ಬುದ್ಧಿವಂತರೆಂದರೆ ಯಾರು?
ಒಂದು ನಾಲೆಜ್ ಫ್ಯಾಕ್ಟರಿಯಲ್ಲಿ ಅಂದರೆ ಸ್ಕೂಲಿನಲ್ಲಿ ಒಬ್ಬ ನಾಲೆಜ್ ವರ್ಕರ್ ಅಂದರೆ ಒಬ್ಬ ಟೀಚರ್, ನಾಲೆಜ್ ಕ್ಲಯಂಟ್ಸ್ ಅನ್ನು ಅಂದರೆ ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಕರೆದರು. ‘ಮಕ್ಕಳೇ ನಿಮಗೆ ಕಪ್ಪೆಯನ್ನು ಬೇಯುಸುವುದು ಗೊತ್ತೇ?’ ಎಂದು ಕೇಳಿದರು. ಮಕ್ಕಳು ‘ಓಹೋ ಗೊತ್ತು’ ಎಂದರು ಒಕ್ಕೊರಲಿನಿಂದ.
ಒಂದು ಪೆಕರು ಹುಡುಗಿ ಮಾತ್ರ ‘ಕಪ್ಪೆಯನ್ನು ಯಾಕೆ ಬೇಯಿಸಬೇಕು ಟೀಚರ್’ ಎಂದು ಮುದ್ದು ಮುದ್ದಾಗಿ ಕೇಳಿತು. ಟೀಚರ್ ಮುಖ ಕೆಂಪಾಯಿತು. ಅವರು ಕಿಡಿ ಕಾರುತ್ತಾ ಅಡ್ಮಿನಿಸ್ಟ್ರೇಟಿವ್ ಹೆಲ್ಪಿಂಗ್ ಆಫೀಸರನ್ನು ಅಂದರೆ ಅಟೆಂಡರನ್ನು ಕರೆದು ತಕ್ಷಣ ಆ ಹುಡುಗಿಯನ್ನು ಛೀಫ್ ನಾನ್ ಟೀಚಿಂಗ್ ಎಕ್ಸಿಕ್ಯೂಟಿವ್ ಅಂದರೆ ಹೆಡ್ ಮಿಸ್ಟ್ರೆಸ್ ಬಳಿಗೆ ಕಳಿಸಿಬಿಟ್ಟರು. ಪ್ರಾಮಾಣಿಕತೆ, ನಿಷ್ಪಕ್ಷಪಾತತೆ ಮತ್ತು ಕರ್ತವ್ಯನಿಷ್ಠೆಗೆ ಹೆಸರಾದ ಆ ಟೀಚರ್ ಮರುಕ್ಷಣದಲ್ಲೇ ರವಿಶಂಕರ್ ಗುರೂಜಿಯ ಥರಾ ಮುಗುಳ್ನಗುತ್ತಾ- ‘ಎಲ್ಲಿ ನಿಮ್ಮಲ್ಲಿ ಮೂವರು ಬನ್ನಿ’ ಎಂದು ಕರೆದರು. ಮುತ್ತಿನಂಥ ಮೂವರು ಮಕ್ಕಳು ಟೇಬಲ್ಲಿನ ಬಳಿಗೆ ಬಂದರು.
ಟೇಬಲ್ಲಿನ ಮೇಲೆ ಒಂದು ಗಾಜಿನ ಪಾತ್ರೆ, ಒಂದು ಬುನ್ಸೆನ್ ಬರ್ನರ್ ಸಿದ್ಧವಾಗಿದ್ದವು. ಟೀಚರ್ ಮಕ್ಕಳಿಗೆ ಒಂದು ಕಪ್ಪೆಯನ್ನು ಚೀಲದಿಂದ ತೆಗೆದು ಕೊಟ್ಟರು. ಮೂವರೂ ಒಟ್ಟಿಗೆ ಕೈ ಚಾಚಿ ಒಟ್ಟಿಗೇ ಹಿಂದಕ್ಕೆಳೆದುಕೊಂಡರು. ಕಪ್ಪೆ ರೂಮಿನಲ್ಲೆಲ್ಲ ಕುಪ್ಪಳಿಸುತ್ತಾ ನೆಗೆಯಿತು. ನೆಗೆಯುತ್ತಾ ಕುಪ್ಪಳಿಸಿತು. ಮಕ್ಕಳೆಲ್ಲಾ ಗಾಬರಿಯಿಂದ ಓಡಿದರು. ಟೀಚರ್ ನಕ್ಕರು. ಪ್ರೀತಿಯಿಂದ ತುಂಬಿ ತುಳುಕುವ ಟೀಚರ್ ನಗುನಗುತ್ತಾ ಕಪ್ಪೆಯನ್ನು ಹುಷಾರಾಗಿ ಪಾತ್ರೆಯೊಳಕ್ಕೆ ನೆಗೆಸಿಕೊಂಡು ಮಕ್ಕಳ ಕೈಗೆ ಕೊಟ್ಟು ‘ಈಗ ಹೇಗೆ ಬೇಯಿಸುವಿರಿ’ ಎಂದು ಪ್ರಶ್ನೆ ಹಾಕಿದರು.
ತಾಯಿ ಅಡುಗೆ ಮಾಡುವುದನ್ನು ನೋಡಿದ್ದ ಹುಡುಗಿಯು ಕುಕ್ಕರ್ ಇದ್ದರೆ ಬೇಯಿಸಬಹುದು ಎಂದಳು. ಟೀಚರ್ ತಲೆ ಅಲ್ಲಾಡಿಸಿ ನಕ್ಕರು. ಇಲ್ಲಿ ಗಾಜಿನ ಪಾತ್ರೆ ಇದೆ. ಒಲೆ ಇದೆ. ಕಪ್ಪೆ ಇದೆ. ಕಮಾನ್ ಡೂ ಇಟ್ ಎಂದರು. ಇನ್ನೊಂದು ಹುಡುಗಿ ನೀರನ್ನು ಒಲೆಯ ಮೇಲಿಟ್ಟು ನೀರು ಕಾದಮೇಲೆ ಕಪ್ಪೆಯನ್ನು ಅದರೊಳಕ್ಕೆ ಹಾಕಿದರಾಯಿತು ಎಂದಳು. ಟೀಚರ್ ಗುಡ್ ಎಂದರು. ಕಮಾನ್ ಡೂ ಇಟ್ ಎಂದು ಬೆನ್ನು ಸವರಿದರು.
ಒಬ್ಬ ಹುಡುಗ ಧೈರ್ಯಮಾಡಿ ಮುಂದೆ ಬಂದು ಗಾಜಿನ ಪಾತ್ರೆಯಲ್ಲಿ ನೀರು ಹಿಡಿದು ಒಲೆಯ ಮೇಲಿಟ್ಟ. ನೋಡುನೋಡುತ್ತಿದ್ದಂತೆ ನೀರು ಮರಳಿ, ಕುದಿಯಲು ತೊಡಗಿತು. ಮತ್ತೊಬ್ಬ ಹುಡುಗ ಧೈರ್ಯವಾಗಿ ಟೀಚರ್ ಕೈಯಿಂದ ಕಪ್ಪೆಯನ್ನು ಹುಷಾರಾಗಿ ಪಡೆದುಕೊಂಡು ರಸ್ತೆಯಲ್ಲಿ ವಡೆ ಬೋಂಡ ಮಾಡುವವರು ಕಾದ ಎಣ್ಣೆಯಲ್ಲಿ ಬೋಂಡದ ಹಿಟ್ಟನ್ನು ನಿಧಾನವಾಗಿ ಬಿಡುವಂತೆ ಕುದಿಯುವ ನೀರೊಳಕ್ಕೆ ಕಪ್ಪೆಯನ್ನು ಹಾಕಿದ. ಕಪ್ಪೆ ಚೆಂಗ್ ಎಂದು ನೆಗೆದು ಟೇಬಲ್ಲಿ ಮೇಲೆ ಕುಳಿತು ಮಿಕಿಮಿಕಿ ಎಂದು ಎಲ್ಲರನ್ನೂ ನೋಡತೊಡಗಿತು. ಮಕ್ಕಳೆಲ್ಲಾ ನಕ್ಕರು. ಟೀಚರ್ ನಗಲಿಲ್ಲ. ‘ಇದು ಹಳೆಯ ಮೆಥೆಡ್. ಇಟ್ ವೋಂಟ್ ವರ್ಕ್ ಎನಿಮೋರ್. ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ನೀವೂ ಬದಲಾಗಬೇಕು. ಜೊತೆಗೆ ನೀವು ಮಾಡುವುದು ಸರಿಯಾಗಿರಬೇಕು. ಪಾರದರ್ಶಕವಾಗಿರಬೇಕು. ಸರಿಯಾದ ಕ್ರಮದಲ್ಲಿ ಮಾಡಬೇಕು ಆಗ ಮಾತ್ರ ಯಶಸ್ಸು ಕಟ್ಟಿಟ್ಟಬುತ್ತಿ. ಈಗ ನೋಡಿ ನಾನು ನಿಮಗೆ ಕಪ್ಪೆಯನ್ನು ಬೇಯಿಸುವ ಸರಿಯಾದ ವಿಧಾನವನ್ನು ಹೇಳಿಕೊಡುತ್ತೇನೆ. ’ಹೀಗೆಂದ ಟೀಚರ್ ನೀರುತುಂಬಿದ ಪಾತ್ರೆಗೆ ಕಪ್ಪೆಯನ್ನು ಹಾಕಿದರು.
ಕಪ್ಪೆಗಳಲ್ಲಿ ಸಮುದ್ರದ ಕಪ್ಪೆ, ಬಾವಿಕಪ್ಪೆ, ಪಾತ್ರೆ ಕಪ್ಪೆ ಎಂದು ಅನೇಕ ವಿಧ. ಪಾತ್ರೆ ಕಪ್ಪೆ ಪಾತ್ರೆಯ ನೀರಿನಲ್ಲೇ ಒಂದು ಸಲ ಈಜಿತು. ಕಪ್ಪೆಯಿದ್ದ ನೀರಿನ ಪಾತ್ರೆಯನ್ನು ಟೀಚರ್ ನಗುತ್ತಾ ಒಲೆಯಮೇಲೆ ಇಟ್ಟರು. ಕಪ್ಪೆ ಮಿಕಿಮಿಕಿ ನೋಡುತ್ತಿತ್ತು. ನೀರು ಬಿಸಿಯಾಗಲು ತೊಡಗಿತು. ಕಪ್ಪೆ ಮಿಸುಕಾಡಲು ಪ್ರಾಂರಂಭಿಸಿತು. ನೀರು ಮತ್ತೂ ಬಿಸಿಯಾಯಿತು. ಕಪ್ಪೆ ಮತ್ತೂ ಮಿಸುಕಾಡಿತು. ನೀರು ಕಾದು ಹಬೆ ಬರಲು ಪ್ರಾರಂಭವಾಯಿತು. ಆಶ್ಚರ್ಯ! ಕಪ್ಪೆ ಪಾತ್ರೆಯಿಂದ ನೆಗೆಯಲೇ ಇಲ್ಲ. ಕಪ್ಪೆ ಸತ್ತು ಹೋಯಿತು.
‘ಎನಿ ಕ್ವೆಶ್ಚನ್ಸ್?’ ಎಂದರು ಟೀಚರ್. ಈಗಿನ ಮಕ್ಕಳಿಗೆ ಬುದ್ಧಿ ಜಾಸ್ತಿ. ನೋ ಕ್ವೆಶ್ಚನ್ಸ್ ಎಂದರು. ಗುಡ್ ಎಂದು ಪ್ರತಿಯೊಂದು ಮಗುವಿನ ಬೆನ್ನನ್ನೂ ತಟ್ಟಿದರು ಟೀಚರ್.
ಹೆಡ್ ಮಿಸ್ಟ್ರೆಸ್ ಬಳಿಗೆ ಕಳಿಸಿದ ಪೆಕರು ಹುಡುಗಿಯನ್ನು ಪಿಐಇ ಅಂದರೆ ಪ್ರಾಕ್ಟಿಕಲ್‌ಇಂಟಲಿಜೆನ್ಸ್‌ಎಕ್ಸ್‌ಪರ್ಟ್ ಅಂದರೆ ಸೈಕಿಯಾಟ್ರಿಸ್ಟ್ ಬಳಿಗೆ ಕಳಿಸಲಾಯಿತು. ಆ ಪರಿಣತರ ತಂಡ ಆಕೆಯ ಮೇಲೆ ಮಾಡಿದ ಮೈಂಡ್ ಅಸೆಸ್‌ಮೆಂಟ್ ಮತ್ತು ಐಕ್ಯೂ ಟೆಸ್ಟ್‌ಗಳ ಆಧಾರದ ಮೇಲೆ ಅವಳನ್ನು ವಯಸ್ಸಿಗೆ ತಕ್ಕ ಮಾನಸಿಕ ಬೆಳವಣಿಗೆ ಇಲ್ಲದ ಮಗು ಎಂದು ನಿರ್ಧರಿಸಿದ್ದರಿಂದ ತಂದೆ ತಾಯಿಯರನ್ನು ಕರೆಸಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಯಿತು. ಫ್ಯಾಕ್ಟರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲೋಸುಗ ಅನಿವಾರ್ಯವಾಗಿ ಆ ಪೆಕರು ಹುಡುಗಿಯನ್ನು ಸ್ಕೂಲಿನಿಂದ ಹೊರಹಾಕಲಾಯಿತು. ಅವಳ ತಂದೆ ತಾಯಿಗಳು ಅತ್ತು ಕರೆದು ಎಷ್ಟು ಗೋಗೆರೆದರೂ ಪ್ರಯೋಜನ ವಾಗಲಿಲ್ಲ. ಬೇರೆ ದಾರಿ ಕಾಣದೆ ಆ ತಂದೆ-ತಾಯಿ ಆ ಮಗುವನ್ನು ರಾಘವೇಂದ್ರ ಸ್ವಾಮಿ ಮಠದ ಹತ್ತಿರವಿರುವ ಗೌರ್ಮೆಂಟ್ ಸ್ಕೂಲಿಗೆ ಸೇರಿಸಿದರು. ಅವಳು ಅಲ್ಲಿನ ಕೊಳಕು ಮಕ್ಕಳೊಂದಿಗೆ ಆಡುತ್ತಾ ಹಾಡುತ್ತಾ ಕುಣಿಯುತ್ತಾ ಬೆಳೆದು ದೊಡ್ಡವಳಾದಮೇಲೆ ಶ್ರೀರಾಘವೇಂದ್ರ ಸ್ತೋತ್ರವನ್ನು ರಾಜಕುಮಾರನಂತೆಯೇ ಸುಶ್ರಾವ್ಯವಾಗಿ ಟೀವಿಯಲ್ಲಿ ಹಾಡಿ ಮೊದಲ ಬಹುಮಾನ ಗಳಿಸಿದಳು.
ಆ ನಾಲೆಜ್ ಫ್ಯಾಕ್ಟರಿ ದೊಡ್ಡದಾದಮೇಲೆ ತುಂಬಾ ಹೆಸರು ಮಾಡಿ ವಿಶ್ವವಿದ್ಯಾಲಯವೇ ಆಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಯಿತು. ಆ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳಲ್ಲಿ ತಯಾರಾಗಿ ಬಂದ ಬುದ್ಧಿವಂತ ಮಕ್ಕಳು ದೊಡ್ಡವರಾದ ಮೇಲೆ ಏಕ್ಯುಸಿಬಿ ಅಂದರೆ ಅಡ್ಮಿನಿಸ್ಟ್ರೇಟಿವ್ ಕ್ವಾಲಿಟಿ ಕಂಟ್ರೋಲ್ ಬ್ಯುರೋದಿಂದ ಬೆಸ್ಟ್ ಮೈಂಡ್ಸ್ ಎಂದು ಪ್ರಮಾಣಿತರಾಗಿ ಕೆಲವರು ಅಮೇರಿಕಾಕ್ಕೆ ಹೋದರು. ಇನ್ನು ಕೆಲವರು ರಾಜ್ಯಸರ್ಕಾರದ ವಿವಿಧ ಮಂತ್ರಿಗಳ ಕೈಕೆಳಗೆ ಕೆಲಸಕ್ಕೆ ಸೇರಿದರು. ಇನ್ನು ಕೆಲವರು ಕೇಂದ್ರ ಸರ್ಕಾರದಲ್ಲಿ ಅರ್ಥಮಂತ್ರಿಗಳಾದರು. ಆಮೇಲೆ ಎಲ್ಲರೂ ಸತ್ತುಹೋದರು.
***********
ಶ್ರೀಮಂತನ ಉಡುಗೊರೆ
ಒಂದು ಸಲ ಒಬ್ಬ ಶ್ರೀಮಂತ ತನ್ನ ತಂದೆಯ ತಿಥಿಯನ್ನು ಆಚರಿಸಿದ. ಆಗ ತನ್ನ ತಂದೆಯ ಬಾಲ್ಯದ ಸ್ನೇಹಿತರು ಯಾರ್‍ಯಾರು ಇದ್ದರೋ ಅವರನ್ನೆಲ್ಲಾ ಮನೆಗೆ ಕರೆದು ಭರ್ಜರಿ ಭೋಜನ ಮಾಡಿಸಿ ಇಲ್ಲರಿಗೂ ಒಂದೊಂದು ಜೊತೆ ಪಂಚೆಯನ್ನು ಕೊಟ್ಟು ಕಳಿಸಿದ. ಅವನ ತಂದೆ ಇವತ್ತಿನ ಎಷ್ಟೋ ಕೈಗಾರಿಕೋದ್ಯಮಗಳ ಸ್ಥಾಪಕರಂತೆ ಚಿಕ್ಕಂದಿನಲ್ಲಿ ತುಂಬಾ ಬಡತನದಲ್ಲಿದ್ದು ಸ್ವಂತ ಬುದ್ಧಿ ಮತ್ತು ವ್ಯವಹಾರ ಚಾಕಚಕ್ಯತೆಯ ಬಲದಿಂದ ಅಂದರೆ ಬಡ್ಡಿವ್ಯಾಪಾರದಿಂದ ಅಪಾರ ಸಂಪತ್ತನ್ನು ಕೂಡಿಹಾಕಿ ಮಕ್ಕಳು ಮೊಮ್ಮಕ್ಕಳು ಕೂತು ತಿಂದರೂ ಕರಗದಷ್ಟು ಆಸ್ತಿ, ಹಣ ಮಾಡಿ, ಕೈಗಾರಿಕೆ ಮತ್ತು ದೀನದಲಿತರಿಗಾಗಿ ಸೇವಾಸಂಸ್ಥೆಗಳನ್ನು ಸ್ಥಾಪಿಸಿ ಯಾವುದೋ ಕ್ಯಾನ್ಸರ್ ನಿಂದಾಗಿ ಸತ್ತುಹೋದರು. ಹೀಗಾಗಿ ಅವರಿಗೆ ಅತ್ಯಂತ ಶ್ರೀಮಂತರಿಂದ ಹಿಡಿದು ಕಡುಬಡವರವರೆಗೆ ಅನೇಕ ಬಗೆಯ ಸ್ನೇಹಿತರು, ಅಭಿಮಾನಿಗಳು ಇದ್ದರು. ಅಲ್ಲದೆ ಮಾಮೂಲಿನಂತೆ ಅವರ ಹೆಂಡತಿ ತುಂಬಾ ಧಾರ್ಮಿಕರಾಗಿದ್ದುದರಿಂದ ಅವರ ಪ್ರೀತ್ಯರ್ಥವಾಗಿಯೂ ಶ್ರೀಮಂತರ ತಿಥಿಯ ದಿನ ಜಾತಿ-ಮತನೋಡದೆ, ಬಡವ-ಶ್ರೀಮಂತರೆಂಬ ಭೇದವಿಲ್ಲದೆ ಎಲ್ಲರನ್ನೂ ಆದರಿಸಿ, ಉಡುಗೊರೆಕೊಟ್ಟು ಕಳಿಸಬೇಕಾದ್ದು ಮಕ್ಕಳ ಕರ್ತವ್ಯ ಎಂದು ಪುಣ್ಯಾತ್ಮನಾದ ಆ ಶ್ರೀಮಂತ ತಿಳಿದಿದ್ದರು. ಹೀಗಾಗಿ ಎಲ್ಲರನ್ನೂ ತಿಥಿಗೆ ಆಹ್ವಾನಿಸಿ ಉಡುಗೊರೆ ಕೊಡಲಾಯಿತು.
ಶ್ರೀಮಂತನ ಬಾಲ್ಯ ಸ್ನೇಹಿತರ ಪೈಕಿ ಒಬ್ಬ ವ್ಯಾಪಾರಿ ಮತ್ತು ಒಬ್ಬ ಸನ್ಯಾಸಿಯೂ ಇದ್ದರು. ಪುಷ್ಕಳವಾಗಿ ಊಟಮಾಡಿದ ಎಲ್ಲರೂ ದಕ್ಷಿಣೆ, ಉಡುಗೊರೆ ಪಡೆದು ಸಂತೋಷದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಆಮೇಲೆ ಅವರೆಲ್ಲಾ ಆ ಉಡುಗೊರೆಯನ್ನು ಹೇಗೆ ಬಳಸಿದರೋ, ದಕ್ಷಿಣೆಯನ್ನು ಯಾವುದಕ್ಕೆ ಖರ್ಚುಮಾಡಿಕೊಂಡರೋ ತಿಳಿಯದು. ಆದರೆ ವ್ಯಾಪಾರಿ ಮಾತ್ರ ಆ ಪಂಚೆಗಳನ್ನು ಯಾರಿಗೂ ಕೊಡದೆ ತಾನೇ ಬಳಸಿದ. ಸನ್ಯಾಸಿಗೆ ಹೇಗಿದ್ದರೂ ಪಂಚೆ ಬೇಕಾಗಿತ್ತು. ಸಂತೋಷದಿಂದ ಸ್ವರ್ಗದಲ್ಲಿರುವ ತನ್ನ ಶ್ರೀಮಂತ ಸ್ನೇಹಿತನ ಆತ್ಮಕ್ಕಾಗಿ, ಭೂಮಿಯಮೇಲಿರುವ ಅವನ ಸಂತತಿಯ ಆಯುರಾರೋಗ್ಯ ಸಂಪತ್ತು ಶ್ರೇಯೋಭಿವೃದ್ಧಿಗಾಗಿ ಆ ದಯಾಮಯನಾದ ಭಗವಂತನಲ್ಲಿ ಪ್ರಾರ್ಥಿಸುತ್ತಾ ಪಂಚೆಗಳಲ್ಲಿ ಒಂದನ್ನು ಮಾತ್ರ ಬಳಸಿ ಇನ್ನೊಂದನ್ನು ಒಬ್ಬ ಭಿಕ್ಷುಕನಿಗೆ ಕೊಟ್ಟುಬಿಟ್ಟನು. ಭಿಕ್ಷುಕನು ಆ ಪಂಚೆಯನ್ನು ಹರಿದು ಅವನ ಎಲ್ಲಾ ಮಕ್ಕಳಿಗೂ ಒಂದೊಂದು ಲಂಗೋಟಿ ಮಾಡಿಕೊಟ್ಟನು.
ಸನ್ಯಾಸಿಯು ಇದ್ದ ಮಠದಲ್ಲಿ ಇಲಿಗಳ ಹಾವಳಿ ವಿಪರೀತ. ಆದರೂ ಸನ್ಯಾಸಿಯು ಶ್ರೀಮಂತ ಸ್ನೇಹಿತನ ಮಗ ಪ್ರೀತಿಯಿಂದ ಕೊಟ್ಟ ಪಂಚೆಯನ್ನು ಇಲಿಗಳ ಕೈಗೆ ಸಿಕ್ಕದಂತೆ ಜೋಪಾನವಾಗಿ ಬಳಸುತ್ತಾ ಅದು ಹಳೆಯದಾಗಿ ಬಣ್ಣಗೆಟ್ಟಮೇಲೆ ಅದಕ್ಕೆ ಕಾಷಾಯ ಬಣ್ಣ ಹಾಕಿ ಮತ್ತಷ್ಟು ದಿನ ಬಳಸಿದನು. ಆದರೆ ಈ ನಶ್ವರ ಪ್ರಪಂಚದಲ್ಲಿ ಯಾವುದು ಶಾಶ್ವತ? ಆ ಪಂಚೆಯು ಕೊನೆಗೂ ಹರಿದು ಹೋಯಿತು. ಸನ್ಯಾಸಿಯು ಬೇಸರಿಸದೆ ಆ ಹರಿದ ಪಂಚೆಯನ್ನು ಎರಡಾಗಿ ಸೀಳಿ ಗಾಂಧಿ ಮಹಾತ್ಮನಂತೆ ಒಂದು ತುಂಡನ್ನು ಉಟ್ಟುಕೊಂಡು ಮತ್ತೊಂದು ತುಂಡನ್ನು ಹೊದ್ದುಕೊಂಡನು. ಹೀಗೆ ಸ್ವಲ್ಪಕಾಲ ಕಳೆಯಿತು. ಆ ತುಂಡುಗಳೂ ಹರಿದು ಹೋದವು. ಸನ್ಯಾಸಿಯು ಬೇಸರಿಸದೆ ಅವನ್ನು ಸೂಕ್ತರೀತಿಯಲ್ಲಿ ಹರಿದು ಕೌಪೀನಗಳನ್ನಾಗಿ ಬಳಸಲು ತೊಡಗಿದನು. ಆದರೆ ಅವು ಹೆಚ್ಚುಕಾಲ ಬಾಳಿಕೆ ಬರಲಿಲ್ಲ. ಹಾಗಾಗಿದ್ದಕ್ಕೆ ಆ ಸನ್ಯಾಸಿಯನ್ನು ಹೊಣೆಗಾರನನ್ನಾಗಿ ಮಾಡಬಹುದೋ ಇಲ್ಲವೋ ಎಂಬುದು ಅವರವರ ವಿವೇಚನೆಗೆ ಬಿಟ್ಟ ವಿಷಯ.
