ಕುಂದಾಪುರವು ಘಟ್ಟದಿಂದ ಇಳಿವಹೊಳೆ, ಮೊರೆವ ಕಡಲು, ಹಸಿರುಕಚ್ಚಿದ ಪಶ್ಚಿಮಘಟ್ಟದ ನಡುವೆ ನೆಲೆಸಿದೆ. ಈ ಸೀಮೆಗೆ ಹೋದರೆ, ನಾನು ಅಂಕದಕಟ್ಟೆಯಲ್ಲಿರುವ ಗೆಳೆಯ ಜಯಪ್ರಕಾಶ ಶೆಟ್ಟರಲ್ಲಿ ತಂಗುತ್ತೇನೆ. ಮನೆಸುತ್ತ ಕಂಗುತೆಂಗಿನ ತೋಟ ಮತ್ತು  ಗದ್ದೆ. ಕೆಲವು ಮನೆಗಳು ಅರ್ಧರ್ಧ ಎಕರೆ ಪ್ರದೇಶ ಆಕ್ರಮಿಸಿಕೊಂಡಿದ್ದು, ಮಾವು ಹಲಸು ಗೇರು ಗಿಡಗಳಿರುವ ಕಾರಣ ಅವೂ ತೋಟಗಳಂತಿವೆ. ಅಲ್ಲಿ ನವಿಲು ಮೈನಾ, ಬುಲ್‌ಬುಲ್, ಪಿಕಳಾರ, ಕಾಜಾಣ, ಮೀಂಚುಳ್ಳಿ, ಹದ್ದು ಹೊಕ್ಕುಬಳಸಾಡುತ್ತವೆ. ಇವುಗಳಲ್ಲೆಲ್ಲ ನವಿಲುಗಳದ್ದೇ ವಿಶೇಷ. ಅವು ಎಷ್ಟು ಜನಬಳಕೆಯಾಗಿವೆಯೆಂದರೆ, ಮನೆಯ ಮಾಳಿಗೆಯ ಮೇಲೆ ತೆಂಗಿನಮರಗಳ ಮೇಲೆ ವಿಶ್ರಮಿಸುತ್ತವೆ; ಕೋಳಿಗಳಂತೆ ಅಂಗಳಕ್ಕೆ ಬಂದು ಮೇಯುತ್ತವೆ. ಗಂಡು ನವಿಲೊಂದು ನೀರಿನ ಟಂಕಿಯ ಮೇಲೇರಿ ಯಕ್ಷಗಾನದ ಕುಣಿತವನ್ನು ಕೊಡುತ್ತದೆ. ಇಲ್ಲಿ ಬೆಳಕು ಹರಿಯುವುದೇ ನವಿಲುಗಳ ‘ಮ್ಯಾಂವೊ ಸ್ವರದೊಂದಿಗೆ.

ಈ ಸ್ವರಕ್ಕೆ ಕುಂದಾಪುರ ಸೀಮೆಯ ಜಾನಪದಲ್ಲಿ ಒಂದು ಸ್ವಾರಸ್ಯಕರ ಕತೆಯಿದೆ. ಒಂದೂರಲ್ಲಿ ಅಣ್ಣತಂಗಿ ಇದ್ದರಂತೆ. ಚಿಕ್ಕವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಇವರು ಸೋದರಮಾವನ ಮನೆಯಲ್ಲಿ ಆಶ್ರಯ ಪಡೆದರು. ಮಾವನೇನೊ ತಂಗಿ ಮಕ್ಕಳೆಂದು ಬಾವಣಿಕೆ ಮಾಡುತ್ತಿದ್ದ. ಆದರೆ ಮಾವನ ಹೆಂಡತಿ ಹುರಿದು ಮುಕ್ಕುತ್ತಿದ್ದಳು. ಅವಳದು ಒಂದೇ ತಗಾದೆ- ‘ಈ ಮಕ್ಕಳನ್ನು ಕಾಡಿಗೆ ಬಿಟ್ಟುಬನ್ನಿ. ಹೆಂಡತಿ ಕಾಟ ತಡೆಯಲಾರದೆ ಗಂಡನು ಮಕ್ಕಳನ್ನು ಕಾಡಿಗೆ ಕರೆದೊಯ್ದನು. ‘ಬಿದಿರನ್ನು ಕಡಿಯುವೆ ಅಲ್ಲಿತನಕ ಆಡುತ್ತಿರಿ ಎಂದು ಹೇಳಿ, ಬಿದಿರಿನ ಒಂದು ಗಂಟೆಯನ್ನು ಮೆಳೆಗೆ ಕಟ್ಟಿ ಕಟಕಟ ಶಬ್ದಮಾಡುವ ವ್ಯವಸ್ಥೆ ಮಾಡಿ ಮನೆಗೆ ಬಂದನು. ಆ ಶಬ್ದ ಕೇಳುತ್ತ ಮಾವ ಇಲ್ಲೇ ಇದ್ದಾನೆಂದು ಪಾಪದ ಮಕ್ಕಳು ಆಡಿಕೊಂಡಿದ್ದವು. ರಾತ್ರಿಯಾಯಿತು. ಮಾವ ಕಾಣಲಿಲ್ಲ. ಮಕ್ಕಳು ಆತಂಕಗೊಂಡು ಅಳತೊಡಗಿದವು. ಅವರ ಅಳು ಸಂಜೆಯ ಸಂಚಾರ ಹೊರಟಿದ್ದ ಶಿವಪಾರ್ವತಿಯರ ಕಿವಿಗೆ ಬಿದ್ದು, ಅವರು ಕೆಳಗಿಳಿದು ಬಂದರು. ‘ಮಕ್ಕಳೆ ನಿಮ್ಮ ಮಾವ ನಿಮ್ಮನ್ನು ತೊರೆದುಹೋಗಿದ್ದಾನೆ, ಹೆದರಬೇಡಿ. ಇದೇ ಕಾಡಿನಲ್ಲಿ ಎರಡು ದೊಡ್ಡಹಕ್ಕಿಗಳಾಗಿ ಬದುಕಿಕೊಂಡಿರಿ ಎಂದು ಹರಸಿದರು. ಮಕ್ಕಳು ನವಿಲುಗಳಾಗಿ ರೂಪಾಂತರಗೊಂಡು ಬೆಳೆಯುತ್ತ ಪ್ರಾಯಕ್ಕೆ ಬಂದವು. ಅವಕ್ಕೆ ಒಂದುದಿನ ಪರಸ್ಪರ ನೊಡುತ್ತ ಕಾಮನೆ ಹುಟ್ಟಿತು. ಆದರೆ ಅಣ್ಣತಂಗಿಯರಾಗಿ ಕೂಡುವಂತಿಲ್ಲ. ಆಗ ಗಂಡ್ನವಿಲು ಕೇಕೆ ಹಾಕುತ್ತ ನೆಲದ ಮೇಲೆ ಕಣ್ಣೀರನ್ನು ಸುರಿಸಿತು. ಹೆಣ್ನವಿಲು ಅದನ್ನು ಹೆಕ್ಕಿತಿಂದು ಗರ್ಭ ಧರಿಸಿತು.

ಜನಪದರ ಪ್ರಕಾರ ಹುಂಜ ಹೇಂಟೆಯನ್ನು ಮೆಟ್ಟುವ ಹಾಗೆ ನವಿಲುಗಳು ಕೂಡುವುದಿಲ್ಲವಂತೆ.  ತಮ್ಮನ್ನು ಬಿಟ್ಟುಹೋದ ಮಾವನನ್ನು ಹುಡುಕುತ್ತ ಈಗಲೂ ಅವು ‘ಮ್ಯಾಂವ್ಞೋ ಎಂದು ಕೂಗುತ್ತಿವೆಯಂತೆ.

ಪಕ್ಷಿಗಳ ಕತೆಗಳಲ್ಲಿ ಸಾಮಾನ್ಯವಾಗಿ ಕುಟುಂಬದ ಇಬ್ಬರು ಸದಸ್ಯರ ಸಂಬಂಧಗಳಿರುತ್ತವೆ. ಅವು ಹೆಚ್ಚಾಗಿ ಅಣ್ಣತಂಗಿಯರ ಸಂಬಂಧಗಳೇ ಆಗಿರುತ್ತವೆ. ಮಾಸ್ತಿಯವರು ಇದ ಕಂಡೊ ಏನೊ, ಇಂತಹ ಸಂಬಂಧವಿದ್ದ ಅಣ್ಣತಂಗಿಯರ ಕತೆಯನ್ನು ‘ಪಕ್ಷಿಜಾತಿ ಎಂದು ಹೆಸರುಕೊಟ್ಟು ಬರೆದರು. ಲಂಕೇಶರ ಅನೇಕ ಕತೆ ಮತ್ತು ಕವಿತೆಗಳಲ್ಲಿ ಈ ಸೋದರ-ಸೋದರಿ ಸಂಬಂಧದ ಜಟಿಲ ಸೆಳೆತಗಳಿವೆ. ಗಿರೀಶ್ ಕಾರ್ನಾಡರ ನಾಟಕ ‘ಅಂಜುಮಲ್ಲಿಗೆ ಇಂತಹ ಸಂಬಂಧವನ್ನು ಆಧರಿಸಿಹುಟ್ಟಿದೆ.

ನಮ್ಮ ತರೀಕೆರೆ ಸೀಮೆಯಲ್ಲಿ ಟಿಟ್ಟಿಭದ ಬಗ್ಗೆ ಇಂತಹುದೇ  ಕತೆಯಿದೆ. ಇದ್ದೊಬ್ಬ ಸೋದರರನ್ನು ತಂಗಿ ಬಹಳ ಹಚ್ಚಿಕೊಂಡಿದ್ದಳಂತೆ. ಅವನು ಮನೆಗೆ ಬಂದಾಗಲೆಲ್ಲ ಅವನಿಗಿಷ್ಟವಾದ ಖೀರನ್ನು ಮಾಡಿ ಬಡಿಸುತ್ತಿದ್ದಳಂತೆ. ಒಮ್ಮೆ ಬಹಳ ದಿನಗಳಾದರೂ ಅಣ್ಣ ಬರಲಿಲ್ಲ. ಆಕೆ ಖೀರು ಮಾಡಿಕೊಂಡು ಅಣ್ಣನನ್ನು ನೋಡಲು ಹೋದಳು. ‘ನಿನ್ನಣ್ಣ ಮನೆಬಿಟ್ಟು ಹೋದವನು ವರ್ಷಗಳಾದರೂ ಬಂದಿಲ್ಲವೆಂದು ಅತ್ತಿಗೆ ಹೇಳಿದಳು. ವಾಸ್ತವದಲ್ಲಿ ಆಕೆ ಪ್ರಿಯತಮನ ಜತೆ ಸೇರಿ ಗಂಡನನ್ನು ಕೊಂದುಬಿಟ್ಟಿದ್ದಳು. ನಿರಾಶೆಯಿಂದ ತಂಗಿ ಟಿಟ್ಟಿಭವಾಗಿ ರೂಪುತಳೆದು ಪಾಯಸದ ಬಟ್ಟಲನ್ನು ಹಿಡಿದುಕೊಂಡು ಭೈಖೀ..ರ್ (ಅಣ್ಣಾ ಖೀರು) ಎಂದು ಈಗಲೂ ಹಲುಬುತ್ತಿದ್ದಾಳಂತೆ.

ಇಂತಹ ಕತೆಗಳು ಜಗತ್ತಿನ ಎಲ್ಲ ಜನಪದರಲ್ಲೂ ಇದ್ದಂತಿವೆ. ಮಾತೃಪ್ರಧಾನ ಸಂಸ್ಕೃತಿಯಿದ್ದ ಕೇರಳ ಹಾಗೂ ಕರ್ನಾಟಕದ ಕರಾವಳಿ ಜಾನಪದಲ್ಲಿ ವಿಶೇಷವಾಗಿವೆ. ತಾಯೆಜಮಾನಿಕೆ ಇರುವ ಖಾಸಿಬುಡಕಟ್ಟಲ್ಲೂ ಇವನ್ನು ನಾನು ಓದಿರುವೆ. ಬಿಳಿಗಿರಿ ರಂಗನಬೆಟ್ಟದ ಜೇನುಕುರುಬರಲ್ಲಿ ಬ್ರೈನ್‌ಫಿವರ್ ಹಕ್ಕಿ ಕೂಗುವ ಬಗ್ಗೆಯಿರುವ ಒಂದು ಕತೆ ಸ್ವಾರಸ್ಯಕರವಾಗಿದೆ. ಒಬ್ಬಾಕೆ ತನ್ನ ಗಂಡನೆಲ್ಲೊ ಹೊರಗೆ ಹೋಗಿದ್ದಾಗ, ತಾನು ಗುಪ್ತವಾಗಿ ಪ್ರೀತಿಸುತ್ತಿದ್ದ ಸೋದರಮಾವನನ್ನು ಕೂಡುತ್ತಾಳೆ. ಇದನ್ನು ಹಕ್ಕಿಯೊಂದು ನೋಡಿಬಿಡುತ್ತದೆ. ಅವಳ ಗಂಡ ಬಂದಾಗ ‘ಮಾವ್‌ಕೇದಾ… ಎಂದು ಚಾಡಿಹೇಳುತ್ತದೆ. ಅಂದಿನಿಂದಲೂ ಅದು ಅದನ್ನೇ ಕೂಗುತ್ತ ತಿರುಗುತ್ತಿದೆಯಂತೆ. ಆಫ್ರಿಕನ್ ಜಾನಪದವಂತೂ ಇಂತಹ ಕತೆಗಳಿಂದ ತುಂಬಿಹೋಗಿದೆ. ಈ ಕತೆಗಳನ್ನು ಈಚೆಗೆ ತೀರಿಕೊಂಡ ಚಿನುವಾ ಅಚಿಬೆ ಅದ್ಭುತವಾಗಿ ಬಳಸಿಕೊಂಡು ಕಾದಂಬರಿ ಬರೆದರು.

ಪಕ್ಷಿವಿಜ್ಞಾನದ ಪ್ರಕಾರ, ಪಕ್ಷಿಗಳ ಕೂಗಿಗೆ ಆಹಾರ ಹುಡುಕುವ, ಅಪಾಯ ಸೂಚಿಸುವ ಹಾಗೂ ಕಾಮಭಾವವನ್ನು ಪ್ರಕಟಿಸುವ ಪ್ರವೃತ್ತಿ ಸಂಬಂಧದ ಅರ್ಥಗಳಿವೆ. ಆದರೆ ಅವಕ್ಕೆ ಮಾನವ ಸಮಾಜವು ತನ್ನದೇ ಕಾಲ್ಪನಿಕ ಸೃಜನಶೀಲ ಅರ್ಥಕೊಟ್ಟು ಕತೆ ಕಟ್ಟಿದೆ. ವ್ಯಂಗ್ಯವೆಂದರೆ, ಈ ಕತೆಗಳಲ್ಲಿ ಪ್ರತಿಫಲಿತವಾಗುತ್ತಿರುವುದು ದಿಟವಾಗಿಯೂ ಪಕ್ಷಿಲೋಕದ ಬಿಕ್ಕಟ್ಟುಗಳಲ್ಲ. ಮಾನವ ಸಮಾಜದ ಸಂಘರ್ಷ ಬಯಕೆ ತಲ್ಲಣಗಳೇ. ಮಾನವ ಸಮಾಜದ ಸುಪ್ತ ಭಾವನೆಗಳೇ.

ಹೆಚ್ಚಿನ ಕತೆಗಳಲ್ಲಿ ಕಾಣುವುದು ಮೋಸಕ್ಕೆ ಒಳಗಾದವರ ತಲ್ಲಣ. ಕುಟುಂಬದ ಸಂಬಂಧಗಳಲ್ಲಿ ಹುಟ್ಟಿರುವ ಬಿರುಕು ಮತ್ತು ದುರಂತ; ಲೈಂಗಿಕ ಸಂಬಂಧಗಳಿಂದ ಸಂಭವಿಸಿರುವ ಬಿಕ್ಕಟ್ಟು. ಪಕ್ಷಿವೀಕ್ಷಕ ಮಿತ್ರರಾದ ಶ್ರೀ.ತಿಮ್ಮಾಪುರ ಅವರು ಇಂತಹ ಹತ್ತಾರು ಕತೆಗಳನ್ನು ನನ್ನಲ್ಲಿ ಹಂಚಿಕೊಳ್ಳುವುದುಂಟು.  ಅವುಗಳಲ್ಲಿ ಕಿತ್ತೂರು ಸೀಮೆಯ ಜನ ಕೌಜುಗ ಹಕ್ಕಿಯ ದನಿಯನ್ನು ‘ನತ್ತ್ ಕೊಡೊ ಪತ್ತಾರ ಎಂದು ಅನುವಾದಿಸಿಕೊಂಡಿರುವುದೂ ಒಂದು. ಪ್ರಸಂಗದ  ಹಿನ್ನೆಲೆಯೆಂದರೆ- ಒಬ್ಬ ತಾಯಿ ತನ್ನ ಮಗಳಿಗೆ ಮೂಗಿನ ನತ್ತನ್ನು ಮಾಡಿಸಲು ಹಾಕಿರುತ್ತಾಳೆ. ಎಷ್ಟು ದಿನವಾದರೂ ಪತ್ತಾರನು ಅದನ್ನು ಮಾಡಿಕೊಡುವುದಿಲ್ಲ. ಮಗಳು ಮುನಿಸಿಕೊಂಡು ಹೋಗಿಬಿಡುತಾಳೆ. ಅಂದಿನಿಂದಲೂ ತಾಯಿ ಹಕ್ಕಿಯಾಗಿ ನತ್ತ  ಕೊಡುವಂತೆ ಕಾಡುತ್ತಿದ್ದಾಳೆ. ಇದೇ ಕತೆಗೆ ತನ್ನ ಮಗ ನೆತ್ತಿಸುಡುವ ಹೊತ್ತಾದರೂ ಊಟಕ್ಕೆ ಬಾರದ ಕಾರಣ ತಾಯಿ ‘ನೆತ್ತಿಸುಡ್ತದ ಬಾರೊ ಶಂಕರ ಎಂದು ಕರೆಯುತ್ತಿದ್ದಾಳೆ ಎಂಬ ಪಾಠವೂ ಇದೆ.

ಹಕ್ಕಿಗಳ ಕೂಗು ಮಾನವ ಸಮಾಜಕ್ಕೆ ಸಂತೋಷಕ್ಕೂ ಆತಂಕಕ್ಕೂ ಕಾರಣವಾಗಿವೆ. ಮಿಂಚುಳ್ಳಿಯ ಶಬ್ದವು ಮೃತ್ಯುಸೂಚಕವೆಂಬ ನಂಬಿಕೆ ಮಲೆನಾಡಲ್ಲಿದೆ. ಕುವೆಂಪು ತಮ್ಮದೊಂದು ಕವಿತೆಯಲ್ಲಿ  “ನಿನ್ನುಲಿಯ ಕೇಳಿದ ಹಳ್ಳಿಗರು, ನೆಂಟರ ಸಾವನೆ ಸಾರುವುದೆಂದು ಮನದಲಿ ತಲ್ಲಣಗೊಳ್ಳುವರು, ತರಳೆಯರಾದರೊ ಬಿಸುಸುಯ್ಯುತ ತಿರುಗಲು ಹೋಗಿಹ ಗಂಡರ ನೆನೆದು ಸುಮ್ಮನೆ ನಿನ್ನನು ಶಪಿಸುವರು ಎಂದು ಉಲ್ಲೇಖಿಸುವರು. ಜೋಗಿಗಳು ಶಕುನದ ಹಕ್ಕಿಗಳ ದನಿಯನ್ನು ಅನುವಾದಿಸಿ ಜಾವದಲ್ಲಿ ಭವಿಷ್ಯ ಹೇಳುವ ಪದ್ಧತಿ ಉತ್ತರ ಕರ್ನಾಟಕದಲ್ಲಿದೆ.   ಸಾಮಾನ್ಯವಾಗಿ ಈ ಭವಿಷ್ಯ ದುರಂತವನ್ನೇ ಕುರಿತಾಗಿರುತ್ತಿದ್ದರಿಂದ ಜನ ಎದೆಬಿಗಿಹಿಡಿದು ಇದನ್ನು ಕೇಳುತ್ತಿದ್ದರು. ಈ ಜನಪದ ನಂಬಿಕೆಯ ಹಿನ್ನೆಲೆಯಲ್ಲೇ ಬೇಂದ್ರೆ ‘ಶುಭನುಡಿಯೇ ಶಕುನದ ಹಕ್ಕಿ ಎಂದು ಕೋರಬೇಕಾಯಿತು. ಕುವೆಂಪು ಹಕ್ಕಿಯ ಸಹಜ ದನಿಯನ್ನು ಅಪವ್ಯಾಖ್ಯಾನ ಮಾಡಿರುವ ಜನಪದ ನಂಬಿಕೆಯನ್ನು ವೈಚಾರಿಕವಾಗಿ ಟೀಕಿಸಿದರೆ, ಬೇಂದ್ರೆಯವರು ಅದನ್ನೊಂದು ರೂಪಕವಾಗಿ ಬಳಸಿಕೊಂಡು ಹೊಸದನಿಯನ್ನು ಹೊರಡಿಸುತ್ತಾರೆ.

ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಅತಿಹೆಚ್ಚು ಕವನ ಬರೆದವರಲ್ಲಿ ಕುವೆಂಪು ಒಬ್ಬರು. ತೇನೆ, ಕೋಗಿಲೆ, ಕಾಜಾಣ, ಗೂಬೆ, ಮೀಂಚುಳ್ಳಿ, ಚೋರೆ, ಪೊಂಗುಳಿ, ಕ್ರೌಂಚ, ನವಿಲು ಕುರಿತಂತೆ ಅವರ ಕವನಗಳಿವೆ. ಅವರಲ್ಲಿ ಹಕ್ಕಿಯೊಂದು ರೂಪಕ; ಅದು ವೇದಕಾಲದ ದಾರ್ಶನಿಕ ಋಷಿಯ ಅಥವಾ ಅಲೌಕಿಕ ವಾಣಿಯ ಸಂಕೇತ; ಮಾನವರ ಕ್ಷುದ್ರಜಗತ್ತನ್ನು ವಿಡಂಬಡಿಸುವ ನಿಸರ್ಗದ ವಿವೇಕದ ಕುರುಹು. ನೆಲಬಿಟ್ಟು ಮೇಲೆಹಾರುವ, ತನ್ನ ಪಾಡಿಗೆ ತಾನು ಹಾಡುವ ಅದು ಕವಿಸಹಜವಾದ ಸ್ವಾತಂತ್ರ್ಯದ ಪ್ರತೀಕ. ಅವರದೊಂದು ಕವಿತೆಯಲ್ಲಿ ಹಕ್ಕಿಯೊಂದು ವಿಶ್ವವಿದ್ಯಾಲಯದ ಕುಲಪತಿಯಾಗಿ ಸಹಿಮಾಡುತ್ತ ಹಕ್ಕಿಹಾಡನ್ನು ಕೇಳುವುದಕ್ಕೂ ಪುರುಸೊತ್ತಿಲ್ಲದಂತಾಗಿರುವ ಕವಿಯನ್ನು ಅಣಕಿಸುತ್ತದೆ. ಇನ್ನೊಂದು ಕವಿತೆಯಲ್ಲಿ ರಶ್ಯನ್ ಸಮಾಜವಾದಿ ವ್ಯವಸ್ಥೆ, ತನ್ನ ಆದರ್ಶ ಸಾಧನೆಯ ಭರದಲ್ಲಿ ಯಾಂತ್ರಿಕವಾಗಿದ್ದು, ಸಹಜಸೂಕ್ಷ್ಮವನ್ನು ಕಳೆದುಕೊಂಡಿರುವುದನ್ನು ಕೋಗಿಲೆಯೊಂದು ಕವಿಯ ಜತೆಗಿನ ಮಾತುಕತೆಯಲ್ಲಿ ವಿಡಂಬಿಸುತ್ತದೆ. ಬೇಂದ್ರೆಯವರ ‘ಜೋಗಿ ಕವನದಲ್ಲಿ ವ್ಯಕ್ತಿಯೊಬ್ಬನನ್ನು ಕೋಗಿಲೆಯೊಂದು ಲೌಕಿಕ ಬಂಧನವನ್ನು ತೊರೆದುಬರಲು ಆಧ್ಯಾತ್ಮಿಕ ಕರೆಗೊಡುವಂತೆ ಹಾಡುತ್ತದೆ. ನಿಜಗುಣ ಶಿವಯೋಗಿಯವರ ತತ್ವಪದವೊಂದರಲ್ಲಿ ಕೂಡ ಕೋಗಿಲೆಯ ದನಿಯು ಅಲೌಕಿಕ ಕರೆಯ ಸಂಕೇತವಾಗಿದೆ.

ನಿಸರ್ಗದ ಜತೆ ಸಂಘರ್ಷ ಮಾಡುತ್ತ ಬೆಳೆದ ಮಾನರು ತಮ್ಮದೇ ಆದ ಭಾಷೆ ಹುಟ್ಟಿಸಿಕೊಂಡರು. ಮುಂದೆ ಪಕ್ಷಿಪ್ರಾಣಿಗಳ ಭಾಷೆಯನ್ನು ಅನುಕರಿಸುತ್ತ, ಅದನ್ನು ಅರ್ಥೈಸಲು ಯತ್ನಿಸಿದರು. ಕಾಡುಪಕ್ಷಿ ಸಾಕುಪಕ್ಷಿಯಾದಾಗ ಅದರ ಭಾಷೆಯನ್ನು ಅನುವಾದ ಮಾಡಿಕೊಳ್ಳಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆದರು. ಕೋಳಿ ಸಾಕಿದವರಿಗೆ ಅದು ಬೆದೆಗೆ ಬಂದಾಗ, ಅಪಾಯ ಕಂಡಾಗ, ಮರಿಗಳಿಗೆ ಆಹಾರ ತೋರಿಸಲು, ಮೊಟ್ಟೆಗೆ ಬಂದಾಗ, ಕಾವುಕೂತಾಗ ಬಗೆಬಗೆಯಲ್ಲಿ ಸದ್ದುಮಾಡುವುದು ಚೆನ್ನಾಗಿ ತಿಳಿಯುತ್ತದೆ. ಆದರೂ ಬಹುತೇಕ ಪಕ್ಷಿಗಳ ಭಾಷೆಯನ್ನು ಅನುವಾದಿಸುವುದು ಮನುಷ್ಯರಿಗೆ ಸಾಧ್ಯವಾಗಲಿಲ್ಲ. ಆಗ ಹಕ್ಕಿಭಾಷೆಯ ಅರಿಯಬಲ್ಲ ವಿಶಿಷ್ಟ ವ್ಯಕ್ತಿಗಳನ್ನು ಅವರು ಕಲ್ಪಿಸಿಕೊಂಡರು. ಜ್ಯೂಯಿಶ್ ಕ್ರೈಸ್ತ ಇಸ್ಲಾಮಿ ಪುರಾಣಗಳ ಪ್ರಕಾರ ದಾವೂದನ ಮಗ ಸಾಲೊಮನ್‌ಗೆ ದೇವರು ಹಕ್ಕಿಭಾಷೆ ಅರಿಯುವ ಶಕ್ತಿ ಕೊಟ್ಟಿದ್ದನು. ಗ್ರೀಕರ ದೇವತೆ ಅಥೀನಾಗೂ ಈ ವಿಶಿಷ್ಟ ಜ್ಞಾನವಿತ್ತು.

ವಾಸ್ತವವಾಗಿ ಈ ದೇವತೆಗಳ ಸೃಷ್ಟಿಯು ಪಕ್ಷಿಭಾಷೆಯನ್ನು ಅನುವಾದಿಸಲಾಗದ ಸೋಲಿನಿಂದ ಹುಟ್ಟಿದ ಕಲ್ಪನೆಗಳು. ಆದರೆ ಈ ಕಾಲ್ಪನಿಕ ಕತೆಗಳಲ್ಲಿ ಮಾನವರ ಸೃಜನಶೀಲತೆಯ ಗೆಲುವೂ ಇದೆ. ಈ ಗೆಲುವಿನ ಒಂದು ಮಾದರಿಯೆಂದರೆ ಪ್ರಾಣಿ, ಹಕ್ಕಿಗಳು ಮನುಷ್ಯರ ಜತೆ ಮಾತನಾಡುವಂತೆ ಕಲ್ಪಿಸಿಕೊಂಡ ಕತೆಗಳು. ಪಂಚತಂತ್ರದ ಕತೆಗಳಲ್ಲಿ ಹಕ್ಕಿಗಳು ಮಾತಾಡುತ್ತವೆ. ಸೂಫಿ ಕತೆಗಳಲ್ಲಿ ಹಕ್ಕಿಗಳು ನಿಗೂಢ ಸತ್ಯವನ್ನು ಹೇಳುವ ಆನುಭಾವಿಕ ಗುರುವಿನ ರೂಪಕಗಳು. ಭಾರತದ ಹಕ್ಕಿ ಎಂಬ ಒಂದು ಸೂಫಿಕತೆಯಲ್ಲಿ ಬಾಗ್ದಾದಿನ ಒಬ್ಬ ವ್ಯಾಪಾರಿ ಭಾರತದಿಂದ ಒಂದು ಹಕ್ಕಿಯನ್ನು ಕೊಂಡುಹೋಗಿ ಪಂಜರದಲ್ಲಿಟ್ಟು ಸಾಕುತ್ತಿರುತ್ತಾನೆ. ಅವನು ಭಾರತಕ್ಕೆ ಹೋಗುವ ಪ್ರಸಂಗ ಬಂದಾಗ, ನಿನ್ನ ಬಂಧುಗಳಿಗೆ ಏನಾದರೂ ಸಂದೇಶವಿದ್ದರೆ ಕೊಡು ತಲುಪಿಸುವೆ ಎಂದು ಕೇಳುತ್ತಾನೆ. ಹಕ್ಕಿ ತನ್ನ ಬಂಧನದ ಅವಸ್ಥೆಯನ್ನು ಹೇಳಿಕೊಳ್ಳುತ್ತದೆ. ಅವನು ಭಾರತದ ಹೋದಾಗ ಅಲ್ಲಿನ ಹಕ್ಕಿಗಳಿಗೆ ವಿವರಿಸುತ್ತಾನೆ. ಕೂಡಲೇ ಅವು ಮರದಿಂದ ತಪತಪನೆ ಕೆಳಕ್ಕೆ ಬೀಳುತ್ತವೆ. ವ್ಯಾಪಾರಿಯು ಮರಳಿ ಬಂದು ಇದನ್ನು ತನ್ನ ಮನೆಹಕ್ಕಿಗೆ ವರದಿ ಮಾಡುತ್ತಾನೆ. ಕೂಡಲೇ ಆ ಹಕ್ಕಿಯೂ ಪಂಜರದೊಳಗೆ ಕುಸಿದುಬೀಳುತ್ತದೆ. ವ್ಯಾಪಾರಿಯು ಹಕ್ಕಿ ಶೋಕದಿಂದ ಸತ್ತುಹೋಯಿತು ಎಂದು ಬಾಗಿಲು ತೆಗೆದೊಡನೆ ಅದು ಪುರ್ರನೆ ಆಗಸಕ್ಕೆ ನೆಗೆದು ‘ನನ್ನ ಬಂಧುಗಳು ನನಗೆ ಕಳಿಸಿದ ಸಂದೇಶವಿದೇ  ಎಂದು ಹಾರಿಹೋಗುತ್ತದೆ.

ಸ್ವಾತಂತ್ರ್ಯದ ಸಂಕೇತವೆಂದು ತಾವೇ ಭಾವಿಸಿದ ಹಕ್ಕಿಯನ್ನು ಮನುಷ್ಯರು ಪಂಜರದೊಳಗೆ ಬಂಧಿಸಿಡುತ್ತಾರೆ; ಹೀಗೆ ಬಂಧಿಸಿಟ್ಟ ಹಕ್ಕಿಗಳನ್ನು ತಾವೇ ಆಗಸಕ್ಕೆ ಹಾರಿಸಿ ಸ್ವಾತಂತ್ರ್ಯದ ಭಾವವನ್ನು ಪ್ರಕಟಿಸುತ್ತಾರೆ. ಇದೊಂದು ವ್ಯಂಗ್ಯ. ಮಾನವರು ತಮ್ಮ ಭಾಷೆಯನ್ನು  ಗಿಳಿಯಂತಹ ಹಕ್ಕಿಗಳಿಗೆ ಕಲಿಸಿರಬಹುದು; ಅವುಗಳ ದನಿಯನ್ನು ಅನುಕರಿಸಿ ಕರೆದು ಮೋಸದ ಬೇಟೆಯಾಡುತ್ತಿರಬಹುದು; ಅವುಗಳ ಭಾಷೆಯನ್ನು ಅರಿಯಲಾಗದೆ ಕತೆ ಕಟ್ಟಿರಲೂಬಹುದು. ಆದರೆ ತಾವಾಡುವ ಭಾಷೆಯನ್ನು ಹಕ್ಕಿಗಳು ಹೇಗೆ ಅನುವಾದ ಮಾಡಿಕೊಂಡಿರಬಹುದು ಎಂಬ ರಹಸ್ಯವನ್ನು ಮಾತ್ರ ಅರಿಯಲು ಅವರಿಗೆ ಸಾಧ್ಯವಾದಂತಿಲ್ಲ. ಈ ಸೋಲೇ ಅವರ ಕತೆಕಟ್ಟುವ ಸೃಜನಶೀಲತೆಯನ್ನು ಕೆರಳಿಸಿರಬಹುದು.