ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಗೊಮ್ಮೆ ಈಗೊಮ್ಮೆ ತುಂಬುವ ದೇಶಪ್ರೇಮ    
ರಾಘವೇಂದ್ರ ಮಹಾಬಲೇಶ್ವರ
ಶುಕ್ರವಾರ, 14 ಆಗಸ್ಟ್ 2009 (09:09 IST)
ರ‍ಾಷ್ಟ್ರಪಿತ ಗಾಂಧಿ

ಇವತ್ತು ಬೆಳಿಗ್ಗೆ ಆಫೀಸಿಗೆ ಬರುತ್ತಿದ್ದಂತೆಯೇ ನೋಡಿದೆ, ಬಗೆಬಗೆಯ ಹೂವುಗಳ ಅಲಂಕಾರ, ಪ್ರತೀ ಡೆಸ್ಕಿನಲ್ಲಿಯೂ ಬಲೂನುಗಳು, ಬಾವುಟಗಳು, ಮತ್ತು ಏನೋ ಸಂಭ್ರಮ ಇಡೀ ಆಫೀಸಿನ ತುಂಬಾ. ಅನೇಕರು ಹಬ್ಬದುಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆ ನಾಳೆಯ ಬದಲು ಇವತ್ತು ಇದ್ದಿದ್ದರೆ ಒಂದು ರಜೆಯಾದರೂ ಸಿಗುತ್ತಿತ್ತಲ್ಲ ಅನ್ನಿಸಿತು.

ಸುಮ್ಮನೆ ಕುಳಿತು ಯೋಚಿಸಿದರೆ, ಎಷ್ಟು ವರುಷಗಳಾಯಿತು ರಾಷ್ಟ್ರಗೀತೆಯನ್ನು ಹಾಡಿ, ನೆನಪಾಗುವುದಿಲ್ಲ. ಆಗೊಂದು ಕಾಲವಿತ್ತು. ಸೂರ್ಯ ಮುಳುಗುವ ಮೊದಲೇ ಎದ್ದು, ಸ್ನಾನ ಮಾಡಿ, ಬಿಳಿ-ನೀಲಿ ಸಮವಸ್ತ್ರ ಧರಿಸಿ ಶಾಲೆಗೆ ಓಡಬೇಕು. ಸುರಿವ ಮಳೆಯಲ್ಲಿ ಪ್ರಭಾತ್ ಪೇರಿ, ಘೋಷಣೆಗಳು, ಧ್ವಜಾರೋಹಣ, ಪೇಪರ್ಮೆಂಟು. (ದಾಸ್ಯಭಾವ ನೀಗಿಸಿದ ಸ್ವಾತಂತ್ರ್ಯ ಕೊಡಿಸಿದ ಅಂತ ಎಲ್ಲರೂ ಹಾಡುತ್ತಿದ್ದರೆ, ಏನದು ಸ್ವಾತಂತ್ರ್ಯ ಅಂದರೆ, ಟೊರೀನೋದಂತಹ ಏನೋ ಕೂಲ್ಡ್ರಿಂಕ್ ಇರಬಹುದೇ ಅನ್ನಿಸುತ್ತಿತ್ತು! ಯಾರೋ ಒಬ್ಬ ಬಾಟಲಿಯಲ್ಲಿದ್ದ ಸ್ವಾತಂತ್ರ್ಯವನ್ನು ಕೊಡಿಸಿದನಿರಬಹುದು ಅಂತ ಯೋಚನೆ ಬರುತ್ತಿದ್ದ ವಯಸ್ಸದು. ಆ ಮೂರು-ನಾಲ್ಕರ ತರಗತಿಗಳಲ್ಲಿ ಎಷ್ಟೆಲ್ಲ ಶಬ್ದಗಳಿಗೆ ಅರ್ಥವೇ ಗೊತ್ತಿರದಿದ್ದರೂ ನಾವು ಘೋಷಿಸುತ್ತಿದ್ದೆವಲ್ಲ, ಬೊಲೋ ಭಾರತ ಮತಾಕಿ, ಏನೆ ಬರಲಿ ಒಗ್ಗಟ್ಟಿರಲಿ, ಒಂದೆ ಮಾತರಮ್!)

ನಾಲ್ಕು ದಿನ ಮೊದಲೇ ಭಾಷಣ ಬರೆದುಕೊಂಡು, ಅಭ್ಯಾಸ ಮಾಡಿಕೊಂಡು, ನಡುಗುತ್ತಾ ಅದನ್ನೇ ನೂರಾರು ಜನರ ನಡುವೆ ಓದುವ ಬಯಕೆ ಮತ್ತು ಭಯ. ಬಿಳಿ ವಸ್ತ್ರ ಉಟ್ಟ ಊರಿನ ಹಿರಿಯರ ಭಾಷಣ, ನೀವು ಗಾಂಧಿಯಂತೆ, ನೆಹರುವಂತೆ, ಶಾಸ್ತ್ರಿಯಂತೆ ಆಗಿ!

ಬಹುಶಃ ಹೈಸ್ಕೂಲು ಮುಗಿಯುವವರೆಗೂ ದೇಶ, ಭಾಷೆ, ದೇಶಭಕ್ತರು ಎಂದರೆ ಅದೇನೋ ಭಯ-ಭಕ್ತಿ ತುಂಬ ಗಾಢವಾಗಿ ಉಳಿದಿತ್ತು. ಪಠ್ಯಗಳ ಪ್ರಭಾವದಿಂದ ಗಾಂಧಿಯೆಂದರೆ ತಾತ, ನೆಹರು ಅಂದರೆ ಚಾಚಾ. ತ್ರಿವರ್ಣ ಧ್ವಜದ ಕೇಸರಿ ಬಣ್ಣವು ಶೌರ್ಯ ಹಾಗೂ ಬಲಿದಾನ, ಬಿಳಿ ಬಣ್ಣವು ಶಾಂತಿ ಹಾಗೂ ಸತ್ಯ, ಹಸಿರು ಬಣ್ಣವು ವಿಶ್ವಾಸ ಹಾಗೂ ಶಕ್ತಿಯನ್ನು ಮತ್ತು ಚಕ್ರವು ಜನ ಸಮೂಹದ ಕಲ್ಯಾಣವನ್ನು ಸಂಕೇತಿಸುತ್ತವೆ ಎಂದು ಕಲಿತಿದ್ದು. ಒಮ್ಮೆ ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ನಿಧಾನವಾಗಿ ಹೊಸ ಸಂಗತಿಗಳು ಗೋಚರಿಸಲಾರಂಭಿಸಿದವು.

ಬಹುಶಃ ಕಾಲೇಜಿಗೆ ಹೋಗುವ ಹೊತ್ತಿಗೆ ಯುವಕ-ಯುವತಿಯರು ಮೊದಲ ಬಾರಿಗೆ ಸ್ವಾತಂತ್ರ್ಯ ಪಡೆಯುತ್ತೇವೆ. ಆಗ ಮೇಷ್ಟ್ರೇ ಸರ್ವಜ್ಞರು, ಅಪ್ಪನಿಗೆ ಎಲ್ಲವೂ ಗೊತ್ತು ಅನ್ನುವ ಭ್ರಮೆ ಹೊರಟುಹೋಗಿರುತ್ತದೆ. ಕಾಲೇಜಿಗೆ ಬಂದವನು ಮೊದಲ ಬಾರಿಗೆ ಒಂಟಿಯಾಗುತ್ತಾನೆ. ಏನಿದು ದೇಶ, ಏನಿದು ಭಾಷೆ? ಯಾವ ಮೇಷ್ಟ್ರನ್ನು ತುಂಬ ಪ್ರೀತಿಸುತ್ತಿದ್ದೆವೋ ಅವರನ್ನು ಕುರಿತು ಏಕವಚನದಲ್ಲಿ ಸಂಬೋಧಿಸಲು ಪ್ರಾರಂಭಿಸುತ್ತೇವೆ. ಇಷ್ಟು ದಿನ ಅಪ್ಪ ತನ್ನದೇ ಮಾತು ನಡೆಯಬೇಕು ಅನ್ನುತ್ತಿದ್ದ, ಇನ್ನು ಅವನು ಏನು ಹೇಳಿದರು ಅದಕ್ಕೆ ವಿರುದ್ಧ! ಮತ್ತು ಕಾಲೇಜಿಗೆ ಬಂದ ಮೇಲೆ ಸ್ವಾತಂತ್ರ್ಯ ದಿನಾಚರಣೆ ಎಂದರೆ, ರಜಾ ದಿನ. ಲೇಟಾಗಿ ಏಳು. ಮತ್ತೆ ಶಾಲೆಯಲ್ಲಿರುವ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯೆಂದು ಸಂಭ್ರಮಿಸುತ್ತಾರೆ, ಶಾಲಾದಿನಗಳನ್ನು ಮುಗಿಸಿದವನಿಗೆ ಆ ಯಾವ ದೇಶಭಕ್ತಿಯನ್ನು ತೋರಿಸಬೇಕಾದ ಯಾವ ದಿನಗಳೊಂದಿಗೂ ಸಂಬಂಧವಿರುವುದಿಲ್ಲ.

ಇಂತಹುದೊಂದು ಹಂತವನ್ನು ನಾನು ಅನುಭವಿಸಿದ್ದೇನೆ. ಆಗೊಮ್ಮೆ ಈಗೊಮ್ಮೆ ದೇಶಪ್ರೇಮವೂ ಮನಸ್ಸನ್ನು ತುಂಬುತ್ತಿರುತ್ತದೆ, ಯಾವುದಾದರೂ ದೇಶಭಕ್ತಿಯ ಸಿನೆಮಾ ನೋಡಿದಾಗ, ಸೈನಿಕರು ಬಲಿದಾನವನ್ನು ನೋಡುವಾಗ, ಇಂಡಿಯಾ-ಪಾಕಿಸ್ತಾನ ಕ್ರಿಕೇಟು ಅಥವಾ ಯುದ್ಧಾರಂಭವಾದಾಗ. ಉಳಿದಂತೆ ದೇಶ-ಭಾಷೆ, ದಿನಾಚರಣೆ ಅನ್ನುವಾಗಲೆಲ್ಲ ಅದೇನೋ ಅರಾಜಕ ಪ್ರಜ್ಞೆ ಮನಸಲ್ಲಿ ತುಂಬುತ್ತದೆ!

ನನ್ನಲ್ಲಿಯೇ ಒಂದು ಅರಾಜಕತೆಯಿರಬೇಕು ಅಂದುಕೊಳ್ಳುತ್ತ ಹೇಳುತ್ತೇನೆ. ಇವತ್ತು ನಾನು ಎಷ್ಟೇ ಪ್ರಯತ್ನಿಸಿದರೂ ನನಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿದ್ದ ದೇಶಪ್ರೇಮದ ಭಾವ ಬರುವುದೂ ಇಲ್ಲ. ಇವತ್ತು ಭಾರತದಂತಹ ದೇಶಕ್ಕೆ, ಅದರ ಸಮಗ್ರತೆಗೆ ಯಾವುದೇ ಭಂಗವೂ ಬರುವಂತೆ ಕಾಣುವುದಿಲ್ಲವಾದ ಕಾರಣವೋ ಏನೋ ದೇಶಪ್ರೇಮ ಎಂಬುದೆಲ್ಲ ಮಕ್ಕಳಾಟದಂತೆಯೇ ಕಾಣಿಸುತ್ತದೆ. ಒಂದು ದಿನ ನಾವೆಲ್ಲರೂ ಸೇರಿ ಊರು ತಿರುಗಿ, ಬೋಲೋ ಭಾರತ ಮಾತಾಕಿ ಎಂದು ಕೂಗುತ್ತ, ಈ ಒಂದು ದಿನ ತುಂಬ ಎಮೋಶನಲ್ ಆಗುತ್ತೇವೆ ಮತ್ತು ಮರುದಿನದಿಂದ ಮತ್ತದೇ ರೂಪಕ್ಕೆ ತಿರುಗುತ್ತೇವೆ. ಆ ಒಂದು ದಿನವೂ ನಾವು ಮಾತನಾಡುವುದು ಅದೇ, ಗಾಂಧಿಯಂತೆ ಆಗಿ, ನೆಹರುವಂತೆ ಆಗಿ. ಉಳಿದಂತೆ ನಮ್ಮ ರಾಜಕಾರಣಿಗಳೆಲ್ಲ ಅದೇ ಗಿಳಿಪಾಠ ಒಪ್ಪಿಸುತ್ತಾರೆ. (ನಮ್ಮೆಲ್ಲರಲ್ಲೂ ಅದೇ ರಾಜಕಾರಣಿಯಿಲ್ಲವೇ? ನಮ್ಮಲ್ಲಿಯೂ ಸಹಾ ಸಂದರ್ಭಕ್ಕೆ ತಕ್ಕಂತೆ, ಅವಕಾಶವಾದಿಯಾಗಿ ವರ್ತಿಸುವ ಸ್ವಭಾವ ಇಲ್ಲವೇ?) ಹೀಗೇ ಎಷ್ಟು ವರ್ಷಗಳ ವರೆಗೆ ನಾವು ಈ ಸ್ವಾತಂತ್ರ್ಯದ ದಿನವನ್ನು ಆಚರಿಸುತ್ತ ಹೋಗುವುದು? ಏನು ಸಾರ್ಥಕತೆಯಿದೆ ಇದರಲ್ಲಿ? ನಾನು ಮತ್ತೆ ಮತ್ತೆ ನನ್ನನ್ನೇ ಪ್ರಶ್ನಿಸಿಕೊಳ್ಳುತ್ತ ಹೋಗುತ್ತೇನೆ.

ಇವತ್ತು ನಮ್ಮನ್ನು ದೇಶಪ್ರೇಮಿಗಳಾಗಿ ಎಂದು ಅನೇಕರು ಕರೆ ನೀಡುತ್ತಾರೆ. ಅದು ಮಾತೃಪ್ರೇಮಿಗಳಾಗಿ ಎಂದು ಕರೆನೀಡಿದಂತೆಯೇ ಅಲ್ಲವೇ? ತಾಯಿಯ ಪ್ರೇಮವನ್ನು ಸವಿದ ಮಕ್ಕಳಿಗೆ ತಾಯಂದಿರ ದಿನಾಚರಣೆಯನ್ನು ಆಚರಿಸುವ ಆ ಮೂಲಕ ತಾಯಿಗೆ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಅಗತ್ಯವಾದರೂ ಎಲ್ಲಿದೆ? ಅದು ಮಾತಿನಲ್ಲಿ ವ್ಯಕ್ತಪಡಿಸಬಹುದಾದ ಸಂಗತಿಯಾದರೂ ಹೌದೇ? ಪ್ರೇಮವಿದೆಯೆಂದಾದರೆ ವ್ಯಕ್ತಪಡಿಸಬೇಕಾದ ಅಗತ್ಯವಾದರೂ ಏನಿದೆ? ತಾಯಿಗೆ ನಿಜವಾಗಿಯೂ ಏನಾದರೂ ತೊಂದರೆಯುಂಟಾಗುವವರೆಗೆ, ಆಕೆ ಕಷ್ಟದಲ್ಲಿರುವವರೆಗೆ ನಮಗೆ ಆಕೆಯ ಮೇಲೆ ಎಷ್ಟು ಪ್ರೇಮವಿದೆ ಎಂಬ ಸಂಗತಿಯಾದರೂ ಅರಿವಾಗುವುದು ಹೇಗೆ? ಹಾಗೆಯೇ ನನ್ನಲ್ಲಿ ದೇಶಪ್ರೇಮವೂ ಇರಬಹುದೇ? ಪ್ರಶ್ನಿಸಿಕೊಳ್ಳುತ್ತೇನೆ. ನನ್ನಲ್ಲಿ ದೇಶಪ್ರೇಮವಿದ್ದರೆ ಅದು ಯಾವ ರೀತಿಯದು ಎಂದು ಚಿಂತಿಸುತ್ತೇನೆ.

ನನಗೆ ಭಾರತಿಯೆಂದರೆ ನಾವು ಹಾಕಿರುವ ಬಾರ್ಡರಿನ ಸೀರೆಯೊಳಗಿರುವ ಒಂದು ದೇಶವಲ್ಲ. ಭಾರತಿಯೆಂದರೆ ಭುವನವೇ. ಅದು ಅಮಿತವಾದ ಮಾತೃರೂಪ. ಉಳಿದಂತೆ ನಾವು ಮಾಡಿಕೊಂಡಿರುವ ದೇಶ, ನಾಡು, ಭಾಷೆ ಮುಂತಾದ ಅಂಶಗಳೆಲ್ಲ ಮಿತಿಗೊಳಿಸುತ್ತ ಹೋಗುತ್ತವೆ. ಒಂದು ಹಂತದವರೆಗೆ ದೇಶ, ಭಾಷೆ ಅವುಗಳ ಮೇಲಿನ ಪ್ರೇಮ ಎಲ್ಲವೂ ಬೇಕು, ಮತ್ತು ಸಾಮಾಜಿಕವಾಗಿ ಇವೆಲ್ಲವೂ ಬೇಕು. ಆದರೆ ಆ ಸಾಮಾಜಿಕತೆಯೂ ನಾವು ಮನೆಯೆದುರು ಹಾಕಿಕೊಂಡ ಹಂದರವಷ್ಟೇ. (ಬೇಂದ್ರೆಯವರ ಕುರಿತು ಎನ್ಕೆ ಒಂದು ಮಾತನ್ನು ಹೇಳಿರುವುದು ನನಗೆ ಈಗ ನೆನಪಾಗುತ್ತಿದೆ; ಬೇಂದ್ರೆಯವರು ಹೊರಗಿನ ಬಿಸಿಲು ಒಳಗೆ ಬೆಳದಿಂಗಳಾಗಿ ಬೀಳುವಷ್ಟು ಮಾತ್ರ ಬಾಗಿಲು ತೆರೆದುಕೊಂಡಂತೆ ಸಾಮಾಜಿಕ ಬದುಕಿಗೆ ತಮ್ಮನ್ನು ತೆರೆದುಕೊಂಡಿದ್ದರಂತೆ!) ಸಾಮಾಜಿಕ ಜೀವನ ನನಗೆ Tip of an iceberg ಮಾತ್ರ. ಉಳಿದಂತೆಲ್ಲ ಅದು ವೈಯಕ್ತಿಕವಾದುದು.

ದೇಶದ ಮೇಲಿನ ಪ್ರೇಮವೂ, ಭಾಷೆಯ ಮೇಲಿನ ಪ್ರೇಮವೂ ಹೀಗೆ ಯಾವುದೋ ಒಂದು ದಿನ ವ್ಯಕ್ತವಾಗಲೇಬೇಕು ಅಂತಿಲ್ಲ ಅನ್ನಿಸುತ್ತದೆ. ಇವತ್ತು ಬ್ರಿಟೀಷರು, ಗಾಂಧಿ ಎಲ್ಲವೂ ಮುಗಿದುಹೋದ ಕತೆಯೇ. ಇವತ್ತು ನಮಗೆ ಗಾಂಧಿವಾದ ಏತಕ್ಕೆ ಬೇಕು? ನನ್ನ ಪಕ್ಕ ಕುಳಿತವನು ಹಸಿದಿದ್ದಾನೆ ಅನ್ನುವುದನ್ನು ನನಗೆ ಗಾಂಧಿಯೂ, ಇನ್ನೊಬ್ಬರೂ ಹೇಳಿಕೊಡುವುದು ಬೇಡ. ಅದು ಅರ್ಥವಾಗುವ ಸಾಧ್ಯತೆ ನನ್ನಲ್ಲಿ ಇಲ್ಲದಿದ್ದರೆ ಯಾವ ಗಾಂಧಿಯಾದರೂ ಏನು ಮಾಡಲಾದೀತು? ನನಗೆ ಸಾಮಾಜಿಕ ಸಮಸ್ಯೆಗಳಿಗಿಂತ ವೈಯಕ್ತಿಕ ಸಮಸ್ಯೆಗಳೇ ಗಾಢವಾಗಿ ಕಾಡುತ್ತವೆ. ತುತ್ತು ಅನ್ನಕ್ಕೂ ಪರದಾಡುವ ಮನುಷ್ಯ; ದುಡಿಯುವ ಶಕ್ತಿಯಿದ್ದರೂ ಭಿಕ್ಷೆ ಬೇಡುತ್ತ ತನ್ನ ಇಡೀ ಅಸ್ತಿತ್ವವನ್ನೇ ದೈನ್ಯತೆಗೆ ಬಗ್ಗಿಸಿಕೊಳ್ಳುವ ಮನುಷ್ಯ; ವಿಶ್ವಾಸ ಕನಸಿನಂತೆ ಕರಗಿ ಹೋಗುವ ರೀತಿ; ಕೇವಲ ಕಾಮವೂ ಪ್ರೇಮದ ಮುಖವಾಡ ಹಾಕಿ ನಂಬಿಸುವ ರೀತಿ; ದುಡ್ಡಿದ್ದವನನ್ನು, ಅಧಿಕಾರವಿರುವವನನ್ನು ಹೆಗಲ ಮೇಲೆ ಹೊತ್ತುಕೊಳ್ಳುವ ತನ್ನತನವನ್ನೇ ಕಳೆದುಕೊಂಡು ಅವನು ಎಸೆಯುವ ಕಿಲುಬುಗಾಸಿಗೆ ಕೈಚಾಚುವವನು ನನಗೆ ಅತ್ಯಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಾನೆ. ದೇವರು, ಧರ್ಮ ಮನಸ್ಸಿಗೆ ಶಕ್ತಿಯನ್ನು ತುಂಬುವ ಸಂಗತಿಗಳೂ ಆಗುತ್ತವೆ, ವಂಚಕರಿಗೆ ಶಕ್ತಿಶಾಲಿಯಾದ ದಾರಿಯೂ ಆಗುತ್ತವೆ. ನನಗೆ ನನ್ನೊಳಗಿನ ಕೋಪ, ಅಸೂಯೆಯಂತವುಗಳೇ ದೊಡ್ಡ ಸಂಗತಿಗಳಾಗುತ್ತವೆ. ಮೋಸಗಾರ, ವಂಚಕರೆಲ್ಲ ನಮ್ಮೊಳಗೇ ಅಡಗಿರುವುದು ನಮಗೆ ಆಗಾಗ ಕಾಣುತ್ತಿರುತ್ತದೆ. ನಾವೆಲ್ಲ ಇವುಗಳಿಂದ ಬಂಧಿಸಲ್ಪಟ್ಟಿದ್ದೇವೆ. ಇವುಗಳಿಂದ ಯಾವತ್ತಾದರೂ ಸ್ವಾತಂತ್ರ್ಯ ದೊರೆತೀತಾ?

ನೀವೆಲ್ಲ ಸ್ವಾತಂತ್ರ್ಯ ಆಚರಿಸುವ ಹೊತ್ತು, ನಾನು ಸುಮ್ಮನೇ ಸೂರ್ಯೋದಯವನ್ನು ನೋಡುತ್ತ ಕುಳಿತುಕೊಳ್ಳುತ್ತೇನೆ. ನನಗೆ ಜೈಭಾರತ ಮಾತೆ ಅನ್ನುವ ಮನಸ್ಸಿಲ್ಲ. ಬೇರೆ ಏನೇನೋ ನನ್ನನ್ನು ನಿರಂತರ ಕಾಡುತ್ತಿರುತ್ತವೆ. ನನಗೆ ಇನ್ನೂ ಸ್ವಾತಂತ್ರ್ಯ ದೊರಕಲಿಲ್ಲ!

ಒಂದು ಕಥೆ ನೆನಪಾಗುತ್ತದೆ: ಗ್ರೇಟ್ ಅಲೆಕ್ಸಾಂಡರ್ ಭಾರತಕ್ಕೆ ಬರುವ ಮೊದಲು ಆತನ ಗುರು ಅರಿಸ್ಟಾಟಲ್ ಹೇಳಿರುತ್ತಾನಂತೆ, ಭಾರತದಲ್ಲಿ ಬಹಳ ಜನ ಸನ್ಯಾಸಿಗಳಿದ್ದಾರಂತೆ. ನಮ್ಮಲ್ಲಿ ಎಲ್ಲವೂ ಇದೆ ಆದರೆ ಸನ್ಯಾಸಿಗಳಿಲ್ಲ. ಒಬ್ಬ ಸನ್ಯಾಸಿಯನ್ನು ಕರೆದುಕೊಂಡು ಬಾ!

ಭಾರತಕ್ಕೆ ಬಂದ ಅಲೆಕ್ಸಾಂಡರ್ ಸನ್ಯಾಸಿಗಳಿಗಾಗಿ ಹುಡುಕುತ್ತಾನಂತೆ. ಅನೇಕ ಜನ ಅಲೆಕ್ಸಾಂಡರನೊಡನೆ ಅವನ ದೇಶಕ್ಕೆ ಹೊರಡಲು ಮುಂದೆಬರುತ್ತಾರಾದರೂ ಅವನಿಗೆ ಅವರ ಆತುರವನ್ನು ನೋಡಿ ಅವರು ಸನ್ಯಾಸಿಗಳಿರಬಹುದು ಅನ್ನಿಸುವುದಿಲ್ಲ. ಭಾರತದಲ್ಲಿ ಬಹಳ ಜನ ಸನ್ಯಾಸಿಗಳಿದ್ದಾರೆ ಅನ್ನುತ್ತಾರೆ ಆದರೆ ತನಗೆ ಯಾರೂ ಸಿಗಲಿಲ್ಲವಲ್ಲ ಅಂದುಕೊಳ್ಳುತ್ತಾನೆ. ಆತನಿಗೆ ಒಂದು ಊರಿನಲ್ಲಿ ಹೇಳುತ್ತಾರಂತೆ, ನದಿಯ ದಡಕ್ಕೆ ಹೋಗು, ಅಲ್ಲೊಬ್ಬ ಹುಚ್ಚ ಇದ್ದಾನೆ. ಅವನು ಸನ್ಯಾಸಿಯಂತೆ ಕಾಣುತ್ತಾನೆ ಎಂದು. ನದಿ ದಡಕ್ಕೆ ಬಂದ ಅಲೆಕ್ಸಾಂಡರ್, ಅಲ್ಲಿದ್ದ ಸನ್ಯಾಸಿಯ ಹತ್ತಿರ ಹೋಗಿ ನಿಂತು, ನಾನು ವೀರ ಅಲೆಕ್ಸಾಂಡರ್ ಎಂದು ಹೇಳಿಕೊಳ್ಳುತ್ತಾನಂತೆ. ಅದಕ್ಕೆ ಆ ಸನ್ಯಾಸಿ, ಆಗಲಿ, ನೀನು ನನ್ನ ಮೇಲೆ ಬೀಳುವ ಸೂರ್ಯನ ಕಿರಣಗಳಿಗೆ ಅಡ್ಡ ನಿಂತಿದ್ದೀಯ ಪಕ್ಕಕ್ಕೆ ಸರಿ ಅನ್ನುತ್ತಾನಂತೆ. ಅಲೆಕ್ಸಾಂಡರನಿಗೆ ಅಚ್ಚರಿ. ತನ್ನೊಡನೆ ಯಾರೂ ಹೀಗೆ ವರ್ತಿಸಿರಲಿಲ್ಲ. ನನ್ನ ಗುರು ಒಬ್ಬ ಸನ್ಯಾಸಿಯನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾನೆ. ನೀನು ಈಗಲೇ ಹೊರಡಬೇಕು ಅನ್ನುತ್ತಾನೆ. ಅದಕ್ಕೆ ಆತ, ಯಾರೂ ಸನ್ಯಾಸಿಯನ್ನು ಆಜ್ಞಾಪಿಸಲಾರರು. ನಾನು ಎಲ್ಲಿಗೂ ಬರುವುದಿಲ್ಲ ಹೋಗು ಅನ್ನುತ್ತಾನೆ. ನಂತರ ಅಲೆಕ್ಸಾಂಡರ್ ಅನೇಕ ಪ್ರಲೋಭನೆಗಳನ್ನು ಒಡ್ಡಿ ನೋಡುತ್ತಾನೆ. ಅದಕ್ಕೆ ಆತ ಸೊಪ್ಪುಹಾಕದಿದ್ದಾಗ ಕೋಪಗೊಂಡ ಅಲೆಕ್ಸಾಂಡರ್ ತನ್ನ ಕತ್ತಿಯನ್ನು ತೆಗೆದು, ನೀನು ಬರದಿದ್ದರೆ ನಿನ್ನ ತಲೆಯನ್ನೇ ಕಡಿದುಹಾಕುತ್ತೇನೆ ಎನ್ನುತ್ತಾನೆ. ಅದಕ್ಕೆ ಆ ಸನ್ಯಾಸಿ ಹೇಳುತ್ತಾನೆ, "ಸರಿ ಹಾಗಿದ್ದರೆ. ಕಡಿದುಹಾಕು. ಅದು ಹೇಗೆ ಕಡಿಯುತ್ತೀಯ ನಾನೂ ನೋಡುತ್ತೇನೆ. ಸನ್ಯಾಸಿ ತನ್ನಷ್ಟಕ್ಕೆ ಬದುಕುತ್ತಾನೆ. ಆತನಿಗೆ ಯಾವ ಭಯ-ಆತಂಕಗಳಿಲ್ಲ. ಆತನನ್ನು ಯಾರೂ ಬಂಧಿಸಲಾರರು, ಯಾರೂ ಆತನಿಗೆ ಆಜ್ಞಾಪಿಸಲಾರರು. ಆತನ ದೇಹದ ಮೇಲೆ ಯಾರಾದರೂ ನಿಯಂತ್ರಣ ಹೇರಬಹುದು ಆದರೆ ಆತನ ಮೇಲಲ್ಲ. ನಿನಗೆ ಇಷ್ಟಬಂದಹಾಗೆ ಮಾಡಿಕೊಳ್ಳಬಹುದು!"

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  4     Rating: 4.5    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು