ಸುತ್ತಲ ಗದ್ದಲದ ನಡುವೆ ಒಂಚೂರು ನನ್ನದೇ ಜಾಗ ಬೇಕೆಂದು ಅನಿಸಿದಾಗ, ಸುಮ್ಮಸುಮ್ಮನೆ ಒಂಟಿಯಾಗಿ ಕೂತುಬಿಡಬೇಕು ಎಂದೆನಿಸಿದಾಗ ನೆರವಿಗೆ ಬರುವುದು ಕವಿತೆಗಳು. ಹಾಗೆ ಆಗಾಗ ಸೆಳೆಯುವುದು ರಿಲ್ಕನ ಕವಿತೆಗಳು. ಅವನ ಕವಿತೆಗಳಲ್ಲಿ ತುಂಬಿದ ಸಂಕೋಲೆಯ ಬಿಗಿದಿಟ್ಟಂತ  ಒಂಟಿತನ, ಅಪೂರ್ಣತೆ, ಹೇಳಹೊರಟು ಹೇಳದೆ ಬಿಟ್ಟ ಎಷ್ಟೊಂದು ಭಾವನೆಗಳಿಗೆ ವಿಚಿತ್ರ ಚುಂಬಕ ಶಕ್ತಿಯಿದೆ. ಕವಿತೆಯ ಕರ್ತೃವಿನ ಭಾವನೆ ಆ ಕವಿತೆಯ ಹಿಂದೆ ಏನಿದೆಯೋ.. ಆದರೆ ಅವನ ಕವಿತೆಗಳು ನನ್ನ ಭಾವಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತವೆ!

ಹಾಗೆಯೇ ರಿಲ್ಕನಿಗೆ ತದ್ವಿರುದ್ಧ ಎನಿಸುವ ಝೆನ್ ಕವಿತೆಗಳು. ಅವು ನಿರ್ಲಿಪ್ತ ಭಾವದಲ್ಲಿ ನಿರುಮ್ಮಳ ಶಾಂತಿಯ ಒಂಟಿತನದಿಂದ ತುಂಬಿವೆ. ಅಸಂಬದ್ಧವೂ ಅಸಂಗತವೂ ಎನಿಸುವಂತೆ ತೋರುವ ಹಲವುಗಳಲ್ಲಿ ಸಂತೈಸುವ ಆಕರ್ಷಣೆಯಿದೆ. ಕೆಂಡಸಂಪಿಗೆಯ ಜಾಣ ಓದುಗರಿಗಾಗಿ  ನಾನು ಸುಮ್ಮನೇ ಅನುವಾದಿಸಿದ ಕೆಲವು ರಿಲ್ಕ್ ಹಾಗಾ ಝೆನ್ ಕವಿತೆಗಳು.

ಮತ್ತೆ ಮತ್ತೆ

ಮತ್ತೆ ಮತ್ತೆ, ನಮಗೆಷ್ಟೆಲ್ಲಾ ಅರಿವಿರುವ ಈ ಪ್ರೀತಿಯ ಹೂದೋಟ
ಮತ್ತಲ್ಲಿ ಕಾಣುವ ಪುಟ್ಟ ಮಸಣ, ಅದರಲ್ಲಿನ ಶೋಕಿಸುತ್ತಿರುವ ಹೆಸರುಗಳು,
ಹೆದರಿಸುವ ಮೌನಗಳ ಪಾತಾಳ ಆಳ-
ದೊಳಗೆ  ಬೀಳುವ ಉಳಿದೆಲ್ಲ ಲೋಕ
ಮತ್ತೆ ಮತ್ತೆ   ನಾವಿಬ್ಬರೂ ಒಟ್ಟೊಟ್ಟಿಗೆ ನಡೆಯುತ್ತೇವೆ
ಆ ಪುರಾತನ ಮರಗಳ ಛಾವಣಿಯಡಿಯಲ್ಲಿ, ಅಡ್ಡಲಾಗುತ್ತೇವೆ ಹಾಗೆಯೇ ಮತ್ತೆ ಮತ್ತೆ
ಆ ಹೂವುಗಳ ನಡುವೆ, ಆಗಸದ ಮುಖಕ್ಕೆ ಮುಖ ಕೊಟ್ಟು

ಮುನ್ಸೂಚನೆ

ನಾನೊಂದು ಖಾಲಿ ಅನಂತದ ನಟ್ಟನಡುವಿನ ಬಾವುಟ
ಮುಂಬರುವ ಗಾಳಿಯ ಸುಳಿವು ಸಿಕ್ಕರೂ ಉಳಿಯಬೇಕು
ಅದು ದಾಟುವವರೆಗೂ
ಜಗದ ವಸ್ತುಗಳೆಲ್ಲ ಕದಲದೆ ನಿಂತರೂ
ಕದಗಳು ಮೆಲ್ಲಗೆ ಮುಚ್ಚಿಕೊಳ್ಳುತ್ತವೆ, ಚಿಮಣಿಗಳಲ್ಲಿ ತುಂಬಿದೆ
ಮೌನ
ಕಿಟಕಿಗಳಿನ್ನೂ ಕಿಂಕಿಣಿಸುತ್ತಿಲ್ಲ, ನೆಲದ ಧೂಳಿನ್ನೂ ಮಲಗಿದೆ ಅಲ್ಲೇ
ನನಗೆ ಚಿರಪರಿಚಿತ ಬಿರುಗಾಳಿ, ಕಡಲ ಸಂಕಟದಂತೆ ನನ್ನೊಡಲು
ಬೊಬ್ಬಿರಿದು ಹಾರುವೆ, ಮತ್ತಲ್ಲೇ ಮಗಚುವೆ
ಎತ್ತಿ ಎಸೆಯುವೆ ನನ್ನನ್ನೇ, ಆದರೂ ಒಂಟಿ.. ಒಬ್ಬೊಂಟಿ
ಈ ಜೋರು ಬಿರುಗಾಳಿಯ ಮಧ್ಯೆ

ಓ ಕತ್ತಲೆ

ಹಾ ಕತ್ತಲೆ, ನಾ ಹುಟ್ಟಿಬಂದೆ ಅದರೊಳಗಿಂದ
ಜಗತ್ತಿಗೆ ಬೇಲಿ ಹಾಕುವ
ಎಲ್ಲ ಬೆಂಕಿಗಳಿಗಿಂತಲೂ ಹೆಚ್ಚು  ಪ್ರಿಯ ನೀನು ನನಗೆ
ಬೆಂಕಿ ಎಲ್ಲರಿಗೂ ಬೆಳಕಿನ ವರ್ತುಲ ಬರೆದುಕೊಟ್ಟಿದೆ
ಹಾಗಿದ್ದರೂ ಹೊರಗುಳಿದವರು ನಿನ್ನನ್ನು ಅರಿಯರು

ಆದರೆ ಕತ್ತಲು ಒಳ ಸೆಳೆಯುತ್ತದೆ ಎಲ್ಲವನ್ನೂ-
ಆಕಾರಗಳನ್ನೂ ಮತ್ತು ಬೆಂಕಿಯನ್ನೂ, ಜೀವಿಗಳನ್ನೂ ಮತ್ತು ನನ್ನನೂ
ಬಹು ಸುಲಭದಲ್ಲಿ ಒಟ್ಟುಗೂಡಿಸಿಬಿಡುತ್ತಲ್ಲ ಎಲ್ಲವನ್ನೂ! –
ಅಧಿಕಾರಗಳನ್ನೂ ಮತ್ತು ಜನರನ್ನೂ-

ಅನಿರ್ವಚನೀಯ ಅಸ್ತಿತ್ವವೊಂದು  ನನ್ನೆಡೆ ಸರಿಯುತ್ತಿದೆ
ರಾತ್ರಿಗಳಲ್ಲಿ ನಂಬಿಕೆ ನನಗೆ

ಝೆನ್ ಕವಿತೆಗಳು

ನನ್ನೆಲ್ಲ ಭಾವನೆಗಳು ಬಸವಳಿದು ಹೋದಾಗ
ಕಾಡುಹಾದಿಯಲೆಲ್ಲೋ ಕಳೆದುಹೋಗುತ್ತೇನೆ
ನಿರಂತರ ಅರಳುವ ಹೂಗಳ ಆರಿಸುತ್ತ

ಮಂದಾನಿಲದಲ್ಲಿ ಮಿಂದು ಸುರಿಯುತ್ತಿದೆ ಹಿಮ
ಹಿಮದಲ್ಲೇ ಹೊಸೆದು ಹುಯಿಲಿಡುವ ಗಾಳಿ
ಅಗ್ಗಿಷ್ಟಿಕೆಯ ಬಳಿ ಕುಳಿತು ನೀವಿಕೊಳ್ಳುವ ಕಾಲ
ಸುತ್ತ ಕಾಲ ಖಾಲಿ ಹೊರಳುತ್ತಿದೆ
ದಿನಗಳ ಗುಣಿಸುತ್ತ ಗುಮ್ಮನೆ ಕುಳಿತ ಗೂಡಲ್ಲಿ
ಶಿಶಿರವೂ ಹಾಗೆ ಬಂದು ಹೀಗೆ ಹೊರಟಿದೆ
ಒಂದು ಸುಂದರ ಕನಸಿನಂತೆ

ಸಣ್ಣ ತೊರೆಯೊಂದು ಹಾವಸೆಗಲ್ಲುಗಳ
ಕೊರಕಲಿಂದ ಬಸಿದು ಹರಿದಂತೆ
ನಾನೂ ಸದ್ದಿಲ್ಲದೇ ತಿಳಿಯಾಗುತ್ತಿರುವೆ

ಬಹಳ ಸಾಧಿಸಬೇಕೆಂಬ ಆಸೆಯೇನಿಲ್ಲ, ತುಂಬಾ ಆಲಸಿ ನಾನು
ಜಗದ ಉಸಾಬರಿಯೇ ಬೇಡ ಎಂದು ಹಾಗೇ ಬಿಟ್ಟಿರುವೆ
ಹತ್ತುದಿನದ ತುತ್ತಿಗಾಗುವಷ್ಟು ಅಕ್ಕಿ ಸಾಕು ಜೋಳಿಗೆಯೊಳಗೆ
ಅಗ್ಗಿಷ್ಟಿಕೆಯ ಪಕ್ಕ ಒಂದೆರಡು ಒಣಕೊರಡು
ಸುಮ್ಮನೆ ಮಾತೇಕೆ ಮರುಳೋ ಇಲ್ಲ ತಿಳಿವಿನರಳೋ, ಏನೋ ಒಂದು
ನನ್ನ ಸೂರಿನ ಮೇಲೆ ಸುರಿವ ಮಳೆಹನಿಯ ಆಲಿಸುತ್ತ ಈ ರಾತ್ರಿ
ಬೆಚ್ಚಗೆ ಕುಳಿತಿರುವೆ ಎರಡೂ ಕಾಲ್ಗಳ ನೀಡಿ ಬೆಂಕಿ ಕಾಯಿಸುತ್ತಾ