ವರ್ಷಕ್ಕೊಮ್ಮೆ ಕರ್ನಾಟಕದಿಂದ ಇಬ್ಬರು ಕಲಾವಿದರು ಬರುತ್ತಾರೆ. ಸಿಡ್ನಿ ಕನ್ನಡ ಸಂಘ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಒಬ್ಬರು ಹಾಡುತ್ತಾರೆ, ಮತ್ತೊಬ್ಬರು ನಗೆ ಚಟಾಕಿಗಳನ್ನು ಹಾರಿಸುತ್ತಾರೆ. ಇದು ನಾಲ್ಕೈದು ವರ್ಷದಿಂದ ನಡೆದು ಬಂದ ಬಗೆ. ಹೋದ ವರ್ಷ ಮಾತ್ರ ಯಾರನ್ನೂ ಕರೆಸದೇ ನಮ್ಮಿಂದ ‘ಜೋಕುಮಾರಸ್ವಾಮಿ' ನಾಟಕ ಆಡಿಸಿದ್ದರು. ಈ ವರ್ಷ ಅದನ್ನು ಮರೆತೂ ಬಿಟ್ಟರು. ಈ ಬಾರಿ ಹಾಡಲು ಎಂ.ಡಿ.ಪಲ್ಲವಿ ಮತ್ತು ನಗೆಚಟಾಕಿಗೆ ‘ಗಂಗಾವತಿ ಬೀಚಿ' ಎಂದು ಕರೆಸಿಕೊಳ್ಳುವ ಪ್ರಾಣೇಶಾಚಾರ್ಯ ಬಂದಿದ್ದರು. ಮೊನ್ನೆ ಶನಿವಾರ ಸಂಜೆ ಅವರಿಬ್ಬರನ್ನು ಕೇಳಲು ಹೋಗಿ ಕೂತಾಗ ತುಂಬಾ ಉತ್ಸುಕತೆ ಇತ್ತು.
ಈ ವರ್ಷ ಸಿಡ್ನಿ ಕನ್ನಡ ಸಂಘದ ‘ರಜತ ಮಹೋತ್ಸವ' ಬೇರೆ ಆದ್ದರಿಂದ ಯಾರ್ಯಾರೋ ಲೋಕಲ್ ರಾಜಕಾರಣಿಗಳನ್ನೂ ಕರೆದಿದ್ದರು. ಅವರು ಬಂದು ಇಂಡಿಯಾದವರು ಮತ್ತು ಕನ್ನಡದವರು ಎಂತಹ ‘ಮೇಲ್ಮಟ್ಟದ ಪ್ರಜೆಗಳು' ಎಂದು ಮುಜುಗರ ಹುಟ್ಟುವಂತೆ ಹೊಗಳಿದರು. ನಮ್ಮವರು ಹೊಗಳಿಸಿಕೊಂಡ ಮಕ್ಕಳಂತೆ ಖುಷಿಯಿಂದ ಚಪ್ಪಾಳೆ ತಟ್ಟಿದರು. ರಂಗದ ಮೇಲೆ ಸೂಟುಬೂಟಿನಲ್ಲಿ, ಜರತಾರಿ ರೇಷ್ಮೆ ಸೀರೆಯಲ್ಲಿ ಹಲ್ಕಿರಿಯುತ್ತಾ ಅವರೊಡನೆ ಫೋಟೋ ತೆಗೆಸಿಕೊಂಡರು. ಇರಲಿ, ನಮ್ಮವರಿಗೆ ಬುದ್ಧಿ ಇರಬೇಕು ಅಷ್ಟೆ. ಅದೇ ಹೊತ್ತಿನಲ್ಲಿ ಅಲ್ಲಿಯ/ಇಲ್ಲಿಯ ರಾಜಕಾರಣಿಗಳ ಸಂದೇಶ ಹೊತ್ತ, ಜಾಹೀರಾತುಗಳಿಂದಲೇ ತುಂಬಿಕೊಂಡ, ಸಂಬಂಧವಿಲ್ಲದ ಒಂದೆರಡು ಇಂಗ್ಲಿಷ್ ಲೇಖನಗಳನ್ನೂ ಸೇರಿಸಿಕೊಂಡ "ಸ್ಮರಣ ಸಂಚಿಕೆ" ಬಿಡುಗಡೆಯಾಯಿತು. ಇವೆಲ್ಲಾ ನೋಡಿ ಸಿಡ್ನಿ ಕನ್ನಡ ಸಂಘ ಒಂದು ಸಾಂಸ್ಕೃತಿಕ ಕೂಟವೋ, ರಾಜಕೀಯ ಸಂಸ್ಥೆಯೋ ಎಂದು ಅನುಮಾನ ಹುಟ್ಟಿದರೆ ಆಶ್ಚರ್ಯಪಡಬೇಕಾಗಿಲ್ಲ.
ಇನ್ನು ಕರ್ನಾಟಕದ ಕಲಾಕಾರರನ್ನು ಕೇಳಲು ಬಾಯಿ ತೆರೆದು ಕೂತಿದ್ದ ನಮಗೆ ಸಿಕ್ಕಿದ್ದು - ಪ್ರಾಣೇಶಾಚಾರ್ಯರ ‘ಎಲ್ಲ ಕಡೆ ಹಾಸ್ಯ ಇರುತ್ತದೆ' ಮತ್ತು ‘ನೀವು ನಗಬೇಕು' ಎಂಬ ರೇಜಿಗೆಯಾಗುವ ಸೇಲ್ಸ್‌ಮನ್ ಹೇಳಿಕೆಗಳ ಜತೆಗೆ ಹಳಸಲು ಜೋಕುಗಳು. ಜೋಕುಗಳು ಯಾಕೆ ಹಳಸಲು ಅನಿಸುತ್ತವೆ ಎಂದು ಯೋಚಿಸಿದೆ. ಒಂದೇ ನಾಟಕವನ್ನು ಹತ್ತಾರು ಬಾರಿ ನೋಡಿದ್ದೇನೆ, ಕೆಲವು ನಾಟಕ ನೂರಾರು ಬಾರಿ ಆಡಿದ್ದೇವೆ. ಆದರೂ ಹಳಸಲು ಅನಿಸಿರಲಿಲ್ಲ. ಇಲ್ಲಿ ಯಾಕೆ ಹಾಗನಿಸಬೇಕು ಎಂದು ನನ್ನೊಳಗೇ ಒಂದು ಗುದ್ದಾಟವಾಯಿತು. ಈ ಹಿಂದೆ ಬಂದ ನಗೆಕಾರರನ್ನು ನೆನಪಿಸಿಕೊಂಡೆ. ಕೃಷ್ಟೇಗೌಡ, ಸುಧಾ ಬರಗೂರು ಇವರ ಬಗ್ಗೆಯೂ ಹೀಗೆಯೇ ಅನಿಸಿತ್ತು. ಆದರೆ, ಮಿಮಿಕ್ರಿ ದಯಾನಂದರ ನಗೆಸಂಜೆ ಮಾತ್ರ ಹಳಸಲು ಅನಿಸಿರಲಿಲ್ಲ - ಆ ಮುಂಚೆ ಅವರ ಅದೇ ಜೋಕುಗಳನ್ನು ಕೇಳಿದ್ದರೂ ಕೂಡ. ಅವರು ಬರೇ ನಗೆಚಟಾಕಿ ತುಂಬಿದ ಭಾಷಣ ಮಾಡುತ್ತಿರಲಿಲ್ಲ. ಅವರೊಬ್ಬ ಪರ್ಫಾಮರ್ ಆಗಿದ್ದರು. ಆದರೆ ಉಳಿದವರು ಜೋಕುಗಳನ್ನು ಬರೆದುಕೊಂಡು, ಅದನ್ನು ಚೆನ್ನಾಗಿ ನೆನಪಿಟ್ಟುಕೊಂಡು ಹೇಳುವಂತೆ ಅನಿಸುತ್ತಿತ್ತು. ಪ್ರತಿ ಸಲವೂ ಹೊಸ ಜೋಕುಗಳನ್ನು ಹೇಳಲು ಸಾಧ್ಯವಾಗುವುದಿಲ್ಲ ಎಂಬುದು ದಿಟ. ಆದರೆ ಜೋಕು ಹಳಸಾಗದಿರಲು, ಹೇಳಿದ ಪ್ರತಿ ಬಾರಿಯೂ ಹೊಸದೆನಿಸಲು ಅದರ ಸುತ್ತ ನಟನೆಯ ಚೌಕಟ್ಟು, ಕುಶಲತೆ ಬೇಕಾಗುತ್ತದೆ ಅನಿಸಿತು. ಅದರಿಂದಾಗಿಯೇ, ಹಳೆಯ ಜೋಕಿಗೆ ಹೊಸ ಆಯಾಮ, ಹೊದಿಕೆ ಹಾಗು ಫ್ರೆಶ್‌ನೆಸ್ ಬರುತ್ತದೆ ಅನಿಸಿತು. ಆಶ್ಚರ್ಯವೆಂದರೆ ಪ್ರಾಣೇಶಾಚಾರ್ಯರು ನನಗೆ ವಿಡಿಯೋದಲ್ಲಿ ಇಷ್ಟವಾಗಿದ್ದು ಅವರ ‘ಒಣತನ'ದ ಪರಿಯಿಂದಾಗಿ - ಡ್ರೈನೆಸ್‌ನಿಂದಾಗಿ. ಆದರೆ ಅದೂ ಕೂಡ ಇಲ್ಲಿ ಪರಿಣಾಮಕಾರಿ ಅನಿಸಲಿಲ್ಲವಲ್ಲ ಎಂದು ಚಿಂತಿಸಿದೆ. ನಗಲೇ ತಯಾರಾಗಿ ಬಂದ ಜನ ಮಾತ್ರ, ಅವರು ಬಾಯಿ ಬಿಡುವ ಮೊದಲೇ ಚಪ್ಪಾಳೆ ತಟ್ಟುತ್ತಾ ನಗಲು ಶುರು ಹಚ್ಚಿಕೊಂಡಿದ್ದರು!
ಇನ್ನು ಎಂ.ಡಿ.ಪಲ್ಲವಿಯ ಹಾಡುಗಾರಿಕೆಯ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ರಂಗದ ನಡುವೆ ಒಂದು ಮಂಚ ಮಾಡಿಕೊಂಡು, ಒಂದು ಲ್ಯಾಪ್‌ಟಾಪ್ ಮುಂದೆ ಕೂತು, ತಾನೇ ತನ್ನ ಸಂಗೀತ ಕೌಶಲ್ಯವನ್ನು ಎಂಜಾಯ್ ಮಾಡುತ್ತಾ ಹಾಡಿದರು. ಕನ್ನಡದ ಹಲವು ಗಣಪದಗಳನ್ನು ಅವಗಣಿಸಿ ಯಾವುದೋ ಸಂಸ್ಕೃತ ಗಣಪತಿ ಸ್ತುತಿಯಿಂದ ಶುರುಮಾಡಿದ್ದೇ ನನಗಂತೂ ಪಿಚ್ಚೆನಿಸಿತು. ಒಂದೆರಡು ಹಾಡುಗಳು ಏನೋ ಕಟ್ಟಿಕೊಡುತ್ತಿದ್ದಾವೆ ಅನಿಸಿದರೂ, ಬಲುಪಾಲು ಭಾವ ಮತ್ತು ಹಾಡಿನ ಸಾಲುಗಳು ಎಲ್ಲಿಗೂ ಸಲ್ಲದಂತೆ, ಎಲ್ಲಿಗೂ ಮುಟ್ಟದಂತೆ ಹಾಡಿದರು ಅನಿಸಿತು. ಕಿರಿಕಿರಿ ಆಗಿದ್ದು ಮಾತ್ರ - ಹಾಡುವ ಮುಂಚೆ ಹಾಡುಗಳನ್ನು ವಿವರಿಸುತ್ತಿದ್ದ ಪರಿ. ಅವರು ಹಾಡಿದ ಎಲ್ಲವೂ ‘ಅದ್ಭುತ' ಗೀತೆಗಳು. ಇಲ್ಲದಿದ್ದರೆ ‘ಅತ್ಯಂತ ಅದ್ಭುತ' ಗೀತೆಗಳು. ‘ಅಡಿಗರು ಒಬ್ಬ metaphysical poet' ‘ಅಡಿಗರು existentialism ಅನ್ನು ನಂಬಿದ್ದರು' ನರಸಿಂಹಸ್ವಾಮಿಯವರದು ‘free verse ಅಲ್ಲ - ಅಂದರೆ free verse prosaic ಆಗಿರುತ್ತಲ್ಲ ಹಾಗಲ್ಲ' ಹೀಗೆ ಅವರ ತಿಯರೈಸೇಷನ್ ನಡೆಯಿತು! ಹಾಡುಗಳಲ್ಲಿ ಮಾತ್ರ ಏನೂ ಸಿಕ್ಕದೆ, ಸಾಲು ಹಾಗು ಭಾವ ಎಲ್ಲೋ ಕಳೆದುಹೋದವು! ಕಣ್ಣು ಮುಚ್ಚಿ ನೇರವಾಗಿ ಸಾಲುಗಳ ಜತೆ ಇರೋಣವೆಂದರೂ ಪಲ್ಲವಿಯವರ ‘ಸಂಗೀತದ ಸರ್ಕಸ್' ತುಂಬಾ ತೊಂದರೆ ಕೊಡುತ್ತಿತ್ತು. ಒಂದು ಹಾಡನ್ನು ಕಟ್ಟುವುದೇ ಎಂತಹ ಕುಶಲತೆಯಲ್ಲವೇ. ಅದಿಲ್ಲಿ ಕಾಣುತ್ತಿಲ್ಲವಲ್ಲ ಅನಿಸಿತು.
ಯಾಕೆ ಹೀಗಾಗುತ್ತದೆ? ಉಪಪಾಟ/sub-text ಗಳ ಬಗ್ಗೆ ಮತ್ತೆ ಯೋಚಿಸುವಂತೆ ಆಯಿತು. ಇದು ಗೀತೆಯ ಸಾಹಿತ್ಯಕ್ಕಿರುವ ಉಪಪಾಟದ ಬಗ್ಗೆ ಅಲ್ಲ. ಅಥವಾ ಹಾಡಿಗೆ ಅಳವಡಿಸಿದ ಸಂಗೀತಕ್ಕೆ ಇರುವ ಉಪಪಾಟದ ಬಗ್ಗೆ ಅಲ್ಲ. ಅವೆಲ್ಲವನ್ನೂ ಮೀರಿ ಹಾಡುಗಾರಿಕೆಗೆ ಒಂದು ಉಪಪಾಟವಿರುತ್ತದಲ್ಲ ಅದರ ಬಗ್ಗೆ. ಅದು ಎಲ್ಲಿ ಕಾಣೆಯಾಯಿತು ಎಂಬುದು ಮುಖ್ಯ ಅನಿಸಿತು.
ಇದು ಬರೀ ಎಂ.ಡಿ.ಪಲ್ಲವಿಯವರಿಗೆ ಸಲ್ಲುವ ಮಾತಲ್ಲ ಅಂತಲೂ ಹೇಳಬಹುದೇನೋ. ನಮ್ಮ ಕನ್ನಡದ ಇಂದಿನ ಹಲವು ‘ಜನಪ್ರಿಯ' ಹಾಡುಗಾರರಿಗೂ ಸಲ್ಲುತ್ತದಲ್ಲ ಎಂದುಕೊಂಡು ಮನೆಗೆ ನಡುರಾತ್ರಿಯ ಹೊತ್ತಿಗೆ ಹಿಂತಿರುಗಿ ಮಲಗಿದಾಗ ತಟ್ಟನೆ ನಿದ್ದೆ ಹತ್ತಿತು.