ನಿನ್ನೆ ಗೆಳೆಯನು ಕಳಿಸಿದ ಬ್ಲಾಗ್ ಬರಹ ಓದಿ ಸ್ವಲ್ಪ ಹೊತ್ತು ಕಂಗಾಲಾಗಿ ಕೂತಿದ್ದೆ. ಅದರಲ್ಲಿ ಇರೋದು ನೂರಾಹತ್ತು ಪರ್ಸೆಂಟ್ ನಿಜ. ಆದರೆ ಕೆಲವು ವಿಷಯಗಳು ಇನ್ನೂರಾ ಹತ್ತು ಪರ್ಸೆಂಟ್ ಅಸಂಭವನೀಯ. ಈ ಭೂಮಿಯನ್ನು ನಾವು ಪ್ರಗತಿಯ ಹೆಸರಲ್ಲಿ ಹಾಳು ಮಾಡ್ತಾ ಇದೀವಿ. ಸೌಕರ್ಯಗಳ ಬೆಂಕಿಯಲ್ಲಿ ಬೇಯಿಸ್ತಾ ಇದೀವಿ ಅನ್ನುವುದು ಆ ಬರಹದ ಮೂಲ ವಿಷಯ. ಅಷ್ಟೇ ಅಲ್ಲ ಅದು ಒಬ್ಬ ನಿಸ್ಪ್ರಹ ವ್ಯಕ್ತಿಯ ಪ್ರಾಮಾಣಿಕ ಅಭಿವ್ಯಕ್ತಿ. ಇಷ್ಟೆಲ್ಲಾ ಕೂಗಾಟ, ಹೋರಾಟ, ಮಾತು ಕತೆ, ಸಮಿತಿ, ನಿಯೋಗ, ನಿರ್ಬಂಧಗಳು ಎಲ್ಲ ಸರಿ.. ಆದ್ರೂ ಒಬ್ಬ ವ್ಯಕ್ತಿಯಾಗಿ ನಾನು ಮಾಡ್ತಿರೋದೇನು ಅಂತ ಅವನ ಪ್ರಶ್ನೆ.. ವಾರಾಂತ್ಯದಲ್ಲಿ ಗ್ರೀನ್ ಪೀಸ್ ಚಳುವಳಿ ಮಾಡು, ಮಾಡಿ ಮುಗಿಸಿ ದರ್ಶಿನಿಯಲ್ಲಿ ಯಾಂತ್ರೀಕೃತ ಬರ್ಗರ್ ತಿನ್ನು, ಕೋಕ್ ಕುಡಿ, ಕ್ಯಾನ್, ನ್ಯಾಪ್ ಕಿನ್ನು ತೆಗೆದು ಕಸದಬುಟ್ಟಿಗೆ ಬಿಸಾಕು, ಬಹಿರ್ದೆಶೆಗೆ ಹೋಗಬೇಕಿದ್ರೆ ಫ್ಲಶ್ ಎಳಿ, ಪೇಪರ್ ಬಳಸು, ಆಮೇಲೆ ಡ್ಯಾಂ ಕಟ್ಟೋದ್ರಿಂದ ಆಗೋ ಅನಾಹುತಗಳ ಬಗ್ಗೆ ಒಂದು ಸೆಮಿನಾರಿಗೆ ಹೋಗು, ಅಲ್ಲಿ ಏಸಿಯಲ್ಲಿ ಕೂತುಕೋ, ಅಲ್ಲಿಂದ ನಾಳೆ ಬೆಳಿಗ್ಗೆ ಇರೋ ಪರಿಸರ ಹೋರಾಟದ ಬೀದಿನಾಟಕ ಇರೋ ಊರಿಗೆ ಎಲೆಕ್ಟ್ರಿಕ್ ರೈಲಲ್ಲಿ ಹೋಗು...ದೂರದ ಊರಲ್ಲಿ ಕೆಲ್ಸ ಮಾಡ್ತಾ ಇರೋದ್ರಿಂದ ಅಪ್ಪ ಅಮ್ಮನ ಎರಡು ಗಂಟೆ ಮಾತಾಡಿಸಿಕೊಂಡು ಬರೋದಕ್ಕೆ ವಿಮಾನದಲ್ಲಿ ಹೋಗಿಬಾ.. ಇದೆಲ್ಲಾ ಮಾಡ್ತಾ ಇರೋವಾಗ ನನ್ನ ಜಾಗೃತ ಪ್ರಜ್ಞೆಗೆ ಯಾವ ಡ್ಯಾಂ ನೀರು ಕಟ್ಟಿ ನಿಲ್ಲಿಸಿರೋದ್ರಿಂದ ಇಷ್ಟು ವಿದ್ಯುತ್, ಯಾವ ಅಣುಸ್ಥಾವರದ ಕೃಪೆಯಿಂದ ಈ ಏಸಿ, ಯಾವ ನೈಸರ್ಗಿಕ ಸಂಪನ್ಮೂಲದ ಗಣಿಯನ್ನು ಬರಿದು ಮಾಡುತ್ತಿರುವ ಪೆಟ್ರೋಲು,ಗ್ಯಾಸು ಇತ್ಯಾದಿ ಎಲ್ಲ ಅಂಕಿಅಂಶಗಳು ಗೊತ್ತಿರುತ್ತೆ ಅಲ್ವಾ.. ಆದ್ರೂ ಏನು ಮಾಡೋದು ಬದುಕೋಕ್ಕೆ ಇದೆಲ್ಲ ಬೇಕೇ ಬೇಕಲ್ವಾ.. ಹೀಗೆ ನೋಡಿದ್ರೆ ನನ್ನ ಪರಿಸರ ಚಳುವಳಿಯ, ಭೂ ಜಾಗೃತಿಯ ಎಲ್ಲ ಪ್ರಯತ್ನಗಳೂ ಫೇಕ್ ಅಲ್ವಾ ಅಂತ ಅವನನ್ನ ಅವನೇ ಕೇಳ್ಕೊಳ್ತಾ ಇದಾನೆ. ಇದು ಅವನ ಬರಹದ ತೀರಾ ಕ್ಲಪ್ತ ಸಾರಾಂಶ.
ಅವನಿಗೆ ಈ ಎಲ್ಲ ಸೌಕರ್ಯಗಳನ್ನು ಬಿಟ್ಟು ಕಾಡಿಗೆ, ಬೇಸಿಕ್ಸಿಗೆ ವಾಪಸಾಗುವ ಇಷ್ಟ. ಅವನಿಗೆ ಗೊತ್ತು ಅದು ಕಷ್ಟ ಸಾಧ್ಯ ಅಂತ. ಆದ್ರೂ.. ಈ ಏಸಿ, ನಲ್ಲಿ ತಿರುಗಿಸಿದರೆ ಬರುವ ನೀರು, ಎಷ್ಟನೇ ಮಹಡಿಯಾದರೂ ಸರಿ ಜುಮ್ಮನೆ ಕರೆದುಕೊಂಡು ಹೋಗುವ ಲಿಫ್ಟು, ಹಗಲೋ ರಾತ್ರಿಯೋ ಗೊತ್ತಾಗದ ಹಾಗೆ ಝಗಮಗಿಸುವ ದೀಪ, ಸೆಕೆಂಡುಗಳಲ್ಲಿ ಬೆಂದು ಬರುವ ಮೊಟ್ಟೆ ಕೊಡುವ ಓವನ್ನು, ಕೊಳಕಾದ ಬಟ್ಟೆ, ಒಂದಿಷ್ಟು ಡಿಟರ್ಜೆಂಟ್ ಸುರಿದು ಗುಂಡಿಯೊತ್ತಿದರೆ ತನ್ನ ಪಾಡಿಗೆ ತಾನು ತೊಳೆದು ಒಣಗಿಸಿಕೊಡುವ ವಾಷಿಂಗ್ ಮಿಶನ್ನು..