ಸುದರ್ಶನ್ ಎಂಬತ್ತರ ದಶಕದಿಂದಲೇ ಹಲವು ನಿಟ್ಟಿನಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರು. ಪ್ರೇಮಾ ಕಾರಂತರ ನಿರ್ದೇಶನದಲ್ಲಿ ಚಂದ್ರಶೇಖರ ಕಂಬಾರರ "ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು" ನಾಟಕದಲ್ಲಿ ಅಲಿಬಾಬಾನಾಗಿ ರಂಗ ಹತ್ತಿದವರು. ಮುಂದೆ ಬೆನಕ ತಂಡದ "ಹ್ಯಾಮ್ಲೆಟ್", "ಸತ್ತವರ ನೆರಳು", "ಜೋಕುಮಾರಸ್ವಾಮಿ", "ಕಾಗೆ ಕುಣಿತ", "ಸಂಕೀರ್ಣ", "ಯಮರಂಜನೆ" ಹೀಗೆ ಹಲವಾರು ನಾಟಕಗಳಲ್ಲಿ ತೊಡಗಿಕೊಂಡವರು. ಮುಂದೆ ಪ್ರಯೋಗರಂಗದವರ "ಬ್ರಹ್ಮಚಾರಿ ಶರಣಾದ", "ಟೆಂಪೆಸ್ಟ್", "ಮೌನಿ" ಮುಂತಾದ ನಾಟಕಗಳಲ್ಲಿ ನಟಿಸಿದ್ದರು. ಅಲ್ಲದೆ "ಮಣ್ಣಿನ ಬಂಡಿ" ಹಾಗು "ಬೇವಾರ್ಸಿಗಳ ಸಂಭ್ರಮ (ಭಗವದಜ್ಜುಕೀಯ)" ನಾಟಕಗಳಲ್ಲಿ ನಟನೆ, ರಚನೆ ಹಾಗು ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದವರು.
"ಮಂಡೇ ಥಿಯೇಟರ್" ಎಂಬ ಆಪ್ತ ರಂಗಪ್ರಯೋಗವನ್ನು ಬೆಂಗಳೂರಿನಲ್ಲಿ ಆರಂಭಿಸಿ "ಗೋಡೆ", "ಸಿಂಹ", "ಕುರ್ಚಿಗಳು", "ಸುರಂಗ" ಮುಂತಾದ ನಾಟಕಗಳನ್ನು ಅನುವಾದಿಸಿ, ನಿರ್ದೇಶಿಸಿದ್ದರು. ಕಂಬಾರರ "ಹಳವಂಡಗಳು" ಹಾಗು ಕೆಲವು ಬೀದಿನಾಟಕಗಳ ನಿರ್ಮಾಣದಲ್ಲೂ ಸಕ್ರಿಯವಾಗಿ ತೊಡಗಿಕೊಂಡವರು. ಕಾವ್ಯ, ಸಾಹಿತ್ಯ ಹಾಗು ಚಲನಚಿತ್ರಗಳಲ್ಲೂ ಆಸಕ್ತಿಯಿರುವ ಸುದರ್ಶನರು ೧೯೮೮ರಲ್ಲಿ "ಭಾಗಿ ೮೮" ಎಂಬ ಪೋಸ್ಟ್ ಕಾರ್ಡಿನಲ್ಲಿ ಪುಟ್ಟಪದ್ಯಗಳನ್ನು ಬರೆದು ಕಳಿಸುವ ವಿಭಿನ್ನ ಚಟುವಟಿಕೆಯನ್ನು ಕೈಗೊಂಡಿದ್ದರು.
೯೦ರ ದಶಕದ ಮೊದಲಿಂದ ಆಸ್ಟ್ರೇಲಿಯದ ಸಿಡ್ನಿಯಲ್ಲಿ ನೆಲೆಸಿರುವ ಸುದರ್ಶನ ಅಲ್ಲಿಯೂ ಸಹ "ಅನಿವಾಸಿ ಕಲಾ ತಂಡ" ಎಂಬ ನಾಟಕದ ಗುಂಪನ್ನು ಕಟ್ಟಿಕೊಂಡು ಕನ್ನಡ ನಾಟಕ, ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಶಾ. ಬಾಲುರಾಯರ "ಬೆಕ್ಕು ಬಾವಿ", ಗೊಗೋಲನ "ಜುಗಾರಿಕೂಟ", ಕಂಬಾರರ "ಜೋಕುಮಾರ ಸ್ವಾಮಿ" ನಾಟಕಗಳನ್ನು ನಿರ್ದೇಶಿಸಿದ್ದಾರೆ.
ನಾಟಕವಷ್ಟೇ ಅಲ್ಲದೆ, ಸಾಕ್ಷ್ಯ ಚಿತ್ರ, ಕಿರುಚಿತ್ರರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಹದಿವಯಸ್ಸಿನಲ್ಲೇ "ಹೆಲ್ಪ್" ಎಂಬ ಕಿರುಚಿತ್ರವನ್ನು ಬೆಂಗಳೂರಿನಲ್ಲಿ ನಿರ್ಮಿಸಿದ್ದರು. "ಕ್ಲೌಡ್ಸ್ ವೀಪ್ ಆನ್ ದಿ ಗ್ರೀನ್‌ನೆಸ್" ಎಂಬ ಅವರ ಕಿರುಚಿತ್ರವು ಆಸ್ಟ್ರೇಲಿಯದ "ಇಂಟೆಲ್ ಟ್ರಾಪ್‌ಫೆಸ್ಟ್" ಎಂಬ ಜಗತ್ತಿನಲ್ಲೇ ಅತಿ ದೊಡ್ಡ ಪ್ರದರ್ಶನ ಉಳ್ಳದ್ದಾಗಿರುವ ಚಿತ್ರೋತ್ಸವದ ಫೈನಲಿಸ್ಟ್ ಆಗಿ ಪ್ರದರ್ಶನಗೊಂಡಿತು. ಮತ್ತೊಂದು ಕಿರುಚಿತ್ರ "ಓಯಸಿಸ್" ಬೈರನ್ ಬೇ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಿತಲ್ಲದೆ, ಬಾರ್ಸಲೋನ ಹಾಗು ರೋಮಿನ ಚಿತ್ರೋತ್ಸವಗಳಲ್ಲೂ ಆಯ್ಕೆಯಾಗಿ ಪ್ರದರ್ಶನಗೊಂಡಿತು.
೨೦೦೬ರಲ್ಲಿ ಇವರು ಬರೆದು ನಿರ್ದೇಶಿಸಿದ "ಮುಖಾಮುಖಿ" ಕನ್ನಡ ಚಲನಚಿತ್ರಕ್ಕೆ ಅತ್ಯುತ್ತಮ ಸಂಭಾಷಣೆ ರಾಜ್ಯ ಪ್ರಶಸ್ತಿ ದೊರೆತಿದೆ. ೨೦೦೭ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ "ಸುವರ್ಣ ಕರ್ನಾಟಕ ರಂಗ ಪುರಸ್ಕಾರ"ವನ್ನು ನೀಡಲಾಯಿತು. ಇವರ ಸ್ವಂತ ನಾಟಕ "ಲೀಲಾಂತ"ವನ್ನು ಎಂ.ಎಸ್.ಸತ್ಯುರವರು ರಂಗಾಯಣದ ನಾಟಕ ಶಿಬಿರಕ್ಕೆ ನಿರ್ದೇಶಿಸಿದ್ದು, ಈಗ ಹಲವು ಕಡೆ ಪ್ರದರ್ಶನವನ್ನು ಕಾಣುತ್ತಿದೆ. "ಲೀಲಾಂತ", "ಜುಗಾರಿಕೂಟ" ಹಾಗು ಕವನ ಸಂಕಲನ "ಚೌಕಿ" ಪ್ರಕಟಗೊಂಡಿರುವ ಕೃತಿಗಳು.
|