ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕೊರಿಯನ್ ಹುಡುಗಿಯರ ಇಂಗ್ಲಿಷ್ ಸಾಹಸ    
ಸುದರ್ಶನ್
ಶುಕ್ರವಾರ, 26 ಜೂನ್ 2009 (00:00 IST)
ಕೊರಿಯನ್ ಹುಡುಗಿಯರು ಇಂಗ್ಲಿಷ್ ಕಲಿತ ಜಾಗ
ನಾನು ಆಸ್ಟ್ರೇಲಿಯಕ್ಕೆ ಬಂದ ಹೊಸತರಲ್ಲಿ ಕೆಲಸ ಸಿಕ್ಕದೆ ಪರದಾಡುತ್ತಿದ್ದೆ. ದಿನಾಲೂ ಸರ್ಕಾರದ ಕಾಮನ್ ವೆಲ್ತ್ ಎಂಪ್ಲಾಯ್‌ಮೆಂಟ್ ಸರ್ವೀಸಿನ ಆಫೀಸಿಗೆ ಹೋಗೋದು, ಅಲ್ಲಿ ಬೋರ್ಡಿನ ಚೀಟಿಗಳಲ್ಲಿ ಏನಾದರೂ ಕೆಲಸ ಇದೆಯಾ ಎಂದು ಹುಡುಕೋದು ನಮ್ಮ ದೈನಂದಿಕವಾಗಿತ್ತು. ಬರುಬರುತ್ತಾ ಸಿಟ್ಟು ಅಸಹಾಯಕತೆ ಜಾಸ್ತಿ ಆಗ್ತಿತ್ತು. ಹೀಗಿದ್ದರೆ ಆಗದು ಅಂತ ಹೋಗಿ ಕಾಲೇಜಿಗೆ ಸೇರಿಕೊಂಡೆ. ಕಂಪ್ಯೂಟರ್‍ ಕೆಲಸ ಗೊತ್ತಿದ್ದರೂ ಮತ್ತೆ ಕಂಪ್ಯೂಟರ್‍ ಕೋರ್ಸು ಮಾಡೋದು ಒಳ್ಳೇದು ಅನಿಸಿತು. ಇದು ತೊಂಬತ್ತರ ಮೊದಮೊದಲ ವರ್ಷಗಳು. ಇನ್ನೂ ಇಂಡಿಯಾದಲ್ಲಿ ಐಟಿ ಯುಗ ಶುರುವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲೂ ಆಗ "ಕಮರ್ಷಿಯಲ್ ಡಾಟಾ ಪ್ರೋಸಸಿಂಗ್" ಅಂತನೇ ಕೋರ್ಸಿನ ಹೆಸರು!

ಅವೆಲ್ಲಾ ಇರಲಿ. ಹೇಳಹೊರಟಿದ್ದು ಕಾಲೇಜಿನ ನಮ್ಮ ಕ್ಲಾಸಿನಲ್ಲಿದ್ದ ಕೊರಿಯಾದ ಒಂದಿಬ್ಬರು ಹುಡುಗಿಯರ ಬಗ್ಗೆ. ಪುಟ್ಟ ಪುಟ್ಟ ಆಕೃತಿಯ, ಪುಟಪುಟನೆ ಒಳಹೊರಗೆ ಓಡಾಡುತ್ತಿದ್ದವರು. ಇಬ್ಬರೂ ಒಬ್ಬರಿಗೊಬ್ಬರು ಸದಾ ಅಂಟಿಕೊಂಡಿರುತ್ತಿದ್ದರು. ನನ್ನಂತೆ ಆಗ ತಾನೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಏನೋ ಎತ್ತೋ ಎಂಬಂತೆ ಸುತ್ತಮುತ್ತ ಕಣ್ಣಿರುತ್ತಿತ್ತು. ಅವರದೂ, ನನ್ನದೂ.

ನಮಗೂ ಅವರಿಬ್ಬರಿಗೂ ಒಂದು ವ್ಯತ್ಯಾಸವಿತ್ತು. ಅವರಿಗೆ ಕೊಂಚವೂ ಇಂಗ್ಲೀಷು ಬರುತ್ತಿರಲಿಲ್ಲ. ಬರೇ, ಐ-ಯು, ಕಮ್-ಗೋ, ಹಿಯರ್- ದೇರ್‍... ಇಷ್ಟೆ. ಕಾಲೇಜಿನ ನೋಟೀಸ್ ಬೋರ್ಡಿನ ಮುಂದೆ ತುಂಬಾ ಹೊತ್ತು ನಿಂತು ಇಬ್ಬರೂ ಚರ್ಚಿಸುತ್ತಿದ್ದುದು ನೋಡುತ್ತಿದ್ದೆ. ಚರ್ಚೆ ಏನಿರಬಹುದು ಅನ್ನೋ ಕುತೂಹಲ. ಹೋಗಿ ಮಾತಾಡಿಸೋಕೆ ಹಿಂಜರಿಕೆ. ಕಾಲೇಜಿನ ಯಾವುದೋ ಮ್ಯಾಗಜೀನೋ, ಬಿಟ್ಟಿ ಕಮ್ಯುನಿಟಿ ಪೇಪರೋ ಹಿಡಿಕೊಂಡು ಕಾಲೇಜಿನ ಅಂಗಳದಲ್ಲಿ ಇಬ್ಬರೂ ದೀರ್ಘವಾಗಿ ಮಾತಾಡುತ್ತಿದ್ದರು. ಒಮ್ಮೆ ಕ್ಲಾಸಿನ ಹೊರಗೆ ಕೊರಿಯನ್ ಭಾಷೆಯ ಪೇಪರ್ ಹಿಡಿಕೊಂಡು, ಅದರಲ್ಲಿದ್ದ ಸಿನೆಮಾ ನಟನ ಫೋಟೋ ನೋಡತಾ, ತಮ್ಮ ಕನಸುಗಳಿಗೆ ತಾವೇ ನಕ್ಕೊಂಡು ಖುಷಿಯಾಗಿದ್ದರು. ಆದರೆ ಕ್ಲಾಸು ಹೊಕ್ಕೊಡನೆ ಗಂಭೀರವಾಗಿ ಬಿಡುತ್ತಿದ್ದರು. ಪುಸ್ತಕ ತೆರೆದಿಟ್ಟುಕೊಂಡು ಎಡೆಬಿಡದೆ ಬರೆದುಕೊಳ್ಳುತ್ತಿದ್ದರು. ಇವೆಲ್ಲಾ ನನಗೆ ಸೋಜಿಗವಾಗಿ ಕಾಣುತ್ತಿತ್ತು.

ಕ್ಲಾಸಿನಲ್ಲಿ ನಾನು ಟೀಚರಿನೊಡನೆ ಕೊಂಚ ಜಗಳ ಆಡುತ್ತಿದ್ದೆ, ಹಾಗಾಗಿ ಕ್ಲಾಸಿನ ಉಳಿದವರಲ್ಲಿ ನನ್ನ ಜತೆ ಒಂದು ತರ ಸಲಿಗೆ. ನನಗೂ ಅವರ ಹಿನ್ನೆಲೆ ಕತೆ ಕೇಳುವ ಹುಚ್ಚು. ಆದರೆ, ಈ ಹುಡುಗಿಯರು ಮಾತ್ರ ದೂರದಿಂದ ನಗುತ್ತಿದ್ದರೇ ಹೊರತು ಎಂದೂ ಬಂದು ಮಾತಾಡಿಸಿದವರಲ್ಲ. ಒಂದು ದಿನ ಅವರನ್ನು "ನೀವು ಎಲ್ಲಿಂದ ಬಂದವರು?" ಅಂತ ಕೇಳಿದೆ. "ಕೊರಿಯಾ" ಅಂತ ಒಬ್ಬಳು ಹೇಳಿದಳು. ನಾನು "ನಾರ್ತ, ಸೌತ?" ಎಂದು ಕೇಳಿದೆ. ಇದೆಂತಹ ಪೆದ್ದು ಪ್ರಶ್ನೆ ಅನ್ನುವಂತೆ "ಅಫ್ ಕೋರ್ಸ್ ಸೌತ್!" ಅಂತಂದು ಇಬ್ಬರೂ ನಕ್ಕೊಂಡು ಹೊರಟು ಹೋದರು. ನಾನು ಕೇಳಿದ ಪ್ರಶ್ನೆ ಅವರಿಗೆ ಏಕೆ ಹಾಗೆ ಕಂಡಿತು ಅಂತ ತಿಳೀಲಿಲ್ಲ. ನನಗೆ ಅವರು ಒಂದು ಬಗೆಯ ವಿಸ್ಮಯ.

ಒಂದೆರಡು ತಿಂಗಳು ಕಳಿದಿತ್ತು. ಕ್ಲಾಸಿನವರಿಗೆಲ್ಲಾ ತಮ್ಮಲ್ಲೇ ತುಸು ಸಲುಗೆ ಹುಟ್ಟಿಕೊಂಡಿತ್ತು. ಆದರೂ ಆ ಇಬ್ಬರು ಕೊರಿಯನ್ ಹುಡುಗಿಯರು ಮಾತ್ರ ಕ್ಲಾಸಿನಲ್ಲಿ ಇನ್ನೂ ಗಂಭೀರವಾಗಿಯೇ ಇದ್ದರು. ಹೊರಗೆ ತಮ್ಮಷ್ಟಕ್ಕೆ ನಗುತ್ತಾ ಇರುತ್ತಿದ್ದರು. ಒಂದು ದಿನ ಕಾಲೇಜಿನ ಅಂಗಳದ ಹುಲ್ಲಿನ ಮೇಲೆ ಇಬ್ಬರೂ ಕೂತಿದ್ದರು. ಏನೋ ಬಿಸಿ ಬಿಸಿ ಚರ್ಚೆ ನಡೆದಿತ್ತು. ಪಕ್ಕದಲ್ಲೇ ಹೋಗುತ್ತಿದ್ದ ನನ್ನನ್ನು ನೋಡಿ ಅವಳಲ್ಲೊಬ್ಬಾಕೆ ತಟ್ಟನೆ ಹತ್ತಿರ ಬಂದು "ಎಕ್ಸೂಸ್ ಮಿ" ಎಂದಳು. ಏನೆಂದು ಕೇಳಿದೆ. ಕೈಯಲ್ಲಿದ್ದ ಪುಟ್ಟ ಪುಸ್ತಕದಲ್ಲಿ ಏನೋ ಓದಿ ಯಾವುದೋ ಇಂಗ್ಲಿಷ್ ಪದದ ಅರ್ಥ ಕೇಳಿದಳು. ಹೇಳಿದೆ. ಮಿಕಿಮಿಕಿ ನೋಡಿದಳು. ಒಂದು ಚೂರು ವಿವರಿಸಿದೆ. ಹಾ ಎಂದು ತಲೆಹಾಕಿ ಥ್ಯಾಂಕ್ಸ್ ಹೇಳಿ ಓಡಿದಳು.

ಇಂಗ್ಲಿಷ್-ಕೊರಿಯನ್ ಡಿಕ್ಷನರಿಅವರಿಬ್ಬರು ಕೂತಿದ್ದ ಕಡೆಗೆ ಹೋದೆ. ಏನು ಮಾಡ್ತಾ ಇದ್ದಾರೆ ಅಂತ ನೋಡಿದೆ, ಅವರ ಪುಸ್ತಕದ ತುಂಬಾ ಒಂದು ಚೂರು ಜಾಗ ಇಲ್ಲದ ಹಾಗೆ ಕೊರಿಯನ್‌ ಅಕ್ಷರದಲ್ಲಿ ಬರಕೊಂಡಿದ್ದರು. ಕ್ಲಾಸಲ್ಲಿ ಪಾಠ ಕೇಳೋವಾಗ ಬರಕೊಂಡಿದ್ದು ಅಂತ ಗೊತ್ತಾಯ್ತು. ಏನಿದು ಅಂತ ಕೇಳಿದೆ. ಪಕ್ಕದಲ್ಲಿದ್ದ ಇಂಗ್ಲಿಷ್ ಕೊರಿಯನ್ ಡಿಕ್ಷನರಿ ತೋರಿಸಿ "ಮೀನಿಂಗ್ಸ್" ಅಂದಳು. ಪಾಠ ಮಾಡುವಾಗ ಕೇಳಿದ ಆದರೆ ಅರ್ಥವಾಗದ ಇಂಗ್ಲೀಷ್ ಪದಗಳನ್ನು ಕೊರಿಯನ್‌ನಲ್ಲಿ ಗೀಚಿಕೊಳ್ಳುತ್ತಿದ್ದರು. ಆಮೇಲೆ ಅದನ್ನು ಡಿಕ್ಷನರಿಯಲ್ಲಿ ನೋಡಿ, ಕ್ಲಾಸಿನಲ್ಲಿ ಹೇಳಿದ್ದನ್ನು ಅರ್ಥೈಸಿಕೊಂಡು ಮತ್ತೊಂದು ಪುಸ್ತಕದಲ್ಲಿ ನೋಟ್ಸ್ ಬರಕೊಳ್ಳುತ್ತಿದ್ದರು. ಹೀಗೆ ಎಲ್ಲಾ ಕ್ಲಾಸಿನಲ್ಲೂ ಕೇಳಿದ್ದನ್ನು ಕೊರಿಯನ್‌ನಲ್ಲಿ ಗೀಚಿಕೊಂಡು ನಂತರ ನೋಟ್ಸ್ ಮಾಡಿಕೊಳ್ತಾ ಇದ್ದರು. ತಡೆತಡೆದು "ಸ್ಲೋಲಿ... ಇಟ್ ಬಿಕಂಸ್ ಈಸಿ" ಅಂದು ನಕ್ಕಳು. ಪುಟದ ತುಂಬಾ ಇದ್ದ ಪದಗಳಿಗೆ ಇವರು ಅರ್ಥ ನೋಡಿಕೊಳ್ಳೋಕೆ ಬಿಟ್ಟು ನಾನು ಅಲ್ಲಿಂದ ಹೊರಟೆ.

ಕಾಲೇಜು ಶುರುವಾಗಿ ಸುಮಾರು ಆರು ತಿಂಗಳಲ್ಲಿ ನಾವೆಲ್ಲಾ ಒಂದು ಪ್ರೆಸೆಂಟೇಷನ್ ಕೊಡಬೇಕಿತ್ತು. ಕ್ಲಾಸಿನಲ್ಲಿ ಕಲಿತದ್ದನ್ನೇ ರಿಸರ್ಚ್ ಮಾಡಿ ಇನ್ನಷ್ಟು ವಿಸ್ತರಿಸಿ ಹೊಸ ವಿಷಯಗಳನ್ನು ಹೇಳಬೇಕಿತ್ತು. ಆ ಇಬ್ಬರ ಇಂಗ್ಲಿಷ್ ಪರದಾಟ ಗೊತ್ತಿದ್ದ ನಾನು ಕುತೂಹಲ ಮತ್ತು ಆತಂಕದಿಂದ ಅವರ ಸರದಿಗೆ ಕಾದೆ. ಆದರೆ ಅವರು ಇಂಗ್ಲೀಷಿನಲ್ಲಿ ಸರಳವಾಗಿ ತಪ್ಪಿಲ್ಲದಂತೆ ಪ್ರೆಸೆಂಟೇಷನ್ ಕೊಟ್ಟರು. ತಾವು ಆರಿಸಿಕೊಂಡ ಸಂಗತಿಯ ಬಗ್ಗೆ ಮಹತ್ವಪೂರ್ಣವಾದ ಒಳನೋಟ ಕೊಟ್ಟರು. ಟೀಚರಿಗಾಗಲೀ, ಉಳಿದವರಿಗಾಗಲೀ ಅವರ ಇಂಗ್ಲೀಷಿನ ಕಷ್ಟ ಗೊತ್ತೂ ಆಗದಂತಿತ್ತು!

ಕನ್ನಡ ಮೀಡಿಯಮ್ಮಿನಲ್ಲಿ ಓದಿ ಇಂಗ್ಲಿಷ್ ಕಲಿಯಬೇಕಾದವರ ಪಾಡು ನನಗೆ ಗೊತ್ತಿತ್ತು. ಹಾಗೆಯೇ, ಇಂಗ್ಲಿಷ್‌ಮಯವಾದ ಇಂಡಿಯಾದಿಂದ ಇಲ್ಲಿಗೆ ಬಂದು ತಪ್ಪು ತಪ್ಪು ಇಂಗ್ಲಿಷ್ ಮಾತಾಡುವುದೂ ಗೊತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇಂಗ್ಲಿಷಿನ ಬಗ್ಗೆ ನಾನೇ ಎಚ್ಚರವಹಿಸುವಂತೆ, ತಪ್ಪು ಮಾಡಿ ಸಬೂಬು ಹೇಳದಂತೆ ಆಯಿತು. ಅದಕ್ಕೆ ಆ ಇಬ್ಬರು ಕೊರಿಯನ್ ಹುಡುಗಿಯರು ಕಾರಣ ಎಂದರೆ ತಪ್ಪಾಗಲಾರದು. ಈಗ ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ಪುಣ್ಯಾತಗಿತ್ತೀರು!
ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು