ನಮ್ಮ ಕುಟುಂಬದ ಬುಡದಲ್ಲಿ ಮುಕ್ಕಾಲು ಪಾಲು ಜನರದ್ದು ಹೋಟೆಲ್ ಬಿಸಿನೆಸ್. ಹೆಚ್ಚಿನವರಲ್ಲಿ ಕೋತಾಸ್ ಕಾಫಿಯೇ ಶ್ರೇಷ್ಠ ಎನ್ನುವ ನಂಬಿಕೆಯಿದೆ. ತಿಂಡಿ-ದೋಸೆ ಎಷ್ಟೇ ರುಚಿಯಿದ್ದರೂ ಕಾಫಿ ಕಲಗಚ್ಚಿನ ಹಾಗಿದ್ದರೆ ಹೋಟೆಲಿನ `ಸ್ಟಾಂಡರ್ಡ್ ಮೈಂಟೇನ್`ಮಾಡಿಲ್ಲವೆಂದೇ ಪ್ರಚಾರವಾಗಿಬಿಡುತ್ತೆ. ಬರೀ ಕಾಫಿ ಪುಡಿ ಇದ್ದರೆ ಸಾಲದು. ಅದಕ್ಕೆ ಚಿಕೋರಿ ಎಷ್ಟು ಪ್ರಮಾಣದಲ್ಲಿ ಬೆರೆಸಬೇಕು, ಎಷ್ಟು ನೀರು ಬೆರೆಸಿ ಡಿಕಾಕ್ಷನ್ ಹೊಡೆಯಬೇಕು, ಹಾಲಿಗೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಅನ್ನೋ ಲೆಕ್ಕಾಚಾರದ ಮೇಲೆ ಕಾಫಿಯ ರುಚಿ ಅವಲಂಬಿತ.
ಹೊಸ ತಲೆಮಾರಿನ ಕಥೆಗಾರ ವಿಕ್ರಂ ಹತ್ವಾರ್ ಅಂಕಣ

ಎಲ್ಲಾ ನಗರಗಳಿಗೂ ಅದರದ್ದೇ ಆದ ಫ್ಲೇವರ್ ಇರುತ್ತೆ. ನ್ಯೂಯಾರ್ಕಿನ ಮ್ಯಾನ್ಹಾಟನ್ ಮತ್ತು ಮುಂಬೈಗಳಲ್ಲಿ ಕೆಲವು ಸಾಮ್ಯಗಳಿವೆ. `ಸಿಟಿ ದಟ್ ನೆವರ್ ಸ್ಲೀಪ್ಸ್` ಅಂತಾರಲ್ಲ- ಅದು ಈ ಎರಡೂ ನಗರಗಳಿಗನ್ವಯ. ಹಗಲುಗಳೂ ಹೆಚ್ಚುಕಮ್ಮಿ ಒಂದೇ ಥರ. ನಗರದ ಒಂದು ತುದಿಯಿಂದ ಮತ್ತೊಂದು ತುದಿಗೆ ನಾಗರೀಕತೆಯ ನಾಗಾಲೋಟ. ಸಂಜೆ ವಿರುದ್ಧ ದಿಕ್ಕಿನತ್ತ. ಎಲ್ಲಿ ನೋಡಿದ್ರೂ ಜನ, ಜನ, ಜನ. ಗಿಜಿಗಿಜಿ.

ಶಿವಾಜಿನಗರದಲ್ಲು ಹೀಗೇ. ಬಿಸಿನೆಸ್ಸಿಗೆ ಹೇಳಿಮಾಡಿಸಿದ ಜಾಗ ಅಂದ್ರೆ ಶಿವಾಜಿನಗರ ಅಂತಿದ್ರು ಆಗ. ಮಲ್ಲೇಶ್ವರ ಅನ್ನೋದು ಥಂಡಾ ಏರಿಯಾ. ಜನರು ಹೊರಗೇ ಬರದಿದ್ರೆ ನಾಲ್ಕಾರು ಜನರೊಟ್ಟಿಗೆ ಒಂದು ಕಡೆ ಸೇರಿ ಹರಟದಿದ್ದರೆ ಸಣ್ಣ-ಪುಟ್ಟ ಅಂಗಡಿಗಳಲ್ಲಿ ಏನು ಮಜವಿರುತ್ತೆ? ಅಪ್ಪ ಕಾಫೀ ಬಾರ್ ಓಪನ್ ಮಾಡಿದಾಗ ಅಷ್ಟೊಳ್ಳೆ ವ್ಯಾಪಾರ ಆಗೋದಕ್ಕೆ ಶಿವಾಜಿನಗರದ ಈ ಗುಣವೂ ಒಂದು ಕಾರಣ. ಹಾಗೆ ಜನರನ್ನ ಹೊರಗೆ ಎಳೆಯೋದರಲ್ಲಿ ನಾವು ಕೊಡುತ್ತಿದ್ದ ಕಾಫೀ ಮಹಿಮೆನೂ ಇರ್ತಿತ್ತು ಅನ್ನಿ.

ನಮ್ಮ ಕುಟುಂಬದ ಬುಡದಲ್ಲಿ ಮುಕ್ಕಾಲು ಪಾಲು ಜನರದ್ದು ಹೋಟೆಲ್ ಬಿಸಿನೆಸ್. ಹೆಚ್ಚಿನವರಲ್ಲಿ ಕೋತಾಸ್ ಕಾಫಿಯೇ ಶ್ರೇಷ್ಠ ಎನ್ನುವ ನಂಬಿಕೆಯಿದೆ. ತಿಂಡಿ-ದೋಸೆ ಎಷ್ಟೇ ರುಚಿಯಿದ್ದರೂ ಕಾಫಿ ಕಲಗಚ್ಚಿನ ಹಾಗಿದ್ದರೆ ಹೋಟೆಲಿನ `ಸ್ಟಾಂಡರ್ಡ್ ಮೈಂಟೇನ್`ಮಾಡಿಲ್ಲವೆಂದೇ ಪ್ರಚಾರವಾಗಿಬಿಡುತ್ತೆ. ಆದ್ದರಿಂದ, ಶಿವಾಜಿನಗರದ ಕಾಫಿ ಬಾರ್ ಬಿಟ್ಟು ಕುಶಾಲನಗರದಲ್ಲಿ ಹೋಟೆಲ್ ಮಾಡಿದಾಗಲೂ ಕೋತಾಸ್ ಕಾಫಿ ಪುಡಿಯನ್ನೇ ಬಳಸುತ್ತಿದ್ದೆವು. ಕುಶಾಲನಗರದಲ್ಲಿ ಕೋತಾಸ್ ಕಾಫಿ ಪುಡಿ ಸಿಗುತ್ತಿರಲಿಲ್ಲ. ನಾನು ಪ್ರತಿವಾರ ಬೆಂಗಳೂರಿನಿಂದ ಕುಶಾಲನಗರಕ್ಕೆ ಹೋಗಿಬರುತ್ತಿದ್ದೆ. ಅಪ್ಪ ನನ್ನ ಕೈಯಲ್ಲಿ ಎರಡು ವಾರಕ್ಕೊಮ್ಮೆ ಬೆಂಗಳೂರಿನಿಂದ ಕೋತಾಸ್ ಕಾಫಿ ತರಿಸುತ್ತಿದ್ದರು. ಬರೀ ಕೋತಾಸ್ ಕಾಫಿ ಪುಡಿ ಇದ್ದರೆ ಸಾಲದು. ಅದಕ್ಕೆ ಚಿಕೋರಿ ಎಷ್ಟು ಪ್ರಮಾಣದಲ್ಲಿ ಬೆರೆಸಬೇಕು, ಎಷ್ಟು ನೀರು ಬೆರೆಸಿ ಡಿಕಾಕ್ಷನ್ ಹೊಡೆಯಬೇಕು, ಹಾಲಿಗೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಅನ್ನೋ ಲೆಕ್ಕಾಚಾರದ ಮೇಲೆ ಕಾಫಿಯ ರುಚಿ ಅವಲಂಬಿತ. ಈಗ ಅವೆಲ್ಲ ನನಗೂ ಮರೆತು ಹೋಗಿದೆ.

ನ್ಯೂಯಾರ್ಕಲ್ಲೂ ರುಚಿಯಾದ ಸ್ಟಾರ್ ಬಕ್ಸ್, ಡಂಕಿನ್ ಕಾಫಿ ಹುಚ್ಚು ಜನರಿಗಿ ಎಷ್ಟಿದೆ ಎಂದರೆ ನಾವು ಶಿಫ್ಟ್ ಆಗಲಿರುವ ಹೊಸ ಆಫೀಸಿನಲ್ಲಿ ಲಿಫ್ಟ್ ಕೂಡ ಸರಿಯಾಗಿ ಕೆಲಸ ಮಾಡುತಿಲ್ಲ ಕಣಯ್ಯ ಅಂತ ನಮ್ಮ ಮ್ಯಾನೇಜರಿಗೆ ಹೇಳಿದರೆ, ಆತ ಹತ್ತಿರದಲ್ಲಿ ಸ್ಟಾರ್ ಬಕ್ಸ್ ಇದೆ ತಾನೆ? ಅಂತ ಕೇಳಿದ. ಆದರೆ, ಇಲ್ಲಿ ಹೆಚ್ಚಾಗಿ ‘ಟು ಗೋ’ ಪದ್ಧತಿ. ನಿಲ್ಲುವುದಕ್ಕೂ ಪುರುಸೊತ್ತಿಲ್ಲ. ನಡೆಯುತ್ತಲೇ ಕಾಫಿ ಮುಗಿಸಬೇಕು. ಹೀಗೆ ನಡೆಯುತ್ತ ನಡೆಯುತ್ತ ಕಾಫಿ ಕುಡಿಯುವ ಈ ನಗರದ ಹಗಲುಗಳಲ್ಲಿ ಯಾರಾದರು ಅಪರಿಚಿತರು ಎದುರು ಸಿಕ್ಕರೆ ‘ಗುಡ್ ಮಾರ್ನಿಂಗ್!’ ಎನ್ನುತ್ತಾರೆ. ದಿನವಿಡೀ ಆಫೀಸಿನ ಕಂಪ್ಯೂಟರ್ ಮಾನಿಟರಿನ ಕಿರಣಗಳಲ್ಲಿ ಕಣ್ಣಿನ ರೆಪ್ಪೆಗಳು ದಣಿಯುತ್ತವೆ. ಸಂಜೆ ಆಫೀಸಿನ ಲಿಫ್ಟಿನಲ್ಲಿ ಕೆಳಗಿಳಿಯುವಾಗ ‘ಹೌ ಡು ಯು ಡು`ಅಂತ ಕೇಳುತ್ತಾರೆ. ಉತ್ತರಕ್ಕಾಗಿ ಕಾಯದೆ ನಡೆದುಬಿಡುತ್ತಾರೆ. ನನ್ನೊಳಗಿಂದ ಹೊರಟ ‘Iam Fine’ ಎನ್ನುವ ಮಾತು ಯಾರದೋ ಕಿವಿಯಲಿ ನೆಲೆಗೊಳ್ಳಲು ಕಾತರಿಸುತ್ತ ಬಿಡಿಸನ್ಯಾಸಿಯಂತೆ ಅಲೆಯುತ್ತದೆ.

ಅಮೇರಿಕ್ಕನ್ನರದೇ ಮನೆಗಳಿರುವ ದೂರದ ಕೆಲವು ಶುಚಿಯಾದ ನಿಶಬ್ದ ಏರಿಯಾಗಳಲ್ಲಿ ನಡೆಯುವಾಗ, ಎದುರು ಸಿಗುವ ಮಧ್ಯವಯಸ್ಕರು, ಮುದುಕರು, ‘Hello, How are you?’ ಅಂತ ಕೇಳಿದರೆ ಹಿತವೆನಿಸುತ್ತೆ. ನಿಜಕ್ಕೂ ಆಪ್ತಭಾವ ಮೂಡಿತು ಅಂತ ಹೇಳಲಾರೆ. ಹೋಲಿಸಿ ನೋಡೋದು ಬೇಡ. ಆದ್ರೂ ಹೋಲಿಸಿ ನೋಡಿದ್ರೆ, ಅಮೇರಿಕ್ಕನ್ನರೇ ಪರ್ವಾಗಿಲ್ಲ ಕಣ್ರೀ. ಇಲ್ಲಿನ ದೇಸೀಗಳ ಮುಖವಂತು ಸದಾ ಹರಳೆಣ್ಣೆ ಟ್ಯಾಂಕು. ಇದುವರೆಗೆ ಒಬ್ಬನೇ ಒಬ್ಬ ಅಪರಿಚಿತ ಭಾರತೀಯ, ಕನ್ನಡಿಗ, ಅವನಾಗಿಯೇ ನನ್ನತ್ತ ಒಂದು ಸ್ಮೈಲ್ ಕೊಟಿದ್ದಿಲ್ಲ. ಮತ್ತೊಂದು ಅನುಮಾನ ಅಂದ್ರೆ- ನ್ಯೂಯಾರ್ಕಿನ ಆಫೀಸಿನಲ್ಲಿ, Good Morning, How do you do, Have a nice evening, ಮುಂತಾದವು- ಇಲ್ಲಿ ಅಪರಿಚತರು ಎದುರು ಸಿಕ್ಕಾಗ ಅನಾಯಾಸವಾಗಿ ಹೊರಡುವ ಔಪಚಾರಿಕ ಗೊಡ್ಡು ವಾಕ್ಯಗಳಾಗಿ ಹೋಗಿವೆಯಾ ಎನ್ನುವುದು. ಅದಕ್ಕೆ ಕಾರಣ ಇದೆ.

ಒಂದು ಸಂಜೆ ಸುಮಾರು ಐದು ಗಂಟೆಯ ಹೊತ್ತಿಗೆ ಆಫೀಸಿನ ಕೆಲಸವೆಲ್ಲ ಮುಗಿಸಿ ಲಿಫ್ಟ್ ಹಿಡಿದು ಕೆಳಬಂದೆ. ಲಿಫ್ಟಿನಿಂದ ಹೊರಬರುತ್ತಿದ್ದಂತೆ, ಅದೇ ಲಿಫ್ಟಿನ ಒಳ ಹೋಗಲು ಕಾಯುತ್ತಿದ್ದ ಒಬ್ಬಾತ, ‘hey, how are you?’ ಅಂತ ಹುಬ್ಬು ಹಾರಿಸಿ ಕೇಳಿ ಸೀದ ಒಳಹೋದ. ನನಗೆ ಸ್ವಲ್ಪ ತರಲೆ ಮಾಡಬೇಕೆನಿಸಿತು. ಹೊರಡುತ್ತಿದ್ದವನು ಅಲ್ಲೆ ನಿಂತು ಹಿಂದೆ ತಿರುಗಿ, ‘Iam Fine, Thank you!’ ಅಂತ ಹೇಳಿದೆ. ಅವನು ಪರಮಾಶ್ಚರ್ಯಭರಿತನಾಗಿ ಲಿಫ್ಟಿನ ಗುಂಡಿ ಒತ್ತಿದ. ಲಿಫ್ಟಿನ ಬಾಗಿಲು ಮುಚ್ಚುವವರೆಗೆ ನನ್ನನ್ನು ವಿಸ್ಮಯದಿಂದ ನೋಡಿದ. ಚೆನ್ನಾಗಿದ್ದೀರಾ ಅನ್ನುವ ಒಬ್ಬರ ಪ್ರಶ್ನೆಗೆ ಉತ್ತರ ಕೊಡುವುದೇ ಇಲ್ಲಿ ಆಶ್ಚರ್ಯದ ಸಂಗತಿಯಾಗಿದೆ. ಅದನ್ನು ಕಂಡು ನನಗೂ ಆಶ್ಚರ್ಯ ಆಯಿತು. ಸುಮ್ಮನೆ ತಮ್ಮ ಪಾಲಿನ ಸಭ್ಯತೆ ಮೆರೆದು ಹೊರಟುಬಿಡುವ ಸೌಜನ್ಯಮೂರ್ತಿಗಳಿಗೆ ನೀವು ಆರಾಮಿದ್ದೀರ ಎನ್ನುವ ಉತ್ತರ ಕೇಳುವ ವ್ಯವಧಾನವೇ ಇರುವುದಿಲ್ಲ.  ಹೀಗಿರುತ್ತಾ, ನಮ್ಮ ನಾಯಕನಟರು ಅಭಿಮಾನಿಗಳತ್ತ ವೇವ್ ಮಾಡುವುದು, ರಾಜಕಾರಣಿಗಳು ನಡೆಯುತ್ತ ಅಕ್ಕಪಕ್ಕದ ಜನರಿಗೆ ಕೈಜೋಡಿಸಿ ನಮಸ್ಕರಿಸುವುದನ್ನು ಯಾವ ಪ್ರಹಸನದ ಪಟ್ಟಿಗೆ ಸೇರಿಸಬೇಕೋ ತಿಳಿಯುತ್ತಿಲ್ಲ. ಈ ಸಲ ಯಾಕೋ ಚಿಕೋರಿ ಕೊಂಚ ಹೆಚ್ಚೇ ಆಯಿತು ಅನಿಸುತ್ತೆ.

ಫೋಟೋಗಳು: ಉಷಾ ಬಿ.ಎನ್.