ಶಂಕ್ರನಿಗೆ ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಮೊದಲ ಮೂರು ವರ್ಷಗಳು ತಡವಾಗಿ ಆಗಬಹುದೇನೋ ಎಂದು ಕಾದು, ದೇವರ ಬಳಿಯಲ್ಲೆಲ್ಲ ಹೋಗಿಬಂದು, ತೌರಿಗೆ ಓಡಿಹೋಗಿದ್ದ ಹೆಂಡತಿಯನ್ನು ಒಂದು ಜೊತೆ ಕಾಲ್ಗೆಜ್ಜೆ ತಂದುಕೊಟ್ಟು ರಮಿಸಿ ವಾಪಸ್ ಕರೆತಂದು, ವ್ರತನೇಮಗಳನ್ನು ಪಾಲಿಸುತ್ತಾ- ಹೀಗೇ ಕಳೆದುಹೋಗಿತ್ತು. ಇದೆಲ್ಲ ಮುಗಿದ ನಂತರವಷ್ಟೇ ಮಾರುತಿ ದೇವರ ಭಾರ ಮೈಮೇಲೆ ಬಂದಾಗ ಆಸ್ಪತ್ರೆ ಔಷಧವನ್ನೂ ಮಾಡಬೇಕೆಂದು ಹೇಳಿಕೆಯಾದದ್ದು. ಆಗ ನಮ್ಮ ಬಳಿ ಬಂದ ಅವನಿಚ್ಛೆಯಂತೆ, ಮೊದಲು ಹೆಂಡತಿಯ ಪ್ರಾಥಮಿಕ ಪರೀಕ್ಷೆಗಳೆಲ್ಲ ನಡೆದವು. ಮಕ್ಕಳಾಗಲಿಲ್ಲ ಎಂದರೆ ಹೆಂಗಸರದ್ದೇ ಏನೋ ಊನ ಎಂಬುದು ಅವನ ಅಭಿಪ್ರಾಯ. ಆದರೆ ಅವಳಲ್ಲಿ ಏನೂ ತೊಂದರೆ ಕಾಣದೇ ಎಲ್ಲ ಪರೀಕ್ಷೆಯಲ್ಲಿ ಪಾಸಾದಳು. ಈಗ ಶಂಕ್ರನ ತಪಾಸಣೆಯ ಸರದಿ ಬಂದಾಗ, ಒಲ್ಲದ ಮನಸ್ಸಿನಿಂದ ಟೆಸ್ಟ್‌ಗಳಿಗೆ ಒಪ್ಪಿಕೊಂಡ. ಮತ್ಯಾವ ದೈಹಿಕ ತೊಂದರೆಗಳೂ ಕಾಣದೇ, ಅವನ ವೀರ್ಯಪರೀಕ್ಷೆ ನಡೆದು ವರದಿಯಲ್ಲಿ ನಾರ್ಮಲ್ ಆಗಿದೆ ಅಂತಲೇ ಬಂತು. ತನ್ನದೇ ‘ಮಿಷ್ಟೇಕ್’ ಎಂದು ಎಲ್ಲಿ ಹೇಳುವರೋ ಎಂದು ಆತಂಕಗೊಂಡಿದ್ದ ಅವನು, ವೀರ್ಯದ ತೊಂದರೆ ಇಲ್ಲವೆಂದಾಗ ಧೈರ್ಯಗೊಂಡ, ಇಬ್ಬರಲ್ಲೂ ಏನೂ ತೊಂದರೆಯಿಲ್ಲವೆಂದರೆ ಯಾಕೆ ಮಕ್ಕಳಾಗಿಲ್ಲವೆಂದು ನಮ್ಮನ್ನೇ ಕೇಳಿದ. ಹೆಂಡತಿಗೆ ಮಾಡಿದ ಹಾಗೇ ತನಗೂ ಒಂದು ಸ್ಕ್ಯಾನ್ ಮಾಡಿ ಅಂತ ಒತ್ತಾಯಿಸಿದ. ವಿಶೇಷ ಪರೀಕ್ಷೆಯ ಸವಲತ್ತು ತನಗೂ ಸಿಗಲಿ ಎಂದೇ? ಸಂತಾನಪ್ರಾಪ್ತಿ ತಪಾಸಣೆಗೆ ಅವನ ಸ್ಕ್ಯಾನಿಂಗ್ ಅವಶ್ಯವಿಲ್ಲದಿದ್ದರೂ, ಅವನ ಇಚ್ಛೆಯಂತೆ ಮಾಡಿಸಿದೆವು. ಅವನಿಗೆ ಯಾವ ಸೂಚನೆ ಇದ್ದಿರಬಹುದು ಮೊದಲೆ?
