ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕದ ತಟ್ಟುತ್ತಿರುವ ನಿರಾಶ್ರಿತ ಕೈಗಳು    
ಸುದರ್ಶನ್
ಶುಕ್ರವಾರ, 1 ಮೇ 2009 (06:41 IST)
ವಲಸಿಗರ ದೋಣಿ

ಮನೆಯೆದುರಿನ ಮರ ಅವಸರದಲ್ಲಿ ಎಂಬಂತೆ ಎಲೆ ಎಲ್ಲ ಉದುರಿಸಿಕೊಂಡು ಬೋಳಾಗಿ ನಿಂತಿದೆ. ಇದೀಗ ಇಲ್ಲಿ -ಅದೂ ಅಲ್ಲದ, ಇದೂ ಅಲ್ಲದ ಋತು. ಕಾಲು ಹಾಗು ಕೈಬೆರಳಿನ ತುದಿಗಳಿಂದ ಚಳಿ ಮೆಲ್ಲನೆ ಮೈಗೇರುವ ತವಕದಲ್ಲಿರುವ ಹೊತ್ತು. ಬೇಸಿಗೆಯಲ್ಲಾ ಮನಸ್ಸು ಗರಿಗೆದರಿ ಹಾರಿ ಈಗ ಬಂದಿಳಿದು ಕಾವಿಗೆ ಕೂರುವ ಹೊತ್ತು. ಯಾಕೋ ಎಲ್ಲಾ ತುಂಬಾ ಕಳೆಗುಂದಿದಂತೆ ಅನಿಸುತ್ತಿದೆ.

ಕೆಲಸಗಳು ಇದ್ದೂ ಇಲ್ಲವೆಂಬಂತೆ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲಸ ಕಳಕೊಂಡವರು ಹೆಚ್ಚುತ್ತ ಇದ್ದಾರೆ. ಇನ್ನೂ ಹೆಚ್ಚುತ್ತಾರೆ ಅಂತ ಸುದ್ದಿ ಬೇರೆ. ಎಷ್ಟೋ ಮನೆಗಳು ಮುರಿಯುತ್ತವಂತೆ. ಮುರಿದದ್ದನ್ನು ಮತ್ತೆ ಕಟ್ಟಿಕೊಳ್ಳಲು ಬಲವನ್ನೇನೋ ಮಂದಿ ಕಂಡುಕೊಳ್ಳುತ್ತಾರಂತೆ. ಆದರೆ ಅದಕ್ಕಿನ್ನೂ ಕಾಯಬೇಕಂತೆ. ದುಡಿಯಬೇಕನ್ನುವವರಿಗೆ ಕೆಲಸಕ್ಕೆ ತೊಂದರೆ. ಕೆಲಸವಿದ್ದರೂ, ತಂಡಿಯನ್ನು ನಿಭಾಯಿಸುವಷ್ಟು ಕಾವು ಸಿಗುವ ತೊಂದರೆ ಈ ಚಳಿಗಾಲದ ದಾರುಣತೆಯನ್ನು ಹೆಚ್ಚಿಸಬಹುದು ಎಂಬ ಸುದ್ದಿ ಮನಸ್ಸನ್ನು ಮುದುಡಿಸುತ್ತದೆ.

ಆಸ್ಟ್ರೇಲಿಯದ ಬಾಗಿಲನ್ನು ಮತ್ತೆ ನಿರಾಶ್ರಿತರ ಅದರುವ ಕೈಗಳು ತಟ್ಟುತ್ತಿವೆ. ಮುರುಕು ದೋಣಿಗಳು, ಅದರಲ್ಲಿ ಬೆದರಿದ ಜೀವಗಳು ತಮ್ಮ ಮಕ್ಕಳುಮರಿಗಳನ್ನು ಅವುಚಿಕೊಂಡು ತೇಲಿಬರುತ್ತಿದೆ. ಇರಾಕಿನಿಂದ ಶೆಲ್ಲು, ಬಾಂಬು ಅಲ್ಲದೆ ಈಗೀಗ ಹೆಚ್ಚುತ್ತಿರುವ ಕಾರುಬಾಂಬಿನಿಂದ ಬಚಾವಾಗಲು ಓಡುತ್ತಿದ್ದರೆ, ಆಫ್ಗಾನಿಸ್ತಾನದಲ್ಲಿ ಮೈಲುಗೈ ಪಡೆದ ಅಟ್ಟಹಾಸದ ಕಟುಕರಿಂದ ಓಡುತ್ತಿದ್ದಾರೆ. ಪಾಕಿಸ್ತಾನದ ಗುಂಡು ತೂರುವ ಕೊಲೆಗಡುಕರಿಂದ ತಲೆತಪ್ಪಿಸಿಕೊಂಡು ಬರುತ್ತಿದ್ದರೆ, ಇತ್ತ ಕಡೆ ಒಳಗೊಳಗೆ ಕುದಿಯುತ್ತಲೇ ಇದ್ದು, ಥಟ್ಟನೆ ಭುಗಿಲೆದ್ದ ಶ್ರೀಲಂಕಾದ ಸಂಘರ್ಷದಿಂದ ತಮಿಳು ಜೀವಗಳು ಓಡಿಬರುತ್ತಿದ್ದಾರೆ.

ಹೀಗೆ ಬರುವುದು ಹೆಚ್ಚುತ್ತಿದ್ದಂತೆ ಆಸ್ಟ್ರೇಲಿಯದ ಒಳಗಿನ ಗುದ್ದಾಟವೂ ಹೆಚ್ಚುತ್ತದೆ. "ಒಳಗೆ ಬಿಡಬೇಡಿ", "ಹಿಂದಕ್ಕೆ ಕಳಿಸಿ", "ಅವರೆಲ್ಲಾ ಪಾತಕಿಗಳು!", "ಎಲ್ಲಾದರೂ ಸಾಯಲಿ, ಇಲ್ಲಿಬೇಡ" ಎನ್ನುವ ದನಿಗಳು ದೊಡ್ಡದಾಗುತ್ತಾ ಹೋಗುತ್ತವೆ. ಆಶ್ರಯ ಬೇಡಿ ಬಂದವರನ್ನು "illegal" ಎಂದು ಕರೆಯುವುದು ತಪ್ಪಷ್ಟೇ ಅಲ್ಲ, ದುಷ್ಟತನವೂ ಹೌದು ಎಂದು ವರ್ಷಾನುವರ್ಷಗಳಿಂದ ಕೂಗುಗಳು ಕೇಳುತ್ತಿದ್ದರೂ, ಆಸ್ಟ್ರೇಲಿಯದ ಪ್ರೆಸ್ ಕೌನ್ಸಿಲ್ ಹಾಗೆ ಕರೆಯಕೂಡದೆಂದು ವಿವರಣೆ ಹೊರಡಿಸಿದ್ದರೂ, ರೇಡಿಯೋ, ಟೀವಿ, ಪತ್ರಿಕೆಗಳಲ್ಲಿ ನಿರಾಶ್ರಿತರನ್ನು "illegal" ಎಂದೇ ಕರೆದು ಅವರ ಬಗ್ಗೆ ಅನುಮಾನ ಹುಟ್ಟಿ ಜರಿಯಲು ದಾರಿ ಮಾಡಿಕೊಡುತ್ತಿದ್ದಾರೆ.

ಇತ್ತ "ಸ್ವೈನ್ ಫ್ಲೂ" ಧುತ್ತೆಂದು ಎದುರಾಗಿದೆ. ಅಮೆರಿಕಾ, ಯೂರೋಪು, ಏಷಿಯಾದ ದೇಶಗಳ ಆರೋಗ್ಯ ಸವಲತ್ತುಗಳನ್ನು ತೀವ್ರ ಪರೀಕ್ಷೆಗೆ ಒಡ್ಡುವುದರಲ್ಲಿ ಅನುಮಾನವಿಲ್ಲದಂತಾಗಿದೆ. ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಬಹುದೆಂದು ಲೆಕ್ಕಾಚಾರ ಶುರುವಾಗಿದೆ. ಇದರಿಂದ ಈಗಾಗಲೇ ನಡುಗುತ್ತಿರುವ ದೇಶಗಳ ಆರ್ಥಿಕತೆಗೆ ಇನ್ನೆಷ್ಟು ಗುದ್ದು ಬೀಳಬಹುದೆಂದೂ ತಲೆಕೆರೆದುಕೊಳ್ಳುತ್ತಿದ್ದಾರೆ. ಸೀನಿದವರಿಂದ ದೂರಕ್ಕೆ ಮಾರುದ್ದ ಹಾರುವ, ಕೈಕುಲುಕಲು ಬಂದವರಿಗೆ ಕೈಚಾಚಲೂ ಅನುಮಾನಿಸುವ ಹೊತ್ತು ಇದು. ದಕ್ಷಿಣ ಭೂಖಂಡದ ಚಳಿಗಾಲದಲ್ಲಿ ಇದು ಮತ್ತೂ ಮಾರಣಾಂತಿಕ ಎಂಬುದು ಎಲ್ಲರ ದುಗುಡಕ್ಕೆ ಕಾರಣ.

ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಟನಡುಹಗಲು ಹತ್ತಿರವಾದರೂ ಮೋಡ ಮುಸುಕಿಯೇ ಇದ್ದು ಸೂರ್ಯನ ಇರವೇ ಅನುಮಾನ ಹುಟ್ಟಿಸುವಂತಿದೆ. ಯಾವ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಜೀವ ಮುಡಿಪಾಗಿಟ್ಟು ಯುದ್ಧಗಳಲ್ಲಿ ಕಾದಿದ್ದಾರೋ, ಅದೇ ಸರ್ಕಾರದ ವಿರುದ್ಧ ತಮ್ಮ ಹಕ್ಕಿಗಾಗಿ ಹಲವಾರು ವರ್ಷಗಳಿಂದ ಗೂರ್ಖಾಗಳು ಸೆಣಸುತ್ತಿದ್ದಾರೆ. ನೇಪಾಳದ ಗುಡ್ಡಗಾಡಿಂದ ಆಯ್ದ ಗೂರ್ಖಾ ರೆಜಿಮೆಂಟು ಈಗಲೂ ಬ್ರಿಟನ್ನಿನ ತುಕಡಿಗಳಲ್ಲೊಂದು. ಅವರಲ್ಲಿ ೧೯೯೭ರ ಮುನ್ನ ನಿವೃತ್ತರಾದ ಗೂರ್ಖಾ ಮಂದಿ ಬ್ರಿಟನ್ನಿನಲ್ಲಿ ತಳವೂರುವ ಹಾಗಿಲ್ಲ ಎಂದು ಸರ್ಕಾರ ಘೋಷಿಸಿತ್ತು, ಆದರೆ ಈಗ, ಆ ಘೋಷಣೆ ಬ್ರಿಟನ್ನಿನ ಸಂಸತ್ತಿನ ಓಟಿನಲ್ಲಿ ಸೋತ ಸುದ್ದಿ ಬಂದಿದೆ. ಗೂರ್ಖಾಗಳ ಮುಖದಲ್ಲಿ ತುಸು ನಗು ಅರಳಿದೆ. ಯುದ್ಧ ಪದಕಗಳು ಸೆಟೆದ ಎದೆಗಳ ಮೇಲೆ ಮತ್ತೆ ಹೊಳೆಯುತ್ತಿದೆ. ಒತ್ತಿ ಹಿಡಿದ ಖುಷಿಯೂ ನಗುವೂ ಅವರ ಸಂಯಮವನ್ನು ಧಿಕ್ಕರಿಸುತ್ತಿದೆ. ಆದರೂ ಗೂರ್ಖಾಗಳ ಹಕ್ಕಿನ ಹೋರಾಟವಿನ್ನೂ ಮುಗಿದಿಲ್ಲ. ಸರ್ಕಾರದ ಮುಂದಿನ ಅಡ್ಡಗಾಲು ಏನಿರಬಹುದೆಂಬ ಆತಂಕವಿದ್ದೇ ಇದೆ. ತನಗೆ ಬೇಕಾದಾಗ ಯುದ್ಧಸೇವೆಗೆ ಬಳಸಿಕೊಂಡು, ಬೇಡದಾಗ ಕೈತೊಳೆದುಕೊಳ್ಳುವ ಸರ್ಕಾರಗಳ ಇಂತಹ ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು ಕೇಳುವಂತಾಗುತ್ತದೆ.

ಮೋಡದ ಹಿಂದಿಂದ ತುಸುವೇ ಇಣುಕಿಹೋದ ಸೂರ್ಯ ತಾನಿದ್ದೇನೆ ಎಂದು ಖಾತರಿ ಮಾಡಲೋಸ್ಕರವೇ ಹಾಗೆ ಮಾಡಿದಂತಿತ್ತು. ಸೂರ್ಯನಿಗೆ ನಗುವುದಕ್ಕೂ ಅನುಮಾನವಿರುವಂತಿತ್ತು. ಅಂತಹ ಹೊತ್ತಿದು.

[ಚಿತ್ರಕೃಪೆ-abc.net]

ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು