ಕಂಕುಳಲ್ಲಿ ಒಂದೂವರೆ ವರ್ಷದ ಮಗುವನ್ನು ಚಚ್ಚಿಕೊಂಡು ಒಳಬಂದವಳೇ ಉಸ್ಸಪ್ಪ ಎಂದು ಹಣೆಯ ಬೆವರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ ಧಪ್ಪನೆ ಖುರ್ಚಿಯ ಮೇಲೆ ಕುಳಿತಳು ಮಾಲಕ್ಷ್ಮಿ. ಅವಳ ಹಿಂದೇ ಸೇರು, ಪಾವು, ಚಟಾಕುಗಳಂತೆ ಸರಸರ ಅವಳ ಹಿರಿಯ ಮೂರು ಮಕ್ಕಳು ಒಳಬಂದವು. ಆರು ವರ್ಷಕ್ಕೆ ನಾಲ್ಕು ಮಕ್ಕಳನ್ನು ಹೆತ್ತ ಅವಳನ್ನು ನಾನು ‘ನೀನು ಮಾಲಕ್ಷ್ಮಿ ಅಲ್ಲ, ಮಾತಾಯಿ’ ಎಂದು ತಮಾಷೆ ಮಾಡುವುದುಂಟು. ಮೂರನೆಯ ಮಗು ಬಸ್ಸಿಳಿದು ಬರುತ್ತಾ ಬಿದ್ದು ಕೈಕಾಲೆಲ್ಲ ತರಚಿಕೊಂಡು ಅಳುತ್ತಿತ್ತು. ಅದರ ಮೂಗು ಕಣ್ಣನ್ನೆಲ್ಲ ಒರೆಸಿ ಒಂದು ಸಲ ಗದರಿ ಕುಳಿತಳು. ‘ಜೊತೆಯಲ್ಲಿ ಯಾರೂ ಬರಲಿಲ್ವಾ?’ ಎಂದು ನಾನು ಕೇಳಿದ್ದೇ ಅವಳ ಕಣ್ಣುಗಳು ಕೊಳಗಳಾದವು. ಅವರು ಬ್ಯಾಡಂದ್ರೂ ತಾಯಿಮನಿಗೆ ಹೋಗಿದ್ದೆ ಅಂತ ಸಿಟ್ಟುಮಾಡ್ಕಂಡು ‘ಈಗ ನೀನೊಬ್ಳೇ ಬಾ. ಮತ್ತೆ ಮಕ್ಕಳಿಗೇನಾರೂ ಸೀಕು ಆಗಿದ್ರೆ ಮದ್ದು ಮಾಡ್ಕಂಡೇ ಬಾ, ನನಗ್ಗೊತ್ತಿಲ್ಲ’ ಅಂದ್ರು ಇವರು. ಈಗ ಈ ಮೂರು ಮಕ್ಕಳನ್ನೂ ಮೂರು ಮೈಲು ದೂರ ನಡೆಸಿ ಊರುಮುಟ್ಟುವುದು ಹ್ಯಾಗೋ ಏನೋ’ ಎನ್ನುತ್ತ ಮತ್ತೆ ಬಿಕ್ಕಿದಳು. ಮತ್ತೆ ಏನೂ ಮಾತನಾಡದೇ ಬ್ಲೌಸಿನೊಳಗೆ ಕೈ ಹಾಕಿ ಪುಟ್ಟ ಗಂಟು ಹೊರತೆಗೆದವಳು ಮೆಲ್ಲಗೆ ನನ್ನೆದುರು ತೂರಿದಳು.
‘ಎಂತ ಮಾರಾಯ್ತಿ? ಮದ್ದು ಕೊಡಲಿಕ್ಕೆ ಮೊದಲೇ ದುಡ್ಡು ಕೊಡ್ತಿದೀಯಲೆ’ ಎಂಬ ನನ್ನ ಮಾತಿಗೆ ಒಮ್ಮೆ ಹೊರಗೆ ಇಣುಕಿ ನೋಡಿ ಕಣ್ಣೊರೆಸಿಕೊಂಡವಳು ಶುರು ಮಾಡಿದಳು. ‘ಅಮಾ, ನಾನೀಗ ಮುಟ್ಟಾಗಿ ಎರಡು ತಿಂಗಳಾತು. ಈ ನಾಕನೇ ಹುಡುಗಿಯನ್ನು ಹೆತ್ತಾಗಲಾದರೂ ಆಪರೇಶನ್ ಮಾಡಿಸ್ಕಂತೆ ಎಂದು ಎಷ್ಟು ಹೇಳಿದ್ನೋ ಏನೋ. ಅವ್ರು ಕೇಳಲಿಲ್ಲ. ಈಗ ಮುಟ್ಟು ನಿಂತಿದೆ ಅಂತ ತಿಳಿದಿದ್ದೇ ಎಲ್ಲೆಲ್ಲೋ ಹೋಗಿ ಪ್ರಸಾದ ಕೇಳಿ, ಜಾತಕ ತೋರಿಸ್ಕಂಡು ಬಂದಿದಾರೆ. ಈ ಸಲ ಹುಟ್ಟದು ಗಂಡೇ ಅಂತಾರೆ. ಆದ್ರೆ ನಾನು ನಂ ತಾಯಿ ಮನೆ ಚೌಡಿ ಹತ್ರ ಕೇಳ್ದಾಗ ಅದು ಈ ಸಲ ಹೆಣ್ಣೇ ಆಗ್ತದೆ ಅಂತ ಹೇಳ್ಬಿಟ್ಟದೆ. ನನಕೈಲಿ ಮತ್ತೆಮತ್ತೆ ಹೆಣ್ಣು ಹೆತ್ತು, ಆ ಅಬ್ಬೆಮಗನ ಹತ್ರ ಪಿರಿಪಿರಿ ಬೈಸಿಕೊಳ್ಳೋಕೆ ಸಾದ್ದಿಲ್ಲೆ ಅಮಾ. ಬರೀ ಹೆತ್ತು ಹಾಕಿರೆ ಆಯ್ತಾ? ಆ ಮಕ್ಳ ದೇಖರೇಖೆ ನೋಡಬ್ಯಾಡ್ವಾ? ಈ ಗಣಸ್ರಿಗೆ ಅದೆಂತ ತಿಳೀತಿಲ್ಲೆ. ನಾನು ದುಡ್ಕಬಂದು ಹಾಕ್ತೆ, ನಿಂಗೆ ಮಕ್ಳ ಸಾಕುಕೇನ್ ಕಷ್ಟ ಅಂತ ಕೇಳ್ತ್ರು ಅಮಾ.’
‘ಓಹ್. ಹಾಗಾದರೆ ಮತ್ತೊಂದು ಬಾಣಂತನಕ್ಕೆ ತಯಾರಿನಾ?’
‘ಎಂತ ಬಾಣಂತನ ಅಮಾ. ಆ ಸಲ ನೋಡಿದ್ರಲೆ ನೀವು, ಹದಿನೈದು ದಿನ ಕಳೆಯದರಾಗೆ ಎದ್ದು ಎಲ್ಲ ಕೆಲ್ಸ ಶುರು ಮಾಡ್ಬೇಕು. ಅದಿರ್ಲಿ, ಇನ್ನು ಎರಡು ಮೂರು ದಿನದಾಗೆ ಇವ್ರು ನನ್ನ ಕರ‍್ಕಬತ್ತಾರೆ. ಆಗ ನೀವು ಈ ಸಲದ್ದೂ ಹೆಣ್ಣೆಯಾ ಅಂತೇಳಿ ಸ್ಕ್ಯಾನ್ ಮಾಡಿ ಹೇಳಿಬಿಡಿ, ಆಗ ತೆಗೆಸುಕೆ ಒಪ್ತಾರೆ.’
‘ಆದ್ರೆ ಹಂಗೆ ಹೇಳಿದ್ರೆ ನನ್ನ ಹಿಡ್ದು ಜೈಲಿಗೆ ಹಾಕ್ತಾರೆ ಅಷ್ಟೇ. ಅಲ್ಲದೇ ಇಷ್ಟು ಬೇಗ ಅದು ತಿಳಿಯುದೇ ಇಲ್ಲ. ಅದಕ್ಕೆ ಏಳು ತಿಂಗಳ ಮೇಲೆ ಆಗ್ಬೇಕು’, ಆತ್ಮ ರಕ್ಷಣೆಗೆ ಸುಳ್ಳೊಂದನ್ನು ಹೇಳಿದೆ.
‘ಹಾಗಾದ್ರೆ ಮತ್ತೇನಾರೂ ಸೀಕು ಸಂಕ್ಟದ ವಿಷ್ಯ ಹೇಳಿ. ಒಟ್ಟೂ ನನಗೀ ಬಸುರು ಬ್ಯಾಡ ಅಷ್ಟೇ. ಈ ದುಡ್ನ ಇಟ್ಕಳಿ. ನಮಣ್ಣ ಕೊಟ್ಟಿದ್ದು, ನಂಗೆ ಬೇಕಾದಾಗ ಇಸ್ಕಂತೆ. ಇವ್ರತ್ರ ತಕಹೋಗಿ ಕೊಟ್ರೆ ಎರಡೇ ದಿನಕ್ಕೆ ಅದು ಕಾಣೆಯಾಗೋಗುತ್ತೆ. ಮತ್ತೆ ನಾನು ಇಲ್ಲಿ ಬಂದ ವಿಷ್ಯ ಅವ್ರಿಗೂ ನಮತ್ತೆ ಮಾವಂಗು ಹೇಳ್ಬೇಡಿ. ಇದು ನಿಮ್ಮಲ್ಲೇ ಇರ್ಲಿ.’
*******
ಆ ಬೋರ್ಡಿಂಗ್ ಶಾಲೆಯ ಮಕ್ಕಳು ನನಗೆ ಪರಿಚಯವೆನ್ನಬಹುದು. ಅವಕ್ಕೆಲ್ಲ ಹುಶಾರಿಲ್ಲದಾಗ ಅವರ ವಾರ್ಡನ್ ಒಬ್ಬೊಬ್ಬರನ್ನೇ ಕರೆತರುತ್ತಾ, ದೊಡ್ಡಮಕ್ಕಳ ಜೊತೆ ಮಾಡಿ ಕಳಿಸುತ್ತಾ ಇರುತ್ತಾರೆ. ಆ ಮಕ್ಕಳು ತಮ್ಮ ಮನೆ, ತಾಯ್ತಂದೆಯರನ್ನು ಬಿಟ್ಟು ಈ ದೂರದ ಹಳ್ಳಿಯ ಊರಿನಲ್ಲಿ ಶಾಲೆ ಕಲಿಯಲಿಕ್ಕೆಂದು ಇದ್ದಾವಲ್ಲ ಎಂದು ಒಂದು ರೀತಿಯ ಕರುಣೆ ನನಗೆ. ಆ ಮಕ್ಕಳ ತಾಯ್ತಂದೆಯರು ಯಾವ ಪರಿಸ್ಥಿತಿಗೆ ಇಲ್ಲಿ ಬಿಟ್ಟಿದ್ದಾರೋ, ಏನು ಕಷ್ಟದಲ್ಲಿದ್ದಾರೋ? ಯಾರಿಗೆ ಗೊತ್ತು?
ಆ ಮಕ್ಕಳ ಬಳಿ ಹಣ ಇರುವುದಿಲ್ಲ. ಮನೆಯಿಂದ ತಂದ ಹಣ ವಾರ್ಡನ್ ಬಳಿ. ತಮ್ಮ ಖರ್ಚಿಗೆಲ್ಲ ಅವರ ಬಳಿ ಕೇಳಿಯೇ ಹಣ ಪಡೆಯಬೇಕು, ಅಂತಹ ವ್ಯವಸ್ಥೆ. ಅಂಥದ್ದರಲ್ಲಿ ಕೆಲವು ಬಾರಿ ಆಸ್ಪತ್ರೆ ಔಷಧಿಗೆ ಅಂತ ಬಂದ ಮಕ್ಕಳ ಜೊತೆಗೆ ಬರುವ ಹಿರಿಯ ಜೊತೆಗಾರರು ಒಂದು ವಿಚಿತ್ರ ಬೇಡಿಕೆ ಮುಂದಿಡುತ್ತಾರೆ... ಬಿಲ್ಲನ್ನು ಸ್ವಲ್ಪ ‘ಹೆಚ್ಚು’ ಬರೆದುಕೊಡಿ ಎಂದು! ಕಚೇರಿ ಕೆಲಸ ಮಾಡುವವರು ಮಾಡಿದ ಖರ್ಚನ್ನು ತಿರುಗಿ ಪಡೆಯಲು ಹೀಗೆ ಕೇಳುವುದು ಸಾಮಾನ್ಯ. ಈ ಹುಡುಗರಾದರೋ ಹೆಚ್ಚುವರಿ ಹಣವನ್ನು ವಾರ್ಡನ್ ಬಳಿಯಿಂದ ವಸೂಲಿ ಮಾಡಲು ಈ ಉಪಾಯ ಹೂಡುತ್ತಾರೆ. ಕೊನೆಗೆ ದುಡ್ಡು ಏತಕ್ಕೆ ಎಂದರೆ ಬಹುಪಾಲು ಹುಡುಗರು ನಾಚಿ ನಾಚಿ ‘ಪಾನಿಪೂರಿ ತಿನ್ನಲಿಕ್ಕೆ, ಐಸ್ಕ್ರೀಂ ತಿನ್ನಲಿಕ್ಕೆ, ಗೋಬಿ ಮಂಚೂರಿಗೆ..’ ಅಂತ ಏನೇನೋ ಸಬೂಬು ಹೇಳುತ್ತವೆ. ಹುಡುಗಿಯರಿಗೆ ಅಲಂಕಾರ ಸಾಮಗ್ರಿಗೆ ಹಣ ಬೇಕಾಗಿರುತ್ತದೆ. ಮನೆಯಲ್ಲಿ ತರಹೇವಾರಿ ತಿಂಡಿ ತಿಂದುಂಡೂ ವಾರದ ಕೊನೆಗೆ ಉತ್ತರ ಭಾರತ ಶೈಲಿಯ ಊಟ ಬಯಸುವ ನನ್ನ ಮಕ್ಕಳು ಕಣ್ಣಮುಂದೆ ಬಂದು ನಿಂತಂತಾಗಿ ಹತ್ತಿಪ್ಪತ್ತು ರೂಪಾಯಿ ಬಿಲ್ಲು ಹೆಚ್ಚಿಗೆ ಬರೆದುಕೊಡುತ್ತೇನೆ. ಅಷ್ಟಕ್ಕೂ ಅದು ಅವರದ್ದೇ ದುಡ್ಡು. ಸಿನೆಮಾ ಟಾಕೀಸಿಲ್ಲದ ಆ ಸಣ್ಣ ಊರಿನಲ್ಲಿ ಖರ್ಚು ಮಾಡಿದರೆ ತಿಂದುಡಲು ಮಾತ್ರ ಎಂಬುದು ನನಗೆ ಖಾತ್ರಿಯಿದೆ. ಹುಡುಗರು ಹೋಗುವಾಗ ಹೇಳಿಹೋಗುತ್ತಾರೆ.. ‘ಥಾಂಕ್ಯೂ ಮೇಡಂ. ಆದ್ರೆ ವಾರ್ಡನ್ ಹತ್ರ ಮಾತ್ರ ಹೇಳಬೇಡಿ....ದಯವಿಟ್ಟು’. ಆಗಲೆಂದು ಭರವಸೆ ಕೊಟ್ಟು ಮತ್ತೊಮ್ಮೆ ಹೀಗೆ ನನ್ನ ಬಳಿ ಹೀಗೆ ಕೇಳುವಂತಿಲ್ಲವೆಂಬ ಶರತ್ತಿನೊಂದಿಗೆ ಕಳಿಸುತ್ತೇನೆ.
ಸುಳ್ಳು ಹೇಳಬಾರದೆಂದು ಬೈದು ಅವರನ್ನು ಹಾಗೇ ಕಳಿಸಬಹುದಿತ್ತಲ್ಲವೇ, ಹಾಗೆ ಬೈಯ್ಯಲು ನನಗೇಕೆ ಆಗುವುದಿಲ್ಲ ಎಂದು ಪ್ರತಿಬಾರಿ ಅಂದುಕೊಳ್ಳುತ್ತೇನೆ. ಕಚೇರಿ ಜನರ ಬಳಿ ಸತ್ಯಹರಿಶ್ಚಂದ್ರನ ಮೊಮ್ಮಗಳ ಹಾಗೆ ಆಡಲು ಹೋಗಿ ನಿಷ್ಠುರ ಕಟ್ಟಿಕೊಳ್ಳುವ ನಾನು, ಈ ಮಕ್ಕಳಿಗೇಕೆ ವಿನಾಯಿತಿ ತೋರುತ್ತೇನೆ?
*******
ಆಸಿಯಾ ನಮ್ಮೂರಿನ ಜವಳಿ ವ್ಯಾಪಾರಸ್ಥರ ಏಕಮಾತ್ರ ಪುತ್ರಿ. ಗಲಗಲ ಮಾತಿನ ಚುರುಕು ಹುಡುಗಿ. ಎರಡನೇ ಪಿಯುಸಿಯಲ್ಲಿ ೭೫% ಅಂಕ ಗಳಿಸಿ ಖುಷಿಯಲ್ಲಿದ್ದಳು. ಆಗಲೇ ಅಪ್ಪ ಮದುವೆಗೆ ತಯಾರಿ ನಡೆಸಿದಾಗ ನನಗೊಂದು ಕಾಗದ ಕಳಿಸಿದ್ದಳು. ತಾನು ಸಹಪಾಠಿಯನ್ನು ಪ್ರೀತಿಸಿರುವುದಾಗಿಯೂ, ಅವನು ೯೦% ಅಂಕ ಗಳಿಸಿ ಇಂಜಿನಿಯರಿಂಗ್ ಸೇರುತ್ತಿದ್ದಾನೆಂದೂ, ತಾನೂ ಅದೇ ಓದಬೇಕೆಂದು ಮಾಡಿದ್ದಾಗಿಯೂ, ಅದಕ್ಕೆ ನನ್ನ ಸಹಾಯ ಅವಶ್ಯವಾಗಿ ಬೇಕೆಂದೂ ಬರೆದಿದ್ದಳು. ತಾನು ಆರಾಮಿಲ್ಲವೆಂದು ಮಲಗಿರುವುದಾಗಿಯೂ, ಬಾಪ್ಪಾ ತನ್ನನ್ನು ಕರೆತಂದಾಗ ನಾನು ಅವರ ಬಳಿ ಮಾತನಾಡಿ ಏನೋ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿದೆಯೆಂದು ಹೇಳಬೇಕೆಂದೂ, ಮುಂದೆ ಓದು ಮುಂದುವರಿಸಲಿ ಎಂದು ಸಲಹೆ ಕೊಡಬೇಕೆಂದೂ ತಿಳಿಸಿದ್ದಳು. ಅದೇ ದಿನ ನಾನು ಬಲ್ಲ ಅವಳ ಬಾಪ್ಪಾ ಅವಳನ್ನು ಕರೆತಂದರು. ತಮ್ಮ ಕುಟುಂಬದಲ್ಲೇ ಯಾರೂ ತೆಗೆದಿರಲಿಲ್ಲ, ಇವಳು ೭೫% ಅಂಕ ಗಳಿಸಿದ್ದಾಳೆಂದು; ಅದೇ ವೇಳೆಗೆ ಬಹರೇನಿನಲ್ಲಿ ಇಂಜಿನಿಯರನಾಗಿರುವ ವರ ಬಂದಿರುವುದಾಗಿಯೂ, ಎಷ್ಟು ಒಳ್ಳೇ ಸಂಬಂಧವೆಂದರೆ ಕೈಬಿಡುವ ಹಾಗೇ ಇಲ್ಲವೆಂದೂ ಹೆಮ್ಮೆಯಿಂದ ಹೇಳಿಕೊಂಡರು. ‘ನೀವಾದರೂ ತಿಳಿದವರು. ಹೆಣ್ಣುಮಕ್ಕಳು ಎಷ್ಟು ಓದಿದರೂ ಕೊನೆಗೆ ಮದುವೆ ಮಾಡಿಕೊಡುವುದೇ. ದೇವರ ದಯೆಯಿಂದ ಇಂಥಾ ಸಂಬಂಧ ಸಿಕ್ಕಿದೆ. ಈ ಮದುವೆಗೆ ಒಪ್ಪು ಎಂದು ಅವಳಿಗೆ ಬುದ್ಧಿಮಾತು ಹೇಳಿ’ ಎಂದು ನನ್ನನ್ನೇ ಒತ್ತಾಯಿಸಿದರು!
ಆಗ ಮಾತ್ರ ನಾನು ಸ್ಪಷ್ಟವಾಗಿ ಆಸಿಯಾ ಪರ ನಿಂತೆ. ‘ಕುಟುಂಬದಲ್ಲೇ ಯಾರೂ ತೆಗೆದಿರದ ಅಂಕ ಗಳಿಸಿದ್ದಾಳೆ ಅನ್ನುತ್ತೀರಿ, ಮುಂದೆ ಓದಿಸಿ. ಮುಂದೆ ಇನ್ನೂ ಒಳ್ಳೆಯ ವರ ಸಿಕ್ಕಾನು. ಅವಳಿಗಿನ್ನೂ ಹದಿನೆಂಟು ವರ್ಷ. ಸಂಸಾರದ ಜಂಜಾಟ ಮುಂದೆ ಇದ್ದೇ ಇದೆ. ಈಗ ಅವಳಿಗೆ ಆಸಕ್ತಿಯಿರುವಾಗ ಓದಲಿ. ಅಲ್ಲದೇ ಅವಳ ಓದಿಗಾಗಲೀ, ಮದುವೆಗಾಗಲೀ ಹಣದ ತೊಂದರೆ ನಿಮಗಿಲ್ಲದಿರುವಾಗ ಓದಿಸಿ ಮದುವೆ ಮಾಡುವುದೇ ಒಳ್ಳೆಯದಾದೀತು’ ಎಂದೆ. ಅವರು ಅವಳನ್ನು ನನ್ನ ಬಳಿ ಕರೆತಂದ ಉದ್ದೇಶ ಉಲ್ಟಾ ಆದದ್ದು ನೋಡಿ ಮೌನವಾದರು. ‘ಈಗ ಕಾಲ ಬದಲಾಗಿದೆ. ಮಕ್ಕಳ ಇಷ್ಟಕ್ಕೆ ತೀರ ವಿರುದ್ಧ ನಡೆಯುವಂತೆ ಇಲ್ಲ. ತುಂಬ ಒತ್ತಾಯದಿಂದ ನೀವು ಅವಳ ಮದುವೆ ಮಾಡಿ, ಕೊನೆಗೆ ಅವನ ಜೊತೆ ಸಂಸಾರ ಸಾಗಿಸುವ ಮನಸ್ಸೇ ಬರದೇ ಹೋದರೆ ಏನು ಮಾಡುತ್ತೀರಿ? ಇಂತಹ ಬಹಳ ಉದಾಹರಣೆಗಳು ಈಗ ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ. ಈಗಿನ ಮಕ್ಕಳು ಬಹಳ ಸೂಕ್ಷ್ಮ. ನಿಮ್ಮ ಮುದ್ದಿನ ಒಬ್ಬಳೇ ಹುಡುಗಿ ಅವಳು, ಮನಸ್ಸಿಗೆ ಇದನ್ನೇ ಹಚ್ಚಿಕೊಂಡು ಮುಂದೆ ಜೀವಕ್ಕೇನಾದರೂ ತೊಂದರೆ ಮಾಡಿಕೊಂಡರೂ ಕಷ್ಟವೇ. ಅವಳಿಷ್ಟ ಏನಂತ ಕೇಳದೇ ಮುಂದುವರೆಯಬೇಡಿ’ ಎಂದು ಸೋದಾಹರಣವಾಗಿ ಒಂದೆರೆಡು ಪ್ರಕರಣ ವಿವರಿಸಿದೆ. ಅವಳು ಮಂಕಾಗಿರುವುದಕ್ಕೆ ಓದು ಸಾಧ್ಯವಾಗದೇ ಇರುವುದೇ ಕಾರಣವಿರಬಹುದೆಂದೂ ಹೇಳಿಬಿಟ್ಟೆ.
ಕೊನೆಯ ಬಾಣ ನಾಟಿತು.
ಆಸಿಯಾ ಇಂದು ಸಾಫ್ಟ್‌ವೇರ್ ಇಂಜಿನಿಯರ್. ತಾನು ಪ್ರೀತಿಸಿದ ಕ್ಲಾಸ್‌ಮೇಟನ್ನೇ ಮದುವೆಯಾದಳು. ಇಬ್ಬರೂ ಮುಂಬಯಿಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವಳು ತೌರಿಗೆ ಬಂದಾಗಲೆಲ್ಲ ಗಂಡನ ಜೊತೆಗೂಡಿ ನನ್ನ ಬಳಿ ಬಂದುಹೋಗುತ್ತಾಳೆ. ‘ಮೇಡಂ, ನನ್ನ ಖುಷಿಯಲ್ಲಿ ಯಾವತ್ತೂ ನಿಮ್ಮದೊಂದು ಪಾಲಿದೆ’ ಎಂದು ನಗೆಯನ್ನು ಹಂಚುತ್ತಾಳೆ...
*******
ಮಂಜು ಹಾಗೂ ಸುಬ್ಬಿ ಇವರಿಬ್ಬರನ್ನು ತುಂಬ ದಿನಗಳಿಂದ ನೋಡುತ್ತಿದ್ದೆ. ಮದುವೆಯಾಗಿ ಇಪ್ಪತ್ತು ವರ್ಷ ಕಳೆದರೂ ಮಕ್ಕಳಾಗಲಿಲ್ಲವೆಂಬ ಕೊರಗಿನಲ್ಲಿದ್ದಾಗಲೇ ಮಂಜು ಅಡಿಕೆ ಮರ ಹತ್ತಿದವ ಕೆಳಗೆ ಬಿದ್ದು ಸೊಂಟದಿಂದ ಕೆಳಗೆ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ. ಕಾಲಿನ ಸ್ವಾಧೀನವಷ್ಟೇ ಅಲ್ಲ, ಮೂತ್ರ ಹಾಗೂ ಮಲಬಾಧೆಯ ಮೇಲಿನ ನಿಯಂತ್ರಣ ಹಾಗೂ ಲೈಂಗಿಕ ಸಾಮರ್ಥ್ಯ ಕೂಡ ಇಲ್ಲವಾಗಿತ್ತು. ಹೀಗಾಗಿ ನಾಲ್ಕಾರು ವರ್ಷಗಳೇ ಕಳೆದು ಬರೀ ವಾಟರ್ ಬೆಡ್ಡಿನ ಮೇಲೆ ದಿನ ದೂಡುತ್ತಿದ್ದ ಅವನು ಮೂರ್ನಾಲ್ಕು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ. ಬೆನ್ನ ಮೇಲೆಲ್ಲ ಹುಣ್ಣು. ಅವನ ಮಲಮೂತ್ರ ಬಳಿಬಳಿದು ಸುಬ್ಬಿಯೂ ಹೈರಾಣಾಗಿದ್ದರೂ ಯಾರ ಬಳಿಯೂ ಹೇಳುವಂತಿರಲಿಲ್ಲ.
ಹೀಗಿರುವಾಗ ಒಂದುದಿನ ತುಂಬ ಕಳವಳದ ಮುಖ ಹೊತ್ತು ಬಂದಳು.
ಅವಳೀಗ ಮುಟ್ಟಾಗದೇ ಎರಡು ತಿಂಗಳಾಗಿದೆ! ಗಂಡನ ಬಳಿ ಏನೂ ಸಾಧ್ಯವಿಲ್ಲ ಎಂದು ನನಗೆ ಗೊತ್ತೆಂದು ಅವಳಿಗೂ ತಿಳಿದಿದೆ. ಯಾವ ಮಾನವ ಸಹಜ ದೌರ್ಬಲ್ಯಕ್ಕೊಳಗಾದಳೋ? ನಿಂತಿದ್ದು ಹೌದೆಂದು ಖಚಿತವಾದದ್ದೇ ಭೋರೆಂದು ಅತ್ತಳು. ಅದಕ್ಕೆ ಕಾರಣನಾದವ ಮುಂದೆ ಅವಳ ಗಂಡನ ಜೀವಕ್ಕೆ ತೊಂದರೆಯಾದರೆ ತಾನೇ ಅವಳನ್ನು ಮದುವೆಯಾಗಿ ಮಗುವನ್ನು ಬೆಳೆಸಲು ಸಹಾಯ ಮಾಡುತ್ತೇನೆಂದು ಹೇಳಿದ್ದಾನಂತೆ. ಆದರೆ ಇವಳಿಗೆ ಸಿಕ್ಕಾಪಟ್ಟೆ ದ್ವಂದ್ವ. ಆಗಬೇಕಾದ್ದೇ.
ಯಾವುದನ್ನು ಬಯಸಿ ಅವಳು ಸಾವಿರಾರು ರೂ. ಖರ್ಚು ಮಾಡಿದ್ದಳೋ, ಅದು ಇಂದು ದಕ್ಕಿದ್ದರೂ ಅವಳಿಗೆ ಬೇಡವಾಗಿದೆ! ನಿಜವಾಗಿ ಏನಾಗಿದೆ ಎಂದು ಗಂಡನಿಗೆ ತಿಳಿಯದಂತೆ, ಅವನ ವೀರ್ಯವನ್ನು ತೆಗೆದು ಇಂಜೆಕ್ಷನ್‌ನಂತೆ ಕೊಟ್ಟು ಈ ಗರ್ಭ ನಿಂತಿತೆಂದು ಹೇಳಿ ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ಅವಳ ಪ್ರಶ್ನೆಯಾಗಿತ್ತು. ಸದ್ಯದ ಭಾವುಕತೆಗೆ ಒಳಗಾಗಿ ಮಗುವನ್ನು ಹೆತ್ತರೆ ಮುಂದೆ ಎದುರಾಗಬಹುದಾದ ಸನ್ನಿವೇಶಗಳನ್ನೆದುರಿಸಲು ತಕ್ಕ ಛಾತಿ ಬೇಕು. ಅದು ಅವಳಲ್ಲಿರಲಿಲ್ಲ. ಹೇಗಾದರೂ ಒಂದು ಮಗುವನ್ನು ಹೆತ್ತುಬಿಡುವ ಆಶೆ... ಯಾವುದೋ ಸಬೂಬು ಹೇಳಿ ಮಗುವನ್ನು ಉಳಿಸಿಕೊಳ್ಳಲು ಆಗಿದ್ದರೆ ಎನ್ನುವಾಗ ಅವಳ ಕಣ್ಣುಗಳು ಆಸೆಯಿಂದ ಮಿಂಚುತ್ತಿದ್ದರೆ, ಅಲ್ಪಕಾಲ ಬದುಕಬಹುದಾದ ಗಂಡನಿಗೆ ದುರ್ಬಲ ಗಳಿಗೆಯಲ್ಲಿ ನಂಬಿಕೆಗೆ ದ್ರೋಹ ಮಾಡಿದೆನಲ್ಲವೇ ಎಂಬ ವಿಷಾದವೂ ಮಾತಿನಲ್ಲಿ ಕಾಣುತ್ತಿತ್ತು. ಗಂಡನ ತಿಳುವಳಿಕೆಯಿಲ್ಲದೇ ಮಗುವನ್ನು ಇಟ್ಟುಕೊಳ್ಳುವುದು ಸಾಧ್ಯವೂ ಇಲ್ಲ. ಹೇಳಿ ಒಪ್ಪಿಸುವ ಧೈರ್ಯವೂ ಇಲ್ಲ.ಮಗುವಿನ ಆಸೆ ಅವರ ಪ್ರತಿ ಹಾವಭಾವದಲ್ಲಿ ಹೊಮ್ಮುತ್ತಿದ್ದರೂ, ಗಂಡ ಅಥವಾ ಮಗು - ಎರಡರಲ್ಲೊಂದು ಎಂಬ ಆಯ್ಕೆ ಬಂದಾಗ ಸಮಾಜದ ಭಯಕ್ಕೆ ಮಗುವಿನ ಆಸೆಯ ಮೇಲೆ ಸಮಾಧಿಯ ಕಲ್ಲೆಳೆದರು.
‘ನಂ ಪೈಕಿ ಜನ ನಿಮ್ಮತ್ರ ಬರ‍್ತಾ ಇರ್ತಾರೆ. ಅವರ‍್ಯಾರಿಗೂ ಈ ಸುದ್ದಿ ತಿಳಿಯದಂತೆ ಇದೊಂದ್ನ ಹೇಗಾದ್ರೂ ತೆಕ್ಕೊಡಿ. ಯಾರ್ಗೂ ಹೇಳ್ಬೇಡಿ’ ಎಂಬುದು ಅವಳ ಕೊನೆಯ ಪ್ರಾರ್ಥನೆಯಾಗಿತ್ತು..
*******
‘ಮೇಡಂ, ನಮ್ಮಾವ ಆರು ತಿಂಗ್ಳಿಗೆ ಒಂದ್ಸಲನೂ ತಾಯಿ ಮನೆಗೆ ಕಳಿಸಲ್ಲ. ಅದ್ಕೇ ನಾನು ಮಕ್ಳಿಗೆ ಆರಾಮಿಲ್ಲದಿದ್ದಾಗ ಅಲ್ಲಿಯ ಡಾಕ್ಟ್ರ ಹತ್ರಿಂದ ತಂದ ಮದ್ದನ್ನ ಸರೀ ಕೊಡುದೇ ಇಲ್ಲ. ಅಲ್ಲಿಯ ಔಷಧಕ್ಕೆ ಸೀಕು ಕಮ್ಮಿಯಾಗುದಿಲ್ಲ ಅಂತ ಹೇಳಿ ಇಲ್ಲೇ ಕರ‍್ಕಂಡು ಬಂದುಬಿಡ್ತೆ. ನಿಮ್ಮ ಔಷಧದಲ್ಲಿ ಮಕ್ಕಳಿಗೆ ಬೇಗ ಗುಣನೂ ಕಾಣ್ತದೆ, ಆಮೇಲೆ ನನಗೂ ಆ ನೆವದಲ್ಲಿ ಮಕ್ಕಳಿಗೆ ಸರಿಯಾಗೋ ತನ್ಕ ತಾಯಿ ಮನೇಲೇ ಉಳದು ಹೋದಹಾಗೂ ಆಗ್ತದೆ.’
‘ಅದು ಸ್ವಲ್ಪ ಪರಾಮಾಯ್ಸಿ ಆಯ್ತು ಮೇಡಂ. ಮದುವೆಗೆ ಮೊದಲೇ ಹುಡುಗ ಮನೆಗೆ ಬಂದುಹೋಗಿದ್ದ. ಅದೇ ಏನಾರ ಹೆಚ್ಚುಕಮ್ಮಿ ಆಗಿರ್ಬೇಕು. ಅದಕ್ಕೆ ಮದುವೆಯಾಗಿ ಬರೀ ನಾಕೇ ತಿಂಗಳಾಗಿರೋದು. ಆರು ತಿಂಗಳು ಅಂತ ಹೇಳ್ಬೇಡಿ. ಸ್ಕ್ಯಾನಿಂಗ್ ನಾಗೂ ನಾಕೇ ತಿಂಗ್ಳು ಅಂತ ತೋರ್ಸಿ. ಇಲ್ದಿದ್ರೆ ಊರ ಜನ ಕೆಟ್ಟ ತಿಳಿತಾರೆ.’
‘ಅವಳಿಗೆ ಸ್ವಲ್ಪ ಆರಾಮ ಕೊಡಬೇಕು, ಒಳ್ಳೇ ಟಾನಿಕ್ ಕೊಡ್ಬೇಕು, ಇಲ್ದಿದ್ರೆ ಆಸ್ಪತ್ರೆಗೆ ಅಡ್ಮಿಟ್ ಮಾಡ್ಬೇಕಾಗುತ್ತೆ ಅಂತ ಹೇಳಿ ಅಮಾ. ಇವರಿಗೆ ಎಷ್ಟು ಗೇಯ್ದ್ರೂ ಸಾಕಾಗಲ್ಲ. ಒಂದ್ ನಾಕ್ ದಿನನಾದ್ರೂ ಆರಾಮ ಮಾಡಿ ಸೊಂಟ ಗಟ್ಟಿ ಮಾಡ್ಕಳ್ತೆ.’
*******
ಆತ್ಮೀಯರ ಇಂತಹ ಹಲವು ಒಳಗುಟ್ಟು ಬಚ್ಚಿಟ್ಟು, ಮುಚ್ಚಿಟ್ಟು, ನನ್ನೆದೆಯೆಂಬ ಗುಬ್ಬಿಗೂಡು ತುಂಬಿಹೋಗಿದೆಯೇನೋ ಎನಿಸುತ್ತದೆ. ಆದರೆ ಇಲ್ಲ. ಮತ್ತಾರದೋ ಬೇರೆಲ್ಲೂ ಹೇಳಿಕೊಳ್ಳಲಾಗದ ಮಾತೊಂದು ನರಳುತ್ತಾ ನನ್ನ ಬಳಿಗೆ ಬಂದೊಡನೆ ಕಿವಿ ಮೂಲಕ ಎದೆ ತಲುಪಿಯೇ ಬಿಡುತ್ತದೆ. ಇದ್ದ ರಾಶಿಯ ನಡುವೆಯಲ್ಲೆಲ್ಲೋ ಒಂದು ಸಂದಿ ಹುಡುಕಿ ಕುಳಿತುಬಿಡುತ್ತದೆ.
ನನ್ನದೇನಿದ್ದರೂ ಗುಟ್ಟುಮುಚ್ಚಿಟ್ಟುಕೊಳ್ಳುವುದಷ್ಟೇ ಕೆಲಸ - ಚಿನ್ನದ ಗಣಿ ಕಾಯುವ ಕಾವಲುಗಾರನ ಹಾಗೆ... ಕಂತೆಕಂತೆ ಹಣ ಎಣಿಸಿ ಖಜಾನೆ ತುಂಬಿಕೊಳ್ಳುವ ಬ್ಯಾಂಕರನ ಹಾಗೆ.. ಅತ್ತರೂ ಸತ್ತರೂ ಮಿಸುಕದ ಶಿಲಾಮೂರ್ತಿಯ ಹಾಗೆ... ಅವರ ಮಾತುಗಳಿಗೆಲ್ಲ ಅರ್ಥ ಹುಡುಕುತ್ತ ಪಾಪಪುಣ್ಯಗಳೆಂಬ ವಿವೇಚನೆಯಾಗಲೀ, ಮೋಸ-ಅವಮಾನವೆಂಬ ತೀರ್ಮಾನವಾಗಲೀ, ಯಾರು ಎಂಥವರೆಂದು ಹಣೆಪಟ್ಟಿ ಕಟ್ಟುವುದಾಗಲೀ ನನ್ನ ಕೆಲಸವಲ್ಲ. ಅದು ತರವೂ ಅಲ್ಲ. ವೈದ್ಯರು ಹೇಳಿಕೇಳಿ ‘ಯಮನ ಬೊಜ್ಜ ತಿನ್ನುವವರು’. ಏಕೋಭಾವದಿಂದ ನಿರ್ಲಿಪ್ತವಾಗಿ ಎಲ್ಲವನ್ನು ಎಲ್ಲರನ್ನು ನೋಡಬೇಕೆಂದು ನಾನು ಓದಿದ್ದು ನನಗೆ ಕಲಿಸಿದೆಯಾದರೂ, ವಿಶಾಲ ಜಗತ್ತಿನಲ್ಲಿ ಈ ಪುಟ್ಟ ಮಾನವನ ಮನಸ್ಸೆಂಬೋ ಮನಸ್ಸಿನ ವಿವಿಧ ಮಜಲುಗಳನ್ನು, ಮಸಲತ್ತುಗಳನ್ನೂ ಅವಲೋಕಿಸುತ್ತಾ, ಅಚ್ಚರಿಯೆಂಬ ಒಂದು ಮಾತ್ರ ನನ್ನೊಳಗೆ ಉಳಿದಿದೆ.
[ರೇಖಾಚಿತ್ರಗಳು-ರಾಥೋಡ್]
[ಫೋಟೋ-ರಶೀದ್]