ಬಿಸಿಲಲ್ಲಿ ಕೆಲಸ ಮಾಡಿಮಾಡಿ ಸುಟ್ಟ ಕೋಲಿನಂತಿದ್ದ ಅವನಿಗೆ ಮೂತ್ರಕೋಶ ( ಯುರಿನರಿ ಬ್ಲಾಡರ್) ದಲ್ಲಿ ಒಂದು ಕಲ್ಲಿದ್ದುದು ಪತ್ತೆಯಾಯಿತು. ಅಂಥಿಂಥ ಕಲ್ಲಲ್ಲ, ಒಂದು ಮೂಸುಂಬೆ ಹಣ್ಣಿನಷ್ಟು ದೊಡ್ಡದಾಗಿ ಮೈಮೇಲೆಲ್ಲ ಮುಳ್ಳುಮುಳ್ಳಾಗಿದ್ದ ಕಲ್ಲು ಅದು. ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಚುಚ್ಚುತ್ತಿದ್ದ ಈ ಕಲ್ಲಿನ ನೆವದಿಂದ, ಕುಕ್ಕುರುಗಾಲಿನಲ್ಲಿ ಕೂರುವುದು, ಕವುಚಿ ಮಲಗುವುದು, ಮೂತ್ರ ಕಟ್ಟುವುದು ಅವನಿಗೆ ಕಷ್ಟವಾಗಿತ್ತು. ಅಷ್ಟೇ ಅಲ್ಲ, ಅವನಿಗೆ ಹೆಂಡತಿಯ ಜೊತೆ ದೈಹಿಕಸಂಪರ್ಕವೂ ಕಷ್ಟಸಾಧ್ಯವಾಗಿತ್ತು. ಮುಳ್ಳು ಚುಚ್ಚಿದಂತೆ ತೀವ್ರ ಬಾಧೆ ಉಂಟಾಗಿ, ನಂತರ ಮೂರ್ನಾಲ್ಕು ದಿನ ಮೂತ್ರದಲ್ಲಿ ರಕ್ತ ಹೋಗುತ್ತಿದ್ದದ್ದರಿಂದ ಅವಳ ಬಳಿ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದನಂತೆ. ದೈಹಿಕ ಸಂಪರ್ಕ ‘ಗರಮಿ’ ಎಂದು ತೀರ್ಮಾನಿಸಿದ್ದ! ತಪಾಸಣೆಯ ವೇಳೆ ಬಾರಿಬಾರಿ ಕೇಳಿದಾಗಲೂ ಇಬ್ಬರ ನಡುವಿನ ಈ ತೊಂದರೆಯ ಬಗ್ಗೆ ಬಾಯಿ ಬಿಡದಿದ್ದ ಗಂಡಹೆಂಡತಿ, ಈಗ ಕಲ್ಲಿದೆ ಎಂದು ಹೇಳಿದ ಮೇಲೆ ಒಂದೊಂದನ್ನೂ ವಿವರವಾಗಿ ಹೇಳಿಕೊಳ್ಳತೊಡಗಿದರು. ಕೊನೆಗೆ ಕೂಲಂಕಷ ತಪಾಸಣೆಯ ನಂತರ, ಒಂದು ಶಸ್ತ್ರಚಿಕಿತ್ಸೆಯ ಮೂಲಕ ಆ ಕಲ್ಲನ್ನು ಹೊರತೆಗೆಯಲಾಯಿತು. ಅದಾದ ನಂತರ ಒಂದೇ ವರ್ಷದಲ್ಲಿ ಭಾಗಿ ಬಸುರಿಯಾಗಿ, ಅವರಿಗೀಗ ನಾಲ್ಕು ಮತ್ತು ಒಂದು ವರುಷದ ಇಬ್ಬರು ಮಕ್ಕಳು!
ಮಕ್ಕಳು ಮತ್ತು ಮೂತ್ರಕೋಶದ ಕಲ್ಲು- ಎತ್ತಣಿಂದೆತ್ತಣ ಸಂಬಂಧವಯ್ಯಾ?!
ಅವನಿಗೆ ತೆಗೆದ ಕಲ್ಲು ನೋಡಿದ್ದೇ ಅವನ ಅಪ್ಪ, ‘ಇಷ್ಟು ದೊಡ್ಡ ಕಲ್ಲನ್ನು ಊಟ ಮಾಡ್ತಾ ಅದು ಹ್ಯಾಗೆ ನುಂಗಿಬಿಟ್ಟುನ್ರಾ?’ ಅಂತ ತುಂಬ ಆಶ್ಚರ್ಯದಿಂದ ಕೇಳಿದ್ದ. ಅವನಂತೇ ಬಹಳಷ್ಟು ರೋಗಿಗಳು ಹೊಟ್ಟೆನೋವಿನಿಂದ ನರಳುತ್ತಿರುವಾಗ, ಇದು ಮೂತ್ರದ ಕಲ್ಲಿನಿಂದ ಬಂದ ನೋವಿರಬಹುದಾದ ಸಾಧ್ಯತೆಯಿದೆಯೆಂದ ಕೂಡಲೇ, ‘ಅಯ್ಯೋ ನಾವು ಅಕ್ಕಿ, ಬೇಳೆ ಎಲ್ಲ ಚೊಕ್ಕ ಮಾಡ್ಕಂಡೇ ತಿಂಬುದು ಅಮ್ಮಾ. ಕಲ್ಲುಪಲ್ಲು ಇರಕ್ಕೆ ಸಾಧ್ಯನೇ ಇಲ್ಲ’ ಎನ್ನುತ್ತಾರೆ. ಅವರಿಗೆಲ್ಲ ಮೂತ್ರದ ಕಲ್ಲೆಂಬುದು ಶಿಲೆಯಲ್ಲವೆಂದೂ, ಅದು ಆಹಾರದ ಮೂಲಕ ಒಳಹೋದ ಕಲ್ಲಲ್ಲವೆಂದೂ, ಮೂತ್ರದಲ್ಲಿರುವ ಉಪ್ಪಿನಂಶ ಹರಳುಗಟ್ಟಿ ಆಗಿರುವುದೆಂದೂ, ತುಂಬಾ ನೀರು ಕುಡಿದರೆ ಆ ಉಪ್ಪಿನಹರಳು ಕರಗುವುದೆಂದೂ ಸಂಕ್ಷಿಪ್ತವಾಗಿ ಮೂತ್ರಶಿಲಾಪುರಾಣವನ್ನು ಹೇಳುತ್ತೇನೆ...
*******
ಸೆಕೆ, ಬೆವರಿಗೆ ಕರಾವಳಿ ಜನ ತೆರಬೇಕಾದ ದುಬಾರಿ ಬೆಲೆ ಎಂದರೆ ಮೂತ್ರದ ಕಲ್ಲುಗಳು. ಸಾಮಾನ್ಯವಾಗಿ ಮೂತ್ರವು ಹಲವು ತ್ಯಾಜ್ಯಗಳ, ಲವಣಗಳ ದ್ರಾವಣ. ಬಿಸಿಲಲ್ಲಿ ಕೆಲಸ ಮಾಡಿ, ತಿರುಗಿ, ಬೆವರಿ ದೇಹದಲ್ಲಿರುವ ನೀರಿನ ಅಂಶ ಹೆಚ್ಚು ವ್ಯಯವಾಗಿ ಮೂತ್ರವು ಸಂತೃಪ್ತ ದ್ರಾವಣದಂತೆ ಆಗುತ್ತದೆ. ಆಗ ಅದರಲ್ಲಿರುವ ಲವಣಾಂಶ ಹರಳುಗಟ್ಟುತ್ತದೆ. ಆಹಾರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್‌ಗಳು, ವಿಟಮಿನ್ ಡಿ ಅಧಿಕವಾಗಿದ್ದಾಗ ಮೂತ್ರದಲ್ಲಿ ಸಣ್ಣ ಹರಳುಗಳು ಉಂಟಾಗುತ್ತವೆ ಹಾಗೂ ಇಂತಹ ಹರಳುಗಳು ಮೂತ್ರದಲ್ಲಿ ವಿಸರ್ಜಿತವಾಗುತ್ತಿರುತ್ತವೆ. ಇದು ನೈಸರ್ಗಿಕವಾಗಿ ನಡೆಯುತ್ತಿರುತ್ತದೆ. ಮೂತ್ರದ ಸೋಂಕು ಉಂಟಾದಾಗ ಒಂದು ಬ್ಯಾಕ್ಟೀರಿಯಾದ ಸುತ್ತಲೋ, ಸಣ್ಣ ಹರಳಿನ ಸುತ್ತಲೋ ಹರಳುಗಟ್ಟುವಿಕೆ ಶುರುವಾಗಿ ಬರಬರುತ್ತ ಹರಳು ಗಾತ್ರದಲ್ಲಿ ದೊಡ್ಡದಾಗುತ್ತದೆ. ಕಿಡ್ನಿಯ(ಮೂತ್ರಜನಕಾಂಗ) ಒಳಗೆ ಹಲವು ಇಂಚುಗಳಷ್ಟು ದೊಡ್ಡ ಕಲ್ಲು ಇದ್ದರೂ ನೋವಿಲ್ಲದೇ ಇರಬಹುದು. ಅಲ್ಲಿಂದ ಹೊರಹೊರಡುವ ಮೂತ್ರನಾಳಗಳು ತುಂಬ ಕಿರಿದಾಗಿದ್ದು, ಕೆಲವು ಮಿಲಿಮೀಟರಿನಷ್ಟು ಸಣ್ಣಹರಳು ಕೂಡ ಆ ನಾಳವನ್ನು ಬ್ಲಾಕ್ ಮಾಡಬಹುದು. ಆಗ ತಯಾರಾದ ಮೂತ್ರವೆಲ್ಲ ಹಿಂದೆಯೇ ಕಟ್ಟಿನಿಲ್ಲುವುದರಿಂದ ತುಂಬ ನೋವನ್ನುಂಟುಮಾಡುತ್ತದೆ. ಕೆಲವು ಬಾರಿ ನೋವಿನ ಕಂತು ಒಂದು ಕೆಟ್ಟ ಪ್ರಯಾಣದ ನಂತರವೋ, ಅಥವಾ ಕಠಿಣ ಕೆಲಸದ ನಂತರವೋ, ವಾಯುಕಾರಕ ವಸ್ತುವಿನ ಸೇವನೆಯ ನಂತರವೋ ಶುರುವಾಗುತ್ತದೆ.
ಅನುಭವಿಸುವ ನೋವಿಗೆ ರ್ಯಾಕಿಂಗ್ ಕೊಟ್ಟರೆ ಪ್ರಥಮ ರ್ಯಾಂಕ್ ಹೆರಿಗೆಯ ನೋವಿಗೆ. ಎರಡನೆಯದು ಮೂತ್ರದ ಕಲ್ಲಿನ ನೋವಿಗೆ. ರೋಗಿಗೆ ನೆಲದ ಮೇಲೆ ಹೊರಳಾಡುವಷ್ಟು ಅತಿತೀವ್ರ ನೋವುಂಟಾಗುತ್ತದೆ. ಒಂದು ಬದಿಯ ಹೊಟ್ಟೆ ಹಾಗೂ ಬೆನ್ನಿನಲ್ಲಿ ಛಳಕಿನಂತೆ ಶುರುವಾಗುವ ನೋವಿನ ಭರಕ್ಕೆ ವಾಂತಿಯಾಗಿ, ತೀವ್ರ ಬೆವರು ಬಂದು, ಎಂತವರನ್ನೂ ದೈನೇಸಿ ಸ್ಥಿತಿಗೆ ತಳ್ಳುತ್ತದೆ. ನೋವು ಕಡಿಮೆಯಾದ ನಂತರ ಕೆಲ ಗಂಡಸರಿಗೆ ನಾನು ತಮಾಷೆ ಮಾಡುವುದಿದೆ - ‘ನಿಮ್ಮ ಹೆಂಡತಿ ಹೆರಿಗೆ ನೋವು ಎಷ್ಟು ಅನುಭವಿಸಿದರೆಂಬುದು ನಿಮಗೆ ಈಗ ಸ್ವಲ್ಪ ಅನುಭವಕ್ಕೆ ಬಂದಿರಬಹುದು’ ಎಂದು. ಮೇರಿ ಮೊಂಟೆಗೋ ಎಂಬ ಆಂಗ್ಲ ಮಹಿಳೆಯೊಬ್ಬಳು ‘ನನ್ನ ಶತ್ರುವಿಗೆ ಸಾವು ಬರುವುದು ಬೇಡ, ಮೂತ್ರದ ಕಲ್ಲುಗಳುಂಟಾಗಲಿ’ ಎಂದು ಹಾರೈಸಿದ್ದಾಳೆ! ನೋವೆಂದರೆ ಅಂತಹ ನೋವದು. ನೋವು ಕಡಿಮೆ ಮಾಡುವುದಾದರೆ ಏನನ್ನೂ ಮಾಡಲು ರೋಗಿ ತಯಾರಾಗುತ್ತಾನೆ. ಒಮ್ಮೆ ನೋವು ಕೊಟ್ಟ ಕಲ್ಲು, ಮೂತ್ರನಾಳದಲ್ಲಿ ಪೂರ್ತಿ ಕೆಳ ಸರಿದು ಬೀಳುವುದರೊಳಗೆ ನಾಲ್ಕಾರು ಬಾರಿ ಮೇಲೇಮೇಲೇ ನೋವು ಕೊಡುತ್ತದೆ. ಒಮ್ಮೆ ಮೂತ್ರದ ಕಲ್ಲುಗಳ ಬಾಧೆಗೆ ಒಳಗಾದವರು, ಐದು ವರ್ಷದೊಳಗೆ ಮತ್ತೆ ಕಲ್ಲಿನ ತೊಂದರೆಗೊಳಗಾಗುವ ಸಾಧ್ಯತೆ ೫೦%!
ಸರಾಸರಿ ಪ್ರತಿದಿನ ಒಬ್ಬ ಕೆಲಸಗಾರ ಮನುಷ್ಯ ೩-೫ ಲೀ. ನೀರು ಕುಡಿದರೆ ಒಳ್ಳೆಯದು. ಕಿಡ್ನಿಯಲ್ಲಿರುವ ಜರಡಿಯಂತಹ ಲೋಮನಾಳಗಳು ರಕ್ತವನ್ನು ಶೋಧಿಸಿ ಮೂತ್ರವನ್ನು ಉತ್ಪತ್ತಿ ಮಾಡುತ್ತವೆ. ದೇಹದ ಚಯಾಪಚಯ ಕ್ರಿಯೆಯಿಂದ ಹುಟ್ಟಿದ ಹಾಗೂ ಆಹಾರದ ಮೂಲಕ ಒಳಬಂದ ಕಶ್ಮಲಗಳು ಮೂತ್ರದಲ್ಲಿ ಹೊರಹೋಗುತ್ತವೆ. ಆದರೆ ಹಳ್ಳಿಯ ಕಡೆ ಕೆಲವು ಜನರಿಗೋ ನೀರು ಕುಡಿಯುವುದೆಂದರೆ ಆಗದು. ತೀರ್ಥ ಕುಡಿದಂತೆ ನೀರು ಕುಡಿಯುತ್ತಾರೆ. ಎಷ್ಟೋ ಜನ ‘ನೀರು ಕುಡಿದೇ ಎಷ್ಟೋ ರೋಗ ಬರುವುದಂತಲ್ಲ’ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಶುದ್ಧ-ಅಶುದ್ಧ ನೀರೆಂದು ಅವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಮಲಬದ್ಧತೆ, ಅಸಿಡಿಟಿ, ಮೂತ್ರದ ಕಲ್ಲು, ಉರಿಮೂತ್ರ, ಬಳಲಿಕೆ ಮುಂತಾದ ಹಲವು ತೊಂದರೆಗಳ ರೋಗಿಗಳಿಗೆ ‘ನೀರು ಕುಡಿದಷ್ಟು ಒಳ್ಳೆಯದು’ ಎಂದು ನಾನು ಹೇಳಹೊರಡುವುದರಲ್ಲಿ, ‘ಅಯ್ಯೋ, ನಾನು ಸಿಕ್ಕಾಪಟ್ಟೆ ನೀರು ಕುಡಿಯುತ್ತೇನೆ’ ಎಂದೇ ಪ್ರಮಾಣ ಮಾಡಿ ಹೇಳುತ್ತಾರೆ. ಅವರ ಮನೆಯವರಾದರೋ, ‘ಊಟಕ್ಕೆ ಕೂತಾಗ ಕೊಟ್ಟ ಒಂದು ಲೋಟ ನೀರು ಬಿಟ್ಟರೆ ಮತ್ತೆ ನೀರೇ ಕುಡಿಯುವುದಿಲ್ಲ, ನೀವಾದ್ರೂ ಸ್ವಲ್ಪ ಹೇಳಿ’ ಎಂದು ನನ್ನ ಬಳಿ ಅಲವತ್ತುಕೊಳ್ಳುತ್ತಾರೆ. ಒಮ್ಮೆ ನನ್ನ ಬಂಧುವೊಬ್ಬರು ನನ್ನ ಜತೆ ಕ್ಲಿನಿಕ್‌ನಲ್ಲಿ ಕುಳಿತಿದ್ದರು. ನಾನು ಕೊಟ್ಟ ಸಲಹೆಗಳನ್ನೆಲ್ಲ ಮೌನವಾಗಿ ಆಲಿಸಿದವರೇ, ‘ಎಲ್ರ ಹತ್ರನೂ ನೀರು ಕುಡೀರಿ ನೀರು ಕುಡೀರಿ ಅಂತೀಯಲ್ಲಮ್ಮ, ಅದ್ಕೇ ಜಲಜ ಕ್ಲಿನಿಕ್ ಅಂತ ಹೆಸರು ಇಟ್ಯಾ ಹೇಗೆ ’ ಅಂತ ತಮಾಷೆ ಮಾಡಿದ್ದರು.
ಮೂತ್ರದ ಕಲ್ಲಿಗೆ ಸಿಗುವ ಪುಕ್ಕಟೆ ಔಷಧ ಎಂದರೆ ನೀರು. ಮೂತ್ರಕಲ್ಲಿಗೆ ಗಾಂವ್‌ಟಿ ಔಷಧ ಕೊಡುವವರು ಊರಿಗೊಬ್ಬೊಬ್ಬರಂತೆ ಇದ್ದಾರೆ. ಎಲ್ಲ ಔಷಧಿಗಳು ಸೇರುಗಟ್ಟಲೇ ನೀರಿನಲ್ಲಿ ಕದರಿಕೊಂಡು ಕುಡಿಯುವಂಥವು. ಹಾಗೆ ಕಟ್ಟುನಿಟ್ಟು ಮಾಡದಿದ್ದರೆ ನಮ್ಮ ಜನ ನೀರೇ ಕುಡಿಯಲಾರರು. ಗಾಂವ್‌ಟಿ ಔಷಧ ಕೊಡುವವರು ಪಥ್ಯ, ನೇಮಗಳ ಬಗ್ಗೆ ಬಹಳ ಕಟ್ಟುನಿಟ್ಟಾಗಿ ಹೇಳುತ್ತಾರೆ - ದಿನಕ್ಕೆ ಐದು ಚೊಂಬು ಕಾದನೀರು ಕುಡಿಯಬೇಕು, ಬೀಜವಿರುವ ಯಾವ ತರಕಾರಿಯನ್ನೂ ತಿನ್ನಬಾರದು, ನಂಜಿನ ವಸ್ತು ತಿನ್ನಬಾರದು, ಉಪ್ಪು ತಿನ್ನಬಾರದು- ಹೀಗೇ. ಅವರು ಹೇಳಿದಂತೆ ಮಾಡದಿದ್ದರೆ ಮದ್ದು ತಾಗುವುದೇ ಇಲ್ಲವೆಂದೂ, ರೋಗ ಬಲಿತ ಮೇಲೆ ಚಿಕಿತ್ಸೆ ಮತ್ತೂ ಕಷ್ಟವೆಂದು ಹೇಳಿದ್ದು ಕೇಳಿ ಚಾಚೂತಪ್ಪದೇ ನಿಯಮಗಳನ್ನು ಪಾಲಿಸುತ್ತಾರೆ. ಆ ಕಟ್ಟುನಿಟ್ಟು ನೇಮ ಪಾಲಿಸುವುದರ ಬಗೆಗಿನ ಶ್ರದ್ಧೆಯೇ ಹಲವು ಬಾರಿ ಕಾಯಿಲೆ ಗುಣಪಡಿಸುತ್ತದೆ. ಮೂತ್ರದ ಕಲ್ಲಿನಲ್ಲಿರುವ ಲವಣಗಳ ಮೇಲೆ ನಾಲ್ಕು ತೆರನ ಕಲ್ಲುಗಳು ಉತ್ಪತ್ತಿಯಾಗುತ್ತವೆಂದು ಹೇಳಬಹುದು. ಯಾವ ಲವಣದ ಕಲ್ಲೆಂಬುದು ಪತ್ತೆಯಾದ ಮೇಲೆ ವೈದ್ಯರೂ ಕೆಲವು ಪಥ್ಯಗಳನ್ನು ವಿಧಿಸುತ್ತಾರೆ. ತುಂಬ ಕಾಮನ್ ಆದ ಕ್ಯಾಲ್ಸಿಯಂ ಕಲ್ಲುಗಳಾದವರಿಗೆ ಹಾಲಿನ ಉತ್ಪನ್ನಗಳು, ಚಾಕೊಲೇಟ್, ಬೀಟ್ರೂಟ್, ಕೋಸು ಕುಟುಂಬದ ತರಕಾರಿಗಳು, ಟೊಮ್ಯಾಟೋ, ಮದ್ಯಪಾನ ಇಂತಹವನ್ನು ಬಿಡಲು ಹೇಳುತ್ತಾರೆ. ಆದರೂ ಪಥ್ಯಕ್ಕಿಂತ ನೀರು ಹೆಚ್ಚು ಕುಡಿಯುವಂತೆ ಸಲಹೆ ಕೊಡುವುದೇ ಜಾಸ್ತಿ.
ಔಷಧ ಕೊಡುವವರು ಕುಡಿದ ಇಂತಿಷ್ಟೇ ದಿನದಲ್ಲಿ ಕಲ್ಲು ಬೀಳುತ್ತದೆಂದು ಖಚಿತವಾಗಿ ಹೇಳುವುದರಿಂದ, ಔಷಧ ಕುಡಿದಾತ ಹದಿನೈದು ದಿನಗಟ್ಟಲೇ ಪಾತ್ರೆಯಲ್ಲಿ ಮೂತ್ರ ಮಾಡುತ್ತಾ, ಕಲ್ಲು ಬೀಳುವ ‘ಟಣ್’ ಎಂಬ ಶಬ್ದ ‘ಇಂದು ಕೇಳಬಹುದು, ಈಗ ಕೇಳಬಹುದು’ ಎಂದು ಕಾಯುತ್ತಾನೆ. ಹಾಗೆ ಬಿದ್ದ ಕಲ್ಲುಗಳನ್ನು ಬಹು ಜೋಪಾನವಾಗಿ ಕಾದಿಟ್ಟುಕೊಂಡು ಮನೆಗೆ ಬಂದ ನೆಂಟರಿಷ್ಟರಿಗೆ ತಮಗೆ ಸಂದ ಪ್ರಶಸ್ತಿಯೇನೋ ಎಂಬಂತೆ ತೋರಿಸುವವರಿದ್ದಾರೆ. ಹಾಗಂತ ನನಗೊಬ್ಬ ಪೇಶೆಂಟ್ ಹೇಳಿದ್ದರು, ಅವರ ಮಾವ ಒಟ್ಟು ಹದಿನೇಳು ಮೂತ್ರಕಲ್ಲುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ ಎಂದು. ನನ್ನ ಪೇಶೆಂಟ್‌ಗೆ ಆ ಕಲ್ಲುಗಳು ಮೂತ್ರದ ಕಲ್ಲುಗಳೇ ಹೌದು ಎಂದು ನಿರ್ಧರಿಸುವುದು ಹೇಗೆಂದು ನನ್ನ ಬಳಿ ತಿಳಿಯಬೇಕಾಗಿತ್ತು, ಅಷ್ಟೇ.
ಶಹರದಲ್ಲಿ ಲಿಥೋಟ್ರಿಪ್ಸಿ( ಲೇಸರ್ ಮುಖಾಂತರ ಕಲ್ಲನ್ನು ಪುಡಿ ಮಾಡುವುದು), ಎಂಡೋಸ್ಕೋಪಿ, ಆಪರೇಶನ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳು ಇದ್ದರೂ ಹಳ್ಳಿಯ ಜನರು ಈಗಲೂ ಕರಿಬಾಳೆ ದಿಂಡಿನ ರಸ, ಯಾವುದೋ ಬೀಜದ ಕಷಾಯ, ನೆಗ್ಗಿಲು ಮುಳ್ಳಿನ ಕಷಾಯ, ಮತ್ತಾವುದೋ ಬೇರಿನ ರಸ ಇಂಥವಕ್ಕೇ ಮೊರೆ ಹೋಗುವುದು ಹೆಚ್ಚು. ಅದಕ್ಕೆ ಸರಿಯಾಗಿ ದೊಡ್ಡ ಆಸ್ಪತ್ರೆಗಳಲ್ಲಿ ಕಲ್ಲು ಪುಡಿಮಾಡಿಕೊಂಡು, ಸಾವಿರಗಟ್ಟಲೆ ಖರ್ಚು ಮಾಡಿಕೊಂಡು ಬಂದ ಎಷ್ಟೋ ಜನ ಮತ್ತೆ ಮೂತ್ರಕಲ್ಲಿನ ತೊಂದರೆಯಿಂದ ನರಳುವ ಕತೆಗಳು ಅವರ ಬಳಿ ಇರುತ್ತವೆ. ಬರೀ ಕಾಯಿ-ಎಲಡಿಕೆ-ಮನಸ್ಸಿಗೆ ತೋಚಿದಷ್ಟು ದುಡ್ಡು ಕೊಟ್ಟರೆ ಔಷಧ ಕೊಡುವವರು ಊರಲ್ಲೇ ಅಷ್ಟು ಜನ ಇರುವಾಗ, ದುಡ್ಡು ಖರ್ಚಾದರೂ ಪೂರ್ತಿ ಹೋಗೇಬಿಡುವುದು ಗ್ಯಾರಂಟಿಯಿರದ ಕಲ್ಲು ಪುಡಿಮಾಡುವ ತುಂಬ ತುಟ್ಟಿಯಾದ ಚಿಕಿತ್ಸೆ ನಡೆಸುವುದು ಅವರ ಮನಸ್ಸಿಗೆ ಒಗ್ಗುವುದಿಲ್ಲ. ಹಲವು ಬಾರಿ ಸ್ಥಳೀಯ ವೈದ್ಯರ ಬಳಿ ಹೋಗಿ, ಕಡಿಮೆಯಾಗದೇ ಮತ್ತೆಮತ್ತೆ ಶುರುವಾಗುವ ನೋವಿಗಷ್ಟೇ ಲಿಥೋಟ್ರಿಪ್ಸಿಗೆ ಹೋಗುತ್ತಾರೆ. ಸಣ್ಣ ಕಲ್ಲನ್ನು ಏನೋ ಲೈಟು ಬಿಟ್ಟು ಪುಡಿ ಮಾಡಲು ಮಿಲಿಮೀಟರಿಗೆ ಇಂತಿಷ್ಟು ಎಂದು ಛಾರ್ಜ್ ಮಾಡುವವರ ಬಗ್ಗೆಯೇ ಅವರ ತಕರಾರು.
ಕಲ್ಲಿನ ತೊಂದರೆ ಬೇಸಿಗೆಯಲ್ಲಿ ಎಷ್ಟು ವ್ಯಾಪಿಸುತ್ತದೆ ಎಂದರೆ, ಊರಿಗೊಬ್ಬರಾದರೂ ನೋವಿನ ಕತೆ ಹೇಳುತ್ತಾರೆ. ಹಲವರ ಬಾಯಲ್ಲಿ ಆ ನೋವಿನ ಕತೆ ಕೇಳುವ ಶಾಲೆಮಕ್ಕಳು, ಶಾಲೆಯಿಲ್ಲದಾಗ ಅದೂ ಇದೂ ತಿಂದು ಗ್ಯಾಸ್ ಆಗಿ ಹೊಟ್ಟೆ ನೋವೆಂದು ಬಂದವು ‘ನಂಗೂ ಮೂತ್ರದ ಕಲ್ಲು ಆಗಿದೆಯಾ?’ ಎಂದು ಪ್ರಶ್ನಿಸುತ್ತವೆ! ಪುಣ್ಯವಶಾತ್ ಇಪ್ಪತ್ತು ವರ್ಷದ ಒಳಗಿನವರಿಗೆ ಮೂತ್ರದ ಕಲ್ಲು ಇಲ್ಲವೆಂಬಷ್ಟು ಅಪರೂಪ. ಹೆಂಗಸರಲ್ಲೂ ಇದು ಕಮ್ಮಿ!
ಅಂತೂ ಬೇಸಿಗೆ ಕಳೆದು ಮಳೆಗಾಲ ಕಾಲಿಡುತ್ತಿರುವ ಈ ಹೊತ್ತು, ಕಲ್ಲಿನ ಭಯದಿಂದ ಬರುವ ಬೇಸಿಗೆಯವರೆಗೆ ಮುಕ್ತವಾಗಬಹುದಾಗಿದೆ.
[ಚಿತ್ರಗಳು-ಲೇಖಕರು ಮತ್ತು ಸಂಗ್ರಹದಿಂದ]
|