ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದುರ್ಗದ ಧೂಳಿನಲ್ಲಿ ಕಂಡ ಪ್ರಶ್ನೆಗಳು, ಚಿತ್ರಗಳು    
ಎಸ್. ಸಿರಾಜ್ ಅಹಮದ್
ಬುಧವಾರ, 25 ಫೆಬ್ರವರಿ 2009 (02:55 IST)
ಸಾಹಿತ್ಯ ಜಾತ್ರೆಗೆ ವಡೆ ರೆಡಿ

ದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಎದ್ದ ಧೂಳು ಕರ್ನಾಟಕದ ಹಲವು ಕಡೆ ನಡೆಯುತ್ತಿರುವ ಔಪಚಾರಿಕ ಮತ್ತು ಅನೌಪಚಾರಿಕ ಸಾಹಿತ್ಯ ಚರ್ಚೆಗಳ ಮೇಲೆಲ್ಲ ಅಡರಿಕೊಂಡು ಅದನ್ನು ಸುಮ್ಮನೆ ಕೊಡವಿಕೊಂಡು ಹೋಗುವಂತಿಲ್ಲ ಎನ್ನುವಂತಾಗಿದೆ. ಶಿವಮೊಗ್ಗದಲ್ಲಿ ಫೆಬ್ರವರಿ ೧೪ ಮತ್ತು ೧೫ರಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎಲ್. ಬಸವರಾಜು ಅವರ ವಿಚಾರವನ್ನು ಪ್ರಸ್ತಾಪಿಸಿದ ಮಂತ್ರಿಯೊಬ್ಬರು ಏನೋ ಕೆಲವರಿಗೆ ಹಿರಿಯರು ಎಂಬ ಕಾರಣಕ್ಕೆ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರೆ ಅದನ್ನೇ ನೆಪ ಮಾಡಿಕೊಂಡು ಅವರು ಸಮಾಜದಲ್ಲಿ ದ್ವೇಷ ಅಸೂಯೆಗೆ ಕಾರಣರಾಗುವಂತೆ ಮಾತಾಡಿದರೆ, ಅಂಥವರಿಗೆ ಜನ ದಂಗೆಯೆದ್ದು ಬುದ್ಧಿ ಕಲಿಸಬಹುದೆಂಬ ಎಚ್ಚರಿಕೆಯನ್ನು ಸಹ ಮುಂದಿನ ಸಮ್ಮೇಳನಾಧ್ಯಕ್ಷರಿಗೆ ನೀಡಿಬಿಟ್ಟರು. ಬಹಳ ವಿಚಿತ್ರವೆಂದರೆ ಅದನ್ನು ಪತ್ರಿಕೆಯೊಂದು ವರದಿ ಮಾಡಿದ ರೀತಿ: ಶಿವಮೊಗ್ಗ ಸಮ್ಮೇಳನದ ಅಧ್ಯಕ್ಷರು ಕನ್ನಡದ ಬಗ್ಗೆ , ಇಲ್ಲಿನ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಪರಿಸರ ನಾಶದ ಬಗ್ಗೆ ಆಡಿದ ಮಾತುಗಳನ್ನು ಜಿಲ್ಲಾ ವರದಿಗೆ ಸೀಮಿತಗೊಳಿಸಿ ಮಂತ್ರಿಗಳು ಎಲ್.ಬಸವರಾಜು ಅವರಿಗೆ ನೀಡಿದ ಎಚ್ಚರಿಕೆಯನ್ನು ರಾಜ್ಯಮಟ್ಟದ ಸುದ್ದಿಯಾಗಿಸಿ ವಿವಾದಕ್ಕೆ ಇನ್ನಷ್ಟು ಪುಳ್ಳೆಗಳನ್ನು ಪೇರಿಸಲು ನೋಡಿತು.

ಎಲ್.ಬಸವರಾಜು ಅವರು ಎತ್ತಿದ ಪ್ರಶ್ನೆಗಳಿಗೆ ಶಿವಮೊಗ್ಗದ ಸಮ್ಮೇಳನದಲ್ಲಿ ಮತ್ತಷ್ಟು ಚಾಲನೆ ನೀಡಿದವರು ಕನ್ನಡದ ಇಬ್ಬರು ಬಹು ಮುಖ್ಯ ಬರಹಗಾರರಾದ ರಹಮತ್ ತರೀಕೆರೆ ಮತ್ತು ಕುಂ.ವೀ.ಯವರು. ಬಸವರಾಜು ಅವರು ಮಠ ಮಾನ್ಯಗಳ ಕುರಿತು ಎತ್ತಿರುವ ಪ್ರಶ್ನೆಗಳ ಬಗ್ಗೆ ಎಲ್ಲ ಸಾರ್ವಜನಿಕ ವಿಷಯಗಳು ಚರ್ಚೆಯಾಗುವಂತೆ ಬಹಿರಂಗ ಚರ್ಚೆಯಾಗಬೇಕೇ ವಿನಾ ಭಿನ್ನಮತವೇ ಇಲ್ಲದ ನಿರ್ವಾತವನ್ನು ಸೃಷ್ಟಿಸುವುದು ಅಪಾಯಕಾರಿ ಎಂದರು. ಕುಂ.ವೀ.ಯವರಂತೂ ತಮ್ಮ ರಾಯಲಸೀಮಾ ಸ್ಟೈಲಿನಲ್ಲಿ ಜೀವನದಲ್ಲಿ ಎಂದೂ ಸಹ ಎರಡು ಪುಸ್ತಕ ಖರೀದಿಸದ, ಒಂದು ಸಾಹಿತ್ಯ ಗೋಷ್ಟಿಯಲ್ಲಿ ಕೂತು ಬರಹಗಾರನ ಎರಡು ಮಾತುಗಳನ್ನು ಯಾವತ್ತೂ ಕೇಳಿಸಿಕೊಳ್ಳದ ರಾಜಕಾರಣಿಗಳನ್ನು ಜಾಡಿಸಿಬಿಟ್ಟರು. ವಾಸ್ತವವಾಗಿ ಯಾರು ಯಾರ ಜೊತೆ ನಿಂತು ಎಲ್ಲಿ ಏನು ಮಾತಾಡಬೇಕು, ಯಾರನ್ನು ಪ್ರೇಮಿಸಬೇಕು, ಏನು ತಿನ್ನಬೇಕು ಏನು ಕುಡಿಯಬೇಕು ಎಂಬುದನ್ನೆಲ್ಲ ಬೀದಿರಂಪ ಮಾಡಿ ಜನರ ವೈಯುಕ್ತಿಕ ವಿಷಯಗಳನ್ನೆಲ್ಲ ತಾನೇ ನಿರ್ಧರಿಸಲು ಹೊರಟಿರುವ ತಮ್ಮ ಸರ್ಕಾರದ ವಿರುದ್ಧವೇ ಜನ ತಿರುಗಿಬೀಳುವ ದಿನ ದೂರವಿಲ್ಲ ಎಂದು ಅರಿಯದೆ ಮಂತ್ರಿಗಳು ಆಡಿದ ಮಾತಿಗೆ ಕನ್ನಡದ ಇಬ್ಬರು ಬರಹಗಾರರು ಮಾಡಿದ ಪ್ರತಿಕ್ರಿಯೆಯು ಸಮ್ಮೇಳನದ ಖದರನ್ನು ಹೆಚ್ಚಿಸಿತು.

ದುರ್ಗದ ಸಮ್ಮೇಳನದಲ್ಲಿ ಎಲ್. ಬಿ. ಅವರು ಎತ್ತಿದ ಪ್ರಶ್ನೆಗಳನ್ನು ಸರ್ಕಾರದ ಹಲವು ಮಂತ್ರಿಗಳು ಹಲವು ಸಂದರ್ಭಗಳಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿ (ಸ್ವತಃ ಮುಖ್ಯಮಂತ್ರಿಗಳೇ ದುರ್ಗದಲ್ಲಿ ಆನಂತರ ನಡೆದ ಹಲವು ಸಭೆಗಳಲ್ಲಿ ಪ್ರಸ್ತಾಪಿಸಿ ಎಲ್.ಬಿ.ಯವರನ್ನು ಅಲ್ಲಗಳೆದಿದ್ದರು) ಸರ್ಕಾರವೇ ಅದಕ್ಕೆ ಸಮಜಾಯಿಷಿ ನೀಡುತ್ತಿರುವುದನ್ನು ನೋಡಿದರೆ ಬಸವರಾಜು ಅವರು ಎತ್ತಿದ ಪ್ರಶ್ನೆಗಳಿಗೆ ಇರುವ ಮಹತ್ವ ಗೊತ್ತಾಗುತ್ತದೆ. ತಮ್ಮ ಶೈಕ್ಷಣಿಕ/ಧಾರ್ಮಿಕ ಚಟುವಟಿಕೆಗಳಿಗಿಂತ ಹೆಚ್ಚಾಗಿ, ನೇರವಾಗಿ ಶಕ್ತಿ ರಾಜಕಾರಣದ ಅಖಾಡದಲ್ಲಿ ನಿಂತು ಯಾವ ಪಕ್ಷವನ್ನು ಯಾವ ಜಾತಿಗಳು ಬೆಂಬಲಿಸಬೇಕು ಯಾರನ್ನು ಮುಖ್ಯಮಂತ್ರಿಮಾಡಬೇಕು, ಯಾವ ಮಂತ್ರಿಯನ್ನು ಯಾಕೆ ಟೀಕಿಸಬಾರದು/ಟೀಕಿಸಿದರೆ ಅದರ ಪರಿಣಾಮವೇನಾಗಬಹುದು ಎಂದು ಸಾರ್ವಜನಿಕವಾಗಿ ಠರಾವುಗಳನ್ನು ಹೊರಡಿಸುತ್ತಿರುವ ಮಠ ಮಾನ್ಯಗಳು ಒಂದು ಕಡೆಯಾದರೆ, ಅವುಗಳ ಬೆಂಗಾವಲಿಗೆ ನಿಂತು ಅವನ್ನು ಆರ್ಥಿಕವಾಗಿ ಪೋಷಿಸುವುದು ತನ್ನ ಕಾರ್ಯಸೂಚಿಯ ಭಾಗವೇ ಎಂದು ಭಾವಿಸಿರುವ ಸರ್ಕಾರ ಇನ್ನೊಂದು ಕಡೆ ಇರುವ ಇಂದಿನ ಸಂದರ್ಭದಲ್ಲಿ ಎಲ್. ಬಿ. ಅವರು ಎತ್ತಿದ ಪ್ರಶ್ನೆಗಳನ್ನು ಕಡೆಗಣಿಸುವಂತಿಲ್ಲ. ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಅಧಿಕಾರ ಪಡೆಯಲು/ಕಳೆಯಲು ಎಲ್ಲಾ ಪಕ್ಷದ ನಾಯಕರು ಮಾನಗೆಟ್ಟ ಆತುರ ತೋರಿದ್ದರು. ಓಟಿಗಾಗಿ ಎಲ್ಲಾ ರಾಜಕೀಯ ಪಕ್ಷಗಳು ದೇವರು, ಧರ್ಮ,ಜನರ ಅಸಹಾಯಕತೆ, ಅವಶ್ಯಕತೆಗಳನ್ನು ನಿರ್ಲಜ್ಜವಾಗಿ ಬಳಸಿ ಬಿಸಾಡುವ ಜೂಜಾಟಕ್ಕೆ ಮತ್ತೊಮ್ಮೆ ಇಳಿದಿದ್ದವು. ಅಂಥ ಕಲುಷಿತ ಸಂದರ್ಭದಲ್ಲಿ ಮಠ ಮಾನ್ಯಗಳು ತಮಗಿರುವ ವೈಚಾರಿಕ-ನೈತಿಕ ಚಿಂತನೆಗಳ ಬೆಳಕಿನಲ್ಲಿ ಮುತ್ಸದ್ದಿತನದಿಂದ ವರ್ತಿಸಲಿಲ್ಲ. ಪ್ರಜಾಪ್ರಭುತ್ವದಲ್ಲಿ ಸಮಸ್ತ ಜನರಿಗೆ ದೊರಕಬೇಕಾದ ಅಧಿಕಾರದ ಪ್ರಶ್ನೆಯನ್ನು ಕೇವಲ ಒಂದು ಜಾತಿಯ ಅಧಿಕಾರದ ಪ್ರಶ್ನೆಯಾಗಿಸಿ ಅದಕ್ಕೆ ತಮ್ಮನ್ನು ನಂಬುವ ಮುಗ್ಧ ಭಕ್ತಜನರನ್ನು ಪಾಲುದಾರರನ್ನಾಗಿಸಿದ್ದರಿಂದ ಇಂದಿನ ಕರ್ನಾಟಕದ ಪಕ್ಷ ರಾಜಕಾರಣ ಹೇಗೆ ಆಯಾಯಾ ಜಾತಿಗಳಿಗೆ ಸೀಮಿತಗೊಂಡಿದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಅದಕ್ಕಾಗಿಯೇ ಎಲ್. ಬಸವರಾಜು ಅವರು ಎತ್ತಿರುವ ಪ್ರಶ್ನೆಗಳು ಸದ್ಯದ ಸ್ಥಿತಿಯೊಂದನ್ನು ಚರ್ಚಿಸುವ ತುರ್ತನ್ನು ಮಾತ್ರ ಹೊಂದಿಲ್ಲ. ಅವು ಸಮುದಾಯವೊಂದರ ಆತ್ಮ ಸಾಕ್ಷಿಯನ್ನು ಜಾಗೃತಗೊಳಿಸುವ ದೊಡ್ಡ ಕಾಳಜಿಯನ್ನು ಹೊಂದಿವೆಯೆಂಬುದನ್ನು ನಾವು ಅರಿಯಬೇಕು.

ಅದೇನೇ ಇದ್ದರೂ, ತಮ್ಮ ಪ್ರಶ್ನೆಗಳ ಮೂಲಕ ಗಂಭೀರ ಚರ್ಚೆಯೊಂದನ್ನು ತಮ್ಮ ಭಾಷಣದ ಮೂಲಕ ಆರಂಭಿಸಿದ್ದ ಬಸವರಾಜು ಅವರ ಮಾತುಗಳನ್ನು ಪತ್ರಿಕೆಗಳು ಸಮ್ಮೇಳನದ ಅವ್ಯವಸ್ಥೆಯ ಬಗ್ಗೆ ಅಪಾರವಾಗಿ ಬರೆದು ಅಪ್ರಸ್ತುತಗೊಳಿಸಿದವು. ಸಮ್ಮೇಳನದ ನಂತರ ಅಲ್ಲಿನ ಸ್ಥಳೀಯ ಶಾಸಕರೊಬ್ಬರು ನಡೆಸಿದ ಮುಸುಕಿನ ಗುದ್ದಾಟ, ಬೇಕಂತಲೇ ಸೃಷ್ಟಿಸಿದ ಅವಾಂತರಗಳ ಬಗ್ಗೆ ಬರುತ್ತಿರುವ ಸುದ್ದಿಗಳನ್ನು ಗಮನಿಸಿದರೆ ,ಇದೆಲ್ಲವನ್ನು ಸೂಕ್ಷ್ಮವಾಗಿ ವಿಶ್ಲೇಷಿಸದೆ ಕೆಲವು ಪತ್ರಿಕೆಗಳು ಬಸವರಾಜು ಅವರು ಎತ್ತಿರುವ ಚರ್ಚೆಯನ್ನು ಮೂಲೆಗೆ ತಳ್ಳಲಿಕ್ಕಾಗಿಯೇ ಧೂಳು-ಅವ್ಯವಸ್ಥೆಯ ವಿಷಯಗಳಿಗೆ ಬೇಕಂತಲೇ ಅಬ್ಬರದ ಪ್ರಚಾರ ನೀಡಿದವೆ ಎಂದು ಯೋಚಿಸಬೇಕಾಗಿದೆ. ಸಮ್ಮೇಳನದ ಧೂಳು, ಊಟೋಪಚಾರದ ಅವ್ಯವಸ್ಥೆಯನ್ನು ಹೀಗಳೆಯುವಾಗ ಲಕ್ಷಾಂತರ ಜನ ಸೇರಿದ ಇಂಥ ಕಡೆ ಎಲ್ಲವೂ ಉಡುಪಿ ಹೋಟೆಲಿನ ಮಾಣಿಗಳ ಶಿಸ್ತನ್ನು ಪರೋಕ್ಷವಾಗಿ ಗಮನದಲ್ಲಿಟ್ಟುಕೊಂಡು ಇಂಥ ಮಾತುಗಳನ್ನು ಹೇಳುತ್ತಾರೆ. ವಿಚಿತ್ರವೆಂದರೆ ಚಿತ್ರದುರ್ಗದ ಸಮ್ಮೇಳನಕ್ಕೆ , ಹಿಂದೆ ಯಾವ ಸಮ್ಮೇಳನದಲ್ಲೂ ಆಗದ ರೀತಿಯಲ್ಲಿ, ಆಟೋಡ್ರೈವರುಗಳು, ಸಲೂನಿನವರು, ಚಪ್ಪಲಿ ಹೊಲೆಯುವವರು, ಟೈಲರುಗಳು, ಸರ್ಕಾರಿ ನೌಕರರು-ಹೀಗೆ ಅಲ್ಲಿನ ಎಲ್ಲ ವರ್ಗದ ಜನ ಕಾದು ನಿಂತು ದೇಣಿಗೆ ನೀಡಿದ್ದನ್ನು ಕಾಲಮ್ಮುಗಟ್ಟಲೆ ಕೊಂಡಾಡಿ ಪತ್ರಿಕೆಗಳು ಬರೆದಿದ್ದವು. ಹಾಗೆ ಹಣ ದೇಣಿಗೆ ನೀಡಿದ ಅದೇ ಜನ ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮ ತಮಗೂ ಸೇರಿದ್ದೆಂಬ ಸಹಭಾಗಿತ್ವದ ಭಾವದಿಂದ ತಮ್ಮ ಹೆಂಡಿರು ಮಕ್ಕಳು ಗೆಳೆಯರು ಬಂಧುಗಳನ್ನು ಕರೆತಂದರು. ಅದರಿಂದ ಮೊದಲ ದಿನ ಮಾತ್ರ ಆದ ಅವ್ಯವಸ್ಥೆಯನ್ನು ಪತ್ರಿಕೆಗಳು ಹೀಗಳೆದು ಕೊನೆಯದಿನದವರೆಗೂ ಪುಂಖಾನುಪುಂಖವಾಗಿ ಬರೆದವು. ಹೀಗೆ ಬರೆಯುವಾಗ ಕಳೆದ ಬಾರಿ ನಡೆದ ಉಡುಪಿ ಸಮ್ಮೇಳನವನ್ನು ಉದಾಹರಣೆಯಾಗಿ ನೀಡಿದ ಪತ್ರಿಕೆಗಳು ಅಲ್ಲಿ ನಡೆದ ಚಟುವಟಿಕೆಗಳು ಹೇಗೆ ಒಂದು ನಿರ್ದಿಷ್ಟ ಜನವರ್ಗಕ್ಕೆ, ಕೆಲವೇ ಕೆಲವು ಸಂಘಟನೆಗಳಿಗೆ ಮಾತ್ರ ಸೀಮಿತಗೊಂಡಿತ್ತು ಎಂಬುದನ್ನು ಉಲ್ಲೇಖಿಸಲಿಲ್ಲ. ಮೊದಲ ದಿನ ಊಟಕ್ಕಾಗಿ ನಡೆದ ಅವಾಂತರವನ್ನು ನೋಡಿದ ಸಂಘಟಕರು ಎರಡನೆಯ ದಿನದಿಂದ ಬಂದ ಸಾವಿರಾರು ಸಂಖ್ಯೆಯ ಜನಸ್ತೋಮಕ್ಕೆ ಟಿಕೀಟು ಪಡೆದು ತಲೆಎಣಿಸಿ ಊಟ ಬಡಿಸುವ ಉಡುಪಿ ಮಾದರಿಯನ್ನು ಸಂಪೂರ್ಣವಾಗಿ ಕೈಬಿಟ್ಟರು. ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದವರಿಗೆಲ್ಲ ಆ ಅವ್ಯವಸ್ಥೆಯ ನಡುವೆಯೇ ಯಾರನ್ನೂ ಹಿಂದಕ್ಕೆ ಕಳಿಸದೆ ಊಟಕ್ಕೆ ಹಾಕಿದ್ದು ಸಹ ಗಮನಾರ್ಹ ವಿಚಾರವೇ. ವಾಸ್ತವವಾಗಿ ಯಾವ ಸಮ್ಮೇಳನವೂ ಊಟೋಪಚಾರದ ಗದ್ದಲವಿಲ್ಲದೆ ಸುಸೂತ್ರವಾಗಿ ನಡೆದ ಉದಾಹರಣೆಗಳೇ ಇಲ್ಲ. ಮತ್ತು ನಿಜವಾಗಿ ಸಾಹಿತ್ಯ ಪರಿಷತ್ತಿಗೆ ನಾಡು ನುಡಿಯ ಬಗೆಗಿನ ವಿಚಾರಗಳಲ್ಲಿ ಗಂಭೀರ ಕಳಕಳಿಯಿದ್ದು ಅದನ್ನು ಮಾಡುವ ಸಲುವಾಗಿ ಊಟೋಪಚಾರವನ್ನೆಲ್ಲ ಖಾಸಗಿಯವರಿಗೆ ವಹಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವವರೆಗೆ ಇದೆಲ್ಲ ಬಗೆಹರಿಯುವಂತೆಯೂ ಕಾಣಿಸುವುದಿಲ್ಲ.

ಹೀಗೆ ಎಲ್ಲ ಬಗೆಯ ಅವ್ಯವಸ್ಥೆಯ ಜೊತೆಜೊತೆಯಲ್ಲಿಯೇ ಅದನ್ನು ಬಳಸಿಕೊಂಡು ಸಮ್ಮೇಳನವು ಹುಟ್ಟು ಹಾಕಿದ ಚರ್ಚೆಯನ್ನು ಬರಖಾಸ್ತು ಮಾಡುವ ವ್ಯವಸ್ಥಿತ ಪ್ರಯತ್ನಗಳು ದುರ್ಗದಲ್ಲಿ ನಡೆದವು. ಗೊಂದಲಗಳ ನಡುವೆಯೇ ದುರ್ಗದ ಸಮ್ಮೇಳನದಲ್ಲಿ ದೊಡ್ಡ ಮಟ್ಟದ ಪುಸ್ತಕ ಮಾರಾಟ ನಡೆಯಿತು. ಹೀಗೇ ಗೆಳೆಯರೊಂದಿಗೆ ಅಲೆಯುತ್ತಿರುವಾಗ ಕವಿ-ಪ್ರಕಾಶಕ ಡಿ.ವಿ.ಪ್ರಹ್ಲಾದ ಅವರು ಮೈಯೆಲ್ಲಾ ಮಣ್ಣಾಗಿ ಧೂಳಿನಲ್ಲಿ ಮುಳುಗಿದ ಪುಸ್ತಕಗಳನ್ನು ಸುತ್ತಲೂ ಹರವಿಕೊಂಡು ಧೂಳಿನಲ್ಲಿ ಉರುಳಾಡಿ ಬಂದ ಮಕ್ಕಳನ್ನು ಬೈದು ರೇಜಿಗೆ ಬಂದು ಸುಸ್ತಾಗಿ ಕೂತ ಅಮ್ಮನಂತೆ ಪುಸ್ತಕಗಳನ್ನು ಒಂದೊಂದಾಗಿ ಎತ್ತಿಡುತ್ತ ಕೂತಿದ್ದರು. ನಾನು ಅವರನ್ನು ಕಂಡು ಏನು ಮಾತಾಡಿಸಿದರೂ ಅದಕ್ಕೆ ಎಲ್ಲಿ ಸಹಾನುಭೂತಿಯ ಸೋಂಕು ತಗಲುವುದೋ ಎಂಬ ಸಂಕೋಚದಿಂದ ಹಾಗೆಯೇ ದಾಟಿ ಮುಂದೆ ಬಂದೆ. ಮರುದಿನ ಕೇಳಿದರೆ, ಪ್ರಹ್ಲಾದ ಅವರು ಸಿಕ್ಕವರನ್ನೆಲ್ಲ ಕಟ್ಟಿಕೊಂಡು ಧೂಳಿನ ಕಾರ್ಮೋಡಗಳ ನಡುವೆಯೇ ತಮ್ಮ ಸ್ಟಾಲಿನಲ್ಲಿ ನಡೆಸಿದ ಪುಟ್ಟ ಅರ್ಥಪೂರ್ಣ ಕವಿಗೋಷ್ಟಿಯನ್ನು ನನ್ನ ಗೆಳೆಯರು ಬಣ್ಣಿಸುತ್ತಿದ್ದರು. ಮುಂದೆ ಬಂದರೆ ಗೆಳೆಯ ವಸುಧೇಂದ್ರ ತನಗೂ ಬೆಂಗಳೂರಿನ ಐಟಿ ಸಾಮ್ರಾಜ್ಯಕ್ಕೂ ಸಂಬಂಧವೇ ಇಲ್ಲವೆಂಬಂತೆ ತನ್ನ ಪ್ರಕಾಶನದ ಕೆಲವೇ ಪುಸ್ತಕಗಳನ್ನು ನಾಲ್ಕು ದಿನವೂ ಮಹಾ ಶ್ರದ್ಧೆಯಿಂದ ಬಿಸಿಲು-ಧೂಳಿನ ನಡುವೆ ಮಾರುತ್ತ ನಿಂತಿದ್ದರು. ಕೊಳ್ಳುವವರು ಕಮ್ಮಿಯಾಗಿದ್ದರೂ ಆದರೆ ಧೂಳಿನ ಧಾಳಿ ಹೇರಳವಾಗಿದ್ದ ಆ ಸ್ಟಾಲಿನಲ್ಲಿ ಜೊತೆಗೆ ಕತೆಗಾರ ಲೋಕೇಶ ಅಗಸನಕಟ್ಟೆ ಮತ್ತು ಅವರ ಮಗ ಆಲೋಕ ವಸುಧೇಂದ್ರರಿಗೆ ಸಾಂತ್ವನ ಹೇಳಲು ಬಂದವರಂತೆ ನಿಂತಿದ್ದರು. ಇನ್ನೊಂದು ಕಡೆ ಪುಟ್ಟ ಮಗಳ ಜೊತೆ ಬಂದಿದ್ದ ತಂದೆಯೊಬ್ಬರು ಚಾಕಲೇಟು ಖರೀದಿಸಿದಷ್ಟೇ ಸಲೀಸಾಗಿ ಅವಳು ಕೇಳಿದ ಪುಸ್ತಕಗಳನ್ನೆಲ್ಲ ಒಂದರ ಮೇಲೊಂದರಂತೆ ಪೇರಿಸಿಕೊಂಡು ಮಗಳು ಇನ್ನಾವ ಬುಕ್ಕು ಆರಿಸುವಳೋ ಎಂಬ ಆಸೆಯಿಂದ ಪುಸ್ತಕದ ಪೆಂಡಿ ಹಿಡಿದು ಅವಳ ಹಿಂದೆ ಹಿಂದೆಯೇ ಓಡಾಡುತ್ತಿದ್ದರು. ಎಲ್ಲ ಕಡೆ ಗೆಳೆಯರು ಪರಿಚಿತರು ಊರಿನವರು ಬರಹಗಾರರು ಸಿಕ್ಕು ಮಾತಾಡಿ ಸುಸ್ತಾಗಿ ಕೊನೆಕೊನೆಗಂತೂ ಗೊತ್ತಿರುವವರನ್ನು ಕಂಡರೆ ಜಂಗುಳಿಯಲ್ಲಿ ತಲೆಮರೆಸಿಕೊಂಡು ಹೋಗುವಂತಾಗಿತ್ತು. ಸಮ್ಮೇಳನದ ಊಟದ ಅವಾಂತರಗಳನ್ನು ನೋಡಿ ನನ್ನ ಅಮ್ಮಿ ಸಾಬ್ ನಿನ್ನ ಗೆಳೆಯರನ್ನು ಕರೆತರುವುದಾಗಿದ್ದರೆ ಮನೆಯಲ್ಲಿಯೇ ಅಡುಗೆಯರಿಗೆ ಹೇಳಿ ವ್ಯವಸ್ಥೆ ಮಾಡಬಹುದಿತ್ತು ಎಂದು ಏನನ್ನೂ ಪೂರ್ವಭಾವಿಯಾಗಿ ಆಲೋಚಿಸದ ನನ್ನನ್ನು ಬೈಯುತ್ತಿದ್ದರು. ಸಮ್ಮೇಳನದ ಅಧ್ಯಕ್ಷರ ಭಾಷಣ, ಸಂವಾದಗಳನ್ನು ಬಿಟ್ಟರೆ ಯಾವುದನ್ನೂ ಅಸ್ಥೆಯಿಂದ ಕೇಳದ ಹೀಗೆ ನನಗೆ ಜನರ ಸೇರುವಿಕೆಯೇ ಅರ್ಥಪೂರ್ಣವಾಗಿ ಕಂಡಿತು. ಅಲ್ಲಿನ ಎಲ್ಲ ಅವಾಂತರಗಳ ನಡುವೆಯೇ ದುರ್ಗದಲ್ಲಿ ನಾನು ನೋಡಿದ ಈ ಬಗೆಯ ಚಿತ್ರಗಳು ಬಹಳಕಾಲ ಉಳಿಯಲಿವೆ ಎಂದು ನನಗೆ ಅನ್ನಿಸಿದೆ.

[ ಚಿತ್ರಗಳು- ಆರ್ ರಾಘವೇಂದ್ರ ಚಳ್ಳಕೆರೆ]

ಪುಟದ ಮೊದಲಿಗೆ
 
Votes:  2     Rating: 4.5    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?