ಸಾಹಿತ್ಯದ ಕಾರ್ಯವ್ಯಾಪ್ತಿಗೆ ಅನೇಕ ಸಂಕೀರ್ಣ ಮುಖಗಳಿರುತ್ತದೆ. ಓದುಗರ ಮನರಂಜನೆಯಿಂದ ಹಿಡಿದು ಒಂದು ಜನಪದದ ಸಾಂಸ್ಕೃತಿಕ ಅಭಿರುಚಿಗಳನ್ನು ತಿದ್ದುವುದರವರೆಗೆ ಅನೇಕ ರೀತಿಯಲ್ಲಿ ಸಾಹಿತ್ಯ ಕ್ರಿಯಾಶೀಲವಾಗುವುದನ್ನು ನಾವು ನೋಡಬಹುದು. ಈ ರೀತಿ ಸಾಹಿತ್ಯದ ಉದ್ದೇಶ ಪ್ರಭಾವಗಳು ಹೇಗೆ ಸಂಕೀರ್ಣವೋ ಹಾಗೇ ಸಾಹಿತ್ಯ ವಿಮರ್ಶೆಯದೂ ಕೂಡ ಎನ್ನುವುದನ್ನು ಮರೆಯುವಂತಿಲ್ಲ. ಆದರೂ ವಿಶ್ಲೇಷಣೆಯ ಅನುಕೂಲಕ್ಕಾಗಿ ಸಾಹಿತ್ಯ ವಿಮರ್ಶೆಯನ್ನು ವರ್ಗೀಕರಿಸುವುದಾದರೆ ಸ್ಥೂಲವಾಗಿ ಎರಡು ವಿಧಗಳಿವೆ ಎಂದು ಗುರುತಿಸಬಹುದು. ಮೊದಲನೆಯದು ಸಾಹಿತ್ಯವನ್ನು ಓದುವ ಸಹೃದಯರಿಗೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಸಮರ್ಪಕವಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುವುದು, ಎರಡನೆಯದು ತಮ್ಮ ಅನುಭವಗಳನ್ನು ಭಾಷೆಯ ಮುಖಾಂತರ ಕಲಾಕೃತಿಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತಿಸಲು ಲೇಖಕರಿಗೆ ಸಹಾಯ ಮಾಡುವುದು, ಇದು ವಿಮರ್ಶೆಯ ಉದ್ದೇಶಗಳನ್ನು ತೀರಾ ಸರಳಗೊಳಿಸಿದ ವರ್ಗೀಕರಣ ಎನ್ನುವುದೇನೊ ನಿಜ. ಏಕೆಂದರೆ ಪ್ರತಿಯೊಂದು ವಿಮರ್ಶೆಯಲ್ಲೂ ಈ ಎರಡು ಉದ್ದೇಶಗಳು ಹಾಸುಹೊಕ್ಕಾಗಿ ವಿವಿಧ ತೀವ್ರತೆಗಳಲ್ಲಿ ಮಿಳಿತವಾಗಿರುವುದನ್ನು ಗಮನಿಸಬಹುದು. ಆದರೆ ಯಾವ ವಿಮರ್ಶೆ ಯಾವುದಕ್ಕೆ ಪ್ರಾಧಾನ್ಯತೆ ಕೊಟ್ಟಿದೆ ಎಂದು ಗಮನಿಸಿ ವರ್ಗೀಕರಣವನ್ನು ಅನ್ವಯಿಸಲು ಸಾಧ್ಯ. ಎಂದರೆ ಒಂದು ವಿಮರ್ಶೆ, ಹೇಗೆ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳಬೇಕೆಂದು ಸಹೃದಯರನ್ನು ಉದ್ದೇಶಿಸಿಯೂ, ಇನ್ನೊಂದು ಇಂಥ ಸಾಹಿತ್ಯವನ್ನು ಪದ, ವಾಕ್ಯಗಳ ಸಂಯೋಜನೆಯ ಮುಖಾಂತರ ಹೇಗೆ ಕಲಾಕೃತಿಗಳಾಗಿ ನಿರ್ಮಿಸಬೇಕೆಂದು ಬರಹಗಾರರನ್ನು ಉದ್ದೇಶಿಸಿಯೂ ಇರುತ್ತದೆ ಎಂದು ಹೇಳಬಹುದು.
ನಾವು ಓದುತ್ತಿದ್ದಾಗ ಶಿವಮೊಗ್ಗದ ಪರಿಸರದಲ್ಲಿ ಇಂಥ ವರ್ಗೀಕರಣ ಅಸಾಧ್ಯವಾಗಿತ್ತೆಂದೇ ಹೇಳಬೇಕು. ಯಾರು ಕವಿ? ಯಾರು ಸಹೃದಯ? ಎಂದೇ ಹೇಳಬರುತ್ತಿರಲಿಲ್ಲ. ಎಲ್ಲರೂ ಪುಟ್ಟಪುಟ್ಟ ಚೀಟಿಗಳಲ್ಲಿ ಒಂದೊಂದು ಕವನ ಬರೆದು ಮಡಚಿಟ್ಟುಕೊಂಡು ಯಾವ ಕ್ಷಣದಲ್ಲಾದರೂ ತಮ್ಮೆದುರು ಪ್ರತ್ಯಕ್ಷವಾಗಬಹುದಾದ ಸಹೃದಯನನ್ನೋ ವಿಮರ್ಶಕನನ್ನೋ ನಿರೀಕ್ಷಿಸಿಕೊಂಡೇ ಓಡಾಡುತ್ತಿದ್ದರು. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಾವು ಆಗಾಗ್ಗೆ ಏರ್ಪಡಿಸುತ್ತಿದ್ದ ವೇದಿಕೆಯ ಮೇಲೆ ಕವಿಗಳು ತುಂಬಿರುತ್ತಿದ್ದುದಷ್ಟೇ ಅಲ್ಲದೆ ಸಹೃದಯರೂ ಸಾಕಷ್ಟು ಸಂಖ್ಯೆಯಲ್ಲಿ ತುಂಬಿರುತ್ತಿದ್ದರು. ಕವಿಗೋಷ್ಠಿ ಕೊನೆಯಾಗುವವರೆಗೂ ಕದಲದೆ ಕುಳಿತಿರುತ್ತಿದ್ದ ಅವರು, ವೇದಿಕೆ ಮೇಲಿನ ಕವಿಗಳ ಕೊರೆತವೆಲ್ಲ ಮುಗಿದ ನಂತರ, ಪ್ರೇಕ್ಷಕರಲ್ಲಿ ಯಾರಾದರೂ ಕಾವ್ಯವಾಚನ ಮಾಡಲು ಆಸಕ್ತರಿದ್ದರೆ ಬರಬಹುದು ಎಂದು ಹೇಳಿದರೆ ಸಾಕು! ಆಧ್ಯಕ್ಷರು ದಿಗ್ಭ್ರಾಂತರಾಗುವಂತೆ ಇಡೀ ಪ್ರೇಕ್ಷಕ ವರ್ಗವೇ ಎದ್ದುನಿಂತು ಜೇಬಿನಿಂದ ಕವನದ ಚೀಟಿಗಳನ್ನು ಹೊರಗೆಳೆದು ಝಳಪಿಸುತ್ತಿದ್ದರು. ಮೈಕಿನ ಬಳಿ ನುಗ್ಗಾಟ ಶುರುವಾಗುತ್ತಿತ್ತು. ವೇದಿಕೆಯ ಕವಿಗಳಿಗೆ ಪ್ರೇಕ್ಷಕ ಕವಿಗಳು ಸರಿಯಾಗಿ ಕೊರೆದು ಮುಯ್ಯಿ ತೀರಿಸುತ್ತಿದ್ದರು. ಆದ್ದರಿಂದ ವಿಮರ್ಶಕರಿಗೆ ಅಲ್ಲಿ ಯಾರು ಕವಿ, ಯಾರು ಸಹೃದಯ ಎಂದು ವರ್ಗೀಕರಿಸಲಸಾಧ್ಯವಾದ ಸನ್ನಿವೇಶ ಇತ್ತು. ಶಿವಮೊಗ್ಗದಲ್ಲಿ ಸಾಹಿತ್ಯದ ಮಟ್ಟಿಗಂತೂ ಕಾರ್ಲ್‌ಮಾರ್ಕ್ಸ್ ಹೇಳಿದ ವರ್ಗರಹಿತ ಸಮಾಜ ಅನಾಯಾಸವಾಗಿ ನಿರ್ಮಾಣವಾಗಿತ್ತೆಂದೆ ಹೇಳಬಹುದು!
ಸೃಜನಾತ್ಮಕ ಸಾಹಿತ್ಯಕ್ಕೆ ಅನೇಕ ವೇಳೆ ಸಾಹಿತ್ಯಕ್ಕೆ ಸಂಬಂಧವೇ ಇರದ ವ್ಯಕ್ತಿಗಳ ಅಭಿಪ್ರಾಯ, ಮೆಚ್ಚುಗೆ, ಟೀಕೆಗಳು ಸಾಹಿತ್ಯ ವಿಮರ್ಶಕರಿಗಿಂತ ಗಾಢವಾದ ಪರಿಣಾಮ ಬೀರುವಂಥ ಅಚ್ಚರಿಯನ್ನು ನೋಡಿದ್ದೇನೆ. ಸೃಷ್ಟಿಶೀಲ ಸಾಹಿತ್ಯದ ಮೇಲೆ ಸಾಹಿತ್ಯೇತರ ವ್ಯಕ್ತಿಗಳ ಅಭಿಪ್ರಾಯಗಳು ಪರಿಣಾಮ ಬೀರುವುದರಲ್ಲಿ ಇಷ್ಟೊಂದು ಶಕ್ತವಾಗುವುದಾದರೆ ವಿಮರ್ಶಕರು ಏಕೆ ಅಷ್ಟೊಂದು ಕಷ್ಟಪಟ್ಟು ತಮ್ಮ ವಿಮರ್ಶೆಯ ಮೂಸೆಯಲ್ಲಿ ಕಾಯಿಸಿ ಕುಟ್ಟಿ ಮೌಲ್ಯಮಾಪನ ಮಾಡುವ ಕಷ್ಟ ತೆಗೆದುಕೊಳ್ಳುತ್ತಾರೆ ಎಂದು ಇದನ್ನು ಗಮನಿಸಿದ ನನಗೆ ಒಮ್ಮೊಮ್ಮೆ ಚಿಂತೆಯಾಗುತ್ತದೆ. ಬಹುಶಃ ಸಾಹಿತ್ಯೇತರ ವ್ಯಕ್ತಿಗಳು ಓರ್ವ ಲೇಖಕನ ಜೀವನ ಸಂದರ್ಭದಲ್ಲೇ ವಿಮರ್ಶಿಸುವುದರಿಂದ ಅವರ ಅಭಿಪ್ರಾಯಗಳು ಅಕಡೆಮಿಕ್ ವಿಮರ್ಶಕರ ವಿಶ್ಲೇಷಣೆಗಿಂತ ಆಳವಾಗಿ ಸೃಜನಶೀಲ ಲೇಖಕರಿಗೆ ತಾಗುತ್ತವೆಂದು ಕಾಣುತ್ತದೆ. ಎಂದರೆ ಅವರ ವಿಮರ್ಶೆ ಕರ್ತೃವಿನ ಜೀವನ ವಿಮರ್ಶೆಯೂ ಆಗುವುದರಿಂದ ಅವರ ಅಭಿಪ್ರಾಯಗಳು ಕೃತಿಗಳ ಮಟ್ಟಿಗೆ ಪರ್ಯಾವಸಾನವಾಗದೆ ಅದು ಲೇಖಕರ ಜೀವನ ಶೈಲಿ ಸಂವೇದನಾ ಕ್ರಮದವರೆಗೂ ವ್ಯಾಪಿಸಿರುತ್ತದೆ ಎಂದು ಹೇಳಬಹುದು.
ಉದಾಹರಣೆಗೆ ಕೋಣಂದೂರು ಲಿಂಗಪ್ಪನವರ ಕ್ರಾಂತಿಕಾರಿ ಸಂಘದ ಆಸ್ಥಾನ ವಿಮರ್ಶಕರಾಗಿ ಒಬ್ಬರು ಇಂಥ ಸಾಹಿತ್ಯೇತರ ವ್ಯಕ್ತಿ ಇದ್ದರು. ಅವರು ಯಾವತ್ತೂ ಸಾಹಿತ್ಯ ರಚನೆಗಾಗಲೀ ಅಧಿಕೃತ ಸಾಹಿತ್ಯ ವಿಮರ್ಶೆಗಾಗಲಿ ಕೈಹಾಕಿದವರೇ ಅಲ್ಲ. ಪುಸ್ತಕಗಳನ್ನು ಅವರು ಪುರಸೊತ್ತು ಸಿಕ್ಕರೆ, ಮಾಡಲು ಬೇರೇನೂ ಕೆಲಸ ಹೊಳೆಯದಿದ್ದರೆ ಮಾತ್ರ ಹೊರತೆಗೆಯುತ್ತಿದ್ದರು. ಪುಸ್ತಕದಲ್ಲಿ ಪ್ರಿಂಟಾದ ಭಾಷೆಯನ್ನು ಕಂಡರೇ ನನಗಾಗುವುದಿಲ್ಲ ಎಂದು ಆಗಾಗ ಅವರು ಹೇಳಿದ್ದುಂಟು. ಅವರಿಗೆ ಕಾವ್ಯ ಕವಿತೆಗಳಿಗಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಪತ್ರಿಕೆಗಳಲ್ಲಿ ಗಂಡ ಹೆಂಡತಿಯರು ಪರಸ್ಪರ ಕೊಟ್ಟುಕೊಳ್ಳುತ್ತಿದ್ದ ಸೋಡಚೀಟಿಗಳನ್ನು ಓದಿ ಆಸ್ವಾದಿಸುವುದರಲ್ಲಿ ತುಂಬಾ ಆಸಕ್ತಿ. ಶಿವಮೊಗ್ಗದ ಕಾಲೇಜಿನ ಗಳೆಯರೆಲ್ಲ ಸೇರಿ ಒಂದು ಕೈಬರಹದ ಮಾಸಪತ್ರಿಕೆ ಹೊರಡಿಸುತ್ತಿದ್ದರು. ಅದರಿಂದಾಗಿ ಅಲ್ಲಿ ಹುಟ್ಟಿಕೊಂಡಿದ್ದ ಅನೇಕ ಪುಡಿಕವಿಗಳೆಲ್ಲ ನಮ್ಮ ಆಸ್ಥಾನ ವಿಮರ್ಶಕನಿಗೆ ಹೆದರಿ ಗಾಬರಿ ಬೀಳುತ್ತಿದ್ದರು. ಮೃದು ಸ್ವಭಾವದ, ಯಾರೊಡನೆಯೂ ಎಂದೂ ಜಗಳವಾಡದ ಆದರೂ ಕವಿಗಳೆಲ್ಲ ಹೆದರಿ ಗಡಗಡ ನಡುಗುತ್ತಿದ್ದ ಈ ವಿಮರ್ಶಕ ಮಹಾಶಯನ ಹೆಸರೇ ಕಡಿದಾಳು ಶಾಮಣ್ಣ ಎಂದು.
ಶಾಮಣ್ಣನವರ ಭಯೋತ್ಪಾದಕ ಚಟುವಟಿಕೆಗಳಿಗೆ ಕಾರಣ, ಅವರ ಹಾಸ್ಯ ಮತ್ತು ವಿನೋದ. ಈ ಕಾರಣದಿಂದಲೇ ಈಚೆಗೆ ಅವರನ್ನು ರೈತ ಸಂಘದಿಂದ ಎಲ್ಲರೂ ಸರ್ವಾನುಮತದಿಂದ ಉಚ್ಛಾಟನೆ ಮಾಡಿದರೆಂದು ಕೇಳಿದೆ. ಶಾಮಣ್ಣನವರನ್ನು ಸಹಿಸಲು ಸಾಧ್ಯವಾಗದ ಎಲ್ಲ ಸಂಘಟನೆಗಳೂ ತತ್ಪಾಂಧತೆ, ಭಾವಾವೇಶ ಮತ್ತು ಮೂಲಭೂತ ವಾದಕ್ಕೆ ತುತ್ತಾಗುತ್ತವೆಂದು ನಂಬಿದ್ದೇನೆ. ವ್ಯಕ್ತಿಗೇ ಆಗಲಿ, ಸಂಘಟನೆಗೇ ಆಗಲಿ ಹಾಸ್ಯಪ್ರಜ್ಞೆ ನಷ್ಟವಾಯ್ತೆಂದರೆ ಕೇವಲ ಹೊಗಳು ಭಟ್ಟರ ತವರುಮನೆಯಾಗುತ್ತದೆ.
ಆಗ ಇನ್ನೂ ನವೋದಯದ ಕವಿಗಳ ಗುಂಗಿನಲ್ಲೇ ಇದ್ದ ಕಿಶೋರ ಕವಿಗಳೆಲ್ಲ ಭಾವತೀವ್ರತೆಯಿಂದಲೆ ಕಾವ್ಯ ಉದಿಸುತ್ತದೆ ಎಂದು ದೃಢವಾಗಿ ನಂಬಿದ್ದರು. ಕಾಲೇಜಿನ ಹುಡುಗಿಯರನ್ನೆಲ್ಲಾ ಕನಸಿನಲ್ಲಿ ಕಾಣುತ್ತ ಕಾವ್ಯ ಕನ್ನಿಕೆಯನ್ನು ಕಂಡೆವೆಂದು ಕವನ ಬರೆಯುತ್ತಿದ್ದರು. ಶಾಮಣ್ಣನ ಕೈಗೆ ಅವು ಸಿಕ್ಕರೆ ಸಾಕು, ಅದು ಯಾವ ವಿದ್ಯಾರ್ಥಿನಿಯನ್ನು ಕುರಿತದ್ದೆಂದು ಪತ್ತೆಮಾಡಿ, ಇಲ್ಲವೇ ಆರೋಪಿಸಿ, ಇಲ್ಲವೇ ಕವನಗಳಿಗೆ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಯಾರಾದರೂ ವಿದ್ಯಾರ್ಥಿನಿಯರಿಗೆ ಅಳವಡುವಂತೆ ಮಾಡಿ ಕವಿ ಕನಸಿನಲ್ಲಿ ಕಂಡ ಕಾವ್ಯಕನ್ನಿಕೆಯ ಗುಟ್ಟು ಬಯಲು ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿ ಹೆದರಿಯೇ ಕವಿಗಳು ಶಾಮಣ್ಣನನ್ನು ಕಂಡಕೂಡಲೆ ಟಾಪಿಕ್ ಬದಲಾಯಿಸಿ ಬಿಡುತ್ತಿದ್ದರು.
ಕೋಣಂದೂರು ಲಿಂಗಪ್ಪ ಒಮ್ಮೊಮ್ಮೆ ಭಾವೋದ್ವೇಗದ ಭಾಷಣ ಮಾಡಿ ಜನರನ್ನು ಉದ್ರೇಕಿಸಲು ಯತ್ನಿಸುತ್ತಿದ್ದರು. ಇಡೀ ಲೋಹಿಯಾ ವಾದಿಗಳ ಬಳಗದಲ್ಲಿ ಆಗ ಜಾರ್ಜ್ ಫರ್ನಾಂಡಿಸ್ ಮತ್ತು ಲಿಂಗಪ್ಪ ಇಬ್ಬರನ್ನು ಬಿಟ್ಟರೆ ಮತ್ತೆ ಯಾರೂ ಆ ರೀತಿ ಭಾವೋದ್ರೇಕದ ಭಾಷಣಗಳಿಗೆ ಹೋಗುತ್ತಿರಲಿಲ್ಲ. ಇವತ್ತಿಗೂ ಈ ಇಬ್ಬರಿಗೂ ಆ ಖಾಯಿಲೆ ವಾಸಿಯಾಗಿಲ್ಲವೆಂದೇ ಹೇಳಬಹುದು. ಆದರೆ ಶಿವಮೊಗ್ಗದಲ್ಲಿ ಮಾತ್ರ ಲಿಂಗಪ್ಪ ಭಾವೋದ್ರೇಕದ ಭಾಷಣ ಮಾಡಿದರೆ ಶಾಮಣ್ಣನ ಹಾಸ್ಯಕ್ಕೆ ಸಿಕ್ಕಿಕೊಳ್ಳುತ್ತಿದ್ದರು.
ಒಮ್ಮೆ ಶಾಮಣ್ಣ ಕಾಲೇಜಿನಲ್ಲಿ ಪ್ರೈಮರಿ ಸ್ಕೂಲ್ ಹುಡುಗರು ಮೂತ್ರವಿಸರ್ಜನೆಗೆ ಹೋಗಲು ಅನುಮತಿ ಕೇಳುವ ರೀತಿ ಕಿರು ಬೆರಳು ಎತ್ತಿ ತೋರಿಸುತ್ತ ಕಾಲೇಜಿನಲ್ಲಿ ಅಡ್ಡಾಡುತ್ತಿದ್ದರು. ನಾನು ನೋಡಿದವನು ನಿಮಗೆ ಒಂದಕ್ಕೆ ಅವಸರ ಆಗಿದ್ದರೆ ಹೋಗಿ. ಅದ್ಯಾಕೆ ಕಾಲೇಜಿನಲ್ಲಿ ಜಾಹೀರು ಮಾಡಿಕೊಂಡು ಓಡಾಡುತ್ತಿದ್ದೀರ ಎಂದು ದಬಾಯಿಸಿದೆ. ಅದಕ್ಕೆ ಶಾಮಣ್ಣ ಛೆ..ಛೆ.. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ಕನ್ನಡಕ್ಕಾಗಿ ಎತ್ತಿದ ಕಿರುಬೆರಳು ಎಂದರು. ನನಗೆ ಅರ್ಥವಾಗಲಿಲ್ಲ. ಆದರೂ ಅವರ ಮಾತಿನಲ್ಲಿ ಏನೋ ಕಿಡಿಗೇಡಿತನ ಕಂಡುದರಿಂದ ನಾನು ಸುಮ್ಮನಾದೆ. ಸಂಜೆ ಕೋಣಂದೂರು ಲಿಂಗಪ್ಪ ಬೆರಳು ತೋರಿಸಿದವರ ಮೇಲೆಲ್ಲ ರೇಗಿರೇಗಿ ಬೀಳುತ್ತಿದ್ದುದನ್ನು ನೋಡಿ ಏನೆಂದು ಕೇಳಿದಾಗ ಶಾಮಣ್ಣನವರು ಕಿರುಬೆರಳು ತೋರಿಸಿದ್ದರ ಉದ್ದೇಶ ಅರ್ಥವಾಯ್ತು. ಕುವೆಂಪು ಒಂದು ಲೇಖನದಲ್ಲಿ ಕನ್ನಡಕ್ಕಾಗಿ ಒಂದು ಕಿರುಬೆರಳನ್ನಾದರೂ ಎತ್ತು. ಅದಕ್ಕೆ ಗೋವರ್ಧನಗಿರಿಯನ್ನು ಎತ್ತುವ ಬಲ ಬರುತ್ತದೆ ಎಂದು ಹೇಳಿದ್ದನ್ನು ಉಲ್ಲೇಖಿಸಿ ಲಿಂಗಪ್ಪ ಭಾವೋದ್ವೇಗದ ಘರ್ಜನೆ ಮಾಡಿದ್ದರಂತೆ! ಶಾಮಣ್ಣ ಅದನ್ನು ಅಕ್ಷರಶಃ ಅಭಿನಯಿಸಿ ತೋರಿಸುತ್ತ ಲಿಂಗಪ್ಪನವರನ್ನು ನಗೆಪಾಟಲಿಗೀಡು ಮಾಡಿದ್ದರು.
ಎಲ್ಲಕ್ಕಿಂತ ಅನಂತಮೂರ್ತಿಯವರು ತಮ್ಮ ಕತೆಯಲ್ಲಿ ಕಾಮವನ್ನು ಟೊಂಕದಲ್ಲಿ ಹೊತ್ತಿ ಉರಿಯುವ ದೊಂದಿ ಎಂದು ವರ್ಣಿಸಿದ್ದನ್ನು ಕೇಳಿ ಹಾಗಾದರೆ ಇನ್ನು ಮೇಲೆ ಮೇಷ್ಟರಿಗೆ ಸಿಗರೇಟು ಸೇದಲು ಬೆಂಕಿ ಪೆಟ್ಟಿಗೆಯ ಅಗತ್ಯವೇ ಇಲ್ಲ. ಗುಂಡಿ ಬಿಚ್ಚಿದರೆ ಸಾಕು ಸಿಗರೇಟ್ ಲೈಟರ್ ರೆಡಿ! ಎಂದು ಸಭೆಯಲ್ಲೇ ನನ್ನ ಕಿವಿಯಲ್ಲಿ ಗುಟ್ಟಾಗಿ ಹೇಳಿ ನಾನು ಮರ್ಯಾದೆ ಕಳೆದುಕೊಳ್ಳುವ ಭಯದಿಂದ ಸಭೆಯಿಂದೆದ್ದು ಹೊರಗೆ ಹೋಗಿ ನಗಬೇಕಾಯ್ತು. ಶಾಮಣ್ಣನವರ ಪ್ರಭಾವದಿಂದ ತಮಾಷೆ, ವಿನೋದ, ಹಾಸ್ಯಗಳು ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿ ಹೋದವು. ಒಂದು ಸಂಗತಿಯನ್ನು ಏಕಕಾಲದಲ್ಲಿ ಅರ್ಥಪೂರ್ಣವಾಗಿಯೂ ಅಸಂಗತವಾಗಿಯೂ ಕಾಣಬಹುದಾದ ಸಾಧ್ಯತೆಗಳು ಗೋಚರಿಸಿದವು. ಆದರೆ ಇದಕ್ಕಿಂತಲೂ ಮುಖ್ಯವಾಗಿ ನನಗೆ ಗೋಚರಿಸಿದ ಅಂಶವೆಂದರೆ ಸನ್ನಿವೇಶದ ಸಮರ್ಥನೆ ಇಲ್ಲದ ಭಾಷಾವೇಶವನ್ನು ಹಾಸ್ಯಪ್ರಜ್ಞೆ ಸಮರ್ಥವಾಗಿ ತಡೆಗಟ್ಟುತ್ತದೆ ಎನ್ನುವುದು. ಹಾಗಾಗಿ ಈ ಹಾಸ್ಯಪ್ರಜ್ಞೆಯಿಂದ ನನ್ನ ಬರಹಗಳಲ್ಲಿ ಭಾವುಕತೆ ಕಡಿಮೆಯಾಗುತ್ತ ವೈಚಾರಿಕತೆ ಮುಂದಾಯ್ತು. ಕತೆ ಕಾದಂಬರಿಗಳ ಪಾತ್ರಗಳೆಲ್ಲ ಪರಸ್ಪರ ಹಾಸ್ಯ ಮಾಡುವುದಲ್ಲದೆ ತಮ್ಮನ್ನು ತಾವೇ ವಿಡಂಬನೆ ಮಾಡುವುದರಿಂದ ಓದುಗರ ದೃಷ್ಟಿಯಲ್ಲಿ ಹಾಸ್ಯಾಸ್ಪದವಾಗುವ ಸಂಭವ ಕಡಿಮೆಯಾಯ್ತು.
ಹೀಗೆ ಹೇಳಿದೆನೆಂದು ಈ ಪ್ರಜ್ಞೆ ಎಲ್ಲಕ್ಕೂ ರಾಮಬಾಣವೆಂದಾಗಲೀ, ಇದೊಂದು ಸರ್ವರೋಗ ನಿವಾರಣೆ ಎಂದಾಗಲೀ ನಾನು ಹೇಳುತ್ತಿಲ್ಲ. ಏಕೆಂದರೆ ಒಳ್ಳೆಯ ಬರವಣಿಗೆಗೆ ಉತ್ತಮ ಕಲಾಕೃತಿಗಳಿಗೆ ನಿಶ್ಚಿತ ಸಮೀಕರಣ ಒಂದನ್ನು ನಾನು ಇದುವರೆಗೆ ಕಂಡಿಲ್ಲ. ತಮಾಷೆ ಹಾಸ್ಯಗಳು ಲೇಖಕರಿಗೆ ಭಾವೋದ್ವೇಗದ ಬರವಣಿಗೆಗಳಷ್ಟೇ ಅಪಾಯಕಾರಿಯಾಗಬಹುದು. ನಿಷ್ಠುರವಾದ ಸಂಯಮ, ಕರಾರುವಾಕ್ಕಾದ ಔಚಿತ್ಯ ಪ್ರಜ್ಞೆ ಇಲ್ಲದೆ ಈ ಜಾಡು ಹಿಡಿದ ಲೇಖಕ ಬಹುಬೇಗ ನಕಲಿ ಶಾಮನಾಗುವುದರಲ್ಲಿ ಸಂಶಯವಿಲ್ಲ. ಗಂಭೀರವಾದುದನ್ನು ಆಳವಾದುದನ್ನು ಕಲಾಕೃತಿಗಳಲ್ಲಿ ನಿರೂಪಿಸಲು ಅಸಾಧ್ಯವಾದ ಸ್ಥಿತಿ ತಲುಪುತ್ತಾನೆ. ಹಾಸ್ಯ ತಮಾಷೆಗಳು ಮನೋರೋಗಗಳಂತಾಗಿ ಲೇಖಕರ ಮಾನವೀಯ ಅನುಕಂಪ, ದಯೆ ಕರುಣೆಗಳ ಸೆಲೆಯನ್ನೇ ಬತ್ತಿಸಿಬಿಡಬಹುದು. ಬೀದಿಯಲ್ಲಿ ಹುಚ್ಚರಿಗೆ ಕಲ್ಲೆಸೆಯುತ್ತಾ ನಗುವವರ ಕ್ರೂರಸ್ಥಿತಿಗೆ ತಲುಪಬಹುದು. ಸೃಷ್ಟಿಯ ನಿರುದ್ದಿಶ್ಯ ಅಸಂಗತತೆಯನ್ನು ಗುರುತಿಸುವ ವ್ಯಂಗ್ಯಕ್ಕೂ, ಕ್ರೌರ್ಯದ ಮುಖವಾಡವಾದ ವ್ಯಂಗ್ಯಕ್ಕೂ, ನಕಲಿಯ ವ್ಯಂಗ್ಯಕ್ಕೂ ಇರುವ ಅಗಾಧ ಅಂತರವನ್ನು ನಾವು ಅರಿಯಬೇಕಾಗುತ್ತದೆ.
ಆದರೆ ಎಲ್ಲಿ ಅರಿಯುವುದು? ಪದಗಳ ವಾಕ್ಯಗಳ ಭಾಷೆಯ ನಡುವೆಯೋ? ನಿರಂತರ ಘಟನಾವಳಿಗಳ ಬದುಕಿನಲ್ಲೋ? ಆವತ್ತು ನಾವ್ಯಾರೂ ಅಂಥ ಬರಹಗಾರರೇನಾಗಿರಲಿಲ್ಲ. ಕಲಿಯಲು ಇದ್ದಿದ್ದು ಜೀವನದ ಸನ್ನಿವೇಶ ಸಂದರ್ಭಗಳೇ.
ಒಬ್ಬ ಬರಹಗಾರನ ಮೇಲೆ ಆದ ಪ್ರಭಾವಗಳನ್ನು ಗುರುತಿಸುವಲ್ಲಿ ಆಗಿನ ಕಾಲದ ತಾತ್ವಿಕ ಸಂಘರ್ಷಗಳನ್ನೂ ಸಿದ್ಧಾಂತ ಆಂದೋಲನಗಳನ್ನೂ ಹೆಸರಿಸುತ್ತಾರೆ. ಆದರೆ ಲೆಕ್ಕಕ್ಕೆ ಸಿಕ್ಕದ ಗಮನಾರ್ಹವಲ್ಲದ ಏನೇನೋ ವಿಚಿತ್ರ ಅನುಭವ ಪರಂಪರೆಗಳು ಲೇಖಕನ ವ್ಯಕ್ತಿತ್ವದ ಎರಕದಲ್ಲಿ ಮಿಳಿತವಾಗಿ ಕರಗಿರುತ್ತದೆ. ತತ್ವಸಿದ್ಧಾಂತಗಳ ಪ್ರಭಾವಗಳು ಮೇಲು ನೋಟಕ್ಕೆ ಕಂಡರೂ ಒಳಹೊಕ್ಕು ನೋಡಿದರೆ ಕಂಗೆಡಿಸುವಂಥ ಪ್ರಕ್ಷುಬ್ಧ ಅಲ್ಲೋಲಕಲ್ಲೋಲಗಳಿರುತ್ತವೆ.
[ಪೂರ್ಣಚಂದ್ರ ತೇಜಸ್ವಿಯವರು ೧೯೯೧ ರಲ್ಲಿ ಲಂಕೇಶ್ ಪತ್ರಿಕೆಗೆ ಬರೆದ `ವಿಮರ್ಶೆಯ ವಿಮರ್ಶೆ` ಸರಣಿ ಲೇಖನಗಳಲ್ಲಿ ಒಂದಾದ ಈ ಬರಹದ ಒರಿಜಿನಲ್ ಹೆಸರು `ಕವಿಗಳು ಸಹೃದಯರು ಇತ್ಯಾದಿ`. ತೇಜಸ್ವಿಯವರ ಈ ವಿಮರ್ಶಾ ಲೇಖನಗಳು ಸದ್ಯದಲ್ಲೇ ಪುಸ್ತಕ ರೂಪದಲ್ಲಿ ಹೊರಬರಲಿವೆ.]
[ಲೇಖನ ಕೃಪೆ - ಶ್ರೀಮತಿ ರಾಜೇಶ್ವರಿ ತೇಜಸ್ವಿ]
[ಚಿತ್ರ- ನೇತ್ರರಾಜು]