ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ  |
ಎಸ್.ಮಂಜುನಾಥ್
|
ಶನಿವಾರ, 8 ಆಗಸ್ಟ್ 2009 (04:53 IST)
|
ಅದು ಅವರ ನಿಜವಾದ ಹೆಸರಲ್ಲ. ಆದರೆ ಲೇಖಕರ ಧರ್ಮಕ್ಕನುಗುಣವಾಗಿ ನಾನು ಹೀಗೆ ಬದಲಿಸಿದ್ದೇನೆ. ಬರಹಗಾರರ ಧರ್ಮ ಇಷ್ಟೇ ಸುಲಭವೇ? ಇರಲಿ. ಕೊನೆಗಾಲದಲ್ಲಿ ಅವರು ಊರಿನ ಪಾರ್ಕಿನಲ್ಲಿರುವ ಗಣೇಶನ ಗುಡಿಯ ಪೂಜಾರಿಯಾಗಿದ್ದರು. ಅದಕ್ಕಿಂತ ಮುಖ್ಯವಾದ ಒಂದು ಮಾಹಿತಿಯೆಂದರೆ-ಅನೇಕ ವರ್ಷಗಳ ಕಾಲ ಸ್ವಾತಂತ್ಯ ದಿನಾಚರಣೆಯ ವೇಳೆ ಸ್ವಾತಂತ್ಯ ಹೋರಾಟಗಾರರೆಂದು ಶಾಲು, ಮೂಸುಂಬೆ ಹಣ್ಣುಗಳ ಸನ್ಮಾನ ಪಡೆಯುತ್ತಿದ್ದರು. ಅದಕ್ಕೆ ಕಾರಣವೆಂದರೆ ಅವರು ೧೯೪೨ರ ‘ಚಲೇಜಾವ್’ ಚಳವಳಿಯ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದು.
ಚಳವಳಿಯ ಸಂದರ್ಭದಲ್ಲಿ ಅವರು ಸ್ವಲ್ಪ ಬೇರೆಯದೇ ಕಾರಣಕ್ಕೆ ಜೈಲಿಗೆ ಹೋಗಿದ್ದು. ಆಗ ಅವರು ಅವರ ಅಣ್ಣನ ಮನೆಯಲ್ಲೇ ಇದ್ದರಂತೆ. ಅತ್ತಿಗೆಯ ಮೇಲೇ ಕಣ್ಣು ಹಾಕಿದ ಕಾರಣಕ್ಕೆ ಅವರಣ್ಣ ಅವರನ್ನು ರಾತ್ರೋರಾತ್ರಿ ಮನೆಯಿಂದ ಒದ್ದು ಹೊರಹಾಕಿದ್ದರಂತೆ. ಬೇರೆ ದಾರಿಯಿರದೆ ಇವರು ಊರ ಅಂಗಡಿಸಾಲಿನ ಮುಖ್ಯರಸ್ತೆಯಲ್ಲಿ ಮಲಗಿದ್ದರಂತೆ. ಆಗ ನೋಡಿದರೆ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭ. ಊರಿನಲ್ಲಿ ಕರ್ಫ್ಯೂ ಇತ್ತು. ಪೊಲೀಸು ಈ ಬೀಡಾಡಿಯನ್ನು ದಸ್ತಗಿರಿ ಮಾಡಿ ಜೈಲಿಗೆ ದಬ್ಬಿದರು. ಏನಾದರೂ ಆಗಲಿ ಕ್ಚಿಟ್ ಇಂಡಿಯಾ ಚಳವಳಿಯ ವೇಳೆ ಇವರೂ ಸೆರೆವಾಸ ಅನುಭವಿಸಿದಂತಾಯಿತು. ಹಾಗಾಗಿ ಅವರಿಗೆ ಸ್ವಾತಂತ್ರ ದಿನಾಚರಣೆಯ ವೇಳೆ ಸನ್ಮಾನವಾಗುತ್ತಿದ್ದುದು.
ಇದೆಲ್ಲ ನಾನು ಕೇಳಿದ ಕತೆ. ನಾನು ಕಂಡಿದ್ದನ್ನು ಹೇಳುವುದಾದರೆ, ನಮ್ಮ ಮನೆಯ ಔಟ್‌ಹೌಸಿನಲ್ಲಿದ್ದ ಕುಳ್ಳು ಪೂಜಾರಿ ಇವರ ತಾಯಿಯಂತೆ ಕಾಣುತ್ತಿದ್ದ ಹೆಂಡತಿಯೊಂದಿಗೆ ತಡೆರಹಿತ ಘನಘೋರ ಜಗಳವಾಡುತ್ತಿದ್ದರು-ನನಗೆ ಅರ್ಥವಾಗದ ತಮಿಳಿನಲ್ಲಿ. ಆದರೆ ಸುಸಂಸ್ಕೃತರಾದ್ದರಿಂದ ಯಾವತ್ತೂ ಕೈ ಕೈ ಮಿಲಾಯಿಸಿದ್ದಿಲ್ಲ. ಗಂಡ ಹೆಂಡಿರಿಬ್ಬರೇ ಇದ್ದ ಅಷ್ಟು ಪುಟ್ಟ ಮನೆಯಲ್ಲಿ ಹಾಗೆ ಜಗಳ ಕಾಯಲು ಅವರಿಗೇನು ಕಾರಣವಿರುತ್ತಿತ್ತೋ ಹೇಳಲಾಗದು. ಅಥವಾ ಅವರಿಗೆ ಅದೊಂದು ರೀತಿಯ ಕೂಟ ಸುಖ ಕೊಡುತ್ತಿತ್ತೇನೋ. ಮತ್ತೊಂದು ವಿಷಯ: ‘ಹಿಂದೆ’ ಹೋಗಿ ಬಂದ ಮೇಲೆ ಅವರು ಬಟ್ಟೆ ಒಗೆಯುವ ಒರಟು ಕಲ್ಲಿನ ಮೇಲೆ ತಮ್ಮ ಎಡಗೈಯಿನ ಎರಡು ಬೆರಳುಗಳನ್ನು ಹಿಂಸೆಯಾಗುವ ಹಾಗೆ ಉಜ್ಜಿ ಉಜ್ಜಿ ತೊಳೆಯುತ್ತಿದ್ದುದನ್ನು ನಾನು ಸಂಕಟಪಡುತ್ತ ಗಮನಿಸಿದ್ದೆ.
ಆ ವಯೋವೃದ್ಧ ಪೂಜಾರಿಯವರು ಮುಸ್ಸಂಜೆಯ ಬಳಿಕ ಪೂಜೆಗೆಂದು ತಮ್ಮ ಮನೆಯಿಂದ ನಡೆದುಕೊಂಡು ಪಾರ್ಕಿಗೆ ಹೋಗುವಾಗ ಅವರ ಬೀದಿಯ ಆಚೆಯಿದ್ದ ಒಡ್ಡರ ಕಾಲೋನಿಯ ಪಂಕ್ ಹುಡುಗರು ಬೇಕೆಂತಲೇ ಇವರನ್ನು ಮುಟ್ಟಿಸಿಕೊಂಡು ಓಡಿಬಿಡುತ್ತಿದ್ದರು. ಆಗ ಇವರಿಗೆ ಮತ್ತೆ ಸ್ನಾನ ಮಾಡಿಕೊಂಡು ಬರಬೇಕಾದ ಶಿಕ್ಷೆಯಾಗುತ್ತಿದ್ದುದರಿಂದ ಅಪಾರವಾದ ಸಿಟ್ಟು ಬರುತ್ತಿತ್ತು. ಆದರೆ ವಿಧಿಯಿಲ್ಲ. ಆ ಕಿಡಿಗೇಡಿಗಳು ಇವರ ಕೈಗೆ ಸಿಗುತ್ತಲೂ ಇರಲಿಲ್ಲ. ಈ ರೀತಿಯಾಗಿ ಅಪ್ಪು ಪೂಜಾರಿಗೆ ಬಹಳ ಹಿಂಸೆಯಾಗಿ ಕೊನೆಗೆ ಅವರು ಭಯಂಕರವಾದ ದೊಣ್ಣೆ ಹಿಡಿದುಕೊಂಡು ಓಡಾಡಲು ಆರಂಭಿಸಿದರು- ಒಡ್ಡರ ಹುಡುಗರು ಹತ್ತಿರ ಬಂದರೆ ಬೀಸಲು. ಆ ಬಳಿಕ ಆ ಹಿಂಸೆಯಾಗುವುದು ತಪ್ಪಿರಬೇಕು.
ನಾನು ನೋಡಿದ್ದೇನೆ: ಇರುಳುಗುರುಡಿನ ಆ ಮನುಷ್ಯ ದೇವಸ್ಥಾನದಿಂದ ವಾಪಸು ಬರುವಾಗ ಆ ಭಯೋತ್ಪಾದಕ ದೊಣ್ಣೆ ಹಿಡಿದು ಒಂದು ಏರಿ ಇಳಿಯುತ್ತಿರುವುದನ್ನು. ಪುರಾಣದ ಯಾವುದೋ ಕತೆಯಲ್ಲಿ ಶಾಪಕ್ಕೆ ಈಡಾಗಿ ಇಂಥದೊಂದು ಆಯುಧವನ್ನು ಹೊತ್ತು ತಿರುಗಬೇಕಾಗಿ ಬಂದ ಬ್ರಾಹ್ಮಣನೋ ಸಾಧುವೋ ಆಗಿ ನನಗೆ ಅವರು ಕಂಡಿದ್ದಾರೆ.
ಲೇಖಕನ ಧರ್ಮ ಅಷ್ಟು ಸುಲಭವಿರಲಾರದು ಎಂದು ಪ್ರಾರಂಭದಲ್ಲಿ ಊಹಿಸಿದೆ. ಈಗ ಈ ಅಪ್ಪು ಪೂಜಾರಿಯನ್ನು ತುಚ್ಛೀಕರಿಸುವುದು, ದ್ವೇಷಿಸುವುದು ಸುಲಭ. ಆದರೆ ಪ್ರಜ್ಞೆಯ ಆಳಪಾತಳಿಯಲ್ಲಿ ಹೊರಳುತ್ತಲೇ ಉಳಿಯುವ ಆ ಮುದಿಜೀವದ ಚಿತ್ರ ಹಾಗೆ ಸುಲಭವಾಗಿ ವಿವರಿಸಿ ಕಳೆದುಕೊಳ್ಳಬಹುದಾಗಿ ಕಾಣುವುದಿಲ್ಲ.
|
| ಪುಟದ ಮೊದಲಿಗೆ |
 |
|
|
|
|
|
|