ಇಲ್ಲಿ ಬಾಷಾ ಎಂಬ ಹೆಸರಿನವನೊಬ್ಬ ನನಗೆ ಪರಿಚಯವಾಗುತ್ತಿದ್ದಾನೆ. ಅವನ ಕೆಲಸ ಹಗಲೆಲ್ಲ ಆಡು ಮೇಯಿಸಿಕೊಂಡು ಅಲೆಯುವುದು. ಅವನನ್ನು ಎಲ್ಲರೂ ಆಡುಬಾಷಾ ಎಂದು ಕರೆಯುತ್ತಾರೆ. ಸುಮಾರು ಮೂವತ್ತು ಆಡುಗಳು- ಕೆಲವು ಗಂಡು ,ಕೆಲವು ಹೆಣ್ಣು, ಹಾಗೂ ಹಲವು ಮರಿ ಆಡುಗಳು ಅವನ ಹಿಂದೆ ಮುಂದೆ ಕಿವಿನಿಮಿರಿಸಿಕೊಂಡು, ನೆಗೆದುಕೊಂಡು ಮೇಯುತ್ತಾ ಓಡಾಡಿಕೊಂಡಿರುತ್ತವೆ. ಅವನು ಅಷ್ಟೂ ಆಡುಗಳಿಗೆ ಒಂದೊಂದು ಹೆಸರಿಟ್ಟಿದ್ದಾನೆ. ಫಾತಿಮಾ, ಜುಃಲೈಖಾ, ಮೂಸಾ, ಇಬ್ರಾಹೀಂ ಅಂತೆಲ್ಲಾ. ಅವುಗಳ ಹೆಸರು ಹಿಡಿದು ಬೈದು, ತಹಬಂದಿಗೆ ತಂದು, ರಮಿಸಿ, ಕೆಣಕಿ ಸಂಜೆಯ ಹೊತ್ತಿಗೆ ಮನೆ ಸೇರುತ್ತಾನೆ. ಐದು ವರ್ಷಗಳ ಹಿಂದೆ ಕೇವಲ ಎರಡೇ ಇದ್ದ ಅವನ ಆಡುಗಳ ಸಾಮ್ರಾಜ್ಯ ಈಗ ಇಷ್ಟಾಗಿದೆ.
'ಆಡಿನ ಹಾಲನ್ನು ಮಾರಿ ಬದುಕುತ್ತಿದ್ದೀಯಾ' ಎಂದು ಕೇಳಿದರೆ 'ಆಡಿಗೆ ಹಾಲಿರುವುದು ಮರಿಗಳಿಗೆ ಕುಡಿಯಲು, ಮನುಷ್ಯರಿಗಲ್ಲ'ಎನ್ನುತ್ತಾನೆ. 'ಹಾಗಾದರೆ ಹೇಗೆ ಬದುಕುತ್ತಿದ್ದೀಯಾ' ಎಂದು ಕೇಳಿದರೆ 'ತಿನ್ನಲು ಮಾಂಸ ಬೇಕಾದವರು ಕೊಂಡುಕೊಂಡು ಹೋಗುತ್ತಾರೆ, ತಿಂಗಳಿಗೆ ಒಂದೆರಡು ಮಾರಿದರೆ ನನಗೆ ಬೇಕಾದಷ್ಟು ಸಾಕಾಗುತ್ತದೆ' ಎಂದು ಹೇಳುತ್ತಾನೆ. ಆಡಿನ ಮಾಂಸವನ್ನು ನಾನೂ ತಿನ್ನುವುದರಿಂದ ಇವನ ಜೊತೆ ಆಡುಗಳ ಬದುಕುವ ಹಕ್ಕಿನ ಕುರಿತು ಹೇಗೆ ಜಗಳವಾಡುವುದು ಎಂದು ಸುಮ್ಮನಾಗುತ್ತೇನೆ. ಕಾಯುವವನೂ ಕೊಲ್ಲುವವನೂ ಆದ ಈ ಆಡುಮೇಯಿಸುವವನ ಜೊತೆ ಒಂದು ಹಗಲು ನಾನೂ ನಿನ್ನೊಡನೆ ಬರುತ್ತೇನೆ ಅಂದಿದ್ದೇನೆ. ಅವನೂ ಆಯಿತು ಅಂದಿದ್ದಾನೆ. ಆದರೆ ಈವತ್ತು ಅವನ ಜೊತೆ ಅಡವಿಗೆ ತೆರಳುವಾ ಎಂದುಕೊಂಡರೆ ಅವನೂ ಕಾಣಿಸುತ್ತಿಲ್ಲ, ಆಡುಗಳೂ ಕಾಣುತ್ತಿಲ್ಲ.
'ಅಯ್ಯೋ ಹೀಗಾಯಿತು' ಎಂದು ಯಾರದೋ ಜೊತೆ ಗೋಳು ಹೇಳಿಕೊಂಡರೆ 'ಬಹುಶಃ ಬರಾಕ್ ಒಬಾಮಾನ ಪಟ್ಟಾಭಿಷೇಕಕ್ಕೆ ಹೋಗಿರಬೇಕು. ತಿರುಗಿ ತಲುಪುವರೆಗೆ ಕಾದುಕುಳಿತುಕೋ ತಮ್ಮಾ' ಎಂದು ಸಾಂತ್ವನ ಹೇಳುತ್ತಿದ್ದಾರೆ. ಎಲ್ಲೋ ಗಿಡಪೊದೆಗಳ ಒಳಹೊಕ್ಕಿರುವ ಆತನಿಗೆ ನಾನೂ ಕಾಯುತ್ತಿದ್ದೇನೆ. ಈ ಬಾಷಾ ಅಡವಿಯೊಳಕ್ಕೆ ಹೊಕ್ಕರೆ ತತ್ವಜ್ಞಾನಿಯಂತೆ ಕುಕ್ಕುರುಗಾಲಲ್ಲಿ ಬೀಡಿ ಸೇದುತ್ತಾ ಕುಳಿತಿರುತ್ತಾನೆ. ಈತ ಐದು ವರ್ಷಗಳ ಹಿಂದೆ ಅರಬ್ ದೇಶವೊಂದರಲ್ಲಿ ಕೆಲಸ ಮಾಡುತ್ತಿದ್ದ. 'ಅಯ್ಯೋ ಅದಕ್ಕಿಂತ ಇದೇ ಒಳ್ಳೆಯದು' ಎಂದು ತಿರುಗಿ ಬಂದಿದ್ದಾನೆ. ನನಗೂ ಒಮ್ಮೊಮ್ಮೆ ನಾನೂ ಹೀಗೇ ಇದ್ದಿದ್ದರೆ ಒಳ್ಳೆಯದಿತ್ತು ಅನಿಸುತ್ತದೆ.
ನಿನ್ನೆ ಬರಾಕ್ ಒಬಾಮಾನ ಮಾತುಗಳನ್ನು ಕೇಳಿ ಕೊಂಚಹೊತ್ತು ಪುಳಕಗೊಂಡೆ. ಎಲ್ಲೋ ಕನಸಿನಲ್ಲಿ ಕಾಣುವ ರಮ್ಯ ಕಥೆಯೊಂದರ ತುಣುಕುಗಳಂತೆ ಅವುಗಳು ಗೋಚರಿಸುತ್ತಿದ್ದವು. ನನ್ನ ಹಾಗೆಯೇ ಪುಳಕಗೊಂಡ ಲೇಖಕಿಯೊಬ್ಬರು 'ಎಷ್ಟು ಚಂದ ಅಲ್ಲವಾ' ಎಂದು ರೋಮಾಂಚನಗೊಳ್ಳುತ್ತಿದ್ದರು. 'ಅದನ್ನೇ ಬರೆಯಿರಿ, ಒಬಾಮಾ ಮತ್ತು ಚೆಲುವೆಯೊಬ್ಬಳ ಪುಳಕಗಳು ಎಂಬ ತಲೆಬರಹ ಕೊಡುವಾ' ಎಂದು ಅವರನ್ನೂ ಗೋಳು ಹೊಯ್ದುಕೊಂಡೆ. 'ಬಿಡಿ ನಿಮಗೆ ಜಾಗತಿಕ ರಾಜಕಾರಣ ಇತ್ಯಾದಿ ಅರ್ಥವಾಗಲಾರದು. ಏನಿದ್ದರೂ ನೀವು ಆಡುಮೇಯಿಸುವವನ ಜೊತೆ ಅಲೆಯಲಿಕ್ಕೆ ಲಾಯಕ್ಕು' ಎಂದು ಅವರೂ ಕೊಂಚ ಕೆಣಕಿದರು. ಆಮೇಲೆ ಜೋರಾಗಿ ಕುಲುಕುಲು ನಕ್ಕರು. ಏನಕ್ಕೆ ಎಂದು ಹೇಳಲಿಲ್ಲ. 'ಜಾಗತಿಕ ರಾಜಕಾರಣವೂ ಕುಲುಕುಲು ನಗೆಯೂ ಎಂಬ ಇನ್ನೊಂದು ಕವಿತೆಯನ್ನು ನಾನೇ ಬೇಕಾದರೆ ಬರೆಯುತ್ತೇನೆ. ನೀವು ಬೆಳಗ್ಗೆ ಎದ್ದಾಗ ಕವಿತೆ ರೆಡಿಯಾಗಿರುತ್ತದೆ.ಹಾಗೆ ನೋಡಿದರೆ ಒಂದು ಕಾಲದಲ್ಲಿ ಒಬಾಮಾನಾ ಪೂರ್ವಜರೂ ಆಡು ಮೇಯಿಸುತ್ತಿದ್ದವರೇ ಅಲ್ಲವೇ' ಎಂದು ಅವರನ್ನು ನಂಬಿಸಿ ನಾನು ನಿದ್ದೆ ಹೋದೆ. ಅಮೇಲೆ ಕನಸಿನಲ್ಲಿ ಆಡುಗಳೂ, ಕವಿತೆಗಳೂ, ಕುಲುಕುಲು ನಗುವಿನ ಚೆಲುವೆಯರೂ ಬಹಳ ಹೊತ್ತು ಓಡಾಡಿಕೊಂಡು ನೆಗೆದಾಡಿಕೊಂಡು ಮನರಂಜಿಸಿದವು.

ಯಾಕೆಂದು ಗೊತ್ತಿಲ್ಲ. ಗಹನ ವಿಷಯಗಳೂ ನನಗೆ ಹುಡುಗಾಟದಂತೆ ಕಾಣಿಸುತ್ತವೆ. ನಾನು ಗಹನ ವಿಷಯಗಳನ್ನು ಹೇಳಿದರೆ ಕೇಳುವವರಿಗೆ ಅದು ತಮಾಷೆಯಂತೆ ಕಾಣುತ್ತದೆ. ಹತ್ತಿರದ ಬಹಳ ಸ್ನೇಹಿತರು ದೂರವಾಗಿದ್ದಾರೆ. ಗೊತ್ತೇ ಇರದವರು ಹತ್ತಿರವಾಗುತ್ತಾರೆ. ಇಲ್ಲೊಬ್ಬರು ವೃದ್ದೆಯಿದ್ದಾರೆ. ಅವರ ಪೂರ್ವಜರು ಅರೇಬಿಯಾದಿಂದ ಬಂದ ಸಂತರೊಬ್ಬರ ಸಂತತಿಯವರಂತೆ. ಈ ವೃದ್ದೆಯ ಪತಿದೇವರು ಆಕೆಯ ಎದುರಲ್ಲೇ ತರಗೆಲೆಯಂತೆ ಅಲ್ಲಾಡಿಕೊಂಡು ಹೋಗುತ್ತಾನೆ. ಎದುರಿಗೆ ಸಿಕ್ಕಾಗ ಆಸೆಯಿಂದ ಕಣ್ಣರಳಿಸಿ ನೋಡುತ್ತಾನೆ. ಆದರೆ ಈ ಮುದುಕಿ ಆತನನ್ನು ಕಂಡಾಗ ನೆಲಕ್ಕೆ ಉಗಿದು ಮುಂದೆ ಹೋಗುತ್ತಾಳೆ. ಆಮೇಲೆ, 'ನೋಡಿ ನನ್ನ ಜೊತೆಗಿರುವಾಗ ರಾಜಕುಮಾರನ ಹಾಗಿದ್ದ. ಈಗ ಬಿಟ್ಟುಹೋದ ಮೇಲೆ ಲಡಾಸಾಗಿದ್ದಾನೆ. ಅನುಭವಿಸಲಿ ಮುದುಕ' ಎಂದು ಕಣ್ಣು ತುಂಬಿಕೊಳ್ಳುತ್ತಾಳೆ. ಯೌವನದ ಕಾಲದಲ್ಲಿ ಹೆಂಡತಿಯರನ್ನು ಕಡೆಗಣಿಸುವ ಗಂಡಸರಿಗೆ ಇದೇ ಶಿಕ್ಷೆ ಎಲ್ಲೆಡೆಯೂ ಕಾದಿದೆ ಎಂದು ಎಚ್ಚರಿಸುತ್ತಾಳೆ. ಈಕೆ ಸ್ತ್ರೀಶಕ್ತಿ ಗುಂಪೊಂದನ್ನು ಸೇರಿಕೊಂಡು ಖುಷಿಯಾಗಿ ಓಡಾಡಿಕೊಂಡಿದ್ದಾಳೆ. ನಡುನಡುವಲ್ಲಿ ಈಕೆಗೂ ವಯೋಸಹಜ ಕಾಯಿಲೆ ಕಸಾಲೆಗಳು ಬರುತ್ತವೆ. ಆದರೂ ತನಗೆ ಏನೂ ಆಗಿಲ್ಲವೆಂದು ತೋರಿಸಿಕೊಳ್ಳಲು ಹೆಚ್ಚಾಗಿಯೇ ಕೆಲಸ ಮಾಡುತ್ತಾಳೆ. ನಾನು ಆಕೆಗೆ ಬೈದು, ಹಠವೆಂಬುದು ಗಂಡಸರಿಗೂ ಹೆಂಗಸರಿಗೂ ಸಮಾನವಾಗಿ ಕೆಟ್ಟದು. ಹೋಗಿ ರಕ್ತದೊತ್ತಡ ಪರೀಕ್ಷಿಸಿಕೊಂಡು ಬಾ ತಾಯೇ'ಎಂದು ಕಳಿಸಿದ್ದೇನೆ. 'ನೀನು ಈವತ್ತು ನನ್ನ ಬಳಿ ಬರದಿದ್ದರೆ ಇನ್ನು ಮೂರು ದಿನದೊಳಗೆ ಸತ್ತೇ ಹೋಗುತ್ತಿದ್ದೆ ಮುದುಕೀ' ಎಂದು ಆ ವೈದ್ಯನೂ ಆಕೆಯನ್ನು ಹೆದರಿಸಿ ಕಳಿಸಿದ್ದಾನೆ. ಮೊನ್ನೆ ಈ ತಾಯಿ ನನಗೆ ಸಲಾಡ್ ಮಾಡಿಕೊಟ್ಟಿದ್ದಳು. ಕೊಂಚ ಹುಳಿಯಿರಲಿ ಎಂದು ನಾನು ವಿನೆಗರ್ ಹಾಕಲು ಹೇಳಿದ್ದೆ. ಆಕೆ ತನ್ನೊಡನೆ ತಂದಿದ್ದ ವಿನೆಗರ್ ಬಾಟಲಿಯಿಂದ ಎಷ್ಟು ಸುರಿದರೂ ಅದರ ಸಿಹಿ ಹೆಚ್ಚಾಗುತ್ತಿತ್ತು. ಚಕಿತಳಾದ ಆಕೆ ಕೊನೆಗೆ ಯಾ ಪಡೆದವನೇ ಎಂದು ಹಣೆಹಣೆ ಚಚ್ಚಿಕೊಂಡಳು. ನೋಡಿದರೆ ಆಕೆ ವಿನೆಗರ್ ಬಾಟಲಿಯ ಬದಲು ಯಾರೋ ಮಕ್ಕಾದಿಂದ ತಂದು ಕೊಟ್ಟಿದ್ದ ಪವಿತ್ರ ನೀರಿನ ಬಾಟಲಿಯಿಂದ ನನ್ನ ಬಟ್ಟಲಿಗೆ ಸುರಿಯುತ್ತಿದ್ದಳು. ತೀರಿಹೋಗುವ ಮೊದಲು ಬಾಯಿಗೆ ಸುರಿದುಕೊಳ್ಳಲು ಇಟ್ಟಿದ್ದ ಅದನ್ನೇ ವಿನೆಗರ್ ಎಂದು ಸುರಿಯುತ್ತಿದ್ದಳು. ತನ್ನ ಅವಾಂತರದ ಅರಿವಾಗಿ ಪೆಚ್ಚುಪೆಚ್ಚಾಗಿ ನಗುತ್ತಿದ್ದಳು. ವಯಸುಗಾಲದ ಇಂತಹ ದಿವ್ಯ ಅವಾಂತರಗಳನ್ನು ನೆನೆದುಕೊಂಡು ನಾನೂ ನಗುತ್ತಿದ್ದೆ. ಇವತ್ತು ಮುಂಜಾನೆಯೂ ಈ ವೃದ್ದೆಯ ಪತಿದೇವರು ಒಂದು ಹರಿದ ಚೀಲದಲ್ಲಿ ಅಳಿದುಳಿದ ತರಕಾರಿಗಳನ್ನು ಪೇರಿಸಿಕೊಂಡು ನಡೆದು ಹೋಗುತ್ತಿದ್ದ. 'ಅಜ್ಜೀ ಅಲ್ಲಿ ನೋಡು ನಿನ್ನ ಪತಿದೇವರು ನಡೆದುಕೊಂಡು ಹೋಗುತ್ತಿದ್ದಾರೆ' ಎಂದು ಹೇಳಿದೆ. 'ಹಾಳಾಗಿ ಹೋಗಲಿ, ಮುದುಕ ಯಾರಿಗೋ ತರಕಾರಿ ಕೊಟ್ಟು ಊಟ ಗಿಟ್ಟಿಸಿಕೊಳ್ಳುತ್ತಿದ್ದಾನೆ' ಎಂದು ಇನ್ನೊಮ್ಮೆ ಶಪಿಸಿದಳು. ನಾನಾದರೂ ಯಾಕೆ ಇವರಿಬ್ಬರನ್ನು ಒಂದುಮಾಡಲಿ ಎಂದು ಸುಮ್ಮನಿದ್ದೇನೆ.
ಮೊನ್ನೆ ಈ ಮುದುಕಿ ನನಗೆ ಅಡಿಗೆ ಮಾಡಿಕೊಟ್ಟು ಹೋಗುವ ಮೊದಲು ಅಡಿಗೆ ಮನೆಯ ಗೋಡೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿತ್ತು. 'ಏಕೆ' ಎಂದು ಕೇಳಿದೆ 'ನಾನು ಯಾವಾಗಲೂ ಹೀಗೆಯೇ, ನಿದ್ರಿಸುವ ಮೊದಲು ಎಲ್ಲ ಪಾತ್ರೆಗಳನ್ನು ಮುಚ್ಚಿ ಗೋಡೆಯನ್ನೆಲ್ಲಾ ನೋಡಿ ಹೋಗುತ್ತೇನೆ' ಅಂದಳು. 'ಯಾಕೆ' ಅಂದೆ. 'ಹಲ್ಲಿಗಳಿರಬಾರದಲ್ಲವಾ, ಅದು ಬೀಳಬಾರದಲ್ಲವ' ಅಂದಳು. ಅಜ್ಜಿಯ ಜಾಗರೂಕತೆಗೆ ಅವಕ್ಕಾಗಿ ನಕ್ಕೆ. ಹಲ್ಲಿಗಳಿಂದಲೂ, ಹೆಂಗಸರಿಂದಲೂ ತನ್ನ ಪತಿದೇವರನ್ನು ರಕ್ಷಿಸಲು ಹೋಗಿ ಏಟು ತಿಂದು ಬಡವಾಗಿ ಹೋದ ಈಕೆಯ ಯೌವನದ ದಿನಗಳು ಹೇಗಿದ್ದಿರಬಹುದು ಎಂದು ಕಲ್ಪಿಸಿಕೊಂಡೆ. ಮನೆ ತುಂಬ ಹೆಣ್ಣು ಮಕ್ಕಳಿದ್ದ ಈಕೆಯನ್ನು ಆ ಪತಿರಾಯ ನಡುಮಧ್ಯದಲ್ಲಿ ತ್ಯಜಿಸಿ ಹೋಗಿದ್ದ. ನಡುರಾತ್ರಿ ಮನೆಗೆ ಬರುವ ಗಂಡಸರಿಗೆ ಕತ್ತಿ ತೋರಿಸಿ ಕಾದಾಡಿ ಈಕೆ ಉಳಿದಿದ್ದಳು. ಈಗಲೂ ಹೀಗೆಯೇ ಇರುವಳು.
ಕಳೆದ ಭಾನುವಾರ ಈಕೆ ಇಪ್ಪತ್ತು ನಿಂಬೆಹಣ್ಣುಗಳನ್ನು ಹಿಡಿದುಕೊಂಡು ಕೇರಳದ ಮಂತ್ರವಾದಿಯೊಬ್ಬನ ಬಳಿ ಹೋಗಿದ್ದಳು. ತನ್ನ ಹೆಣ್ಣು ಮಕ್ಕಳೇ ತನಗೆ ಮಾಟ ಮಾಡಿದ್ದಾರೆ. ಅದನ್ನು ತೆಗೆಸಲು ಹೋಗುತ್ತಿರುವೆ ಎಂದು ಹೋಗಿ ಬಂದಳು. ಹೋಗಿ ಬಂದ ಮೇಲೆ ಇನ್ನೂ ಹೈರಾಣಾಗಿದ್ದಳು. ಆದರೂ ಏನೂ ಆಗಿಲ್ಲವೆಂಬಂತೆ ನನಗೆ ಬಡಿಸುತ್ತಿದ್ದಳು. ' ಆ ನಿಂಬೆ ಹಣ್ಣುಗಳನ್ನು ನನಗಾದರೂ ಶರಬತ್ ಮಾಡಿಕೊಟ್ಟಿದ್ದರೆ' ಎಂದು ಹೇಳಿದರೆ ಸಿಟ್ಟಾದಳು. ಅವಳು ಮುಂದಿನ ಬಾರಿ ಮಂತ್ರವಾದಿಯ ಬಳಿ ಹೋಗುವಾಗ ನಾನೂ ಹೋಗಬೇಕೆಂದಿರುವೆ. ಯಾವ ಗಹನ ವಿಷಯಗಳೂ ಗಹನವಾಗಿ ಕಾಣಿಸದ ನನ್ನ ಈ ವ್ಯಾಧಿಗೆ ಏನು ಮಾಡುತ್ತೀಯಾ ಎಂದು ಕೇಳಬೇಕೆಂದಿರುವೆ.
ಈಗ ಒಬಾಮಾನ ಅಭಿಮಾನಿಗಳಾದ ನನ್ನ ಎಲ್ಲ ಸ್ನೇಹಿತರಿಗೂ ಅಭಿನಂದನೆಗಳನ್ನು ಕಳಿಸುತ್ತಿರುವೆ.