ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದಿನದ ಬ್ಲಾಗ್: ಅನುಲೋಕದ ಹನಿಗಳು    
ಜಿತೇಂದ್ರ
ಬುಧವಾರ, 30 ಸೆಪ್ಟೆಂಬರ್ 2009 (09:15 IST)

ಅನುಲೋಕದ ಹನಿಗಳು

‘ನಿನ್ನ ವಿರಹದಲ್ಲಿ ನಿಮಿಷವೊಂದು
ಯುಗವಾದಾಗ, ಕಣ್ಣಲ್ಲಿ ನೀರು...
ಜೀವನವೆ ಬೇಡವೆನಿಸಿದಾಗಲೂ
ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ
ಮತ್ತೆ ಬದುಕಬೇಕೆನಿತ್ತು..’

ಹೀಗೆ ನಲ್ಲನ ನೆನಪಲ್ಲಿ ನಾಲ್ಕು ಹನಿ ಬರೆದಿಟ್ಟಿದ್ದಾರೆ ರಶ್ಮಿ. ‘ಇದು ನನ್ನ ಇನಿಯನಿಗಾಗಿ .... ಪ್ರೀತಿಯ ಸುಖ ಅನುಭವಿಸಿಯೇ ಅರಿಯಬೇಕು. ಅಲ್ಲಿ ಒಂದಿಷ್ಟು ಕಣ್ಣೀರು, ನಗು, ಬೇಸರ ವಿರಹ ಎಲ್ಲವೂ ಇದೆ. ಅದರೂ ಪ್ರೀತಿ ಮಧುರ, ಆ ನೆನಪುಗಳು ಅಮರ. ಇದು ಪ್ರಣಯ ಲೋಕ.. ಭಾವನೆಗಳು ಮನದ ಕದ ತಟ್ಟುವಾಗ ಪ್ರಣಯಾನುಭವವು ಇಲ್ಲಿ ಅಕ್ಷರದ ರೂಪವನ್ನು ಪಡೆಯುತ್ತದೆ.’ ಇದು ‘ಅನುಲೋಕ’ದ ಮುನ್ನುಡಿ. ಓದಿಬನ್ನಿ.

ಪ್ರಸನ್ನರ ಹದಿಹರೆಯದ ಹಾಡುಗಳು

‘ಮೊನ್ನೆ ಎನನ್ನೋ ಹುಡುಕುತ್ತಿದ್ದಾಗ ಧೂಳು ಬಿದ್ದ ಹಳೆಯ ಡೈರಿಯೊಂದರಿಂದ ಕೆಲವು ನನ್ನ ಹದಿಹರೆಯದ ಕವಿತೆಗಳು ಸಿಕ್ಕವು. ದಾವಣಗೆರೆಯ ನನ್ನ ಕಲಾಶಾಲೆಯ ದಿನಗಳಲ್ಲಿ ಯಾವುದೋ ಭಾವುಕತೆಯಿಂದ ಎಲ್ಲೆಲ್ಲೋ ಬರೆದು, ಗೀಚಿದ ಈ ಹಾಡುಗಳನ್ನು ಒಂದು ಡೈರಿಯಲ್ಲಿ ಒಟ್ಟಾಗಿ ಕೂಡಿಸಿದ್ದೆ. ಆಮೇಲೆ ಎನಾಯಿತೋ ಗೊತ್ತಿಲ್ಲ, ಕನಸುಗಳ ಹಿಂದೆ ಬೆನ್ನತ್ತಿ ಕಾಲಿಗೆ ನಾಯಿಗೆರೆ ಬಿದ್ದವನಂತೆ ಪ್ರಪಂಚವೆಲ್ಲಾ ಅಲೆದ ಮೇಲೆ... ಕಳೆದು ಹೋಗಿದ್ದ ಮುಗ್ಧ ನೆನಪುಗಳ ಮುಖಾಮುಖಿ...’

ಹೀಗೆ ಬರೋಬ್ಬರಿ ಹದಿನೈದು ವರ್ಷಗಳ ಹಿಂದೆ ಬರೆದು ಅಡಗಿಸಿಟ್ಟ ಕವಿತೆಗಳನ್ನ ಇಂದು ತಂದು ಬ್ಲಾಗಿಗೆ ತುಂಬಿಸಿದ್ದಾರೆ ಪ್ರಸನ್ನ. ಅವರ ಈ ಹದಿಹರೆಯದ ಹಾಡುಗಳು ಈ ದಿನದ ಓದಿಗೆ.

ಶೆಟ್ಟರ ದಸರೆಯ ನೆನಪುಗಳು

ಇದು ದಸರೆಯ ಸಂಭ್ರಮದ ದಿನ. ಒಂಭತ್ತು ದಿನಪೂರ್ತಿ ಹಬ್ಬದ ಸಂಭ್ರಮ. ಇಂತಹ ಹೊತ್ತಲ್ಲಿ, ಈ ಬಾರಿಯಾದರೂ ಊರಲ್ಲಿ ಹಬ್ಬ ಆಚರಿಸುವ ಕನಸು ಕಂಡು, ಕೈಗೂಡದೇ ದೂರದೂರಿನಲ್ಲೇ ಉಳಿಯುವಂತಾದ ಶೆಟ್ಟರು, ಅಲ್ಲಿಂದಲೇ ತಮ್ಮೂರ ದಸರಾದ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ, ಉತ್ತರ ಕರ್ನಾಟಕದ ದಸರಾ ಆಚರಣೆಯನ್ನ ಓದುಗರ ಮುಂದಿಟ್ಟಿದ್ದಾರೆ. ಶೆಟ್ಟರ ದಸರೆಯ ನೆನಪುಗಳು ಈ ಹೊತ್ತಿನ ಓದಿಗೆ.

ಭೂರಮೆಯ ದ್ವಂದ್ವಗಳು

‘ಬೆಟ್ಟ,ಗುಡ್ಡ ,ಕಾಡುಗಳೆಂದರೆ ಪ್ರಾಣ.ಜೀವಶಾಸ್ತ್ರದಲ್ಲಿ ತುಂಬಾ ಆಸಕ್ತಿ.ಓದು ಮೆಚ್ಚಿನ ಹವ್ಯಾಸ. ಬರೆಯುವ ಅಭ್ಯಾಸ ಕಡಿಮೆ.ಮನಸ್ಸಿನ ತುಮುಲಗಳನ್ನು ಕಳೆಯಲು ಬರೆದು ನಂತರ ಹರಿದೆಸೆಯುವ ಅಭ್ಯಾಸವಿತ್ತು.ಅನೇಕ ಬ್ಲಾಗ್ ಬರಹಗಳನ್ನು ಓದಿ ,ನಾನೂ ಬರೆಯಬಲ್ಲೆನೆಂಬ ವಿಶ್ವಾಸ ಹುಟ್ಟಿ ಬರೆಯಲು ಪ್ರಾರಂಭಿಸಿದ್ದೇನೆ.’

ಹೀಗೆ ಪರಿಚಯಮಾಡಿಕೊಳ್ಳುತ್ತಾ, ‘ಭೂರಮೆ’ಯ ಹೆಸರಿನಲ್ಲಿ ಬ್ಲಾಗಿಸುತ್ತಿದ್ದಾರೆ ಸುಮ ಸುಧಾಕಿರಣ್. ಆಸಕ್ತಿಯಂತೆಯೇ ಅವರ ಹೆಚ್ಚಿನ ಲೇಖನಗಳೂ ಜೀವಶಾಸ್ತ್ರದ ವಿಷಯದ ಕುರಿತೇ ಇವೆ. ‘ಪ್ರಾಣಿಗಳ ರಕ್ಷಣಾ ತಂತ್ರಗಳು, ಗೂಬೆಯ ಗೋಳು,’ ಮೊದಲಾದ ಲೇಖನಗಳು ವಿಷಯಾಧಾರಿತವಾದರೆ, ‘ಪಾರಿವಾಳ ಪುರಾಣ’ ತಮ್ಮ ಮನೆಯ ಬಾಲ್ಕನಿಯಲ್ಲಿ ಪಾರಿವಾಳ ಸಾಮ್ರಾಜ್ಯ ಸ್ಥಾಪಿತವಾದ ಸ್ವ-ಅನುಭವದ ಚಿತ್ರ ಸಹಿತ ಕಥನ. ಹೀಗಿದ್ದವರು ಸದ್ಯ ಹೊಸತೊಂದು ದ್ವಂದ್ವದಲ್ಲಿದ್ದಾರೆ. ಓದಬೇಕಿದ್ದವರು ಒಮ್ಮೆ ಭೇಟಿ ಕೊಡಿ. 

ರವಿಕಾಂತರ ಹೊಸಕಥೆ

‘ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......’

ಹೀಗೆ ಕಣ್ಣೆದುರೇ ನಡೆದ ಘಟನೆಯನ್ನ ಕಥೆ ರೂಪಕ್ಕೆ ತಂದಿಟ್ಟಿದ್ದಾರೆ ರವಿಕಾಂತ ಗೋರೆ, ಅವರದ್ದೇ ಹೆಸರಿನ ಬ್ಲಾಗಿನಲ್ಲಿ. ಕಥೆಯ ಜೊತೆಗೆ ಒಂದಿಷ್ಟು ಅನುಭವ-ಅನಿಸಿಕೆ, ಪ್ರವಾಸಕಥನಗಳೂ ಇವೆ. ಓದಬೇಕಿದ್ದವರು ಒಮ್ಮೆ ಭೇಟಿ ಕೊಡಿ. 

ಗೌತಮರ ಗುಡ್ ನೈಟ್ ಕವಿತೆಗಳು

ಮೌನಿ ನಾನು .
ಎನ್ನೊಳಗಿನ ಮೌನ ನೀನು .
ರಾತ್ರಿ ನಾನು.
ಬೆಳಗೋ ಬೆಳಕು ನೀನು.
ನೂರು ಗೊಂದಲ ಪ್ರಶ್ನೆಗಳ ಗೂಡು ನಾನು.
ಮತ್ತಾರಿಗೂ ಸಿಗದೆ ಎನಗೆ ಸಿಕ್ಕಿದ
ತೀರ ಸರಳ ಅತಿ ವಿರಳ
ಉತ್ತರ ನೀನು.

ಹೀಗೆ ಸರಣಿಯಾಗಿ ‘ಗುಡ್ ನೈಟ್’ ಕವಿತೆಗಳನ್ನ ಬ್ಲಾಗಿಗೆ ತುಂಬುತ್ತಾ ಬಂದಿದ್ದಾರೆ ಗೌತಮ್ ಹೆಗೆಡೆ. ತಮ್ಮೀ ಗುಡ್ ನೈಟ್ ಕವನಗಳ ಬಗ್ಗೆ ಅವರು ಹೇಳಿಕೊಂಡಿರುವುದು. "ಇಲ್ಲಿ ಹುಡುಗ ತನ್ನ ಹುಡುಗಿಗೆ ಪ್ರತಿರಾತ್ರಿ ಕವನದಲ್ಲಿ ತನ್ನನ್ನು ತೆರೆದಿಡುತ್ತಾನೆ.ಇವನಿಗೆ ಅವಳು 'ಪುಟ್ಟಿ ' ಅವಳಿಗೆ ಇವನು ಪ್ರೀತಿಇಂದ 'ಪುಟ್ಟ'.ಕವನ ಕಳಿಸಿ ಹಗುರಾಗೋ ನೆಮ್ಮದಿ ಇವನದು."

ಇದು ‘ಅಮ್ಮ’ನ ಹೆಸರಿನ ಬ್ಲಾಗು. ಬೆಚ್ಚನೆಯ ಭಾವ-ಬರಹಗಳಿಗೆ ಮೀಸಲಾದ ತಾಣ. ಒಮ್ಮೆ ಭೇಟಿ ಕೊಡಿ. 

ರಂಜನಾ ಹನಿಗವಿತೆಗಳು

ನಾನು ನನ್ನವರನ್ನು ಪ್ರೀತಿಸುತ್ತೇನೆ
ಮೊದಲಿಗಿಂತಲೂ ಜಾಸ್ತಿ !
ಮತ್ತೆ ನನ್ನ ಹೆಸರಲ್ಲಿ
ತೆಗೆದುಕೊಂಡಿದ್ದಾರೆ
ನಾಲ್ಕು ಎಕರೆ ಆಸ್ತಿ

ಹೀಗೆ ಸಣ್ಣ ಸಣ್ಣ ಹನಿಗಳ ಮೂಲಕವೇ ತಮ್ಮ ಬ್ಲಾಗ್ ಭಂಡಾರವನ್ನ ತುಂಬಿಸುತ್ತಿದ್ದಾರೆ ರಂಜನಾ ಹೆಗ್ಡೆ. ಅವರೇ ಹೇಳುವಂತೆ ಇದು ‘ನನ್ನೊಳಗಿನ ನನ್ನವನು ಗೀಚಿಸಿದ ಹನಿ ... !’ ಹೀಗಾಗಿ ಇಲ್ಲಿ ಅವರು ‘ಅವನಾಗಿ’ ಬರೆದದ್ದೇ ಹೆಚ್ಚು. ರಂಜನಾರ ಈ ಹನಿ-ಕವಿತೆಗಳ ಗುಚ್ಛ ಈ ದಿನದ ಓದಿಗೆ.

ಅನುರಾಗದ ಪ್ರೀತಿ ಹನಿಗಳು

‘ನಿನ್ನ ಕಣ್ಣೀರಿನೊಳು ತುಳುಕಲಿ
ನನ್ನ ಪ್ರೀತಿಯ ನೆನಪು
ಹರಿದು ಸೋಕಲಿ ನಿನ್ನ ಭಾವನೆಯನು...’

ಹೀಗೆ ಕಣ್ಣೀರಿನಲ್ಲೂ ಪ್ರೀತಿಯ ಪ್ರತಿಬಿಂಬ ಕಾಣುವ ಪ್ರಯತ್ನ ಮಾಡಿದ್ದಾರೆ ರಶ್ಮಿ ಪೈ. ಅನುರಾಗ ಅವರ ಬ್ಲಾಗು. ಒಂದಿಷ್ಟು ಕವಿತೆ, ನಡುವೆ ಅಲ್ಲಲ್ಲಿ ಕಥೆ, ಮಧ್ಯೆ ಅನುಭವಗಳ ಮೆಲುಕು...ಎಲ್ಲದರ ಸಾರವೇ ಈ ಅನುರಾಗ.

ವಶಿಷ್ಟರ ಮೈ ವರ್ಡ್ಸ್

ಒಂದು ಸಂಜೆಯ ಸವಿಯ ಅನುಭವವನ್ನ ಬ್ಲಾಗಿಗರ ಮುಂದೆ ಹಂಚಿಕೊಳ್ಳುತ್ತಿದ್ದಾರೆ ವೈಶಿಷ್ಟ. ಕೆ.ಜೆ.

‘ಮೈ ವರ್ಡ್ಸ್’ ಅವರ ಖಾಸಗಿ ಅನುಭವ-ಅನಿಸಿಕೆಗಳ ಬ್ಲಾಗು. ಒಂದಿಷ್ಟು ಕವಿತೆ, ಹನಿಗವಿತೆಗಳ ಜೊತೆಗೆ ತಿರುಪತಿಯ ತಿಮ್ಮಪ್ಪನ ದರುಶನ ಮಾಡಿಬಂದ ಪ್ರವಾಸ ಕಥನ, ಶಾಂತಿನಿವಾಸದ ವಿಶೇಷ ಪ್ರದರ್ಶನ ಇನ್ನೂ ನಾಲ್ಕಾರು ಕನ್ನಡ-ಇಂಗ್ಲೀಷ್ ಬರಹಗಳು ಇಲ್ಲಿವೆ. 

ಎಎಂಜಿಯ ರೇಡಿಯೋ ಪ್ರಯೋಗ

ಆಗಷ್ಟೇ ಹೈಸ್ಕೂಲಿನಿಂದ ಕಾಲೇಜಿಗೆ ಕಾಲಿಟ್ಟ ದಿನಗಳು. ಕ್ಲಾಸುಗಳು ಅಷ್ಟಕಷ್ಟೇ. ಇಂತಹ ಹೊತ್ತಲ್ಲಿ ಗ್ರಂಥಾಲಯಕ್ಕೆ ನುಗ್ಗಿ, ಕಣ್ಣಿಗೆ ಬಿದ್ದ ಪುಸ್ತಕವೊಂದರ ಆಧಾರದ ಮೇಲೆ ತಮ್ಮದೇ ರೇಡಿಯೋ ಪ್ರಯೋಗ ಕೈಗೊಂಡು ಪಚೀತಿ ಅನುಭವಿಸಿದ ಪ್ರಯೋಗವನ್ನ ಬಿಚ್ಚಿಟ್ಟಿದ್ದಾರೆ ಎಎಂಜಿ.

ಈ ರೇಡಿಯೋ ಕಥಾನಕದ ಜೊತೆಗೆ ಇನ್ನು ಅನೇಕ ತಾಂತ್ರಿಕ ಸಂಗತಿಗಳ ಕುರಿತ ಚುಟುಕು ಲೇಖನಗಳು ಇಲ್ಲಿವೆ. ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಬ್ಲಾಗಿಗರು ಅನೇಕ ಅಂತರ್ಜಾಲ ಸಾಫ್ಟ್ ವೇರುಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಮಾಲ್ ವೇರ್ ಗಳಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನ ಬಿಡಿಸಿಟ್ಟಿದ್ದಾರೆ.

ನೀವು ನಕ್ಕರೆ ಹಾಲು ಸಕ್ಕರೆ

ಸಖತ್ ನಗೆ ತರಿಸುವ ತರಲೆ ಮಂಜನ ರಗಳೆಗಳು, ಮಂಗಾಟಗಳು, ಜೊತೆಗೆ ಸೀದಾ ಸಾದಾ ಸುಬ್ಬನ ಸಾಥ್... ಹೀಗೊಂದು ನಗೆಯ ಝಲಕ್....

ಇದು ‘ನೀವು ನಕ್ಕರೆ ಹಾಲು ಸಕ್ಕರೆ’. ಗೋಪಾಲ್ ಮಾ ಕುಲಕರ್ಣಿಯವರ ಬ್ಲಾಗ್. ಒಂದಿಷ್ಟು ಅನುಭವ, ನೆನಪು, ಕಥನಗಳ ಜೊತೆಗೆ ಮಂಜನ ಅನುಭವಕಥನದ ನಗೆ ಬುಗ್ಗೆಗಳು.... ಇದನ್ನೊದಿದ ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿ, ನೀವು ನಕ್ಕುಬಿಟ್ಟರೆ ಅದೇ ಇವರಿಗೆ ಹಾಲು ಸಕ್ಕರೆ. ಒಮ್ಮೆ ಓದಿ. 

ಸುಪ್ತದೀಪ್ತಿಯ ಪ್ರವಾಸ ಪುರವಣಿ

ಸರಿಯಾಗಿ ಹತ್ತು ದಿನ, ಸರಾಸರಿ ದಿನಕ್ಕೆ ಮುನ್ನೂರಿಪ್ಪತ್ತು ಮೈಲುಗಳಂತೆ ಡ್ರೈವ್ ಮಾಡಿಕೊಂಡು ಅಮೆರಿಕದ ಪಶ್ಚಿಮ ಬದಿಯಲ್ಲಿರುವ ನೆವಾಡ, ಅರಿಝೋನಾ , ಯೂಟಾ ರಾಜ್ಯಗಳಲ್ಲಿ ಸುತ್ತಾಡಿ, ಅಲ್ಲಿನ ಕೆಲವೊಂದು ನ್ಯಾಷನಲ್ ಪಾರ್ಕ್ಸ್, ಮಾನ್ಯುಮೆಂಟ್ಸ್ ನೋಡಿಕೊಂಡು ಬಂದ ಸುಪ್ತದೀಪ್ತಿ ಅರ್ಥಾತ್ ಜ್ಯೋತಿ ಮಹಾದೇವ್, ಒಂದೊಂದೇ ಸ್ಥಳದ ಕುರಿತಾಗಿ, "ಪ್ರವಾಸ ಪುರವಣಿ" ಅನ್ನುವ ಹೆಸರಲ್ಲಿ ಸರಣಿ ಬರೆಯುವ ಹುನ್ನಾರದಲ್ಲಿದ್ದಾರೆ. ಪುರವಣಿಗೆ ಪೀಠಿಕೆ ದೊರೆತಿದ್ದು, ಮುಂದಿನ ಭಾಗ ಸದ್ಯದಲ್ಲೇ ಹೊರಬೀಳಲಿದೆ. ಒಂದಿಷ್ಟು ತಡವಾಗಬಹುದು, ನಿಯಮಿತವಾಗಿ ಬರಹಗಳು ಬಾರದಿರಲೂ ಬಹುದು. ಓದುಗರು ಮುನಿಸದೇ ಮನ್ನಿಸಬೇಕು ಎನ್ನುವುದು ಅವರ ಆಶಯ. 

ಮೌನರಾಗದ ಹನಿಗಳು

‘ಹ೦ಚಿಕೂ೦ಡ ಬಯಕೆಗಳು
ಹಚ್ಚ ಹಸಿರಾಗಿರಲು
ಮನದಾಳದಿ ಆಡಿದ ಮಾತುಗಳು ಇನ್ನೂ ಮರೆಯದಿರಲು
ಮಾಸದು ಗೆಳತಿ ನಿನ್ನ ನೆನಪು ನಿಜವಾಗಿಯೂ…..’

ಹೀಗೊಂದಿಷ್ಟು ಹನಿಗಳಂತ ಕವಿತೆಗಳನ್ನ ತಮ್ಮ ‘ಮೌನರಾಗ’ದಲ್ಲಿ ಸೇರಿಸಿದ್ದಾರೆ ಕುಮಾರ್. ಇದು ಅವರ ಹನಿಗವಿತೆಗಳ ಗುಚ್ಛ. ಗೆಳತಿಯ ನೆನಪಿನ ಮಳೆಯಲ್ಲಿ ತೋಯುತ್ತಿರುವ ಕುಮಾರರ ಬೆಚ್ಚನೆಯ ನೆನಪುಗಳು ಇಲ್ಲಿವೆ.

ಕೃಷಿ ವಿದ್ಯಾಲಯದ ಯುವ ಲಹರಿ

‘ಯುವ ಲಹರಿ' ಯ ಮೂಲಕ ಬ್ಲಾಗ್ ಕೃಷಿಗೆ ಮುಂದಾಗಿದ್ದಾರೆ ಹಾಸನದ ಕೃಷಿ ಮಹಾವಿದ್ಯಾಲಯದ ಯುವಕರು. ಅಲ್ಲಿನ ಕನ್ನಡ ಸಂಘದ ಸದಸ್ಯರು ಇದರ ನಿರ್ವಾಹಕರು. ಹೆಸರೇ ಹೇಳುವಂತೆ ಇದು ಯುವ ಮನಸ್ಸುಗಳ ಬರವಣಿಗೆಗಳಿಂದ ಅರಳಿ ನಿಂತ ಭಾವ ಲಹರಿ. ಕಥೆ, ಕವಿತೆ, ವ್ಯಂಗ್ಯ ಚಿತ್ರ, ಚಿತ್ರ ಚಿತ್ತಾರಗಳನ್ನೆಲ್ಲ ಇಲ್ಲಿ ಕಾಣಬಹುದು. ಕೃಷಿ ವಿದ್ಯಾಲಯದ ಯುವ ಲಹರಿ ಇವತ್ತಿನ ಓದಿಗೆ.

ಅಶ್ವಿನಿ ಬರೆವ ಪತ್ರಿಕಾ ಪ್ರವರ


ಎಲ್ಲೆಂದರೆ ಅಲ್ಲಿ ಏನಾದರೊಂದು ‘ವಿಶೇಷ ಸುದ್ದಿ’ ಸಿಗುತ್ತಾ ಅಂತ ಹುಡುಕೋದು ಪತ್ರಕರ್ತರ ಹುಟ್ಟುಗುಣ. ಅಂತೆ, ಬೈ ಲೇನ್ ಸುದ್ದಿಯನ್ನ ಬೆನ್ನಟ್ಟಿ ಮಾಗಡಿಯತ್ತ ಹೊರಟು, ಅಲ್ಲಿನ ಮಕ್ಕಳ ಮುಗ್ದತೆ ಕಂಡು ಮಂಕಾಗಿದ್ದಾರೆ ಇಂಗ್ಲೀಷ್ ಪತ್ರಿಕೆಯೊಂದರ ವರದಿಗಾರ್ತಿ ಅಶ್ವಿನಿ ಶ್ರೀಪಾದ್. 

‘ಪತ್ರಿಕಾ ಪ್ರವರ’ ಅವರ ಬ್ಲಾಗ್. ಅವರೇ ಹೇಳುವಂತೆ ಇದು ಪತ್ರಿಕೋದ್ಯಮದ ಇನ್ನೊಂದು ಮುಖ ಅರ್ಥಾತ್ ಅವರ ವರದಿಗಾರಿಕೆಯ ಇನ್ನೊಂದು ಬದಿ. ಪತ್ರಕರ್ತೆಯ ಆಫ್ ದ ರೆಕಾರ್ಡ್ ಅನುಭವದ ಮಜಲುಗಳು ಇಲ್ಲಿವೆ. 

ಶ್ರೀರಾಮ್ ಬರೆದ ಸೆಪ್ಟೆಂಬರ್ ಐದರ ವಿಚಾರಗಳು

ಶಿಕ್ಷಣ ಅನ್ನುವುದು ಅವತ್ತಿದ್ದಂತೆ ಇವತ್ತಿಲ್ಲ, ಹಾಗೆಯೇ ವಿಧ್ಯಾರ್ಥಿಗಳು ಕೂಡ. ‘ಆಗಿದ್ದಂತೆ ಈಗಿಲ್ಲ ಬಿಡಿ’ ಅಂತ ಕೆಲವರು ಕರುಬುವುದೂ ಉಂಟು. ಇದೆನ್ನೆಲ್ಲ ವಿವರಿಸುವ ಯತ್ನ ಮಾಡಿದ್ದಾರೆ ಸ್ವತಃ ಶಿಕ್ಷಕರಾಗಿರುವ ಎಂ.ಎಸ್. ಶ್ರೀರಾಮ್.

ತಮ್ಮ ಖಾಸಗೀ ಬದುಕನ್ನೇ ಉದಾಹರಣೆಯಾಗಿ ಕೊಡುವ ಶ್ರೀರಾಮ್, ತಾವು ಓದುವಾಗಿನ ಗುರು-ಶಿಷ್ಯರ ಸಂಬಂಧಗಳು, ಇವತ್ತಿನ ಹೈ-ಫೈ ಬದುಕಿನಲ್ಲಿ ಈ ಇಬ್ಬರ ಸಂಬಂಧಗಳ ಕುರಿತು ಒಂದಿಷ್ಟು ಬೆಳಕು ಚೆಲ್ಲಿದ್ದಾರೆ. ಈ ಚರ್ಚೆಯ ಪೂರ್ಣ ಪರಿಪಾಠ ಅವರ ‘ಇತ್ಯಾದಿ’ ಬ್ಲಾಗಿನಲ್ಲಿದೆ. 

ಮನಸುಗಳ ಮಧ್ಯದ ಸಾಲುಗಳು

‘ಬರೆಯಬೇಕೆಂದು ಬರೆಯಲಿಲ್ಲ
ಇರಬಹುದು ಹಲವು ದೋಷ
ಸರಿಯಿರುವ ವಾಕ್ಯ ಉಳಿಸಿಕೊಳ್ಳಿ
ಬರಿದಲ್ಲಾ ನನ್ನೊಳಗಿನ ಕಾವ್ಯ..’

ಹೀಗೆ ತಮ್ಮೊಳಗಿನ ಕವಿತೆಗಳನ್ನ ಹೊತ್ತು ಬ್ಲಾಗಿನಂಗಳಕ್ಕೆ ಕಾಲಿರಿಸಿದ್ದಾರೆ ‘ಮನಸು ಮನಸುಗಳ ಮಧ್ಯೆ’ ಯ ಬ್ಲಾಗಿಗರು. ಹೀಗಷ್ಟೇ ಪುಟಿಯುತ್ತಿರುವ ಅವರ ಪುಟ್ಟ ಬ್ಲಾಗಿನಲ್ಲಿ ಒಂದಿಷ್ಟು ಕವಿತೆಗಳೆಂಬ ಹನಿ ಗುಚ್ಛಗಳಿವೆ. ಹೆಸರೇಳದ ಬ್ಲಾಗಿಗರ ಈ ಪ್ರೀತಿಯ ಸಾಲುಗಳು ಇವತ್ತಿನ ಓದಿಗೆ. 

ಬೇತಾಳನ ವಿಶ್ಲೇಷಣೆಗಳು

ಪ್ರಚಲಿತ ವಿದ್ಯಮಾನಗಳ ಬೆನ್ನು ಹತ್ತಿದ ಬೇತಾಳನ ವಿಶ್ಲೇಷಣೆಗಳು ಈ ದಿನದ ಬ್ಲಾಗಿನಲ್ಲಿ.

ಸದ್ಯ ಹಂದಿಜ್ವರದ ಕಾರಣ ಹೊಸದೊಂದು ಚಿಂತೆಯಲ್ಲಿರುವ ಬೇತಾಳ ಅದರ ತಲೆ-ಬುಡಗಳನ್ನ ತಡಕಿ ಹುಡುಕಿ ವಿಶ್ಲೇಷಿಸುವ ಯತ್ನದಲ್ಲಿದ್ದಾನೆ. ಮೊನ್ನೆ ತೀರಿಕೊಂಡ ಆಂಧ್ರ ಸಿಎಂ ಸಾವಿನ ಆಸುಪಾಸು ಸಹ ಈತನ ಕಣ್ಣು ಬಿದ್ದಿದೆ. ಅದಕ್ಕೂ ಮುನ್ನ ಕನ್ನಡದ ಸಿಂಹಗಳನ್ನ ಕಾಡಿದ ನಾಗವಲ್ಲಿಯ ಅಂತರಾಳದ ಕಥೆಯನ್ನ ತೆರೆದಿಡುವ ಪ್ರಯತ್ನವನ್ನೂ ಮಾಡಿದ್ದಾನೆ. ಬೇತಾಳನ ಈ ವಿಶ್ಲೇಷಣೆಗಳು ಇಂದಿನ ಓದಿಗೆ. 

ಕೇಶವರ ಸಿಹಿಮಾತು

ಈ ಸಲದ ಗಣಪತಿ ಹಬ್ಬ ಭಾನುವಾರವೇ ಬಂದು, ಒಂದು ರಜಾ ಹಾಳಾಗಿ ಹೊಯ್ತಲ್ಲ ಅಂತ ಹಲವಾರು ಮಂದಿ ಗೊಣಗಿಕೊಂಡದ್ದು ಸುಳ್ಳಲ್ಲ. ಅಂತಹದ್ದೊಂದು ಸಣ್ಣ ಗೊಣಗಾಟದೊಂದಿಗೆ ತಮ್ಮ ಬ್ಲಾಗ್ ಪಯಣವನ್ನ ಆರಂಭಿಸುತ್ತಾ ಇದ್ದಾರೆ ಕೇಶವ್ ಪ್ರಸಾದ್ ಮಾರ್ಗ.

ಬೆಂಗಳೂರಿನಲ್ಲಿ ಗಣಪತಿ ಹಬ್ಬವನ್ನ ಕಂಡ ಪುತ್ತೂರಿನ ಕೇಶವರಿಗೆ , ಇಲ್ಲಿ ಗಲ್ಲಿಗೊಂದರಂತೆ ಗಣೇಶನನ್ನ ಕೂರಿಸಿ, ಕಡೆಯ ದಿನ ಅದನ್ನ ಹೇಗಂದರೆ ಹಾಗೆ ಮುಳುಗಿಸಿ ಬರುವವರ ಬಗ್ಗೆ ಚಿಕ್ಕದೊಂದು ತಕರಾರು ಇದೆಯಂತೆ. ಇದನ್ನೆಲ್ಲ ಗಣಪತಿ ಕೂರಿಸೋರಿಗೆ ಹೇಳೋದ್ಯಾರಪ್ಪ ಅನ್ನೋದು ಅವರ ಯೋಚನೆ. ಮುಂದಿನ ವರ್ಷ ಆದ್ರೂ ಇದೆಲ್ಲ ಕೊಂಚ ಬದಲಾಗ್ಲಿ ಅನ್ನೋದು ಅವರ ದೂರದ ಆಸೆ. 

ಮೋಟುಗೋಡೆಯಾಚೆ ನೀಲು

ಮೋಟುಗೋಡೆಯ ತುಂಬೆಲ್ಲ ಈಗ ತುಂಟಿ ನೀಲುವಿನದ್ದೇ ಧ್ಯಾನ. ‘ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು ಮಿನಿ ಸಾಲುಗಳಲ್ಲೇ ಏನೇನೋ ಹೊಳೆಸುವ ಸೌದಾಮಿನಿ.’ ಇಂತಹ ನೀಲುವನ್ನು ಕಟ್ಟಿಕೊಟ್ಟ ಲಂಕೇಶರಿಗೊಂದು ಸಲಾಮು ಹೇಳುತ್ತಾ, ನೀಲು ಕಾವ್ಯದ ಕೆಲ ಝಲಕ್ ಅನ್ನ ಇಲ್ಲಿ ಕೊಟ್ಟಿದ್ದಾರೆ. ಇದು ಈ ದಿನದ ಬೆಚ್ಚನೆಯ ಓದಿಗೆ. 

ಕವಿತೆ ೩೪೧

ಕವಿತೆಗಳ ಮೇಲೆ ಪ್ರೇಮವಿಟ್ಟುಕೊಂಡು ಬರೆವ ಉಮೇಶ ಕುಮಾರರ ಕವಿತೆ ಐ ಲವ್ ಯು ಅರ್ಥಾತ್ ‘ಕವಿತೆ ೩೪೧’ ಈ ದಿನದ ಬ್ಲಾಗ್. ಹೆಸರೇ ಹೇಳುವಂತೆ ಇದು ಪ್ರೇಮಕವಿತೆಗಳ ತಾಣ. ಸದ್ಯಕ್ಕಿಲ್ಲಿ ಒಂದೆರಡು ಬೆಚ್ಚನೆ ನೆನಪುಗಳ ಮೆಲುಕಿದೆ. ಬ್ಲಾಗಿಗರಿಗೆ ಇನ್ನು ಇಂತಹದ್ದೇ ಒಂದಿಷ್ಟು ಬರೆವ ತವಕವಿದೆ. ಎರಡೂ ಈ ದಿನದ ಓದಿಗೆ. 

ಮಧುರಾನುಭವದ ಗುಂಗಿನಲ್ಲಿ ಅಂತರಾಳ

‘ನೀನೇ ಬರೀ ನೀನೇ’ ಗೀತಗುಚ್ಛದ ಹಾಡುಗಳ ಮಧುರಾನುಭವದಲ್ಲಿ ಕಳೆದುಹೋಗಿದ್ದಾರೆ ಅಂತರಾಳದ ಸೂರ್ಯಕಿರಣ್.

ಕಾಯ್ಕಿಣಿ ಕಾವ್ಯಗುಂವದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿರುವ ಹಾಡುಗಳು, ಮನೋಮೂರ್ತಿಯ ಸಂಗೀತದ ಜೊತೆಗೆ ಸೋನು ನಿಗಮ್ ರ ಕಂಠದಲ್ಲಿ ಬಂದ ಕನ್ನಡದ ಪ್ರಥಮ ಈ ಗೀತಗುಚ್ಛ ನಿಜಕ್ಕೂ ಹುಚ್ಚು ಹಿಡಿಸುವಂತಿದೆ ಅನ್ನುವುದು ಅವರ ಅನಿಸಿಕೆ. ಇಲ್ಲಿನ ಪ್ರತಿ ಸಾಲಿನಲ್ಲು ನೆನಪಿನ ಚಿತ್ರವೊಂದು ಅನಾವರಣಗೊಳ್ಳುತ್ತದೆ. ಕಾಯ್ಕಿಣಿಯವರ ಪದಲಾಲಿತ್ಯ ಮತ್ತು ಭಾವಸೃಷ್ಟಿ, ಮನೋಮೂರ್ತಿಯವರ ರಾಗಸಂಯೋಜನೆ ಮತ್ತು ಸೋನು ನಿಗಮ್ ರ ಭಾವಪೂರ್ಣ ಸುಶ್ರಾವ್ಯ ಗಾಯನ ಈ ಗೀತಸಂಚಯದ ಮೌಲ್ಯವೇರಲು ಕಾರಣ ಅನ್ನುವುದು ಅಂತರಾಳದಿಂದ ಬಂದ ಒಂದೆರಡು ಮಾತು. ಪೂರ್ತಿ ಕೇಳಬೇಕಿದ್ದವರು ಈ ಬ್ಲಾಗಿಗೆ ಭೇಟಿ ಕೊಡಿ.  

ವಿಶ್ವಪುಟದ ಚಿಂತನೆಗಳು

ಆಗೊಮ್ಮೆ ಈಗೊಮ್ಮೆ ತಮ್ಮ ರಾಜಕೀಯ ಚಿಂತನ-ಮಂಥನದ ಬರಹಗಳೊಟ್ಟಿಗೆ ಕಾಣಿಸಿಕೊಳ್ಳುವ ವಿಶ್ವನಾಥ್, ಈ ಬಾರಿ ಬಿಜೆಪಿ ನಾಯಕರ ರಂಪಾಟಗಳ ಬಗ್ಗೆ ಒಂದೆರಡು ಮಾತು ಬರೆದಿದ್ದಾರೆ. ತಿಂಗಳ ಹಿಂದಷ್ಟೇ ಅಣ್ಣ-ತಮ್ಮಂದಿರಂತಿದ್ದವರು ಈಗ ವಿರೋಧ ಪಕ್ಷಗಳಿಗೇ ನಾಚಿಕೆಯಾಗುವಷ್ಟರ ಮಟ್ಟಿಗೆ ಕಚ್ಚಾಡುತ್ತಿದ್ದಾರೆಂದರೆ ಇನ್ಯಾವ ಪರಿಯ ಜಗಳ ಅವದ್ದಾಗಿರಬೇಕು ಎನ್ನುವುದು ವಿಶ್ವನಾಥರ ಪ್ರಶ್ನೆ.

‘ವಿಶ್ವಪುಟ’ ಅವರ ಈ ಬರಹಗಳ ಬ್ಲಾಗ್ ಗುಚ್ಛ. ಒಮ್ಮೆ ಭೇಟಿ ಕೊಡಿ.

ಜೇನುಗೂಡಿನ ಹನಿಗಳು

‘ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕೆಲವೊಮ್ಮೆ ಮಜ್ಜಿಗೆಯೋ, ಸುಣ್ಣದ ನೀರೋ ಆಗಿರಬಹುದು.’

ಇಂತಹದ್ದೇ ಒಂದಿಷ್ಟು ಗುಟುಕುಗಳನ್ನ ತಮ್ಮ ಜೇನುಗೂಡಿನಲ್ಲಿ ತುಂಬಿಸಿ ಕುಳಿತಿದ್ದಾರೆ ಜೇನುಗೂಡಿನ ಬ್ಲಾಗಿಗ. ಜೇನಿನಂಥ ಚುಟುಕು ಹನಿಗಳು, ಹನಿಗವಿತೆಗಳು ಇಲ್ಲಿವೆ. ಈಗಷ್ಟೇ ಶುರುವಾದ ಅವರ ಬ್ಲಾಗ್ ಪಯಣದ ಹನಿಗಳು ಸದ್ಯದ ಓದಿಗೆ.

ಮಂಜುನಾಥರ ಕಾವ್ಯ ಚಿಂತನೆ

ಕನ್ನಡದ ಕಾವ್ಯ ನಡೆದು ಬಂದ ಹಾದಿಯ ಕುರಿತು ಒಂದು ಹಿನ್ನೋಟವನ್ನ ಬೀರಿದ್ದಾರೆ ಕೊಳ್ಳೇಗಾಲದ ಮಂಜುನಾಥ್. ನವ್ಯ-ನವೋದಯ ಅಂತೆಲ್ಲ ಗೆಳೆಯರ ಜೊತೆಗೆ ಚರ್ಚೆಗೆ ಕೂತವರು ಬರಹಕ್ಕಿಳಿದು ಕಾವ್ಯ ಪರಂಪರೆಯ ಕುರಿತ ತಮ್ಮ ಯೋಚನಾ ಲಹರಿಗಳನ್ನ ಇಲ್ಲಿ ಹರಿಬಿಟ್ಟಿದ್ದಾರೆ. ಮಂಜುನಾಥರ ಈ ಸಾಹಿತ್ಯ ಚಿಂತನೆಯ ಬರಹವನ್ನ, ಅವರ ಇನ್ನಿತರ ಬರಹಗುಚ್ಛಗಳನ್ನೂ ಓದಬಯಸುವವರು ‘ನನ್ನ ಬರಹಗಳು’ ಬ್ಲಾಗಿಗೆ ಭೇಟಿ ನೀಡಿ.

ಟೀನಾ ಬರೆದ ಟೈಲರ್ ಕಥಾನಕ

ಹೆಚ್ಚು ಕಡಿಮೆ ಎರಡು ತಿಂಗಳ ನಂತರ ಟೀನಾ ಮತ್ತೆ ಬ್ಲಾಗ್ ಬರಹಕ್ಕೆ ಶುರುವಿಟ್ಟುಕೊಂಡಿದ್ದಾರೆ, ಈ ಬಾರಿ ಟೈಲರುಗಳ ಕಥಾನಕದೊಂದಿಗೆ.

ಟೈಲರುಗಳ ಬಗೆಗಿನ ಜೋಕಿನೊಂದಿಗೆ ಪ್ರಾರಂಭಿಸಿದವರು, ಬಾಲ್ಯದಿಂದ ಹಿಡಿದು ನಿನ್ನೆ ಮೊನ್ನೆವರೆಗೆ ಕಂಡ ಎಲ್ಲ ಟೈಲರರ ಗುಣಾವಗುಣಗಳನ್ನ ಚರ್ಚಿಸಿದ್ದಾರೆ. ಇಂತಿಪ್ಪ ಟೈಲರುಗಳ ಬಗೆಗಿನ ಸಾಹಿತ್ಯಿಕ ಉಲ್ಲೇಖಗಳನ್ನೂ ಹೆಕ್ಕಿ ತೆಗೆದಿದ್ದಾರೆ. ಕಡೆಗೆ, ಫ್ಯಾಶನ್ ಶೋ ಗಳಲ್ಲಿ ವಯ್ಯಾರದಿಂದ ನಡೆವ ಲಲನೆಯರ ಚೆಂದದ ಹಿಂದಿರುವ ಟೈಲರರ ಶ್ರಮ, ಟೆಕ್ಸ್ ಟೈಲ್ ಉದ್ದಿಮೆಯಲ್ಲಿನ ಹೆಣ್ಣುಮಕ್ಕಳ ಪಾಡು ಅಂತೆಲ್ಲ ಮಾತು ಸೀರಿಯಸ್ ಚರ್ಚೆಗೆ ತಿರುಗಿಕೊಂಡಿದೆ. ಟೈಲರುಗಳ ಕುರಿತ ಈ ಅಭಿನಂದನಾ ಬರಹವನ್ನ ಓದಬಯಸುವವರು ಟೀನಾ ಝೋನಿಗೆ ಭೇಟಿ ಕೊಡಿ.

ಆಫ್ರಿಕಾದಲ್ಲಿ ಗಣೇಶೋತ್ಸವ

ದೂರದ ಆಫ್ರಿಕಾದ ತಾಂಜಾನಿಯಾ ದೇಶದ ಮ್ವಾಂಜಾ ಅನ್ನುವ ಪಟ್ಟಣದಲ್ಲೂ ಕೂಡ ಒಂದು ಕನ್ನಡ ಸಂಘ ಉಂಟು. ಇದರ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದಲೂ ತಪ್ಪದೇ ಗಣೇಶೋತ್ಸವವನ್ನ ಆಚರಿಸುತ್ತಾ ಬಂದಿದ್ದು, ಈ ಬಾರಿಯ ಹಬ್ಬದ ಒಂದು ನೋಟ ಇಲ್ಲಿದೆ.

‘ಆಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್!’ ಅವರ ಖುಷಿಗೆ ಪಾರವಿಲ್ಲ. ಅಂತೂ ಊರಿನ ಭಾರತೀಯರೆಲ್ಲರ ಜೊತೆಗೆ ಸ್ಥಳೀಯ ನಿವಾಸಿಗಳೂ ಸೇರಿ ಅಲ್ಲಿ ಗಣೇಶನ ಉತ್ಸವವನ್ನ ಅದ್ದೂರಿಯಿಂದ ಆಚರಿಸಿದ್ದಾರೆ. ನೋಡಬೇಕಿದ್ದವರು ಈ ಬ್ಲಾಗಿಗೊಮ್ಮೆ ಭೇಟಿ ನೀಡಿ.

ಪ್ರಸನ್ನರ ‘ಆಯುಷ್ಕಾಮೀಯ’

‘ಆರೋಗ್ಯಕ್ಕಾಗಿ ಆಯುರ್ವೇದ’ ದ ಹುಡುಕಾಟದಲ್ಲಿದ್ದಾರೆ ಆಯುರ್ವೇದ ವೈದ್ಯ ಪ್ರಸನ್ನ. ಸದ್ಯ ಥ್ಯಾಯ್ಲೆಂಡಿನ ಬ್ಯಾಂಕಾಕಿನಿಂದ ‘ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ತಾಣ’ವೊಂದನ್ನ ರೂಪಿಸಿದ್ದಾರೆ. ‘ಆಯುಷ್ಕಾಮೀಯ’ ಅವರ ಹೊಸ ಬ್ಲಾಗ್. ಆಯುರ್ವೇದದ ಬಗೆ ಅರಿವು ಮೂಡಿಸುವ ಅವರ ಸರಣಿ ಲೇಖನ ಇಂದಿನಿಂದ ಆರಂಭಗೊಂಡಿದೆ. ಅವರ ಈ ಹೊಸ ಬ್ಲಾಗ್ ಪಯತ್ನವನ್ನ ನೋಡಬೇಕಿದ್ದವರು ಈ ಬ್ಲಾಗಿಗೆ ಭೇಟಿ ನೀಡಿ. 

ರಮೇಶರ ‘ನೀರಾ’ ವಾದ

‘ನೀರಾ ಅಂದರೆ ಏಕೆ ಈ ನಿರಾಸಕ್ತಿ’ ಅಂತಹದ್ದೊಂದು ಪ್ರಶ್ನೆಯನ್ನ ತಮ್ಮೀ ಬ್ಲಾಗಿನಲ್ಲಿ ಮುಂದಿಟ್ಟಿದ್ದಾರೆ ರಮೇಶ್ ಹಿರೇಜಂಬೂರು.

‘ನೀರಾ’ದಿಂದ ಎಷ್ಟೆಲ್ಲ ಉಪಯೋಗವಿದೆ. ಆದರೂ ಅದರ ಬಗ್ಗೆ ಸರ್ಕಾರದ ಅಲಕ್ಷ್ಯ ಏಕೆ ಅನ್ನುವುದು ಅವರ ವಾದ. ತಮ್ಮೀ ಮಾತುಗಳಿಗೆ ಸಮರ್ಥನೆಯಾಗಿ , ಬಹಳ ಹಿಂದಿನಿಂದಲೂ ‘ನೀರಾ’ ಉತ್ಪಾದನೆ, ಮತ್ತದರ ಮಹತ್ವದ ಬಗ್ಗೆ ವಿವರ ನೀಡುವ ರಮೇಶ್ , ಅದರ ಉಪಯೋಗಗಳನ್ನೆಲ್ಲ ಪಟ್ಟಿಮಾಡಿ ಕೊಟ್ಟಿದ್ದಾರೆ. ‘ನೀರಾದಿಂದ ಬೆಲ್ಲ ತಯಾರಿಸಬಹುದು. ಅದು ತುಂಬಾ ಸಿಹಿ. ಕಬ್ಬಿನ ಬೆಲ್ಲಕ್ಕಿಂತ ಈ ಬೆಲ್ಲ ಅತ್ಯಂತ ಉತ್ಕೃಷ್ಟದ್ದು. ನೀರಾದಿಂದ ತಯಾರಿಸುವ ಬೆಲ್ಲ ಸಿಹಿ ಹಾಗೂ ಸ್ವಾದಿಷ್ಟಯುಕ್ತ ಕೂಡ...’ ಹಾಗಂತ ಮಹಾತ್ಮ ಗಾಂಧಿಯವರೇ ಹೇಳಿದ್ದಾರಂತೆ.

ಇದರ ಪೂರ್ಣಪಾಠವನ್ನ ಓದಬೇಕಿದ್ದವರು ರಮೇಶರ ‘ಉಷೆ ಉದಯ’ಕ್ಕೆ ಭೇಟಿ ನೀಡಿ.

ಅರುಣರ ಗಣಪನ ನೆನಪು

ದೂರದ ಲಂಡನ್ನಿನಲ್ಲಿ ಕೂತು ತಮ್ಮೂರ ಗಣಪನ ನೆನಪು ಮಾಡಿಕೊಳ್ಳುತ್ತಿದ್ದಾರೆ ‘ಸ್ವಗತ’ದ ಅರುಣ್.

‘ಇರೋ ೪ ಸಾವಿರ ಜನಸಂಖ್ಯೆಯ ಊರಲ್ಲೇ ಓಣಿಗೊಂದರಂತೆ ಹತ್ತಿಪ್ಪತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತನಾಗಿರುತ್ತಿದ್ದ ಗಣಪ್ಪ, ನನ್ನೂರಲ್ಲಿ ದೊಡ್ಡ ಗದ್ದಲದ ದೇವರು!’ ಅಂತ ಪೀಠಿಕೆ ಹಾಕುವ ಬ್ಲಾಗಿಗರು, ಜಿದ್ದಿಗೆ ಬಿದ್ದು ಗಣಪತಿ ಕೂರಿಸುತ್ತಿದ್ದ ಕ್ಷಣಗಳನ್ನ ಮೆಲುಕು ಹಾಕಿದ್ದಾರೆ. ಸ್ವತಃ ತಮ್ಮ ಮನೆಯ ಮುಂದೆಯೇ ಸಣ್ಣ ಗಣಪನನ್ನ ಬಚ್ಚಿಕೊಂಡು ತಂದಿಟ್ಟು ಪೂಜೆ ಮಾಡಿದ ಅವರ ಸಂಭ್ರಮ ಈಗ ನೆನಪು ಮಾತ್ರ. ಒಮ್ಮೆ ಓದಿಬನ್ನಿ.

ಪಾತರಗಿತ್ತಿಯ ಹವಾಯಿ ನೆನಪುಗಳು

ಬಲು ಹತ್ತಿರದಿಂದ ಕಂಡು ವಿಸ್ಮಯಗೊಂಡ ಜೀವಂತ ಜ್ವಾಲಾಮುಖಿ, ಬಿಗ್ ಐಲೆಂಡ್ ನ ನಿತ್ವ ಹರಿದ್ವರ್ಣ ಕಾಡಿನ ನಡುವೆ ಕಾಣುವ ಸುಂದರ ಜಲಪಾತಗಳು....ಹೀಗೆ ಹವಾಯಿ ದ್ವೀಪದಲ್ಲಿ ಕಂಡಂತಹ ವಿಸ್ಮಯಗಳ ನೆನಪುಗಳನ್ನ ತೆರೆದಿಟ್ಟಿದ್ದಾರೆ ‘ಪಾತರಗಿತ್ತಿ ಪಕ್ಕ’ದ ಶಿವ ಶಂಕರ್.

ಹವಾಯಿಯಲ್ಲಿನ ಜ್ವಾಲಾಮುಖಿಗಳಿಂದಾದ ಬಂಡೆಸಾಲು, ಜೀವಂತ ಜ್ವಾಲಾಮುಖಿಗಳಿಂದ ಎದ್ದು ಬರುವ ಹೊಗೆ, ಲಾವಾ ರಸ ಬುಸ್ಸೆನ್ನುತ್ತ ಸಮುದ್ರ ಸೇರುವ ರೋಚಕ ಕ್ಷಣಗಳ ಮೆಲುಕುಗಳು ಇಲ್ಲಿವೆ. ಓದಬಯಸುವವರು ಬ್ಲಾಗಿಗೊಮ್ಮೆ ಭೇಟಿ ನೀಡಿ.

ರಜನಿಯ ಗಣಪತಿ ಹಬ್ಬದ ನೆನಪು

ನಾಳೆ ಕಳೆದು ಭಾನುವಾರ ಬಂದರೆ ಗಣೇಶ ಚತುರ್ಥಿ. ಈ ಹೊತ್ತಲ್ಲಿ ತಮ್ಮ ಬಾಲ್ಯದ ಹಬ್ಬದ ನೆನಪು-ಚೇಷ್ಟೆಗಳನ್ನೆಲ್ಲ ಮೆಲುಕು ಹಾಕುತ್ತಿದ್ದಾರೆ ರಜನಿ ಎಂ.ಜಿ. ಗೆಳೆಯರ ಗುಂಪೆಲ್ಲ ಒಟ್ಟಾಗಿ ಸೇರಿ, ಕಳ್ಳ ಗಣಪತಿಯೊಂದನ್ನ ತಯಾರಿಸಿ, ಹಬ್ಬ ಮಾಡದ ಮನೆಯ ಮುಂದಿಟ್ಟು ಗೋಳು ಹೊಯ್ದು ಕೊಳ್ಳುವ, ಸಂಜೆ ೨೧ ಗಣಪತಿಯ ದರ್ಶನಕ್ಕೆ ಹೋಗಿ "ಅವಸರಕ್ಕೆ ಮಾಡಿದ್ದಾದರೂ ಪಂಚಕಜ್ಜಾಯ ತುಂಬಾ ರುಚಿ ಇದೆ ಮರಾಯ್ರೇ' ಅಂತೆಲ್ಲ ಕಿಚಾಯಿಸಿ ಬರುವ ಅವರ ನೆನಪುಗಳ ಮಾಲೆ ಇಲ್ಲಿದೆ.

‘ಜೀವನ್ಮುಖಿ’ ಅವರ ಮುಕ್ತ ಬರಹಗಳಿಗೊಂದು ವೇದಿಕೆ. ರಜನಿಯ ಬರಹಗಳ ಗುಚ್ಛವನ್ನ ಓದಬಯಸುವವರು ಈ ಬ್ಲಾಗಿಗೆ ಭೇಟಿ ಕೊಡಿ.

ರಂಜಿತ್ ಕಂಡಂತೆ ಬೆಳಗು

ದಿನದ ಬ್ಲಾಗಿನಲ್ಲಿ ಒಂದು ಬೆಚ್ಚನೆ ಬೆಳಗಿನ ಭಾವದ ದರ್ಶನ ಮಾಡಿಸುತ್ತಿದ್ದಾರೆ ರಂಜಿತ್.

ಮುಂಜಾನೆಯ ಮಂಪರು, ಆಗಷ್ಟೇ ಇಣುಕುತ್ತಿರುವ ಬೆಳಕಿನ ಕಿರಣಗಳು, ಅಮ್ಮನ ಆತಿಥ್ಯ, ಮನೆಯ ಬೆಕ್ಕಿನ ಚಿನ್ನಾಟ ಎಲ್ಲ ಒಂದಕ್ಕೊಂದು ಬೆರೆತು ಶುರುವಾಗುವ ದಿನದ ಮಧುರ ಅನುಭೂತಿ ಇಲ್ಲಿದೆ. ಓದಿಬನ್ನಿ.
 

ಸವಡಿ ಬರಹಗಳು

ದಾರಿಯಲ್ಲಿ ಸಿಕ್ಕ ಕಾಮಣ್ಣನ ಮಕ್ಕಳು, ಸಿದ್ಧರ ಬೆಟ್ಟಕ್ಕೆ ಲಗ್ಗೆ ಇಟ್ಟ ನೆನಪು, ಅಪ್ಪನಾದ ಹೊತ್ತಲ್ಲಿ ತನ್ನಪ್ಪನ ಜವಾಬ್ದಾರಿಗಳ ಬಗೆಗೊಂದು ವಿಸ್ಮಯ, ನಿದ್ದೆಯಿಂದೆಬ್ಬಿಸುವ ಮಗಳ ಚೇಷ್ಟೆ, ಪತ್ರಿಕೋದ್ಯಮದ ಇಂದಿನ ಅನಿವಾರ್ಯತೆಗಳ ಬಗ್ಗೆ, ಪುಸ್ತಕ, ಮನಸ್ಸು, ಪ್ರಜಾಪ್ರಭುತ್ವದ ಬಗ್ಗೆಯೆಲ್ಲ ಒಂದೆರಡು ಸೀರಿಯಸ್ ಮಾತು....ಒಂದೇ ದಿನಕ್ಕೆ ಇಷ್ಟೆಲ್ಲ ಬರಹಗಳನ್ನ ತಮ್ಮ ಬ್ಲಾಗಿಗೆ ತುಂಬಿದ್ದಾರೆ ಪತ್ರಕರ್ತ ಚಾಮರಾಜ ಸವಡಿ.

ನಿನ್ನೆ ದಿನವೊಂದಕ್ಕೆ ಅಪ್ ಲೋಡ್ ಆದ ಹದಿನೈದು ಲೇಖನಗಳೂ ಇಲ್ಲಿವೆ. ಜೊತೆಗೆ ಅವರ ಇನ್ನಿತರ ಬರಹ ಗುಚ್ಛಗಳು ಇವತ್ತಿನ ಓದಿಗೆ. 

ಓದುವ ಹವ್ಯಾಸದಲ್ಲಿ ‘ಗೋಡೆಗೆ ಬರೆದ ನವಿಲು’

ಆಗಾಗ್ಗೆ ಹೊಸತೊಂದು ಪುಸ್ತಕವನ್ನ ಪರಿಚಯಿಸೋ ‘ಓದುವ ಹವ್ಯಾಸ’ದಲ್ಲಿ ಈ ಬಾರಿ ಕಂಡಿದ್ದು ಸಂದೀಪ ನಾಯಕರ ‘ಗೋಡೆಗೆ ಬರೆದ ನವಿಲು.’

ಛಂದ ಪುಸ್ತಕದ ೨೦೦೯ರ ಬಹುಮಾನ ವಿಜೇತ ಈ ಕೃತಿಯ ಕುರಿತು ನರೇಂದ್ರರ ಮಾತು ಮುಂದುವರಿದಿದೆ. ಪುಸ್ತಕವನ್ನ ಅಚ್ಚುಕಟ್ಟಾಗಿ ಪರಿಚಯಿಸುತ್ತಲೇ , ಅವರ ಕಥೆಗಳ ಬಗೆಗೊಂದು ಒಳನೋಟ ಬೀರುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಇನ್ನಿತರ ನಾಲ್ಕಾರು ಪುಸ್ತಕಗಳ ಬಗ್ಗೆಯೂ ನೋಟ ಹೊರಳಿದೆ. ಇದರ ಪೂರ್ಣಪಾಠವನ್ನ ಓದಬೇಕಿದ್ದವರು ‘ಓದುವ ಹವ್ಯಾಸ’ಕ್ಕೆ ಭೇಟಿ ನೀಡಿ.

ಅರುಣರ ಪರಾವಲಂಬಿ ಸರಣಿ

‘ಪ್ಯಾರಾಸೈಟು ಅರ್ಥಾತ್ ಪರಾವಲಂಬಿಗಳನ್ನ ಕಂಡರೆ ನಮಗೆ ಎಷ್ಟು ದ್ವೇಷವೋ ನಮ್ಮನ್ನು ಕಂಡರೆ ಅವುಗಳಿಗೆ ಅದರ ಹತ್ತರಷ್ಟು ಪ್ರೀತಿ. ಹೇಗಿದೆ ವಿಪರ್ಯಾಸ!’ ಅನ್ನುತ್ತಲೇ , ಇಂತಹ ಪರಾವಲಂಬಿಗಳನ್ನ ಹಂತಹಂತಗಾಗಿ ಪರಿಚಯ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ ‘ಕ್ಷಿತಿಜದೆಡೆಗೆ’ ನ ಅರುಣ್.

ಅವರ ಪ್ರಕಾರ ಮನುಷ್ಯನ ಮೇಲೆ ‘ಅವಲಂಬಿ’ಯಾಗಿರುವ ಜೀವಿಗಳ ಪೈಕಿ ತಿಗಣೆಗೆ ಹತ್ತನೇ ಸ್ಥಾನ. ಒಂಭತ್ತನೆಯದು ಹೇನು....ಹೀಗೆ ಈ ಕೌಂಟ್ ಡೌನ್ ಸರಣಿ ಮುಂದುವರಿಯುತ್ತಿದೆ. ಇಂತಹ ಪರಾವಲಂಬಿಗಳ ಚಿಕ್ಕ ಪರಿಚಯವೂ ಜೊತೆಗಿದೆ. ಅರುಣರ ಈ ಸರಣಿಯನ್ನ ಓದಬೇಕಿದ್ದವರು ಕ್ಷಿತಿಜದೆಡೆಗೆ ಹೋಗಿಬನ್ನಿ.

ಎಚ್ಚರ! ಇಂದು ಮಂದಿ ಜ್ವರ

ನಿನ್ನೆ ಹಂದಿಜ್ವರದ ಬಗ್ಗೆ ಓದಿದ್ದೀರಿ. ಇವತ್ತೊಂದು ಹೊಸಜ್ವರದ ಬಗ್ಗೆ ಓದಿ. ಅದುವೇ ಮಂದಿ ಜ್ವರ! ಇಂತಹದ್ದೊಂದು ಜ್ವರದ ಬಗೆಯನ್ನ ಪತ್ತೆ ಮಾಡಿ ಬ್ಲಾಗಿನಲ್ಲಿಟ್ಟಿದ್ದಾರೆ ನಗೆ ನಗಾರಿಯ ಅನಾರೋಗ್ಯ ಬ್ಯೂರೋ.

ಅವರೇ ಹೇಳುವಂತೆ ಮಂದಿ ಜ್ವರ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುತ್ತಿರುವ ಈ ಜ್ವರವು ಹೊಸತೇನಲ್ಲ. ಅನಾದಿ ಕಾಲದಿಂದಲೂ ಇರುವಂತದ್ದೇ. ಇಂತಿಪ್ಪ ಜ್ವರದ ಬಗ್ಗೆ ಹೆಚ್ಚಿನ ವಿವರ ಬೇಕಿದ್ದವರು ನಗೆಸಾಮ್ರಾಟರ ನಗಾರಿ ಬ್ಲಾಗಿಗೆ ಭೇಟಿ ಕೊಡಿ. 

ಹಂದಿಜ್ವರದಿಂದ ದೂರವಿರುವ ತಂತ್ರಗಳು

ಜಗತ್ತಿನ ಜನಕ್ಕೆಲ್ಲ ಸದ್ಯ ಹಂದಿಜ್ವರದ್ದೇ ಚಿಂತೆ. ಮಾಧ್ಯಮಗಳ ಪೂರ ಇದೇ ಸುದ್ದಿ. ಇಂತಿಪ್ಪ ಜ್ವರ ನಮಗೆ ಬರದಂತೆ ತಡೆಗಟ್ಟುವುದು ಹೇಗಪ್ಪಾ? ಅದಕ್ಕಂತಲೇ ಒಂದಿಷ್ಟು ಉಪಾಯಗಳನ್ನ ಹೆಕ್ಕಿ ಕೊಟ್ಟಿದ್ದಾರೆ ಶಾನಿ.

ಹಂದಿಜ್ವರ ದಿಂದ ಲಕ್ಷಣಗಳು, ಅದರಿಂದ ದೂರವಿರಲು ಅನುಸರಿಸಬಹುದಾದ ಮುಂಜಾಗರೂಕತಾ ಕ್ರಮಗಳು, ಸಹಾಯಕ್ಕೆ ಬರುವ ದೂರವಾಣಿ ಸಂಪರ್ಕಗಳು ಇತ್ಯಾದಿ ಮಾಹಿತಿಗಳೆಲ್ಲವನ್ನ ಇಲ್ಲಿ ಕಾಣಬಹುದು. ಒಮ್ಮೆ ಓದಿಬನ್ನಿ.

ಲಕ್ಷ್ಮಿಕಾಂತರ ಏಕಾಂತ

‘ನದಿಯೊಳಗಿನ ಪ್ರೀತಿ ಬಗ್ಗೆ ಹೇಳುತ್ತೀನಿ ಅಂದ್ಯಲ್ಲಾ, ಹೇಳು ಇವಾಗ. ಮತ್ತೊಂದು ಸಣ್ಣ ಅಲೆ ಮೂಡಿ ಮತ್ತೊಲ್ಲೋ ಸುಳಿಯೂಗಿ ನೆನಪುಗಳೆಲ್ಲಾ ಸುಳಿವಿಲ್ಲದೆ ಅಳಿಸಿಹೋಗುವ ಮುನ್ನ. ಹೇಳು ಪ್ಲೀಸ್..’ ಹಾಗಂತ ಏಕಾಂತದಲ್ಲಿ ಕೇಳುತ್ತಾ ಇದ್ದಾರೆ ಲಕ್ಷ್ಮಿಕಾಂತ.

‘ನಿನ್ನೊಲುಮೆಯಿಂದಲೇ ಬ್ಲಾಗು ಬೆಳಕಾಗಿರಲು...’ ಅಂತ ಸ್ತುತಿಸುತ್ತಲೇ ಬ್ಲಾಗಿಸುವ ಬ್ಲಾಗಿಗ, ಸದ್ಯ ಒಂದಿಷ್ಟು ‘ಆಣಿ’ ಮುತ್ತುಗಳನ್ನ ಬ್ಲಾಗಿನಂಗಳಕ್ಕೆ ತಂದು ಸುರಿದಿದ್ದಾರೆ. ಓದಿದಷ್ಟು ಕಚಗುಳಿ ಇಡುವ ಬೆಚ್ಚನೆಯ ಭಾವದ ಸವಿಮುತ್ತುಗಳಿವು.

ಇಂತಹದ್ದೇ ಒಂದಿಷ್ಟು ಬೆಚ್ಚನೆಯ ಭಾವ-ಬರಹಗಳು ಇಲ್ಲಿವೆ. ವೃತ್ತಿಯಲ್ಲಿ ವಿನ್ಯಾಸಕಾರರಾದ ಕಾಂತರ ಆಕರ್ಷಕ ವಿನ್ಯಾಸಗಳನ್ನೂ ಇಲ್ಲಿ ಒಟ್ಟಾಗಿ ಕಾಣಬಹುದು. ಲಕ್ಷ್ಮಿಕಾಂತರ ಏಕಾಂತದ ಸಂಗ ಇವತ್ತಿನ ಬ್ಲಾಗ್ ಓದಿಗೆ.

ಚಂಪಕಾವತಿ ಎಕ್ಸ್‌ಕ್ಲೂಸಿವ್!

‘೮ ಆಗಸ್ಟ್ ೦೮ ರಿಂದ ಶುರು, ಇನ್ನೂ ಓಡುತ್ತಿದೆ ಗುರೂ...’ ಹೀಗೆ ತಮ್ಮ ಬ್ಲಾಗ್ ತೆರೆಗೆಬಂದ ಮೂರನೇ ವರ್ಷದ ಖುಷಿಯಲ್ಲಿದ್ದಾರೆ ಸುಧನ್ವಾ ದೇರಾಜೆ.

ಇದೇ ಖುಷಿಯಲ್ಲಿ, ತಮ್ಮ ‘ಚಂಪಾಕಾವತಿ’ ಗೆಂದೇ ಬರೆದ ‘ಎಕ್ಸ್ ಕ್ಲೂಸಿವ್’ ಲೇಖನಗಳನ್ನೆಲ್ಲ ಇನ್ನೊಮ್ಮೆ ಹೆಕ್ಕಿತೆಗೆದು ಅವುಗಳ ಲಿಂಕುಗಳನ್ನೆಲ್ಲ ಜೋಡಿಸಿಟ್ಟಿದ್ದಾರೆ. ಸುಧನ್ವಾರ ‘ಚಂಪಕಾವತಿ’ಯಲ್ಲಿ ಸಿಕ್ಕ ಟಾಪ್ ‘ಹತ್ತು ಮತ್ತು ಒಂದು’ - ಹನ್ನೊಂದು ಇಷ್ಟದ ಪೋಸ್ಟ್‌ಗಳನ್ನು ಓದಬಯಸುವವರು ಅವರ ಬ್ಲಾಗಿಗೇ ಭೇಟಿ ನೀಡಿ.

ಸುಜನರ ಕೈಪಿಡಿ

ಕನ್ನಡದ ಪ್ರಮುಖ ಬರಹಗಾರರು, ಕವಿಗಳ ಬಗೆಗಿನ ಮಾಹಿತಿಗಳು ಅಂತರ್ಜಾಲದಲ್ಲಿ ಸಿಕ್ಕುವುದು ಅಪರೂಪವೇ. ಹೀಗಿರುವಾಗ ಕನ್ನಡ ಬರಹಗಾರರ ಪೂರ್ಣ ಮಾಹಿತಿಗಳನ್ನು ಒಂದೆಡೆ ಕಲೆಹಾಕುವ ಯತ್ನದಲ್ಲಿದ್ದಾರೆ ಸುಜನ್ ಕುಮಾರ್. ಡಿವಿಜಿ, ಕೈಲಾಸಂ, ಬೀಚಿ ಕುರಿತ ವಿಸ್ತೃತ ಮಾಹಿತಿಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಶಿಶುನಾಳ ಶರೀಫರ ಗೀತೆಗಳನ್ನೂ ನೋಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುವ ಉದ್ದೇಶ ಅವರದ್ದು.

ಅರುಣರ ಗಿರ್ಮಿಟ್ ಕಥೆ

ಕಡಲೆಪುರಿ, ಮಂಡಕ್ಕಿ, ಗಿರ್ಮಿಟ್ ಒಂದೇ ಪದಾರ್ಥಕ್ಕೆ ಎಷ್ಟೆಲ್ಲ ಹೆಸರುಗಳು! ಒಂದೊಂದು ಕಡೆ ಒಂದೊಂದು ಅರ್ಥ! ಇಂತಹದ್ದೊಂದು ಅರ್ಥಗಳ ಕಥೆಯನ್ನ ತೆರೆದಿಟ್ಟಿದ್ದಾರೆ ಅರುಣ್ ಮಣಿಪಾಲ್. ವರ್ಷಗಳ ಹಿಂದೆ ಮಂಗಳೂರಿನಿಂದ ದುಬೈಗೆ ಹಾರಿದವರು, ಈಗ ಮತ್ತೆ ಊರಿಗೆ ಮರಳುವ ಖುಷಿಯಲ್ಲಿ ಅವರಿಗೆ ಇದೆಲ್ಲ ನೆನಪಾಗುತ್ತಿದೆ.

‘ನುಡಿಸಲು ಬಾರದೆ ನುಡಿಸಿದ ತಂತಿ...’ ಅವರ ಬ್ಲಾಗ್. ಹೆಚ್ಚಿಗೆ ಕವಿತೆ, ನಡುವೆ ಅಲ್ಲಲ್ಲಿ ನೆನಪ ಬರಹಗಳು. ಒಮ್ಮೆ ಓದಿ ಬನ್ನಿ. 

ಪ್ರೇಮಾಂತರಂಗದ ಕವಿತೆಗಳು

ಈ ದಿನದ ಬ್ಲಾಗಿನಂಗಳದಲ್ಲಿ ಪ್ರೇಮಾಂತರಂಗದ ಕವಿತೆಗಳ ಕಚಗುಳಿ.

ಹೃದಯ ತರಂಗಗಳ ಜೊತೆ ಒಂದೆರಡು ಮಾತುಗಳನ್ನಾಡಬಯಸುವ ಸಹೃದಯರು ಇಲ್ಲಿ ಕವನ ಕೃಷಿ ಮಾಡುತ್ತಿದ್ದಾರೆ. ಪ್ರೀತಿ-ಪ್ರೇಮ, ಸಂಬಂಧಗಳ ಸುತ್ತ ಸುತ್ತುವ ಒಂದಿಷ್ಟು ಹನಿಗವಿತೆ, ಕವಿತೆಗಳಷ್ಟೇ ಇಲ್ಲಿವೆ. ಅವರ ‘ಅಸ್ಥಿತ್ವದ’ ತುಣುಕೊಂದು ಇಲ್ಲಿದೆ.

‘ಸಾವಿರ ನದಿಗಳು ಒ೦ದಾಗಿ ಸೇರಿದರೂ
 ಕಡಲಾಗಲಾರದು ನಿಜ….
ನದಿಗಳು ಕಡಲೆಡೆಗೆ ಹರಿಯದಿದ್ದರೆ
ಕಡಲ ಅಸ್ಥಿತ್ವವಿರುತ್ತದೆಯೇ?’

ಶ್ರೀನಿವಾಸ ಗೌಡರ ಖಾಸಗಿ ಡೈರಿ

‘ಖಾಸಗಿ ಡೈರಿ’ ಪತ್ರಕರ್ತನೊಬ್ಬನ ಖಾಸಗಿ ದಿನಚರಿಯ ಪುಟಗಳು. ಹೀಗೆ ಇಲ್ಲಿ ತಮ್ಮ ಖಾಸಗಿ ಸಂಗತಿ, ಅನಿಸಿಕೆ, ಅಭಿಫ್ರಾಯಗಳನ್ನ ಹಂಚಿಕೊಳ್ಳುತ್ತಾ ಕುಳಿತಿರುವವರು ದೆಹಲಿಯಲ್ಲಿರುವ ಈಟಿವಿ ವರದಿಗಾರ ಶ್ರೀನಿವಾಸ ಗೌಡ.

ಮಾಧ್ಯಮಗಳ ಕುರಿತ ಒಂದಿಷ್ಟು ಗರಮಾ ಗರಂ ಸುದ್ದಿ-ವಿಮರ್ಶೆಗಳು, ಸುದ್ದಿ ಮಾಧ್ಯಮದ ವಿಶ್ಲೇಷಣೆಗಳು, ಸ್ವಲ್ಪ ಖಾಸಗಿ, ಸ್ವಲ್ಪ ಪಬ್ಲಿಕ್ ಅನಿಸಿಕೆಗಳು ಎಲ್ಲವನ್ನ ಗೌಡರ ಈ ಡೈರಿಯೊಳಗೆ ಕಾಣಬಹುದು. ಇನ್ನೂ ಅನೇಕ ಸಂಗತಿಗಳ ಕುರಿತು ಶ್ರೀನಿವಾಸ ವಿಚಾರ ಲಹರಿ ಹರಿದಿದೆ. ಓದಬೇಕಿದ್ದವರು ಒಮ್ಮೆ ಭೇಟಿ ಕೊಡಿ. 

ಚಿತ್ರೋತ್ಸವಕ್ಕೆ ಸಜ್ಜಾದ ಸಾಂಗತ್ಯ

ಈ ವಾರದ ರಜೆಯನ್ನು ಒಂದೊಳ್ಳೆ ಕಡೆ, ಒಂದೊಳ್ಳೆ ಕೆಲಸದಲ್ಲಿ ಕಳೆಯಬೇಕು ಅಂತ ಯೋಚನೆ ಮಾಡುತ್ತಿದ್ದರೆ, ತೀರ್ಥಹಳ್ಳಿಗೆ ಹೊರಡಲು ಸಿದ್ಧರಾಗಿ. ಕಾರಣ, ಸಾಂಗತ್ಯ ತನ್ನ ಎರಡನೇ ಚಿತ್ರೋತ್ಸವವನ್ನ ಅಲ್ಲಿ ಆಯೋಜಿಸುತ್ತಿದೆ. ಇದೇ ಶನಿವಾರ ಮತ್ತು ಭಾನುವಾರ ಅಂದರೆ ಆಗಸ್ಟ್ ೮, ೯ರಂದು ತೀರ್ಥಹಳ್ಳಿಯ ತಂಪು ಹವೆ, ಹಸಿರಿನ ನಡುವೆ ಸಾಂಗತ್ಯ ಚಿತ್ರೋತ್ಸವ ನಡೆಯಲಿದೆ. ಪ್ರಸಿದ್ಧ, ವಿಭಿನ್ನ ಚಲನಚಿತ್ರಗಳ ವೀಕ್ಷಣೆ, ಒಂದಿಷ್ಟು ಮಾತು, ಒಂದಿಷ್ಟು ಆಪ್ತ ಚರ್ಚೆ, ಜೊತೆ ಸಾಕ್ಷ್ಯಚಿತ್ರಗಳ ವೀಕ್ಷಣೆಯೂ ಅಲ್ಲಿರಲಿದೆ. ಇದಕ್ಕಾಗಿ ಮುಂಗಡ ನೋಂದಣಿ ಅಗತ್ಯ.

ಹೆಚ್ಚಿನ ಮಾಹಿತಿಗೆ ಸಾಂಗತ್ಯ ಬ್ಲಾಗಿಗೆ ಭೇಟಿ ಕೊಡಿ.

ರೂಪಶ್ರೀ ಕಂಡಂತೆ ಲಕ್ಷ್ಮಿ ಪೂಜೆ

ಇಂದು ವರಮಹಾಲಕ್ಷ್ಮಿ ಹಬ್ಬ. ಬಯಕೆಗಳೆಲ್ಲ ಸಿದ್ಧಿಸಲಿ ಎಂದು ಲಕ್ಷ್ಮಿಯನ್ನು ಬೇಡುತ್ತಾ ಪೂಜಿಸುವ ದಿನ. ಇಂತಹ ಹೊತ್ತಲ್ಲಿ, ಅಮ್ಮನ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬದ ನೆನಪು ಮಾಡಿಕೊಳ್ಳುತ್ತಿದ್ದಾರೆ ರೂಪಶ್ರೀ. ಲಕ್ಷ್ಮಿಪೂಜೆಗಾಗಿ ಮಾಡಿಕೊಳ್ಳುತ್ತಿದ್ದ ಸಿದ್ಧತೆ, ವ್ರತಯನ್ನ ಆಚರಿಸುತ್ತಿದ್ದ ಬಗೆ, ಹಬ್ಬದ ಸಂಭ್ರಮ ಎಲ್ಲವನ್ನ ಕಟ್ಟಿಕೊಡುವ ಯತ್ನದಲ್ಲಿದ್ದಾರೆ. ಕಡೆಗೆ, ದೂರದೂರಿನಲ್ಲಿ ಹಬ್ಬ ಆಚರಿಸಿದ್ದ ಒಂದಿಷ್ಟು ಚಿತ್ರಗಳನ್ನೂ ತೋರಿ ಮೆಲುಕು ಹೆಚ್ಚಿಸಿದ್ದಾರೆ.

ಹಾಗೆಯೇ, ಹಂಸಾನಂದಿ ಕೂಡ ತಮ್ಮ ಬ್ಲಾಗಿನಲ್ಲಿ ಹಬ್ಬದ ಮಹತ್ವವನ್ನ ಹಾಗೂ ಅದರದ್ದೊಂದು ಕಥೆಯನ್ನ ತೆರೆದಿಟ್ಟಿದ್ದಾರೆ. ಎಲ್ಲವೂ ಈ ಹಬ್ಬದ ಓದಿಗೆ. 

ರಮ್ಯ ಪ್ರಪಂಚಕ್ಕೆ ಸ್ವಾಗತ

ಮದುವೆಯಾದ ಹದಿನೈದು ದಿನದಲ್ಲೇ ಅಮೆರಿಕಾಕ್ಕೆ ಹಾರಿ, ಅಲ್ಲಿ ಅಪರಿಚಿತ ಊರನ್ನ ಕಂಡು ಬೆದರುತ್ತ, ಮನೆ ಮುಂದಣ ಮರದ ಮೇಲಿನ ಅಳಿಲುಗಳನ್ನ ಕಂಡು ಸಂತೈಸಿಕೊಳ್ಳುತ್ತ, ದಿನಪೂರ್ತಿ ಲ್ಯಾಪ್ ಟ್ಯಾಪಿನಲ್ಲಿ ಮುಳುಗಿ ಕಾಲ ಕಳೆಯಲೆತ್ನಿಸುತ್ತಿದ್ದ ರಮ್ಯ ಈಗ ಬ್ಲಾಗ್ ಬರೆಯಲು ಆರಂಭಿಸಿದ್ದಾರೆ. ಹೀಗೆ ಒಂದಕ್ಕೊಂದು ಹೊಸ ಬ್ಲಾಗು ಪರಿಚಯವಾಗುತ್ತಾ, ಅದೇ ಬರವಣಿಗೆಗೆ ಪ್ರೇರಣೆಯಾಗಿ ಹೊಸ ಬ್ಲಾಗೊಂದು ಬಂದಿದೆ.

ಶಾಲಾ ಕಾಲೇಜು ನೋಟ್ಸ್ ಬಿಟ್ಟರೆ ಬೇರೆ ವಿಷಯಗಳನ್ನು ಬರೆದಿದ್ದು ಅಪರೂಪ ಎನ್ನುವ ರಮ್ಯ ತಮ್ಮ ಈ ಹೊಸ ಪ್ರಪಂಚವನ್ನ ಆರಂಭಿಸಿದ್ದಾರೆ. ಇದು, ಅವರ ಕತೆ, ಕಲ್ಪನೆ, ಕನಸು, ಅನುಭವಗಳನ್ನು ಅಕ್ಷರಕ್ಕಿಳಿಸುವ ಒಂದು ಚಿಕ್ಕ ಪ್ರಯತ್ನವಂತೆ. ರಮ್ಯ ಬ್ಲಾಗ್ ಪ್ರಪಂಚಕ್ಕೆ ಸ್ವಾಗತ!

ನಿಶದರ ಮೀಡಿಯಾ ವಿಮರ್ಶೆ

ಮಾಧ್ಯಮಗಳ ಸದ್ದು-ಗದ್ದಲಗಳ ಈ ಹೊತ್ತಲ್ಲಿ ಅವುಗಳ ವಿಚಾರ-ವಿಮರ್ಶೆ ಬರೆಯಲೆಂದೇ ಬಂದಿದ್ದಾರೆ ನಿಶದ. ಕನ್ನಡ ಸುದ್ದಿ ಜಗತ್ತಿನ ಒಳಗಿನ ತಾಜಾ ಸುದ್ದಿಗಳು, ಒಂದಿಷ್ಟು ಗಲ್ಲಿ ಗಾಸಿಪ್ ಗಳು , ತಂಟೆ-ತಕರಾರುಗಳ ಮೇಲೆ ಇವರ ಚಿತ್ತ ಹರಿಯುತ್ತಿದೆ. ಪತ್ರಿಕೋದ್ಯಮದ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಲೇಖಕಿ ಇಲ್ಲಿ ಅದರ ಹುಳುಕುಗಳನ್ನು ತೋರಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಅವರ ಈ ಬ್ಲಾಗು ಇಂದಿನ ಓದಿಗೆ.

ಜೋಗಿ ಜಂಗಮನ ಕಿನ್ನರಿ..

ಈ ದಿನದ ಬ್ಲಾಗಿನಲ್ಲಿ ಜೋಗಿ ಜಂಗಮನ ಕಿನ್ನರಿಯ ಪದಗಳು.

ಹೀಗೆ ಕಿನ್ನರಿ ಹಿಡಿದು ದೂರದ ದುಬೈನಿಂದ ಬಾರಿಸಲು ನಿಂತಿರುವವರು ಅರುಣ್ ಮಣಿಪಾಲ್. ಈ ಜಂಗಮನ ಒಂದೆರಡು ಪದಗಳು ಇಲ್ಲಿವೆ. ಉಳಿದದ್ದಕ್ಕೆ ಅವರ ಬ್ಲಾಗಿಗೆ ಭೇಟಿ ನೀಡಿ.

ತಿರುಗಿ ನೋಡದೆ ಹೋಗಿ ಬಿಡು ನನ್ನ
ಮತ್ತೆ ಹಿಂತಿರುಗಿ ಹರಿಯದ ನದಿಯಂತೆ
ದೂರ ದೂರಕ್ಕೂ ಹೊಸದೇ ದಡಗಳು ನಿನಗೆ

ಮಾತಿನ ಬಾಗಿಲು ಮುಚ್ಚಿ ಬಿಡು ನನಗೆ
ಮೌನ ಹೊದ್ದಿರುವ ಪರ್ವತದಂತೆ
ದಿನ ದಿನವೂ ಹೊಸ ಬಾನು ನಿನಗೆ

ನನ್ನ ಕನಸು ಮತ್ತೆ ಕಾಣದಿರಲಿ ನಿನಗೆ
ಕಳೆದ ಹೋದ ನಿನ್ನೆಗಳಂತೆ
ದಿನ ದಿನವೂ ಹೊಸದೇ ಬೆಳಗು ನಿನಗೆ

ಸುಘೋಷರ ಕಿತಾಪತಿ ಜಗತ್ತು

ಬ್ಲಾಗ್ ಲೋಕದಲ್ಲಿ ಹೊಸ ಕಿತಾಪತಿಗಳ ಜಗತ್ತೊಂದನ್ನ ಹುಟ್ಟುಹಾಕಿದ್ದಾರೆ ಸುಘೋಷ್ ನಿಗಳೆ. ‘ಕಾಷಿಯಸ್ ಮೈಂಡ್’ ಅವರ ಈ ಜಗತ್ತಿನ ಹೆಸರು. ದೇವರಿಗೇ ಪತ್ರ ಬರೆದು ಇಲ್ಲಿನ ಮಾಧ್ಯಮದವರ ಬಗ್ಗೆ ವರದಿ ಒಪ್ಪಿಸುತ್ತಿರುವ ಸುಘೋಷ್ , ಒಮ್ಮೆ ಹಾಗೇ ಭೂಲೋಕಕ್ಕೆ ಬರಬಾರದ? ಅಂತ ಮನವಿ ಮಾಡುತ್ತಿದ್ದಾರೆ. ಹಾಗೇ, ಕಣ್ಮರೆಯಾಗುತ್ತಿರುವ ಸಾವಯವ ಕೃಷಿಯ ಬಗ್ಗೆ ಒಂದು ಪುಟ್ಟ ಬರಹವಿದೆ.

ಈಗಷ್ಟೇ ಆರಂಭವಾಗಿರುವ ಈ ಲೋಕವನ್ನ ಒಮ್ಮೆ ನೋಡಿಬನ್ನಿ.

ಬೇಳೂರು ಹೇಳಿದ ಬ್ಯಾಕ್ಟೀರಿಯಾ ಕಥೆ

‘ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?’ ಹಾಗಂತ ಕೇಳ್ತಾ ಇದ್ದಾರೆ ಬೇಳೂರು ಸುದರ್ಶನ. ಮೊನ್ನೆ ವೈರಲ್ ಫೀವರ್ ಗೆ ತುತ್ತಾದವರು, ತಮ್ಮದೇಹದಲ್ಲಡಗಿದ ಖತರ್ ನಾಕ್ ಬ್ಯಾಕ್ಟೀರಿಯಾವೊಂದರ ಮೂಲ ಹುಡುಕಿ ಹೋಗಿದ್ದಾರೆ. ನೆಟ್ಟಿನಲ್ಲಿ ಅದರ ಅಂಶಗಳನ್ನ ಹೆಕ್ಕಿ ತೆಗೆದು ಹಾಕಿದ್ದಾರೆ. ಮನುಕುಲವನ್ನು ಕಾಡುತ್ತಿರುವ ಆರು ಭಯಾನಕ ಕೀಟಾಣುಗಳಲ್ಲಿ ಈ  ಸ್ಯೂಡೋಮೋನಾಸ್ ಏರುಗಿನೋಸಾ ಬ್ಯಾಕ್ಟೀರಿಯಾ ಕೂಡ ಒಂದಂತೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದವರು ಬೇಳೂರು ಬ್ಲಾಗಿಗೆ ಭೇಟಿ ನೀಡಿ.

ಹೀಗೊಂದು ಧಾರಾವಾಹಿ ಬ್ಲಾಗು

ಧಾರಾವಾಹಿಗಳಿಗೂ ಬ್ಲಾಗಿಗೂ ಎಲ್ಲಿಂದೆಲ್ಲಿಯ ಸಂಬಂಧ ಇದ್ದೀತು? ಒಂದು ಧಾರಾವಾಹಿಯ ಕುರಿತ ಮಾಹಿತಿಗಳನ್ನ ಒಂದೆಡೆ ಕಲೆಹಾಕುವ ಸಲುವಾಗಿ ಇತ್ತೀಚಿಗೆ ಕೆಲವು ಧಾರಾವಾಹಿಗರು ಬ್ಲಾಗುಗಳನ್ನ ತೆರೆಯುತ್ತಿರುವುದು ಉಂಟು. ಹೀಗಿರುವಾಗ, ಧಾರಾವಾಹಿಯಲ್ಲಿನ ಪಾತ್ರವೇ ಬ್ಲಾಗ್ ಬರೆಯುವಂತೆ ತೋರಿಸಿದರೆ ಹೇಗಿದ್ದೀತು? ಅಂತಹದ್ದೊಂದು ಪ್ರಯತ್ನಕ್ಕೆ ಕೈಹಾಕಿದೆ ‘ಜೋಗುಳ’ ಧಾರಾವಾಹಿ ತಂಡ.

ಗೆಳತಿ ದೇವಕಿ ಜೊತೆಗಿನ ಸಂಬಂಧ ಬಾಡಿದ ತರುವಾಯ ಅಮೆರಿಕಾಕ್ಕೆ ಹಾರುವ ವಾಸು , ಅಲ್ಲಿ ತನ್ನ ಪ್ರೀತಿಯ ನೆನಪುಗಳನ್ನ ಈ ಬ್ಲಾಗಿನ ಮೂಲಕ ತೋಡಿಕೊಳ್ಳುತ್ತಾನಂತೆ. ಕಥೆಯಲ್ಲೂ, ನಿಜವಾಗಿಯೂ ಈ ಬ್ಲಾಗ್ ಮೂಡಿಬರುತ್ತಿದೆ. ಧಾರವಾಹಿಯಲ್ಲಿನ ವಾಸು ಪಾತ್ರ ತನ್ನ ದೇವಕಿಯ ನೆನಪಿನಲ್ಲಿ ಇಲ್ಲಿ ಬ್ಲಾಗಿಸುತ್ತಿದೆ. ಹೀಗೊಂದು ಭಿನ್ನ ಪ್ರಯತ್ನ. ಕುತೂಹಲಕ್ಕಾದರೂ ಒಮ್ಮೆ ಓದಿಬನ್ನಿ.

ಜಯಲಕ್ಷ್ಮಿ ಬರೆವ ಭಾವಗಳು

ಒಂದು ಅಪರೂಪದ ಸೀರೆಯನ್ನ ಹೊಸೆಯುವ ಯತ್ನದಲ್ಲಿದ್ದಾರೆ ಜಯಲಕ್ಷ್ಮಿ. ಅವರೇ ಹೇಳುವಂತೆ ಸೀರೆಯಿದು ಬರಿಯ ಸೀರೆಯಲ್ಲ. ಪ್ರೀತಿಯ ತೆರದಿ ಮೃದು, ಎಲ್ಲ ಕಾಲಕ್ಕೂ ಸಲ್ಲುವುದು, ಸೆರಗ ತುಂಬಾ ಮಲ್ಲಿಗೆಯ ಪರಿಮಳದ ನಗುವ ಹೊತ್ತ ಪಂಚರಂಗಿ ಬಣ್ಣದ ಸೀರೆ.

‘ಹೇಳಬೇಕೆನಿಸುತ್ತಿದೆ’ ಅವರ ಬ್ಲಾಗು. ಹೆಸರೇ ಹೇಳುವಂತೆ ಹೇಳಬಯಸುವ ಎಲ್ಲವೂ ಇಲ್ಲಿದೆ. ತಮ್ಮೊಳಗಿನ ವಿಚಾರಗಳು, ಮನದ ಭಾವಗಳು, ಅಲ್ಲೋಲ-ಕಲ್ಲೋಲಗಳೂ ಎಲ್ಲವೂ. ಕೆಲವೊಮ್ಮೆ ಕವಿತೆಯಾಗಿ, ಒಮ್ಮೊಮ್ಮೆ ಕಥೆಯಾಗಿ, ಇನ್ನೊಮ್ಮೆ ಪುಟ್ಟ ಪತ್ರವಾಗಿ ಭಾವಗಳು ಹೊರಹೊಮ್ಮಿವೆ. ಒಮ್ಮೆ ಓದಿಬನ್ನಿ.

ಪ್ರವೀಣ್ ಕಂಡಂತೆ ಮಂಜುನಾಥ

ಹಾಗೊಮ್ಮೆ ಹೀಗೊಮ್ಮೆ ಬರೆಯುವ ಪ್ರವೀಣ್ ಪಟವರ್ಧನ್ ಈ ಬಾರಿ ‘ಎದ್ದೇಳು ಮಂಜುನಾಥ’ನ ಕುರಿತು ಬರೆದಿದ್ದಾರೆ. ಮಂಜುನಾಥನನ್ನ ಪರದೆಯ ಮೇಲೆ ಕಂಡುಬಂದವರು ಆತನ ಗುಣಗಾನ ಮಾಡುತ್ತಿದ್ದಾರೆ.

ಎಲ್ಲರೊಳಗೊಬ್ಬನಾದ ಮಂಜುನಾಥನ ವರಸೆಯನ್ನ, ಒಂದಕ್ಕೊಂದು ಹದವಾಗಿ ಬೆರೆತು ತಯಾರಿಸಲಾದ ಚಿತ್ರವನ್ನ ತಪ್ಪದೇ ನೋಡಿ. ‘ಗುರುಪ್ರಸದರ, ಜಗ್ಗೇಶ್ ರವರ, ಹಾಸ್ಯ-ವ್ಯಂಗ್ಯ-ವಿಡಂಬನೆ-ವೇದಾಂತ ಇವುಗಳಲ್ಲಿ ಯಾವುದಾದರೊಂದರ ಅಭಿಮಾನಿ ನೀವಾದರೆ ಮಂಜುನಾಥನ್ನು ಚಿತ್ರಮಂದಿರದಿಂದ ಕಳೆದುಕೊಳ್ಳಬೇಡಿ. ಅಭಿಮಾನಿಯಾಗಲು ಇಚ್ಛಿಸುವವರಿಗೂ ಈ ಚಲನಚಿತ್ರ ಒಂದು ಮುನ್ನುಡಿ.’ ಎನ್ನುವುದು ಅವರ ಕೋರಿಕೆ.

ಸಹಯಾತ್ರಿಯ ಮಳೆ ನೆನಪು

‘ಕಾದೆ ನಾನು, ಮಳೆಯ ಹನಿಗೆ
ಕಾಯುವ ಬುವಿಯಂತೆ,
ಅವಳದೊಂದು ಮಂದನಗೆಗೆ
ಮೊಗವ ತೋರಿ ಮರೆಯಾದಳು
ಕಪ್ಪನೆ ಮೋಡದಂತೆ
ಬೀಸುವ ಬಿರುಗಾಳಿಗೆ.’

ಹೀಗೆ ಮಳೆ ಬರುವ ಹೊತ್ತಿಗೆ ಕಾದು ಕುಂತ ಬಗೆಯನ್ನ ಬ್ಲಾಗಿನಲ್ಲಿ ಬರೆಯುತ್ತಿದ್ದಾರೆ ಸಹಯಾತ್ರಿ ಈಶಕುಮಾರ್.

ಮೋಡದ ಕಣ್ಣಾ ಮುಚ್ಚಾಲೆ ಆಟ ಮುಗಿದು ಎಲ್ಲೆಲ್ಲು ಮಳೆ,ಮಳೆ,ಮಳೆ. ಸುರಿವ ಮಳೆ ಹೊತ್ತಲ್ಲಿ ತರುವ ಅಪಾರ ನೆನಪುಗಳ ಕನವರಿಕೆಯನ್ನ ಇಲ್ಲಿ ಕಾಣಬಹುದು. ಸಹಯಾತ್ರಿಯ ಈ ನೆನಪುಗಳು ಈ ಹೊತ್ತಿನ ಓದಿಗೆ.

ಪವನಜರ ಗಣಕಿಂಡಿ

ಕನ್ನಡವನ್ನ ಅಂತರ್ಜಾಲಕ್ಕೆ ತಂದ ಪ್ರಮುಖರಲ್ಲಿ ಯು.ಬಿ ಪವನಜ ಅಗ್ರಗಣ್ಯರು. ಅಂತೆಯೇ ಅಂತರ್ಜಾಲ ಮತ್ತದರ ಬಳಕೆಯ ಬಗ್ಗೆ ಉಪಯುಕ್ತವಾಗಿ ಬರೆಯುವಂತಹ ಲೇಖಕರು. ಅವರ ಚಿಂತನಾತ್ಮಕ, ಮಾಹಿತಿಯುಕ್ತ ಲೇಖನಗಳ ಸಂಗ್ರಹವನ್ನ ಈ ‘ಗಣಕಿಂಡಿ’ಯಲ್ಲಿ ಕಾಣಬಹುದು.

ಕಂಪ್ಯೂಟರ್, ಅಂತರ್ಜಾಲ, ವಿವಿಧ ಸಾಫ್ಟ್ ವೇರ್ ಗಳ ಬಳಕೆ, ವಿವಿಧ ತಾಂತ್ರಿಕ ಸಂಗತಿಗಳ ಕುರಿತು ಅವರು ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಿರುವ ಅಂಕಣಗಳು ಇಲ್ಲಿ ಓದಸಿಗುತ್ತವೆ. ಕನ್ನಡ ಅಂತರ್ಜಾಲ ಬಳಕೆದಾರರಿಗೊಂದು ಕೈಪಿಡಿ ಈ ಗಣಕಿಂಡಿ.

ಜೀವನ ಜೋಕಾಲಿ

ಬ್ಯಾಚುಲರ್ಸ್ ಅರ್ಥಾತ್ ಬ್ರಹ್ಮಚಾರಿಗಳಾಗಿ ಇರೋದು ತುಂಬಾನೇ ಕಷ್ಟ. ಅಂತಹದ್ದೇ ಒಂದು ಗೋಳಿನ ಕಥೆಯನ್ನ ಹೇಳ್ತಾ ಇದ್ದಾರೆ ಜೀವನ ಜೋಕಾಲಿಯ ವಿನಯ್.

ತಿಂಗಳುಗಳ ಹಿಂದೆ ತಮಿಳುನಾಡಿನ ದೇವಸ್ಥಾನಗಳನ್ನೆಲ್ಲ ಒಂದು ಸುತ್ತು ಹಾಕಿದವರು, ಅಲ್ಲಿ ತಮಗೆ ಹಿಡಿಸಿದ್ದು-ಹಿಡಿಸದಿದ್ದದೆಲ್ಲದರ ಸಮೀಕ್ಷೆಯೊಂದನ್ನ ತಯಾರಿಸಿ ತಮ್ಮೀ ಬ್ಲಾಗಿನಲ್ಲಿ ಸೇರಿಸಿದ್ದಾರೆ. ಅಪರಿಚತನ ಅಂತರಂಗವನ್ನ ತೆರೆದಿಟ್ಟಿದ್ದಾರೆ. ಜೊತೆಗೆ ಒಂದಿಷ್ಟು ಕವಿತೆ, ಒಂದಿಷ್ಟು ಮಾತು-ಹರಟೆ. ಸಿಹಿ-ಕಹಿ ಅನುಭವಗಳ ಮಿಶ್ರಣವೇ ಈ ಜೀವನ ಜೋಕಾಲಿ.

ಚಿಂತನ ಪುಸ್ತಕ

ಹಲವಾರು ವರ್ಷಗಳಿಂದ ಉತ್ತಮ ಅಭಿರುಚಿಯ , ಜನಪರ ಆಶಯವುಳ್ಳ ಪುಸ್ತಕಗಳ ಪ್ರಕಾಶನದಲ್ಲಿ ತೊಡಗಿರುವ, ಕನ್ನಡ ಸಾಂಸ್ಕೃತಿಕ ಲೋಕದ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಾಣುತ್ತಿರುವ ‘ಚಿಂತನ ಪುಸ್ತಕ’ ಈ ದಿನದ ಬ್ಲಾಗ್ ಬೊಗಸೆಯಲ್ಲಿ.

ಚಿಂತನ ಪುಸ್ತಕ ಪ್ರಕಾಶನ ಹೊರತರುತ್ತಿರುವ ಹೊಸ ಹೊಸ ಪುಸ್ತಕಗಳು, ಇಷ್ಟರಲ್ಲೇ ಹೊರಬರಲಿರುವ ಪುಸ್ತಕಗಳ ಮಾಹಿತಿ, ಓದು-ವಿಮರ್ಶೆ ಎಲ್ಲವನ್ನ ಇಲ್ಲಿ ಕಾಣಬಹುದು. 

ಧರ್ಮ ಕಾರಣದ ಚಿಂತನೆಗಳು

ನೆಮ್ಮದಿಯ ಜೀವನಕ್ಕೆ ಬೇಕಾದ ಆಧ್ಯಾತ್ಮದ ಪಾಠಗಳನ್ನು ಹೇಳಿಕೊಡುವ ‘ಧರ್ಮ ಕಾರಣ’ ಈ ದಿನದ ಬ್ಲಾಗ್. ಬೆಳಕಿನೆಡೆಗೆ ಸಾಗುವ ಚಿಂತನೆಗಳು, ನಡೆ-ನುಡಿ, ಪರೋಪಕಾರ, ಕ್ಷಮಾವಾಣಿ, ಸ್ಪೂರ್ತಿ ಕುರಿತ ತತ್ವಗಳು ಮುಂತಾದ ಚುಟುಕು ಬರಹಗಳನ್ನ ಇಲ್ಲಿ ಆಗಾಗ್ಗೆ ಕಾಣಬಹುದು. ಒಟ್ಟಾರೆ, ಧರ್ಮಕಾರಣದ ಆಧ್ಯಾತ್ಮ ಚಿಂತನೆಗಳು ಇವತ್ತಿನ ಬ್ಲಾಗ್ ಓದಿಗೆ. 

ದುರ್ಗದ ಚಿತ್ರಗಳು

ಚಿತ್ರದುರ್ಗದ ಕಲ್ಲಿನ ಕೋಟೆ ಇತಿಹಾಸದ ವಿಸ್ಮಯಗಳಲ್ಲಿ ಒಂದು. ಇಂತಹ ಉಕ್ಕಿನ ಕೋಟೆಯ ಅಪರೂಪದ ಚಿತ್ರಗಳನ್ನ ಬ್ಲಾಗಿನಂಗಳದಲ್ಲಿ ಹರಡಿದ್ದಾರೆ ಪತ್ರಿಕಾ ಛಾಯಾಗ್ರಾಹಕ ವಿನೋದ್. ದುರ್ಗದ ಕೋಟೆಯನ್ನ ವಿವಿಧ ಕೋನಗಳಿಂದ ಕಂಡ, ಅಲ್ಲಿನ ಚಟುವಟಿಕೆಗಳನ್ನ ತನ್ನ ಕ್ಯಾಮರಾ ಕಣ್ಣುಗಳಿಂದ ದಾಖಲಿಸಿ ತಂದ ನೂರರಷ್ಟು ಚಿತ್ರಗಳು ಇಲ್ಲಿವೆ. ಒಮ್ಮೆ ನೋಡಿಬನ್ನಿ.

ಅಮೃತವರ್ಷಿಣಿಯ ವಿಧಿಕಥೆ

‘ವಿಧಿ ಬರಹ ಎಂಥ ಘೋರ’ ಹಾಗಂತ ಅನಿಸೋದಕ್ಕೆ ಶುರುಮಾಡಿದ್ದು ಈ ‘ವಿಧಿ’ ಕಥೆ ಓದಿದ ಮೇಲೆ. ವಿಧಿಯಾಟವಾದರೂ ಎಂತಹದ್ದು ಅನ್ನೋದನ್ನ ಇಟ್ಟುಕೊಂಡು ಈ ಕಥೆ ಹೊಸೆದಿದ್ದಾರೆ ಅಮೃತವರ್ಷಿಣಿ.

ಅಮೃತವರ್ಷಿಣಿ- ಎದೆಯಾಂತರಾಳದಿಂದ ಜಾರಿತೊಂದು ಭಾವುಕತೆಯ ಬಿಂದು…ಕಡಲ ತೀರದ ಊರಿನ, ಸ್ವಭಾವತಃ ತುಂಬಾನೇ ಭಾವುಕರಾದ , ಮಾತಿನ ನಡುವಿನ ನೀರವ ಮೌನವನ್ನು ಹುಡುಕುವ ಹುಡುಗಿಯೊಬ್ಬರು ಇಲ್ಲಿ ಈಗ ತಾನೇ ಬರಹ ಶುರುವಿಟ್ಟುಕೊಂಡಿದ್ದಾರೆ. ದುಃಖ ಭರಿಸಲು ಸ್ವಲ್ಪ ಕಷ್ಟ ಪಡುತ್ತೇನೆ...ಅನ್ನುವವರು ಒಂದು ದುಃಖದ ಕಥೆಯನ್ನ ತೆರೆದಿದ್ದಾರೆ. ಓದಿಬನ್ನಿ. 

ಕಿರುತೆರೆಯ ಹೊಸ ಬ್ಲಾಗು

ಹೆಳವನಕಟ್ಟೆ ಗಿರಿಯಮ್ಮ ಕರ್ನಾಟಕದ ಸಂಸ್ಕೃತಿಯಲ್ಲಿ ಚಿರಪರಿಚಿತವಾದ ಹೆಸರು. ದಾಸ ಸಾಹಿತ್ಯದಲ್ಲಿ ತನ್ನ ಭಕ್ತಿಯಿಂದ, ಕೀರ್ತನೆಗಳಿಂದ ಹೆಸರಾದ ಪ್ರಥಮ ಮಹಿಳೆ ಈಕೆ. ಆಕೆಯ ಜೀವನದ ಲಭ್ಯ ಮಾಹಿತಿಗಳನ್ನು ಇಟ್ಟುಕೊಂಡು ಕಿರುತೆರೆ ಧಾರಾವಾಹಿ ನಿರ್ಮಾಣ ಮಾಡಿದೆ ವಾಗ್ದೇವಿ ಕ್ರಿಯೇಷನ್ಸ್.

‘ಈ ಟಿವಿ’ ವಾಹಿನಿಯಲ್ಲಿ ಪ್ರಸಾರವಾಗುತ್ತಾ, ಈಗಾಗಲೇ ನೂರು ಕಂತುಗಳನ್ನು ಪೂರೈಸಿರುವ ಧಾರಾವಾಹಿಯ ತಂಡ, ಅದೇ ಖುಷಿಯಲ್ಲಿ ಬ್ಲಾಗೊಂದನ್ನ ತೆರೆದಿದೆ. "ಮುಖ್ಯವಾಗಿ ಧಾರಾವಾಹಿಯಲ್ಲಿ ಉಪಯೋಗಿಸಿರುವ ದಾಸರ ಕೀರ್ತನೆಗಳು, ಕತೆಯ ವಿವರಗಳು, ಧಾರಾವಾಹಿಯನ್ನು ನಿರ್ಮಿಸುವಲ್ಲಿ ಪಾಲುದಾರರಾದ ಕಲಾವಿದರು, ತಂತ್ರಜ್ಞರ ಕಿರು ಪರಿಚಯಗಳು ಮತ್ತು ಪ್ರೇಕ್ಷಕರ ಅಭಿಪ್ರಾಯಗಳು, ಇವುಗಳನ್ನು ಒಂದು ಕಡೆ ದಾಖಲಿಸ ಬೇಕೆಂಬ ಹಂಬಲದ ಸಾಕಾರ ಈ ಬ್ಲಾಗ್." ಎನ್ನುವುದು ಅವರ ಆಶಯ.

ಓದುವ ಹವ್ಯಾಸದ ಹೊಸ ವಿಮರ್ಶೆ

‘ಸಂಥಿಂಗ್ ಟು ಟೆಲ್ ಯು’ ಹೀಗೊಂದು ಕಿರಿಕಿರಿಯ, ಮನ ಕಲಕುವ ಕಾದಂಬರಿಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ ಓದುವ ಹವ್ಯಾಸದ ನರೇಂದ್ರ ಪೈ.

ಹನೀಫ್ ಕುರೇಶಿಯ ಕಾದಂಬರಿ ತಮ್ಮನ್ನ ಕಾಡಿದ ಬಗೆಯನ್ನ, ಅದು ಹುಟ್ಟಿಸಿದ ತಳಮಳಗಳನ್ನ, ಓದಿ ಕಂಡುಕೊಂಡ ಸತ್ಯಗಳನ್ನಲ್ಲ ಇಲ್ಲಿ ತೆರೆದಿಟ್ಟಿದ್ದಾರೆ. ಪುಸ್ತಕವೊಂದರ ಓದಿಗೆ ಪೂರಕವಾಗಿ ಇನ್ನಷ್ಟು ಪುಸ್ತಕಗಳನ್ನೂ ಪ್ರಸ್ತಾಪಿಸುತ್ತಾ ಕ್ಲಿಷ್ಟ ಕಾದಂಬರಿಯ ಮಗ್ಗಲುಗಳನ್ನು ಅರ್ಥವತ್ತಾಗಿ ವಿವರಿಸುವ ಯತ್ನ ಮಾಡಿದ್ದಾರೆ. ತಿಂಗಳಾದ ಮೇಲೆ ಓದುವ ಹವ್ಯಾಸದಲ್ಲಿ ಓದಲೊಂದು ಹೊಸ ಪುಸ್ತಕ ಸಿಕ್ಕಿದೆ.

ಕಡಲ ತಡಿಯ ನೀರ ತೆರೆ

ಜೊತೆಗಿರುವಳೆಂದು ಅಂದುಕೊಂಡ ಹುಡುಗಿ ಕೈ ಕೊಟ್ಟು ಹೋದಾಗ, ದುಃಖದಿಂದ ಒಳಗೊಳಗೆ ಅಳುವ ಹೃದಯ ಏನು ಮಾಡುತ್ತದೆ? ಉತ್ತರ-ಗಜಲ್ ಹಾಡುತ್ತದೆ.

ಇಲ್ಲ ಅನ್ನುವುದಾದರೆ, ಅನುಮಾನ ಇದ್ದರೆ ಈ ಬ್ಲಾಗನ್ನ ಓದಿನೋಡಿ. ಅಳುವ ಹೃದಯದ ಗಜಲ್ ಹಾಡನ್ನ ಖುದ್ದಾಗಿ ಕೇಳಿ. ಹಾಗೆ ಕೈ ಕೊಟ್ಟು ಹೋದವಳ ನೆನೆಪಿನಲ್ಲಿ ಬರೆದದ್ದು ಇಲ್ಲಿದೆ. ಕಡಲ ತಡಿಯಲ್ಲಿ ಕನಸು ಕಾಣುವ, ಹೆಸರಿದ್ದು ಹೆಸರಿನ ಅಗತ್ಯ ಇಲ್ಲದ ಹುಡುಗ ಇಲ್ಲಿ ‘ನೀರ ತೆರೆ’ಯಲ್ಲಿ ಕವಿತೆ ಬರೆಯಲಾರಂಭಿಸಿದ್ದಾರೆ.

ಜಾಕ್ಸನ್ ಕಾಲದಲ್ಲಿ ಪುರಂದರ ನಮನ

ಎಲ್ಲಿಯ ಪುರಂದರ ದಾಸರು, ಎಲ್ಲಿಯ ಮೈಕಲ್ ಜಾಕ್ಸನ್? ಎಲ್ಲಿಂದೆಲ್ಲಿಯ ಸಂಬಂಧವಯ್ಯ ಅನ್ನಬಹುದು. ಹೀಗಿರುವಾಗ, ಜಾಕ್ಸನ್ನನ ಕಾಲದಲ್ಲೊಂದು ಪುರಂದರ ನಮನದ ಕಥೆಯನ್ನ ತೆರೆದಿಟ್ಟಿದ್ದಾರೆ ನಿನ್ನೆ-ನಾಳೆಗಳ ನಡುವಿನ ಪಯಣಿಗ.

ಲಂಡನ್ನಿನ ಪೂರ್ವ ಭಾಗದಲ್ಲಿರುವ ಪುಟ್ಟಮನೆಯೊಂದರಲ್ಲಿದ್ದುಕೊಂಡು ರಾಕ್, ಪಾಪ್ ಗಳ ಜೊತೆಗೆ ಕನ್ನಡ ಗೀತೆಗಳನ್ನು ಕೇಳುತ್ತಿದ್ದವರಿಗೆ ಈ ಬಾರಿ ಗೆಳೆಯರ ಮಾರ್ಗದರ್ಶನದಲ್ಲಿ ಮೈಕೆಲ್ ಜಾಕ್ಸನ್ ನ ಹಾಡುಗಳನ್ನ ನೋಡುವ ಅವಕಾಶ ಒದಗಿ ಬಂದಿದೆ. ನೋಡಿದ್ದರಲ್ಲಿ ಅಷ್ಟು ಇಷ್ಟೂ ಅರ್ಥೈಸಿಕೊಂಡವರು ದೋಸೆ-ವಡೆಗಳಿಂದ ಹೊಟ್ಟೆ ತುಂಬಿಸಿಕೊಂಡು ಅಲ್ಲಿಂದ ತುಸು ದೂರದಲ್ಲಿ ನಡೆಯುತ್ತಿದ್ದ ಪುರಂದರ ನಮನವನ್ನ ನೋಡಿಬಂದಿದ್ದಾರೆ. ಈ ಎಲ್ಲದರ ಪೂರ್ಣಪಾಠಕ್ಕೆ ನಿನ್ನೆ-ನಾಳೆ ಬ್ಲಾಗಿಗೆ ಭೇಟಿ ನೀಡಿ. 

ಶರಧಿಯ ಬೆಂಗಳೂರು ಪ್ರೀತಿ

ಶರಧಿ ಬ್ಲಾಗಿನ ಒಡತಿ ಚಿತ್ರಾ ಕರ್ಕೇರಾ ತಮ್ಮ ನವಿರು, ಬೆಚ್ಚನೆಯ ಬ್ಲಾಗ್ ಬರಹಗಳಿಂದ ಬ್ಲಾಗ್ ಲೋಕದಲ್ಲಿ ಗುರುತಿಸಿಕೊಂಡವರು. ಈ ಬಾರಿ ಬೆಂಗಳೂರೆಂಬ ಮಾಯಾ ನಗರಿಗೆ ಬಂದ ಆರಂಭದ ದಿನದ ನೆನಪುಗಳನ್ನ ತೆರೆದಿಟ್ಟಿದ್ದಾರೆ. ಕ್ರಮೇಣ ಈ ಊರಿಗೆ ಹೊಂದಿಕೊಂಡಂತೆ ಬದುಕು ಹೊಸೆದುಕೊಂಡ ಪರಿಯನ್ನ ವಿವರಿಸಿದ್ದಾರೆ.

‘ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!’ ಅನ್ನುವುದು ಅವರ ಸಣ್ಣ ತಕರಾರು. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನುವುದು ಅನುಭವದ ಮಾತು. ಇಂತಿಪ್ಪ ಚಿತ್ರಾರ ಶರಧಿಯ ಭಾವದಲೆಗಳ ಪಯಣ ಇವತ್ತಿನ ಬ್ಲಾಗ್ ಓದಿಗೆ.

ಮತ್ತೆ ಸಾಂಗತ್ಯ

ಸಾಂಗತ್ಯ ಸಿನಿಮಾ ವಿಚಾರಗಳಿಗಾಗಿಯೇ ಹುಟ್ಟಿಕೊಂಡ ಕನ್ನಡದ ಬ್ಲಾಗು. ಚಿತ್ರ ಜಗತ್ತಿನ ಸುದ್ದಿ ಸಮಾಚಾರಗಳ ಕುರಿತು ಕ್ರಿಯಾಶೀಲ ಬರಹಗಳನ್ನ ಪ್ರಕಟಿಸುವ ಮೂಲಕ ಹೆಚ್ಚೆಚ್ಚು ಓದುಗರನ್ನ ತನ್ನತ್ತ ಸೆಳೆಯುತ್ತಿದೆ. ಆರಂಭವಾದ ಕೆಲ ತಿಂಗಳುಗಳಲ್ಲೇ ಹತ್ತು ಸಾವಿರ ಹಿಟ್ಸ್ ದಾಟಿರುವುದೇ ಅದಕ್ಕೆ ಸಾಕ್ಷಿ.

ಭಾಷೆಗಳ ಹಂಗಿಲ್ಲದೇ ಚಿತ್ರ ಮಾಧ್ಯವವನ್ನೇ ಒಂದು ಭಾಷೆಯಾಗಿಟ್ಟುಕೊಂಡು ಇಲ್ಲಿನ ಬರಹಗಳು ಪ್ರಕಟವಾಗುತ್ತಿವೆ. ಅಂಕಣ, ವಿಮರ್ಶೆ, ಚಿತ್ರ ಖಜಾನೆಗಳು ಸಾಂಗತ್ಯದ ಓಟಕ್ಕೆ ಸಾಥ್ ನೀಡುತ್ತಿವೆ. ಸಾಂಗತ್ಯದ ಬರಹ ಗುಚ್ಛಗಳು ಇವತ್ತಿನ್ ಬ್ಲಾಗ್ ಓದಿಗೆ. 

ಸರ್ವಜ್ಞನ ವಚನಗಳು

ವಚನಗಳು ಯಾವತ್ತಿಗೂ, ಎಲ್ಲ ಕಾಲಕ್ಕೂ ಅನ್ವಯವಾಗುವಂತಹವು. ಅದರಲ್ಲೂ ಸರ್ವಜ್ಞನ ವಚನಗಳು ಕೊಡುವ ವಿಚಾರಗಳು ವಿಶಾಲವಾದುದು. ಇಂತಹ ವಚನಗಳನ್ನು ಬ್ಲಾಗಿನಲ್ಲಿ ತಂದಿರಿಸುವ, ಅವುಗಳ ವಿವರಣೆಗಳನ್ನೂ ಉಣಬಡಿಸುವ ಪ್ರಯತ್ನದಲ್ಲಿದ್ದಾರೆ ಅಂತರ್ವಾಣಿ.

ಇಷ್ಟಕ್ಕೂ ಸರ್ವಜ್ಞ ಯಾರು? ಅವನ ಕಾಲ ಯಾವುದು? ಅನ್ನುದರಿಂದ ಹಿಡಿದು ಅವನ ವಚನಗಳಲ್ಲಿನ ನಿಗೂಢಾರ್ಥಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ತಮಗಿಷ್ಟವಾದ ವಚನವೊಂದನ್ನು ಎತ್ತಿಕೊಳ್ಳುವ ಅಂತರ್ವಾಣಿ ,ಪುಸ್ತಕಗಳಲ್ಲಿ ಅವುಗಳಿಗಿರುವ ಅರ್ಥಗಳನ್ನು ಹೆಕ್ಕಿ ತೆಗೆದು ಇಲ್ಲಿ ಕೊಡುತ್ತಿದ್ದಾರೆ. ವಚನಾಸಕ್ತರು ಒಮ್ಮೆ ಓದಿಬನ್ನಿ. 

ಕ್ಯಾಲಿಫೋರ್ನಿಯಾದಲ್ಲೊಂದು ವಸಂತಪುರಿ!

ನಿಮಗೆ ಬೆಂಗಳೂರಿನಲ್ಲಿ ಇರೋ ವಸಂತಪುರದ ಬಗ್ಗೆ ಗೊತ್ತಿರಬಹುದು, ಒರಿಸ್ಸಾದ ಪುರಿಯನ್ನ ನೋಡಿರಬಹುದು. ಆದರೆ ದೂರದ ಅಮೆರಿಕಾದಲ್ಲಿನ ಕ್ಯಾಲಿಫೋರ್ನಿಯಾದಲ್ಲಿರೋ ವಸಂತಪುರಿಯನ್ನ ಕೇಳಿದ್ದೀರಾ? ಖಂಡಿತ ಇಲ್ಲ ಅನ್ನೋದಾದ್ರೆ ಈ ಲೇಖನ ಓದಿ. ಕ್ಯಾಲಿಫೋರ್ನಿಯಾದ ಲಿವರ್ ಮೋರ್ ನಲ್ಲಿರೋ ದೇವಾಲಯ ಅಲ್ಲಿನ ಪೂಜಾರಿಗಳ ಮಂತ್ರದಲ್ಲಿ ‘ವಸಂತ ಪುರಿ’ ಆದ ಕಥೆಯನ್ನ ತೆರೆದಿಟ್ಟಿದ್ದಾರೆ ಹಂಸ ನಾದದ ಹಂಸಾನಂದಿ.

ರಾಘವೇಂದ್ರರ ನಕ್ಷತ್ರಮಂಟಪ

ರಾಘವೇಂದ್ರ ಗಣಪತಿ ಟೈಮ್ಸ್ ಆಫ್ ಇಂಡಿಯಾ ಕನ್ನಡ ದಿನಪತ್ರಿಕೆಯ ಕ್ರೀಡಾ ವಿಭಾಗದ ಮುಖ್ಯಸ್ಥರು. ತಮ್ಮ ಬರಹಗಳಿಗೆಂದೇ ಒಂದು ಬ್ಲಾಗು ತೆರೆದಿದ್ದಾರೆ. ಅದುವೇ ನಕ್ಷತ್ರ ಮಂಟಪ.

ಮೊನ್ನೆ ಟ್ವೆಂಟಿ೨೦ ಎಂಬ ಅನಿಶ್ಚಿತ ಕ್ರಿಕೆಟ್ ನ ಅನಿಶ್ಚಿತ ಚಾಂಪಿಯನ್ ಆಗಿ ಹೊರಹೊಮ್ಮಿದ ಪಾಕಿಸ್ತಾನದಿಂದ ಹಿಡಿದು ಟೀಮ್ ಇಂಡಿಯಾ ಹುಡುಗರು ಇಂಗ್ಲೆಂಡಿನಲ್ಲಿ ಧೂಳಿಪಟವಾಗಿ ಮನೆಗೆ ಬಂದಿದ್ದು, ಫೆಡರರ್ ಕೊನೆಗೂ ಫ್ರೆಂಚ್ ಓಪನ್ ಗೆದ್ದಿದ್ದು ಮುಂತಾದ ಕ್ರೀಡಾ ವಿಶ್ಲೇಷಣಾತ್ಮಕ ಲೇಖನಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಅವರದ್ದೇ ಭಾವದಲ್ಲಿ ಅದ್ದಿದ ಪದ್ಯಗಳೂ, ಬರಹಗಳೂ ಇವೆ.

ಪ್ರಣಮ್ಯ ಎಂಬ ಇನ್ನೊಂದು ಬ್ಲಾಗಿಗೂ ಅವರ ಬರಹ ಕೃಷಿ ಹಬ್ಬುತ್ತಿದೆ. ಓದಬೇಕಿದ್ದವರು ನಕ್ಷತ್ರಮಂಟಪಕ್ಕೆ ಭೇಟಿ ನೀಡಿ.

ಕೋಲಾರ ಪೊಲೀಸರ ಬ್ಲಾಗು

ಪೊಲೀಸ್ ಇಲಾಖೆಯ ಮಾಹಿತಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಷ್ಟವೇ. ಅದರಲ್ಲೂ ಅಂತರ್ಜಾಲದಲ್ಲಿ, ಕನ್ನಡದಲ್ಲಿ ಸಿಗುವುದು ಅಪರೂಪ. ಇದಕ್ಕೆ ಅಪವಾದ ಎಂಬಂತೆ ಕೆಲವು ಜಿಲ್ಲಾವಾರು ವಿಭಾಗಗಳು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲು ಮುಂದಾಗಿರುವುದು ಉಂಟು. ಕೋಲಾರ ಪೊಲೀಸರ ಬ್ಲಾಗು ಕೂಡ ಅದರಲ್ಲಿ ಒಂದು.

ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸಮಸ್ತ ಸುದ್ದಿ ಸಮಾಚಾರಗಳನ್ನು ಈ ಬ್ಲಾಗಿನಲ್ಲಿ ಕಾಣಬಹುದು. ಆ ದಿನದ ಪ್ರಕರಣಗಳ ವರದಿ, ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ, ಇಲಾಖೆಯ ವಿಶೇಷ ಪ್ರಕಟಣೆಗಳನ್ನೊತ್ತ ಬ್ಲಾಗ್ ನಿತ್ಯವೂ ಅಪ್ ಡೇಟ್ ಆಗುತ್ತದೆ. ಒಟ್ಟಾರೆ ಒಂದು ಮಾದರಿ ಬ್ಲಾಗಿನ ರೀತಿಯಲ್ಲಿ ಕೋಲಾರ ಪೊಲೀಸ್ ಬ್ಲಾಗು ಮೂಡಿಬರುತ್ತಿದೆ.

ಅಪಾರ ಪುಟಗಳು

ಆಗಾಗ್ಗೆ ತಮ್ಮ ಕೈಚಳಕದ ಮುಖಪುಟಗಳೊಂದಿಗೆ ‘ಅಪಾರ’ದಲ್ಲಿ ಕಾಣಿಸಿಕೊಳ್ಳುವ ರಘು ಅಪಾರ ಈ ಬಾರಿ ಇನ್ನೂ ನಾಲ್ಕು ಪುಟಗಳನ್ನ ತಮ್ಮ ಬ್ಲಾಗ್ ಬೊಗಸೆಗೆ ತುಂಬಿದ್ದಾರೆ. ವಸಂತ ಪ್ರಕಾಶನದ ನಾಲ್ಕು ಹೊಸ ಹೊತ್ತಿಗೆಗಳ ಚಂದದ ಮುಖಪುಟ ವಿನ್ಯಾಸಗಳು ಇಲ್ಲಿವೆ.

ಈ ನಡುವೆ ಅಪಾರ ರೂಪಿಸಿದ, ಮೊಗಳ್ಳಿ ಗಣೇಶರ ‘ತಕರಾರು’ ಗೆ ಪುಸ್ತಕ ಪ್ರಾಧಿಕಾರದ ೨೦೦೮ರ ‘ಪುಸ್ತಕ ಸೊಗಸು’ ಪುರಸ್ಕಾರ ದೊರೆತಿರುವುದು ಖುಷಿಯ ವಿಚಾರ. ಅಪಾರಗೆ ಅಭಿನಂದನೆ.  

ಸ್ವಾತಿ ಬರೆವ ಸ್ಪೂರ್ತಿ

‘ಪಾಪ! ನನ್ನ ಚಿನ್ನು ಒಂಟಿಯಾದಾಳೇ...?’ ಹಾಗಂತ ಬೇಸರದಿಂದ ಕೇಳುತ್ತಿದ್ದಾರೆ ಸ್ಪೂರ್ತಿ ಬ್ಲಾಗಿನ ಸ್ವಾತಿ. ಅವರ ಈ ಪ್ರಶ್ನೆಗೆ ಕಾರಣವೂ ಇದೆ. ಹುಡುಗನೊಬ್ಬನ ಬಲೆಗೆ ಬಿದ್ದ ಇವರ ಗೆಳತಿ, ಕಡೆಗೆ ಅವನ ಮೋಸದಿಂದ ಕಂಗಾಲಾಗಿ , ಒಬ್ಬೊಂಟಿಯಾಗಿ ಬಿಕ್ಕುವುದನ್ನು ಕಂಡು ಇವರ ಮನ ಕರಗುತ್ತಿದೆ.

ಸ್ಪೂರ್ತಿ ಇವರ ಬ್ಲಾಗು. ಬ್ಲಾಗಿಗರಿಗೆ ಸ್ಪೂರ್ತಿಯಾದ ಅನೇಕ ಉತ್ಸಾಹದಾಯಕ ಬರವಣಿಗೆಗಳು ಇಲ್ಲಿವೆ. ಮನಸಿಗೆ ಕಚಗುಳಿ ಇಡುವ ರಂಗವಲ್ಲಿ ಚಿತ್ತಾರ, ಭಾಷಾಂಧ ಮನಸ್ಥಿತಿಗೆ ಪರಿಹಾರ, ನೀನೇಕೆ ನನ್ನ ಕಾಡುವೆ ಅನ್ನುವುದೊಂದು ಕವಿತೆ.... ಇನ್ನೂ ಮುಂತಾದ ಬರಹಗಳನ್ನ ಈ ಸ್ಪೂರ್ತಿ ಗುಚ್ಛದಲ್ಲಿ ಕಾಣಬಹುದು. 

ಕನ್ನಡಿಗರ ಕಲಿಕೆ

ಕನ್ನಡಿಗರ ಕಲಿಕೆಯ ಕುರಿತ ಚಿಂತನೆಗಳಿಗೆಂದೇ ಬ್ಲಾಗೊಂದನ್ನ ತೆರೆದಿದೆ ಬನವಾಸಿ ಬಳಗ.

"ಕನ್ನಡಿಗರ ಏಳಿಗೆಯ ನಾಲ್ಕು ಅಂಗಗಳಾವುವೆಂದರೆ - ಛಲ, ಒಗ್ಗಟ್ಟು, ಕಲಿಕೆ ಮತ್ತು ದುಡಿಮೆ. ಈ ಬ್ಲಾಗಿನಲ್ಲಿ ಬನವಾಸಿ ಬಳಗದ "ಕಲಿಕೆ ತಂಡ" ದ ಸದಸ್ಯರ ಅಧ್ಯಯನಗಳಿಂದ ಕೆಲವು ಮುಖ್ಯವಾದ ಅಂಶಗಳನ್ನು ಓದುಗರ ಮುಂದೆ ಇಡಲಾಗುವುದು. ಈ ಬ್ಲಾಗಿನ ಮೂಲಕ ಕನ್ನಡಿಗರ ಕಲಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತೆರೆದ ಮನಸ್ಸಿನ ಚರ್ಚೆಗಳಾಗಲೆಂದು ನಮ್ಮ ಹಂಬಲ." ಬಳಗದ ಯೋಜನೆ.

ಕನ್ನಡ ಕಲಿಕೆಯ ಕುರಿತ ವಿಮರ್ಶೆಗಳು, ಸಲಹೆಗಳು, ಚಿಂತನಾತ್ಮಕ ಬರಹಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. 

ಹವಾಯಿಗೆ ಹಾರಿದ ಪಾತರಗಿತ್ತಿ

ಹವಾಯಿಗೆ ಹಾರಿ ಪ್ರವಾಸದ ಮೋಜು ಸವಿಯುತ್ತಿದ್ದಾರೆ ಪಾತರಗಿತ್ತಿ ಪಕ್ಕದ ಶಿವಶಂಕರ್. ಕೋನದ ವಿಮಾನ ನಿಲ್ದಾಣದಲ್ಲಿಳಿದು ಬಾಡಿಗೆ ಕಾರು ಪಡೆದು ಹವಾಯಿ ದ್ವೀಪಕ್ಕೆ ಹೊಕ್ಕವರು ಅಲ್ಲಿನ ಅಲ್ಲಿನ ಮೋಹಕತೆಗೆ ಮರುಳಾಗಿ ಹೋಗಿದ್ದಾರೆ. ಅಲ್ಲೆಲ್ಲ ಮನಸ್ಸೋ ಇಚ್ಛೆ ಸುತ್ತಾಡಿ, ಕಡೆಗೆ ಹೋಟೆಲ್ ಸೇರಿ, ಅಲ್ಲಿಂದ ದೊಡ್ಡ ಹಾವು ಮಲಗಿದಂತೆ ಕಾಣುವ ಫೆಸಿಫಿಕ್ ಸಾಗರವನ್ನು ನೋಡುತ್ತಲೇ ನಿದ್ದೆಗೆ ಜಾರಿದ್ದಾರೆ.

ಶಿವಶಂಕರರ ಈ ಪ್ರವಾಸ ಕಥನ ಮುಂದುವರಿಯಲಿದ್ದು, ಮುಂದಿನ ಕಂತಲ್ಲಿ ಹೆಲಿಕಾಫ್ಟರಿನಿಂದ ಕಂಡ ದ್ವೀಪಗಳು ಮತ್ತು ಜಲಪಾತಗಳ ಬಗ್ಗೆ ವಿವರಿಸುತ್ತಾರಂತೆ. 

ಜೋಮನ್ ಮಳೆಹನಿ

ಮಳೆಹನಿಯ ಜೋಮನ್ ತಮ್ಮ ನವಿರು ಬರಹಗಳಿಂದ ಬ್ಲಾಗ್ ಲೋಕದಲ್ಲಿ ಪರಿಚಿತರು. ಕಳೆದ ನಾಲ್ಕು ತಿಂಗಳಿನಿಂದ ಬ್ಲಾಗು ಮುಚ್ಚಿ ನಾಪತ್ತೆಯಾಗಿದ್ದವರು ಈಗ ಕೊಂಚ ಅಳುಕಿನಿಂದಲೇ ಮತ್ತೊಂದು ನವಿರು ಬರಹದೊಂದಿಗೆ ದಿಡೀರ್ ಪ್ರತ್ಯಕ್ಷವಾಗಿದ್ದಾರೆ.

ಈ ಬಾರಿ ಮಂದಣ್ಣ, ಬೋದಿಲೇರ್, ಮಾಧವಿಕುಟ್ಟಿ ಹೀಗೆ ಒಂದಿಷ್ಟು ತಾಜಾ ನೆನೆಪುಗಳೊಂದಿಗೆ ಮಳೆಹನಿ ಮತ್ತೆ ಜಿನುಗುತ್ತಿದೆ. ಜೇನ ಹನಿಯಂತಹ ಮಧುರ ನೆನಪುಗಳು, ತುಂತುರು ಭಾವಗಳ ಮಳೆಹನಿ ಇವತ್ತಿನ ಓದಿಗೆ.

ಕನ್ನಡಕ್ಕೊಬ್ಬರು ಹೊಸ ವಿಮರ್ಶಕಿ

ಕನ್ನಡದ ಬ್ಲಾಗು ಲೋಕದಲ್ಲಿ ಹೀಗೊಬ್ಬರು ಹೊಸ ವಿಮರ್ಶಕಿ ಬಂದಿದ್ದಾರೆ. ಕನ್ನಡ ಬರಹಗಳನ್ನು, ಪತ್ರಿಕೆಗಳ ಸುದ್ದಿ ಸಮಾಚಾರಗಳನ್ನೂ ಓರೆಗೆ ಹಚ್ಚಿ ನೋಡುವ ವಿಮರ್ಶಕಿ. ಅಲ್ಲಲ್ಲಿ ಮೊಟಕುತ್ತಾ , ಕುಟುಕುತ್ತಾ ಕ್ಯಾತೆ ತೆಗೆಯುತ್ತಾ, ಇಷ್ಟ ಪಟ್ಟದ್ದನ್ನು ಹೊಗಳುತ್ತಿರುವ ಈ ವಿಮರ್ಶಿಕಿಯ ಹೊಸ ಬ್ಲಾಗು ದಿನದ ಬ್ಲಾಗಿನಂಗಳದಲ್ಲಿ. 

ಸುಬ್ಬು ಸೆಲೆ

‘ಬಿಡು ಅಂದಾಗ ಬಿಟ್ಟು ಹೋಗೋಕೆ ಪ್ರೀತಿ ಅಂತ ಸಣ್ಣ ಖಾಯಿಲೆಯ? ಜುಜುಬಿ ನೆಗಡಿ ಶೀತವೆ ವಾರಗಟ್ಟಲೆ ಕಾಡುತ್ತೆ ಅಂದ್ಮೇಲೆ ಏನು ಹೇಳೋಣ? ಪ್ರೀತಿಯಂತು ಹೃದಯದಲ್ಲಿ ಹುಟ್ಟೋ ಖಾಯಿಲೆ ಆಲ್ವಾ?’ ಹಾಗಂತ ಕೇಳುತ್ತಿದ್ದಾರೆ ಸುಬ್ಬು ಸುಳ್ಯಾ.

‘ಸೆಲೆ’ ಅರ್ಥಾತ್ ಭಾವದ ಸೆಲೆ ಅವರ ಬ್ಲಾಗು. ಭಾವಗುಚ್ಚದಿಂದ ಕೆದಕಿ ತೆಕೆದ ಒಂದಿಷ್ಟು ಹನಿಗಳು ಇಲ್ಲಿವೆ. ಕೆಲವು ಕವಿತೆಗಳಾಗಿವೆ. ಉಳಿದವು ಹಾಗೇ ಸುಮ್ಮನೆ ಸಾಲಾಗಿ ಹರಿದಿವೆ. ಒಮ್ಮೆ ಓದಿಬನ್ನಿ. 

ನಾಗು ಕನಸು

ಕಣ್ ರೆಪ್ಪೆ ಮುಚ್ಚಿ ಕಂಡಾಗಿನ ಜೀವನ.., ಅರ್ಥಾತ್ ಕನಸಿನ ಕವಿತೆಗಳು ಇವತ್ತಿನ ಬ್ಲಾಗಿನಲ್ಲಿ.

ಚಂದದೊಂದು ಗ್ರೀಟಿಂಗ್ ಕಾರ್ಡಿನ ಹಾಗೆ ಕವಿತೆಗಳನ್ನೂ ಚೆಂದವಾಗಿ ಬರೆದು, ವಿನ್ಯಾಸ ಮಾಡಿ ಬ್ಲಾಗಿನಲ್ಲಿ ತುಂಬುವ ನಾಗು ಈ ಮೂಲಕವೇ ತಮ್ಮ ಬ್ಲಾಗನ್ನು ಇನ್ನಷ್ಟು ಚೆಂದವಾಗಿಸಿದ್ದಾರೆ. ಮನಸ್ಸು ಬೆಚ್ಚಗೆ ಮಾಡುವ ಒಂದಿಷ್ಟು ಹನಿಗವಿತೆಗಳು, ಪ್ರೇಮಪತ್ರಗಳು ಇಲ್ಲಿವೆ. ನಾಗು ಕನಸುಗಳು ಇವತ್ತಿನ ಓದಿಗೆ.

ಅಂತರ್ಜಾಲದಲ್ಲಿ  ಕುಂಭಮಿತ್ರ

ಈಗೀಗ ಸಣ್ಣ ಸಣ್ಣ ಮುದ್ರಣ ಪತ್ರಿಕೆಗಳೂ ಬ್ಲಾಗುಗಳ ಮೂಲಕ ಅಂತರ್ಜಾಲದಲ್ಲಿ ಕಾಣುವ ಅವಕಾಶ ಹೊಂದುತ್ತಿವೆ. ನಿನ್ನೆ ಅಂತಹದ್ದೇ ಒಂದು ಜಿಲ್ಲಾ ಮಟ್ಟದ ಪತ್ರಿಕೆಯನ್ನ ನೋಡಿದ್ದೀರಿ. ಇವತ್ತು ಇನ್ನೊಂದು ಸಣ್ಣ ಪತ್ರಿಕೆಯ ಬ್ಲಾಗಿನ ಪರಿಚಯ.

‘ಕುಂಭಮಿತ್ರ’ ಅನ್ನುವ ಹೆಸರಿನ ಸಮುದಾಯ ಮಾಸಪತ್ರಿಕೆಯೊಂದು ಕಳೆದ ಕೆಲವು ತಿಂಗಳುಗಳಿಂದ ಈ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿದೆ. ತಿಂಗಳ ಪತ್ರಿಕೆಯ ಎಲ್ಲ ಚಿತ್ರರೂಪದ ಪುಟಗಳನ್ನ ಇಲ್ಲಿ ಓದಬಹುದು.

ಈಗೀಗ ಸಣ್ಣ ಸಣ್ಣ ಮುದ್ರಣ ಪತ್ರಿಕೆಗಳೂ ಬ್ಲಾಗುಗಳ ಮೂಲಕ ಅಂತರ್ಜಾಲದಲ್ಲಿ ಕಾಣುವ ಅವಕಾಶ ಹೊಂದುತ್ತಿವೆ. ನಿನ್ನೆ ಅಂತಹದ್ದೇ ಒಂದು ಜಿಲ್ಲಾ ಮಟ್ಟದ ಪತ್ರಿಕೆಯನ್ನ ನೋಡಿದ್ದೀರಿ. ಇವತ್ತು ಇನ್ನೊಂದು ಸಣ್ಣ ಪತ್ರಿಕೆಯ ಬ್ಲಾಗಿನ ಪರಿಚಯ.

‘ಕುಂಭಮಿತ್ರ’ ಅನ್ನುವ ಹೆಸರಿನ ಸಮುದಾಯ ಮಾಸಪತ್ರಿಕೆಯೊಂದು ಕಳೆದ ಕೆಲವು ತಿಂಗಳುಗಳಿಂದ ಈ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿದೆ. ತಿಂಗಳ ಪತ್ರಿಕೆಯ ಎಲ್ಲ ಚಿತ್ರರೂಪದ ಪುಟಗಳನ್ನ ಇಲ್ಲಿ ಓದಬಹುದು.

ದುರ್ಗದ ಸುದ್ದಿಗಿಡುಗ

ಅಂತರ್ಜಾಲದಲ್ಲಿ ಕನ್ನಡ ಪತ್ರಿಕೆಗಳು ಸಿಗುವುದು ತುಸು ಕಷ್ಟವೇ. ಅದರಲ್ಲೂ ಸದ್ಯಕ್ಕೆ ಸಣ್ಣ ಪತ್ರಿಕೆಗಳ ಲಭ್ಯತೆ ಕುರಿತು ಮಾತಾಡುವಂತಿಲ್ಲ. ಹೀಗಿರುವಾಗ, ಚಿತ್ರದುರ್ಗದ ಸಣ್ಣ ಪತ್ರಿಕೆಯೊಂದು ನಿತ್ಯ ಬ್ಲಾಗಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿ ಮಾಡಹೊರಟಿದೆ.

‘ಸುದ್ದಿ ಗಿಡುಗ’ ಅದರ ಹೆಸರು. ಚಿತ್ರದುರ್ಗದ ಸ್ಥಳೀಯ ಸುದ್ದಿಗಳು, ವಿಚಾರಗಳನ್ನೊತ್ತ ಈ ಪತ್ರಿಕೆ ಪ್ರತಿದಿನವೂ ತನ್ನ ಹೊಸ ಪುಟಗಳೊಂದಿಗೆ ಇಲ್ಲಿ ಹಾಜರಾಗುತ್ತದೆ. ಆಸಕ್ತರು ಓದಬಹುದು. 

ಅಟ್ಲಾಂಟ ಕನ್ನಡಿಗರ ಬಳಗ

ಇದು ದೂರದ ಅಟ್ಲಾಂಟದಲ್ಲಿ ಕನ್ನಡದ ಕಂಪು ಸೂಸುತ್ತಿರುವ ಅಟ್ಲಾಂಟ ಕನ್ನಡಿಗರ ಬಳಗದ ಬ್ಲಾಗು.

‘ಅಟ್ಲಾಂಟ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ವೈವಿದ್ಯಮಯ ಹಾಗು ವಿನೂತನ ಕಾರ್ಯಕ್ರಮ ನೀಡಿ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದು, ಮುಂದಿನ ಪೀಳಿಗೆಯವರಿಗೆ ಕನ್ನಡದ ಕಂಪನ್ನು ಪಸರಿಸಲು ಅನುವು ಮಾಡಿಕೊಡಬೇಕು’ ಅನ್ನುವುದು ಈ ಬಳಗದ ಉದ್ದೇಶ. ಅನಿವಾಸಿಗಳ ಕನ್ನಡ ಕಾರ್ಯಕ್ರಮಗಳು, ಗೋಷ್ಟಿಗಳು ಮುಂತಾದವುಗಳ ಬಗ್ಗೆ ಇಲ್ಲಿ ಓದಬಹುದು.

ಜನಪರರ ವೇದಿಕೆ

ಬ್ಲಾಗ್ ಲೋಕದಲ್ಲೂ ಹೀಗೊಂದು ವೇದಿಕೆ ಇದೆ. ‘ಜನಪರ ವೇದಿಕೆ’. ಜನಪರವಾದ ಕಾಳಜಿ, ಹೋರಾಟ, ಜನಜಾಗೃತಿಗಳ ಬಗ್ಗೆ ಬರೆಯುವುದು, ಬಿಂಬಿಸುವುದು ಇದರ ಉದ್ದೇಶ.

ಈ ಜನಪರ ವೇದಿಕೆ ರಾಜ್ಯಾದಂತ ಹಮ್ಮಿಕೊಳ್ಳುವ ಕಾರ್ಯಕ್ರಮಗಳು, ಹೋರಾಟಗಳ ಬಗೆಗಿನ ಮಾಹಿತಿಗಳು ಇಲ್ಲಿರುತ್ತವೆ. ಮೀಸಲಾತಿ, ಕೇಸರಿಕರಣ, ಜಾತಿ ರಾಜಕಾರಣ ಮುಂತಾದ  ಚರ್ಚಾಸ್ಪದ ವಿಷಯಗಳ ಬಗ್ಗೆಯೂ ಲೇಖನಗಳು ಕಾಣಿಸಿಕೊಳ್ಳುತ್ತವೆ.

ಮುಖ್ಯಮಂತ್ರಿಗಳಿಗೆ ಶ್ರೀಹರಿ ಪತ್ರ

ರಾಜ್ಯದಲ್ಲಿನ ಬಿಜೆಪಿ ಸರ್ಕಾರಕ್ಕೆ ವರ್ಷ ತುಂಬಿದ ಸಂದರ್ಭದಲ್ಲಿ, ಬೇವು ಬೆಲ್ಲದೊಂದಿಗೆ ಮುಖ್ಯಮಂತ್ರಿಗಳಿಗೊಂದು ಪತ್ರ ಬರೆಯುತ್ತಿದ್ದಾರೆ ಸಪ್ತಸ್ವರದ ಶ್ರೀಹರಿ. 

ಒಂದಿಷ್ಟು ಕಾರ್ಯಗಳು, ‘ಆಪರೇಶನ್’ ಕಾರ್ಯಾಚರಣೆ, ಗಣಿ ದಣಿಗಳ ದೊಂಬರಾಟಗಳ ನಡುವೆಯೇ ವರ್ಷ ಕಳೆದಿದೆ. ಈ ಸರ್ಕಾರ ನಮ್ಮದು ಅಂತ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎನ್ನುವ ಶ್ರೀಹರಿ, ಮಂತ್ರಿಗಳ ಕೋಟಿಲೆಕ್ಕದ ಪೊಳ್ಳು ಭರವಸೆಗಳನ್ನ ಟೀಕಿಸುತ್ತಿದ್ದಾರೆ. ಮುಂದಿನ ನಾಲ್ಕು ವರ್ಷದಲ್ಲಾದರೂ ಜನ ಮೆಚ್ಚುವ ಸರ್ಕಾರ ಕೊಡಿ ಅಂತ ಆಗ್ರಹಿಸುತ್ತಿದ್ದಾರೆ.

ಜೀವನದ ಆಗು ಹೋಗುಗಳು, ಭಾವನೆಗಳ ಏರಿಳಿತಗಳ, ಸುಪ್ತಮನಸ್ಸಿನ ಸಪ್ತಸ್ವರಗಳ ಮಿಲನ- ಈ ಸಪ್ತಸ್ವರ ಅವರ ಬ್ಲಾಗು. ಪತ್ರ ಓದಬೇಕಿದ್ದವರು ಸ್ವಪ್ತಸ್ವರಕ್ಕೆ ಹೋಗಿಬನ್ನಿ. 

ಅನಿವಾಸಿ ಕಂಡ ಕಮಲಾದಾಸ್

ಸುಮಾರು ಇಪ್ಪತ್ತು ವರ್ಷಗಳ ಹಿಂದೆ , ಮಲೆಯಾಳಿ ಲೇಖಕಿ ಕಮಲಾದಾಸರ ‘ದ ಸೈನ್ ಆಫ್ ಎ ಲಯನ್’ ವನ್ನ ಕನ್ನಡದ ‘ಸಿಂಹ’ವನ್ನಾಗಿಸಿ ನಾಟಕವಾಡಿದ್ದನ್ನ ಈಗ ನೆನೆಯುತ್ತಿದ್ದಾರೆ ಅನಿವಾಸಿ ಸುದರ್ಶನ್.

ಹೀಗೆ ನಾಟಕದ ಮೂಲಕ ಕಮಲಾದಾಸ್ ರನ್ನ ಕಂಡುಕೊಂಡ ಪರಿ ಇಲ್ಲಿದೆ. ಈಗ ಕಮಲಾ ದಾಸ್ ತೀರಿಕೊಂಡಿದ್ದಾರೆ. ನೆನಪು ಉಳಿದುಕೊಂಡಿದೆ.

ಗಿರಿಯ ಇರುಳದೀಪ

ಬಣ್ಣಬಣ್ಣದ ಮೀನುಗಳ ಚಂದಕ್ಕೆ ಮರುಳಾಗಿ ಅದರಂದದ ಕುರಿತು ಬರೆಯುತ್ತಿದ್ದಾರೆ ಗಿರಿ. ಅಕ್ಕನ ಮಗಳ ಫೀಸು ಕಟ್ಟುವ ಪ್ರಹಸನ ಅಚಾನಕ್ಕಾಗಿ ತಮ್ಮ ಹೆಗಲ ಮೇಲೆ ಬಿದ್ದು, ಅಲ್ಲಿ ಐದಡಿ ಎತ್ತರದ ಅಕ್ವೇರಿಯಂ ಕಣ್ಣಿಗೆ ಬಿದ್ದು, ಅದರೊಳಗಿಂದ ಕಂಡ ಮೀನುಗಳು ಇವರಿಗೆ ಕಥೆ ಹೇಳಿದಂತಾಯಿತಂತೆ.

ಇರುಳ ದೀಪ ಅವರ ಬ್ಲಾಗು. ಒಂದಿಷ್ಟು ಕಥೆ, ಒಂದಿಷ್ಟು ಕವಿತೆ, ಹಾಸ್ಯ, ನೆನಪು-ನೇವರಿಕೆ ಎಲ್ಲವೂ ಇಲ್ಲಿದೆ. ಇರುಳ ದೀಪದ ಕನಸುಗಳ ಓದಬೇಕಿದ್ದವರು ಇಲ್ಲಿಗೊಮ್ಮೆ ಭೇಟಿ ನೀಡಿ. 

ಕ್ರಿಯಾಶೀಲ ಕಲರವ

ಇತ್ತೀಚೆಗೆ ‘ಕಲರವ’ ಇನ್ನಷ್ಟು ಕ್ರಿಯಾಶೀಲವಾಗುತ್ತಿದೆ. ದಿನಕ್ಕೊಂದರಂತೆ ಬರಹ ಗುಚ್ಛಗಳನ್ನ ಬ್ಲಾಗಿಗೆ ಪೋಣಿಸುತ್ತಿದೆ. ಯುವಕರೇ ಕಟ್ಟಿಕೊಂಡ ಪತ್ರಿಕೆ ಕಳೆದೊಂದು ವರ್ಷದಿಂದ ಪ್ರಸಾರವಾಗುತ್ತ, ಹಾಗೇ ಬ್ಲಾಗಿನಲ್ಲೂ ಕಾಣಿಸಿಕೊಳ್ಳುತ್ತಿರುವುದನ್ನ ನೀವು ಕಾಣಬಹುದು. ಹೊಸ ಹೊಸ, ಯುವ ಮನಸ್ಸಿನ ಲೇಖಕ-ಲೇಖಕಿಯರು ಈ ಮೂಲಕ ತಮ್ಮ ಬರವಣಿಗೆಗೊಂದು ವೇದಿಕೆ ಕಂಡುಕೊಳ್ಳುತ್ತಿದ್ದಾರೆ.

ದಿನಕ್ಕೊಂದು ಹೊಸ ಲೇಖನದೊಂದಿಗೆ ಈ ಬ್ಲಾಗನ್ನೋದುವುದು ಖುಷಿಯ ವಿಚಾರವೇ ಸರಿ. ಈ ಕಲರವದ ಸದ್ದು ಇವತ್ತಿನ ನಿಮ್ಮ ಓದಿಗೆ. 

ಹ್ಯಾಪಿ ಬರ್ತ್ ಡೆ ಅಮ್ಮು 

ನಿನ್ನೆ ನಿಶುವಿನ ಹುಟ್ಟುಹಬ್ಬಕ್ಕೆ ಮುನ್ನವೇ, ಮೊನ್ನೆ ನಂದಗೋಕುಲದ ಕಂದ ಅಮ್ಮು ಅಲಿಯಾಸ್ ಅಮರ್ತ್ಯ ಕೃಷ್ಣ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ ಅನ್ನುವುದು ಈಗಷ್ಟೇ ಕಂಡ ಸುದ್ದಿ. ಮೇ ಇಪ್ಪತ್ತೈದಕ್ಕೆ ಅಮ್ಮುಗೆ ಎರಡು ವರ್ಷ ತುಂಬಿದೆ.

ಕನ್ನಡ ಬ್ಲಾಗುಲೋಕದಲ್ಲಿ ಅಮ್ಮುವಿನ ಜನಪ್ರಿಯತೆ ಹೆಚ್ಚಾಗುತ್ತಿರುವುದಕ್ಕೆ ,ಆತನ ಈ ಅಫಿಶಿಯಲ್ ಬ್ಲಾಗಿನ ಹಿಟ್ಟುಗಳ ಸಂಖ್ಯೆ ಎಂಟು ಸಾವಿರವನ್ನೂ ದಾಟಿ ಮುನ್ನುಗ್ಗುತ್ತಿರುವುದೇ ಸಾಕ್ಷಿ. ಅಮ್ಮುವಿನ ಒಂದಿಷ್ಟು ಮುದ್ದಾದ ಚಿತ್ರಗಳನ್ನ, ವರಸೆಗಳನ್ನ ಕಾಣಬೇಕಿದ್ದವರು ಈ ಬ್ಲಾಗಿಗೆ ಹೋಗಬಹುದು. ತಡವಾಗಿ ಆದರೂ, ಹ್ಯಾಪಿ ಬರ್ತ್ ಡೆ ಅಮ್ಮು.  

ಹ್ಯಾಪಿ ಬರ್ತ್ ಡೆ ನಿಶೂ

ನಿಶುಮನೆ ಎಂಬ ಮುದ್ದಾದ ಬ್ಲಾಗೊಂದರ ಒಡೆಯ ನಿಶುವಿನ ಹುಟ್ಟುಹಬ್ಬ ಇವತ್ತು. ತನ್ನ ನಾಲ್ಕನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ ನಿಶು.

ಹುಟ್ಟುಹಬ್ಬದ ಖುಷಿಯಲ್ಲೇ ತನ್ನದೊಂದು ನೆಚ್ಚಿನ ಹಾಡನ್ನೂ ಹೇಳಿಕೊಂಡು ಬ್ಲಾಗಿಗೆ ಬಂದವರೆಲ್ಲರನ್ನೂ ಖುಷಿ ಪಡಿಸುವ ಪ್ರಯತ್ನ ಅವನದ್ದು. ಹಾಡನ್ನ ಕೇಳಬೇಕಿದ್ದವರು ಅವನ ಬ್ಲಾಗ್ ಮನೆಗೇ ಹೋಗಬೇಕು. ಹ್ಯಾಪಿ ಬರ್ತ್ ಡೆ ನಿಶು. 

ಪ.ಗೋ ಬರೆದ ‘ನೋ ಚೇಂಜ್ ಕಥೆಗಳು’

ಪ.ಗೋ. ಅಂತಲೇ ಹೆಸರುವಾಸಿಯಾಗಿದ್ದವರು ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ. ನಾಲ್ಕು ದಶಕಗಳ ಕಾಲ ನಾಲ್ಕಾರು ಪತ್ರಿಕೆಗಳಲ್ಲಿ ಉಪ ಸಂಪಾದಕ, ವರದಿಗಾರರಾಗಿ ದುಡಿದು ತಮ್ಮದೇ ಆದ ಸ್ವಂತ ಪತ್ರಿಕೆ ಕಟ್ಟಿಕೊಂಡವರು. ಹದಿಮೂರಕ್ಕೂ ಹೆಚ್ಚು ಪತ್ರಿಕೆಗಳಿಗೆ ಅಂಕಣಕಾರರಾಗಿ ನಾಲ್ಕು ಸಾವಿರ ಪುಟದಷ್ಟು ಅಂಕಣ ಸಾಹಿತ್ಯವನ್ನ ಬರೆದವರು. ತಮ್ಮ ವ್ಯಂಗ್ಯದಿಂದಲೂ ಹೆಸರಾದವರು.

ಪ.ಗೋ.ತಮ್ಮ ಹೊಸಸಂಜೆ ಪತ್ರಿಕೆಗಾಗಿ ಬರೆದ "ನೋ ಚೇಂಜ್ ಕಥೆಗಳು" ಸರಣಿಯನ್ನ ಪ.ಗೋಪಾಲಕೃಷ್ಣ ಸೇವಾ ಟ್ರಸ್ಟಿನ ವತಿಯಿಂದ ೨೦೦೩ರಲ್ಲಿ ಪ್ರಕಟಿಸಲಾಗಿತ್ತು. ಕನ್ನಡ ವೆಬ್ ತಾಣವೊಂದರಲ್ಲಿ ಕಂತುಗಳಾಗಿ ಪ್ರಕಟಗೊಳ್ಳುತ್ತಿದ್ದ ಈ ಕಥೆಗಳು ಈಗ ಬ್ಲಾಗ್ ಲೋಕದಲ್ಲೂ ಕಾಣಿಸಿಕೊಂಡಿವೆ. ‘ನೋ ಚೇಂಜ್ ಕಥೆ’ಗಳನ್ನ ಯಾವುದೇ ಚೇಂಜ್ ಇಲ್ಲದೇ ಇಲ್ಲಿ ಪ್ರಕಟಿಸಲಾಗುತ್ತಿದೆ. ಆಸಕ್ತಿ ಇದ್ದವರು ಒಮ್ಮೆ ಓದಿ ಬನ್ನಿ.

ನಿಶಾಚರದ ಕಥೆ

ಸೌಂದರ್ಯ ಮತ್ತು ಚಂದದ ಕುರಿತ ಪ್ರಬಂಧದಂತ ಕಥೆಯನ್ನ ಮುಂದಿಟ್ಟಿದ್ದಾರೆ ನಿಶಾಚರದ ಬ್ಲಾಗಿಗರು. ಅಂಟೆನ್ ಚೆಕಾವ್ ನ ಬರಹವೊಂದರಿಂದ ಪ್ರೇರಣೆ ಪಡೆದವರು ಇಂತಹದ್ದೊಂದು ಸೌಂದರ್ಯದ ಕಥೆಯನ್ನ ತೆರೆದಿಟ್ಟಿದ್ದಾರೆ.

ಸದ್ಯ ಮುಂಬೈನಲ್ಲಿರುವ ಈ ಕನ್ನಡ ಬ್ಲಾಗಿಗರು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಬರೆಯುತ್ತಾರೆ. ಅವರ ಮುಂಬೈ ಬದುಕಿನ ಕಥನವನ್ನ, ಅನಿಸಿಕೆಗಳನ್ನ ಎಲ್ಲವನ್ನ ಇಲ್ಲಿ ಕಾಣಬಹುದು. ಆಗಾಗ್ಗೆ ಕವಿತೆಗಳನ್ನೂ ಓದಬಹುದು. ಒಮ್ಮೆ ಭೇಟಿ ಕೊಡಿ. 

ಬೆಳಗೆರೆ ಬ್ಲಾಗಿಂಗ್

‘ರವಿಬೆಳಗೆರೆ ಬ್ಲಾಗಿಸುತ್ತಿದ್ದಾರೆ...’ ಹಾಗಂತ ಕುತೂಹಲದೊಡನೆ ಹೊಕ್ಕವನಿಗೆ ಕಂಡದ್ದು ಅವರದ್ದೇ ಹೆಸರಿನ ಬ್ಲಾಗು. ಆಮೇಲೆ ಗೊತ್ತಾದದ್ದು, ಅದು ಬೆಳಗೆರೆ ಅಲ್ಲ, ಅವರ ಹೆಸರಿನಲ್ಲಿ ಅವರ ಅಭಿಮಾನಿಯೊಬ್ಬರು ಶುರು ಮಾಡಿರುವ ಬ್ಲಾಗು.

"ರವಿಬೆಳಗೆರೆಯವರ ಬಗ್ಗೆ, ಅವರ ಬರಹಗಳಲ್ಲಿರುವ ಮಾಂತ್ರಿಕ ಶಕ್ತಿಯ ಬಗ್ಗೆ, ಅವರ ಪುಸ್ತಕಗಳ ಬಗ್ಗೆ, ಲೇಖನಗಳ ಬಗ್ಗೆ, ಅವರ ಹಾಸ್ಯಪ್ರಜ್ಞೆಯ ಬಗ್ಗೆ, ಓದುಗರೆಡೆಗಿನ ಅವರ ಕಳಕಳಿಯ ಬಗ್ಗೆ, ಅವರ ನಿಲುವುಗಳ ಬಗ್ಗೆ ಹಾಗೂ ಕೊಂಚ ನನ್ನ ಬಗ್ಗೆ ಈ ವೆಬ್ ಬ್ಲಾಗಿನಲ್ಲಿ ಮಾಹಿತಿಗಳನ್ನು ಕಾಲ ಕಾಲಕ್ಕೆ ಪ್ರಕಟಿಸುವುದು" ಈ ಅಭಿಮಾನಿಗಳ ಪ್ರಯತ್ನವಂತೆ. ಇದಕ್ಕೆ ಬೆಳೆಗೆರೆಯವರ ಅನುಮತಿ ಇದೆಯೋ, ಇಲ್ಲವೋ ಅಂತ ಮಾತ್ರ ಗೊತ್ತಿಲ್ಲ.

ಸಿಂಧು ಸೃಷ್ಟಿ ಸಂಭ್ರಮ

ಒಂದು ಹೊಸ ಪರಿಯ ಸೊಬಗಿನೊಂದಿಗೆ ಬ್ಲಾಗಿನಂಗಳಕ್ಕೆ ಮರಳಿದ್ದಾರೆ ಸಿಂಧು.

‘ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!’ ನಲ್ಲೀಗ ಸೃಷ್ಟಿಯ ಸಂಭ್ರಮ. ಮಡಿಲಿಗೆ ಬಂದ ಮುದ್ದು ಮಗಳನ್ನ, ಅವಳ ಚಿನ್ನಾಟಗಳನ್ನೆಲ್ಲ ನೆನೆಯುತ್ತಾ, ಸಾಕುಸಾಕೆನ್ನಿಸುತ್ತಲೇ ಮತ್ತೆ ಬೇಕೆನ್ನಿಸುವಂತೆ ಮಾಡುವ ಅವಳ ರೀತಿಗೆ ಫಿದಾ ಆಗಿಬಿಟ್ಟಿದ್ದಾರೆ. ಈ ನಡುವೆ, ಬರೆಯಲು ಹಂಚಿಕೊಳ್ಳಲು ವಿಷಯಗಳೇನೊ ಸಾಕಷ್ಟಿದ್ದರೂ, ಅಮ್ಮನ ರೋಲು ಸ್ವಲ್ಪ ಜಾಸ್ತೀನೇ ಆಗ್ ಬಿಟ್ಟು ಬರೆಯಲು ಸಮಯ ಸಾಕಾಗುತ್ತಿಲ್ಲ ಅನ್ನುತ್ತಿದ್ದಾರೆ. ಆದರೂ ಮತ್ತೆ ಬರೆಯುವ ಮಾತಾಡುತ್ತಿದ್ದಾರೆ. ಅವರಿಂದ ಮತ್ತೆ ಇನ್ನೊಂದಿಷ್ಟು ನೋಟಗಳು ಬರಲಿ.

ಶ್ರೀಧರರ ಕುಪ್ಪಳ್ಳಿ ಮೆಲುಕು

ಒಂದಿಷ್ಟು ಹೆದರಿಕೆ, ಬೆದರಿಕೆಗಳ ನಡುವೆ ವರ್ಷಗಳ ಹಿಂದಿನ ಕುಪ್ಪಳ್ಳಿ ಪ್ರವಾಸದ ನೆನಪನ್ನ ತೆರೆದಿಟ್ಟಿದ್ದಾರೆ ಶ್ರೀಧರ ರಾಜು.

ಎರಡು ವರ್ಷದ ಹಿಂದೆ ಗೆಳೆಯರ ಜೊತೆ ಕುಪ್ಪಳ್ಳಿಗೆ ಹೋಗಿದ್ದವರು ಅಲ್ಲೆಲ್ಲ ಅಲೆದು ಬಂದ ನೆನಪನ್ನ ಮೆಲುಕು ಹಾಕುತ್ತಿದ್ದಾರೆ. ಕವಿಶೈಲದ ಕಲ್ಲುಬಂಡೆಗಳ ಮೇಲೆ ಮಲಗಿದ್ದು, ಅಲ್ಲಿನ ಪ್ರಕೃತಿಯನ್ನು ಕಂಡು ಆನಂದಿಸಿ ಮನಸೋಯಿಚ್ಛೆ ಫೋಟೊ ಕ್ಲಿಕ್ಕಿಸಿದ್ದು, ಚಾರಣ ಮುಗಿಸಿ ಕುವೆಂಪು ಕವಿಶೈಲವನ್ನ ದರ್ಶಿಸಿದ್ದು ಎಲ್ಲ ನೆನೆಪುಗಳು ಇಲ್ಲಿ ಅಕ್ಷರವಾಗಿವೆ. ಇನ್ನಿಲ್ಲದ ಬೆರಗಿನಿಂದಲೇ ಎಲ್ಲವನ್ನ ನೋಡಿಬಂದವರು ಅದನ್ನೆಲ್ಲ ಇಲ್ಲಿ ತೆರೆದಿಟ್ಟಿದ್ದಾರೆ.

‘ಕರ್ಮಕಾಂಡ’ ಅವರ ಬ್ಲಾಗು. ಓದಬೇಕಿದ್ದವರು ಒಮ್ಮೆ ಭೇಟಿ ನೀಡಿ.

ಸವಿತೃ ಟೆಕ್ನಿಕಲ್ ಬ್ಲಾಗಿಂಗ್

ಒಂದು ಕ್ಯಾಮರಾ ತೆಗೆದುಕೊಳ್ಳುವುದು ಅಂದರೆ ಸುಮ್ಮನೆ ಅಲ್ಲ. ಅದರ ಸಾಮರ್ಥ್ಯ, ಅನುಕೂಲ-ಅನಾನಾಕೂಲಗಳನ್ನೆಲ್ಲ ಅಳೆದು ತೂಗಿ, ಇನ್ನೊಮ್ಮೆ ಯೋಚಿಸಿ ಆಮೇಲಷ್ಟೆ ಕೊಂಡುಕೊಳ್ಳಲು ಮುಂದಾಗಬೇಕು. ಹೀಗೆ, ಕ್ಯಾಮರಾ ಕೊಳ್ಳುವ ಮುಂಚೆ ಯೋಚಿಸಬೇಕಾದ ಹಲವಾರು ಸಂಗತಿಗಳಿರುತ್ತವೆ. ಅದೆನ್ನೆಲ್ಲ ವಿಶ್ಲೇಷಿಸಿ ಬರೆಯುತ್ತಿದ್ದಾರೆ ಸವಿತೃ.

ಕಡಿಮೆ ಜನರಿಗೆ ಗೊತ್ತಿರುವ , ಅದಕ್ಕಿಂತಲೂ ಕಡಿಮೆ ಜನರ ಆಸಕ್ತಿ ಕೆರಳಿಸುವ ಟೆಕ್ನಿಕಲ್ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯೋ ಸಲುವಾಗಿ ಈ ಬ್ಲಾಗ್ ಹುಟ್ಟಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡ್ತಾ ಇರೋ ಒಬ್ಬ ಸಾಮಾನ್ಯ ಕನ್ನಡಿಗರು ಈ ಬ್ಲಾಗ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟೆಕ್ನಿಕಲ್ ಪರಿಭಾಷೆಯನ್ನ ಕನ್ನಡಕ್ಕಿಳಿಸಿ ಬರೆದು ಪ್ರಚುರ ಪಡಿಸುವುದು ಅವರ ಪ್ರಯತ್ನ. ಕನ್ನಡದ ಕೆಲವು ಟೆಕ್ನಿಕಲ್ ಬರಹಗಳನ್ನ ಇಲ್ಲಿ ಓದಬಹುದು.

ಸೃಜನ್ ಪೆಪ್ಪರ್ ಮಿಂಟ್

ತಮ್ಮ ಸೃಜನಾತ್ಮಕ ಚಿತ್ರಗಳಿಂದ ಗಮನ ಸೆಳೆಯುತ್ತಿರುವ ಕಲಾವಿದ ಸೃಜನ್. ತಮ್ಮೆಲ್ಲ ಚಿತ್ರಗಳನ್ನು ಒಟ್ಟುಗೂಡಿಸಿ ಪ್ರದರ್ಶಿಸಲೆಂದೇ ಒಂದು ಬ್ಲಾಗು ತೆರೆದಿದ್ದಾರೆ. ‘ಪೆಪ್ಪರ್ ಮಿಂಟ್’ ಅವರ ಈ ಹೊಸ ಪ್ರಯತ್ನ. ಅದರಷ್ಟೇ ಟೇಸ್ಟಿ, ರಸವತ್ತಾದ, ಮೋಹಕ ಚಿತ್ರಕುಸುರಿಗಳನ್ನ ಇಲ್ಲಿ ಕಾಣಬಹುದು. ಈಗಷ್ಟೇ ಶುರುವಾದ ಬ್ಲಾಗಿನಲ್ಲಿ ಸೃಜನರ ಒಂದೆರಡು ಸ್ಯಾಂಪಲ್ ಚಿತ್ರಗಳಿವೆ. ಇನ್ಮುಂದೆ ಇಲ್ಲಿ ಹೆಚ್ಚೆಚ್ಚು ಚಿತ್ರಗಳನ್ನ ಕಾಣಬಹುದು.

ಅರುಣರ ನೀರದಾರಿಯ ಹೆಜ್ಜೆ

ಹೆಚ್ಚು ಕಡಿಮೆ ವರ್ಷದ ನಂತರ ಸಣ್ಣದೊಂದು ಕಥೆಯೊಂದಿಗೆ ಮತ್ತೆ ಬ್ಲಾಗಿನಂಗಳಕ್ಕೆ ಕಾಲಿಡುತ್ತಿದ್ದಾರೆ ಅರುಣ್ ಮಣಿಪಾಲ್.

ಒಂದು ನೀಲಿಸೀರೆಯ ಎಳೆ ಹಿಡಿದುಕೊಂಡು ಹೆಣೆದ ಕಥೆ ಹಾಗೇ ಓದಿಸಿಕೊಂಡು ಹೋಗುವಂತಿದೆ. ‘ನೀರ ದಾರಿಯ ಹೆಜ್ಜೆ’ ಅವರ ಬ್ಲಾಗ್. ಹೀಗೆ ಓದತಕ್ಕ ಇನ್ನೊಂದಿಷ್ಟು ಕಥೆಗಳು ಇಲ್ಲಿವೆ. ಕಥೆ ಬರೆಯುವುದರಲ್ಲೇ ಹೆಚ್ಚು ಆಸಕ್ತಿ ಇಟ್ಟುಕೊಂಡಿರುವ ಅರುಣ್, ಒಂದೊಂದನ್ನು ತಮ್ಮದೇ ಬಗೆಯಲ್ಲಿ ಬಿಡಿಸುತ್ತಾ ಹೋಗಿದ್ದಾರೆ. ಜೊತೆಗೆ, ಆಗೊಮ್ಮೆ-ಹೀಗೊಮ್ಮೆ ಬರೆದ ಕವಿತೆಗಳು ಇಲ್ಲಿವೆ.

ಬಸವರಾಜುರವರ ಮತ್ತೊಂದಾಸ್ಯ

ವೈಎನ್ಕೆ ಬರಹಗಳೇ ಹಾಗೆ. ಸೂಜಿ ಮೊನಚಿನ ಹಾಗೇ. ಇಂತಿಪ್ಪ ಬರಹಗಾರರ ಪಂಚ್ ಗಳನ್ನ ನೆನೆಯುತ್ತಿದ್ದಾರೆ ಬಸವರಾಜು.

ಚಿಕ್ಕಂದಿನಲ್ಲಿ, ಕನ್ನಡಪ್ರಭದ ಸಿನಿಮಾ ಸುದ್ದಿಗಳಿಗೆ ಮಾರುಹೋಗಿ ಅವುಗಳನ್ನ ಓದುತ್ತಿದ್ದವರು ಅರ್ಥಾತ್ ನೋಡುತ್ತಿದ್ದವರು ಅಲ್ಲಿ ವೈಎನ್ಕೆ ಸಂಪಾದಕತ್ವದಲ್ಲಿ ಬರುತ್ತಿದ್ದ ಪತ್ರಿಕೆ, ಅವರ ವಂಡರ್ ಕಣ್ಣಿನ ಡೈರಿ ಎಲ್ಲದಕ್ಕೂ ಮಾರು ಹೋಗಿದ್ದರಂತೆ. ಅದನ್ನೆಲ್ಲ ಈಗ ಮತ್ತೆ ಮೆಲುಕು ಹಾಕುತ್ತಿದ್ದಾರೆ.

‘ಮತ್ತೊಂದಾಸ್ಯ’ ಅವರ ಬ್ಲಾಗು. ಹಾಗಂದರೆ ಇನ್ನೊಂದು ಹಾಸ್ಯ ಅಂತ ಅರ್ಥವಲ್ಲ. ಅದು ‘ಮತ್ತೊಂದು+ಆಸ್ಯ’. ಆಸ್ಯ ಅಂದರೆ ಮುಖ. ಇದು ಬರಹಗಾರರ ಇನ್ನೊಂದು ಮುಖ ಅನ್ನುವುದು ಅವರ ಸಮಜಾಯಿಷಿ. ನೋಡಬೇಕಿದ್ದವರು ಒಮ್ಮೆ ಹೋಗಿಬನ್ನಿ. 

ಜೋಸೆಫರ ಹೊಸ ಕಥೆ

ಒಂದು ನಿರೀಕ್ಷೆಯೇ ನಮ್ಮ ಬದುಕನ್ನ ಎಷ್ಟೆಲ್ಲ ಬದಲಿಸಿಬಿಡುತ್ತದೆ. ಕಾಣದಿದ್ದರೂ, ಬರೀ ಕೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ನಾವು ಎಷ್ಟೆಲ್ಲ ಕನಸುಗಳನ್ನ ಕಟ್ಟಿಕೊಳ್ಳುತ್ತೇವೆ. ಬದುಕು ಹೊಸೆಯುತ್ತೇವೆ. ಹೀಗೆ ಇಂತಹುದೇ ಒಂದು ಕಾಣದ ನಿರೀಕ್ಷೆ ಬದುಕನ್ನ ನಡೆಸಿದ ಕಥೆಯನ್ನ ಮುಂದಿಟ್ಟಿದ್ದಾರೆ ಮರಿಜೋಸೆಫ್.

ಅಂತರ್ಜಾಲದಲ್ಲಿ ತೇಲಿಬಂದ ಒಂದು ಪುಟದ ಇಂಗ್ಲಿಷ್ ಕಥೆಯನ್ನ ಇಟ್ಟುಕೊಂಡು ಕನ್ನಡಕ್ಕೆ ರೂಪಾಂತರಿಸಿದ್ದಾರೆ ಜೋಸೆಫ್. ಇದು ಅವರದ್ದೇ ಹೆಸರಿನ ಬ್ಲಾಗ್. ಅವರ ಅನಿಸಿಕೆಗಳಿಗೊಂದು ತಾಣ. ಇಲ್ಲಿನ ಬಹುಪಾಲು ಲೇಖನಗಳು ಅವರದ್ದೇ ಆದ ಅನಿಸಿಕೆ, ವಿಚಾರ, ಅನುಭವಗಳಿಂದ ಕೂಡಿವೆ. ಒಮ್ಮೆ ಓದಿ ಬನ್ನಿ. 

ಮುತ್ತುಮಣಿಯ ಬರೆಯೋ ಆಸೆ

‘ಬರೆಯೋ ಆಸೆ’ ಇಟ್ಟುಕೊಂಡು ಒಂದು ಚಂದದ ಕಥೆಯನ್ನ ಬಿಡಿಸಿಡುವ ಯತ್ನದಲ್ಲಿದ್ದಾರೆ ಮುತ್ತುಮಣಿ. ಈಗಷ್ಟೇ ತನ್ನ ಅಜ್ಜಿಮನೆಯನ್ನು ಹೊಕ್ಕಿರುವ ರುಕ್ಮಿಣಿ ಅಲ್ಲಿ ಏನೆಲ್ಲ ತುಂಟಾಟ ಮಾಡುತ್ತಾಳೆ ಅನ್ನುವುದೇ ಇದರ ಕಥಾವಸ್ತು. ‘ರುಕ್ಮಿಣಿಯ ಅಜ್ಜಿ ಮನೆ’ ಇಲ್ಲಿ ಕಂತು ಕಂತಾಗಿ ಬರುತ್ತಿದೆ.

"ಒಂದು ಸುಂದರವಾದ ಬರಹ ಉತ್ತಮವಾದ ಚಿತ್ರಪಟದಂತೆ...ಪ್ರಕೃತಿಯ ಒಂದು ರಮ್ಯ ದೃಶ್ಯದಂತೆ... ಬಲ್ಲವನೇ ಬಲ್ಲ ಬೆಲ್ಲದ ಸವಿಯ. ಓದಿನಿಂದ ದೊರೆತ ರೋಮಾಂಚನವೇ ಬರೆಯಲು ಸ್ಫೂರ್ತಿ... ಬರೆಯೋದಕ್ಕೇನೋ ಪ್ರಾರಂಭಿಸಿಬಿಟ್ಟಿದ್ದೇನೆ, ಇನ್ನು ತಲೆನೋವು ಓದುಗರಿಗೆ ಬಿಟ್ಟಿದ್ದು :)" ಇದು ಬರೆಯೋ ಆಸೆವುಳ್ಳ ಮುತ್ತುಮಣಿ ತಮ್ಮ ಪ್ರಯತ್ನದ ಬಗ್ಗೆ ಹೇಳಿಕೊಂಡಿದ್ದು. ಅವರ ಬರಹದಾಸೆಯಿಂದ ಮೂಡಿದ ಹತ್ತಾರು ಬರಹಗಳನ್ನ ಇಲ್ಲಿ ಓದಬಹುದು. ಕಥೆ, ಕವಿತೆ ಎಲ್ಲವೂ ಇಲ್ಲಿದೆ. ಓದಿಬೇಕಿದ್ದವರು ಒಮ್ಮೆ ಹೋಗಿಬನ್ನಿ.

ಚಂದ್ರಶೇಖರರ ಕ್ಷಣ ಚಿಂತನೆ

ಒಂದು ಮುಂಜಾನೆ ಅರಳಿದ್ದ ಬೆಂಕಿಚೆಂಡಿನ ಚಿತ್ರ ತೆಗೆದ ಕಥೆ ಹೇಳುತ್ತಿದ್ದಾರೆ ಚಂದ್ರಶೇಖರ ಬಿ.ಎಚ್. ಚಿತ್ರ ತೆಗೆದದ್ದೇ ಅದರ ಮೂಲವನ್ನರಿಸಿ ಹೊರಟವರು ‘ಲಿಲ್ಲಿ’ಯ ಇಡೀ ಜಾತಕವನ್ನ ತಂದು ಬ್ಲಾಗಿನಲ್ಲಿಟ್ಟಿದ್ದಾರೆ. ಹೀಗೆ ಅರಳಿದ್ದ ‘ಫೈರ್ಬಾಲ್ ಲಿಲ್ಲಿ’ ಹೂವಿನ ಚಿತ್ರ ಇಲ್ಲಿದೆ.

ಕ್ಷಣ ಚಿಂತನೆ ಚಂದ್ರಶೇಖರರ ಬ್ಲಾಗ್. ಬರೀ ಚಿಂತನೆಗಳು ಮಾತ್ರವಲ್ಲ ಚಂದದ ಚಿತ್ರಗಳು ಈ ಬ್ಲಾಗಿನಲ್ಲಿವೆ. ಹೀಗೆ ಕ್ಯಾಮರಾ ಕಣ್ಣಿನಲ್ಲಿ ಕ್ಲಿಕ್ಕಿಸಿದ್ದು, ಚಾರಣ ಹೋಗಿ ಬಂದಿದ್ದು ಎಲ್ಲವನ್ನೂ ತಕ್ಕ ಟಿಪ್ಪಣಿಗಳೊಟ್ಟಿಗೆ ಬ್ಲಾಗಿನಲ್ಲಿರಿಸಿದ್ದಾರೆ. ಜೊತೆಗೆ ಅವರದ್ದೇ ಆದ ಒಂದಿಷ್ಟು ಚಿಂತನೆ, ನೆನಪು, ಅನುಭವಗಳಿಂದ ಕೂಡಿದ ಬರಹಗಳಿವೆ.

ಅರುಣರ ಸ್ವಗತ

ದೂರದ ಲಂಡನ್ನಿನಿಂದ ಬ್ಲಾಗಿಸುತ್ತಾ ತಮ್ಮ ಬಿರಾದಾರ್ ಗುರುಗಳನ್ನ ನೆನೆಸಿಕೊಳ್ಳುತ್ತಿದ್ದಾರೆ ಅರುಣ್. ಚಿಕ್ಕ ವಯಸ್ಸಿನಲ್ಲಿ ಮೇಷ್ಟ್ರು ಕಲಿಸಿದ ಪಾಠಗಳೇ ಬದುಕಿಗೆ ಬೆಳಕಾಗಿ, ಇವತ್ತು ತಮ್ಮನ್ನ ಮುನ್ನಡೆಸುತ್ತಿರುವುದನ್ನ ಅರುಣ್ ಪ್ರೀತಿಯಿಂದ ನೆನೆದಿದ್ದಾರೆ. ತಮ್ಮಂತಹ ನೂರಾರು ವಿದ್ಯಾರ್ಥಿಗಳ ಬದುಕಿಗೊಂದು ರೂಪು ಕೊಟ್ಟ ಗುರುಗಳಿಗೆ ಕೃತಜ್ಞತೆ ಹೇಳುತ್ತಿದ್ದಾರೆ.

‘ಸ್ವಗತ’ ಅವರ ಎಲ್ಲ ವಿಚಾರಗಳಿಗೊಂದು ವೇದಿಕೆ. ಮೊನ್ನೆ ಮೊನ್ನೆ ಹೀಗೆ ಊರಿಗೆ ಬಂದಿದ್ದವರು ‘ಹಳೆ ಪಾತ್ರೆ ಹಳೆ ಕಬ್ಬಣ...’ ಹಾಡು ಕೇಳಿ ಮರುಗುತ್ತಾ ಹೀಗೂ ಸಾಹಿತ್ಯ ಬರೆಯಬಹುದ ಅಂತೆಲ್ಲ ವಿಚಾರ ಮಾಡುತ್ತಿದ್ದಾರೆ. ಲಂಡನ್ನಿನಲ್ಲಿ ವಾರಾಂತ್ಯ ಕಳೆದುಹೋಗುವ ಗುಟ್ಟು ಬಿಚ್ಚಿಟ್ಟಿದ್ದಾರೆ. ಸುಂದರ ಸ್ಕಾಟ್ಲೆಂಡಿನ ಒಂದಿಷ್ಟು ಚಿತ್ರಗಳನ್ನ ತಂದು ಅಂಟಿಸಿದ್ದಾರೆ. ಹೀಗೆ ಒಂದು ವಾರಾಂತ್ಯ ಲಂಡನ್ ಬಳಿಯ ವಿಂಡ್ಸರ್ ಕ್ಯಾಸಲ್ ಗೆ ಹೋಗಿ ಬಂದಿದ್ದನ್ನು ತೆರೆದಿಟ್ಟಿದ್ದಾರೆ. ಜೊತೆಗೊಂದೆರಡು ಕವಿತೆಗಳೂ ಇವೆ. ಎಲ್ಲವೂ ಸೇರಿ ‘ಸ್ವಗತ’ ಕ್ಕೊಂದು ಚಂದ ಕೊಟ್ಟಿವೆ.

ಟೈಮ್ ಪಾಸಿನ ಬರಹಗಳು

"ಲಾಲೂ, ಮಾಯಾ ದೇಶದ ಪ್ರಧಾನಿ ಆದ್ರೆ ಹೇಗೆ? ಮಣ್ಣಿನ ಮಗ ದೇವೇಗೌಡ್ರು ಮತ್ತೆ ಪ್ರಧಾನಿ ಆದ್ರೆ ಏನೆಲ್ಲ ಮಾಡಬಹುದು? ಇನ್ನು, ಸತ್ಯಂ ರಾಜು, ಕಡೆಗೆ ನಮ್ಮ ಸಾಫ್ಟ್ ವೇರ್ ಇಂಜಿನಿಯರ್ ಗಳು ಪ್ರಧಾನಿ ಆದ್ರೆ ಏನಾಗಬಹುದು" ಟೈಮ್ ಪಾಸ್ ಅರ್ಥಾತ್ ಕಾಲಾಹರಣ ಮಾಡುತ್ತಾ ಹೀಗೆಲ್ಲ ಯೋಚಿಸುತ್ತಿದ್ದಾರೆ ‘ಟೈಮ್ ಪಾಸ್ ಮಾಡಿ’ ಬ್ಲಾಗಿಗರು.

ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿಗಳ ಮೇಲೆ ಕಿರು ನಗೆಗೆ... ಈ ಬ್ಲಾಗ್. ಬೇಗ ಎದ್ದೇಳುವ ಸುಲಭೋಪಾಯಗಳು, ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ, ಸಾಯುವ ಸುಲಭ ಮಾರ್ಗಗಳು.....ಇಲ್ಲಿ ಇನ್ನೂ ಇಂತಹ ಹತ್ತಾರು ಟೈಮ್ ಪಾಸಿನ ಬರಹಗಳಿವೆ. ಟೈಮ್ ಪಾಸ್ ಮಾಡಲಿಚ್ಛಿಸುವವರು ಇತ್ತ ನೋಡಬಹುದು.

ಜ್ಞಾನಬಿಂದುವಿನ ಕವಿತೆಗಳು

ದಿನದ ಬ್ಲಾಗಿನಲ್ಲಿಂದು ಜ್ಞಾನಬಿಂದುವಿನ ಕವಿತೆಗಳ ಚಿತ್ತಾರ.

‘ಎಲ್ಲಿ ಹೋದಿರಿ ಅಂದಿನ ದಿನಗಳ ನೆನಪುಗಳನ್ನು ಬಿತ್ತಿ, ಮನದಲಿ ಸವಿ ನೆನಪುಗಳನ್ನು ಬಿತ್ತಿ !!!’ ಅನ್ನೋದು ಇದರ ಒಕ್ಕಣಿಕೆ. ಹೀಗೆ ಎಲ್ಲಿ ಹೋದಿರಿ ಅಂತ ಪ್ರಶ್ನೆ ಕೇಳುವವರು ಬ್ಲಾಗಿಗ ಜ್ಞಾನಮೂರ್ತಿ. "ಪ್ರೈವೆಟ್ ಬಸ್ಸಲ್ಲಿ ಮುಂದಿನ ಸೀಟಲ್ಲಿ ಕೂತು ಇಡೀ ಜಗತ್ತನ್ನು ಮೊದಲು ನೋಡುತ್ತಿರೋನು ನಾನೇ ಅಂದುಕೊಳ್ಳೋ ಅಷ್ಟು ಚೈಲ್ಡ್ ನಾನು. ನನ್ನ ಬಗ್ಗೆ ನಾನು ಏನು ಹೇಳಲಿ ? ರಾತ್ರಿ ಮಲಗುವಾಗ ಎರಡು ಕೈಯಲ್ಲಿ ಕೆನ್ನೆ ಹಿಡಿದು ಕಣ್ಣು ಮುಚ್ಚಿ ನಾನು ತುಂಬಾ ಸುಂದರ ಅಂದುಕೊಳ್ಳೋ ದಡ್ಡ ನಾನು. ನನ್ನ ಬಗ್ಗೆ ನಾನು ಏನು ಹೇಳಲಿ?" ಇದು ಇವರ ಬಗ್ಗೆ ಇವರೇ ಹೇಳಿಕೊಂಡ ಮಾತುಗಳು.

ಕವಿತೆಗಳನ್ನ ಬರೆಯೋದರಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಜ್ಞಾನಮೂರ್ತಿಯವರ ಸಾಲು ಕವಿತೆಗಳು ಇಲ್ಲಿವೆ. ಪ್ರಾಸ ಹಿಡಿದು ಪದ ಕಟ್ಟೋದು ಅವರ ಪದ್ಯಗಳ ವಿಶೇಷ. ಅವರ ಒಂದಿಷ್ಟು ಬರಹಗಳೂ ಜೊತೆಗಿವೆ. ಓದಬೇಕಿದ್ದವರು ಜ್ಞಾನಬಿಂದುವಿಗೆ ಭೇಟಿ ಕೊಡಿ.

ದಿಲೀಪರ ಹನಿ ಹನಿ

ಪ್ರೀತಿ ಅನ್ನೋದೆ ಹಾಗೆ. ಇಷ್ಟಪಟ್ಟ ಹುಡುಗನಿಗೆ ಹುಡುಗಿ ಜಿಂಕೆಮರಿಯಾಗುತ್ತಾಳೆ. ಅವಳಿಗೆ ಇತ ಮುದ್ದಿನ ಕೋತಿಯೂ ಆಗುತ್ತಾನೆ. ಈ ಕೋತಿಯಂಥ ಹುಡುಗ ಜಿಂಕೆಮರಿಯಂತ ಹುಡುಗಿಗೆ ಬರೆದಂತಹ ಪ್ರೇಮ ಪತ್ರವೊಂದು ಈ ಹನಿ ಹನಿಯಲ್ಲಿದೆ.

ಇಲ್ಲಿ ಒಂದಷ್ಟು ಮಾತು, ಒಂದಿಷ್ಟು ಕವಿತೆ.... ಎಲ್ಲ ಹನಿ ಹನಿಯಷ್ಟೇ. ಹೀಗೆ ಆತ ಅವಳಿಗೆ ಬರೆದ ಸಾಲು ಸಾಲು ಪ್ರೇಮದೊಲೆಗಳು ಇಲ್ಲಿವೆ. ಅವಳ ನೆನಪಲ್ಲಿ ಬರೆದ ಒಂದಿಷ್ಟು ಹನಿಕವಿತೆಗಳಿವೆ. ನಡುವೆ, ನಗಿಸಲಿಕ್ಕೆ ಅಂತ ಒಂದಿಷ್ಟು ವ್ಯಂಗ್ಯಚಿತ್ರಗಳು ಇವೆ. ಹೀಗೆ ಇಲ್ಲಿ ಇವೆಲ್ಲವನ್ನ ಬರೆಯುತ್ತಿರುವವರು ದಿಲೀಪ್. ಅವರ ಈ ಹನಿ ಹನಿ ಇವತ್ತಿನ ಓದಿಗೆ. 

ದಿವ್ಯಾ ಭಾವ ಜೀವ ತಳೆದಾಗ

ದಿನದ ಬ್ಲಾಗಿನಲ್ಲಿಂದು ದಿವ್ಯಾ ಮಲ್ಯರ ಕವಿತೆಗಳ ಕಂಪು.

‘ಭಾವನೆಗಳ ಸಾಗರಕೆ ಅಣೆಕಟ್ಟು ಹಾಕಿ, ಕವನದ ಮೂಲಕ ಹರಿಬಿಡುವ ಹುಡುಗಿ...’ ಅಂತನ್ನುವ ದಿವ್ಯ ಹೀಗೆ ಹರಿಬಿಟ್ಟ ಕವನಗಳನ್ನೆಲ್ಲ ಬ್ಲಾಗೊಂದರಲ್ಲಿ ಕೂಡಿಡುತ್ತಿದ್ದಾರೆ. ‘ಭಾವ ಜೀವ ತಳೆದಾಗ’ ಅವರ ಬ್ಲಾಗ್. ಇವತ್ತಿನ ಯಾಂತ್ರಿಕ ಬದುಕಲ್ಲಿ ಭಾವನೆಗಳೊಟ್ಟಿಗೆ ಬದುಕೋದೆ ಕಷ್ಟ. ಅಂತಹ ಸಂಗತಿಗಳಿಗೆ ಮರುಜೀವ ಕೊಟ್ಟು ಬರೆವ ಪುಟ್ಟ ಪ್ರಯತ್ನವೇ ಅವರ ಈ ಬ್ಲಾಗಿಂಗ್.

ಹೀಗೆ ಒಂದು ಕ್ಷಣ ಅನಿಸಿದ್ದು, ಯಾವುದೋ ಸದ್ದಿಲ್ಲದ ಧ್ವನಿ, ಏನೂ ಹೇಳಲಾರದ ಗೊಂದಲ ಇವೇ ಮೊದಲಾದ ಭಾವಗಳನ್ನೇ ವಸ್ತುಗಳನ್ನಾಗಿಸಿಕೊಂಡು ಕಟ್ಟಿದ ಪದ್ಯಗಳನ್ನ ಇಲ್ಲಿ ಓದಬಹುದು. ದಿವ್ಯಾ ಕವಿತೆಗಳನ್ನೊದಬಯಸುವವರು ಈ ಬ್ಲಾಗಿಗೊಮ್ಮೆ ಭೇಟಿ ನೀಡಿ. 

ಮತ್ತೆ ಬಡೆಕ್ಕಿಲ ಬ್ಲಾಗಿಂಗ್

ವರ್ಷದ ಬ್ರೇಕ್ ನಂತರ ಮತ್ತೆ ಬ್ಲಾಗಿಂಗಿಗೆ ಶುರುವಿಟ್ಟುಕೊಂಡಿದ್ದಾರೆ ಬಡೆಕ್ಕಿಲ ಪ್ರದೀಪ.

ಹೀಗೆ ಬಂದವರೇ ಸದ್ಯ ನಡೆಯುತ್ತಿರೋ ‘ಶೂ-ನಾಮಿ ವೃತ್ತಾಂತ’ ಸುದ್ದಿಯನ್ನ ಹೊತ್ತು ತಂದಿದ್ದಾರೆ. ಕಳೆದ ವರ್ಷ ಅಮೆರಿಕಾ ಅಧ್ಯಕ್ಷರಿಂದ ಶುರುವಿಟ್ಟುಕೊಂಡು ಮೊನ್ನೆ ನಮ್ಮ ಮುಖ್ಯಮಂತ್ರಿಗಳ ತನಕ ಎಲ್ಲರ ಮೇಲೂ ಇಂತಹದ್ದೊಂದು ಎಸೆತವಾದದ್ದನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿದ್ದಾರೆ.

ತಮ್ಮೀ ಕನ್ನಡ ಬ್ಲಾಗಿಗೆ ಮುನ್ನುಡಿ ಬರೆದುಕೊಂಡವರು ಇನ್ನಷ್ಟು ಬರಹಗಳನ್ನೂ ಇದರೊಟ್ಟಿಗೆ ಸೇರಿಸುವ ಮಾತಾಡುತ್ತಿದ್ದಾರೆ. 

ಕುವೈತಿನ ಜಲನಯನ

ಚುಟುಕಗಳ ಮತ್ತೊಂದು ಸರಣಿಯನ್ನ ಬ್ಲಾಗಿನಂಗಳಕ್ಕೆ ಹೊತ್ತು ತಂದಿದ್ದಾರೆ ಜಲನಯನ.

ಜಲ-ನೆಲಕೆ ಅಬೇಧ್ಯ ನಂಟು. ಇವುಗಳ ಸಂಪೂರ್ಣ ದರ್ಶನವೇ ಈ ‘ಜಲನಯನ’. ಕುವೈತ್ ನ ವೈಜ್ಞಾನಿಕ ಸಂಶೋಧನಾಲಯದಲ್ಲಿ ಸಂಶೋಧಕರಾಗಿರುವ ಈ ಬ್ಲಾಗಿಗರಿಗೆ ಕವಿತೆ ಬರೆಯೋದರಲ್ಲಿ ಹೆಚ್ಚಿನ ಆಸಕ್ತಿ. ಹೀಗೆ ಕೆಲಸದ ಒತ್ತಡದ ನಡುವೆ ಬರೆದ ಒಂದಿಷ್ಟು ಹನಿಗಳು ಇಲ್ಲಿವೆ. ಇನ್ನಿತರ ಬರಹಗಳೂ ಜೊತೆಗಿವೆ.

ಭಾವ ಮಂಥನ ಎನ್ನುವ ಇನ್ನೊಂದು ಬ್ಲಾಗಿನಲ್ಲೂ ಅವರು ಬ್ಲಾಗಿಸುತ್ತಾರೆ. ಹೆಸರೇ ಹೇಳುವಂತೆ ಇದು ಅವರ ಭಾವ-ಬರಹಗಳ ಮಂಥನ. ಎರಡನ್ನೂ ಒಮ್ಮೆ ಓದಿಬನ್ನಿ.

ಮಾಂಬಾಡಿಯವರ ನವೋದಯ

‘ಅಂತೂ ಚುನಾವಣೆ ಮುಗಿಯಿತು. ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಅನ್ನುವುದು ಮುಂದಿನ ಮಾತು. ಯಾರು ಗೆದ್ದರೂ ಅದು ಜನತೆಯ ವಿಜಯ. ಆದರೂ ನಮ್ಮೂರಿನಲ್ಲಿ ಚುನಾವಣೆ ಶಾಂತಿಯುತವಾಗಿತ್ತು ಎಂಬುದೇ ಮಿರಾಕಲ್.....’ ಕಳೆದ ಚುನಾವಣೆಯನ್ನ ನೆನೆದು ಹೀಗಂತ ನಿಟ್ಟುಸಿರುಬಿಡುತ್ತಿದ್ದಾರೆ ಹರೀಶ ಮಾಂಬಾಡಿ.

ಅದೇ ದಾರಿಯಲ್ಲಿ ಹೊಸ ನೆನಪುಗಳನ್ನೊತ್ತ ‘ನವೋದಯ’ ಅವರ ಬ್ಲಾಗ್. ಕನವರಿಕೆಯ ಕವನ, ಕನ್ನಡ-ಮಲಯಾಳ-ಕಾಸರಗೋಡಿನ ಅನುಭವ ಕಥನ.... ಹೀಗೆ ಮಾಂಬಾಡಿ ತಮ್ಮ ಬರವಣಿಗೆ ಬೆಸೆಯುತ್ತಾ ಹೋಗಿದ್ದಾರೆ. ಅವರೇ ಹೇಳುವಂತೆ ಇಲ್ಲಿ ಹಳೆಯ-ಹೊಸ ನೆನಪುಗಳೂ, ಅನುಭವಗಳೂ ಇವೆ. ಕೆಲವು ಕವಿತೆಯಾಗಿಯೂ ಬಂದಿವೆ. ಎಲ್ಲವನ್ನ ಓದಬೇಕಿದ್ದವರು ಮಾಂಬಾಡಿ ಬ್ಲಾಗಿಗೊಮ್ಮೆ ಭೇಟಿಕೊಡಿ.

ವಿನೋದ್ ವಿಚಾರಗಳು

ರಿಸೆಷನ್ನೆಂಬ ಮಹಾಮಾರಿಯ ಕಾರಣ ಇರುವ ಉದ್ಯೋಗವೂ ಕೈತಪ್ಪುತ್ತಿರುವ ನಡುವೆಯೇ, ಇವತ್ತು ಮೇ ೧ ಕಾರ್ಮಿಕರ ದಿನ. ವರ್ಷವಿಡೀ ದುಡಿವ ಕೈಗಳನ್ನ, ಮನಸ್ಸುಗಳನ್ನ ಒಮ್ಮೆ ನೆನವ ದಿನ. ಈ ಹೊತ್ತಲ್ಲಿ ಕಾರ್ಮಿಕ ದಿನದ ಮಹತ್ವವನ್ನ ತಿಳಿಹೇಳುವ ಪ್ರಯತ್ನದಲ್ಲಿದ್ದಾರೆ ವಿನೋದ್.

ಆರ್ಥಿಕ ಕುಸಿತದಿಂದಾಗಿ ಉದ್ಯೋಗಗಳು ಕಡಿತಗೊಳ್ಳುತ್ತಿರುವ, ಇರುವವರಿಗೆ ಕೆಲಸದ ಹೊತ್ತು ಹೆಚ್ಚುತ್ತಿರುವ ನಡುವೆಯೇ ೧೨೩ನೇ ಮೇ ದಿನದ ಪ್ರಾಮುಖ್ಯತೆಯನ್ನ, ಮತ್ತು ಅದಕ್ಕಾಗಿ ಇನ್ನಷ್ಟು ಸಂಘಟಿತರಾಗಬೇಕಾದ ಅಗತ್ಯತೆಗಳನ್ನ ಇಲ್ಲಿ ವಿವರಿಸುತ್ತಿದ್ದಾರೆ. ಇಂತಹುದ್ದೇ ನಾಲ್ಕಾರು ವೈಚಾರಿಕ ಬರಹಗಳು ಇಲ್ಲಿವೆ. ಒಮ್ಮೆ ಓದಿ ಬನ್ನಿ.

ಬಾಲಕೃಷ್ಣರ ಚಂದನ

ದಿನದ ಬ್ಲಾಗಿನಲ್ಲಿಂದು ಬಾಲಕೃಷ್ಣ ಬಿ.ಎನ್ ರ ಚಂದನದ ಬರಹಗಳ ಬಿಂಬ.

ಕಥೆ, ಕವಿತೆ, ಚುಟುಕಗಳ ಜೊತೆಗೆ ಒಂದಿಷ್ಟು ಹರಟೆಗಳ ಅಂಕಣವೇ ಈ ಚಂದನ. ಸದ್ಯಕ್ಕಿಲ್ಲಿ ರೂಮಿಯ ಕವಿತೆಯೊಂದರ ಚುಟುಕಾದ ಅನುವಾದವಿದೆ. ಅದಕ್ಕೂ ಮುನ್ನ ಜ್ಯೋತಿಷಿ ಸುಸ್ತಾದ ಚುಟುಕು ನಗೆ ಹನಿ ಇದೆ. ಒಂದಿಷ್ಟು ಝೆನ್ ಹನಿಗಳು, ಚುಟುಕಗಳು, ಅನುವಾದಗಳೂ ಈ ಚಂದನದೊಳಗೆ ಸೇರಿಕೊಂಡಿವೆ. ಜೊತೆಗೆ ಆಗಾಗ್ಗೆ ತಮ್ಮ ನೆನಪುಗಳಿಂದ, ಅನುಭವಗಳಿಂದ ಬರೆದ ಬರಹಗಳಿವೆ. ಎಲ್ಲವೂ, ಚಿಕ್ಕ-ಚೊಕ್ಕದಾಗಿವೆ. ಚಂದನದ ಬರಹಗಳನ್ನೊದಬಯಸುವವರು ಈ ಬ್ಲಾಗಿಗೊಮ್ಮೆ ಭೇಟಿ ನೀಡಿ.

ಅರಬಿನ ಅಂಗಳದಲ್ಲಿ ಬಸವಜಯಂತಿ

ಅರಬ್ ಎಂಬ ದೂರದ ಮರಳುನಾಡಿನಲ್ಲಿ ನಿನ್ನೆ ಬಸವ ಜಯಂತಿ ಆಚರಿಸಿದ ಬಗೆಯನ್ನ ಬ್ಲಾಗಿಗೆ ತಂದಿಟ್ಟಿದ್ದಾರೆ ಮೃದುಮನಸಿನ ಮನಸೆಂಬ ನಾಮಧೇಯರು.

ಕಾಯಕದಲ್ಲೇ ಕೈಲಾಸ ಕಾಣಬೇಕೆಂದುಕೊಂಡವರು, ದಿನವೆಲ್ಲ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ, ಇಂದಾದರೂ ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಸಂಜೆ ಏಳಕ್ಕೆ ವಚನ ಗಾಯನಕ್ಕೆ ಕುಂತವರು ಹತ್ತಾರು ವಚನಗಳನ್ನ ಹಾಡುತ್ತ, ಬಸವಣ್ಣರನ್ನ ಮನದಲ್ಲೇ ಸ್ಮರಿಸುತ್ತಾ, ಕಡೆಗೆ ಜೋಳದ ರೊಟ್ಟಿ ಮೆಲ್ಲುವುದರೊಂದಿಗೆ ಕಾರ್ಯಕ್ರಮ ಮುಗಿಸಿದ್ದಾರೆ.

ಈ ಬ್ಲಾಗಿನಲ್ಲಿ ಬಸವ ಜಯಂತಿಯ ಸಚಿತ್ರ ವಿವರಗಳ ಅರಬ್ ಕನ್ನಡಿಗರ ಇನ್ನಿತರ ಸುದ್ದಿ-ಸಮಾಚಾರಗಳಿವೆ. ಜೊತೆಗೆ ಮೃದು ಮನಸ್ಸಿನ ಬ್ಲಾಗಿಗರು ಬರೆದ ಇನ್ನಿತರ ಲೇಖನಗಳೂ ಓದಲಿಕ್ಕಿವೆ.  

ಗುರು ಲೋಕ

ಹೀಗೆ ಗೆಳೆಯರೊಬ್ಬರಿಂದ ಫಾರ್ವರ್ಡ್ ಆಗಿ ಬಂದ ಚೆಂದದ ಈ-ಮೇಲ್, ತಮಗಿಷ್ಟವಾದ, ಪದೇ ಪದೇ ಕಾಡಿದ, ಒಂದೇ ನೋಟಕ್ಕೆ ತನ್ನನ್ನ ಸೆಳೆದ ಒಂದು ಚಿತ್ರ, ಮತ್ತೆ ಕಾಡುವ ನೆನಪು.... ಈ ಎಲ್ಲವನ್ನ ಹಂಚಿಕೊಳ್ಳಲಿಕ್ಕೆ ಅಂತಲೇ ತಮ್ಮದೊಂದು ಲೋಕ ಮಾಡಿಕೊಂಡಿದ್ದಾರೆ ಗುರುಪ್ರಸಾದ್.

‘ನನ್ನ ಒಲುಮೆಯ ಗೂಡಿನೆಡೆಗೆ ಒಂದು ಪಯಣ..’ ಇದು ಗುರುಪ್ರಸಾದರು ತಮ್ಮೀ ಲೋಕದ ಬಗ್ಗೆ ಬರೆದುಕೊಂಡ ಸಾಲು. ಲಂಡನ್ನೆಂಬ ಮಾಯಾನಗರಿಯ ಮೋಡಿಗೆ ಒಳಗಾದವರು, ಅಲ್ಲಿನ ಸುಂದರ ನೋಟಗಳನ್ನ ಸೆರೆ ಹಿಡಿದಿದ್ದಾರೆ. ಅಲ್ಲಿನ ಬೀಚ್ ನಲ್ಲಿ ಅಡ್ಡಾಡಿಬಂದು, ಆ ಹೆಜ್ಜೆ ಗುರುತುಗಳನ್ನೂ ಸೇರಿಸಿದ್ದಾರೆ. ಇಪ್ಪತ್ತು ವರ್ಷದ ಹಿಂದಿನ ನೆನಪುಗಳ ಬುತ್ತಿಯಿಂದ ಒಂದಷ್ಟನ್ನ ಕೆದಕಿ ತೆಗೆದಿದ್ದಾರೆ. ಇನ್ನೂ ಮುಂತಾದ ಸಂಗತಿಗಳು ಅವರ ಈ ಲೋಕದೊಳಗಿವೆ. ಒಮ್ಮೆ ಭೇಟಿ ಕೊಡಿ.

ವನಿತಾರ ಪಾಕ ಪ್ರಪಂಚ

ದಿನದ ಬ್ಲಾಗಿನಲ್ಲಿಂದು ವನಿತಾರ ಪಾಕ ಪ್ರಪಂಚದ ಪರಿಮಳ.

ಹೆಸರುಕಾಳು ವಡೆ, ಅವಿಯಲ್, ವೆಜಿಟೆಬಲ್ ಕಟ್ಲೆಟ್, ಮೆಂತೆ ಸೊಪ್ಪು-ಹೆಸರುಕಾಳು ಪಲ್ಯ, ಸಮೋಸ, ವೆಜ್ ಪಪ್ಸ್, ಈರುಳ್ಳಿ ಬಜ್ಜಿ, ತುಕುಡಿ, ಬಾಳೆಕಾಯಿ ಪಲ್ಯ ಬಸಳೆ ಸೊಪ್ಪಿನ ತಂಬುಳಿ, ಬಾಳೆಕಾಯಿ ಪಲ್ಯ, ವೆಜ್ ಪಲಾವ್,  ಮಂಗಳೂರು ಬನ್ಸ್ , ಬೋಂಡಾ, ಸೆವೆನ್ ಕಪ್ ಸ್ವೀಟ್.... ಬರೆದಷ್ಟು ಬೆಳೆಯುತ್ತಾ ಹೋಗುತ್ತದೆ ಇಲ್ಲಿರುವ ತಿಂಡಿಗಳ ಪಟ್ಟಿ. ಕಾಸರಗೋಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಈಗ ದೂರದ ಅಮೆರಿಕದಲ್ಲಿರುವ ವನಿತಾ ಇಷ್ಟೆಲ್ಲ ರುಚಿಗಳನ್ನ ತಯಾರು ಮಾಡಿ ಬ್ಲಾಗಿಗೆ ತುಂಬಿದ್ದಾರೆ. ಸ್ವತಃ ಪರೀಕ್ಷೆ ಮಾಡಿದ, ಅಚ್ಚುಕಟ್ಟಾದ ಅಡಿಗೆಗಳ ರೆಸಿಪಿಗಳು ಇಲ್ಲಿವೆ. ವಾರಾಂತ್ಯದಲ್ಲಿ ಹೊಸ ರುಚಿಯ ಅನ್ವೇಷಣೆಯಲ್ಲಿರುವವರು ಈ ಪಾಕಗಳನ್ನೊಮ್ಮೆ ಪರೀಕ್ಷಿಸಿ ರುಚಿಸಬಹುದು.

ಧರಿತ್ರಿಯ ಹುಟ್ಟುಹಬ್ಬದ ಸಂಭ್ರಮ

ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಧರಿತ್ರಿ.

ಒಡಹುಟ್ಟಿದ ತಮ್ಮನಲ್ಲದಿದ್ದರೂ, ಒಡನಾಡಿ ಒಡಹುಟ್ಟಿದವನಾದ, ತಮ್ಮೂರು ಉಜಿರೆಯ ಕಾರಿಡಾರ್ ನಿಂದ ಈಗಿರುವ ಬೆಂಗಳೂರಿನ ಮನೆಯಲ್ಲೂ ತಮ್ಮೊಟ್ಟಿಗೆ ಕಲರವಗುಟ್ಟುವ ತಮ್ಮನ  ಒಡನಾಟವನ್ನ ಧರಿತ್ರಿ ನೆನೆಯುತ್ತಿದ್ದಾರೆ. ಹೀಗಿರುವ ಪ್ರೀತಿಯ ತಮ್ಮನ ಹುಟ್ಟುಹಬ್ಬಕ್ಕೊಂದು ಕವಿತೆ ಇಟ್ಟು ಶುಭ ಕೋರುತ್ತಿದ್ದಾರೆ.

"ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ." ಅನ್ನೋದು ಅವರ ಆಶಯ.

ಭಾವದಲೆಗಳ ಮೇಲೇರಿ ಸವಾರಿ ಮಾಡುತ್ತಿರುವಂತೆ ಬರೆವ ಧರಿತ್ರಿ ಬರಹಗಳು ಓದಲು ಬೆಚ್ಚನೆಯ ಅನುಭವ ಕೊಡುತ್ತವೆ. ಹುಟ್ಟಿದೂರು ಬಿಟ್ಟುಬಂದ ತಳಮಳ, ಒಂಟಿತನದ ಸಂಕಟ, ಈ ನಡುವೆ ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ....ಎಲ್ಲವೂ ಓದಲು ಖುಷಿ ಕೊಡುತ್ತವೆ.

ಕಾಗಿನೆಲೆ ಬರೆವ ಸಮಶೀತೋಷ್ಣ

ಗುರುಪ್ರಸಾದ್ ಕಾಗಿನೆಲೆ ಕನ್ನಡದ ಹೊಸಬಗೆಯ ಕಥಾ ಲೇಖಕರು. ದೂರದೂರು ಅಮೆರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರು. ಮಿನೆಸೊಟಾ ರಾಜ್ಯದ ರಾಚೆಸ್ಟರ್ ನಲ್ಲಿರುವ ಗುರುಪ್ರಸಾದ್, ತಮ್ಮೆಲ್ಲ ಕೆಲಸಗಳ ನಡುವೆಯೂ ಬ್ಲಾಗಿಂಗ್ ನ ಉತ್ಸಾಹವನ್ನೂ ಇಟ್ಟುಕೊಂಡಿರುವವರು. ‘ಸಮಶೀತೋಷ್ಣ’ ಅವರ ಬ್ಲಾಗ್.

ಸದ್ಯಕ್ಕಿಲ್ಲಿ, ಅವರು ಕನ್ನಡದ ಪತ್ರಿಕೆಯೊಂದಕ್ಕೆ ಬರೆಯುತ್ತಿರುವ ಅಂಕಣ ಬರಹಗಳ ಸಂಗ್ರಹವನ್ನ ಓದಬಹುದು. ಕಾಗಿನೆಲೆಯವರ ಎಂದಿನ ಆಕರ್ಷಕ ನಿರೂಪಣೆ, ವಿಷಯ ಮಂಡನೆ ತಂತ್ರಗಳನ್ನ ಈ ಬರಹಗಳಲ್ಲಿ ಕಾಣಬಹುದು. ಅಂಕಣಗಳಿಗಷ್ಟೇ ಸೀಮಿತವಾಗಿರುವ ಬ್ಲಾಗ್ ಅವರ ಇನ್ನಷ್ಟು ಬರಹಗಳಿಗೆ ವೇದಿಕೆಯಾಗಲಿ ಎನ್ನುತ್ತ, ಇವತ್ತಿನ ಓದಿಗೆ ಕಾಗಿನೆಲೆಯವರ ಸಮಶೀತೋಷ್ಣ.

ಪ್ರಭುರಾಜ್ ಬ್ಲಾಗಿಂಗ್

ಹೇಳಿಕೇಳಿ ಇದು ಚುನಾವಣೆಯ ಸಮಯ. ಎಲ್ಲೆಲ್ಲೂ ಪ್ರಚಾರದ ಭರಾಟೆ. ಇಂತಹ ಪ್ರಚಾರಗಳಿಂದಲೇ ಬೇಸತ್ತು ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿಕುಂತಿದ್ದಾರೆ ಪ್ರಭುರಾಜ್. ಸಾಫ್ಟ್ ವೇರ್ ಇಂಜಿನಿಯರ್ ಆದವರು ನೇಗಿಲು ಹೊತ್ತ ಇಂಜಿನಿಯರ್ ಚಿಹ್ನೆ ಹಿಡಿದು ಎಲ್ಲರ ಮತ ಗಳಿಸುವ ಹುನ್ನಾರದಲ್ಲಿದ್ದಾರೆ. ಅದಕ್ಕೆ ಪೂರ್ವಭಾವಿ ಎಂಬಂತೆ ಪುಟ್ಟದೊಂದು ಭಾಷಣವನ್ನೂ ಬಿಗಿಯುತ್ತಿದ್ದಾರೆ.

ಪ್ರಭುರಾಜ್ ಬ್ಲಾಗಿನ ತಿಳಿಹಾಸ್ಯದ ಶೈಲಿಯ ಲೇಖನಗಳು ಹಾಗೇ ಓದಿಸಿಕೊಂಡು ಹೋಗುವಂತಿವೆ. ಸರಸ ಸಂಭಾಷಣೆಗಳ ನೆಡುವಲ್ಲೇ, ಅಲ್ಲಲ್ಲಿ ಕುಟುಕುತ್ತಾ, ಮೊಟಕುತ್ತಾ ಸರಾಗವಾಗಿ ಬರೆದುಕೊಂಡು ಹೋದ ಹಾಗಿವೆ. ಮಡದಿಗೆ ಬೆದರಿಸಿ ಬ್ಯಾಂಕ್ ಅಕೌಂಟು ಮಾಡಿಸಿದ್ದು, ಬೆಕ್ಕು-ನಾಯಿ ಸಾಕುವುದಕ್ಕೆ ಕಚ್ಚಾಡಿದ್ದು ಇನ್ನೂ ಮುಂತಾಗಿ ಅವರ ಬರಹ ಹರಿದಿದೆ. ಎಲ್ಲವನ್ನ ಓದಬೇಕಿದ್ದವರು ಪ್ರಭುರಾಜರ ಬ್ಲಾಗಿಗೊಮ್ಮೆ ಭೇಟಿ ನೀಡಿ. 

ರಾಧಾಕೃಷ್ಣರ ಉವಾಚ

‘ನಡೆದಾಡುವ ವಿಶ್ವಕೋಶ’ ಎಂದೇ ಖ್ಯಾತಿಯಾದವರು ಕನ್ನಡದ ಹೆಸರಾಂತ ಸಾಹಿತಿ ಶಿವರಾಮ ಕಾರಂತರು. ಕಾರಂತರು ಕಾದಂಬರಿ ಬರೆಯುವುದಕ್ಕೆ ಸುಪ್ರಸಿದ್ಧರು. ಆದರೆ ಅವರ ಹೆಚ್ಚಿನ ಆಸಕ್ತಿ ಇದ್ದುದು ಮಾತ್ರ ವೈಚಾರಿಕ ಬರಹಗಳಲ್ಲಿ, ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ. ಕಾರಂತಜ್ಜನ ಈ ವಿಜ್ಞಾನ ಪ್ರೀತಿ ಬೆಳೆದ ಬಗೆಯನ್ನು ವಿವರಿಸುವ ಯತ್ನದಲ್ಲಿದ್ದಾರೆ ಎ.ಪಿ ರಾಧಾಕೃಷ್ಣ.

ಕಾರಂತರ ವಿಜ್ಞಾನದ ಬಗೆಗಿನ ಕುತೂಹಲ ಮತ್ತು ಆ ನಿಟ್ಟಿನಲ್ಲಿ ಅವರ ಬರಹಗಳ ಕಿರು ಅವಲೋಕನ ಇಲ್ಲಿದೆ. ವಿಜ್ಞಾನದ ಬಗ್ಗೆ ಹೆಚ್ಚಿನ ಆಸ್ಥೆ ಹೊಂದಿರುವ ರಾಧಾಕೃಷ್ಣ ಇನ್ನಷ್ಟು ವಿಜ್ಞಾನಿಗಳ, ಬರಹಗಾರರ ಕಥೆಯನ್ನ ತಮ್ಮೀ ಬ್ಲಾಗಿನಲ್ಲಿ ತೆರೆದಿಟ್ಟಿದ್ದಾರೆ. ಎಲ್ಲವನ್ನ ಓದಬೇಕಿದ್ದವರು ರಾಧಾಕೃಷ್ಣರ ಉವಾಚಕ್ಕೊಮ್ಮೆ ಭೇಟಿ ಕೊಡಿ.

ಚಂದಿನ ಕೂಗಿನ ಕವಿತೆಗಳು

ಚಂದಿನ ಕೂಗು ಬ್ಲಾಗಿನ ಮಾಲೀಕರು. ಹೊಸ ಹೊಸ ಕವಿತೆಗಳನ್ನು ಕನ್ನಡಕ್ಕೆ ತರುವ ಮೂಲಕ ನಿರಂತರವಾಗಿ ಬ್ಲಾಗಿಂಗ್ ಮಾಡುತ್ತ ಬಂದಿರುವ ಸಕ್ರಿಯ ಬ್ಲಾಗುದಾರರು. ಯಾವುದೋ ಹಠಕ್ಕೆ ಬಿದ್ದವರೆಂಬಂತೆ ಒಂದರ ಮೇಲೊಂದು ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತಿರುವ ಅವರ ಬ್ಲಾಗಿನಲ್ಲೀಗ ಇಂಗ್ಲಿಷ್ ಕವಿತೆಗಳ ಕನ್ನಡ ಅನುವಾದದ ಗುಚ್ಛಗಳೇ ತುಂಬಿಕೊಂಡಿದೆ.

ರಿಲ್ಕ್, ಎಜ್ರ ಪೌಂಡ್, ಎಮಿಲಿ ಡಿಕಿನ್ಸನ್, ಜಾನ್ ಕೀಟ್ಸ್, ಪ್ಯಾಬ್ಲೊ ನೆರುದ, ವಿಲಿಯಂ ಏಟ್ಸ್, ಲ್ಯಾಂಗ್ಸ್ಟನ್ ಹ್ಯೂಗ್ಸ್ ರಿಂದ ಅಂಜಲಿ ಸಿನ್ಹಾರವರೆಗೆ ಪ್ರಖ್ಯಾತ ಕವಿಗಳ ಕವಿತೆಗಳ ಅನುವಾದಗಳನ್ನ ಇಲ್ಲಿ ಕಾಣಬಹುದು. ತಮ್ಮದೇ ಆಪ್ತ ಭಾಷೆಯಲ್ಲಿ ಇಂಗ್ಲಿಷಿನ ಸಾಲುಗಳನ್ನು ಕನ್ನಡಕ್ಕೆ ತೆರೆದಿಡುವ ಚಂದಿನರ ಕೂಗಿನ ಕವಿತೆಗಳು ಇವತ್ತಿನ ಓದಿಗೆ.

ಸಕಲಾ ಚಿತ್ರಗಳು

ದಿನದ ಬ್ಲಾಗಿನಲ್ಲಿ ಸಕಲಾ ಸ್ಟುಡಿಯೋದ ಚಿತ್ರಗಳ ಸುಗ್ಗಿ.

ಕಲಾವಿದ ರಾಘವೇಂದ್ರ ಹೆಗಡೆ ರಚಿಸಿದ ಚಿತ್ರಗಳು ಈ ಬ್ಲಾಗಿನಲ್ಲಿವೆ. "ಇಲ್ಲಿ ನೀವು ನೋಡುತ್ತಿರುವ ಕಲಾಕೃತಿಗಳೆಲ್ಲ ನಾನು ರಚಿಸಿದ್ದು.ಅಷ್ಟೇನು ಪಾರದರ್ಶಕವಲ್ಲದ,ಹೊಸತನವನ್ನು ದುಡಿಸಿಕೊಳ್ಳುವ ಹಂಬಲವಿರುವ,ಸುತ್ತಲ ಸಮಾಜಕ್ಕೆ ಸ್ಪಂದಿಸಬೇಕೆನ್ನುವ,ಆಧುನಿಕತೆ,ಸಮಕಾಲೀನತೆಯ ಜೊತೆ ಜೊತೆಗೆ ಸಾಗಬೇಕೆಂದಿರುವ,ಮಲಿನಗೊಳ್ಳುತ್ತಿರುವ ಪರಿಸರದ,ಕಲುಷಿತವಾಗುತ್ತಿರುವ ನೀರಿನ,ಕಳೆದುಕೊಳ್ಳುತ್ತಿರುವ ಸಂಪ್ರದಾಯದ,ನನ್ನ ತನದ,ನನ್ನ ಆನಂದದ,ಅನುಭವದ,ಒಂದಿಷ್ಟು ಗೊಂದಲದ,ತವಕದ,ಅವಕಾಶದ ಅಭಿವ್ಯಕ್ತಿಗಳಿವು." ಎನ್ನುತ್ತಾರೆ ರಾಘು.

ಒಂದಿಷ್ಟು ಅಪರೂಪದ, ಚಂದನೆಯ ಕಲಾಕೃತಿಗಳು, ಚಿತ್ರಗಳು ಸಕಲಾದಲ್ಲಿವೆ. ಒಮ್ಮೆ ನೋಡಿಬನ್ನಿ.

ಇನಿದನಿಯ ಚಿತ್ರಗಳು

ತಮ್ಮ ಕ್ಯಾಮರಾ ಕಣ್ಣಿಗೆ ದಕ್ಕಿದ್ದನ್ನ ಬ್ಲಾಗ್ ಬೊಗಸೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿದ್ದಾರೆ ಇನಿದನಿಯ ದೀಪಸ್ಮಿತ.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದವರು ಪ್ರವೃತ್ತಿಯಲ್ಲಿ ಫೋಟೋಗ್ರಾಫರ್. ಹೀಗೆ ಕ್ಲಿಕ್ಕಿಸಿದ ಒಂದಿಷ್ಟು ಚಂದನೆಯ ಚಿತ್ರಗಳು ಈ ಇನಿದನಿಯಲ್ಲಿವೆ. ಬಾಲ್ಯದ ಆಟ-ಹುಡುಗಾಟ, ನೆಗೆತ-ಕುಣಿತ, ಮನೆ ಮುಂದಣ ದೀಪಸಾಲು, ಬಾನಂಗಳದಲ್ಲಿ ಹಕ್ಕಿಗಳ ಹಾಡು, ಶಿಲೆಯಲ್ಲಿ ಕಂಡ ಸಂಗೀತದಂತ ಕುಸುರಿ, ಹೂವಲ್ಲಿ ಅರಳಿ ನಿಂತ ಚೆಲುವು.... ಎಲ್ಲವೂ ಇಲ್ಲಿ ಚಿತ್ರಗಳಲ್ಲಿ ಸೆರೆಯಾಗಿವೆ. ನಡುವೆ ಒಂದಲಿಕ್ಕೆ ಒಂದಿಷ್ಟು ಸಾಲುಗಳಿವೆ. 

ಕುರ್ತುಕೋಟಿ ಬರಹಗಳು

"ನಾವೆಲ್ಲ ಹೀಗೆ, ಮದುವೆಗೆ ಮುಂಚೆ ಸಿಂಪಲ್ಲಾಗಿ ರಿಜಿಸ್ಟರ್ ಮ್ಯಾರೇಜ್ ಆಗ್ಬೇಕು ಅಂದುಕೊಳ್ಳುತ್ತೀವಿ. ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಭರ್ಜರಿಯಾಗಿ ಮದುವೆ ಆಗ್ತೀವಿ. ಮಕ್ಕಳೇ ಬೇಡ ಯಾವುದಾದ್ರೂ ಅನಾಥ ಮಗುವನ್ನ ದತ್ತು ತೆಗೆದುಕೊಳ್ಳೋಣ ಅಂದುಕೊಳ್ತೀವಿ, ಆಮೇಲೆ ನಾನೂ ಅಪ್ಪ ಆಗ್ಲೇಬೇಕು ಅನ್ನೋ ಹಠ ತೊಡ್ತೀವಿ, ಕಡಿಮೆ ಸಂಬಳ ಬರೋವಾಗ ಇನ್ನೂ ಹತ್ತು ಸಾವಿರ ಬಂದರೂ ಹೀಗೆ ಸಮಾಜಸೇವೆ ಮಾಡ್ಬೇಕು ಅಂತ ಶಪಥ ಮಾಡ್ತೀವಿ,  ಸಂಬಳ ಹೆಚ್ಚಾದ ಮೇಲೆ ಮಾತೇ ಮರೆತುಹೋಗುತ್ತೆ."

ಹೀಗೆ ಅಂದುಕೊಳ್ಳುವುದೊಂದು, ಮಾಡುವುದೊಂದಾಗಿ ಆದರ್ಶಗಳ ಕೊಲೆಯಾಗುತ್ತಿರುವ ಬಗ್ಗೆ ಚಿಕ್ಕದೊಂದು ಲೇಖನ ಬರೆದಿದ್ದಾರೆ ಗುರುಪ್ರಸಾದ್ ಕುರ್ತುಕೋಟಿ. ಅದಕ್ಕೂ ಹಿಂದಿನ ಲೇಖನದಲ್ಲಿ ಅವರ ‘ನಾಯಿಪಾಡನ್ನು’ ವಿವರಿಸುವ ಯತ್ನ ನಡೆದಿದೆ. ಪಕ್ಕದ ಮನೆಯ ನಾಯಿಯ ಕಾಟಕ್ಕೆ ಹೆದರಿ, ಬಳಲಿ ಬೆಂಡಾದವರು ಅದಕ್ಕೆ ಪ್ರತಿಯಾಗಿ ತಾವೂ ಒಂದು ನಾಯಿ ತಂದು ಸಾಕುತ್ತಾ ಸುಖವಾಗಿದ್ದಾರೆ. ಇಂತಹುದ್ದೇ ಒಂದಿಷ್ಟು ಹಾಸ್ಯ ಮಿಶ್ರಿತ ಲೇಖನಗಳು ಕುರ್ತುಕೋಟಿಯವರ ಬ್ಲಾಗಿನಲ್ಲಿವೆ.

ಮಧುಬನದಿ ರಾಧಿಕೆ

ತಿಂಗಳುಗಳ ನಂತರ ಒಂದು ಬಹಿರಂಗ ಪತ್ರದೊಂದಿಗೆ ಮಧುಬನದಿ ಕಾಣಿಸಿಕೊಂಡಿದ್ದಾರೆ ರಾಧಿಕ.

ರಾತ್ರಿ ಹನ್ನೆರಡೋ, ಒಂದಕ್ಕೋ ಮಲಗಿದವರು, ಬೆಳಗ್ಗೆ ಕಿವಿಗಡಚಿಕ್ಕುವ ಎಫ್ ಎಂ ಸದ್ದಿನ ಸುಪ್ರಭಾತದಿಂದ ಎಚ್ಚರಗೊಂಡು, ಗಡಿಬಿಡಿಯಲ್ಲೇ ಕೆಲಸದತ್ತ ಮುಖ ಮಾಡುತ್ತಿದ್ದವರು, ಈಗ ಚೆನ್ನೈನ ನೆಲದಲ್ಲಿ ಹಾಯಾಗಿ ಇದನ್ನೆಲ್ಲ ಮೆಲುಕು ಹಾಕುತ್ತಿದ್ದಾರೆ. ಬೆಂಗಳೂರಿಗೂ, ಚೆನ್ನೈಗೂ ಇರೋ ಸಾಮ್ಯತೆಯನ್ನ, ಅದರೊಂದಿಗೆ ಬದುಕು ಬೆರೆತುಕೊಂಡಿರೋ ಪರಿಯನ್ನ ಪರಿಪರಿಯಾಗಿ ತೆರೆದಿಡುತ್ತಿದ್ದಾರೆ.

ಹೀಗೇ ಆತ್ಮೀಯವಾಗಿ ಬರೆದಿಟ್ಟ ಒಂದಿಷ್ಟು ಲೇಖನಗಳು ರಾಧಿಕೆಯ ಈ ವನದಲ್ಲಿವೆ. ಎದುರು ಕುಂತರೆ ಹಾಗೇ ಸುಮ್ಮನೆ ಓದಿಸಿಕೊಂಡು ಹೋಗುತ್ತವೆ. ಒಮ್ಮೆ ಓದಿಬನ್ನಿ.

ಅಗ್ನಿಯ ಹಕ್ಕಿ ಪ್ರಪಂಚ

ಹಕ್ಕಿ ರೆಕ್ಕೆಯ ಜಾಡು ಹಿಡಿದು ಬರೆದ ಅಪರೂಪದ ಲೇಖನಗಳ ಸಂಗ್ರಹವೇ ಈ ಅಗ್ನಿಪ್ರಪಂಚ.

ಹಾರು ಹಕ್ಕಿಗಳ ಲೋಕದ ಕುರಿತು ಕನ್ನಡದ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಪಕ್ಷಿಕಾಶಿ’ ಸರಣಿಯ ಎಲ್ಲ ಲೇಖನಮಾಲೆಗಳು ಇಲ್ಲಿವೆ. ಅಪರೂಪದ, ವೈಶಿಷ್ಟ್ಯಪೂರ್ಣ ಪಕ್ಷಿಗಳ, ಪ್ರಬೇಧಗಳ ಕುರಿತು ಅಗ್ನಿಹೋತ್ರಿ ಬರೆಯುತ್ತಾರೆ. ಗುಲಾಬಿ ಗುಬ್ಬಜ್ಜಿ, ಬಾಳೆ ಗುಬ್ಬಿ, ಕೀಚುಗ, ಕರಿತಲೆ ಪೀಪಿಯಿಂದ ಹಿಡಿದು ಕಳವಿಂಕ, ಕಾಮಳಿ, ಮೀಂಚುಳ್ಳಿ, ಕಾಜಾಣ, ಏಡಿಗೊರವ, ಬಿಜ್ಜು, ರಾಟವಾಳದ ವರೆಗೆ ನಾನಾ ಹಕ್ಕಿಗಳ ಬದುಕಿನ ಬಗ್ಗೆ ಬರೆದ ಲೇಖನಗಳು ಇಲ್ಲಿವೆ. ಎಲ್ಲವನ್ನ ಓದಬೇಕಿದ್ದವರು ಅಗ್ನಿ ಪ್ರಪಂಚಕ್ಕೊಮ್ಮೆ ಭೇಟಿ ನೀಡಿ.

ಜಿಂದಗಿಯ ಕಾಲಿಂಗ್

ಜಲೇಬಿ ನಾಡನ್ನ ಸುತ್ತಿದ ಕಥೆಯನ್ನ ತಮ್ಮ ಜಿಂದಗಿಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಜಿಂದಗಿ ಕಾಲಿಂಗ್ ನ ಲಕ್ಷ್ಮಿ.

ಯಾವುದಿದು ಜಲೇಬಿನಾಡು? ಬೇರೆ ಯಾವುದೂ ಅಲ್ಲ, ಪಕ್ಕದಲ್ಲಿರೋ ಕೇರಳ, ತಮಿಳುನಾಡು. ಅಲ್ಲಿನ ಭಾಷೆಗಳ ಅಕ್ಷರ ಇವರಿಗೆ ಜಲೇಬಿ ಹಾಗೇ ಕಂಡು ಆ ರಾಜ್ಯಗಳಿಗೆ ಜಲೇಬಿ ನಾಡು ಅಂತಲೇ ನಾಮಕರಣ ಮಾಡಿದ್ದಾರೆ. ಇಂತಿಪ್ಪ ನಾಡನ್ನ ಕುಟುಂಬ ಸಮೇತರಾಗಿ ಹತ್ತು ದಿನಗಳ ಕಾಲ ಸುತ್ತಿ ಬಂದ ಬ್ಲಾಗಿಗರು, ಅಲ್ಲಿನ ಕಥೆಯಲ್ಲವನ್ನ ತಮ್ಮ ಜಿಂದಗಿಗೆ ಹೇಳುತ್ತಿದ್ದಾರೆ.

ನಾಲ್ಕು ಕಂತುಗಳು ಮುಗಿದು ಮುಂದುವರಿದಿರುವ ಜಿಂದಗಿಯೊಂದಿಗಿನ ಅವರ ಮಾತುಗಳು ಸ್ವಾರಸ್ಯಕರವಾಗಿದೆ. ತಕ್ಕ ಚಿತ್ರಗಳು ಜೊತೆಗಿವೆ. ಜಲೇಬಿ ನಾಡಿನ ಪ್ರವಾಸ ಪುರಾಣವನ್ನ ಓದಬೇಕಿದ್ದವರು ಜಿಂದಗಿ ಕಾಲಿಂಗಿಗೊಮ್ಮೆ ಭೇಟಿ ನೀಡಿ.

ಪ್ರಕಾಶ್ ಶೆಟ್ಟಿ ವಾರೆಕೋರೆ

ತಮ್ಮ ಕೋರೆಯಂತಹ ವಾರೆ ರೇಖೆಗಳಿಂದ ಹೆಸರಾದವರು ಪ್ರಕಾಶ್ ಶೆಟ್ಟಿ. ಅಷ್ಟು ಮೊನಚಾಗಿರುತ್ತವೆ ಅವರ ಪಂಚ್ ಗಳು. ಹೀಗಿರುವ ಪ್ರಕಾಶರ ಸಂಪಾದಕತ್ವದ ಈ ತಿಂಗಳ ‘ವಾರೆಕೋರೆ’ ಬಿಡುಗಡೆಗೊಂಡಿದೆ.

‘ವಾರೆ ಕೋರೆ’ ಪ್ರಕಾಶ್ ಶೆಟ್ಟಿಯವರ ಸಖತ್ ಪಂಚ್ ಗಳಿರುವ ಶುದ್ಧ ತರಲೆ ಮಾಸಿಕ. ತಿಂಗಳುಗಳ ಹಿಂದೆ ಶುರುವಾದ ಪತ್ರಿಕೆ ಮಾರುಕಟ್ಟೆಯಲ್ಲಿ ಸಖತ್ ಸುದ್ದಿಯನ್ನೂ ಮಾಡುತ್ತಿದೆ. ‘ಶತಮೂರ್ಖರ ಜಾತ್ರೆ’ ಎಂಬ ಚುನಾವಣಾ ವಿಶೇಷ ಸಂಚಿಕೆ ಈ ಬಾರಿಯ ವಿಶೇಷ. ಪತ್ರಿಕೆಯ ಬಗ್ಗೆ ಹೆಚ್ಚಿನ ಸುದ್ದಿ ಬೇಕಿದ್ದವರು, ಪತ್ರಿಕೆ ಸಿಗದಿದ್ದವರು ಈ ವಾರೆಕೋರೆ ಬ್ಲಾಗಿಗೊಮ್ಮೆ ಭೇಟಿ ನೀಡಬಹುದು. ಪ್ರಕಾಶ್ ಶೆಟ್ಟಿಯವರನ್ನ ಖುದ್ದಾಗಿ ಸಂಪರ್ಕಿಸಲೂ ಬಹುದು.

ಜೊತೆಗೆ, ಅವರ ಸಾಕಷ್ಟು ಪಂಚ್ ಗಳಿರುವ ವೈಯುಕ್ತಿಕ ಬ್ಲಾಗೂ ಇಲ್ಲಿದೆ.

ಜೀವದನಿಯಲ್ಲಿ ಹುಂಜದ ಸದ್ದು

ಕೆಂಪು ಹುಂಜವೆಂಬ ಕಿಲಾಡಿ ಕೋಳಿಯ ಕಥೆಯನ್ನ ಬ್ಲಾಗಿಗರ ಮುಂದಿಡುತ್ತಿದ್ದಾರೆ ಜೀವದನಿಯ ಬ್ಲಾಗಿಗರು.

ಈ ಹುಂಜ ಅಂತಿಲ್ಲ ಹುಂಜವಲ್ಲ, ಬಡ ಮಕ್ಕಳಿಗೆ ಬದುಕಿನ ದಾರಿ ತೋರಿಸಿ, ಅದನ್ನ ಕಿತ್ತುಕೊಂಡ ರಾಜನ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿ, ಅವನ ಸೊಕ್ಕನ್ನಡಗಿಸಿ, ಮತ್ತೆ ಬಡಮಕ್ಕಳಿಗೆ ಬದುಕಿನ ದಾರಿ ತೋರಿಸುವ ಕಿಲಾಡಿ ಕೆಂಪು ಕೊಕ್ಕಿನ ಹುಂಜ. ಮಜಾವಾದ ನೀತಿಕಥೆಯೊಂದು ಇಲ್ಲಿದೆ.

ಈ ಜೀವದನಿ ಅನೇಕ ಬರಹ ಗುಚ್ಛಗಳ ಆಗರ. ರಾಮಾಯಣದಲ್ಲೊಂದು ಪ್ರಶ್ನೆಯಾಗಿ ಉಳಿದಿರುವ ವಾಲಿ ವಧೆಯ ಅಂತರಂಗವನ್ನ ತೆರೆದಿಟ್ಟಿರುವ ಬ್ಲಾಗಿಗರು ಇನ್ನೂ ಹಲವು ಪುರಾಣಗಳು ಮತ್ತಿತರ ಕಥೆಗಳನ್ನ ಮುಂಡಿಟ್ಟಿದ್ದಾರೆ. ಆಮೇಲೆ ಹೀಗೆ ಕೆದುಕಿ ತೆಗೆದ ನೆನಪುಗಳು ಮೆಲುಕಾಗಿ ಬರುತ್ತಿವೆ. ಜೀವದನಿ ಮತ್ತೆ ಹನಿಹನಿಯಾಗಿ ಮೂಡುತ್ತಿದೆ. ಒಮ್ಮೆ ಓದಿಬನ್ನಿ.

ಗುರುಮೂರ್ತಿಯವರ ಸಾಗರದಾಚೆಯ ಇಂಚರ

ಪೂರ್ತಿ ಅಪರಿಚಿತವಾದ ಊರಿನಲ್ಲಿ, ಮಂಜಿನಿಂದಲೇ ಮುಚ್ಚಿಹೋಗಿರುವ ನೆಲದ ಮೇಲೆ ಜಾರುತ್ತಾ ಹಾಗೇ ಸಾಗುವುದೆಂದರೆ ಎಂಥ ಹಿತವಾದ ಅನುಭವ. ಹೀಗೆ ಸ್ವೀಡನ್ನಿನ ಮಂಜಿನಲ್ಲಿ ದಿನಗಟ್ಟಲೇ ಜಾರಿದ ಅನುಭವವನ್ನ ಬ್ಲಾಗಿಗರ ಮುಂಡಿಡುತ್ತಿದ್ದಾರೆ ಗುರುಮೂರ್ತಿ ಹೆಗಡೆ.

ಸ್ವೀಡನ್ನಿನ ಸೇಲನ್ ಎಂಬ ಹಿಮಚ್ಛಾದಿತ ಊರಿಗೆ ಹೊಕ್ಕ ಗುರುಮೂರ್ತಿ ಅಲ್ಲಿನ ಕೊರೆಯುವ ಮಂಜಿನೊಳಗೆ ಕಾಲಿಟ್ಟು  ಚಳಿಯ ಮಜಾ ಅನುಭವಿಸಿದ್ದಾರೆ. ಉದ್ದನೆ ಬೂಟು ತೊಟ್ಟು, ಕೈಯಲ್ಲೆರಡು ಕೋಲು ಹಿಡಿದು, ಸುಯ್ ಅಂತ ಜಾರಿ, ಎದ್ದುಬಿದ್ದು ಕಡೆಗೂ ಸ್ಕಿಯಿಂಗ್ ಕಲಿತಿದ್ದಾರೆ. ತಮ್ಮ ಈ ಎಲ್ಲ ಅನುಭವವನ್ನ ಅನೇಕ ಕಂತುಗಳಲ್ಲಿ ಬಿಡಿಯಾಗಿ ವರ್ಣಿಸುವ ಪ್ರಯತ್ನದಲ್ಲಿದ್ದಾರೆ.

ಸದ್ಯ ಸ್ವೀಡನ್ನಿನ ಗುಟನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಗುರುಮೂರ್ತಿ ‘ಸಾಗರದಾಚೆಯ ಇಂಚರ’ ಎಂಬ ಈ ಬ್ಲಾಗಿನಲ್ಲಿ ತಮ್ಮ ಬರಹಗಳನ್ನ ಹಂಚಿಕೊಳ್ಳುತ್ತಾರೆ.

ಸಂವಹನಕ್ಕೊಂದು ಬಳಗ

ಹೀಗೊಂದು ಅರ್ಥಪೂರ್ಣ ವಿಚಾರ ಸಂಕಿರಣದ ಮೂಲಕ ಯಶಸ್ವಿ ಸಂವಹನ ನಡೆಸಿದ ಖುಷಿಯಲ್ಲಿದೆ ‘ಸಂವಹನ’ ಬಳಗ.

‘ಸಂವಹನ, ಇದು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಪುಟ್ಟ ಯತ್ನ. ಮೀಡಿಯಾಗಳಲ್ಲಿ ಕೆಲಸ ಮಾಡುವ ಉತ್ಸಾಹಿಗಳು ಸೇರಿಕೊಂಡು ಕಟ್ಟಿಕೊಂಡ ಸಂಘಟನೆಯಿದು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಹೊಸ ಸಮಾಜ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯ. ಆಧುನಿಕ ಜಗತ್ತಿನಲ್ಲಿ ಸಂವಹನದ ಮಾಧ್ಯಮಗಳು ದಿನೇ ದಿನೇ ಹೆಚ್ಚುತ್ತಿವೆ. ಆದರೆ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಬೆಸೆಯುವ ನಿಜಾರ್ಥದ ಸಂವಹನ ಅದೇ ವೇಗದಲ್ಲಿ ಸೊರಗಿಹೋಗುತ್ತಿದೆ. ಇದನ್ನು ನೀಗಿಕೊಳ್ಳುವ ನಿಟ್ಟಿನಲ್ಲಿ ನಮ್ಮದು ಪುಟ್ಟ ಯತ್ನವಷ್ಟೆ. `ಸಂವಹನ'ದಲ್ಲಿ ತೊಡಗಿಕೊಳ್ಳಬಯಸುವವರಿಗೂ ಸ್ವಾಗತ.’

ಇವು ಸಂವಹನದ ಬ್ಲಾಗಿಗರ ಆಶಯದ ಮಾತುಗಳು.

ನಿತಿನರ ಬೊಗಸೆ

ಜನರ ಅನುಕೂಲಕ್ಕೆಂದು ಮಾಡಿದ ಯೋಜನೆಗಳೇ ಕೆಲವೊಮ್ಮೆ ಅವ್ಯವಸ್ಥೆಗಳ ಆಗರವಾಗಿ ನಗೆಪಾಟಲಿಗೆ ಈಡಾಗುವುದುಂಟು. ಮೊನ್ನೆ ಮೊನ್ನೆ ಚುನಾವಣಾ ಆಯೋಗ ಕ್ಷೇತ್ರಕ್ಕೊಂದರಂತೆ ತೆರೆದ ಮತದಾರ ಸೇವಾ ಕೇಂದ್ರಗಳೂ ಹೀಗೆ ಆರಂಭದಲ್ಲಿ ಜನಪ್ರಿಯತೆ ಕಂಡು, ಆಮೇಲೆ ಮುಗ್ಗರಿಸಿ ತನ್ನ ಅವ್ಯವಸ್ಥೆಗಳಿಂದ ತುಂಬಿಹೋದ ಸುದ್ದಿಯನ್ನ ವಿವರಿಸುವ ಯತ್ನದಲ್ಲಿದ್ದಾರೆ ನಿತಿನ್ ಮುತ್ತಿಗೆ.

ಬಾಳಹಾದಿಯಲ್ಲಿ ನೂರಾರು ಪಯಣ. ಆ ಪಯಣದ ನೆನಪಿನ ಚಿತ್ತಾರವನ್ನು ಸೆರೆಹಿಡಿಯುವ ಪ್ರಯತ್ನವೇ ಅವರ ಈ ‘ಬೊಗಸೆ’ ಬ್ಲಾಗ್. ಇಲ್ಲಿ ಬ್ಲಾಗಿಗರ ಬೊಗಸೆಗೆ ದಕ್ಕಿದ ವಿಚಾರ, ನೆನಪು-ನೇವರಿಕೆಗಳನ್ನ ತೆರೆದಿಡುವ ಪ್ರಯತ್ನವಿದೆ. ಭಗ್ನಪ್ರೇಮಿಯ ಒಂದೆರಡು ಕಣ್ಣೀರ ಪತ್ರಗಳಿವೆ. ಪಕ್ಷ, ನಿಷ್ಟೆ ಮರೆತ ರಾಜಕಾರಣಿಗಳನ್ನ ಎಚ್ಚರಿಸುವ ಪ್ರಯತ್ನವಿದೆ. ಆಮೇಲೆ ಮನರಂಜನೆಗೆ ಅಂತ ಒಂದಿಷ್ಟು ಬರಹಗಳಿವೆ. ಹಾಗೇ ಸುಮ್ಮನೆ ಓದಲಿಕ್ಕೆ ಕವಿತೆಗಳೂ ಜೊತೆಗಿವೆ. ಒಮ್ಮೆ ಓದಿಬನ್ನಿ.

ವಿನುತಾರ ಸ್ಕೈ ಡೈವಿಂಗ್

ಅಮೆರಿಕಾದ ಆಕಾಶದಂಗಳದಲ್ಲಿ ಸ್ಕೈ ಡೈವಿಂಗ್ ಮಾಡಿಬಂದ ರೋಚಕ ಅನುಭವವನ್ನ ಬ್ಲಾಗಿನಟ್ಟಿದ್ದಾರೆ ವಿನುತಾ ಮಲೇನಹಳ್ಳಿ.

ಹೀಗೆ ಒಂದು ದಿನ ಸ್ನೇಹಿತರಲ್ಲ ಒಟ್ಟುಗೂಡಿ ಕಾರನ್ನೇರಿ ಹೊರಟವರು ಹತ್ತಾರು ಅಡೆತಡೆ ದಾಟಿ, ಮನಸ್ಸನ್ನ ಹತ್ತಾರು ಯೋಚನೆಗಳಿಗೆ ಹರಿಬಿಟ್ಟು , ಭಯಭೀತಿಯಿಂದಲೇ ಗಮ್ಯಸ್ಥಾನ ತಲುಪಿ, ಡೈವ್ ಮಾಡೋದಕ್ಕೆ ಏನೇನು ನಿರ್ಬಂಧಗಳಿವೆಯಪ್ಪ ಅಂತೆಲ್ಲ ಯೋಚನೆಗೆ ಬಿದ್ದಿದ್ದಾರೆ. ನೀ ಮೊದಲು, ನಾ ಮೊದಲು ಅನ್ನುತ್ತಲೇ ಕಡೆಗೂ ಆಕಾಶಕ್ಕೆ ಹಾರಿದ್ದಾರೆ. ಬರೋಬ್ಬರಿ ಹದಿಮೂರು ಸಾವಿರ ಅಡಿಗಳಿಗೇರಿ, ಅಲ್ಲಿಂದ ಕಣ್ಣುಕಣ್ಣು ಬಿಡುತ್ತಾ ಕಡೆಗೂ ಧೈರ್ಯ ಮಾಡಿ ಕೆಳಗೆ ಜಿಗಿದವರಿಗೆ ಕಡೆಗೂ ನೆಲ ಮುಟ್ಟಿದಾಗ ಹೊಸ ಜನ್ಮ ಪಡೆದಂತಾಗಿದೆ.

ಇದೆನ್ನೆಲ್ಲ ಅವರ ಮಾತಲ್ಲೇ ಓದಬೇಕಿದ್ದವರು ಈ ಬ್ಲಾಗಿಗೆ ಭೇಟಿ ನೀಡಿ. 

ಕಾಫಿಬಾರಿನಲ್ಲಿ ಸಿರಿಯಜ್ಜಿಯ ಸ್ಮರಣೆ

ಸಾವಿರಾರು ಜನಪದ ಗೀತೆಗಳನ್ನ ತನ್ನೊಳಗೆ ಇಟ್ಟುಕೊಂಡಿದ್ದ ಸಿರಿಯಜ್ಜಿ ಎಂಬ ಅಚ್ಚರಿ ಇನ್ನಿಲ್ಲ. ‘ಜಾನಪದ ಕೋಗಿಲೆ’ ಎಂದೇ ಖ್ಯಾತರಾಗಿದ್ದ ಬಯಲು ಸೀಮೆಯ ಸುಬ್ಬುಲಕ್ಷಿ, ಕನ್ನಡ ಜನಪದ ಲೋಕದ ಹಿರಿಯ ಗಾಯಕಿ ಚಳ್ಳಕೆರೆ ಸಿರಿಯಜ್ಜಿ ತೀರಿಕೊಳ್ಳುವ ಮೂಲಕ ಕನ್ನಡದ ಕೋಗಿಲೆಯೊಂದು ತನ್ನ ಹಾಡು ನಿಲ್ಲಿಸಿದಂತಾಗಿದೆ.

ಹಲವು ದಶಕಗಳ ಕಾಲ ಜಾನಪದ ಜಗತ್ತಿನ ಸಿರಿಯೇ ಆಗಿ, ತೆರೆಯ ಮರೆಯಲ್ಲಿಯೇ ಬದುಕಿ ಮಾಯವಾದ ಮಧುರ ಕಂಠದ ನಾಡೋಜ ಸಿರಿಯಜ್ಜಿಗೆ ತಮ್ಮ ನುಡಿನಮನ ಅರ್ಪಿಸುತ್ತಾ ಬರೆದಿದ್ದಾರೆ ಕಾಫಿಬಾರಿನ ಬ್ಲಾಗಿಗರು. ನಮ್ಮನ್ನಗಲಿದ ಸಿರಿಯಜ್ಜಿಯ ಕುರಿತ ಪುಟ್ಟದೊಂದು ನೆನಪು ಇಲ್ಲಿದೆ.

ರಂಜನಾರ ಬ್ಲಾಗ್ ಬರಹ

"ಸಿಂಗಾಪುರದಲ್ಲಿ ಯಾವಾಗಲಾದರೊಮ್ಮೆ ಒಂದು ಗಂಟೆ ಕರೆಂಟ್ ತೆಗೆಯಬೇಕಾದರೂ ವಾರಕ್ಕೆ ಮುಂಚೆಯೇ ಒಂದು ಲೆಟರ್ ಕಳಿಸಿ ಮಾಹಿತಿ ಕೊಡುತ್ತಾರೆ. ಆದರೆ ನಮ್ಮಲ್ಲಿ? ಹಳ್ಳಿಗಳಲ್ಲಾದರೆ ದಿನದ ಅರ್ಧ ಭಾಗ ಲೋಡ್ ಶೆಡ್ಡಿಂಗ್, ಉಳಿದರ್ಧದಲ್ಲಿ ಅರ್ಧ ದಿನ ಲೋ ವೋಲ್ಟೇಜ್. ಮಿಕ್ಸರ್ ಓಡೋದಿಲ್ಲ, ಲೈಟ್ ಕಾಣೋದಿಲ್ಲ.ಜೋರಾಗಿ ಗುಡುಗಿದರೆ ಸಾಕು ಫೋನ್ ಕಟ್.ಇಷ್ಟೆಲ್ಲ ನೈಸರ್ಗಿಕ ಸಂಪನ್ಮೂಲ ಇರೋ ನಮ್ಮ ದೇಶದಲ್ಲಿ ಯಾಕೆ ಸಿಂಗಾಪುರದ ಹಾಗಿಲ್ಲ? ಹಾಗೆ ಆಗುವುದಾದರೂ ಹೇಗೆ?"

ಸದ್ಯ ದೂರದೂರು ಸಿಂಗಾಪುರದಲ್ಲಿರುವ ರಂಜನಾ ಅಲ್ಲಿನ ಸೌಲಭ್ಯಗಳನ್ನ ಕಂಡು ಬೆರಗಾಗಿ, ಮರುಗುತ್ತಾ ತಮ್ಮ ಅನಿಸಿಕೆಯನ್ನ ತೋಡಿಕೊಂಡಿರುವುದು ಹೀಗೆ. ಇತ್ತೀಚೆಗಷ್ಟೇ ಬ್ಲಾಗಿಸಲಾರಂಭಿಸಿರುವ ಈ ಬ್ಲಾಗಿಗರು ತಮ್ಮ ಬಗ್ಗೆ ಹೇಳಿಕೊಂಡಿರೋದು ಹೀಗೆ "ಹುಟ್ಟಿ ಬೆಳೆದಿದ್ದು ಶಿರಸಿಯ ಹತ್ತಿರದ ಒಂದು ಹಳ್ಳಿಯಲ್ಲಿ. ಮದುವೆ ಆಗಿ ಹೋಗಿದ್ದು ಕಾರವಾರಕ್ಕೆ, ಈಗ ಇರುವುದು ಸಿಂಗಾಪುರದಲ್ಲಿ. ಅಡುಗೆ, ಮನೆ ಕೆಲಸ ಇವುಗಳ ಜೊತೆ ಟೈಮ್ ಪಾಸ್ ಮಾಡೋ ಒಬ್ಬ ಹೌಸ್ ವೈಫ್. (ಹೊರಗೆ ಕೆಲ್ಸಾ ಮಾಡಿದ್ದು ಎಲ್ಲ ಮದುವೆಗೆ ಮುಂಚೆ ಈಗ ಏನಿದ್ರೂ ಮನೆ ಕೆಲ್ಸಾನೆ) ದೇಶ ಬಿಟ್ಟು ವಿದೇಶದಲ್ಲಿ ಇರುವ ನನ್ನ ಅನುಭವ, ಅನಿಸಿಕೆ, ಯೋಚನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕೆಂದುಕೂಂಡಿದ್ದೇನೆ."

ಅವರೇ ಹೇಳುವ ಹಾಗೇ ಈ ಬ್ಲಾಗ್ ರಂಜನಾರ ಅನುಭವ, ಅನಿಸಿಕೆಗಳಿಗೊಂದು ವೇದಿಕೆ. ಅವರು ಹೆಚ್ಚೆಚ್ಚು ಬರೆಯಲಿ ಎಂಬುದೇ ನಮ್ಮ ಹಾರೈಕೆ.

ಕಾರಂತರ ಹಸಿರುಮಾತು

ಬೆಳ್ಳನೆಯ ಉಡುಗೆಯ ಆಕೃತಿ, ಸುರಳಿ ಸುರುಳಿಯಾಗಿ ಸುತ್ತುವ ಧೂಮ, ತಕ್ಷಣ ಬಿರುಗಾಳಿ ಎದ್ದಾಗ ಢೀ ಕೊಡುವ ಮರಗಳು, ಬಿದ್ದಿರುವ ಎಲುಬಿನ ಚೂರು, ನಗುತ್ತಿರುವ ತಲೆಬುರುಡೆ, ಹಿನ್ನಲೆಯಲ್ಲಿ ಕೀರಲು ದನಿ....ಇದು ನಮ್ಮ ಸಿನಿಮಾಗಳು, ಕಥೆಗಳು ಬಿಂಬಿಸುವ ದೃಶ್ಯ. ಆದರೆ ಗದಗಿನ ಹುಲುಕೋಟಿಯ ಸ್ಮಶಾನದ ವ್ಯವಸ್ಥೆಯೇ ಬೇರೆ. ಮುಕ್ತಿವನ ಎಂಬೀ ಹೆಸರಿನ ಸ್ಮಶಾನವನದ ಪರಿಚಯ ಮಾಡಿಕೊಟ್ಟಿದ್ದಾರೆ ನಾ.ಕಾರಂತ ಪೆರಾಜೆ.

ಪುತ್ತೂರಿನ ಪೆರಾಜೆ ವೃತ್ತಿಯಲ್ಲಿ ಪತ್ರಕರ್ತರು. ಕೃಷಿ ಮಾಸಿಕ ‘ಅಡಿಕೆ ಪತ್ರಿಕೆ’ಯ ಸಹಾಯಕ ಸಂಪಾದಕರು. ಜೊತೆಗೆ ಬರಹದ ಕೃಷಿಯನ್ನೂ ಮಾಡುತ್ತಾ ಬಂದಿರುವವರು. ‘ಹಸಿರುಮಾತು’ ಅವರ ಬರಹಗಳ ಗುಚ್ಛಕ್ಕೊಂದು ವೇದಿಕೆ. ಪುತ್ತೂರಿನ ಬಾನಂಗಳದಲ್ಲಿ ಮೈನಾ ಹಕ್ಕಿಗಳ ಕಸರತ್ತು, ಕಂಬಳ ಎಂಬ ಕೋಣಗಳ ಓಟದ ಸ್ಪರ್ಧೆಯ ಕಸರತ್ತು ಲೇಖನಗಳಂಥ ಪುತ್ತೂರು ಎಕ್ಸ್ ಕ್ಲೂಸಿವ್ ಸುದ್ದಿಗಳ ಜೊತೆಗೆ ಹತ್ತಾರು ಕೃಷಿ ಸಂಬಂಧಿ ಲೇಖನಗಳು, ಮಾನವಾಸಕ್ತ ವರದಿಗಳು ಎಲ್ಲವನ್ನ ಇಲ್ಲಿ ಓದಬಹುದು. ಈವತ್ತಿನ ಓದಿಗೆ ಕಾರಂತರ ಹಸಿರುಮಾತು.
 

ಗಡಿನಾಡ ಶಾಲೆಯ ಬ್ಲಾಗ್ ಪ್ರಯತ್ನ

ಗಡಿನಾಡು ಕಾಸರಗೋಡಿನಿಂದ ಬ್ಲಾಗಿಸುವ ಮೂಲಕ ಕನ್ನಡ ಡಿಂಡಿಮ ಬಾರಿಸುತ್ತಿರುವ ಪುಟ್ಟಾಣಿಗಳ ಇ-ಪತ್ರಿಕೆ ‘ಮಹಾಜನ’ ಈ ದಿನದ ಬ್ಲಾಗು.

ಕಾಸರಗೋಡಿನ ನೀರ್ಚಾಲು ಗ್ರಾಮದ ಬಳಿ ಇರುವ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ತನ್ನದೇ ಆದ ಇತಿಹಾಸ ಹೊಂದಿರುವಂತಹ ಸಂಸ್ಥೆ. ಈಗಲೂ ಏಳುನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಇಂತಹದ್ದೊಂದು ಶಾಲೆಯ ವಿಧ್ಯಾರ್ಥಿಗಳ ಅಭಿವ್ಯಕ್ತಿಗಾಗಿ ಹುಟ್ಟಿಕೊಂಡಿದ್ದೇ ಈ ಮಹಾಜನ. ಎಳೆಯ, ಬೆಳೆಯುವ ಮನಸ್ಸುಗಳ ವಿವಿಧ ಬರಹ ಕೃಷಿ ಇಲ್ಲಿದೆ. ಕಥೆ, ಕವಿತೆ, ಚಿತ್ರ, ವ್ಯಂಗ್ಯಚಿತ್ರ, ಪ್ರಬಂಧ.... ಇನ್ನೂ ಮುಂತಾಗಿ ಅವರ ಪ್ರತಿಭೆ ಹರಿದಿದೆ. ಶಾಲೆಯ ಪ್ರತಿಭಾವಂತರನ್ನು ಪರಿಚಯಿಸುವ, ಹಿರಿಯರನ್ನು ನೆನೆಯುವ ಪ್ರಯತ್ನವಿದೆ. ಎಲ್ಲವನ್ನೂ ಒಂದು ಹದದಲ್ಲಿ ಬೆರೆಸುತ್ತಾ ಬ್ಲಾಗ್ ಕೃಷಿ ಮುಂದುವರಿಯುತ್ತಲಿದೆ.

ಇಂತಹದ್ದೊಂದು ಪ್ರಯತ್ನಕ್ಕೆ ಉತ್ಸಾಹ ತೋರಿ ಮುನ್ನಡೆಯುತ್ತಿರುವ ಶಾಲೆಯ ಅಧ್ಯಾಪಕ ವರ್ಗಕ್ಕೊಂದು ಅಭಿನಂದನೆ. ಗಡಿನಾಡ ಶಾಲೆಯ ಈ ಬ್ಲಾಗಿಂಗ್ ಪ್ರಯತ್ನ ಉಳಿದ ಶಾಲೆಗಳಿಗೆ ಮಾದರಿಯೂ ಹೌದು.

ದಿವ್ಯಾರ ಪಿಸುಮಾತು

ತಮ್ಮ ಪಿಸುಮಾತುಗಳ ಮೂಲಕ ಕವಿತೆ ಹೊಸೆಯುವ ಪ್ರಯತ್ನದಲ್ಲಿದ್ದಾರೆ ಮೈಸೂರಿನ ದಿವ್ಯಾ ಭಾರಧ್ವಜ್.

ಕವಿತೆ ಬರೆಯುವುದೇ ಅವರ ನೆಚ್ಚಿನ ಆಸಕ್ತಿ.  ಹೀಗೆ ಆಸ್ಥೆ ಇಟ್ಟು ಬರೆದ ಒಂದಿಷ್ಟು ಪದ್ಯಗಳು ಇಲ್ಲಿವೆ. ಗುಪ್ತಗಾಮಿನಿಯಂತೆ ಹರಿವ ಪ್ರೀತಿ, ಕೃಷ್ಣನ ಕೊರಳ ಮೋಹಕ ಅಂತರಂಗದ ಗಾನ, ಹೀಗೆ ಸುಮ್ಮನೆ ಕನಸಲ್ಲಿ ಕಾಡುವವನ ನೆನಪು, ನಡುವೆ ಒಂದಿಷ್ಟು ಬೇಸರ, ಈವೆಲ್ಲದರ ನಡುವೆಯೂ ಉಕ್ಕುವ ಚೇತನ.... ಇವೇ ಮೊದಲಾದ ನಿತ್ಯ ಸಂಗತಿಗಳೇ ಇವರ ಕವಿತೆಗಳ ವಸ್ತು. ಇವುಗಳನ್ನಿಟ್ಟುಕೊಂಡೇ ಅವರು ಪದ್ಯ ಬರೆದಿದ್ದಾರೆ, ಅಲ್ಲಲ್ಲಿ ಗದ್ಯ ಸೇರಿಸಿದ್ದಾರೆ. ಒಮ್ಮೆ ಓದಿ ಬನ್ನಿ.

ಗಿರೀಶ್ ಬರೆವ ಕಪ್ಪು ಬಿಳುಪು

ಸೋಲೆ ಗೆಲುವಿನ ಮೆಟ್ಟಿಲು ಅಂತಾರೆ. ಹಾಗೇ ವೈಫಲ್ಯ ಅನ್ನೋದು ಯಶಸ್ಸಿನ ಮೆಟ್ಟಿಲೂ ಹೌದು. ಹೀಗೆ ಸೋಲುಗಳಿಂದ ಕೆಂಗೆಡದೇ ಗೆಲುವು ಕಾಣುವ ಗುಟ್ಟಿನ ಮಾತು ಬಿಚ್ಚಿಟ್ಟಿದ್ದಾರೆ ಗಿರೀಶ್ ಜಮದಗ್ನಿ.

ತಮ್ಮನ್ನೇ ಹುಡುಕುವ ಪ್ರಯತ್ನದ ‘ಕಪ್ಪು ಬಿಳುಪು’ ಅವರ ಬ್ಲಾಗ್. ಒಂದಿಷ್ಟು ಕುತೂಹಲ ಮೂಡಿಸೋ ಕಥೆಗಳು, ನಿತ್ಯ ಪಯಣದ naughty ಕವನಗಳು, ಸರಾಗವಾಗಿ ಓದಿಸಿಕೊಂಡು ಹೋಗುವಂತಹ ಒಂದಿಷ್ಟು ಲೇಖನಗಳು ಇಲ್ಲಿವೆ. ‘ನಿದ್ದೆ ಬಲ್ಲವನಿಗೆ ರೋಗವಿಲ್ಲ, ಕಾಯೋದೇ ಕೈಲಾಸ, ಕಾಶಿಪುರಾಣ, ನಾಮಾಯಣ’ ಮುಂತಾದವು ಮೆಚ್ಚುಗೆಯಾಗುತ್ತವೆ. ಇನ್ನೂ ಓದಲು ಸಾಕಷ್ಟಿವೆ. ಒಮ್ಮೆ ಭೇಟಿ ನೀಡಿ.

ಕವಿ ಕಂಡ ಉಗಾದಿ

ಬ್ಲಾಗಿಗರ ಅಂಗಳದಲ್ಲೂ ಇಂದು-ನಾಳೆ ಯುಗಾದಿ ಹಬ್ಬದ ಸಂಭ್ರಮ. ಮಾವು-ಬೇವಿನ ತೋರಣದ ಚಿತ್ರಗಳ, ಶುಭಾಶಯಗಳನ್ನೊತ್ತ ಸಣ್ಣ ಒಕ್ಕಣೆಗಳು ಪ್ರತಿ ಬ್ಲಾಗಿನಲ್ಲೂ ಕಾಣುತ್ತಿವೆ. ಆ ಮೂಲಕ ಪರಸ್ಪರ ಶುಭಾಶಯ ಕೋರುತ್ತಿವೆ.

ಯುಗಾದಿಯ ಈ ಹೊತ್ತಲ್ಲಿ, ಕನ್ನಡದ ಕವಿಗಳು ಯುಗಾದಿಯನ್ನು ಕಂಡುಕೊಂಡ, ವರ್ಣಿಸಿದ ಬಗೆಯನ್ನ ಒಟ್ಟಾಗಿ ಕಲೆಹಾಕಿ ಬ್ಲಾಗಿಗರ ಮುಂದಿಟ್ಟಿದ್ದಾರೆ ‘ನಂದೊನ್ಮಾತು’ ಬ್ಲಾಗಿನ ಬಿ.ಆರ್. ಸತ್ಯನಾರಾಯಣ. ಬೇಂದ್ರೆ, ಕುವೆಂಪು, ಪು.ತಿ.ನ ರಿಂದ ಅಡಿಗ, ನರಸಿಂಹಸ್ವಾಮಿ, ಶಿವರುದ್ರಪ್ಪ, ನಿಸಾರ್, ಎಚ್ ಎಸ್ ವೆಂಕಟೇಶಮೂರ್ತಿ ವರೆಗೆ ಕನ್ನಡ ಕವಿಗಳು ಯುಗಾದಿ ಸಂಭ್ರಮವನ್ನ ತಮ್ಮ ಕವಿತೆಗಳ ಮೂಲಕ ಹಂಚಿಕೊಂಡ ಸಾಲುಗಳು ಇಲ್ಲಿವೆ. ಕವಿತೆಗಳೊಟ್ಟಿಗೆ ಹೋಳಿಗೆಯ ಸವಿ ಸವಿಯಬಯಸುವವರು ಇತ್ತಲೊಮ್ಮೆ ನೋಡಿಬನ್ನಿ.

ಅಬ್ದುಲರ ಹಳೇ ಸೇತುವೆ

ದಿನದ ಬ್ಲಾಗಿನಲ್ಲಿಂದು ಅಬ್ದುಲರ ಹಳೇ ಸೇತುವೆಯ ನೆನಪುಗಳ ಕನವರಿಕೆ.

‘ಸ್ನೇಹವನ್ನು ಕಂಡು ನಲಿದ ಸೇತುವೆ… ಹಗೆಯನ್ನು ಕಂಡು ಅತ್ತ ಸೇತುವೆ’ ಈ ಎಲ್ಲದಕ್ಕೂ ವೇದಿಕೆ ಈ  ಸೇತುವೆ. ಭದ್ರಾವತಿ ಸೀಮೆಯ ಅಬ್ದುಲ್ ಇದರ ಮಾಲೀಕರು. ಹೆಸರೇ ಹೇಳುವಂತೆ ಇಲ್ಲಿ ಹಳೆಯ ನೆನಪುಗಳ ಕನವರಿಕೆಗಳಿವೆ. ಬಾಲ್ಯದ ಸುತ್ತ ನಡೆದ ಘಟನೆಗಳನ್ನ ಮತ್ತೆ ಮೆಲುಕು ಹಾಕಿದ್ದಾರೆ. ಆಮೇಲೆ ಒಂದಿಷ್ಟು ಕವಿತೆಗಳನ್ನ ಹಾಕಿದ್ದಾರೆ. ಪಶ್ಚಿಮದ ಕ್ರೌರ್ಯದ ಕುರಿತು ಬರೆದ ಬರಹವಿದೆ. ಭಯೋತ್ಪಾದನೆ ವಿರುದ್ಧ ಎತ್ತಿದ ಧ್ವನಿ ಇದೆ. ಜೊತೆಗೆ ಅನ್ ಲಿಮಿಟೆಡ್ ವಿವೇಕವಾಣಿ ಇದೆ.

ಇದೆಲ್ಲ ಒಂದಕ್ಕೊಂದು ಬೆಸೆದು ಈ ಸೇತುವೆಗೊಂದು ಕಳೆ ಕೊಟ್ಟಿದೆ. ಇಂತಿಪ್ಪ ಸೇತುವೆಯನ್ನ ನೋಡಬಯಸುವವರು ಹಳೇ ಸೇತುವೆಗೊಮ್ಮೆ ಹೋಗಿಬನ್ನಿ.

ನಾವಿಕನ ಕವಿತೆಗಳು

ಇವತ್ತಿನ ದಿನದ ಬ್ಲಾಗಿನಲ್ಲಿ ಮನಸಿನ ರಹದಾರಿಯಲ್ಲಿ ಒಂದು ಪಯಣ ಮಾಡುತ್ತಿರೋ ನಾವಿಕನ ಕವಿತೆಗಳ ಸುಗ್ಗಿ.

ಹೀಗೆ ನಾವಿಕನಾಗಿ ಪಯಣ ಹೊರಟಿರುವವರು ಮನು ಸುಶ್ರುತ. ಇಂಜಿನಿಯರಿಂಗ್ ವಿಧ್ಯಾರ್ಥಿಯ ಕನಸಿನ ಪದಗಳು ಇಲ್ಲಿ ಕವಿತೆಯಾಗಿವೆ. ತಮ್ಮ ಹೀಗೆ ಕಾಡುವ ಪಾತ್ರಗಳನ್ನಿಟ್ಟುಕೊಂಡೇ ಅವುಗಳ ಮೇಲೆ ಕವಿತೆ ಹೊಸೆಯುವ ಪ್ರಯತ್ನ ಇಲ್ಲಿದೆ. ಉತ್ಸಾಹಿ ಬ್ಲಾಗಿಗ ಮನು ಒಂದೇ ಬಾರಿಗೆ ತಮ್ಮ ಈ ಎಲ್ಲ ಕವಿತೆಗಳನ್ನ ಸೇರಿಸಿ ಬ್ಲಾಗಿಸಿದ್ದಾರೆ. ಅವರ ಬ್ಲಾಗೋತ್ಸಾಹ ಹೀಗೆ ಇರಲಿ ಎನ್ನುತ್ತ ನಾವಿಕನ ಕವಿತೆಗಳು ಇವತ್ತಿನ ಓದಿಗೆ.

ಹರಿಗೆ ಒಲಿದಂತೆ

ತಮಗೆ ಒಲಿದಂಥ ಹನಿಗವಿತೆಗಳನ್ನ ‘ಒಲಿದಂತೆ’ ಬ್ಲಾಗಿಸುತ್ತಿದ್ದಾರೆ ಹರಿ.

ಹರಿ ಬರೆವ ಸಣ್ಣ ಹನಿಗಳ ಸಾಲುಗಳು ಇಲ್ಲಿವೆ. ಬರೆದ ಸಾಲಿಗೆಲ್ಲ ಚಂದದ ಬಣ್ಣ ಹಚ್ಚಿ, ಅದಕ್ಕೊಂದು ಚಿತ್ರದ ರೂಪ ಕೊಡುವ ಹರಿ ಅದನ್ನ ಹಾಗೇ ಬ್ಲಾಗಿನಲ್ಲಿ ಬಿಟ್ಟಿದ್ದಾರೆ. ನೋಡುತ್ತಲೇ ಸೆಳೆವ ಹೊಳಪು ಅಲ್ಲಿದೆ. ನೆನಪು, ಪ್ರೀತಿ, ಹಸಿವೆಗಳೆಲ್ಲ ಬಿಕ್ಕಳಿಕೆಯಾಗಿ ಹೊರಹೊಮ್ಮಿದೆ. ಹರಿಯ ಒಂದು ಹನಿ ಇಲ್ಲಿದೆ.

ಹೆಸರು ಬೇಕಾ?

ಬಿಸಿಲಿನೂರಿನ ಕನಸು
ಹಸಿರಾಯಿತು...
ನೀ ಕಾರಣವೆಂದರೆ
ನಾಚಿಬಿಡುವೆ!!
ಒಡಲೊಳಗಿನ ಉರಿಜೀವ
ತಂಪಾಯಿತು....
ನೀ ಕಾರಣವೆಂದರೆ
ನಾಚಿಬಿಡುವೆ!!
ಹಸಿರು ದಕ್ಕಿಸುವಷ್ಟರಲ್ಲಿ
ಕನಸು ಕರಗಿತು
ನೀ ಕಾರಣವೆಂದರೆ
ನಕ್ಕುಬಿಡುವೆ??
ಮರಳ ದಾಹಕ್ಕೆ
ಕಣ್ಣೀರು ಸಾಲದು
ನಿನ್ನೂರಲ್ಲಿ ಕನವರಿಸಿದರೆ
ಕಾರ್ಮೋಡ ಕನಿಕರಿಸದು....

ಸಿಂಧು ಬರೆವ ಅಮೃತಸಿಂಧು

ಕೂದಲು ಬೆಳ್ಳಗಾದವರ ಅರ್ಥವಾಗದ ಭಾಷಣಗಳು, ಮುಂದಿನ ಸಾಲು ಬಿಟ್ಟು ಉಳಿದಂತೆ ಖಾಲಿ ಕುರ್ಚಿಗಳು, ಕೂತವರಲ್ಲೂ ಅರ್ಧ ಜನಕ್ಕೆ ತೂಕಡಿಕೆ.... ದೊಡ್ದ ದೊಡ್ಡ, ಅದರಲ್ಲೂ ಸರ್ಕಾರಿ ಖರ್ಚಿನಲ್ಲಿ ನಡೆಯೋ ಬಹುತೇಕ ವಿಚಾರಣ ಸಂಕಿರಣಗಳದ್ದು ಇದೇ ಕಥೆ. ಇಂತಹುದ್ದೇ ಸಂಕಿರಣವೊಂದಕ್ಕೆ ಹೋಗಿಬಂದ ಸಿಂಧು ಭಟ್ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಅಂತಾರಾಷ್ಟ್ರೀಯ ವಿಚಾರಣ ಸಂಕಿರಣಕ್ಕೆಂದು ಹೋದವರಿಗೆ ಅಲ್ಲಿ ಯಾವ ಬಿಳಿ,ಕರಿ ತಲೆಗಳೂ ಕಾಣದೇ, ದೊಡ್ಡ ಮಂಡೆಯ ಭಾಷಣಿಗರ ಕೊರತಕ್ಕೆ ಗುರಿಯಾಗಿ, ಕಡೆಗೆ ಬೇಸತ್ತು ಬಂದಿದ್ದಾರೆ. ಸಂಕಿರಣಗಳ ಹೆಸರಿನಲ್ಲಿ ಇಷ್ಟೆಲ್ಲ ಖರ್ಚು ಮಾಡಿ ಪೋಲು ಮಾಡುವ ಬದಲು ಅದನ್ನೇ ಒಂದಿಷ್ಟು ಬಡ ವಿಧ್ಯಾರ್ಥಿಗಳಿಗೆ ಕೊಟ್ಟು ಸಹಕರಿಸಬಹುದಲ್ಲ ಅನ್ನುವುದು ಅವರ ಪ್ರಶ್ನೆ.

ದೂರದೂರು ದೆಹಲಿಯಲ್ಲಿರುವ ಕನ್ನಡತಿ ಸಿಂಧು ಇಲ್ಲಿ ‘ಅಮೃತ ಸಿಂಧು’ವಿನಲ್ಲಿ ಬರೆಯುತ್ತಾರೆ. ಕನ್ನಡದ ಕೆಲ ರೋಚಕ ಕಥೆಗಳನ್ನೊದಿಕೊಂಡ ಅವರಿಗೆ ಅಲ್ಲಿನ ಕೆಲ ವಿಸ್ಮಯ ಪಾತ್ರಗಳಂತೆ ತಮ್ಮೂರಿನ ಅಜ್ಜನ ಸಾವಿನ ನಿಗೂಢತೆ ಅಚ್ಚರಿ ಹುಟ್ಟಿಸಿದೆ. ಕೊಳಚೆ ನಾಯಿ ಕೋಟ್ಯಾಧಿಪತಿ ನೋಡಿದವರು ತಮ್ಮದೂ ಎರಡು ಪ್ರಶ್ನೆಗಳನ್ನ ಹಾಕಿದ್ದಾರೆ. ಸರ್ಕಸ್ ಅನ್ನೋ ಸಿನಿಮಾ ನೋಡಿದವರಿಗೆ ಸರ್ಕಸ್ಸಿನಲ್ಲಿ ಇದ್ದುಬಂದ ಅನುಭವವಾಗಿದೆ. ಇಂತಹದ್ದೇ ಇನ್ನಿಷ್ಟು ಲೇಖನಗಳು ಇಲ್ಲಿವೆ.

ಕನ್ನಡದ ಬ್ಲಾಗಿಗರಿಗೆ ಅಂತರಾಷ್ಟ್ರೀಯ ಪುರಸ್ಕಾರದ ಗರಿ

ಕನ್ನಡದ ಬ್ಲಾಗ್ ಲೋಕದಲ್ಲಿ ತಮ್ಮದೇ ಆದ ಸೃಜನಶೀಲ ಚಿತ್ರಗಳಿಂದ ಹೆಸರಾಗುತ್ತಿರುವವರು ಛಾಯಾಕನ್ನಡಿಯ ಶಿವು ಮತ್ತು ಮಲ್ಲಿಕಣ್ಣಿನ ಮಲ್ಲಿಕಾರ್ಜುನ ಡಿ.ಜಿ. ಈ ಅಪರೂಪದ ಛಾಯಾಗ್ರಾಹಕರಿಬ್ಬರಿಗೂ ಈಗ ಇನ್ನೊಂದು ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರ ದೊರೆತಿದೆ. ಲಂಡನ್ನಿನ ಪ್ರತಿಷ್ಟಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿ ಈ ಇಬ್ಬರು ಛಾಯಾಗ್ರಾಹಕರಿಗೆ ತನ್ನ ಪ್ರತಿನಿಧಿ ಸದಸ್ಯತ್ವ ನೀಡಿ ಗೌರವಿಸಿದೆ. 

ಇಂತಹದ್ದೊಂದು ಪುರಸ್ಕಾರ ಪಡೆಯುವ ವ್ಯಕ್ತಿಗಳು ಛಾಯಾಗ್ರಹಣದಲ್ಲಿ ತಮ್ಮೆಲ್ಲ ಪ್ರತಿಭೆಯನ್ನು ಪಣಕ್ಕಿಟ್ಟು ಸತತ ಪರಿಶ್ರಮದಿಂದ ಸಾಧನೆ ಮಾಡಿರಬೇಕು. ಅವರ ಸಾಧನೆ, ಪ್ರಶಸ್ತಿ-ಪುರಸ್ಕಾರಗಳನ್ನ ಕೂಲಂಕುಷವಾಗಿ ಪರಿಶೀಲಿಸಿ, ತನಗೆ ಮೆಚ್ಚುಗೆಯಾದವರಿಗೆ ಮಾತ್ರ ರಾಯಲ್ ಸೊಸೈಟಿ ತನ್ನ ಪ್ರತಿನಿಧಿ ಎಂಬ ಗೌರವ ನೀಡುತ್ತದೆ.

ಈ ವರ್ಷ ವಿಶ್ವಾದ್ಯಂತ ೨೯ ಜನರಿಗೆ ಈ ಪುರಸ್ಕಾರ ನೀಡಲಾಗಿದ್ದು, ಈ ಗೌರವ ಗಿಟ್ಟಿಸಿದ ಇಬ್ಬರೇ ಭಾರತೀಯರು ಇವರೆನ್ನುವುದು ಖುಷಿಯ ವಿಚಾರ. ೧೮೫೭ರಿಂದ ಈವರೆಗೆ ಕೇವಲ ೧೨೩ ಭಾರತೀಯರಷ್ಟೇ ಈ ಮನ್ನಣೆಗೆ ಪಾತ್ರರಾಗಿದ್ದಾರೆ.

ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಹಾಗೂ ಮಲ್ಲಿಕಾರ್ಜುನ ನೇಚರ್ ವಿಭಾಗದಲ್ಲಿ ಪುರಸ್ಕಾರ ಪಡೆದಿದ್ದಾರೆ. ಅಭಿನಂದನೆ ಇಬ್ಬರಿಗೂ.

ಮಿಥುನರ ಮನಸು

"ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ. ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದ್ದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು; 'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'"

ಈ ಹಣೆಬರಹದ ಕಥೆಯನ್ನ ಬ್ಲಾಗಿಗರ ಮುಂದಿಟ್ಟಿದ್ದಾರೆ ಮಿಥುನ. ‘ಓದಿ ಕಲಿತದ್ದು ಕಡಿಮೆ, ನೋಡಿ, ಅನುಭವಿಸಿ ಕಲಿತದ್ದೇ ಹೆಚ್ಚು’ ಅನ್ನುವುದು ಅವರ ಉವಾಚ. ಹೀಗೆ ನೋಡಿದ, ಅನುಭವಿಸಿದ ಘಟನೆಗಳ ವರದಿಗಳು ಇಲ್ಲಿವೆ. ಬೈಕೊಳು ಹಾವು ಸೇರಿ ರಾದ್ಧಾಂತವಾದದ್ದು, ಡೋಲು ಬಾರಿಸುವವರ ಗೋಳಿನ ಗಾಥೆ, ಸುಖಾನಂದದ ನೆನಪಿನೊಟ್ಟಿಗೆ ಬಂದ ಪಿಸ್ತೂಲು ಕಥೆ....  ಇಲ್ಲಿ ಓದಲು ಇನ್ನೂ ಸಾಕಷ್ಟಿದೆ. ಒಮ್ಮೆ ಓದಿಬನ್ನಿ. 

ಉಮೇಶರ ನಿನ್ನೊಲುಮೆಯಿಂದಲೇ

‘ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.’ ಹಾಗಂತ ಹೊಸದೊಂದು ಕವಿತೆ ಹೊಸೆದಿದ್ದಾರೆ  ಉಮಿ. ಹೀಗೆ ಈ-ಮೇಲ್ ನಲ್ಲಿ ಬಂದ ಸಾಲುಗಳು ಸ್ಪೂರ್ತಿಯಾಗಿ ಅವೇ ಅನುವಾದವಾಗಿ ಈ ಕವಿತೆ ಹುಟ್ಟಿದೆ. ಹಾಗೇ ಸುಮ್ಮನೆ ಓದಿಸಿಕೊಂಡು ಹೋಗುವಂತ ಸಾಲುಗಳಿವೆ.

‘ನಿನ್ನೊಲುಮೆಯಿಂದಲೇ’ ಅನ್ನುವುದು ಉಮೇಶರ ಬ್ಲಾಗ್. ಐಟಿ ಉದ್ಯೋಗಿಯಾದ ಉಮಿ, ರಿಸೆಷನ್ನಿನ ಕಾಲದ ತಮ್ಮ ತಳಮಳಗಳನ್ನ ಬ್ಲಾಗಿನಲ್ಲಿ ತೋಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತಮ್ಮ ಕಣ್ಣಲ್ಲಿ ಕಂಡಂತೆ ಕೊಡಚಾದ್ರಿ ಸೊಬಗನ್ನ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಕೊಡಚಾದ್ರಿಯ ಸಾಲು ಸಾಲು ಚಿತ್ರಗಳು ಇಲ್ಲಿವೆ. ನೋಡಬೇಕಿದ್ದವರು ಒಮ್ಮೆ ಈ ಬ್ಲಾಗಿಗೆ ಭೇಟಿ ನೀಡಿ. 

ಕನ್ನಡ ಪುತ್ರನ ಸಿರಿಗನ್ನಡಂ ಗೆಲ್ಗೆ

‘ಸರಕಾರಿ ಆಸ್ಪತ್ರೆಗಳು ಎಷ್ಟು ಅಸ(ಹ್ಯ)ಹಕಾರಿ?’ ಹಾಗಂತ ಪ್ರಶ್ನಿಸುತ್ತಿದ್ದಾರೆ ಸಿರಿಕನ್ನಡಂ ಗೆಲ್ಗೆ ಬ್ಲಾಗಿನ ಗುರು. ಮೊನ್ನೆ ಬೆಂಗಳೂರಿನ ಹೆಸರುವಾಸೀ ಸರ್ಕಾರಿ ಆಸ್ಪತ್ರೆ ‘ವಿಕ್ಟೋರಿಯಾ’ಗೆ ಸಂದರ್ಶಿಸಿ ಬಂದವರಿಗೆ ಅಲ್ಲಿನ ನರಕದ ದರುಶನವಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳ ಹಣೆಬರಹವೂ ಇಷ್ಟೇ ಅಂತ ಅನ್ನುವುದು ಈ ಬ್ಲಾಗಿಗರ ಅನಿಸಿಕೆ. ಗುಡಿ, ಚರ್ಚು, ಮಸೀದಿಗಳಿಗೆ ಲಕ್ಷಗಟ್ಟಲೆ ಸುರಿವ ಸರ್ಕಾರ ಅದೇ ದುಡ್ದನಿಟ್ಟುಕೊಂಡು ಇಂತಹ ಕಾರ್ಯಗಳಿಗೇಕೆ ಖರ್ಚು ಮಾಡುವುದಿಲ್ಲ ಅನ್ನುವುದು ಅವರ ಖಾರ ಪ್ರಶ್ನೆ.

ಇದು ಕನ್ನಡಪುತ್ರನ ಖಾಸಗೀ ಬ್ಲಾಗು. ನಾಡು ನುಡಿಯ ಕುರಿತಾದ ಹತ್ತಾರು ಚಿಂತನೆಯ ಬರಹಗಳನ್ನ ಇಲ್ಲಿ ಓದಬಹುದು. ಒಮ್ಮೆ ಭೇಟಿ ಕೊಡಿ.

ಬಸವರಾಜು ಬರೆವ ಮತ್ತೊಂದಾಸ್ಯ

"ಮೊನ್ನೆ ಮೊನ್ನೆ ಅಮೆರಿಕಾದಲ್ಲಿ ಗಾಂಧೀ ವಸ್ತುಗಳ ಹರಾಜು ನಡೆಯಿತು. ಸರ್ಕಾರ ಅದನ್ನೆಲ್ಲ ತಾನೇ ಕೊಂಡುಕೊಂಡು ಗಾಂಧಿ ನೆನಪುಗಳನ್ನ ಮರಳಿ ಸ್ವದೇಶಕ್ಕೆ ತರುವುದಾಗಿ ಗಂಟಲು ಹರಿಯುವಷ್ಟು ಭಾಷಣ ಬಿಗಿಯಿತು. ಗಾಂಧಿ ವಸ್ತುಗಳೇನೋ ಭಾರತಕ್ಕೆ ಬಂತು. ಅದರೆ ಸರ್ಕಾರದ ಮಾನ ಹರಾಜಾಯಿತು. ಅದೆಲ್ಲವೂ ವಿಜಯ ಮಲ್ಯರ ಪಾಲಾಯಿತು.

ಜೀವನದುದ್ದಕ್ಕೂ ಪಾನ ವಿರೋಧ ನೀತಿ ಅನುಸರಿಸಿದ ಗಾಂಧಿಯ ವಸ್ತುಗಳು ಮದ್ಯದ ದೊರೆ ಮಲ್ಯ ಪಾಲಾಗಿ ಎಂತಹ ವಿಪರ್ಯಾಸವಾಯಿತು" ಹೀಗಂತ ನೊಂದು ಬರೆದಿದ್ದಾರೆ ಬಸವರಾಜು.

‘ಮತ್ತೊಂದಾಸ್ಯ’ ಅವರ ಬ್ಲಾಗು. ‘ಬರವಣಿಗೆ ಬರಹಗಾರರ ಇನ್ನೊಂದು ಮುಖ ತೋರಿಸುತ್ತದೆ’ ಅನ್ನುವ ಅಡಿಬರಹವಿಟ್ಟು ಬರೆಯುತ್ತಿರುವ ಬ್ಲಾಗಿಗ ತಮ್ಮ ಬರವಣಿಗೆಯ ದರುಶನ ಮಾಡಿಸುತ್ತಿದ್ದಾರೆ. ಉಳಿತಾಯದ ಸೂತ್ರಗಳು, ಮೂರು ತಿಂಗಳಿಗೊಮ್ಮೆ ಬೀಳುವ ಕೆಟ್ಟಕನಸುಗಳ ಜೊತೆಗೆ ನೆನಪಿನ ಶಾಲೆಯಿಂದ ತೆರೆದಿಟ್ಟ ಪುಟಗಳು ಮುಂತಾದ ಲೇಖನಗಳು ಇಲ್ಲಿವೆ.

ದಾಸ ವಾಣಿಯ ಸಂಗ್ರಹ

ಅಂತರ್ಜಾಲದಲ್ಲಿ ದಾಸರ ಗೀತೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ ವಿನೋದ್ ಗೌಡ. ದಾಸ ವಾಣಿ ಎಂಬ ಈ ಬ್ಲಾಗಿನಲ್ಲಿ ಹತ್ತಾರು ದಾಸ ಪದಗಳ ಸಂಗ್ರಹವಿದೆ. ನೆಟ್ಟಿನಲ್ಲಿ ದಾಸರ ಗೀತೆಗಳ ಹುಡುಕಾಟದಲ್ಲಿರುವವರು ಈ  ಬ್ಲಾಗಿಗೊಮ್ಮೆ ಹೋಗಿ ಬನ್ನಿ.

ತಿಳಿಕನ್ನಡ ಪ್ರಯತ್ನ

ಕನ್ನಡ ಎಂಬುದು ಬೆರಕೆಯ ಭಾಷೆಯಾಗುತ್ತಿರುವ ಈ ದಿನಗಳಲ್ಲಿ ಅಪ್ಪಟ ಕನ್ನಡದ ಸೊಗಡಿನಲ್ಲೇ ಬರೆಯುವ ಪಣ ತೊಡುತ್ತಿದ್ದಾರೆ ತಿಳಿಕನ್ನಡದ ಈ ಕುವರರು.

ತಮ್ಮೀ ಪ್ರಯತ್ನದ ಬಗ್ಗೆ ಬ್ಲಾಗಿಗರು ಹೇಳಿಕೊಂಡಿದ್ದು ಹೀಗೆ " ಕನ್ನಡವೆಂಬ ಹಿರಿನುಡಿಯಲ್ಲೇ ಬೇಕಾದಶ್ಟೋ ಸಾಕಾಗುವಶ್ಟು ಉಶ್ಟೋ ಪದಗಳು ಇದ್ದರೂ, ಬೇರೆನುಡಿಯ,  ಪದಗಳನ್ನು ತುಂಬಿ, ಬರಹಗನ್ನಡವನ್ನು ಅದರ ದಿಟದ ತನದಿಂದ ಸೊಗಡಿನಿಂದ ದೂರಾಗಿಸಿರುವ ಬಗ್ಗೆ ಬೇಸರಗೊಂಡ ನಾವು, ನಮ್ಮ ತಿಳಿವಿನ ಮಟ್ಟದಲ್ಲಿ, ಕನ್ನಡದ್ದೇ ಆದ ಉಲಿಗಳನ್ನು ಬಳಸಿ, ಬರಹಗಳನ್ನು ನೆಗಳಲು ಒಂದು ತಾವನ್ನು ಕಟ್ಟಿಕೊಂಡಿದ್ದೇವೆ. ಕನ್ನಡದಲ್ಲಿ ದೊರೆಯದ ಒರೆಗಳಿಗೆ, ಹೊರನುಡಿಯಿಂದ ಒರೆಗಳನ್ನು ಕನ್ನಡಯಿಸಿ ಬಳಸಿಕೊಳ್ಳವೆವು.

ನಮ್ಮ ಗುರಿ, ಕನ್ನಡದ್ದೇ ಆದ ಒರೆಗಳನ್ನು ಬಳಕೆಯಲ್ಲಿ ಉಳಿಸುವುದು, ಮತ್ತೂ ಬಳಕೆ ತಪ್ಪಿಸಿದ ಒರೆಗಳನ್ನು ಮರುಬಳಕೆಗೆ ತರುವುದೇ ಹೊರತು, ಇದು ಊ ನುಡಿಯ ಬಗ್ಗೆ ಹಗೆದೋರುವ, ಮೇಣ್ ಕೀಳುಗಳೆಯುವ ಮೊಗಸಲ್ಲ."

ಈಗಷ್ಟೇ ಈ ತಿಳಿಕನ್ನಡಿಗರ ಮೊದಲ ಬರಹ ಕಾಣಿಸಿಕೊಂಡಿದೆ. ಉತ್ಸಾಹಿ ಕನ್ನಡಿಗರು ಹೆಚ್ಚೆಚ್ಚು ಬರೆಯಲಿ, ಬ್ಲಾಗ್ ಬೆಳೆಯಲಿ ಅನ್ನುವುದೇ ನಮ್ಮ ಹಾರೈಕೆ.

ಯಾಕೆ ಹೀಗೆ?

ಪತ್ರ ಮುಖೇನ ಜುಗಲ್ ಬಂದಿ ಆರಂಭಿಸಿದ್ದಾರೆ  ಸ್ವಗತ ಲಹರಿಯ ಈ ಅನಾಮಿಕ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡ ಬ್ರಹ್ಮಚಾರಿ ಗೆಳೆಯರ ಕಷ್ಟಗಳ ಪರಿಪಾಠ ಇಲ್ಲಿ ಪತ್ರ ರೂಪದಲ್ಲಿದೆ.

‘ಯಾಕೆ ಹೀಗೆ’ ಅನ್ನುವುದು ಇವರ ಬ್ಲಾಗು. ಯಾಕಪ್ಪ ಹೀಗೆ ಅಂತ ಅವರು ಹೇಳಿದ್ದು " ಎಸ್ಟೊ ಸಲ ನಾವು ನಮ್ಮ ಮನದಲ್ಲಿ ಹುಟ್ಟುವ ಭಾವನೆಗಳನ್ನ..ವಿಚಾರಗಳನ್ನ ಗೊತ್ತಿದ್ದೂ ಗೊತ್ತಿಲ್ಲದವರ ಹಾಗೆ ಮರೆತು ಬಿಡುತ್ತೇವೆ..ಯಾರಿಗೊ ಹೆಳಬೆಕೆ೦ದುಕೊ೦ಡರು..ಯಾರಿಗೂ ಹೆಳಲಾಗದೆ ಸುಮ್ಮನಾಗಿಬಿಡುತ್ತೆವೆ. ಏನೇ ಮಾಡಿದರು ನಮ್ಮ ಮನಸ್ಸು ಮತ್ತ್ಯಾವಾಗಲೊ ಒಮ್ಮಿ೦ದೊಮ್ಮೆಲೆ ಎನನ್ನೊ ನೆನಪಿಸಿ ನಮ್ಮನ್ನ ಖಿನ್ನಗೊಳಿಸಿಬಿಡುತ್ತದೆ...ಆವಾಗಲೆ ಅಲ್ವ ನಾವು ನಮ್ಮ ಜೊತೆ ಮತನಡೊದು!!! ಅದೆ ಅಲ್ವಾ ಸ್ವಗತ....."

ಯಾಕೆ ಹೀಗೆ ಅಂತ ಕುತೂಹಲ ಇದ್ದವರು ಈ ಬ್ಲಾಗಿಗೊಮ್ಮೆ ಭೇಟಿ ನೀಡಿ.

ಬಿಂಬದ ನೀತಿಕಥೆ

ಬಾಲ್ಯದಲ್ಲಿ ನಾವು ಎಷ್ಟೊಂದು ಕಥೆಗಳನ್ನ ಕೇಳಿರುತ್ತೀವಿ. ಅದರಲ್ಲಿನ ಪಾತ್ರ ನಾವಾಗಿ ಅನುಭವಿಸಿರುತ್ತೀವಿ. ಈ ನೀತಿಕಥೆಗಳು ನಮ್ಮ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ಅಂತಹದ್ದೊಂದು ಕಥೆಯನ್ನ ಮತ್ತೆ ನೆನಪಿಸುತ್ತಿದ್ದಾರೆ ಬಿಂಬದ ಗೌರೀಶ್.

ಸದ್ಯಕ್ಕಿಲ್ಲಿ ಕಪಟ ಮೊಸಳೆ, ಅದರ ಮೋಸಬುದ್ಧಿಯ ಕಥೆ ಇದೆ. ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ ಮತ್ತು ಕಲಿಕೆ ಇಟ್ಟುಕೊಂಡಿರುವ ಗೌರೀಶ್ ತೆಗೆದ ಕೆಲ ಅಪರೂಪದ, ಚಂದದ ಚಿತ್ರಗಳು ಈ ಬಿಂಬದಲ್ಲಿವೆ.  ಕಪನಿಯವರ ಬಿಂಬ ಕಾಣಬೇಕಿದ್ದವರು ಒಮ್ಮೆ ಭೇಟಿ ಕೊಡಿ. 

ಸಂದೀಪ ಶರ್ಮರ ಅನುಸೃಷ್ಟಿ

ಸಂಬಂಧಗಳ ಬಂಧವೆಂಬ ಅನುಬಂಧದ ಕಥೆ ಹೇಳುತ್ತಿದ್ದಾರೆ ಸಂದೀಪ ಶರ್ಮ. ಕೆಲವೊಮ್ಮೆ ಸಣ್ಣ ತಪ್ಪು ತಿಳುವಳಿಕೆಗಳೇ ಸಂಬಂಧಗಳ ಬಿರುಕಿಗೆ ಕಾರಣವಾಗುವಂತದ್ದು, ಅಷ್ಟೇ ಜಾಗರೂಕವಾಗಿ ಅದರಿಂದ ಬಿಡಿಸಿಕೊಳ್ಳಬೇಕಾದ ತುರ್ತಿನ ಬಗ್ಗೆ ಕಥೆ ಹೆಣೆದುಕೊಂಡಿದೆ.

ಅನುಸೃಷ್ಠಿಯೆಂಬ ಈ ಬ್ಲಾಗಿನಲ್ಲಿ ಅವರ ಸುಲಲಿತ ಬರಹಗಳಿವೆ. ನೆಚ್ಚಿನ ಶ್ವಾನ ತಮ್ಮ ನೆಚ್ಚಿನ ರಾಣಿ ಎಂಬ ಶ್ವಾನದ ನೆನಪು ಮಾಡಿಕೊಂಡಿದ್ದಾರೆ. ಹಾಗೇ ಸುಮ್ಮನೆ ಬರೆದ ಒಂದೆರಡು ಹನಿಕವಿತೆಗಳಿವೆ. ಒಮ್ಮೆ ಓದಿ ಬನ್ನಿ.

ಶ್ವೇತಾರ ಸ್ಟಿಮ್ಯುಲಸ್ ವಿಶ್ಲೇಷಣೆ

"ಈಗೀಗ ಯಾವಾಗ ಟೀವಿ ಹಾಕಿ ಕುಳಿತರೂ ಆರ್ಥಿಕ ಕುಸಿತದ್ದೇ ಸುದ್ದಿ. ಹೀಗಿರುವ ಹೊತ್ತಲ್ಲಿ ಅಮೆರಿಕಾದ ಪರಿಸ್ಥಿತಿಯನ್ನ ಸುಧಾರಿಸಲು ಅದರ ಅಧ್ಯಕ್ಷ ಒಬಾಮ ಸ್ಟಿಮ್ಯುಲಸ್ ಪ್ಯಾಕೇಜ್ ಯೋಜನೆಯನ್ನ ಹಮ್ಮಿಕೊಂಡಿರೋದು ಗೊತ್ತೇ ಇದೆ. ಅದರರ್ಥ ಖರ್ಚು ಮಾಡಲು ಯಥೇಚ್ಛ ದುಡ್ಡು ಕೊಡೋದು. ಆದ್ರೆ ಹೀಗೆ ದುಡ್ಡು ಕೊಟ್ಟರೆ ಎಲ್ಲ ಸಮಸ್ಯೆ ಮುಗಿಯುತ್ತಾ...ಕೂಡಿಡುವ ಅಭ್ಯಾಸ ಮಾಡಿಕೊಂಡಿರುವ ಜನ ಇದನ್ನೂ ಕೂಡಿಟ್ಟರೆ ಏನು ಮಾಡೋದು.." ಹೀಗೆ ಸ್ಟಿಮ್ಯುಲಸ್ ಪ್ಯಾಕೇಜಿನ ಪರ-ವಿರೋಧಗಳನ್ನ ವಿಶ್ಲೇಷಿಸುವ ಯತ್ನದಲ್ಲಿದ್ದಾರೆ ಶ್ವೇತಾ.

ಹೀಗೆ ದುಡ್ಡು ಕೊಡುವ ಬದಲು ಎಲ್ಲಿ ಬೇಕಾದರೂ ಖರೀದಿ ಮಾಡುವಂತ ಒಂದು ಕೂಪನ್ ನೀಡಿದರೆ , ಅದನ್ನ ಇಂತಿಷ್ಟು ದಿನದೊಳಗೆ ಬಳಸಿಕೊಳ್ಳಬೇಕು ಅಂತ ವಾಯಿದೆ ನೀಡಿದ್ರೆ ಜನ ಖರ್ಚು ಮಾಡೇ ಮಾಡ್ತಾರೆ, ಅಂಗಡಿ-ಮುಂಗಟ್ಟುಗಳು ಬದುಕುತ್ತವೆ. ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿರುತ್ತದೆ ಅನ್ನುವುದು ಅವರ ಅನಿಸಿಕೆ.

ಶ್ವೇತಾ ತಮ್ಮದೇ ಹೆಸರಿನಲ್ಲಿ ತೆರೆದಿರುವ ಬ್ಲಾಗಿನಲ್ಲಿ ಈ ವಿಶ್ಲೇಷಣೆಯ ಪೂರ್ಣ ಪಾಠವಿದೆ. ಕಳೆದ ಮೂರು ವರ್ಷಗಳಿಂದಲೂ ಅವರಿಲ್ಲಿ ಬ್ಲಾಗ್ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ಭೇಟಿ ಕೊಡಿ.
 

ಗೆಲುವಿನ ಪಯಣ

ಕನಸುಗಳ ಹುಡುಕುತ್ತಾ ಗೆಲುವಿನ ಪಯಣದಲ್ಲಿದ್ದಾರೆ ಈ ಅನಾಮಿಕ ಬ್ಲಾಗಿಗರು.

ಗೆಲುವು ಅವರ ಬ್ಲಾಗ್. ಒಂದೇ ಸಾಲಿನ ಕವಿತೆಗಳು, ಚುಟುಕಗಳು, ನಾಲ್ಕು ಸಾಲು ಸೇರಿ ಒಂದಾದ ಕಥೆಗಳು, ಹನಿಗವಿತೆಗಳು ಎಲ್ಲವೂ ಈ ಬ್ಲಾಗಿನಲ್ಲಿವೆ. ಅವರ ನಾಕು ಸಾಲಿನ ಕಲಿತೆಯೊಂದು ಇಲ್ಲಿದೆ. ಉಳಿದ ಓದಿಗೆ ಗೆಲುವಿಗೆ ಭೇಟಿ ಕೊಡಿ.

ನಾಕು ಸಾಲಿನ ಕವಿತೆ,
ಬರೆದರಾಯಿತೆ ಹೇಳ ?
ಪದಗಳಿಗೆ ಬೇಕಿಷ್ಟು ಭಾವ,
ಭಾವಕ್ಕೆ ಒಂದಿಷ್ಟು ರಾಗ

ಈಜಿದರಾಯಿತೆ ಹೇಳ
ಒಲವ ಕಡಲಿನಲಿ ?
ಬೇಡವೆ ಒಂದೆರಡು ಅಲೆಯು
ನಿನ್ನ ಇರುವಿಕೆಗೆ ಇದುವೆ ಸಾಕಲ್ಲವೆ!!!

ಬೆಳದರಾಯಿತೆ ಹೇಳ
ಹೆಮ್ಮರವಾಗಿ ?
ಬೇಡವೆ ನಿನ್ನವರಿಗೆ ನೆರಳು
ನಿನ್ನ ಸಾಧನೆಗೆ ಇದುವೆ ಸಾಕಲ್ಲವೆ!!

ಆಸುಮನದ ಕವಿತೆಗಳು

ಸದ್ಯ ಕವಿತೆಗಳನ್ನ ಬರೆಯುವ ಉತ್ಸಾಹದಲ್ಲಿದ್ದಾರೆ ಆತ್ರಾಡಿ ಸುರೇಶ್ ಹೆಗ್ಡೆ. ‘ಆಸುಮನ’ ಅವರ ಬ್ಲಾಗ್. ಅಂದರೆ ಆತ್ರಾಡಿ ಸುರೇಶರ ಮನದ ಮಾತುಗಳು ಅಂತರ್ಥ. ದಿನಕ್ಕೊಂದರಂತೆ ಅವರ ಕವಿತೆಗಳಲ್ಲೀ ಮೂಡಿ ಬರುತ್ತಿವೆ. ಪ್ರಾಸಬದ್ಧ, ಸರಳ ಸಾಲುಗಳಲ್ಲೇ ಹೇಳಬೇಕಾದ್ದೆಲ್ಲವನ್ನೂ ಚುಟುಕಾಗಿ ತೆರೆದಿಡುವುದು ಅವರ ಈ ಕವಿತೆಗಳ ವಿಶೇಷ. ಸಾಲು ಸಾಲು ಕವಿತಾ ಗುಚ್ಛಗಳು ಇಲ್ಲಿವೆ. ಒಮ್ಮೆ ಭೇಟಿ ಕೊಡಿ.

ಅಮ್ಮನ ಹಬ್ಬದ ಸಂಭ್ರಮದಲ್ಲಿ ಮಿಂಚುಳ್ಳಿ

ಅಮ್ಮನ ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದಾರೆ ಮಿಂಚುಳ್ಳಿ ಅಲಿಯಾಸ್ ಶಮ ನಂದಿಬೆಟ್ಟ.

ಪ್ರತಿವರ್ಷದಂತೆ ಈ ವರ್ಷವೂ ತಮ್ಮ ಅಮ್ಮನ ಜನ್ಮದಿನದ ಅಂಗವಾಗಿ ಮಾತೃ ಉತ್ಸವ ಎಂಬ ಸಾಂಸ್ಕೃತಿಕ ಹಬ್ಬವನ್ನ ಏರ್ಪಡಿಸಿರುವ ಶಮ ಎಲ್ಲರಿಗೂ ಆಹ್ವಾನ ನೀಡುತ್ತಿದ್ದಾರೆ. ಇದೇ ಮಾರ್ಚ್ ಎಂಟರ ಭಾನುವಾರ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಈ ಉತ್ಸವ ಜರುಗಲಿದೆ. ಅವರೇ ಹೇಳುವಂತೆ ಇದು ಯಾವುದೇ ಪ್ರಚಾರವಿರದ, ಉತ್ಸವ ಮೂರ್ತಿಗಳ ಕಟೌಟು, ಬ್ಯಾನರುಗಳಿರದ, ಪೂರ್ತಿಯಾಗಿ ಜನಜಾಗೃತಿಗಾಗಿ ಸೇವಾ ಮನೋಭಾವದಿಂದ ಮಾಡುವ ಹಬ್ಬ.

ಈಗಾಗಲೇ ಹಲವಾರು ಬ್ಲಾಗಿಗರಿಗೆ ಇದರ ಆಹ್ವಾನ ತಲುಪಿದೆ. ಹೆಚ್ಚಿನ ಮಾಹಿತಿ ಅವರ ಬ್ಲಾಗಿನಲ್ಲಿದೆ. ಒಮ್ಮೆ ಭೇಟಿ ನೀಡಿ. 

ದೇವೇಗೌಡರ ಬ್ಲಾಗ್ ಕೃಷಿ

ಸಕ್ರಿಯ ರಾಜಕರಣದಲ್ಲಿ ಉಳಿದುಕೊಂಡಿರುವ ಏಕೈಕ ಮಾಜಿ ಪ್ರಧಾನಿ, ಮಣ್ಣಿನ ಮಗ ಎಚ್ ಡಿ ದೇವೇಗೌಡರು ತಮ್ಮೆಲ್ಲ ರಾಜಕಾರಣಗಳ ಒತ್ತಡದ ನಡುವೆ ಬ್ಲಾಗ್ ಕೃಷಿಗೂ ಕೈ ಹಾಕಿದ್ದಾರೆ. ಜೆಡಿಎಸ್ ರಾಷ್ಟ್ರಧ್ಯಕ್ಷರು ಈ ಬಾರಿ ಐಬಿಎನ್ ನ ಅತಿಥಿ ಬ್ಲಾಗುದಾರರಾಗಿ ಕಾಣಿಸಿಕೊಂಡಿದ್ದಾರೆ.

ಗೌಡರು ಈ ಅತಿಥಿ ಬ್ಲಾಗ್ ಲೇಖನದಲ್ಲಿ, ತಮ್ಮ ಐದು ದಶಕಗಳ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು, ಅರವತ್ತರ ದಶಕದಲ್ಲಿ ರಾಜಕಾರಣಕ್ಕಿಳಿದು, ಅಲ್ಲಿಂದ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದದ್ದು ಎಲ್ಲವನ್ನೂ ತೆರೆದಿಟ್ಟಿದ್ದಾರೆ. ಈ ಬಾರಿಯ ಲೋಕಸಭೆಯಲ್ಲಿ ತಮ್ಮ ಕಾರ್ಯಸೂಚಿಗಳನ್ನ ವಿವರಿಸಿದ್ದಾರೆ. ಈ ಎಲ್ಲವನ್ನೂ ಗೌಡರೇ ಮಾತುಗಳಲ್ಲೇ ಓದಬೇಕಿದ್ದವರು ಇಲ್ಲಿಗೆ ಭೇಟಿ ಕೊಡಿ.

ಪರಾಂಜಪೆಯ ಮನಸಿನ್ಯಾಗಿನ ಮಾತು

‘ಓ ದೇವರೇ.... ನೀನೆಲ್ಲಿರುವೆ?’ ಹಾಗಂತ ದೇವರಿಗೊಂದು ಪ್ರಶ್ನೆ ಹಾಕುತ್ತಿದ್ದಾರೆ ಪರಾಂಜಪೆ. ‘ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಅನ್ನೋ ಹಾಗೇ ದೇವರು ಆತನನ್ನು ನಂಬಿದವನಿಗೆ ಕಷ್ಟಕೊಡುತ್ತಾನೆ ಅನ್ನುವುದು’ ಅವರ ಜಿಜ್ಞಾಸೆ. ಅದಕ್ಕೆ ಉತ್ತರ ಕಂಡುಕೊಳ್ಳ ಹೋದವರು ಒಂದು ಕವಿತೆ ಹೊಸೆದಿದ್ದಾರೆ.

‘ಮನಸಿನ್ಯಾಗಿನ ಮಾತು’ ಅನ್ನುವುದು ಅವರ ಮನಸಿನಾಳದ ಮಾತಿಗೊಂದು ವೆಬ್ ವೇದಿಕೆ. ಮದುವೆಯಾಗಿ ಹದಿನೈದು ವರ್ಷ ತುಂಬಿದ ಹೊತ್ತಲ್ಲಿ, ಮಡದಿಗೊಂದು ಪುಟ್ಟ ಕವನ ಬರೆದುಕೊಟ್ಟು ಖುಷಿಪಟ್ಟ ಪರಾಂಜಪೆ ತಮ್ಮೀ ಖುಷಿಯನ್ನು ಬ್ಲಾಗಿನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರೆಂಬ ಮಹಾನಗರದಲ್ಲಿ ನಶಿಸುತ್ತಿರುವ ನಾಗರಿಕ ಪ್ರಜ್ಞೆಯ ಬಗ್ಗೆ ಕಳವಳ ಗೊಂಡು ಬರೆದಿದ್ದಾರೆ. ಆಮೇಲೆ ತಮ್ಮಜ್ಜಿ ತೀರಿಕೊಂಡ ಹೊತ್ತಲ್ಲಿ ನಡೆದ ಘಟನೆಗಳನ್ನ ಹೇಳಿಕೊಂಡು ನಗುತ್ತಿದ್ದಾರೆ. ಇನ್ನೂ ನಾಲ್ಕಾರು ಮನಸಿನ್ಯಾಗಿನ ಮಾತುಗಳು ಇಲ್ಲಿವೆ.

ಬಾಳಿಗರ ಝಾಂಕಿ

ಆಸ್ಕರ್ ವಿಜೇತ ರೆಹಮಾನರ ಸಂಗೀತದ ಗುಂಗಿನಲ್ಲೇ ತೇಲುತ್ತಿರುವ ಗುರುಬಾಳಿಗರು ರೆಹಮಾನ ಎಂಬ ಕೌತುಕವನ್ನ ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ.

ಝಾಂಕಿ ಅನ್ನುವುದು ಅವರ ಈ ಬ್ಲಾಗಿನ ಹೆಸರು. ಇದೇನಪ್ಪ ಹಾಗಂದರೆ ಅಂತನ್ನುವ ಮೊದಲೇ ಅವರೇ ಹೇಳಿಬಿಡುತ್ತಾರೆ, " ಕೊಂಕಣಿಯಲ್ಲಿ ಝಾಂಕಿ ಎಂದರೆ ಮನಬಂದಂತೆ ನುಡಿಯುವುದು ಎಂದರ್ಥ. ನೀವು ಹಾಗನ್ನುವ ಮೊದಲೇ ತಲೆಬರಹ ಹಾಕಿ ಬಿಟ್ಟಿದ್ದೇನೆ. ಇನ್ನು ನೀವು ನಿರಾಳವಾಗಿ ಓದಬಹುದು."

ಹಾಗೇ ಸರಾಗವಾಗಿ ಓದಲಿಕ್ಕೆ ಅಂತ ಬಾಳಿಗರು ಬರೆದ ಬರಹಗಳಿವೆ. ಇಷ್ಟಾರು ದೇವತೆಯ ಕವಿತೆಯ ಅನುವಾದದ ಬಗ್ಗೆ ಸಣ್ಣದೊಂದು ಚರ್ಚೆ, ವಿವರಣೆ ನೀಡಿದ್ದಾರೆ. ಫ್ರೆಂಚ್ ಕತೆಯೊಂದರ ಅನುವಾದ ಹಾಕಿದ್ದಾರೆ. ಹಿಂದೂಸ್ತಾನಿ ಸಂಗೀತದ ಬಗೆಗಿನ ತಮ್ಮ ಒಲವನ್ನ ವಿವರಿಸಿದ್ದಾರೆ. ಹೆಚ್ಚಾಗಿ ಅನುವಾದಿತ ಲೇಖನಗಳನ್ನ ಇಲ್ಲಿ ಓದಬಹುದು.

ಆದದ್ದಕ್ಕೆಲ್ಲ ಐಟಿಯವರೇ ಕಾರಣವಾ? ಬ್ಲಾಗಿಗರ ಪ್ರತಿಕ್ರಿಯೆ

‘ಬಿದ್ದವನ ಬೆನ್ನಿಗೆ ಮತ್ತೊಂದು ಗುದ್ದು' ಅನ್ನುವ ಮಾತಿದೆ. ಐಟಿ ಜನರ ಇವತ್ತಿನ ಸ್ಥಿತಿ ಹೀನಾಯವಾಗುತ್ತಿರುವಾಗ, ಆದದ್ದೆಲ್ಲದಕ್ಕೂ ಅವರೇ ಕಾರಣ ಅಂತ ಗೂಬೆ ಪ್ರಯತ್ನಗಳೂ ನಡೆಯುತ್ತಿವೆ. ಇದೇ ವಿಷಯವಾಗಿ ಮೊನ್ನೆ ಮೊನ್ನೆ ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಅಂಕಣಕಾರರೊಬ್ಬರು ಬರೆದ ಲೇಖನ ಬ್ಲಾಗ್ ಲೋಕದಲ್ಲಿ ಒಂದಿಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಂಕಣಕಾರರ ಆ ಬರಹವನ್ನ ಓದಿದ ಬ್ಲಾಗಿಗರು ತಮ್ಮ ಅನಿಸಿಕೆಗಳನ್ನ ಬ್ಲಾಗುಗಳಲ್ಲಿ  ಹೇಳಿಕೊಂಡಿದ್ದಾರೆ.

‘ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ' ಅನ್ನುವ ಬ್ಲಾಗಿನ ಗುರುಪ್ರಸಾದ್ ಡಿ ಎನ್ ತಮ್ಮ ನೆಚ್ಚಿನ ಅಂಕಣಕಾರರ ಲೇಖನದ ಕುರಿತು ತಮ್ಮ ಮಾತು ಬರೆದಿದ್ದಾರೆ. ಆದದ್ದಕ್ಕೆಲ್ಲ ಐಟಿಯವರೇ ಕಾರಣವಾ? ಅನ್ನುವ ಪ್ರಶ್ನೆ ಎತ್ತಿದ್ದಾರೆ. ಅವಲೋಕನ ಬ್ಲಾಗಿನ ಶ್ರೀ ಕೂಡ ತಮ್ಮ ಅನಿಸಿಕೆಗಳನ್ನ ಬ್ಲಾಗಿಸಿದ್ದಾರೆ. ಸಂಪದ ಸಮುದಾಯದಲ್ಲಿ ಕೂಡ ಈ ಬಗ್ಗೆ ಒಂದಿಷ್ಟು ಮಾತಿನ ಚಕಮುಖಿ ನಡೆಯುತ್ತಿದೆ. ಇನ್ನಿತರ ಕೆಲವು ಬ್ಲಾಗುಗಳಲ್ಲೂ ಈ ಬಗ್ಗೆ ಚರ್ಚೆಯನ್ನ ಕಾಣಬಹುದು.

ಕಾವ್ಯಸುರಾದ ಕವಿತಾ ದರ್ಶನ

ಮಲೆನಾಡ ಸೊಬಗ ಸವಿಯುತ್ತಾ ದಿನದ ಬ್ಲಾಗಿನಂಗಳಕ್ಕೆ ಬಂದಿದ್ದಾನೆ ಕಾವ್ಯಸುರಾ.

"ಬದುಕಿಗೊ೦ದು ಭಾಷ್ಯ. ಭಾವಬಿತ್ತಿಯಲಿ. ಬುದ್ದಿಯ ಕುಸುರಿ, ಮನಸ ತೊಳಲಾಟ, ಹೋರಾಟಗಳಿ೦ದ ಮನಸ್ಸಿನಲ್ಲಿ ಹುಟ್ಟೋ, ನಾನು, ಎ೦ಬ ವ್ಯಕ್ತಿತ್ವ ರೂಪಿಸೋ ಭಾವನೆಗಳ ಕಾವ್ಯರೂಪ ಕಾವ್ಯಸುರಾ. ಮ೦ಥನ, ಅವಲೋಕನ, ಚಿ೦ತನೆ, ಚರ್ಚೆಗೊ೦ದು ವೇದಿಕೆ" ಅನ್ನುವುದು ಬ್ಲಾಗಿನ ಒಡೆಯ ರಾಕೇಶ್ ತನ್ನೀ ಬ್ಲಾಗ್ ಪ್ರಯತ್ನದ ಬಗ್ಗೆ ಹೇಳಿಕೊಂಡ ಮಾತುಗಳು.

ಹೆಸರಿಗೆ ತಕ್ಕಂತೆ ಇದು ಕವಿತೆಗಳದ್ದೇ ಬ್ಲಾಗ್. ರಾಕಿ ಬರೆವ ಕಿರುಗವಿತೆಗಳು ಇಲ್ಲಿವೆ. ಮಲೆನಾಡ ಸೊಬಗು, ಅವಳ ನಾಚಿಕೆ, ಬೇಟದಂತಹ ಕವಿತೆಗಳು ಮತ್ತೆ ಓದುವಂತಿವೆ. ಒಮ್ಮೆ ಓದಿಬನ್ನಿ.

ಹಳ್ಳಿಹುಡುಗನ ಪತ್ರ

‘ನಿನ್ನ ಒಡಲ ಬಸಿರಾಗಿ ಮತ್ತೆ ಹೊರ ಬರಲು ತವಕಿಸುತ್ತೇನೆ....!’ ಹಾಗಂತ ತಮ್ಮ ತೊಳಲಾಟಗಳನ್ನ ಹೊರಗೆಡುವಿ ಕೂತಿದ್ದಾರೆ ನಾಗು ತಳವಾರ್. ‘ನನ್ನೊಳಗಿನ ನಾನು ಕಳೆದುಹೋಗುತ್ತಿರುವುದು ಪ್ರಾಯಶಃ ನಿನ್ನ ಮೌನದಿಂದಲೇ ಇರಬೇಕು. ಆದರೂ ಹೀಗೆ ಇದ್ದಕ್ಕಿದ್ದಂತೆ ಎದ್ದುಹೋದೆಯಲ್ಲ ಯಾಕೆ? ಓದದ್ದಾದರೂ ಎಲ್ಲಿಗೆ?’ ಅನ್ನುವುದು ಅವರ ಪ್ರಶ್ನೆ.

ಹಳ್ಳಿ ಹುಡುಗ ಅಂತ ತನ್ನನ್ನ ಗುರುತಿಸಿಕೊಳ್ಳುವ ನಾಗು ತನ್ನ ಬಗ್ಗೆ ಹೇಳಿಕೊಂಡಿದ್ದು ಹೀಗೆ. ‘ನನ್ನ ಹೆಸರು ನಾಗು, ತಳವಾರ್, ಓದಿರೋದು ಹಳ್ಳಿ ಶಾಲೆಯ ಹತ್ತನೇ ತರಗತಿ. ಅಪ್ಪ ಕೊಟ್ಟಿರೋ ಒಂಚೂರು ಜಮೀನಿದೆ ಅದರಲ್ಲೇ ವರ್ಷದ ಅನ್ನ ಹುಡುಕ್ತೀನಿ. ಪದ್ಯ, ಗದ್ಯ, ಸಂಗೀತ, ಸಾಹಿತ್ಯ ಇವೆಲ್ಲಾ ತುಂಬಾ ಇಷ್ಟ, ಯಾಕೆಂದ್ರ ಇವು ಯಾವುವೂ ನನಗೆ ಒಲಿದೇಇರುವುದರಿಂದ. ಹೆಚ್ಚಿಗೆ ಹೇಳೋದೇನೂ ಇಲ್ಲ.. ನೀವಾಗೀ ಕರೆದ್ರೆ ನಿಮ್ಮನಿಗೆ ಬರ್‍ತೀನಿ..ಇಲ್ಲ ಅಂದ್ರ ಹೊಲ್ದಾಗ ಇರ್‍ತೀನಿ.’

ಒಂದೆರಡು ಹನಿಗವಿತೆಗಳು, ಶಾಯರಿಗಳು ಜೊತೆಗಿವೆ. ಅವ್ವಗೂ ಬರೆದ ಒಂದು ಶಾಯರಿ ಇಲ್ಲಿದೆ.

ಅದೋನೋ..ಭಯ, ದಿಗಿಲು
ಆತಂಕ..
ಸತ್ತುಹೋಗುತ್ತೇನೆಂದಲ್ಲ
ಇಲ್ಲಿ ಇನ್ನೂ ಬದುಕಬೇಕಲ್ಲ? ಎಂದು.
ಅದೇನೋ..ಕಣ್ಣೆಲ್ಲಾ ಮಂಜು-ಮಂಜು
ಉರಿ,ಉರಿ
ಯಾವುದೋ ಬೇನೆಯಿಂದಲ್ಲ,
ಇಲ್ಲಿ ನೀನಿಲ್ಲವಲ್ಲ ಎಂದು..!

ರಾಜೇಶರ ಲಗೋರಿಯಾಟ

‘ಬದುಕ ಪಯಣದಲಿ ಭಾವನೆಗಳ ತಾಕಲಾಟ... ಮನದ ಪಿಸುಮಾತಿನ ಮೌನ ಪರದಾಟ’ ಅಂತೆಲ್ಲ ಅಂದುಕೊಂಡು ಮನದ ಮೈದಾನದಲ್ಲೊಂದು ಲಗೋರಿ ಆಟವಾಡುತ್ತಿದ್ದಾರೆ ರಾಜೇಶ್ ಮಂಜುನಾಥ್.

ಸಿರಿನುಡಿ ಕನ್ನಡದ ಸರಳ ಹುಡುಗ ರಾಜೇಶ್ ಸದ್ಯ ಇಳೆಗೆ ಬಿದ್ದ ಮಳೆಯ ಕುರಿತು ಕವಿತೆ ಹೊಸೆದಿದ್ದಾರೆ. ಮಳೆಚಿತ್ರದ ಸ್ಪೂರ್ತಿಯಿಂದ ಹೊಸದೊಂದು ಕವಿತೆ ಹುಟ್ಟಿದೆ. ತಮ್ಮ ಅಂತರಾಳದ ಅಭಿಸಾರಿಕೆಯನ್ನು ಕಲ್ಪಿಸಿಕೊಂಡ ಹುಡುಗ ಅವಳಿಗೆಂದೇ ಸರಣಿ ಲೇಖನ ಬರೆಯತೊಡಗಿದ್ದಾರೆ. ಸದ್ಯಕ್ಕೇ ಮೂರನೇ ಕಂತಿಗೆ ಬಂದು ಮುಟ್ಟಿದೆ. ಮಂಜುನಾಥ್ ತಮ್ಮ ಮನದಾಳದ ಮಾತುಗಳನ್ನ ಆಪ್ತವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಇನ್ನಷ್ಟು ಓದತಕ್ಕ ಬರಹಗಳು, ಕವಿತೆಗಳೂ ಇಲ್ಲಿವೆ. ಒಮ್ಮೆ ಓದಿಬನ್ನಿ.

ಮಲ್ಲಿ ಕಣ್ಣು ಕಂಡದ್ದು

ತೇಜಸ್ವಿ, ಶಿವರುದ್ರಪ್ಪ, ಕಾಯ್ಕಿಣಿ, ನೇಮಿಚಂದ್ರ, ವೆಂಕಟೇಶ ಮೂರ್ತಿ ಮುಂತಾದ ದೊಡ್ಡ ದೊಡ್ಡ ಕವಿಗಳ, ಬರಹಗಾರರ ಸಾಲು ಸಾಲು ಚಿತ್ರಗಳು, ಪಕ್ಕದಲ್ಲಿ ಅವರಿಂದಲೇ ಪಡೆದ ಮುದ್ದಾದ ಹಸ್ತಾಕ್ಷರಗಳು.... ಹೀಗೆ ತಮ್ಮಲ್ಲಿದ್ದ ಎಲ್ಲವನ್ನ ಬ್ಲಾಗಲ್ಲಿಟ್ಟು ಖುಷಿ ಹಂಚಿಕೊಳ್ಳುತ್ತಿದ್ದಾರೆ ಮಲ್ಲಿ ಆಲಿಯಾಸ್ ಮಲ್ಲಿಕಾರ್ಜುನ ಡಿ.ಜಿ. ಅಪರೂಪದ ಚಿತ್ರಗಳ, ಹಸ್ತಾಕ್ಷರಗಳ ಈ ಲೇಖನಮಾಲೆ ಮುದ ನೀಡುವಂತಿವೆ.

ಮಲ್ಲಿ ಕ್ಯಾಮರಾ ಕಣ್ಣಲ್ಲಿ ಕಂಡದ್ದು ಇಲ್ಲಿ ನಮ್ಮ ಮುಂದಿರುತ್ತದೆ. ಬಹಳ ಆಕರ್ಷಕವಾದ, ಅಪರೂಪದ ಚಿತ್ರಗಳನ್ನ ಬರಹದೊಟ್ಟಿಗೆ ಇಲ್ಲಿ ಕಾಣಬಹುದು. ಅದರಲ್ಲೂ ಜೀವಸಂಕುಲಗಳ ಬಗ್ಗೆ ಹೆಚ್ಚು ಆಸ್ಥೆ ಹೊಂದಿರುವ ಮಲ್ಲಿಕಾರ್ಜುನ ಕೆಲವು ಅಪರೂಪದ ಚಿತ್ರಗಳನ್ನ ಸೆರೆ ಹಿಡಿದು ಇಲ್ಲಿ ಸೇರಿಸಿದ್ದಾರೆ. ದೇಶ ಸುತ್ತುತ್ತಲೇ ಅಲ್ಲಿಂದ ಚಿತ್ರಗಳನ್ನ ಹೆಕ್ಕಿ ತೆಗೆದಿದ್ದಾರೆ. ಚಿತ್ರ ತೆಗೆಯುವಾಗಿನ ಹಿನ್ನಲೆ, ವಿವರಣೆಗಳು ಇನ್ನಷ್ಟು ಕೂತುಹಲ ಮೂಡುವಂತೆ ಮಾಡುತ್ತದೆ. ನುಡಿಚಿತ್ರಗಳು ಓದಿಸಿ, ನೋಡಿಸಿಕೊಂಡು ಹೋಗುತ್ತವೆ. ಒಟ್ಟಾರೆ ಒಂದು ಅಪರೂಪದ ಚಿತ್ರ-ಬರಹಗಳ ಬ್ಲಾಗ್. ಒಮ್ಮೆ ಭೇಟಿ ಕೊಡಿ.

ಪ್ರಮೋದ್ ಹೇಳ್ತಾರೆ ಇದೆಲ್ಲ ತಮಾಷೆಗಾಗಿ

" ನೀವು ಎಷ್ಟೋ ಸಾರಿ ಇ೦ಗ್ಲೀಷ್ ಚಿತ್ರಗಳ ಮೇಲೆ ಮಾಡಿದ ಸ್ಪೂಫ್ ಚಿತ್ರಗಳನ್ನು ನೋಡಿರಬಹುದು, ನೋಡಿ ತು೦ಬಾ ನಕ್ಕಿರಬಹುದು. ಹಾಗೇನೆ ಎಲ್ಲೋ ಮನಸಿನ ಮೂಲೆಯಲ್ಲಿ ಇ೦ತಹ ವಿಡ೦ಬಣಾ ವೀಡಿಯೋಸ್ ನಮ್ಮ ಕನ್ನಡದಲ್ಲೂ ಯಾಕೆ ಯಾರೂ ಮಾಡಲ್ಲ ನಿಮ್ಮನ್ನು ನೀವು ಪ್ರಶ್ನಿಸಿರಬಹುದು. ಬೇಸರಪಟ್ಟುಕೊ೦ಡು ಇದ್ರೂ ಇರಬಹುದು. ಆದ್ರೆ ಸ್ವಲ್ಪ ತಡ್ಕೊಲ್ಲಿ..ನಿಮಗಿಲ್ಲಿ ಕಾದಿದೆ.. ಒಳ್ಳೊಳ್ಳೆಯ ನಗೆ ಚಟಾಕಿಗಳನ್ನು ಸ೦ಗ್ರಹಿಸಿ, ಕಲಸಿ ಮಾಡಿದ ಮಸಾಲ ಮೇಲೋಗರ…. ನೋಡಿ..ಮಜಾ ಮಾಡಿ…"

ಹಾಗಂತ ಒಂದಿಷ್ಟು ರಗಳೆಗಳ ಲಿಂಕನ್ನ ತಂದು ಮುಂದಿಟ್ಟಿದ್ದಾರೆ ಪ್ರಮೋದ್. ಹೇಳಿ ಕೇಳಿ ಇದು ಸ್ವಲ್ಪ ರಗಳೆ ಸ್ವಲ್ಪ ಮಜಾದ ಬ್ಲಾಗು. ಏನಪ್ಪ ಈವರ ರಗಳೆಗಳು ಅಂತನ್ನುವವರು ಈ ಬ್ಲಾಗಿಗೆ ಕೂಡಲೇ ಭೇಟಿ ನೀಡಿ.

ಕಾಫಿಗೊಂದು ಕ್ಲಬ್

ನೀವು ಡೈರಿ ಬರೆಯುತ್ತೀರಾ? ಅದರಿಂದಾಗುವ ಪ್ರಯೋಜನವಾದರೂ ಏನು? ನಮಗೆ ಹೇಳುತ್ತಿರಾ ಅಂತ ಕೇಳುತ್ತಿದ್ದಾರೆ ಕಾಫಿ ಕ್ಲಬ್ಬಿನವರು.

" ಇದು ಕಾಫಿ ಕ್ಲಬ್! ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ. ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್‌ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ. ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ..." ಅನ್ನುವುದು ಈ ಕ್ಲಬ್ಬಿನ ಮಾಲೀಕರುಗಳ ಉವಾಚ. ತಲೆಕೆಡಿಸುವ ಚರ್ಚೆಗಳು, ಗಂಭಿರಾತಿಗಂಭೀರ ಬರಹಗಳು, ವೈಯಕ್ತಿಕ ಆರೋಪ ಪ್ರತ್ಯಾರೋಪಗಳು ಇವೆಲ್ಲವುಗಳಿಂದ ದೂರ ಉಳಿದು, ಬಿಸಿ ಕಾಫಿ ಕಪ್ಪಿನಂತಹ ನವಿರಾದ , ಓದಿದೊಡನೆ ರೆಫ್ರೆಶಿಂಗ್ ಅನಿಸುವಂತಹ ಬರಹಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನವೇ ಈ ಕಾಫಿ ಕ್ಲಬ್ಬು. ಕ್ಲಬ್ಬು ಇಷ್ಟವಾಯಿತೆಂದರೇ ನೀವು ಅವರೊಡನೆ ಒಂದಾಗಿ ಹರಟುತ್ತಾ ಕಾಫಿ ಹೀರಬಹುದು.

ಕಾಮನಬಿಲ್ಲಿನ ಪ್ರತಿಬಿಂಬ

ಆಫೀಸಿನ್ಯಾಗ ನಾಲ್ಕನೇ ಅಂತಸ್ತಿನ ಮ್ಯಾಲಿಂದ ಕಂಡ ಕಾಮನಬಿಲ್ಲಿನ ವರ್ಣನೆಯಲ್ಲಿದ್ದಾರೆ ಪ್ರತಿಬಿಂಬ ಬ್ಲಾಗಿನ ಅನಿಲ್. ಹಿಂಗೆ ಆಫೀಸಿನ ಕಿಟಕಿಯಿಂದ ದೂರದ ಬೆಟ್ಟ ನೋಡುತ್ತಿದ್ದವರು ಅಲ್ಲಿದ್ದ ಮಂಜು ಕಂಡು ಖುಷಿಗೊಂಡಿದ್ದಾರೆ. ಆಮೇಲೆ ಮಂಜು ಮಾಯವಾಗಿ, ಜಿಟಿ ಜಿಟಿ ಮಳೆ ಹತ್ತಿ ಅದರಾಗೊಂಚೂರು ಬಿಸಿಲು ಬಂದು ದೊಡ್ಡ ಕಾಮನಬಿಲ್ಲು ಅಲ್ಲೇ ಇಳಿದಂಗೆ ಕಾಣಿಸಿಕೊಂಡಂತಾಗಿ ಅಚ್ಚರಿಗೊಂಡು, ಅದನ್ನೆಲ್ಲ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಪ್ರತಿಬಿಂಬಕ್ಕೆ ತಂದಿದ್ದಾರೆ.

" ಇದಕ್ಕೂ ಮುಂಚೆ ಒಂದಲ್ಲ ಎರಡು ಬ್ಲಾಗುಗಳನ್ನು ತೆರೆದೆ. ಬರೆದದ್ದಕ್ಕಿಂತ ಮನಸ್ಸಿನಲ್ಲಿ ಗುಣಿಸಿದ್ದೇ ಹೆಚ್ಚಾಯ್ತು. ಕೊನೆಗೆ ಅವು ಅಂತರಿಕ್ಷದಲ್ಲಿನ ಇಂಧನ ಮುಗಿದ ಉಪಗ್ರಹಗಳಂತೆ space junk ಆಗಿ ಉಳಿದಿವೆ. ಮತ್ತೆ ಅವುಗಳಲ್ಲೇ ಬರೆಯಬೇಕು ಅನಿಸುತ್ತಿಲ್ಲ" ಅನ್ನುವ ಬ್ಲಾಗಿಗ ಅನಿಲ್, "ಅಲ್ಲಿಲ್ಲಿ ನೋಡಿದ್ದು, ಹೊಸತಾಗಿ ಓದಿದ್ದು, ಅಥವಾ ಸುಮ್ಮನೆ ಹಾಳು ಹರಟೆ, ಏನನ್ನಾದರೂ ಆಗಲಿ ನಿಯಮಿತವಾಗಿ ಬರೆಯುವ ಉಮೇದಿನೊಂದಿಗೆ ಈ ಬ್ಲಾಗ್ ಆರಂಭಿಸಿದ್ದಾರೆ. ಅವರ ಈ ಹೊಸ ಬ್ಲಾಗ್ ಈಗಷ್ಟೇ ಚಿಗಿತುಕೊಳ್ಳುತ್ತಿದೆ. ಇದಾದರೂ ಅವರ ಬರೆಯುವ ಉತ್ಸಾಹಕ್ಕೆ ಸ್ಪಂದಿಸಲಿ ಅನ್ನುವ ಹಾರೈಕೆ ನಮ್ಮದು. ಇವತ್ತಿನ ಓದಿಗೆ ಈ ಪ್ರತಿಬಿಂಬ.

ನೀ ನಿಲ್ಲದೇ ಏನಿದೆ... 

ಅವಳು ಬಿಟ್ಟು ಹೋದ ದಿನದಿಂದ ‘ನೀ ನಿಲ್ಲದೇ..' ಅಂತ ಕೊರಗುತ್ತಿದ್ದಾರೆ ಕೀರ್ತಿ ಶಂಕರಘಟ್ಟ.

ಹೇಳಿಕೇಳಿ ಇದು ವಿರಕ್ತ ಪ್ರೇಮಿಯೊಬ್ಬರ ಬ್ಲಾಗು. ಸಖತ್ ಖಾಸಗಿ ಪ್ರೇಮಪತ್ರಗಳಿಗಷ್ಟೇ ಇಲ್ಲಿ ಅವಕಾಶ.ಅವನು ಬಿಕ್ಕಿದ್ದು, ಅವಳು ಅತ್ತದ್ದು, ನಡುನಡುವೆ ನಕ್ಕಿದ್ದು, ಒಂದಿಷ್ಟು ಮುನಿಸು ಎಲ್ಲ ಇಲ್ಲಿ ಪತ್ರಗಳಾಗಿವೆ. ಕೆಲವು ಇವನು ಅವಳಿಗೆ ಬರೆದಿದ್ದು, ಉಳಿದವು ಅವಳೇ ಇವನಿಗೆ ಬರೆದದ್ದು. ಓದುವ ಕುತೂಹಲ ಇದ್ದವರು ಈ ಬ್ಲಾಗಿಗೊಮ್ಮೆ ಭೇಟಿ ನೀಡಿ.

ಮಹಾಬಲೇಶ್ವರರ ಕಾವ್ಯಸುಗ್ಗಿ

ಪ್ರೇಮಿಗಳ ದಿನದ ಈ ಹೊತ್ತಿನಲ್ಲಿ ಬ್ಲಾಗಿನಂಗಳದಲ್ಲಿದೆ ರಾಘವೇಂದ್ರ ಮಹಾಬಲೇಶ್ವರರ ಕವಿತೆಗಳ ಸುಗ್ಗಿ.

ನೋಡುತ್ತಲೇ ಸೆಳೆವ, ಚಂದದ ವಿನ್ಯಾಸವಿರುವ ಚೈತ್ರಪಥದಲ್ಲಿ ರಾಘವೇಂದ್ರರ ಒಂದಿಷ್ಟು ಕವಿತೆಗಳ ಹನಿಗಳಿವೆ. ಪುಟಕ್ಕೊಂದು ಹೊಸ ಕವಿತೆಯಂತೆ, ಪ್ರತಿ ಪುಟ ಬದಲಿಸಿದಾಗಲೂ ಹೊಸತೊಂದು ಭಾವ ತೆರೆದುಕೊಳ್ಳುತ್ತದೆ. ಕೆಲವು ರೂಪಕಗಳಂತೆ ಕಾಡುತ್ತವೆ. ಹಾಗೇ ಓದಿಸಿಕೊಂಡು ಹೋಗುತ್ತವೆ.

ಬೆಂಗಳೂರಿನಲ್ಲಿ ಗೂಗಲ್ ನಲ್ಲಿ ಉದ್ಯೋಗದಲ್ಲಿರುವ ರಾಘು ಚೈತ್ರಪಥದ ಜೊತೆಗೇ ಪ್ರಾರ್ಥನಾ ಎಂಬ ಇನ್ನೊಂದು ಬ್ಲಾಗಿನಲ್ಲೂ ಬ್ಲಾಗಿಸುತ್ತಿದ್ದಾರೆ. ಅಲ್ಲಿಯೂ ಅವರ ಪದ್ಯ-ಗದ್ಯಗಳನ್ನ ಓದಬಹುದು. ಅಲ್ಲಿ ಕವಿತೆಗಳಿದ್ದರೆ, ಇಲ್ಲಿ ಬರಹಗಳ ಮೂಲಕ ತಮ್ಮ ಅಂತರಂಗವನ್ನ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಈ ಎರಡು ಬ್ಲಾಗುಗಳೂ ನಿಮ್ಮ ದಿನದ ಓದಿಗೆ.

ಸ್ವರರಿಂಗಣದ ಚಿತ್ತಾರ

‘ಜಗತ್ತನ್ನೇ ಬದಲಿಸುವ ಶಕ್ತಿ ಯಾರಲ್ಲಿದೆ?’ ಹಾಗಂತ ಪ್ರಶ್ನೆ ಕೇಳುತ್ತಿದ್ದಾರೆ ಸ್ವರರಿಂಗಣದ ಪವನ. ಅವರೇ ಹೇಳುವಂತೆ ಅದು ಎಲ್ಲೆಲ್ಲೋ ಇಲ್ಲ, ನಮ್ಮೊಳಗಿದೆ. ನಮ್ಮ ಬದುಕನ್ನು ಜಗತ್ತನ್ನೂ ರೂಪಿಸಿಕೊಳ್ಳಬೇಕಾಗಿರುವವರು ನಾವೇ ಹೊರತು ಬೇರೆಯವರಲ್ಲ. ‘ಒಂದು ಅವ್ಯಕ್ತ ಶಕ್ತಿಯ ಅನಾವರಣದಿಂದಲೋ, ಅಜ್ಞಾತ ಶಕ್ತಿಯ ಅವತಾರದಿಂದ ಜಗತ್ತು ಬದಲಾಗುವ ನಿರೀಕ್ಷೆ ಮಾಡಬೇಡಿ, ನಮ್ಮನ್ನ ನಾವು ಬದಲಿಸಿಕೊಂಡು ಜಗತ್ತನ್ನ ಬದಲಿಸೋಣ’ ಅನ್ನುವುದು ಅವರ ಸಲಹೆ.

ಸ್ವರರಿಂಗಣ ಎಂಬ ಹೆಸರಿನ ಈ  ಬ್ಲಾಗಿನಲ್ಲಿ ಪವನ್ ಹೀಗೆ ತಮ್ಮ ಅನಿಸಿಕೆಗಳನ್ನ, ಭಾವಗಳನ್ನ ಹಂಚಿಕೊಳ್ಳುತ್ತಲಿರುತ್ತಾರೆ. ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ಅವರು ಯಕ್ಷತಜ್ಞ ಶಂಭುಹೆಗಡೆಯ ನೆನಪಿನಲ್ಲಿ ಚಂದದೊಂದು ಲೇಖನ ಬರೆದಿದ್ದಾರೆ. ಸಮಯ ಇಲ್ಲದವರಿಗೊಂದು ಕಿವಿಮಾತು ಹೇಳಿದ್ದಾರೆ. ಇಂತಹುದ್ದೇ ಒಂದೆರಡು ಲೇಖನಗಳಿವೆ. ಓದಿ ಬನ್ನಿ. 

ಜ್ಯೋತಿ ಹೇಳ್ತಾರೆ ನನ್ನ ಬ್ಲಾಗು ನನ್ನದು

ಇಷ್ಟೆಲ್ಲ ಬ್ಲಾಗುಗಳ ನಡುವೆಯೂ ‘ನನ್ನ ಬ್ಲಾಗು ನನ್ನದು’ ಅಂತಿದ್ದಾರೆ ಜ್ಯೋತಿ.

ಇದೊಂಥರ ನನ್ನ ಹಾಡು ನನ್ನದು ಅನ್ನುವ ಥರ. ಖಾಸಗಿ ಡೈರಿಯಂತಿರುವ ಬ್ಲಾಗಿನಲ್ಲಿ ಜ್ಯೋತಿ ತಮ್ಮೆಲ್ಲ ಹಾಡು-ಪಾಡುಗಳನ್ನು ದಾಖಲಿಸುತ್ತಿದ್ದಾರೆ, ಯಾವ ಕಟ್ಟುಪಾಡುಗಳೂ ಇಲ್ಲದೆ. ನಿನ್ನೆ ರೂಮಿನಲ್ಲಿ ಒಬ್ಬರೇ ಇದ್ದವರಿಗೆ ಇಲ್ಲಸಲ್ಲದ ಭಯಗಳೆಲ್ಲ ಶುರುವಾಗಿ ಅದೊಂದು ಭಯಾನಕ ರಾತ್ರಿಯಾಗಿ ಮಾರ್ಪಟ್ಟಿದೆ. ಅದನ್ನೆಲ್ಲ ಒಂದೇ ಉಸಿರಿನಲ್ಲಿ ಇಲ್ಲಿ ಹೇಳುತ್ತಿದ್ದಾರೆ.

ಪರೀಕ್ಷೆ ಪಾಸಾಗಿದ್ದು, ಸಿನಿಮಾ ನೋಡಿದ್ದು, ಬೆಂಗಳೂರಿನಲ್ಲಿ ಸುಮ್ಮನೆ ತಿರುಗಿದ್ದು, ತೊಗರೆ ಹಂಕಲ್ ತೋಟಕ್ಕೆ ಪ್ರವಾಸ ಹೋಗಿದ್ದು, ಆಟೋ ಚಾಲಕರ ಜೊತೆ ಮಾತಿಗಿಳಿದಿದ್ದು, ತೀರಿಕೊಂಡ ಮಾವನ ಮಗನ ನೆನಪು..... ಹೀಗೆ ಎಲ್ಲ ಖಾಸಗಿ ಸಂಗತಿಗಳೂ ಇಲ್ಲಿ ಬರಹಗಳಾಗಿವೆ. ಒಮ್ಮೆ ಓದಿಬನ್ನಿ. 

ಸತ್ಯನಾರಾಯಣರ ಒಂದಿಷ್ಟು ಮಾತು

ಇಷ್ಟೆಲ್ಲ ಸುದ್ದಿ-ಸಮಾಚಾರಗಳ ನಡುವೆ ‘ನಂದೊಂದ್ಮಾತು’ ಅನ್ನುತ್ತಲೇ ದಿನದ ಬ್ಲಾಗಿನಂಗಳಕ್ಕೆ ಬಂದಿದ್ದಾರೆ ಬಿ ಆರ್ ಸತ್ಯನಾರಾಯಣ.

ವೃತ್ತಿಯಲ್ಲಿ ಗ್ರಂಥಪಾಲಕರಾಗಿರುವ ಸತ್ಯನಾರಾಯಣ ಪ್ರವೃತ್ತಿಯಿಂದ ಲೇಖಕರು. ಅದಾಗಲೇ ಅವರ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ. ಅವುಗಳೊಟ್ಟಿಗೆ ಒಂದಿಷ್ಟು ಹೊಸ ತರಹದ ಲೇಖನಗಳನ್ನೂ ಸೇರಿಸುತ್ತಾ ಬ್ಲಾಗಿಸುತ್ತಿದ್ದಾರೆ. ಸದ್ಯಕ್ಕಿಲ್ಲಿ ‘ಅಜ್ಜ ಹೇಳಿದ ಗುಂಡನ ಕಡುಬು’ ಕಥೆ ಇದೆ. ಜನಪ್ರಿಯ ಕಥೆಯೊಂದನ್ನ ಮತ್ತೆ ಮೆಲುಕು ಹಾಕುತ್ತಿದ್ದಾರೆ. ಅವರ ‘ನನ್ನ ಹೈಸ್ಕೂಲು ದಿನಗಳು’ ಪುಸ್ತಕ ಸರಣಿಯಾಗಿ ಬರುತ್ತಿದೆ. ಜೊತೆಗೆ ನಾಲ್ಕಾರು ಕವಿತೆಗಳು, ಅವರೇ ತೆಗೆದ ಚಿತ್ರಗಳು, ಒಂದಿಷ್ಟು ವಿಚಾರಪೂರ್ಣ ಲೇಖನಗಳಿವೆ. ಒಮ್ಮೆ ಓದಿ ಬನ್ನಿ.

ಹಬ್ಬಗಳ ಸುದ್ದಿಗೊಂದು ಬ್ಲಾಗ್

ಐಟಿ-ಬೀಟಿಗಳು ಕಾಲಿಟ್ಟ ಗಳಿಗೆಯಲ್ಲೇ ಕನ್ನಡ ಭಾಷೆ-ಸಂಸ್ಕೃತಿ ಕೆಡುವುದಕ್ಕೆ ಶುರುವಾಯಿತು ಅನ್ನುವ ಅಪವಾದವಿದೆ. ಅದರಲ್ಲೂ ಬೆಂಗಳೂರು ಹಾಳಾಗಿಹೋಯಿತು ಅನ್ನುವ ಮಾತಿದೆ. ಆದರೂ ಅಲ್ಲೊಂದು ಇಲ್ಲೊಂದು ಕಂಪನಿಗಳು ನಮ್ಮ ನಾಡಹಬ್ಬಗಳ ಆಚರಣೆಗಳಿಗೆ ಒತ್ತುಕೊಟ್ಟು ಈ ಅಪವಾದವನ್ನ ಸುಳ್ಳಾಗಿಸುವ ಪ್ರಯತ್ನದಲ್ಲಿವೆ. ಇಂತಹ ಪ್ರೋತ್ಸಾಹಕಾರಿ ಬೆಳವಣಿಗೆಯನ್ನು ಗುರುತಿಸಿ ಬೆಳೆಸುವ ಕಾರ್ಯಕ್ಕೆಂದೇ ಶುರುವಾಗಿದೆ 'ಕನ್ನಡ ನಾಡಹಬ್ಬ.'

"ಬೆಂಗಳೂರಿನಲ್ಲಿರೋ ನೂರಾರು ಕಂಪನಿಗಳಲ್ಲಿ ಕನ್ನಡದ ನಾಡ ಹಬ್ಬಗಳಾದ ರಾಜ್ಯೋತ್ಸವ, ಎಳ್ಳು ಹಬ್ಬ (ಸಂಕ್ರಾಂತಿ), ಯುಗಾದಿ ಇನ್ನೂ ಮುಂತಾದವನ್ನು ಆಚರಿಸುತ್ತಾ ಇದ್ದಾರೆ. ಆ ಎಲ್ಲಾ ಸುಂದರ ಕ್ಷಣಗಳನ್ನ, ಅಂತಹ ಎಲ್ಲ ಹಬ್ಬದ ಸವಿ ನೆನಪನ್ನ ಎಲ್ಲ ಕನ್ನಡ ಬಂಧುಗಳೊಂದಿಗೆ ಹಂಚಕೊಳ್ಳೊಕೆ ಇರೋ ಅವಕಾಶವೇ ಈ ಬ್ಲಾಗ್." ನಾಡಪ್ರೇಮಿಗಳು ಈ ಬ್ಲಾಗನ್ನ ಹುಟ್ಟುಹಾಕಿದ್ದಾರೆ.ವಿವಿಧ ಕಂಪನಿಗಳಲ್ಲಿ ಜರುಗುವ ಕನ್ನಡ ಪರ ಕಾರ್ಯಕ್ರಮಗಳನ್ನ ಇಲ್ಲಿ ಕಾಣಬಹುದು. ಹಾಗೇ ನಿಮ್ಮ ಕಂಪನಿಯಲ್ಲೂ ಇಂತಹ ಕಾರ್ಯಕ್ರಮಗಳು ನಡೆದಿದ್ದರೆ ಅದರ ವಿವರಗಳನ್ನ ಇಲ್ಲಿ ಹಂಚಿಕೊಳ್ಳಬಹುದು.

ಉದಯ್ ಬರೆಯುವ ಬಿಸಿಲ ಹನಿ

ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು. ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. 

ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ.ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು.ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ.ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ,ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ.ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ.ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ.ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು.ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ.ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು.

ಉದಯ್ ತಮ್ಮ, ಅನುಭವ, ನೆನಪು-ನೇವರಿಕೆಗಳನ್ನೇ ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ.ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದಿಬನ್ನಿ. 

ಹನಿ ಹನಿಯಲ್ಲೂ ಪ್ರೇಮಕಹಾನಿ

" ಹೌದು ನಮ್ಮ ಸ್ವಭಾವವೇ ಹಾಗೆ. ಜೀವನದಲ್ಲಿ ಏನೋ ಸಾಧಿಸಬೇಕು ಎಂಬ ಛಲದಿಂದ ಕಾಲೇಜಿಗೆ ಬರುತ್ತೇವೆ. ಆಸೆ-ಆಕಾಂಕ್ಷೆ-ಗುರಿ ಎಲ್ಲಾ ನಮ್ಮ ಸ್ನೇಹಿತರೇ ಆಗಿರುತ್ತವೆ. ವಿಪರ್ಯಾಸವೆಂಬತೆ ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಅದನ್ನೆಲ್ಲಾ ಮರೆತು ಬಿಡುತ್ತೇವೆ. ಕಾರಿಡಾರಿನಲ್ಲಿ ಅವಳ್ಯಾರೋ ನಕ್ಕು ಬಿಟ್ಟರೆ ನಾವು ಕ್ಲೀನ್ ಬೌಲ್ಡ್. ನಂತರ ಶುರು ಆಕೆಗಾಗಿ ಹುಡುಕಾಟ. ನಾವು ಹುಡುಗರೇ ಹೀಗೆ!"

ಹಾಗಂತ ಹೇಳ್ತಾ ಇದ್ದಾರೆ ಹನಿ ಹನಿಯಲ್ಲೂ ಪ್ರೇಮ ಕಹಾನಿಯನ್ನು ಹುಡುಕೋ ಈ ಹುಡುಗರು. ಇವರ ಈ ಹುಡುಕಾಟ ಇಲ್ಲಿಗೇ ನಿಂತಿಲ್ಲ. ಹುಡುಗಿಯನ್ನ ಹಸೆಮಣೆಗೆ ಆಹ್ವಾನಿಸುವ ವರೆಗೆ ಮುಂದುವರಿದಿದೆ. ವ್ಯಾಲೆಂಟೈನ್ ದಿನದಂದೇ ಮದುವೆ ಆಗುವ ಹಂಬಲ ಈ ಹುಡುಗನದ್ದು.

ಹೆಸರೇ ಹೇಳುವ ಹಾಗೇ ಇದು ಪ್ರತಿ ಹನಿಯಲ್ಲೂ ಪ್ರೀತಿ ಹುಡುಕೋ ಹಂಬಲದಿಂದ ಬರೆಯುತ್ತಿರುವ ಪ್ರೇಮಕಹಾನಿಗಳ ಸರಮಾಲೆ. ಕಳೆದುಹೋದ ಪ್ರೀತಿಯ ನೆನಪು, ಪ್ರೇಮ ನಿವೇದನೆ ಎಲ್ಲವೂ ಇಲ್ಲಿದೆ. ಒಮ್ಮೆ ಭೇಟಿ ಕೊಡಿ.

ಲೈವ್ ಫ್ರಮ್ ಸಮ್ಮೇಳನ

ಚಿತ್ರದುರ್ಗದಲ್ಲೀಗ ಎಲ್ಲೆಲ್ಲೂ ಸಾಹಿತ್ಯ ಸಮ್ಮೇಳನದ ಸಂಭ್ರಮ. ಅಕ್ಷರ ಜಾತ್ರೆಯ ಸಡಗರ. ಇಂತಹದ್ದೊಂದು ದಿನಕ್ಕಾಗಿಯೇ ವರ್ಷದಿಂದ ಬ್ಲಾಗು ತೆರೆದು ಕುಂತಿದ್ದ ದುರ್ಗದ ಹುಡುಗರು ತಮ್ಮೂರ ಹಬ್ಬದ ಸವಿ ಕ್ಷಣಗಳನ್ನ ಲೈವ್ ಕವರೇಜ್ ಮಾಡುತ್ತಾ ನಿಂತಿದ್ದಾರೆ. ಕೋಟೆಯ ನಾಡಿನಲ್ಲಿ ನಡೆಯುತ್ತಿರುವ ಎಪ್ಪತ್ತೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ನಾನಾ ಮಜಲುಗಳನ್ನ ಈ ಬ್ಲಾಗಿನಲ್ಲಿ ಒಟ್ಟಾಗಿ ಕಾಣಬಹುದು. ಹೆಚ್ಚಿಗೇ ಹೇಳುವ ಅಗತ್ಯವಿಲ್ಲ. ಓವರ್ ಟು ಚಿತ್ರದುರ್ಗ...

ತಾರೆಗಳಾಚೆ ಪಯಣಿಗನ ಕಥೆಗಳು

ಸೀಳಿದ ಬಿಂದಿಗೆ ಎಂಬ ಕಥೆಯೊಂದಿಗೆ ದಿನದ ಬ್ಲಾಗಿನಂಗಳಕ್ಕೆ ಬಂದಿದ್ದಾರೆ ತಾರೆಗಳಾಚೆಯ ಪಯಣಿಗ.

ಬಿಂದಿಗೆ ಸೀಳಿದ್ದರೂ, ಅದರಿಂದ ನಿತ್ಯ ಸುರಿಯುತ್ತಿದ್ದ ನೀರಿನಿಂದಾಗಿ ನಾಲ್ಕಾರು ಗಿಡ ಹುಟ್ಟಿ ಹೂಬಿಟ್ಟಿತು.ಹೀಗೆ ಸೀಳಿದ ಬಿಂದಿಗೆಯಿಂದ ನೀರು ತುಳುಕಿದ್ದರಿಂದಲೇ ಸುತ್ತಮುತ್ತ ಗಿಡಗಳು ಬೆಳೆಯಲು ಸಾಧ್ಯವಾಯಿತು. ಅಂತೆಯೇ, ‘ಪ್ರತಿಯೊಬ್ಬರಿಗೂ ಅವರದೇ ಆದ ಕುಂದು ಕೊರತೆ ಇರುತ್ತದೆ. ಅಂತಹ ಕೊರತೆಗಳೇ ನಮ್ಮನ್ನು ಅತ್ಯಂತ ವಿಶಿಷ್ಟವನ್ನಾಗಿ ಮಾಡುತ್ತವೆ; ಅವುಗಳೇ ನಮಗೆ ಸಾಕಷ್ಟು ಪುರಸ್ಕಾರಗಳನ್ನು ಮರ್ಯಾದೆಯನ್ನು ತಂದುಕೊಡುತ್ತವೆ’ ಅನ್ನುವುದು ಈ ಕಥೆಯ ನೀತಿ.

ತಾರೆಗಳಾಚೆ ಅನ್ನುವ ಬ್ಲಾಗಿನಲ್ಲಿ ಬ್ಲಾಗಿಸುತ್ತಿರುವ ಈ ಅನೂಹ್ಯ ಲೋಕದ ಪಯಣಿಗ ವೀರಣ್ಣ ಕುಮಾರ್,  ಇಂತಹದ್ದೇ ಇನ್ನೊಂದಿಷ್ಟು ಕಥೆಗಳನ್ನ ಬರೆದಿದ್ದಾರೆ. ಅವರ ‘ಕುಕೀಸ್ ಪ್ಯಾಕೆಟ್’, ‘ಕಿಟಕಿಯಾಚೆಯ ಜಗತ್ತು’ ಕಥೆಗಳು ಅದಕ್ಕೆ ಉದಾಹರಣೆ. ಇನ್ನುಳಿದ ಕಥೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದರೆ ತಾರೆಗಳಾಚೆಯ ಲೋಕಕ್ಕೆ ಹೋಗಿಬನ್ನಿ.

ಪುಗಸಟ್ಟೆಯ ಕೇಸರೀಕರಣ ಭಾಷಣ

" ಬಿಜೆಪಿಯವರ ‘ಕೇಸರೀಕರಣ’ ವಿರುದ್ಧ ಕಾಂಗ್ರೆಸ್ಸಿನವರ್ಯಾಕೆ ಪ್ರತಿ ಹೋರಾಟ ಮಾಡಬೇಕು. ಅಂದ್ರೆ ಅವರಿಗೆ ಕೇಸರಿಕರಣ ಕಂಡ್ರೆ ಆಗೋಲ್ವ" ಹೀಗಂತ ತಮ್ಮದೊಂದು ಪುಗಸಟ್ಟೆ ಪ್ರಶ್ನೆಯನ್ನ ಕೇಳುತ್ತಿದ್ದಾರೆ ಪುಗಸಟ್ಟೆ ಅನ್ನುವ ಬ್ಲಾಗಿನ ಅನಾಮಿಕ. ದೇಶದ ಭಾವುಟದೊಳಗೇ ಕೇಸರಿ ಇರೋವಾಗ ಕೇಸರಿಕರಣ ಯಾಕೆ ನಡೀಬಾರ್ದು? ಅದನ್ನ ಕಾಂಗ್ರೆಸ್ಸಿನವರ್ಯಾಕೆ ವಿರೋಧಿಸಬೇಕು ಅನ್ನೋದು ಅವರ ಇನ್ನೊಂದು ಪುಕ್ಕಟೆ ಪ್ರಶ್ನೆ.

ಹೀಗೆ ಕೆಲಸಕ್ಕೆ ಬಾರದ್ದು- ಸಲಹೆ, ಸೂಚನೆ ಮತ್ತು ಸಂಶೋಧನೆಗಾಗಿಯೇ ಪುಗಸಟ್ಟೆ ಬ್ಲಾಗನ್ನ ತೆರೆದು ಕುಂತಿದ್ದಾರೆ ಈ ಬ್ಲಾಗಿಗ. ಹೀಗೆ ಸುಮ್ಮನೆ ಮನದಲ್ಲಿ ಸುಳಿದುಹೋದ ವಿಚಾರಗಳನ್ನ ಪುಗಸಟ್ಟೆಯಾಗಿ ಬರೆಯೋದೆ ಇವರ ಕಾಯಕ. ನೀವು ಪುಗಸಟ್ಟೆಯಾಗಿ ಓದುವಿರಾದರೇ ಒಮ್ಮೆ ಹೋಗಿಬನ್ನಿ.

ಶಿವಪ್ರಸಾದರ ತ್ರಿವಳಿ ಬ್ಲಾಗುಗಳು

ಟಿವಿ೯ ಸುದ್ದಿವಾಹಿನಿ ವರದಿಗಾರ ಶಿವಪ್ರಸಾದ್ ತಮ್ಮ ಉತ್ಸಾಹಿ ವರದಿಗಾರಿಕೆಯಿಂದ ಹೆಸರಾಗುತ್ತಿರುವವರು. ಮಾತ್ರವಲ್ಲ ಬ್ಲಾಗಿಸಲು ಅಷ್ಟೇ ಉತ್ಸಾಹ ಉಳಿಸಿಕೊಂಡಿರುವವರು. ದೆಹಲಿಯಲ್ಲಿರುವ ಶಿವಪ್ರಸಾದ್ ತಮ್ಮೆಲ್ಲ ಕೆಲಸಗಳ ಒತ್ತಡದ ನಡುವೆಯೂ ಚಂದ್ರಯಾನದ ಬಗ್ಗೆ ಚಂದದೊಂದು ಪುಸ್ತಕ ಬರೆದಿದ್ದರು. ಮಾಜಿ ರಾಷ್ಟಪತಿ ಕಲಾಂ ಕೈಯಲ್ಲೇ ತಮ್ಮೀ ಪುಸ್ತಕ ಬಿಡುಗಡೆಯಾಗಬೇಕೆಂಬ ಆಸೆ ಅವರದ್ದು. ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನಗಳ ಮೇಲೆ ಪ್ರಯತ್ನಗಳ ನಂತರ ಕೊನೆಗೂ ಆಸೆ ಕೈ ಗೂಡಿದೆ. ಕಡೆಗೂ ಕಲಾಂ ಕೈಯಿಂದಲೇ ಪುಸ್ತಕ ಬಿಡುಗಡೆಯಾಗಿದೆ.

ಹೀಗೆ ಪುಸ್ತಕ ಬಿಡುಗಡೆಗಾಗಿ ನಡೆಸಿದ ಯತ್ನ-ಪ್ರಯತ್ನಗಳ ಕಥೆಯನ್ನ ಶಿವು ತಮ್ಮ ‘ಅಲೆಯುವ ಮನ' ದಲ್ಲಿ ದಾಖಲಿಸಿದ್ದಾರೆ. ಕಲಾಂರ ಒಟ್ಟಿಗೆ ಕಳೆದ ಕ್ಷಣಗಳು, ನೆನಪುಗಳು ಇಲ್ಲಿವೆ. ಇನ್ನೂ ಹೆಚ್ಚಿನ ಸುದ್ದಿಯನ್ನ ಅವರ ಇನ್ನೊಂದು ಬ್ಲಾಗು ‘ಚಿಂತನಗಂಗಾ’ ದಲ್ಲಿ ಕಾಣಬಹುದು. ಜೊತೆಗೆ, ಪುಸ್ತಕ ಬರೆದ ಖುಷಿಯಲ್ಲೇ ‘ಕನ್ನಡ ಬುಕ್’ ಅನ್ನುವ, ಕನ್ನಡ ಪುಸ್ತಕಗಳ ಸುದ್ದಿ ಸಮಾಚಾರಗಳಿಗಾಗಿಯೇ ಇರುವ ಇನ್ನೊಂದು ಬ್ಲಾಗನ್ನ ಕೂಡ ಆರಂಭಿಸಿದ್ದಾರೆ. ಒಟ್ಟಾರೆ ಈ ದಿನ ಶಿವಪ್ರಸಾದರ ತ್ರಿವಳಿ ಬ್ಲಾಗುಗಳ ಸುಗ್ಗಿ.

ಮನಸ್ವಿ ಕಂಡ ಕೇರಳ

‘ಹಾಗೇ ಸುಮ್ಮನೆ’ ಅಂತಂದು ಬ್ಲಾಗಿಸುವ ಮನಸ್ವಿ ಈ ಬಾರಿ ಕೇರಳ ಸುತ್ತಾಡಿ ಬಂದಿದ್ದಾರೆ. ಐದು ದಿನಗಳು ಮಲಯಾಳಿ ನೆಲದಲ್ಲಿ ತಿರುಗಾಡಿದ ಬಂದ ಕಥೆ ತಂದಿದ್ದಾರೆ.

ತಿಂಗಳ ಹಿಂದೆ ನೆಂಟರಿಷ್ಟರ ಜೊತೆ ಕೇರಳಕ್ಕೆ ಹೊರಟವರು, ಆರಂಭದಲ್ಲೇ ಡ್ರೈವರನ ತೂಕಡಿಕೆಗೆ ತುತ್ತಾಗುತ್ತಾ ಒಂದೊಂದೇ ಊರು ಮುಟ್ಟಿದ್ದಾರೆ. ಶುದ್ಧ ಸಸ್ಯಾಹಾರಿಗಳಿಗೆ ವೆಜ್ ಊಟವೇ ಸಿಗದೇ ಕೆಲವೊಮ್ಮೆ ಸಿಕ್ಕ ಅಪ್ಪಮ್ಮ್ ನಲ್ಲೇ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಅಂತೆಯೇ, ಕೇರಳಿಗರ ಶುದ್ಧ ಬಿಳಿ ಉಡುಪಿಗೆ ಮಾರುಹೋಗಿದ್ದಾರೆ. ಶಂಕರಾಚಾರ್ಯರ ಜನ್ಮಸ್ಥಳದಲ್ಲಿರುವ ದೇವಸ್ಥಾನದ ದರುಶನ ಮಾಡಿ, ಮುನಾರ್ ಪರ್ವತ ಶ್ರೇಣಿಗಳನ್ನೆಲ್ಲ ಬಿಡದೇ ತಿರುಗಿದ್ದಾರೆ. ಸನ್ ಸೆಟ್ ಪಾಯಿಂಟ್ ನಲ್ಲಿ ಸೂರ್ಯ ಸರಿಯಾಗಿ ನೋಡಸಿಗದೇ ಮರುಗಿದ್ದಾರೆ. ಕೇರಳಿಗರ ಪ್ರವಾಸೋದ್ಯಮ ಕಲೆಯನ್ನ ಮೆಚ್ಚುತ್ತಲೇ, ನಮಗೀ ತಲೆ ಇಲ್ಲವಲ್ಲ ಅಂತ ಕೊರಗಿದ್ದಾರೆ. ಮನೆಯಂಥ ಬೋಟುಗಳಲ್ಲಿ ಸಾವಿರಗಟ್ಟಲೆ ಕೊಟ್ಟು ಖುಷಿಯಾಗಿ ತೇಲಿದ್ದಾರೆ.

ಅವರೇ ಹೇಳುವಂತೆ ‘ಇದು ಒಂದು ಸಂಪೂರ್ಣವಾದ ಮಾಹಿತಿ ಹೊತ್ತ ಪ್ರವಾಸ ಕಥನವಾಗಲಾರದು’. ಹಾಗೇ ಬರೆಯುವ ಜಾಯಮಾನವೂ ಅವರದ್ದಲ್ಲ. ಹಾಗೇ ಸುಮ್ಮನೆ ತಮಗನಿಸಿದ್ದನ್ನ ಬರೆದುಕೊಂಡಿದ್ದಾರೆ. ನೀವು ಸುಮ್ಮನೆ ಒಮ್ಮೆ ಓದಿಬನ್ನಿ.

ಕಲಗಾರರ ಪೂರ್ಣವಿರಾಮ

‘ಪೂರ್ಣ ವಿರಾಮ’ ಹಾಗಂದರೇ ಬರೀ ಫುಲ್ ಸ್ಟಾಪ್ ಅಲ್ಲ. ‘ಕೊನೆಯ ಸಾಲುಗಳ ಕೊನೆಯಲ್ಲಿ ಕಂಗೊಳಿಸುವ, ಎಂದೂ ಕೊನೆಯಾಗದ ಕಪ್ಪುಚುಕ್ಕಿ.’ ಈ ಹೆಸರನ್ನೇ ಇಟ್ಟುಕೊಂಡು, ಪೂರ್ಣ ವಿರಾಮ ಹಾಕದೇ ಬ್ಲಾಗಿಸುತ್ತಿದ್ದಾರೆ ರಾಮ ಕಲಗಾರು.

ಸಿನಿಮಾ ಪತ್ರಕರ್ತರ ಈ ಬ್ಲಾಗಿನಲ್ಲಿ ಹೆಚ್ಚಾಗಿ ಕನ್ನಡ ಚಿತ್ರೋದ್ಯಮದ ಸುದ್ದಿ ಸಮಾಚಾರಗಳಿವೆ. ಬಿಡುಗಡೆಯಾದ ಸಿನಿಮಾಗಳ ಕುರಿತ ವಿಮರ್ಶೆಗಳು, ಕನ್ನಡದ ಪ್ರಸಿದ್ಧ ನಟ-ನಟಿಯರ ಜೊತೆ ಬ್ಲಾಗಿಗರು ನಡೆಸಿದ ಸಂದರ್ಶನಗಳು ಇನ್ನಿತರ ಸಿನಿಮಾ ಸಮಾಚಾರಗಳನ್ನ ಇಲ್ಲಿ ಕಾಣಬಹುದು. ಬರೀ ಫಿಲ್ಮಂ ಮಾತ್ರವಲ್ಲ, ರಾಮು ಕಥೆ-ಕವಿತೆ ಕೂಡ ಬರೆದಿದ್ದಾರೆ. ಓದಬೇಕಿದ್ದವರು ಪೂರ್ಣವಿರಾಮಕ್ಕೆ ಭೇಟಿ ನೀಡಿ.

ರೋಹಿಣಿಯ ಭಾವನಲಹರಿ

‘ಯಾರೋ ಬರೆದಿದ್ದು ನೆನಪು ಬರ್ತಾ ಇಲ್ಲ. ಆದರೂ ಮನಸ್ಸಿಗೆ ಹಿಡಿಸಿದ ಸಾಲುಗಳು...’ ಹೀಗಂತ ತಮ್ಮನ್ನ ಕಾಡಿದ ಒಂದಿಷ್ಟು ಸಾಲುಗಳನ್ನ ಹೆಕ್ಕಿ ಬ್ಲಾಗಿಸುತ್ತಿದ್ದಾರೆ ಭಾವನಲಹರಿಯ ರೋಹಿಣಿ. ಹೀಗೆ ಯಾರೋ ಬರೆದ, ಅವರ ಮನಕ್ಕೆ ಮೆಚ್ಚಿದ ಸಾಲುಗಳು ಮಾತು ಮತ್ತು ಪ್ರೀತಿಯ ಸುತ್ತ ಗಿರಕಿ ಹೊಡೆಯುತ್ತಿವೆ.

ಮೊನ್ನೆ ದೇವಸ್ಥಾನಕ್ಕೆಂದು ಹೊರಟ ಬ್ಲಾಗಿಗರು, ವಾಪಸ್ಸು ಬರೋವಾಗ ಅಲ್ಲೇ ಕೆಲಸ ಮಾಡುತ್ತಿದ್ದ ಎರಡು ಬಡಮಕ್ಕಳನ್ನ ಕಂಡಿದ್ದಾರೆ. ಈ ಬಾಲ ಕಾರ್ಮಿಕರನ್ನ ಕಂಡು ಇವರ ಮನನೊಂದು, ಅವರನ್ನ ಹೇಗಾದರೂ ಶಾಲೆಗೆ ಸೇರಿಸಬೇಕು ಅಂತ ಶತಪ್ರಯತ್ನ ಮಾಡಿದ್ದಾರೆ. ಅಂದಿನಿಂದ, ಇನ್ಮುಂದೆ ಎಲ್ಲಿ ಬಾಲ ಕಾರ್ಮಿಕರು ಕಾಣಸಿಗುತ್ತಾರೋ ಅಲ್ಲಿನ ಹತ್ತಿರದ ಶಾಲೆಗೆ ತಿಳಿಸಿ ಅವರನ್ನ ಸ್ಕೂಲಿಗೆ ಕಳುಹಿಸುವ ಪ್ರಯತ್ನ ಮಾಡ್ತೀನಿ ಅಂತ ಪ್ರತಿಜ್ಞೆ ಮಾಡಿದ್ದಾರೆ.

ಆಮೇಲೆ, ತಾಯಿಯೇ ದೇವರು ನೀವೇನಂತೀರಾ? ಅಂತ ಪ್ರಶ್ನೆ ಹಾಕಿದವರು ಬೇಜಾರಲ್ಲಿ ಒಂದೆರಡು ಪತ್ರ ಬರೆದಿದ್ದಾರೆ. ಇಂತಿಪ್ಪ ಭಾವನೆಗಳ ಲಹರಿಗಳನ್ನ ಓದಬೇಕಿದ್ದವರು ಈ ಬ್ಲಾಗಿಗೆ ಭೇಟಿ ನೀಡಿ.

