ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ಕವಿತೆ ಬರೆದವರು ಮೀರಾ ಪಿ.ಆರ್.

ಪ್ರಶ್ನೆ

ಆದಿ, ಅಂತ್ಯವೇ ಇಲ್ಲದ
ನಿನ್ನನ್ನ,
ಹೀಗೆ ನನಗಿರುವ ಇಷ್ಟೇ
ಅವಧಿಯಲ್ಲಿ
ಎಲ್ಲಿ ಅಂತ ಹುಡುಕಲಿ?

ಆಕಾರವೇ ಇಲ್ಲ ನಿನಗೆ
ಎಂದಾದರೆ,
ನಿನ್ನ ಮುಟ್ಟುವ ಬಯಕೆಯ
ಹೇಗೆ ಹತ್ತಿಕ್ಕಲಿ?

ಎಲ್ಲೆಡೆಯೂ ನೀನಿರುವುದೇ
ಆದರೆ,
ನನ್ನೊಳಗಿನ ನೋವಿಗೆ
ಕಾರಣ
ಹ್ಯಾಗೆ ಹುಡುಕಲಿ?

ಎಲ್ಲವೂ ನಿನ್ನಿಚ್ಛೆಯಂತೇ
ನಡೆವುದಾದರೆ,
ಸುಮ್ಮನೆ ಹೀಗೊಂದು ಹೆಸರು
ತಗುಲಿಸಿಕೊಂಡು
ನಾನ್ಯಾಕೆ ಇಲ್ಲಿರಲಿ?

ನೀನಿರುವುದೇ
ಸುಳ್ಳಾದರೆ
ಈ ಪ್ರಶ್ನೆಗಳನೆಲ್ಲ
ಯಾರಲ್ಲಿ ಕೇಳಲಿ?

 

ನಿನ್ನ ನೆನೆಯುತ್ತಾ ಎರಡು ಕವಿತೆಗಳು

ಬರುವ ಹಾಗಿದ್ದರೆ ಬಂದು
ಬಿಡು ಈಗಲೇ
ತೆರೆದ ನನ್ನ ತೋಳು
ಸೋಲುವ
ಮುನ್ನವೇ ಅಂತ ಹೇಳುವ
ಆಸೆ.
ಆದರೂ ನಾಳೆಗೂ
ಈ ಪಾಡು ಹೀಗೇ
ಉಳಿಯುವುದು ಗೊತ್ತಿದೆ
ನನಗೆ.
ಸರಿ, ನಿನಗಿಷ್ಟ
ಬಂದಾಗ
ಬಾ
ಎನ್ನಲಾರೆ, ಏನೋ
ಸಂಕಟ.
ಬೂದು ಬಣ್ಣದ
ಆಕಾಶದ
ಕೆಳಗೂ
ಕಡಲು ಯಾಕೋ
ನೀಲಿಯಾಗೇ
ಉಳಿದಿದೆ.
ನಿನ್ನ ಉಸಿರಿನ ಗಂಧ
ಎಷ್ಟು ದಿನವಾದರೂ ಇಲ್ಲೇ
ಸುಳಿಯುತ್ತಾ
ಹಗಲು, ರಾತ್ರಿ
ಎಲ್ಲಕ್ಕೂ
ಇಲ್ಲೀಗ
ಬರೀ ಬೇಸರ.

***

ಯಾಕೋ
ನಡುಗುತ್ತಿತ್ತು ಧ್ವನಿ
ನಿನ್ನ ಕುರಿತು
ಹಾಡುವಾಗ.
ಮಾತಾಡಬೇಕೆಂದರೆ
ಸಾಧ್ಯವೇ
ಇಲ್ಲ,
ಪದಗಳಿಗೆ ಅರ್ಧ
ನಾಚಿಕೆ,
ಅರ್ಧ ಭಯ
ತುಟಿ ತನಕ
ಬರಲಿಕ್ಕೆ.
ಈ ಇರುಳಲ್ಲಿ
ಹೀಗೆ ನಿನ್ನ
ಮುತ್ತಿನ
ನೆನಪಾಗುತ್ತಿರಲು,
ನನ್ನ ಹಾಸಿಗೆಯಲ್ಲಿ
ಯಾರ ತೋಳಲ್ಲಿ
ಯಾರು
ಹೊರಳಿದ್ದು?

 

ಗೆಳತಿ

ಹಂಚಿಕೊಂಡ ಕಾಗೆ ಎಂಜಲಿನ ಸೀಬೇಕಾಯಿ,
ಬೀದಿಯ ಕೊನೆಮನೆಯ ಮರ ಹತ್ತಿ
ಕದ್ದು ತಂದು
ಉಪ್ಪು ಅದ್ದಿ ತಿಂದ ನೆಲ್ಲಿಕಾಯಿ,
ಜೀರಿಗೆ, ಬೆಲ್ಲ, ಮೆಣಸು ಹಾಕಿ
ಕಡ್ಡಿಗೆ ಸಿಕ್ಕಿಸಿ ತಿಂದು, ನಾಲಿಗೆ ಸೀಳಿದ್ದ
ಕುಟ್ಟುಹುಣಸೇಹಣ್ಣಿನ ನೆನಪಿಗೆ
ಯಾವತ್ತೂ ಜೊತೆಯಾದವಳು.

ಕನ್ನಡ ಮೀಡಿಯಮ್ಮಿನಿಂದ ಬಂದು,
ಇಂಗ್ಲೀಷಿನಲ್ಲಿ ನನ್ನ ಹಾಗೇ
ಮಾತಾಡಲು ಬಾರದ್ದಕ್ಕೆ,
ಬೆಂಚಿನಲ್ಲಿ ನನ್ನ ಪಕ್ಕವೇ
ಕುಳಿತು, ಆಟಕ್ಕೆ ಬಿಟ್ಟಾಗಲೂ
ನನ್ನನ್ನೇ ಅಂಟಿಕೊಂಡು ಉಳಿದವಳು.

‘ಇಂಗ್ಲೀಷಿನಲ್ಲೇ ಮಾತಾಡಬೇಕು,
ಏನು ಬರೆಯುವುದಿದ್ದರೂ
ಇಂಗ್ಲೀಷಿನಲ್ಲೇ ಬರೆಯಬೇಕು…’
ಹೆಡ್ಮಿಸ್ಸಿನ ಇಂಗ್ಲೀಷ್ ಮಾತಿನ
ನಡುವೆಯೇ
‘ಆಯ್ತು ಇನ್ಮುಂದೆ
ಈಯಮ್ಮನ ಕ್ಲಾಸಿನಲ್ಲಿ
ನಾನು ಹೂಸು ಬಿಡುವುದೂ
ಇಂಗ್ಲೀಷಿನಲ್ಲೇ’ ಅಂತ
ಪಕ್ಕದಲ್ಲಿ ಕೂತ
ನನಗಷ್ಟೇ ಕೇಳುವಂತೆ ಹೇಳಿ,
ನಾನು ಕಿಸಕ್ಕನೆ ನಕ್ಕು,
‘ಗೆಟ್ ಔಟ್ ಆಫ್ ದ ಕ್ಲಾಸ್’
ಆಗಲು ಎದ್ದು ಹೊರಟಾಗ,
ಕಣ್ಣು ತುಂಬಿಕೊಂಡು
‘ಸಾರಿ ಕಣೇ’ ಅಂತ ಪಿಸುಗುಟ್ಟಿದವಳು.

‘ಕ್ಯೂ.ಎಸ್.ಕ್ಯೂ.ಟಿ. ಅಮೀರ್ ಖಾನ್‌ಗೆ
ಮದುವೆ ಆಗ್ಬಿಟ್ಟಿದೆಯಂತೆ ಕಣೆ’
ಇವಳು ಮೋರೆ ಸಣ್ಣಗಾಗಿಸಿ ಹೇಳಿದ್ದಕ್ಕೆ,
‘ಆಗದಿದ್ದಿದ್ರೆ ಏನಂತೆ?
ನೀನೇನು ಕಟ್ಟಿಕೊಳ್ಳಬೇಕಿತ್ತ
ಅವನನ್ನ?’ ಅಂತ ನಾನಂದಿದ್ದಕ್ಕೆ
ಸಿಟ್ಟಾಗಿ
ಮೂರು ದಿನ ಮಾತು ಬಿಟ್ಟವಳು.

‘ಸೇದಿ ನೋಡೇ ಬಿಡಬೇಕು
ಇದು ಹೇಗಿರತ್ತೆ ಅಂತ’ ಎಂದು
ತನ್ನಪ್ಪನ ಜೇಬಿಂದ ಕದ್ದ ಎರಡು ಸಿಗರೇಟಿನಲ್ಲಿ
ಒಂದು ನನಗೆ ಕೊಟ್ಟು
ಪ್ರತಿ ದಮ್ಮಿಗೂ ಕೆಮ್ಮಿ,
ಕೆಮ್ಮದೇ ಸೇದಿ ಮುಗಿಸಿದ ನಾನು
ಹಿಂದೆ ಒಮ್ಮೆಯಾದರು ಅದನ್ನ
ಸೇದಿರಲೇಬೇಕೆಂದು
ವಾದಿಸಿ,
ನನ್ನ ಯಾವ ಆಣೆ ಭಾಷೆಯನ್ನೂ ನಂಬದೆ
ರೇಜಿಗೆ ಹುಟ್ಟಿಸಿ
ಸಿಟ್ಟು ಬರಿಸಿದ್ದವಳು.

ನನ್ನ ಮೊದಲ ಪ್ರೀತಿ, ಮೊದಲ ಮುತ್ತು,
ಕತ್ತಿನ ಸುತ್ತ ಮೂಡಿದ್ದ ಮೊದಲ ಕೆಂಪು ಗುರುತು
ಎಲ್ಲಕ್ಕೂ ಸಾಕ್ಷಿಯಾಗಿ
ತನ್ನ ಗುಟ್ಟೂ ಹಂಚಿಕೊಂಡವಳು.

ಮೊದಲ ಸಲ ಇವಳ
ಹೃದಯ ಚೂರಾಗಿ
ಕಣ್ಣೀರು ಕೋಡಿಯಾದಾಗ
ತಬ್ಬಿ ಸಂತೈಸಿದ ಹೊತ್ತು
‘ನಂಗೆ ನೀನು ಅಮ್ಮನ ಹಾಗೆ ಕಣೇ..ಅವನೂ
ಇಷ್ಟು ದಿನ ಹಾಗೇ ಇದ್ದ’
ಎಂದು ಹೆಗಲಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ
ಅತ್ತವಳು.

ಕಾಂಜೀವರಂನ ಸರಬರದಲ್ಲಿ,
ನನಗಾಗದ ಕಡುಕಂಪಿನ
ಮಲ್ಲಿಗೆ ರೇಜಿಗೆಯಲ್ಲಿ
‘ಥೂ ಸಾಕು ತೆಗೆಯೇ, ಒಳ್ಳೆ ನಾಟಕ ಮಾಡಲು
ರೆಡಿಯಾದ ಹಾಗನ್ನಿಸುತ್ತಿದೆ’ ಎಂದಿದ್ದಕ್ಕೆ
ನನ್ನ ಬೆನ್ನಿಗೊಂದು ಗುದ್ದಿ,
‘ನನಗೇನಂತೆ, ಅಲಂಕಾರ ಮಾಡಿಕೊಳ್ಳದೆ ಹೋದ್ರೆ
ನಾಳೆ ಫೋಟೋದಲ್ಲಿ ನಿನ್ನ ಪಕ್ಕ ಕುಳಿತ
ಪೇಟ ಕಟ್ಟಿದ ಮಂಗವೇ ಚೆನ್ನಾಗಿ ಕಾಣತ್ತೆ, ನಿನಗಿಂತ’
ಎಂದು, ಅಮ್ಮನ ಕೆಂಗಣ್ಣಿಗೆ ಗುರಿಯಾಗಿ,
ನಕ್ಕು
ನನ್ನ ಗಲ್ಲದ ಮೇಲೆ ಕಪ್ಪು
ಬೊಟ್ಟಿಟ್ಟವಳು.

ಎಲ್ಲೆಲ್ಲೋ ಹಾರಿ, ಹರಿದು, ಕೊನೆಗೆ
ನಾಲ್ಕು ಕಾಲಮಾನದಷ್ಟು ದೊಡ್ಡದಾದ
ಈ ದೇಶದ ಎರಡು ತೀರಕ್ಕೆ ನಾವಿಬ್ಬರೂ
ಬಂದು, ವಾರಕ್ಕೆ ನಾಲ್ಕು ಬಾರಿ
ಟೆಲಿಫೋನಿನ ಮೇಲೆ
ಹೊತ್ತಿನ ಪರಿವೆಯೇ ಇಲ್ಲದೆ ಹರಟುತ್ತಾ
ಹತ್ತು ವರ್ಷಕ್ಕೂ ಮಿಕ್ಕಿ
ಬರೀ ದ್ವನಿಯಾಗೇ ಕಂಡವಳು.

‘ಈ ಡೈಪರ್ ಗಿಯ್‍ಪರ್ ಇಲ್ಲದೆ
ನಮ್ಮನ್ನೆಲ್ಲ ಅದು ಹ್ಯಾಗೆ ಸಂಭಾಳಿಸಿದರೋ
ನಮ್ಮೊಮ್ಮಂದಿರು ಅಲ್ವೇನೇ?’
ಅನ್ನುತ್ತಲೇ ಒಂದು, ಎರಡು ಮಕ್ಕಳಾಗಿ
ಅವರ ಹುಟ್ಟುಹಬ್ಬದ ಫೋಟೋಗಳನೆಲ್ಲ
ಮರೆಯದೆ ಕಳಿಸಿದವಳು.

ಮೊನ್ನೆ ಇದ್ದಕ್ಕಿದ್ದಂತೆ ಫೋನಿನಲ್ಲಿ
‘ಗೆಸ್ ವ್ಹಾಟ್! ನೀನಿರುವ ಊರಲ್ಲೇ
ನನ್ನ ಕಂಪನೀದು ಅದ್ಯಾವುದೋ ಸುಡುಗಾಡು ಕಾನ್ಫರೆನ್ಸು ಕಣೇ..
ಮೂರು ದಿನ ಮನೇಲಿಟ್ಟುಕೊಂಡು ಊಟ ಹಾಕ್ತೀಯ ತಾನೆ?’
ಎಂದು ತಟ್ಟನೆ ಸಂಭ್ರಮ ಕೊಟ್ಟವಳು.

ಈಗ ಏರ್‌ಪೋರ್ಟಿನಲ್ಲಿ ಕುಳಿತು
ಇವಳಿಗೆ ಕಾಯುತ್ತಾ, ಏನು ಮಾಡಿದರೂ
ನೆನಪಿಗೆ ಬರಲೊಲ್ಲದ
ಹತ್ತು ವರ್ಷದ ಹಿಂದೆ ಕಂಡ
ಅವಳ ಮುಖವನ್ನು ನೆನಪಿಸಿಕೊಳ್ಳುತ್ತಿರುವಾಗ,
ನೆನಪಾಗಿದ್ದು ಅವಳ ಬಳ್ಳಿ ನಡು,
ಉದ್ದ ಜಡೆ, ಮಿಂಚು ಕಣ್ಣು.

