ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್ ಬಹುಮಾನ ವಿಜೇತ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ ಹೆಚ್ಚಾಗಿ ಬಹಿರಂಗವಾಗಿ ಮಾತನಾಡಲು ಇಷ್ಟ ಪಡದವನು. ಆದರೆ, ಈ ಅಪರೂಪದ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ಆತ್ಮೀಯ ಗೆಳೆಯ, ಪತ್ರಕರ್ತ ಹಾಗೂ ಕಾದಂಬರಿಕಾರ, ಕೊಲಂಬಿಯಾ ಮೂಲದ ಪ್ಲಿನಿಯೋ ಅಪುಲೆಯೋ ಮೆಂಡೋಂಜ್ ಜೊತೆ ತನ್ನೆಲ್ಲಾ ವಿಚಾರಗಳನ್ನು,ಪರದಾಟಗಳನ್ನು, ನೆನಪುಗಳನ್ನು, ಗೀಳುಗಳನ್ನು ,ಕನಸುಗಳನ್ನು, ಹುಚ್ಚುಗಳನ್ನು ನಿರಂಬಳವಾಗಿ ತೆರೆದಿಟ್ಟಿದ್ದಾನೆ. ‘The Fragrance of Guava’ ಎಂಬ ಪುಸ್ತಕವಾಗಿ ಪ್ರಕಟವಾಗಿರುವ ಈ ಸಂದರ್ಶನದ ಇನ್ನೂ ಕೆಲವು ಸಾಲುಗಳು ಇಲ್ಲಿವೆ. ಇದರಲ್ಲಿ ಮಾರ್ಕ್ವೆಜ್ ಖ್ಯಾತಿ ಮತ್ತು ಗೆಳೆತನದ ಕುರಿತು ಮಾತನಾಡಿದ್ದಾನೆ. ಈ ಮಾತುಕತೆಯನ್ನು ಕನ್ನಡಕ್ಕೆ ತಂದಿದ್ದಾರೆ ಉಮಾರಾವ್.
ಪ್ಲೀನಿಯೋ ಅಪುಲೆಯೋ ಮೆಂಡೋಂಜಾ: ಈಗ ನಾವು ಮಾತಾಡುವ ವಿಷಯ ನಿನಗೆ ಸ್ವಲ್ಪ ಮುಜುಗರ ಉಂಟು ಮಾಡಬಹುದು. ನೀನು ಇಷ್ಟೊಂದು ಪ್ರಖ್ಯಾತನಾದ ಮೇಲೆ ಆಗಿರುವ ಗೆಳೆತನಗಳು ಮೊದಲಿನವುಗಳಷ್ಟೇ ನಿಕಟವಾದುವು ಎಂದು ನಿನಗನ್ನಿಸುತ್ತದೆಯೇ? ನಿಜವಾಗಿ ಆಪ್ತರಾಗಿರುವವರು ಮತ್ತು ಕೇವಲ ನಿನ್ನ ಖ್ಯಾತಿಯ ವರ್ಚಸ್ಸಿನಿಂದ ಆಕರ್ಷಿತರಾಗಿರುವವರ ನಡುವೆ ನಿನಗೆ ವ್ಯತ್ಯಾಸ ಗೊತ್ತಾಗುತ್ತದೆಯೇ?
ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್: ತುಂಬಾ ವರ್ಷಗಳು ನಾನು ನನ್ನ ಗೆಳೆಯರನ್ನು ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಗಿಂತ ಮೊದಲಿನವರು ಮತ್ತು ನಂತರದವರೆಂದು ಒಂದು ರೀತಿ ವಿಭಜನೆ ಮಾಡಿಕೊಂಡಿದ್ದೆ. ನನಗನ್ನಿಸುತ್ತಿದ್ದುದೇನೆಂದರೆ ಮೊದಲಿನವರು ನನ್ನ ಗೆಳೆಯರಾಗಿದ್ದು ನನ್ನ ಖ್ಯಾತಿಯ ಕಾರಣದಿಂದಲ್ಲ, ಬೇರೆ ಬೇರೆ ಕಾರಣಗಳಿಗಾಗಿ. ಆದ್ದರಿಂದ ಅವರು ಹೆಚ್ಚು ನಂಬಲರ್ಹವಾದವರು ಎಂದು. ಆದರೆ ವರ್ಷಗಳು ಕಳೆದಂತೆ ಇದು ತಪ್ಪು ಎಂದು ಗೊತ್ತಾಗುತ್ತಿದೆ. ಒಂದು ಆತ್ಮೀಯ ಗೆಳೆತನ ಬೆಳೆಯಲು ಹಲವಾರು ಅರ್ಥೈಸಲಾಗದ ಕಾರಣಗಳಿರುತ್ತವೆ. ಅದರಲ್ಲಿ ಖ್ಯಾತಿಯ ಆಕರ್ಷಣೆಯೂ ಬೇರೆ ಕಾರಣಗಳಷ್ಟೇ ಗಟ್ಟಿಯಾದದ್ದು. ಖ್ಯಾತಿ ಎರಡು ರೀತಿ ಕೆಲಸ ಮಾಡಬಲ್ಲದು. ನನಗೂ ಕೂಡಾ ಮೊದಲು ಸಾಧ್ಯವೇ ಇಲ್ಲದಿದ್ದ ಅನೇಕ ಪ್ರಖ್ಯಾತ ವ್ಯಕ್ತಿಗಳ ಭೇಟಿ ಈಗ ಸಾಧ್ಯವಾಗಿದೆ. ಅದಕ್ಕೆ ಕಾರಣ ಅವರೂ ಖ್ಯಾತರು ಎನ್ನುವುದೊಂದೇ ಹೊರತು ಬೇರಾವುದೂ ಅಲ್ಲ. ನಂತರ ನಾವು ಆಪ್ತರಾಗಿದ್ದು ನನ್ನ ಅಥವಾ ಅವರ ಖ್ಯಾತಿಗೆ ಸಂಬಂಧವೇ ಪಡದ ಯಾವುದೋ ಒಂದು ನಂಟಿನಿಂದ. ಈ ವಿಷಯದಲ್ಲಿ ಖ್ಯಾತಿ ಒಂದು ಸಕಾರಾತ್ಮಕ ಗುಣ. ಯಾವುದೇ ರೀತಿಯಲ್ಲಿ ಸಾಧ್ಯವೇ ಆಗುತ್ತಿರಲಿಲ್ಲವಾದ ಸಂಬಂಧಗಳನ್ನು ಬೆಳೆಸಲು ಇದು ಮೌಲಿಕ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ. ಏನೇ ಆಗಲಿ, ನನ್ನ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನಂತರದ ಗೆಳೆಯರೊಂದಿಗೆ ಎಷ್ಟೇ ಆತ್ಮೀಯತೆಯಿದ್ದರೂ, ನನ್ನ ಹಳೆಯ ಗೆಳೆಯರು ಬೇರೆಯೇ ಒಂದು ರೀತಿಯ ಗುಂಪಿಗೆ ಸೇರಿದವರು. ಇದು ನಾವೆಲ್ಲಾ ಹಂಚಿಕೊಂಡಿರುವ ಉತ್ಕಟ ನೆನಪುಗಳು ಒಟ್ಟಾಗಿ ಎಂದೂ ಒಡೆಯದಂತೆ ಕಟ್ಟಿರುವ ಒಂದು ರಹಸ್ಯ ಸಮುದಾಯದಂತೆ .
ಮೆಂ: ನಿನ್ನ ಖ್ಯಾತಿ ಅವರೆಲ್ಲರ ಜೊತೆ ನಿನ್ನ ಸಂಬಂಧವನ್ನು ಬದಲಾಯಿಸಿಲ್ಲವೇ? ಒಂದು ವಿಷಯದ ಬಗ್ಗೆ ನನಗೆ ನೆನಪಿದೆ. ಮೊದಲು ನೀನು ಬರೆಯುತ್ತಿದ್ದಂತೆ ಈಗ ಪತ್ರಗಳನ್ನು ಬರೆಯುವುದಿಲ್ಲ.
ಮಾ: ನಿಜ. ನನಗೆ ಮೊದಲು ಜನರಲ್ಲಿ ಇದ್ದ ಮುಗ್ಧ ನಂಬಿಕೆ ಹೊರಟುಹೋಗಿದೆ. ಏಕೆಂದರೆ ಬದುಕು ನಿಧಾನವಾಗಿ ನಿಮ್ಮ ಮುಗ್ಧತೆಯನ್ನು ಕರಗಿಸಿಬಿಡುತ್ತದೆ. ನಾನು ಸುಮಾರು ೧೨ ವರ್ಷಗಳಿಂದ ಪತ್ರ ಬರೆದಿಲ್ಲ. ಅದಕ್ಕೆ ಕಾರಣವೆಂದರೆ ನನ್ನ ಖಾಸಗಿ ಪತ್ರಗಳನ್ನು ಒಬ್ಬರು ಒಂದು ಅಮೆರಿಕಾ ಯೂನಿವೆರ್ಸಿಟಿಯ ಆರ್ಕೈವ್ಸ್ ಗೆ ಮರಾಟ ಮಾಡಿದ್ದು ನನಗೆ ಆಕಸ್ಮಿಕವಾಗಿ
ತಿಳಿದು ಬಂತು. ಹಾಗಾಗಿ ನಾನು ಈಗ ಬರೀ ನನ್ನ ಸ್ನೇಹಿತರಿಗೇ ಅಲ್ಲ , ಯಾರಿಗೂ ಪತ್ರ ಬರೆಯುವುದಿಲ್ಲ. ನನ್ನ ಪತ್ರಗಳು ಕೂಡ ಮಾರಾಟದ ಸರಕು ಎಂಬ ಅಂಶ ಮನಗಂಡಾಗ ಬಹಳ ಖಿನ್ನನಾಗಿಬಿಟ್ಟೆ. ಅದಾದಮೇಲೆ ನಾನು ಒಂದು ಪತ್ರವನ್ನೂ ಬರೆಯಲಿಲ್ಲ.
ಮೆಂ: ಈಗ ಸ್ನೇಹಿತರಿಗೆ ಬರೀ ಫೋನ್ ಮಾಡುತ್ತೀಯಾ?
ಮಾ: ಇಲ್ಲದಿದ್ದರೆ ಅವರನ್ನು ಭೇಟಿಯಾಗಲು ಹುಚ್ಚುಚ್ಚಾಗಿ ಹಣ ಸುರಿದು ಪ್ರಪಂಚದ ಇನ್ನೊಂದು ಮೂಲೆಗೆ ಪ್ರಯಾಣ ಮಾಡುತ್ತೇನೆ. ನಾನು ಅವರನ್ನು ಎಷ್ಟು ಮೆಚ್ಚುತ್ತೇನೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ.
ಮೆಂ: ನಿನ್ನ ಇತ್ತೀಚಿನ ಗೆಳೆಯರಲ್ಲಿ ಕೆಲವು ದೇಶಗಳ ನಾಯಕರೂ ಇದ್ದಾರೆ. ನನಗೆ ತಿಳಿದಿರುವಂತೆ ಅವರಲ್ಲಿ ಕೆಲವರು ನಿನ್ನ ಅಭಿಪ್ರಾಯಗಳಿಗೆ ಕಿವಿ ಗೊಡುತ್ತಾರೆ, ಸಲಹೆ ಕೇಳುತ್ತಾರೆ. ನಿನ್ನಲ್ಲಿ ಒಬ್ಬ ರಾಜಕಾರಣಿಯೂ ಇದ್ದಾನಲ್ಲವೇ? ಅಥವಾ ಅದು ಅಧಿಕಾರದ ಬಗ್ಗೆ ನಿನಗಿರುವ ರಹಸ್ಯ ಆಕರ್ಷಣೆಯಿರಬಹುದೇ?
ಮಾ: ಇಲ್ಲ. ನನಗೆ ಬದುಕಿನ ಬಗ್ಗೆ ಹೇಳಲಾರದಷ್ಟು ಉತ್ಸಾಹವಿದೆ. ಅದರಲ್ಲಿ ರಾಜಕೀಯವೂ ಒಂದು ಮಗ್ಗಲು. ಅದು ನಾನು ಎಲ್ಲಕ್ಕಿಂತಾ ಹೆಚ್ಚು ಇಷ್ಟ ಪಡುವ ಅಂಶವೇನಲ್ಲ. ಲ್ಯಾಟಿನ್ ಅಮೆರಿಕಾಗಿಂತ ಕಡಿಮೆ ರಾಜಕೀಯ ಸಮಸ್ಯೆಗಳಿರುವ ದೇಶದಲ್ಲಿ ನಾನೇನಾದರೂ ಹುಟ್ಟಿದ್ದರೆ, ನನಗೆ ರಾಜಕೀಯದಲ್ಲಿ ಆಸಕ್ತಿ ಇರುತ್ತಿತ್ತೇ ಎನ್ನುವುದೇ ಅನುಮಾನ. ಸುತ್ತಮುತ್ತಲಿನ ಆಗುಹೋಗುಗಳಿಂದ ನಾನು ರಾಜಕೀಯ ಚಟುವಟಿಕೆಯಲ್ಲಿ ತಳ್ಳಲಟ್ಟಿದ್ದೇನೆ ಎಂದು ನನಗನ್ನಿಸುತ್ತಿದೆ. ನಿನಗೆ ಗೊತ್ತೇ ಇರುವಂತೆ, ನನ್ನ ವಯ್ಯಕ್ತಿಕ ಪೊಲಿಟಿಕಲ್ ಛಾಯ್ಸ್ ಬಗ್ಗೆ ಮಾತಾಡುವುದಾದರೆ ನನಗೂ ಒಂದು ಪೊಲಿಟಿಕಲ್ ಕಮಿಟ್ ಮೆಂಟ್ ಇದೆ. ಅದು ಸೋಶಿಯಲಿಸ್ಮ್ ಗೆ. ನನಗೆ ಅನ್ನಿಸುವುದು ಇಡೀ ಜಗತ್ತು ಸೋಶಿಯಲಿಸ್ಟ್ ಆಗಿರಬೇಕು. ಇವತ್ತಲ್ಲ ನಾಳೆ ಅದು ಆಗೇ ತೀರುವುದೆಂಬುದು ನನ್ನ ನಂಬಿಕೆ. ಆದರೆ ಲ್ಯಾಟಿನ್ ಅಮೆರಿಕಾದ ಕಮಿಟೆಡ್ ಲಿಟೆರೇಚರ್ ಎಂದು ಕರೆಯಲ್ಪಡುವ ಸಾಹಿತ್ಯದ ಬಗ್ಗೆ, ಅದೂ ಖಚಿತವಾಗಿ ಹೇಳುವುದಾದರೆ ನೊವೆಲ್ ಆಫ್ ಸೋಶಿಯಲ್ ಪ್ರೊಟೆಸ್ಟ್ ಬಗ್ಗೆ ನನಗೆ ಸ್ವಲ್ಪ ಅನುಮಾನಗಳಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದು ಜಗತ್ತಿನ ಬಗ್ಗೆ ಮತ್ತು ಬದುಕಿನ ಬಗ್ಗೆ ಕೊಡುವ ಸೀಮಿತ ದರ್ಶನದಿಂದ ರಾಜಕೀಯ ಕ್ಷೇತ್ರದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದು ಜಾಗೃತಿಯನ್ನು ಉಂಟುಮಾಡುವ ಕ್ರಿಯೆಯನ್ನು ಚುರುಕುಗೊಳಿಸುವ ಬದಲು ವಾಸ್ತವವಾಗಿ ಅದನ್ನು ನಿಧಾನಗೊಳಿಸುತ್ತದೆ.
ಲ್ಯಾಟಿನ್ ಅಮೆರಿಕನ್ನರು ತಮಗಾಗಲೇ ಚೆನ್ನಾಗಿ ತಿಳಿದಿರುವ, ಸುತ್ತಲೂ ನಡೆಯುತ್ತಿರುವ ಶೋಷಣೆ ಮತ್ತು ಅನ್ಯಾಯಗಳನ್ನು ಬಹಿರಂಗ ಪಡಿಸುವುದಕ್ಕಿಂತ ಹೆಚ್ಚಾದ್ದನ್ನು ಒಂದು ಕಾದಂಬರಿಯಿಂದ ನಿರೀಕ್ಷಿಸುತ್ತಾರೆ. ಎಷ್ಟೋ ಜನ ನನ್ನ ತೀವ್ರವಾದಿ ಗೆಳೆಯರು ಏನು ಬರೆಯಬೇಕು, ಏನು ಬರೆಯಬಾರದು ಎನ್ನುವುದನ್ನು ಲೇಖಕರಿಗೆ ಆದೇಶಿಸುವ ಅವಶ್ಯಕತೆಯ ಬಗ್ಗೆ ಮತ್ತೆಮತ್ತೆ ಒತ್ತು ಕೊಡುತ್ತಾರೆ. ಬಹುಶಃ ಈ ರೀತಿಯ ನಿಲುವನ್ನು ತೆಗೆದುಕೊಳ್ಳುವುದರಿಂದ ಲೇಖಕರ ಸೃಜನಶೀಲತೆಯ ಸ್ವಾತಂತ್ರ್ಯದ ಮೇಲೇ ಕಟ್ಟುಪಾಡುಗಳನ್ನು ಹೇರುತ್ತಾರೆ. ನನ್ನ ಪ್ರಕಾರ ಪ್ರೇಮದ ಬಗ್ಗೆ ಬರೆದ ಕಾದಂಬರಿಯೂ ಬೇರೆಲ್ಲಾ ಕಾದಂಬರಿಗಳಷ್ಟೇ ಮುಖ್ಯವಾದದ್ದು. ಒಟ್ಟಿನಲ್ಲಿ ಹೇಳಬೇಕಾದರೆ, ಒಬ್ಬ ಲೇಖಕನ ಕರ್ತವ್ಯ ಚೆನ್ನಾಗಿ ಬರೆಯುವುದಷ್ಟೆ.
ಮೆಂ: ಫಿಡೆಲ್ ಕ್ಯಾಸ್ಟ್ರೋ ನಿನ್ನ ಸ್ನೇಹಿತ. ಅವನೊಡನೆ ನಿನ್ನ ಸ್ನೇಹದ ಬಗ್ಗೆ ಏನು ಹೇಳುತ್ತೀಯಾ? ಈ ಗೆಳೆತನದಲ್ಲಿ ನಿನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ನಿಮ್ಮಿಬ್ಬರ ರಾಜಕೀಯ ಒಲವುಗಳೇ ಅಥವಾ ಅವನೂ ನಿನ್ನಂತೆಯೇ ಕೆರಿಬಿಯನ್ ಎಂಬ ಸಂಗತಿಯೇ?
ಮಾ: ಫಿಡೆಲ್ ಕ್ಯಾಸ್ಟ್ರೋ ಜೊತೆ ನನ್ನ ಅತ್ಮೀಯ ಗೆಳೆತನ ಪ್ರಾರಂಭವಾದದ್ದು ಸಾಹಿತ್ಯದ ಮೂಲಕ. ನಾನು, ನೀನು ೧೯೬೦ ರಲ್ಲಿ ಪ್ರೆನ್ಸ್ ಲ್ಯಾಟಿನಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಅವನ ಪರಿಚಯವಾಗಿತ್ತು. ಆದರೆ ನನಗೆ ಆಗ ನಮ್ಮಿಬ್ಬರ ನಡುವೆ ಏನೂ ಕಾಮನ್ ಆದದ್ದಿದೆ ಅನ್ನಿಸಿರಲಿಲ್ಲ. ನಂತರ ನಾನು ತುಂಬಾ ಫೇಮಸ್ ಆಗಿ, ಅವನೂ ಜಗತ್ತಿನಲ್ಲಿ ಅತಿ ಪ್ರಸಿದ್ಧ ರಾಜಕಾರಣಿಯಾದಮೇಲೆ ನಾವು ಬಹಳ ಸಲ ಭೇಟಿಯಾಗಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಗೌರವ, ವಿಶ್ವಾಸ ಇದ್ದರೂ ನನಗೆಂದೂ ನಮ್ಮ ಸಂಬಂಧದಲ್ಲಿ ರಾಜಕೀಯ ಒಲವುಗಳನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಾದ್ದು ಏನಾದರೂ ಸಾಧ್ಯವಿದೆ ಅನ್ನಿಸಿರಲಿಲ್ಲ. ಆದರೆ, ಸುಮಾರು ಆರು ವರ್ಷಗಳ ಹಿಂದೆ ಒಂದು ಬೆಳಗಿನ ಜಾವ ನಾವಿಬ್ಬರೂ ಒಟ್ಟಿಗಿದ್ದಾಗ ತನಗೆ ತುಂಬಾ ಓದುವುದು ಬಾಕಿಯಿದೆಯೆಂದೂ , ಅದಕ್ಕಾಗಿ ಮನೆಗೆ ಹೋಗಬೇಕೆಂದೂ ಹೇಳಿದ. ಆ ಕೆಲಸ ತುಂಬಾ ಬೋರಿಂಗ್ ಮತ್ತು ಟಯರಿಂಗ್ ಆಗಿದ್ದರೂ ಅದನ್ನು ಮುಗಿಸಲೇ ಬೇಕಾಗಿರುವುದಾಗಿ ಹೇಳಿದ. ಆ ಕಿರಿಕಿರಿಯನ್ನು ಕಡಿಮೆ ಮಾಡಲು ಯಾವುದಾದರೂ ಲೈಟ್ ಆಗಿರುವ ಆದರೆ ಒಳ್ಳೆ ಗುಣಮಟ್ಟವಿರುವ ಪುಸ್ತಕ ಓದಲು ನಾನು ಅವನಿಗೆ ಹೇಳಿದೆ. ನಾನು ಕೆಲವು ಉದಾಹರಣೆಗಳನ್ನು ಕೊಟ್ಟಾಗ ನನಗೆ ಆಶ್ಚರ್ಯವಾಗಿದ್ದೇನೆಂದರೆ ಅವನು ನಾನು ಹೇಳಿದ ಕೃತಿಗಳನ್ನೆಲ್ಲಾ ಓದಿದ್ದೇ ಅಲ್ಲದೆ ಚೆನ್ನಾಗಿ ಗ್ರಹಿಸಿದ್ದ. ಆ ರಾತ್ರಿ ನನಗೆ ಫಿಡೆಲ್ ಕ್ಯಾಸ್ಟ್ರೋ ಎಲ್ಲಾ ಕಾಲದ ಅಷ್ಟೊಂದು ಪುಸ್ತಕಗಳನ್ನು ಓದಿದ್ದಾನೆ, ಅವನಿಗೆ ಒಳ್ಳೆಯ ಸಾಹಿತ್ಯವೆಂದರೆ ಪ್ರಾಣ, ಅಲ್ಲದೆ ಅವನು ಸಾಹಿತ್ಯದ ಗಂಭೀರ ಕನೋಷರ್ ಎಂಬ ವಿಷಯ ತಿಯಿತು. ಅದು ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಎಂಥಾ ಕಠಿಣ ಸಮಯದಲ್ಲೂ, ಅಕಸ್ಮಾತ್ ಯಾವಾಗಲೋ ಎದುರಾಗಬಹುದಾದ ಒಂದು ಅನಿಶ್ಚಿತ ಕ್ಷಣವನ್ನು ತುಂಬಲು ಅವನ ಜೊತೆ ಒಂದು ಒಳ್ಳೆಯ ಪುಸ್ತಕ ಇದ್ದೇ ಇರುತ್ತದೆ. ಅಂದು ನಾನವನಿಗೆ ಗುಡ್ ನೈಟ್ ಹೇಳಿದಾಗ ಅವನಿಗೊಂದು ಪುಸ್ತಕ ಕೊಟ್ಟೆ. ಮಾರನೆಯ ದಿನ ಹನ್ನೆರಡು ಗಂಟೆಗೆ ಅವನನ್ನು ಭೇಟಿಯಾದಾಗ, ಅವನಾಗಲೇ ಅದನ್ನು ಓದಿ ಮುಗಿಸಿದ್ದ. ಅವನೆಂಥಾ ಶ್ರದ್ಧೆಯ ಓದುಗನೆಂದರೆ, ನೈಜ ಘಟನೆಗಳ ಬಗ್ಗೆ ಯಾರಿಗೂ ಕಣ್ಣಿಗೆ ಬೀಳದ ತಪ್ಪುಗಳನ್ನು, ವೈರುಧ್ಯಗಳನ್ನು ಕಂಡುಹಿಡಿಯುತ್ತಾನೆ. ಅವನು ನನ್ನ ‘ದ ಟೇಲ್ ಆಫ್ ಎ ಶಿಪ್ ರೆಕ್ಡ್ ಸೇಲರ್’ ಓದಿದ ಮೇಲೆ ಕೇವಲ ಅದರಲ್ಲಿರುವ ಒಂದು ತಪ್ಪನ್ನು ತಿಳಿಸಲು ನನ್ನ ಹೋಟೆಲ್ಲಿಗೆ ಬಂದ. ದೋಣಿಯ ವೇಗ ನೀನು ಲೆಕ್ಕ ಹಾಕಿರುವುದು ತಪ್ಪು, ಅದರ ಪ್ರಕಾರ ಅದು ನೀನು ಹೇಳಿರುವ ವೇಳೆಗೆ ತಲುಪಲು ಸಾಧ್ಯವಿಲ್ಲ ಎಂದು ವಿವರಿಸಿದ. ಅವನು ಹೇಳಿದ್ದು ಸರಿಯಾಗಿತ್ತು. ಹಾಗಾಗಿ ಕ್ರಾನಿಕಲ್ ಅಫ್ ಅ ಡೆತ್ ಫೋರ್ಟೊಲ್ಡ್ ಪ್ರಕಟಣೆಗೆ ಕೊಡುವ ಮೊದಲೇ ಅವನ ಹತ್ತಿರ ಹಸ್ತಪ್ರತಿ ತಗೊಂಡು ಹೋದೆ. ಹಂಟಿಂಗ್ ರೈಫಲ್ ನ ಅಳತೆಯಲ್ಲಿ ಇದ್ದ ತಪ್ಪೊಂದನ್ನು ಅವನು ತೋರಿಸಿದ. ಅವನಿಗೆ ಸಾಹಿತ್ಯದ ಜಗತ್ತು ನಿಜವಾಗಿ ಇಷ್ಟ ಎಂಬ ಭಾವನೆ ಬರುತ್ತದೆ, ಅದರಲ್ಲಿ ಅವನು ನಿರಾಳವಾಗಿ ಇರಬಲ್ಲ, ಅವನು ಬರೆಯುವ ಹಲವಾರು ಭಾಷಣಗಳ ಶೈಲಿಯ ಬಗ್ಗೆಯೂ ತುಂಬಾ ಶ್ರಮ ವಹಿಸುತ್ತಾನೆ ಅನ್ನಿಸುತ್ತದೆ. ಮುಂದಿನ ಜನ್ಮದಲ್ಲಿ ನನಗೆ ಲೇಖಕನಾಗಬೇಕೆಂದು ಆಸೆ ಎಂದು ಒಂದು ಸಲ ನನಗೆ ಅವನು ಹೇಳಿದಾಗ ಅವನ ದನಿಯಲ್ಲಿ ವಿಷಣ್ಣತೆಯ ಛಾಯೆ ಇತ್ತು.
ಮೆಂ: ಒಂದು ಸಲ ನೀನು ಎರಡನೇ ಪೋಪ್ ಜಾನ್ ಪಾಲ್ ರನ್ನು ಭೇಟಿಯಾಗಿದ್ದೆ. ಅದರ ಕಾರಣ?
ಮಾ: ಲ್ಯಾಟಿನ್ ಅಮೆರಿಕಾದಲ್ಲಿ ಕೆಲವು ಮಾನವ ಹಕ್ಕುಗಳ ಪ್ರಚಾರಕಾರ್ಯಗಳಲ್ಲಿ ಸಹಾಯ ಕೇಳಲು ನಾನವರನ್ನು ಭೇಟಿ ಮಾಡಿದ್ದು. ಆದರೆ ಅವರಿಗೆ ಕೇವಲ ಪೂರ್ವ ಯೂರೋಪಿನಲ್ಲಿ ನಡೆಯುತ್ತಿದ್ದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಮಾತ್ರ ಆಸಕ್ತಿ ಇದ್ದಂತಿತ್ತು. ಆದರೆ, ಕೆಲವು ವಾರಗಳ ನಂತರ ಅವರು ಮೆಕ್ಸಿಕೋಗೆ ಹೋದಾಗ , ಮೊದಲ ಬಾರಿ ತೃತೀಯ ಜಗತ್ತಿನ
ಬಡತನವನ್ನು ಕಂಡಿದ್ದರು. ಆಗ ಅವರಿಗೆ ಇದುವರೆಗೂ ಪರಿಚಯವಿಲ್ಲದಿದ್ದ ಮಾನವ ಕುಲದ ಇನ್ನೊಂದು ಮಗ್ಗಲು ಕಂಡಿತು ಎಂದು ನನಗನ್ನಿಸುತ್ತದೆ. ನಾನು ಅವರ ಜೊತೆ ಇದ್ದಿದ್ದು ಕೇವಲ ಕಾಲು ಗಂಟೆ. ಅವರು ಮೆಕ್ಸಿಕೋಗೆ ಹೋಗುವ ಮುಂಚೆ ಸ್ವಲ್ಪ ಅಭ್ಯಾಸವಾಗಲೆಂದು ಬಯಸಿದ್ದರಿಂದ ನಾವು ಸ್ಪ್ಯಾನಿಶ್ ನಲ್ಲೇ ಮಾತಾಡಿದೆವು. ಅವರು ನನ್ನನ್ನು ಬೀಳ್ಕೊಟ್ಟಾಗ ನಾನು ಯಾರೆಂದು ಒಂದು ಚೂರೂ ಅರಿವೇ ಇಲ್ಲದ ನೆಮ್ಮದಿಯ ಮುದ್ರೆ ಅವರ ಮುಖದ ಮೇಲೆ ಹರಡಿತ್ತು.
ಮೆಂ: ಒಂದು ಸಲ ನೀನು ಪ್ಯಾರಿಸ್ಸಿನ ರೆಸ್ಟೊರಾ ಒಂದರಲ್ಲಿ ಮಾರ್ಗೋ ಹೆಮಿಂಗ್ವೇ ಜೊತೆ ಊಟ ಮಾಡುತ್ತಿರುವುದನ್ನು ನಾನು ನೋಡಿದೆ. ನೀನು ಅವಳ ಜೊತೆ ಮಾತಾಡುವಂಥಾ ವಿಷಯಗಳು ಏನಿವೆ?
ಮಾ: ಅವಳು ತನ್ನ ಅಜ್ಜನ ಬಗ್ಗೆ ತುಂಬಾ ವಿಷಯಗಳನ್ನು ಹೇಳುತ್ತಾಳೆ, ನಾನು ನನ್ನ ಅಜ್ಜನ ಬಗ್ಗೆ ಅವಳಿಗೆ ಹೇಳುತ್ತೇನೆ.
ಮೆಂ: ನಿನ್ನ ಬದುಕಿನಲ್ಲಿ ಬಂದಿರುವ ಅತ್ಯಂತ ಸ್ವಾರಸ್ಯಕರ ವ್ಯಕ್ತಿ ಯಾರು?
ಮಾ: ನನ್ನ ಹೆಂಡತಿ ಮರ್ಸಡೀಜ್.
[ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಜೊತೆ ಪ್ಲಿನಿಯೋ ಅಪುಲೆಯೋ ಮೆಂಡೋಂಜಾ ಮಾತುಕತೆಯ ಭಾಗಗಳು. ‘ದ ಫ್ರೇಗ್ರೆನ್ಸ್ ಆಫ್ ಗ್ವಾವಾ’ ಪುಸ್ತಕದಿಂದ.]
ಕನ್ನಡಕ್ಕೆ: ಉಮಾ ರಾವ್
[ಮಾರ್ಕ್ವೆಜ್ ಸಂದರ್ಶನ-ಮೊದಲ ಕಂತು]
[ಮಾರ್ಕ್ವೆಜ್ ಸಂದರ್ಶನ-ಎರಡನೇ ಕಂತು]
[ಮಾರ್ಕ್ವೆಜ್ ಸಂದರ್ಶನ-ಮೂರನೆಯ ಕಂತು]