ಇಲಿಗಳ ಕಾಟ ಇರುವ ಕಡೆ ಹಾಗಾಗುವುದು ಆಶ್ಚರ್ಯವೇನೂ ಇಲ್ಲ. ಸನ್ಯಾಸಿಯು ಬೇಸರಪಟ್ಟುಕೊಳ್ಳಲಿಲ್ಲ. ಭಗವಂತನ ಇಚ್ಛೆ ಹಾಗಿದ್ದರೆ ಹಾಗೆಯೇ ಆಗಲಿ ಎಂದು ಅಳಿದುಳಿದ ತುಂಡು ಬಟ್ಟೆಗಳನ್ನು ಹರಿದು ಬತ್ತಿಗಳನ್ನಾಗಿ ಮಾಡಿದ. ಮಠಕ್ಕೆ ಬರುವ ಭಕ್ತರು ಕೊಡುವ ಎಣ್ಣೆ ಯಲ್ಲಿ ಅದ್ದಿ ದೀಪಗಳಿಗೆ ಹಾಕಿ ಉರಿಸಿದ. ಲಕ್ಷದೀಪೋತ್ಸವದಂದು ಅವನ ಬಳಿ ಇದ್ದ ಎಲ್ಲಾ ಬತ್ತಿಗಳೂ ಖರ್ಚಾಗಿಹೋದವು.
ಇತ್ತ ತನಗೆ ದಾನವಾಗಿ ಬಂದ ಪಂಚೆಯನ್ನು ವ್ಯಾಪಾರಿ ತುಂಬಾ ಜತನದಿಂದ ಬಳಸಿದ. ಕಾಲಧರ್ಮದಂತೆ ಆ ಪಂಚೆಗಳು ಹರಿದು ಹೋದವು. ವ್ಯಾಪಾರಿ ಅವನ್ನು ಮತ್ತೆ ಅಂಚು ಹೊಲಿಸಿ ಬಳಸಿದ. ಸ್ವಲ್ಪಕಾಲವಾದಮೇಲೆ ಅವು ಮತ್ತೆ ಹರಿದವು. ವ್ಯಾಪಾರಿ ಧೃತಿಗೆಡದೆ ಅವನ್ನು ಮತ್ತೆ ಹೊಲಿಸಿ ಅಂಗವಸ್ತ್ರಗಳನ್ನಾಗಿ ಬಳಸಿದ. ವ್ಯಾಪಾರಿ ಗಟ್ಟಿಯೋ ಪಂಚೆ ಗಟ್ಟಿಯೋ ಎಂಬಂತೆ ಆ ತುಂಡುಗಳೂ ಮತ್ತೆ ಹರಿದವು. ವ್ಯಾಪಾರಿ ಕಡೆಯ ಪ್ರಯತ್ನ ಎಂಬಂತೆ ಅವನ್ನು ಶುಭ್ರವಾಗಿ ಒಗೆಸಿ, ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಅಂಚುಹೊಲಿಸದೆ ಕನ್ಯಕಾಪರಮೇಶ್ವರಿ ದೇವಸ್ಥಾನದ ಬಳಿ ತಳ್ಳುಗಾಡಿಯ ಇಡ್ಲಿಮಾಡುವ ಬಡದಂಪತಿಗಳಿಗೆ ಇಡ್ಲಿಬಟ್ಟೆಗಳನ್ನಾಗಿ ಬಳಸುವಂತೆ ಸೂಚಿಸಿ ದಾನಮಾಡಿ ಕೃಷ್ಣಾರ್ಪಣಮಸ್ತು ಎಂದು ದೇವರಿಗೆ ಕೈ ಮುಗಿದ.
ಹೀಗೆ ಕೆರೆಯ ನೀರನು ಕೆರೆಗೆ ಚಲ್ಲಿದಂತೆ ದೇವರ ಕೃಪೆಯಿಂದ ಮತ್ತು ಸ್ವಂತ ಬುದ್ಧಿಶಕ್ತಿಯಿಂದ ಸಮಾಜದಲ್ಲಿ ಮೇಲೆ ಬಂದು ಕಾಲವಶನಾದ ಶ್ರೀಮಂತನ ಮಗ ದಾನವಾಗಿ ಕೊಟ್ಟ ಉಡುಗೊರೆಗಳು ಮತ್ತೆ ಭಗವಂತನ ಪಾದಗಳನ್ನೇ ಸೇರಿದವು.
*********
ಜೀವನ-ಸಂಜೀವನ
ಒಂದು ಕಾಡಿನಲ್ಲಿ ಅಂದರೆ ಊರಿನಲ್ಲಿ ಒಬ್ಬ ರಾಕ್ಷಸನಿದ್ದ. ಅಂದರೆ ಈಗಲೂ ಇದ್ದಾನೆ. ಅವನು ರೈತರ ಬಳಿಗೆ ಹೋಗಿ ಅವರು ಬೆಳೆದದ್ದಲ್ಲವನ್ನೂ ಹೊತ್ತು ಕೊಂಡು ಬಂದು ತನ್ನ ಮನೆಯಲ್ಲಿ ಇಟ್ಟುಕೊಂಡಿರುತ್ತಿದ್ದ. ಯಾರಾದರೂ ಭಿಕ್ಷುಕರು ಬಂದು ಹೊಟ್ಟೆಗಿಲ್ಲವೆಂದು ಕೇಳಿದರೆ ಕನಿಕರದಿಂದ ಅವರಿಗೆ ಊಟ ಹಾಕಿಸುತ್ತಿದ್ದ. ಕಾರ್ಮಿಕರ ಬಳಿಗೆ ಹೋಗಿ ಅವರು ದುಡಿದದ್ದಲ್ಲವನ್ನೂ ಕಸಿದುಕೊಂಡು ತಂದು ಬ್ಯಾಂಕಿನಲ್ಲಿ ಭದ್ರವಾಗಿ ಇಟ್ಟಿರುತ್ತಿದ್ದ. ಯಾರಾದರು ಬಡವರು, ಸಾಧುಸಂತರು ಮನೆಬಾಗಿಲಿಗೆ ಬಂದು ಸಹಾಯಮಾಡಿ ಎಂದರೆ ಸಾಕು ಹಿಂದು ಮುಂದು ನೋಡದೆ ಚೆಕ್ ಬರೆದುಕೊಡುತ್ತಿದ್ದ. ಆಗಾಗ ಪುಣ್ಯಕ್ಷೇತ್ರಗಳಿಗೆ ಮನೆಮಂದಿಯೊಂದಿಗೆ ಹೋಗಿ ಸೇವೆ ಮಾಡಿಸಿ, ದೇವರಿಗೆ ಬಂಗಾರದ ಕಿರೀಟ, ಬೆಳ್ಳಿಯ ಮೀಸೆ ಮತ್ತು ವಜ್ರದ ಮೂಗುತಿಗಳನ್ನು ತನ್ನ ಖರ್ಚಿನಲ್ಲೇ ಮಾಡಿಸಿಕೊಡುತ್ತಿದ್ದ. ಹೀಗಾಗಿ ಆ ಧರ್ಮಾತ್ಮನಾದ ರಾಕ್ಷಸನ ಕೀರ್ತಿ ಎಲ್ಲಾ ಕಡೆ ಹರಡಿತು. ಅವನ ಸ್ನೇಹಿತರ ಕೂಟ, ಅಂದರೆ ಸರ್ಕಾರ, ಅವನಂಥವರಿಗೆ ಅಂದರೆ ಸಮಾಜಕ್ಕೆ ಮಾಡಿದ ಸಹಾಯವನ್ನು ಗುರುತಿಸಿ ಅನೇಕ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿತು.
