ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಅವಳ ಹುಡುಗಾಟ ಮತ್ತು ಎಚ್ಚರ    
ಸುದರ್ಶನ್
ಶನಿವಾರ, 28 ಮಾರ್ಚ್ 2009 (03:28 IST)
ಎಲ್ಲಿಯವಳೆಂದು ಕೇಳಿದರೆ "ನಾನು ಆಸ್ಟ್ರೇಲಿಯದ ಆಂಗ್ಲೋ-ಸಾಕ್ಸನ್ ಬಿಳಿ ಹುಡುಗಿ, ನ್ಯಾಚುರಲ್ ಬ್ಲಾಂಡ್" ಎಂದು ಕಪ್ಪು ಕೂದಲು ತೋರಿಸಿ ಜೋರಾಗಿ ನಗುತ್ತಾಳೆ. ಅವಳ ಉತ್ತರ ತಮಾಷೆಯೋ, ಕುಹಕವೋ ಅರ್ಥವಾಗದೆ ಕೇಳಿದವರು ಪೆಚ್ಚಾಗುವಂತಿರುತ್ತದೆ. ಜತೆಗೆ ಕಣ್ಣು ಬೇರೆ ಮಿಟುಕಿಸುತ್ತಾಳೆ. ನಿಮಗೆ ಪರಿಚಯವಾಗಿ ಒಂದೆರಡು ಸಲ ಮಾತಾಡಿದರೆ ತಾನು ಪರ್ಷಿಯನ್ ಎಂದು ಗುಟ್ಟು ಬಿಟ್ಟುಕೊಟ್ಟವಳಂತೆ ವಿಚಿತ್ರವಾಗಿ ದಿಟ್ಟಿಸುತ್ತಾಳೆ. "ಪರ್ಷಿಯ ಅಂದರೆಲ್ಲಿ?" ಅಂತ ಕೇಳಿದರೆ, "ಅಷ್ಟು ಗೊತ್ತಾಗಲಿಲ್ಲವೆ ಬೆಪ್ಪೆ?" ಎಂಬಂತಷ್ಟೇ ನೋಡಿದಾಗ ಕೇಳಿದವರು ಸುಮ್ಮನಾಗುತ್ತಾರೆ. ಏನಾದರೂ ಹೇಳಿ ಥಟ್ಟನೆ ಬಾಯಿಗೆ ಕೈಹಿಡಿದು ಜೋರಾಗಿ ನಗುವುದು ಅವಳ ಸಹಜ ವರ್ತನೆ. ಹಾಗೆಯೇ ಅವಳ ನಗುವಿನ ಕಾರಣ ತಿಳಿಯದೆ ಅವಳ ಮುಂದೆ ನಿಂತವರು ಕಣ್ಣುಬಿಡುವುದೂ ಅಷ್ಟೇ ಸಹಜ. ಅವರು ಕಣ್ಣುಕಣ್ಣು ಬಿಟ್ಟಾಗ "ಹೋಗಲಿ ಬಿಡಿ, ನಾನು ಹೀಗೆ" ಎಂದು ಭುಜಕುಣಿಸಿ ಸಮಾಧಾನ ಮಾಡುವಂತೆ ನೋಡುತ್ತಾಳೆ. "ತಾನೇ ಹುಚ್ಚುಚ್ಚು, ನಿಮ್ಮದೇನೂ ತಪ್ಪಿಲ್ಲ" ಅವಳ ಕಣ್ಣಲ್ಲಿ ಯಾವಾಗಲೂ ಕಾಣುವ ಭಾವ ಅನ್ನುವಂತಿರುತ್ತದೆ.

ಎತ್ತರಕ್ಕೆ ಬೆಳ್ಳಗಿರುವ, ಎದೆ ನಿಮಿರಿಸಿ ನಡೆವ, ಚುರುಕು ಕಣ್ಣಿನ ಹುಡುಗಿ ಅವಳು. ಸೆಕ್ರೆಟರಿ ಕೆಲಸದಲ್ಲಿ ತುಂಬಾ ಸಮರ್ಥೆ. ತನ್ನ ಹುಚ್ಚಾಟಗಳ ನಡುವೆ ಕೆಲಸವೆಲ್ಲಾ ಹೇಗೆ ಮಾಡುತ್ತಾಳೋ ಅದೊಂದು ದೊಡ್ಡ ಸೋಜಿಗವೇ. ಕೆಲಸದ ಎಲ್ಲ ಮಂದಿಯ, ಎಲ್ಲ ಸಂಗತಿಯ, ಎಲ್ಲ ಆಗುಹೋಗಿನ ಬಗ್ಗೆ ಸರಕ್ಕನೆ ಹೇಳಬಲ್ಲಳು. ಯಾರಾದರೂ ಕೆಲಸಕ್ಕಾಗಿ ಬಂದರೆ, ಒಂದಕ್ಕೆ ನಾಕು ಮಾತಾಡಿ, ಅವರನ್ನು ನಗಿಸಿ, ಪೆಚ್ಚಾಗಿಸಿ ಕಡೆಗೆ ಕೆಲಸವೂ ಮಾಡಿಕೊಟ್ಟು ಕಳಿಸುತ್ತಾಳೆ. ಅಂತಹವಳು ಒಂದೆರಡು ವಾರದ ಧಿಡೀರ್ ರಜ ಹಾಕಿ ಹೋದಳೆಂದರೆ ಕೇಳಬೇಕೆ? ವಾಪಸು ಬಂದ ಮೇಲೆ ವಾರವಿಡೀ ಅವಳ ರಜದ ಬಗ್ಗೆ ಎಲ್ಲರಿಗೂ ಎಗ್ಗಿಲ್ಲದ ಹರಿಕಥಾಶ್ರವಣ.

ಯಾವುದೋ ಶ್ರೀಮಂತನೊಬ್ಬನನ್ನು ಬೆನ್ನತ್ತಿ ಅಮೇರಿಕಕ್ಕೆ ಹೋಗಿದ್ದಳಂತೆ (ಇಲ್ಲಿ ಯಾವುದೋ ಹಳೆಯ ಹಾಡು ಗುನುಗುತ್ತಾಳೆ). ಅವನು ಸಿಡ್ನಿಗೆ ಬಂದಿದ್ದಾಗ ಭೇಟಿಯಾಗಿದ್ದಂತೆ. ಕಾಮನ್ ಫ್ರೆಂಡಿನ ಮೂಲಕ ಅವನಿಗೆ ತುಂಬಾ ದುಡ್ಡಿರುವುದು ತಿಳಿದುಬಂತಂತೆ. ಮದುವೆಯಾಗಿರದ ಅವನೊಡನೆ ಇ-ಮೇಲ್ ಗೆಳೆತನ ಇಟ್ಟುಕೊಂಡಿದ್ದು - ಅವನಿಗೆ ತುಸು ಬಿಡುವಿದೆ ಎಂದೊಡನೆ ಏನಾದರೂ ಸಂಬಂಧ ಕುದುರುತ್ತದೋ ನೋಡೋಣ ಎಂದು ಹೋಗಿದ್ದಳು. ಬಂದವಳೇ ಅವನ ಸಿರಿವಂತಿಕೆಯನ್ನು ಕುಬೇರನನ್ನು ಬಣ್ಣಿಸುವಂತೆ ಬಣ್ಣಿಸಿದಳು. ದೊಡ್ಡ ಮನೆ, ಸ್ವಿಮ್ಮಿಂಗ್ ಪೂಲ್, ಎರಡು ತುಂಬಾ ದುಬಾರಿ ಕಾರು, ದೊಡ್ಡ ಕೆಲಸ ಎಲ್ಲಾ ಪಟ್ಟಿ ಮಾಡಿದಳು (ಇಲ್ಲಿ ಮತ್ತೊಂದು ಹಾಡಿನ ಗುನುಗು). ಅಷ್ಟೇ ಅಲ್ಲ ತುಂಬಾ ಒಳ್ಳೆಯವನಂತೆ. ತುಂಬಾ ಚೆನ್ನಾಗಿ ನೋಡಿಕೊಂಡನಂತೆ. ಆದರೆ ಹೋಗಿ ಇಳಿದ ಒಂದೆರಡು ದಿನ ಕಳೆದದ್ದೇ ಅವನ ಬಾಯ್‌ಫ್ರೆಂಡ್ ಬಂದಿಳಿದನಂತೆ. ಇವನು ಗೇ ಎಂದು ಗೊತ್ತಾಗಿದ್ದೇ ತಾನು ಕಟ್ಟಿಕೊಂಡಿದ್ದ ಡ್ರೀಮ್ಸ್ ಎಲ್ಲಾ ಶ್ಯಾಟರ್‍ ಆಗಿಹೋಯಿತು ಎಂದು ಬಿದ್ದು ಬಿದ್ದು ನಕ್ಕಳು (ಮತ್ತೊಂದು ಹಾಡು). ತನ್ನ ಪೆದ್ದು ಬುದ್ಧಿಗೆ ಅವನು ಗೇ ಆಗಿರಬಹುದೂಂತ ಹೊಳೆಯಲೇ ಇಲ್ಲ ಎಂದು ಹಣೆಹಣೆ ಚಚ್ಚಿಕೊಂಡಳು. ಏನಾದರೂ ಕೆಲಸಕ್ಕೆ ಬಂದವರು ಇವಳ ಕತೆ ಕೇಳಿ ನಕ್ಕು ಹೊರಟರೆ "ನಿಮಗೆಲ್ಲಿ ಅರ್ಥವಾಗಬೇಕು ನನ್ನ ದುಃಖ" ಎಂದು ಮತ್ತೂ ಜೋರಾಗಿ ಕೂಗಿ ನಗುತ್ತಾಳೆ. ಇವೆಲ್ಲಾ ಇವಳಿಗೆ ಒಂದು ಆಟವೇ ಎಂದು ಎಂತಹವರ ಮನಸ್ಸಲ್ಲೂ ಪ್ರಶ್ನೆ ಏಳದೇ ಇರದು.

ತನ್ನ ಗೆಳತಿ ಜತೆ ಕೂತು ಒಂದು ನಾಟಕ ಬರೆದಿದ್ದಾಳಂತೆ. ಅದರಲ್ಲಿ ತಾನೇ ನಟಿಸಬೇಕು ಅಂತ ಹಠವಂತೆ. ಗೆಳತಿಯೇ ನಿರ್ದೇಶಕಿ - ಆಗಲ್ಲ ಅಂದದ್ದೇ ಹಾಳಾಗಿ ಹೋಗಿ ಅಂತ ಬಂದುಬಿಟ್ಟಳಂತೆ. ತನ್ನ ಯಾವುದೋ ಬೇನೆಗೆ ಆಕ್ಯುಪಂಚರ್ ಮಾಡಿಸಿಕೊಳ್ಳುತ್ತಿದ್ದೇನೆ. ಅದೂ ಡೈರಕ್ಟಾಗಿ ಯಾವುದೋ ಚೈನೀಸ್ ಹೆಂಗಸಿನ ಬಳಿ ಎಂದು ಬೀಗುತ್ತಾಳೆ. "ಅದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡ್ತೀಯ" ಅಂದರೆ. "ಅದು ಪರ್ಸನಲ್" ಎಂದು ಗಂಭೀರವಾಗಿ ಎಚ್ಚರಿಸುತ್ತಾಳೆ. ಆದರೆ ತುಸು ಸಲುಗೆ ಬೆಳೆದ ಕೂಡಲೆ ತನ್ನ ತಂದೆ ಲೆಬನೀಸ್, ತಾಯಿ ಆಸ್ಟ್ರೇಲಿಯನ್-ಇರಾನಿಯನ್ನಿಗೆ ಹುಟ್ಟಿದಾಕೆ ಎಂದು ಪ್ರವರ ಬಿಚ್ಚಿ "ಈಗ ಹೇಳಿ!" ಎನ್ನುವಂತೆ ನೋಡುತ್ತಾಳೆ.

ಯಾವುದೋ ಹುಡುಗಿಯ ಮಧ್ಯಸ್ತಿಕೆಯಲ್ಲಿ ಬ್ರಿಸ್ಬನ್ನಿನಿಂದ ಬರುವ ಒಬ್ಬ ಚೆಂದದ ಹುಡುಗನನ್ನು ಎದುರು ನೋಡುತ್ತಿದ್ದಳಂತೆ. ಬರುವ ಮುನ್ನ ಇವಳಿಗೆ ಫೋನ್ ಮಾಡಿ ಪರಿಚಯ ಮಾಡಿಕೊಂಡನಂತೆ. ಇವಳು ಫೋನಿನಲ್ಲೇ ತಾನು ತುಂಬಾ busy ಎಂಬಂತೆ ನಟಿಸಿದಳಂತೆ. ಬೆಳಗ್ಗೆ ಬೇಗ ಬಂದು ಬಾಸಿನ ಇ-ಮೇಲ್ ಚೆಕ್ ಮಾಡಿ, ಮುಖ್ಯವಾದ್ದನ್ನು ಗುರುತು ಹಾಕಿಡಬೇಕು. ಕಿಚನ್‌ನಲ್ಲಿ ಹಾಲಿದೆಯ, ಕಾಪಿಯರಿನಲ್ಲಿ ಪೇಪರಿದೆಯ ಎಂದೆಲ್ಲಾ ಚೆಕ್ ಮಾಡಬೇಕು. ಸ್ಟೇಷನರಿ ಕಬರ್ಡ್ ಚೆಕ್ ಮಾಡಬೇಕು. ಹೀಗೆ ಪಟ್ಟಿ ಮಾಡಿದಳಂತೆ. ಅತ್ತಲಿದ್ದವನು ಇವಳ ಹತ್ತಾರು ನಿಮಷದ ಕಷ್ಟಕೋಟಲೆಯ ಪುರಾಣ ಕೇಳುತ್ತಾ ಸುಮ್ಮನಿದ್ದನಂತೆ. ಅವನು ಫುಲ್ ಇಂಪ್ರೆಸ್ ಆಗಿ ಮೂಕವಿಸ್ಮಿತನಾಗಿರಬೇಕು. ಆದರೆ ಅವನ ಮಾತೇ ಇಲ್ಲದ್ದು ಗಮನಕ್ಕೆ ಬಂದು "ನೀನು ಏನು ಮಾಡುತ್ತೀಯ? ಆರಾಮಾಗಿದ್ದೀಯಲ್ಲ? busy ಇಲ್ಲವ?" ಎಂದು ಕೇಳಿದಳಂತೆ. ಅವನು "ಹೌದು ನಾನೂ busy. ಈಗ ತಾನೆ ಆಪರೇಷನ್ ಮುಗಿಸಿ ಮನೆಗೆ ಬಂದೆ" ಅಂದನಂತೆ. "ಡಾಕ್ಟರ, ನರ್ಸ" ಎಂದು ಕೇಳಿದಕ್ಕೆ "ನಾನು ನ್ಯೂರೋ ಸರ್ಜನ್" ಅಂದನಂತೆ. ಅಷ್ಟು ಹೇಳಿ ತನ್ನ ನಟನೆಯ ಬಗ್ಗೆ ತಾನೇ ಬಿದ್ದು ಬಿದ್ದು ನಗುತ್ತಾಳೆ. ನಂತರ ಗಂಭೀರವಾಗಿ "ನ್ಯೂರೋ ಸರ್ಜನ್‌ಗೆ ತುಂಬಾ ಸಂಬಳ ಅಲ್ಲವ? ನಾನೂ ಮಾತಾಡುತ್ತಲೇ ಗೂಗಲ್ ಮಾಡಿದೆ. ನೂರೈವತ್ತು ಇನ್ನೂರು ಸಾವಿರ ಡಾಲರಿಗೆ ಮೋಸವಿಲ್ಲ. ಆದರೆ ಒಂದು ಅನುಮಾನ - ಅವನಿಗೆ ಯಾಕೆ ಗರ್ಲ್ ಫ್ರೆಂಡಿಲ್ಲ? ಏನೋ ಕೊರತೆ ಇರಬೇಕು. ಹುಷಾರಾಗಿರಬೇಕು!" ಎಂದು ಪಿಸುನುಡಿಯುತ್ತಾಳೆ.

ಅವಳ ಹುಡುಗಾಟ, ಎಚ್ಚರ, ಚುರುಕು, ತಮಾಷೆ ಎಲ್ಲದರ ನಡುವೆ ನಿಜವಾದ ಅವಳು ಬಚ್ಚಿಟ್ಟುಕೊಂಡಂತೆ ಅನಿಸುತ್ತದೆ. ಬೇಕಂತಲೇ ಕಣ್ಣಾಮುಚ್ಚೆ ಆಡುತ್ತಾಳೆ ಅನಿಸುತ್ತದೆ. ಯಾಕಿರಬಹುದೆಂದು ಹೇಳಲಾರೆ. ನನಗೂ ನಿಮ್ಮಷ್ಟೇ ಗೊತ್ತು.
ಪುಟದ ಮೊದಲಿಗೆ
 
Votes:  11     Rating: 3.18    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು