ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಅಕ್ಕಿ ಕೊಳ್ಳುವ ಮಾತಿಗೆ    
ಸುದರ್ಶನ್
ಶುಕ್ರವಾರ, 8 ಮೇ 2009 (04:30 IST)
ತಮಿಳು ಬೆಂಬಲಿಗರ ಹೋರಾಟ

ಹೋದ ದಶಕದಲ್ಲಿ ಶ್ರೀಲಂಕಾದಿಂದ ನಿರಾಶ್ರಿತನಾಗಿ ಬಂದು ಸಿಡ್ನಿಯಲ್ಲಿ ಇವನು ಅಂಗಡಿಯಿಟ್ಟಿದ್ದಾನೆ. ಇವನ ಅಂಗಡಿಯಲ್ಲಿ ನಮಗೆ ಬೇಕಾದ್ದೆಲ್ಲವೂ ಸಿಗುತ್ತದೆ. ಏನನ್ನೂ ಇಲ್ಲ ಅನ್ನುವುದಿಲ್ಲವೆಂಬ ಅವನನ್ನು ನೋಡಿದರೆ ನಮ್ಮ ಮನೆ ಬೀದಿಯ ಮೂಲೆಯಲ್ಲಿದ್ದ ಪೆಟ್ಟಿಗೆ ಅಂಗಡಿ ನೆನಪಾಗುತ್ತದೆ. ಅಷ್ಟು ಪುಟ್ಟ ಅಂಗಡಿಯಲ್ಲಿ ಕೇಳಿದ್ದೆಲ್ಲಾ ಸಿಗುವುದು ಸೋಜಿಗವಾಗುತ್ತಿತ್ತು. ಇಲ್ಲೂ ಅಂತಹದೇ ಅಂಗಡಿ ಇರುವುದು ನೋಡಿ, ಎಲ್ಲ ಊರಲ್ಲೂ, ಎಲ್ಲ ಬಗೆಯ ಜನರ ನಡುವೆಯೂ ಇಂತಹ "ಕಾಮಧೇನು"ಗಳು ಇರುವುದು ಸೋಜಿಗವಾಗಬೇಕಿಲ್ಲ ಅನಿಸುತ್ತದೆ.

ಈ ಶ್ರೀಲಂಕಾದ ತಮಿಳಿನವನ ಜತೆ ಮಾತಾಡುತ್ತಿದ್ದರೆ ಅವನ ಪ್ರೀತಿ ಅಸಹನೆಯ ಹರಹು (ಸ್ಪೆಕ್‌ಟ್ರಂ) ತಿಳಿಯುತ್ತದೆ. ಇತ್ತೀಚೆಗೆ ಇಂಡಿಯಾದಿಂದ ಬೇಳೆ ಕಾಳು, ಅಕ್ಕಿಯ ಆಮದಿಗೆ ತಡೆಯಾಗಿತ್ತು. ಅಂಗಡಿಯಲ್ಲಿ ಅದರ ಬೆಲೆಗಳು ಏರುತ್ತಿದ್ದವು. ಆಗ ಥಾಯ್ಲಾಂಡಿನ ಅಕ್ಕಿ, ಪಾಕಿಸ್ತಾನದ ಅಕ್ಕಿಯತ್ತ ನಮ್ಮ ಕಣ್ಣು ಹಾಯತೊಡಗಿತು. ಅವುಗಳಲ್ಲಿ ಯಾವುದು ಚೆನ್ನಾಗಿರುತ್ತದೆ ಎಂದು ಅಂಗಡಿಯವನಿಗೆ ಗೊತ್ತಿರುತ್ತದೆ ಎಂಬುದು ನಮ್ಮ ಅಂದಾಜು. ಆದರೆ ಅವನ ಉತ್ತರದಲ್ಲಿ ಅಕ್ಕಿಯ ಬಗ್ಗೆಗಿಂತ ಬೇರೆಯೇ ಸಂಗತಿಗಳು ಗೋಚರವಾಗುತ್ತಿತ್ತು. "ಥಾಯ್ಲಾಂಡಿನ ಅಕ್ಕಿ ತಗೋಬೇಡಿ ನಮ್ಮ ಅಡುಗೆಗೆ ಅದು ಸರಿಹೋಗುವುದಿಲ್ಲ" ಎಂದು ನಿರಾಳವಾಗಿ ಹೇಳಿ ಬಿಡುತ್ತಿದ್ದ. ‘ಇಂಡಿಯಾದಿಂದ ಬರುವ "India Gate" ಅಥ್ವಾ "Camel brand" ಅಕ್ಕಿ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಲ್ಲಾ, ಪಾಕಿಸ್ತಾನದ ಅಕ್ಕಿ ಹೇಗೆ’ ಎಂದು ಕೇಳಿದೆ. ‘ಒಂದು ನಾಕು ಡಾಲರ್‍ ಜಾಸ್ತಿಯಾದರೂ ಇಂಡಿಯಾದ ಅಕ್ಕಿ ತಗೊಳ್ಳಿ, ಪಾಕಿಸ್ತಾನದ ಅಕ್ಕಿ ಯಾಕೆ ತಗೋತೀರ’ ಎಂದು ಮುಖ ಕಿವುಚುತ್ತಿದ್ದ. ಯಾಕೆಂದು ಹೇಳುತ್ತಿರಲಿಲ್ಲ. ತಾನು ಹೇಳದೇ ಅರ್ಥವಾಗುವ ಮಾತದು ಎಂಬಂತೆ ನೋಡುತ್ತಿದ್ದ. ಅಕ್ಕಿ ಹೇಗಿರುತ್ತದೆ ಎಂದು ಮಾತ್ರ ಹೇಳುತ್ತಿರಲಿಲ್ಲ. ಒಂದೊಮ್ಮೆ ಪರವಾಗಿಲ್ಲ ನೋಡೋಣ ಎಂದು ಪಾಕಿಸ್ತಾನದ ಅಕ್ಕಿಯೇ ಇರಲಿ ಅಂದಾಗ ನನಗೇನು, ಏನಾದರೂ ಮಾಡಿಕೊಳ್ಳಿ ಎಂಬಂತೆ ಮುಖ ಮಾಡಿ, ಭುಜ ಕುಣಿಸಿದ್ದ.

ಹಿಂದೊಮ್ಮೆ ಇವನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುದುಕನೊಬ್ಬ ಇದ್ದಕ್ಕಿದ್ದಂತೆ ಮಾಯವಾದ. ಆ ತಮಿಳು ಮುದುಕನಂತೂ ತುಂಬಾ ಸಿಡುಕಿನವ. ಅವನು ಇಲ್ಲದ್ದು ಸೋಜಿಗವಾದರೂ ಹೆಚ್ಚೇನೂ ಯಾರಿಗೂ ಬೇಸರವಾದಂತೆ ಕಾಣಲಿಲ್ಲ. ಅವನ ಬಗ್ಗೆ ಹಲವು ಗುಸುಗುಸುಗಳೂ ಇದ್ದವು. ಅವನಿಗೆ ವೀಸಾ ಇರಲಿಲ್ಲವಂತೆ - ಹಿಡಿದು ಒಳಗೆ ತಳ್ಳಿದ್ದಾರೆ ಎನ್ನುವುದರಿಂದ ಹಿಡಿದು, ಪೆನ್ಷನ್ ಈಸ್ಕೊಂಡು, ಇಲ್ಲಿ ಕೆಲಸ ಮಾಡ್ತಾ ಟ್ಯಾಕ್ಸ್ ಆಫೀಸಿನವರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಲವು ವರ್ಶನ್‌ಗಳಿದ್ದವು. ಯಾವುದು ನಿಜವೋ ಯಾರಿಗೆ ಗೊತ್ತು. ಅಂಗಡಿಯವ ಮಾತ್ರ ಏನೂ ಹೇಳದೆ ಬಾಯಿ ಬಿಗಿದುಕೊಂಡಿರುತ್ತಿದ್ದ. ಕೆಲಸ ಬಿಟ್ಟುಬಿಟ್ಟ, ಈಗ ಎಲ್ಲಿದ್ದಾನೋ ಗೊತ್ತಿಲ್ಲ ಎಂದಷ್ಟೇ ಅವನ ಹೇಳಿಕೆ. ಹೆಚ್ಚು ಕೆದಕಿದರೆ ಹೋಗಲಿ ಬಿಡಿ ನಮಗ್ಯಾಕೆ ಎಂದು ಹೇಳಿ ಮಾತು ತಿರುಗಿಸಿಬಿಡುತ್ತಿದ್ದ. ಆ ಮುದುಕನ ಜಾಗದಲ್ಲೀಗ ಪಟಪಟನೆ ಮಾತಾಡುವ, ತುಸು ಅಧಿಕಪ್ರಸಂಗ, ತುಸು ತಲೆಹರಟೆ ಮಾಡುತ್ತಾ ಒಟ್ಟಾರೆ ಗೆಲುವಾಗಿರುವ ಹೊಸ ತಲೆಮಾರಿನ ಶ್ರೀಲಂಕಾದ ಹುಡುಗ ಸೇರಿಕೊಂಡಿದ್ದಾನೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಗಂಭೀರವಾಗಿದ್ದರೂ ಮಾತಿಗೆ ನಗುತ್ತಲೇ ಉತ್ತರಿಸುತ್ತಾನೆ. ಒಳಹೊರಗೆ ಓಡಾಡಿಕೊಂಡು ಬೇರೆ ಬೇರೆ ಅಕ್ಕಿಗಳ ಬಗ್ಗೆ ಆಳವಾದ ಜ್ಞಾನವಿರುವವನಂತೆ ಭಾಷಣ ಬಿಗಿಯುವುದು ಕೇಳಿ ನಗುಬರುತ್ತದೆ. ಆ ಸಿಡುಕು ಮುದಕನಿಗಿಂತ ಈ ಹುಡುಗ ಸಾವಿರಪಾಲು ಪರವಾಗಿಲ್ಲ ಅನಿಸುತ್ತದೆ.

ಒಂದು ಭಾನುವಾರದ ಮಧ್ಯಾಹ್ನ ಹೆಚ್ಚು ಜನರಿಲ್ಲದ ಹೊತ್ತಲ್ಲಿ ಈ ಅಂಗಡಿಯ ತಮಿಳಿನವ ಮಾತಿಗೆ ಸಿಕ್ಕಿದ್ದ. ಹಲವು ದಿನಗಳಿಂದ ಗೊತ್ತಿದ್ದರೂ ಹೀಗೆ ಮಾತಿಗೆ ಸಿಕ್ಕಿರಲಿಲ್ಲ. ಈಗ ಮೂವತ್ತರ ನಡುವಿನಲ್ಲಿರುವ, ಸಣ್ಣ ಆಕೃತಿಯ ಅವನು ಶ್ರೀಲಂಕಾದಿಂದ ಹುಡುಗನಾಗಿ ಓಡಿ ಬಂದದ್ದು, ಈಗ ಎರಡು ಅಂಗಡಿ ನಡೆಸುತ್ತಿರುವುದು, ನಾಕಾರು ಜನರನ್ನು ಕೆಲಸಕ್ಕಿಟ್ಟುಕೊಂಡಿರುವುದು, ಇಂಡಿಯಾದಿಂದ ಅಮದು ಮಾಡಿಕೊಳ್ಳುವಾಗಿನ ಲಂಚಕೋರತನ ಹಾಗು ಕಷ್ಟ ಕೋಟಲೆಗಳು ಎಲ್ಲ ವಿವರಿಸಿದ. ಅವನು ಶ್ರೀಲಂಕಾದಿಂದ ತಪ್ಪಿಸಿಕೊಂಡು ಓಡಿದ ಬಗ್ಗೆ ಮಾತು ತಿರುಗಿದಾಗ ಅವನ ದನಿ ತಗ್ಗಿತು. ಅಂಗಡಿಯಲ್ಲಿ ಯಾರೂ ಇರಲಿಲ್ಲವಾದರೂ, ಆ ಸಂಗತಿಗೆ ಸರಿ ಹೊಂದುವಂತಹ ತಗ್ಗಿಸಿದ ದನಿ ಬೇಕೆಂಬಂತಿತ್ತು.

ತಮಿಳು ಬೆಂಬಲಿಗರ ಹೋರಾಟ"ಶ್ರೀಲಂಕಾದ ತಮಿಳರಿಗೆ ನಿಜವಾಗಿಯೂ ಯಾರೂ ಆಗಿಬಂದಿಲ್ಲ. ನಮ್ಮ ನುಡಿ, ಆಚಾರ-ವಿಚಾರಕ್ಕೆ ಅಡ್ಡಿ ಬರದಿದ್ದರೆ ಸಾಕಿತ್ತು. ಅಷ್ಟು ಸಣ್ಣ ವಿಷಯ ಕೇಳುವುದೂ ವಿಪರೀತ ಅಂದುಬಿಟ್ಟರೆ, ಆಗ ಬಂದ ಸಿಟ್ಟಲ್ಲಿ ವಿಪರೀತವಾಗಿ ಕೇಳುವುದು ಸಹಜವಾಗುತ್ತದೆ ಅಲ್ಲವೆ" ಅಂದ. "ಹಲವು ವರ್ಷಗಳಿಂದ ನಡೆಯುತ್ತಾ ಬಂದಿದ್ದ ಚಳವಳಿಯನ್ನು ಕ್ಯಾರೆ ಅಂದಿರಲಿಲ್ಲ. ಬಂದೂಕು ಕೈಗೆತ್ತಿಕೊಂಡಾಗ ಎಲ್ಲರೂ ನ್ಯಾಯ ಹೇಳುವವರೇ. ಶ್ರೀಲಂಕಾದ ಸೈನ್ಯದ ವಿಪರೀತಗಳು ಹೆಚ್ಚುತ್ತಾ ಹೋದಂತೆ, ತಮಿಳರ ಮನಸ್ಸೂ ಗಟ್ಟಿಯಾಗುತ್ತಾ ಹೋಯಿತು" ಅನ್ನುತ್ತಾನೆ. "ನಂತರ ಬಂದ ಇಂಡಿಯಾದ ಸೈನ್ಯ ತುಸುವಾದರೂ ಶಾಂತಿ ಮಾನ ಮರ್ಯಾದೆ ಕಾಪಾಡಬಹುದು ಅಂದುಕೊಂಡಿದ್ದ ನಾವು ಕಂಗೆಟ್ಟು ಅತ್ಯಂತ ನಿರಾಶರಾದೆವು. ಇಂಡಿಯಾದ ಸೈನಿಕರೇ ತಮಿಳರನ್ನು ಕೊಚ್ಚಿಹಾಕಿ, ಮನೆಗಳ ಒಳಗೆ ಬಾಂಬೆಸೆದು ಮಕ್ಕಳು ಮರಿಯೆನ್ನದೆ ಕೊಂದು ಅತ್ಯಂತ ಕ್ರೂರವಾಗಿ ನಡಕೊಂಡಿದ್ದರು. ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದನ್ನು ಕಣ್ಣಾರೆ ನೋಡಿದ್ದೇನೆ" ಎಂದಾಗ ಅವನ ಮನಸ್ಸಿನ ಆಳದ ಗೊಂದಲ ಧುತ್ತೆಂದು ಎದುರಾಯಿತು. ಎಷ್ಟಾದರೂ ಇಂಡಿಯಾದ ಅಕ್ಕಿಯನ್ನು ಕೊಳ್ಳಿ ಎಂದವನು ಇವನೇ ಅಲ್ಲವೆ ಅನಿಸಿದಾಗ ಹೊಳೆದದ್ದು : ಒಂದು ದೇಶದ ಜನರಿಗೂ ಅದರ ಸೈನ್ಯಕ್ಕೂ ಇರುವ ಅಜಗಜಾಂತರವನ್ನು ಇವನ ಸ್ವಂತ ಅನುಭವ ಕಲಿಸಿದೆ. ಆ ವ್ಯತ್ಯಾಸ ಅರ್ಥವಾಗಲು ಪಂಡಿತನಾಗಲೀ, ನಿಷ್ಣಾತನಾಗಲೀ, ವಿಜ್ಞಾನಿಯಾಗಲೀ ಆಗಬೇಕಿಲ್ಲ ಅಂತ. ಆದರೆ ಇವನ ಅದೇ ಅನುಭವದ ಬೆಳಕು ಪಾಕಿಸ್ತಾನದ ಕಣಿವೆಗಳಲ್ಲಿ ಅಕ್ಕಿ ಬೆಳೆಯುವ ಮಂದಿಯ ಬಗ್ಗೆಯೂ ವಿಸ್ತರಿಸಿಲ್ಲವಲ್ಲ, ಏಕಿರಬಹುದು ಎಂದು ಕೇಳಿಕೊಂಡೆ. ಸ್ವಂತ ಅನುಭವವನ್ನೂ ಅಲ್ಲಗಳೆಯಬಲ್ಲ, ಅದರ ಬೆಳಕಲ್ಲಿ ನೋಡಗೊಡದ ಪೂರ್ವನಿರ್ಧಾರಗಳು ಅದೆಷ್ಟು ಆಳ ಮತ್ತು ಗಟ್ಟಿ ಇರಬಹುದು ಎಂದು ಅಚ್ಚರಿಗೊಂಡೆ.

ತಮಿಳು ಹುಲಿಗಳ ಜತೆ ಸೇರಿದರೆ ಬದುಕಿಲ್ಲ ಎಂದು ಅರಿವಾಗಿ ಮದ್ರಾಸಿಗೆ ತಪ್ಪಿಸಿಕೊಂಡು ಬಂದನಂತೆ. ಅಲ್ಲಿಂದ ಆಸ್ಟ್ರೇಲಿಯಕ್ಕೆ ಬಂದು ನೆಲೆ ನಿಂತಿದ್ದೀನಿ ಎಂದು ನಿಟ್ಟುಸಿರುಬಿಟ್ಟು ಮಾತು ಮುಗಿಸಿದ. ಜನರಿಲ್ಲದ ಅಂಗಡಿಯಲ್ಲಿ ಅರ್ಧ ನಗುವಿನ ಅರ್ಧ ವಿಷಾದದ ಮುಖ ಹೊತ್ತು, ಕುರಚಲು ಗಡ್ಡದ, ಪುಟ್ಟ ಆಕೃತಿಯ ಅವನು ನೋಡುತ್ತಾ ನಿಂತುಬಿಟ್ಟ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