತೊರೆಗೆ?
ಸನಿಕೆ ಗುದ್ದಲಿಯಿಂದ ಮುಸುಡಿ ಕೆತ್ತಿಸಿಕೊಂಡ ಪರ್ವತಪ್ರದೇಶಕ್ಕೆ?
ಪ್ರಚಂಡಖಾಂಡವಾಗ್ನಿಯಲ್ಲಿ ಅರೆಬರೆ ಬೆಂದ ಹುಲಿ ಚಿರತೆ
ಕಾಡುಕೋಡಗ ಹಾವು ಹದ್ದು ಬಳ್ಳಿ ಪೊದೆ ವೃಕ್ಷಸಂತಾನಕ್ಕೆ?

ಇಲ್ಲವೋ ಆಯ್ಕೆಯ ಹಕ್ಕು?


ಸೃಷ್ಟಿಯ ಸಮಸ್ತರೂ ಸೇರಿ ತೀರ್ಮಾನಿಸಲಿ ತಮ್ಮ ಪ್ರಭುವನ್ನ
ಎನ್ನಲು ಹಿರಿಯಜ್ಜ ಭೀಷ್ಮ, ಸಾಧು ಎಂದನು ದ್ರೋಣ.
ಸಮ್ಮತವಾಯಿತದು ದ್ರುಪದನಿಗು. ನೀನೇನೆನ್ನುತ್ತಿ ದುರ್ಯೋಧನ?
ಎಂದ ಓರೆಗಣ್ಣಲ್ಲಿ ನೋಡುತ್ತ ಮುತ್ಸದ್ದಿ ಶ್ರೀಕೃಷ್ಣ.

ವಿಶ್ವದ ಚರಾಚರವೆಲ್ಲ ತನ್ನ ಪರ ಎಂದು ನಂಬಿದ್ದ ದುರ್ಯೋಧನ
ಹಾಗೆ ಆಗಲಿ ಏಳಿ! ಪ್ರಜೆಗಳೇ ಆರಿಸಲಿ ತಮ್ಮ ಪ್ರಭುವ
ಎಂದ-ಹಲ್ಲಿನ ನಡುವೆ ಪಾಪದ ನಗೆಯ ಜಗಿಯುತ್ತ.
ದ್ರೋಣ ತಲೆಯಾಡಿಸಿದ ಅಭ್ಯಾಸಬಲದಿಂದ. ಸರಿಮತ್ತೆ

ಪಾಲನೆಗೊಳ್ಳುವ ಜನ, ಜಾನವಾರು, ನದಿ, ನದ, ನಾಲೆ,ಜಂಗಲು
ಕಲ್ಗುಡ್ಡಗಳೆ ಪಾಲ್ಗೊಳ್ಳಲೀ ನಿರ್ಣಾಯಕ ಆಯ್ಕೆಯಲ್ಲಿ ಎನ್ನಲು
ಭೀಷ್ಮ, ಅಸ್ತು ಎಂದನು ದ್ರುಪದ. ಮುಂದಿನ ತಿಂಗಳು ಒಳ್ಳೆ
ದಿನದಲ್ಲಿ ಸೃಷ್ಟಿಸಮಸ್ತವೂ ಮೇಳವಿಸಲಿ ಕುರುಕ್ಷೇತ್ರದಲ್ಲಿ. ಅಲ್ಲೇ

ತೀರ್ಮಾನವಾಗಲಿ ಭಾರತವರ್ಷವನ್ನಾಳುವ ಪ್ರಭುಗಳು
ಪಾಂಡವರೋ ಕೌರವರೋ ಎಂಬುದು ಎಂದು ಕೃಷ್ಣ ಹೇಳಲು
ಸಮಿತಿಯ ಸಭೆ ಮುಗಿದು, ದೂರ ಮೂಡಲ ಗುಡ್ಡ ನೆತ್ತಿಯ ಮೇಲಿಟ್ಟಿದ್ದ
ಯದುಗಿರಿಯ ಮಡಿನೀರ ತಾಮ್ರ ಬಿಂದಿಗೆ ಕಂಡು, ಬೆಳಗಾಯಿತೆ ಎಂದು ಕೃಷ್ಣ

ನೋಡುತ್ತ ನಿಂತ ನಿಷ್ಪಾಪಿ ಹೊರಜಗತ್ತ.

 

 

 

 


ಜನವನ್ನೊಲಿಸುವ ಕಾರ್ಯದಲ್ಲಿ ತೊಡಗಿದರು ಅತ್ತ ಪಾಂಡವರು; ಇತ್ತ
ಕೌರವರು. ನಿಶ್ಚಿತ ಮುಹೂರ್ತದಲಿ ಕುರುಕ್ಷೇತ್ರದಲ್ಲಿ ಜನ
ಜಾತ್ರೆ. ಜನರ ಜೊತೆಗೆ ಸೇರಿವೆ ಮಾತೇಬಾರದ ಪ್ರಾಣಿ ಪಕ್ಷಿ ಸಂಕುಲ
ಕೂಡ. ಭೀಷ್ಮ ಜನರ ಮಧ್ಯೆ ಇದ್ದ ಮಹಾವೇದಿಕೆಯೇರಿ ಹೇಳಿದ:

ಕೌರವರಿಗೆ ಪ್ರಭುತ್ವ ಎನ್ನೋರೆಲ್ಲಾ ವೈಶಂಪಾಯನದ ಪೂರ್ವಕ್ಕೆ
ಹೋಗಿ. ಕೌರವರು ಬೇಡ ಪಾಂಡವರಿರಲಿ ಎನ್ನೋರು ಸರಸ್ಸಿನ ಪಶ್ಚಿಮಕ್ಕೆ.
ಶುರುವಾಯಿತು ನೋಡಿ ಒಮ್ಮೆಗೇ ತೀವ್ರತರ ಚಟುವಟಿಕೆ. ದುಡು
ದುಡು ಎಂದು ಅತ್ತ ಕೆಲವರು. ಮತ್ತೆ ಇತ್ತ ಕೆಲವರು.

ಜಾತಿವಾಸನೆ ಹಿಡಿದು, ನಂಟಿನ ಗಂಟು ಹಿಡಿದು, ನಮ್ಮ ಕಡೆಯವರೆಂದು
ನಮ್ಮ ನುಡಿಯವರೆಂದು. ಓಡುವ ಕುದುರೆಯೆಂದು
ನಮ್ಮ ಭಾವನ ಮಗನ ,ಮಗಳ, ಮೈದುನ ಎಂದು! ನೊಂದವರೆಂದು
ಧರ್ಮಾತ್ಮರೆಂದು, ಮುಂದೆಂದೋ ಆಗಬಹುದಾದ ಲಾಭಕ್ಕೆಂದು.

ಜೋಳದಪಾಳಿ ಎಂದು. ಸ್ನೇಹ ಧರ್ಮ ಎಂದು. ವಟಗುಟ್ಟುತ್ತಾ
ಕೊಳದ ಪೂರ್ವಕ್ಕೆ ಕೆಲವರು. ಕೊಳದ ಪಶ್ಚಿಮಕ್ಕೆ ಕೆಲವರು.
ಹಠಕ್ಕೆ.ಶಠತ್ವಕ್ಕೆ. ತರ್ಕಾತೀತ ನಿಷ್ಕಾರಣಕ್ಕೆ
ಬರಿಯ ರೋಮಾಂಚಕ್ಕೆ. ಲಂಚಕ್ಕೆ. ಜನ್ಮಜನ್ಮಾಂತರದ ದ್ವೇಷಕ್ಕೆ

ಯಾರೊ ಕೊಂದರು ಎಂದು. ಯಾರೊ ತಿಂದರು ಎಂದು.
ತಾವೆ ಹೋದರು ಮನೆಗೆ ಬನ್ನಿ ಎನಲಿಲ್ಲೆಂದು. ಪಶ್ಚಿಮಕೆ ಕೆಲವರು
ಪೂರ್ವಕ್ಕೆ ಕೆಲವರು. ರಾಜಕೀಯದ ಹಾಳುಗೋಳೆ ಬೇಕಿಲ್ಲೆಂದು
ಮತ್ತೆ ಕೆಲವರು ಬದರಿ ಯಾತ್ರೆಗೆ  ದೂರದುತ್ತರಕ್ಕೆ!

ಪೂರ್ವಗಿರಿಮುಡಿಯಲ್ಲಿ ಸೂರ್ಯ. ಪಶ್ಚಿಮಘಟ್ಟದಿಕ್ಕಟ್ಟಲ್ಲಿ
ಕವಿದ ಕಾರ್ಮುಗಿಲ ದಟ್ಟಣೆ! ಬಾಲವಿಳಿಬಿಟ್ಟ ಮಾರುತಿ
ತೇರ ತುದಿಯಲ್ಲಿ. ಹಿಸ್ಸೆನುವ ಸರ್ಪ ಕೌರವನ ಹುತ್ತದ ಮೇಲೆ.
ಖಾಂಡವದ ಅರೆಸುಟ್ಟ ಹಾವು ಕರ್ಣ ಬತ್ತಳಿಕೆಗೆ.

ಹೀಗೆ ವಿಶ್ವವೇ ಇಬ್ಭಾಗವಾಗಿ ಸೀಳಿಕೊಂಡಿತ್ತವತ್ತು.
ಮತದೆಣಿಕೆ ಪ್ರಾರಂಭವಾಯ್ತು. ಅಕ್ಷಹೃದಯ ಬಲ್ಲವರು
ಮುಂದೆ ಬಂದು ತುಟಿಯಲ್ಲೇ ಪಿಟಿಪಿಟಿಸತೊಡಗಿದರು. ಎಣಿಕೆ ಮುಗಿಸಿ
ದಾಗ ಸಮಾಸಮವಾಗಿ ಎರಡೂ ಬಲ, ಗೊಂದಲಗೊಂಡಿದ್ದಾಗ ಆಯ್ಕೆಸಮಿತಿ

ಕುಂತಿ ಕೂತಿದ್ದಾಳೆ ದೂರ…ಇನ್ನೇನು ಮುಳುಗಲಿಕ್ಕಿದೆ ಎನುವಂಥ ತೆಪ್ಪದಲ್ಲಿ
ಸರಸ್ಸಿನ ನಡೂಮಧ್ಯೆ ತೆಪ್ಪಗೆ. ತಾಯೀ ನಿನ್ನ ಮತವೇ ನಿರ್ಣಾಯಕ
ಎಂದನು ಕೃಷ್ಣ. ಮಾತಾಡಲಿಲ್ಲ ಪೃಥೆ. ನೋಡಲೂ ಇಲ್ಲ ತಲೆಯೆತ್ತಿ. ಕಂಗಾಲಾಗಿದ್ದ ತನ್ನ
ಕಂಕಾಲ ಕೂಸೆತ್ತಿಕೊಂಡು ಮೆಲ್ಲಗೆ, ಅದರ ತುಟಿಗಿಟ್ಟಳು ತನ್ನ ಬತ್ತಿದ ಮೊಲೆಯ ಸುಕ್ಕಿಟ್ಟ ತೊಟ್ಟ.

 

(ರೇಖಾಚಿತ್ರ: ರೂಪಶ್ರೀ)