ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ- ಕನ್ನಡ ಕಾವ್ಯ ಮತ್ತು ಆಸ್ಟ್ರೇಲಿಯಾದ ಕುಲು ಕುಲು ನಗು    
ಸುದರ್ಶನ್
ಶುಕ್ರವಾರ, 19 ಸೆಪ್ಟೆಂಬರ್ 2008 (04:22 IST)

 ಮೊನ್ನೆ ರೈಲಿನಲ್ಲಿ ಹೋಗುತ್ತಾ, ಲ್ಯಾಪ್ಟಾಪಿನಲ್ಲಿ ಕನ್ನಡ ನವ್ಯ ಪರಂಪರೆಯ ಬಗ್ಗೆ ವಿದ್ವತ್‌ ಪೂರ್ಣವಾದ ಲೇಖನ ಒಂದನ್ನು ಓದುತ್ತಿದ್ದೆ. ನವ್ಯದ ಕಾಲಘಟ್ಟ, ಸಾಮಾಜಿಕ ಪರಿಸರ, ಅದರ ಹಿಂದಿನ ಸ್ಪೂರ್ತಿ, ಅದು ಮಾಡಿದ ಪ್ರಭಾವ ಹೀಗೆಲ್ಲಾ ಬಲು ಕಗ್ಗಂಟಿನ ವಿಷಯಗಳು ಅದರಲ್ಲಿ ಇದ್ದವು. ಒಂದು ಸಾಲು ಅರ್ಥವಾದರೆ ಮತ್ತೊಂದು ಸಾಲನ್ನು ಎರಡೆರಡು ಸಲ ಓದಬೇಕಾಗಿತ್ತು. ಮೂರನೇ ಸಾಲು ಎಷ್ಟು ಸಲ ಓದಿದರೂ ತಿಳಿಯುತ್ತಿರಲಿಲ್ಲ. ತಿಣುಕುತ್ತಿದ್ದೆ.

ಅಷ್ಟು ಹೊತ್ತಿಗೆ ನನ್ನ ಮುಂದೆ ಇಬ್ಬರು ಹುಡುಗಿಯರು ಬಂದು ಕೂತರು. ಹದ್ನೆಂಟಿಪ್ಪತ್ತು ವರ್ಷದ ಚೆಲುವೆಯರು. ಉಳಿದವರಿಗೆ ಅರ್ಥವಾಗದ ಹಾಗೆ ತುಂಡು ತುಂಡು ಮಾತುಗಳನ್ನು ಆಡಿಕೊಳ್ಳುತ್ತ ನಗುತ್ತಿದ್ದರು. ಬಹುಶಃ ಒಬ್ಬಳು ಎಲ್ಲೋ ಕೆಲಸ ಮಾಡುತ್ತಿದ್ದಳೆಂದು ಕಾಣುತ್ತದೆ. ಇನ್ನೊಬ್ಬಳಂತೂ ಈಗಷ್ಟೆ ಯೂನಿವರ್ಸಿಟಿ ಸೇರಿದವಳಂತಿದ್ದಳು. ನೋಡಿದರೆ, ಹಲವು ವರ್ಷಗಳ ಆಪ್ತ ಗೆಳತಿಯರಿರಬಹುದು ಅನಿಸುವಂತಿತ್ತು.

ಆ ಚೆಲುವೆಯರನ್ನೇ ಹೆಚ್ಚು ನೋಡಿದರೆ ಪೋಕರಿ ಅಂದುಕೊಳ್ಳಬಹುದು ಎಂಬ ಎಚ್ಚರದಲ್ಲಿ ಮತ್ತೆ ನನ್ನ ಓದಿನತ್ತ ತಿರುಗಿದೆ. ಕನ್ನಡದ ನವ್ಯದ ಕಾಲಘಟ್ಟದ ಹೊತ್ತಿಗೆ ಹೇಗೆ ಜಗತ್ತಿನ ಬೇರೆಡೆ ನವ್ಯೋತ್ತರ ಬಂದುಬಿಟ್ಟಿತ್ತು ಎಂಬ ಸಂಗತಿ ಬಂತು. ಹಾಗಾಗಿ ನಮ್ಮ ನವ್ಯದಲ್ಲೂ ತುಸು ನವ್ಯೋತ್ತರ (post-modern) ಸುಳಿದುಬಿಟ್ಟಿದೆ ಎಂದಿದ್ದದ್ದು ನೋಡಿ ಯೋಚಿಸತೊಡಗಿದೆ. ನನ್ನ ಅಲ್ಪ ಓದಿನಲ್ಲೇ ಕನ್ನಡದ ಯಾವ ಕೃತಿಯಲ್ಲಿ ಪೋಸ್ಟ್-ಮಾಡರ್ನ್ ಬಂದಿರಬಹುದು ಎಂದು ಹುಡುಕಿದೆ. ಯಾವುದೂ ಹೊಳೆಯಲಿಲ್ಲ. ಕನ್ನಡದ ನವ್ಯದಲ್ಲಿ ನವ್ಯ ಮತ್ತು ಪೋಸ್ಟ್-ಮಾಡರ್ನ್ ಕಲಸಿಕೊಂಡಿದೆ ಎಂದು ಓದಿ, ಹಾಗಂದರೆ ಏನಿರಬಹುದು ಎಂದು ಎಷ್ಟು ಯೋಚಿಸಿದರೂ ಗೊತ್ತಾಗಲಿಲ್ಲ.

ಅಷ್ಟರಲ್ಲಿ ಇಬ್ಬರೂ ಏನಕ್ಕೋ ಜೋರಾಗಿ ನಕ್ಕರು. ನನ್ನ ಯೋಚನೆಗೆ ಭಂಗವಾದಂತೆನಿಸಿ ಕಿರಿಕಿರಿಯಾಯಿತು. ಸರಿ ಇವರ ಬಾಯ್‌ಫ್ರೆಂಡುಗಳ ಜತೆಗಿನ ಸರಸದ ಕಥಾನಕ ಶುರುವಾಗುತ್ತದೆ ಅನಿಸಿತು. ತುಸು ಅಸಹನೆಯಿಂದ ಯಾವುದಾದರೂ ಸುಬ್ಬಲಕ್ಷ್ಮಿ ಸಂಗೀತ ಕೇಳೋಣ ಅಂತ ನನ್ನ ಇಯರ್‍ ಫೋನು ತೆಗೆದು ಕಿವಿಗೆ ತುರುಕಿಕೊಂಡೆ. ನನ್ನ ಲ್ಯಾಪ್ಟಾಪಿನಲ್ಲಿ ಸಂಗೀತದ ಫೋಲ್ಡರ್‍ ಹುಡುಕತೊಡಗಿದೆ. ಅಷ್ಟರಲ್ಲಿ ಸ್ವಲ್ಪ ದೊಡ್ಡವಳು ತನ್ನ ಮನೆಯಲ್ಲಿ ಕಳ್ಳತನವಾಯಿತು ಗೊತ್ತ ಎಂದಳು. ಇನ್ನೊಬ್ಬಳು "ಹೌದ್‌ಆಆಆಆ..." ಎಂದು ಕಣ್ಣುಬಿಟ್ಟುಕೊಂಡು ನೋಡಿದಳು. ಕಿಟಕಿ ಒಡೆದು ಕಳ್ಳರು ಒಳಗೆ ಬಂದಿದ್ದರಂತೆ. ಲ್ಯಾಪಟಾಪ್‌, ಮನೆ ಕಂಪ್ಯೂಟರ್‍, ಟಿವಿ, ಕ್ಯಾಮೆರಾ, ಪೋನು, ಐಪಾಡು, ಒಂದಷ್ಟು ದುಡ್ಡು, ಸಿಡಿ, ಡಿವಿಡಿ ಎಲ್ಲಾ ಸಾರಿಸಿ ಗುಡಿಸಿಕೊಂಡು ಹೋಗಿದ್ದರಂತೆ. ಫ್ರಿಡ್ಜಿನಲ್ಲಿದ್ದ ಅಡುಗೆಯೆಲ್ಲಾ ತಿಂದುಂಡು ಹೋಗಿದ್ದರಂತೆ. ಕೇಳುತ್ತಿದ್ದವಳು ನಕ್ಕರೂ ಹೇಳುತ್ತಿದ್ದವಳು ನಗಲಿಲ್ಲ. ಏನೋ ಯೋಚಿಸುತ್ತಾ ಕೂತಳು.

ಇನ್ನೇನು ಸಂಗೀತ ಕಿವಿಗೆ ಸುರಿದುಕೊಳ್ಳಬೇಕು ಅನ್ನುವಾಗ ಅವರ ಮಾತು ಕಿವಿ ನಿಮಿರಿಸಿತ್ತು. ಅವಳ ಕಳ್ಳತನದ ಸಂಗತಿ ಕೇಳುತ್ತಾ ಸುಬ್ಬಲಕ್ಷ್ಮಿ ಸಂಗೀತ ಹುಡುಕುವುದು ಬಿಟ್ಟು ಮತ್ತೆ ನನ್ನ ನವ್ಯದ ಲೇಖನಕ್ಕೆ ಬಂದುಬಿಟ್ಟಿದ್ದೆ. ಅದರಲ್ಲಿ ದೇವನೂರು ಮಹಾದೇವರ ‘ಡಾಂಬರು ಬಂದುದು' ಕತೆಯ ಬಗ್ಗೆ ಇತ್ತು. ಸಮಾಜದಲ್ಲಿ ಆಗುತ್ತಿದ್ದ ಬದಲಾವಣೆ, ನವೀಕರಣವನ್ನು ಹಿಡಿಯಲು ಬಳಸುತ್ತಿದ್ದ ಪ್ರತಿಮೆಗಳ ಬಗ್ಗೆ ಉದ್ದವಾದ ವಿವರಣೆ ಇತ್ತು.

ಕೊಂಚ ಸುಮ್ಮನಿದ್ದವಳು, ತನ್ನ ಅಪ್ಪ-ಅಮ್ಮನ ಮದುವೆ ಬಗ್ಗೆ ಹೇಳತೊಡಗಿದಳು. ಮಾತಿನಲ್ಲಿ ಹಿಂದಿನ ಖುಷಿಯಿರಲಿಲ್ಲ. ಯಾಕೆಂದರೆ, ತನ್ನ ಅಪ್ಪ-ಅಮ್ಮ ತಮ್ಮ ಮದುವೆಗೆಂದು ಖರೀದಿಸಿ ತಂದಿದ್ದ ಹಲವಾರು ವಸ್ತುಗಳು ಕಳುವಾಗಿತ್ತಂತೆ. ಹುಡುಗಿಯ ಅಮ್ಮನ ಅಜ್ಜಿಯ ಮದುವೆ ಡ್ರೆಸ್ ಕೂಡ ಕಳ್ಳ ಕದ್ದಿದ್ದನಂತೆ. ಮದುವೆಗೆಂದು ಎಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಳಂತೆ. ಎರಡು ದಿನದ ಹಿಂದೆಯಷ್ಟೇ ಅದನ್ನು ಪೆಟ್ಟಿಗೆಯಿಂದ ಹೊರತೆಗೆದಿದ್ದಳಂತೆ. ತನ್ನನ್ನು ಮತ್ತು ತನ್ನ ತಮ್ಮನನ್ನು ಹೆತ್ತು ಸಾಕಿ ಸಲಹಿದ ಅಪ್ಪ-ಅಮ್ಮಂದಿರಿಗೆ ಹೀಗಾಗಬಾರದಿತ್ತು ಎಂದು ತುಂಬಾ ಭಾರವಾಗಿ ಹೇಳಿದಳು. ಹೋದ ವರ್ಷ ಅಪ್ಪ ಅಮ್ಮನಿಗೆ ಪ್ರೊಪೋಸ್ ಮಾಡಿದಾಗ ಅವಳು ಸಣ್ಣ ಮಗುವಿನಂತೆ ಕುಣಿದಿದ್ದಳಂತೆ.

ಕಿವಿಯಲ್ಲಿ ಇಯರ್‍ ಫೋನ್ ಇದ್ದರೂ ನಾನು ಸಂಗೀತ ಕೇಳುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನವ್ಯ, ನವ್ಯೋತ್ತರ ಭಾರವಾಗಿ ಕಾಣುತ್ತಿತ್ತು. ವಾಕ್ಯ ಎಲ್ಲಿ ಶುರುವಾಗಿ ಎಲ್ಲಿ ಕೊನೆಯಾಗುತ್ತಿದೆ ಎಂದು ಗೊತ್ತಾಗದಷ್ಟು ಗಲಿಬಿಲಿ ಆಗುತ್ತಿತ್ತು. ಆದರೆ, ಅಷ್ಟರಲ್ಲಿ ಆಲನಹಳ್ಳಿಯ ಗೆಂಡೆತಿಮ್ಮನ ಬಗ್ಗೆ ಒಂದಿಷ್ಟು ಸಂಗತಿ ಬಂತು. ಖುಷಿಯಾಗಿ ಓದತೊಡಗಿದೆ. ಹಳ್ಳಿಗೆ ಬ್ರಾ, ರಿಬ್ಬನ್, ಪೌಡರ್‍, ಸ್ನೋ ಬರುವ ಪ್ರಸಂಗದ ಬಗ್ಗೆ, ಅದು ಹಳ್ಳಿಯ ಜೀವನವನ್ನು ಅಲ್ಲಾಡಿಸುವ ಬಗ್ಗೆ ಓದಿ ಕತೆಯೇ ಓದಿದಷ್ಟು ಲವಲವಿಕೆ ಮೂಡಿತು.

ಆ ಹುಡುಗಿ ತನ್ನ ಅಪ್ಪ-ಅಮ್ಮನ ಮದುವೆಯನ್ನು ಅವರು ಮುಂದೂಡದ ಹಾಗೆ ಮಾಡಲು ತಾನೂ, ತನ್ನ ತಮ್ಮನೂ ಯೋಚಿಸುತ್ತಿರುವುದಾಗಿ ಹೇಳಿದಳು. ಅಷ್ಟೇ ಅಲ್ಲ, ಅವರ ಮದುವೆ ಖರ್ಚು ತುಂಬಿಕೊಡಲು ತನ್ನ ತಮ್ಮ ಬಿಟ್ಟಿದ್ದ ಪಾರ್ಟ್ ಟೈಮ್ ಕೆಲಸವನ್ನು ಮತ್ತೆ ಹಿಡಿದಿದ್ದಾನೆ. ತಾನೂ ತುಸು ಹೆಚ್ಚು ಓವರ್‍ ಟೈಮ್ ಮಾಡ್ತಾ ಇದ್ದೀನಿ ಎಂದೆಲ್ಲಾ ಪಟ್ಟಿ ಮಾಡಿದಳು. ಇನ್ಶೂರೆನ್ಸ್‌ನಿಂದ ಹೆಚ್ಚು ದುಡ್ಡು ಬರುತ್ತಿಲ್ಲ ಎಂದು ಅವಳ ಅಮ್ಮ ತಲೆ ಮೇಲೆ ಕೈಹೊತ್ತು ಕೂತಿದ್ದಾಳಂತೆ. ಇಬ್ಬರೂ ಮಕ್ಕಳು ಅವರಿಗೆ ಸಹಾಯ ಮಾಡುವುದಾಗಿ ಭಾಷೆ ಕೊಟ್ಟಿದ್ದಾರಂತೆ.

ಹೀಗಂದು ಮೊದಲಿಗೆ ಕುಲುಕುಲು ನಗುತ್ತಿದ್ದ ಹುಡುಗಿಯರು ಸುಮ್ಮನಾದರು. ತುಂಬಾ ಧೀರ್ಘವಾದ ಮೌನ ಆವರಿಸಿತು. ರೈಲು ಓಡುತ್ತಿದ್ದ ಗುಡುಗುಡು ಸದ್ದು ಮಾತ್ರ ಮಂದವಾಗಿ ಕೇಳುತ್ತಿತ್ತು. ಗೆಂಡೆತಿಮ್ಮ ಕತೆಯಲ್ಲಿ ಮನೆಯ ಗಲೀಜಿನ ಬಗ್ಗೆ ಅತ್ತೆ-ಸೊಸೆಯರ ಜಗಳದ ಭಾಗ ಓದಿ ಸಣ್ಣಗೆ ನಕ್ಕೆನೇನೋ. ಇಬ್ಬರೂ ನನ್ನತ್ತ ನೋಡಿದಂತೆ ಅನಿಸಿತು. ತಲೆಯೆತ್ತಿ ನೋಡಿದೆ. ಇಬ್ಬರೂ ಎದುರಿಗೇ ಇದ್ದರೂ ಅವರ ಯೋಚನೆಗಳು ಅವರನ್ನು ದೂರ ಬೇರೆಲ್ಲೋ ಒಯ್ದಿತ್ತು.

ಪುಟದ ಮೊದಲಿಗೆ
 
Votes:  5     Rating: 4.8    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು