ಎಂದಿನಂತೆ ಮತ್ತೊಂದು ಸ್ವಾತಂತ್ರ್ಯ ದಿನ ಬಂದಿದೆ. ನನಗೆ ಸ್ವಾತಂತ್ರ್ಯದ ದಿನ ಅಂದರೆ ಇವತ್ತಿನವರೆಗೂ ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ಆ ದಿನದ ಸಂಭ್ರಮ ನೆನಪಾಗುತ್ತಿದೆ. ಆದರೆ ಅದರಾಚೆಗಿನ ಅದರ ನಿಜವಾದ ಅರ್ಥವನ್ನು ಮೇಸ್ಟರುಗಳಾಗಲಿ, ಅದರ ಬಗ್ಗೆ ಭಾಷಣ ಮಾಡಲು ಬರುತ್ತಿದ್ದ ಭಾಷಣಕಾರರಾಗಲಿ ಎಂದೂ ಯಾವತ್ತೂ ಮನದಟ್ಟು ಮಾಡಿಕೊಟ್ಟಂತೆ ಅನಿಸುತ್ತಿಲ್ಲ. ತಮ್ಮ ತಮ್ಮ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರ ಮತ್ತು ಆಯಾಯ ಶಾಲೆಗಳ ಘನತೆ ಗೌರವಗಳನ್ನು ತೋರಿಸುವ ವೇದಿಕೆ ಅನ್ನೋ ಹಾಗೆ ನಮ್ಮನ್ನು ಪೋಷಿಸಿಕೊಂಡು ಬಂದ ವ್ಯವಸ್ಥೆ ಇಂದೂ ಮುಂದುವರಿದಂತೆ ಕಾಣುತ್ತಿದೆ.
ಶಾಲೆಯಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ ಆಗಸ್ಟ್ ಹದಿನೈದು ಬಂತೆಂದರೆ ನಮಗೆಲ್ಲಾ ಎಲ್ಲಿಲ್ಲದ ಖುಷಿಯಾಗುತ್ತಿತ್ತು. ಡ್ಯಾನ್ಸ್, ಡ್ರಿಲ್, ಮಾರ್ಚ್ ಫಾಸ್ಟ್ ಅಂತ ಹೇಳಿ ಹದಿನೈದು ದಿನಗಳಿಗೂ ಮುಂಚಿನಿಂದಲೇ ತರಗತಿಗಳನ್ನು ಅರ್ಧಂ ಬರ್ಧ ನಡೆಸಿ ಅಭ್ಯಾಸಕ್ಕಾಗಿ ನಮ್ಮನ್ನೆಲ್ಲಾ ದಿನವೂ ಸ್ಟೇಡಿಯಂಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿನ ಅಭ್ಯಾಸಕ್ಕಿಂತ ನಮಗೆ ಅಲ್ಲಿನ ಅಂಗಡಿಗಳಲ್ಲಿ ಸಿಗುತ್ತಿದ್ದ ಸೀಬಿ ಹಣ್ಣುಗಳು, ಚಾಕಲೇಟ್ ಗಳು, ಕೂಲ್ ಡ್ರಿಂಕ್ಸ್ ಗಳು ನಮ್ಮನ್ನು ಹೆಚ್ಚು ಆಕರ್ಷಿಸುತ್ತಿದ್ದುದರಿಂದ ದಿನವೂ ನಮ್ಮನ್ನು ಹೀಗೆಯೇ ಕರೆದುಕೊಂಡು ಹೋಗಲಪ್ಪ ಅನಿಸುತ್ತಿತ್ತು. ಅಲ್ಲಿ ಬೇರೆ ಬೇರೆ ಸ್ಕೂಲಿನ ಡ್ರಿಲ್ ಮಾಸ್ಟರುಗಳು ಕೈಯಲ್ಲಿ ಉದ್ದದ ಕೋಲುಗಳನ್ನು ಹಿಡಿದುಕೊಂಡೋ, ಇಲ್ಲಾ ವಿಶಲ್ ಗಳನ್ನು ಊದಿಕೊಂಡೋ ನಮ್ಮನ್ನೆಲ್ಲಾ ನಿಯಂತ್ರಿಸುತ್ತಾ ದಾರಿಯಲ್ಲಿ ಹೋಗುವವರ ಬರುವವರ ಗಮನ ಸೆಳೆಯುವಷ್ಟು ಮೈದುಂಬಿಕೊಳ್ಳುತ್ತಿದ್ದರು.
ಇನ್ನು ಸ್ವಾತಂತ್ರ್ಯದ ಬೆಳಗಿನಿಂದಲೇ ಇಡೀ ಸ್ಕೂಲು ಗಡಿ ಬಿಡಿಯಲ್ಲಿರುತ್ತಿತ್ತು. ಇಡೀ ಸ್ಕೂಲಿನ ಅಂಗಳ ಬಣ್ಣ ಬಣ್ಣದ ಕಾಗದಗಳಿಂದ, ಡ್ರಂಗಳ ಸದ್ದಿನಿಂದ ತುಂಬಿ ಹೋಗಿರುತ್ತಿತ್ತು. ಬೆಳಗಿನ ಏಳಕ್ಕೇ ಬಿಳಿ ಯೂನಿಫಾರ್ಮ್ ಹಾಕಿಕೊಂಡು ಮಕ್ಕಳೆಲ್ಲಾ ಶಾಲೆಯಲ್ಲಿರಬೇಕಿತ್ತು. ಮಕ್ಕಳೆಲ್ಲಾ ಸೇರಿದ ಮೇಲೆ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ, ಲೀಡರ್ ಕೈಯಲ್ಲಿ ರಾಷ್ಟ್ರ ಧ್ವಜವನ್ನು ಇರಿಸಿ, ಘೋಷಣೆಗಳನ್ನು ಕೂಗಿಸಿಕೊಂಡು ಸ್ಟೇಡಿಯಂಗೆ ಕರೆದೊಯ್ದರೆ ಅಲ್ಲಿ ಆ ಹೊತ್ತಿಗೆ ಇಡೀ ನಗರದ ಎಲ್ಲ ಶಾಲೆಯ ಮಕ್ಕಳೂ ನಮ್ಮಂತೆಯೇ ಬಂದು ಬಂದು ಸ್ಟೇಡಿಯಮ್ಮನ್ನು ತುಂಬಿಕೊಳ್ಳುತ್ತಿದ್ದರು. ಆ ಸಾಗರವನ್ನು ನೋಡಿ ನಮಗೆ ಎಂಥದೋ ಖುಷಿಯಾಗುತ್ತಿದ್ದರೆ, ಅದಕಿಂತ ಮಿಗಿಲಾದ ರೋಮಾಂಚನವಾಗುತ್ತಿದ್ದುದು ಅವತ್ತು ಅಲ್ಲಿ ಎಂದಿಗಿಂತ ಹೆಚ್ಚು ಸೇರಿರುತ್ತಿದ್ದ ಥರಾವರಿ ಅಂಗಡಿಗಳನ್ನು ನೋಡಿ. ಹೀಗೆ ಶುರುವಾಗುತ್ತಿದ್ದ ಸ್ವಾತಂತ್ರ್ಯದ ಸಂಭ್ರಮ ಹಲವು ಭರ್ಜರಿ ಭಾಷಣ, ಹಲವು ಮನಮೋಹಕ ಸ್ಪರ್ಧೆ, ಹಲವು ಹಾಡುಗಳೊಂದಿಗೆ ಮುಗಿಯುವ ಹೊತ್ತಿಗೆ ಮಧ್ಯಾನವಾಗಿಬಿಡುತ್ತಿತ್ತು. ನಮಗೆ ಹೊಟ್ಟೆ ಚುರುಗುಡುತ್ತಿದ್ದರೆ, ನಮ್ಮ ಟೀಚರುಗಳಿಗೆ ನಮ್ಮ ಶಾಲೆಗೆ ಎಷ್ಟು ಬಹುಮಾನಗಳು ಬಂದವು, ಪಕ್ಕದ ಶಾಲೆಗೆ ಎಷ್ಟು ಬಹುಮಾನಗಳು ಹೋದವು ಅನ್ನುವ ಚಿಂತೆ. ಹೀಗೆ ಬೆಳಗಿನಿಂದ ಇರುತ್ತಿದ್ದ ನಮ್ಮ ಮತ್ತು ನಮ್ಮ ಟೀಚರುಗಳ ಉತ್ಸಾಹ ಬಹುಮಾನ ವಿತರಣೆಯಾಗುತ್ತಿದ್ದಂತೆ ಇಳಿದು ಹೋಗಿ ಬಿಡುತ್ತಿತ್ತು. ಹಾಗೆ ಬಂದ ಬಹುಮಾನಗಳನ್ನು ಟೀಚರುಗಳು ಆಗಲೇ ನಮ್ಮ ಕೈಗಳಿಗೆ ಕೊಡದೆ ಶಾಲೆಯಲ್ಲಿ ಕೊಡುವುದಾಗಿ ಹೇಳಿ ನಮ್ಮಗಳ ಹಸಿದ ಹೊಟ್ಟೆಯ ಕಾಟದ ಜೊತೆಗೆ ಸಣ್ಣ ಸಂಕಟವಾಗುವಂತೆ ಮಾಡುತ್ತಿದ್ದರು. ಜೇಬಿನಲ್ಲಿರುತ್ತಿದ್ದ ಚಿಲ್ಲರೆ ಕಾಸನ್ನು ಅಂಗಡಿಯವನ ಬಾಯಿಗೆ ಹಾಕಿ ಮನೆಗಳನ್ನು ಸೇರುವ ಹೊತ್ತಿಗೆ ಮಧ್ಯಾಹ್ನವಾಗಿಬಿಡುತ್ತಿತ್ತು. ಮತ್ತೆ ಇಂಥದೊಂದು ಸಂಭ್ರಮಕ್ಕೆ ನಾವು ಮುಂದಿನ ವರ್ಷದವರೆಗೂ ಕಾಯಬೇಕಿತ್ತು.
ಯಾಕೋ ನನಗಂತೂ ಈ ಆಚರಣೆ ತುಂಬಾ ಕೃತಕ ಅನಿಸುತ್ತಿದೆ. ಈ ಸ್ವಾತಂತ್ರ್ಯ ಅನ್ನೋದು ಯಾರಿಂದ ಯಾರಿಗೆ ಸಿಗಬೇಕಿದೆ ಅನಿಸುತ್ತಿದೆ. ಮೊದಲು ನೆಪಕ್ಕೆ ಮಾತ್ರ ಬ್ರಿಟೀಷರಿಂದ ಸಿಕ್ಕಿತ್ತೆ...ಈಗ ಅನಿವಾರ್ಯವಾಗಿ ನಮ್ಮ ರಾಜಕಾರಣಿಗಳಿಂದ...ಇಲ್ಲಿ ಯಾರ ಹೋರಾಟ ಯಾರಿಗಾಗಿ ಯಾತಕ್ಕಾಗಿ..ಉಳ್ಳವರ ಕಚ್ಚಾಟ, ಇಲ್ಲದವರ ಪರದಾಟ..ನಕ್ಸಲಿಸಂ, ಗೋಲಿಬಾರ್, ಪ್ರತಿಮೆಗಳ ಅಬ್ಬರ, ರೈತನ ಆತ್ಮ ಹತ್ಯೆ...ಇವೆಲ್ಲವುಗಳ ನಡುವೆ ಸ್ವಾತಂತ್ರ್ಯ ಅನ್ನೋದು ಕೇವಲ ಒಂದು ಸುಂದರ ಕಲ್ಪನೆಯಾ...ನಿಜಕ್ಕೂ ಗೊಂದಲವಾಗುತ್ತಿದೆ.
ಸ್ವಾತಂತ್ರ್ಯ ದಿನದಂದು ನಮ್ಮೆಲ್ಲರ ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸಿ ನಿಲ್ಲಿಸಿ, ನಂತರ ಅದನ್ನು ಪಠ್ಯಗಳೊಳಗೆ ಮಾತ್ರ ಸೇರಿಸಿ ಕೇವಲ ಹಬ್ಬವಾಗುತ್ತಿರುವ ಈ ದಿನಗಳಲ್ಲಿ ನಿಜವಾದ ದೇಶ ಪ್ರೇಮದ ಅರಿವನ್ನು ಮನಸ್ಸುಗಳೊಳಗೆ ಇಳಿಸುವ ಕೆಲಸ ಮಾಡುವಂಥವರಿಗಾಗಿ ನಮ್ಮಂಥ ಯುವ ಜನತೆ ಕಾಯುತ್ತಿದೆ ಅನಿಸುತ್ತಿದೆ. ಇಲ್ಲದೇ ಹೋದಲ್ಲಿ ಗಾಂಧಿ ಜಯಂತಿಯ ದಿನ ಗಾಂಧಿಯನ್ನು ಹೋಲುವ ವ್ಯಕ್ತಿಯ ತಲೆ ಬೋಳಿಸಿ, ಅವನಿಗೆ ಬೆಳ್ಳಿಯ ಬಣ್ಣ ಬಳಿದು ನಿಲ್ಲಿಸಿ ನಗೆಪಾಟಲಿಗೆ ಈಡು ಮಾಡಿ ಗಾಂಧಿಯನ್ನು ಅಣಕಿಸುವಂತೆ, ಸ್ವ್ಯಾತಂತ್ರ್ಯದ ದಿನ ಭಾರತ ಮಾತೆಯ ಧ್ವಜವನ್ನು ಹಿಡಿದು ಬೀದಿ ಬೀದಿಗಳಲ್ಲಿ ಹಿಡಿದು ಕೇವಲ ಕೂಗು ಹಾಕುವ ಮಟ್ಟಕ್ಕಷ್ಟೇ ಇಳಿದು ದಿನದಿಂದ ದಿನಕ್ಕೆ ತೆಳುವಾಗುತ್ತಾ ವಿದ್ಯಾರ್ಥಿಗಳಿಗೆ ಒಂದು ಹಬ್ಬವಾಗಿ, ಸರ್ಕಾರಿ ನೌಕರರಿಗೆ ಒಂದು ರಜವಾಗಿ ಮಾತ್ರ ಉಳಿದು ಈ ಸ್ವ್ಯಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರಿಗೆ ಮಾಡುವ ಒಂದು ಅಪಮಾನದ ದಿನವಾಗಿ ಉಳಿದು ಬಿಡುವ ಅಪಾಯ ಬೇಸರ ತರಿಸುತ್ತಿದೆ.
-ಸ್ಮಿತಾ ಮಾಕಳ್ಳಿ
*******
ಕನಸು ಮರೆತವರು
ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಬಾಲ್ಯ ಇರಲೇ ಬೇಕಲ್ಲಾ?. ಆದರೆ ಬಾಲ್ಯದ ಅನುಭವಗಳು ಮಾತ್ರ ಬೇರೆ-ಬೇರೆ. ಅಂತದರಲ್ಲಿ ಕನಸು ಮರೆತವರದು ಒಂದು ಪ್ರಭೇದವಷ್ಟೇ. ಕನಸೇ ಕಾಣದವರು ಕೆಲವು ಮಂದಿ, ಆದರೆ ಕನಸು ಮರೆತವರು ಅವೆಷ್ಟೋ ಮಂದಿ. ನಿತ್ಯ ಬದುಕಿನ ಜಂಜಾಟದಲ್ಲಿ ಇವರಿಗೆ ಬಾಕಿ ಎಲ್ಲವೂ ಶೂನ್ಯ. ದಿನದ ಹೊಟ್ಟೆಯ ಚೀಲ ತುಂಬಿಸಿಕೊಳ್ಳೋ ಪರಿ ಹೇಗೆ ಅನ್ನುವುದೇ ಇವರ ಕನಸು. ಅದಕ್ಕಾಗಿ ಏನೆಲ್ಲ ಮಾಡಬೇಕು ಅನ್ನೋದರ ಮುಂದೆ ಕನಸುಗಳು ಕಮರಿ ಹೋಗುತ್ತವೆ.
ಬೇರೆ ಮಕ್ಕಳ ಹಾಗೆ ಶಾಲೆಗೆ ಹೋಗ್ಲಿಲ್ಲ. ಗೆಳೆಯರೊಡಗೂಡಿ ಆಟ ಆಡಲಿಲ್ಲ. ಅಮ್ಮನ ಲಾಲಿ ಹಾಡು ಕೇಳಲಿಲ್ಲ. ಬದುಕಿನ ಕರಿನೆರಳಿನ ಛಾಯೆ ಹುಟ್ಟುತ್ತಲೇ ಅವರನ್ನು ಆವರಿಸಿಕೊಂಡು ಬಿಟ್ಟಿದೆ. ಇಂತವರಿಂದ ಭವಿಷ್ಯದ ಭಾರತ ಹೇಗಿರಬಹುದು? ಬಡತನ ಎಂಬ ಪೆಡಂಭೂತ ಇವರನ್ನು ಕಿತ್ತು ತಿನ್ನುತ್ತಲಿದೆ. ಆದರೆ ಅವ್ರಿಗೂ ಆಸೆ ಇರುತ್ತದಲ್ವ. ತಾವು ಶಾಲೆಗೆ ಹೋಗಬೇಕು, ಒಳ್ಳೇ ಬಟ್ಟೆ ಹಾಕ್ಕೋಬೇಕು, ತಮ್ಮದೇ ಆದ ಮನೆ ಬೇಕು, ಒಳ್ಳೇ ಊಟ ಬೇಕು, ಇವೆಲ್ಲವೂ ಪ್ರತಿಯೊಬ್ಬರೂ ಕಾಣುವ ಕನಸೇ ಅಲ್ವ. ಆದರೆ ಇವೆಲ್ಲವೂ ಅವರ ಕನಸಿನಲ್ಲಿ ಮಾತ್ರ ಸಾದ್ಯ. ಅದಕ್ಕಾಗೇ ಅವರು ಕನಸು ಮರೆತವರು. ಇವರಿಗೆ ಕಳೆದುಕೊಳ್ಳುತ್ತಿರೋ ಅವರ ಬಾಲ್ಯವನ್ನ ಮರಳಿ ಕೊಡುವುದು ಎಲ್ಲರ ಕರ್ತವ್ಯವೇ ಆಗಿದೆ. ದೊಡ್ಡವರಾದ ಮೇಲೆ ಅವರು ತಮ್ಮ ಬಾಲ್ಯದ ಕುರಿತು ಸಿಹಿ ನೆನಪನ್ನ ಹೊಂದುವಂತಾಗಬೇಕು. ಭವ್ಯ ಭಾರತದ ಕನಸಿನಲ್ಲಿ ಅವರಿಗೂ ಒಂದು ಪಾಲು ಸಿಗುವಂತಾಗಬೇಕು.
ನೇರ ಮಾತಿಗೆ ಬರುವುದಾದರೆ, ಕನಸು ಮರೆತವರು ನಿಮಗೆ ಚಿಂದಿ ಆಯುವ ಸ್ಥಳಗಳಲ್ಲಿ ಸಿಗುತ್ತಾರೆ. ಕೊಳಗೇರಿಗಳ ಹೊಸ್ತಿಲಲ್ಲಿ ಲಗೋರಿ ಆಡುತ್ತಿರುತ್ತಾರೆ. ಇರಕಲು ಮನೆಯ ಸಂಧಿಯಲ್ಲಿ ೨ ರೂಪಾಯಿಯ ಪಾರ್ಲೇಜಿ ತಿನ್ನುತ್ತಿರುತ್ತಾರೆ. ಹಳ್ಳಿಯ ಸೋಗೆ ಮಡಿನ ಗುಡಿಯಲ್ಲಿ ಗೊಣ್ಣೆ ಒರೆಸಿಕೊಳ್ಳುತ್ತಿರುತ್ತಾರೆ. ಹೀಗೆ ಬಣ್ಣಿಸಲು ಆಗದ ಸ್ಥಿತಿಯಲ್ಲಿ ಕನಸುಗಳುಗಾಗಿ ಹುಡುಕುವ ಮನಸ್ಸು ಕಳೆದು ಕೊಂಡವರದೇ ಒಂದು ಸಂಘವಿರುತ್ತದೆ.
ವಯಸ್ಸು ಮಾಗುತ್ತ ಬಂದಂತೆ ಪೋಲಿ ಬೀಳುತ್ತಾರೆ. ಘೋಷಿತ ಕಾನೂನುಗಳನ್ನು ಮುರಿಯುವ ಮೂಲಕ ಹೊಸ ಕನಸು ಹೊಸೆಯುತ್ತಾರೆ. ಚುನಾವಣೆಗಳಲ್ಲಿ ಹಣ ಹೆಂಡ ಹಂಚುವ ಕಾಲಾಳುಗಳಾಗಿ ತಮ್ಮ ಇರುವಿಕೆಯ ಸಾರ್ಥಕತೆ ಕಾಣುತ್ತಾರೆ. ಆದರೂ ಕನಸುಗಳ ಲೋಕದಲ್ಲಿ ಚೌಕಸಿ ಮಾಡುತ್ತಾರೆ. ಅವರಿಗೆ ದೇಶ ಆಳುವ ಕನಸು ಬೀಳುವುದಿಲ್ಲ, ಆಳಿಸಿಕೊಳ್ಳಲು ಹುಟ್ಟಿದವರಂತೆ ಬದುಕುತ್ತಾರೆ. ಅವರಿಗೆ ಸಿನಿಮಾ ನಟನಾಗುವ, ನಟಿಯಾಗುವ ಕನಸು ಇರುವುದಿಲ್ಲ. ಆದರೆ ವಿಜಯ್ ತರಹದ ನಟರಲ್ಲಿ ತಮ್ಮನ್ನು ಕಂಡು ಸಿಳ್ಳೆ ಹಾಕುತ್ತಾರೆ. ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳುವುದಿಲ್ಲ, ಆದರೂ ಬೀದಿ ಬದಿಯಲ್ಲಿ ವಿಚಿತ್ರ ಬಣ್ಣದ ಅಂಗಿ ಖರೀದಿಸುತ್ತಾರೆ.
ಇವರ ಕನಸುಗಳನ್ನು ಕಿತ್ತುಕೊಳ್ಳಲಾಗಿದೆ ಎಂದರೆ ದೊಡ್ಡ ಮಾತಾಗುತ್ತದೆ, ಹಾಗಾಗಿ ಕನಸುಗಳನ್ನು ಮರೆತಿದ್ದಾರೆ ಎಂದರೆ ಸಾಹಿತ್ಯಿಕವಾಗಿ ಸರಿಯಾಗುತ್ತದೆ. ಸಂಜೆಯ ಮಬ್ಬುಗತ್ತಲಿನಲ್ಲಿ ಹರಾಜಿಗೆ ನಿಂತವರಿಗೆ ಇಂತಹ ಗಿರಾಕಿಯೇ ಬರಲಿ ಎಂದು ಕನಸು ಕಾಣಲು ಸಾಧ್ಯನಾ? ಹಾಗಾಗಿ ಇವತ್ತಿನ ಗಿರಾಕಿ ಹೊಟ್ಟೆ ಬಟ್ಟೆಗಾಗುವಷ್ಟು ಕೊಟ್ಟರೆ ಸಾಕು ಎಂದುಕೊಳ್ಳುತ್ತಾರೆ. ಶೌಚಾಲಯ ಉಜ್ಜುವಾಗ ಫಿನಾಯಿಲ್ ವಾಸನೆ ಘಮ ಘಮ ಎನ್ನಲಿ ಎಂದು ಬಯಸುತ್ತಾರಾ? ಮೊದಲೆ ಸುರಿದುಕೊಂಡ ಸಾರಾಯಿ ವಾಸನೆ ಘಮವನ್ನು ನುಂಗುತ್ತಿರುತ್ತದೆ. ಹಾಗಿರುವಾಗ ಕನಸು ಕಾಣುವುದೋ, ಇಲ್ಲಾ ಮರೆಯುವುದೇ..ಎಲ್ಲಾ ಗೊಂದಲಮಯ.
ಆದರೂ ಕನಸುಗಳ ಮರೆತವರ ಪ್ರಪಂಚದಲ್ಲಿ ನೆಮ್ಮದಿ ಇರುತ್ತದೆ. ನಾಳೆಯ ಭ್ರಮೆಯಲ್ಲಿ ಇಂದಿನ ಸಣ್ಣ ಸಣ್ಣ ಸುಖಗಳು ಕಳೆದು ಹೋಗುವುದಿಲ್ಲ. ಅವರಿಗೆ "ಸಚ್ ಕಾ ಸಾಮ್ನಾ" ದೊಡ್ಡ ವಿಚಾರವೇ ಅಲ್ಲ. ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ಸತ್ಯಕ್ಕೇಕೆ ಹೆದರಬೇಕು? ಸ್ವಯಂವರದ ಚಿಂತೆ ಇರಲ್ಲ, ಯಾಕೆಂದರೆ ಮದುವೆಯನ್ನೂ ದುಡ್ಡು ಮಾಡುವ ಉದ್ಯಮವಾಗಿ ಮಾಡುವ ಕನಸು ಅವರಿಗೆ ಬೀಳುವುದೇ ಇಲ್ಲ. "ಜಂಗಲ್ ಸೆ ಮುಜೇ ಬಚಾಲೋ" ಎಂದು ಗೋಗರಿಯಬೇಕಿಲ್ಲ, ಮಲೇಷಿಯಾದ ಕಾಡಿಗಿಂತಲೂ ಕ್ರೂರವಾದ ದಿನನಿತ್ಯದ ಬದುಕಿಗೆ ಅವರೆಂದೂ ಭಯ ಪಡುವುದಿಲ್ಲ.
ನೆನಪುಗಳು ಬೇಡವಾದವರಿಗೆ ಕನಸುಗಳನ್ನು ನೀಡುವ ಕೆಲಸ ಅಪಾಯಕಾರಿಯಾದದ್ದು. ಈಗಿರುವ ಜೀವನ ಸುಖವನ್ನು ಕಿತ್ತುಕೊಳ್ಳಲು ಕನಸುಗಳೇ ಕಾರಣ. ಹಾಗಂತ ನಾಗರೀಕ ಸಮಾಜದ ಮುಂದಾಳುಗಳಿಗೆ ಕನಸುಗಳೇ ಜೀವನ. ಒಂದೆಡೆ ಕನಸು ಮರೆತವರ ಭಾರತ, ಮತ್ತೊಂದೆಡೆ ಕನಸುಗಳಿಗಾಗಿಯೇ ಬದುಕುವವರ ಇಂಡಿಯಾ!
ತನ್ನ ೬೩ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಭಾರತದ ಅನಾಮಿಕ ಗಲ್ಲಿಯಲ್ಲಿರುವ ಕಿರಾಣಿ ಅಂಗಡಿಯಲ್ಲಿ "ಏ ಮೇರಾ ಭಾರತ್ ಮಹಾನ್" ಹಾಡು ಗುನುಗುತ್ತಿದೆ. ದೇಶ ಪ್ರೇಮದ ಕನಸು ಹೊಸೆಯುವ ಸಮಯದಲ್ಲಿ ಇವೆಲ್ಲಾ ಏನಕ್ಕೆ ಅಂತೀರಾ?...
-ಮಂಜುಳಾ ಮಾಸ್ತಿಕಟ್ಟೆ.
[ಶಿವಮೊಗ್ಗದಲ್ಲಿ ಪತ್ರಿಕೋದ್ಯಮದ ಪದವಿ ಅಭ್ಯಸಿಸಿರುವ ಮಂಜುಳ, ಸಧ್ಯ ಬೆಂಗಳೂರಿನಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸಮಾಡುತ್ತಿದ್ದಾರೆ.]
[ಚಿತ್ರಗಳು-ಸಂಗ್ರಹದಿಂದ]