ಆ ನಾಗಾಹಳ್ಳಿಯ ಇಳಿಜಾರು ಕಣಿವೆ ಪ್ರದೇಶದಲ್ಲಿ ಹುಲ್ಲು ಗಿಡ ಮರಗಳು ಸಮೃದ್ಧವಾಗಿ ಬೆಳೆದು ನಿಂತಿದ್ದರಿಂದ ದೂರದೂರಕ್ಕೆ ಶಿಲೆಗಳು ಕಾಣಿಸುತ್ತಿರಲಿಲ್ಲ. ಆದರೆ ಶಿಖರಗಳ ತುತ್ತ ತುದಿಗಳಲ್ಲಿ, ನದಿ ಕೊರಕಲುಗಳಲ್ಲಿ ಶಿಲೆಗಳು ದೈತ್ಯಾಕಾರವಾಗಿ ಚಿತ್ರವಿಚಿತ್ರವಾಗಿ ಪದರು ಪದರಾಗಿ ಪುಸ್ತಕದ ಹಾಳೆಗಳಂತೆ ತೆರೆದುಕೊಂಡಿದ್ದವು. ನಮಗೆ ಬೇಕಾದ ವಿವರಗಳನ್ನು ದಾಖಲಿಸಿಕೊಳ್ಳುತ್ತ... ಶಿಲೆಗಳನ್ನು ಪರೀಕ್ಷಿಸುತ್ತಾ... ಮುಂದಕ್ಕೆ ಸಾಗುತ್ತಿದ್ದೇವೆ. ನಕ್ಷೆಗಳು ಮತ್ತು ಉತ್ತರಮುಖಿಯ (ಬ್ರಂಟಾನ್ ಕಾಂಪಾಸ್) ಸಹಾಯದಿಂದ ನಾವಿರುವ ಸ್ಥಳವನ್ನು ನಕ್ಷೆಯಲ್ಲಿ ಸರಿಯಾಗಿ ಗುರುತಿಸಿಕೊಂಡು ಹೋಗಬೇಕಾಗಿರುವ ದಾರಿಯಲ್ಲೇ ಹೋಗುತ್ತಿದ್ದೇವೆ. ಕಣಿವೆಗಳಲ್ಲಿ ಇಳಿದು, ಶಿಖರಗಳನ್ನು ಹತ್ತಿ ನಾವು ತಲುಪಬೇಕಾದ ಮುಖ್ಯ ನದಿ ತಲುಪಿ ಕೈಗಡಿಯಾರ ನೋಡಿಕೊಂಡಾಗ ಸಮಯ ಮಧ್ಯಾಹ್ನ ೧.೩೦ ಗಂಟೆ. ಸೂರ್ಯನು ಶಿಖರಗಳ ಮೇಲೆ ಮುಸುಕು ಮುಸುಕು ಮೋಡಗಳ ಮರೆಯಿಂದ ಕೆಳಕ್ಕೆ ಇಣಿಕಿ ನೋಡುತ್ತಿದ್ದಾನೆ.
ಆಗಲೇ ಸುಮಾರು ಆಯಾಸಗೊಂಡಿದ್ದ ನಾವು, ನದಿಯ ದಡದಲ್ಲಿದ್ದ ಒಂದು ತೋಟದ ಗುಡಿಸಿಲ ಮುಂದೆ ಕುಳಿತುಕೊಂಡೆವು. ಆ ನದಿಯ ಎರಡೂ ದಡಗಳಲ್ಲಿ ಬತ್ತದ ಕಟಾವು ಆಗಲೇ ಮುಗಿದಿದ್ದು, ಗುಡಿಸಿಲ ಒಳಗೆ ಬತ್ತದ ಚೀಲಗಳನ್ನು ಪೇರಿಸಿಟ್ಟಿದ್ದಾರೆ. ತೋಟದಲ್ಲಿ ನಾಲ್ಕಾರು ರೀತಿಯ ಗೆಡ್ಡೆ ಗೆಣಸು, ಸೊಪ್ಪು ಬೆಳೆದು ನಿಂತಿದ್ದು ಅವುಗಳಲ್ಲಿ ಯಾವುದೂ ಗೊತ್ತಿರಲಿಲ್ಲ. ಗೊತ್ತಿರುವ ತರಕಾರಿ ಎಂದರೆ ಧನಿಯಾ ಮತ್ತು ನಾಗಾ ಟೊಮೋಟೊ ಮಾತ್ರ. ನಾಗಾ ಟೊಮೋಟೊ ನಮ್ಮ ಹೊಲಗಳಲ್ಲಿ ಬಿಡುವ ಸಣ್ಣಸಣ್ಣ ಕೆಂಪು ಟೊಮೋಟೊ ತರಹ ಇದ್ದರೆ, ಧನಿಯಾ ಸೇವಂತಿಗೆ ಎಲೆಗಳಂತಿರುವ ಸಣ್ಣ ಗುಚ್ಛದ ಗಿಡ. ಅದರ ವಾಸನೆ ಮಾತ್ರ ತೇಟ್ ಧನಿಯಾ ವಾಸನೆಯೇ.
ಶಿಖರಗಳ ಸುತ್ತ ಮೋಡಗಳು ಜಮಾಯಿಸುತ್ತಿದ್ದಂತೆ ಹೃದಯದೊಳೆಗೆ ಯಾವುದೋ ಒಂದು ರೀತಿಯ ಅಳುಕು ತುಂಬಿಕೊಳ್ಳುತ್ತಿತ್ತು. ಪರೋಟ ಮತ್ತು ಆಲೂಗಡ್ಡೆ ಪಲ್ಯವನ್ನು ನಾವು ತಿನ್ನುತ್ತಿದ್ದರೆ, ಜಿಬಿ ಮತ್ತು ಆತನ ಸಂಗಡಿಗ ನಾಗಾ ಅಕ್ಕಿಯ ಅನ್ನ ಮತ್ತು ಕರಿದ ಮಾಂಸದ ತುಂಡುಗಳ್ನು ಎಲೆಗಳಲ್ಲಿ ಹಾಕಿಕೊಂಡು ತಿನ್ನುತ್ತಿದ್ದಾರೆ. ಊಟ ಮುಗಿಸುತ್ತಿದ್ದಂತೆ ಬಂದ ದಾರಿಯಲ್ಲೇ ಹಿಂದಕ್ಕೆ ಹೋಗುವುದೋ ಅಥವಾ ನದಿಯ ಮುಖಾಂತರವೇ ಮುಂದಕ್ಕೆ ಹೋಗಿ ಇನ್ನಷ್ಟು ಭೂಮಾಹಿತಿ ಸಂಗ್ರಹಿಸುವುದೋ ಎಂಬುದಾಗಿ ಶಾಹು ಮತ್ತು ನಾನು ಚರ್ಚೆ ಮಾಡಿದೆವು. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹಿಂದಕ್ಕೆ ನಡೆದರೆ ಕೆಲಸ ಸುಲಭವಾಗುತ್ತದೆ, ಆದರೆ ನಮ್ಮ ಉದ್ದೇಶ ಈಡೇರುವುದಿಲ್ಲ.
ಶಾಹು ನನ್ನ ಕಡೆಗೆ ಒಮ್ಮೆ ನೋಡಿ, ‘ಚಲಿಯೇ ಸ್ವಾಮಿ ಸಾಬ್, ದೇಖಾ ಜಾಯೇಗಾ ಸಾಲಾ...’ ಎಂದು ಮೈ ಕೊಡವಿಕೊಂಡು ಎದ್ದು ನಿಂತರು. ಆಗಲೇ ನಾವಿಬ್ಬರೂ ಒಂದೊಂದು ಊರುಗೋಲನ್ನು ತಯಾರಿ ಮಾಡಿಕೊಂಡಿದ್ದೆವು. ನಕ್ಷೆಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡಿ ಹಾವಿನಂತೆ ಹರಿಯುತ್ತಿದ್ದ ನದಿಗೆ ವಿರುದ್ಧವಾಗಿ ನಡೆಯತೊಡಗಿದೆವು. ನಾಗಾಲ್ಯಾಂಡಿನ ಎಳಸು ನದಿಗಳು ಎಷ್ಟೊಂದು ಕೊರಕಲು, ಕಂದರ ಮತ್ತು ಆಳ ಎನ್ನುವುದನ್ನು ನೋಡಿಯೇ ತಿಳಿಯಬೇಕು. ಸ್ವಲ್ಪ ಅಗಲವಾಗಿದ್ದ ನದಿ ಹೋಗುತ್ತಾ ಹೋಗುತ್ತಾ ಸಂಕುಚಿತಗೊಂಡು ದಾರಿಯೇ ಇಲ್ಲಂದತಾಗಿ ನೀರಿನಲ್ಲಿ ಇಳಿಯಬೇಕಾಯಿತು. ನೀರಿನಲ್ಲಿ ಸ್ವಲ್ಪ ದೂರ ಮುಂದಕ್ಕೆ ಸಾಗಿದ್ದೇ ಮತ್ತೆ ಅನಿರೀಕ್ಷಿತವಾಗಿ ನದಿ ವಿಶಾಲವಾಗಿ ತೆರೆದುಕೊಂಡಿತು. ಎರಡು ನದಿಗಳು ಘರ್ಜನೆಗೊಂಡು, ಒಟ್ಟುಗೂಡಿರುವ ಸ್ಥಳ. ಬೆಟ್ಟಗಳೇ ಯುದ್ಧ ಮಾಡಿ ಪಾಳು ಬಿದ್ದಿರುವಂತಹ ಪ್ರದೇಶ. ಎಂತಹವರೂ ದಿಗಿಲುಗೊಳ್ಳುವಂತಹ ದೃಶ್ಯ. ನದಿಯ ಭುಜಗಳ ಮೇಲೆ ನಿಂತು ಕೆಳಕ್ಕೆ ಇಣಿಕಿನೋಡುತ್ತಿರುವ ಎತ್ತರೆತ್ತರದ ಮರಗಳು. ಸಧ್ಯಕ್ಕೆ ಹೆಚ್ಚು ನೀರಿಲ್ಲದೆ ಉಸಿರಾಡುವ ಯೋಗ.
ಅಂತಹ ಸ್ಥಳದಲ್ಲಿ ಮಳೆ ನೀರೇನಾದರೂ ಒಮ್ಮಲೆ ನುಗ್ಗಿ ಬಂದರೆ..? ಅಳುಕು, ಭಯ ಒಟ್ಟಿಗೆ ಮೂಡಿ, ಆದಷ್ಟು ಬೇಗ ಈ ಸ್ಥಳದಿಂದ ಹೋಗಿಬಿಡುವ ಮನಸ್ಸಾಯಿತು. ಪುಸ್ತಕದ ಹಾಳೆಯಂತೆ ತೆರೆದುಕೊಂಡಿರುವ ಶಿಲೆಗಳಲ್ಲಿ ಖನಿಜದ ಖಜಾನೆ ಏನೂ ಇರಲಿಲ್ಲ. ಬರೀ ಬುರುಜು ಕಲ್ಲುಗಳು. ಎಲ್ಲೋ ಬರ್ಫ್‌ಗಡ್ಡೆಗಳ ಮಧ್ಯೆ ನಿಂತಿರುವ ಅನುಭವ. ಆಗಲೇ ಹಲವಾರು ಕಡೆ ನೀರಿನಲ್ಲಿ ಇಳಿದು ಹತ್ತಿ, ಎದ್ದು ಬಿದ್ದು, ತೋಯ್ದು ತೊಪ್ಪೆಯಾಗಿ ನಡುಕ ಪ್ರಾರಂಭವಾಗಿತ್ತು. ಮೇಲೆ ಕಪ್ಪು ಕಪ್ಪಾದ ಹೆಬ್ಬಂಡೆ ಮೋಡಗಳು ಗಟ್ಟಿಯಾಗುತ್ತಾ ನಮ್ಮತ್ತ ಇಳಿದುಬರುತ್ತಿವೆ. ಒಟ್ಟಿನಲ್ಲಿ ಈ ದಿನ ಏನೋ ಗ್ರಹಚಾರ ಕಾದಿದೆ ಎನ್ನುವ ಅಳಕು ಮನಸ್ಸಿನಲ್ಲಿ ದೊಡ್ಡದಾಗುತ್ತ ಹೋಗುತ್ತಿತ್ತು. ‘ಮಳೆ ಬಂದರೆ ನೀರು ಹರಿದು ಬರಬಹುದು, ಅದಕ್ಕಿಂತಾ ಮುಂಚಿತವಾಗಿಯೇ ನದಿಯಂದ ಮೇಲಕ್ಕೆ ಹೋಗಿಬಿಡಬೇಕು’ ಜಿಬಿ ಮೊದಲ ಬಾರಿಗೆ ಎಚ್ಚರಿಕೆ ನೀಡಿದ.
ನಕ್ಷೆಯನ್ನು ಮಡಿಚಿ ಚೀಲದಲ್ಲಿ ಹಾಕಿಕೊಂಡು ನದಿಯ ಮುಖಾಂತರವೇ ಹೋಗುತ್ತಿದ್ದೇವೆ. ನದಿ ದಂಡೆಯನ್ನು ಬಿಟ್ಟು ಪಕ್ಕಕ್ಕೆ ಹೋಗಿಬಿಡೋಣ ಎಂದರೆ ದಾರಿಯೇ ಇಲ್ಲ. ದಟ್ಟವಾದ ಕಾಡು. ಎದ್ದು ಬಿದ್ದು ಅವಸರ ಅವಸರವಾಗಿ ನದಿಯ ಪಕ್ಕದಲ್ಲೇ ಹೋಗುತ್ತಿದ್ದೇವೆ. ಸಮಯ ಇನ್ನೂ ೩ ಗಂಟೆ. ಆದರೂ ಆಗಲೇ ಸಾಯಂಕಾಲವಾದಂತೆ ಕಾಣಿಸುತ್ತಿದೆ. ದೊಡ್ಡದೊಡ್ಡ ಮರಗಳು ಉರುಳಿಬಿದ್ದಿವೆ. ನದಿಗೆ ಅಡ್ಡ ಬಿದ್ದಿರುವ ಮರಗಳ ಮೇಲೆ ಎರಡು ಪುಟ್ಟ ಪುಟ್ಟ ಗುಡಿಸಿಲುಗಳು ಕಾಣಿಸಿಕೊಂಡವು. ಇವರ‍್ಯಾರಪ್ಪ ಇಲ್ಲಿ ಎಂದುಕೊಳ್ಳುವಷ್ಟರಲ್ಲಿ ನಮ್ಮ ಜೊತೆಗಿದ್ದ ನಾಗಾಗಳು ಅವರನ್ನು, ‘ಹೋಯ್, ಹೋಯ್ ಆಯಿಲೇ... ಕೀ ಕೋಯ್’ ಎಂದು ಮಾತನಾಡಿಸಿದರು.
ಅಷ್ಟರಲ್ಲಿ ಬಿರುಗಾಳಿ ಜೋರಾಗಿ ಬೀಸುತ್ತಾ ಆಲಿಕಲ್ಲುಗಳು ಮರದ ಎಲೆಗಳನ್ನು ಸೀಳಿಕೊಂಡು ರಭಸವಾಗಿ ಪಟಪಟನೆ ಬೀಳತೊಡಗಿದವು. ಬೆಳ್ಳನೆ ಬಿಳುಪಾದ ಕಲ್ಲುಗಳು, ಸಣ್ಣ ಉಪ್ಪುಕಲ್ಲುಗಳಿಂದ ಹಿಡಿದು, ಗಾಲ್ಫ್ ಚೆಂಡಿನ ಆಕಾರದವರೆಗೂ ಒಂದೇ ಸಮನೆ ಬೀಳುತ್ತಿವೆ. ನಮ್ಮ ಜೊತೆಯಲ್ಲಿದ್ದ ನಾಗಾಗಳಿಬ್ಬರೂ ಆಗಲೇ ಮರ ಏರಿ ಅಲ್ಲಿನ ಚಾವಣಿ ಗುಡಿಸಿಲು ಸೇರಿ ನಮ್ಮನ್ನು, ‘ಇಥಿ ಆಯಿಬಿ, ಇಥಿ ಆಯಿಬಿ’ ಎಂದು ಕರೆಯುತ್ತಿದ್ದಾರೆ. ಹತ್ತುವಾಗ ಜಾರಿದರೆ ಎಲ್ಲಿ ನೀರುಪಾಲಾಗಿ ಬಿಡುತ್ತೇವೋ... ಧೈರ್ಯ ಸಾಲದೆ, ನಾನು, ಶಾಹು ನದಿಯ ದಡದಲ್ಲೇ ಇದ್ದ ಇನ್ನೊಂದು ಅರೆ ಗುಡಿಸಿಲನ್ನು ಸೇರಿಕೊಂಡೆವು. ನೋಡುನೋಡುತ್ತಿದ್ದಂತೆ ಆರ್ಭಟಿಸುವ ಗುಡುಗು ಮಿಂಚುಗಳ ಜೊತೆಗೆ ಗಿಡ, ಮರ, ತಪ್ಪಲು ಆಲಿಕಲ್ಲುಗಳಿಂದ ಬೆಳ್ಳಗೆ ಬಿಳುಪಾಗಿ ಹೋಯಿತು.
ನಾವಿದ್ದ ಗುಡಿಸಿಲಲ್ಲಿದ್ದ ಒಬ್ಬ ನಾಗಾ ಮತ್ತು ಶಾಹು ನಾಗಾಮೀಸ್‌ನಲ್ಲಿ ಮಾತನಾಡುತ್ತಿದ್ದಾರೆ. ಶಾಹು ಪ್ರಶ್ನೆಗೆ ನಾಗ, ‘ನಾವು ಮರಗಳನ್ನು ಕಡಿಯುವವರು ಊರಿಗೆ ವಾರಕ್ಕೊಮ್ಮೆ ಇಲ್ಲ ಹದಿನೈದು ದಿನಕ್ಕೊಮ್ಮೆ ಹೋಗಿ ಬರುತ್ತೇವೆ. ಮರಗಳನ್ನು ಕಡಿದು ಲಾರಿ ಬರುವ ಸ್ಥಳದವೆಗೂ ಸಾಗಿಸುತ್ತೇವೆ. ಹಣ ಆಯಾ ಊರಿನ ಸರಿಹದ್ದಿಗೆ ಸೇರಿದ ಜಿಬಿಗಳಿಗೆ ಹೋಗುತ್ತದೆ. ನಮಗೂ ಬೇಕಾದಷ್ಟು ಹಣ ಕೊಡುತ್ತಾರೆ’ ಹೀಗೆ ಏನೇನೋ ಹೇಳುತ್ತಿದ್ದಾಗ ಶಾಹು, ‘ಯಾರೂ ಅಡಚಣೆ ಮಾಡುವುದಿಲ್ಲವೆ?’ ಎಂದಿದ್ದಕ್ಕೆ ಸ್ವಲ್ಪ ರಿಯಾಕ್ಟ್ ಆದಂತೆ, ‘ಯಾರ್ ಮಾಡ್ತಾರೆ...? ಇದೆಲ್ಲ ನಮ್ಮದು, ನಾಗಾಗಳದ್ದು... ಸಾಲಾ ನಮ್ಮದು ಜೀವನ ನಡೆಯಬೇಕಲ್ಲವೇ’ ಪ್ರಶ್ನಿಸಿದ.
ಆಲಿಕಲ್ಲು ಸುತ್ತಲು ರಾಶಿ ರಾಶಿಯಾಗಿ ಹಾಸಿಕೊಂಡಿದ್ದು, ನಮಗೆ ಸಣ್ಣಗೆ ನಡುಕ ಪ್ರಾರಂಭವಾಗಿತ್ತು. ಗುಡಿಸಿಲು ಒಳಗಿದ್ದ ಪುಳ್ಳೆ ಕಡ್ಡಿಗಳನ್ನು ಒಂದುಗೂಡಿಸಿ ಮೂಲೆಯಲ್ಲಿ ಬೆಂಕಿ ಹೊತ್ತಿಸಲು ನಾಗಾ ಪ್ರಯತ್ನಿಸುತ್ತಿದ್ದಾನೆ. ಅದೆಲ್ಲಾ ತೊಯ್ದು ತೊಪ್ಪೆಯಾಗಿದ್ದರಿಂದ ಜಪ್ಪಯ್ಯ ಎಂದರೂ ಹೊತ್ತಿಕೊಳ್ಳಲಿಲ್ಲ. ‘ಸಾಲಾ ಮರ್‌ಗಯಾ’ ಶಾಹು ಪರಿಸ್ಥಿತಿಗೆ ಒಂದು ಜಕಂ ಕೊಟ್ಟಂತೆ ಉದ್ಗರಿಸಿದರು. ಸುಮಾರು ಒಂದೂವರೆ ಗಂಟೆ ಒಂದೇ ಸಮನೆ ಸುರಿದ ಆಲಿಕಲ್ಲು ಮಳೆಯಿಂದ ಸುಮಾರು ೬ ಇಂಚಿನಷ್ಟು ಬಿಳಿ ಪರದೆ ಎಲ್ಲೆಲ್ಲೂ ಹಾಸಿಕೊಂಡಿದೆ. ಈಗ ಬರೀ ಮಳೆ ಹನಿಗಳು ಮಾತ್ರ ಬೀಳುತ್ತಿದ್ದ ಆಲಿಕಲ್ಲು ನಿಧಾನವಾಗಿ ಕರಗುತ್ತಿದೆ. ಸಮಯ ೪.೩೦ ಆಗಿದ್ದು ಹೆಚ್ಚೂ ಕಡಿಮೆ ಕತ್ತಲೆಯಾಗಿದೆ. ಪೂರ್ಣ ಕತ್ತಲಾಗುವುದರೊಳಗೆ ಹಳ್ಳಿ ಸೇರಿಕೊಳ್ಳಬೇಕು ಎಂದುಕೊಂಡಿದ್ದ ನಮ್ಮ ಊಹೆ ತಿರುಗು ಮರುಗಾಗಿ ಇನ್ನೂ ನದಿಯ ದಡದಲ್ಲೇ ಇದ್ದೇವೆ. ಮಳೆ ಕಡಿಮೆಯಾಗಿದ್ದೇ ಮರಗಳಿಂದ ಮಂಗಗಳಂತೆ ಜಿಬಿ ಮತ್ತು ಅವನ ಸಹಾಯಕ ಇಳಿದು ಬಂದರು.
‘ಊರಿಗೆ ತಲುಪಬೇಕಾದರೆ ಎಷ್ಟು ಸಮಯವಾಗಬಹುದು?’ ಎಂದು ಕೇಳಿದ್ದಕ್ಕೆ, ‘ಒಂದೆರಡು ಗಂಟೆ ಆಗಬಹುದು’ ಎಂಬ ಉತ್ತರ ಬಂದಿತು. ಇವರ ಲೆಕ್ಕದಲ್ಲಿ ಒಂದೆರಡು ಗಂಟೆ ಎಂದರೆ ಎಷ್ಟೋ? ಅಲ್ಲೆ ಉಳಿಯುವುದಂತೂ ಸಾಧ್ಯವಿಲ್ಲ. ಹಳ್ಳಿ ಮುಟ್ಟವುದಂತೂ ದೇವರೆ ಬಲ್ಲ. ಸ್ವಲ್ಪ ದೂರ ನಡೆದಾದ ಮೇಲೆ ನದಿ ಸ್ವಲ್ಪ ಅಗಲವಾಯಿತು. ಅಲ್ಲಿಂದ ಇನ್ನೊಂದು ಉಪನದಿಯನ್ನು ಹಿಡಿದು ಅದನ್ನು ದಾಟಿ ಕಡಿದಾದ ಬೆಟ್ಟವನ್ನು ಹತ್ತಲೂ ಪ್ರಾರಂಭ ಮಾಡಿದೆವು. ಆಗಲೇ ಆ ಬೆಟ್ಟದ ತುತ್ತ ತುದಿಯ ಆ ಕಡೆಗೆ ಕಾಣಿಸುತ್ತಿದ್ದ ಇನ್ನೊಂದು ಬೆಟ್ಟದ ಮೇಲಿನ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿವೆ. ಆ ದೀಪಗಳು ಎಷ್ಟು ಎತ್ತರದಲ್ಲಿವೆ ಎಂದರೆ ನಮಗೆ ಆಕಾಶದಲ್ಲಿರುವ ನಕ್ಷತ್ರಗಳಂತೆ ಮಿಣಕ್ ಮಿಣಕ್ ಎಂದು ಕಾಣಿಸುತ್ತಿವೆ. ಆಗಲೇ ಕೈಕಾಲುಗಳಲ್ಲೆಲ್ಲ ನೋವು ಶುರುವಾಗಿದ್ದು ೧೦-೨೦ ಮೀಟರು ಹತ್ತಿದ ತಕ್ಷಣ ನಮ್ಮ ಶಾಹು ಎದೆಯುಸಿರು ಬಿಡುತ್ತ, ‘ಸಾಲಾ... ಜಿಂದಜಿ ಬರ್‌ಬಾದ್ ಹೋಗಯಾ’ ಎಂದು ಕುಸಿದು ಕುಳಿತುಕೊಳ್ಳುತ್ತಿದ್ದರು. ಅವರಿಗಿನ್ನ ವಯಸ್ಸಿನಲ್ಲಿ ಐದಾರು ವರುಷ ಎಳೆಯನಾದ ನಾನೂ ಅವರು ಕುಸಿದು ಕುಳಿತುಕೊಳ್ಳುವುದನ್ನೇ ಕಾಯುತ್ತಾ ಅವರ ಹಿಂದಯೇ ಕುಸಿದು ಮೈ ಚೆಲ್ಲುತ್ತಿದ್ದೆ. ಒಂದೊಂದೇ ಗುಟುಕು ನೀರು ಕುಡಿದರೂ ನೀರು ಯಾವಾಗಲೋ ಮುಗಿದುಹೋಗಿತ್ತು. ಈಗ ಪೂರ್ತಿ ಕತ್ತಲು, ಕೊರಕಲುಗಳಲ್ಲಿ ಎಚ್ಚರಿಕೆಯಿಂದ ನಡೆಯುತ್ತಿದ್ದೇವೆ. ತುಸುವೇ ಹೆಚ್ಚು ಕಡಿಮೆಯಾದರೂ ಸಾಕು ಎಲ್ಲಿಗೆ ಹೋಗುತ್ತೇವೋ... ವಿಳಾಸ ಇರುವುದಿಲ್ಲ.
ಒಬ್ಬರ ಹೆಜ್ಜೆಯಲ್ಲಿ ಇನ್ನೊಬ್ಬರು ಹೆಜ್ಜೆ ಇಡುತ್ತ ನಡೆಯುತ್ತಿದ್ದೇವೆ. ಜೀರುಂಡೆಗಳ ನಾದ, ಥಂಡಿ ಗಾಳಿ, ಆಗಾಗ ಉದುರುವ ಮಳೆಹನಿಗಳು, ಎಡವಿ ಬೀಳುವ ಹೆಜ್ಜೆಗಳು, ಹಾವಿನ ತಿರುವುಗಳು, ಏಣಿಯ ಮೇಲೆ ಏರುವಂತಹ ಕಡಿದಾದ ತಪ್ಪಲುಗಳು ಇದೆಲ್ಲದರ ಮೇಲೆ ನೋವು, ದಾಹ, ಕತ್ತಲು ಸುಸ್ತು. ಹೊರಗೆ ಒಂದೇ ಚಳಿ, ಜಾಕೆಟ್ ಒಳಗೆ ಬೆವರು. ಇನ್ನೇನು ನಡೆಯುವುದು ನಮ್ಮಿಂದ ಸಾಧ್ಯವೆ ಇಲ್ಲವೆನ್ನುವಂತಾಗಿದೆ. ಇನ್ನೆಷ್ಟು ದೂರ. ಇನ್ನೆಷ್ಟು ದೂರ...? ಎಂದು ಕೇಳಿ ಕೇಳಿ ಕೊನೆಗೆ ಕೇಳುವುದನ್ನೇ ಬಿಟ್ಟುಬಿಟ್ಟಿದ್ದೆವು. ನಮ್ಮ ಸ್ಥಿತಿ ಎಷ್ಟೊಂದು ಕೆಟ್ಟಿತ್ತೆಂದರೆ, ನಾನು ಮತ್ತು ಶಾಹು ಮಾತನಾಡುವುದನ್ನೇ ಬಿಟ್ಟಿದ್ದೆವು. ಪ್ರಾಣ ಉಳಿಸಿಕೊಳ್ಳುವುದಕ್ಕೆ ಮಾತ್ರ ಉಸಿರಾಡುವಂತಿತ್ತು.
ಜಿಬಿ ಮತ್ತು ಆತನ ಸಹಾಯಕ ನಮ್ಮ ಜೊತೆಜೊತೆಯೇ ನಡೆದು ಬರುತ್ತಾ ಇನ್ನೂ ಸ್ವಲ್ಪ ದೂರ, ಆಯಿತು, ಮುಗಿಯಿತು ಎಂದು ಸ್ವಾಂತನ ನೀಡುತ್ತಿದ್ದರು. ಆ ಕತ್ತಲಲ್ಲಿ ಅವರ ಸ್ಥಿತಿ ಹೇಗಿತ್ತೋ ಏನೋ ನಮಗಿನ್ನ ಉತ್ತಮ ಸ್ಥಿತಿಯಲ್ಲಿರುವುದು ಮಾತ್ರ ಅವರ ಮಾತುಗಳಿಂದಲೇ ಗೊತ್ತಾಗಿತ್ತು. ಹೇಗಾದರು ಅವರು ಗುಡ್ಡಗಾಡು ಜನರು, ಬೆಟ್ಟಗಳೇ ಅವರ ಉಸಿರು. ಒಂದು ಕಡೆ ಯಥಾಪ್ರಕಾರ ಮೈಚೆಲ್ಲಿದ್ದೇವೆ. ವಿಪರೀತವಾದ ಕತ್ತಲು, ಕಣ್ಣಿಗೆ ಏನೂ ಕಾಣಿಸುತ್ತಿಲ್ಲ. ಇದ್ದಕ್ಕಿದ್ದಂತೆ ಬೆಳಕಿನ ಕಿರಣಗಳ ಗುಚ್ಛವೊಂದು ದಿಢೀರನೆ ನಮ್ಮ ಮೇಲೆ ಬಿದ್ದಿತು. ಸತ್ತವರಿಗೆ ಪ್ರಾಣ ಬಂದಂತೆ ಬೆಳಕಿನ ಕಡೆಗೆ ನೋಡುತ್ತೇವೆ. ಜಿಬಿ ನಗುತ್ತಾ ಪಾಕೆಟ್ ಟಾರ್ಚ್‌ನ್ನು ಕೈಯಲ್ಲಿಡಿದು ಸುತ್ತಲೂ ನೋಡುತ್ತಿದ್ದಾನೆ. ಎಲಾ ಇವನ, ಇಷ್ಟೊತ್ತು ಕತ್ತಲಲ್ಲಿ ಸತ್ತು ಸುಣ್ಣವಾದರೂ ಟಾರ್ಚ್‌ನ್ನು ತೆಗೆಯದೆ ಈಗ ತೆಗೆದಿದ್ದಾನಲ್ಲ, ಚನ್ನಾಗಿ ಬೈಯ್ಯಬೇಕೆಂದುಕೊಂಡರೂ, ನಾಗಾಗಳನ್ನು ಅದೂ ಅವರ ರಾಜ್ಯದಲ್ಲಿ ಬೈಯ್ಯಲು ಸಾದ್ಯವೇ? ಬಂದ ಆಲೋಚನೆಯನ್ನು ಹಾಗೇ ನುಂಗಿಕೊಂಡೆ. ಈಗ ಅವನೇ ಹೇಳಿದ.
‘ಇದರಲ್ಲಿರುವುದು ಚೋಟಾ ಸೆಲ್ಲು. ಅದೂ ಯಾವಾಗಲೋ ಪ್ರಾಣ ಕಳೆದುಕೊಂಡಿದೆ. ಆದರೂ ಇರಲಿ ಎಂದು ತಂದೆ’ ಎನ್ನುತ್ತಾ ಮಿಣಕ್ ಮಿಣಕ್ ಎಂದು ಗಿಡಮರಗಳ ಮೇಲೆ ಬೆಳಕು ಚೆಲ್ಲಿದ. ಕೊನೆಗೆ ಆ ಮಿಣಕ್ ಮಿಣಕ್ ಬೆಳಕಿನ ಸಹಾಯದಿಂದಲೇ ಶಿಖರದ ಮೇಲಿದ್ದ ಬಸ್ತಿಯನ್ನು ತಲುಪಿದೆವು. ಹಸಿವು, ದಣಿವು, ಚಳಿಯಿಂದ ನಡುಗುತ್ತಿದ್ದ ದೇಹಗಳನ್ನೊತ್ತು ಬಂದ ನಾವು, ಜಿಬಿ ಅಡಿಗೆ ಮನೆಯಲ್ಲಿ ಕುಳಿತು ಬೆಚ್ಚನೆ ನಾಗಾ ಚಹ ಕುಡಿದೆವು. ಚಹ ಕುಡಿದ ಮೇಲೆ ಎಲ್ಲವನ್ನೂ ಮರೆತು ಜಿಬಿ ಅಡಿಗೆ ಮನೆಯಲ್ಲೆ ಕೈಕಾಲು ಚೆಲ್ಲಿ ಮಲಗಿ ಬಿಡಬೇಕೆನ್ನಿಸಿತು.
ಶಾಹು, ಜಿಬಿ ಮತ್ತು ಆತನ ಸಂಗಡಿಗನ ಸಹಿಗಳನ್ನು ಪಡೆದುಕೊಂಡು, ಒಬ್ಬೊಬ್ಬರಿಗೆ ನೂರು ನೂರು ರೂಪಾಯಿಗಳನ್ನು ನೀಡಿ, ಧನ್ಯವಾದಗಳನ್ನು ಹೇಳಿದರು. ಅನಂತರ ಜೀಪಿನ ಹತ್ತಿರಕ್ಕೆ ಬಂದು ನೋಡುತ್ತೇವೆ. ಜೀಪಿನಲ್ಲಿ ಯಾರೂ ಇಲ್ಲ, ಅನಾಥವಾಗಿ ನಿಂತಿದೆ. ಚಾಲಕನನ್ನು ಹುಡುಕುವುದಾದರೂ ಎಲ್ಲಿ? ತೊಂಗ್‌ಪಾಂಗ್... ತೊಂಗ್‌ಪಾಂಗ್... ಎಂದು ಎಷ್ಟು ಕೂಗಿದರೂ ಆ ನಿಶಬ್ಧ ರಾತ್ರಿ ಕಿವಿಗೆ ಹಚ್ಚಿಕೊಳ್ಳಲಿಲ್ಲ. ಜಿಬಿ ಮತ್ತು ಆತನ ಸಹಾಯಕ ಮನೆ ಮನೆ ಬಾಗಿಲನ್ನು ತಟ್ಟಿ ನಿಶಬ್ಧ ಪರದೆಯ ಮೇಲೆ ಕಲ್ಲುಗಳನ್ನೆಸೆಯುತ್ತಾ ತೊಂಗ್‌ಪಾಂಗ್‌ನನ್ನು ಹುಡುಕುತ್ತಿದ್ದಾರೆ.
ನಾಗಾ ಬಿಯರ್ ಕುಡಿದು ಬೆಚ್ಚಗೆ ಮನೆಯೊಂದರಲ್ಲಿ ಮಲಗಿದ್ದ ತೊಂಗ್‌ಪಾಂಗ್ ಕೊನೆಗೂ ಸಿಕ್ಕಿಬಿದ್ದು ಕತ್ತಲಲ್ಲೇ ಓಡೋಡಿ ಜೀಪಿನ ಹತ್ತಿರಕ್ಕೆ ಬಂದ. ಜಿಬಿ ಮತ್ತು ಸಹಾಯಕನ ಕೈಕುಲುಕಿ ಆ ಶಿಖರದಿಂದ ಬೀಳ್ಕೊಂಡೆವು. ಜೀಪು ದಾರಿ ತಪ್ಪಿದ ಸಲಗದಂತೆ ಘೀಳಿಡುತ್ತಾ ಶಿಖರಗಳನ್ನು ಸುತ್ತಿ ಬಳಸಿ, ಹತ್ತಿ ಇಳಿದು ವಿಶ್ರಾಂತಿ ಗೃಹ ತಲುಪಿದಾಗ ರಾತ್ರಿ ೧೧ ಗಂಟೆ. ಕಾಂಚಾ ಬಿಸಿ ನೀರು ಕೊಟ್ಟು ಅಡಿಗೆಯನ್ನು ಬಿಸಿಮಾಡತೊಡಗಿದ. ನಾವು ಹೆಸರಿಗೆ ಕೈಕಾಲು ಮುಖ ತೊಳೆದು, ನಿದ್ದೆಯ ಚೀಲದ ಒಳಕ್ಕೆ ಸೇರಿಕೊಂಡೆವು. ಅನಂತರ ಅದರ ಒಳಗೆಯೇ ಕುಳಿತು ಊಟ ಮುಗಿಸಿ ಮಲಗಿಕೊಂಡೆವು. ಬೆಳಿಗ್ಗೆ ಜ್ಞಾಪಕ ಬಂದಾಗ ೧೦ಗಂಟೆ. ಎದ್ದು ನಿಂತರೆ ನಿಂತುಕೊಳ್ಳಲು ಆಗುತ್ತಿಲ್ಲ. ನಡೆದರೆ ನಡೆಯಲು ಆಗುತ್ತಿಲ್ಲ. ಸ್ನಾಯುಗಳೆಲ್ಲಾ ಸೆಟೆದುಕೊಂಡುಬಿಟ್ಟಿದ್ದವು.
[ಚಿತ್ರಗಳು-ಸಂಗ್ರಹದಿಂದ]
[ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ]