ಶಿವನಸಮುದ್ರ ಒಂದರ್ಥದಲ್ಲಿ ಜಲಪಾತಗಳ ಊರು. ಭರದಿಂದ ಹರಿಯುವ ಭರಚುಕ್ಕಿ ಮತ್ತು ಗಗನದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತಗಳು ಇಲ್ಲೊಂದು ವಿಸ್ಮಯ ಲೋಕವನ್ನೇ ಸೃಷ್ಟಿಸಿವೆ. ಮುಂಗಾರಿನ ದಿನಗಳಲ್ಲಿ ಮೈ ತುಂಬಿ ಹರಿಯುವ ಕಾವೇರಿ ಇಲ್ಲಿ ಕವಲಾಗಿ ಜಿಗಿದು ಮತ್ತೆ ಒಂದಾಗಿ ಮುಂದೆ ಸಾಗುತ್ತಾಳೆ. ಇಂತಹದ್ದೊಂದು ಸೌಂದರ್ಯವನ್ನು ವೀಕ್ಷಿಸಲೆಂದೇ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಅಲ್ಲಿಗೆ ಹೋಗಿ ಬಂದ ಜಿತೇಂದ್ರ ಶಿವನಸಮುದ್ರದ ಎರಡು ಚುಕ್ಕಿಗಳ ಕುರಿತು ಇಲ್ಲಿ ಬರೆದಿದ್ದಾರೆ.
ಭರಚುಕ್ಕಿಗೆ ಇನ್ನೂ ಅರ್ಧ ಕಿಲೋಮೀಟರ್ ದೂರ ಇದೆ ಎನ್ನುವಾಗಲೇ ಕಾವೇರಿಯ ಭೋರ್ಗರೆತ ಕಿವಿ ಮುಟ್ಟುತ್ತಿತ್ತು. ಮುಂಗಾರಿನ ಸಮಯವಾದ್ದರಿಂದ ನದಿಯ ಆರ್ಭಟ ಜೋರಾಗಿಯೇ ಇತ್ತು. ಹತ್ತಿರ ಹೋದದ್ದೆ ಒಂದು ಬಂಡೆಯ ಮೇಲೆ ನಿಂತು ನೋಡಿದರೆ, ಕ್ಷೀರ ಸಾಗರದ ಅಲೆಯೊಂದು ಇತ್ತ ಹರಿದು ಬರುತ್ತಿರುವಂತೆ ಕಾವೇರಿ ನೊರೆಹಾಲಿನ ತರಹ ಮೇಲಿಂದ ಜಿಗಿಯುತ್ತಿದ್ದಳು. ಒಂದಿಷ್ಟು ಹೊತ್ತು ಏನನ್ನು ಯೋಚಿಸದೇ, ಅವಳಂದವನ್ನು ಕಣ್ಮುಂಬಿಕೊಳ್ಳುತ್ತಾ ನಿಂತೆ.
ಈ ಶಿವನಸಮುದ್ರ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿ ಭಾಗದಲ್ಲಿ ಬರುವ ಗ್ರಾಮ. ಏಷ್ಯಾದಲ್ಲೇ ಮೊದಲ ಬಾರಿ ಜಲ ವಿದ್ಯುತ್ ತಯಾರಾದ ಜಲ ವಿದ್ಯುತ್ ಸ್ಥಾವರ ಇರುವುದು ಇಲ್ಲೇ. ಕಾವೇರಿ ನದಿ ಇಲ್ಲಿನ ಜೀವನಾಡಿ. ಅದರಿಂದ ಸೃಷ್ಟಿಯಾಗಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ತಮ್ಮ ನಿಸರ್ಗದತ್ತ ಸೌಂದರ್ಯದಿಂದ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಾ ನಿಂತಿವೆ. ಇವುಗಳ ಸಹಜ ಸೌಂದರ್ಯದಿಂದಾಗಿಯೇ ಈ ಜಲಪಾತಗಳನ್ನು ವಿಶ್ವದ ನೂರು ಪ್ರಮುಖ ಜಲಪಾತಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಶಿವನಸಮುದ್ರ ಮತ್ತು ಜಲವಿದ್ಯುತ್ ಸ್ಥಾವರದ ಭಾಗಗಳು ಮಂಡ್ಯ ಜಿಲ್ಲೆಗೆ ಸೇರಿದರೆ, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಚಾಮರಾಜನಗರದ ವ್ಯಾಪ್ತಿಗೆ ಬರುತ್ತವೆ.
ಮೈಸೂರಿನಿಂದ ಮಳವಳ್ಳಿ ಮಾರ್ಗವಾಗಿ ಹೊರಟು ಸತ್ತೇಗಾಲ ತಲುಪಿದರೆ ಅಲ್ಲಿಂದ ಎಂಟು ಕಿಲೋಮೀಟರುಗಳ ಅಂತರದಲ್ಲಿ ಶಿವನಸಮುದ್ರ ಸಿಗುತ್ತದೆ. ಅಥವಾ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸತ್ತೇಗಾಲಕ್ಕೆ ಬಂದು ಅಲ್ಲಿಂದ ಶಿವನಸಮುದ್ರಕ್ಕೆ ಬರಬಹುದು. ಮೊದಲು ಶಿವನಸಮುದ್ರದ ದೇವಸ್ಥಾನ ಸಿಗುತ್ತದೆ. ನಂತರ ಗಗನಚುಕ್ಕಿ, ಕಡೆಯಲ್ಲಿ ಭರಚುಕ್ಕಿ ಜಲಪಾತ ಕಾಣಬಹುದು. ನಾನು ಮೊದಲು ನೇರವಾಗಿ ಹೊರಟಿದ್ದು ಭರಚುಕ್ಕಿಗೆ.
ರಸ್ತೆಯ ಕೊನೆಗೆ ಬಂದು ಬಲಕ್ಕೆ ತಿರುಗಿದರೆ ಅದೇ ಭರಚುಕ್ಕಿ. ಮೊದಲೇ ಹೇಳಿದಂತೆ ಈ ಚುಕ್ಕಿಗೆ ಇನ್ನಷ್ಟು ದೂರವಿದ್ದಾಗಲೇ ನದಿಯ ಮೊರೆತ ನಮ್ಮನ್ನು ತಲುಪುತ್ತದೆ. ಹತ್ತಿರಕ್ಕೆ ಹೋಗಿ ನಿಂತರೆ ದಿಬ್ಬದ ಮೇಲಿಂದ ಭರಚುಕ್ಕಿಯ ಸಾಕ್ಷಾತ್ ದರ್ಶನವಾಗುತ್ತದೆ. ಒಂದೆರಡು ಕ್ಷಣ ಅದೆನ್ನೆಲ್ಲ ಕಣ್ಣಿನಲ್ಲೇ ಸೆರೆ ಹಿಡಿಯುತ್ತಾ ಹಾಗೇ ಸುಮ್ಮನೆ ನಿಂತರಾಯಿತು. ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವ ಹಾಗಿಲ್ಲ! ಒಂದೊಂದೇ ಕಲ್ಲು ಚಪ್ಪಡಿಗಳನ್ನಿಳಿದು ಜಲಪಾತದಡಿಗೇ ಹೋಗುವ ಭಾಗ್ಯವೂ ನಮಗುಂಟು. ಆದರೆ ಇಳಿಯುವಾಗ ಜಾಗೃತೆಯಿಂದಿರಬೇಕು. ಮಳೆಗಾಲವಾದ್ದರಿಂದ ಕಲ್ಲುಗಳ ಮೇಲೆಲ್ಲ ನೀರು ಬಿದ್ದು ಜಾರುತ್ತಿರುತ್ತದೆ ಮತ್ತು ಕೆಲವೊಮ್ಮೆ ಚೂಪಾಗಿಯೂ ಇರುತ್ತದೆ. ಹೀಗೆ ಕಲ್ಲಿನ ಮೆಟ್ಟಿಲುಗಳನ್ನಿಳಿದರೆ ನೇರ ಜಲಪಾತದ ಮಡಿಲಿಗೆ ಹೋಗಿ ಬಿಡುತ್ತೇವೆ. ಅಲ್ಲಿ ಸಾಲು ಸಾಲಾಗಿ, ಮಧ್ಯೆ ಮಧ್ಯೆ ಒಂದಿಷ್ಟು ಜಾಗ ಬಿಟ್ಟು ಕಾವೇರಿ ಧುಮುಕುತ್ತಿರುತ್ತಾಳೆ. ನೊರೆಯಾಗಿ ಇಳಿದು ತಿಳಿಯಾಗಿ ತೇಲಿ, ತನ್ನ ಮಡಿಲಲ್ಲಿ ನಮ್ಮನ್ನು ತೇಲಲು ಬಿಟ್ಟು ಮತ್ತೆ ಮುಂದೆ ಹೋಗುತ್ತಾಳೆ.
ಒಂದು ರೀತಿಯಲ್ಲಿ ದ್ವೀಪ ಅನ್ನಬಹುದಾದ ಜಾಗಕ್ಕೆ ನಾವು ಕಾಲಿರಿಸಿರುತ್ತೇವೆ. ಬಳುಕುತ್ತಾ ಮೇಲಿಂದ ಬರುವ ಕಾವೇರಿ ೭೫ ಅಡಿ ಎತ್ತರದಿಂದ ಕೆಳಗೆ ಜಿಗಿದು ಅಲ್ಲೊಂದು ನೊರೆಯ ಅಲೆ ಸೃಷ್ಟಿಸಿ, ಇದೆನ್ನೆಲ್ಲ ನೋಡ ನಿಂತವರ ಮೇಲೆ ನಾಚಿಕೆಯಿಂದ ನೀರೆಚುವಂತೆ ತುಂತುರು ಹನಿ ಎರಚುತ್ತಾ ಸಣ್ಣದೊಂದು ಮುಂಗಾರು ಶುರುವಾಗಿರುತ್ತದೆ. ತಣ್ಣನೆ ಕೊರೆಯುವ ನೀರಿನೊಳಗೆ ಕಾಲನ್ನದ್ದಿ ಮಗುವಂತೆ ನೀರೆರೆಚುತ್ತಾ , ನಿಬ್ಬೆರಗಾದರೆ ಗಂಟೆಗಳು ಕ್ಷಣಗಳಾಗಿ ಉರುಳುತ್ತಿರುತ್ತವೆ. ಇನ್ನೂ ಜಲಪಾತದಡಿಗೇ ಹೋಗುವ ಉತ್ಸಾಹವಿದ್ದರೆ ನೂರು ರೂಪಾಯಿ ಕೊಟ್ಟು ತೆಪ್ಪವನ್ನೇರಿ ತೆಪ್ಪಗೆ ಕುಳಿತರಾಯಿತು. ತೆಪ್ಪ ತೇಲಿಸುವವ ನಮ್ಮನ್ನು ನೇರ ನೀರು ಬೀಳುವ ಕಡೆಗೆ ಕರೆದೊಯ್ಯುತ್ತಾನೆ. ತೆಪ್ಪ ನೀರಿನ ಸೆಳೆತಕ್ಕೆ ಸಿಕ್ಕು ಅತ್ತಿಂದಿತ್ತ ವಾಲಾಡುತ್ತಾ ಕಡೆಗೆ ಜಲಪಾತದಡಿಗೆ ಬಂದಾಗಲಂತು ಎದೆ ಎಮ್ಮೆ ಕಂಪಿಸುತ್ತದೆ. ಕೇಳಿಕೊಂಡರೆ ತಪ್ಪದವ ಅಲ್ಲಿ ಬಲಭಾಗದಲ್ಲಿ ಒಂದು ಕಡೆ ನಮ್ಮನ್ನು ಬಿಟ್ಟು ಬರುತ್ತಾನೆ. ಮೇಲಿಂದ ಬೀಳುವ ನೀರಿಗೆ ನೇರ ಮೈ ಒಡ್ಡಿ ತಲೆ ಜುಮ್ಮೆನ್ನುವ ಹೊತ್ತಿಗೆ ಮತ್ತೆ ಬಂದು ನಮ್ಮನ್ನೊಯ್ಯುತ್ತಾನೆ. ದಡಕ್ಕೆ ಬಂತು ಚಳಿಯಲ್ಲಿ ನಡುಗುತ್ತಾ ನಿಂತರೆ , ಅದೃಷ್ಟವಿದ್ದರೆ ಬಿಸಿ ಬಜ್ಜಿ ಕೂಡ ದೊರೆಯುತ್ತದೆ. ಪ್ರವಾಹಕ್ಕೆ ಕಟ್ಟಿದ ಟೆಂಟಿನಂತಿರುವ ಅಂಗಡಿಯಲ್ಲಿ ಹೀಗೆ ಒಮ್ಮೊಮ್ಮೆ ಬೇಕಾದ್ದು ಸಿಗುತ್ತದೆ. ಪಕ್ಕಕ್ಕೆ ಸರಿದು ಅಲ್ಲೆ ಅಕ್ಕ ಪಕ್ಕ ಇನ್ನೊಂದಿಷ್ಟು ಹೊತ್ತು ಸುತ್ತಿ ಮತ್ತೆ ಮೆಟ್ಟಿಲೇರಿ ಬಂದು, ಬಂದ ದಾರಿಯಲ್ಲೇ ಹಿಂತಿರುಗಿ ಗಗನ ಚುಕ್ಕಿಯತ್ತ ಹೊರಟರಾಯಿತು.
ಗಗನಚುಕ್ಕಿಯಲ್ಲಂತೂ ಕಾವೇರಿಯ ಶಕ್ತಿಯ ದರ್ಶನವಾಗುತ್ತದೆ. ಇತ್ತ ಒಂದು ಕಡೆಯಿಂದ ಪ್ರವಾಹದಂತೆ ನೀರು ನುಗ್ಗಿ ಹರಿಯುತ್ತಿದ್ದರೆ, ಇನ್ನೊಂದೆಡೆ ಎತ್ತರದಿಂದ ಧುಮುಕುತ್ತಿರುತ್ತದೆ. ಮಳೆಗಾಲದ ದಿನಗಳಲ್ಲಂತೂ ಇಂತಹದ್ದೊಂದು ಸಿರಿ ಕಾಣುವುದು ಕಣ್ಣಿಗೆ ಹಬ್ಬ. ಅಲ್ಲಿ ಕಾವೇರಿ ಭರದಿಂದ ಹರಿಯುವ ಕಾರಣ ಭರಚುಕ್ಕಿಯಾಗಿ, ಇಲ್ಲಿ ಇನ್ನೂ ಗಗನದೆತ್ತರದಿಂದ ಜಿಗಿಯುವ ಕಾರಣ ಇದು ಗಗನಚುಕ್ಕಿ ಅಂತಾಗಿರಬಹುದಾ? ಅನಿಸುತ್ತದೆ. ಇಲ್ಲಿ ಭಾರೀ ಗಾತ್ರದ ಬಂಡೆಗಳ ಮೇಲೆ ಕುಳಿತು ನದಿಯನ್ನೇ ದಿಟ್ಟಿಸುತ್ತಾ ಕುಳಿತರೆ ಹೊತ್ತು ಓಡುತ್ತಿರುತ್ತದೆ. ಅಲ್ಲಲ್ಲಿರುವ ವೀಕ್ಷಣಾ ಗೋಪುರಗಳ ಮೂಲಕವೂ ಗಗನಚುಕ್ಕಿಯ ಆರ್ಭಟವನ್ನು ಇನ್ನೂ ಚೆಂದವಾಗಿ ಕಾಣಬಹುದು. ಆದರೆ ಭರಚುಕ್ಕಿಯಂತೆ ಇಲ್ಲಿ ನೀರಿನೊಂದಿಗೆ ಆಟವಾಡುತ್ತಾ ಕೂರಲು ಹೆಚ್ಚು ಅವಕಾಶವಿಲ್ಲ. ಭರಚುಕ್ಕಿಗೆ ಹೋಲಿಸಿದರೆ ಇಲ್ಲಿ ಅಷ್ಟು ಶುಚಿಯಿಲ್ಲ. ಪ್ರವಾಸಿ ತಾಣಗಳ ದೃಷ್ಟಿಯಿಂದಾದರೂ ಇಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ದಿಯ ಅಗತ್ಯವಿದೆ.
ಹೀಗೆಲ್ಲ ಕಾಲ ಕಳೆಯುವ ಹೊತ್ತಿಗೆ ಸೂರ್ಯ ಮರೆಗೆ ಸರಿಯುತ್ತಿರುತ್ತಾನೆ. ಕತ್ತಲಾಗುತ್ತಿರುವ ಸಮಯವನ್ನರಿತು, ಈ ಸಂಜೆ ಯಾಕಾಗಿದೆ ಅಂತ ಹಾಡುತ್ತಲೇ ಅಲ್ಲಿಂದ ಕಾಲ್ಕಿತ್ತು, ಕಡೆಗೆ ಶಿವನಸಮುದ್ರದಲ್ಲಿರುವ ದೇವರ ದರ್ಶನ ಪಡೆದು ಮನೆಯತ್ತ ಬರಬಹುದು. ಮುಂಗಾರು ಮುಗಿಯುವ ಮುನ್ನವೇ ನೀವು ಈ ಸಿರಿಯನ್ನೊಮ್ಮೆ ಕಣ್ಣಾರೆ ಕಂಡುಬನ್ನಿ. ನಿಮ್ಮ ಗಮನಕ್ಕೆ ಒಂದೆರಡು ಟಿಪ್ಸ್.
* ಶಿವನಸಮುದ್ರ ಮೈಸೂರಿನಿಂದ ಸುಮಾರು ೮೦ ಕಿ.ಮೀ. ಮತ್ತು ಬೆಂಗಳೂರಿನಿಂದ ೧೩೦ ಕಿ.ಮೀ ದೂರದಲ್ಲಿದೆ.
* ಸಾರಿಗೆಯ ವ್ಯವಸ್ಥೆ ಹೆಚ್ಚಾಗಿಲ್ಲ. ಸ್ವಂತ ವಾಹನಗಳಲ್ಲಿ ಹೋಗುವುದು ಉತ್ತಮ.
*ಮಳೆಗಾಲದ ಅವಧಿ ಈ ಜಲಪಾತಗಳ ವೀಕ್ಷಣೆಗೆ ಸೂಕ್ತ ಸಮಯ