ಮತ್ತೆ ಬಂದ ಪಯಣಿಗ

ಇನ್ನೇನು ಈ ಬ್ಲಾಗೂ ಮುಚ್ಚಿಹೋಯಿತು ಅಂದುಕೊಳ್ಳುತ್ತಿರುವಾಗಲೇ, ನಿನ್ನೆ ನಾಳೆಗಳ ನಡುವಿನ ಈ ಪಯಣಿಗ ಹೊಸದೊಂದು ಲೇಖನ ಹಾಕಿದ್ದಾರೆ. ಬರೋಬ್ಬರಿ ಹಂತು ತಿಂಗಳ ನಂತರ!

ಲಂಡನ್ನೆಂಬ ದೂರದೂರಿನಲ್ಲಿ ಕೂತು ಬ್ಲಾಗಿಸುವ ಈ ಕನ್ನಡಿಗ ಈ ಬಾರಿ ಹೊಸ ವರ್ಷಕ್ಕೆ ತಿರುಗಿದ ಲಂಡನ್ನಿನ ಸಂಭ್ರಮದ ಕುರಿತು ಬರೆದಿದ್ದಾರೆ. ರಿಸೆಷನ್ನಿನ ಬಿಸಿಯಲ್ಲಿ ಕರಗುತ್ತಿರೋ ಲಂಡನ್ ನಲ್ಲಿ ಹೊಸ ವರ್ಷ ಎಂದಿನಂತಿರದಿದ್ದರೂ , ಹೊಸ ವರ್ಷವಾದರೂ ಹೊಸ ಬೆಳಕಿನತ್ತ ಕೊಂಡೊಯ್ಯಬಲ್ಲದೆಂಬ ಆಶಯ ಅಲ್ಲಿನ ಜನರದ್ದು. ಹೊಸವರ್ಷದ ಸ೦ಜೆಗೆ ವಿಶೇಷವಾಗಿ ಅಲ೦ಕೃತಗೊ೦ಡ ಲ೦ಡನ್ನಿನ ಒ೦ದೆರಡು ತುಣುಕುಗಳನ್ನೂ ಅದರ ಪ್ರತೀಕವೆಂಬಂತೆ ಸೇರಿಸಿದ್ದಾರೆ.

ಇನ್ನೇನು ಜನವರಿ ಮುಗಿಯೋ ಹೊತ್ತಲ್ಲಿ, ಈ ಬ್ಲಾಗಿಗರ ಹೊಸ ವರ್ಷದ ನೆನಪು ಕಳೆದ ದಿನಗಳನ್ನ ಮತ್ತೆ ಮೆಲುಕು ಹಾಕುವಂತೆ ಮಾಡುತ್ತಿದೆ. ನಿನ್ನೆ ನಾಳೆಗಳ ಪಯಣಿಗನ ಬ್ಲಾಗ್ ಪಯಣ ಮುಂದಾದರೂ ಎಗ್ಗಿಲ್ಲದೇ ಸಾಗಲಿ ಎಂಬುದೇ ನಮ್ಮ ಹಾರೈಕೆ.

ಸಂಶಯಪಿಶಾಚಿ ಕಂಡ ಚಿತ್ರದುರ್ಗ

"ಹಾಗೇ ಸುಮ್ಮನೆ ಗೀಚುವಾತ. ಸಂಕೋಚ ಕೊಂಚ ಇದೆಯಾದರೂ ತೋರಿಸಲ್ಲ. ಹೇಳಬೇಕೆನಿಸಿದರೆ ನೇರ ಹಾಗೇ ಹೇಳುವ ಪ್ರಯತ್ನಮಾಡುವೆ. ಬ್ಲಾಗ್ ಹೆಸರಿನಡಿ ಹೇಳಿದಂತೆ ಸಂಶಯದಲ್ಲೇ ಹುಟ್ಟಿ ಅದರಲ್ಲೇ ಬೆಳೆದು ಜೀವನ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವಾಸೆ…." ಸಂಶಯಪಿಚಾಚಿ ಅನ್ನುವ ವಿಭಿನ್ನ ಹೆಸರಿನ ಬ್ಲಾಗಿಗ ತನ್ನ ಬಗ್ಗೆ ಹೇಳಿಕೊಂಡಿರೋದು ಹೀಗೆ.

ಹೀಗೆ ನಾನಾ ಸಂಶಯಗಳನ್ನೊತ್ತು ಬದುಕುತ್ತಿರುವ ಈ ಪತ್ರಕರ್ತ, ೭೫ನೇ ಸಾಹಿತ್ಯ ಸಮ್ಮೇಳನದ ಈ ಹೊತ್ತಲ್ಲಿ ಚಿತ್ರದುರ್ಗದ ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೂರು ವರ್ಷದ ಹಿಂದೆ, ಪತ್ರಿಕೆಯೊಂದರಲ್ಲಿ ಕೆಲಸ ಹಿಡಿದು ದುರ್ಗಕ್ಕೆ ಕಾಲಿಟ್ಟ ದಿನ ನಗರ ಕಂಡ ಪರಿಯನ್ನ ಬಿಡಿಯಾಗಿ ವರ್ಣಿಸುತ್ತಿದ್ದಾರೆ.

ಏನಪ್ಪ ಇವರ ಡೌಟು ಅಂತ ಕೇಳುವವರು. ಇವರ ಉಳಿದ ‘ಸಂಶಯಾಸ್ಪದ’ ಲೇಖನಗಳನ್ನ ಓದಬಯಸುವವರು ಈ ಬ್ಲಾಗಿಗೆ ಭೇಟಿ ನೀಡಿ.

ಮಾಯ್ಸನ ಊಂಕಾಟ

ದಿನದ ಬ್ಲಾಗಿನಲ್ಲಿ ಇವತ್ತು ಮಾಯ್ಸ ಅನ್ನೋ ಲವ್ ಗುರುವಿನ ಚುಟುಕಗಳ ಸುಗ್ಗಿ.

ಈ ಮಾಯ್ಸ ಯಾರೋ ಏನೋ? ‘ಯಾವೋನೋ ಒಬ್ಬ!ಜೀವನದ ಅರ್ಥವನ್ನು ಹುಡುಕುವುದು ವ್ಯರ್ಥ. ಹುಡುಕಿ ಸಿಕ್ಕರೆ ಅದನ್ನು ಕಟ್ಟಿಕೊಂಡು ಏನಾಗಬೇಕಿದೆ?’ ಅಂತನ್ನುವುದು ಸಾಕ್ಷಾತ್ ಮಾಯ್ಸ ತನ್ನ ಬಗ್ಗೆ ಹೇಳಿಕೊಂಡಿರೋ ಮಾತುಗಳು. ಲವ್ವಾಲಜಿಯ ಸುತ್ತಲೇ ಗಿರಕಿ ಹೊಡೆಯೋ ಮಾಯ್ಸರ ಕೆಲ ಕವಿತೆಗಳು ಮನಕ್ಕೆ ಕಚಗುಳಿ ಇಡೋದು ಸತ್ಯ. ಹೆಚ್ಚಿಗೇ ಏನಿಲ್ಲ. ಇಲ್ಲಿದೆ ಮಾಯ್ಸ ಕವಿತೆಯ ಸಣ್ಣದೊಂದು ತುಂಡು. ಪೂರ್ತಿ ಬೇಕಿದ್ದವರು ಈ ಬ್ಲಾಗಿಗೇ ಭೇಟಿ ನೀಡಿ.

ಹುಡುಗಿಯ ರೆಪ್ಪೆ
ಮಿಟುಕಿನ ಮಿಂಚಿನ
ಬಾಣಕ್ಕೆ ಬಡ
ಗುಂಡಿಗೆ ಗುರಿಯಾಯ್ತು

ಹುಡುಗಿಯ ಮೊಗದ
ಪುಳಕದ ಹೊಳಪಿಗೆ
ಕಣ್ಣು ಪುಟಿದರಳಿ
ಜಗಕುರುಡಾಯ್ತು

 

ಪ್ರಾಂಜಲೆಯ ಜೋಗುಳದ ಕವಿತೆಗಳು

ಜೋಗುಳದ ಹೆಸರಿನ ಜೋಗುಳದಂಥ ಕವಿತೆಗಳನ್ನು ಸರಣಿಯಾಗಿ ತಂದಿಡುವ ಪ್ರಯತ್ನ ಮಾಡುತ್ತಿದ್ದಾರೆ ಪ್ರಾಂಜಲೆ. ಅದೂ ಒಂದಲ್ಲ ನಾಲ್ಕು ಜೋಗುಳದ ಕವಿತೆಗಳನ್ನ ತಮ್ಮೀ ಬ್ಲಾಗಿನಲ್ಲಿ ಹಾಕಿದ್ದಾರೆ. ಅವರ ಈ ಕವಿತಾ ಸರಣಿ ಇನ್ನೂ ಮುಂದುವರಿಯುತ್ತಲಿದೆ.

ಪ್ರಾಂಜಲೆ ಈ ಅನ್ನುವ ಈ ಅನಾಮಿಕ ಬ್ಲಾಗಿಗರಿಗೆ ಕವಿತೆಯಲ್ಲೇ ಹೆಚ್ಚಿನ ಆಸ್ಥೆ. ಆಗೊಮ್ಮೆ ಹೀಗೊಮ್ಮೆ ಸಣ್ಣದೊಂದು ಪದ್ಯದೊಂದಿಗೆ ತಮ್ಮೀ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹೀಗೆ ಬರೆದ ಒಂದಿಷ್ಟು ಕವಿತೆಗಳು ಇಲ್ಲಿವೆ. ಅದರದ್ದೊಂದು ಹನಿ ಇಲ್ಲಿದೆ.

ಮನದ ಬನದ
ತುಂಬೆಲ್ಲ ನಿನ್ನದೇ
ಕನಸುಗಳು.
ಕಣ್ಣ ಕೊಳದೊಳಗೆ
ಬರಿ ನಿನ್ನದೇ
ಚಿತ್ರಗಳು.

ಮಾತ ಮರೆತು
ಮೌನ ಉಲಿಯುತಿಹುದು
ಉಸಿರ ಮರೆತು
ಮನವು ಮಿಡಿಯುತಿಹುದು ನಿನಗಾಗಿ.
ಕಣ್ಣಲಿ ಕಣ್ಣಿಟ್ಟು

ಬ್ಲಾಗ್- ಭಗೀರಥನ ವನ


ಸಂಗೀತವನ್ನು ಮೆಚ್ಚುವ ಪ್ರತಿ ಬ್ಲಾಗಿಗರೂ ರಾಜು ಅನಂತಸ್ವಾಮಿ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಿಗೆ ರಾಜು ಹಾಡುತ್ತಿದ್ದ ರತ್ನದ ಪದಗಳ ಕನವರಿಕೆ. ಬಹುತೇಕರಿಗೆ ಅವರ 'ಯಾವ ಮೋಹನ ಮುರಳಿ ಕರೆತಿಯೋ' ಅನ್ನುವ ಗೀತೆ ಅಚ್ಚುಮೆಚ್ಚು. ರಾಜು ಕೂಡ ಹೀಗೆ ವಾಪಸ್ಸು ಬಾರದ ದೂರತೀರಕೆ ಹೊರಟುಬಿಟ್ಟರು ಅನ್ನುವ ನೋವು. ಅದರೊಟ್ಟಿಗೆ ಅವರ ಸುಗಮ ಸಂಗೀತ ಶಾಲೆ ಕೂಡ ಅನಾಥವಾಗಿರುವ ಕುರಿತು ಬರೆದಿದ್ದಾರೆ ಮಹೇಶ್ ಭಗೀರಥ.

ನೀರಸಾಧಕನ ಜಲವಾರ್ತೆ

ನೀರಿನ ಕುರಿತ ತಮ್ಮ ಅಧ್ಯಯನ ಶೀಲ ಬರವಣಿಗೆಗಳಿಂದ ಹೆಸರು ಮಾಡುತ್ತಿರುವವರು ಪತ್ರಕರ್ತ ರಾಧಾಕೃಷ್ಣ ಎಸ್.ಭಡ್ತಿ. ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಶುಕ್ರವಾರ ವಿಜಯ ಕರ್ನಾಟಕದಲ್ಲಿ ಅವರ ‘ನೀರು-ನೆರಳು’ ಅಂಕಣ ಪ್ರಕಟಗೊಳ್ಳುತ್ತಿದೆ. ನೀರು ಸಂಗ್ರಹ, ಬಳಕೆ, ಶುದ್ಧೀಕರಣ ವ್ಯವಸ್ಥೆಗಳು ಮುಂತಾದ ಸಂಗತಿಗಳ ಕುರಿತ ಆಸಕ್ತಿಕರ ಬರಹಗಳನ್ನು ಭಡ್ತಿ ಅಲ್ಲಿ ಬರೆಯುತ್ತಿದ್ದಾರೆ. ಸುದ್ದಿಗಳ ಮಧ್ಯದಿಂದ ಹೆಕ್ಕಿ ತೆಗೆದ, ತಕ್ಕ ಅಂಕಿಅಂಶಗಳಿಂದ ಕೂಡಿದ ಅವರ ಬರಹಗಳು ಅಷ್ಟೇ ಮಾಹಿತಿಪೂರ್ಣವಾಗಿವೆ.

ಇಂತಿಪ್ಪ ಭಡ್ತಿ ಕೆಲ ತಿಂಗಳುಗಳಿಂದ ಬ್ಲಾಗ್ ಲೋಕಕ್ಕೂ ಒಂದು ಕಾಲಿಟ್ಟಿದ್ದಾರೆ. ನೀರಸಾಧಕನೆಂಬ ನಾಮಧೇಯನ ಜೊತೆಗೆ ತಮ್ಮೀ ಬರಹಗಳನ್ನು ಬ್ಲಾಗಿನಲ್ಲಿ ತುಂಬುತ್ತಾ, ನೀರು-ನೆರಳನ್ನು ಬ್ಲಾಗಿಗರಿಗೆ ಹಂಚುವ ಪ್ರಯತ್ನ ಮಾಡುತ್ತಿದ್ದಾರೆ. ಜಲ ಸಂಪತ್ತಿನ ಬಳಕೆ, ಸಂರಕ್ಷಣೆ ಕುರಿತ ಮಾಹಿತಿಯುಕ್ತ ಬರಹಗಳು ಇಲ್ಲಿವೆ. ನೀರಸಾಧಕನ ಜಲವಾರ್ತೆ ಓದಬಯಸುವವರು ಈ ಬ್ಲಾಗಿಗೊಮ್ಮೆ ಭೇಟಿ ಕೊಡಿ.

ಚೈತ್ರಿಕಾರ ಲಂಚ ಪುರಾಣ

ಇವತ್ತಿನ ದಿನ ಸರ್ಕಾರಿ ಕಛೇರಿಗಳಲ್ಲಿ ಲಂಚವಿಲ್ಲದೇ ಯಾವ ಕೆಲಸವೂ ನಡೆಯದು. ಕೆಲವೊಮ್ಮೆ ಲಂಚ ಕೊಟ್ಟರೂ, ಸತಾಯಿಸಿ ಕಡೆಗೆ ಅಂದುಕೊಂಡ ಕೆಲಸ ಆಗದಿರುವುದೂ ಉಂಟು. ಬೆಂಗಳೂರಿನಲ್ಲಿರುವ ಚೈತ್ರಿಕಾರಿಗೂ ಇಂತಹುದ್ದೇ ಅನುಭವವಾಗಿದೆ. ನಾಲ್ಕು ದಿನ ರಜೆ ಹಾಕಿ ಅಲೆದು, ಲಂಚ ಕೊಟ್ಟು ಏನೆಲ್ಲ ಮಾಡಿದರೂ ಆಗಬೇಕಾದ ಕೆಲಸ ಆಗದೇ ಪಂಗನಾಮವಾಗಿದೆ. ಕಡೆಗೆ, ದೇಶ ಭ್ರಷ್ಟಾಚಾರ ಅಂತೆಲ್ಲ ಕೂಗುತ್ತೇವೆ, ನಾವು ಮಾಡಿದ್ದೇನು? ಇದನ್ನೆಲ್ಲ ವಿರೋಧಿಸುತ್ತಾ ಕೂರೋದಕ್ಕೆ ನಮಗೆ ಸಮಯವಾದ್ರು ಎಲ್ಲಿದೆ? ಅಂತ ತಮ್ಮ ಮೇಲೆ ಸಿಟ್ಟು ಮಾಡಿಕೊಂಡು ಕೂತಿದ್ದಾರೆ.

ಹೀಗೆ ಹರಟೆಗಂತಲೇ ಅವರಿಲ್ಲಿ ಬ್ಲಾಗಿಸುತ್ತಿದ್ದಾರೆ. ಚುಟುಕಾದ, ಅಷ್ಟೇ ಚುರುಕಾದ ಒಂದಿಷ್ಟು ಲೇಖನಗಳು ಇಲ್ಲಿವೆ. ವಿದೇಶಿ ಹುಡುಗ ಇಲ್ಲಿ ಬಂದು ನಮ್ಮ ಹಾಗೇ ಅಭ್ಯಾಸ ಮಾಡಿ ಸಾಕ್ಸೋಫೋನ್ ನುಡಿಸೋದನ್ನ ಕಂಡ ಬ್ಲಾಗಿಗರು ಆಸಕ್ತಿ ಇದ್ದರಷ್ಟೇ ಕಲಿಕೆ, ಅದನ್ನ ಬಲವಂತವಾಗಿ ಯಾಕೆ ಹೇರಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೂ ಬೆಂಗಳೂರಿನ ತಲೆಹರಟೆ ಜನರು ಇವರಿಗೆ ಕೊಡುತ್ತಿರುವ ಕಾಟಗಳು ಅಷ್ಟಿಷ್ಟಲ್ಲ! ಮನೆಯ ಟ್ರೆರೆಸ್ಸು ಅಂದ್ರೆ ಇವರಿಗೆ ಸ್ವರ್ಗಕ್ಕಿಂತ ಮಿಗಿಲು. ವಧು ಪರೀಕ್ಷೆ ವೇಳೆ ಹೆಣ್ಣಿಗೆ ‘ಅಡುಗೆ ಬರುತ್ತಾ?’ ಅಂತೆಲ್ಲ ಹಂಗಿಸೋರಿಗೆ ಇವರ ಸ್ವ-ಅನುಭವದ ಮಾತು ‘ಅಡುಗೆ ಮಾಡಲು ಮೊದಲೇ ತಿಳಿದಿರಬೇಕಿಲ್ಲ. ಮಾಡುವ ಮನಸ್ಸಿದ್ದರೆ ಸಾಕು’. ಆಮೇಲೆ ತಮ್ಮ ‘ವಧು ಪರೀಕ್ಷೆ’ ಆದಿದ್ದರ ಕುರಿತು ಸುಮ್ಮನೊಂದು ಹರಟೆ ನಡೆಸಿದ್ದಾರೆ. ಇಂತದ್ದೇ ಇನ್ನಷ್ಟು ಲೇಖನಗಳು ಇಲ್ಲಿವೆ.

ರವಿರಾಜರ ಮನದ ಮಾತು

ಸಿನಿಮಾ ಎಂದರೆ ಊಟ, ನಿದ್ದೆಯಷ್ಟೇ ಪ್ರೀತಿ ಇಟ್ಟುಕೊಂಡಿರುವ ಪತ್ರಕರ್ತ ರವಿರಾಜ್ ಗಲಗಲಿ. ಸಿನೀ ಪ್ರಪಂಚದ ಬಗ್ಗೆ ತಮ್ಮ ಮನದ ಮಾತುಗಳನ್ನ ಹೇಳಿಕೊಳ್ಳಲಿಕ್ಕೆ ಅಂತ ಅವರೊಂದು ಬ್ಲಾಗನ್ನ ಶುರು ಮಾಡಿದ್ದಾರೆ. ತಾವು ನೋಡಿದ ಕಲಾತ್ಮಕ ಚಿತ್ರಗಳಿಂದ ಹಿಡಿದು ಮಸಾಲೆ ಚಿತ್ರಗಳವರೆಗೂ ಅದು ಯಾಕೆ ಇಷ್ಟವಾಯ್ತು ಇಲ್ಲ ನೋಡೋಕೆ ಕಷ್ಟವಾಗಿತ್ತು ಅಂತ ಅಲ್ಲಿ ಬರೆಯುತ್ತಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲ ತಮಗಿಷ್ಟವಾದ ನಿರ್ದೇಶಕ, ನಟ. ತಂತ್ರಜ್ಞರ ಬಗ್ಗೆಯೂ ಒಂದೆರಡು ಮಾತು ಹೇಳಿದ್ದಾರೆ. ರವಿರಾಜರ ಈ ಮಾತುಗಳನ್ನೆಲ್ಲ ಓದಬೇಕಿದ್ದವರು ಅವರ ‘ಮನದ ಮಾತು’ ಬ್ಲಾಗಿಗೆ ಭೇಟಿ ನೀಡಿ.

ಅರ್ಶದ್ ಬರೆಯುವ ವಿಸ್ಮಯ

ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು. ಕಾರಣ ಇಷ್ಟೆ. ದಿನಕ್ಕೆ ಏಳು ಕಪ್ ಗಿಂತ ಹೆಚ್ಚು ಕಾಫಿ ಸೇವನೆಯಿಂದ ಮಿಥ್ಯಾದರ್ಶನ (hallucination) ಪರಿಣಾಮ ಬೀರಬಹುದೆಂದೂ, ಇದರಿಂದಾಗಿ ಇಲ್ಲದ ವಸ್ತುಗಳನ್ನು ಕಾಣುವ ಅಥವಾ ಇಲ್ಲದ ಧ್ವನಿಗಳನ್ನು ಕೇಳುವ ಭ್ರಮೆಯುಂಟಾಗಬಹುದು. ಈ ಭ್ರಮೆಯನ್ನೇ ಹೆಚ್ಚಿನವರು ಭೂತಕ್ಕೆ ಕಲ್ಪಿಸಿಕೊಂಡು ಭಯಭೀತರಾಗುತ್ತಾರೆ ಅಂತ ಸಂಶೋಧನೆಯೊಂದು ತಿಳಿಸಿದೆಯಂತೆ.

ಈ ಕಾಫಿಭೂತದ ಕಥೆಯನ್ನ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ ಅರ್ಷದ್ ಹುಸೇನ್. ವಿಸ್ಮಯ ಅವರ ಬ್ಲಾಗ್. ಹೆಸರಿಗೆ ತಕ್ಕಂತೆ ಇಂಥ ವಿಸ್ಮಯಕಾರೀ ಸಂಗತಿಗಳ ಬಗ್ಗೆ ಬರೆಯೋದೇ ಈ ಬ್ಲಾಗಿಗರ ಹವ್ಯಾಸ. ನೂರೈವತ್ತು ವರ್ಷದ ಸಿಗಡಿಗೆ ಜೀವದಾನವಾಗಿದ್ದು, ಚಿಲಿಯಲ್ಲಿ ಅತಿದೊಡ್ಡ ಈಜು ಕೊಳ ಕಟ್ಟಿ ತೇಲುತ್ತಿರುವುದು, ವಿಶ್ವದ ಅತಿ ಬಲಿಷ್ಟ ಬಾಲಕಿ ಮತ್ತು ಬೆಲ್ಜಿಯಂನ ವಿಶಿಷ್ಟ ಗಗನ ಭೋಜನ... ಹೀಗೆ ಥರಾವರಿ ವಿಸ್ಮಯಕಾರಿ ಸುದ್ದಿಗಳನ್ನ ಹೆಕ್ಕಿ ತಂದು ಬ್ಲಾಗಿಸುತ್ತಿದ್ದಾರೆ ದುಬೈನಲ್ಲಿ ಉದ್ಯೋಗದಲ್ಲಿರೋ ಅರ್ಶದ್. ವಿಸ್ಮಯಗಳನ್ನ ಓದಬೇಕಿದ್ದವರು ಈ ಬ್ಲಾಗಿಗೆ ಹೋಗಿಬನ್ನಿ.

ಬ್ಲಾಗಿಗರ ಬರ್ತ್ ಡೇ ಖುಶಿ

ಸಂಕ್ರಾಂತಿ ಹಬ್ಬದ ಈ ಹೊತ್ತಲ್ಲಿ, ಹೊಸ ವರ್ಷದೊಟ್ಟಿಗೆ ತಮ್ಮ ಬ್ಲಾಗಿನ ಮೊದಲ ಹುಟ್ಟುಹಬ್ಬ ಆಚರಿಸುವ ಸಂಭ್ರಮದಲ್ಲಿದ್ದಾರೆ ಕನ್ನಡದ ಕೆಲ ಬ್ಲಾಗಿಗರು. ಹೀಗೆ ವರುಷದ ಹಿಂದೆ ಇದೇ ದಿನ ‘ಮಾನಸ’ ತೆರೆದು ಒಂದೇ ದಿನಕ್ಕೆ ಇಪ್ಪತ್ತು ಪೋಸ್ಟ್ ಹಾಕಿ, ಉತ್ಸಾಹ ಇಮ್ಮಡಿಗೊಳಿಸಿಕೊಂಡಿದ್ದ ತೇಜಸ್ವಿನಿ ಹೆಗಡೆಯವರ ಅದೇ ಬತ್ತದ ಉತ್ಸಾಹದೊಂದಿಗೆ ಮಾನಸ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ‘ಮಾನಸದ ತುಂಬೆಲ್ಲಾ ವರುಷ ತುಂಬಿದ ಹರುಷದ ಜೊತೆಗೆ ಸಂಕ್ರಾತಿಯ ಸಂಭ್ರಮ....:)’

ಇನ್ನೂ ‘ಎಷ್ಟೇ ಘನ ಘೋರ ಗಂಭೀರ ಸಂದರ್ಭ ಇದ್ದರೂನೂ ನಮ್ದು ಮಷ್ಕರೀನೇ’ ಅಂತನ್ನುವ ಪಂಚ ಲೈನಿಗೂ ಹುಟ್ಟುಹಬ್ಬದ ಸಂಭ್ರಮ. ಮೂರ್ನಾಲ್ಕು ಬ್ಲಾಗುಗಳನ್ನ ನಡೆಸುತ್ತಾ ಅಪಾರ ಉತ್ಸಾಹ ಇಟ್ಟುಕೊಂಡಿರುವ ಗಣೇಶ್ ಇದರ ಸಾರಥಿ.

ನಗೆ ಸಾಮ್ರಾಟರು ಈ ವಿಷಯದಲ್ಲಿ ಭಾರೀ ಮುಂದಿದ್ದಾರೆ. ಕುಸು ಹುಟ್ಟುವುದಕ್ಕೂ ಮುಂಚೆಯೇ ಕುಲಾವಿ ಹೊಲಿಸಿದ್ರು ಅನ್ನೋ ಹಾಗೆ ಹದಿನೈದು ದಿನ ಮುಂಚೆಯೇ ನಗಾರಿ ಸದ್ದಿನೊಂದಿಗೆ ಹುಟ್ಟುಹಬ್ಬದ ಸಂಭ್ರಮಕ್ಕಿಳಿದಿದ್ದಾರೆ.

ಇದು ಈ ಕ್ಷಣದಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದಷ್ಟೆ. ನಿನ್ನೆ, ಮೊನ್ನೆ ಮತ್ತು ನಾಳೆಯೂ ಬ್ಲಾಗುಗಳ ಹುಟ್ಟುಹಬ್ಬ ನಡೆಯುತ್ತಲಿರುತ್ತದೆ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯ.

ಸ್ವಾತಿಮುತ್ತಿನ ಹನಿ

ಎದೆಯ ಚಿಪ್ಪಲ್ಲಿ ಭಾವಗಳ ಇಬ್ಬನಿ! ಅಂದರೆ ಸ್ವಾತಿಮುತ್ತು. ಈ ಮುತ್ತನ್ನ ಬ್ಲಾಗ್ ಲೋಕಕ್ಕೆ ಕರೆತಂದಿದ್ದಾರೆ ಹೆಸರೇ ಹೇಳದ ಬ್ಲಾಗಿಗರು. ಮೊನ್ನೆ ಮೊನ್ನೆ ಬ್ಲಾಗ್ ಶುರು ಮಾಡಿರುವ ಸ್ವಾತಿಮುತ್ತು ನಲ್ಲಿ ಒಂದೆರಡು ಮುತ್ತಿನಂಥ ಕವಿತೆಗಳನ್ನ, ಒಂದು ಒಲವಿನೋಲೆ ಇತ್ಯಾದಿಯನ್ನ ಹಾಕಿದ್ದಾರೆ. ಗೊತ್ತಿರದ ಇವರ ಬಗ್ಗೆ ಹೆಚ್ಚಿಗೆ ಹೇಳದೇ ಅಲ್ಲಿನೊಂದು ಮುತ್ತನ್ನ ಇಲ್ಲಿ ಹಾಕುತ್ತಿದ್ದೇವೆ. ಉಳಿದ ಮುತ್ತುಗಳಿಗೆ ಸ್ವಾತಿಮುತ್ತಿಗೆ ಭೇಟಿ ಕೊಡಿ.

ಬಯಕೆಗಳ ಹೂ-ಮುಳ್ಳಿನ ಹಾದಿಯಲ್ಲಿ
ನಡೆಯುತಿದೆ ಈ ಜೀವನ
ಮಿತಿಯಿಲ್ಲದ ಆಸೆಗಳ ಹೊತ್ತು
ಎಣೆಯಿಲ್ಲದಷ್ಟು ದುಃಖವ ಪಟ್ಟು
ಸಾಗರದಷ್ಟು ತಾಳ್ಮೆಯನಿಟ್ಟು
ಹೃದಯದ ಪ್ರೀತಿಯನ್ನು ಇತರರಲ್ಲಿಟ್ಟು
ಜೀವನವ ಸಾಗಿಸಿದರೆ ..
ಆಗ ಬಾಳು ಒಂದು ಸ್ವಾತಿಮುತ್ತು !

ರಂಗಕ್ಕೊಂದು ಸೈಡ್ ವಿಂಗ್

ನಾಟಕ ಅಂದ್ರೆ ಬರೀ ವೇದಿಕೆ ಮೇಲಿನ ಒಂದೆರಡು ಗಂಟೆ ಪ್ರದರ್ಶನವಲ್ಲ. ಅದಕ್ಕೂ ಮುನ್ನ ಸ್ಕ್ರ್ಪಿಪ್ಟ್ ರೀಡಿಂಗಿನಿಂದ ರಂಗರೂಪ, ಕಾಸ್ಟ್ಯೂಮ್, ಲೈಟು, ಮೇಕಪ್ಪು ಮಿಕ್ಕೆಲ್ಲ ಕ್ರಿಯೆಗಳನ್ನ ಒಳಗೊಂಡ ಒಂದು ರಂಗ ಪ್ರಯೋಗ. ವೇದಿಕೆ ಮೇಲೆ ಕಾಣಿಸೋದಕ್ಕೆ ಮುನ್ನ ಸಾಕಷ್ಟು ಸಿದ್ಧತೆಗಳಿಂದ ಕೂಡಿದ ಕ್ರಿಯೆ. ಹೀಗೆ ರಂಗದ ಅಕ್ಕಪಕ್ಕ ನಡೆಯೋ ಸಿದ್ಧತೆಗಳನ್ನ ಬ್ಲಾಗಿಗರ ಮುಂದಿಡುವ ಪ್ರಯತ್ನಕ್ಕೆ ಕೈ ಹಾಕಿದೆ ‘ಸೈಡ್ ವಿಂಗ್’.

ಹೆಸರೇ ಹೇಳುವಂತೆ ಇದು ರಂಗಭೂಮಿಯ ಚಟುವಟಿಕೆಗಳಿಗೆ ಮೀಸಲಾದ ಬ್ಲಾಗ್. ಕನ್ನಡ ನಾಟಕ ರಂಗದ ಸುದ್ದಿ ಸಮಾಚಾರಗಳನ್ನ ಇಲ್ಲಿ ಕಾಣಬಹುದು. ಹೊಸ ಪಾತ್ರಗಳ ಪರಕಾಯ ಪ್ರವೇಶ, ರಂಗಸಿದ್ಧತೆಗಳ ಕುರಿತ ಚಿತ್ರಣ ಇಲ್ಲಿರುತ್ತದೆ. ಹೊಸದಾಗಿ ಮತ್ತು ಮರು ಪ್ರದರ್ಶನವಾಗುವ ನಾಟಕಗಳು, ರಂಗಶಿಬಿರ ಇತ್ಯಾದಿಗಳ ಬಗ್ಗೆಯೂ ಸುದ್ದಿ ಉಂಟು. ಹೆಚ್ಚಿಗೆ ಮಾಹಿತಿ ಬೇಕಿದ್ದವರು ಸೈಡ್ ವಿಂಗಿಗೆ ಹೋಗಿಬನ್ನಿ.

ಮಾಲಾ ಲಹರಿ

ಕನ್ನಡದಲ್ಲೀಗ ಬ್ಲಾಗಿಗರ ಸಂಖ್ಯೆ ಸಾಕಷ್ಟು ಹೆಚ್ಚುತ್ತಿದೆ. ದಿನಕ್ಕೊಂದರಂತೆ ಹೊಸ ಬ್ಲಾಗುಗಳು ಬರುತ್ತಿವೆ. ನಿನ್ನೆ ಅಂತಹದ್ದೇ ಬ್ಲಾಗೊಂದರ ಪರಿಚಯ ಮಾಡಿಕೊಟ್ಟಿದ್ದೆವು. ಈವತ್ತು ಇನ್ನೊಂದು ಹೊಸ ಬ್ಲಾಗಿನ ಪಕ್ಷಿ ನೋಟ.

ಸದ್ಯ ಮೈಸೂರಿನಲ್ಲಿರುವ ರುಕ್ಮಿಣಿ ಮಾಲಾ ‘ಮಾಲಾ ಲಹರಿ’ ಎಂಬ ಬ್ಲಾಗೊಂದನ್ನ ಶುರು ಮಾಡಿದ್ದಾರೆ. ಇದು ಅವರ ಲಹರಿಗಳ ಬರಹರೂಪ. ಕನ್ನಡದ ಪ್ರಮುಖ ವೈಜ್ಞಾನಿಕ ಲೇಖಕರಲ್ಲಿ ಒಬ್ಬರಾದ ಜಿ ಟಿ ನಾರಾಯಣ ರಾವ್ ರ ಸೊಸೆಯಾದ ಮಾಲಾ, ತೀರಿ ಹೋದ ಮಾವನವರನ್ನು ನೆನೆಸಿಕೊಳ್ಳುತ್ತಿದ್ದಾರೆ. ಜಿಟಿಎನ್ ತೀರಿಹೋದ ಐದು ತಿಂಗಳುಗಳ ನಂತರ ಅವರಿಗೊಂದು ಪತ್ರ ಬರೆದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ. ಈ ಐದು ತಿಂಗಳಲ್ಲಿ ಆಗಿಹೋದ ಸುದ್ದಿಗಳೆಲ್ಲವನ್ನೂ ಇನ್ನೊಂದು ಲೋಕದಲ್ಲಿರುವ ಮಾವನಿಗೆ ವರದಿ ಒಪ್ಪಿಸುತ್ತಿದ್ದಾರೆ.

ಮಾಲಾ ಸ್ವಗತ ಹೀಗೆಯೇ ಬರಹಗಳ ಮೂಲಕ ಮುಂದುವರಿಯುತ್ತಿದೆ. ಇನ್ನೂ ನಾಲ್ಕಾರು ಲೇಖನಗಳು ಬ್ಲಾಗಿನಲ್ಲಿವೆ. ಒಮ್ಮೆ ಭೇಟಿ ಕೊಡಿ.

ಜಾಜಿ ಮಲ್ಲಿಗೆಯ ಪರಿಮಳ

ಭಾವನೆಗಳ ಪರಿಮಳವನ್ನು ಹೊತ್ತುಕೊಂಡು ಬಂದು ಬ್ಲಾಗಿನಂಗಳದಲ್ಲಿ ಕುಂತಿದೆ ಜಾಜಿ ಮಲ್ಲಿಗೆ. ಒಂದೇ ದಿನದಲ್ಲಿ ನಾಲ್ಕಾರು ಹೂವುಗಳನ್ನು ಅರಳಿಸಿಕೊಂಡು ನಿಂತಿದೆ. ಕಥೆ, ಕವನಗಳ ಘಮ, ಮನದ ಮಲ್ಲಿಗೆಯಂಥ ಮಾತುಗಳು, ಸಣ್ಣಕಥೆಗಳ ಸುಮದ ಜೊತೆಗೆ ಹನಿಗವನಗಳ ಗುಚ್ಛ ಎಲ್ಲವೂ ಇಲ್ಲಿದೆ. ಹಾಯ್ಕುಗಳ ಘಮದಿಂದ ಶುರುವಾದದ್ದು ಮಂಚಗಳ ಮಾತಿನ ಕವನ ಓದಿಸಿ, ‘ಉರಿವ ಜ್ವಾಲೆ, ಬಣ್ಣದ ಗುರುತು ಸಿಕ್ಕಿತೇನಾ ನಿನಗ’ ಅನ್ನುವಂಥ ಕಥೆಗಳನ್ನೆಲ್ಲ ಕೇಳಿಸಿ, ಬ್ಲಾಗಿನ ವಾರಸುದಾರ ಶರಣು ಹುಲ್ಲೂರರ ಜುಗಲ್ ಬಂಧಿ ಕವಿತೆಗಳ ಪರಿಚಯಕ್ಕೆ ಬಂದು ನಿಂತಿದೆ.

ಜೊತೆಗೇ ಅವರದ್ದೊಂದು ಖಾಸಾ ಖಾಸಗಿ ಪತ್ರವೂ ಇದೆ. ಅದರಂತೆ ಮುಂದಿನ ತಿಂಗಳು ಈ ಬ್ಲಾಗಿಗ ವಿವಾಹ ಬಂಧನಕ್ಕೊಳಪಡುತ್ತಿದ್ದಾರೆ. ಇವರ ಬರೆಯುವ ಉತ್ಸಾಹ ಹೀಗೆ ಇರಲಿ ಅಂತ ಹಾರೈಸುತ್ತಾ ಶರಣರ ಹೈಕೊಂದನ್ನ ಇಲ್ಲಿ ಹಾಕುತ್ತಿದ್ದೇವೆ.

ಚಿತ್ರಕ್ಕೊಂದು ಸಾಂಗತ್ಯ

ಕಳೆದ ಶನಿವಾರ ಮತ್ತು ಭಾನುವಾರ ಕುಪ್ಪಳ್ಳಿಯಲ್ಲಿ ಹೀಗೊಂದು ಚಿತ್ರೋತ್ಸವ ನಡೆಯಿತು. ಭಾಷಣಗಳ ಭಾರವಿಲ್ಲದ, ಚಿತ್ರಾಸಕ್ತರಿಗಾಗಿಯೇ ಮೀಸಲಾದ ಉತ್ತಮ ಚಿತ್ರಗಳ ಪ್ರದರ್ಶನದ ಉತ್ಸವ. ಕನ್ನಡದ ಅನೇಕ ಬ್ಲಾಗಿಗರು, ಪತ್ರಕರ್ತರು ಮತ್ತು ಸಿನಿಮಾಸಕ್ತರು ಅದರಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರೋತ್ಸವವನ್ನ ಆಯೋಜಿಸಿದ್ದು ‘ಸಾಂಗತ್ಯ’ ತಂಡ. ಚಿತ್ರೋತ್ಸವದ ಎರಡು ದಿನದ ಮುಂಚೆ ಬ್ಲಾಗ್ ತೆರೆದು ಹೋಗಿದ್ದ ‘ಸಾಂಗತ್ಯ’ ಈಗ ಕಾರ್ಯಕ್ರಮದ ಯಶಸ್ಸಿನೊಂದಿಗೆ ಮತ್ತೆ ಬ್ಲಾಗಿನಂಗಳಕ್ಕೆ ಬಂದಿದೆ. ಮಾತ್ರವಲ್ಲ ಕುಪ್ಪಳ್ಳಿಯಲ್ಲಿ ನಡೆದ ಸಮಸ್ತ ಸುದ್ದಿ ಸಮಾಚಾರಗಳನ್ನು ಚಿತ್ರ ವಿಮರ್ಶೆಗಳ ಸಹಿತ ನಿಮ್ಮ ಮುಂದಿಡುತ್ತಿದೆ.

ಇನ್ನು ಮುಂದೆ ಭಾಷೆಗಳ ಹಂಗಿಲ್ಲದೆ ತಮಗೆ ಮೆಚ್ಚುಗೆಯಾದ ಚಿತ್ರಗಳ ಬಗ್ಗೆ ನಮ್ಮೆಲ್ಲರೊಟ್ಟಿಗೆ ಚರ್ಚಿಸುವುದು ಇದರ ಉದ್ದೇಶ. "ನಮ್ಮದು ಚಿತ್ರ ಭಾಷೆ. ಚಿತ್ರ ನೋಡಿದಾಗಿನ ಅನುಭವ ‘ಸಾಂಗತ್ಯ’ದ ಹೂರಣ. ಒಂದು ಒಳ್ಳೆಯ ಚಿತ್ರ, ನಾವೇ ನೋಡಿದರಷ್ಟೇ ಸಾಲದು ; ಎಲ್ಲರೂ ನೋಡಬೇಕು ಎನ್ನಲು ಈ ವೇದಿಕೆ. ಅದಕ್ಕಾಗಿ ಎಲ್ಲರೂ ಬರೆಯಬಹುದು.ಉಳಿದಂತೆ ಹೇಳಲು ಏನೂ ಇಲ್ಲ ; ನೋಡಲು ಬಹಳಷ್ಟಿವೆ. ನಂತರ ನೋಡಿದ್ದನ್ನು ಬರೆಯಲೂ ಸಾಕಷ್ಟಿವೆ." ನಿಮಗೂ ಯಾವುದಾದ್ರೂ ಚಿತ್ರ ಹಿಡಿಸಿದ್ರೆ, ಮನಸ್ಸಿಗೆ ಕಾಡಿದ್ರೆ ಅದನ್ನ ಸಾಂಗತ್ಯದ ಜೊತೆ ಹಂಚಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಾಂಗತ್ಯದ ಬ್ಲಾಗಿಗೆ ಭೇಟಿ ಕೊಡಿ.

ನವಕರ್ನಾಟಕ ಪಬ್ಲಿಕೇಷನ್ಸ್

ಕನ್ನಡ ಪುಸ್ತಕ ಪ್ರಕಾಶನಗಳ ಪೈಕಿ ನವಕರ್ನಾಟಕ ಪಬ್ಲಿಕೇಷನ್ಸ್ ಹಳೆಯ ಹೆಸರು. ಅರವತ್ತರ ದಶಕದಿಂದಲೂ ಪುಸ್ತಕ ಪ್ರಕಟಣೆ ಮತ್ತು ಮಾರಾಟದಲ್ಲಿ ತೊಡಗಿರುವ ನವಕರ್ನಾಟಕ ಪಬ್ಲಿಕೇಷನ್ಸ್ ತನ್ನ ಬ್ಲಾಗೊಂದನ್ನು ಶುರು ಮಾಡಿದೆ. ತನ್ನ ಇತ್ತೀಚಿನ ಮತ್ತು ಜನಪ್ರಿಯ ಪುಸ್ತಕ ಪ್ರಕಟಣೆಗಳು, ಆ ಕುರಿತು ಪ್ರಕಟಗೊಂಡ ವಿಮರ್ಶೆಗಳು ಒಟ್ಟಾರೆ ಪುಸ್ತಕ ಸಮಾಚಾರಗಳನ್ನು ಅಂತರ್ಜಾಲ ಓದುಗರಿಗೆ ತಲುಪಿಸುವುದು ಅದರ ಉದ್ದೇಶ. ಪ್ರಕಾಶನದಲ್ಲಿ ಲಭ್ಯವಿರುವ ಪುಸ್ತಕಗಳು, ಸಂಪರ್ಕ , ಪಬ್ಲಿಕೇಷನ್ಸ್ ನ ಇನ್ನಿತರ ವಿವರಗಳು ಇಲ್ಲಿ ಒಟ್ಟಿಗೆ ಸಿಗುತ್ತವೆ. ಸಾಹಿತ್ಯಾಸಕ್ತರು ಈ ಬ್ಲಾಗಿಗೊಮ್ಮೆ ಹೋಗಿಬನ್ನಿ.

ವಿಪಿನಾರ ಪುಸ್ತಕ ಲೋಕ

ತನಗೆ ಉಡುಗೊರೆ ಬಂದ ಪುಸ್ತಕಗಳನ್ನ ಪರಿಚಯಸಲಿಕ್ಕೇ ಅಂತ ವಿಪಿನಾ ಬ್ಲಾಗೊಂದನ್ನ ತೆರೆದಿದ್ದಾರೆ. ಅದುವೇ ‘ನನ್ನ ಪುಸ್ತಕ ಲೋಕ’. ತನ್ನೀ ಪ್ರಯತ್ನದ ಬಗ್ಗೆ ವಿಪಿನಾ ಹೇಳಿರುವುದು ಹೀಗೆ "ನಾನು ವಿಪಿನ ನಾಗರಬಾವಿ. ನನ್ನ ವಯಸ್ಸು 10 ವರ್ಷ. ನನ್ನ ಅಪ್ಪ, ಅಮ್ಮ, ಅತ್ತೆ, ಮಾವ, ದೊಡ್ಡಪ್ಪ, ದೊಡ್ಡಮ್ಮ, ಆಂಟೀ, ಅಂಕಲ್ ಹೀಗೆ ತುಂಬಾ ಜನ ನನಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆ ಪುಸ್ತಕಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಆ ಮೂಲಕ ನನ್ನಂಥ ನಿಮ್ಮ ಸುತ್ತ ಮುತ್ತಲಿನ ನೀವು ನೋಡುವ ಮಕ್ಕಳಿಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಡಲು ಅನುಕೂಲವಾಗುವಂತೆ ಈ ಬ್ಲಾಗ್ ಅನ್ನು ಪ್ರಾರಂಭಿಸಿದ್ದೇನೆ. ಇದನ್ನು ನನ್ನ ಅಮ್ಮ ಪೋಸ್ಟ್ ಮಾಡ್ತಾರೆ. ಮುಂದೆ ನಾನೇ ಇದನ್ನು ಪೋಸ್ಟ್ ಮಾಡಲಿದ್ದೇನೆ."

ಸದ್ಯ ವಿಪಿನಾ ಪುಸ್ತಕಲೋಕದಲ್ಲಿ ‘ಚಂದ್ರಣ್ಣನಿಗೆ ನಮಸ್ಕಾರ’ ‘ನನ್ನ ಪ್ರೀತಿಯ ಪ್ರಪಂಚ’ ಮೊದಲಾಗಿ ಇನ್ನೂ ಅನೇಕ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಪುಸ್ತಕಗಳ ಪರಿಚಯ ಇದೆ. ಇನ್ನೂ ಹೆಚ್ಚೆಚ್ಚು ಪುಸ್ತಕ ಪರಿಚಯ ಮಾಡಿಕೊಡೋದು ವಿಪಿನಾ ಬಯಕೆ. ಅವರ ಒಂದೊಳ್ಳೆ ಹವ್ಯಾಸಕ್ಕೆ ಆಲ್ ದಿ ಬೆಸ್ಟ್.

ರಾಮಸ್ವಾಮಿಯವರ ಬೆಂಕಿಕಡ್ಡಿ

ಲೇಖಕ ಡಿ ಎಸ್ ರಾಮಸ್ವಾಮಿ ಕಳೆದ ಕೆಲ ತಿಂಗಳಿನಿಂದ ಬ್ಲಾಗಿಸುತ್ತಿದ್ದಾರೆ ‘ಬೆಂಕಿಕಡ್ಡಿ’ ಯಲ್ಲಿ. ಈ ಬೆಂಕಿ ಕಡ್ಡಿ ಎಂದರೆ ಬರಿಯ ಕಡ್ಡಿ ಮಾತ್ರವಲ್ಲ, ಅದನ್ನ ಅವರ ಮಾತಲ್ಲೇ ಕೇಳಿ "ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ."

ಹೀಗೆ ಬರೆಯುವ ಇರಾದೆ ಇಟ್ಟುಕೊಂಡು ಬ್ಲಾಗಿಸುತ್ತಿರುವ ರಾಮಸ್ವಾಮಿ ಸದ್ಯ ವಿಮಾರಂಗದ ಮೇಲೆ ಉದಾರಿಕರಣದ ಕರಿನೆರಳನ್ನು ವಿಶ್ಲೇಷಿಸುವ ಯತ್ನದಲ್ಲಿದ್ದಾರೆ. ಸ್ವತಃ ವಿಮಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಲೇಖಕರು ತಮ್ಮ ಅನುಭವವನ್ನೂ ಆಧಾರವಾಗಿಟ್ಟುಕೊಂಡು, ಆರ್ಥಿಕ ಮುಗ್ಗಟ್ಟಿನಿಂದಾಗಿ ವಿಮಾ ಕಂಪನಿಗಳು ತತ್ತರಿಸಿ ಹೋಗುತ್ತಿರುವ ಬಗೆಯನ್ನು ವಿವರಿಸಿದ್ದಾರೆ. ಆಮೇಲೆ ಅವರ ‘ನಾಯಿ ಸಾಕುವ ನಾಯಿ ಪಾಡು’ ಲೇಖನವಂತೂ ಹಾಗೇ ಓದಿಸಿಕೊಂಡು ಹೋಗುವಂತಿದೆ. ‘ಮಾತೆಂಬ ಜ್ಯೋತಿರ್ಲಿಂಗ’ ಮಾತಿನ ಮಹತ್ವೆ ವಿವರಿಸುತ್ತದೆ. ಉಳಿದಂತೆ ರಾಮಸ್ವಾಮಿಯವರ ಒಂದಿಷ್ಟು ಕವಿತೆಗಳು ಓದಲು ಜೊತೆಗಿವೆ.

ದಿನೇಶರ ದೇಸೀ ಮಾತು

ದೇಸೀ ಮಾತಿನ ದಿನೇಶ್ ಕುಮಾರ್ ಸದ್ಯ ಪದ್ಯ ಬರೆಯುವ ಮೂಡಿನಲ್ಲಿದ್ದಾರೆ. ನಾಳೆ ಎಲ್ಲವೂ ಬದಲಾಗುತ್ತದೆ ಗೆಳತಿ.. ಅಂತ ಅಂತ ಚಂದದೊಂದು ಕವಿತೆ ಹೊಸೆದಿದ್ದಾರೆ. ಎಲ್ಲವೂ ಮೊದಲಿನಂತಿರದ ಶಕುನಗಳ ಹೊತ್ತಲ್ಲಿ ನಾಳೆಯಾದರೂ ಬದಲಾಗುತ್ತದೆ ಅನ್ನುವ ಆಶಯ ತೋರಿದ್ದಾರೆ.

ಪತ್ರಕರ್ತ ದಿನೇಶ್ ಇಲ್ಲಿ ಆಗಾಗ್ಗೆ ತಮ್ಮ ದೇಸೀ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬರೆದ ‘ರಾಮಚಂದ್ರಗೌಡರ ‘ಬ್ರಾಹ್ಮಿನ್ ಫೋಬಿಯಾ’ ಮಾಧ್ಯಮಗಳ ಸುದ್ದಿಬಾಕತನ ಕುರಿತ ಲೇಖನಗಳು ಅರ್ಥಪೂರ್ಣವಾಗಿವೆ. ಅಟ್ಲಾಂಟಿಸ್ ನೌಕೆಯ ಕ್ಯಾಪ್ಟನ್ ಬರ್ನ್‌ಹಾರ್ಡ ರೋ ಬಗ್ಗೆ ಬರೆದ ಲೇಖನ ಕಣ್ಣು ತೆರೆಸುವಂತಿದೆ. ರಾಜ್ಯದಲ್ಲಿನ ಮುಸ್ಲಿಂ ರಾಜಕಾರಣದ ಕುರಿತು ಒಂದು ಅವಲೋಕನ ನಡೆಸಿದ್ದಾರೆ. ಕರವೇ ಕುರಿತು ಸುದೀರ್ಘ ಮಾತುಗಳನ್ನಾಡಿದ್ದಾರೆ. ಇಂತಹದ್ದೇ ಹತ್ತು ಹಲವು ಲೇಖನಗಳು ದೇಸೀ ಮಾತು ಬ್ಲಾಗಿನಲ್ಲಿವೆ.

ಹುದುಗುಮನದ ಕಥೆ

ಚೆನ್ನೈನಲ್ಲಿ ಟೆಕ್ಕಿಯಾಗಿದ್ದುಕೊಂಡು ಮೈಮುರಿದು ದುಡಿವ ಶ್ರೀಹರ್ಷ ಈ ಬಾರಿ ಬೆಳಗೆರೆಯಲ್ಲೊಂದು ಬೆಸ್ಟ್ ವೀಕೆಂಡಿನ ಮಜಾ ಸವಿದಿದ್ದಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳ ಮಾತುಕತೆ ಜೊತೆ. ೯೩ ವರ್ಷದ ಶಾಸ್ತ್ರಿಗಳ ಒಂದೊಂದೇ ವಿಚಾರ ಕೇಳುತ್ತಾ ಹರ್ಷ ವಿಸ್ಮಯ ಪಟ್ಟುಕೊಂಡಿದ್ದಾರೆ. ‘ಗಾಂಧೀಜಿ, ಡಿವಿಜಿ, ಸರ್.ಎಂ.ವಿ, ಮುಕುಂದೂರು ಸ್ವಾಮಿಗಳು, ರಮಣ ಮಹರ್ಷಿಗಳು,ಅಜ್ಜಪ್ಪ ಮೇಷ್ಟ್ರು, ಮಾಸ್ತಿ, ಬೇಂದ್ರೆ, ಬೆಳಗೆರೆ ಜಾನಕಮ್ಮ, ನಲ್ನುಡಿ ನಿಘಂಟಿನ ಅಲ್ಲಿಸಾಬ್, ಕಳ್ಳನಿಂಗ,ಪೂಜಾರ ಹನುಮಂತಪ್ಪ,ಪಾರಜ್ಜಿ’ ಇತ್ಯಾದಿಗಳ ಬಗ್ಗೆಯಲ್ಲ ಅವರ ಮಾತುಕತೆ ನಡೆದಿದೆ. ಅದರಲ್ಲೂ ಅವರು ಹೇಳಿದ ಜನಪದ ಭಂಡಾರ ಸಿರಿಯಜ್ಜಿಯ ಕಥೆ ಹೆಚ್ಚೆಚ್ಚು ಮೆಚ್ಚುಗೆಯಾಗಿದೆ.

ಹೀಗೆ ಬೆಳಗೆರೆ ಅಜ್ಜನ ಸಾನಿಧ್ಯದಲ್ಲಿದ್ದು ಬಂದವರು ಮನಸ್ಸು ಅದೆಷ್ಟೋ ಹಗುರಾಯಿತು ಅಂತನ್ನುತ್ತಿದ್ದಾರೆ. ಈ ಹುಡುಗುಮನದ ಒಳಗೆ ಇನ್ನೂ ಇಂತಹದ್ದೇ ಅನೇಕ ಲೇಖನಗಳಿವೆ. ತಮ್ಮೊಳಗೆ ಹುದುಗಿರುವ ಭಾವಗಳ ಬಿಚ್ಚಿ ಬರಹ ಮಾಡುವ ಯತ್ನದಲ್ಲಿದ್ದಾರೆ ಶ್ರೀಹರ್ಷ ಸಾಲಿಮಠ.

ಕಾವ್ಯ ಬರೆವ ಕವಿತೆ

‘ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ’ ಹಾಗಂತ ಬ್ಲಾಗಿನ ಹೆಸರಿಟ್ಟುಕೊಂಡಿರುವ ಕಾವ್ಯ ಗೌಡ ಕಾವ್ಯ ಕೃಷಿಯಲ್ಲಿ ತೊಡಗಿದ್ದಾರೆ. ಸದ್ಯ ತಮ್ಮ ನಲ್ಲದ ಮೇಲೊಂದು ಕವಿತೆ ಹೊಸೆದಿದ್ದಾರೆ. ಕಣ್ಣು ಮುಚ್ಚಿದೊಡನೆ ಬಂದು ಕಚಗುಳಿ ಕೊಡುವ, ಕಣ್ಣಲ್ಲೇ ಮಾತನಾಡುವ, ಮುದ್ದಿಸಿ ಪ್ರೀತಿಸಿ, ಹಗಲಾದ ಕೂಡಲೇ ನೀನು ನನ್ನವಳಲ್ಲ ಎಂದು ಓಡಿ ಹೋಗುವ ಆತ ಇವರ ಕನಸ ರಾಜಕುಮಾರನಂತೆ.

ಇದೇ ರೀತಿ ‘ಜೀವನ’ ‘ನನ್ನ ಹುಡುಗ’ ‘ಕನಸು’ ,‘ವಿಪರ್ಯಾಸ’ ಇನ್ನಿತರ ಒಂದಿಷ್ಟು ಚಂದದ ಪದ್ಯಗಳು ಇಲ್ಲಿವೆ. ಜೊತೆಗೊಂದು ಸಣ್ಣ ಕಥೆ, ಬಿಡುವಾದಾಗ ಬರೆದ ಓಲವಿನೋಲೆ ಇದೆ. ಕಾವ್ಯ ಕೃಷಿ ಮುಂದುವರಿಯಲಿ ಅನ್ನುತ್ತಾ ಅವರ ಹನಿಗವಿತೆಯೊಂದರ ಸಾಲು ಇಲ್ಲಿದೆ.

ನಾ ಬಚ್ಚಿ-ಇಟ್ಟೆ
ಮನಸ ಬಾವನೆಗಳ
ತಿಳಿದು ನೀ ನನ್ನಿಂದ
ದೂರಾಗಬಹುದೆಂದು.
ವಿಪರ್ಯಾಸವೆಂದರೆ,
ನಾ ಅರಿಯದೇ ಹೋದದ್ದು
ನೀ ದೂರವಾಗಲು
ನಾ ಬಚ್ಚಿ -ಇಟ್ಟ ಮನದ
ಬಾವನೆಗಳೆ
ಕಾರಣವಾಗುವುದೆಂದು.

ಮೃತ್ಯುವಿನ ಹೊಸಮನೆ

ಸದ್ಯ ಅಪ್ಪ ಹೇಳಿದ ಕಥೆಯ ನೆನೆಪು ಮಾಡಿಕೊಳ್ಳುತ್ತಿದ್ದಾರೆ ಹೊಸಮನೆಯ ಮೃತ್ಯು. ಶ್ರೀಶಂರ ಬ್ಲಾಗಿನಲ್ಲಿ ದೇವರೆಂಬ ದೇವರ ಬಗ್ಗೆ ಓದಿದ ಮೇಲೆ ಮೃತ್ಯುವಿಗೆ ಈ ಕಥೆ ನೆನಪಾಯಿತಂತೆ. ಅದು ನಾವು ನೀವು ಕೇಳಿರುವಂಥದ್ದು. ಮಹಾಭಾರತದಲ್ಲಿ ಬರುವ ರಾಶಿ ಕಥೆಗಳಲ್ಲಿ ಒಂದು ಸಣ್ಣ ಕಥೆ. ಅಣ್ಣ ಧರ್ಮರಾಯನ ಅನುಮಾನಕ್ಕೆ ಪ್ರತಿಯಾಗಿ ಭೀಮಸೇನಾ ಮೇಲಕ್ಕೆ ಗಧೆಯನ್ನೆಸೆದು ತನ್ನ ಭಕ್ತಿ ತೋರ್ಪಡಿಸುತ್ತಾನಲ್ಲ ಅದೇ ಕಥೆ.

ಮೃತ್ಯು ಎಂಬ ಬ್ಲಾಗಿಗರು ಹೀಗೆ ನೆನಪಾದದ್ದು, ತೋಚಿದ್ದು, ಅನಿಸಿದ್ದು ಎಲ್ಲವನ್ನೂ ತಮ್ಮ ಹೊಸಮನೆಯೊಳಗೆ ಬರೆಯುತ್ತಿದ್ದಾರೆ. ಇರುವೆ ಮತ್ತು ಇರುವಿಕೆಯ ಗುಟ್ಟು, ಸಂತರು ಮತ್ತು ಕಾಡಿಗೂ ಇರುವ ಸಂಬಂಧಗಳ ಬಗೆಗೆ ಅವರ ವಿಚಾರ ಹರಿದಿದೆ. ಆಮೇಲೆ ಹೀಗೆ ರೈಲೊಂದರಲ್ಲಿ ಅನುಭವಕ್ಕೆ ಸಿಕ್ಕ ಎರಡು ಭಾವುಕ ನೆನೆಪುಗಳ ಮೆಲುಕಿದೆ. ಹೀಗೆ ಸುಮ್ಮನೆ ಸುರಪುರವೆಂಬ ಹಳ್ಳಿ ಸುತ್ತಿ ಬಂದವರು ಅಲ್ಲಿನ ಆಚರಣೆಯ ಬಗ್ಗೆ ನಾಲ್ಕು ಸಾಲು ಬರೆದಿದ್ದಾರೆ. ಜೊತೆಗೆ ಒಂದಿಷ್ಟು ಕವಿತೆಗಳಿವೆ.

ಅಶೋಕರ ಮೈಸೂರು ಮಲ್ಲಿಗೆ

ಕ್ರಿಸ್ಮಸ್ ಎಂದರೆ ಚರ್ಚ್ ನಲ್ಲಿ ಪ್ರಾರ್ಥಿಸಿ ಬಂದು ಮನೆಯಲ್ಲಿ ನಾನ್ ವೆಜ್ ಅಡಿಗೆ ಮಾಡಿ ತಿಂಡುಂಡು ವೈನ್ ಕುಡಿದು ಸಂಭ್ರಮಿಸುವುದು. ಹಾಗಂತ ತಪ್ಪು ತಿಳಿದುಕೊಂಡಿದ್ದ ಅಶೋಕ್ ಉಚ್ಚಂಗಿ ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ನಿನ್ನೆ ಕ್ರಿಸ್ಮಸ್ ಹಬ್ಬದ ದಿನ ಅವರ ಮಡದಿಯ ಗೆಳತಿಯೊಬ್ಬರು ಮನೆಗೆ ಕೊಟ್ಟು ಹೋದ ತಿಂಡಿಗಳು ಅವರ ಅಭಿಪ್ರಾಯ ಬದಲಿಸಿದೆ. ‘ಕೇಕ್,ಚಕ್ಕುಲಿ,ರವೆ ಉಂಡೆ,ಸಿಹಿ ಉಂಡೆ,ಇನ್ನೆಂತದೋ ಒಂದು ಸಿಹಿಯಾದ ಗರಿಗರಿಯಾದ ವೀಲ್! ಇನ್ನು ಎಂತೆಂತದೋ ಸಿಹಿತಿಂಡಿಗಳ ಜೊತೆಗೊಂದು ತಾಜಾ ವೈನ್ ಅನ್ನು ಕಂಡ ಅಶೋಕ್ ಮನಸ್ಸು ತಪ್ಪು ತಿಳಿದುಕೊಂಡಿದ್ದಕ್ಕೆ ಪರಿತಪಿಸುತ್ತಿದೆ. ನಮ್ಮ ಸಂಪ್ರದಾಯಕ್ಕೆ ಹತ್ತಿರವಾಗಿ ಆಚರಿಸುವ ಅವರ ಆಚರಣೆ ಕಂಡು ಅಶೋಕರಿಗೆ ಕೃಷ್ಣ ಜನ್ಮಾಷ್ಟಮಿಯ ನೆನಪಾಗಿದೆಯಂತೆ. ಅದಕ್ಕೂ ಕ್ರಿಸ್ಮಸ್ ಗೂ ಏನು ಸಂಬಂಧ ಅನ್ನುವವರು ಈ ಬ್ಲಾಗಿಗೇ ಹೋಗಿ ತಿಳಿದುಕೊಳ್ಳಬೇಕು.

ತಾವು ಬಹುವಾಗಿ ಮೆಚ್ಚಿಕೊಂಡ ಮೈಸೂರಿನ ನೆನಪಲ್ಲೇ ಅಶೋಕ್ ತಮ್ಮ ಬ್ಲಾಗಿಗೆ ‘ಮೈಸೂರು ಮಲ್ಲಿಗೆ’ ಅಂತಲೇ ಹೆಸರಿಟ್ಟಿದ್ದಾರೆ. ಈಚೀಗೆ ಅವರು ಬರೆದ, ಕೈಯಲ್ಲಿ ಬುಟ್ಟಿ ಹಿಡಿದು ಸಾಲಾಗಿ ವ್ಯಾಪಾರಕ್ಕೆ ಹೊರಟ ಮಕ್ಕಳ ಸಾಗರಕಟ್ಟೆ ರೈಲ್ವೆ ಸ್ಟೇಷನ್ನಿನ ಕಥನ ಕಣ್ಣಿಗೆ ಕಟ್ಟುವಂತಿದೆ. ಆಮೇಲೆ ಮಕ್ಕಳಿಗೆ ದಿನಕ್ಕೊಂದು ಸುಳ್ಳು ಕಥೆಯೂ ಇದೆ. ಈಗಷ್ಟೆ ಬರೆಯಹೊರಟಿರುವ ಅಶೋಕರ ಮಲ್ಲಿಗೆ ಕಂಪು ಸವಿಯಬೇಕಿದ್ದವರು ಮೈಸೂರಿನ ಮಲ್ಲಿಗೆಯತ್ತ ಧಾವಿಸಬಹುದು.

ಸೂರ್ಯಕಿರಣರ ಅಂತರಾಳದ ಮಾತು

ಸದ್ಯ ಅಲೆದಾಟದ ಜೊತೆಗಾರನಿಗೊಂದು ಪತ್ರ ಬರೆದಿದ್ದಾರೆ ಸೂರ್ಯಕಿರಣ್ ಜೋಯಿಸ್. ಪತ್ರವೆಂದರೆ ಬರೀ ಪತ್ರವಲ್ಲ, ಮೊನ್ನೆ ಬೆಂಗಳೂರಿನಲ್ಲಿ ಪುಸ್ತಕ ಹುಡುಕುತ್ತಾ ಅಲೆದ ಅನುಭವದ ಚಿತ್ರಣ. ಜಯನಗರದಲ್ಲಿ ಭೇಟಿಯಾದ ಈ ಸಮಾನ ಮನಸ್ಕ ಪುಸ್ತಕ ಪ್ರಿಯರು ‘ಶನಿವಾರ, ಭಾನುವಾರ ಬಂತೆಂದರೆ ಬೆಂಗಳೂರಿನ ಜನ ಸಿನೆಮಾ, ಶಾಪಿಂಗ್ ಮಾಲ್, ಹೋಟೇಲು, ಪಬ್ಬು ಅಂತೆಲ್ಲ ತಿರುಗುತ್ತಾರೆ. ನಾವಿಬ್ಬರೂ ಪುಸ್ತಕ ಓದಲು ಹೋಗುತ್ತಿದ್ದೇವೆ’ ಅಂತನ್ನುತ್ತಾ ಇದ್ದಬದ್ದ ಪುಸ್ತಕದಂಗಡಿಗಳಿಗೆ, ಲೈಬ್ರರಿಗಳಿಗೆಲ್ಲ ಅಲೆದಿದ್ದಾರೆ. ತಮ್ಮಬ್ಬಿರ ಅಭಿರುಚಿ ಒಂದೇ ಆಗಿರುವುದನ್ನು ಕಂಡು ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಂಡಿದ್ದಾರೆ. ಸಂಸಾರ ಬಂಧನದೊಳಗೆ ಸಿಕ್ಕು ಹೆಂಡತಿ ಮಕ್ಕಳ ಜೊತೆ ನಡೆಯುತ್ತಿದ್ದವರನ್ನು ನೋಡಿ, ಮುಂದೆ ನಮಗೂ ಇದೇ ಗತಿ ಬಂದಾಗ ಹೀಗೆ ಪುಸ್ತಕ ಅಂತೆಲ್ಲ ತಿರುಗಾಡಲಾದೀತಾ? ಅಂತ ಲೆಕ್ಕಾಚಾರ ಹಾಕುತ್ತಿದ್ದಾರೆ.

ಇದು ಕಿರಣರ ‘ಅಂತರಾಳದ ಮಾತು’. ಹೆಸರಿಗೆ ತಕ್ಕಂತೇ ಇಲ್ಲಿ ಅವರ ಅಂತರಾಳದ ಮಾತುಗಳಿವೆ. ಅದರಲ್ಲಿ ಕೆಲವು ಲೇಖನವಾಗಿ, ಉಳಿದವು ಕವಿತೆಗಳಾಗಿ ಹೊರಹೊಮ್ಮಿವೆ. ಜೊತೆಗೆ ಅವರ ‘ಒಂದು ಕೋಳಿಯ ಕಥೆ’ ಯಂತಹ ಬಾಲ್ಯದ ನೆನಪುಗಳು, ‘ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ’ ದಂತಹ ಸಕಾರಾತ್ಮಕ ಚಿಂತನೆ ಮುಂತಾದ ಬರಹಗಳು ಇಲ್ಲಿವೆ.

ಮನು ಹೇಳಿದ ಕಾಫಿ ಕಥೆ

ಕಾಫಿ ಪ್ರಿಯರೇ ನಿಮಗಿದೋ ಇಲ್ಲೊಂದು ಆಘಾತದ ಸುದ್ದಿ ಇದೆ. ನೀವು ಕುಡಿಯುವ ಕಾಫಿ ಮುನ್ನ ಒಮ್ಮೆ ಯೋಚಿಸಬೇಕಾದ ವಿಷಯ. ಇತ್ತೀಚೆಗೆ ಸಿನಿಮಾ ಒಂದರಲ್ಲಿ ‘ಕೋಪಿ ಲುವಾಕ್’ ಅನ್ನುವ ದುಬಾರಿ ಕಾಫಿ ಬಗ್ಗೆ ತಿಳಿದ ಮನು ಅದರ ಮೂಲ ಹುಡುಕಿ ಹೋಗಿ ಪೆಚ್ಚಾಗಿದ್ದಾರೆ. ಅದರಂತೆ ಇಂಡೋನೇಷ್ಯಾ, ಮಲೇಶಿಯಾಗಳಲ್ಲಿ ಓಡಾಡಿಕೊಂಡಿರುವ ಒಂದು ಬೆಕ್ಕಿನ ಜಾತಿಯ ಸಾಧು ಪ್ರಾಣಿ ಇದೆಯಂತೆ. ಅದು ಕಾಫಿ ಹಣ್ಣುಗಳನ್ನು ತಿಂದು, ಅದರ ಮಲದಿಂದ ಹೊರಬಿದ್ದ ಬೀಜಗಳನ್ನು ಆಯ್ದು ಹುರಿದು ‘ಕೋಪಿ ಲುವಾಕ್’ ಅನ್ನೋ ವಿಶಿಷ್ಟ ಬಗೆಯ ಕಾಫಿ ತಯಾರು ಮಾಡ್ತಾರಂತೆ. ಸಾಮಾನ್ಯ ಕಾಫಿಗಿಂತ ಭಿನ್ನವಾದ, ಒಗರು ಒಗರಾಗಿರುವ ಈ ಕಾಫಿಯ ಒಂದು ಒಂದು ಕಪ್ಪಿನ ಬೆಲೆ ಬರೋಬ್ಬರಿ ೨೨೫೦ ರೂ.

ಇದನ್ನೆಲ್ಲ ಓದಿದ ಮೇಲೆ ನೀವು ಕಾಫಿ ಕುಡಿತಿರೋ ಇಲ್ಲವೋ ಅಂದ ಮನು ಈಗ ಸ್ವತಃ ಕಾಫಿ ಕುಡಿಯೋದಕ್ಕೆ ಹೊರಟುನಿಂತಿದ್ದಾರೆ! ಅವರ ‘ಅಲೆಮಾರಿ ನೆನಪುಗಳು’ ಬ್ಲಾಗಿನಲ್ಲಿ ಈ ಲೇಖನ ಕಾಣಿಸಿಕೊಂಡಿದೆ. ಉಳಿದಂತೆ ಮದನನ ಮರು ನಾಮಕರಣ ಮತ್ತು ಮೈಸೂರು ಸುತ್ತುವ ಅನುಭವದ ಮಜಭೂತಾದ ಲೇಖನಗಳಿವೆ. ಓದಿಬನ್ನಿ.

ಮಾವೆಂಸ ಬರಹಗಳು

ಕನ್ನಡದ ಪತ್ರಿಕೆಗಳಲ್ಲಿ ಆಗಾಗ್ಗೆ ಲೇಖನ ಬರೆಯುವ ಮಾವೆಂಸ ಪ್ರಸಾದ ಬ್ಲಾಗೊಂದನ್ನು ತೆರೆದಿದ್ದಾರೆ, ತಮ್ಮದೇ ಹೆಸರಿನಲ್ಲಿ. ಸದ್ಯಕ್ಕಲ್ಲಿ ಟೆನಿಸ್ ಡ್ರಾಪ್ ಶಾಟ್ಸ್, ಕಿರಿಕಿರಿ ಕ್ರಿಕೆಟ್ಟಿನ ಕುರಿತ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳಿವೆ. ವೀನಸ್ ವಿಲಿಯಮ್ಸ್ ಫ್ಯಾಶನ್ ಡಿಸೈನ್, ಬರ್ಟೋಗಿಯ ಬೇಸ್ ಲೈನ್ ಕಥೆ, ಓವರ್ ರೇಟ್..ಹೀಗೆ ಸಣ್ಣ ಮಜಲುಗಳ ಸರಣಿ ಇದೆ. ಗ್ರಾಹಕ ಆಂದೋಲನಾದಲ್ಲೂ ಕೆಲಸ ಮಾಡಿರುವ ಮಾವೆಂಸ ಡಿಟಿಎಚ್ ಸೇವೆ ಮತ್ತು ಅದಕ್ಕಿರುವ ನಿಬಂಧನೆ ಹಾಗೂ ಗ್ರಾಹಕ ಪರ ಕಾನೂನುಗಳ ವಿಶ್ಲೇಷಣೆ ಮಾಡಿದ್ದಾರೆ. ಚಾಕಲೇಟ್ ಒಳಗೂ ಇರುವ ವಿಷಕಾರಿ ಸಂಗತಿಯನ್ನು ಮುಂದಿಡುತ್ತಾ , ‘ಚಾಕಲೇಟ್ ತಿಂದೀರಿ, ಜೋಕೆ’ ಅಂತ ಲಘುವಾಗಿ ಹೆದರಿಸಿದ್ದಾರೆ. ಟ್ರಾಯ್ ಕುರಿತು ಸಣ್ಣದೊಂದು ಪರಿಚಯ ಮಾಡಿದ್ದಾರೆ. ಆಮೇಲೆ ಅವರು ಕುಂಬ್ಳೆ ಬಗ್ಗೆ ಮೆಚ್ಚಿ ಬರೆದದ್ದು, ಆರಕ್ಕೇರದ ಆಲೂ ಇಳುವರಿ ಲೇಖನಗಳ ಜೊತೆ ಒಂದಿಷ್ಟು ಕವಿತೆಗಳಿವೆ.

ಈ ಎಲ್ಲ ವೈವಿಧ್ಯಮಯ ಬರಹಗಳನ್ನು ಓದಬಯಸುವವರು ಮಾವೆಂಸ ಬ್ಲಾಗಿಗೆ ಭೇಟಿ ನೀಡಿ.

ನೆಟ್ಟಿನಲ್ಲಿ ನಾಕುತಂತಿ

ಇಷ್ಟು ದಿನ ಬರೀ ಕಥೆ, ಕಾದಂಬರಿ ಓದಿ ಬೇಜಾರಾಗಿದೆಯಾ? ಹಾಗಾದ್ರೆ ಈ ಮೆಗಾ ಧಾರವಾಹಿ ಓದಿ. ಕನ್ನಡದ ಟೀವಿ ವಾಹಿನಿಯೊಂದರಲ್ಲಿ ಪ್ರಸಾರ ಆಗುತ್ತಿರುವ ನಾಕುತಂತಿ ಮೆಗಾ ಧಾರವಾಹಿ ಈಗ ಸಂಕ್ಷಿಪ್ತ ರೂಪದಲ್ಲಿ ಬ್ಲಾಗಿನಲ್ಲಿ ಕಾಣಿಸಿಕೊಳ್ಳತೊಡಗಿದೆ. ಈಗಾಗಲೇ ೧೨೪೭ ಕಂತು ಮುಗಿಸಿ ಮುನ್ನುಗ್ಗುತ್ತಿರೋ ಧಾರವಾಹಿಯ ಸಂಚಿಕೆಗಳು ಕಥೆ ರೂಪದಲ್ಲಿ ಈ ‘ನಾಕುತಂತಿ’ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂದಿನ ಕಂತಿನ ಕಥೆ ಅಂದೇ ಲಭ್ಯ. ಒಮ್ಮೊಮ್ಮೆ ಒಂದು ದಿನ ಮುಂಚೇನೇ ಕಥೆ ತಿಳಿಯಬಹುದು. ಕರೆಂಟು ಹೋದ್ರೆ, ಕೇಬಲ್ ಕೈಕೊಟ್ಟರೆ ಪಕ್ಕದ ಮನೆಯವರನ್ನ ಕಥೆ ಕೇಳೋದು ಬಿಟ್ಟು ನೇರ ಬ್ಲಾಗಿನಲ್ಲೇ ಓದಿಕೊಳ್ಳಬಹುದು. ಅವತ್ತಿನ ಸಂಚಿಕೆ ಇಷ್ಟ ಆಯ್ತ ಇಲ್ಲ ನೋಡೋದಕ್ಕೆ ಕಷ್ಟವಾಗಿತ್ತಾ ಅಂತ ನೇರವಾಗಿ ನಿರ್ದೇಶಕರಿಗೇ ಕಮೆಂಟು ಮಾಡಬಹುದು. ನಟರು, ತಾಂತ್ರಿಕ ತಂಡದ ಬಗ್ಗೆ ತಿಳಿಯಬೇಕು ಅಂದರೂ ಇಲ್ಲಿ ಮಾಹಿತಿ ಸಿಗುತ್ತೆ.

ನೀವೂ ಭಾಗವಹಿಸಿ

ಛಂದ ಪುಸ್ತಕದ ವಿನ್ಯಾಸ ಸ್ಪರ್ಧೆ ಸುದ್ದಿ ಮುಗಿಯುತ್ತಲೇ ಈಗ ಮತ್ತೊಂದು ವಿನ್ಯಾಸ ಸ್ಪರ್ಧೆಯ ಸುದ್ದಿ ಹೊರಬಿದ್ದಿದೆ. ಈ ಬಾರಿ ವಿನ್ಯಾಸ ಕಥಾ ಪುಸ್ತಕಕ್ಕಲ್ಲ, ಭಯೋತ್ಪಾದನೆಯ ವಿರುದ್ಧ ಸಮರಕ್ಕೆ. ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಏನಾದರೂ ಮಾಡಬೇಕು ಅಂತ ಬರೆದಿದ್ದ ನೀಲಾಂಜಲ ಈ ಬಾರಿ ಸ್ಪರ್ಧೆ ಒಂದನ್ನ ನಡೆಸುವುದಾಗಿ ಪ್ರಕಟಿಸಿದ್ದಾರೆ. ಅದುವೇ ಲಾಂಛನ ವಿನ್ಯಾಸದ ಸ್ಪರ್ಧೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ವಿನ್ಯಾಸ ಮಾಡಿ, ಯಾರು ಎಷ್ಟು ಬೇಕಾದರೂ ಕಳುಹಿಸಬಹುದು. ಮಾತ್ರವಲ್ಲ ಭಯೋತ್ಪಾದನೆ ಅಂದ್ರೆ ಏನು, ಎತ್ತ ಅಂತ ಬರೆಯುವ ಪ್ರಬಂಧ ಸ್ಪರ್ಧೆಯೂ ಉಂಟು. ಗೆದ್ದವರಿಗೆ ಭಾರೀ ನಗದು ಬಹುಮಾನ* ( *-ಅಂದ್ರೆ ನಿಬಂಧನೆಗೊಳಪಟ್ಟಿದೆ ಅಂತ) ಜನವರಿ ೨೬ರವರೆಗೂ ನಿಮಗೆ ಅವಕಾಶ ಉಂಟು. ಹೆಚ್ಚಿನ ಮಾಹಿತಿ ಬೇಕಿದ್ದವರು ನೀಲಾಂಜನ ಬ್ಲಾಗಿಗೆ ಭೇಟಿ ನೀಡಬಹುದು.

ಇರ್ಷಾದ್ ಭಯೋತ್ಪಾದಕನಾದದ್ದು ಹೀಗೆ!

ಹೀಗೆ ಇದಕ್ಕಿದ್ದ ಹಾಗೇ ‘ಭಯೋತ್ಪಾದಕ’ ನಾಗಿಬಿಟ್ಟರೆ ಹೇಗೆ? ಪತ್ರಿಕೋದ್ಯಮ ವಿದ್ಯಾರ್ಥಿ ಇರ್ಷಾದ್ ವೇಣೂರಿಗೆ ಇಂತಹದ್ದೊಂದು ಪಟ್ಟ ಸಿಕ್ಕಿದೆ! ಅವರ ಕಾಲೇಜಿನ ಕೆಲ ಕಿಡಿಗೇಡಿ ಸಹಪಾಠಿಗಳಿಂದ. ಸುಮ್ಮನೆ ತಮ್ಮ ಪಾಡಿಗೆ ತಾವಿದ್ದ ಇರ್ಷಾದ್ ಮೊನ್ನೆ ಬಕ್ರೀದ್ ಹಬ್ಬದ ಖುಷಿಯಲ್ಲಿದ್ದ ವೇಳೆ ಈ ಸುದ್ದಿ ಅವರ ಕಿವಿಗೆ ಬಿದ್ದಿದೆ. ಕಾಲೇಜಿಗೆ ಹೋಗಿದ್ದವರೇ ನೋಟಿಸ್ ಬೋರ್ಡಿನೊಳಗೆ ತಮ್ಮ ಚಿತ್ರದೊಂದಿಗೆ ಭಯೋತ್ಪಾದಕನೆಂಬ ಸುದ್ದಿ ಕಂಡು ಕಂಗಾಲಾಗಿದ್ದಾರೆ. ಅದನ್ನು ಕಿತ್ತೆಸೆಯಲು ಹರಸಾಹಸ ಪಟ್ಟು, ಕಡೆಗೆ ಶಿಸ್ತು ಸಮಿತಿಯೊಡನೆ ನ್ಯಾಯಕ್ಕಾಗಿ ಗುದ್ದಾಡಿದರೂ ನ್ಯಾಯ ಸಿಕ್ಕಿಲ್ಲ. ಆಡಳಿತ ಪಕ್ಷಕ್ಕೆ ಸೇರಿದ ಸಂಘಟನೆಯವರೆಂಬ ಕಾರಣಕ್ಕೆ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ.

ಈಗಲೂ ಕಾಲೇಜಿನ ಕಾರಿಡಾರಿನಲ್ಲಿ ನಡೆದುಹೋಗುತ್ತಿರುವಾಗ ಯಾರೋ ‘ಟೆರರಿಸ್ಟ್’ ಅಂದಂತಾಗಿ ಇರ್ಷಾದ್ ಬೆಚ್ಚುತ್ತಿದ್ದಾರೆ. ಹುಡುಗಾಟ ವಿಪರೀತವಾದರೆ ಏನಾಗುತ್ತದೆ ಅನ್ನುವುದಕ್ಕೆ ಇದೇ ಸಾಕ್ಷಿ. ಇದನ್ನೆಲ್ಲ ಮನೆಯಲ್ಲಿ ಹೇಳಿಕೊಳ್ಳಲಾರದ ಹುಡುಗ ಬ್ಲಾಗಿನಲ್ಲಿ ಮನಬಿಚ್ಚಿದ್ದಾರೆ. ಇಲ್ಲಿ ನಿಜವಾದ ಭಯೋತ್ಪಾದಕರು ಯಾರು? ಯಾವುದೋ ಒಂದು ಗುಂಪಿಗೆ ಸೇರಿದವನೆಂಬ ಕಾರಣಕ್ಕೆ ಅವನ ಫೋಟೋ ಜೊತೆಗೆ ಭಯೋತ್ಪಾದಕ ನೆಂಬ ಪಟ್ಟಿ ಹಚ್ಚಿ ಭಯ ಸೃಷ್ಟಿಸಲೆತ್ನಿಸಿದ ವಿಕೃತ ಮನಸ್ಸಿನ ಕೆಲ ಪುಂಡರೋ? ಇಲ್ಲ, ಇರ್ಷಾದರೋ?

ಕಾಡುಹರಟೆಯ ಚಾರಣ

ಈ ದಿನದ ಬ್ಲಾಗಿನಲ್ಲಿದೆ ಕಾಡುಹರಟೆಯ ಚಾರಣದ ಕಥೆ. ಈ ಹರಟೆ ಬ್ಲಾಗಿನ ಬ್ಲಾಗಿಗ ಸಂತೋಷ್ ಕುಮಾರ್ ಸಹಿತ ಬ್ರಹ್ಮಗಿರಿಗೆ ಹೋಗಬೇಕು ಅಂದುಕೊಂಡ ಒಂಭತ್ತು ಮಂದಿ ಅಲ್ಲಿಗೆ ಹೋಗಲಾರದೇ,ಕಡೆಗೆ ಮುಕ್ತಿಹೊಳೆ ಜಲಪಾತಕ್ಕೆ ಪ್ರಯಾಣ ಬೆಳೆಸಿ ಬಂದಿದ್ದಾರೆ. ಆ ಬ್ಲಾಗು ಈ ಬ್ಲಾಗು ಓದಿ ಮೊದಲೇ ಮಾಹಿತಿ ಸಂಗ್ರಹಿಸಿಕೊಂಡು ಜಲಪಾತ ನೋಡಲಿಕ್ಕೆ ಹೊರಟವರು ಅಲ್ಲಿಯೂ ಒಮ್ಮೊಮ್ಮೆ ದಾರಿತಪ್ಪುತ್ತಾ, ಜಿಗಣೆಗಳ ಕಡಿತ ತಾಳಿಕೊಳ್ಳುತ್ತಾ, ಬೆಟ್ಟ ಹತ್ತಿ ಇಳಿದು, ಕಡೆಗೂ ಹೊಳೆ ನೋಡಿ ಖುಷಿ ಪಟ್ಟಿದ್ದಾರೆ. ಮತ್ತೆ ಕಾಡಿನಲ್ಲಿ ಕತ್ತಲಲ್ಲಿ ಅಲೆದು ಊರು ಸೇರಿಕೊಂಡಿದ್ದಾರೆ. ಮುಕ್ತಿಹೊಳೆ ಜಲಪಾತ ನೋಡಬಯಸುವವರಿಗೆ ಮಾರ್ಗದರ್ಶಿಯಂತಿದೆ ಈ ಲೇಖನ.

ಬ್ಲಾಗಿನ ಹೆಸರು ಕಾಡುಹರಟೆಯಾದರೂ ಚಾರಣ ಪ್ರಿಯರಿಗೆ ಅನುಕೂಲವಾಗುವಂಥ ಒಂದಿಷ್ಟು ಉಪಯುಕ್ತ ಮಾಹಿತಿಗಳು ಇಲ್ಲಿವೆ. ಪ್ರವಾಸ ಕುರಿತ ನಾಲ್ಕಾರು ಲೇಖನಗಳು ಜೊತೆಗಿವೆ. ಕೊಡಚಾದ್ರಿ ಸುತ್ತಿಬಂದ ಸಂತೋಷ್ ಅಲ್ಲಿನ ತಮ್ಮ ಅನುಭವಗಳನ್ನು ಮತ್ತು ಚಾರಣಕ್ಕಿರಬೇಕಾದ ಅಗತ್ಯತೆಯನ್ನು ಆರು ಕಂತುಗಳ ಸರಣಿಯಲ್ಲಿ ವಿವರಿಸಿದ್ದಾರೆ. ಹೊನ್ನಾವರದಿಂದ ಗೋಕರ್ಣದವರೆಗೆ ಸಮುದ್ರದಂಡೆ ಚಾರಣದ ಲೇಖನವೂ ಇಲ್ಲಿದೆ. ಸಣ್ಣಕಥೆಗಳೂ ಕೂಡ ಇವೆ. ಓದಬಯಸುವವರು ಕಾಡುಹರಟೆಗೆ ಹೋಗಿಬನ್ನಿ.

ಅರ್ಚನಾರ ಇಂಗ್ಲೆಂಡ್ ಪ್ರವಾಸ

ಸಾಮಾನ್ಯವಾಗಿ ಹೊಸದೊಂದು ರುಚಿಯೊಂದಿಗೆ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುವ ಅರ್ಚನಾ ಈ ಬಾರಿ ಇಂಗ್ಲೆಂಡ್ ಸುತ್ತಿಬಂದ ಅನುಭವಗಳನ್ನು ಹೊತ್ತು ತಂದಿದ್ದಾರೆ. ಕಂಪನಿಯ ಕೆಲಸದ ನಿಮಿತ್ತ ಇಂಗ್ಲೆಂಡಿಗೆ ಹೋಗುವ ಅವಕಾಶ ಸಿಕ್ಕು, ಅದನ್ನು ಸ್ವಾಮಿಕಾರ್ಯ ಮತ್ತು ಸ್ವಕಾರ್ಯ ಎರಡಕ್ಕೂ ಬಳಸಿಕೊಳ್ಳಲು ನಿಶ್ಚಯಿಸಿದ ಅವರಿಗೆ ಲಂಡನ್ನಿಗೆ ಹೆಜ್ಜೆ ಇಟ್ಟಿದ್ದು ಕನಸೊಂದು ಕೈಗೂಡಿದ ಹಾಗಾಯಿತಂತೆ. ಅಲ್ಲಿ ಸೊನ್ನೆ ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಬೆಚ್ಚಗಿನ ಹೊದಿಕೆ ತೊಟ್ಟು ಲಂಡಿನ್ನಿನ ಬೀದಿಗಳನ್ನು ಬಿಡದೇ ಸುತ್ತಿದ್ದಾರೆ. ಅದುವೇ ಕ್ರಿಸ್ಮಸ್ ಹೊತ್ತಿನಲ್ಲಿ ದೀಪಗಳ ಬೆಳಕಲ್ಲಿ ಮಿನಿಗುತ್ತಿರುವ ನಗರವನ್ನು ಕಂಡು ವಿಸ್ಮಯ ಪಟ್ಟಿದ್ದಾರೆ. ಆಕ್ಸ್ ಫರ್ಡ್ ಸುತ್ತಲೂ ಒಂದು ಸುತ್ತು ಹಾಕಿದ್ದಾರೆ. ಫೋಟೊಗಳಲ್ಲಿ ಮಾತ್ರ ಹಿಮವನ್ನು ಕಂಡವರಿಗೆ ನಿಜಕ್ಕೂ ಅಲ್ಲಿನ ಊರುಗಳ ಮೇಲೆಲ್ಲ ತರಗೆಲೆಯಂತೆ ಮುಚ್ಚಿರುವ ಹಿಮದ ರಾಶಿಯನ್ನು ಕಂಡಾಗ ಆಗಿರುವ ಖುಷಿ ಅಷ್ಟಿಷ್ಟಲ್ಲ.

ಪ್ರವಾಸಕ್ಕೆ ತಕ್ಕಂತೆ ರಾಶಿಗಟ್ಟಲೆ ಚಿತ್ರಗಳೂ ಲೇಖನದ ಜೊತೆಗಿವೆ. ಕೂತಲ್ಲೇ ಪುಕ್ಕಟೆಯಾಗಿ ಇಂಗ್ಲೆಂಡ್ ಸುತ್ತ ಬಯಸುವವರು ಅರ್ಚನಾ ಹೆಬ್ಬಾರ್ ಬ್ಲಾಗಿಗೊಮ್ಮೆ ಭೇಟಿನೀಡಿ.


ಬತ್ತದ ತೊರೆಯ ಕಥೆ

ತಮ್ಮ ಲೇಖನಗಳೊಟ್ಟಿಗೆ ಆಗಾಗ್ಗೆ ‘ಬತ್ತದ ತೊರೆ'ಯಲ್ಲಿ ಕಾಣಿಸಿಕೊಳ್ಳುವ ಚಂದ್ರಕಾಂತ ಈ ಬಾರಿ ಸಣ್ಣಕಥೆಯೊಂದನ್ನು ತೆರೆದಿಟ್ಟಿದ್ದಾರೆ. ಮೂವತ್ತು ವರ್ಷಗಳಿಂದ ಪ್ರತಿ ದೀಪಾವಳಿ ಬಂದಾಗಲೂ ಹಾಗೇ ಕಾಡಿ ಹೋಗುವ ನೆನಪೊಂದರ ಎಳೆಯನ್ನ ವಸ್ತುವಾಗಿಸಿಕೊಂಡು ಕಥೆಯನ್ನ ಹೊಸೆದಿದ್ದಾರೆ. ಅದೇ ಈ ‘ನೆನಪು ಸವಿಸವಿ..'

ಚಂದ್ರಕಾಂತರ ಬ್ಲಾಗಿನಲ್ಲಿ ಇನ್ನೂ ಇಂತಹದ್ದೇ ಹಲವು ಬರಹಗಳಿವೆ. ಅವರ ‘ಪುಟ್ಟಿಯ ತರ್ಕ' ಮಗುವೊಂದರ ಮುಗ್ಧತೆಯನ್ನ ಸಾರಿ ಹೇಳುವ ಬರಹದಂತಿದೆ. ಎಲ್ಲರೂ ‘ಲವ್ ಈಸ್ ಬ್ಲೈಂಡ್' ಅಂತಾರೆ. ಈಷ್ಟಕ್ಕೂ ಈ ಪ್ರೇಮ ಕುರುಡಾಗಿದ್ದು ಹೇಗಪ್ಪಾ? ಅಂತ ಸಣ್ಣದೊಂದು ವಿಶ್ಲೇಷಣೆ ಮಾಡಿದ್ದಾರೆ. ಒಂದು ವಿಭಿನ್ನ ಧಾರಾವಾಹಿಯ ಜನಪ್ರಿಯತೆಯನ್ನೂ, ಅದಕ್ಕೆ ತಕ್ಕ ಕಾರಣಗಳನ್ನೂ ಬ್ಲಾಗಿಗರು ಮುಂದಿಟ್ಟಿದ್ದಾರೆ. ‘ಹೃದಯದ ಭಾಷೆ' ಅನ್ನುವುದೊಂದು ಭಾಷೆಯೂ ಇದೆ ಅಂತ ಕಥೆಯೊಂದರ ಸಹಿತ ವಿವರಿಸಿದ್ದಾರೆ. ತಾವು ಗಾಡಿ ಓಡಿಸಲು ಕಲಿತ ಪ್ರಸಂಗ-ಗಾಡಿ ಜೊತೆಗಿನ ತಮ್ಮ ಅವಿನಾಭಾವ ಸಂಬಂಧಗಳನ್ನೆಲ್ಲ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಓದಲು ಇನ್ನೂ ಸಾಕಷ್ಟಿದೆ. ಓದಬೇಕಿದ್ದವರು ಬತ್ತದ ತೀರಕ್ಕೆ ಹೋಗಬಹುದು.

ಮಾತು-ಮೌನ

ಮೌನಕ್ಕೆ ಮಾತು ಕಲಿಸುವಾಸೆ ಇಟ್ಟುಕೊಂಡಿರುವ ಸಂತೋಷ್ ಚಿದಂಬರ್ ಸದ್ಯ ಎಕನಾಮಿಕಲ್ ಕ್ರೈಸಿಸ್ಸಿನ ಬಗ್ಗೆ ಮಾತನಾಡುತ್ತಿದ್ದಾರೆ. ಆರ್ಥಿಕ ಮುಗ್ಗಿಟ್ಟಿನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ ಅಂತನ್ನುತ್ತಲೇ ಅದರ ಬಗ್ಗೆ ಒಂದಿಷ್ಟು ಕೆದಕಿ ಬರೆದಿದ್ದಾರೆ. ಲಿಮನ್ ಬ್ಯಾಂಕಿನಿಂದ ಶುರುವಾದ ಅವರ ವಾದ ಯುಪಿಎ ಸರ್ಕಾರ ಶ್ರೀಮಂತರಿಗೆ ಮಣೆ ಹಾಕೋದನ್ನ ನಿಲ್ಲಿಸಿ ತೆರಿಗೆ ಹಾಕಬೇಕು ಎಂಬಲ್ಲಿಗೆ ಬಂದುನಿಂತಿದೆ.

ಸಂತೋಷ್ ಮಾತು-ಮೌನ ಎಂಬ ಈ ಬ್ಲಾಗಿನಲ್ಲಿ ಹೆಸರಿನಂತೇ ತಮ್ಮ ಮಾತುಗಳ ಜೊತೆಗೆ ಮೌನದ ಸಂಭಾಷಣೆಯನ್ನೂ ತೆರೆದಿಟ್ಟಿದ್ದಾರೆ. ಸಂಬಂಧ, ಕವಿತೆಗಳ ಬಗ್ಗೆಯಲ್ಲಾ ನಗೆ ಚಟಾಕಿ ಸಿಡಿಸಿದವರು ಮದುವೆ ಮನೆಯ ಸಂಭ್ರಮದ ಬಗ್ಗೆ ಕೊಂಕು ನುಡಿದಿದ್ದಾರೆ. ‘ಕುಮಾರ್ಸಾಮಿ ಜಾಮ್' ಅನ್ನ ರಸವತ್ತಾಗಿ ವರ್ಣಿಸಿದ್ದಾರೆ. ಹೀಗೆ ಸುಮ್ಮನೆ ಸ್ನೇಹಿತೆಯೊಬ್ಬಳ ನೆನಪು ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಕೂತು ತಮ್ಮೂರಿನ ಮನೆಯನ್ನ, ಅದರೊಳಗಿನ ಅಣ್ಣನ ಒಡನಾಟವನ್ನ ನೆನೆಸಿಕೊಂಡಿದ್ದಾರೆ. ಜೊತೆಗೊಂದಿಷ್ಟು ಕವಿತೆಗಳೂ ಇಲ್ಲಿವೆ.

ಪ್ರಕವಿಯ ವಲಯ

ಅತ್ತ ಸುಕವಿಯೂ ಅಲ್ಲದ, ಇತ್ತ ಕುಕವಿಯೂ ಅಲ್ಲದ ನಟ್ಟ ನಡುವಿನ ಪ್ರಕವಿ ಎಂಬ ಕವಿಯ ವಲಯವೇ ಈ ದಿನದ ಬ್ಲಾಗ್. ತಮ್ಮೆಲ್ಲ ಕವಿತೆಗಳನ್ನು ಪ್ರಕಾಶಿಸುವ ಹೊಣೆ ಹೊತ್ತ ಪ್ರದೀಪ ಇಲ್ಲಿ ಬ್ಲಾಗಿಸುತ್ತಿದ್ದಾರೆ. ಸದ್ಯಕ್ಕವರು ಕಾಲದ ನದಿಯ ತೀರದಲಿ ತೇಲುತ್ತಿದ್ದಾರೆ.

ಬೆಕ್ಕಿನ ಮರಿಯೂ ಮಜಾ ಮಾಡುವಂತೆ ಕವನ ಬರಿಯಬೇಕು ಅನ್ನುವ ಪ್ರದೀಪ ಇಲ್ಲಿ ತಮ್ಮ ಒಂದಿಷ್ಟು ಕವಿತೆಗಳನ್ನು ತೆರೆದಿಟ್ಟಿದ್ದಾರೆ. ಮುಂಜಾನೆ ನೋಟ, ಹುಡುಗ-ಗಂಡಂದಿರ ನಾಳೆಗಳು, ಪ್ರೇಮಿಗಳಿಗೆ ಸವಾಲ್ ಎನ್ನುವ ದ್ವಿಪದಿಗಳು ಎಲ್ಲಾ ಇವೆ. ಓದಬಯಸುವವರಿಗೆ ಪ್ರಕವಿ ವಲಯಕ್ಕೆ ಸ್ವಾಗತ.

ಸಂಭ್ರಮದ ಸ್ವರಚಿತ್ತಾರ

ಭಯೋತ್ಪಾದನೆಯ ಬೆದರಿಕೆಯ ನಡುವೆಯೂ ಗುರುವಾರ ಕ್ರಿಕೆಟ್ ಟೆಸ್ಟ್ ಪಂದ್ಯ ಸುಸೂತ್ರವಾಗಿ ನಡೆಯುತ್ತಾ? ಚೆನ್ನೈನಲ್ಲಿ ಮಳೆ ನಿಂತು ಆಟಕ್ಕೆ ಅನುವು ಮಾಡಿಕೊಡುತ್ತಾ? ಅಂತೆಲ್ಲ ನಾವು ಯೋಚನೆ ಮಾಡುತ್ತಿದ್ದರೆ, ಇಲ್ಲೊಬ್ಬರು ಬ್ಲಾಗಿಗರು ಅದಾಗಲೇ ಸೆಹ್ವಾಗರ ಜಪ ಮಾಡುತ್ತಿದ್ದಾರೆ. ಸಿಡಿಲ ಮರಿಯ ಬ್ಯಾಟಿಂಗ್ ಬಿರುಸನ್ನು ಕಂಡು ಬೆರಗಾಗಿ ಅವರ ಹೊಗಳಿಕೆ ಶುರು ಮಾಡಿದವರು ಸೆಹ್ವಾಗ್ ರಂಥ ಆಟಗಾರರ ಸಂತತಿ ಹೆಚ್ಚಲಪ್ಪ ಅಂತ ಹಾರೈಸುತ್ತಿದ್ದಾರೆ.

ಕಲೆ, ಸಾಹಿತ್ಯ, ಸಂಸ್ಕೃತಿ, ಪರಿಸರದ ಬಗ್ಗೆ ಸಾಮಾಜಿಕ ಕಳಕಳಿಯುಳ್ಳ ಈ ಗೆಳೆಯರು ಸ್ವರಚಿತ್ತಾರ ಎಂಬ ಬ್ಲಾಗು ಕಟ್ಟಿಕೊಂಡಿದ್ದಾರೆ. ಅದರಲ್ಲೊಬ್ಬರು ಮೊನ್ನೆ ಮೊನ್ನೆ ಅರ್ಧ ಸುಟ್ಟು ಕರಕಲಾದ ತಾಜ್ ನ ಭವ್ಯತೆ ಕುರಿತು ವ್ಹಾ! ಅಂದಿದ್ದಾರೆ. ಇನ್ನೊಬ್ಬರು ಕರಾಳತೆಗೂ ವಿಶ್ವಮಾನವತೆಗೂ ಇರುವ ವ್ಯತ್ಯಾಸ ತಿಳಿಸುವ ಯತ್ನ ಮಾಡಿದ್ದಾರೆ. ಮೇ ತಿಂಗಳಿಗೂ ಬಾಲ್ಯಕ್ಕೂ ಅಂಟಿದ ನಂಟಿನ ಕುರಿತು ನಾಲ್ಕು ಮಾತಾಡಿದ್ದಾರೆ. ಬೆಂಕಿ ಮಳೆಯ ನಡುವೆಯೂ ತನ್ನ ಪ್ರೀತಿ ಹಕ್ಕಿಗೊಂದು ಪ್ರೇಮಪತ್ರ ಬರೆದಿದ್ದಾರೆ. ಜೊತೆಗೆ ಒಂದೆರಡು ಕವಿತೆಗಳೂ ಇಲ್ಲಿವೆ.

ದುರ್ಗದ ಹುಡುಗರ ಸಾಹಿತ್ಯ ಸಮ್ಮೇಳನ

ತಮ್ಮೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತೆ ಅನ್ನುವ ಸುದ್ದಿಯನ್ನೇ ನೆಪವಾಗಿಟ್ಟುಕೊಂಡು ಚಿತ್ರದುರ್ಗದ ಮಾಹಿತಿಯನ್ನ ಬ್ಲಾಗಿನಲ್ಲಿ ತುಂಬಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಈ ದುರ್ಗದ ಹುಡುಗರು. ಸಮ್ಮೇಳನವನ್ನು ಮುಂದಿಟ್ಟುಕೊಂಡು ದುರ್ಗದ ಕೆಲವರು ಹಿಂದೇಟು ಹಾಕುತ್ತಿರುವುದು ಇವರ ಬೇಸರಕ್ಕೆ ಕಾರಣವಾಗಿದೆ. ಆ ಬೇಜಾರಿನಲ್ಲೇ ಒಂದೆರಡು ತಿಂಗಳು ಬ್ಲಾಗು ಬಿಟ್ಟು ಹೋಗಿದ್ದವರು ಈಗ ಮತ್ತೆ ಬಂದಿದ್ದಾರೆ. ಜೊತೆಗೆ ಚಿತ್ರದುರ್ಗದ ಪಿಲ್ಲೋಲಾವಾ ಬಂಡೆಗಳ ಚಿತ್ರ ಹೊತ್ತು ತಂದಿದ್ದಾರೆ.

ಕೋಟೆಯ ನಾಡು ಚಿತ್ರದುರ್ಗದಲ್ಲಿ ನಡೆಯಲಿರುವ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳು ಇಲ್ಲಿವೆ.

ಪಾಲಚಂದ್ರರ ಅನುಭವ ಮಂಟಪ

ಕ್ಯಾಮರಾ ಇದ್ದರೂ ಚಿತ್ರ ಹೇಗೆ ತೆಗೆಯಬೇಕು ಅಂತ ಗೊತ್ತಿದ್ದವರು ಕಡಿಮೆ. ಅದರಲ್ಲೂ ಯಾವ ಕೋನದಿಂದ ಚಿತ್ರ ತೆಗೆದರೆ ಚೆನ್ನಾಗಿರುತ್ತೆ ಅಂತ ಯೋಚಿಸುವವರು ಕಡಿಮೆ. ಹೀಗಿರುವವರಿಗೆ ನಿಪುಣ ಛಾಯಾಗ್ರಹಣದ ಕೆಲವು ಪಾಠಗಳನ್ನ ಮುಂದಿಡುತ್ತಿದ್ದಾರೆ ಪಾಲಚಂದ್ರ. ಹೇಗೆ ಝೂಮ್ ಮಾಡಿ ತೆಗೆದರೆ ಚೆನ್ನಾಗಿರುತ್ತೆ, ನೆಳಲು-ಬೆಳಕಿನ ಸಂಯೋಜನೆ ಹೇಗಿದ್ದರೆ ಚೆನ್ನ... ಹೀಗೆ ಫೋಟೊ ತೆಗೆಯುವಾಗ ಅನುಸರಿಸಬಹುದಾದ ಕ್ರಮಗಳು ಇಲ್ಲಿವೆ.

ಪಾಲಚಂದ್ರರ ಈ ಅನುಭವ ಮಂಟಪದಲ್ಲಿ ಈ ಪಾಠಗಳ ಜೊತೆಗೆ ಇನ್ನಿತರ ಬರವಣಿಗೆಗಳೂ ಓದಲಿಕ್ಕಿವೆ. ಉತ್ತರ ಕನ್ನಡದ ಮುಂಗಾರಿನಲ್ಲಿ ಮಿಂದ ಅನುಭವಗಳನ್ನು ಅಕ್ಷರದಲ್ಲಿ ಕಟ್ಟಿಟ್ಟಿದ್ದಾರೆ. ಕುಮಾರ ಪರ್ವತದಲ್ಲಿನ ಚಾರಣವನ್ನು ವಿಸ್ತಾರವಾಗಿ ವರ್ಣಿಸಿದ್ದಾರೆ. ಮೇಲುಕೋಟೆಗೆ ಭೇಟಿ ಕೊಟ್ಟು ಬಂದಿದ್ದಾರೆ. ಮಾರ್ಚ್ ನಲ್ಲಿ ಮಳೆಗಾಲದ ಒಂದು ಅನುಭವ ಬಿಚ್ಚಿಟ್ಟಿದ್ದಾರೆ. ಜೊತೆಗೆ ಒಂದಿಷ್ಟು ಲಲಿತ ಪ್ರಬಂಧ, ಕಥೆ ಸಣ್ಣಕಥೆಗಳೂ ಇಲ್ಲಿವೆ.

ಅವಿ ಬರೆವ ಒಂದ್ಸಲ

"ಪ್ರೇಯಸಿಯ ಅಂದ ಕಣ್ಣಾರೆ ಕಾಣಬೇಕೆಂದುಕೊಂಡ ಹುಡುಗನೊಬ್ಬ ಅದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದ. ಅವಳು ಸ್ನಾನಕ್ಕೆ ಹೊರಟಾಗ ಹಿಂದೆಯೇ ನೊಣವೊಂದು ಸ್ನಾನದ ಕೋಣೆಗೆ ನುಗ್ಗಿದ್ದನ್ನು ಕಂಡ. ನನ್ನನ್ನೂ ನೊಣ ಮಾಡು ದೇವರೇ ಅಂತ ಬೇಡಿಕೊಂಡ. ಅವನ ಬೇಡಿಕೆ ಈಡೇರಿತು. ಆತ ಈಗ ನೊಣವಾಗಿ ನಲ್ಲೆಯ ಮನೆಗೆ ಬಂದ. ಅವಳು ಸ್ನಾನಕ್ಕೆ ಹೊರಟಿದ್ದನ್ನು ಕಂಡು ಹಿಂದೆಯೇ ಹಾರಿದ. ಗೋಡೆಯ ಮೇಲೆ ಕುಳಿತು ಅವಳಂದ ನೋಡುವ ಕನಸು ಕಾಣುತ್ತಿರುವಾಗಲೇ.... ಪಕ್ಕದಲ್ಲೇ ಇದ್ದ ಹಲ್ಲಿಯೊಂದು ನೊಣವಾಗಿದ್ದ ಇವನನ್ನು ನುಂಗಿಹಾಕಿತು. ಹುಡುಗ ಇಲ್ಲವಾದ. ಇದ್ಯಾವುದೂ ತನಗೆ ತಿಳಿದಿಲ್ಲವೆಂಬಂತೆ ಆಕೆ ಸ್ನಾನ ಮುಗಿಸಿ ಹೊರನಡೆದಳು"

ಹೈಸ್ಕೂಲಿನಲ್ಲಿ ಓದಿಕೊಂಡಿದ್ದ ಈ ಜಪಾನ್ ಅಥವಾ ಚೀನಾ ದೇಶದ ಜನಪದ ಕಥೆಯನ್ನ ಈಗ ನೆನೆಸಿಕೊಂಡು ಹೇಳುತ್ತಿದ್ದಾರೆ ಅವಿ. ಪತ್ರಕರ್ತ ಅವಿನಾಶ್ ಬ್ಲಾಗಿಸುವ ‘ಒಂದ್ಸಲ' ಬ್ಲಾಗಿನಲ್ಲಿ ಇನ್ನೂ ಇಂತಹದ್ದೇ ನಾಲ್ಕಾರು ಬರಹಗಳಿವೆ. ಅವಿ ತಮ್ಮ ವೃತ್ತಿ ಬದುಕಿನ ಒಂದೆರಡು ಅನುಭವ ಹಂಚಿಕೊಂಡಿದ್ದಾರೆ. ಪತ್ರ ಸುಟ್ಟ ನಲ್ಲೆಯ ನೆನಪಿಗೊಂದು ಪತ್ರ ಬರೆದಿದ್ದಾರೆ. ಒಂದಿಷ್ಟು ಹನಿಕವಿತೆ ಬರೆದಿದ್ದಾರೆ. ಎಲ್ಲವನ್ನೂ ನೀವು ಒಂದ್ಸಲ ನೋಡಿಬಿಡಿ.

ಕಾದಂಬಿನಿಯ ಕವಿತೆ

ಕಾದಂಬಿನಿ ಹೆಸರಲ್ಲಿ ಬರೆಯುವ ರೇಶ್ಮಾ ಈ ಸಲ ಮಾನವೀಯತೆ ಮರೆತವರಿಗೊಂದು ಕವಿತೆ ಬರೆದಿದ್ದಾರೆ. ‘ನಿಮ್ಮ ಗುಂಡುಗಳು ದೇಹವನ್ನಷ್ಟೆ ಸುಡಬಹುದು ಪ್ರೀತಿಯನ್ನಲ್ಲ, ನಾವು ಎಂದಿಗೂ ಸೋಲುವುದಿಲ್ಲ. ದ್ವೇಷ, ಹಿಂಸೆಗೆ ತಲೆ ಬಾಗುವುದಿಲ್ಲ' ಅಂತ ಪದ್ಯ ಹೊಸೆದಿದ್ದಾರೆ.

ಎದೆಯಲ್ಲಿ ಚಿತ್ತಾರ ಬರೆದ ಮೋಡಗಳ ಸಾಲುಗಳು ಇಲ್ಲಿ ಅಕ್ಷರ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಕವಿತೆ ಬರೆಯುವುದರಲ್ಲೇ ಹೆಚ್ಚು ಪ್ರೀತಿ ಹೊಂದಿರುವ ರೇಶ್ಮಾ ‘ಬೆಳ್ಳಿ ಬಟ್ಟಲು, ಪ್ರೀತಿ-ರೀತಿ, ಬಣ್ಣದ ಸೀರೆ, ಹೀಗೊಂದು ಆಶಯ' ಮುಂತಾದ ಕವಿತೆ ಬರೆದಿದ್ದಾರೆ. ತನ್ನ ಗೆಳೆತಿಯನ್ನ ಇನ್ನೂ ಸತಾಯಿಸಬೇಡ ಅಂತ ಗೆಳಯನಿಗೊಂದು ಪತ್ರ ಬರೆದಿದ್ದಾರೆ. ಕೆಲವು ಎರಡಿಂಚು ಪದ್ಯಗಳನ್ನೂ ರಚಿಸಿದ್ದಾರೆ. ಓದ ಬೇಕಿದ್ದವರು ಕಾದಂಬಿನಿಯತ್ತ ಧಾವಿಸಿ.

ಜ್ಞಾನ ತಂತ್ರಜ್ಞಾನಕ್ಕೊಂದು ಕನ್ನಡಿ

ಕನ್ನಡಪ್ರಭ ಪತ್ರಿಕೆಯ ವರದಿಗಾರ ನೇಸರ ಕಾಡನಕುಪ್ಪೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಹೆಚ್ಚಿನ ಆಸ್ಥೆ ಹೊಂದಿರುವ ಪತ್ರಕರ್ತ. ಆಗೊಮ್ಮೆ ಹೀಗೊಮ್ಮೆ ನೆಟ್ಟಿನಲ್ಲಿ ತೂರಿಕೊಂಡು ಹೊಸತೇನಿದೆ ಅಂತ ಹುಡುಕುವ ಕುತೂಹಲಿ. ಹೀಗೆ ಹುಡುಕಿದ ಹೊಸ ಶೋಧಗಳ ಬಗ್ಗೆ ಬರೆಯಲೆಂದೇ ಒಂದು ಬ್ಲಾಗ್ ತೆರೆದಿದ್ದಾರೆ. ಅದುವೇ ‘ತಂತ್ರಜ್ಞಾನಿ'.

ಜ್ಞಾನ ತಂತ್ರಜ್ಞಾನಕ್ಕೊಂದು ಕನ್ನಡಿ ಅಂತ ಗುರುತಿಸಿಕೊಳ್ಳುವ ಈ ಬ್ಲಾಗಿನಲ್ಲಿ ಒಂದಿಷ್ಟು ವಿಚಾರಪೂರ್ಣ ಬರಹಗಳಿವೆ. ಮೊನ್ನೆ ಮೊನ್ನೆ ಚೀನಾದಲ್ಲಿ ಸಂಭವಿಸಿದ ಭಾರಿ ಭೂಕಂಪನ ಕಂಡು ಕೊರಗಿದ ವಿಜ್ಞಾನಿಯೊಬ್ಬರು, ಮುಂದಾಗುವ ಭೂಕಂಪನವನ್ನು ಪತ್ತೆ ಹಚ್ಚುವ ಅದ್ಭುತ ತಂತ್ರಜ್ಞಾನವನ್ನು ಕಂಡುಹಿಡಿದ ಸುದ್ದಿ ಇದೆ. ಸ್ಟೆಮ್ ಸೆಲ್‌ನಿಂದ ಸಾಧ್ಯ ಲಿವರ್ ಪುನರ್ ಸೃಷ್ಟಿ, ನಮ್ಮ ಬ್ರಹ್ಮಾಂಡದ ಜನ್ಮ ರಹಸ್ಯ, ಚಂದ್ರನ ಚೂರು, ಜಗತ್ತಿನ ಹುಟ್ಟಿನ ಬಗ್ಗೆ ಈ ತಂತ್ರಜ್ಞಾನಿಯ ಕಣ್ಣು ಹರಿದಿದೆ. ನೀವೂ ನೋಡಿಬನ್ನಿ.

ಹೀಗೂ ಮಾಡಬಹುದು

ಮೊನ್ನೆ ಮುಂಬೈ ಮೇಲೆ ನಡೆದ ಉಗ್ರರ ದಾಳಿಗೆ ಇಡೀ ದೇಶವೇ ನಲುಗಿದ್ದು ಗೊತ್ತಿದೆ. ಅಂತಹ ಹೊತ್ತಿನಲ್ಲಿ ಮುಂಬೈನಲ್ಲಿದ್ದು ಎಲ್ಲ ತಲ್ಲಣಗಳಿಗೆ ಸಾಕ್ಷಿಯಾಗಿದ್ದ ನೀಲಾಂಜಲ ಬ್ಲಾಗಿಗರ ಮುಂದೊಂದು ಆಯ್ಕೆ ಇಟ್ಟಿದ್ದಾರೆ. ಅದೆಂದರೆ ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿಯನ್ನು ಬದಲಾಯಿಸುವುದು, ಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿ ಪ್ರದರ್ಶಿಸುವುದು. ಈ ಮೂಲಕ ಭಯೋತ್ಪಾದನೆಯನ್ನು ಪ್ರತಿಭಟಿಸುವುದು. ಏನಾದರೂ ಸಹಾಯ ಮಾಡಲಾಗುತ್ತದಾ ಅಂತ ನೋಡುವುದು.

ಈ ಬಗ್ಗೆ ಉಳಿದ ಬ್ಲಾಗಿಗರ ಪ್ರತಿಕ್ರಿಯೆಯೂ ಉತ್ತಮವಾಗಿದೆ. ಒಂದೊಂದೇ ಬ್ಲಾಗುಗಳು ಕಪ್ಪು ಪಟ್ಟಿಯೊಂದಿಗೆ ಕಾಣಿಸಿಕೊಳ್ಳುತ್ತಿವೆ. ಮೌನವಾಗಿಯೇ ಸಣ್ಣಗೊಂದು ಪ್ರತಿಭಟನೆ ಶುರುವಾಗುತ್ತಿದೆ. ಆಸಕ್ತಿ ಇದ್ದರೆ ನೀವು ಕೈಜೋಡಿಸಬಹುದು.

ಬಯಲಿನಿಂದ ಬರೆದ ಕಥೆ

ಆಸ್ಪತ್ರೆಯಲ್ಲಿ ಅಜ್ಜನನ್ನು ನೋಡಿಕೊಳ್ಳಲಿಕ್ಕೆ ಅಂತ ಹೋದ ಲನಾ ಅಲ್ಲೇ ಕೂತು ಒಂದು ಕಥೆ ಬರೆದಿದ್ದಾರೆ. ಆಸ್ಪತ್ರೆಯ ದಾದಿಯರಿಂದ ಇವನೆಂಥ ವಿಚಿತ್ರ ವ್ಯಕ್ತಿಯಪ್ಪ ಅನಿಸಿಕೊಂಡರೂ ಬರೆಯುವುದನ್ನ ಬಿಡದೇ ಕಥೆ ಹೆಣೆದಿದ್ದಾರೆ. ಆರಂಭದಲ್ಲಿ ಕಾಲೇಜಿನ ದಿನಗಳಲ್ಲಿ ಶುರುವಾಗುವ ಈ ಲವ್ ಸ್ಟೋರಿ ಒಂದಿಷ್ಟು ಕಾಡು ಸುತ್ತಿ ಕಡೆಗೆ ದುಃಖ್ಯಾಂತ್ಯದಲ್ಲಿ ಅಂತ್ಯಕಂಡಿದೆ.

ಇಲ್ಲಿ ಕಥೆಯ ಜೊತೆಗೆ ‘ಪ್ರಶ್ನೆ', ‘ಆಹ್ವಾನ' ‘ನಿನ್ನ ನೆನಪಿನ ಹುಣ್ಣಿಮೆ', ‘ಬಯಲಾಟ', ‘ಲಭ ಪರಲೋಕ ಯಾತ್ರೆ' ‘ನೀರವತೆ', ಮತ್ತು ಕಾಲೇಜ್ ಕಾರಿಡಾರಿನಿಂದ ಬರೆದ ಕವಿತೆಗಳಿವೆ. ವಸಂತ ವೇದಪಾಠ ಶಿಬಿರದ ನೆನಪುಗಳಿವೆ. ಓದಬೇಕಾಗಿದ್ದವರು ಬಯಲಿನಲ್ಲಿರೋ ಈ ಬ್ಲಾಗಿಗೇ ಹೋಗಬೇಕು.

ಮುಂಬೈ ಸ್ಫೋಟ: ಬ್ಲಾಗಿಗರ ಸ್ಪಂದನ

ಮೂರು ದಿನಗಳ ನಿರಂತರ ಕಾರ್ಯಾಚರಣೆ ನಂತರ ಮುಂಬೈ ರಕ್ತಪಾತ ಕೊನೆಗೂ ಅಂತ್ಯಕಂಡಿದೆ. ಭಯೋತ್ಪಾದಕರ ಎಗ್ಗಿಲ್ಲದ ದಾಳಿಗೆ ನೂರಾರು ಜನ ಹತರಾಗಿದ್ದಾರೆ. ದಾಳಿ ನಡೆಸಿದ ಉಗ್ರರೂ ಸತ್ತು ಮಲಗಿದ್ದಾರೆ. ಪ್ರತಿದಾಳಿ ಕೈಗೊಂಡ ಸೈನಿಕರ ಪೈಕಿ ಹತ್ತಾರು ಜನ ವೀರಮರಣ ಕಂಡಿದ್ದಾರೆ. ಮುನ್ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಒಟ್ಟಾರೆ ಮುಂಬೈ ದಾಳಿಯಿಂದ ಜನರ ಮನದಲ್ಲಿ ಮಡುಗಟ್ಟಿದ ದುಃಖ ಹೇಳತೀರದ್ದು. ಕನ್ನಡದ ಬ್ಲಾಗಿಗರು ಈ ಕುರಿತು ನೋವು ತೋಡಿಕೊಳ್ಳುತ್ತಿದ್ದಾರೆ. ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನೊಂದವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದಾರೆ.

ಚಂಡೆಮದ್ದಳೆಯ ನಾವಡರು ಬುಧವಾರದ ಕ್ರೌರ್ಯದ ಕುರಿತು ಒಂದೆರಡು ಸಾಲು ಬರೆದಿದ್ದಾರೆ. ಸುಶ್ರುತ ನ್ಯೂಸ್ ಚಾನಲ್ಲುಗಳ ಅತಿ ವರದಿಗಾರಿಕೆ ಬಗ್ಗೆ ಮಾತನಾಡಿದ್ದಾರೆ. ಧೃತಿಗೆಟ್ಟ ಪದಗಳ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ ಟೀನಾ ಜೊತೆಗೊಂದು ಕವಿತೆಯನ್ನೂ ಅನುವಾದಿಸಿ ಹಾಕಿದ್ದಾರೆ. ಚೇತನಾರ ಬ್ಲಾಗಿನಲ್ಲಿ ಆರ್ಗೂಮೆಂಟ್ ಮುಂದುವರಿದಿದೆ. ಅಮೆರಿಕಾದಿಂದ ಪಾಠ ಕಲಿಯಲು ಇದು ಸಕಾಲವೆಂದು ‘ನೆಲದ ಮಾತು' ಬ್ಲಾಗಿನ ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ. ‘ಕಳ್ಳಕುಳ್ಳ' ಬ್ಲಾಗಿನ ವಿಕಾಸ್ ನೇಗಿಲೋಣಿ ತೊಳೆಯಲಿ ರಕ್ತ, ತೊಡೆಯಲಿ ಕಣ್ಣೀರು ಅಂದಿದ್ದಾರೆ. ‘ಅಕ್ಷರ ವಿಹಾರ'ದ ವಿನಾಯಕ ತಮ್ಮದೇ ಮಾತುಗಳಲ್ಲಿ ದಾಳಿಯನ್ನ ಖಂಡಿಸಿದ್ದಾರೆ. ‘ವಿರಾಟ್' ಬ್ಲಾಗಿನ ವಿನಯ್ ಜೋಶಿ ಇನ್ನೊಬ್ಬ ಸರ್ದಾರ್ ಪಟೇಲ್ ಹುಟ್ಟಿಬರಲಿ ಅಂತ ಬೇಡುತ್ತಿದ್ದಾರೆ. ‘ಚಂಪಕಾವತಿ' ಯ ಸುಧನ್ವಾ ರಾಜಕಾರಣಿಗಳಿಗೊಂದು ಛೀಮಾರಿ ಹಾಕಿದ್ದಾರೆ. ಸತ್ತವರ ಮುಂದೆ ಮೈಕ್ ಹಿಡಿಯುವ ಮಾದ್ಯಮಗಳ ನ್ಯೂಸ್ ಸೆನ್ಸ್ ಕುರಿತು ‘ಶರಧಿ'ಯ ಚಿತ್ರಾ ಕರ್ಕೆರಾ ಕಿಡಿ ಕಾರಿದ್ದಾರೆ. ‘ಕುಮ್ರಿ' ಬ್ಲಾಗಿನ ಶಶಿಧರ ಭಟ್ ಇದು ಮೌನದ ಸಮಯ ಎಂದಿದ್ದಾರೆ. ‘ಅಂದದೂರು ಬೆಂಗಳೂರು'ನವರು ಹುತಾತ್ಮ ಸಂದೀಪ್ ರಿಗೆ ನಮನ ಸಲ್ಲಿಸಿದ್ದಾರೆ.

[ಹಳೆಯ ದಿನದ ಬ್ಲಾಗ್ ಗಳು]

ಪುಟದ ಮೊದಲಿಗೆ
 
Votes:  9     Rating: 4.11    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?