ರಾಧೆ ಪರಿಚಯ ನನಗೆ ಬಹಳ ಹಿಂದಿನದೇನಲ್ಲ. ನನ್ನ ನಾದಿನಿಯ ಅಪ್ಪನ ಮನೆಯ ಕೆಲಸದವಳು ಅವಳು. ಯಾವ ಕೆಲಸವನ್ನಾದರು ಹೇಳಿ; ಸರಸರನೆ ಮಾಡಿ ಮುಗಿಸಿಬಿಡುತ್ತಾಳೆ. ಮಾತೂ ಹಾಗೆ. ಅವಳ ಬಾಯಿ ಸುಮ್ಮನಿರುವುದೇ ಅಪರೂಪ. ಹುಳೇಗಾರು ಹಳ್ಳಿಯ ಎಂಥ ಮೂಲೆ ಮನೆಯೇ ಇರಲಿ, ಆ ಮನೆಮಂದಿಯ ಪರಿಚಯ ಇಲ್ಲದಿರಲಿ, ಚಿಂತೆಯಿಲ್ಲ; ಅವರ ಕುಲ, ಗೋತ್ರ ರಾಧೆಗೆ ಗೊತ್ತಿರುತ್ತದೆ !ಕೆಲವು ವರ್ಷಗಳ ಹಿಂದೆ ನಾನು ನಾದಿನಿಯೊಟ್ಟಿಗೆ ಹುಳೇಗಾರಿಗೆ ಹೋಗಿದ್ದೆ. ಆಗಲೇ ರಾಧೆಯ ಪರಿಚಯವಾದದ್ದು. ಅವಳ ಮಾತಿನ ಬಗ್ಗೆ ಹೇಳಿ-ಕೇಳಿಯಷ್ಟೆ ಗೊತ್ತಿತ್ತು. ಈಗ ಸ್ವತಃ ಕೇಳುವ ಅವಕಾಶ ಸಿಕ್ಕಿತು. ನಾವು ಹೋದ ಎರಡನೆ ದಿನಕ್ಕೆ ಇರಬೇಕು, ನನ್ನ ನಾದಿನಿ ಕೋಣೆಯೊಳಗೆ ಬಂದು ಹೊಟ್ಟೆ ಹಿಡಿದು ನಗತೊಡಗಿದಳು. ಅಂಥದ್ದೇನು ಎಂದು ನಾನು ಪ್ರಶ್ನಾರ್ಥಕವಾಗಿ ಅವಳನ್ನು ನೋಡಿದೆ. ಅಳತೆ ಮೀರಿದ ಗಂಡಸರ ಚಪ್ಪಲಿಯನ್ನು ರಾಧೆ ಹಾಕಿಕೊಂಡು ಬಂದಿದ್ದಳಂತೆ. ಹೆಜ್ಜೆ ಇಡುತ್ತಿದ್ದಂತೆ ಚಪ್ಪಲಿ ಜಾರಿಕೊಳ್ಳುತ್ತಿತ್ತು. ಕಾಲೆಳೆದುಕೊಂಡು ಚಪ್ಪಲಿ ಜಾರದಂತೆ ಎಚ್ಚರದಿಂದಲೇ ನಡೆದುಕೊಂಡು ಬಂದಿದ್ದಳು. ನೋಡುವವರಿಗೆ ಅವಳು ನಡೆಯುವ ರೀತಿ ನೋಡಿ, ಅವಳ ಕಾಲಿಗೆ ಏನೋ ಪೆಟ್ಟಾಗಿರಬೇಕು ಎಂದು ಅನಿಸುತ್ತಿತ್ತು. ಇಷ್ಟು ಮಾತ್ರಕ್ಕೆ ನನ್ನ ನಾದಿನಿ ನಕ್ಕಿರಲಿಲ್ಲ. ಗಂಡನದೊ ಮಗನದೊ ಗೊತ್ತಿಲ್ಲ. ಇಬ್ಬರಲ್ಲಿ ಒಬ್ಬರ ಚಪ್ಪಲಿ ಹಾಕಿಕೊಂಡು ಬಂದುಬಿಟ್ಟಿದ್ದಳು. ಹತ್ತಾರು ವರ್ಷಗಳಿಂದ ಈ ಹುಳೇಗಾರು ರಸ್ತೆಯಲ್ಲಿ ನಡೆದು ಬರುತ್ತಿದ್ದವಳಿಗೆ, ಆ ದಿನ ರಸ್ತೆಯಲ್ಲಿ ಕಾಲಿಗೆ ಚುಚ್ಚುವ ಕಲ್ಲುಗಳು ಕಂಡವು, ರಸ್ತೆಯ ಗುಂಡಿ-ಗುಡುಪುಗಳು ಕಂಡವು. ನನ್ನ ನಾದಿನಿಯ ನಾಲಿಗೆಗೂ ತುರಿಕೆ ಜಾಸ್ತಿ. ಸುಮ್ಮನಿರಲಾಗದೆ ಯಾವತ್ತೂ ಚಪ್ಪಲಿ ಹಾಕದ ರಾಧೆ ಆ ದಿನ ಗಂಡಸರ ಚಪ್ಪಲಿ ಹಾಕಿದ ಕಾರಣ ಕೇಳಿದಳು. ಈ ಹುಳೇಗಾರು ರಸ್ತೆಯೆಲ್ಲ ರಿಪೇರಿಯಾಗಲೇಬೇಕು. ಯಾರೊಬ್ಬರಿಗೂ ರಿಪೇರಿ ಮಾಡುವ ಆಲೋಚನೆಯಿಲ್ಲವೆಂದು ರಾಧೆ ಲೊಚಗುಟ್ಟಿದಳು. ಇದು ರಿಪೇರಿಗೆ ತನ್ನನ್ನೇ ಕಾಯುತ್ತಿದೆ ಎಂದು ನಕ್ಕಳು. ಇವಳಿಗ್ಯಾಕೆ ರಸ್ತೆ ರಿಪೇರಿ ಮಾಡುವ ಕೆಲಸ? ಪಂಚಾಯಿತಿಗಳೊ, ಸರ್ಕಾರವೊ ಇದೆಯಲ್ಲ ಎಂದು ನನ್ನ ನಾದಿನಿ ತಕರಾರು ಎತ್ತಿದಳು. ಇಲ್ಲ; ರಿಪೇರಿ ಕೆಲಸ ತನ್ನಿಂದಷ್ಟೆ ಆಗಬೇಕು ಎಂದು ಪೆಟ್ಟೊಂದು ತುಂಡೆರಡು ಅನ್ನುವ ಧಾಟಿಯಲ್ಲಿ ಹೇಳಿದಳು. ಇದೇನೊ ಗುಟ್ಟು ಇರಬೇಕು ಎಂದು ನಾದಿನಿ ಅವಳ ಹಿಂದೆ ಸುತ್ತಾಡಿ ಚಪ್ಪಲಿ ಹಾಕಿಕೊಂಡು ಬಂದಿರುವುದಕ್ಕೆ ಕಾರಣ ಹುಡುಕಿಯೇ ಬಿಟ್ಟಳು.

ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಬರುವುದಿತ್ತು. ಖಂಡಿಕ ಗ್ರಾಮ ಪಂಚಾಯಿತಿಗೆ ಹುಳೇಗಾರು ಮಹಿಳೆಯರಿಗೆ ಮೀಸಲಾಗಿತ್ತು. ಹಿಂದಿನ ಗ್ರಾಮ ಪಂಚಾಯಿತಿಯ ಸದಸ್ಯರೊ, ಅಧ್ಯಕ್ಷರೊ ಯಾರೋ ರಾಧೆಗೆ ಹುಳೇಗಾರಿನಿಂದ ನಿಲ್ಲಲು ಸಲಹೆ ಕೊಟ್ಟರಂತೆ. ರಾಧೆ ಚುನಾವಣೆಗೆ ನಿಲ್ಲಲು ತೀರ್ಮಾನಿಸಿಬಿಟ್ಟಳು. ಈ ವರೆಗೂ ಬರೆಗಾಲಿನಲ್ಲಿ ಬರುತ್ತಿದ್ದ ರಾಧೆ ಚುನಾವಣೆಗೆ ಅಭ್ಯರ್ಥಿ ಆಗುವವಳಾದ್ದರಿಂದ ಚಪ್ಪಲಿ ಹಾಕಿದ್ದಳು! ಅವಳಿಗೆ ರಸ್ತೆ ದುರವಸ್ಥೆ  ಆಗಷ್ಟೆ ಕಂಡಿತು. ರಾಧೆ ಅಳತೆ ಮೀರಿದ ಚಪ್ಪಲಿ ಹಾಕಿಕೊಂಡು ರಸ್ತೆ ಸ್ಥಿತಿಯನ್ನು ಕೊಂಡಾಡುವುದು ಕೇಳಿ ನಾದಿನಿ ನಗುತ್ತಿದ್ದಳು. ಇದು ಇಲ್ಲಿಗೆ ಮುಗಿಯಿತು ಅಂದುಕೊಂಡೆ. ಮರುದಿನವೂ ಹೀಗೆ ಇನ್ನೊಂದು ರೀತಿಯಲ್ಲಿ ರಾಧೆಯ ಮಾತು, ನಾದಿನಿಯ ಕೊಂಕುಮಾತು ಮುಂದುವರಿಯಿತು. ಜೋಗಕ್ಕೆ ಹತ್ತಿರವಿದ್ದರೂ ಇಲ್ಲಿ ದಿನಕ್ಕೆ ಇಪ್ಪತ್ತು ಗಂಟೆ ಕರೆಂಟಿಲ್ಲ. ನಮಗೆ ಸೊನ್ನೆ ಮಾಡಿ ರಾಜ್ಯಕ್ಕೆಲ್ಲ ಕರೆಂಟು ಕೊಡುತ್ತಾರೆ. ನಮಗೂ ದಿನವಿಡೀ ಕರೆಂಟು ಕೊಡಲು ಧರಣಿ ನಡೆಸಬೇಕೂಂತ ರಾಧೆ ಹೇಳಿದಳು. ಮನೆ ಕೆಲಸವೆಲ್ಲ ಬಿಟ್ಟು ಎಲ್ಲಿ ಧರಣಿ ಕೂರುವುದು, ಯಾರೆಲ್ಲ ಕೂರುವುದು ಎಂದು ನಾದಿನಿ ಕೇಳಿದಳು. ಹುಳೇಗಾರಿನ ಜನರನ್ನೆಲ್ಲ ಸೇರಿಸಿಕೊಂಡೇ ಧರಣಿ ನಡೆಸುವುದು. ಯಾರಾದರು ಮನೆಯೊಳಗೆ ಕುಳಿತರೆ ಅವರಿಗೆ ಮಾಡುವುದು ಬೇರೆಯೇ ಇದೆ ಎಂದು ರಾಧೆ ಮೂತಿ ಉದ್ದ ಮಾಡಿದಳು. ಧರಣಿಗೆ ನಾದಿನಿಗೂ ಮಡಿಕೇರಿಯಿಂದ ಬರಲು ಆಹ್ವಾನ ನೀಡಿದಳು. ಎಲ್ಲದಕ್ಕೂ ಹೋರಾಟ ಮಾಡಬೇಕು. ಇಲ್ಲದಿದ್ದರೆ ಕೆಲಸ ಆಗುವುದಿಲ್ಲ ಎಂದು ಅವಳು ಹೇಳಿದಳು.

ಹೀಗೆ ದಿವಸಕ್ಕೊಂದು ವಿಷಯ ಪ್ರಸ್ತಾಪವಾಗುತ್ತಿತ್ತು. ಆ ದಿನ ರಾಧೆಗೆ ರಸ್ತೆ ಮತ್ತೊಂದು ತುದಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಬಹಳವೇ ಸಿಟ್ಟು ಬಂದಿತ್ತು. ವೈದ್ಯರು ಎರಡು ದಿನಗಳಿಂದ ಬರಲಿಲ್ಲವಂತೆ. ಆಯಾ ಇನ್ನು ಯಾರದ್ದೊ ಮನೆಯ ಜಂಬ್ರಕ್ಕೆ ಹೋಗಿದ್ದಾಳಂತೆ. ಎಷ್ಟು ಮಜಾ ಮಾಡುತ್ತಾರೊ ನೋಡಿಯೇ ಬಿಡಬೇಕು. ತಾನು ಗ್ರಾಮ ಪಂಚಾಯತಿ ಸದಸ್ಯೆಯಾದದ್ದೆ ಅವರನ್ನೆಲ್ಲ ಇಲ್ಲಿಂದ ವರ್ಗಾಯಿಸಿ, ಒಳ್ಳೆ ವೈದ್ಯರನ್ನು ಹಾಕಲು ಕೇಳಬೇಕು. ಇಲ್ಲದಿದ್ದರ ಧರಣಿ, ಮೆರವಣಿಗೆ ಹೋರಾಟ ಇದ್ದೇ ಇದೆ ಎಂದು ರಾಧೆ ಹೇಳುತ್ತಿದ್ದಳು. ಆರೋಗ್ಯ ಕೇಂದ್ರದಲ್ಲಿ ಯಾವತ್ತು ವೈದ್ಯರಿದ್ದರು ಎಂದು ನಾದಿನಿ ಕೆಣಕಿದಳು. ಯಾವತ್ತು ಇದ್ದರೊ ಅದೆಲ್ಲ ಗೊತ್ತಿಲ್ಲ. ತಾನು ಸದಸ್ಯೆಯಾದ ಮೇಲೆ ಅವರು ಯಾವತ್ತೂ ಬರಬೇಕು. ಜನರ ಸೇವೆ ಮಾಡಬೇಕು. ಲಂಚ-ಗಿಂಚ ಕೇಳಲಿ, ಮಾಡುವುದು ಬೇರೆಯೇ ಇದೆ ಎಂದು ಮುಖ ಸಿಂಡರಿಸಿದಳು. ನಾದಿನಿ ನಗುತ್ತಲೇ ಇದ್ದಳು.

ಅಂತು ರಾಧೆ ಗ್ರಾಮಪಂಚಾಯತಿ ಚುನಾವಣೆಗೆ ಮೊದಲೇ ಹುಳೇಗಾರಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಿರುವುದಕ್ಕೆ ತಲೆ ಬಾಗಲೇಬೇಕು.ನಾನು ಬೆಂಗಳೂರಿಗೆ ಹೊರಟಿದ್ದೆ. ರಾಧೆ ಕೊಟ್ಟಿಗೆ ಕೆಲಸ ಮಾಡುತ್ತಿದ್ದವಳು ಸಗಣಿ ಮೆತ್ತಿದ ಕೈಯಲ್ಲೆ ಹೊರಗೆ ಬಂದಳು. ಇನ್ನೆಲ್ಲ ನನ್ನ ನಾದಿನಿಯ ಅಪ್ಪನ ಮನೆಯವರಿಗೆ ಕೆಲಸಕ್ಕೆ ಕಷ್ಟವಾಗುತ್ತದೆ ಎಂದಳು. ಯಾಕೆಂದು ನಾನು ಕೇಳದಿದ್ದರೂ ಅವಳೇ ವಿವರಿಸಿದಳು. ಗ್ರಾಮ ಪಂಚಾಯಿತಿ ಸದಸ್ಯೆ ಆದ ಮೇಲೆ ನಿತ್ಯ ಪಂಚಾಯಿತಿ ಕೆಲಸ ಇರುತ್ತದೆ. ವಾರದಲ್ಲಿ ಮೂರು ದಿನಗಳಾದರು ಹೋರಾಟ ನಡೆಸಬೇಕು, ಧರಣಿ ಕೂರಬೇಕು, ಹುಳೇಗಾರು ಜನರ ಕಷ್ಟ-ಸುಖ ವಿಚಾರಿಸಬೇಕು. ಕೆಲಸ ಒಂದೆ-ಎರಡೇ! ತನ್ನ ಮನೆ ಕೆಲಸ ಮಾಡಲು ಸಮಯ ಸಿಗುತ್ತೊ ಇಲ್ಲವೊ ಎಂದು ಹೇಳಿದಳು. ನಾದಿನಿಯತ್ತ ತಿರುಗಿ, ಅವಳ ಅಪ್ಪನಿಗೆ ಬೇರೊಬ್ಬಳು ಕೆಲಸದವಳನ್ನು ಈಗಲೇ ನೋಡಿ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಸಲಹೆ ಕೊಟ್ಟಳು. ನಾನು ಮತ್ತೆ ಹುಳೇಗಾರಿಗೆ ಬರುವಾಗ ಅವಳು ಖಂಡಿಕ ಗ್ರಾಮ ಪಂಚಾಯತಿ ಕಚೇರಿಯಲ್ಲಷ್ಟೆ ಸಿಗುವುದಾಗಿ ಹೇಳಿದಳು.

ಚುನಾವಣೆಗೆ ಇನ್ನೂ ಸಮಯವಿದೆ. ನಾಮಪತ್ರ ಸಲ್ಲಿಸಬೇಕು, ಠೇವಣಿಗೆ ಹಣ ಇಟ್ಟುಕೊಳ್ಳಬೇಕು, ನಾಮಪತ್ರ ಸ್ವೀಕೃತವಾದ ಮೇಲೆ ಚುನಾವಣೆ ಪ್ರಚಾರಕ್ಕೆ ಹಣ ಬೇಕು ಎಂದು ಹೇಳಿದೆ. ಠೇವಣಿ ಇನ್ನೂರೈವತ್ತು ರೂಪಾಯಿ ನಾದಿನಿಯ ಅಪ್ಪ ಕೊಟ್ಟೇ ಕೊಡುತ್ತಾರೆ. ಯಾಕಂದರೆ ಇಪ್ಪತ್ತು ವರ್ಷಗಳಿಂದ ಅವರ ಮನೆ ಕೆಲಸ ಮಾಡಿಕೊಂಡು ಬಂದಿದ್ದಾಳಲ್ಲ! ನನ್ನ ಎದುರೇ ಅವಳು ಹೀಗೆ ಹೇಳಿದ್ದರಿಂದ ಅವರು ಒಪ್ಪಿಕೊಳ್ಳದೆ ನಿರ್ವಾಹವಿರಲಿಲ್ಲ. ಇನ್ನು ಚುನಾವಣೆ ಪ್ರಚಾರಕ್ಕೆ ಖರ್ಚು ಮಾಡಲಿಕ್ಕೆ ಹಣ ಇಲ್ಲ. ಬದಲು; ಎಲ್ಲರ ಮನೆ ಬಾಗಿಲಿಗೆ ಹೋಗಿ ಓಟು ಕೇಳುವುದಾಗಿ ಹೇಳಿದಳು. ಅವಳು ಗ್ರಾಮ ಪಂಚಾಯತಿ ಸದಸ್ಯೆಯಾದ ಮೇಲೆ ಅವಳನ್ನು ನೋಡಲು ಬರಲೇಬೇಕೆಂದು ತಾಕೀತು ಮಾಡಿ ನನ್ನನ್ನು ಕಳುಹಿಸಿಕೊಟ್ಟಳು.

ನಾಲ್ಕೈದು ತಿಂಗಳಲ್ಲೆ ಗ್ರಾಮ ಪಂಚಾಯತಿ ಚುನಾವಣೆ ನಡೆದಿತ್ತು. ರಾಧೆಯ ವಿಷಯ ನನಗೆ ಮರೆತುಹೋಗಿತ್ತು. ಬೆಂಗಳೂರು ಮಹಾನಗರಸಭೆ ಚುನಾವಣೆಗೆ ನನ್ನ ಪಕ್ಕದ ಮನೆಯವರೊಬ್ಬರು ನಿಲ್ಲುತ್ತಾರೆಂದು ಗೊತ್ತಾದಾಗ ರಾಧೆಯ ನೆನಪಾಯಿತು. ಅವಳು ಗ್ರಾಮಪಂಚಾಯತಿ ಸದಸ್ಯೆಯಾಗಿರಬಹುದು ಅಂದುಕೊಂಡೆ. ಮಾತುಕೊಟ್ಟಂತೆ ಠೇವಣಿಗಾಗಿಯೇ ನಾದಿನಿ ಅಪ್ಪ ಇನ್ನೂರೈವತ್ತು ರೂಪಾಯಿಯನ್ನು ರಾಧೆಗೆ ಕೊಟ್ಟರಂತೆ. ಹಣವನ್ನು ಕವರಿನಲ್ಲಿ ಹಾಕಿ ತಲೆ ದಿಂಬಿನೊಳಗೆ ಅಡಗಿಸಿಟ್ಟಿದ್ದಳಂತೆ. ಮರುದಿನ ನಾಮಪತ್ರ ಸಲ್ಲಿಸಲು ಒಳ್ಳೆ ಸೀರೆಯುಟ್ಟುಕೊಂಡು, ಹಣೆಗೆ ಕಾಸಗಲ ಕುಂಕುಮ ಇಟ್ಟುಕೊಂಡು ಗಂಡನನ್ನೂ ಹೊರಡಿಸಿದಳಂತೆ. ದಿಂಬಿನೊಳಗಿಂದ ಕವರು ತೆಗೆದಳಂತೆ. ಹಗುರವಾಗಿತ್ತು. ಗಾಬರಿಯಿಂದ ಕವರು ಬಿಡಿಸಿದಳು. ಅದು ಖಾಲಿ! ರಾಧೆ ಅಲ್ಲಿಗೆ ಬಿಡಲಿಲ್ಲ. ಗಂಡನನ್ನು ಕರೆದುಕೊಂಡು ತನಗೆ ಚುನಾವಣೆಗೆ ನಿಲ್ಲಲು ಹೇಳಿದವರ ಮನೆಗೇ ಹೋದಳಂತೆ. ಅವರೊ ರಾಜಕಾರಣಿ, ಠೇವಣಿ ಹಣ ಕೊಡಲು ಸಾಧ್ಯವಿಲ್ಲವೆಂದು ಹೇಳಿದರು. ಜೊತೆಗೆ ಚುನಾವಣೆಗೆ ನಿಂತು ಕಡಿಯುವುದು ಏನು ಎಂದು ಕೇಳಿದರಂತೆ. ಅವರು ಅವರ ಪಕ್ಷದ ಕಾರ್ಯಕರ್ತರೊಬ್ಬನ ಹೆಂಡತಿಯನ್ನು ನಿಲ್ಲಿಸಿದ್ದರಂತೆ. ರಾಧೆ ಪೆಚ್ಚುಮುಖ ಹಾಕಿಕೊಂಡು ಬಂದವಳು, ಮಲಗಿಬಿಟ್ಟಳಂತೆ. ಕುಳಿತಲ್ಲಿಗೇ ಬಾಯಿಗೆ ಅನ್ನ ಹಾಕಲಿ ಎಂಬಂತಿರುವ ಗಂಡ, ಪ್ರೇಮಿಸಿದವನೊಡನೆ ಮದುವೆ ಮಾಡಿಕೊಡಲು ಆಸಕ್ತಿ ತೋರುತ್ತಿಲ್ಲವೆಂದು ಮುನಿಸಿಕೊಂಡು ಮಾತು ನಿಲ್ಲಿಸಿದ ಮಗಳು, ಹಿಂದಿನ ದಿನ ಎಲ್ಲಿಗೆ ಎಂದು ಹೇಳದೆ ಮನೆಯಿಂದ ಹೊರಗೆ ಹೋಗಿರುವ ಮಗ…..