ಹೀಗಿರಲು ಎಲ್ಲರಿಗೂ ಆಗುವಂತೆ ರಾಕ್ಷಸನಿಗೂ ವಯಸ್ಸಾಯಿತು. ಊಟ ಸರಿಯಾಗಿ ಸೇರದೆ, ರಾತ್ರಿ ನಿದ್ರೆ ಬಾರದೆ ಬೆಳಗ್ಗೆ ಮಲವಿಸರ್ಜನೆ ಯಾಗದೆ ತೊಂದರೆಯಾಯಿತು. ಹಸಿವಾಗಲು, ಜೀರ್ಣವಾಗಲು, ನಿದ್ದೆಬರಲು, ಮಲವಿಸರ್ಜನೆಯಾಗಲು ಅವನ ಖಾಯಿಲೆಗಳ ವ್ಯಾಪಾರಿ ಗಳು ಅಂದರೆ ಫ್ಯಾಮಿಲಿ ವೈದ್ಯರು ಔಷಧ ಕೊಟ್ಟರು. ಅವನ ತೊಂದರೆಗಳು ವಾಸಿಯಾದಂತೆ ಕಂಡರೂ ವಾಸಿಯಾಗುತ್ತಿರಲಿಲ್ಲ. ಹೀಗಿರಲು ಆ ರಾಕ್ಷಸನಿಗೆ ಕಾಲುನೋವು ಬೇರೆ ಬಂತು. ವೈದ್ಯರು ಕಾಲುಗಳನ್ನು ಪರೀಕ್ಷಿಸಿ ಊರುಗೋಲನ್ನು ಬಳಸಬೇಕೆಂದು ತಿಳಿಸಿದರು. ಹೇಗಾದರೂ ಇರಲಿ ಎಂದು ರಕ್ತಪರೀಕ್ಷೆ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಿಸಿದರು. ಮಾಮೂಲಿನಂತೆ ಕೆಲವು ಔಷಧ, ಮಾತ್ರೆ ಗಳನ್ನು ಕೊಟ್ಟು ಕಳಿಸಿದರು. ಕಾಲುನೋವು ಕಮ್ಮಿಯಾಗಿ ಮತ್ತೆ ಜಾಸ್ತಿಯಾಯಿತು. ವಾಕಿಂಗ್ ಹೋಗುತ್ತಿದ್ದಾಗ ನಾಯಿಯನ್ನು ಓಡಿಸಲು ಹೋಗಿ ಆಯತಪ್ಪಿ ಬಿದ್ದು ಕಾಲು ಮುರಿಯಿತು. ವೈದ್ಯರು ರಾಕ್ಷಸನನ್ನು ನರ್ಸಿಂಗ್ ಹೋಮಿಗೆ ಅಂದರೆ ರೋಗಿಗಳ ಲಾಜಿಗೆ ಸೇರಿಸಿದರು.
ಸರಿ. ರಾಕ್ಷಸನ ಕಾಲಿನ ಎಕ್ಸ್‌ರೆ ತೆಗೆಸಿದರು. ಆಪರೇಶನ್ ಮಾಡುವ ಮೊದಲು ಮಧುಮೇಹ ಇದೆಯೋ ಎಂದು ಪರೀಕ್ಷಿಸಿದರು. ರಕ್ತಪರಿಚಲನೆ ಸಲೀಸಾಗಿಲ್ಲ ಎನಿಸಿದ್ದರಿಂದ ಹೃದಯದಲ್ಲಿ ಕೊಬ್ಬು ಸೇರಿರಬೇಕೆಂದು ಹೃದಯತಜ್ಞರು ಶಂಕಿಸಿದರು. ಆದ್ದರಿಂದ ರಾಕ್ಷಸನ ಹೃದಯ ತಪಾಸಣೆಯನ್ನು ಕೂಲಂಕಶವಾಗಿ ಮಾಡಿಸಿದರು. ದುರ್ಬಲ ಹೃದಯಕ್ಕೂ ಲಿವರ್‌ಗೂ ಸಂಬಂಧವಿದೆಯೆಂದು ಅಮೆರಿಕದಿಂದ ಬಂದಿದ್ದ ತಜ್ಞರು ಹೇಳಿದ್ದರಿಂದ ಲಿವರ್ ತಪಾಸಣೆ ನಡೆಯಿತು. ಯಾವುದಕ್ಕಾದರೂ ಇರಲಿ ಛಾನ್ಸ್ ತೆಗೆದುಕೊಳ್ಳುವುದು ಬೇಡ ಎಂದು ಮೂತ್ರಪಿಂಡ ಕರುಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನೂ ಮಾಡಲಾಯಿತು. ಕೊನೆಗೆ ಕಂಪ್ಯೂಟರ್ ಗೆ ಜೋಡಿಸಿದ ಯಂತ್ರಗಳ ಮೂಲಕ ಸಮಸ್ತ ಪರೀಕ್ಷೆಗಳನ್ನೂ ಮಾಡಿದರು. ಇಷ್ಟಾದರೂ ರಾಕ್ಷಸನ ಪ್ರಾಣ ಹೋಗಲಿಲ್ಲ. ಕೊನೆಗೆ ಮುರಿದ ಕಾಲಿನ ಮೂಳೆಗೆ ಇಂಪೋರ್ಟೆಡ್ ಸರಳು ಜೋಡಿಸಿ ರಾಕ್ಷಸನನ್ನು ಮನೆಗೆ ಕಳಿಸಿದರು.
ರಾಕ್ಷಸ ಮಲಗಿದ್ದಲ್ಲೇ ಯೋಚಿಸಿದ. ಈಗ ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದಾಯಿತು. ಇನ್ನು ಮುಂದೆ ಅಂಥ ಸಂದರ್ಭವೇ ಬರಬಾರದೆಂದು ನಿರ್ಧಾರಮಾಡಿ ರಾಕ್ಷಸ ತನ್ನ ಪ್ರಾಣವನ್ನು ಬ್ಯಾಂಕಿನ ಲಾಕರಿನಲ್ಲಿ ಇಟ್ಟುಬಂದ. ಕಾಲು ಸರಿಯಾಯಿತು. ಮಕ್ಕಳು, ಮೊಮ್ಮಕ್ಕಳು ರಾಕ್ಷಸನ ಆರೋಗ್ಯ ಸುಧಾರಿಸಿದ್ದನ್ನು ನೋಡಿ ತುಂಬಾ ಸಂತೋಷಿಸಿದರು. ಅಂದರೆ ಬೇಜಾರು ಮಾಡಿಕೊಂಡರು. ಕೈಗೆ ಕಾಲಿಗೆ ಕಣ್ಣು ಮೂಗುಗಳಿಗೆ ಸಕಲ ಅಂಗಾಂಗಗಳಿಗೂ ವಿಮೆ ಮಾಡಿಸಿದರು. ಒಂದು ದಿನ ರಾಕ್ಷಸನ ಕಾರು ಮರಕ್ಕೆ ಡಿಕ್ಕಿ ಹೊಡೆಯಿತು. ಕಾರು ಜಜ್ಜಿ ಹೋಯಿತು. ಡ್ರೈವರ್ ಸತ್ತುಹೋದ. ಆದರೆ ರಾಕ್ಷಸ ಮಾತ್ರ ಸಾಯಲಿಲ್ಲ. ಅದರ ಗುಟ್ಟು ಅವನೊಬ್ಬನಿಗೆ ಮಾತ್ರ ಗೊತ್ತು. ಅಂದರೆ ವಾಚಕರಿಗೂ ಗೊತ್ತು.
ರಾಕ್ಷಸ ತುಂಬಾ ಯೋಚಿಸಿ ಬ್ಯಾಂಕಿನ ಲಾಕರ್‌ನಲ್ಲಿದ್ದ ತನ್ನ ಪ್ರಾಣವನ್ನು ತೆಗೆದು ಏಳು ಸಮುದ್ರದಾಟಿ ಹೋಗಿ ಬೀಳುಸಮುದ್ರದಾಚೆ ಗಿರುವ ಆಲದ ಮರದ ಪೊಟರೆಯ ಗಿಳಿಯೊಳಗೆ ಇಟ್ಟುಬಂದು ಮಲಗಿಬಿಟ್ಟ. ಬೆಳಗ್ಗೆ ಮಲಗಿದ ರಾಕ್ಷಸ ಸಂಜೆಯಾದರೂ ಏಳದಿದ್ದಾಗ ಮಕ್ಕಳು ಮೊಮ್ಮಕ್ಕಳು ಗಾಬರಿಗೊಂಡು ಆಂಬುಲೆನ್ಸ್ ಗೆ ಫೋನ್ ಮಾಡಿದರು. ದಾದಿಯ ಸಮೇತ ಬಂದ ವೈದ್ಯರು ಪರಿಣತರ ಸಲಹೆಯ ಮೇಲೆ ರಾಕ್ಷಸನನ್ನು ಯಾರಕೈಗೂ ಸಿಗದಂಥ ಕೋಣೆಯಲ್ಲಿ ಅಂದರೆ ಐಸಿಯುನಲ್ಲಿ ಇಟ್ಟರು. ಮೂಗಿನಿಂದ ಆಮ್ಲಜನಕ, ಕೊರಳಿನಿಂದ ಅನ್ನದರಸ, ರಕ್ತನಾಳದ ಮೂಲಕ ಜೀವರಸ ಅಂದರೆ ನೀರನ್ನು ಕಾಲಕಾಲಕ್ಕೆ ಕೊಟ್ಟು ಕಾಪಾಡಿದರು. ಮೂತ್ರಕೋಶದಿಂದ ಮೂತ್ರ, ಮಲಕೋಶದಿಂದ ಮಲವನ್ನು ಪೈಪುಗಳ ಮೂಲಕ ನಿತ್ಯವೂ ಹೊರತೆಗೆದು ರಾಕ್ಷಸನ ಆತ್ಮವನ್ನು ಶುದ್ಧವಾಗಿಟ್ಟರು. ಈಗ ರಾಕ್ಷಸ ಮಲಗಿದ್ದಲ್ಲೇ ಮಲಗಿದ್ದಾನೆ. ಮೂಗಿಲ್ಲದೆ ಉಸಿರಾಡುತ್ತಾನೆ. ಬಾಯಿಯಿಲ್ಲದೆ ಊಟಮಾಡುತ್ತಾನೆ. ಬಚ್ಚಲುಮನೆಗೆ ಹೋಗದೆಯೇ ಮಲ ಮೂತ್ರಗಳನ್ನು ವಿಸರ್ಜಿಸುತ್ತಾನೆ. ಅಂದರೆ ಬದುಕಿದ್ದಾನೆ.
ದುರದೃಷ್ಟವಶಾತ್ ಅವನು ಮೂರು ಲಕ್ಷ ರೂ ಖರ್ಚುಮಾಡಿ ಕಟ್ಟಿಸಿದ ಬಾತ್‌ರೂಮು ಅಲ್ಲಿ ವಾಸಮಾಡುವ ಜನರಿಲ್ಲದೆ ಬಿಕೋ ಎನ್ನುತ್ತಿದೆ.
********
ಲೋಕಕಲ್ಯಾಣ
ಒಬ್ಬ ಧರ್ಮಗುರುಗಳು ತಮ್ಮ ಮಠವನ್ನು ಜನಸಾಮಾನ್ಯರಿಗೂ ಉಪಯೋಗವಾಗುವಂತೆ ಮಾರ್ಪಡಿಸಬೇಕೆಂದು ನಿರ್ಧರಿಸಿದರು. ಅದಕ್ಕೆಂದು ಅವರ ಶಿಷ್ಯರಲ್ಲಿ ಒಬ್ಬನನ್ನು ವಾರಣಾಸಿಗೂ, ಮತ್ತೊಬ್ಬನನ್ನು ಅಮೆರಿಕಾಕ್ಕೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಳಿಸಿದರು.
ಹತ್ತು ವರ್ಷ ವಾರಣಾಸಿಯಲ್ಲಿ ಸಂಸ್ಕೃತ ಅಭ್ಯಾಸ ಮಾಡಿ ಶಿಷ್ಯರು ಮಠಕ್ಕೆ ಮರಳಿದರು. ಜನರ ಕಷ್ಟಗಳಿಗೆಲ್ಲಾ ಪ್ರಪಂಚವನ್ನು ಆವರಿಸಿರುವ ಮಾಯೆ ಮತ್ತು ಜನರಲ್ಲಿ ತುಂಬಿರುವ ಅಜ್ಞಾನವೇ ಕಾರಣವೆಂದು ವೇದಾಧ್ಯಯನದಿಂದ ಕಂಡುಕೊಂಡು ಮಾಯೆ ಮತ್ತು ಅಜ್ಞಾನದ ವಿರುದ್ಧ ಉಗ್ರ ಸಮರವನ್ನೇ ಸಾರಿದರು. ಅಜ್ಞಾನದ ಉಗಮ, ಬೆಳವಣಿಗೆ ಮತ್ತು ಸ್ಥಿರೀಕರಣ ಮಾಯೆಯ ಅಂದರೆ ತಾಯಿಯ ಗರ್ಭದಲ್ಲೇ ಪ್ರಾರಂಭವಾಗಿ ಅಜ್ಞಾನಿಗಳು ಅಂದರೆ ಮಕ್ಕಳು ಬಳಸುವ ಭಾಷೆಯಲ್ಲೇ ಸಂಭವಿಸುವುದರಿಂದ ಭಾಷೆಯ ಕಲಿಕೆಗೆ ಮಹತ್ವ ಕೊಟ್ಟರು. ಪಾಣಿನಿಯ ವ್ಯಾಕರಣದಿಂದ ಮೊದಲುಗೊಂಡು ವಿಟ್‌ಜೆನ್‌ಸ್ಟೀನ್, ಛೋಮ್ಸ್ಕಿ ಮುಂತಾದವರ ಭಾಷಾತತ್ವಶಾಸ್ತ್ರದಲ್ಲಿ ಪಾರಂಗತರಾದ ವಿದ್ವಾಂಸರನ್ನು ಮಠದ ಮಹಾವಿದ್ಯಾಲಯಕ್ಕೆ ಸೇರಿಸಿಕೊಂಡರು. ಮಠದ ಭಕ್ತರಲ್ಲಿ ಬೇರೂರಿದ್ದ ಕನ್ನಡ ಭಾಷೆಯ ಬಳಕೆಯನ್ನು ನಿಲ್ಲಿಸಿದರು. ಯಾರನ್ನೇ ಬೈಯಬೇಕಿದ್ದರೂ ಸಂಸ್ಕೃತದಲ್ಲೇ ಬೈಯುವಂತೆ ಜನರನ್ನು ತಯಾರು ಮಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಇಲ್ಲದ್ದು ಪ್ರಪಂಚದಲ್ಲೇ ಇಲ್ಲವೆಂದು ಪ್ರಮಾಣೀಕರಿಸಿ ತೋರಿಸಿದರು. ಊಟಮಾಡುವಾಗ ಸಹನಾವವತು, ಹೊಟ್ಟೆ ತುಂಬಿದಮೇಲೆ ಓಂಕಾರವನ್ನು ಹೇಗೆ ಬಳಸಬೇಕೆಂದು ತಿಳಿಯದ ಮೂಢಜನರನ್ನು ಸರಿದಾರಿಗೆ ತರಲು ಏನೇನು ಮಾಡಬಹುದೋ ಅದೆಲ್ಲವನ್ನೂ ಮಾಡಿದರು. ಲಿಂಗಧ್ಯಾನ, ಜಟಾಧ್ಯಾನ ಮತ್ತು ಚಕ್ರಧ್ಯಾನಗಳೆಂಬ ಕ್ರಾಂತಿಕಾರೀ ಧ್ಯಾನವಿಧಾನಗಳನ್ನು ಸಂಶೋಧಿಸಿ, ಮರವಿಲ್ಲದ ಮಂಗಗಳಂತೆ ಚಪಲಚಿತ್ತರೂ, ತಕ್ಕಡಿಯಿಲ್ಲದ ಕಪ್ಪೆಗಳಂತೆ ಅನಾಥರೂ ಆದ ಮಂತ್ರಿ-ಶಾಸಕರಿಗೆ ಪಕ್ಷಭೇದವಿಲ್ಲದೆ ಕಲಿಸಿಕೊಟ್ಟರು. ರಾಜ್ಯದಲ್ಲಿ ಹೆಂಡದ ವ್ಯಾಪಾರ ಹೆಚ್ಚಾಗಿ ಎಲ್ಲೆಲ್ಲೂ ಸುಭಿಕ್ಷೆ ನೆಲೆಸಿತು.
ಇತ್ತ ಅಮೇರಿಕಾಕ್ಕೆ ಹೋದ ಮಠದ ಇನ್ನೊಬ್ಬ ಶಿಷ್ಯರು ಆರುತಿಂಗಳು ಅಮೆರಿಕಾದ ವಿವಿಧ ಕೋರ್ಸುಗಳನ್ನು ಮುಗಿಸಿಕೊಂಡು ವೈಜ್ಞಾನಿಕ ಮನೋಭಾವದೊಂದಿಗೆ ಮರಳಿದರು. ಜನರ ಕಷ್ಟಗಳಿಗೆಲ್ಲಾ ಅವರ ಅವೈಜ್ಞಾನಿಕ ಜೀವನ ವಿಧಾನವೇ ಕಾರಣವೆಂದು ಚಿಂತಿಸಿ ಪರಿತಾಪ ಪಟ್ಟರು. ಹಳೆಯ ಕಂದಾಚಾರಗಳನ್ನೆಲ್ಲಾ ನಿರ್ಮೂಲಮಾಡಿ ವೈಜ್ಞಾನಿಕವಾಗಿ ಯೋಚಿಸುವಂತೆ ಜನರನ್ನು ತಯಾರು ಮಾಡ ಬೇಕೆಂದು ಯೋಜನೆ ಹಾಕಿಕೊಂಡರು. ಅದರಂತೆ ತಜ್ಞರ ಸಲಹೆ ಪಡೆದು ಮಠದ ಎಲ್ಲ ವ್ಯವಹಾರಗಳನ್ನೂ ಕಂಪ್ಯೂಟರೀಕರಣಗೊಳಿಸಿದರು. ಎಲ್ಲೆಲ್ಲೂ ಸಿಸಿಟಿವಿಗಳನ್ನು ಮತ್ತು ಕಂಪ್ಯೂಟರ್‌ಗಳಿಗೆ ಜೋಡಿಸಿದ ಅಲಾರಂಗಳನ್ನು ಸಜ್ಜುಗೊಳಿಸಿದರು. ಯಾರೇ ಎಲ್ಲೇ ಮಿಸುಕಾಡಿದರೂ ಗುರುಗಳಿಗೆ ಗೊತ್ತಾಗುವಂತೆ ರೇಡಿಯೊ ಸಾಧನಗಳನ್ನು ಅಳವಡಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೆಲ್ಲದಕ್ಕಿಂತಾ ಮತ್ತೂ ಕ್ರಾಂತಿಕಾರಿಯಾದ ಮತ್ತೊಂದು ಕ್ರಮವನ್ನು ಅವರು ಕೈಗೊಂಡರು. ಜನರ ಮಧ್ಯೆ ದ್ವೇಷ, ಅಸಹನೆ, ವೈಷಮ್ಯಗಳು ಏರ್ಪಡಲು ಅವರ ಧಾರ್ಮಿಕತಿಕ್ಕಾಟವೇ ಕಾರಣವೆಂದು ವೈಜ್ಞಾನಿಕವಾಗಿ ಸಿದ್ಧಗೊಂಡಿದ್ದರಿಂದ ಕಂಪ್ಯೂಟರೀಕರಣಗೊಂಡ ವಿನೂತನ ಸರ್ವಧರ್ಮಭವನವನ್ನು ಕಟ್ಟಿಸಿದರು. ಅದರ ಶಾಖೆಗಳನ್ನು ಎಲ್ಲೆಲೂ ಸ್ಥಾಪಿಸಿ ಜನರು ತಾವಿರುವ ಪ್ರದೇಶದಲ್ಲೇ ಸಕಾದ ಎಲೆಕ್ಟ್ರಾನಿಕ್ ಕೌಂಟರುಗಳ ಮೂಲಕ ಪೂಜೆ ಸಲ್ಲಿಸುವ ಸೌಲಭ್ಯವನ್ನು ಒದಗಿಸಿದರು.
ಸಕಾದ ಎನ್ನುವುದು ಸರ್ವಕಾಲಿಕ ದರ್ಶನ ಎಂಬುದರ ಸಂಕ್ಷಿಪ್ತರೂಪ. ಈ ಸೌಲಭ್ಯವನ್ನು ಬಳಸಿಕೊಂಡು ವಿಶ್ವದ ಯಾವ ಭಾಗದಿಂದ ಬೇಕಾದರೂ, ಯಾರೇ ಆದರೂ ದೇವರ ದರ್ಶನ ಪಡೆಯುವುದು, ಪೂಜೆಸಲ್ಲಿಸುವುದು ಸುಲಭ. ಭಕ್ತರು ಸಕಾದ ಯಂತ್ರದೊಳಕ್ಕೆ ಎರಡು ರೂ. ನ ನಾಣ್ಯವನ್ನು ತೂರಿಸಬೇಕು. ಆಗ ಸ್ಕ್ರೀನಿನಲ್ಲಿ ಮತಧರ್ಮಗಳ ಐಕಾನ್ ಕಾಣಿಸುತ್ತವೆ. ಭಕ್ತರು ತಮಗೆ ಬೇಕಾದ ಐಕಾನ್ ಮೇಲೆ ಬೆರಳಿಟ್ಟರೆ ಆ ದೇವರ ದರ್ಶನ ಆಗುತ್ತದೆ. ಪೂಜೆ ಮಾಡಿಸಬೇಕಿದ್ದರೆ ಮತ್ತೊಂದು ಎರಡು ರೂ. ನಾಣ್ಯವನ್ನು ಯಂತ್ರದೊಳಕ್ಕೆ ತೂರಿಸಬೇಕು. ಆಗ ಸ್ಕ್ರೀನಿನ ಮೇಲೆ ಪೂಜಾವಿಧಾನದ ವಿವರಗಳು ಮೂಡುತ್ತವೆ. ಅಂದರೆ, ಪತ್ರ, ಪುಷ್ಪ, ಫಲ, ಕರ್ಪೂರ, ಮುಂತಾದ ಪೂಜಾಪರಿಕರಗಳನ್ನು ಬಳಸಿ, ಇದ್ಯಾವುದೂ ಇಷ್ಟವಿಲ್ಲದಿದ್ದರೆ ಅವರವರ ಮನೋದ್ರವ್ಯವನ್ನು ಬಳಸಿ ಪೂಜೆ ಮಾಡಲು ಅವಕಾಶವಿದೆ. ಮಂತ್ರೋಚ್ಚಾರ, ಪ್ರಾರ್ಥನೆ ಮತ್ತು ಮಂಗಳಾರತಿಗೆ ಪ್ರತ್ಯೇಕ ಹಣ ಕೊಡಬೇಕಾಗಿಲ್ಲ. ಪ್ರಸಾದ ಬೇಕಿದ್ದರೆ ಒಂದಾದ ಮೇಲೊಂದರಂತೆ ಒಟ್ಟು ಮೂರು ನಾಣ್ಯಗಳನ್ನು ತೂರಿಸಿದರೆ ಪ್ರಸಾದದ ವೋಚರ್ ಯಂತ್ರದಿಂದ ಬರುತ್ತದೆ. ಅದನ್ನು ಮಠದ ಲಾಂಛನವನ್ನು ಪ್ರದರ್ಶಿಸುವ ಅಂಗಡಿಗಳಲ್ಲಿ, ಮಾಲ್ ಮತ್ತು ಕಿಯೋಸ್ಕ್‌ಗಳಲ್ಲಿ ತಮಗೆ ಬೇಕಾದ ಪ್ರಸಾದಕ್ಕೆ ಬದಲಾಯಿಸಿಕೊಳ್ಳಬಹುದು.
ಜನಸಾಮಾನ್ಯರಿಗೆ ಮತ್ತು ಅಗತ್ಯಬಿದ್ದವರಿಗೆ, ಅಂದರೆ ಬಡವರು ಮತ್ತು ಅಜ್ಞಾನಿಗಳಿಗೆ ಅನುಕೂಲವಾಗಲೆಂದು ಪ್ರತಿ ಸಕಾದ ಕೌಂಟರಿನ ಬಳಿಯಲ್ಲೂ ಮಠದ ಸಮವಸ್ತ್ರ ಧರಿಸಿದ ಪೂಜಾರಿ ಇರುತ್ತಾರೆ. ಅವರ ಸಹಾಯದಿಂದಲೂ ಬೇಕಾದ ಪೂಜೆ ಸಲ್ಲಿಸಬಹುದು. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬೇಕಾದರೂ ಬಳಸಿ ಪೂಜೆ ಸಲ್ಲಿಸಲು ಅವಕಾಶವಿದೆ. ಏನೇ ತೊಂದರೆ ಎದುರಾದರೂ ಸದಾಕಾಲವೂ ಅಂದರೆ, ಆಗಾಗ ಸಂಪರ್ಕ ದೊರೆಯುವ ಸಹಾಯವಾಣಿಯ ಹುಡುಗಿಯರನ್ನು ಯಾವುದೇ ಮೊಬೈಲ್ ಮೂಲಕವಾದರೂ ಸಂಪರ್ಕಿಸಿ ಬೇಕಾದ ಸೇವೆ ಪಡೆಯಬಹುದು. ಸಕಾದ ಕೌಂಟರಿನ ಬಳಿ ಪಾರ್ಕಿಂಗ್ ಉಚಿತ. ಯಾರಾದರೂ ಹಣ ಕೇಳಿದರೆ ಮಠದ ಓಂಬುಡ್ಸ್ ಮನ್‌ಗೆ ದೂರು ಕೊಡಬಹುದು. ಅಥವ ಮಠದ ಕೇಂದ್ರಕ್ಕೆ ನೇರವಾಗಿ ಇಮೇಲ್ ಕಳಿಸಿ ದೂರು ದಾಖಲಿಸಬಹುದು.
ಇ ಮತ್ತು ಈ ಕ್ರಮಗಳಿಂದ ಜನ ದೇವರನ್ನು ವೈಜ್ಞಾನಿಕವಾಗಿ ಪೂಜಿಸುವಂತಾಯಿತು. ದೇಶ ವಿದೇಶಗಳಿಂದ ಭಕ್ತರು ಮಠಕ್ಕೆ ಆಗಮಿಸಿದರು. ಅವರಿಗೆ ತೊಂದರೆಯಾಗಬಾರದೆಂದು ಎಲ್ಲೆಲ್ಲೂ ಫಾರಿನ್ ಕಮೋಡ್ ಇರುವ ಷಿಟ್‌ಸೆಂಟರ್‌ಗಳನ್ನು ಅಂದರೆ ಕಕ್ಕಸ್ಸುಗಳನ್ನು ಕಟ್ಟಿಸಿ ಪೇಯ್ಡ್ ಸರ್ವೀಸ್ ಪದ್ಧತಿಯನ್ನು ಬಳಕೆಗೆ ತಂದರು. ಸುರಜನರು, ಹರಿಜನರು, ಗಿರಿಜನರು ಎಂಬ ಭೇದವೇ ಇಲ್ಲದಂತೆ ದೇಶೀಯರು ಬೇಕಾದರೂ ಹಣ ಕೊಟ್ಟು ಈ ಕಮೋಡುಗಳನ್ನು ಬಳಸಬಹುದಾದ ಪ್ರಗತಿಶೀಲತೆ ಇದರಿಂದ ಸಾಧ್ಯವಾಯಿತು. ಮಿನರಲ್ ವಾಟರ್ ಮತ್ತು ಮೃದುಪಾನೀಯಗಳನ್ನು ಸ್ಥಳದಲ್ಲೇ ಮಾರುವ ವ್ಯವಸ್ಥೆ ಮಾಡಿದ್ದರಿಂದ ಯಾರಿಗೂ ಶೌಚದ ತೊಂದರೆ ಯಾಗುವ ಸಂಭವವೇ ಇರಲಿಲ್ಲ. ಆದರೆ ವೈಜ್ಞಾನಿಕ ಮನೋಭಾವಕ್ಕೆ ಹೊರತಾದ ಮೂಢಜನರು ಹಾಲಿನಂತೆ ಬೆಳ್ಳಗೆ ಹೊಳೆಯುತ್ತಿದ್ದ ಈ ಕಮೋಡುಗಳಿಗೆ ಯಾಕೋ ಏನೋ ಸೊಪ್ಪು ಸದೆ ಬಳಸಿ ಪೂಜೆ ಸಲ್ಲಿಸಿ ಹೋಗಿದ್ದರಿಂದ ಕಮೋಡುಗಳು ಕಟ್ಟಿಕೊಂಡು ವಿದೇಶೀಯರಿಗೆ ತೊಂದರೆಯಾಯಿತು.
ಅದಾದಮೇಲೆ ವೈಜ್ಞಾನಿಕ ಪೂಜೆಯನ್ನು ಬಳಕೆಗೆ ತಂದ ವೈಜ್ಞಾನಿಕಕೇಂದ್ರದ ಡೈರೆಕ್ಟರಾದ ಧರ್ಮಗುರುಗಳು ಸ್ವಲ್ಪವೂ ಬೇಸರಿಸದೆ, ಕಕ್ಕಸ್ಸುಗಳನ್ನೆ ಎರಡು ರೀತಿಯದಾಗಿ ವಿಂಗಡಿಸಿ, ವೈಜ್ಞಾನಿಕಶೌಚ ಮತ್ತು ಆನುಭಾವಿಕಶೌಚ ಎಂಬ ಎರಡು ಶಾಖೆಗಳನ್ನು ಬಳಕೆಗೆ ತಂದರು. ಒಂದಕ್ಕೆ ವೈಜ್ಞಾನಿಕ ಶಿಷ್ಯರನ್ನು ಮತ್ತೊಂದಕ್ಕೆ ಸಂಸ್ಕೃತ ಶಿಷ್ಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಹಿಮಾಲಯಕ್ಕೆ ಹೋದರು. ಅಂದರೆ ಸತ್ತುಹೋದರು.
ಕಾಲಕ್ರಮದಲ್ಲಿ ಈ ಎರಡುಶಾಖೆಗಳೇ ಇ ಮತ್ತು ಈ ಎಂಬ ಎರಡು ಸ್ವತಂತ್ರ ಮಠಗಳಾಗಿ ಬೆಳೆದು ಭಕ್ತರಲ್ಲಿಯೂ ಎರಡು ಪಂಗಡಗಳಾದವು. ಮೂಲ ಮಠದ ಅಗಾಧ ಆಸ್ತಿಯು ಯಾವ ಶಾಖಾ ಮಠಕ್ಕೆ ಸೇರಬೇಕೆಂಬ ಬಗ್ಗೆ ಹೊಡೆದಾಟವಾಗಿ ಆ ಧರ್ಮಯುದ್ಧದಲ್ಲಿ ಕೆಲವರು ಸತ್ತರು. ವಿವಾದ ಕೋರ್ಟಿನ ಮೆಟ್ಟಿಲನ್ನು ಹತ್ತಿತು. ಎರಡೂ ಕಡೆಯ ಖ್ಯಾತಿವೆತ್ತ ಲರ್ನೆಡ್ ಲಾಯರ್‌ಗಳ ವಾದವನ್ನು ವರ್ಷಗಟ್ಟಲೆ ಸಾವಧಾನದಿಂದ ಆಲಿಸಿದ ನ್ಯಾಯಾಲಯವು ಕೊನೆಗೆ ಅವರವರ ನಂಬಿಕೆಗೆ ಅನುಸಾರವಾಗಿ ಅವರವರ ಗುರುಗಳನ್ನು ನೇಮಿಸಿಕೊಳ್ಳುವ ಅಧಿಕಾರವಿದೆಯೆಂದು, ಮಠದ ಕಂಪ್ಯೂಟರ್ ಗಳು ಅನುಭಾವೀ ಮಠಕ್ಕೂ, ಸಂಸ್ಕೃತಗ್ರಂಥಭಂಡಾರವು ವೈಜ್ಞಾನಿಕ ಮಠಕ್ಕೂ ಸೇರಬೇಕೆಂದು, ಮಠಕ್ಕೆ ಸೇರಿದ ಅಂಗಡಿ, ಟಾಕೀಸು, ವೈನ್ ಶಾಪ್‌ಗಳು, ಮಾಲ್‌ಗಳು, ಬ್ಯಾಂಕು ಮತ್ತು ಬ್ರೌಝಿಂಗ್ ಸೆಂಟರ್‌ಗಳಲ್ಲಿ, ಹೊಲಗದ್ದೆಗಳಲ್ಲಿ ಕೆಲಸಮಾಡುವ ರೈತರು, ಹೆಂಗಸರು, ಮತ್ತು ಕಾರ್ಮಿಕರ ಸೇವಾಭದ್ರತೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡುಬರತಕ್ಕದ್ದೆಂದು, ಅಂದರೆ ಬೇಕಾದಾಗ ಕೆಲಸದಿಂದ ತೆಗೆಯುವ ಅಧಿಕಾರ ಮುಂದುವರೆಯುತ್ತದೆಂದೂ ತೀರ್ಪಿತ್ತಿತು. ಅಜ್ಞಾನಿಗಳ ಅವಿವೇಕದಿಂದಾಗಿ ಉದ್ಭವಿಸಿದ್ದ ತಾತ್ಕಾಲಿಕ ತೊಂದರೆಯು ಹೀಗೆ ಪರಿಹಾರವಾಗಿ ಸತ್ಯ ನೆಲೆಗೊಂಡು, ಧರ್ಮಸಂಸ್ಥಾಪನೆಯಾಗಿ, ಲೋಕಕ್ಕೆ ನ್ಯಾಯ ದೊರಕಿತು.
|