ಇಲ್ಲಿ ನನಗೆದುರಾಗಿ ಬರುತ್ತಿರೋ
ದಧೂತಿ ದೇಹದ, ಕನ್ನಡಕದ ಕಣ್ಣಿನ,
ಸ್ವಚ್ಚಂದ ಹಾರಲು ಬಿಟ್ಟ,
ಮೆಹಂದಿ ಬಣ್ಣದ ಗಿಡ್ಡ ಕೂದಲಿನ,
ಯಾವತ್ತಿಗಿಂತಲೂ ನಿರಾಳವಾಗಿ ಕಂಡ
ಜೀನ್ಸ್‌ಧಾರಿ ಹೆಂಗಸಲ್ಲಿ ಇವಳನ್ನು ಹುಡುಕುತ್ತಾ
ಮಾತೇ ಹೊರಡದೆ ನಿಂತ ನನ್ನ ಬಳಿ ಬಂದು,
ಗಟ್ಟಿಯಾಗಿ ತಬ್ಬಿ,
‘ಏನೇ ಇಷ್ಟು ದಪ್ಪಗಾಗಿಬಿಟ್ಟಿದ್ದೀಯ?’
ಎಂದವಳಿಗೆ ಏನಾದರೂ ಬದಲು ಕೊಡಬೇಕೆಂದು
ಕಣ್ಣೊರೆಸಿಕೊಳ್ಳುತ್ತಾ ನಾನು ಬಾಯಿ ಬಿಡುವ ಮೊದಲೇ,
ಒಂದು ಕೈ ತಲೆ ಮೇಲೆ ಹೊತ್ತು,
ಇನ್ನೊಂದು ಕೈಯಿಂದ ನನ್ನ ಬಳಸಿ ಹಿಡಿದು,
‘ಕ್ಯಾನ್ ಯು ಬಿಲೀವ್ ಮಿ?
ಟೂತ್‌ಬ್ರಶ್ಶೇ ಮರ್ತು ಬಂದಿದೀನಿ ಕಣೇ’
ಎಂದು
ಹಲ್ಲು ಕಿರಿದಳು.

 

ಕವಿತೆ

ಹೀಗೇ ಹಾದಿಯಲ್ಲಿ
ಸಿಕ್ಕ
ಶಬ್ದವೊಂದು ಹಲ್ಲು
ಕಿರಿದು, ಗಿಂಜುತ್ತಾ
‘ನನ್ನನ್ನು ಕವಿತೆ
ಮಾಡು’ ಎಂದಿತು.
ಈ ಬೆಪ್ಪು ತಕ್ಕಡಿಯಂತಾ
ಶಬ್ದ
ವಿದ್ದರೆ, ನನ್ನ ಕವಿತೆಯನ್ನ
ಯಾರು
ಮೂಸುತ್ತಾರೆ ಅನ್ನಿಸಿ
‘ಸುಮ್ಮನಿರು’ ಅಂದು,
ಹಾಗೇ ಹೊರಟವಳಿಗೆ
ಯಾಕೊ
ಪಾಪ ಅನಿಸಿ,
‘ಸರಿ ಬಾ ನನ್ನ ಜೊತೆಗೆ’
ಅಂತ ಕರೆದರೆ
ಬರಲಿಲ್ಲ.
ಈ ಅಗ್ಗದ
ಶಬ್ದಕ್ಕೆ
ಬರೀ ಬಿಗುಮಾನ.
ಕವಿತೆಯಲ್ಲೀಗ ಏನಾದರೂ
ಕಳೆದಿದ್ದರೆ
ದೇವರಾಣೆಗೂ ತಪ್ಪು
ನನ್ನದಲ್ಲ.

ಅಂಗಳದಲ್ಲಿ ಮಳೆ
ಬಿದ್ದು,
ಮಣ್ಣಿನ ಗಂಧ
ಮೂಗು ತುಂಬಿದ್ದು
ಎರಡೇ ಕ್ಷಣ.
ಹಾಕಿದ್ದ ರಂಗೋಲಿಯೆಲ್ಲ
ಕಲಸಿ
ಹರಿದು,
ಶಬ್ದದ ಬಡಿವಾರಕ್ಕೂ
ಮುದ್ದು
ಬಂದಂತೆನಿಸಿ,
ಏನೋ
ನಿರಾಳ.
ಕವಿತೆ ಎಷ್ಟು
ಸರಳ!