ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ವಿಯಟ್ನಾಮಿ ಹೇಳಿದ ಕಥೆ    
ಸುದರ್ಶನ್
ಶುಕ್ರವಾರ, 20 ಮಾರ್ಚ್ 2009 (04:54 IST)
ಒಂದು ಐತಿಹಾಸಿಕ ಚಿತ್ರ
ಇರಾಕಿನ ಯುದ್ಧ, ಆಫ್ಗಾನಿಸ್ತಾನದ ಯುದ್ಧ ಹಲವಾರು ಜಾಗತಿಕ ಟೀಕಾಕಾರರಿಗೆ ವಿಯೆಟ್ನಾಂ ಯುದ್ಧದಲ್ಲಿ ಅಮೇರಿಕದ ಪರದಾಟವನ್ನು ನೆನಪಿಸಿದೆ. ವೈರಿಯ ಕೈಯಲ್ಲಿರುವ ಬಾಂಬು ಗನ್ನುಗಳ ಮೇಲೆ ಮಾತ್ರ ಅಮೇರಿಕಕ್ಕೆ ಕಣ್ಣಿರುತ್ತದೆ. ಎಷ್ಟೋ ವೇಳೆ, ಅದು ವೈರಿಯ ಕೈಗೆ ಬರಲು ತಾನೇ ಕಾರಣ ಆಗಿರಬಹುದು ಎಂದೂ ಮರೆತು ಹೋಗಿರುತ್ತದೆ. ಹಾಗೆ ಮರೆತಾಗ ವೈರಿಯ ಹಿಂದಿನ ಶಕ್ತಿ, ಮುಖ್ಯವಾಗಿ ಒಳಗಿನ ಶಕ್ತಿ ಅದರ ಕಣ್ಣಿಗೆ ಕಾಣುವುದಿಲ್ಲ. ಇರಾಕಿನ ಯುದ್ಧ ಶುರುವಾಗಿ ಇನ್ನೂ ವರ್ಷ ಕಳೆಯುವ ಮುನ್ನವೇ ಯುದ್ಧ ದಿರಿಸು ತೊಟ್ಟು, ಅಮೇರಿಕದ ಯುದ್ಧಹಡಗಿನ ಮೇಲೆ ನಿಂತು "ವಿ ಹ್ಯವ್ ಪ್ರಿವೇಲ್ಡ್" ಎಂದು ಬುಷ್ ಸೊಟ್ಟನಗೆ ನಕ್ಕಿದ್ದು ನಿಮಗೆ ನೆನಪಿರಬಹುದು. ಆ ನಗೆಯ ನಂತರವೇ ನಿಜವಾದ ಯುದ್ಧ ಶುರುವಾಯಿತು ಎಂದೂ ಹಲವರು ಹೇಳಿದ್ದಾರೆ. ಇರಲಿ, ಇದೆಲ್ಲಾ ಯಾಕೆ ನೆನಪಾಯಿತೆಂದರೆ ಮೊನ್ನೆ ಟೀವಿಯಲ್ಲಿ ವಿಯಟ್ನಾಂ ಹಾಗು ಇನ್ನಿತರ ದೇಶಗಳಿಂದ ನಿರಾಶ್ರಿತರಾಗಿ ಬಂದ ಹೆಂಗಸರಿಗೆ ಈಜು ಕಲಿಸುವ ಬಗ್ಗೆ ಹೇಳುತ್ತಿದ್ದರು. ದೋಣಿಯಲ್ಲಿ ತಪ್ಪಿಸಿಕೊಂಡು ಬಂದ ಹಲವರಿಗೆ ನೀರಿನ ಬಗೆಗಿನ ದಿಗಿಲನ್ನು ಗೆಲ್ಲುವುದು ಮುಖ್ಯ ಎಂಬುದು ಅದರ ಹಿಂದಿನ ಕಾಳಜಿ.

ವಿಯೆಟ್ನಾಂ ಯುದ್ಧದ ಕತೆಗಳನ್ನು, ಅಮೇರಿಕಾದ ಕಾರ್ಪೆಟ್ ಬಾಂಬಿಂಗು ಹಾಗು ವಿಯೆಟ್-ಕಾಂಗಿನ ಆಕ್ರೋಶದ ನಡುವೆ ನಲುಗಿದ ಜನರ ಕತೆಯನ್ನು ಆಗಾಗ ಕೇಳಿಯೇ ಇರುತ್ತೇವೆ. ಆ ಯುದ್ಧದ ಹಲವಾರು ಚಿತ್ರಗಳಲ್ಲಿ ನನ್ನನ್ನು ಒಂದು ಮಗುವಿನ ಚಿತ್ರ ಯಾವಾಗಲೂ ಕಾಡುತ್ತದೆ. ನೇಪಾಮ್ ಬಾಂಬಿಂಗಿನಲ್ಲಿ ಮೈ ಸುಟ್ಟುಕೊಂಡು, ಗದ್ದೆ ನಡುವಿನ ರಸ್ತೆಯಲ್ಲಿ ಕೈಚಾಚಿಕೊಂಡು, ಅಳುತ್ತಾ ಓಡಿಬರುತ್ತಿರುವ ಹುಡುಗಿಯ ಚಿತ್ರ ಇಂದೂ ನೋಡಿದವರಿಗೆ ಪ್ರಶ್ನೆಗಳನ್ನು ಕೇಳುತ್ತವೆ. ಇದೆಲ್ಲಾ ಯಾಕೆ, ನನಗೇಕೆ ಹೀಗೆ ಮಾಡಿದಿರಿ, ನಾನೇನು ಮಾಡಿದೆ... ಹೀಗೆ. ಇಂತಹ ಸಂಗತಿಗಳು ಪುಸ್ತಕ ಪತ್ರಿಕೆಗಳಿಂದ ಜಿಗಿದು ಎದುರಿಗೆ ಬಂದು ನಿಂತಾಗ ನಮ್ಮನ್ನು ಆಳವಾಗಿ ಅಲ್ಲಾಡಿಸುವುದೂ ನಿಮಗೆ ಗೊತ್ತಿರಬಹುದು.

ಇದೆಲ್ಲದರ ನಡುವೆ ವಿಯಟ್ನಾಮಿನ ನನ್ನ ಗೆಳೆಯನೊಬ್ಬನ ನೆನಪಾಯಿತು. ಅವನು ಬೇರೆ ಕಂಪನಿಯಿಂದ ಬಂದು ಕೆಲವು ದಿನಗಳ ಮಟ್ಟಿಗೆ ನನ್ನ ಜತೆ ಕೆಲಸ ಮಾಡುತ್ತಿದ್ದ. ಅವನು ಹೇಳಿದ ತನ್ನ ಕತೆ ಹಲವು ಸಲ ಮತ್ತೆ ಮತ್ತೆ ನನಗೆ ನೆನಪಾಗುತ್ತದೆ. ಒಂದು ಮಧ್ಯಾಹ್ನ ನಗುನಗುತ್ತಾ ಊಟ ಮಾಡುತ್ತಿದ್ದೆವು. ನಾನು ಇಂಡಿಯದಿಂದ ಬಂದ ಕತೆ, ಕೆಲಸ ಸಿಕ್ಕದೆ ಪರದಾಡಿದ ಕತೆ ಎಲ್ಲ ಹೇಳಿಕೊಂಡಿದ್ದೆ. ಎಲ್ಲವನ್ನೂ ನಗುತ್ತಾ ಕೇಳಿದ ಅವನು ತನ್ನ ಕತೆಯನ್ನೂ ಹೇಳಿಕೊಂಡಿದ್ದ. ಅವರ ಅಪ್ಪ ಅಮ್ಮಂದಿರಿಗೆ ಅವರು ನಾಕು ಜನ ಮಕ್ಕಳಂತೆ. ಇವನು ಕಡೆಯವನಂತೆ. ಆಸ್ಟ್ರೇಲಿಯಕ್ಕೆ ಅವರು ಬಂದಾಗ ಇವನು ಪುಟ್ಟ ಮಗುವಂತೆ. ಅವನ ಅಪ್ಪನಿಗೆ ತುಂಬಾ ವಯಸ್ಸಾಗಿದೆಯಂತೆ. ಬದುಕಿನಲ್ಲಿ ತುಂಬಾ ಕಷ್ಟ ನಷ್ಟ ಅನುಭವಿಸಿದ್ದಾರಂತೆ. ಈಗೀಗ ತುಸು ನಿರಾಳದಿಂದ ಇದ್ದಾರಂತೆ. ಆದರೂ ಒಂದು ನೆನಪು ಮಾತ್ರ ಅವರನ್ನು ಈಗಲೂ ಬಿಟ್ಟು ಹೋಗದೆ ಕಾಡುತ್ತದಂತೆ.

ಅವನ ಅಪ್ಪ-ಅಮ್ಮ ಯುದ್ಧದ ಮತ್ತು ಯುದ್ಧದ ನಂತರದ ಹಿಂಸೆಯಿಂದ ತಪ್ಪಿಸಿಕೊಂಡು ವಿಯಟ್ನಾಮಿನಿಂದ ಓಡಿಹೋಗಬೇಕಾಯಿತಂತೆ. ತಮ್ಮ ಸಂಸಾರವನ್ನು ಕಾಪಾಡಿಕೊಳ್ಳಲು ಅದೊಂದೇ ದಾರಿಯಾಗಿತ್ತಂತೆ. ತಮ್ಮ ಬೇಸಾಯದ ಭೂಮಿಯನ್ನೆಲ್ಲಾ ಯುದ್ಧದಲ್ಲಿ ಕಳಕೊಂಡಿದ್ದರು. ಅನಾಥರಾಗಿ ಪೇಟೆಯಲ್ಲಿ ಭಿಕ್ಷೆ ಬೇಡುವುದು ಅವರಿಗೆ ಇಷ್ಟವಿರಲಿಲ್ಲ. ತಲೆಯೆತ್ತಿ ಬದುಕಿದ್ದವರ ಸ್ವಾಭಿಮಾನಕ್ಕೆ ಅದೆಂತಹ ಧಕ್ಕೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಬೇರೆ ಎಲ್ಲಾದರೂ ಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳುವುದೇ ಅವರಿಗೆ ಸರಿ ಕಂಡ ದಾರಿ.

ನಾಲ್ಕಾರು ಜನರ ಜತೆ ಸೇರಿಕೊಂಡು ಪುಟ್ಟ ಬೋಟಿನಲ್ಲಿ ಹೊರಟರಂತೆ. ಆ ಬೋಟೂ ಇವರನ್ನೆಲ್ಲ ಸಮುದ್ರ ದಾಟಿಸಿ ಆಸ್ಟ್ರೇಲಿಯಾ ತಲುಪಿಸಲು ಶಕ್ತವೇ ಎಂದು ಗಮನಿಸಿರಲಿಲ್ಲವಂತೆ. ಯುದ್ಧದ ದಿನಗಳೇ ಹಾಗಲ್ಲವೆ? ಮುಂಚೆ ಹೊರಟ ದೋಣಿಗಳು ಮುಳುಗಿ ಸತ್ತ ಜನರ ಸುದ್ದಿಯನ್ನು ಉಳಕೊಂಡವರಿಂದ ಕೇಳಿದ್ದರೂ - ತಮಗೆ ಹಾಗಾಗುವುದಿಲ್ಲ ಎಂಬ ಸಮಜಾಯಿಷಿ ಇದ್ದೇ ಇರುತ್ತದೆ. ಹೀಗೆಲ್ಲಾ ಧೈರ್ಯಮಾಡಿಕೊಂಡು ಕಡೆಗೂ ಇಲ್ಲಿ ಬಂದು, ಹೊಸ ಬದುಕು ಕಟ್ಟಿ, ಮಕ್ಕಳನ್ನು ಚೆನ್ನಾಗಿ ಬೆಳಸಿ, ಓದಿಸಿ ಈಗ ನಿರಾಳರಾಗಿದ್ದಾರೆ ಎಂದು ಹೇಳಿ ಅವನು ಕೊಂಚ ತಡೆದ.

ತನ್ನ ತಂದೆಯ ಹಳೆಕಾಲದ ವಾದಗಳಿಗೆ ಬೇಸತ್ತು ಇವನು ಆಗಾಗ ಅವರ ಜತೆ ಜಗಳವಾಡುವುದು ಇದೆಯಂತೆ. ಹಾಗೆ ಜಗಳವಾಡಿದ ಒಂದು ಸಲ ಅವನ ತಂದೆ ತಮ್ಮ ಕನಸ್ಸನ್ನು ಹೇಳಿದರಂತೆ. ಈಗಲೂ ಮುಂಜಾವದಲ್ಲಿ ಅವನ ತಂದೆ ಆ ಕನಸಿನಿಂದ ನಡುಗುತ್ತಾ ಎದ್ದು ಕೂರುತ್ತಾರಂತೆ. ತಂದೆ ಹೇಳಿದ್ದಿಷ್ಟಂತೆ : "ನಾವು ವಿಯಟ್ನಾಮಿನಿಂದ ತಪ್ಪಿಸಿಕೊಂಡು ಹೊರಟ ದಿನಗಳು ಈಗಲೂ ದಿಗಿಲು ಮೂಡಿಸುತ್ತದೆ. ದೊಡ್ಡ ಸಾಗರದ ನಡುವಲ್ಲಿ ಯಾವ ದಿಕ್ಕಲ್ಲೂ ನೆಲ ಕಾಣುತ್ತಿರಲಿಲ್ಲ. ಅಂತಲ್ಲಿ ನಾವೆಲ್ಲಾ ಪುಟ್ಟ ದೋಣಿಯಲ್ಲಿರುವ ಕನಸು ಬೀಳುತ್ತದೆ. ನೀವು ನಾಕು ಜನ ಪುಟ್ಟ ಮಕ್ಕಳನ್ನೂ ಬಿಗಿದು ಹಿಡಕೊಂಡಿರುತ್ತೇನೆ. ನೀವೆಲ್ಲಿ ಆ ಪುಟ್ಟ ದೋಣಿಯಿಂದ ಜಾರಿ ನೀರಿಗೆ ಬೀಳುತ್ತೀರೋ ಅಂತ ಹೆದರಿಕೆ. ಕೊನೆಯಿಲ್ಲದಂತಹ ಯಾತ್ರೆ ಅನಿಸುತ್ತದೆ. ನಿಮ್ಮನ್ನು ಹಿಡಿದ ಕೈಗೆ ಸುಸ್ತಾಗುತ್ತದೆ. ನನ್ನ ಶಕ್ತಿ ಉಡುಗಿ ಕೈ ಹಿಡಿತ ಸಡಿಲಾಗುವಂತೆ ಆಗುತ್ತದೆ. ನೋಡ ನೋಡುತ್ತಿದ್ದಂತೆಯೇ ನೀವು ನನ್ನ ಕೈಯಿಂದ ಜಾರಿ ನೀರುಪಾಲು ಆದಂತೆ ಅನಿಸುತ್ತದೆ. ಅಪ್ಪಾ! ಹಿಡಕೋ ಅಪ್ಪಾ ಬಿಡಬೇಡ! ಎಂದು ನೀವೆಲ್ಲಾ ಅಳುತ್ತಾ ಕೂಗುತ್ತಿರುತ್ತೀರ. ನಿಮ್ಮ ಮುಖಗಳಲ್ಲಿ ನಾನೆಂದೂ ಕಂಡಿರದ ದಿಗಿಲು ಕಾಣುತ್ತದೆ. ಸಹಿಸಾಲಾಗದೆ ಕನಸಿಂದ ಧಿಗ್ಗನೆ ಎದ್ದು ಕೂರುತ್ತೇನೆ. ಆಗ ಕಿಟಕಿಯ ಹೊರಗೆ ಮುಂಜಾನೆಯ ಬೆಳಕಿರುತ್ತದೆ. ನನ್ನ ಹಣೆ ಬೆವರಿನಿಂದ ಒದ್ದೆಯಾಗಿರುತ್ತದೆ. ನಡುಗುವ ಮೈ ಮತ್ತೆ ಸರಿ ಹೋಗಲು ಒಂದೆರಡು ಗಂಟೆ ಹಿಡಿಯುತ್ತದೆ".

ತಂದೆಯ ಕನಸು ಹೇಳಿದ ಗೆಳೆಯ "ಅಲ್ಲಿಗೆ ನಮ್ಮ ಜಗಳ ನಿಂತಿತು" ಎಂದು ವಿಚಿತ್ರವಾಗಿ ನಗುತ್ತಾ ನನ್ನನ್ನೇ ನೋಡಿದ. ಅವನ ಪುಟ್ಟಪುಟ್ಟ ಹಲ್ಲುಗಳ ಸಾಲು ಸಣ್ಣ ಮಗುವಿನ ಹಲ್ಲುಗಳಂತೆ ಕಂಡಿತು.
ಪುಟದ ಮೊದಲಿಗೆ
 
Votes:  9     Rating: 3.67    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