ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳ ಅಮ್ಮಂದಿರು, ಅಕ್ಕಂದಿರು ಹೀಗಾದಾರು ಎಂದು ನಾವು ಯಾರಾದರು ಕನಸು ಕಂಡಿದ್ದೆವೆ! ಖಂಡಿತಾ ಇಲ್ಲ. ಮನೆ ನಡೆಸಿಕೊಂಡು, ಮಕ್ಕಳನ್ನು ಸುಧಾರಿಸಿಕೊಂಡು ಹೋಗುತ್ತಿದ್ದ ಲಕ್ಷ್ಮಮ್ಮ, ತರಕಾರಿ ಬೆಳೆಸಿ, ಬುಟ್ಟಿಯಲ್ಲಿ ತುಂಬಿಕೊಂಡು ಹತ್ತಿರದ ಪೇಟೆಗೆ ಹೋಗಿ ಮಾರುತ್ತಿದ್ದ ಪುಟ್ಟತಾಯಮ್ಮ, ಕುಡಿದು ಬಂದ ಗಂಡನಿಂದ ದೊಣ್ಣೆಯಿಂದ ಹೊಡೆಸಿಕೊಳ್ಳುತ್ತಿದ್ದ ಮಾರಮ್ಮ… ಇವರೆಲ್ಲ ನಮ್ಮ ಗ್ರಾಮಗಳ ಕಷ್ಟಗಳಿಗೆ ಧ್ವನಿಯಾದಾರು ಎಂದು ಕಲ್ಪಿಸಿಕೊಂಡದ್ದೂ ಇಲ್ಲ. ನೇರವಾಗಿ ಜನರೇ ಮಾತಾಡುವ (ಪಾಲ್ಗೊಳ್ಳುವ), ಜನರೇ ನಿರ್ಣಯ ತೆಗೆದುಕೊಳ್ಳುವ ಗ್ರಾಮ ಪಂಚಾಯತಿ(ತಳ ಮಟ್ಟದ ಸರ್ಕಾರ)ಗಳಲ್ಲಿ ಇವರೆಲ್ಲ ಕೈ ಜೋಡಿಸಿದಾಗ, ನಮ್ಮ ಹಳ್ಳಿ ಹೆಣ್ಣುಮಕ್ಕಳಲ್ಲಿ ಸುಂದರ ಕನಸುಗಳು ಮೂಡುವುದು ಸಹಜವೆ ತಾನೆ!

ಪುಟ್ಟಮ್ಮ ಆಗ ಮದುವೆಯಾಗಿ ಗಂಡನ ಮನೆಗೆ ಬಂದ ಹೊಸತು. ಮನೆ ಕೆಲಸ ಸರಿ ಮಾಡಲಿಲ್ಲ. ಕಬ್ಬಿನ ಗದ್ದೆಗೊ, ರಾಗಿ ಹೊಲಕ್ಕೊ ಕೆಲಸಕ್ಕೆ ಹೋಗಿ ತಂದ ಕೂಲಿಯ ಹಣ ಉಳಿಸಿಕೊಂಡಿದ್ದಾಳೆ ಎಂದು ಒಂದು ಕಡೆಯಿಂದ ಅತ್ತೆಯ ವಟ-ವಟ, ಮತ್ತೊಂದು ಕಡೆಯಿಂದ ಬೆನ್ನು ಮೂಳೆ ಮುರಿಯಬೇಕು, ಹಾಗೆ ಬಡಿಯುತ್ತಿದ್ದ ಗಂಡ… ಈಗ? ಹಣ್ಣು-ಹಣ್ಣಾಗಿ ಮೂಲೆ ಹಿಡಿದ ಅತ್ತೆ, ಮೈ ರಕ್ತ- ಮಾಂಸ ಬತ್ತಿ, ರಟ್ಟೆ ಶಕ್ತಿ ಉಡುಗಿ, ಪುಟ್ಟಮ್ಮ ಹೇಳಿದ ಹಾಗೆ ಕೇಳುವ ಗಂಡ! ಹೀಗೆ ಒಂದೊಂದು ಸಲ ಯೋಚಿಸುತ್ತ ಕುಳಿತರೆ ಪುಟ್ಟಮ್ಮನಿಗೆ ತನ್ನ ಬದುಕಿನಲ್ಲಿ ಅಕಸ್ಮತ್ತಾಗಿ ಬಂದ ಈ ಬದಲಾವಣೆಗೆ ಸಂತೋಷ ಆದದ್ದೂ ಉಂಟು; ಹೆಮ್ಮೆ ಪಟ್ಟದ್ದೂ ಉಂಟು.

ಅದೊಂದು ಗ್ರಾಮಪಂಚಾಯಿತಿ, ಹೆಸರೇನು ಬೇಡ. ಈಗ ನಾನು ಹೇಳುತ್ತಿರುವ ಪುಟ್ಟಮ್ಮ ಅದರ ಅಧ್ಯಕ್ಷೆ. ಗ್ರಾಮ ಪಂಚಾಯತಿ ಸಭೆ ನಡೆಯುವಾಗ ಆ ಕುರ್ಚಿಯಲ್ಲಿ ಕುಳಿತು, ಸದಸ್ಯರೊಟ್ಟಿಗೆ ಪಂಚಾಯತಿಗಿರುವ ಅಧಿಕಾರದ ಮಿತಿಯಲ್ಲಿ ಹಳ್ಳಿಗಳ ಕಷ್ಟ-ಕೋಟಲೆಯನ್ನು ಚರ್ಚಿಸುವಾಗ ಅವಳು ವಹಿಸುವ ಕಾಳಜಿಯನ್ನ ನೋಡಬೇಕು. ಗ್ರಾಮಸ್ಥರ ಸಮಸ್ಯೆಗಳೆಲ್ಲ ನಮ್ಮದೇ.. ನಮ್ಮ ಸ್ವಂತ ಸಮಸ್ಯೆ, ಪರಿಹಾರ ಹುಡುಕಲೇಬೇಕು ಎನ್ನುವ ಹಟ. ಇದು ಅವಳಿಗೆ ಮಾತ್ರ ಅಲ್ಲ, ಪಂಚಾಯತಿಯ ಸದಸ್ಯರೆಲ್ಲರಿಗೂ ಇದೇ ಹಟ ಬರುವಂತೆ ಮಾಡಿದ್ದಾಳೆ. ಸಭೆಯಲ್ಲಿ ಕಡತ ಹಿಡಿದುಕೊಂಡು ಪಕ್ಕದಲ್ಲೆ ಕುಳಿತುಕೊಳ್ಳುವ ಕಾರ್ಯದರ್ಶಿಯೂ ಸದಸ್ಯರ ಮಾತಿಗೆ ಎರಡು ಮಾತಾಡುವ ಪ್ರಶ್ನೆಯೇ ಇಲ್ಲ. ಆ ಗ್ರಾಮ ಪಂಚಾಯತಿಯಲ್ಲಿ ಏಳು ಎಂಟು ವರ್ಷದ ಮಕ್ಕಳು ಮನೆಯಲ್ಲಿ ಕುಳಿತ್ತಿದ್ದರೆ ಕೇಳಿ! ಎಲ್ಲರೂ ಶಾಲೆಗೆ ಹೋಗಲೇ ಬೇಕು. ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆದಾಗ ಹಳ್ಳಿಯ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಲಸಿಕೆ ಹಾಕಿಸಲೇಬೇಕು. ಇದನ್ನೆಲ್ಲ ಅವರವರ ಹಳ್ಳಿಯ ಗ್ರಾಮ ಪಂಚಾಯತಿ ಸದಸ್ಯರು ನೋಡಿಕೊಳ್ಳಬೇಕು.

ಇಪ್ಪತ್ತು ವರ್ಷದ ಹಿಂದೆ ಸಾಕ್ಷರತಾ ಆಂದೋಲನ ಹಳ್ಳಿ ಬಾಗಿಲುಗಳನ್ನು ತಟ್ಟಿದಾಗ, ಅಕ್ಷರ ಕಲಿತವಳು ಪುಟ್ಟಮ್ಮ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿ ಬಂದು, ಮನೆ ಮಂದಿಗೆ ಮುದ್ದೆ ಕಟ್ಟಿ ಕೊಟ್ಟು, ಮನೆ ಹಿತ್ತಲಲ್ಲೆ ಕುಳಿತು ಓದಲು ಬರೆಯಲು ಕಲಿತಳು. ಹಣಕಾಸು ವಿಷಯ ತೆಗೆದುಕೊಂಡರೆ ಪುಟ್ಟಮ್ಮನ ಸಂಸಾರದಲ್ಲಿ ಬಹಳ ಏನು ಬದಲಾವಣೆ ಆಗಲಿಲ್ಲ. ಯಾಕೆಂದರೆ ದುಡಿಯುವ ಕೈ ಅವಳದ್ದು ಮಾತ್ರ. ಈಗಲೂ ಕಬ್ಬಿನ ಗದ್ದೆಯಲ್ಲಿ ಕೂಲಿ ಮಾಡುತ್ತಾಳೆ. ಆದರೆ ಅವಳ ಮಾತಿಗೊಂದು ಗೌರವವಿದೆ. ಆ ಗ್ರಾಮ ಪಂಚಾಯತಿ ತಮ್ಮ ಹಳ್ಳಿಗರದ್ದೆ  ಒಂದು ಪುಟ್ಟ ಸರ್ಕಾರ.. ಇದು ಪ್ರತಿ ಹಳ್ಳಿಗನ ಧ್ವನಿ ಆಲಿಸಬೇಕು ಎಂದು ಪುಟ್ಟಮ್ಮ ನಂಬಿದ್ದಾಳೆ. ಒಂದು ಮಾತು ಹೇಳಿಬಿಡುತ್ತೇನೆ. ಅವಳೇನು ರಾಜಕಾರಣಿಯಲ್ಲ. ಹೊರಗೆ ಹೋಗಿ ಎಷ್ಟು ನಿಷ್ಠೆಯಿಂದ ಕೂಲಿ ಮಾಡುತ್ತಾಳೊ ಅಷ್ಟೇ ನಿಷ್ಠೆಯಿಂದ ಗ್ರಾಮಪಂಚಾಯತಿಯನ್ನು ನಡೆಸಿಕೊಂಡು ಬರುತ್ತಾಳೆ.

ಪಂಚಾಯತಿ ಕೆಲಸದೊಟ್ಟಿಗೆ ಮನೆ ಸೊಸೆಗೆ ಅತ್ತೆ ಕಿರುಕುಳ ಕೊಟ್ಟರೆ, ಗಂಡ ಬಡಿದರೆ ಅಲ್ಲಿ ಪುಟ್ಟಮ್ಮ ಹಾಜರಾಗುತ್ತಾಳೆ. ಅವಳ ಧ್ವನಿ ಅಲ್ಲಿ ಗುಡುಗುತ್ತದೆ. ವರದಕ್ಷಿಣೆ ತೆಗೆದುಕೊಳ್ಳಬೇಡಿ.. ಯುವಕರಿಗೂ ಕಿವಿಮಾತು ಹೇಳುತ್ತಾಳೆ… ಹಳ್ಳಿ ಬದುಕು, ಕಷ್ಟ-ಕೋಟಲೆ ಸ್ವತಃ ಅನುಭವಿಸಿದ ಅವಳಿಗೆ.. ಹಳ್ಳಿಯೊಳಗೇ ಬೇರೆಯವರಿಗಾಗಿ ಕೆಲಸ ಮಾಡುವ ಪುಟ್ಟ ಅಧಿಕಾರ ಸಿಕ್ಕಿದಾಗ ಹಳ್ಳಿಗಳ ಸುಧಾರಣೆಯೊಂದಿಗೆ ತನ್ನ ಆಲೋಚನೆಯನ್ನೂ ಸುಧಾರಿಸಿಕೊಂಡವಳು ಪುಟ್ಟಮ್ಮ. ಇದಕ್ಕೂ ಛಲ ಇರಬೇಕಲ್ಲ!

ಹೊನ್ನಕ್ಕನ ಕತೆ ಹೀಗಾಗಲಿಲ್ಲ, ನೋಡಿ. ಬಯಲು ಪ್ರದೇಶದ ಈ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾದ್ದರಿಂದ ದಲಿತ ಮಹಿಳೆ ಹೊನ್ನಕ್ಕ ಅಧ್ಯಕ್ಷೆ ಆದಳು. ಅವಳಿಗೂ ಏನೆಲ್ಲ ಕೆಲಸ ಮಾಡಬೇಕು, ಜನರಿಗೆ ಒಳ್ಳೇದು ಮಾಡಬೇಕು ಎಂದೆಲ್ಲ ಆಸೆ. ಅವಳ ಗಂಡನಿಗೂ ಹೊನ್ನಕ್ಕ ಅಧ್ಯಕ್ಷೆಯಾಗಿ ಸಭೆ ನಡೆಸುತ್ತಾಳೆ ಎಂಬ ಹಿಗ್ಗು. ಅವಳ ಅಧ್ಯಕ್ಷತೆಯಲ್ಲಿ ನೆಟ್ಟಗೆ ಎರಡು ಸಭೆ ನಡೆಯಲಿಲ್ಲ. ಒಂದು ಸಭೆಯಲ್ಲಿ ಸ್ವಲ್ಪ ಮಾರಾಮಾರಿಯೇ ಆಯಿತು. ಹೊನ್ನಮ್ಮ ಅಧ್ಯಕ್ಷ ಸ್ಥಾನದಿಂದ ಮಾತು ಶುರು ಮಾಡಬೇಕು, ಸದಸ್ಯನೊಬ್ಬ ಅವಳಿಗೆ ಏಕ ವಚನ ಬಳಸಿ ಮಧ್ಯ ಮಾತನಾಡಿದ. ಏನೇ ಆಗಲಿ; ಇದು ಸಭೆ, ಅಧ್ಯಕ್ಷೆಗೆ ಸಲ್ಲುವ ಗೌರವ ಸಲ್ಲಬೇಕು. ಹೊನ್ನಕ್ಕ ಅವನ ಮಾತಿನ ರೀತಿಯನ್ನು ಆಕ್ಷೇಪಿಸಿದಳು. ಅವಳನ್ನು ಬೆಂಬಲಿಸುವವರ ಧ್ವನಿಗಳೂ ಅಲ್ಲಿ ಸೋತು ಹೋಗಿದ್ದವು. ಮತ್ತೊಂದು ಸಭೆಯಲ್ಲಿ ಅವಳ ವಿರುದ್ಧ ಅವಿಶ್ವಾಸ ನಿಲುವಳಿ ಮಂಡನೆಯ ಮಾತೂ ಕೇಳಿತು. ಇದರ ಸೂಕ್ಷ್ಮ ಹೊನ್ನಕ್ಕನಿಗೆ ಗೊತ್ತಾಗಿ ಹೋಗಿತ್ತು. ತನ್ನ ಬಂಧು-ಬಾಂಧವರಿಗೆ ಹೊಟೇಲಿನಲ್ಲಿ ಪ್ರತ್ಯೇಕ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವ ಈ ಸದಸ್ಯರು, ಇಲ್ಲಿ ತನ್ನನ್ನು ಅಧ್ಯಕ್ಷರ ಕುರ್ಚಿಯಲ್ಲಿ ನೋಡಲು ಬಯಸುತ್ತಿಲ್ಲ. ಅವಿಶ್ವಾಸ ನಿಲುವಳಿ ಮಂಡನೆ ಸಭೆಯಲ್ಲಿ ಮಂಡನೆ ಆಯಿತು. ಆ ಸಭೆಯಲ್ಲಿ ಹೀಗೇ ಆಗುತ್ತೆ ಎಂದು ಗೊತ್ತಿದ್ದರೂ ಹೊನ್ನಕ್ಕ ಹೋಗಿದ್ದಳು. ಸದಸ್ಯರ ಆಕ್ಷೇಪ, ಅವಹೇಳನಗಳನ್ನೂ ಆಲಿಸಿದಳು. ಅವಳ  ಪರವಾಗಿ ಎರಡು ಮತಗಳೂ ಬರಲಿಲ್ಲ. ಕೆಲಸ ಮಾಡುವ ಅವಕಾಶ ಕೊಡುವ ಮೊದಲೇ ಅವಕಾಶ ಕಿತ್ತುಕೊಂಡರು. ಈಗ ಆ ಕುರ್ಚಿಯಲ್ಲಿ ರಾಜಕೀಯ ಪಕ್ಷದ ಬೆಂಬಲವಿರುವ ಊರ ಮುಖಂಡರ ಸೊಸೆ ಇದ್ದಾಳೆ! ಪಂಚಾಯತಿಯ ಕಾರ್ಯದರ್ಶಿಯದೇ ಮೇಲುಗೈ ನಡೆಯುತ್ತಿದೆ.

ಹದಿನೈದು ವರ್ಷಗಳ ಹಿಂದೆ ಮಹದೇವಮ್ಮನಿಗೆ ಅವಳ ಪತಿ ಶರಣಪ್ಪ ಗ್ರಾಮಪಂಚಾಯತಿ ಚುನಾವಣೆಗೆ ನಿಲ್ಲಲು ಹೇಳಿದಾಗ ಗಾಬರಿಯಾಗಿತ್ತು. ಮನೆಯಿಂದ ಹೊರಗೇ ಹೋಗದ ಅವಳು, ಚುನಾವಣೆಗೆ ನಿಲ್ಲಲು ಒಪ್ಪಲಿಲ್ಲ. ಪತಿ ಗದರಿದಾಗ ಸುಮ್ಮನಾದಳು. ಚುನಾವಣೆಗೆ ನಿಂತರೆ ಸಾಕು, ಉಳಿದದ್ದು ತಾನು ನೋಡಿಕೊಳ್ಳುವುದಾಗಿ ಅವನು ಹೇಳಿದ. ಕೊನೆಗೂ ಮಹದೇವಮ್ಮ ಚುನಾವಣೆಗೆ ನಿಂತು ಗೆದ್ದದ್ದೂ ಆಯಿತು. ಅಧ್ಯಕ್ಷೆಯೂ ಆದಳು. ಮೊದಲ ಸಭೆ.. ಮಹದೇವಮ್ಮನಿಗೆ ಏನೋ ನಡುಕ. ಸದಸ್ಯರೆಲ್ಲರೂ ಬಂದಿದ್ದರು. ಸಭೆಗೆ ಸಿದ್ಧತೆ ನಡೆಯಿತು. ಒಂದು ಬದಿ ಕಾರ್ಯದರ್ಶಿ. ಮತ್ತೊಂದು ಬದಿ ಶರಣಪ್ಪ! ಸದಸ್ಯರು ಮುಖ-ಮುಖ ನೋಡಿಕೊಂಡರು. ಗ್ರಾಮ ಪಂಚಾಯತಿ ಸದಸ್ಯನಲ್ಲದವನು ಸಭೆಗೆ ಹಾಜರಾಗುವುದು ಹೇಗೆ? ಮೊದಲ ಎರಡು ಸಭೆಗಳಲ್ಲಿ ಹೆಸರಿಗೆ ಮಹದೇವಮ್ಮ ಅಧ್ಯಕ್ಷೆ, ಸಭೆ ನಡೆಸಿದ್ದೆಲ್ಲ ಶರಣಪ್ಪ. ಆರು ತಿಂಗಳು ಹೀಗೆ ನಡೆದಿರಬಹುದು. ಶರಣಪ್ಪನ ಯಜಮಾನಿಕೆ ಜಾಸ್ತಿಯಾಗಿ, ಮಹದೇವಮ್ಮ ಜೀವದ ಗೊಂಬೆಯಂತಾದಾಗ ಒಂದಿಬ್ಬರು ಸದಸ್ಯರು ಶರಣಪ್ಪ ಸಭೆಗೆ ಬರುವುದನ್ನು ಆಕ್ಷೇಪಿಸಿದರು. ಆಕ್ಷೇಪಿಸಿದ ಸದಸ್ಯರಿಗೆ ಬೆದರಿಕೆಗಳೂ ಬಂದವು. ಕೊನೆಗೂ ಇದು ಸುದ್ದಿಯಾದಾಗ ಶರಣಪ್ಪ ಸಭೆಯಿಂದ ಹೊರಗೆ ನಡೆಯಲೇಬೇಕಾಯಿತು.

ಮನೆಯೊಳಗೆ ತಲೆ ಬಗ್ಗಿಸುವುದಷ್ಟೇ ಗೊತ್ತಿದ್ದ ಮಹದೇವಮ್ಮನಿಗೆ ಸಭೆಯಲ್ಲಿಯೂ ಶರಣಪ್ಪ ಸದಸ್ಯರೆದುರು ಮೊದ್ದು ಎಂದು ತನ್ನನ್ನು ಕರೆದಾಗ ಕಣ್ಣು ತುಂಬಿತ್ತು. ಅವನು ಸಭೆಗೆ ತನ್ನೊಡನೆ ಬಂದು ಕುಳಿತುಕೊಳ್ಳುವುದು ಬೇಡವೆಂದು ಅನಿಸುತ್ತಿದ್ದರೂ ಹೇಳಲು ಹೆದರುತ್ತಿದ್ದಳು. ಈಗ ಸದಸ್ಯರೇ ಶರಣಪ್ಪನನ್ನು ಹೊರಗೆ ಕಳುಹಿಸಿದಾಗ ಅವಳು ಒಳಗೊಳಗೇ ಸಂತೋಷಪಟ್ಟಳು. ಸದಸ್ಯರ ನೆರವಿನಿಂದಲೇ ಗ್ರಾಮ ಪಂಚಾಯತಿ ಕೆಲಸ ನಿಭಾಯಿಸಿದಳು. ಮತ್ತೊಂದು ಚುನಾವಣೆಗೆ ಶರಣಪ್ಪ ಅವಳು ಸ್ಪರ್ಧಿಸುವುದು ಬೇಡವೆಂದು ಹೇಳಿದ. ಅವಳಿಗಾಗಲೇ ಕೆಲಸದ ಅನುಭವ ಚೆನ್ನಾಗಿ ಆಗಿತ್ತು. ಗಂಡನ ಮಾತು ಕೇಳಲಿಲ್ಲ. ಮನೆಯಲ್ಲಿ ರಾದ್ಧಾಂತವಾಯಿತು. ಶರಣಪ್ಪ ಅವಳಿಗೆ ದೊಣ್ಣೆಯಿಂದಲೇ ಬಾರಿಸಿದ. ಮತ್ತೂ ತನ್ನ ಮಾತು ಕೇಳದಿದ್ದರೆ, ಅವಳನ್ನು ಮನೆಯಿಂದ ಹೊರಗೆ ಹಾಕಿ ಮತ್ತೊಂದು ಮದುವೆ ಆಗುವುದಾಗಿ ಹೇಳಿದ. ಇಷ್ಟಕ್ಕೆ ಮಹದೇವಮ್ಮನ ಆಸೆ ಮುರುಟಿ ಹೋಯಿತು. ಹೊರಗಿನ ಬದುಕೊಂದಕ್ಕೆ ದಾರಿ ತೋರಿಸಿಕೊಟ್ಟಿದ್ದವನೂ ಅವನೇ. ಅದನ್ನು ಮುಚ್ಚಿದವನೂ ಅವನೇ. ಹಟ, ಧೈರ್ಯ ಇದ್ದಿದ್ದರೆ ಮಹದೇವಮ್ಮ ಇವನ್ನು ಮೆಟ್ಟಿ ನಿಲ್ಲಬಹುದಿತ್ತು. ಶರಣಪ್ಪನಿಗೆ ಮಾತ್ರ ಮಹದೇಮ್ಮನ ಸ್ವಂತಿಕೆ ಬೆಳೆಯುವುದು ಬೇಡವಾಗಿತ್ತು.

ಹೀಗೆ ಅಲ್ಲೊಂದು-ಇಲ್ಲೊಂದು ಸ್ತ್ರೀ ಧ್ವನಿ ಉಡುಗಿರುವುದು ಬಿಟ್ಟರೆ, ಹೆಚ್ಚಿನ ಹಳ್ಳಿಗಳಲ್ಲಿನ ಸಮಸ್ಯೆಗಳಿಗೆ ಸ್ತ್ರೀ ಧ್ವನಿ ಉತ್ತರ ಹುಡುಕಿವೆ, ಹುಡುಕುತ್ತಿವೆ.