|
 |
| ‘ಮಾನ್ಸೂನ್ ವೆಡ್ಡಿಂಗ್’ ನಲ್ಲಿ ವಸುಂಧರಾ ದಾಸ್ |
 |
ನಮ್ಮ ಸಮುದಾಯದ ತಾಯಿಯೊಬ್ಬರು ತಮ್ಮ ಮಗಳ ಮದುವೆಯ ರಿಸೆಪ್ಷೆನ್ "ಮಾನ್ಸೂನ್ ವೆಡ್ಡಿಂಗ್" ಚಿತ್ರದಲ್ಲಿದ್ದಂತೆ ಇರಬೇಕೆಂಬುದು ತನ್ನಾಸೆ ಎಂದದ್ದು ಕೇಳಿ ಬೆಚ್ಚಿದ್ದೆ. ಅದರ ಬಗ್ಗೆ ಯಾವುದೇ ಸುಲಭ ತೀರ್ಪಿತ್ತುಕೊಳ್ಳುವುದು ಸಲ್ಲ ಅನಿಸಿತ್ತು. ಆ ಮಾತು ಹಲವು ವರ್ಷಗಳಿಂದ ನನ್ನ ತಲೆಯಲ್ಲಿ ಕೂತಿದೆ. ಅಷ್ಟೆ ಅಲ್ಲ ಮುಂದೆ ಹಲವು ವಯಕ್ತಿಕ, ಸಾಮುದಾಯಿಕ, ಸಾಮಾಜಿಕ ಹಾಗು ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ರೂಪದಲ್ಲಿ ಎದುರಾಗುತ್ತಲೇ ಇದೆ. ಇದು ನನ್ನಂತಹ ಅನಿವಾಸಿಗಳ ರಗಳೆ ಅಷ್ಟೆ ಎಂದೀಗ ಅನಿಸುತ್ತಿಲ್ಲ. ಅಷ್ಟೇ ಅಲ್ಲ ಇದರಲ್ಲಿ ಮನುಷ್ಯರು, ಸಮುದಾಯಗಳು ಹಾಗು ದೇಶಗಳು ಜಾಗತಿಕ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಕ್ರಿಯೆ ಕಾಣುತ್ತದೆ. ಇದರಲ್ಲಿ ನಿವಾಸಿ, ಅನಿವಾಸಿ ಎಂಬ ಬೇಧವಿಲ್ಲದೆ ನಮ್ಮೆಲ್ಲರ ತೊಂದರೆ ಅಡಗಿದೆ ಅನಿಸುತ್ತದೆ. ವಿವರಿಸುತ್ತೇನೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳು ಎದುರಿಸಿದ ಕಷ್ಟಗಳ ಸಂದರ್ಭದಲ್ಲಿ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ಪ್ರೊಫೆಸರ್ ರಾಬಿನ್ ಜೆಫ್ರಿ "There aren't enough people in Australian public life who know Kannada from Canada" ಎಂದಿದ್ದು ಇಲ್ಲಿಯ ಪತ್ರಿಕೆಯಲ್ಲಿ ಉದಹರಿಸಿದ್ದರು. ಆಸ್ಟ್ರೇಲಿಯ ತನ್ನ ಏಷಿಯ ನೆರೆಹೊರೆಯ ದೇಶಗಳ ಬಗ್ಗೆಗಿನ ಅವಜ್ಞೆ ಈ ಮಾತಿನ ಹಿಂದೆ ಕೆಲಸ ಮಾಡುತ್ತಿದೆ. ಆದರೆ ಸದ್ಯದ ಆಗುಹೋಗಿನ ಹಿನ್ನೆಲೆಯಲ್ಲಿ ನಮ್ಮ ದೇಶದ ಸಂಪನ್ಮೂಲದ ಗಮನವಿಟ್ಟು ಹೊರಟ ಪ್ರತಿಕ್ರಿಯೆ ಎಂಬುದು ಹೆಚ್ಚು ಸರಿ ಅನಿಸುತ್ತದೆ. ಹತ್ತಾರು ವರ್ಷದಿಂದ ನಡೆಯುತ್ತ ಬಂದಿರುವ ಆಸ್ಟ್ರೇಲಿಯದ ಮೆಗಾ-ಸೀರಿಯಲ್‌ಗಳಲ್ಲಿ ಇಂಡಿಯನ್ ಥೀಮ್ ಪಾರ್ಟಿ ಮಾಡಿ, ಬಾಲಿವುಡ್ ನಟಿಯರಂತೆ ಸೀರೆ, ಲಂಗ ಉಟ್ಟು ನಲಿಯುವ ಆಸ್ಟ್ರೇಲಿಯದ ಬ್ಲಾಂಡ್ ಹುಡುಗಿಯರು ಕತೆಯಲ್ಲಿ ಹೆಣೆಯಲ್ಪಡುತ್ತಿದ್ದಾರೆ. ಮೊದಲಿನದು ಹಿಂದುಮುಂದನ್ನು ಹಿಡಿಯುವ ಅಕಾಡೆಮಿಕ್ ಪ್ರತಿಕ್ರಿಯೆಯಾದರೆ, ಎರಡನೆಯದು ಸದ್ಯದ ಫ್ಯಾಷನ್ನಿಗೆ ಮಾರುಹೋದ ಪಾಪ್ಯುಲರ್ ಪ್ರತಿಕ್ರಿಯೆ ಅನ್ನಬಹುದು. ಇವೆರಡೂ ಪ್ರತಿಕ್ರಿಯೆಯ ಹಿಂದೆ ಕೆಲಸ ಮಾಡುತ್ತಿರುವ ಮನಸ್ಸಿನ ತರಾತುರಿ ಒಂದೇ ಏನೋ ಅನಿಸುತ್ತದೆ.
ನನ್ನ ಸಿನೆಮಾ ನಂಟಿನ ಮಾತಿಗೆ ಮೊದಲು ಎದುರಾಗುವ ಪ್ರಶ್ನೆಗಳು ಬಾಲಿವುಡ್ ಸಿನೆಮಾನ, ಹೀರೋ ಹೀರೋಯಿನ್ ಯಾರು, ಡ್ಯಾನ್ಸುಗಳು ಇದೆಯಾ ಎಂದೇ. ನಮ್ಮಲ್ಲಿ ಬೇರೆ ಬಗೆಯ ಚಿತ್ರಗಳಿವೆ, ಅದಕ್ಕೊಂದು ಚರಿತ್ರೆಯಿದೆ, ಅದರಲ್ಲಿ ಹಲವು ಪ್ರತಿಭಾನ್ವಿತರಿದ್ದಾರೆ ಎಂದು ಹೇಳ ಹೊರಟ ಮಾತುಕತೆ ಅರ್ಧದಲ್ಲೇ ತುಂಡಾಗಿ ಹೋಗುವುದೇ ಹೆಚ್ಚು. ಗೊತ್ತಿರುವ ಬಾಲಿವುಡ್ ಬಗ್ಗೆ ಮಾತಾಡದೇ ಯಾವುದೋ ಎಕ್ಸಾಟಿಕ್ ಸಂಗತಿ ಮಾತಾಡುತ್ತಿದ್ದೇನೆ ಎನಿಸಿ ಕೇಳುವವರಿಗೆ ಬೇಸರ ಬಂದುಬಿಟ್ಟಿರುತ್ತದೆ. ಹಲವಾರು ಕೋಟಿ ಜನ ಮಾತಾಡುವ ನುಡಿಯಾಗಿದ್ದು, ನಮ್ಮದೇ ತತ್ವ, ಸಂಸ್ಕೃತಿಯಿದ್ದು, ಸಾವಿರಾರು ವರ್ಷದ ಚರಿತ್ರೆಯಿರುವ ಕನ್ನಡದ ಚಹರೆ ಗೌಣವಾಗಿ ಬಿಡುತ್ತದೆ. ಇಂಡಿಯನ್ ಎಂದ ಕೂಡಲೆ ಈ ಹಿಂದೆ ಕ್ರಿಕೆಟ್ ವಿಷಯ ಬರುತ್ತಿತ್ತು ಈಗೀಗ ಹೆಚ್ಚೆಚ್ಚು ಬಾಲಿವುಡ್ ಸಂಗತಿ ಮುಂದೊತ್ತಿಕೊಂಡು ಬರುತ್ತದೆ.
ಮೊದಲು ಉಪಖಂಡದವ, ನಂತರ ಇಂಡಿಯದವ, ನಂತರ ಕನ್ನಡದವ ಎಂಬ ಸರಳೀಕೃತ ಧೋರಣೆ ರಾಜಕೀಯವಾಗಿ ಸರಿಹೋಗಬಹುದೇನೋ. ಎಲ್ಲಿಂದ ಬಂದವರೆಂಬ ಮೂಲಭೂತ ಸಂಗತಿ ತಿಳಿಸಲೂ ಸರಿಹೋಗಬಹುದು. ಆದರೆ ಅದೇ ಒಂದು ಗುಂಪಿನ ಚಹರೆಯಾಗಲಾರದು. ಇದು ಸಾಮುದಾಯಿಕದ ಹಾಗೆ ವಯ್ಯಕ್ತಿಕದಲ್ಲೂ ಒಪ್ಪಲು ಕಷ್ಟವಾಗುವ ಸಂಗತಿ. ಏಕೆಂದರೆ ಒಂದು ವ್ಯಕ್ತಿ ಅಥವಾ ಒಂದು ಗುಂಪಿನ ಗುರುತು ತುಂಬಾ ಸಂಕೀರ್ಣವಾದ ಸಂಗತಿ ತಾನೆ? ಹಾಗೇ ಒಂದು ವ್ಯಕ್ತಿ ಹಲವಾರು ಪದರಗಳ ಚಹರೆಯನ್ನು ಒಳಪಟ್ಟಿರುವುದೂ ನಿಜವಲ್ಲವೆ? ವ್ಯಕ್ತಿಗತ ಐಡೆಂಟಿಟಿ ಹೀಗೇ ಸ್ಥಾಪಿತವಾಗುತ್ತದೆ ಅಥವಾ ಹೀಗೇ ಆಗಬೇಕು ಎಂದು ಹೇಳಬರುವುದಿಲ್ಲ. ಎಲ್ಲರೂ ಅದನ್ನು ಬೇರೆ ಬೇರೆ ಬಗೆಗಳಲ್ಲಿ ವ್ಯವಹರಿಸಿಕೊಳ್ಳುತ್ತಾರೆ. ಅದಕ್ಕಿಂತ ಮುಖ್ಯವಾದದ್ದು - ಒಂದು ಸಮುದಾಯವಾಗಿ, ಒಂದು ದೇಶವಾಗಿ ನಮ್ಮ ಚಹರೆಯನ್ನು ನಾವು ತೋರಗೊಡುವ ಸಂಗತಿ.
ಬಾಲಿವುಡ್ಡಿನ ಸಿನೆಮಾ ಆಗಲಿ, ಹಾಲಿವುಡ್ಡಿನ ಸಿನೆಮಾ ಆಗಲಿ ಆ ದೇಶಗಳನ್ನು ಪ್ರತಿನಿಧಿಸುವುದಿಲ್ಲ. ಆಯಾ ದೇಶದ ಒಂದಂಶ, ಇಣುಕು ನೋಟ ಇದ್ದರೂ ಕೂಡ ಅವು ಆ ದೇಶದ ಸಂಕೀರ್ಣತೆಗಳನ್ನು ಕಟ್ಟಿಕೊಡುವುದಿಲ್ಲ. ಇವೆಲ್ಲಾ ಗೊತ್ತಿದ್ದೂ ಒಂದೆರಡು ಸಂಗತಿಗಳತ್ತ ಗಮನಹರಿಸುವುದು ಒಳ್ಳೆಯದು. ಏಕೆಂದರೆ ಹಾಗೆ ಬಾಲಿವುಡ್ ದೇಶವನ್ನು ಪ್ರತಿನಿಧಿಸುತ್ತದೆ ಅಂದುಕೊಂಡವರದು ಅಜ್ಞಾನ ಎಂದು ಬಿಡಬಹುದು. ಅಥವಾ ಭಾರತ ಬೇರೆಲ್ಲ ದೇಶಗಳಿಗಿಂತ ಹೆಚ್ಚು ಸಂಕೀರ್ಣ ಎಂದು ಹೊಗಳಿಕೊಳ್ಳಬಹುದು. ಇವೆಲ್ಲಾ ಅರ್ಧಸತ್ಯದ ಮಾತುಗಳು. ಇಂತಹ ಮಾತುಗಳ ಹೊರಗೆ ಜಗತ್ತಿನ ದೃಷ್ಠಿಯಲ್ಲಿ, ಮಾಧ್ಯಮಗಳ ದೃಷ್ಠಿಯಲ್ಲಿ ಸದಾ ನಮ್ಮ ನಿರೂಪಣೆ ನಡೆದಿರುತ್ತದೆ. ಅದರ ಸಂಬಂಧಿತ ವಿಚಾರಕ್ಕೆ ಸದಾ ತಿಕ್ಕಾಟವಿದ್ದೇ ಇರುತ್ತದೆ. ಹೊಗಳಿದಾಗ ಹಲ್ಬಿಡುವ, ಟೀಕಿಸಿದಾಗ ಹಲ್ಕಡಿಯುವ ಪ್ರಕ್ರಿಯೆ ನಡೆದೇ ಇರುತ್ತದೆ. ಇವನ್ನೆಲ್ಲಾ ಜಾಗತೀಕರಣ, ವ್ಯಾಪಾರೀಕರಣ ಹಾಗು ನವವಸಾಹತುಶಾಹಿ ಎಂಬಿತ್ಯಾದಿ ಪೂರ್ವನಿಯೋಜಿತ ಚೌಕಟ್ಟಿನಲ್ಲಿ ನೋಡಿ ನಿಟ್ಟುಸಿರೆಳೆದುಬಿಡಬಹುದು. ನಮ್ಮ ದೇಶದ ವಿಪರ್ಯಾಸಗಳಿಗೆ ಇವು ಸಿದ್ಧ ಉತ್ತರಗಳನ್ನು ಕೊಡುತ್ತವೆ. ಭಿಕ್ಷುಕರು ಬಿಲಿಯನೇರುಗಳ ಅಗಾಧ ಅಂತರದ ವಿಪರ್ಯಾಸ ಮನಸ್ಸಿನ ಒಳಗಿಳಿಯದ ಹಾಗೆ ನೋಡಿಕೊಳ್ಳಬಲ್ಲವಾಗಿರುತ್ತವೆ. ಹಾಗಾಗಿಯೇ ಇವೆಲ್ಲವೂ ತುಣುಕು ನೋಟಗಳೇ ಆಗಿರುತ್ತವೆ. ಆದರೆ ಇವುಗಳ ಬಗೆಗಿನ ನಮ್ಮ ಪ್ರತಿಕ್ರಿಯೆ ನಮ್ಮ ಚಹರೆಯ ಬಗ್ಗೆ ಕತೆ ಹೇಳುತ್ತಿರುತ್ತದೆ ಎಂಬುದು ನನಗೆ ಕುತೂಹಲಕರವಾಗಿ ಕಾಣುತ್ತದೆ.
ನಾನು ಹೇಳ ಹೊರಟಿದ್ದು ಹೊರಗಿನವರು ನಮ್ಮನ್ನು ನೋಡುವ, ವಿವರಿಸುವ, ನಿರೂಪಿಸುವ ಸಂಗತಿಯ ಬಗ್ಗೆ ಅಲ್ಲ. ನಮ್ಮನ್ನೇ ನಾವು ವಿವರಿಸಿಕೊಳ್ಳುವ ಬಗ್ಗೆ, ನಿರೂಪಿಸಿಕೊಳ್ಳುವ ಬಗ್ಗೆ. ಇದು ಉಳಿದವರ ಜತೆಗಿನ ನಮ್ಮ ಕೊಡುಕೊಳ್ಳುವಿಕೆಯಲ್ಲಿ ತೋರಿದಷ್ಟೇ ನಾವು ಪ್ರದರ್ಶನಕ್ಕಿಡುವ, ನಿರೂಪಿಸಿಕೊಳ್ಳುವ ಸಂಗತಿಗಳಲ್ಲೂ ತೋರಿಕೊಳ್ಳುತ್ತದೆ ಎಂಬುದರ ಬಗ್ಗೆ. ಬಾಲಿವುಡ್ಡಿನ ಚಿತ್ರದ ಕತೆಗಳಲ್ಲಿ, ಅವು ಬಿಂಬಿಸುವ ಅತಿರಂಜಕ ಹಾಗು ಅತ್ಯಂತಿಕ ಮೌಲ್ಯಗಳಲ್ಲಿ ನಮ್ಮನ್ನು ನಾವು ಬಿಂಬಿಸಿಕೊಳ್ಳುತ್ತಿದ್ದೇವೆಯೆ? ಜನರ ಅಭಿರುಚಿಗೆ ತಕ್ಕಂತೆ ಈ ಬಗೆಯ ಚಿತ್ರಗಳನ್ನು ಮಾಡುವುದು ಅನಿವಾರ್ಯ ಎಂಬ ಸುಳ್ಳನ್ನು ಎಲ್ಲಿಯವರೆಗೆ ನಮಗೆ ನಾವೇ ಹೇಳಿಕೊಳ್ಳುತ್ತೇವೆ? ಎಲ್ಲ ಬಗೆಯ ಚಿತ್ರಗಳನ್ನು ಜನರ ಎದುರು ಇಡುವಂತಹ ಸೌಕರ್ಯ ಹುಟ್ಟು ಹಾಕಿಕೊಳ್ಳದೇ ಈ ಮಾತಿನ ಸತ್ಯಾಸತ್ಯವನ್ನು ಅಳೆಯುವುದಾದರೂ ಹೇಗೆ? ದೇಶದ ಒಳಗೆ "ಜನಪ್ರಿಯ"ವಾಗುವ ಇವೇ ಚಿತ್ರಗಳು ದೇಶದ ಹೊರಗೆ ನಮ್ಮನ್ನು ನಿರೂಪಿಸುವ ಮುಖ್ಯ ಚಿತ್ರಿಕೆ ಅಂದುಕೊಂಡರೆ ತಪ್ಪೇನು? ವ್ಯಾಪಾರೀಕರಣ ಹಾಗು ನವವಸಾಹತುಶಾಹಿಯ ಪ್ರತಿಕ್ರಿಯೆ ಎಂದೇ ನೋಡಿದರೂ, ಎರಡಲಗಿನ ಕತ್ತಿಯಲ್ಲವೇ ಇದು?
೨೦೦೬ರಲ್ಲಿ ಮೆಲ್ಬರ್ನಿನಲ್ಲಿ ನಡೆದ ಕಾಮನ್‌ವೆಲ್ತ್ ಆಟಗಳ ಮುಕ್ತಾಯ ಸಂದರ್ಭದಲ್ಲಿ ಭಾರತದ ಪ್ರದರ್ಶನವಿತ್ತು. ಮುಂದಿನ ವರ್ಷದ ಕಾಮನ್‌ವೆಲ್ತ್ ಆಟಗಳು ದೆಹಲಿಯಲ್ಲಿ ನಡೆಯುವದರಿಂದ ಅಹ್ವಾನರೂಪದ ನಮ್ಮ ಪ್ರದರ್ಶನ ಮುಖ್ಯವೂ ಆಗಿತ್ತು. ಆ ಸಂಜೆ ಭಾರತ ತನ್ನನ್ನು ತಾನು ಹೇಗೆ ನಿರೂಪಿಸಿಕೊಳ್ಳಬಹುದು, ದೆಹಲಿಯ ಆಟದ ಕೂಟಕ್ಕೆ ಹೇಗೆ ಆಮಂತ್ರಣ ಕೊಡಬಹುದು ಎಂದು ಎಲ್ಲರಲ್ಲೂ ಅಪಾರ ಕುತೂಹಲವಿತ್ತು. ನಮ್ಮ ಕಾರ್ಯಕ್ರಮದಲ್ಲಿ ಕ್ರೀಡಾಂಗಣದ ನಟ್ಟನಡುವಿನ ವೇದಿಕೆಯ ತುಂಬಾ ಬಾಲಿವುಡ್ಡಿನವರ ಹಾಡು ಕುಣಿತವೇ ತುಂಬಿಕೊಂಡಿತ್ತು. ಭಾರತೀಯ ಪರಂಪರಾಗತ ನೃತ್ಯಗಳ ವೈಭವೀಕೃತ ನೆರಳುಗಳನ್ನು ಹೊರವೃತ್ತದ ಹೊರಗೆ ಸುತ್ತುವಂತೆ ಸೀಮಿತಗೊಳಿಸಲಾಗಿತ್ತು. ಇದು ಭಾರತೀಯ ಅನಿವಾಸಿಗಳಿಗೆ ಹಾಗು ಭಾರತ ವಾಸಿಗಳಿಗೆ "ನಾವು ಯಾರಿಗೇನು ಕಡಿಮೆ" ಎಂಬಂತಹ ಬೆಚ್ಚಗಿನ ಭಾವ ಆವರಿಸಿಕೊಳ್ಳುವಂತಿತ್ತು. ಆದರೆ ನನಗೇಕೋ ಇದೊಂದು ರೂಪಕವಾಗಿ ಕಾಣುತ್ತದೆ. ಜಗತ್ತಿನ ಮುಂದೆ ನಮ್ಮನ್ನು ನಾವು ನಿರೂಪಿಸಿಕೊಳ್ಳುವಲ್ಲೇ ಯಾವುದಕ್ಕೆ ಒತ್ತುಕೊಡುತ್ತೇವೆ, ಯಾವುದನ್ನು ಮೂಲೆಗೆ ತಳ್ಳುತ್ತೇವೆ ಅನ್ನುವುದು ನಮ್ಮ ಬಗ್ಗೆ ಮತ್ತೇನೋ ಹೇಳುತ್ತಿರುತ್ತದೆ. ಹಾಗಾಗಿಯೇ ತನ್ನ ಮಗಳ ಮದುವೆಗೆ "ಮಾನ್ಸೂನ್ ವೆಡ್ಡಿಂಗ್"ನಂತಹ ರಿಸೆಪ್ಷನ್ ಇದ್ದರೆ ಚೆಂದ ಅನಿಸುವ ಭಾವದ ತುದಿ ಮೊದಲೆಲ್ಲಿ ಎಂದು ಹುಡುಕುವಂತಾಗುತ್ತದೆ.
|