ದೂರಗಳನ್ನೆಲ್ಲಾ ಹತ್ತಿರವಾಗಿಸುವ ಸಾರಿಗೆ ಸೌಕರ್ಯ, ನೋಡನೋಡುತ್ತಲೇ ಮೈ ಜುಮ್ಮೆನ್ನಿಸುವ ಮೋಟೋರೇಶು ಎಲ್ಲ ಇಲ್ಲದೆ ಹೇಗೆ ಬದುಕುವುದು ಅನ್ನಿಸುತ್ತದೆ ಆದ್ರೂ ನಂಗೆ ಈ ಎಲ್ಲ ಯಾಂತ್ರೀಕರಣಗಳ ಮಧ್ಯೆ ಮನುಷ್ಯನೊಡನ ಒಡನಾಟವೇ ಅತೀ ಹೆಚ್ಚು ಖುಶಿ ಕೊಟ್ಟ ವಿಷಯ ಅಂತ ಹೇಳಿದ್ದಾನೆ. ಗೆಳೆಯನೊಂದಿಗೆ ಹರಟುತ್ತಾ ಸಾಗಿದ ನಡಿಗೆ, ಗೆಳತಿಯ ಅಪ್ಪುಗೆ, ಈಜುತ್ತಾ ಬಿದ್ದುಕೊಂಡ ದಂಡೆಯಿಂದ ಕಂಡ ಸಂಜೆಗೆಂಪಿನ ಆಕಾಶ, ಕಚ್ಚಿತಿಂದ ತಾನೇ ಹಿಡಿದ ಮೀನು.. ಈ ಎಲ್ಲ ಕೊಟ್ಟ ಖುಶಿಯನ್ನೂ ಈ ಸೌಕರ್ಯಗಳನ್ನೂ ತೂಗಿದರೆ ತನಗೆ ಸೌಕರ್ಯಗಳೇ ಬೇಡವೆನ್ನಿಸುತ್ತದೆ. ಇವತ್ತಲ್ಲದಿದ್ದರೆ ಇನ್ನೊಂದು ದಿನ ಇದನ್ನು ಬಿಟ್ಟು ಕಾಡಿಗೆ ಹೋಗುವುದು ಖಂಡಿತ ಅಂತ ಹೇಳಿದ್ದಾನೆ..
ಅವನು ಹೋಗಲಿ ಅಂತ ನಂಗೂ ಇಷ್ಟ ಕೂಡಾ.. ನನ್ನದೇ ಮನದೊಳಗಣ ಅಸ್ಪಷ್ಟ ಆಶೆ ಒಂದು ನಿರ್ದಿಷ್ಟ ಆಕಾರ ಪಡೆದು ಅಕ್ಷರಗಳಾಗಿ ಇಳಿದಿವೆಯಾ ಅನ್ನಿಸಿತು. ಅವನ ಇಡೀ ಲೇಖನ ಓದಿದರೆ ನಮ್ಮಲ್ಲಿ ತುಂಬ ಜನರಿಗೆ ಹಾಗೇ ಅನ್ನಿಸುವುದರಲ್ಲಿ ಸಂಶಯವಿಲ್ಲ. ಆದರೆ ನನಗೇ ಹೀಗೆ ಮಾಡಲು ಅವಕಾಶ ಸಿಕ್ಕಿದರೆ ಹೋಗುತ್ತೇನಾ? ಉತ್ತರಿಸಲಿ ಹೇಗೆ? ಎಷ್ಟೋ ಸಲ ಪರಿಸರದ ಮೇಲಾಗುವ ದೌರ್ಜನ್ಯ, ಅತೀ ಬಳಕೆಯ ಬಗ್ಗೆ ಮನಸ್ಸಲ್ಲಿ ಮುಳ್ಳಾಡುತ್ತದೆ ಹಾಗಂತ ಏನು ಮಾಡಿದ್ದೇನೆ ನಾನು? ನಾಲ್ಕು ಅಕ್ಷರ ಬರೆದರೆ, ಇಬ್ಬರು ಸ್ನೇಹಿತರಲ್ಲಿ ಮಾತಾಡಿಕೊಂಡರೆ ನನ್ನ ಆವೇಶ ಮುಗಿಯುತ್ತದೆ. ಏನೋ ಮಾಡಬೇಕಿದ್ದ ಚಡಪಡಿಕೆಗೆ ಒಂದು ದಾರಿ ಸಿಕ್ಕು ನಿರಾಳವಾಗುತ್ತೇನೆ. ದಾರಿಯಲ್ಲಿ ಹೊಗೆ ಜಾಸ್ತಿ ಎಬ್ಬಿಸಿಕೊಂಡು ಹೋಗುವ ಬೈಕಿನವನನ್ನು ಬಯ್ಯುತ್ತಾ ನನ್ನ ಬೈಕಿನ ಕಡಿಮೆ ಹೊಗೆಯನ್ನ ಸಮರ್ಥಿಸಿಕೊಳ್ಳುತ್ತೇನೆಯೇ ಹೊರತು, ಬೈಕು ಉಪಯೋಗಿಸುವುದು ನಿಲ್ಲಿಸುತ್ತೇನಾ? ಅಥವಾ ಸುಮ್ಮನೆ ಕೂತುಕೊಳ್ಳದೆ, ಆಹಾ ಈ ಮಾಡೆಲ್ಲಿನ ಕಾರು ಎನರ್ಜಿ ಎಫಿಶಿಯಂಟ್ ಅಂತೆ, ಇದನ್ನು ತಗೊಂಡರೆ ಮೈಲೇಜು ಜಾಸ್ತಿ ಅಂತ ಹೊಸದೇ ಕಾರಿಗೆ ಕಣ್ಣು ಹಾಕುವುದು ನಿಲ್ಲಿಸುತ್ತೇನಾ? ರಸ್ತೆಯಲ್ಲಿ ಪಾನ್ ಪರಾಗ್ ಪ್ಯಾಕೆಟ್ ಎಸೆಯುವವರ ಮೇಲೆ ಸಿಟ್ಟು ಮಾಡಿಕೊಳ್ಳುವ ನಾನು ನನ್ನ ಮನೆಯ ಕಸವನ್ನು ಕಸದ ಗಾಡಿಗೆ ಪ್ರತೀ ದಿನಾ ಪ್ಲಾಸ್ಟಿಕ್ ಕವರಿನಲ್ಲಿ ಜೋಪಾನ ಮಾಡಿ ಸುತ್ತಿ ಹಾಕುವುದು ಎಷ್ಟು ಸರಿ? ಆದರೆ ಹಾಗೆ ಮಾಡದೆ ಬೇರೆ ರೀತಿಯಲ್ಲಿ ಈ ನಾಗಾಲೋಟದ ಬದುಕಿನಲ್ಲಿ ಸಾಗುವುದು ಹೇಗೆ? ನನ್ನ ಎಲ್ಲ ಯೋಚನೆಗಳೂ ಬರಿಯ ಓದಿಗೆ, ಮಾತಿಗೆ, ಬರಹಕ್ಕೆ ಸೀಮಿತವೇ..? ಎಲ್ಲ ತಪ್ಪುಗಳೂ ವಿಷಾದದ ಕೋಣೆ ಹೊಕ್ಕ ಮೇಲೆ ತಮ್ಮ ತೀವ್ರತೆ ಕಳೆದುಕೊಂಡು ಮೊಂಡಾಗಿ ಮಲಗಿಬಿಡುತ್ತವೆಯೇ? ಅಲ್ಲಿ ಇಲ್ಲಿ ಗೆಳೆಯರ ಬಳಗ, ಹೋರಾಟ ಸಮಿತಿಯ ಪರಿಸರ ದಿನದಂದು ಗಿಡ ನೆಡು, ಜಾಗೃತಿ ದಿನಕ್ಕೆ ಪಾರ್ಕು ಕ್ಲೀನ್ ಮಾಡು.. ಇದು ನಿಜವಾದ ಚಡಪಡಿಕೆಯನ್ನ ಸಮಸ್ಯೆಯನ್ನ ಎದುರಿಸದೆ ಇರಲಿಕ್ಕೆ ನಾನೇ ಕಂಡುಕೊಂಡ ಸಮರ್ಥ ನೆಪವಲ್ಲವೇ? ಇಲ್ಲಾಂದರೆ ನಾನೂ ಕಾಡಿಗೆ ಹೋಗಲು ತಯಾರಿ ನಡೆಸಲೇ? ಹೀಗೆಲ್ಲ ತಲೆ ಕೆಟ್ಟು ಕೂತಾಗ ನೆನಪಾಗಿದ್ದು ಸರಸ್ವತಿ ಟೀಚರ್.
ಒಂದು ವಿಶೇಷವೆಂದರೆ ಯಾವ ಯೋಜನೆ, ಸಮಿತಿ, ಯಾಂತ್ರೀಕರಣ, ಸಂಶೋಧನೆ, ಇತ್ಯಾದಿಗಳಿಂದ ಹೊರತಾದ ಒಬ್ಬ ಮಾನವೀಯ ವ್ಯಕ್ತಿಯ ಬದುಕು..ಕೃತಿ, ಮಾತಲ್ಲ.. ಉಪದೇಶವಲ್ಲ.. ನನಗೆ ಸಮಾಧಾನ ಹೇಳಿತು. ದೊಡ್ಡ ಊರೊಂದರಿಂದ ೨೦-೨೫ ಕಿಮೀ ದೂರದ ಹೆದ್ದಾರಿಯಲ್ಲಿ ಸಾಗಿ ಮತ್ತೆ ೫ ಕಿಮೀ ಒಳದಾರಿಯಲ್ಲಿ ಸಾಗಿದರೆ ಸಿಗುವ ಒಂದು ಪುಟ್ಟ ಗ್ರಾಮದ ಕೊನೆಯ ಕಟ್ಟಡ ಆ ಊರಿನ ಪ್ರಾಥಮಿಕ ಶಾಲೆ. ರಸ್ತೆಗಿಂತ ಹೊಂಡಗಳೇ ಜಾಸ್ತಿ. ದಿನದ ಕೂಲಿಯನ್ನೆ ಉಣ್ಣುವ ಕಾಯಕವೇ ಕೈಲಾಸದ ಜನರ ಪುಟ್ಟ ಪುಟ್ಟ ಗುಡಿಸಲುಗಳ ಮಧ್ಯೆ ಶಾಲೆಯೊಂದು ಪೂರ್ಣ ಪ್ರಮಾಣದ ಕಟ್ಟಡ ಅಷ್ಟೇ.. ಮಳೆಗಾಲದಲ್ಲಿ ಅಲ್ಲಿಗೆ ಹೋಗುವುದನ್ನು ನೆನಸಿಕೊಂಡರೇ ಅಳುಬರುತ್ತದೆ. ಅಂಥ ಕಡೆ ಆ ಶಾಲೆ ಹಸಿರಾಗಿ, ಹೂವು ಹೂವು ತುಂಬಿ, ಗೊಂಚಲು ಗೊಂಚಲು ಕಾಯಿಪಲ್ಲೆ, ಸೊಪ್ಪು ತೂಗಿ, ಖುಶಿಯಿಂದ ಕೂತು ಓದುವ ಮಕ್ಕಳಿಂದ ತುಂಬಿತ್ತು. ಶಾಲೆಯ ಆವರಣದ ಮೊದಲಿಗೇ ಶೌಚಾಲಯ, ಯಾವ ವಾಸನೆ, ಕೊಳಕು ಇಲ್ಲದೆ ಆಸ್ಪತ್ರೆಯ ಇಂಟೆನ್ಸಿವ್ ಕೇರಿನಷ್ಟೇ ಚೊಕ್ಕವಾಗಿ ನಿಂತಿತ್ತು. ಪುಟ್ಟ ಮಕ್ಕಳ ಕೈ ಉಗುರು ಎಷ್ಟು ಬೆಳೆದಿದೆ ಅಂತ ನೋಡುತ್ತಾ, ಕತ್ತರಿಸುತ್ತಾ ನಿಂತಿದ್ದ ಸರಸ್ವತೀ ಟೀಚರ್ ಚೆಲುವಾಗಿ ನಕ್ಕರು.
ಟಿಸಿಎಚ್ ಮುಗಿದು ಮೊದಲನೇ ಪೋಸ್ಟಿಂಗ್ ಇಲ್ಲಿಗೆ ಹಾಕಿದಾಗ ಕಣ್ಣೀರಿಟ್ಟುಬಿಟ್ಟಿದ್ದೆ.. ಈ ಹಸಿರು, ಸ್ವಚ್ಛತೆ, ಮಕ್ಕಳು ಇರಲಿ ಗೋಡೆ ಬೇಲಿಯೂ ಇರಲಿಲ್ಲ.. ಅದೋ ಅಲ್ಲಿ ದೂರದಲ್ಲಿ ಅಶ್ವತ್ಧ ಕಟ್ಟೆ ಕಾಣುತ್ತಲ್ಲಾ ಅದು ನಮ್ ಶಾಲೆಯಾಗಿತ್ತು. ಊರ ಜನ ಕುರೀನೆಲ್ಲ ಅಲ್ಲೇ ಹತ್ರ ಗಂಟಿಗಳಿಗೆ ಕಟ್ಟಿ ಹೋಗೋವ್ರು, ಹಾಗೆ ಚಿಳ್ಳೆ ಪಿಳ್ಳೆ ಯಾರಾರೂ ಇದ್ರೆ ಮಾತ್ರ ಇಸ್ಕೂಲಿಗೆ ವೋಗು ಅಂತ ಕಳ್ಸಿ, ಸ್ವಲ್ಪ ದೊಡ್ಡ ಮಕ್ಕಳನ್ನ ಕೆಲ್ಸಕ್ಕೆ ಎಳ್ಕೊಂಡು ಹೋಗೋವ್ರು.. ಅದು ಹೇಗೋ ದೇವರು ನಂಗೆ ಧೈರ್ಯ ಕೊಟ್ಟ, ನಿಧಾನವಾಗಿ ಬರೋ ಮಕ್ಕಳನ್ನೇ ಚೆನ್ನಾಗಿ ಲಾಲಿಸಿ, ಅವರ ಮನೆಯವ್ರ ಹತ್ತಿರ ಮಾತಾಡಿ ಉಳಿದವ್ರನ್ನೂ ಕಳಿಸುವ ಹಾಗೆ ಮಾಡಿದೆ. ತೀರಾ ತೊಂದರೆ ಇದ್ದಾಗ ಕ್ಲಾಸು ಮಾಫಿ ಮಾಡಿ ಕೆಲಸಕ್ಕೆ ಕಳಿಸಿದೆ. ಕಟ್ಟೆಯ ಮೇಲೇ ಆದ್ರೂ ಒಂದಿಷ್ಟು ಮಕ್ಕಳೂ ಅಂತ ಕೂಡೋ ಹಂಗಾತು. ಆಮೇಲೆ ನಮ್ ಪ್ರಯತ್ನ ಎಲ್ಲ ಗೊತ್ತಾಗಿ ಬೀಡಿಓ ಇಲ್ಲಿಗೆ ಒಂದು ಕಟ್ಟಡ ಕೊಡಿಸಿದರು. ಕಟ್ಟಡ ಮುಗಿಯುವಾಗ ಚಿಳ್ಳೆಪಿಳ್ಳೆಗಳು ಒಂದನೇ ಕ್ಲಾಸಿಗೆ ಬಂದರು. ಅವರನ್ನ ಕೆಲ್ಸ,ಮನೆ ಅಂತ ಹೋಗಕ್ಕೆ ಬಿಡದೆ ಶಾಲೆಗೇ ಸೇರಿಸಿದೆ. ಸುಮ್ಮನೆ ಪಾಠ ಮಾಡಿದ್ರೆ ಕೇಳೋಲ್ಲ ಅಂತ ಹಿತ್ತಲು ಮಾಡಿಸಿದೆ, ಚಿತ್ರ ಬಿಡಿಸಿಕೊಟ್ಟೆ, ಹೊಸ ಆಟ, ಹಾಡು ಹೇಳ್ಕೊಟ್ಟೆ, ಕ್ರಾಫ್ಟ್ ಮಾಡಿಸಿದೆ, ಅಷ್ಟರಲ್ಲಿ ಅಂತರ ರಾಷ್ಟ್ರೀಯ ಸಂಸ್ಥೆಯೊಂದರ ಸಹಾಯದಿಂದ ಶೌಚಾಲಯ ಬಂತು. ಅದನ್ನು ಈ ಮಕ್ಕಳಿಗೆ ಉಪಯೋಗಿಸಲು ಹೇಳಿಕೊಟ್ಟು, ಬರೀ ಇವರಲ್ಲದೆ ಊರಿನ ಎಲ್ಲ ಮಕ್ಕಳೂ ಇದನ್ನೇ ಬಳಸಲು ತಿಳಿಸಿಕೊಟ್ಟೆ. ಬೆಳಗ್ಗೆ ಎದ್ದ ಕೂಡಲೇ ಇಲ್ಲಿಗೆ ಬಂದು ಬಳಸಿ, ಕ್ಲೀನ್ ಮಾಡಿ ಹೋಗುತ್ತಾರೆ. ಅವರೆಲ್ಲರ ಹಲ್ಲುಜ್ಜುವ ಬ್ರಶ್ಶೂ ಇಲ್ಲೆ ಇದೆ ನೋಡಿ. ಈಗ ಇವರೆಲ್ಲ ತಮ್ಮ ತಮ್ಮ ಅಪ್ಪ ಅಮ್ಮನ ಹತ್ತಿರ ನಮ್ಮನೆಗೂ ಒಂದು ಬೇಕಿದು ಅಂತ ತಿಳಿಸಿಕೊಡ್ತಾ ಇದ್ದಾರೆ. . ಅದಕ್ಕೆ ಸರ್ಕಾರದ ಸಬ್ಸಿಡಿ ಬೇರೆ ಇದ್ಯಲ್ಲಾ. ಈಗೀಗ ಜನ ಇದಕ್ಕೆ ಒಪ್ತಾ ಇದಾರೆ. ಮಕ್ಳು ಸ್ಕೂಲಿಗೆ ಹೋದ್ರೆ ಒಳ್ಳೇದು ಅನ್ನೋ ಭಾವನೆ ಬಂದಿದೆ. ಇಷ್ಟ್ ಹೂಗಿಡ, ಹಣ್ಣು, ತರಕಾರಿ ಇದ್ಯಲ್ಲಾ ಯಾವದನ್ನೂ ಯಾರೂ ಕದಿಯೋಲ್ಲ, ಶೌಚಾಲಯ ದುರ್ಬಳಕೆ ಮಾಡೊಲ್ಲ, ಇಲ್ಲಿ ಪ್ರಾಥಮಿಕ ಶಾಲೆ ಮುಗಿದವರನ್ನ ನಾನೇ ಆ ಕಡೆಯ ದೊಡ್ಡ ಗ್ರಾಮದ ಮಾಧ್ಯಮಿಕ ಶಾಲೆಗೆ ಸೇರಿಸಿಬರುತ್ತೇನೆ.. ಈಗ ಬಿಸಿಯೂಟ ಬೇರೆ ಇರೋದ್ರಿಂದ ಇನ್ನಷ್ಟು ಅನುಕೂಲವಾಗಿದೆ... ಆದ್ರೂ ಅರಳೀ ಕಟ್ಟೆಯಿಂದ ಇಲ್ಲೀ ತಂಕ ಬರ್ತೀನಿ ಅಂತ ಅವತ್ತು ನಾನಂತೂ ಕಂಡಿರ್ಲಿಲ್ಲ ಬಿಡಿ.... ಅಂತ ಮತ್ತೊಂದು ಸಲ ನಕ್ಕರು. ಹಳೆಯ ಬೀಡಿ ಕ್ಯಾಲೆಂಡರಿನ ಸೌಮ್ಯ ಸರಸ್ವತಿಯ ನಗು ನೆನಪಾಗಿ ಮನಸ್ಸು ತಂಪಾಯಿತು.
ಆ ಸರಸ್ವತಿ ಟೀಚರಿನ ಬದುಕು ಮತ್ತು ಕೆಲಸ ನನ್ನ ಗೊಂದಲಗಳಿಗೆ, ಚಡಪಡಿಕೆಗಳಿಗೆ ಎಷ್ಟು ನಿಜವಾದ, ಸಂಭವನೀಯ ಪರಿಹಾರವಲ್ಲವೇ? ಅವತ್ತು ಅವರು ಇದೆಲ್ಲಾ ಒಂದು ವ್ಯವಸ್ಥೆಯೇ, ಇದೂ ಒಂದು ಬದುಕೆ ಅಂತ ಕಂಗಾಲಾಗಿ ಕೂತಿದ್ದರೆ, ಕೊಳಕು ಅರಳೀ ಕಟ್ಟೆಯಿಂದ ಎದ್ದು ಈ ಚಂದ ಆವರಣಕ್ಕೆ ಬರಲಾಗುತ್ತಿತ್ತಾ? ಇದನ್ನೆಲ್ಲಾ ಹೇಗೆ ಬದಲಾಯಿಸಲಿ ಅಂತ ಮೀನಾಮೇಷ ಎಣಿಸುತ್ತ ಪ್ರಾಜೆಕ್ಟ್ ಪ್ಲಾನ್ ಹಾಕುತ್ತಾ ಕೂತಿದ್ದರೆ ಆ ಪುಟ್ಟ ಹಳ್ಳಿಯ ಮುಗ್ಧ ಜೀವಗಳಿಗೆ ಒಂದು ಒಪ್ಪ ಸಿಗುತ್ತಿತ್ತಾ? ನಾನು ಇದ್ದ ಕಡೆಯೇ ಹೇಗೆ ಸರಳವಾಗಿ ನನ್ನ ಬದುಕನ್ನೇ ಹೊಂದಿಸಿಕೊಂಡುಪರಿವರ್ತನೆ ತರುವುದು ಎಂಬುದನ್ನ ಸಿಕ್ಕಾಪಟ್ಟೆ ಯೋಚನೆ ಮಾಡದೇ ಕೆಲಸ ಮಾಡಲು ಹೊರಡಲು ಒಳ್ಳೆಯದಲ್ಲವೇ? ಅದಕ್ಕೆ ಕಾಡಿಗೆ ಹೋಗಬೇಕೆ? ಅಥವಾ ಇದೂ ಕೂಡಾ ಸಮಸ್ಯೆಯಿಂದ ದೂರವಿರಲು ಕಳ್ಳ ಬುದ್ಧಿ ಕಂಡುಕೊಂಡ ಜಾಣ ಉಪಾಯವೇ? ಸ್ವಲ್ಪ ಗೊಂದಲಗಳಿವೆ. ಕಾಡಿಗೆ ಹೋಗುವುದೇ ಒಳ್ಳೆಯದು ಅಂತ ಸಿದ್ಧನಾಗಿರುವ ನಮ್ಮ ಯುವಜನಾಂಗದ ಪ್ರತಿನಿಧಿಯಷ್ಟೇ ಆಳವಾಗಿ, ಗಟ್ಟಿಯಾಗಿ ಸರಸ್ವತೀ ಟೀಚರ್ ನಂಬಿದ, ನಡೆಸಿದ ಬದುಕು ಭರವಸೆಯಾಗಿ ನಿಲ್ಲುತ್ತದೆ. ನನಗಂತೂ.. ನಿಮಗೆ?
[ಚಿತ್ರ - ರಶೀದ್]